”ವಾಟ್ಸಪ್ಪ್ ಗುಂಪುಗಳಲ್ಲಿ, ಯುಟ್ಯೂಬ್ ನಲ್ಲಿ ಆಟ ನಡೆಯುತ್ತಿರುವಾಗಲೇ ಆಗಿನ ಆಟದ ಭಾವಚಿತ್ರಗಳು ಮುದ್ರಣಗಳ ತುಣುಕುಗಳು ಹರಿದಾಡುತ್ತವೆ. ಪ್ರತಿವಾರವೂ ಯಕ್ಷಗಾನದ, ತಾಳಮದ್ದಲೆಗಳ ವಿಮರ್ಶೆಗಳು ಪತ್ರಿಕೆಗಳಲ್ಲಿ, ಫೇಸ್ಬುಕ್ ಗಳಲ್ಲಿ ಬರುತ್ತವೆ.ಚೌಕಿಯಲ್ಲಿ ಕನ್ನಡಿ ನೋಡುತ್ತಾ ತಯಾರಾಗುವ ಕಲಾವಿದ, ಪ್ರದರ್ಶನದ ನಂತರ ಹೀಗೆ ಸುಲಭವಾಗಿ ಸಿಗುವ ತಮ್ಮ ಪ್ರಸ್ತುತಿಯ ತುಣುಕನ್ನು ನೋಡಬಹುದು” 
ಲೇಖಕ ಯೋಗೀಂದ್ರ ಮರವಂತೆ ಹಿರಿಯ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ಟರ ನೆನಪಿನ “ಮರ್ಯಾದಾ ಪುರುಷೋತ್ತಮ ” ಶತಸ್ಮೃತಿ
 ಸಂಪುಟಕ್ಕೆ ಬರೆದ ಲೇಖನ.

 

ಮೂವತ್ತು ವರ್ಷಗಳ ಹಿಂದೆ ಬೇಸಿಗೆಯ ಒಂದು ದಿನ ಮರವಂತೆಯಲ್ಲಿ ಸುರತ್ಕಲ್ ಮೇಳದ ಆಟ(ಯಕ್ಷಗಾನ) ಇತ್ತು. ಆಟ ಇತ್ತು ಅಂತ ಗೊತ್ತಾಗಲು ತಿಂಗಳ ಮೊದಲೇ ಮರವಂತೆಯ ಪೇಟೆಯ ಅಂಗಡಿಗಳಲ್ಲಿ ಸಣ್ಣ ಕರಪತ್ರಗಳನ್ನು ನೇತು ಬಿಡುತ್ತಿದ್ದರು. ಮತ್ತೆ ಆಟದ ಎರಡು ಮೂರು ದಿನ ಮೊದಲಿಂದ ಆಟೋರಿಕ್ಷಾವನ್ನು ಬಾಡಿಗೆ ಪಡೆದು ಆಟ ವಹಿಸಿಕೊಂಡವರು ಕರಪತ್ರಗಳನ್ನು ಹಾರಿಬಿಡುತ್ತ ಧ್ವನಿವರ್ಧಕದಲ್ಲಿ ಘೋಷಿಸುತ್ತ ನಮ್ಮೂರು, ನೆರೆಯ ಊರುಗಳ ರಸ್ತೆಗಳಲ್ಲಿ ತಿರುಗುತ್ತಿದ್ದರು. ಯಕ್ಷಗಾನದ ಹುಚ್ಚಿನ ಮಕ್ಕಳು ಆಟೋರಿಕ್ಷಾದ ಹಿಂದೆ ಓಡಿ ಕರಪತ್ರ ಹೆಕ್ಕುತ್ತಿದ್ದರು. ಪ್ರಸಂಗ ಯಾವುದು? ಕಲಾವಿದರು ಯಾರು? ಎಂದು ಬಿಳಿ ಹಸಿರು ಗುಲಾಬಿ ಹಳದಿ ಬಣ್ಣದ ಕರಪತ್ರಗಳನ್ನು ಒಟ್ಟು ಮಾಡಿಕೊಂಡು ಓದುತ್ತಿದ್ದರು. ಸುರತ್ಕಲ್ ಮೇಳದ ಆಟ ಇದ್ದಾಗ ಹೀಗೆ ಆಟೋರಿಕ್ಷಾದ ಮೂಲಕ ಯಕ್ಷಗಾನ ಪ್ರಚಾರ ಅಲ್ಲದೆ ದುರ್ಗಾದಾಸ್ ಎಂಬವರೊಬ್ಬರು ನಾಟಕದ ಪೋಷಾಕಿನಲ್ಲಿ ನಮ್ಮೂರಿನ ಉದ್ದಗಲಕ್ಕೆ ನಡೆಯುತ್ತಾ ಕೈಯಲ್ಲೊಂದು ತುತ್ತೂರಿ ಹಿಡಿದು ಆಟದ ಬಗ್ಗೆ ಘೋಷಣೆ ಮಾಡುತ್ತಿದ್ದರು. ಸುರತ್ಕಲ್ ಮೇಳದ ಆಟ ಇದ್ದ ಊರಿಗೆಲ್ಲ ಹೋಗಿ ಇವರು ಹೀಗೆ ನಡೆದಾಡಿಯೇ ಪ್ರಚಾರ ಮಾಡುತ್ತಿದ್ದರಂತೆ. ದುರ್ಗಾದಾಸರು ಆಟದ ಉದ್ಘೋಷಣೆ ಮಾಡುವ ಒಂದು ವಿಶಿಷ್ಟ ರೀತಿಯಿತ್ತು; ಅವರ ಸ್ವರ, ಘೋಷಣೆಯ ವೈಖರಿಯನ್ನು ಕೇಳಿದವರಿಗೆ ಇವತ್ತು ಹತ್ತಿರದಲ್ಲೆಲ್ಲೂ ಸುರತ್ಕಲ್ ಮೇಳದ ಆಟ ಎಂದೂ ತಿಳಿಯುತ್ತಿತ್ತು.

ಇದು ಮೂವತ್ತು ವರ್ಷ ಹಿಂದಿನ ಯಕ್ಷಗಾನದ ಪ್ರಚಾರದ ಚಿತ್ರವಾದರೆ ಅಂದಿಗಿಂತಲೂ ಮೂವತ್ತು ವರ್ಷ ಹಿಂದೆ ಹೋದರೆ, ಆಟ ವಹಿಸಿಕೊಂಡವರು ಮನೆ ಮನೆ ಹೋಗಿ ಆಟದ ಸುದ್ದಿ, ಹೇಳಿಕೆ ನೀಡಿ ಬರುತ್ತಿದ್ದರು. ಇನ್ನು ಕೆಲವರು ಎತ್ತಿನ ಗಾಡಿಗೆ ಬೈನೆ ಹೆಡೆ, ತೆಂಗಿನ ಹೆಡೆಗಳ ಅಲಂಕಾರ ಮಾಡಿಕೊಂಡು ಮೆಗಾಫೋನ್ ಹಿಡಿದು ಆಟದ ಘೋಷಣೆ ಮಾಡಿ ಊರು, ಪರ ಊರಿನಲ್ಲಿ ಸುದ್ದಿ ಮಾಡುತ್ತಿದ್ದರು. ಇಂತಹ ಯಾವ ಸುದ್ದಿ ಕ್ರಮದ ವ್ಯಾಪ್ತಿಯಲ್ಲೂ ಬರದವರಿದ್ದರೆ ಅವರಿಗೆ ಸಂಜೆ ಆಟದ ಜಾಗದಿಂದ ಚಂಡೆಯ ಅಬ್ಬರ ಬೀಡ್ತೀಗೆ ಕರೆದು ಸುದ್ದಿ ಮುಟ್ಟಿಸುತ್ತಿತ್ತು. ದಶಕಗಳ ಹಿಂದಿನ ಯಕ್ಷಗಾನದ ಪ್ರಚಾರದ ದೃಶ್ಯಗಳನ್ನು ಮರೆಸುವಂತೆ ಇವತ್ತಿನ ಯಕ್ಷಗಾನದ ಪ್ರಚಾರಗಳು ನಡೆಯುತ್ತವೆ; ಯಕ್ಷಗಾನದ ವ್ಯವಸ್ಥಾಪಕರೂ, ಕಲಾವಿದರೂ ಪ್ರೇಕ್ಷಕರೂ ಎಲ್ಲರೂ ಅಂತರ್ಜಾಲಕ್ಕೆ ಅಂಟಿಕೊಂಡವರೇ. ಸ್ಮಾರ್ಟ್ ಮೊಬೈಲ್ ಬಳಸುವವರೇ. ಹಾಗಾಗಿ ಆಟದ ಮಾಹಿತಿ ಅನಾಯಾಸವಾಗಿ ಹರಡಲು ಹರಡಿಸಲು ಹಲವು ದಾರಿಗಳು ಇವೆ. ಎಲ್ಲಿ ಯಾವ ದಿನ ಎಂತಹ ಆಟ ಎನ್ನುವ ಸುದ್ದಿ ಆಟ ನಡೆಯುವ ಊರಿನಿಂದ ಹಿಡಿದು ಐದು ಹತ್ತು ಸಾವಿರ ಮೈಲು ದೂರದ ಅಮೇರಿಕ, ಕೆನಡಾ, ಇಂಗ್ಲೆಂಡ್ ಗಳಿಗೂ ಏಕಕಾಲಕ್ಕೆ ಮುಟ್ಟಿರುತ್ತದೆ; ಆ ದಿನದ ಆ ವಾರದ ಅಷ್ಟೂ ಪ್ರದರ್ಶನಗಳ ಕರಪತ್ರಗಳು “ಮೊಬೈಲ್ ಆ್ಯಪ್” ಮೂಲಕ ಒಂದು ಬೆರಳಿನ ಸ್ಪರ್ಶದಲ್ಲಿ ನಮ್ಮ ಕಣ್ಣೆದುರುರು ಇರುತ್ತದೆ. ಸಮರ್ಥ ಕಲಾವಿದರಿಂದ ಕೂಡಿದ ಪ್ರದರ್ಶನ ನಾಳೆ ಆಗಬೇಕೆಂದು ಎಂದು ಇಂದು ನಿಶ್ಚಯ ಆದರೂ, ಒಂದು ದಿನದೊಳಗೆ ೩೦೦-೪೦೦ ಜನರನ್ನು ಯಾವ ಘೋಷಣೆ, ಬ್ಯಾನರ ಇಲ್ಲದೆ ಸೇರಿಸುವ ಕಾಲ ಈಗ ಬಂದಿದೆ. ಅಂತಹ ಸಾಧ್ಯತೆಗೆ ಕಾರಣ ನಮ್ಮ ಬದುಕಿನೊಳಗೆ ಸೇರಿಕೊಂಡಿರುವ ತಂತ್ರಜ್ಞಾನ ಯಕ್ಷಗಾನವನ್ನೂ ಗಾಢವಾಗಿ ಆವರಿಸಿರುವುದು. ಪ್ರದರ್ಶನವೊಂದರ ಪೂರ್ವಭಾವಿಯಾಗಿ ಕೆಲಸಮಾಡುವ ಪ್ರಚಾರವನ್ನು ಮಾತ್ರ ತಂತ್ರಜ್ಞಾನ ಆವರಿಸಿದ್ದಲ್ಲ, ಇಂದಿನ ಪ್ರದರ್ಶನಗಳ ಸುತ್ತಲಿರುವ ಎಲ್ಲ ಪೂರಕ ಅಂಶಗಳನ್ನೂ ತಂತ್ರಜ್ಞಾನ ಪ್ರಭಾವಿಸಿದೆ ಮತ್ತು ಬದಲಿಸಿದೆ; ನಾಟಕ, ಹಾಡು, ನೃತ್ಯ, ಚಲನಚಿತ್ರ ಹೀಗೆ ಎಲ್ಲ ಕಲಾಪ್ರಕಾರಗಳು ತಂತ್ರಜ್ಞಾನವನ್ನು ಮುಕ್ತವಾಗಿ ಸ್ವಾಗತಿಸಿ ಆಲಂಗಿಸಿದ ಹಾಗೆ ಯಕ್ಷಗಾನವೂ ತಂತ್ರಜ್ಞಾನಗಳ ಜೊತೆಗೆ ಹಾಸುಕೊಕ್ಕಾಗಿ ಬೆಳೆಯುತ್ತಿದೆ. ಯಕ್ಷಗಾನದ ವಿವಿಧ ಅಂಗಗಳಾದ ಪ್ರಚಾರ, ಸಂಪರ್ಕ, ಪೂರ್ವ ತಯಾರಿ, ಕಲಿಕೆ, ಪ್ರದರ್ಶನ, ಮುದ್ರಣ, ವೀಕ್ಷಣೆ, ಪ್ರಸರಣ, ಪ್ರತಿಕ್ರಿಯೆ, ವಿಮರ್ಶೆ ಹಾಗು ಕಲಾವಿದರ ಭದ್ರತೆ ಎಲ್ಲವನ್ನೂ ತಂತ್ರಜ್ಞಾನ ಬಲಗೊಳಿಸಿದೆ, ಅಲ್ಲದಿದ್ದರೆ ಹೊಸ ದಿಕ್ಕಲ್ಲಿ ಮುನ್ನಡೆಸುತ್ತಿದೆ.

ಪತ್ರಪ್ರಪಂಚದಿಂದ ಮೊಬೈಲ್ ಲೋಕಕ್ಕೆ:

ಮೇಳದ ತಿರುಗಾಟ ಮುಗಿದ ಮೇಲೆ ಯಜಮಾನರು ಕಲಾವಿದರನ್ನು ಸಂಪರ್ಕಿಸಬೇಕಿದ್ದರೆ ಕಾಗದ ಬರೆದು ಅಂಚೆ ಡಬ್ಬಿಯೊಳಗೆ ಹಾಕುತ್ತಿದ್ದ ಕಾಲ ಒಂದಿತ್ತು. ಸಾರಿಗೆ ಸಂಪರ್ಕಗಳು ದುರ್ಲಭವಾದ ಕಾಲದಲ್ಲಿ ತಿರುಗಾಟದ ಸಮಯದಲ್ಲಿ ಮೇಳದೊಟ್ಟಿಗೆ ಕಲಾವಿದರು ತಿರುಗುತ್ತಿದ್ದ ಕಾರಣ ದೂರದಲ್ಲಿರುವ ತಮ್ಮ ಮನೆಯವರನ್ನು ಸಂಪರ್ಕಿಸಲು ಕೂಡ ಪತ್ರ ಬರೆಯುತ್ತಿದ್ದರು. ಮನೆಯಿಂದ ದೂರದ ಯಕ್ಷಗಾನ ಕೇಂದ್ರಗಳಲ್ಲಿ ಕಲಿಕೆಗೆ ಬಂದು ಸೇರುವ ಮಕ್ಕಳು ಸುರಕ್ಷಿತವಾಗಿ ಬಂದು ಮುಟ್ಟಿದ್ದಾರೆ ಎಂದು ಹೆತ್ತವರಿಗೆ ತಿಳಿಸಲೂ ಸಹ ಒಂದು ಪತ್ರ ಹಾಕುತ್ತಿದ್ದರು. ಅಂದಿನ ಅಂಚೆ ಇಲಾಖೆ ದಕ್ಷ ಕಾರ್ಯನಿರ್ವಹಣೆಗೂ ಹೆಸರಾಗಿತ್ತು. ಮಂಗಳೂರಿನಿಂದ ಗೋಕರ್ಣಕ್ಕೆ ಇಂದು ಬೆಳಿಗ್ಗೆ ಪತ್ರ ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕಿದರೆ ನಾಳೆ ಸಂಜೆಯ ಒಳಗೆ ಮುಟ್ಟುತ್ತಿತ್ತು ಎಂದು ಹಿರಿಯ ಕಲಾವಿದರೊಬ್ಬರು ಹೇಳುತ್ತಾರೆ. ಹೆಸರಾಂತ ಕಲಾವಿದರ ಅಭಿಮಾನಿಗಳೂ ಪ್ರೇಮಿಗಳೂ ತಮ್ಮ ಅನಿಸಿಕೆ ಇಂಗಿತವನ್ನು ಕಾಗದ ಬರೆದು ಕಲಾವಿದರ ವಿಳಾಸಕ್ಕೆ ಕಳುಹಿಸುತ್ತಿದ್ದುದೂ ಇದೆ. ನಿಧಾನ ಚಲನೆಯ ಬದುಕು, ಇಂದಿಗೆ ಹೋಲಿಸಿದರೆ ಬಹಳ ಕಡಿಮೆ ಆಟಗಳು ಆಗುತ್ತಿದ್ದ ಪರಿಸ್ಥಿತಿಯಲ್ಲಿ ಹೀಗೊಂದು ಸಂಪರ್ಕ ಮಾಧ್ಯಮ ಅನಾನುಕೂಲ ಎಂದು ಅನಿಸುತ್ತಿರಲಿಲ್ಲ; ಮುಂದೊಂದು ದಿನ ಮೊಬೈಲ್ ಎನ್ನುವ ಅಂಗೈ ಗಾತ್ರದ ಯಂತ್ರ ತನ್ನೊಳಗಿರುವ ತಂತ್ರಗಳಿಂದ ಸಂಪರ್ಕ ಸಾಧನ ಮತ್ತು ಸಂದೇಶ ಮಾಧ್ಯಮಗಳ ಪರಿವರ್ತಿಸೀತು ಮತ್ತು ಅಂತಹ ಬೆಳವಣಿಗೆಯನ್ನು ಯಕ್ಷಗಾನ ತನ್ನೊಳಗೂ ಒಡಗೂಡಿಸಿಕೊಳ್ಳುತ್ತದೆ ಎಂದು ಯಾರೂ ಕಲ್ಪಿಸಿರಲಿಲ್ಲ ಮತ್ತು ಅಂಥಹ ಕನಸನ್ನೂ ಕಂಡಿರಲಿಲ್ಲ. ಒಂದೇ ಸಂದೇಶವನ್ನೂ ಅಥವಾ ಸುದ್ದಿಯನ್ನೋ ಇಂದು ಒಂದು ಮೊಬೈಲ್ ನ ಮೂಲಕ ಹಲವು ರೀತಿಯಲ್ಲಿ ಕಳುಹಿಸುವ ಪದ್ಧತಿಯೂ ಇದೆ, ಒಂದು ತರಹದ ಆ್ಯಪ್ ಇಲ್ಲದವರು ಇನ್ನೊಂದರ ಮೂಲಕವಾದರೂ ಸುದ್ದಿ ಪಡೆಯಲಿ ಎಂದು. ಮೇಳದ ಯಜಮಾನರು ತಮ್ಮ ಕಲಾವಿದರನ್ನು ಸಂಪರ್ಕಿಸಲು ಅಥವಾ ಕಲಾವಿದರು ತಮ್ಮ ಮನೆಯವರನ್ನೂ ಇನ್ನೊಂದು ಆಟದ ಬುಕಿಂಗ್ ಪಡೆಯಲು ಸಂಪರ್ಕಿಸುವುದೆಂದರೆ ಮೊಬೈಲ್ ಎತ್ತಿ ಕೆಲವು ಅಂಕೆಗಳನ್ನು ಒತ್ತಿದರೆ ಆಯಿತು. ಅದೇ ರೀತಿ ಆಟವೊಂದಕ್ಕೆ ಬರುತ್ತೇನೆಂದು ಒಪ್ಪಿಕೊಂಡ ಕಲಾವಿದ ಸಮಯಕ್ಕೆ ತಲುಪದಿದ್ದಾಗ ವ್ಯವಸ್ಥಾಪಕರ ಕರೆ ಪಡೆಯದಿರಲು ಮೊಬೈಲ್ ಬಂದ್ ಮಾಡಿ ಇಡುವುದೂ ಇದೆ! ಯಾರನ್ನು ಎಷ್ಟು ಹೊತ್ತಿಗೂ ಅರೆ ಕ್ಷಣದಲ್ಲಿ ತಲುಪುವ ಸಾಧ್ಯತೆ ಮೊಬೈಲ್ ಯುಗದಲ್ಲಿ ಇದೆಯಾದರೂ, ತನ್ನನ್ನು ಯಾರೂ ತಲುಪಬಾರದೆಂದು ಬಯಸುವವರಿಗೂ ಮಾರ್ಗಗಳು ಇವೆ.

ಪೂರ್ವತಯಾರಿ ಮತ್ತು ಕಲಿಕೆ:

ಐದು ವರ್ಷಗಳ ಹಿಂದೆ ನಾನು ನೋಡಹೋದ ಕಾಲಮಿತಿ ಆಟದಲ್ಲಿ ಮಾಗಧ ವಧೆ ಪ್ರಸಂಗ ಇತ್ತು. ಬಡಗು ತಿಟ್ಟಿನ ಪ್ರಸಿದ್ಧ ಭಾಗವತರು ಅಂದಿನ ಆಟಕ್ಕೆ ಪ್ರಸಂಗ ಪುಸ್ತಕ ಬಿಟ್ಟು ಬಂದಿದ್ದರು. ಸಂಜೆ ೬ ಘಂಟೆಗೆ ಆಟ ಶುರು ಆಗಬೇಕು; ಭಾಗವತರು, ವ್ಯವಸ್ಥಾಪಕರು, ಕಲಾವಿದರು ಪ್ರಸಂಗ ಪುಸ್ತಕದ ವ್ಯವಸ್ಥೆ ಮಾಡುವುದರಲ್ಲಿ ಮಗ್ನರಾಗಿದ್ದರು. ಹಲವು ಹಿರಿಯ ಪ್ರೇಕ್ಷಕರಿಗೆ ಕಿರಿಯ ಅಭಿಮಾನಿಗಳಿಗೆ ದೂರವಾಣಿ ಕರೆ ಮಾಡಿದ ಮೇಲೆ ಪ್ರಸಂಗ ಪುಸ್ತಕದ ಸಂಗ್ರಹ ಇದ್ದ ಮಹನೀಯರೊಬ್ಬರು ಸಿಕ್ಕರು. ಅವರ ಮನೆಗೆ ಬೈಕಿನಲ್ಲಿ ಜನ ಕಳುಹಿಸಿ ಪುಸ್ತಕ ತರಿಸಲಾಯಿತು. ತಡವಾಗಿ ಆಟ ಆರಂಭಿಸಲಾಯಿತು. ಇಂತಹ ಸಂದರ್ಭ ಇವತ್ತು ಎದುರಾದರೆ ನಿಮಿಷಗಳಲ್ಲಿ ಏಕಕಾಲಕ್ಕೆ ಮೊಬೈಲ್ ಸಂದೇಶಗಳ ಮೂಲಕ ಸುದ್ದಿ ಹರಡಿಸಿ ಪುಸ್ತಕ ಎಲ್ಲಿದೆ ಎಂದು ತಿಳಿಯಬಹುದು. ಅಥವಾ ಪ್ರಸಂಗ ಪುಸ್ತಕಗಳ ಪಿಡಿಫ್ ಬಹಳ ಜನರ ಬಳಿ ಇದೆ. ಅಗಲ ಮುಖದ ಮೊಬೈಲ್ ಅಥವಾ ಐಪ್ಯಾಡ್ ಅಥವಾ ಕಿಂಡಲ್ ನಂತಹ ಸಲಕರಣೆ ಇದ್ದಲ್ಲಿ ಅಲ್ಲಿಂದಲೇ ಪದ್ಯ ನೋಡಿಕೊಂಡು ಹೇಳಬಹುದಿತ್ತು. ಇಂದು ಕೆಲವು ಯಕ್ಷಗಾನ ಪ್ರೇಕ್ಷಕರ ಬಳಿ ಇರುವ ಪ್ರಸಂಗ ಪುಸ್ತಕಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಇವೆ. ಅಲ್ಲದೆ ಬಳಕೆಯಲ್ಲಿರುವ ಮತ್ತು ಅಪೂರ್ವವೆನಿಸಿದ ಪುಸ್ತಕ ರೂಪದ ಪ್ರಸಂಗಗಳನ್ನು ಹುಡುಕಿ ಟೈಪ್ ಮಾಡಿ ಪಿಡಿಎಫ್ ಮಾದರಿಗೆ ಪರಿವರ್ತಿಸುವ ಮತ್ತು ಅಂತರ್ಜಾಲ ಕೋಶದಲ್ಲಿ ಉಳಿಸುವ ಸಂಘಟಿತ ಯತ್ನವೂ ಯಶಸ್ವಿಯಾಗಿ ನಡೆಯುತ್ತಿದೆ . ತಂತ್ರಜ್ಞಾನ ಮಾತ್ರ ಯಕ್ಷಗಾನದ ಕೈಹಿಡಿದ್ದಲ್ಲ , ತಂತ್ರಜ್ಞರೂ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದಾರೆ, ಯಕ್ಷಗಾನದೊಳಗೆ ತಂತ್ರಜ್ಞಾನವನ್ನು ತರುವ ಹೊಸ ಯೋಚನೆಗಳನ್ನು ಮಾಡುತ್ತಿರುತ್ತಾರೆ! ಭಾಗವತರಿಗೆ ಪ್ರಸಂಗ ಪುಸ್ತಕವೊಂದು ಕೈಯಲ್ಲಿ ಹಿಡಿದು ಯಾವ ಹಾಡು ಹೇಳಬೇಕು ಯಾವುದು ಬಿಡಬೇಕು, ಎಲ್ಲಿ ಹೊಸ ಸಾಲು ಸೇರಿಸಬೇಕು, ಅಥವಾ ಹೊಸ ನಡೆ ಬಳಸಬೇಕು ಇತ್ಯಾದಿ ಟಿಪ್ಪಣಿಗಳನ್ನು ಮಾಡಲು ಮುದ್ರಿತ ಪ್ರತಿಯೇ ಅನುಕೂಲವಾದರೂ ಶಾಶ್ವತ ಉಳಿಸುವಿಕೆ ಮತ್ತು ತುರ್ತು ಓದಿಗೆ ಅಂತರ್ಜಾಲದಲ್ಲಿ ಲಭ್ಯ ಆಗಿರುವ ಪ್ರಸಂಗ ಪುಸ್ತಕಗಳು ಬಹಳ ಸಹಕಾರಿ ಆಗಿವೆ.

ಒಳ್ಳೆಯ ಪೂರ್ವ ತಯಾರಿಗೆ ಹೆಸರಾದ ವೇಷಧಾರಿಯೊಬ್ಬರು ಇತ್ತೀಚಿಗೆ ತಾವು ಹಿಂದೆಂದೂ ಮಾಡದ ಕೃಷ್ಣ ಸಂಧಾನದ ಕೃಷ್ಣನ ಪಾತ್ರ ಮಾಡಲು ಅನುಕೂಲವಾಗಲು ಶೇಣಿಯವರ, ಶಂಭು ಹೆಗಡೆಯವರ ಹಳೆಯ ಧ್ವನಿಮುದ್ರಿಕೆಯನ್ನು ವಾಟ್ಸಪ್ ಗುಂಪಿನಲ್ಲಿ ಕೇಳಿದರು, ಅವರಿಗೆ ಸಹಾಯವಾಗುವ ಧ್ವನಿಮುದ್ರಣಗಳು ಬರೇ ಹತ್ತು ನಿಮಿಷಗಳ ಒಳಗೆ ಕಳುಹಿಸಲ್ಪಟ್ಟವು. ಕಲಾವಿದರು ತಾವು ತಿಳಿಯದ ಪಾತ್ರ ಚಿತ್ರಣ, ಪಾತ್ರ ನಿರೂಪಣೆ ಮಾಡಲು ಕೆಲವು ಹಿರಿಯ ಕಲಾವಿದರು ಹಿಂದೆ ಮಾಡಿದ ಆ ಪಾತ್ರಗಳ ಮುದ್ರಣ ಲಭ್ಯ ಇವೆ. ಇಂದು ಹೊಸ ಪಾತ್ರವನ್ನು ಮಾಡುವವರೋ ಅಥವಾ ಹಳೆಯ ಪಾತ್ರಕ್ಕೊಂದು ಹೊಸ ರೂಪ ಕೊಡುವವರೋ ಹುಡುಕ ಹೊರಟರೆ ನೃತ್ಯದಲ್ಲಿ, ಪಾತ್ರ ನಿರೂಪಣೆಯಲ್ಲಿ, ಅರ್ಥಗಾರಿಕೆಯಲ್ಲಿ ಹಿಮ್ಮೇಳದಲ್ಲಿ ಹಿಂದಿನ ಎಲ್ಲ ಅಲ್ಲದಿದ್ದರೂ ಕೆಲವು ಹಿರಿಯ ಕಲಾವಿದರ ಸಂಗ್ರಹಗಳು ಕ್ಷಣ ಮಾತ್ರದಲ್ಲಿ ಸಿಗುತ್ತವೆ. ಯೂಟ್ಯೂಬ್ ಅಲ್ಲಿ ಈಗ ಚಾಲ್ತಿಯಲ್ಲಿರುವ ತೆಂಕು ಬಡಗು ತಿಟ್ಟುಗಳ ಹಲವು ಪ್ರಸಂಗಗಳ ವಿಡಿಯೋ ಮುದ್ರಣಗಳು ಇವೆ. ಯಕ್ಷಗಾನದಲ್ಲಿ ಇಂದು ಬಳಸದ ಹಿಂದೆ ಬಳಸಲ್ಪಡುತ್ತಿದ್ದ ಪರಂಪರೆಯ ಕುಣಿತಗಳು ವಿಶಿಷ್ಟ ಸಂಪ್ರದಾಯಗಳು ದಾಖಲಾಗಿವೆ ಮತ್ತು ಲಭ್ಯ ಇವೆ. ಹುಡುಕುವ ಮತ್ತು ಹುಡುಕಿ ಕಲಿಯುವ ಮನೋಸ್ಥಿತಿ ಇದ್ದರೆ ಕಲಿಕೆಗೆ ಬೇಕಾದ ಸೌಕರ್ಯ ಮತ್ತು ಸೌಲಭ್ಯ ಎರಡನ್ನೂ ತಂತ್ರಜ್ಞಾನ ಮಾಡಿಕೊಟ್ಟಿದೆ.

ಪ್ರದರ್ಶನ:

ಇಂದು ನಮ್ಮೊಂದಿಗಿರುವ ಕೆಲವು ಹಿರಿಯ ಪ್ರೇಕ್ಷಕರ ಪ್ರಕಾರ ಯಕ್ಷಗಾನಕ್ಕೆ ತಂತ್ರಜ್ಞಾನದ ಮೊದಮೊದಲ ಪ್ರವೇಶ ಶಬ್ದ ಮತ್ತು ಬೆಳಕುಗಳ ಮೂಲಕ ಆಯಿತು. ದೊಂದಿ ಬೆಳಕುಗಳು ರಂಗಸ್ಥಳವನ್ನು ಬೆಳಗುವ ಮತ್ತೆ ಧ್ವನಿವರ್ಧಕಗಳೇ ಇಲ್ಲದ ಕಾಲ ಒಂದಿತ್ತೆಂದು ಅವರು ಹೇಳುತ್ತಾರೆ. ರಾತ್ರಿ ಇಡೀ ದೊಂದಿ ಉರಿಯಬೇಕಾದ, ಆಟದ ಮಧ್ಯಮಧ್ಯ ದೊಂದಿಗಳಿಗೆ ಎಣ್ಣೆ ಹಾಕುವುದು ಸಾಮಾನ್ಯ ದೃಶ್ಯವಾಗಿತ್ತು. ನಂತರ ಗ್ಯಾಸ್ ಲೈಟ್ ಗಳ ಬಳಕೆ ಶುರು ಆಯಿತು. ಆಗಲೂ ಆಟದ ನಡುವೆ ಮೇಳದ ಸೇವಕ ಬಂದು ಲೈಟ್ ಗೆ ಪಂಪ್ ಹೊಡೆಯುವುದು ಸಾಮಾನ್ಯವಾಗಿತ್ತು. ಧ್ವನಿವರ್ಧಕಗಳೇ ಇಲ್ಲದ ಕಾಲದಲ್ಲಿ ಮೇಳಗಳ ನಡುವೆ ಸ್ಪರ್ಧಾತ್ಮಕ ಜೋಡಾಟಗಳು ನಡೆಯುತ್ತಿದ್ದವು. ಮತ್ತೆ ನೆರೆಯ ಕೆಲವು ಊರುಗಳಿಗೆ ಕೇಳಿಸುವಂತೆ ಹಾಡಬಲ್ಲ ಭಾಗವತರು ಆಗ ಇದ್ದರಂತೆ. ರಾತ್ರಿಯ ಪ್ರಶಾಂತ ವಾತಾವರಣ, ವಾಹನ ಸಂಚಾರಗಳು ಬಹಳ ಕಡಿಮೆ, ಆಟ ನಡೆಯುತ್ತಿರುವ ಬಯಲಿನಲ್ಲಿ ಜನರೇಟರ್ ಇಲ್ಲದಿರುವುದು ಕಲಾವಿದರ ಸ್ವರವನ್ನು ಎಲ್ಲ ಪ್ರೇಕ್ಷರಿಗೂ ತಲುಪಿಸುವಲ್ಲಿ ಸಹಾಯ ಮಾಡುತ್ತಿದ್ದವು. ಇಂದು ದೊಂದಿ ಅಥವಾ ಗ್ಯಾಸ್ ಲೈಟ್ ಜಾಗದಲ್ಲಿ ಹ್ಯಾಲೊಜೆನ್ ಮತ್ತು ಟ್ಯೂಬ್ ಲೈಟ್ ಗಳು ಬಂದಿವೆ, ಸನ್ನಿವೇಶಗಳ ಅನುಭವನನ್ನು ತೀಕ್ಷ್ಣಗೊಳಿಸಲು ಬಣ್ಣದ ಬೆಳಕುಗಳು ಬಳಕೆ ಆಗುತ್ತವೆ. ಭಾಗವತ ಮದ್ದಳೆಗಾರರಿಗೆ ಧ್ವನಿ ವರ್ಧಕಗಳು ಬಂದಿವೆ. ಮತ್ತೆ ಧ್ವನಿವರ್ಧಕಗಳಲ್ಲಿ ವಿಶೇಷ ಪರಿಣಾಮಗಳನ್ನು ಸೇರಿವುವ ವ್ಯವಸ್ಥೆಯೂ ಇದೆ. ಪ್ರತಿ ಮೇಳದಲ್ಲೂ ಶಬ್ದ ಮತ್ತು ಬೆಳಕುಗಳ ಜವಾಬ್ದಾರಿಗೆ ತಂತ್ರಜ್ಞ ಇರುತ್ತಾನೆ.

ಯಕ್ಷಗಾನದಲ್ಲಿ ಧ್ವನಿವರ್ಧಕಗಳ ಬಳಕೆ ಶುರು ಆದ ಕಾಲದಲ್ಲಿ ಇಡೀ ರಂಗಸ್ಥಳದಲ್ಲಿ ಎರಡು ಮೈಕ್ ಗಳು ಮಾತ್ರ ಬಳಸಲ್ಪಡುತ್ತಿದ್ದವು. ಒಂದು ಭಾಗವತರಿಗೆ ಇನ್ನೊಂದು ರಂಗಸ್ಥಳದ ಮುಂದೆ, ವೇಷಧಾರಿಗೆ. ಮದ್ದಲೆಯವರಿಗೆ ಬೇರೆ ಮೈಕ್ ವ್ಯವಸ್ಥೆ ಇರಲಿಲ್ಲ. ಈ ಕಾರಣಕ್ಕೆ ಪ್ರಾಚಾರ್ಯ ಉಪ್ಪೂರರು ತಮ್ಮ ಮೇಳದ ರಂಗಸ್ಥಳದಲ್ಲಿ ಮದ್ದಲೆಯವರು ಕುಳಿತುಕೊಳ್ಳುವ ಕ್ರಮವನ್ನು ಬದಲಿಸಿದರು. ಮದ್ದಳೆಯ ಎಡ, ಭಾಗವತರ ಮೈಕ್ ನ ಕಡೆಗೂ, ಮದ್ದಳೆಯ ಬಲ, ವೇಷಧಾರಿಯ ಮೈಕ್ ನ ದಿಕ್ಕಿಗೂ ಇರುವಂತೆ ಮದ್ದಳೆಗಾರರು ಕುಳಿತುಕೊಳ್ಳುತ್ತಿದ್ದರು. ಭಾಗವತ ಉಪ್ಪೂರರು ಮತ್ತು ಮದ್ದಳೆಗಾರ ತಿಮ್ಮಪ್ಪ ನಾಯ್ಕರು ಜೊತೆಯಾಗಿ ಕುಳಿತ ಆಟದ ಕೆಲವು ಭಾವಚಿತ್ರಗಳಲ್ಲಿ ಈ ಪ್ರಯೋಗ ಕಾಣಿಸುತ್ತದೆ. ಮದ್ದಳೆಯಲ್ಲಿ ಬಲಬದಿಯಿಂದ ಹೊಮ್ಮುವ “ಗುಂಪು” ಎಂದು ಕರೆಯಲ್ಪಡುವ ಪೆಟ್ಟುಗಳು ಆ ಕಾಲದಲ್ಲಿ ಹೆಚ್ಚು ಬಳಕೆಯಲ್ಲಿತ್ತು. “ತೊಂ”,”ತಾಂ” ಗಳಂತಹ ಪೆಟ್ಟುಗಳು ಮೈಕ್ ನ ಬಲವಿಲ್ಲದ ಕಾಲಕ್ಕೆ ಪರಿಣಾಮಕಾರಿಯಾಗಿಯೂ ಇದ್ದವು. ಸ್ವಲ್ಪ ಹೆಚ್ಚು ದೂರಕ್ಕೆ ಕೇಳಿಸುತ್ತಿದ್ದವು ಕೂಡ. ಶಕ್ತಿಯುತ ಮತ್ತು ಪರಿಣಾಮಕಾರಿ ಧ್ವನಿಗ್ರಾಹಕ ಮತ್ತು ವರ್ಧಕಗಳ ಈ ಕಾಲದಲ್ಲಿ “ಗುಂಪು” ಪೆಟ್ಟುಗಳು ಪ್ರೇಕ್ಷಕರಿಗೆ ಬಹಳ ಜೋರಾಗಿಯೂ ಕೇಳಿಸುತ್ತವೆ, ಅಂತಹ ಪೆಟ್ಟುಗಳ ಬಳಕೆ ಈಗ ಕಡಿಮೆ ಆಗಿದೆ. ಅಂದು ಬಳಸುತ್ತಿದ್ದ ಧ್ವನಿವರ್ಧಕಗಳು ಬಹಳ ಕಡಿಮೆ ಶಕ್ತಿಯದಾಗಿದ್ದವು. ಅಂದಿನ ಪ್ರಶಾಂತ ವಾತಾವರಣದ ರಾತ್ರಿಯ ಆಟಗಳಿಗೆ ಇವು ಸಾಕಾಗುತ್ತಿತ್ತು. ಇವತ್ತು ನಮ್ಮ ಸುತ್ತ ಬೇಕಾದ ಬೇಡವಾದ ಎರಡೂ ಶಬ್ದಗಳು ಹೆಚ್ಚಿವೆ. ಆಸುಪಾಸಿನ ಶಬ್ದಗಳನ್ನು ಮೀರಬಲ್ಲ ಶಬ್ದ ವರ್ಧಕಗಳು ಧ್ವನಿವ್ಯವಸ್ಥೆಯ ಭಾಗವಾಗಿ ಈಗ ಬಳಸಲ್ಪಡುತ್ತವೆ. ಧ್ವನಿವರ್ಧಕಗಳ ವಿಕಸನ ಯಕ್ಷಗಾನವನ್ನೂ ಮುಟ್ಟಿದ ಮೇಲೆ ಕರ್ನಾಟಕ ಮೇಳದಲ್ಲಿ ದಿನೇಶ ಅಮ್ಮಣ್ಣಾಯರು ತಮ್ಮ ಭಾಗವತಿಕೆಗೆ ಪ್ರತಿಧ್ವನಿಯ ಪರಿಣಾಮವನ್ನು ಬಳಸುತ್ತಿದ್ದರು. ಇದನ್ನು ನೋಡಿ, ತಮ್ಮ ಸ್ವರಕ್ಕೆ ಸನ್ನಿವೇಶಕ್ಕೆ ಹೊಂದುವಂತೆ ಪ್ರತಿಧ್ವನಿಯ ಬಳಕೆಯನ್ನು ಸುಬ್ರಹ್ಮಣ್ಯ ಧಾರೇಶ್ವರರು ಪೆರ್ಡೂರು ಮೇಳದಲ್ಲೂ ಶುರು ಮಾಡಿದರು. ಧ್ವನಿವರ್ಧಕಗಳ ಸಹಾಯದಿಂದ ಪ್ರತಿಧ್ವನಿ ಪರಿಣಾಮವನ್ನು ಹಾಡಿನಲ್ಲಿ ಬಳಸುವ ಮೊದಲು ಧಾರೇಶ್ವರರು ತಮ್ಮ ಸ್ವರವನ್ನೇ ಸಣ್ಣ ದೊಡ್ಡ ಮಾಡಿ ಪ್ರತಿಧ್ವನಿ ಆದಂತೆ ಕೆಲವು ಹಾಡುಗಳಲ್ಲಿ ಮಾಡುತ್ತಿದ್ದರಂತೆ. ಜನರಂಜನೆಯ ಹೊಸ ಪ್ರಸಂಗಗಳಿಂದ ಮೆರೆದ ಪೆರ್ಡೂರು ಮೇಳದಲ್ಲಿ ಧಾರೇಶ್ವರರು ಸಾಮಾಜಿಕ ಪ್ರಸಂಗಗಳಿಗೆ ಹೊಂದುವಂತೆ ಹೊಸ ತರದ ಬೆಳಕುಗಳ ಪ್ರಯೋಗವನ್ನೂ ಶುರು ಮಾಡಿದರು ಮತ್ತು ಅಂತಹ ವಿಶೇಷ ಪರಿಣಾಮದ ಬೆಳಕುಗಳು ರಂಗಸ್ಥಳ ಒಳಗೆ ಇದ್ದು ಕೆಲಸ ಮಾಡುತ್ತಿದ್ದವು. ರಂಗಸ್ಥಳಕ್ಕೆ ವಿಶೇಷ ಪರಿಣಾಮ ನೀಡುವ ಭರದಲ್ಲಿ ಈಗಿನ ಬೆಳಕಿನ ವ್ಯವಸ್ಥೆ ನೋಡುಗರಿಗೆ ಅಡ್ಡಿಪಡಿಸುತ್ತವೆ. ಬಹಳ ಡೇರೆ ಮೇಳಗಳ ಬಯಲಾಟದ ಮೇಳಗಳ ರಂಗಸ್ಥಳದ ಮುಂಭಾಗದಲ್ಲಿ ಪ್ರೇಕ್ಷಕರ ಕಣ್ಣಿಗೆ ಅಡ್ಡ ಬರುವಂತೆ ಕಂಬದ ಮೇಲೆ ಬೆಳಕುಗಳನ್ನು ಏರಿಸಲಾಗುತ್ತದೆ. ರಂಗಸ್ಥಳದ ದೃಷ್ಟಿಯಿಂದ ಇದು ಸೂಕ್ತ ಇರಬಹುದಾದರೂ ನೋಡುವವರಿಗೆ ರಂಗಸ್ಥಳ ಇಬ್ಭಾಗವಾಗಿ ಕಂಡು ರಸ ಭಂಗವಾಗುತ್ತದೆ. ತಂತ್ರಜ್ಞಾನ ಲಭ್ಯ ಇದ್ದರೂ ಅಸಡ್ಡೆಯಿಂದಲೋ ಅಜ್ಞಾನದಿಂದಲೋ ನಾವಾಗಿ ರಸಾಸ್ವಾದನೆಗೆ ತೊಡಕು ಉಂಟು ಮಾಡುವ ದೃಷ್ಟಾಂತಗಳು ಇವು.

ಭಾಗವತ ಮದ್ದಳೆಗಾರರ ನಡುವೆ ಕಾಣಿಸುತ್ತಿದ್ದ ಹಾರ್ಮೋನಿಯಂ ಮತ್ತು ಶೃತಿ ಹಿಡಿಯುವಾತ ಮಾಯವಾಗಿ ಇಲೆಕ್ಟ್ರಾನಿಕ್ ಶೃತಿ ಪೆಟ್ಟಿಗೆ ಬಳಕೆ ಆಗುತ್ತಿದೆ. ಇನ್ನು ಕೆಲವರು ಮೊಬೈಲ್ ಫೋನಿನಲ್ಲೇ ಇಳಿಸಿಕೊಂಡ ಶೃತಿಯ ಆ್ಯಪ್ ನ ಸಹಾಯದಲ್ಲಿ ಹಾಡುವುದು ಇದೆ. ಕೆಲವು ವೇಷಧಾರಿಗಳು ತಂತಿರಹಿತ ಮೈಕ್ ಗಳನ್ನೂ ಬಳಸುತ್ತಿದ್ದಾರೆ. ರಂಗಸ್ಥಳದಲ್ಲಿ ವೇಷಧಾರಿಯ ಮುಖಕ್ಕೆ ನಿಲುವಿಗೆ ಅಡ್ಡ ಬರುವ ಮೈಕ್ ಗಳು ಬದಲಾಗಿ ಸಮಕಾಲೀನ ನಾಟಕಗಳಲ್ಲಿ ಬಳಕೆ ಆಗುವ ಉತ್ತಮ ಗ್ರಹಣ ಶಕ್ತಿಯ ಮೈಕ್ ಗಳ ಬಳಕೆ ಆಗಬೇಕು. ಇವುಗಳು ಪ್ರೇಕ್ಷಕನ ನೋಟದ ಎದುರಲ್ಲಿ ಇರಕೂಡದು. ಅಥವಾ ಇಂದಿನ ದೂರದರ್ಶನ ಮಾದರಿಯ ಸ್ಟೇಜ್ ಷೋ ದಲ್ಲಿ ಬಳಸುವ ತಂತಿ ರಹಿತ ಮೈಕ್ ಗಳ ಬಳಕೆ ಆಗಬೇಕು.

ವೀಕ್ಷಣೆ, ಪ್ರಸರಣ ಮತ್ತು ಮುದ್ರಣ:

ಹಿಂದಿನ, ಡೇರೆ ಮೇಳಗಳ ಆಟದ ವೀಕ್ಷಣೆ, ಸಮಾಜದ ಶ್ರೇಣೀಕೃತ ಅರ್ಥವ್ಯವಸ್ಥೆಯನ್ನು ಬಿಂಬಿಸುತ್ತಿತ್ತು. ಹೆಚ್ಚು ಹಣ ಕೊಟ್ಟರೆ ಆರಾಮ ಖುರ್ಚಿಯ ಮುಂದಿನ ಸಾಲು, ಕಡಿಮೆ ಹಣದ ಟಿಕೇಟುಗಳು ಹಿಂದಿನ ಸಾಲಿನ ಕಬ್ಬಿಣದ ಕುರ್ಚಿಗಳು, ಇನ್ನು ಮುಂದೆ ನೆಲದ ಮೇಲೆ ಕುಳಿತು ಆಟ ನೋಡುವವರಿಗೆ ಅತಿ ಕಡಿಮೆ ದರದ ಟಿಕೇಟುಗಳು. ಇವತ್ತು ಆಟವನ್ನು ಹಣಕೊಟ್ಟು ನೆಲದ ಮೇಲೆ ಕುಳಿತು ನೋಡುವ ಕಾಲ ಹೋಗಿದೆ. ಯಕ್ಷಗಾನದ ವೀಕ್ಷಣೆ ಪ್ರತ್ಯಕ್ಷ ಪ್ರೇಕ್ಷಕರು ಮಾತ್ರ ನೋಡುವ ಕಾಲದ ಚಿತ್ರ ಅದು. ಇಂದಿನ ಹಲವು ಆಟಗಳಲ್ಲಿ ಪ್ರತ್ಯಕ್ಷ ವೀಕ್ಷಣೆಯ ಜೊತೆಗೆ ಪರೋಕ್ಷ ವೀಕ್ಷಣೆಯೂ ಸಾಧ್ಯ ಆಗಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಯಕ್ಷಗಾನ ಸಪ್ತಾಹ ಫೇಸ್ಬುಕ್ ನಂತಹ ಅಂತರ್ಜಾಲ ಮುಖೇನ ನೇರ ಪ್ರಸಾರಗೊಂಡಿತ್ತು. ರಂಗಸ್ಥಳದಿಂದ ಸಾವಿರಗಟ್ಟಲೆ ಮೈಲು ದೂರದಲ್ಲಿರುವ ಯಕ್ಷಗಾನ ಪ್ರಿಯರು ತಮ್ಮ ಮೊಬೈಲ್ ನ ಚೌಕಟ್ಟಿನೊಳಗೆ ಆ ಸಪ್ತಾಹದ ಪ್ರತಿ ಯಕ್ಷಗಾನವನ್ನು ನೋಡಿದರು; ಚಿತ್ರಣ ಮತ್ತು ಪ್ರಸಾರದಲ್ಲಿ ಅತ್ಯಂತ ಸ್ಪಷ್ಟತೆಯೂ ಇದ್ದಿತ್ತು. ಹಲವು ಗಾನವೈವಿಧ್ಯ ಕಾರ್ಯಕ್ರಮಗಳು, ಭವನಗಳಲ್ಲಿ ನಡೆಯುವ ಕಾಲಮಿತಿಯ ಯಕ್ಷಗಾನದ ಪ್ರದರ್ಶನಗಳು ಸ್ಥಳೀಯ ದೂರದರ್ಶನ ವಾಹಿನಿಗಳಲ್ಲಿ ನೇರ ಪ್ರಸಾರಗೊಳ್ಳುತ್ತವೆ.

ತನ್ನೆದುರು ಕುಳಿತು ನೋಡುವ, ಚಪ್ಪಾಳೆ ತಟ್ಟುವ, ಶಿಳ್ಳೆ ಹೊಡೆಯುವ ಪ್ರೇಕ್ಷಕರಿಗಿಂತ ಹೆಚ್ಚು ಪ್ರೇಕ್ಷಕರು ಪರೋಕ್ಷ ವಾಗಿ ಅಂದಿನ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಸಾಧ್ಯತೆ ಇದೆ ಎನ್ನುವುದು ಯಕ್ಷಗಾನಕ್ಕೆ ಹೊಸ ಅನುಭವವೇ. ದೂರದಲ್ಲಿರುವ ಪ್ರೇಕ್ಷಕರ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ ಆದರೂ ಆಟವನ್ನು ಆಸ್ವಾದಿಸುವವರ ಪ್ರತಿಕ್ರಿಯೆಗಳು ಬಹಳ ಮುಖ್ಯ ಎನಿಸುವ ಯಕ್ಷಗಾನದ ಮಟ್ಟಿಗೆ ಇಂತಹ ಅಜ್ಞಾತ ಪ್ರೇಕ್ಷಕ ವರ್ಗ ಯಾವ ಮಟ್ಟಿಗೆ ಉತ್ಸಾಹವನ್ನೂ ನೀಡೀತು ಎನ್ನುವುದು ಒಂದು ಪ್ರಶ್ನೆಯೇ. ಪ್ರತಿವಾರವೂ ಕೆಲವು ದೂರದರ್ಶನ ವಾಹಿನಿಗಳಲ್ಲಿ ಯಕ್ಷಗಾನ ಕಲಾವಿದರ ಸಂದರ್ಶನ ಪ್ರಸಾರ ಆಗುತ್ತವೆ. ಕಲಾವಿದನನ್ನು ಪಾತ್ರದ ಮೂಲಕ ಹೆಚ್ಚು ಗುರುತಿನಲ್ಲಿಡುವ ಪ್ರೇಕ್ಷಕ ಇಂತಹ ಟಿವಿ ಸಂದರ್ಶನಗಳಿಂದ ಕಲಾವಿದನ ಬದುಕು, ಅವನು ಬೆಳೆದುಬಂದ ದಾರಿಯ ಪರಿಚಯವೂ ಆಗುತ್ತದೆ. ಸಂದರ್ಶನಗಳ ಪ್ರಸಾರದ ನಂತರ ಯೂಟ್ಯೂಬ್ ನಂತಹ ಮಾಧ್ಯಮಗಳಲ್ಲಿ ಸೇರಿಸಲ್ಪಡುತ್ತಿರುವುದು ಯಾವಾಗ ಬೇಕಾದರೂ ಇವನ್ನು ನೋಡುವ ಅವಕಾಶ ಮಾಡಿಕೊಟ್ಟಿದೆ. ಟಿವಿ ಮಾಧ್ಯಮಗಳಲ್ಲಿ ಬರುವ ಕಲಾವಿದರ ಸಂದರ್ಶನಗಳಲ್ಲದೇ, ಕೆಲವು ಯಕ್ಷಗಾನ ಆಸಕ್ತರು ಅಧ್ಯಯನಕಾರರು ಹಿರಿಯ ಕಲಾವಿದರ ಸಂದರ್ಶನಗಳ ವಿಡಿಯೋಗಳನ್ನು ಮುದ್ರಿಸಿ ಯುಟ್ಯೂಬ್ ಮೂಲಕ ಒದಗಿಸುತ್ತಿದ್ದಾರೆ.

ನನ್ನ ಬಾಲ್ಯದ ದಿನಗಳಲ್ಲಿ ನನ್ನ ನೆರೆಮನೆಯವರು ಆ ಕಾಲಕ್ಕೆ ಅಂಗಡಿಯಲ್ಲಿ ದೊರೆಯುತ್ತಿದ್ದ ಪ್ರತಿ ಕ್ಯಾಸೆಟ್ಟು ಅನ್ನೂ ಕೊಳ್ಳುತ್ತಿದ್ದರು. ಕಾಳಿಂಗ ನಾವುಡರ, ಕಡತೋಕ ಮಂಜುನಾಥ ಭಾಗವತರ ಪ್ರತಿ ಧ್ವನಿಮುದ್ರಣವೂ ಅವರಲ್ಲಿರುತ್ತಿತ್ತು. ಅವರ ಮನೆಗೆ ಹೋಗಿ ಕಬ್ಬಿಣದ ಪೆಠಾರಿಯಲ್ಲಿ ಕೂಡಿಟ್ಟ ಯಕ್ಷಗಾನದ ಕ್ಯಾಸೆಟ್ಟುಗಳನ್ನು ಹರಡಿ ಹುಡುಕುವುದು ಮತ್ತೆ ತಂದು ಕೇಳುವುದೆಂದರೆ ಅತ್ಯಂತ ರೋಚಕ ಕೆಲಸವಾಗಿತ್ತು. ಮತ್ತೆ ವರ್ಷಕ್ಕೆ ಎರಡೂ ಮೂರೋ ಆಟಗಳು ಮಾತ್ರ ನಡೆಯುತ್ತಿದ್ದ ಒಂದು ಗ್ರಾಮೀಣ ಪರಿಸರದಲ್ಲಿ ಯಕ್ಷಗಾನವನ್ನು ದಿನವೂ ಆಸ್ವಾದಿಸಬೇಕೆಂದರೆ ಕ್ಯಾಸೆಟ್ಟುಗಳು ಮಾತ್ರ ದಾರಿಯಾಗಿದ್ದವು. ಬೆಂಗಳೂರು ದೂರದರ್ಶನದಲ್ಲಿ ಒಮ್ಮೊಮ್ಮೆ ಪ್ರದರ್ಶಿತವಾಗುತ್ತಿದ್ದ ಕಾಳಿಂಗ ನಾವುಡರ, ಶಂಭು ಹೆಗಡೆಯವರ, ಕಡತೋಕರ ಸ್ಟುಡಿಯೋ ಚಿತ್ರೀಕೃತ ಆಟಗಳೂ ನಮಗೆ ಆಗಾಗ ನೋಡಲು ಸಿಗುತ್ತಿದ್ದವು. ಆ ಹೊತ್ತಿಗೆ ಮನೆಯಲ್ಲಿ ಕರೆಂಟ್ ಇದ್ದರೆ ಮಾತ್ರ! ೩೦-೫೦ ವರ್ಷಗಳ ಹಿಂದೆ ಯಕ್ಷಗಾನ ಪ್ರೇಮಿಗಳು ಹಾಡುಗಳನ್ನು, ಆಟದ ತುಣುಕುಗಳನ್ನು ಟೇಪ್ ರೆಕಾರ್ಡರ್ ನಲ್ಲಿ ಮುದ್ರಿಸಿ ಇಟ್ಟುಕೊಳ್ಳುತ್ತಿದ್ದರು ಎನ್ನುವ ವಿಷಯ ಈಗ ವಾಟ್ಸಪ್ಪ್, ಟೆಲಿಗ್ರಾಂ, ಫೇಸ್ಬುಕ್ ಯುಗದಲ್ಲಿ ಬೆಳಕಿಗೆ ಬಂದಿದೆ. ಆ ಕಾಲದಲ್ಲಿ ಧ್ವನಿಮುದ್ರಿಸಿಕೊಂಡ ಅಥವಾ ಚಿತ್ರೀಕರಿಸಿಕೊಂಡ ಅಮೂಲ್ಯ ತುಣುಕುಗಳು ಈಗ ಕ್ಯಾಸೆಟ್ಟು ಮಾಧ್ಯಮದಿಂದ ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಪರಿವರ್ತನೆಗೊಂಡು ಹಂಚಲ್ಪಡುತ್ತಿವೆ. ಹೀಗೆ ಒಂದು ಹಳೆಯ ತಂತ್ರಜ್ಞಾನದ ಮಾಧ್ಯಮದಲ್ಲಿ ಮಣ್ಣಾಗಬೇಕಿದ್ದ ಯಕ್ಷಗಾನದ ಹಾಡುಗಳು ವಿಡಿಯೋಗಳು ಚಿತ್ರಗಳು ನೆನಪುಗಳು ಪರಿವರ್ತಿತ ಮಾಧ್ಯಮ ಮತ್ತು ಹೊಸ ತಂತ್ರಜ್ಞಾನಗಳ ಮೂಲಕ ರೂಪಾಂತರಗೊಂಡು ಬದುಕುತ್ತಿವೆ. ಜಾನುವಾರುಕಟ್ಟೆಯವರ, ದಾಸ ಭಾಗವತರ ಹಾಡುಗಳು ಈ ಕಾರಣಕ್ಕೆ ನಮಗೆ ಈಗಲೂ ಕೇಳಲು ಸಿಗುತ್ತಿವೆ. ಮಂಗಳೂರು ಆಕಾಶವಾಣಿಯಲ್ಲಿ ನಮ್ಮ ಪೀಳಿಗೆಯವರು ಕೇಳದ ದಾಸ ಭಾಗವತರ ತೆಂಕು ಬಡಗಿನ ಉಚ್ಛ್ರಾಯದ ಕಾಲದ ಧ್ವನಿಮುದ್ರಣಗಳು ಇವೆ ಎಂದು ಕೇಳಿದ್ದೇವೆ. ಇವೂ ಕೂಡ ಜನರನ್ನು ತಲುಪಬೇಕು. ಒಳ್ಳೆಯ ಧ್ವನಿಮುದ್ರಣ ಬೇಕಿದ್ದರೆ ಸ್ಟುಡಿಯೋದಲ್ಲೇ ರೆಕಾರ್ಡ್ ಆಗಿ ಕ್ಯಾಸೆಟ್ಟುಗಳ ಮೂಲಕ ಮನೆ ಮನ ತಲುಪುವ ಕಾಲ ಸಂಪೂರ್ಣ ಮುಗಿದಿದೆ. ಕ್ಯಾಸೆಟ್ ಗಳನ್ನು ಸ್ಥಳಾಂತರಿಸಿದ ಸಿಡಿ ಗಳೂ ಈಗ ಮರೆಯಾಗುತ್ತಿವೆ. ಕ್ಯಾಸೆಟ್ ಗಳ ಟೇಪ್ ರೆಕಾರ್ಡರ್ ಗಳ ನಿರ್ವಹಣೆಯ ಭಾರವನ್ನು ತಕ್ಕಮಟ್ಟಿಗೆ ದೂರಮಾಡಿದ ಸಿಡಿ ಚಕ್ರಗಳು ಮತ್ತೆ ಪ್ಲೇಯರ್ ಗಳೂ ಸಹ ಬದಿಗೆ ಸರಿದಿವೆ. ಒಂದು ಸಣ್ಣ ಸಲಕರಣೆಯಲ್ಲಿ ಸಾವಿರಗಟ್ಟಲೆ ಹಾಡುಗಳನ್ನು, ನೂರುಗಟ್ಟಲೆ ತಾಳಮದ್ದಲೆಗಳ ಮುದ್ರಣಗನ್ನು ಹಿಡಿದಿಡುವ ವ್ಯವಸ್ಥೆ ಈಗ ಬಳಕೆಯಲ್ಲಿ ಇದೆ. ಆಟ ನಡೆಯುತ್ತಿರುವಾಗಲೇ ಧ್ವನಿಗ್ರಾಹಕಗಳಿಂದ ನೇರ ಮುದ್ರಿಸುವ ಪದ್ಧತಿ ಈಗ ಬಂದಿದೆ. ಅತ್ಯುತ್ತಮ ಗುಣಮಟ್ಟದ ಮುದ್ರಣ ವ್ಯವಸ್ಥೆ ಮತ್ತು ದೀರ್ಘ ಕಾಲ ಉಳಿಯುವ ಅಥವಾ ಅಳಿಸಿಯೇ ಹೋಗದ ಮುದ್ರಿತ ಕಡತಗಳು ಸಾಮಾನ್ಯವಾಗಿವೆ. ಮುದ್ರಣಗಳ ಕಡತಗಳನ್ನು ದಾಖಲಿಸುವ ಉಳಿಸುವ ಅತಿ ನವೀನ “ಕ್ಲೌಡ್ ಸ್ಟೋರೇಜ್” ಎನ್ನುವ ವಿಧಾನ ನಮ್ಮ ಕಣ್ಣಿಗೆ ಕಾಣುವ ಮೊಬೈಲ್ ಅಥವಾ ಕಂಪ್ಯೂಟರ್ ಒಳಗಡೆ ಸೇರಿಕೊಳ್ಳುವ ಕಡತ ಉಳಿಸುವ ವ್ಯವಸ್ಥೆಗಿಂತ ಭಿನ್ನವಾಗಿ ಎಲ್ಲೋ ದೂರದಲ್ಲಿ ನಮ್ಮ ಕಣ್ಣಿಗೆ ಕಾಣದಂತೆ ಡಿಜಿಟಲ್ ಮಾದರಿಯಲ್ಲಿ ಉಳಿಸಲ್ಪಟ್ಟಿರುತ್ತದೆ; ಮತ್ತೆ ಯಾವಾಗ ಬೇಕೋ ಆಗ ನಮ್ಮ ಸ್ಮಾರ್ಟ್ ಮೊಬೈಲ್ ಮೂಲಕ ಲಭ್ಯ ಆಗುತ್ತದೆ. ದಾಖಲಾತಿಯ ನಿಟ್ಟಿನಿಂದ ನೋಡಿದರೆ ಇಂದಿನ ಇಲೆಕ್ಟ್ರಾನಿಕ್ ಹಾಗು ಡಿಜಿಟಲ್ ವಿಧಾನಗಳು ಯಕ್ಷಗಾನ ಆಡಿಯೋಗಳ ವಿಡಿಯೋಗಳ ಪ್ರಸಂಗ ಪ್ರತಿಗಳ ಕಡತಗಳಿಗೆ ಅಮರತ್ವವನ್ನು ನೀಡುತ್ತಿವೆ.

ಪ್ರತಿಕ್ರಿಯೆ ಹಾಗು ವಿಮರ್ಶೆ :

ವಾಟ್ಸಪ್ಪ್ ಗುಂಪುಗಳಲ್ಲಿ, ಯುಟ್ಯೂಬ್ ಅಲ್ಲಿ ಆಟ ನಡೆಯುತ್ತಿರುವಾಗಲೇ ಆಗಿನ ಆಟದ ಭಾವಚಿತ್ರಗಳು ಮುದ್ರಣಗಳ ತುಣುಕುಗಳು ಹರಿದಾಡುತ್ತವೆ. ಪ್ರತಿವಾರವೂ ಯಕ್ಷಗಾನದ, ತಾಳಮದ್ದಲೆಗಳ ವಿಮರ್ಶೆಗಳು ಪತ್ರಿಕೆಗಳಲ್ಲಿ, ಫೇಸ್ಬುಕ್ ಗಳಲ್ಲಿ ಬರುತ್ತವೆ. ದಿನವೂ ಪ್ರದರ್ಶನವೊಂದರ ಭಾಗವಾಗಿರುವ ಹೆಚ್ಚಿನ ಕಲಾವಿದರು ವಾಟ್ಸ್ಯಾಪ್ಪ್ ಅಥವಾ ಟೆಲಿಗ್ರಾಂ ಗುಂಪುಗಳಲ್ಲಿದ್ದಾರೆ. ಚೌಕಿಯಲ್ಲಿ ಕನ್ನಡಿ ನೋಡುತ್ತಾ ತಯಾರಾಗುವ ಕಲಾವಿದ, ಪ್ರದರ್ಶನದ ನಂತರ ಹೀಗೆ ಸುಲಭವಾಗಿ ಸಿಗುವ ತಮ್ಮ ಪ್ರಸ್ತುತಿಯ ತುಣುಕನ್ನು ನೋಡಬಹುದು; ಚೌಕಿಯ ಕನ್ನಡಿಯಂತೆ ತಕ್ಷಣದ ಪ್ರತಿಫಲನ ಅಲ್ಲದಿದ್ದರೂ ಸ್ವಲ್ಪ ತಡವಾಗಿ ತಮ್ಮ ಅಂದಿನ ನಿರೂಪಣೆಯನ್ನೋ ಪ್ರಸ್ತುತಿಯನ್ನೋ ಮನಸ್ಸಿನಲ್ಲಿ ಪ್ರತಿಫಲಿಸಿಕೊಳ್ಳಬಹುದು. ಮೊದಲೆಲ್ಲ ಪ್ರದರ್ಶನದ ವೇಳೆಯಲ್ಲಿ ಮಾತ್ರ ಚಪ್ಪಾಳೆ ಶಿಳ್ಳೆಗಳ ಮೂಲಕ ಪ್ರತಿಕ್ರಿಯೆಗಳು ಕಲಾವಿದರನ್ನು ಮುಟ್ಟುತ್ತಿದ್ದವು. ಈಗ, ಮುದ್ರಣಗಳು ಜನರನ್ನು ತಲುಪುತ್ತಿದ್ದಂತೆ ಪ್ರತಿಕ್ರಿಯೆಗಳು ಸಿಗುತ್ತವೆ. ಎಲ್ಲ ಸ್ಥಾಪಿತ ಕಲಾವಿದರಿಗೂ ಅವರದೇ ಅಭಿಮಾನಿ ವರ್ಗ ಇದೆ. ಹಾಗಾಗಿ ಪ್ರದರ್ಶನ ಹೇಗೆ ಇದ್ದರೂ ಹೆಚ್ಚಿನ ಪ್ರತಿಕ್ರಿಯೆಗಳು ಕಲಾವಿದರಿಗೆ ಖುಷಿ ಆಗುವ ಹಾಗೆ ಇರುತ್ತವೆ. ಒಂದು ಪ್ರದರ್ಶನ ಕಲಾವಿದರ ಕಾರಣದಿಂದ ಸರಿ ಆಗದಿದ್ದರೆ ಹೊಣೆಗಾರರಾದ ಕಲಾವಿದರ ಎದುರು ಹೋಗಿ ಹೀಗೇಕೆ ಆಯಿತು ಎಂದು ಕೇಳುವುದು ಯಾರಿಗೂ ಕಷ್ಟವೇ. ಯಕ್ಷಗಾನಕ್ಕಿಂತ ಬೇರೆಯೇ ಲೋಕಗಳಾದ ಪತ್ರಿಕೋದ್ಯಮ, ಸಾಹಿತ್ಯ, ಸಿನೆಮಾಗಳು ಹೀಗೆ ಹೊಸ ತಂತ್ರಜ್ಞಾವನ್ನು ಬಳಸಿಕೊಂಡು ಬೆಳೆಯುತ್ತಿರುವ ಹೊತ್ತಿನಲ್ಲಿ ತಮ್ಮನ್ನು ದೂರನಿಂತು ವಿಮರ್ಶೆ ಮಾಡುವವರಿಗೆ ಮುಕ್ತ ಅವಕಾಶ ಮಾಡಿಕೊಟ್ಟಿವೆ; ಒಂದು ಅಂಕಣದ ಬಗೆಗೋ, ಸಿನೆಮಾದ ಕುರಿತೋ ವ್ಯಕ್ತಿಯ ಕುರಿತೋ ಅಲ್ಲಿ ಸಂಕೋಚವೇ ಇಲ್ಲದ ತೀವ್ರ ಪ್ರತಿಕ್ರಿಯೆಗಳು ಬರುತ್ತಿರುತ್ತವೆ. ಯಕ್ಷಗಾನದ ಮಟ್ಟಿಗೆ ನೇರ ವಿಮರ್ಶೆ, ಅಂತರ್ಜಾಲ ಆಧಾರಿತ ಪ್ರತಿಕ್ರಿಯೆಗಳು ಹೆಚ್ಚಾಗಿ ಹೊಗಳುವ ವೇದಿಕೆಗಳಾಗಿಯೇ ಕಾಣುತ್ತವೆ. ಹೊಸ್ತೋಟ ಮಂಜುನಾಥ ಭಾಗವತರು ಹೇಳುವಂತೆ ಯಕ್ಷಗಾನದಲ್ಲಿ ವಸ್ತುನಿಷ್ಠ ವಿಮರ್ಶೆಗಳು, ಪ್ರತಿಕ್ರಿಯೆಗಳು ಬರುವುದು ಬಹಳ ಕಡಿಮೆಯೇ. ಹೆಚ್ಚಿನ ವಿಮರ್ಶೆಗಳು ವ್ಯಕ್ತಿನಿಷ್ಠವಾಗಿರುತ್ತವೆ, ಮುಖ ಸ್ತುತಿ ಆಗಿರುತ್ತವೆ. ಮುನ್ನೂರಕ್ಕಿಂತ ಹೆಚ್ಚು ಪೂರ್ಣಕಾಲಿಕ ಯಕ್ಷಗಾನ ಕಲಾವಿದರು ಒಂದಲ್ಲ ಒಂದು ಸಾಮಾಜಿಕ ಜಾಲತಾಣವನ್ನು ಬಳಸುವವರೇ. ಅದಕ್ಕಿಂತ ಹೆಚ್ಚಿನ ಹವ್ಯಾಸಿ ಕಲಾವಿದರು ಮತ್ತು ಸಾವಿರಗಟ್ಟಲೆ ಪ್ರೇಕ್ಷಕರು ಯಕ್ಷಗಾನಕ್ಕೆ ಸಂಬಂಧಿಸಿದವರೆಲ್ಲ ಇಂದು ಜಗತ್ತಿನ ದೈನಂದಿನ ಆಗುಹೋಗುಗಳ ಜೊತೆ ಯಕ್ಷಗಾನದ ಒಳಗಿನ ಹೊರಗಿನ ಸುದ್ದಿಗಳನ್ನು ತಮ್ಮ ಮೊಬೈಲ್ ಮೂಲಕ ಪಡೆಯುತ್ತಾರೆ. ಇಂತಹ ಸಂಪರ್ಕ ಜಾಲದಲ್ಲಿ ವಸ್ತುನಿಷ್ಠ ಪ್ರತಿಕ್ರಿಯೆಗಳು ವಿಮರ್ಶೆಗಳು ಹೆಚ್ಚು ಮುಕ್ತವಾಗಿ ಆಗಬೇಕು.

ಕಲಾವಿದರ ಭದ್ರತೆ:

ಒಂದು ದೇಶದ ವ್ಯಾಪ್ತಿಯಲ್ಲಿ ಯಕ್ಷಗಾನ ಕಲೆ ಸಣ್ಣ ಪ್ರದೇಶಕ್ಕೆ ಸೀಮಿತವಾದರೂ ತಾನು ಹುಟ್ಟಿದ ಪರಿಸರದಲ್ಲಿ ಅಪಾರ ಪ್ರೇಮಿಗಳನ್ನು, ಭಾವುಕ ಅಭಿಮಾನಿಗಳನ್ನು ಪಡೆದಿದೆ. ಹೀಗೆ ಇನ್ನೊಂದು ಕಲಾಪ್ರಕಾರ ತನ್ನ ಸೀಮಿತ ಭೌಗೋಳಿಕ ಪ್ರದೇಶದ ಪ್ರತಿ ಊರಿನ ಆಸುಪಾಸಿನಲ್ಲಿ ಬಹುತೇಕ ಪ್ರತಿ ದಿನವೂ ಪೂರ್ಣಪ್ರಮಾಣದ ಯಕ್ಷಗಾನವಾಗಿ ಅಥವಾ ಕಾಲಮಿತಿಯ ಆಟವಾಗಿ ಅಥವಾ ಹವ್ಯಾಸಿ ಪ್ರದರ್ಶನವಾಗಿ ಅಥವಾ ತಾಳ ಮದ್ದಳೆಯಾಗಿ ಪ್ರದರ್ಶನಗೊಳ್ಳುತ್ತಿರುವ ದಾಖಲೆ ಇವಲ್ಲವೇನೋ. ಜಗತ್ತಿನ ಇನ್ನೊಂದು ಕಲಾ ಪ್ರಕಾರಕ್ಕೆ ಇಂತಹ ಆದರ ಮತ್ತು ಪ್ರೀತಿ ಸಿಕ್ಕಿರುವುದು ಅನುಮಾನವೇ. ಮತ್ತೆ ಯಕ್ಷಗಾನವನ್ನು ಪ್ರೀತಿಸುವ ಸೀಮೆಯೆ ಜನರು ಹೋದಲ್ಲೆಲ್ಲ ಯಕ್ಷಗಾನವೂ ಹೋಗಿದೆ ಹೋಗುತ್ತಿದೆ. ಕಲೆಯ ಪೋಷಣೆ ಇವತ್ತು ಪರಿಪೂರ್ಣವಾಗಿ ನಡೆಯುತ್ತಿದೆ. ಕಲೆಯ ಪ್ರೋತ್ಸಾಹ ಕಲಾವಿದರ ಬದುಕಿಗೂ ಪೂರಕ ಆಗಿದೆ. ಕಲಾವಿದರ ಬದುಕನ್ನು ಸುರಕ್ಷಿತ ಸಧೃಡಗೊಳಿಸಬಲ್ಲ ಯತ್ನಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಯಕ್ಷಗಾನ ಕಲಾರಂಗ, ಯಕ್ಷಧ್ರುವ ಫೌಂಡೇಶನ್ ನಂತಹ ಸಂಸ್ಥೆಗಳು (ಇನ್ನೂ ಹಲವು ಸಂಸ್ಥೆಗಳು) ಕಲಾವಿದರ ಭದ್ರತೆಗೆ ಸಂಘಟಿತ ಕೆಲಸ ಮಾಡುತ್ತಿವೆ. ಬಹಳ ಪ್ರಸಿದ್ಧಿಗೆ ಬಂದ ಕಲಾವಿದರ ಮೇಲೆ ದಾನಿಗಳೆನಿಸಿದ ಕೆಲವು ಅಭಿಮಾನಿಗಳ ಕೃಪೆ ಇರುವುದು, ಮತ್ತೆ ಅಂತಹ ಕಲಾವಿದರ ಕಷ್ಟದ ಕಾಲದಲ್ಲಿ ಸಹಾಯ ಮಾಡಿದ ಅಭಿಮಾನಿಗಳು ಹಿಂದೂ ಇದ್ದರು, ಇಂದೂ ಇದ್ದಾರೆ. ಇಂದು ಕ್ಷಣಮಾತ್ರದಲ್ಲಿ ಚಿತ್ರ ವಿವರ ಸಹಿತ ಸಂದೇಶಗಳನ್ನು ಬೇಡಿಕೆಗಳನ್ನು ಮುಟ್ಟಿಸುವ ಸಾಧ್ಯತೆಗಳು, ಯಕ್ಷಗಾನದಲ್ಲಿ ಗುರುತಿಸಲ್ಪಡದ ಕಲಾವಿದರಿಗೂ ಭದ್ರತೆ ಸಹಾಯ ಒದಗಿಸಿದ ದಾಖಲೆಗಳಿವೆ. ಮುರುಕು ಸೂರಿನಲ್ಲಿ ವಾಸಿಸುವ ನಿವೃತ್ತ ಕಲಾವಿದರು, ಆಕಸ್ಮಿಕ ಅಪಘಾತಗಳಿಗೆ ತುತ್ತಾದ ಕಲಾವಿದರಿಗೆ ತುರ್ತು ಸಹಾಯ ಹರಿದು ಬಂದ ನಿದರ್ಶನಗಳು ನಮ್ಮೆದುರು ಕಾಣುತ್ತಿರುತ್ತವೆ.

(ಯಕ್ಷಗಾನದ ಫೋಟೋಗಳು: ರಶೀದ್)

ಫೇಸ್ಬುಕ್, ವಾಟ್ಸ್ಯಾಪ್ ಎನ್ನುವ ಯಕ್ಷಮಿತ್ರರು :

ರಂಗಸ್ಥಳದ ಹೊರಗೆ ಅಥವಾ ಚೌಕಿಯಿಂದ ದೂರ ಅಥವಾ ಕಣ್ಣೆದುರಲ್ಲಿ ಪ್ರದರ್ಶನವೊಂದು ನಡೆಯುತ್ತಿರದ ಹೊತ್ತಲ್ಲಿ ಯಕ್ಷಗಾನಕ್ಕೆ ಜೀವಂತಿಕೆ ಕೊಡುವಲ್ಲಿ ಫೇಸ್ಬುಕ್ ಮತ್ತು ವಾಟ್ಸಾಪ್ ಗಳ ಮಹತ್ವದ ಪಾತ್ರ ಇದೆ. ಇವತ್ತು ಕಿಸೆಯಲ್ಲಿ ಮೊಬೈಲ್ ಇರುವ ಯಕ್ಷಗಾನದ ಪ್ರೇಮಿಗಳೆಲ್ಲ ತಮ್ಮೊಡನೆ ಯಕ್ಷಗಾನವನ್ನು ಇಟ್ಟುಕೊಂಡು ತಿರುಗಾಡುತ್ತಿರುತ್ತಾರೆ. ಯಕ್ಷಗಾನವನ್ನು ಇಷ್ಟ ಪಡುವವರ ಅಥವಾ ತೀವ್ರ ಹುಚ್ಚಿನವರ ಮೊಬೈಲುಗಳಲ್ಲಿ ಯಕ್ಷಗಾನದ ಹಾಡುಗಳು, ಚಿತ್ರಗಳು, ವಿಡಿಯೊಗಳೇ ತುಂಬಿರುತ್ತವೆ. ಇವರು ತಾವು ಕಂಡ ಆಟವನ್ನು ಘಳಿಗೆ ಘಳಿಗೆಗೆ ಫೇಸ್ಬುಕ್, ಯು ಟ್ಯೂಬ್, ವಾಟ್ಸಾಪ್ ಗಳಲ್ಲಿ ಏರಿಸುತ್ತಾ, ಹೊಸ ಆಡಿಯೋ ವಿಡಿಯೋ ತುಣುಕಿಗೆ ಅರಸುತ್ತ ಹಳೆಯ ತುಣುಕುಗಳನ್ನು ಜೋಪಾನವಾಗಿಡುತ್ತ ಬದುಕುವವರು. ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ನೂರಾರು ಗುಂಪುಗಳು ಇದ್ದರೂ ಕೆಲವು ಗುಂಪುಗಳು ನಿರ್ದಿಷ್ಟ ಧೋರಣೆಗಳಿಗೆ ನಿಷ್ಠುರವಾಗಿ ಅಂಟಿಕೊಂಡು ಬದುಕುತ್ತಿವೆ. ಕೆಲವು ಗುಂಪುಗಳು ಹೆಚ್ಚು ಹಳೆಯ ಕಡತಗಳನ್ನು ಹುಡುಕಿ ತೆಗೆದು ಹಾಕುತ್ತಾರೆ. ಕೆಲವು ಗುಂಪುಗಳಲ್ಲಿ ಯಾವ ತರದ ಚರ್ಚೆಗೂ ಆಸ್ಪದ ಇಲ್ಲದೆ ತುಣುಕುಗಳನ್ನು ಕೊಡುವ ಪಡೆಯುವ ಕೆಲಸ ಸಾಗುತ್ತದೆ. ಇನ್ನು ಕೆಲವು ಗುಂಪುಗಳಿಗೆ ಯಾವ ರೀತಿ ನೀತಿ ಕ್ರಮಗಳೂ ಇಲ್ಲ. ಅಲ್ಲಿ ಯಾವ ಸಂದೇಶ ಬೇಕಾದರೂ ಬರಬಹುದು. ಕೆಲವು ಗುಂಪುಗಳಲ್ಲಿ ಅನಗತ್ಯ ಯಕ್ಷಗಾನಕ್ಕೆ ಸಂಬಂಧ ಇಲ್ಲದ ವಿಷಯಗಳನ್ನು ಹಾಕುವರನ್ನು ಗುಂಪಿನಿಂದ ನಿರ್ದಾಕ್ಷಿಣ್ಯವಾಗಿ ತೆಗೆಯಲಾಗುತ್ತದೆ. ವಾಟ್ಸಾಪ್ ಅಲ್ಲಿ “ಗುರುಶಿಷ್ಯರು”, “ಯಕ್ಷಕಾಳಗ” ಎನ್ನುವ ಗುಂಪುಗಳಲ್ಲಿ ನಾನೂ ಇದ್ದೇನೆ, ತೆಂಕು ಬಡಗು ತಿಟ್ಟುಗಳ ಹಿಂದಿನ ಹಿರಿಯ ಕಲಾವಿದರ ಹಾಡುಗಳನ್ನು ವಿಡಿಯೋಗಳನ್ನು ನೋಡಿ ಕೇಳಿ ಖುಷಿ ಪಟ್ಟಿದ್ದೇನೆ. ವಾಟ್ಸಾಪ್ ಅಲ್ಲಿ ಎಷ್ಟು ಗಾತ್ರದ ಕಡತ ಏರಿಸಬಹುದು ಎಂಬುದಕ್ಕೆ ಮಿತಿ ಇರುವುದರಿಂದ ಕೆಲವು ಗುಂಪುಗಳು ವಾಟ್ಸಾಪ್ ಅನ್ನು ಬಿಟ್ಟು ಟೆಲಿಗ್ರಾಂ ಎನ್ನುವ ಆ್ಯಪ್ ನ ಕಡೆಗೂ ವಲಸೆ ಹೊಂದಿವೆ! ವಾಟ್ಸಾಪ್ ಗುಂಪಿನ ಸದಸ್ಯರೇ ಸೇರಿ ಯಕ್ಷಗಾನ ಪ್ರದರ್ಶಿಸಿದ ಅಲ್ಲದಿದ್ದರೆ ಆಡಿಸಿದ ಉದಾಹರಣೆಗಳೂ ಇವೆ. ಫೇಸ್ಬುಕ್ ನಲ್ಲಿಯೂ ಹಲವು ಯಕ್ಷಗಾನ ಸಂಬಂಧಿ ಗುಂಪುಗಳು ಇವೆ. ಕಲಾವಿದರ ಹೆಸರಲ್ಲಿ ಅವರವರ ಅಭಿಮಾನಿಗಳೇ ನಿರ್ಮಿಸಿಕೊಂಡ ಗುಂಪುಗಳೂ ಇವೆ. ಫೇಸ್ಬುಕ್ ನ ಹಲವು ಗುಂಪುಗಳ ನಡುವೆ “ಟ್ರೆಡಿಷನಲ್ ಯಕ್ಷಗಾನ” ಎನ್ನುವ ಗುಂಪೊಂದು ವಿಶೇಷ ಧೋರಣೆಯನ್ನು ಹೊಂದಿ ಗಮನ ಸೆಳೆಯುತ್ತಿದೆ. ಇಲ್ಲಿ ಪ್ರದರ್ಶನದ ಮುಕ್ತ ವಿಮರ್ಶೆಯನ್ನು ಮಾಡುವುದನ್ನು ಉತ್ತೇಜಿಸಲಾಗುತ್ತದೆ ಮತ್ತೆ ಅಂತಹ ಒಲವಿನವರನ್ನು ಮಾತ್ರ ಸೇರಿಸಿಕೊಳ್ಳುತ್ತದೆ. ವಿಮರ್ಶೆಗಳು ಸರಿಯಾದ ಹಿನ್ನೆಲೆ ತಿಳಿಯದೆ ಮಾಡಿದರೆಂದೋ ಅಥವಾ ತಮ್ಮ ಇಷ್ಟದ ಕಲಾವಿದರನ್ನು ಅನಗತ್ಯ ಟೀಕಿಸಿದರೆಂದು ಇಲ್ಲಿ ಕೆಲವೊಮ್ಮೆ ವಾದ ವಿವಾದಗಳು ಬಿರುಸಾಗುವುದೂ ಇದೆ. ಯಕ್ಷಗಾನದ ಹೆಚ್ಚಿನ ಕಲಾವಿದರೂ ಪ್ರೇಕ್ಷಕರು ಇಂದು ವಾಟ್ಸಪ್ಪ್ ಫೇಸ್ಬುಕ್ ಬಳಸುವವರೇ. ವಿಚಾರ, ಸುದ್ದಿ ವಿನಿಮಯಕ್ಕೆ ಅಥವಾ ಸಂವಹನಕ್ಕೆ ಇದು ಒಳ್ಳೆಯ ವೇದಿಕೆಯನ್ನು ಫೇಸ್ಬುಕ್ ವಾಟ್ಸಪ್ ಗಳು ಕಲ್ಪಿಸಿಕೊಟ್ಟಿವೆ. ಪ್ರದರ್ಶನವನ್ನೂ ಕಲಾವಿದರನ್ನೂ ಒಂದು ಮಾರುಕಟ್ಟೆಯ ವಸ್ತುವಾಗಿ ಪರಿಗಣಿಸಿ ಅನಗತ್ಯ ವಿಜೃಂಭಿಸುವುದೂ ಇಂತಹ ವೇದಿಕೆಗಳಲ್ಲಿ ನಡೆಯುತ್ತದೆ. ಯಕ್ಷಗಾನ ವ್ಯಾಪಾರೀಕರಣದಲ್ಲೂ ತಂತ್ರಜ್ಞಾನ ಪೂರಕ ಸಾಧನವಾಗಿ ಒದಗಿ ಬರುತ್ತಿದೆ.

ಕೊನೆಯ ಟಿಪ್ಪಣಿ:

ಯಕ್ಷಗಾನದ ಎಲ್ಲ ಅಂಗಗಳನ್ನು ಎಲ್ಲ ದಿಕ್ಕುಗಳನಿಂದ ಆವರಿಸಿರುವ ತಂತ್ರಜ್ಞಾನ ಇಂದಿನ ಯಕ್ಷಗಾನದ ಮಟ್ಟಿಗೆ ಬರಿಯ ಪ್ರಭಾವ ಅಲ್ಲ, ದೈತ್ಯ ಪ್ರವಾಹ ಕೂಡ! ತಂತ್ರಜ್ಞಾನದ ಬಲದಲ್ಲಿ ಗೆಲವಾದ ಸಮಕಾಲೀನ ಯಕ್ಷಗಾನ ಕೆಲವೊಮ್ಮೆ ತಂತ್ರಜ್ಞಾನದ ಪ್ರವಾಹದಲ್ಲಿ ಕೊಚ್ಚಿಹೋದ ಅನುಭವವನ್ನೂ ಕೊಡುತ್ತದೆ. ಒಳ್ಳೆಯ ಪ್ರಚಾರ ಬೇಕು, ಚಂದ ಬೆಳಕುಗಳು, ಸ್ಪಷ್ಟವಾಗಿ ಕೇಳಿಸುವ ಧ್ವನಿ ವ್ಯವಸ್ಥೆ, ಮುದ್ರಣ ಪ್ರಸರಣಪಾತ್ರ ನಿರೂಪಣೆ ಪ್ರಸ್ತುತಿಗಳ ಹೊಸ ಸಾಧ್ಯತೆ ಎಲ್ಲವೂ ಬೇಕು; ಮತ್ತೆ ಇವೆಲ್ಲಕ್ಕೂ ತಂತ್ರಜ್ಞಾನ ಸಹಕಾರಿ ಆಗುತ್ತದೆ. ಆದರೆ ಎಲ್ ಸಿ ಡಿ ಪರದೆಯ ಹಿನ್ನಲೆಯಲ್ಲಿ ಪ್ರಸಂಗದ ಸಂದರ್ಭವನ್ನು ಹೊಂದುವ ಅಲ್ಲ ಹೋಲುವ ದೃಶ್ಯ ತೋರಿಸುವುದು, ಮಳೆ ಬರುವ ಸನ್ನಿವೇಶಕ್ಕೆ ರಂಗಸ್ಥಳದ ಮೇಲೆ ಕೃತಕ ಮಳೆ ಬರಿಸುವುದು, ಸ್ವರ್ಗಲೋಕದಿಂದ ಇಂದ್ರಾದಿ ದೇವತೆಗಳು ಕ್ರೇನ್ ಮೂಲಕ ಇಳಿದು ಬರುವಂತಹ ಯಂತ್ರ ತಂತ್ರಗಳ ದುರ್ಬಳಕೆಗಳು ಯಕ್ಷಗಾನಕ್ಕೆ ಬೇಕಾಗಿಲ್ಲ; ಭಾಗವತರ ನೈಜ ಹಾಡುಗಾರಿಕೆಯನ್ನು ಮರೆಸುವ, ಹಿಮ್ಮೇಳಗಳ ನಾದವನ್ನು ವೈಭವೀಕರಿಸುವ ಧ್ವನಿವರ್ಧಕಗಳ ಬಳಕೆ ಬೇಡ, ಯಕ್ಷಗಾನಕ್ಕೆ ಹೊಂದದ, ರಸಾಸ್ವಾದನೆಗೆ ಅಡ್ಡಿ ಪಡಿಸುವ ಥಳಕು ಬೆಳಕಿನ ವ್ಯವಸ್ಥೆಗಳೂ ಬೇಡ. ದೊಂದಿ ಬೆಳಕಿನ ಯಕ್ಷಗಾನದ ಯುಗವನ್ನು ಹಿರಿಯ ಪ್ರೇಕ್ಷಕರಿಂದ ಕೇಳಿದರೆ, ನೆನಪಿಸಿಕೊಂಡರೆ, ಅಂದು ದಾಸ ಭಾಗವತರು, ಕುರಿಯ ವಿಠ್ಠಲ ಶಾಸ್ತ್ರಿಗಳು, ಕೆರೆಮನೆ ಶಿವರಾಮ ಹೆಗಡೆಯವರು, ಹಿರಿಯ ಬಲಿಪರು ಮತ್ತು ಇನ್ನೂ ಅನೇಕರು ನಾಲ್ಕು ಬೋಳು ಕಂಬಗಳ ಮಧ್ಯದ ಮಣ್ಣಿನ ರಂಗಸ್ಥಳದಲ್ಲಿ, ಮಂದ ಬೆಳಕಿನಲ್ಲಿ, ಧ್ವನಿ ವರ್ಧಕಗಳೂ ಇಲ್ಲದೆ ತಲೆತಲಾಂತರದ ಪ್ರೇಕ್ಷಕರು ನೆನಪು ಮಾಡುತ್ತಾ ಬದುಕುವಂತೆ ಸ್ವರ್ಗ ಮರ್ತ್ಯ ಪಾತಾಳಗಳನ್ನು ಕಟ್ಟಿದರು; ಮಹಾಭಾರತ ರಾಮಾಯಣ ಭಾಗವತಗಳನ್ನು ಓದದವರೂ ದುರ್ಯೋಧನ, ಕೃಷ್ಣ, ಅರ್ಜುನ, ಸುಭದ್ರೆ ಪ್ರಭಾವತಿ ಸುಧನ್ವರಂತಹ ವ್ಯಕ್ತಿತ್ವಗಳನ್ನು ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುವಂತೆ ಮಾಡಿದರು; ಮತ್ತೆ ದೂರದರ್ಶನದ ಧಾರಾವಾಹಿಯಲ್ಲೊ ಚಲನಚಿತ್ರದಲ್ಲೋ ನೈಜ ಎನ್ನುವಂತೆ ಮೂಡಿಬಂದ ಅದೇ ಪಾತ್ರಗಳನ್ನು ಕಂಡ ಯಕ್ಷಗಾನದ ಪ್ರೇಕ್ಷಕರಿಂದ, “ಯಕ್ಷಗಾನದಲ್ಲಾದರೆ ಈ ಪಾತ್ರ, ಈ ಸಂದರ್ಭ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವಿಯಾಗಿ ಚಿತ್ರಣಗೊಳ್ಳುತ್ತಿತ್ತು” ಎಂದು ಹೇಳಿಸಿದರು; ತಂತ್ರಜ್ಞಾನಗಳು ಬಹಳ ಕಡಿಮೆ ಇದ್ದ ಕಾಲದಲ್ಲೊಂದು ಯಕ್ಷಗಾನದ ಸುವರ್ಣಯುಗ ಇತ್ತು ಎಂದು ಇಂದಿನ ಪ್ರೇಕ್ಷಕ ನಂಬುವಂತಹ ದಂತಕಥೆಗಳಿಗೆ ಕಾರಣರಾದರು.

ತಂತ್ರಜ್ಞಾನದ ಬಲ ಇಲ್ಲದೆಯೂ ಪರಿಪೂರ್ಣ ಎನಿಸುವ, ದೀರ್ಘಕಾಲ ನೆನಪಿನಲ್ಲುಳಿಯುವ ಪ್ರದರ್ಶನ ನೀಡುವ ಸಾಮರ್ಥ್ಯ ಯಕ್ಷಗಾನ ಕಲೆಗೆ, ಮತ್ತೆ ಸಮರ್ಥ ಕಲಾವಿದರಿಗೆ ಇದೆ. ಆದರೆ ತಂತ್ರಜ್ಞಾನದ ಅಸಂಖ್ಯ ಉಪಯೋಗಗಳ ಇಂದಿನ ಯುಗದಲ್ಲಿ, ತಂತ್ರಜ್ಞಾನವನ್ನು ಯಕ್ಷಗಾನ ಖಂಡಿತವಾಗಿ ಬಳಸಿಕೊಂಡು ಇನ್ನಷ್ಟು ಬಲವಾಗಬೇಕು; ತಂತ್ರಜ್ಞಾನದ ಅಪರಿಮಿತ ಸಾಧ್ಯತೆಗಳನ್ನು ಬಳಸಿಕೊಂಡು ಕಲಾವಿದರೂ ಬೆಳೆಯಬೇಕು. ಕಲೆಯೊಂದು ಎಲ್ಲಕಾಲದಲ್ಲೂ ಸಮಕಾಲೀನ ಎನಿಸಿಕೊಳ್ಳಬೇಕಿದ್ದರೆ ಉಳಿಯಬೇಕಿದ್ದರೆ ಅದನ್ನು ಪ್ರೀತಿಸುವರನ್ನೂ ಪೋಷಿಸುವವರನ್ನೂ ಎಲ್ಲ ಕಾಲದಲ್ಲೂ ಪಡೆಯಬೇಕಿದ್ದರೆ ಮತ್ತೆ ಅದಕ್ಕಿಂತ ಹೆಚ್ಚಾಗಿ ತನ್ನನ್ನು ಹೇಗಿದ್ದರೂ ಪ್ರೀತಿಸುವ ಮುದ್ದಿಸುವ ಪ್ರೇಕ್ಷಕರನ್ನು ಮೀರಿ ಹೊಸ ಪ್ರದೇಶಗಳಿಗೆ ಹೊಸ ಪ್ರೇಕ್ಷಕರಿಗೆ ವಿಸ್ತರಿಸಬೇಕಾದರೆ ಆ ಕಾಲದ ಆ ಸಮಯದ ತಂತ್ರಜ್ಞಾನಗಳನ್ನು ತಾನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಂದಿನ ಪ್ರತಿ ಪ್ರದರ್ಶನದಲ್ಲೂ ಮುಖ್ಯ ಪಾತ್ರಧಾರಿ ಅಲ್ಲದಿದ್ದರೂ ಒಂದು ಅನಿವಾರ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ತಂತ್ರಜ್ಞಾನದ ನಂಟು ಯಕ್ಷಗಾನದ ಜೊತೆಗೆ ಗಟ್ಟಿ ಆಗಲಿ; ಆದರೆ ತಂತ್ರಜ್ಞಾನದ ಅಳವಡಿಕೆಯಲ್ಲಿ, ಮತ್ತದರ ಬಳಕೆಯಲ್ಲಿ ಎಚ್ಚರ ಮತ್ತು ವಿವೇಚನೆಗಳೂ ಇರಲಿ ಎನ್ನುವುದು ಇದೇ ಕಾಲದ ಇನ್ನೊಂದು ಆಶಯ.

(ಕಡಂದೇಲು ಪುರುಷೋತ್ತಮ ಭಟ್ಟರ ಶತಸ್ಮೃತಿ ಸಂಪುಟ ‘ಮರ್ಯಾದಾ ಪುರುಷೋತ್ತಮ’ ಕೃತಿಯ ಸಂಪಾದಕರು: ಪೃಥ್ವೀರಾಜ ಕವತ್ತಾರು.ಪ್ರಕಾಶಕರು : ಯಕ್ಷಗಾನ ಕಲಾರಂಗ , ಉಡುಪಿ.)