ಬಂಡಾಯ ಸಾಹಿತಿ, ನೇರ ನಡೆ ನುಡಿಯ ನಿಷ್ಠುರಿ ಎಂದು ಗುರುತಿಸಿಕೊಂಡಿದ್ದ ಚಂದ್ರಶೇಖರ ಪಾಟೀಲರು ಸೋಮವಾರ ಬೆಳಿಗ್ಗೆ ತೀರಿಕೊಂಡರು. ಹಾವೇರಿಯಲ್ಲಿ ಹುಟ್ಟಿದ್ದರೂ ಧಾರವಾಡವೇ ಅವರ ಕಾರ್ಯಕ್ಷೇತ್ರವಾಗಿತ್ತು. ಸಾಹಿತ್ಯ, ಹೋರಾಟ, ಬಂಡಾಯ, ನಾಟಕ ಎಂಬುದಾಗಿ ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು. ಧಾರವಾಡದಲ್ಲಿ ಚಂದ್ರಶೇಖರ ಪಾಟೀಲರು, ಗಿರಡ್ಡಿ ಗೋವಿಂದ ರಾಜು ಮತ್ತು ಸಿದ್ಧಲಿಂಗಪಟ್ಟಣ ಶೆಟ್ಟಿಯವರದ್ದು ನಿಡುಗಾಲದ ಸ್ನೇಹ. ಮೂವರೂ ಸಾಹಿತ್ಯ ಕ್ಷೇತ್ರದ ಅನೇಕ ಚಟುವಟಿಕೆಗಳಲ್ಲಿ ಜೊತೆಯಾಗಿ ಇದ್ದವರು.
ತಮ್ಮ ಆಪ್ತ ಸ್ನೇಹಿತನ ಅಗಲಿಕೆಯ ಸಂದರ್ಭದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ತಮ್ಮ ಒಡನಾಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

 

ನಾನು ಮತ್ತು ಹೇಮಾ, ಮೊನ್ನೆ ಡಿಸೆಂಬರ್ 25ಕ್ಕೆ ಚಂಪಾ ಮನೆಗೆ ಹೋಗಿ ಅವನನ್ನು ಮಾತಾಡಿಸಿಕೊಂಡು ಬರಬೇಕೆಂದು ಬೆಂಗಳೂರಿಗೆ ಹೋದೆವು. ಎರಡು ವರ್ಷಗಳಿಂದ ಅವನು ಯಾರನ್ನೂ ಭೇಟಿಯಾಗಿದ್ದಿಲ್ಲ ಎಂದು ಕೇಳಿದ್ದೆ. ಭೇಟಿಗೆಂದು ಯಾರಾದರೂ ಮನೆಗೆ ಬಂದರೆ, ವಾಪಸ್ ಕಳಿಸುತ್ತಿದ್ದನಂತೆ. ಮತ್ತೆ ಕೊರೊನಾ ಎಂಬ ಸೋಂಕಿನ ಕಾರಣದಿಂದ ಪ್ರಯಾಣ, ಪ್ರವಾಸಗಳೆಲ್ಲ ದುಸ್ತರವಾಗಿದ್ದವು. ಹಾಗಾಗಿ ಇತ್ತೀಚೆಗಷ್ಟೇ ಅವನನ್ನು ನೋಡಲು ಹೋದೆವು. ಅವನ ಪತ್ನಿ, ನೀಲವ್ವ. ತಂಗಿಯಂತೆ ನನ್ನ ಆದರಿಸುವವಳು. ನನ್ನ ಬರವಿನ ಬಗ್ಗೆ ಚಂಪಾನಿಗೆ ತಿಳಿಸಿದ್ದರಿಂದ, ಅವನು ಉತ್ಸಾಹದಿಂದ ವಾಕರ್ ಹಿಡಿದುಕೊಂಡು ಬಾಗಿಲವರೆಗೆ ಬಂದು, ನಿಂತು ನನಗಾಗಿ ಕಾಯುತ್ತಿದ್ದ. ನಾವು ಮನೆಯೊಳಗೆ ಹೋದಾಗ, ಮನೆಯವರೆಲ್ಲ ಬಹಳ ಗೆಲುವಾಗಿದ್ದರು. ಚಂಪಾ ಇಷ್ಟೊಂದು ಗೆಲುವಾಗಿ ಹೊರಬಂದು ಕಾಯುತ್ತಿರುವುದನ್ನು ಕಂಡು ಅವರಿಗೆ ಖುಷಿಯಾಗಿತ್ತು.

ನಾವು ಒಂದು ಗಂಟೆಯಷ್ಟು ಹೊತ್ತು ಕುಳಿತು ಮಾತಾಡಿದೆವು. ಮಾತನಾಡಿದೆವು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಕಣ್ಣುಗಳೇ ಮಾತನಾಡಿದವು ಎಂದರೆ ಸರಿಯಾದೀತು. ಹಳೇ ನೆನಪುಗಳನ್ನು ಸ್ವಲ್ಪ ಕೆದಕಿ, ಹೇಳಿಕೊಂಡೆವು. ‘ಔಷಧಿ ತಗೋ, ಬೇಗ ಆರಾಮಾಗ್ತೀ’ ಎಂದು ಹೇಳಿದಾಗ, ಆಯಿತೆಂದು ತಲೆಯಾಡಿಸಿದ. ನಮಗೆ ತಿಂಡಿ ಕೊಡುವಂತೆ ಮಗಳಿಗೆ ಹೇಳಿದ. ಅವನೂ ಊಟಕ್ಕೆಂದು ಸಿದ್ಧನಾದ. ಕಳೆದ ಎರಡು ವರ್ಷಗಳಲ್ಲಿ ಅವನು ಇಷ್ಟೊಂದು ಚಟುವಟಿಕೆಯಲ್ಲಿದ್ದುದು ಅಂದೇ ಎಂದು ನೀಲವ್ವ ಹೇಳಿದಳು.

ಅಷ್ಟು ಸಣ್ಣ ಅವಧಿಯಲ್ಲಿ ಮಾತನಾಡಿ ಮುಗಿಯುವಂತಹ ಸ್ನೇಹ ನಮ್ಮದಲ್ಲ. 1957 ಜೂನ್ ನಿಂದ ನಾವು ಒಬ್ಬರೊಡನೆ ಒಬ್ಬರು ಸ್ನೇಹದಿಂದ ಕೂಡಿ ಇರುತ್ತಿದ್ದೆವು. ಅವನು ಹಾವೇರಿಯವನು, ಕಾಲೇಜು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದಿದ್ದ. ವಯಸ್ಸಿನಲ್ಲಿ ಅವನು ಆರು ತಿಂಗಳಷ್ಟೇ ನನಗಿಂತ ದೊಡ್ಡವ. ಆದರೆ ನನಗಿಂತ ಒಂದು ತರಗತಿ ಮುಂದೆಯಿದ್ದ. ನಾವಿಬ್ಬರೂ ಒಂದೇ ತರಗತಿಯವರೇನೋ ಎಂಬಂತೆ ಕಾಲೇಜಿನಲ್ಲಿ ಒಟ್ಟಾಗಿಯೇ ಇರುತ್ತಿದ್ದೆವು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅವನು ಕನ್ನಡ, ಹಿಂದಿ, ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದ. ನಾನು ಅದೇ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದರೆ ಅವನೇ ಬಂದು ಮುಕ್ತವಾಗಿ ಅಭಿನಂದಿಸುತ್ತಿದ್ದ. ಒಂಚೂರೂ ಹುಳುಕು ಇಲ್ಲದ ನಿರ್ಮಲ ಪ್ರೀತಿ ಅವನದು. ಪದವಿಯಲ್ಲಿ ಅವನು ಅರ್ಥಶಾಸ್ತ್ರ ಓದಿದ್ದ, ಬಳಿಕ ಇಂಗ್ಲಿಷ್ ಭಾಷೆಯಲ್ಲಿಯೇ ಶಿಕ್ಷಣ ಮುಂದುವರೆಸಿ ಪ್ರಾಧ್ಯಾಪಕನಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗ ಮುಖ್ಯಸ್ಥನಾಗಿ ನಿವೃತ್ತನಾದ. ಬ್ರಿಟಿಷ್ ಶೈಲಿಯ ಉತ್ತಮ ಇಂಗ್ಲಿಷ್ ವಾಕ್ಪಟುವಾಗಿದ್ದ. ಇಂಗ್ಲೆಂಡ್ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಓದಿ ಬಂದಿದ್ದ.

ನಾವು ಕರ್ನಾಟಕ ಕಾಲೇಜಿನಲ್ಲಿ ಓದುತ್ತಿದ್ದಾಗ ಅದಿನ್ನೂ ವಿಶ್ವವಿದ್ಯಾಲಯವಾಗಿ ಬೆಳೆದಿರಲಿಲ್ಲ. ಕಾಲೇಜಿನ ಪ್ರಾಂಶುಪಾಲರಾಗಿ ವಿ.ಕೃ. ಗೋಕಾಕರಿದ್ದರು. ಆ ಕಾಲಕ್ಕೆ ಚಂಪಾ ಬರೆದ ‘ಬಾನುಲಿ’ ಎಂಬ ಮೊದಲ ಕವನ ಸಂಕಲನಕ್ಕೆ ಅವರೇ ಮುನ್ನುಡಿ ಬರೆದರು. ನನ್ನ ಮೊದಲ ಕವನ ಸಂಕಲನ ‘ನೀನಾ’ ಬಗ್ಗೆಯೂ ಮೆಚ್ಚುಗೆಯ ನುಡಿಗಳನ್ನಾಡಿದ್ದರು.

ಆಗಿನ ಕಾಲದಲ್ಲಿ ಘನಶ್ಯಾಮ ಅವರ ಮುತುವರ್ಜಿಯಿಂದ ಬರುತ್ತಿದ್ದ ‘ಕವಿತಾʼ, ಪೂರ್ಣಚಂದ್ರ ತೇಜಸ್ವಿ ನೇತೃತ್ವದ ‘ಲಹರಿ’, ಗೋಪಾಲಕೃಷ್ಣ ಅಡಿಗರ ‘ಸಾಕ್ಷಿʼ ಎಂಬ ಸಾಹಿತ್ಯ ಪತ್ರಿಕೆಗಳು ಬರುತ್ತಿದ್ದವು. ಅವುಗಳಲ್ಲಿ ನಮ್ಮ ಕವನಗಳು ಪ್ರಕಟವಾಗುತ್ತಿದ್ದವು. ಆದರೆ ಇವೆಲ್ಲ ಪತ್ರಿಕೆಗಳೂ ಅನಿಯಮಿತವಾಗಿ ಬರುವಂತಹವಾಗಿದ್ದವು. ಹಾಗಿದ್ದರೆ ನಾವೊಂದು ನಿಯಮಿತವಾಗಿ ಬರುವ ಸಾಹಿತ್ಯ ಪತ್ರಿಕೆ ಮಾಡಬೇಕು ಎಂಬ ಉದ್ದೇಶದಿಂದ ನಾನು, ಚಂಪಾ, ಗಿರಡ್ಡಿ ಗೋವಿಂದ ರಾಜು, ಸೇರಿ ನಿರ್ಧರಿಸಿದೆವು. 1964ರ ಆಗಸ್ಟ್ 15ರಂದು ‘ಸಂಕ್ರಮಣʼ ದ್ವೈಮಾಸಿಕ ಪತ್ರಿಕೆಯನ್ನು ಆರಂಭಿಸಿಯೇ ಬಿಟ್ಟೆವು. ಗೋವಾದಿಂದ ಬಂದ ಸುಮತೀಂದ್ರ ನಾಡಿಗರು ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅವನು ಕನ್ನಡ, ಹಿಂದಿ, ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದ. ನಾನು ಅದೇ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದರೆ ಅವನೇ ಬಂದು ಮುಕ್ತವಾಗಿ ಅಭಿನಂದಿಸುತ್ತಿದ್ದ. ಒಂಚೂರೂ ಹುಳುಕು ಇಲ್ಲದ ನಿರ್ಮಲ ಪ್ರೀತಿ ಅವನದು.

ಅತ್ಯುತ್ತಮವಾದ ಸಾಹಿತ್ಯ ಬರಹಗಳೇ ಇಲ್ಲಿರಬೇಕು ಎಂದು ನಾವು ಭಾರೀ ಕಾಳಜಿಯಿಂದ ಪತ್ರಿಕೆ ರೂಪಿಸುತ್ತಿದ್ದೆವು. ಪ್ರತಿದಿನ ಸಂಜೆ ಕುಳಿತು ಚರ್ಚಿಸಿ, ಬರೆಯುತ್ತ, ಪತ್ರಿಕೆಗೆ ಸಿದ್ಧತೆ ಮಾಡುತ್ತಿದ್ದೆವು. ಈ ಪತ್ರಿಕೆಗೆ ನಮ್ಮದೇ ಗುರುಗಳಾದ ಗೋಕಾಕರು ಮೂರು ಕವನಗಳನ್ನು ಕಳಿಸಿದ್ದರು. ಆದರೆ ನಮಗೆ ಒಂದು ಕವನ ಚೆನ್ನಾಗಿದೆ ಎನಿಸಿದ್ದಕ್ಕೆ ಅದನ್ನು ಮಾತ್ರ ಪ್ರಕಟಿಸಿ, ಇನ್ನೆರಡು ಕವನಗಳನ್ನು ಕೈಬಿಟ್ಟೆವು. ಗುಣಮಟ್ಟಕ್ಕೆ ಅಷ್ಟೊಂದು ಆದ್ಯತೆ ನೀಡಿ ನಾವು ಗುರುಗಳ ಕವನಗಳನ್ನೆ ಕೈ ಬಿಟ್ಟಿದ್ದೆವು. ಆ ಪತ್ರಿಕೆಯ ವ್ಯವಹಾರಕ್ಕೆ ನನ್ನ ಮನೆಯ ವಿಳಾಸವನ್ನೇ ಕೊಟ್ಟಿದ್ದೆವು. ಕೊನೆಯವರೆಗೂ ಇದೇ ವಿಳಾಸವಿತ್ತು.

ಹೀಗೆ ಸುಮಾರು ಹನ್ನೊಂದು ವರ್ಷಗಳ ಕಾಲ ಪತ್ರಿಕೆಯನ್ನು ಬಹಳ ಬದ್ಧತೆಯಿಂದ ನಡೆಸಿದೆವು. ಅಷ್ಟರಲ್ಲಿ ಮೈಸೂರಲ್ಲೊಂದು ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಸಮಾವೇಶ ನಡೆಯಿತು. ಕುವೆಂಪು ಅವರು ಸಮಾವೇಶ ಉದ್ಘಾಟಿಸಿದರು. ಅಲ್ಲೊಂದು ಪರೋಕ್ಷ ಚರ್ಚೆ ಶುರುವಾಯಿತು. ಒಕ್ಕೂಟದಲ್ಲಿ ಬ್ರಾಹ್ಮಣರನ್ನು ದೂರ ಇಡಬೇಕೆಂಬ ಮಾತುಗಳು ಅಲ್ಲಿ, ಇಲ್ಲಿ ಕೇಳಿಸಿತು. ಜೊತೆಗೆ ಈ ಒಕ್ಕೂಟದ ಮುಖವಾಣಿಯೆಂದು ‘ಸಂಕ್ರಮಣ’ ಪತ್ರಿಕೆಯನ್ನು ಪರಿಗಣಿಸಬೇಕು ಎಂಬ ಮಾತುಕೇಳಿ ಬಂತು. ನಮ್ಮ ಪತ್ರಿಕೆ ಯಾವುದೇ ಸಂಘಟನೆಯ ಮುಖವಾಣಿ ಆಗುವುದು ಸರಿಯಲ್ಲ ಎಂದು ನಾನು ನಿರಾಕರಿಸಿದೆ. ಗಿರಡ್ಡಿಯೂ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ. ಚಂಪಾ ಒಪ್ಪಿದ್ದರಿಂದ, ನಾವಿಬ್ಬರೂ ಪತ್ರಿಕೆಯ ಕೆಲಸದಿಂದ ದೂರ ಸರಿದೆವು. ಹಾಗೆ ಬದಲಾದ ಪತ್ರಿಕೆಗೆ ರಾಜಕೀಯ ಆಯಾಮ ಬಂತು. ಬಂಡಾಯದ ವಿಚಾರಗಳನ್ನು, ತನ್ನ ಆಸಕ್ತಿಯ ವಿಚಾರಗಳನ್ನು ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದ.

ಆದರೆ ಅದರಿಂದ ನಮ್ಮ ಸ್ನೇಹಕ್ಕೇನೂ ತೊಂದರೆಯಾಗಲಿಲ್ಲ. ಪ್ರೀತಿಯಿಂದ ಮೂವರೂ ಸದಾ ಒಂದಿಲ್ಲೊಂದು ಕಾರಣಕ್ಕೆ ಜೊತೆಯಾಗಿ ಇರುತ್ತಿದ್ದೆವು. ಚಳವಳಿಗಳಲ್ಲಿ, ಸಾಮಾಜಿಕ ಸ್ಪಂದನೆಯಲ್ಲಿ ಜೊತೆಯಾಗಿಯೇ ಕೆಲಸ ಮಾಡುತ್ತಿದ್ದೆವು. ರಾಜಕೀಯವಾಗಿಯೂ ನಮ್ಮದೇ ನಿಲುವುಗಳಿದ್ದವು. ಒಮ್ಮೆ ಜಯಪ್ರಕಾಶ್ ನಾರಾಯಣ್ ಅವರನ್ನು ಧಾರವಾಡಕ್ಕೆ ಕರೆಸಿ, ಭಾಷಣಗಳನ್ನು ಏರ್ಪಡಿಸಿದೆವು. ತೇಜಸ್ವಿ, ನಂಜುಂಡಸ್ವಾಮಿ ಅವರೊಂದಿಗೆ ಉತ್ತರ ಕರ್ನಾಟಕದ ಬೇರೆ ಬೇರೆ ಭಾಗಗಳಿಗೆ ಹೋಗಿ, ಜಾಗೃತಿ ಮೂಡಿಸುತ್ತಿದ್ದೆವು. ಚಂಪಾ ಅಮೋಘವಾಗಿ ಭಾಷಣಗಳನ್ನು ಮಾಡುತ್ತಿದ್ದ. ಒಟ್ಟಿನಲ್ಲಿ ಚಳವಳಿ ಎಂಬುದು ಅವನ ಉಸಿರಾಗಿತ್ತು.

ಇತ್ತೀಚೆಗೆ ಅಂದರೆ 2016ರಲ್ಲಿ ಪತ್ರಿಕೆಗೆ ಐವತ್ತು ವರ್ಷಗಳು ತುಂಬಿದಾಗ ಅವನೊಂದು ಕಾರ್ಯಕ್ರಮ ನಡೆಸಿ, ನ್ಯಾಯಮೂರ್ತಿ ಶಿವರಾಜ ಪಾಟೀಲರನ್ನು ಕರೆಸಿದ್ದ. 50ರ ಸಂಭ್ರಮದ ಕಾರ್ಯಕ್ರಮ ಅದಾಗಿತ್ತು. ನಾನು ಕಾರ್ಯಕ್ರಮ ಆಯೋಜನೆಯಲ್ಲಿ ಕೈ ಜೋಡಿಸಿದ್ದೆ. ಗಿರಡ್ಡಿ ಕೂಡ ಕಾರ್ಯಕ್ರಮಕ್ಕೆ ಬಂದದ್ದು ಕಂಡು ಖುಷಿಯಾಗಿತ್ತು ನನಗೆ. ನಾವು ಮೂವರೂ ಸ್ನೇಹಕ್ಕೆ ಕೊಡುತ್ತಿದ್ದ ಬೆಲೆ ಅಂತಹುದಾಗಿತ್ತು.

ಚಂಪಾ ಸದಾ ಚಟುವಟಿಕೆಯ ವ್ಯಕ್ತಿ. ಆದ್ದರಿಂದ ಅವನು ತನ್ನ ಕಾರ್ಯಕ್ಷೇತ್ರವನ್ನು ಕಾವ್ಯಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ನಾಟಕಗಳತ್ತ ಮುಖ ಮಾಡಿದ. ಪತ್ರಿಕೆಯ ಕೆಲಸಗಳನ್ನು ಹಚ್ಚಿಕೊಂಡ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿಯೂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಕೆಲಸ ಮಾಡಿದ. ಅನೇಕ ಹುದ್ದೆಗಳು ಅವನನ್ನು ಅರಸಿ ಬಂದವು.

ಆದರೆ ಯಾವುದು ತನಗೆ ಸರಿ ಬರುವುದಿಲ್ಲವೋ ಅದನ್ನು ಅಲ್ಲಿಯೇ, ಆ ಕ್ಷಣದಲ್ಲಿಯೇ ಸರಿಯಿಲ್ಲ ಎಂದು ಹೇಳಿ, ವಿರೋಧ ಕಟ್ಟಿಕೊಳ್ಳುತ್ತಿದ್ದ. ಇತ್ತೀಚೆಗಷ್ಟೇ ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರನ್ನೇ ಎದುರು ಹಾಕಿಕೊಂಡು, ಸಾಹಿತ್ಯದ ಪರವಾಗಿ ನಿಂತ ಮೊದಲಿಗ ಅವನಾಗಿದ್ದ. ಹಾಗೆ ವಿರೋಧಿಸುವಷ್ಟು ಧೈರ್ಯಸ್ಥನಾಗಿದ್ದ.

ಸಾಹಿತ್ಯವೆಂದರೆ ಎಲ್ಲರೂ ಬೆಂಗಳೂರಿನ ಕಡೆಗೆ ನೋಡುತ್ತಿದ್ದಾಗ, ಚಂಪಾ ಮಾತ್ರ ಬೆಂಗಳೂರಿಗೆ ಹೋದರೂ ಧಾರವಾಡದ ಸಾಹಿತಿಯಾಗಿಯೇ ಗುರುತಿಸಿಕೊಂಡಿದ್ದ. ಈ ಭಾಗದಿಂದ ಹೋದವರ ಪೈಕಿ ಅನೇಕರು ಅಲ್ಲಿನವರಾಗಿಯೇ ಬದಲಾದುದನ್ನು ನಾನು ಕಂಡಿದ್ದೇನೆ. ಆದರೆ ಚಂಪಾ ಮಾತ್ರ ಧಾರವಾಡದವನಾಗಿಯೇ ಉಳಿದ. ಕೊನೆಯವರೆಗೂ ಚಹಾ ಕುಡೀತಿದ್ದ, ವಿನಃ ಕಾಫಿ ಪ್ರಿಯನಾಗಿ ಬದಲಾಗಲಿಲ್ಲ. ದೂರದಿಂದ ಒರಟು ಸ್ವಭಾವದವನಂತೆ ಕಂಡರೂ, ಹತ್ತಿರದಿಂದ ನೋಡಿದರೆ ಅವನು ಮೃದು ಹೃದಯಿ. ಅವನ ವ್ಯಕ್ತಿತ್ವದಲ್ಲಿ ಎರಡು ಮುಖಗಳಿರಲಿಲ್ಲ.

ಅವನ ಒಳಗೊಂದು ನೋವು ಇದ್ದಿರಬೇಕು, ಅದನ್ನು ಹೇಳಿಕೊಳ್ಳಲಾಗದೇ ಅವನು ಹೀಗೆ ಮಾತನಾಡುತ್ತಾನೆ ಎಂದು ನನಗೆ ಆಗಾಗ ಅನಿಸಿದೆ. ಅವನು ನಾಟಕ, ರಾಜಕೀಯ, ಹೋರಾಟ ಎಂದು ಹತ್ತಾರು ಆಸಕ್ತಿಗಳತ್ತ ಮುಖ ಮಾಡದೇ ಕಾವ್ಯವೊಂದನ್ನೇ ಆಯ್ಕೆ ಮಾಡಿಕೊಂಡಿದ್ದರೆ, ಅಪ್ರತಿಮ ಕವಿಯಾಗಿ ಮನ್ನಣೆ ಪಡೆಯುತ್ತಿದ್ದ. ಒಳಗಿನ ನೋವನ್ನು ಅಭಿವ್ಯಕ್ತಿಸಲು ಕಾವ್ಯವು ಖಂಡಿತ ನೆರವಾಗುತ್ತದೆ. ಆದರೆ ಈ ಬಗ್ಗೆ ಅವನಲ್ಲಿ ಹೇಳಿದಾಗ, ‘ಏ ಸುಮ್ನಿರು, ಎಲ್ಲ ಕೆಲಸ ಮಾಡಬೇಕು’ ಎನ್ನುತ್ತಿದ್ದ. ತನಗನಿಸಿದ ಹಾಗೆಯೇ ಬದುಕಿದ ಸ್ನೇಹಿತ ಅವನು.