ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ.
ಅಂಬಮ್ಮ ಪ್ರತಾಪ್‌ ಸಿಂಗ್‌ ಗಜಲ್‌ ಸಂಕಲನ “ಮೌನದೊಡಲ ಮಾತು” ಕುರಿತು ಮಂಡಲಗಿರಿ ಪ್ರಸನ್ನ ಬರಹ

‘ಜಗದ ಕತ್ತಲೆಯನು ಕಳೆಯಲು ದೀಪ ಹಚ್ಚೋಣ
ಮನದ ಅಂಧಕಾರವ ತೊಳೆಯಲು ದೀಪ ಹಚ್ಚೋಣ’ (ಗಜಲ್-6)

ಎನ್ನುವ ಆಶಯದೊಂದಿಗೆ ಗಜಲ್ ಲೋಕವನ್ನು ಪ್ರವೇಶಿಸುತ್ತಿರುವ ಕವಯಿತ್ರಿ ಅಂಬಮ್ಮ ಪ್ರತಾಪ್ ಸಿಂಗ್ ದಶಕಗಳಿಂದ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ ತಡವಾಗಿ ತಮ್ಮ ಚೊಚ್ಚಲ ಗಜಲ್ ಸಂಕಲನ `ಮೌನದೊಡಲ ಮಾತುʼ ಪ್ರಕಟಿಸುತ್ತಿದ್ದಾರೆ.

ರಾಯಚೂರು ಜಿಲ್ಲೆ, ಬಿಸಿಲ ಹನಿಗಳ ನೆಲ. ಈ ನೆಲ ವಿಶಿಷ್ಟ ಬಗೆಯ ಕಾವ್ಯ ಪರಂಪರೆಯದು. ಇಲ್ಲಿನ ಕವಿಗಳು ನವೋದಯ, ನವ್ಯ, ದಲಿತ, ಬಂಡಾಯದ ಕಾಲ ಘಟ್ಟದಲ್ಲೂ ತೀವ್ರವಾಗಿ ಸ್ಪಂದಿಸಿ ಕಾವ್ಯ ಕಟ್ಟಿಕೊಟ್ಟಿದ್ದು, ಅದು ಗಟ್ಟಿಯಾದ ಕಾವ್ಯ ಎಂಬುದನ್ನು ಅನೇಕರು ಸಾಬೀತು ಪಡಿಸಿದ್ದಾರೆ.

(ಅಂಬಮ್ಮ ಪ್ರತಾಪ್‌ ಸಿಂಗ್‌)

ಈ ನೆಲದ ಮೂಲಕ ಹುಟ್ಟಿ ಬಂದ ಮತ್ತೊಂದು ಕಾವ್ಯ ಪ್ರಕಾರ ಕನ್ನಡ ಗಜಲ್‌ಗಳು. ಉರ್ದು ಸಾಹಿತ್ಯದ ಮೂಲ ಬೇರುಗಳ ಶಕ್ತಿಯನ್ನು ಹೀರಿಕೊಂಡು ಬೆಳೆದ ಇಲ್ಲಿನ ಗಜಲ್‌ಗಳು ಅಷ್ಟೇ ಸತ್ವಯುತ. ಕರ್ನಾಟಕದ ಬೇರೆ ಭಾಗದಿಂದಲೂ ಗಜಲ್ ರಚನೆಗಳು ಹೊರಹೊಮ್ಮಿದ್ದರೂ ರಾಯಚೂರು ನೆಲದ ಗಜಲ್‌ಗೆ, ಇಲ್ಲಿನ ಗಜಲ್ ಕವಿಗಳಿಗೆ ಒಂದು ವಿಭಿನ್ನವಾದ ಸಂವೇದನಾಶೀಲತೆ ಇದೆ. ಆ ಕಾರಣಕ್ಕಾಗಿಯೆ ಇಲ್ಲಿನ ಗಜಲ್ ಕವಿಗಳನ್ನು ಕುತೂಹಲದ ದೃಷ್ಟಿಯಿಂದ ನೋಡುವುದು. ಶಾಂತರಸರು ಹೈ-ಕ ಬಗೆಗಿನ ಚಿಂತನೆಯನ್ನು, ಕಾಳಜಿಯನ್ನು, ಕಳವಳವನ್ನು ತಮ್ಮ ಗಜಲ್ ಮೂಲಕ ಬಹು ಹಿಂದೆಯೆ ಅಭಿವ್ಯಕ್ತಿಗೊಳಿಸಿದರು. ರಾಯಚೂರಿನ ನೆಲದ ಕಾವ್ಯ ಸತ್ವವನ್ನು, ಅದರಲ್ಲೂ ಕನ್ನಡ ಗಜಲ್ ಸಾಹಿತ್ಯವನ್ನು ಜಗದಗಲ, ಮುಗಿಲಗಲ ಬೆಳೆಸಿದ ಅನೇಕರಲ್ಲಿ ಅವರು ಪ್ರಮಥರು.

*****

`ಗಜಲ್’ ಎಂಬುದು ಅರಬ್ಬಿ ಶಬ್ದ. ಹೆಂಗಸರೊಡನೆ, ಪ್ರೇಯಸಿಯೊಡನೆ ಮಾತನಾಡುವುದು ಎಂದು ಅದರ ಅರ್ಥ. ಗಜಲ್ ಅರಬ್ಬಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಲಿಲ್ಲ. ಬದಲಿಗೆ ಅದು ಇರಾನ್ ದೇಶಕ್ಕೆ ವಲಸೆಗೊಂಡು ಪಾರ್ಸಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಿತು. ಪಾರ್ಸಿ ಭಾಷೆಯಲ್ಲಿ ಗಜಲ್ ಎಂದರೆ ಭಾವಗೀತೆ, ಪ್ರೇಮಗೀತೆ, ಹಾಡು ಇತ್ಯಾದಿ…. ಅರ್ಥ. ಅಲ್ಲಿಂದ ಇದು ಭಾರತದ ಉರ್ದುವಿಗೆ ಬಂತು. ಭಾರತೀಯತೆಯನ್ನು ಮೈಗೂಡಿಸಿಕೊಂಡು ಭಾರತದ ಇತರೆ ಭಾಷೆಗೂ ವ್ಯಾಪಿಸಿತು.

ಗಜಲ್‌ನಲ್ಲಿ ಇರುವ ಪ್ರಬೇಧ, ಅದರ ಸಾಂಸ್ಕೃತಿಕ ಹಿನ್ನೆಲೆ, ಅದರ ವ್ಯಾಕರಣ, ಅಲಂಕಾರಗಳ ಬಗ್ಗೆ ನಾವಿಲ್ಲಿ ಚರ್ಚೆ ಮಾಡುವುದು ಬೇಡ. ಕನ್ನಡದ ಇತರ ಕಾವ್ಯದಷ್ಟೇ ಸಮರ್ಥವಾಗಿ ಬೆಳೆದಿರುವ ಕನ್ನಡ ಗಜಲ್ ಲೋಕದ ಚಿಂತನೆಗೆ ಬಂದಾಗ ಅದು ಕೇವಲ ಪ್ರೀತಿ, ಪ್ರೇಮ, ವಿರಹ, ಪ್ರೇಮಿಗಳ ಮಾತು, ಅಷ್ಟಕ್ಕೆ ಮಾತ್ರ ಸೀಮಿತವಾಗದೆ, ರಸಿಕತೆಯ ಮಾತಿನಿಂದ ಹಿಡಿದು ಪ್ರತಿಭಟನೆಯವರೆಗೂ ಬೆಳೆದಿದೆ. ಅಲ್ಲಿನ ಪ್ರತಿರೋಧ, ಬಂಡಾಯದ ಕಾವನ್ನೂ ನಾವು ನೋಡಬಹುದಾಗಿದೆ.

ಅತ್ಯುತ್ತಮ ಸಣ್ಣಕಥೆ, ಕಾವ್ಯ, ಗಜಲ್‌ಗಳನ್ನು ನೀಡಿದ ರಾಯಚೂರ ನೆಲದಲ್ಲಿ ಇಂದು ನೂರಾರು ಗಜಲ್ ಕವಿಗಳು ಅರಳಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಆದರೆ, ಮಹಿಳಾ ಗಜಲ್‌ಕಾರರ ತೀವ್ರ ಕೊರತೆ ತುಂಬಾ ಎದ್ದು ಕಾಣುತ್ತದೆ. ಹಿರಿಯ ಕವಯಿತ್ರಿ ಎಚ್.ಎಸ್. ಮುಕ್ತಾಯಕ್ಕ ಅವರ ನಂತರ ರಾಯಚೂರು ಜಿಲ್ಲೆಯಲ್ಲಿ ಪ್ರಸ್ತುತ ಮಹಿಳಾ ಗಜಲ್‌ಕಾರರ ಸಂಖ್ಯೆ ಬೆರಳೆಣಿಕೆಯಷ್ಟು! ಗಜಲ್‌ನ ಮೋಹಕತೆಗೆ ಶರಣಾಗಿ, ಗಜಲ್ ಕಾವ್ಯವನ್ನೆ ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ ಬರಹಗಾರರು ತೀರ ಕಡಿಮೆ, ಅದರಲ್ಲೂ ಮಹಿಳಾ ಬರಹಗಾರ್ತಿಯರು ಇನ್ನೂ ಅಪರೂಪ. ಇಂತಹ ಸಂದರ್ಭದಲ್ಲೆ ಅಂಬಮ್ಮ ಪ್ರತಾಪ್ ಸಿಂಗ್ `ಮೌನದೊಡಲ ಮಾತುʼ ಗಜಲ್ ಸಂಕಲನ ಪ್ರಕಟಿಸುತ್ತಿರುವುದು ಮಹತ್ವದ ಸಂಗತಿ. ವೃತ್ತಿಯಿಂದ ಶಿಕ್ಷಕಿಯಾಗಿರುವ ಅಂಬಮ್ಮ ಪ್ರತಾಪ್ ಸಿಂಗ್ ಪ್ರವೃತ್ತಿಯಿಂದ ಬರಹಗಾರ್ತಿ. ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ 4-5 ಕೃತಿಗಳನ್ನು ಪ್ರಕಟಿಸಿರುವ ಅವರು ಪ್ರಸ್ತುತ ಗಜಲ್ ಸಂಕಲನದಲ್ಲಿ 60 ಗಜಲ್‌ಗಳಿವೆ. ದಶಕಗಳಿಂದ ಕಾವ್ಯ ರಚನೆಯಲ್ಲಿ ತೊಡಗಿಕೊಂಡಿರುವ ಅವರು ವಿಶೇಷವಾಗಿ ರಾಯಚೂರು ಜಿಲ್ಲಾ ಕೆಲವೆ ಕೆಲವು ಮಹಿಳಾ ಗಜಲ್‌ಕಾರ್ತಿಯರ ಪೈಕಿ ಮುಂಚೂಣಿಯಲ್ಲಿದ್ದಾರೆ.

ಉರ್ದು ಸಾಹಿತ್ಯ ಪರಂಪರೆಯ ʻಗಜಲ್ʼ ಸೃಷ್ಟಿಸಿರುವ ಸೋಜಿಗ, ರಸಾನುಭವ, ಚಮತ್ಕಾರ, ಪತಂಗದ ಆಕರ್ಷಣೆ ಹೀರಿಕೊಂಡು ಬೆಳೆದ ಕನ್ನಡ ಗಜಲ್‌ಗಳು ಉರ್ದು ಭಾಷೆಯಷ್ಟು ಸತ್ವಯುತವಾಗಿ ಅಲ್ಲದಿದ್ದರೂ ಇಲ್ಲಿನ ಪ್ರಾದೇಶಿಕತೆ, ಜನಜೀವನ, ಜೀವನ ಶೈಲಿ, ಭಾಷೆ, ಸಂಸ್ಕೃತಿ, ಇರುವಿಕೆಯ ಹಿನ್ನೆಲೆಯಲ್ಲಿ ಮೂಡಿಬಂದಿವೆಯಾದರೂ ಗಟ್ಟಿತನಕ್ಕೆ ಕಡಿಮೆಯಿಲ್ಲ. ಇದಕ್ಕೆ ಅಂಬಮ್ಮ ಅವರ ಕೆಲ ಗಜಲ್‌ಗಳ ಆಶಯವೂ ಹೊರತಲ್ಲ.

`ಬದುಕಿದರೂ ಜೀವಚ್ಛವವಾಗಿತ್ತು ಪ್ರೀತಿಯಿಲ್ಲದೆ
ನಿನ್ನ ಪ್ರೀತಿಯು ಸಂಜೀವಿನಿಯಾಯಿತು ಜೀವನದಲ್ಲಿ (ಗಜಲ್-4)
ಎನ್ನುವಲ್ಲಿ ಮನುಷ್ಯ ಪ್ರೀತಿಯ ಸಹಜತೆಯ ಬಯಕೆಯನ್ನು ಪ್ರಕಟಿಸುವ ಈ ಕವಯಿತ್ರಿ, ಅಗಾಧವಾದ ಜೀವನ ಪೀತಿ ಪ್ರಕಟಿಸುತ್ತಾರೆ. ಇಲ್ಲಿನ ಹಲವು ಗಜಲ್‌ಗಳಲ್ಲಿ ಅಂತಹ ಅಂತರ್ಮುಖಿ ಮಾತುಗಳ, ಮೌನ ಆದ್ರತೆಯ ವಿಚಕ್ಷಣ ಸಂಗತಿಗಳನ್ನು ಹೇಳುತ್ತವೆ.

ತಾವು ಕಂಡುಂಡ ಅನೇಕ ವಿಷಯಗಳನ್ನು ಕವಯಿತ್ರಿ ಅವನ್ನು ಕಾವ್ಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಒಂದು ಮಾತು, ಎಲ್ಲ ಅನುಭವಗಳೂ ಕಾವ್ಯವಲ್ಲ. ಅದೂ ಅಲ್ಲದೆ ಒಂದು ವಿಷಯವನ್ನು ಗಜಲ್ ಆಗಿ ಪರಿವರ್ತಿಸುವ ಕಾವ್ಯಕಾರಣ ಕೆಲವಕ್ಕೆ ಸಲ್ಲುತ್ತದೆ, ಕೆಲ ಮನೋಧರ್ಮ ಎಲ್ಲಕ್ಕೂ ಸಲ್ಲದು. ಈ ಸಂಕಲನದಲ್ಲಿ ಕಾತರತೆಯ ಮಾತುಗಳಿವೆ, ಪ್ರೀತಿ-ಪ್ರೇಮದ ಉಸಿರಾಟವಿದೆ, ಹತಾಶೆಗಳಿವೆ, ಸುಖದ ಕನಸುಗಳಿವೆ, ವ್ಯವಸ್ಥೆಯ ತಾಕಲಾಟಗಳಿವೆ, ವರ್ತಮಾನದ ಹಲಬಗೆಯ ಸಂಕಟಗಳಿವೆ, ತವಕಗಳಿವೆ, ತಲ್ಲಣಗಳಿವೆ, ಬಂಧನಗಳಿವೆ-ಬಿಡುಗಡೆಗಳಿವೆ. ಬದುಕಿನ ಸಾವಿರ ಬವಣೆಗಳನ್ನು ಕವಿ ಹೇಗೆ ತನ್ನ ಕಾವ್ಯಕುಂಚಕ್ಕೆ ಇಳಿಸುವ ಪ್ರಯತ್ನ ಮಾಡಬಲ್ಲ ಎಂಬುದಕ್ಕೆ ಈ ಗಜಲ್ ಉದಾಹರಣೆ:

`ಬಾಳ ಕಡಲ ಪಯಣದಲಿ ಬಿರುಗಾಳಿಯೇ ಹೆಚ್ಚು
ಬದುಕಲಿ ನಿನ್ನ ಜೊತೆಗೆ ಮುಳ್ಳುರಾಶಿಯೇ ಹೆಚ್ಚು’ (ಗಜಲ್-54)
ಎನ್ನುವ ರೂಪಕದ ಮತ್ಲದಲ್ಲಿ ಬರಿ ಸುಖದ ಕಲ್ಪನೆಯ ಜೀವನದಲಿ ಸಾಗುವ, ದಾಟುವ ಮುಳ್ಳಿನ ರಾಶಿಯ ವಾಸ್ತವ ಸಂಗತಿ ಇಲ್ಲಿ ಪ್ರಕಟಗೊಂಡಿದ್ದು, ಮುಂದುವರೆದ ಈ ಗಜಲ್‌ನ ನಾಕನೆ ಶೇರ್ ಹೇಳುವ ಮಾತು ಕವಯಿತ್ರಿಯ ಕಲ್ಪನಾ ಶಕ್ತಿಗೆ ಹಿಡಿದ ಸಾಣೆಯಂತಿದೆ. ಮುಂದುವರೆದ ಈ ಗಜಲ್‌ನ ಶೇರ್:
`ಮೆಹಂದಿ ರಂಗು ಕರಗುವ ಮೊದಲೆ ಬದುಕು ಭಾರ
ನಿಶ್ಯಬ್ದ ರಾತ್ರಿಯಲಿ ವಿರಹದ ಬಿಕ್ಕಳಿಕೆಯೇ ಹೆಚ್ಚು’
ಎಂದು ಹೇಳುವ ಮೂಲಕ ಹೆಣ್ಣು ಮನಸೊಂದು ಮೆಹಂದಿ ಕರಗುವ ಮೊದಲೆ ವಿರಹದ ಬಿಕ್ಕಳಿಕೆಯಲಿ ಬೇಯುವ ಛಾಯೆ ದುರಂತ ಕಥೆಯ ಪ್ರತಿಬಿಂಬವಾಗಿದೆ.
ನಮ್ಮ ಸಮಾಜದಲ್ಲಿ ಜಾತಿ, ಧರ್ಮಗಳ ಹಂಗು ತೊರೆದು ಅಂತರ್ಜಾತಿ, ಧರ್ಮಗಳ ವಿವಾಹ ನಡೆದಿವೆ. ಅದರ ವಿರುದ್ಧ ಮರ್ಯಾದ ಹತ್ಯೆಯಂಥಹ ಪ್ರಕರಣಗಳೂ ನಡೆದಿರುವುದು ದುರಂತವೆ! ಇಂತಹ ನಾಡಿನಲ್ಲಿ ವೈರುಧ್ಯ ಎಂಬಂತೆ ಕೃಷ್ಣ ರಾಧೆಯರ ಪ್ರೇಮವನ್ನು ನಾವು ಆದರ್ಶವಾಗಿ ನೋಡುತ್ತೇವೆ. ಆ ಮಿಡಿತದ ಒಂದು ಗಜಲ್‌ನ ಶೇರ್ ನೋಡುವುದಾದರೆ:

`ಕೃಷ್ಣ ರಾಧೆಯ ಪ್ರೇಮವ ಆದರ್ಶ ಎಂದು ಪೂಜಿಸುವ ಜನರಿಹರು
ಯುವ ಮನಸಿನ ಒಲವಿಗೆ ಜಾತಿ ನೆರಳಿನ ಕತ್ತಿ ಮಸೆಯುತ್ತಿದೆ’ (ಗಜಲ್-36)
ಎನ್ನುವ ಗಜಲ್‌ನಲ್ಲಿ ರಾಧೆ ಕೃಷ್ಣ ಸೇರಿದಂತೆ, ಲೈಲಾ ಮಜನೂ, ಸಲೀಂ ಅನಾರ್ಕಲಿ, ರೋಮಿಯೋ ಜೂಲಿಯಟ್‌ರನ್ನು ಆದರ್ಶವಾಗಿ ನೋಡುವ ದೇಶದಲ್ಲಿ ಒಲವಿಗೆ ವಿಷ ಉಣಿಸುವ ಕಾರಣವನ್ನು ಕವಯತ್ರಿ ಪ್ರಶ್ನಿಸುತ್ತಾ, ಪ್ರೀತಿಯ ಉದಾತ್ತತೆ ತೋರುತ್ತಾ, ಅದೆ ಒಲವನ್ನು ಹೀಗೆ ಮಧುರವಾಗಿಸುತ್ತಾರೆ:
`ನಿನ್ನೊಲವಿನ ಕರೆಗೆ ಸರ್ವಸ್ವವನ್ನೂ ತ್ಯಜಿಸಿ ಬಂದಿಹಳು ವನಿತಾ
ಒಲವಿನ ಹಾದಿಯಲ್ಲಿ ಮಧುರ ಪ್ರೀತಿಯ ಪಲ್ಲಕ್ಕಿ ಸಾಗುತ್ತಿದೆ’ ಎಂದು ಒಲವಿಗೆ ಸೋಲುತ್ತಾರೆ.

*****

ಈ ಸಂಕಲನದ ಎಲ್ಲ ಗಜಲ್‌ಗಳು ಶ್ರೇಷ್ಠ ಕಾವ್ಯಗುಣ ಹೊಂದಿದ ಗಜಲ್‌ಗಳೆಂದು ಹೇಳಲಾಗದು. ಆದರೆ ಕವಿಯೊಬ್ಬರ ಮನದಾಳದ ಮಾತುಗಳು ಅಲ್ಲಲ್ಲಿ ಕೆಲ ಸಾಲುಗಳಲ್ಲಿ ನಿಖರವಾಗಿ ಪ್ರಕಟಗೊಂಡಿವೆ. ಅದಕ್ಕೆ ಉದಾಹರಣೆಯಾಗಿ ಈ ಶೇರ್‌ಗಳನ್ನು ಗಮನಿಸಬಹುದು.

`ಮನವು ನೊಂದು ಬೇಯುತ್ತಿದೆ ನಿನ್ನ ಮೌನಕ್ಕೆ ಗೆಳೆಯ
ನೆನಪು ಸತ್ತು ಸಮಾಧಿಯಾಗಿದೆ ನಿನ್ನ ಮೌನಕ್ಕೆ ಗೆಳೆಯ’ (ಗಜಲ್-10)

***

`ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿ
ವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು’ (ಗಜಲ್-14)

***

`ನೀನು ಆಲಾಪಗೈಯ್ಯುತ್ತಿರುವ ಗಾಯನದಲಿ
ನನ್ನ ಹೃದಯದ ಬಡಿತವು ತಾಳ ಹಾಕುತ್ತಿರಲಿ’ (ಗಜಲ್-21)

***

ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ. ಮನುಷ್ಯ ಸಮಾಜ ಕುರಿತ ವಿವೇಚನೆಯುಕ್ತ ಪ್ರಶ್ನೆಗಳಿವೆ, ಕುತೂಹಲಗಳಿವೆ. ಗಂಡು-ಹೆಣ್ಣಿನ ನಡುವಿನ ಅಗಣಿತ ನೋವಿನ ಗೆರೆಗಳನ್ನು ಇಲ್ಲಿನ ಕೆಲ ಗಜಲ್‌ನಲ್ಲಿ ಕಂಡುಬಂದ ಅಂಶ.

ಕೊನೆಗೊಂದು ಮಾತು, ಹೊಸಪೀಳಿಗೆಯ ಕನ್ನಡ ಗಜಲ್‌ಕಾರರನ್ನು ಕುರಿತು ಗಜಲ್ ಸಾಹಿತ್ಯ ಲೋಕದ ಗಂಭೀರ ಬರಹಗಾರರಲ್ಲಿ ಒಂದು ಆರೋಪವಿದೆ. ಈ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಅದೆಂದರೆ, ಇಂದಿನ ಬಹುತೇಕರು ಗಜಲ್‌ಕಾರರು ಛಂದೋಬದ್ಧ ಲಕ್ಷಣಗಳನ್ನಿಟ್ಟುಕೊಂಡು ಆ ಚೌಕಟ್ಟಿನಲ್ಲಿ ಮಾತ್ರ ಗಜಲ್ ಎಂದು ಕೆಲ ಶಬ್ದಗಳನ್ನು ತುರುಕುತ್ತಾರೆ. ಗಜಲ್‌ಗೆ ಅನಿವಾರ್ಯವಾದ ಕಾವ್ಯಗುಣ, ಭಾಷಾ ಸಂಪತ್ತು, ಲಯಗಾರಿಕೆ, ಪ್ರತಿಮೆ-ರೂಪಕಗಳ ಮುಖ್ಯ ಭೂಮಿಕೆಯನ್ನು ಮರೆಯುತ್ತಾರೆ ಎಂಬ ಅಂಶ. ಬಹುತೇಕರು ತಾವು ಬರೆದುದೆ ಗಜಲ್ ಎಂದು ಗಜಲ್‌ನ ಗಾಂಭೀರ್ಯತೆಗೆ ಧಕ್ಕೆ ತರುತ್ತಿರುವುದು ಆತಂಕದ ವಿಷಯ. ಕಾವ್ಯದ ಗುಣ ಗಜಲ್‌ನಲ್ಲಿ ಅವಿರ್ಭವಿಸದೆ ಸಾವಿರ ಗಜಲ್ ಬರೆದರೂ ಆ ಗಜಲ್ ರುಚಿ ನೀಡದು. ಇಂತಹ ಅಂಶಗಳನ್ನು ಹೊಸ ಗಜಲ್ ಕವಿಗಳು ಗಮನದಲ್ಲಿಟ್ಟಿಕೊಂಡು ಗಜಲ್ ರಚನೆ ಮಾಡುವ ಅಗತ್ಯವಿದೆ.

ಭರವಸೆಯ ಕವಯಿತ್ರಿಯಾಗಿ ಪ್ರಕಟಗೊಳ್ಳುವ ಸೂಚನೆ ನೀಡಿರುವ ಈ ಕವಯಿತ್ರಿಯಿಂದ ಇನ್ನಷ್ಟು ಉತ್ತಮ ಸಾಹಿತ್ಯ ಕನ್ನಡಕ್ಕೆ ಲಭಿಸಲಿ, ಎನ್ನುತ್ತಾ ಅಂಬಮ್ಮ ಪ್ರತಾಪ್ ಸಿಂಗ್ ಅವರನ್ನು ಹೃತ್ಪೂರ್ವಕ ವಾಗಿ ಅಭಿನಂದಿಸುವೆ.