ಪ್ರೆಸ್ಸು ಮ್ಯಾಗಝಿನೂ ಗಗನಕುಸುಮದಂತೆ ಬಲುದೂರದಲ್ಲಿ ಮಿನುಗಿ ಹೋಗಿದ್ದು ಇವರ ಪ್ರಜ್ಞೆಯ ಪರಧಿಯ ಮೇಲೆ ದಾಖಲಾದ ಅನುಭವ ಇವರನ್ನು ಕಂಗೆಡಿಸಿತ್ತು. ಡಿಗ್ರಿ ಮುಗಿಸಿ ಹತ್ತಿರತ್ತಿರ ನಾಲ್ಕು ವರ್ಷಗಳಾದರೂ ಹೊಟ್ಟೆಪಾಡಿಗಾಗಿ ದುಡಿಮೆ ಮಾಡಲಿಲ್ಲವೆಂದು ಕೊರಗುತ್ತಿದ್ದರು. ಕುಂಟನೋ, ಕುರುಡನೋ, ಹೆಳವನೋ ಆಗಿರುವವನಂತೆ ಇನ್ನೊಬ್ಬರಿಗೆ ಭಾರವಾಗಿ ಕುಳಿತಿರುವೆನಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ‘ನಿರುದ್ಯೋಗದ ಮುದ್ದೆಯಾಗಿ ಹೋಗಿದ್ದೇನೆ. ತೋಟ ಮಾಡಿಯೇ ತೀರುವೆ’ ಎಂದು ನಿರ್ಧರಿಸಿದರು.’ಮೂಡಿಗೆರೆ ಹ್ಯಾಂಡ್ ಪೋಸ್ಟ್’ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ.

 

ನೆನಪುಗಳೇ ಹಾಗೆ ಮಧುರ. ಕಾಡುತ್ತಿರುತ್ತವೆ. ನನಗೆ ಈಗ ನಮ್ಮ ಬದುಕಿನ ಪುಟದ ನೆನಪುಗಳು ಒಂದು ಸುಮಧುರ ಯಾತನೆ. ಸಿಹಿ ಯಾತನೆ. ಕಾಡುತ್ತವೆ ನಿರಂತರವಾಗಿ. ಅದಕ್ಕಾಗಿಯೇ ನಿಮ್ಮೊಟ್ಟಿಗೆ ಒಂದು ಚೂರು ಹಂಚಿಕೊಳ್ಳುವಾಸೆ.

೧೯೬೧ ಇಸವಿಯಲ್ಲಿ ತೇಜಸ್ವಿ ಮತ್ತು ನಾನು ಎಂ.ಎ ಮಾಡಿದೆವು. ಮೈಸೂರು ಮಾನಸ ಗಂಗೋತ್ರಿಯಲ್ಲಿ. ತೇಜಸ್ವಿ ಕನ್ನಡ ಸಾಹಿತ್ಯದಲ್ಲಿ ಎಂ.ಎ ಮಾಡಿದರು. ನಾನು ತತ್ವಶಾಸ್ತ್ರದಲ್ಲಿ ಎಂ.ಎ ಮಾಡಿದೆ. ಎಂ.ಎ ಆದ ನಂತರ ನನ್ನವರಿಗೆ ಬೊಂಬಾಯಿಗೆ ಹೋಗಿ ಪಂಡಿತ ಹಲೀಂ ಜಾಫರ್ ಖಾನ್ ಅವರ ಶಿಷ್ಯರಾಗಿ ಸಿತಾರ್ ಕಲಿಯಬೇಕೆಂಬ ಅದಮ್ಯ ಬಯಕೆಯಿತ್ತು. ಮೈಸೂರಿಗೆ ಹಲೀಂರವರು ಸಿತಾರ್ ಕಛೇರಿ ಕೊಡಲು ಬಂದಾಗ ಪರಿಚಯವಾಗಿತ್ತು. ಹಲೀಂ ಇವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದರು. ಅವರು ತುಂಬಾ ಮಮತೆಯಿಂದ ಅವರಲ್ಲಿಗೆ ಕಲಿಯಲು ಬಾ ಎಂದೂ ಕರೆದಿದ್ದರು. ನಿನ್ನಂಥವನು ಸಾಧಾರಣ ಆಗೋದು ನನಗೆ ಹೊಟ್ಟೆ ಉರಿಯುತ್ತೆ. ಆರೇ ತಿಂಗಳೊಳಗೆ you can achieve technical perfection. ಆಮೇಲೆ ದೇವರ ಕೃಪೆ ಇದ್ದರೆ ನೀನೂ great ಆಗಬಹುದು ಎಂದಿದ್ದರು. ಹೀಗೆ ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದರೂ ಕೂಡ. ಅವರ ಆರ್ಶಿವಾದವೂ ಇತ್ತು. ಆದರೆ ಯಾಕೋ ಕಾಣೆ, ಇವರು ಇವರು ಬೊಂಬಾಯಿಗೆ ಹೋಗಿ ಕಲಿಯಲಾಗಲಿಲ್ಲ. ಯಾಕೆ ಹೋಗಲಿಲ್ಲ ಎನ್ನುವುದನ್ನು ಆಗ ನನಗೆ ಹೇಳಿದ್ದಿರಬಹುದು. ಸಂಪೂರ್ಣವಾಗಿ ಗೊತ್ತಿಲ್ಲವೆಂಬಂತೆ ಮರೆತು ಹೋಗಿದೆ. ಇವರು ಕಲಿತಿದ್ದಷ್ಟನ್ನು ಸ್ವ ಸಂತೋಷಕ್ಕೆ ನುಡಿಸಿಕೊಳ್ಳುತ್ತಿದ್ದರು. ಆ ದಿನ ಏಪ್ರಿಲ್ ಐದರಂದೂ ಮೊಮ್ಮಗಳು ವಿಹಾಳನ್ನು ಕೂರಿಸಿಕೊಂಡು ಸ್ವಲ್ಪ ಹೊತ್ತು ಸಿತಾರ್ ನುಡಿಸಿದ್ದರು. ಉತ್ತರಾದಿಯಲ್ಲಿ ಯಾವ ರಾಗ ತಾಳ ಯಾವ ಕಿರಾಣ ಘರಾಣಕ್ಕೆ ಸಂಬಂಧಪಟ್ಟಿದೆಂಬುದನ್ನು ನಿಮಿಷ ಮಾತ್ರದಲ್ಲಿ ಗುರುತಿಸುವಷ್ಟು ಇವರ ಕಿವಿ ಶುದ್ಧವಾಗಿತ್ತು, ಚುರುಕಾಗಿದ್ದರು. ಅಲ್ಲದೆ ಸಂಗೀತದ ಬಗ್ಗೆ ಹೆಚ್ಚಿಗೆ ವ್ಯಾಸಂಗ ಮಾಡಿ ಜ್ಞಾನ ಸಂಪತ್ತನ್ನೂ ಗಳಿಸಿಕೊಂಡಿದ್ದರು.

ನಮ್ಮ ಬದುಕಿನ ಈ ಹಂತದಲ್ಲಿ ಇವರು ಹೊಸ ಸಾಹಸಕ್ಕೆ ಕೈ ಹಾಕಿದ್ದು, ಅದರಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿದ್ದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. “ನಮ್ಮ ನಮ್ಮೊಳಗಿನ ಮಹಾ ತಮಸ್ಸಿನ ಗುಹೆಯಲ್ಲಿ ನಮ್ಮನ್ನು ನಮ್ಮತನವನ್ನು ತಡಕುವ ಭಯಂಕರ ಕೆಲಸ. ಮೊದಲಿಂದ ನನ್ನೊಳಗೊಂದು ಸಾಹಸಪ್ರಿಯತೆ ಇದೆ. ಬೆಂಕಿಯೊಡನೆ ಸರಸವಾಡುವ ಚಪಲ.” ಇವರೊಳಗಿನ ಒಳಗುದಿ ಇದು, ಈ ಒಳಗುದಿ ಹೊರಹೊಮ್ಮಿ ರೂಪಾಂತರಗೊಂಡ ರೂಪವೇ ಇವರು ಪ್ರೆಸ್ಸಿಗೆ ಕೈ ಹಚ್ಚಿದ್ದು.

ಮುದ್ರಣಾಲಯವನ್ನು ಶುರು ಹಚ್ಚಿದ್ದು ಬರೀ ಉತ್ಸಾಹೀ ತರುಣರ ಮನೋಹರ ಕಲ್ಪನೆಯ ಕೂಸಾಗಿರಲಿಲ್ಲ. ಇವರು ಸಂಪೂರ್ಣ ತಮ್ಮನ್ನು ಮುದ್ರಣಾಲಯದಲ್ಲಿ ತೊಡಗಿಸಿಕೊಂಡು ಕನ್ನಡಕ್ಕಾಗಿ ಅತ್ಯುತ್ತಮವಾದ illustrated weekly ಎಂಬಂತ ಮ್ಯಾಗಝಿನನ್ನು ತರಬೇಕೆಂಬ ಉತ್ಕಟಾಕಾಂಕ್ಷೆಯನ್ನು ಹೊಂದಿ ಅದಕ್ಕಾಗಿ ಕೆಲಸ ಕಾರ್ಯವನ್ನು ಮಾಡಿದರು. ಈ ವಿಷಯದಲ್ಲಿ ಅನೇಕರು ನಿರುತ್ತೇಜನಗೊಳಿಸುತ್ತಿದ್ದರಂತೆ. ಹಾಗಾಗಿ ರೊಚ್ಚಿನಿಂದ ಕೈ ಹಾಕಿ ಕೊನೆ ಮುಟ್ಟಿಸಿಯೇ ಬಿಡಬೇಕೆಂದು ಕಾರ್ಯ ಪ್ರವೃತ್ತರಾದರು. ಇವರೊಟ್ಟಿಗೆ ಕಡಿದಾಳು ಶಾಮಣ್ಣ ಜೊತೆಯಾಗಿ ಸುತ್ತೀ ಸುತ್ತೀ ಪ್ರೆಸ್ಸು ಮಿಷನ್‌ಗಳನ್ನು ನೋಡಿ ಬಂದರು. ಸುಂದರವಾದ ಹೈಡಲ್ ಬರ್ಗ್ ಅಚ್ಚು ಯಂತ್ರ ನೋಡಿ ೩೮,೦೦೦ ರೂ ಕೊಟ್ಟು ಕೊಂಡಿದ್ದೂ ಆಯಿತು. ಇದು ಮಹಾ ಆಟೋಮ್ಯಾಟಿಕ್ ಯಂತ್ರ. ತಂತಾನೆ ಕಾಗದ ಎತ್ತಿಕೊಂಡು ಹೋಗಿ ಮುದ್ರಿಸಿ ತಂದಿಡುತ್ತಿತ್ತು.

ಮುದ್ರಣಾಲಯವನ್ನು ಶುರು ಹಚ್ಚಿದ್ದು ಬರೀ ಉತ್ಸಾಹೀ ತರುಣರ ಮನೋಹರ ಕಲ್ಪನೆಯ ಕೂಸಾಗಿರಲಿಲ್ಲ. ಇವರು ಸಂಪೂರ್ಣ ತಮ್ಮನ್ನು ಮುದ್ರಣಾಲಯದಲ್ಲಿ ತೊಡಗಿಸಿಕೊಂಡು ಕನ್ನಡಕ್ಕಾಗಿ ಅತ್ಯುತ್ತಮವಾದ illustrated weekly ಎಂಬಂತ ಮ್ಯಾಗಝಿನನ್ನು ತರಬೇಕೆಂಬ ಉತ್ಕಟಾಕಾಂಕ್ಷೆಯನ್ನು ಹೊಂದಿ ಅದಕ್ಕಾಗಿ ಕೆಲಸ ಕಾರ್ಯವನ್ನು ಮಾಡಿದರು.

ಮಿಕ್ಕವೆಲ್ಲ ಗಂಟೆಗೆ ೭೦೦ ಆದರೆ ಇದು ಗಂಟೆಗೆ ೪೦೦೦ ಪ್ರತಿ ಎತ್ತುತ್ತಿತ್ತಂತೆ. ಈ ಯಂತ್ರದ ಕಾರ್ಯ ವೈಖರಿಯನ್ನು ನೆನೆನೆನೆದು ರೋಮಾಂಚನಗೊಳ್ಳುತ್ತಿದ್ದರು ತೇಜಸ್ವಿ. ಈ ಕಾರ್ಯ ರಂಗ ಜೀವನದೊಡನೆ ಮುಖಾ ಮುಖಿ ನಿಲ್ಲುವುದೆಂದರೆ ಭಯಂಕರ ಕುರುಕ್ಷೇತ್ರ ರಣರಂಗ ಎನ್ನುತ್ತಿದ್ದರು ಇವರು. ಎಷ್ಟೋ ಸಾರಿ ಕೆಟ್ಟೆನಲ್ಲಾ, ಯಾಕಾದರೂ ಇದಕ್ಕೆ ಕೈ ಹಾಕಿದೆನೋ ಎಂದು ಅಧೈರ್ಯ ಪಡುತ್ತಿದ್ದರು. ಕಾದಂಬರಿ ಬರೆಯಲಿಕ್ಕೆ ಕೂತರೆ ಒಂದು ಗೀರನ್ನೂ ಸಮಾಧಾನಕರವಾಗಿ ಎಳೆಯಲಾಗಲಿಲ್ಲವೆಂದು ಕಂಗಾಲಾಗುತ್ತಿದ್ದರು. ಹಾಳು ಸುತ್ತಲಿನ ವಾತಾವರಣ ಹೇಗೆ ಕೆಡುಕು ಮಾಡುತ್ತದೆ. ಇವೆಲ್ಲ ಹೊಸ ಹೊಸ ಅಗ್ನಿ ಪರೀಕ್ಷೆಗಳು ಜಗ್ಗುವ ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಜೀವಮಾನ ಪರ್ಯಂತದ ಪ್ರಶ್ನೆಗಳು ಇವೆಂದು ಸುಮ್ಮನಾಗುತ್ತಿದ್ದರು. ಹೀಗೆ ಮುದ್ರಣಾಲಯ ಇವರನ್ನು ಹಿಡಿದುಕೊಂಡು ಬಿಟ್ಟಿತ್ತು. ಮುದ್ರಣಾಲಯದ ಹೆಸರು ನೃಪತುಂಗ ಮುದ್ರಣಾಲಯ.

ಈ ಸಮಯದಲ್ಲಿ ಒಂದು ವಿಚಿತ್ರ ಪ್ರಸಂಗ ನಡೆದದ್ದನ್ನು ತಿಳಿಸಲು ತಮಾಷೆ ಎನಿಸುತ್ತದೆ. ಶ್ರೀರಂಗಪಟ್ಟಣದ ಕೋರ್ಟಿನಲ್ಲಿ ಹಿಂದೊಮ್ಮೆ ಇವರು ಲೈಸೆನ್ಸು ಇಲ್ಲದೆ ಕಾರು ಬಿಡುತ್ತಿದ್ದರೆಂದು ಕೇಸು ಹಾಕಿದ್ದರಂತೆ ಇವರ ಮೇಲೆ. ನಿಷ್ಕಾರಣ ಕೇಸು ಹಾಕಿರುವರೆಂದು ತಿಳಿಸಲು ಲೈಸೆನ್ಸು ಸಮೇತ ಜಡ್ಜರ ಹತ್ತಿರ ಹೋದರಿವರು, ಆ ಜಡ್ಜರು ಏನ್ರೀ, ನಿಮ್ಮದೇನೋ ಅಂತರ್ಜಾತೀಯ ವಿವಾಹವಂತೆ, ಯಾರೋ ಲೈಯಿಶನ್ ಆಫೀಸರರ ತಂಗಿಯಂತಲೂ, ತಮ್ಮ ಜಾತಿಯವರೆಂದೂ ಕೇಳಿ ಬಲ್ಲೆ ಎಂದರಂತೆ.

“ನನಗೆ ಒಂದು ಸಾರಿ ನಖಶಿಖಾಂತ ಎಲ್ಲರ ಮೇಲೂ ರೇಗಿತು. ನಾನು ಅಂತರ್ಜಾತಿಯ ವಿವಾಹ ಮತ್ತು ಶಾಸ್ತ್ರಿಯ ವಿವಾಹ ಎಲ್ಲಕ್ಕೂ ವಿರೋಧವೆಂದೂ ವ್ಯಕ್ತಿಗಳ ಸಂಬಂಧವನ್ನುಳಿದು ಇನ್ಯಾವುದೇ ಪದಗಳನ್ನು ವಿವಾಹ ಸಂಬಂಧವಾಗಿ ಉಪಯೋಗಿಸುವುದೂ ಅಸಂಬದ್ಧ” ಎಂದು ಹೇಳಿದಂತೆ ಇವರು. ತಪ್ಪಾಗಿದ್ದರೆ ಕ್ಷಮಿಸಿ ಎಂದರಂತೆ. ‘ಈ ಹಾಳು ಬೊಗಳೆ ಬಾಯಿಗಳನ್ನು ಅದುಮುವುದು ಹೇಗೋ, ದ್ರಾಬೆಗಳು ತಂದು’. ವಿಚಿತ್ರ ಈ ಜಗತ್ತು, ಇದು ಇವರ ಪ್ರತಿಕ್ರಿಯೆ. ಆಗ ಇವರಿಗೆ ಇಪ್ಪತ್ನಾಲ್ಕು ವರ್ಷ ವಯಸ್ಸು.

ಈ ಪ್ರೆಸ್ಸಿನ ಕೆಲಸವೂ ನಮ್ಮ ಭವಿಷ್ಯ ನಿರ್ಧರಣ ಹೋರಾಟಕ್ಕೆ ಸಿದ್ದತೆಯಾಗಿತ್ತು. ಆದರೆ ಪ್ರೆಸ್ಸಿನಲ್ಲಿ ನಿಗದಿತ ವೇಳೆಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಸಾಗುತ್ತಿರಲಿಲ್ಲವಾದಾಗ ಇವರ ಕನಸಾಗಿದ್ದ ಮ್ಯಾಗಝಿನನ್ನು ಹೊರಡಿಸಬೇಕೋ ಬೇಡವೋ ಎಂದು ಯೋಚನೆ ಹತ್ತಿತ್ತು. ಆಗ ಇವರು ಈ ದರಿದ್ರ ಕಾಷ್ಠ ವ್ಯಸನವೇಕೆನ್ನುತ್ತಿದ್ದರು.

“ಈ ನಿರಾಸೆಯಲ್ಲಿ ಈ ಕನ್‌ಪ್ಯೂಷನ್‌ಗೂ ಕರ್ತವ್ಯದ ಹುಡುಕಾಟಕ್ಕೂ ಒಂದು ನಿಲುಗಡೆ ಇದೆ. ಯಾವುದಕ್ಕೂ ಹೋರಾಡಲೇ ಬೇಕು. ಯೌವನವೇ ಹೋದ ನಂತರ ಬದುಕು ಭಯಾನಕ. ಹಲವರು ಅಥವಾ ಕೆಲವೇ ಮಹಾನ್ ವ್ಯಕ್ತಿಗಳು ತಮ್ಮ ನೂರನೇ ವರುಷದಲ್ಲಿ ಈ ಮುಪ್ಪಿನ ಭೂತದ ವಿರುದ್ದ ಹೋರಾಡಿದರು ಎಂತಲೇ ಅವರು ಮಹಾನ್ ವ್ಯಕ್ತಿಗಳು, ಆದರೆ ನನ್ನಲ್ಲಿ ಕೊಂಚವೂ ಸಹಕಾರ ಮನೋಭಾವನೆಯೇ ಉಳಿದಿಲ್ಲ. ನಾನು ಪ್ರೇಮಿಸಿದವಳನ್ನು ನಾನು ಮದುವೆಯಾಗುತ್ತೀನಿ ಅನ್ನುವುದರಿಂದ ಹಿಡಿದು ಸಹಕೆಲಸದವರ ಜೊತೆ ಜಗಳವಾಡುವುದರವರೆಗೂ ಏನೋ ಛಲ. ಹಮ್ಮುಅತಿರೇಖದ ಸ್ವತಂತ್ರ ಪ್ರವೃತ್ತಿ ಕಾಣುತ್ತಿದೆ” ಎಂದು ತಮ್ಮನ್ನು ವಿಮರ್ಶಿಸಿಕೊಳ್ಳುತ್ತಿದ್ದರು.

ಪ್ರೆಸ್ಸಿನ ಬಗ್ಗೆಯ ಇವರ ನಿರ್ಲಿಪ್ತತೆಯನ್ನು ಕೆಲವರು ಬೇಜವಾಬ್ದಾರಿತನವನ್ನಾಗಿ ಪರಿಭಾವಿಸಿದ್ದಿರಬಹುದು. ಆದರೆ ಇವರಿಗೆ ಸ್ವತಂತ್ರವಾಗಿ ತಮ್ಮ ಕಾಲಮೇಲೆ ನಿಲ್ಲಬೇಕೆನ್ನುವುದು ಗಟ್ಟಿಯಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ಯಾವ ನಿರ್ಧಾರವನ್ನೂ ಕೈಕೊಳ್ಳಲಾರದೆ ದುರಂತಕ್ಕೆ ಗುರಿಯಾಗುವ ಹೆಮ್ಲೆಟ್ಟನಂತೆ ಅನೇಕಬಾರಿ ಭಾಸವಾಗುತ್ತದೆ ಎನ್ನುತ್ತಿದ್ದರು.

ಕೊಟ್ಟ ಕೊನೆಗೆ ಯಂತ್ರಾಗಾರ ಇವರಿಗೆ ಒಗ್ಗುವುದಿಲ್ಲವೆಂದು ನಿಶ್ಚಯಿಸಿ ಮಾರಿ ಬಿಡಲು ತೀರ್ಮಾನಕ್ಕೆ ಬರುತ್ತಾರೆ. ಅವರು ಪ್ರೆಸ್ಸಿನ ಬಗ್ಗೆ ಅಷ್ಟೊಂದು ಆತ್ಮೀಯವಾಗಿ ನೋಡಿಕೊಂಡು ವೃಥಾ ವ್ಯಾಮೋಹದಿಂದ ಅದಕ್ಕೆ ಗಂಟು ಬೀಳಲಿಲ್ಲ. ಅವರ ಬಗ್ಗೆಯ ದೊಡ್ಡ ಸಂಗತಿ ಅದು. ಈ ಹಂತದಲ್ಲಿ ಮುಂದೇನು? ಎಂದು ಯೋಚಿಸಿದಾಗ ಹೈಸ್ಕೂಲಿನಲ್ಲಾದರೂ ಪಾಠ ಹೇಳುತ್ತೇನೆ. ನನ್ನ ಜೀವನದ ದಿಕ್ಕೆ ಪರಿವರ್ತನೆಯಾಗಿ ಹೋದರೂ ಸರಿ ಎಂದುಕೊಳ್ಳುತ್ತಿದ್ದರು. ನನ್ನ ಮೂಲಭೂತವಾದ ನಂಬಿಕೆ ಶ್ರದ್ದೆಗಳನ್ನು ಮೌಲ್ಯಗಳನ್ನು ಪಣವಿಟ್ಟು ಕೆಲಸ ಮಾಡುವ ಕಾಲ ಸನ್ನಿಹಿತವಾಗಿದೆ. `ಆಡಿದ್ದನ್ನು ಮಾಡುವ ಅಪೂರ್ವ ಕೆಲಸ ಸಂದರ್ಭ ಯಾರಿಗೂ ಜೀವನದಲ್ಲಿ ಬರುವುದು ಕಷ್ಟ` ಇವರ ಮಾತು.

ಇವರು ಪ್ರೆಸ್ಸನ್ನು ಯಾಕೆ ಹಾಕಬಾರದು ಎಂದೊಂದು ಹೊಸ ಜೀವನೋತ್ಸಾಹದ ಚಿಲುಮೆ ಚಿಮ್ಮಿಸಿದಾಗ ಆಗಷ್ಟೆ ಪರಿಚಯವಾಗಿದ್ದ ಹೆಸರು ಗಟ್ಟ ಹತ್ತಿರದ ಹಳ್ಳಿ ಬ್ಯಾತದಿಂದ ಬಂದು ಇಂಗ್ಲೀಷ್ ಎಂ.ಎ. ವ್ಯಾಸಂಗ ಮಾಡುತ್ತಿದ್ದ ಶ್ರೀ ಬಿ.ಎನ್.ಶ್ರೀರಾಮ್ ಇದೆಲ್ಲವನ್ನೂ ಕುತೂಹಲದಿಂದಲೇ ಬೆರಗಿನಿಂದಲೇ ಪರಿವೀಕ್ಷಕರಾಗಿಯೇ ಸಹ ಉದ್ಯೋಗಿಯಂತೆಯೇ ಇದ್ದವರು. ತೇಜಸ್ವಿ ಶಾಮಣ್ಣನೊಟ್ಟಿಗೆ ಎಲ್ಲ ಹಂತದ ಕೆಲಸದಲ್ಲಿ ಕೈಹಾಕಿ ಕೆಲಸ ಕಲಿತವರು. ಬಹುಶಃ ಅಂದು ಕಲಿತ ಪ್ರೆಸ್ಸಿನ ಕೆಲಸ ಪುಸ್ತಕ ಪ್ರಕಾಶನ ಮತ್ತು ಪ್ರೆಸ್ಸಿನ ಇಂದಿನ ಕೆಲಸಕ್ಕೆ ತಳಹದಿಯಾಯಿತೆಂದರೆ ಒಪ್ಪುವಂತ ಮಾತು. ಅಂದಿನ ತೇಜಸ್ವಿಯ ಅಭಿಪ್ರಾಯ ಪ್ರೆಸ್ಸಿನ ವಿವಿಧ ಹಂತದ ಕೆಲಸ ಅಂದರೆ ಮೊಳೆ ಜೋಡಿಸುವುದು, ಕಂಪೋಸಿಂಗ್, ಪ್ರಿಂಟಿಂಗ್ ಇತ್ಯಾದಿಗಳನ್ನು ತಾವುಗಳು ಕಲಿತು ಮಾಡಿ, ತಿಳಿದವರಾಗಬೇಕು, ಅದನ್ನು ಮಾಡುವ ಕೆಲಸಗಾರರೇ ಬೇರೆಯವರೇ ಆಗಿದ್ದರೂ ಕೂಡ.

ಹೈಡಲ್ ಬರ್ಗ್ ಪ್ರಿಂಟಿಂಗ್ ಮೆಷಿನ್ ರೋಲ್ಸ್ ರಾಯ್ಸ್ ಕಾರಿದ್ದಂತೆ. ಅಂದೊಂದು ಚಿನ್ನದಂತ ಯಂತ್ರವೆಂದು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗಾಗಿಯೇ ೨೦೦೩ ಇಸವಿಯಲ್ಲಿ ನಮ್ಮ ಮಗಳು ಸುಸ್ಮಿತಾ ಅವಳ ಕೆಲಸದ ಸಂದರ್ಭದಲ್ಲಿ ಜರ್ಮನಿಗೆ ಹೋಗಿದ್ದಾಗ ಹೈಡಲ್ ಬರ್ಗ್ ನಗರಕ್ಕೆ ಭೇಟಿಕೊಟ್ಟಿದ್ದಳು. ನೃಪತುಂಗ ಮುದ್ರಣಾಲಯದ ಜವಾಬ್ದಾರಿ ಹೊತ್ತವರು ತೇಜಸ್ವಿ ಮತ್ತು ಶಾಮಣ್ಣ. ಊರೆಲ್ಲ ಸುತ್ತಾಡಿ ಹೆಚ್ಚಿನ ವಹಿವಾಟಿಗೆ ತೊಡಗಿಸಿಕೊಂಡಿದ್ದರು. ಹಾಗಾಗಿ ಹಗಲು ರಾತ್ರಿ ಕೈಮೈಯೆಲ್ಲ ಮಸಿ ಮಾಡಿಕೊಂಡು ಪ್ರೆಸ್ಸಿನಲ್ಲಿ ದುಡಿದರಾದರೂ ಕೆಲಸಗಳು ನಿಗದಿತ ವೇಳೆಯಲ್ಲಿ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ಸಾಧನೆಯಾಗದಿದ್ದುದರಿಂದಲೋ ಸಹಚರರೊಂದಿಗೆ ಬಿರುನುಡಿಯ ಚಕಮಕಿಯೂ ನಡೆದಾಗ ಯಂತ್ರಗಾರ ಒಗ್ಗುವುದಿಲ್ಲವೆಂದು ಮನಸ್ಸು ಮಾಡಿದರೆನ್ನಬಹುದು. ವೃಥಾ ವ್ಯಾಮೋಹದಿಂದ ಅದಕ್ಕೆ ಗಂಟು ಬೀಳಲಿಲ್ಲ.

ಇದು ಇವರ ಪ್ರೆಸ್ಸಿನ ಬಗ್ಗೆ ಒಂದು ಆತ್ಮೀಯ ನೆನಪು. ಅಂದು ನನಗೆ ಬರೆದ ಇವರ ಕಾಗದಗಳ ಆಧಾರದಿಂದ.

(ಫೋಟೋ: ತೇಜಸ್ವಿ)

ಸಾಕಾಗಿ ಹೋಗಿದ್ದ ಮೈಸೂರು ವಾಸ

ತಮ್ಮ ಪ್ರಾಣಪ್ರಿಯವಾದ ಸ್ವಾತಂತ್ರ್ಯವೇ ನಷ್ಟವಾಗಿ ಹೋಗುತ್ತದೆ ಎನಿಸಿದಾಗ ತೇಜಸ್ವಿ ಪ್ರೆಸ್ಸಿನಿಂದ ಹೊರಬಂದರು. ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಕ್ಕೋದಲ್ಲಾಂತ ಕಂಡುಕೊಂಡರು.

ಈ ಮೈಸೂರಿನಿಂದ ಎಲ್ಲಿಗಾದರೂ ದೂರ ಹೋಗಬೇಕೆಂದಿದ್ದೆ. ಇಲ್ಲೇ ಉಳಿಯಬೇಕಾಯ್ತೇ ಎಂದು ಯೋಚನೆಯಾಗಿದೆ. ಏನಾಗಿದ್ದೇನೆ, ಏನಾಗ ಬೇಕೆಂದಿದ್ದೆ, ಏನಾಗಬೇಕೆಂದಿರುವೆ ಎಲ್ಲಾ ಮಾನಸಿಕ ತುಮುಲದಲ್ಲಿ ಸಿಕ್ಕಿಕೊಂಡಿದೆ. ಎಲ್ಲಕ್ಕಿಂತ ಮೊದಲು ನಾನು ಮೈಸೂರಿನ ಇದೇ ಮನೆ ಇದೇ ಬೀದಿ ಇದೇ ರಸ್ತೆ ಇದೇ ರೂಮುಗಳ ನಡುವೆ ಬಂಧಿಯಾಗಿರಬೇಕೆ ಎಂದು ಬಹಳ ಬೇಜಾರಾಗುತ್ತಿದೆ, ಕಾಲ ಇದಕ್ಕೊಂದು ಉತ್ತರ ಸಿದ್ದಪಡಿಸಿತೆಂದು ತೊಳಲಾಡತೊಡಗಿದರು.

ಇಂಥ ಸನ್ನಿವೇಶದಲ್ಲೇ ಕಾಫಿತೋಟ ಮಾಡಲು ನಿರ್ಧರಿಸಿದರು. ಅದೇ ಸಮಯದಲ್ಲಿ ಒಂದೆರಡು ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿಯ ಕೆಲಸವು ಸಿಕ್ಕಿತ್ತು. ಅದನ್ನು ನಿರಾಕರಿಸಿದರು. ಕಾಫಿತೋಟ ಕೊಳ್ಳುವುದೂ ಸುಲಭದ್ದಾಗಿರಲಿಲ್ಲ. ಮುಖ್ಯವಾಗಿ ಕೈಯಲ್ಲೊಂದಷ್ಟು ಹಣವಿರಬೇಕಿತ್ತು. ಆದರೆ ಈಗಾಗಲೇ ಒಂದು ಉದ್ಯೋಗದ ಮೇಲೆ ಹಣ ಸುರಿದು ಕೊನೆ ಮುಟ್ಟಿಸದಿದ್ದ ಪರಿಣಾಮವೇ ಬೇರೆಯದಿತ್ತು. ದೇಹಿಯೆಂದು ಅಂಗಲಾಚುವಂತೆ ಮಾಡಿಕೊಂಡು ಬದುಕಿದರೆಷ್ಟು ಸತ್ತರೆಷ್ಟು, ಇದಲ್ಲದೆ ದುಡ್ಡಿನ ಹಂಗು ಕೊನೆಗೆ ಇವರು ಯಾವಳನ್ನು ಮದುವೆಯಾಗಬೇಕೆನ್ನುವವರೆಗೆ ವ್ಯಾಪಿಸುತ್ತದೆ. ಇದರಿಂದ ಅವರ ನಡುವೆ ಅಡ್ಡಬರುವರೆನ್ನುವುದಕ್ಕಿಂತ ಮಿಗಿಲಾಗಿ ಅವರ ಪ್ರಾಣಪ್ರಿಯವಾದ ಸ್ವಾತಂತ್ರ್ಯವೇ ನಷ್ಟವಾಗಿ ಹೋಗುತ್ತದೆಂದೂ ತಿಳಿದರು. ಪ್ರೆಸ್ಸು ಮ್ಯಾಗಝಿನೂ ಗಗನಕುಸುಮದಂತೆ ಬಲುದೂರದಲ್ಲಿ ಮಿನುಗಿ ಹೋಗಿದ್ದು ಇವರ ಪ್ರಜ್ಞೆಯ ಪರಧಿಯ ಮೇಲೆ ದಾಖಲಾದ ಅನುಭವ ಇವರನ್ನು ಕಂಗೆಡಿಸಿತ್ತು. ಡಿಗ್ರಿ ಮುಗಿಸಿ ಹತ್ತಿರತ್ತಿರ ನಾಲ್ಕು ವರ್ಷಗಳಾದರೂ ಹೊಟ್ಟೆಪಾಡಿಗಾಗಿ ದುಡಿಮೆ ಮಾಡಲಿಲ್ಲವೆಂದು ಕೊರಗುತ್ತಿದ್ದರು. ಕುಂಟನೋ, ಕುರುಡನೋ, ಹೆಳವನೋ ಆಗಿರುವವನಂತೆ ಇನ್ನೊಬ್ಬರಿಗೆ ಭಾರವಾಗಿ ಕುಳಿತಿರುವೆನಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ‘ನಿರುದ್ಯೋಗದ ಮುದ್ದೆಯಾಗಿ ಹೋಗಿದ್ದೇನೆ. ತೋಟ ಮಾಡಿಯೇ ತೀರುವೆ’ ಎಂದು ನಿರ್ಧರಿಸಿದರು.

ಇತ್ತಕಡೆ ನಾನು ನನ್ನ ಅಣ್ಣನ ತೋಟದಲ್ಲಿ ‘ಭೂತನ ಕಾಡಿನಲ್ಲಿ’ ತಾಯಿಯವರೊಟ್ಟಿಗೆ ಇದ್ದೆನು. ತೇಜಸ್ವಿಯ ನಿರೀಕ್ಷೆಯನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದೆ. ಇದು ತುಂಬಾ ಅನಾರೋಗ್ಯಕರವಾದುದೆಂದು ಹೇಳುತ್ತಲೆ ಇದ್ದರು ಇವರು. ಮನೆಯ ಒಳಹೊರಗಿನ ಏಕಾಂತ ಗಾಢತೆ ಅಸಹನೀಯವಾಗುತ್ತಿತ್ತು. ಹಾಗಾಗಿ ನಿರಂತರವಾಗಿ ಇವರಿಗೆ ಒತ್ತಾಯಿಸುತ್ತಿರುತ್ತಿದ್ದೆ, ಪ್ರತಿ ಕಾಗದದಲ್ಲಿಯೂ ನನ್ನನ್ನು ಇಲ್ಲಿಂದ ಬೇಗ ಕರೆದೊಯ್ಯಿರೆಂದು. ಏನಾದರಾಗಲೆಂದು ಒಂದೆರಡು ಕಾಲೇಜು ಅಧ್ಯಾಪಕ ವೃತ್ತಿಗೆ ಅರ್ಜಿ ಹಾಕಿದೆ. ಅದು ನಿನ್ನ ಸ್ವಾತಂತ್ರ್ಯವೆಂದರು.

ಕೆಲ ಸಮಯದ ನಂತರ ತಿರುಪತಿ ಕಾಲೇಜಿನವರು ಅರ್ಜಿ ಆಹ್ವಾನಿಸಿದ್ದರಿಂದ ಅಲ್ಲಿಗೂ ಅರ್ಜಿ ಗುಜರಾಯಿಸಿದೆ. ಇವರಿಗೂ ಕಾಗದ ಬರೆದು ತಿಳಿಸಿದೆ. ನಿನ್ನನ್ನು ನಿಯಮಿಸಿದರೆ ನಾನೇ ತರಲೆ ಮಾಡೇ ಮಾಡುತ್ತೇನೆ. ಸ್ವಾತಂತ್ರ್ಯವನ್ನು ಇಷ್ಟೊಂದು ಪ್ರೇಮಿಸುವ ನಾನು ನಿನಗೇಕೇ ಈ ಥರ possessive ಆಗಿ ಗಲಾಟೆ ಮಾಡುತ್ತೇನೆ? ಬಹುಶ: loveನ ಪ್ರಕೃತಿಯೇ ಅಂಥದೋ ಏನೋ. ಏಕೆಂದರೆ ಹೀಗಲ್ಲದಿದ್ದರೆ ಪ್ರಪಂಚವೆಲ್ಲ ಹೊಟೇಲುಗಳು, ಸೂಳೆಯರು ಹಾಗೂ ಶಿಶು ಸಂವರ್ಧನ ಕೇಂದ್ರಗಳು ಮಾತ್ರವಾಗಿ ಉಳಿಯುತ್ತ ಇದ್ದವೋ ಏನೋ. ಆದರೂ ಅವಳ ಸ್ವಾತಂತ್ರ್ಯ ಅಥವಾ ಪ್ರೇಮ ಎರಡರಲ್ಲಿ ಒಂದನ್ನು ಆರಿಸಬೇಕಾಗಿ ಬಂದಾಗ ಹೆಣ್ಣು ಏನು ಮಾಡುವಳೆಂಬುದು ಸ್ವಾರಸ್ಯಕರ ವಿಷಯವೆಂದು ಉತ್ತರಿಸಿದರು.

ಅವತ್ತಿಗೆ ಇವರು ನನಗೆ ಹೀಗೆ ಬರೆದಿದ್ದರಾದರೂ ಎಂದು ಸ್ತ್ರೀಯು ಹೊರಗೆ ಹೋಗಿ ವೃತ್ತಿ ಪರಳಾಗುವುದರಲ್ಲಿ ಆಕ್ಷೇಪವಿರಲಿಲ್ಲ. ಸ್ತ್ರೀಯು ಆರ್ಥಿಕ ಸ್ವಾತಂತ್ರ್ಯ ಪಡೆದುಕೊಳ್ಳಬೇಕು. ಆಗಲೇ ಅವಳ ಉದ್ಧಾರನೂ ದೇಶದ ಉದ್ಧಾರವೂ ಆಗುತ್ತದೆನ್ನುತ್ತಿದ್ದರು. ನಮ್ಮಿಬ್ಬರು ಹೆಣ್ಣು ಮಕ್ಕಳೂ ಉದ್ಯೋಗದಲ್ಲಿದ್ದು ಅವರ ಸಾಧನೆಯನ್ನು ಹೆಮ್ಮೆಯಿಂದ ಗೌರವದಿಂದ ಗರ್ವದಿಂದ ಮೆಚ್ಚಿಕೊಳ್ಳುತ್ತಿದ್ದರು.

ಇಲ್ಲಿಗೆ ನಾನು ಹೊರಗೆ ಹೋಗಿ ಅಧ್ಯಾಪಕಳಾಗುವ ಬಯಕೆಯನ್ನು ತ್ಯಜಿಸಿದೆ. ಮೇಲಾಗಿ ನನಗೂ ಅಷ್ಟೇನೂ ಆಸಕ್ತಿಯೂ ಇರಲಿಲ್ಲ. ಮನೆಯಲ್ಲಿನ ಕೆಲಸ ಕಾರ್ಯಗಳಲ್ಲಿಯೇ ಪೂರ್ತಿಯಾಗಿ ತೊಡಗಿಸಿಕೊಂಡೆ. ನನ್ನ ತಾಯಿಯವರಿಗೆ ಹಸು ಸಾಕುವುದರಲ್ಲಿ ತುಂಬಾ ಆಸಕ್ತಿ ಆಸ್ಥೆ ಎರಡೂ ಇತ್ತು. ಹಾಗಾಗಿ ಜೆರ್ಸಿಯಂಥ ಸುಧಾರಿತ ಒಳ್ಳೆ ತಳಿಗಳ ಹೆಚ್ಚು ಹಾಲು ಕೊಡುವಂಥವನ್ನು ಸಾಕಿದ್ದರು. ಅವರೇ ಹಾಲು ಕರೆಯುತ್ತಿದ್ದರು. ಈಗ ನಾನು ಅವುಗಳ ಲಾಲನೆ ಪಾಲನೆಯತ್ತ ಗಮನ ಹರಿಸಿದೆ. ಅವುಗಳ ಮೈದಡವಿ ಹಿಂಡಿ ಕಲಗಚ್ಚು ನೀರು ಕುಡಿಸುವುದನ್ನು ಮಾಡತೊಡಗಿದೆ. ಹಾಲು ಕರೆಯುವುದನ್ನು ಕಲಿತೆ. ಹೊತ್ತಿಗೆ ಒಂದೇ ಹಸು ಎರಡುಸೇರು ಹಾಲು ಕರೆಯುತ್ತಿದುದನ್ನೂ ಸಂತೋಷದಿಂದ ಮಾಡುತ್ತಿದ್ದೆ.

ಸ್ತ್ರೀಯು ಹೊರಗೆ ಹೋಗಿ ವೃತ್ತಿ ಪರಳಾಗುವುದರಲ್ಲಿ ಅವರಿಗೆ ಆಕ್ಷೇಪವಿರಲಿಲ್ಲ. ಸ್ತ್ರೀಯು ಆರ್ಥಿಕ ಸ್ವಾತಂತ್ರ್ಯ ಪಡೆದುಕೊಳ್ಳಬೇಕು. ಆಗಲೇ ಅವಳ ಉದ್ಧಾರನೂ ದೇಶದ ಉದ್ಧಾರವೂ ಆಗುತ್ತದೆನ್ನುತ್ತಿದ್ದರು.

ಈ ಸಂದರ್ಭದಲ್ಲಿ ಒಂದು ಅಚಾತುರ್ಯ ನಡೆಯಿತು. ನಮ್ಮಲ್ಲಿ ಗಿಡ್ಡ ಜಾತಿಯ ಸಣ್ಣ ಕೊಂಬಿನ ಕರಿ ಹಸುವೊಂದಿತ್ತು. ಹೆಚ್ಚಾಗೇ ಹಾಲು ಕೊಡುತ್ತಿತ್ತು. ಯಾವಾಗಲೂ ಅದರ ಹಿಂಗಾಲುಗಳನ್ನು ಕಟ್ಟಿಯೇ ಹಾಲು ಕರೆಯಬೇಕಿತ್ತು. ತಿಳಿ ಬಣ್ಣದ ಬಟ್ಟೆ ಹಾಕಿರುವ ಗಂಡಸರನ್ನು ಕಂಡರೇ ಅದಕ್ಕಾಗುತ್ತಿರಲಿಲ್ಲ. ತೇಜಸ್ವಿ ಬಿಳಿ ಜುಬ್ಬ ಪೈಜಾಮದ ಡ್ರೆಸ್ಸಿನವರು ಆಗ.

ನಮ್ಮ ದನದ ಕೊಟ್ಟಿಗೆಯ ಆಚೆಗೆ ಕಕ್ಕಸು ಮನೆ ಇದ್ದಿದ್ದು. ಐವತ್ತು ವರ್ಷಗಳ ಹಿಂದೆಯೇ ನಮ್ಮ ರಾಜ್ಯದಲ್ಲಿ ಗ್ರಾಮೀಣ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನವೇ ಕೊಟ್ಟಿದ್ದರು. ಅವತ್ತಿನ ಪ್ರೈಮರಿ ಹೆಲ್ತ್ ಸೆಂಟರ್ ನವರು ಬಿಟ್ಟಿಯಾಗಿ ಸಿಮೆಂಟ್ ಅಥವಾ ಕರಿ ಪೋರ್ ಸಿಲಿನ್ ಚಟ್ಟಿಯನ್ನು ( closet) ಹಂಚುತ್ತಿದ್ದರು. ಇದನ್ನು ನನ್ನ ಅಣ್ಣ ವಾಸು ಮೂಡಿಗೆರೆ ಸೆಂಟರ್‌ನಿಂದ ತಂದು ತಾನೇ ಒಂದು ಕಕ್ಕಸ್ಸು ಮನೆ ಕಟ್ಟಿದ್ದನು. ನಾಲ್ಕು ಕಂಬ ನೆಟ್ಟು ಕಂಬದಿಂದ ಕಂಬಕ್ಕೆ ಪರೋಟನ್ನು ಆಣಿಯಿಂದ ಜಡಿದಿದ್ದನು. ಗೋಡೆಗೆ ಬದಲಾಗಿ ನಮ್ಮ ಕಾಡಿನ ಮರದಲ್ಲಿಯೇ ಹಲಗೆ ಕುಯ್ಯಿಸಿ ಬಂದ ಪರೋಟ ಅದು. ಪರೋಟಿನ ಮಧ್ಯದ ಕಂಡಿಗೆ ಹಳೆ ಡಬ್ಬದ ತಗಡು ತಗಲಿಸಿದ್ದ ಮೊಳೆ ಹೊಡೆದು, ಅವನೇ ಕಾಂಕ್ರೀಟ್ ನೆಲ ಮಾಡಿದ್ದನು. ತಗಡಿನ ಬಾಗಿಲು, ನೀರಿಗೆ ಕೊರತೆಯಿರಲಿಲ್ಲ, ತುಸು ದೂರದಲ್ಲಿತ್ತು ಅದರ ಗುಂಡಿ, ಅದನ್ನೂ ಚೆನ್ನಾಗಿ ಕಲ್ಲಿನಿಂದ ಮುಚ್ಚಲಾಗಿತ್ತು. ಅಚ್ಚುಕಟ್ಟಾಗಿತ್ತು ಟಾಯಿಲೆಟ್ಟು. ತೇಜಸ್ವಿ ಮೊದಲ ಸಲ ನೋಡಿದಾಗ ನಕ್ಕಿದ್ದರು, ಇವರು ಅನುಕೂಲದಲ್ಲೇ ಅಚ್ಚುಕಟ್ಟಾಗಿ ಮಾಡಬಹುದೆಂದರು. ಏನನ್ನೂ. (ಇಲ್ಲಿಗೆ ಅವರು ಸರಿದಾಡಿದರೆ ಸಾಕು ದೂರದಿಂದಲೇ ಬುಸು-ಗುಡುತ್ತ ಅತ್ತಿಂದತ್ತ ಇತ್ತಿಂದತ್ತ ಗುಟುರು ಹಾಕುತ್ತ ರಂಪ ಮಾಡುತ್ತಿತ್ತು ಆ ದನ).

ಒಂದು ಸಲ ನನ್ನ ಅಮ್ಮ ಬೆಂಗಳೂರಿಗೆ ಹೋಗಿದ್ದರು. ಏನಾದರೂ ಸರಿ ಆ ದನದ ತಂಟೆಗೆ ಮಾತ್ರ ಹೋಗಬೇಡೆಂದು ಎಚ್ಚರಿಕೆಯನ್ನು ಕೊಟ್ಟಿದ್ದರು. ಅವತ್ತು ಸಂತೆ ದಿನ, ಮನೆಯಲ್ಲಿ ಯಾರು ಇರಲಿಲ್ಲ. ಆಳು ಹುಡುಗನೊಬ್ಬ ಕೆಳಗಡೆಯ ತಗ್ಗಿನ ಮೈದಾನದಲ್ಲಿ ಹುಲ್ಲು ಮೇಯಲು ಆ ಕರಿದನ ಕಟ್ಟಿ ಸಂತೆಗೆ ಹೊಂಟವ ದಿನ ಕತ್ತಲೆಗೆ ಸರಿತಾಯಿದ್ದರೂ ಬರಲೇ ಇಲ್ಲ. ಕೊಟ್ಟಿಗೆಗೆ ತಂದು ಕಟ್ಟೋಣೆಂದು ಹಗ್ಗ ಬಿಚ್ಚಿದೆ ನೋಡಿ, ಬುಸುಬುಸುಗುಡುತ್ತ ಗುಟುರು ಹಾಕುತ್ತ ನನ್ನನ್ನು ಉರುಳುರುಳಿಸಿ ಉರುಳುರುಳಿಸುತ್ತಾ ಕೊಂಬಿನಿಂದ ತಿವಿಯುತ್ತಿದೆ. ಆ ಕ್ಷಣದಲ್ಲಿ ಹೇಗೂ ಏಕೋ ನಮ್ಮ ತೋಟದ ರೈಟ್ರು ದೂರದಲ್ಲೇ ಪರಿಸ್ಥಿತಿ ಗಮನಿಸಿದವರು ಓಡಿ ಬಂದು ಏನನ್ನೂ ಲೆಕ್ಕಿಸಿದೆ ಮೂಗುದಾರ ಹಿಡಿದುಕೊಂಡರು. ಈಗ ಅವರನ್ನೂ ತಿವಿಯಿತು ಈ ದನ. ಆದರೂ ಗಟ್ಟಿಯಾಗಿ ಹಿಡಿದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದರು. ಮುಖ ಪೂರ್ತಿ ರಕ್ತದಲ್ಲಿ ಅದ್ದಂತೆ ಕಾಣುತ್ತಿದ್ದರವರು. ಚೂರು ತುಟಿ ಹರಿದಿತ್ತು, ನಾನು ಆಶ್ಚರ್ಯಕರ ರೀತಿಯಲ್ಲಿ ಏನೂ ಆಗದೆ ಪಾರಾಗಿದ್ದೆ. ಈ ಸಂಗತಿಯನ್ನು ಇವರಿಗೆ ಕಾಗದದಲ್ಲಿ ತಿಳಿಸಿದೆ.

“ಕತ್ತೆ, ಅದರ ತಂಟೆಗೆ ಹೋಗಬೇಡೆಂದರೂ ಯಾಕೆ ಹೋಗಿದ್ದೆ ? ಕೊಬ್ಬು ನಿನಗೆ, ಏನಾದರೂ ಇನ್ ವ್ಯಾಲಿಡ್ ಆಗಿದ್ದಿದ್ದರೆ ನಿನ್ನನ್ನು ತೊರೆದು ಪರಾರಿಯಾಗುತ್ತಿದ್ದೆ ನಾನು ಗೊತ್ತಾ” ಉತ್ತರದ ತುಂಬೆಲ್ಲ ಬೈಗುಳ, ಆಹ್ ಚೆನ್ನಾಗಿವೆ!ಎಂದು ನಕ್ಕಿದೆ.