ಮೊದಲ ಸಲ ಹೋದಾಗ ಒಂದು ವಿಚಿತ್ರವನ್ನು ಗಮನಿಸಿ ದಂಗಾಗಿ ಹೋದೆ. ಒಳಗಡೆ ನೋಡಿದರೆ ಎಲ್ಲೆಲ್ಲೂ ದಿಗಂಬರರೆ! ಬಟ್ಟೆ ಬದಲಿಸಲು ಅಲ್ಲಿಗೆ ಬಂದಿದ್ದ ಯಾವ ಒಬ್ಬ ವಯಸ್ಕನೂ ಬಟ್ಟೆಯನ್ನೇ ತೊಟ್ಟಿರಲಿಲ್ಲ. ಒಂದು ತುಂಡು ಬಟ್ಟೆ ಕೂಡ ಹಾಕಿರದಿದ್ದ ಅವರು ಯಾವುದೇ ಮುಜುಗರ ಇಲ್ಲದೆ ಓಡಾಡುತ್ತಿದ್ದರು. ಅಲ್ಲಿದ್ದ ಶವರ್‌ಗಳೂ ಕೂಡ ಸಾಮೂಹಿಕವಾಗಿ ಸ್ನಾನ ಮಾಡುವ ತರಹವೇ ಇದ್ದವು. ಮೊದಮೊದಲು ಆ ದಿಗಂಬರರ ನಡುವೆ ಚಡ್ಡಿ ಹಾಕಿಕೊಂಡು ಸ್ನಾನ ಮಾಡುತ್ತಿದ್ದ ನನಗೇ ನಾಚಿಕೆಯಾಗುತ್ತಿತ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನೈದನೆಯ ಬರಹ

ಚಳಿಗಾಲದಲ್ಲಿ ಭಾರಿ ಹಿಮದ ಕಾರಣ ಅಲ್ಲಿಲ್ಲಿ ಅಡ್ಡಾಡಲು ಆಗುತ್ತಿರಲಿಲ್ಲ. ಆಫೀಸ್ ಕೆಲಸದ ನಂತರ ನನ್ನ ಬಳಿ ತುಂಬಾ ಸಮಯ ಇರುತ್ತಿತ್ತು. ಓದು ಬರಹದ ಗೀಳು ಇತ್ತಾದರೂ ಆ ಕಟು ಚಳಿಗಾಲದಲ್ಲಿ ಯಾಕೋ ಬರವಣಿಗೆಗೆ ಮೂಡು ಬರುತ್ತಿರಲಿಲ್ಲ. ಮಗಳಿಗೆ ಅವಳ ಇಷ್ಟದ ಕೆಲವು ತರಬೇತಿ ಕೊಡಿಸಲು ಶುರು ಮಾಡಿದ್ದೆವು. ಅಲ್ಲಿ ಒಂದಿಷ್ಟು ಹುಡುಗಿಯರು ಮಾಡುವುದನ್ನು ನೋಡಿ ಅವಳಿಗೆ ಜಿಮ್ನ್ಯಾಸ್ಟಿಕ್ ಬಗ್ಗೆ ಒಲವು ಬಂತು. ಅದನ್ನೇ ಕಲಿಯಲು ಹೋಗತೊಡಗಿದಳು. ಅಲ್ಲಿನ ಒಂದು ವಿಧಾನ ನನಗೆ ಇಷ್ಟವಾಗಿತ್ತು. ಕೇವಲ ಒಂದೇ ವಾರದಲ್ಲಿ ಜಿಮ್ನ್ಯಾಸ್ಟಿಕ್ಸ್‌ನಲ್ಲಿ ಅವಳ ಪ್ರಗತಿ ನೋಡಿ ಮುಂದಿನ ಶ್ರೇಣಿಗೆ ಅವರೇ ಹಾಕಿದ್ದರು. ಈ ವಿಧಾನದಿಂದ ಪ್ರತಿಭೆಯಿದ್ದವರು ಮುಂದಿನ ಮೆಟ್ಟಿಲುಗಳನ್ನು ಬಹು ಬೇಗನೆ ಏರಬಹುದು ಅನಿಸಿತು.

ಅಲ್ಲೊಂದು ಈಜು ಕಲಿಸುವ ಸಂಸ್ಥೆ ಕೂಡ ಇತ್ತು. ಮಗಳಿಗೂ ಬಹು ದಿನಗಳಿಂದ ಅದನ್ನು ಕಲಿಯುವ ಹಂಬಲ ಇತ್ತಾದ್ದರಿಂದ ಅಲ್ಲಿಗೆ ಕರೆದೊಯ್ದೆವು. ಒಳಾಂಗಣ ಈಜು ಕೊಳ ಆಗಿದ್ದರಿಂದ ನೀರು ಬೆಚ್ಚಗೆ ಇರುತ್ತಿತ್ತು. ನನಗೂ ಈಜು ಕಲಿಯುವ ಹಂಬಲ ಇದ್ದೇ ಇತ್ತು. ಆದರೆ ವಯಾಸ್ಸಾದಂತೆ ಹಲವಾರು ಹೆದರಿಕೆಗಳಲ್ಲಿಯೇ ಈಜಾಡುವ ನಾವು ನೀರಿಗೆ ಇಳಿಯುವ ಪ್ರಶ್ನೆಯೆಲ್ಲಿ?

ಅಲ್ಲಿ ಮಗಳಿಗೆ ತರಬೇತಿ ಕೊಡುತ್ತಿದ್ದ ಮಹಿಳೆಯ ಹೆಸರು ಕ್ರಿಸ್ಟಿನಾ. ಅವಳಿಗೆ ಹೆಚ್ಚು ಕಡಿಮೆ ಇಪ್ಪತ್ತೈದು ವಯಸ್ಸು ಇದ್ದೀತು. ನೋಡಲು ಫಿಟ್ ಆಗಿ ಆಕರ್ಷಕವಾಗಿ ಕಾಣುತ್ತಿದ್ದಳು. ಅಲ್ಲಿ ಎರಡು ನಮೂನೆ ಜನರನ್ನ ನೋಡಿದ್ದೆ. ತುಂಬಾ ತೆಳ್ಳಗೆ ಫಿಟ್ ಆಗಿ ಇರೋವ್ರು ಇಲ್ಲವೇ ಅತಿ ಬೊಜ್ಜು ಇರುವವರು. ಇವಳು ಮೊದಲನೇ ಕೆಟಗರಿ. ಅದೂ ಅಲ್ಲದೆ ಅವಳಿಗೆ ಈಗಾಗಲೇ ಎರಡು ಮಕ್ಕಳಿರುವುದನ್ನು ತಿಳಿದು ನನಗೆ ಆಶ್ಚರ್ಯ ಆಗಿತ್ತು. ಈಜು ಹೇಳಿಕೊಡುವ ವಿಧಾನವೂ ಅಲ್ಲಿ ಬೇರೆ ತರಹ ಇತ್ತು. ನಿಧಾನವಾಗಿ ಸುರಕ್ಷತಾ ವಿಧಾನಗಳನ್ನು ಅನುಸರಿಸಿ ಹೇಳಿಕೊಡುತ್ತಿದ್ದಳು. ತುಂಬಾ ಹಿಂದೆ, ಬೆಂಗಳೂರಿನ ಈಜು ತರಬೇತಿ ಕೇಂದ್ರವೊಂದರಲ್ಲಿ ಎತ್ತಿ ಒಗೆದುಬಿಡುತ್ತಿದ್ದರು. ಅವರು ಎತ್ತಿ ಒಗೆಯುತ್ತಿದ್ದ ರಭಸಕ್ಕೆ ನನ್ನ ಮಗಳು ಅತ್ತು ಅತ್ತು ಸ್ವಿಮ್ಮಿಂಗ್ ಪೂಲಿನ ನೀರಿನ ಮಟ್ಟ ಜಾಸ್ತಿ ಆಯ್ತೆ ಹೊರತು ಅವಳು ಈಜು ಕಲಿಯಲಿಲ್ಲ! ಹಾಗಂತ ಇವಳ ಜೊತೆಗಿದ್ದ ಎಷ್ಟೋ ಮಕ್ಕಳು ಅಲ್ಲಿಯೇ ಈಜು ಕಲಿತಿದ್ದರು. ಕೆಲವು ಮಕ್ಕಳಿಗೆ ಕೆಲವು ವಿಧಾನಗಳು ಕೆಲಸ ಮಾಡುತ್ತೋ ಏನೋ.

ಆದರೆ ಮಗಳು ಅಮೆರಿಕೆಯ ಸಿಮ್ಮಿಂಗ್ ಪೂಲ್‌ನಲ್ಲಿ ಕೆಲವೇ ದಿನಗಳಲ್ಲಿ ಈಜು ಕಲಿತಳು. ಇದರಿಂದ ಸ್ಪೂರ್ತಿಗೊಳಗಾಗಿ ನಾನೂ ಈಜು ಕಲಿಯಬೇಕೆಂಬ ನನ್ನ ಬಯಕೆ ಇನ್ನೂ ತೀವ್ರ ಆಯ್ತು. ಆ ಸ್ಫೂರ್ತಿಗೆ ಕ್ರಿಸ್ಟೀನಾಳೆ ಕಾರಣ ಆಗಿರಬಹುದಾ ಅಂತ ಆಶಾಗೆ ಬಲವಾದ ಸಂಶಯ ಬಂದಿತ್ತು ಅನಿಸುತ್ತೆ. ಯಾಕೆಂದರೆ ಒಂದು ದಿನ ಕ್ರಿಸ್ಟೀನಾ ನಾವಿಬ್ಬರೂ ಕುಳಿತಲ್ಲಿ ಬಂದು ನಿಮ್ಮ ಮಗಳು ಚೆನ್ನಾಗಿ ಈಜು ಕಲಿಯುತ್ತಿದ್ದಾಳೆ. ನೀವೂ ಕಲಿಯುವುದಿದ್ದರೆ ಹೇಳಿ ನಿಮ್ಮಿಬ್ಬರಿಗೂ ನಾನೇ ಹೇಳಿಕೊಡುವೆ ಅಂತ ಅಂದಿದ್ದಳು. ನಾನು ಕೂಡಲೇ ತಯಾರಾದೆ. ಆದರೆ… ಮಗಳು ಕಲಿತು ಮುಗಿಸಲಿ ಆಮೇಲೆ ನಾವು ಕಲಿಯೋಣ ಅಂತ ಆಶಾ, ನಾನು ನೀರಿಗಿಳಿಯುವ ಉತ್ಸಾಹಕ್ಕೆ ತಣ್ಣೀರು ಎರಚಿ ನಿರಾಸೆಯುಂಟುಮಾಡಿದ್ದಳು!

ಮಗಳನ್ನು ವಾರಕ್ಕೆ ಕೆಲವು ದಿನಗಳು ಅಲ್ಲಿಗೆ ಕರೆದೊಯ್ಯುವುದು, ಶಾಪಿಂಗ್ ಮಾಡೋದು ಇವೆ ಮೊದಲಾದ ಕೆಲಸಗಳನ್ನು ಮಾಡುತ್ತಾ ಕಾಲವನ್ನು ಕಳೆಯುತ್ತಿದ್ದೆವು. ಮಗಳು ಚೆನ್ನಾಗಿ ಈಜಾಡುವ ಮಟ್ಟಕ್ಕೆ ಬಂದಿದ್ದಳು. ಆಮೇಲೆ ಯಾಕೊ ಎರಡು ಮೂರು ಸರ್ತಿ ಕ್ರಿಸ್ಟಿನಾಳನ್ನು ನೋಡಲೇ ಇಲ್ಲ. ಅವಳು ಕೆಲಸ ಬಿಟ್ಟಿದ್ದಾಳೆ ಅಂತ ಗೊತ್ತಾಯಿತು. ಈಗ ನಾವು ಈಜು ಕಲಿಯಬಹುದು ಅಂತ ಆಶಾ ಪರ್ಮಿಷನ್ ಕೊಟ್ಟಳು! ಅಷ್ಟೊತ್ತಿಗೆ ನಮಗೆ ಬೇರೆಯ instructor ಬಂದಿದ್ದಳು.

ಈಜುವ ಮೊದಲು ಸ್ನಾನ ಮಾಡಿ ಬರುವುದು ಕಡ್ಡಾಯ. ಬಟ್ಟೆ ಬದಲಾಯಿಸಲು ಹಾಗೂ ಸ್ನಾನ ಮಾಡಲು ಈಜುಕೊಳದ ಸಾರ್ವಜನಿಕ bathroom ಗೆ ಮೊದಲ ಸಲ ಹೋದಾಗ ಒಂದು ವಿಚಿತ್ರವನ್ನು ಗಮನಿಸಿ ದಂಗಾಗಿ ಹೋದೆ. ಒಳಗಡೆ ನೋಡಿದರೆ ಎಲ್ಲೆಲ್ಲೂ ದಿಗಂಬರರೆ! ಬಟ್ಟೆ ಬದಲಿಸಲು ಅಲ್ಲಿಗೆ ಬಂದಿದ್ದ ಯಾವ ಒಬ್ಬ ವಯಸ್ಕನೂ ಬಟ್ಟೆಯನ್ನೇ ತೊಟ್ಟಿರಲಿಲ್ಲ. ಒಂದು ತುಂಡು ಬಟ್ಟೆ ಕೂಡ ಹಾಕಿರದಿದ್ದ ಅವರು ಯಾವುದೇ ಮುಜುಗರ ಇಲ್ಲದೆ ಓಡಾಡುತ್ತಿದ್ದರು. ಅಲ್ಲಿದ್ದ ಶವರ್‌ಗಳೂ ಕೂಡ ಸಾಮೂಹಿಕವಾಗಿ ಸ್ನಾನ ಮಾಡುವ ತರಹವೇ ಇದ್ದವು. ಮೊದಮೊದಲು ಆ ದಿಗಂಬರರ ನಡುವೆ ಚಡ್ಡಿ ಹಾಕಿಕೊಂಡು ಸ್ನಾನ ಮಾಡುತ್ತಿದ್ದ ನನಗೇ ನಾಚಿಕೆಯಾಗುತ್ತಿತ್ತು! ಅಮೆರಿಕನ್ನರ ಸ್ವೇಚ್ಛೆಯ ಬಗ್ಗೆ ಕೇಳಿ ತಿಳಿದಿದ್ದೆನಾದರೂ ಈ ‘ನಗ್ನ’ ಸತ್ಯವನ್ನು ಕಣ್ಣಾರೆ ನೋಡುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಹಾಗಂತ ನಾನೂ ಅವರ ತರಹ ದಿಗಂಬರ ಆಗಲು ಸಾಧ್ಯವೇ? ನೀನು ನೀನೆ ಇಲ್ಲಿ ನಾನು ನಾನೇ ಅಂತ ಅವರೆದುರು ಧೈರ್ಯದಿಂದ ಬಟ್ಟೆ ಹಾಕಿಕೊಂಡೆ ಅಡ್ದಾಡುತ್ತಿದ್ದೆ!

ತುಂಬಾ ಹಿಂದೆ, ಬೆಂಗಳೂರಿನ ಈಜು ತರಬೇತಿ ಕೇಂದ್ರವೊಂದರಲ್ಲಿ ಎತ್ತಿ ಒಗೆದುಬಿಡುತ್ತಿದ್ದರು. ಅವರು ಎತ್ತಿ ಒಗೆಯುತ್ತಿದ್ದ ರಭಸಕ್ಕೆ ನನ್ನ ಮಗಳು ಅತ್ತು ಅತ್ತು ಸ್ವಿಮ್ಮಿಂಗ್ ಪೂಲಿನ ನೀರಿನ ಮಟ್ಟ ಜಾಸ್ತಿ ಆಯ್ತೆ ಹೊರತು ಅವಳು ಈಜು ಕಲಿಯಲಿಲ್ಲ! ಹಾಗಂತ ಇವಳ ಜೊತೆಗಿದ್ದ ಎಷ್ಟೋ ಮಕ್ಕಳು ಅಲ್ಲಿಯೇ ಈಜು ಕಲಿತಿದ್ದರು. ಕೆಲವು ಮಕ್ಕಳಿಗೆ ಕೆಲವು ವಿಧಾನಗಳು ಕೆಲಸ ಮಾಡುತ್ತೋ ಏನೋ.

ಮುಂದೊಂದು ದಿನ ಕ್ರಿಸ್ಟಿನಾ ನನ್ನ ಮೊಬೈಲ್‌ಗೆ ಮೆಸೇಜ್ ಮಾಡಿದಳು. ತನಗೆ ಒಂದು ಅಪರೂಪದ ಕ್ಯಾನ್ಸರ್ ಆಗಿದೆಯಂತಲೂ, ಆರೈಕೆಯಲ್ಲಿದ್ದೀನಿ ಹಾಗೂ ಅದರಿಂದಾಗಿ ಕೆಲಸವನ್ನೂ ಕಳೆದುಕೊಂಡೆ ಅಂತ ಹೇಳಿದಳು. ಅಷ್ಟೊಂದು fit ಇದ್ದ ಅವಳಿಗೆ ಕ್ಯಾನ್ಸರ್ ಬಂತೆ ಅಂತ ಆಶ್ಚರ್ಯ ಆಯ್ತು. ಪೂರ ತಲೆ ಬೋಳಾದ ತನ್ನ ಭಾವ ಚಿತ್ರವನ್ನೂ ಕಳಿಸಿದಳು. ತನ್ನ ಜೀವನ ನಿರ್ವಹಣೆಗಾಗಿ ದೇಣಿಗೆ ಎತ್ತುತ್ತಿದ್ದೇನೆ ಸಾಧ್ಯವಾದಷ್ಟು ಸಹಾಯ ಮಾಡಿ ಅಂತ ಹೇಳಿದಳು. ನಮ್ಮ ದೇಶದಲ್ಲೇ ಇಷ್ಟೊಂದು ಬಡತನ ಇದೆ ಅಮೇರಿಕನ್ನರೆಲ್ಲ ಶ್ರೀಮಂತರೆ ಅನ್ನುವ ಭ್ರಮೆ ಕಳಚಿ, ಅಷ್ಟಿಷ್ಟು ಉಳಿತಾಯ ಮಾಡಿಕೊಂಡಿರುವ ನಮ್ಮ ದೇಶದ ಜನರೇ ಪರವಾಗಿಲ್ಲ ಅನಿಸಿತು. ಅವಳ ದಿನ ನಿತ್ಯದ ಖರ್ಚಿಗೆ ಹಾಗೂ ಆಸ್ಪತ್ರೆಯ ಫೀಸ್‌ಗೆ ಕೂಡ ಗತಿಯಿಲ್ಲದಷ್ಟು ನಿರ್ಗತಿಕಳಾಗಿದ್ದಳಾ ಕ್ರಿಸ್ಟಿನಾ? ಅವಳು ಸುಳ್ಳು ಹೇಳಿರಲಿಕ್ಕಿಲ್ಲ ಅಂದುಕೊಂಡೆ. ಎಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳನ್ನೂ ಹೆತ್ತಿರುವ ಅವಳು ಗಂಡನ ಜೊತೆಗಾದರೂ ಇರುವ ಸಾಧ್ಯತೆಯೂ ಇರಲಿಲ್ಲ. ಇದ್ದರೂ ಕೂಡ ಅವರವರ ಲೆಕ್ಕಾಚಾರವೇ ಬೇರೆ ಬೇರೆ ಅಲ್ಲಿ. ವಿಚಿತ್ರ ದೇಶ ವಿಚಿತ್ರ ಜನ ಎಂಬ ಭಾವನೆ ಬರಲು ಶುರುವಾಗಿತ್ತು. ಯಾಕೋ ಫಿಲಿಪ್‌ನ ತಾಯಿ ಸಿರಿ ಮತ್ತು ಕ್ರಿಸ್ಟಿನಾ ಇಬ್ಬರ ಬದುಕಿನಲ್ಲೂ ತುಂಬಾ ಸಾಮ್ಯತೆ ಕಾಣಿಸಿತ್ತು. ಅವಳಿಗೊಂದಿಷ್ಟು ನಮ್ಮ ಕೈಲಾದ ಸಹಾಯ ಮಾಡಿ ನಿನಗೆ ಬೇಗನೆ ಹುಷಾರಾಗಲಿ ಅಂತ ಆಶಿಸಿದೆವು…

*****

ಅಲ್ಲಿ ಮತ್ತೆ ನನಗೆ ಬೋರ್-ಗಾಲ ಶುರುವಾಯ್ತು! ಕನ್ನಡ ಸಂಘದ ಸಾಂಸ್ಕೃತಿಕ ಸಂಘದ ಉಸ್ತುವಾರಿ ಹೊತ್ತಿದ್ದೆನಾದರೂ ಅಲ್ಲಿನ ಚಟುವಟಿಕೆಗಳು ಶುರುವಾಗೋದು ಯಾವುದೋ ಹಬ್ಬ ಆಚರಣೆ ಮಾಡುವಾಗ ಮಾತ್ರ. ಮಿಕ್ಕಿದ ಸಮಯದಲ್ಲಿ ಏನು ಮಾಡೋದು? ಅದಕ್ಕೊಂದು ಪರಿಹಾರ ಕಂಡುಕೊಂಡೆ.

ಕನ್ನಡಿಗರ ಮಕ್ಕಳು ಅಲ್ಲಿನ ಪರಿಸರಕ್ಕೆ ಬೇರೆ ಎಲ್ಲ ಭಾರತೀಯರಂತೆ ಬಹು ಬೇಗ ಹೊಂದಿಕೊಳ್ಳುತ್ತಾರೆ. ಅಮೆರಿಕೆಯ ಉಚ್ಚಾರಣೆಯನ್ನು ಬಹುಬೇಗ ಕರಗತ ಮಾಡಿಕೊಳ್ಳುತ್ತಾರೆ. ಈ ಒಂದು ಪ್ರಕ್ರಿಯೆಯಲ್ಲಿ ಕನ್ನಡ ಮಾತಾಡೋದೇ ಕಡಿಮೆಯಾಗಿ ಹೋದಹೋದಂತೆ ಮನೆಯಲ್ಲಿ ಎಲ್ಲರೂ ಆಂಗ್ಲ ಭಾಷೆಯನ್ನೇ ಬಳಸಲು ಶುರುಮಾಡುತ್ತಾರೆ. ಆ ಮಕ್ಕಳು ಕನ್ನಡವನ್ನು ಮತ್ತೆ ಬಳಸುವಂತೆ ಮಾಡುವೆ ಅಂತ ನಮ್ಮ ಅಧ್ಯಕ್ಷ ಗಣೇಶ ಅವರಿಗೆ ಹೇಳಿದೆ. ಅವರಿಗೂ ಖುಷಿಯಾಯ್ತು. ಹಾಗಂತ ಅಲ್ಲಿ ಯಾರೂ ಕನ್ನಡ ಮಾತಾಡೋದೆ ಇಲ್ಲ ಅಂತಲ್ಲ. ಹಲವರು ಮಾತಾಡುತ್ತಾರೆ ಹಾಗೂ ಮನೆಯಲ್ಲಿ ಮಕ್ಕಳ ಜೊತೆಗೆ ಕೂಡ ಮಾತಾಡುವ ರೂಢಿ ಇಟ್ಟುಕೊಂಡಿದ್ದಾರೆ. ಅಂಥವರಲ್ಲಿ ಗಣೇಶ ಕೂಡ ಒಬ್ಬರು.

ಅಲ್ಲಿನ ಹುಡುಗರಿಗೆ ಕನ್ನಡ ಮಾತಾಡಲು ಹಾಗೂ ಬರೆಯುವಂತೆ ಮಾಡೋದು ಸುಲಭದ ಕೆಲಸ ಆಗಿರಲಿಲ್ಲ. ಶಾಲೆಯಲ್ಲಿ ಕಲಿಸುವಂತೆ ಕನ್ನಡ ಕಲಿಸುವುದು ನನಗೆ ಇಷ್ಟ ಇರಲಿಲ್ಲ. ನಾಟಕದ ಮೂಲಕ, ಜನಪದ ಗೀತೆಗಳ ಹಾಡುವುದರ ಮೂಲಕ, ಒಗಟು, ಪದಬಂಧ ಹೀಗೇ ಖುಷಿಯಿಂದ ಆಟ ಆಡಿಕೊಂಡು ಕನ್ನಡ ಕಲಿಸುವುದು ನನ್ನ ಯೋಜನೆ ಆಗಿತ್ತು. ವಾರಕ್ಕೊಂದು ದಿನ ಕನ್ನಡ ಕಲಿಕೆಗೆ ಅಂತ ಮೀಸಲಾಗಿತ್ತು. ದೇವಸ್ಥಾನದಲ್ಲಿಯೇ ಇದ್ದ ಒಂದು ಕೋಣೆಯನ್ನು ನಿರ್ಧಿಷ್ಟ ಸಮಯಕ್ಕೆ ನಮಗೆ ಅಂತ ಕೊಟ್ಟಿದ್ದರು. ನಮ್ಮ ಈ ಕಲಿಕೆಯ ಅಭಿಯಾನಕ್ಕೆ “ಕನ್ನಡ ಆಟ ಶಾಲೆ” ಅಂತ ನಾಮಕರಣ ಮಾಡಿದ್ದೆವು.

ನಮ್ಮ ಆಟಶಾಲೆಯಲ್ಲಿ ಡೆಸ್ಕ್‌ಗಳನ್ನೆಲ್ಲ ತೆಗಿಸಿಬಿಟ್ಟೆ. ಹಾಡು ನಾಟಕಗಳ ಜೊತೆಗೆ ಅಮೆರಿಕೆಯ ಉಚ್ಚರಣೆಯಲ್ಲಿಯೇ ಮಕ್ಕಳು ಕನ್ನಡವನ್ನು ಮಾತಾಡುವ ಬಗೆ ಒಂಥರಾ ಮಜವಾಗಿತ್ತು. ನನ್ನ ಮಗಳು ಕೂಡ ನನ್ನ ಜೊತೆಗೆ ಬರುತ್ತಿದ್ದಳು. ಇನ್ನೂ ಅಮೆರಿಕೆಯ ಗಾಳಿ ಅಷ್ಟಾಗಿ ತಾಗದಿದ್ದ ಅವಳು ಕನ್ನಡವನ್ನು ಅಲ್ಲಿದ್ದ ಹುಡುಗರಿಗಿಂತ ಚೆನ್ನಾಗಿ ಮಾತಾಡುತ್ತಿದ್ದಳು.

ಆದರೆ ಅಲ್ಲಿನ ಕೆಲವು ಪಾಲಕರಿಗೆ ನಾನು ಈ ರೀತಿ ಕನ್ನಡವನ್ನು ಕಲಿಸುವುದು ಇಷ್ಟ ಆಗಲಿಲ್ಲ. ಅವರಿಗೆ ತಮ್ಮ ಮಕ್ಕಳು ಅ ಆ ಇ ಈ.. ಬರೆಯುವುದು ಕಲಿಯಬೇಕು, ಪಠ್ಯ ಪುಸ್ತಕದಂತೆ ಒಂದು syllabus ಇರಬೇಕು ಅಂತೆಲ್ಲ ಬಯಸಿದರು. ಅದನ್ನೆಲ್ಲ ಆಮೇಲೆ ಕಲಿಸೋಣ. ಸಧ್ಯಕ್ಕೆ ಕನ್ನಡ ಅವರ ಕಿವಿಗೆ ಹೆಚ್ಚು ಬೀಳುವಂತೆ ಮಾಡೋಣ, ಅವರ ನಾಲಿಗೆ ಹೊರಳುವಂತೆ ಮಾಡೋಣ ಅಂತ ನಾನು ಹೇಳಿದ್ದು ಕೆಲವರ ಕಿವಿಗೆ ಇಂಪಾಗಿ ಕೇಳಲಿಲ್ಲ! ಹಾಗಂತ ಇನ್ನೂ ಕೆಲವರು ನನ್ನ ವಿಧಾನವನ್ನು ಮೆಚ್ಚಿಕೊಂಡರು. ನನ್ನ ಜೊತೆಗೆ ಬಂದು ಪಾಠ ಹೇಳುತ್ತಿದ್ದರು ಕೂಡ. ಒಟ್ಟಿನಲ್ಲಿ ಆಟ ಶಾಲೆ ಕುಂಟುತ್ತಲೇ ಸಾಗಿತ್ತು.

ಮುಂದೆ ಬರಲಿರುವ ಒಂದು ಸಮಾರಂಭದಲ್ಲಿ ಈ ಮಕ್ಕಳ ಕೈಯಲ್ಲಿ, ಕನ್ನಡದಲ್ಲಿ ಒಂದು ಕಿರು ನಾಟಕವನ್ನು ಮಾಡಿಸೋಣ ಅಂತ ತಲೆಯಲ್ಲಿ ಬಂತು. ಎಲೆಕ್ಟ್ರಾನಿಕ್ ಮಾಧ್ಯಮಗಳ ಅತಿ ಬಳಕೆಯ ದುಷ್ಪರಿಣಾಮಗಳ ಬಗ್ಗೆ ತಮಾಶೆಯಾಗಿಯೇ ಮಕ್ಕಳಿಗೆ ತಿಳಿಹೇಳುವ ಒಂದು ನಾಟಕವನ್ನು ಬರೆದು ನಿರ್ದೇಶಿಸಲು ಶುರು ಮಾಡಿದೆ. ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. “ವೇ ವಾಟ್!?.. ಓಹ್ ಡಾರ್ನ್.. ಮ್ಯಾನ್” ಎನ್ನುತ್ತಾ ಯಾವುದನ್ನು ಸುಲಭಕ್ಕೆ ಒಪ್ಪದ ಅಲ್ಲಿನ ಮಕ್ಕಳಿಗೆ ಒಂದೊಂದು ಡೈಲಾಗ್ ಹೇಳಿಸಲು ಬೆವರು ಇಳಿದು ಹೋಗುತ್ತಿತ್ತು. ಆದರೂ ಅದನ್ನು ಖುಷಿಯಿಂದಲೇ ಮಾಡುತ್ತಿದ್ದೆ. ನನ್ನ ಬೋರ್-ಗಾಲ ಕ್ರಮೇಣ ಕಡಿಮೆಯಾಗತೊಡಗಿತ್ತು ಕೂಡ.

ಅಷ್ಟೊತ್ತಿಗೆ ಭಾರತದಿಂದ ಬಂದ ಒಂದು ಸುದ್ದಿ ನಮ್ಮನ್ನು ಧೃತಿಗೇರಿಸಿತ್ತು…

(ಮುಂದುವರಿಯುವುದು…)
(ಹಿಂದಿನ ಕಂತು: ಮೂಕ ವೇದನೆ..)