ಕಣ್ಣಿಗಿಲ್ಲದ ಕಾಣ್ಕೆ

ಹಸಿರು ಬಟ್ಟೆಯ ಈ ಮಗುವಿನ ತುಟಿಯಿಂದ ತೊಟ್ಟಿಕ್ಕುವ
ಬಯಕೆಯ ಅತೀವ ಗಂಭೀರ ಮಂದತೇವ
ನೆನಪಿಗೇ ಬಾರದ ಈಜುಗೊಳದೊಳಗೆ ತೊಟ್ಟಿಕ್ಕುವ
ಜೀವಹನಿಯಲ್ಲಿ ತೇಲುವ ಕನಸು
ಹುಟ್ಟಲ್ಲೆ ಸೀಳುತಲೆ.
ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ
ಬರಿದೆ ಅದರ ಒಂದು ಛಾಯೆ-ಚಿತ್ರ.
ಜೋರಾಗಿ ಕುಲುಕಿದರೆ ಕಪ್ಪು ಬಿಳುಪು ಚುಕ್ಕೆಗಳು ಉದುರಿ
ಕಣ್ಣಿಗೆ ಮಸಿಹಾಕಬಹುದು.
ಆದರೂ
ಕರುಳಿಂದ ಕಾಣಲಾದೀತೆ? ಕಣ್ಣಲ್ಲೇ ಕಾಣಬೇಕು.
ಒಳಪದರದ ಮೇಲೆ ಬೀಳುವ ಉಲ್ಟಾ ಬಿಂಬವನ್ನು
ಸರಿಮಾಡದಿದ್ದರೆ ಕಾಲುತಲೆಯಾಗಿ
ಪೂರ್ವದಲ್ಲಿಲ್ಲದ ಉತ್ತರ ಪಶ್ಚಿಮವಾಗಿ ಗೋಟಾವಳಿ.

 

 

 

 

ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ
ಸೀಳುಬಿಂಬದ ಎಡಬಲಕ್ಕೆ ಗೋಲ ಗೋಲ ಕಲೆ
ಹೋಗಲೇ ಬೇಕು ಕಲುಷಿತ ಛಾಯೆ
ಇದರಲ್ಲಿ ಇರದ ಭಿನ್ನತೆ ಹುಡುಕುವುದೇ ಸೈ
ಈ ಹಸಿರು ಬಟ್ಟೆಯ ಮಗು ಹುಟ್ಟಿತಾದರೂ ಎಲ್ಲಿ?
ಯಾವ ಹಿಂಸೆಯ ಪ್ರತೀಕ, ಯಾವ ಒಡಕಿನ ಕೂಡುವಳಿ,
ಯಾವ ನಿವೇಶದಲ್ಲಿ ದಯೆಯಿರದ ಸಮಯದ ಹಾವಳಿ ಹೀಗೆ?
ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ
ಬೆರಳಲ್ಲಿ ಬೆಳೆಯುತ್ತಲೇ ಇರುವ ಕಲೆ
ತೊಡೆಯುವುದೆ ಛಾಯೆ?
ತಳೆಯುವುದು ಬಹುರೂಪ, ಭಲೆ, ಭಲೆ,
ಮಹಾನ್ ತಲೆ.
ಏಡಿ ತೆವಳುತ್ತದೆ ಮರಳಗುಂಟ, ಗೀಚಿ ಹದಿನೆರಡು ತಿಂಗಳ ದಿನಚರಿ.
ಹೀಗೆ ಗಾಳಿ ಒಂದು ಟೆಲಿಫೋನು ತಂತಿಗುಂಟ ವಾಲಿವಾಲಿ
ತೀಡಿದಂತೆ ಬರಿಯ ಭಾಸ, ಬರಿದೆ ಕಿನಾರೆಯಲ್ಲಿ ಬೆಂಕಿ,
ಕಣ್ಣಿಗಿಲ್ಲದ ಕಾಣ್ಕೆ.