Advertisement
ದೀಪವೂ ಒಂದು ಬಾಗಿಲು!: ದೀಪಾ ಫಡ್ಕೆ ಬರಹ

ದೀಪವೂ ಒಂದು ಬಾಗಿಲು!: ದೀಪಾ ಫಡ್ಕೆ ಬರಹ

ರಾಮ ಬಂದಾಗ ದೀಪ ಹಚ್ಚಿ ಸಂಭ್ರಮಿಸಲಾಯಿತು ಎಂದಿದ್ದು ಮನುಷ್ಯನಿಗಿರಬೇಕಾದ ನೈತಿಕ ಆದರ್ಶದ ಪ್ರತೀಕವಾದ ಪುರುಷೋತ್ತಮ ರಾಮ, ರಾವಣನಂಥ ಅಹಂಕಾರಿಯನ್ನು ಲೋಕಕಂಕಟನನ್ನು ನಾಶ ಮಾಡಿದ ಎನ್ನುವ ಕಾರಣಕ್ಕೆ. ಕರ್ತವ್ಯನಿಷ್ಠೆ, ಜ್ಞಾನದ ಸಾಗರವೇ ಆಗಿದ್ದ ಕೃಷ್ಣನನ್ನೂ ದೀಪಗಳೊಂದಿಗೇ ಸ್ವಾಗತಿಸಿದ್ದು ಪ್ರಕೃತಿಯೇ ಆಗಿದ್ದ ಹೆಣ್ಣು ಮಕ್ಕಳನ್ನು ಹಿಂಸಿಸುತ್ತಾ ಕೂಡಿ ಹಾಕಿದ್ದ ರಾಕ್ಷಸ ನರಕಾಸುರನನ್ನು ವಧಿಸಿ ಅಷ್ಟೂ ಹೆಣ್ಣು ಮಕ್ಕಳನ್ನು ಮುಕ್ತಗೊಳಿಸದ ಎನ್ನುವ ಕಾರಣಕ್ಕೆ. ಹೀಗೆ ದೀಪ ಹಚ್ಚಿದ್ದು ಮುರಿದು ಬಿದ್ದಿದ್ದ ಬದುಕನ್ನು ಹಸನು ಮಾಡಿದ ಕ್ಷಣವನ್ನು ಸಂಭ್ರಮಿಸಲು. ಬದುಕಿನ ಹೊಸಘಟ್ಟವನ್ನು ಸಾಕ್ಷೀಕರಿಸಲು.
ದೀಪಾವಳಿಯ ದೀಪಗಳ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

ನಮಗೆಲ್ಲರಿಗೂ ದೀಪಾವಳಿ ದೊಡ್ಡ ಹಬ್ಬ.  ಹತ್ತು ದಿನಗಳ ದಸರೆಗಿಂತಲೂ ಮೂರೇ ಮೂರು ದಿನಗಳಲ್ಲಿ ಮುಗಿದೇ ಹೋಗುವ ದೀಪಾವಳಿ, ಯಾಕೆ ದೊಡ್ಡ ಹಬ್ಬವೆಂದಾಯ್ತೋ ಗೊತ್ತಿಲ್ಲ! ಆದರೆ ಅದು ಸಂಭ್ರಮ ತುಂಬುವುದಂತೂ ಹೌದು. ವೃತ್ತಿಯಲ್ಲಿರುವವರಿಗೂ, ಬೇರೆ ಯಾವ ಹಬ್ಬಕ್ಕೂ ಸಿಗದೇ ಹೋಗುವ ಬೋನಸ್ಸು ದೀಪಾವಳಿಗೇ ಸಿಗುವ ಕಾರಣ, ಇದು ಖಂಡಿತಾ ದೊಡ್ಡ ಹಬ್ಬವೇ ಆಗಿರಲಿಕ್ಕೂ ಸಾಕು. ಅಥವಾ, ಏನೇ ಮನಸ್ಥಿತಿ, ಪರಿಸ್ಥಿತಿಯಿರಲಿ, ದೀಪದ ಬೆಳಕು ಕಣ್ಣಿನೊಳಕ್ಕೆ ಇಳಿದ ಕೂಡಲೇ, ವೇಗದ ಬೆನ್ನೇರಿ ಕೂತ ನರಮನುಷ್ಯನ ಮನಸ್ಸೂ ಅವಸರವೂ ನಿಧಾನದ ಬೆನ್ನೇರಿದೆ ಎಂಬ ಕವಿವಾಣಿಯಂತೇ ಅರಿವಿಲ್ಲದೇ, ಸ್ವಲ್ಪ ಸ್ವಲ್ಪವೇ ಒಳಗಿನಿಂದ ಕರಗುತ್ತಾ ಕರಗುತ್ತಾ ಬಂದು, ಮನಸ್ಸಿನಲ್ಲಿ ಒಂದು ಸುಸ್ಥಿತಿಯ ಭಾವನೆ ಬಲಿಯಲು ಶುರುವಿಟ್ಟುಕೊಳ್ಳುತ್ತದೆ ಎಂದೋ, ಮನಸ್ಸು ಶಾಂತವಾಗುತ್ತಾ ಸಾಗುತ್ತದೆ ಎಂದೋ! ತಿಳಿಯದು. ಈಗೀಗಂತೂ ದೀಪ, ದೀಪದ ಬೆಳಕು ಇದರ ಬಗ್ಗೆ, ʻಬತ್ತಿ ತನ್ನನ್ನು ಸುಟ್ಟುಕೊಂಡು ಬೆಳಕನ್ನು ಸೂಸುತ್ತದೆʼ ಎಂಬಂಥ ಭಾವನಾತ್ಮಕವಾಗಿ ಸೆಳೆಯುವ ಹತ್ತೆಂಟು ವಿಶೇಷ  ವ್ಯಾಖ್ಯಾನಗಳನ್ನು ಕೇಳಿದ ಮೇಲಂತೂ ದೀಪವೂ ದೀಪಾವಳಿಯೂ ಸ್ವಲ್ಪ ಬೇರೇ ಲೆವೆಲ್ಲಿನ ಹಬ್ಬವಾಗಿಯೂ ಕಾಣುತ್ತದೆ.

ಕ್ರಿಸ್ಮಸ್‌ ಹಬ್ಬದ ನಂತರ ಅತೀ ಹೆಚ್ಚು ಜನರು ಆಚರಿಸುವ ಹಬ್ಬ ದೀಪಾವಳಿಯೇ ಇದ್ದೀತು. ಏಕೆಂದರೆ ಪಟಾಕಿಯನ್ನಂತೂ ಧರ್ಮಾತೀತವಾಗಿ ದೀಪಾವಳಿಯ ಸಮಯದಲ್ಲಿ ಸಿಡಿಸುತ್ತಾರೆ. ಪಟಾಕಿಯೂ ಬೆಳಕನ್ನೇ ತಾನೇ ಹೊರ ಸೂಸುತ್ತಾ ಉರಿಯುವುದು. ಇದೊಂದು ಕಾರಣದಿಂದಲೇ ದೀಪಾವಳಿಯ ಆಚರಣೆ ಧರ್ಮಾತೀತವೆನ್ನಲು ಅಡ್ಡಿಯಿಲ್ಲ. ಜೈನ, ಸಿಖ್‌ ಸಮುದಾಯದ ಜನರೂ ಸೇರಿದಂತೇ ಭಾರತೀಯರು ಪ್ರಪಂಚದ ಯಾವ ಭಾಗದಲ್ಲಿದ್ದರೂ ಬೇರೆ ಯಾವ ಹಬ್ಬವನ್ನು ಮರೆತರೂ ದೀಪಾವಳಿಯನ್ನು ತಪ್ಪದೇ ಆಚರಿಸುತ್ತಾರೆ ಎಂದರೆ ಈ ಹಬ್ಬದ ಆಕರ್ಷಣೆಯೇ ಅಂತಹುದು.

ಮನುಷ್ಯನ ಇತಿಹಾಸದಲ್ಲಿ ಸಹಜ ಬೆಳಕಿನ ಮೂಲವಾದ ಸೂರ್ಯನನ್ನು ಬಿಟ್ಟು, ಬೆಂಕಿಯನ್ನು ಮೊದಲ ಬಾರಿಗೆ ಕಂಡು ಹಿಡಿದ ದಿನವೇ ದೀಪಾವಳಿ ಆಗಿರಲಿಕ್ಕೂ ಸಾಕು. ಆಗ ದೀಪಾವಳಿ ಎನ್ನುವ ಹೆಸರು ಅಂಟಿಸಿಕೊಂಡು ಇರದಿದ್ದರೂ ಮೊದಲ ಬಾರಿಗೆ ಮನುಷ್ಯನ ಕೈಯಾರೆ ಬೆಂಕಿ ಹೊತ್ತಿಸಿದ ಸಂಭ್ರಮ ದೊಡ್ಡದೇ ಅಲ್ಲವೇ! ಪ್ರಾಯಶಃ ಸಂಭ್ರಮಾಚರಣೆ ಎನ್ನುವುದು ಹೀಗೂ ಆರಂಭವಾಗಿರಬಹುದು. ಅದೇ ಮುಂದಿನ ಕಾಲದಲ್ಲಿ ಮುಂದುವರೆದುಕೊಂಡು ಬಂದು ಸಂಭ್ರಮಾಚರಣೆಯೆಂದರೆ ದೀಪಗಳನ್ನು ಹಚ್ಚುವ ಅಭ್ಯಾಸ ಗಟ್ಟಿಯಾಯಿತೋ! ಹೀಗೆ ಸಾವಿರಾರು ವರ್ಷಗಳಿಂದಲೂ ದೀಪಗಳನ್ನು ಹಚ್ಚುತ್ತಾ ಸಂಭ್ರಮಿಸುತ್ತಿದ್ದೇವೆ. ರಾಮ ಬಂದ ಎಂದು ದೀಪ ಹಚ್ಚಿ ರಾಮನ ಬರವನ್ನು ಸಂಭ್ರಮಿಸಲಾಯಿತು. ಇನ್ನು ಕೃಷ್ಣ, ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನಾರು ಸಾವಿರ ಹೆಣ್ಣುಮಕ್ಕಳನ್ನು ದುಷ್ಟ ನರಕನ ಹಿಡಿತದಿಂದ ಬಿಡಿಸಿ ತಂದ ಎಂದೂ ದೀಪ ಹಚ್ಚಿ ಸಂಭ್ರಮಿಸಿದೆವು.  ಹೀಗೆ ಒಂದು ಹೊಸ ಅಧ್ಯಾಯ, ಹೊಸ ಬದಲಾವಣೆಯನ್ನು ದೀಪ ಹಚ್ಚುವ ಮೂಲಕ ಸಾಕ್ಷೀಕರಿಸುತ್ತಾ ಸಾಗಿ ಬಂದಿದ್ದೇವೆ. ಹೀಗಾಗಿ ದೀಪ ಎಂದರೆ ಅದು ಬರೆ ಬೆಳಕು ನೀಡುವ ವಸ್ತುವಿಷಯವಲ್ಲ. ಅದೊಂದು ಪ್ರಮಾಣ. ಅದೊಂದು ಸಾಕ್ಷಿ.  ಅದರ ಬೆಳಕಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಕ್ಕೂ ದೀಪ ಸಾಕ್ಷಿಯೂ ಹೌದು ಎಚ್ಚರವೂ ಹೌದು!  ಅಂದರೆ ಪ್ರತಿ ದೀಪವನ್ನು ಹಚ್ಚಿದಾಗೆಲ್ಲ ಅಲ್ಲೊಂದು ಆ ಕ್ಷಣದಿಂದ ಹೊಸತೇ ಆದ ʻಗತಿʼ ಆರಂಭವಾಗುತ್ತದೆ. ದೀಪ ಹಚ್ಚುವವರೆಗೂ ಇದ್ದ ಕಾಲದಿಂದ ದೀಪ ಬೆಳಗಿದ ತಕ್ಷಣದ ಕಾಲಕ್ಕೂ ಭೂತ ಮತ್ತು ವರ್ತಮಾನ ಎನ್ನುವ ಎರಡು ಕಾಲಗತಿಯ ಭಿನ್ನತೆಯಿದೆ ಎಂದಾದಾಗ ಬೆಳಕಿನ ಮಹತ್ವ ಅರಿವಿಗೆ ಬರತೊಡಗುತ್ತದೆ.

ಭಾಗವತದಲ್ಲೊಂದು ಸಾಲು ಬರುತ್ತದೆ. ʻಏಕಃ ಶುದ್ಧಃ ಸ್ವಯಂಜ್ಯೋತಿರ್ನಿರ್ಗುಣೋsಸೌ ಗುಣಾಶ್ರಯಃ| ಸರ್ವಗೋsನಾವೃತಃ ಸಾಕ್ಷೀ ನಿರಾತ್ಮಾssತ್ಮಾssತ್ಮನಃ ಪರಃ|| ಶುದ್ಧನೂ ಸ್ವಯಂಪ್ರಕಾಶನೂ ಸರ್ವವ್ಯಾಪಕನೂ, ಯಾವುದೇ ಆವರಣವಿಲ್ಲದವನೂ ಆದ ಭಗವಂತ ಎಲ್ಲದಕ್ಕೂ ಸಾಕ್ಷಿಯಾಗಿರುವನು. ಎಲ್ಲದಕ್ಕೂ ಸಾಕ್ಷಿಯಾಗುವವ ಅಂದರೆ ಅದೊಂದು ಎಚ್ಚರವೂ ಹೌದು. ನಮ್ಮೊಳಗಿನ ಅಂತಃಸಾಕ್ಷಿಯೂ ಹೀಗೆ ಇರುತ್ತದೆ ಅಲ್ಲವೇ! ನಾವು ಮಾಡುವ ಪ್ರತಿ ಕೆಲಸಕ್ಕೂ ಆಡುವ ಪ್ರತೀ ಮಾತಿಗೂ ನಮಗಿಂತ ಬೇರೆ ಸಾಕ್ಷಿ ಬೇಕೇ!

ಅಂತಃಸಾಕ್ಷಿ ಎಂದೊಡನೇ ನಮ್ಮ ಬಲೀಂದ್ರ ನೆನಪಾಗುತ್ತಾನೆ. ಎಂಥ ದೊರೆ! ಎಂಥ ಸಮರ್ಪಣೆ! ಮೂರೇ ಮೂರು ಹೆಜ್ಜೆ ಕೇಳಿದ ವಾಮನನ ವಿಶ್ವವ್ಯಾಪಕತೆಯ ಅರಿವಾದ ನಂತರವೂ ಒಂದು ಎಳ್ಳುಕಾಳಿನಷ್ಟೂ ವಿಚಲಿತನಾಗದೇ ಎದೆಯೊಡ್ಡಿ ತಲೆಬಾಗಿಸಿ ನಿಂತ. ಪ್ರಪಂಚದ ಅತಿ ದೊಡ್ಡದಾದುದರ ಮುಂದೆ ತನ್ನನ್ನು ಒಪ್ಪಿಸಿಕೊಳ್ಳುವ ಅವಕಾಶವೆಂದು ಅನಿಸಿತೋ! ದಾನ ಕೊಡುವ ಆನಂದದ ನಿಜ ಅರಿವು ಅವನಿಗಿತ್ತಲ್ಲವೇ? ಹಾಗಾಗಿ ಒಪ್ಪಿಸಿಕೊಂಡ. ಅದರ ಫಲವೆಂದರೆ, ಎಂದೋ, ಯಾವುದೋ ಕಾಲದಲ್ಲಿ, ಕೊಟ್ಟರೆ ಹೀಗೆ ಕೊಡಬೇಕು ಎನ್ನುವಂತೇ ಎಲ್ಲವನ್ನು ಕೊಟ್ಟ ಬಲೀಂದ್ರ, ಇಂದಿಗೂ ವರ್ಷ ವರ್ಷವೂ ಹಿಂದಿರುಗಿ  ಪಡೆಯುತ್ತಿದ್ದಾನೆ. ದೀಪಾವಳಿಯಂದು  ಬಲೀಂದ್ರನಿಗೆ ದೀಪವಿಡದಿದ್ದವರು ಇದ್ದಾರೆಯೇ?

ದೀಪವೊಂದು ನಮ್ಮ ಸುತ್ತ ನಡೆಯುವ ಪ್ರತಿಯೊಂದೂ ಚಟುವಟಿಕೆಗಳಿಗೆ ಮೂಕ ಸಾಕ್ಷಿಯಾಗಿರುವಂತೇ ನಮ್ಮೊಳಗಿನ ಪ್ರಜ್ಞೆ ನಮ್ಮ ಪ್ರತಿಯೊಂದು ಚಲಿಸುವಿಕೆಗೆ, ಅನುಭವಕ್ಕೂ ಸಾಕ್ಷಿಯಾಗಿರುತ್ತದೆ. ಇದಕ್ಕೊಂದು ಉದಾಹರಣೆ ಬಲೀಂದ್ರನೂ ಆಗುತ್ತಾನೆ. ಕರ್ಣನೂ ಆಗುತ್ತಾನೆ. ಯಾವುದನ್ನು ಎಷ್ಟು ಮಾಡಬೇಕು ಎನ್ನುವ ಅರಿವು. ಅಭೇದ್ಯವಾದ ಕವಚವನ್ನೂ ಕರ್ಣ ಕೊಟ್ಟೇ ಕೆಟ್ಟಿದ್ದಲ್ಲವೇ! ಎಂದರೆ ಪ್ರತಿಯೊಂದೂ  ಪ್ರೀತಿ, ದ್ವೇಷ, ಹಟ, ಮದ, ಕಾಮ, ಯಾವ ಭಾವಾತಿರೇಕಗಳು ನಿರಂತರ ಕಾಡುತ್ತಿದ್ದು ಅದರಲ್ಲೇ ತೇಲಿ ಹೋಗುತ್ತಿದ್ದಾಗ ಅದನ್ನು ಯಾವಾಗ ನಿಲ್ಲಿಸಬೇಕು ಎನ್ನುವುದನ್ನು ಮನುಷ್ಯ ಕಲಿಯದೇ ಹೋದ ಸಾಕ್ಷಿಗಳು ಈ ಕತೆಗಳು. ದಾನ ಮಾಡಿಕೊಂಡೇ ಬಂದ ಕರ್ಣನ ಸೋಲನ್ನು ಅವನ ದಾನಬುದ್ಧಿಯೇ ನಿರ್ಧರಿಸಿತು. ಬಲೀಂದ್ರನಿಗೂ ಅವನ ಸಾಮ್ರಾಜ್ಯಕ್ಕೆ ರಕ್ಷಕನಂತಿದ್ದ ಗುರು ಶುಕ್ರಾಚಾರ್ಯರು ಈ ಕುಳ್ಳಗಿನ ದೇಹದೊಳಗೆ ಬಂದವ ಒಂದೇ ಹೆಜ್ಜೆಯಲ್ಲಿ ವಿಶ್ವವನ್ನು ನುಂಗುವವ ಎಂದು ಹೇಳಿದ್ದರೂ ಬಲೀಂದ್ರ ತಾನು ಕೊಟ್ಟೆ ತೀರುವವ ಎಂದು ವಾಮನನ ಕೈಗೆ ದಾನ ಕೊಡುವ ಅರ್ಘ್ಯ ಕೊಟ್ಟ. ತಾನು ಮಾಡುತ್ತಿರುವ ದಾನವೇ ತನ್ನ ಸೋಲಿಗೆ ಅವನತಿಗೆ ವೀಳ್ಯವಾಗುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಲ್ಲಿಸದೇ ಹೋಗುತ್ತಾನೆ.  ಅತೀ ಸಜ್ಜನನಿಗೂ ಇರುವ ಹೆಮ್ಮೆ ಎಂದರೆ ತಾನು ಸಜ್ಜನನೆನ್ನುವುದೇ. ಅತ್ಯಂತ ಉತ್ತಮ ರಾಜ, ಪ್ರಜೆಗಳನ್ನು ಅಕ್ಕರೆಯಿಂದ ಪಾಲಿಸುತ್ತಿದ್ದ ಬಲಿಗೂ ಒಳಗಿನಿಂದ ಅಹಂಕಾರ ಬಲಿಯದೇ ಇದ್ದೀತೇ!  ಅವನೊಳಗಿನ ಚಲಿಸುವಿಕೆ ಅವನಿಗಷ್ಟೇ ಅರ್ಥವಾದೀತು. ಹಿಂದೆಮುಂದೆ ಯೋಚಿಸದೇ ವಾಮನನ ಮುಂದೆ  ತಲೆಬಾಗಿದ.  ಬಲಿಗಾಗಿ ನಾವು ದೀಪವೇನೋ ಹಚ್ಚಿಡುತ್ತಿದ್ದೇವೆ. ಆದರೆ ಅದರ ಹಿಂದಿರುವ ಕತೆಯ ಸಾರವನ್ನು ಸಂಭ್ರಮದಲ್ಲಿ ಮರೆತು ಬಿಡುತ್ತೇವೆ. ನಾವು ಕತೆಗಳನ್ನು ನಂಬುವವರಂತೇ! ಕತೆಗಳಲ್ಲಿರುವ ನಾಯಕರನ್ನೂ ನಂಬುತ್ತೇವೆ. ಆದರೆ ಆ ಕತೆಗಳು ಹೇಳಿದ ಅದರ ಸಾರವನ್ನೇ ಮರೆತು ಬದುಕುತ್ತೇವೆ.  ಹಾಗೆ ಬಹುಷಃ ಇತ್ತೀಚೆಗೆ ನಾವು ಹೆಚ್ಚೆಚ್ಚು ದೀಪಗಳನ್ನು ಉರಿಸುತ್ತಿದ್ದೇವೆ. ಒಳಗಿನ ಕತ್ತಲಿನ ಭಯದಿಂದಲೋ ಏನೋ! ಪ್ರತೀ ರಸ್ತೆಯೂ ಯಾವುದೇ ಹಬ್ಬವಿರಲಿ ಆಚರಣೆಯಿರಲಿ ಹಾದಿಬೀದಿ ತುಂಬ ಕತ್ತಲೆ ಓಡಿಸಲು, ಸೌಂದರ್ಯ ಹೆಚ್ಚಿಸಲು ವಿದ್ಯುದಾಲಂಕಾರದಿಂದ ಬೆಳಕಿನ ಸಾಮ್ಯಾಜ್ಯವನ್ನೇ ಸೃಷ್ಟಿ ಮಾಡಿಕೊಂಡು ಬಿಡುತ್ತೇವೆ. ಮತ್ತು ಆ ಬೆಳಕಿನ ಜಾತ್ರೆಯಲ್ಲಿ ಮುಳಗೇಳುತ್ತಾ ಎಲ್ಲವೂ ಅದ್ಭುತವಾಗಿ ನಡೆಯುತ್ತಿದೆ ಎನ್ನುವಂತೇ ಬದುಕುತ್ತೇವೆ.

ದೀಪದ ಬೆಳಕು ಅರ್ಥಾತ್‌ ಬೆಳಕನ್ನು ಪ್ರಕಟಿಸುವ ದೀಪ ಒಂದು ಹಂತದಿಂದ ಇನ್ನೊಂದರೆಡೆಗೆ ಕರೆದುಕೊಂಡು ಹೋಗುವ ಬಾಗಿಲು. ಸಂಧ್ಯಾದೀಪ ಎನ್ನುತ್ತೇವೆ, ಅಂದರೆ ಸಾಯಂಕಾಲಗಳಲ್ಲಿ ಹಚ್ಚುವ ದೀಪ. ಇದು ನಿತ್ಯದ ಸಂಧಿಕಾಲದ ಬಾಗಿಲು. ಹಗಲನ್ನು ಮುಗಿಸಿ ರಾತ್ರೆಯ ತೆಕ್ಕೆಯೊಳಗೆ ಜಾರುವ ಸಂಧಿಕಾಲವೇ ಸಂಧ್ಯಾ ಕಾಲ. ಅದನ್ನು ಸ್ವಾಗತಿಸುವುದೂ ದೀಪವನ್ನು ಬೆಳಗಿಯೇ. ಹಗಲಿನಲ್ಲಿ ನಡೆದ ಬದುಕಿನ ನಡೆಗಳನ್ನು ವಿಮರ್ಶಿಸುವುದಾದರೆ ಈ ಹೊತ್ತಿನ ದೀಪವೂ ಒಂದು ಹೊಸ ಬಾಗಿಲಾಗುತ್ತದೆ. ಎಷ್ಟೊಂದು ಸಾಕ್ಷಿಗಳು ನಮ್ಮ ದಿನನಿತ್ಯದ ಬದುಕಿನಲ್ಲಿಯೇ. ಹೀಗಿರುವಾಗ ದೀಪಾವಳಿಯ ದಿನದಂದು ಬೆಳಗುವ ಹಲವಾರು ದೀಪಗಳು ಎಷ್ಟೊಂದು ಬಾಗಿಲುಗಳನ್ನು ನಮ್ಮ ಮುಂದೆ ತೆರೆದಿಡುತ್ತಿದೆ ಅಲ್ಲವೇ!

ರಾಮ ಬಂದಾಗ ದೀಪ ಹಚ್ಚಿ ಸಂಭ್ರಮಿಸಲಾಯಿತು ಎಂದಿದ್ದು ಮನುಷ್ಯನಿಗಿರಬೇಕಾದ ನೈತಿಕ ಆದರ್ಶದ ಪ್ರತೀಕವಾದ ಪುರುಷೋತ್ತಮ ರಾಮ, ರಾವಣನಂಥ ಅಹಂಕಾರಿಯನ್ನು ಲೋಕಕಂಕಟನನ್ನು ನಾಶ ಮಾಡಿದ ಎನ್ನುವ ಕಾರಣಕ್ಕೆ. ಕರ್ತವ್ಯನಿಷ್ಠೆ, ಜ್ಞಾನದ ಸಾಗರವೇ ಆಗಿದ್ದ ಕೃಷ್ಣನನ್ನೂ ದೀಪಗಳೊಂದಿಗೇ ಸ್ವಾಗತಿಸಿದ್ದು ಪ್ರಕೃತಿಯೇ ಆಗಿದ್ದ ಹೆಣ್ಣು ಮಕ್ಕಳನ್ನು ಹಿಂಸಿಸುತ್ತಾ ಕೂಡಿ ಹಾಕಿದ್ದ ರಾಕ್ಷಸ ನರಕಾಸುರನನ್ನು ವಧಿಸಿ ಅಷ್ಟೂ ಹೆಣ್ಣು ಮಕ್ಕಳನ್ನು ಮುಕ್ತಗೊಳಿಸದ ಎನ್ನುವ ಕಾರಣಕ್ಕೆ. ಹೀಗೆ ದೀಪ ಹಚ್ಚಿದ್ದು ಮುರಿದು ಬಿದ್ದಿದ್ದ ಬದುಕನ್ನು ಹಸನು ಮಾಡಿದ ಕ್ಷಣವನ್ನು ಸಂಭ್ರಮಿಸಲು. ಬದುಕಿನ ಹೊಸಘಟ್ಟವನ್ನು ಸಾಕ್ಷೀಕರಿಸಲು.

ಬೆಳಕು, ಹಣತೆಯದ್ದೇ ಆಗಲಿ, ವಿದ್ಯುತ್‌ ದೀಪದ್ದೇ ಅಗಲಿ, ಮನಸ್ಸನ್ನು ಬೆಳಗಿಸುತ್ತದೆ.  ಹಬ್ಬಗಳು, ಉತ್ಸವಗಳು, ಜಾತ್ರೆಗಳು ಮಾಡುವ ಉಪಕಾರವೆಂದರೆ ನಿತ್ಯ ಜಂಜಾಟಗಳಿಂದ ಮುಕ್ತರಾಗುವುದಷ್ಟೇ ಅಲ್ಲದೇ  ಇವುಗಳು ಹೇಗೆ, ಯಾವ ಕಾರಣಕ್ಕಾಗಿ ಆರಂಭವಾದವು, ಯಾವ ಉನ್ನತ ಜೀವನಮೌಲ್ಯವನ್ನು ಬದುಕಿದ್ದಾಗಿ ಆಚರಿಸಲು ಪ್ರಾರಂಭವಾದವು ಎನ್ನುವುದನ್ನೂ ನೆನಪಿಸಲೂ ಹಬ್ಬಗಳು ಬರುವುದೂ ಹೌದು.

ದೀಪಾವಳಿ ಹಬ್ಬ ನೆನಪಿಸುವ ನೂರೊಂದು ಕತೆಗಳು, ಹಬ್ಬವನ್ನು ಸಂಭ್ರಮಿಸಲು ಇರುವ  ಆಚರಣೆಗಳು, ಪೂಜೆಗಳು, ಹೊಸ ಬಟ್ಟೆ ವಾಹನ ಹೀಗೆ ಸೌಕರ್ಯಗಳನ್ನು ಹೊಂದುತ್ತಾ ಹೋಗಲು ಪ್ರಚೋದಿಸುವ ಪ್ರಸ್ತುತಕಾಲ, ಹಬ್ಬಗಳ ಒಳಾರ್ಥವನ್ನು ಮರೆತು ಯಾಂತ್ರೀಕೃತ ಕಣ್ಣು ಕೋರೈಸುವ ಸಂಭ್ರಮಾಚರಣೆಯನ್ನು ಮಾತ್ರ ನಡೆಸದೇ ಹೊಸ ಬೆಳಕಿನ ಬಾಗಿಲಿನತ್ತ ಕರೆದೊಯ್ಯುವ ಸಂದರ್ಭವಾಗಲಿ. ಹಣತೆ, ಹಚ್ಚೋಣ ನಾವೆಲ್ಲರೂ. ಜಗತ್ತಿನ ವಿಷಮತೆ ಕುಗ್ಗುತ್ತಾ ಹೋಗಲಿ ಎನ್ನುವುದಕ್ಕಾಗಿ. ಹಣತೆ ಹಚ್ಚೋಣಾ, ನೆಮ್ಮದಿಯ ಸುಭಿಕ್ಷದ ಜಾಗವಾಗಲಿ ಈ ಜಗತ್ತು ಎನ್ನುವ ಆಶಾಭಾವನೆಯೊಂದಿಗೆ..

About The Author

ದೀಪಾ ಫಡ್ಕೆ

ದೀಪಾ ಫಡ್ಕೆ ಬೆಂಗಳೂರು ನಿವಾಸಿ. ಹರಿದಾಸ ಸಾಹಿತ್ಯದಲ್ಲಿ ಅಧ್ಯಯನ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ದೀಪಾ ಚಂದನ ಮತ್ತು ಉದಯ ಟಿವಿಯಲ್ಲಿ ಹಲವು ವರ್ಷಗಳ ಕಾಲ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ