”ಸುತ್ತಲಿನ ಗಾಳಿಯಲ್ಲೆಲ್ಲ ಇಷ್ಟವಾಗುವ ಗಂಡುಗಂಧವಿತ್ತು. ಇವತ್ತು ರಾತ್ರಿ ಎಮಿಲಿಯಲ್ಲಿ ಏನೋ ವಿಶೇಷವಿತ್ತು. ಗಾಂಭೀರ್ಯದ ಸ್ಪರ್ಶ, ಅಂತರಂಗದ ರಾಸಾಯನಿಕ ಆಕರ್ಷಣೆ–ಮಕ್ಕಳಾಟದ ಪಝಲ್ ನ ಎರಡು ತುಂಡು ತಟಕ್ಕನೆ ಸರಿಹೊಂದುತ್ತದಲ್ಲ ಹಾಗೆ. ಚೆಲುವಾದ ಮುಖ, ಕಪ್ಪು ಕೂದಲು, ದೊಡ್ಡ ಕಪ್ಪು ಕಣ್ಣು, ನೇರ ಮೂಗು, ತುಟಿಯ ಒಂದು ಪಕ್ಕದಲ್ಲಿ ಮಾತ್ರ ಮಿನುಗುವ ಕಿರು ನಗು, ತುಂಬ ಸೂಕ್ಷ್ಮವಾದ ನೀಟಾದ ಕೈ ಅವನವು”
ಪ್ರೊಫೆಸರ್ ಓ.ಎಲ್. ನಾಗಭೂಷಣ ಸ್ವಾಮಿಯವರು ಅನುವಾದಿಸಿದ ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಮೂರನೆಯ ಕಂತು.

 

ಎಮಿಲಿ ಅಗೋ; ಅದು ಅವನ ಹೆಸರು. ಏನು ಹೇಳಲಿ? ಶನಿವಾರ ಒಂಬತ್ತು ಗಂಟೆಗೆ ಫೋನು ಮಾಡಿದ್ದ, ಅವತ್ತು ಬೆಳಗ್ಗೆ ಎರಡು ವಿಸ್ಡಂ ಹಲ್ಲು ಕೀಳಿಸಿಕೊಂಡು ಬಂದು ವೀಕ್ ಆಗಿದ್ದೆ ಅನ್ನಬಹುದು. ನಾವಿಬ್ಬರೂ ಡಬಲ್ ಡೇಟಿಂಗ್ ಗೆ ಹೋಗಿದ್ದೆವು, ಮಿಕ್ಕವರೆಲ್ಲ ಬಿಯರ್ ಕುಡಿಯುತಿದ್ದಾಗ ನಾನು ಐದು ಗ್ಲಾಸು ಜಿಂಜರ್ ಏಲ್ ಕುಡಿದೆ, ಬಾಯೆಲ್ಲ ಝುಂ ಅನಿಸುತಿತ್ತು ಅನ್ನಬಹುದು. ಅಲ್ಲ, ಇದು ಯಾವುದೂ ಅಲ್ಲ. ಆಗಿದ್ದು ಹೀಗೆ: ನಿಧನಿಧಾನವಾಗಿ ಡ್ರೆಸ್ಸು ಮಾಡಿಕೊಂಡೆ, ಹಾಕಿಕೊಂಡ ಡ್ರೆಸ್ಸು ನಿಧಾನ ಸವರಿ ಸವರಿ ಸರಿಮಾಡಿಕೊಂಡೆ, ಪೌಡರ್ ಹಾಕಿಕೊಂಡೆ, ಪರ್ಫ್ಯೂಮು ಹಚ್ಚಿಕೊಂಡೆ, ಮಹಡಿಯ ಮೇಲೆ ಕೂತಿದ್ದೆ. ತಣ್ಣನೆಯ ಮಂಕು ಮುಸ್ಸಂಜೆ. ಹೊರಗೆ ಸಣ್ಣದಾಗಿ ಮಳೆ. ಮನೆಯವರೆಲ್ಲ ಕೆಳಗೆ ವರಾಂಡದಲ್ಲಿ ಕೂತು ಮಾತಾಡುತ್ತ ನಗುತಿದ್ದಾರೆ.

ಇವಳು ಅಮೆರಿಕನ್ ಕನ್ಯೆ. ಇವಳು ನಾನು. ಗಂಡಸರನ್ನು ಮರುಳುಮಾಡುವುದಕ್ಕೆ ಅಲಂಕಾರ ಮಾಡಿಕೊಳ್ಳುತ್ತಿರುವಳು. ಇವತ್ತು ಸಂಜೆ ದೇಹ ಸುಖ ಸಿಕ್ಕೀತು. ನಾವು ಡೇಟಿಂಗ್ ಹೋಗುತೇವೆ, ಚಿನ್ನಾಟ ಆಡುತ್ತೇವೆ, ಒಳ್ಳೆಯ ಹುಡುಗಿಯರಾದರೆ ಸಮಯ ನೋಡಿ ನಾಚಿಕೊಳ್ಳುತೇವೆ. ಹೀಗೇ. ಬಾರ್ ಗೆ ಹೋದೆವು. ಇಬ್ಬಿಬ್ಬರು ಒಂದೊಂದು ಕಡೆ ಕೂತೆವು.

ಎಮಿಲಿ ಮತ್ತೆ ನಾನು ಇಬ್ಬರೂ ಅಪರಿಚಿತರು. ಅಪರಿಚಿತತೆಯನ್ನು ಉಜ್ಜಿಹಾಕಬೇಕಾಗಿತ್ತು. ಮಾತು ಶುರು ಮಾಡಿದೆವು. ಅವತ್ತು ಬೆಳಗ್ಗೆ ಅವನು ಹೋಗಿದ್ದ ಅಂತ್ಯ ಸಂಸ್ಕಾರ, ಬೆನ್ನು ಮುರಿದುಕೊಂಡು ಪ್ಯಾರಲಿಸಿಸ್ ಆಗಿರುವ ಇಪ್ಪತ್ತು ವರ್ಷದ ಕಸಿನ್, ಹನ್ನೆರಡನೆಯ ವಯಸಿನಲ್ಲಿ ನ್ಯುಮೋನಿಯ ಬಂದು ತೀರಿಕೊಂಡ ತಂಗಿ ಇವೆಲ್ಲ ವಿಷಯ ಮಾತಾಡಿದ. ‘ಥೂ ಜಡ್ಡು ಹಿಡಿದವರ ಹಾಗಿದೇವೆ ಇವತ್ತು ರಾತ್ರಿ’ ಅಂದ. ಮತ್ತೆ ‘ನನಗೆ ಯಾವಾಗಲೂ ಏನಿಷ್ಟ… ಅಲ್ಲ ಏನಿಷ್ಟಪಡಬೇಕು ಅಂತ ಆಸೆ ಗೊತ್ತಾ? ಕಪ್ಪು ಕಣ್ಣು, ಬಂಗಾರಬಣ್ಣದ ಕೂದಲು,’ ಅಂದ. ಸಣ್ಣಪುಟ್ಟ ವಿಚಾರ; ಅವವೇ ಪದಗಳನ್ನ ಮತ್ತೆ ಮತ್ತೆ ಹೇಳುತಿದ್ದರೆ ಅರ್ಥ ಹೇಗೆ ಕಳೆದು ಹೋಗುತ್ತದೆ; ಒಬ್ಬೊಬ್ಬರ ಪಕ್ಕಾ ಪರಿಚಯ ಆಗುವ ತನಕ ಎಲ್ಲ ನೀಗ್ರೋಗಳೂ ಒಂದೇ ಥರ ಕಾಣತಾರೆ, ಅಲ್ಲವಾ; ನಾವು ಬೆಸ್ಟ್ ಆಗಿರುವ ಕಾಲವನ್ನೇ ಯಾವಾಗಲೂ ಇಷ್ಟಪಡತೇವಲ್ಲಾ ಅಂತೆಲ್ಲ ಮಾತಾಡಿದೆವು.

‘ಆ ವಾರ್ರೀಯನ್ನ ನೋಡಿದರೆ ಅಯ್ಯೋ ಅನಿಸತ್ತೆ, ಆಮ್ ಹರ್ಸ್ಟ್ ಕಾಲೇಜು ಮುಗಿಸಿದ, ಇನ್ನ ಜೀವನ ಪೂರ್ತಿ ದುಡಿಯಬೇಕು. ನನ್ನ ಪಾಲಿಗೆ ಇನ್ನು ಎರಡೇ ವರ್ಷ ಕಾಲೇಜು…’ ಅಂದ.
‘ಹೌದಪ್ಪಾ, ಹುಟ್ಟಿದ ಹಬ್ಬ ಅಂದರೆ ಭಯವಾಗತ್ತೆ.’
‘ಆಗಿರುವ ವಯಸಿಗಿಂತ ಚಿಕ್ಕವಳ ಹಾಗೆ ಕಾಣುತ್ತೀಯ.’
‘ವಯಸ್ಸಾಗುವುದನ್ನು ಜನ ಹೇಗೆ ಸಹಿಸಿಕೊಳ್ಳತಾರೋ. ಮೈಯೊಗೆಲ್ಲ ಒಣಗಿ ಹೋಗತ್ತೆ. ವಯಸ್ಸಿನಲ್ಲಿರುವಾಗ ನಮ್ಮ ಕಾಲಮೇಲೆ ನಾವು ಅನ್ನುವ ವಿಶ್ವಾಸ ಇರತ್ತೆ. ಧರ್ಮ, ಗಿರ್ಮ ಬೇಕಾಗಲ್ಲ.’
‘ನೀನು ಕ್ಯಾಥೊಲಿಕ್ಕಾ?’ ನಾನು ಕ್ಯಾಥೊಲಿಕ್ ಆಗಿರುವುದು ಸಾಧ್ಯವೇ ಇಲ್ಲ ಅನ್ನುವ ದನಿಯಲ್ಲಿ ಕೇಳಿದ.
‘ಉಹ್ಞೂಂ. ನೀನು?’ ಅಂದೆ
‘ಹ್ಞೂಂ,’ ಅಂದ, ದನಿ ತಗ್ಗಿಸಿ.
ಹೀಗೇ ಇನ್ನೂ ಹರಟೆ ಇನ್ನೂ ನಗು, ಇನ್ನೂ ಓರೆನೋಟ, ಒಂದೊಂದೂ ಗೆಲುವಿನ ಖುಷಿ ಹೆಚ್ಚಿಸುವ ಆದರೆ ಬಾಯಿಬಿಟ್ಟು ಆಡದ ಮೈ-ಮೈ ತಾಕು ಇನ್ನಷ್ಟು.

ಸುತ್ತಲಿನ ಗಾಳಿಯಲ್ಲೆಲ್ಲ ಇಷ್ಟವಾಗುವ ಗಂಡುಗಂಧವಿತ್ತು. ಇವತ್ತು ರಾತ್ರಿ ಎಮಿಲಿಯಲ್ಲಿ ಏನೋ ವಿಶೇಷವಿತ್ತು. ಗಾಂಭೀರ್ಯದ ಸ್ಪರ್ಶ, ಅಂತರಂಗದ ರಾಸಾಯನಿಕ ಆಕರ್ಷಣೆ–ಮಕ್ಕಳಾಟದ ಪಝಲ್ ನ ಎರಡು ತುಂಡು ತಟಕ್ಕನೆ ಸರಿಹೊಂದುತ್ತದಲ್ಲ ಹಾಗೆ. ಚೆಲುವಾದ ಮುಖ, ಕಪ್ಪು ಕೂದಲು, ದೊಡ್ಡ ಕಪ್ಪು ಕಣ್ಣು, ನೇರ ಮೂಗು, ತುಟಿಯ ಒಂದು ಪಕ್ಕದಲ್ಲಿ ಮಾತ್ರ ಮಿನುಗುವ ಕಿರು ನಗು, ತುಂಬ ಸೂಕ್ಷ್ಮವಾದ ನೀಟಾದ ಕೈ ಅವನವು. ಡಾನ್ಸು ಮಾಡುವಾಗ ನನ್ನ ಅಪ್ಪಿ ಹಿಡಿದಿದ್ದ. ನನ್ನ ಹೊಟ್ಟೆಗೆ ತಾಕುತಿದ್ದ ಅವನ ಗಡುಸಾಗಿರುವ ಅಂಗ, ಅವನೆದೆಗೆ ಒತ್ತಿ ನೋಯುತ್ತಿರುವ ನನ್ನ ಮೊಲೆ… ಬೆಚ್ಚನೆಯ ದ್ರಾಕ್ಷಾರಸ ನನ್ನೊಳಗೆಲ್ಲ ನುಗ್ಗಿ ಹರಿಯುತ್ತಿರುವ ಹಾಗೆ, ನನ್ನ ಕೂದಲಲ್ಲಿ ಮುಖವಿಟ್ಟು ನಯವಾಗಿ ಉಜ್ಜಾಡಿದ. ನನ್ನ ಕೆನ್ನೆ ಮೇಲೆ ಮುತ್ತಿಟ್ಟ.

‘ನನ್ನ ಕಡೆ ನೋಡಬೇಡ. ಈಗ ತಾನೇ ಸ್ವಿಮಿಂಗ್ ಪೂಲಿನಿಂದ ಬಂದಿದೇನೆ. ಮೈ ವದ್ದೆಯಾಗಿದೆ, ಬಿಸಿಯಾಗಿದೆ.’ (ದೇವರೇ! ಇದೆಲ್ಲ ಹೀಗೇ ಇರತ್ತೆ ಅಂದುಕೊಂಡಿದ್ದೆ.) ತೀಕ್ಷ್ಣವಾಗಿ ನನ್ನ ನೋಡುತಿದ್ದ. ಹುಡುಕು ನೋಟ. ನಮ್ಮ ಕಣ್ಣು ಸೇರಿದವು. ಮುಳುಗಿ ಹೋದೆ ಅನಿಸಿತು, ಎರಡು ಸಾರಿ. ತಟ್ಟನೆ ತನ್ನ ಕಣ್ಣು ಹೊರಳಿಸಿದ. ವಾರ್ರೀ ಮನೆಗೆ ಹೋಗುವಾಗ, ಮಧ್ಯರಾತ್ರಿಯ ಹೊತ್ತಿನಲ್ಲಿ, ಕಾರಿನಲ್ಲಿ, ಎಮಿಲಿ ಮುತ್ತಿಟ್ಟ. ಅವನ ವದ್ದೆ ಬಾಯಿ ಮೃದುವಾಗಿ ನನ್ನ ಬಾಯಲ್ಲಿ. ವಾರ್ರೀ ಮನೆಯಲ್ಲಿ ಇನ್ನಷ್ಟು ಜಿಂಜರ್ ಏಲ್, ಇನ್ನಷ್ಟು ಬಿಯರ್, ವೆರಾಂಡದಿಂದ ಬೀಳುತಿದ್ದ ಬೆಳಕಿನಲ್ಲಿ ಮತ್ತಷ್ಟು ಡಾನ್ಸ್. ಎಮಿಲಿಯ ಮೈ ಬೆಚ್ಚಗಿತ್ತು, ದೃಢವಾಗಿತ್ತು, ನನ್ನ ಮೈಗೆ ಒತ್ತುತ್ತ ಕೆರಳಿಸುವ ಸಂಗೀತಕ್ಕೆ ತಕ್ಕ ಹಾಗೆ ಹಿಂದೆ ಮುಂದೆ ತೂಗುತಿತ್ತು. (ಡಾನ್ಸು ಅನ್ನುವುದು ಕೂಟಕ್ಕೆ ಮುನ್ನುಡಿ. ನಾವು ಚಿಕ್ಕವರಾಗಿದ್ದಾಗ, ಡಾನ್ಸ್ ಕ್ಲಾಸಿಗೆ ಹೋಗುವಾಗ, ಅರ್ಥವಾಗುವುದಿಲ್ಲ. ಈಗ ತಟ್ಟನೆ ಹೀಗೆ.

ಎಮಿಲಿ ಮತ್ತೆ ನಾನು ಇಬ್ಬರೂ ಅಪರಿಚಿತರು. ಅಪರಿಚಿತತೆಯನ್ನು ಉಜ್ಜಿಹಾಕಬೇಕಾಗಿತ್ತು. ಮಾತು ಶುರು ಮಾಡಿದೆವು. ಅವತ್ತು ಬೆಳಗ್ಗೆ ಅವನು ಹೋಗಿದ್ದ ಅಂತ್ಯ ಸಂಸ್ಕಾರ, ಬೆನ್ನು ಮುರಿದುಕೊಂಡು ಪ್ಯಾರಲಿಸಿಸ್ ಆಗಿರುವ ಇಪ್ಪತ್ತು ವರ್ಷದ ಕಸಿನ್, ಹನ್ನೆರಡನೆಯ ವಯಸಿನಲ್ಲಿ ನ್ಯುಮೋನಿಯ ಬಂದು ತೀರಿಕೊಂಡ ತಂಗಿ ಇವೆಲ್ಲ ವಿಷಯ ಮಾತಾಡಿದ.

‘ಕೂತುಕೊಳ್ಳಣಾ,’ ನನ್ನತ್ತ ಬಗ್ಗಿ ಎಮಿಲಿ ಕೇಳಿದ. ಬೇಡ ಅನ್ನುವ ಹಾಗೆ ತಲೆ ಆಡಿಸಿದೆ. ‘ಬೇಡವಾ? ಹಾಗಾದರೆ, ಸ್ವಲ್ಪ ನೀರು? ಆರಾಮ ಇದೀಯಾ?’ (ಆರಾಮ. ಹ್ಞಾ, ಹೌದು, ಥ್ಯಾಂಕ್ಸ್). ನನ್ನನ್ನ ಅಡುಗೆಮನೆಗೆ ಕರಕೊಂಡು ಹೋದ. ಹೊರಗೆ ಮಳೆಯ ಸದ್ದು. ಕೂತು, ಅವನು ತಂದುಕೊಟ್ಟ ನೀರು ಹೀರಿದೆ. ಅವನು ನನ್ನತ್ತ ಬಗ್ಗಿ ನೋಡುತಿದ್ದ. ಅಲ್ಲಿದ್ದ ಅರೆ-ಬೆಳಕಿನಲ್ಲಿ ಅವನ ಆಕಾರ ಅಸಾಮಾನ್ಯವಾಗಿ ಕಾಣುತಿತ್ತು. ಗ್ಲಾಸು ಕೆಳಗಿಟ್ಟೆ. ‘ಬೇಗ ಮುಗಿಸಿಬಿಟ್ಟೆ,’ ಅಂದ. ‘ಇನ್ನೂ ನಿಧಾನ ಕುಡಿಯಬೇಕಿತ್ತಾ?’ ಎದ್ದು ನಿಂತೆ. ಅವನ ಮುಖ ನನಗೆ ಹತ್ತಿರವಾಯಿತು. ಅವನ ತೋಳು ನನ್ನ ಬಳಸಿದವು.

ಸ್ವಲ್ಪ ಹೊತ್ತಾದಮೇಲೆ ಅವನನ್ನ ದೂರ ತಳ್ಳಿದೆ. ‘ಮಳೆ ಚೆನ್ನಾಗಿ ಬರತಾ ಇದೆ. ಒಳಗೆಲ್ಲ ತಂಪು, ಆರಾಮ ಅನಿಸತ್ತೆ, ಸುಮ್ಮನೆ ಕೇಳಿಸಿಕೊಂಡರೆ ಸಾಕು.’ ನಾನು ವಾಶ್ ಬೇಸಿನ್ನಿಗೆ ಒರಗಿದ್ದೆ. ಎಮಿಲಿ ಹತ್ತಿರವಿದ್ದ. ಬೆಚ್ಚಗಿದ್ದ. ಕಣ್ಣು ಹೊಳೆಯುತಿದ್ದವು. ತುಟಿ ಆಸೆ ಹುಟ್ಟಿಸುವ ಹಾಗಿತ್ತು. ‘ನನ್ನ ಮೈ ಕಂಡರೆ ನಿನಗೆ ಆಸೆ, ಮತ್ತಿನ್ನೇನೂ ಬೇಡ ನಿನಗೆ,’ ಬೇಕೆಂದೇ ಹಾಗಂದೆ. ಯಾವ ಹುಡುಗನಾದರೂ ‘ಅಲ್ಲಾ, ತಪ್ಪು,’ ಅನ್ನತಾನೆ. ಯಾವನೇ ಧೈರ್ಯವಂತ ಹುಡುಗ, ಯಾವನೇ ಧೈರ್ಯವಂತ ಸುಳ್ಳುಗಾರ ಹಾಗನ್ನತಾನೆ. ಆದರೆ ಎಮಿಲಿ ನನ್ನ ಅಲ್ಲಾಡಿಸಿಬಿಟ್ಟ. ‘ಗೊತ್ತಾ, ಹಾಗನ್ನಬಾರದಾಗಿತ್ತು ನೀನು. ಗೊತ್ತಾ, ಗೊತ್ತಾ? ಸತ್ಯ ಯಾವಾಗಲೂ ನೋಯಿಸತ್ತೆ,’ ಅಂದ (ಕ್ಲೀಶೆಗಳು ಕೂಡ ಒದಗಿಬರುತ್ತವೆ). ಹಲ್ಲು ಕಾಣುವ ಹಾಗೆ ನಕ್ಕ.

‘ಮನಸ್ಸು ಕಹಿ ಮಾಡಿಕೊಳ್ಳಬೇಡ. ನಾನು ಹಾಗಲ್ಲ. ವಾಶ್ ಬೇಸಿನ್ ಬಿಟ್ಟು ಈ ಕಡೆ ಬಾ, ಹುಷಾರು.’ ಹಿಂದೆ ಸರಿದ. ನನ್ನನ್ನು ತನ್ನತ್ತ ಎಳೆದುಕೊಂಡ. ಸವಿಯಾಗಿ ಮುತ್ತಿಟ್ಟ, ಬಹಳ ಹೊತ್ತು. ‘ಸತ್ಯ ಯಾವಾಗಲೂ ನೋಯಿಸಲ್ಲ, ನೋಡಿದೆಯಾ?’ ಅಂದ. ಹೊರಟೆವು. ಮಳೆ ಜೋರಾಗಿತ್ತು. ಕಾರಿನಲ್ಲಿ ನನ್ನ ಸುತ್ತ ತೋಳು ಬಳಸಿದ. ನನ್ನ ತಲೆಗೆ ತಲೆ ಒರಗಿಸಿದ. ನೀರು ಕತ್ತಲಲ್ಲಿ ಮಸುಕಾದ ನೀರಿನ ಹಾಗೆ ದ್ರವವಾಗಿ ನಮ್ಮ ಕಡೆ ನುಗ್ಗಿ ಬರುವ ಬೀದಿ ದೀಪಗಳ ಸಾಲು ಸಾಲು ನೋಡಿದೆವು. ತವಮನೆ ಬಂದಾಗ ಕಾರಿಳಿದು ಓಡಿದೆವು, ಒಳಗೆ ಬಂದು ನೀರು ಕುಡಿದ, ನನಗೆ ಗುಡ್ ನೈಟ್ ಮುತ್ತಿಟ್ಟ. ನನ್ನೊಳಗಿನ ಏನೋ ಅವನನ್ನು ಬಯಸುತ್ತಿದೆ. ಯಾಕೆ ಅನ್ನುವುದು ಗೊತ್ತಿಲ್ಲ. ಕುಡಿಯುತ್ತಾನೆ, ಸಿಗರೇಟು ಸೇದುತ್ತಾನೆ, ಮತ್ತೆ ಅವನು ಕ್ಯಾಥೊಲಿಕ್. ಒಬ್ಬಳಲ್ಲ ಅಂತ ಹಲವು ಹುಡುಗಿಯರ ಬೆನ್ನು ಬಿದ್ದಿದ್ದಾನೆ… ನನಗೆ ಬೇಕು ಅವನು. ‘ಚೆನ್ನಾಗಿತ್ತು ಅಂತ ಬಾಯಿ ಬಿಟ್ಟು ಹೇಳಬೇಕಾಗಿಲ್ಲ.’ ‘ಅದ್ಭುತವಾಗಿತ್ತು.’ ಅನ್ನುತ್ತ ನಕ್ಕ. ‘ಫೋನು ಮಾಡತೇನೆ, ಟೇಕ್ ಕೇರ್,’ ಅಂದ. ಹೊರಟು ಹೋದ. ನನ್ನ ರೂಮಿನಾಚೆ ಮಳೆ ಜೋರಾಗಿದೆ. [ರಾಕ್ ಸಂಗೀತಗಾರ ಎಡ್ಡಿ ಕೋಹೆನ್ ಹಾಗೆ] ‘ಹದಿನೈದು ಸಾವಿರ ವರ್ಷವಾದರೇನು, ನಾವು ಪ್ರಾಣಿಗಳಲ್ಲದೆ ಇನ್ನೇನು’ ಅಂತ ಹೇಳಿಕೊಂಡೆ. ಎಮಿಲಿ ತನ್ನ ರೂಮಿನಲ್ಲಿ ಎಲ್ಲೋ ಮಳೆ ಸದ್ದು ಕೇಳುತ್ತ ಮಲಗಿರುತ್ತಾನೆ. ಏನು ಯೋಚನೆ ಮಾಡುತಿದ್ದಾನೋ, ದೇವರಿಗೇ ಗೊತ್ತು.

ನೀರು-ದಾಟು
ಕೊಳ ಕಪ್ಪು, ಕೊಳದ ನೀರು ಕಪ್ಪು, ದೋಣಿ ಕಪ್ಪು,
ದೋಣಿಯೊಳಗಿನ ಇಬ್ಬರು ಕಪ್ಪು ಕಾಗದ ಕತ್ತರಿಸಿ ಮಾಡಿದ ಬೊಂಬೆಗಳ ಹಾಗೆ.
ಈ ನೀರು ಹೀರುವ ಕಪ್ಪು ಮರಗಳ ತೋಪು ಹೋಗುವುದೆಲ್ಲಿಗೆ?
ಮರದ ನೆರಳು ಇಡೀ ಕೆನಡಾದಲ್ಲಿ ಹರಡೀತು.

ಒಂದಿಷ್ಟು ಬೆಳಕು ಸೋಸಿ ಬರುತಿದೆ ನೈದಿಲೆಗಳಿಂದ
ಏನು ಆತುರ, ಬೇಡ, ಬೇಡ ಆತುರವೆಂದು ಜೊಂಡುಗೈ ತಡೆದಿವೆ
ಕಪ್ಪು ಎಲೆಗಳ ಕಪ್ಪು ಉಪದೇಶ

ದೋಣಿ ಹುಟ್ಟಿನಿಂದ ತೊಟ್ಟಿಕ್ಕುವ
ತಣ್ಣಗೆ ಕೊರೆವ ಒಂದೊಂದು ಹನಿಯಲ್ಲೂ ಒಂದೊಂದು ಲೋಕ
ಕಪ್ಪು ಆತ್ಮ ನಮ್ಮೊಳಗಿದೆ, ಮೀನಿನೊಳಗಿದೆ,
ಹುಳುವಿರದ ಗಾಳ ಸಟ್ಟನೆ ಎಳಕೊಳ್ಳುವ ಮಂಕು ಕೈ ಮಂಗಳ ಹಾಡಿದೆ

ನೈದಿಲೆಯಲ್ಲಿ ನಕ್ಷತ್ರ ಮಿನುಗಿವೆ
ಭಾವವಿರದ ಇಂಥ ಸೈರೆನ್ನುಗಳನ್ನು ಕಂಡು ಕುರುಡಾಗುವುದಿಲ್ಲವೇ?
ದಿಗ್ಭ್ರಾಂತ ಆತ್ಮಗಳ ಮೌನ ಇದು.

ಮೂಲ ಕವಿತೆ  Crossing the Water ಓದಲು ಇಲ್ಲಿ ಕ್ಲಿಕ್ ಮಾಡಿ