ಹೌದೇನೇ ನಿ.?

ಹೌದು ಕಣೇ ನಿ…
ಈ ಜಗದ
ಅಗಲಕಂಗಳ ಅಸಂಖ್ಯಾತ
ಚೆಲುವೆಯರೆಲ್ಲಾ
ಅಪಾತ್ರನನ್ನೇ ಪ್ರೀತಿಸಬೇಕಾದ
ತಮ್ಮ ಅನಿವಾರ್ಯತೆಯ ಕುರಿತು
ಹಣೆ ನಿರಿಗೆ ಹೆಚ್ಚಿಸಿಕೊಳ್ಳುತ್ತ
ಅಸಹಾಯಕರಾಗಿ
ಸತ್ಪಾತ್ರ ದಾನಕ್ಕೆ
ಮನಸ್ಸು ಮಾಡುತ್ತಾರೆ.

ಅಚಾನಕ್ಕು ಸತ್ ಸತ್ತು
ತಿರುವಿನಲ್ಲಿ ಪಾತ್ರ ಮಾತ್ರ ಉಳಿದು
ಹರಿದ
ಕನಸುಗಳನ್ನು
ನೀರು ಚಿಮುಕಿಸಿಕೊಂಡ
ನಗುವಿನೊಂದಿಗೆ ಮತ್ತೆ
ಹೊಲೆದುಕೊಳ್ಳುತ್ತಾರೆ.

ಮತ್ತೆಂದೂ ಆ ಕೊಳದ ಬಳಿ
ಸುಳಿಯಲಾರೆ ಎನ್ನುತ್ತಲೆ
ಹೊತ್ತು ಹೋಗದ ಹೊತ್ತಿನಲ್ಲಿ
ಮತ್ತೆ ಬರುತ್ತಾರೆ.
ಆತ್ಮ ಬೆತ್ತಲಾಗಿಸಿಕೊಂಡು
ಅಂತರದ ಅರ್ಥ ಕಳೆದು
ಪರಿಮಳದ ನಗು ಮುಡಿದು
ಒಂದು ಉದ್ಧರಣೆ ಗಂಗೆ ಚೆಲ್ಲಿ
ನಮಮ ನಮಮ…

ಪಡೆದ ದಾನಕ್ಕೆ ಬದಲಾಗಿ ಪಾತ್ರಗಳು
ಹರಸಿಹೋದ ಕಲೆಗಳ ನೇವರಿಸಿ
ಇಳಿಸಂಜೆ ವೇಳೆಯಲ್ಲಿ
ಆರದ ಉಪ್ಪುಪ್ಪು ದೀಪ ಹಚ್ಚಿ
ಉಪಹಾರಕ್ಕೆ ಅಣಿಮಾಡಿ
ಮುರಿದು ಹೋಗುವ ಹಾಗೆ
ಕರೆಗಂಟೆ ಕರೆದಾಗ
ಬಂದೇ ರೀ
ಎನ್ನುತ್ತಾಳೆ.

ಅಗಲ ಕಂಗಳ ಒಳಗೆ
ಈ ರಾತ್ರಿಯಾದರೂ
ಒಂದು ಬಣ್ಣದ ಮಾತು
ಕೇಳುವ;
ಮಾತು ಮೀರದ
ಮಡದಿಯಾಗುವ ಆಸೆ
ಹೆಚ್ಚಾದ ಸಮಯದಲ್ಲೇ
ಪಾತ್ರ, ಅಪಾತ್ರ, ಸತ್ಪಾತ್ರಗಳು
ಐಕ್ಯವಾದ ಬಗೆಯೊಂದು
ಕಣ್ಣು ಮಿಟುಕಿಸಿ
ನಕ್ಕಾಗ ಝಲ್ಲೆಂದ ಎದೆಗೆ
ಅಕ್ಟೋಪಸ್ಸಿನ ಕುರಿತು
ಭಯವೇ ಇಲ್ಲವಂತೆ..
ಹೌದೇನೇ ನಿ.?

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.