ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ. ಗಾಂಧಿಯನ್ನು ಮರೆತ ನವಭಾರತದ ಮನುಷ್ಯ. ದಾರಿಯಂಚಿನಲ್ಲಿ ಸಿಕ್ಕ ಗೋಡ್ಸೆಯ ಹೆಗಲಿಗೆ ಕೈ ಹಾಕಿ ನಡೆಯುತ್ತಾ ಏನೇನೋ ಹರಟುತ್ತ ಎತ್ತಲೋ ಮಾಯವಾಗುವುದು ಗಾಂಧಿಯ ಚಿತ್ರ.
ನದೀಮ ಸನದಿಯವರ ಚೊಚ್ಚಲ ಕವನ ಸಂಕಲನ “ಹುಲಿಯ ನೆತ್ತಿಗೆ ನೆರಳು” ಕುರಿತು ಆರ್ ವಿಜಯರಾಘವನ್ ಬರಹ

 

ನದೀಮ ಸನದಿ ಬೆಳಗಾವಿ ಸಮೀಪದ ಶಿಂದೊಳ್ಳಿ ಗ್ರಾಮದವರು. ಇವರು ನಿರ್ಮಾಣ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈಚಿನ ದಶಕಗಳಲ್ಲಿ ಭಾಷಾ ವಿದ್ಯಾರ್ಥಿಗಳ ಹೊರತಾಗಿ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳೂ ಸಾಹಿತ್ಯವನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಸ್ವೀಕರಿಸಿ ಹೊಸ ಅನುಭವಗಳನ್ನು ಹೊಸ ಅಭಿವ್ಯಕ್ತಿ ವಿಧಾನಗಳ ಮೂಲಕ ಪ್ರಕಟಿಸುತ್ತಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ.

ನದೀಮ್ ಅವರು ಮಾನವ್ಯ ಕವಿಯೆಂದು ಹೆಸರುಗೊಂಡ ಕನ್ನಡದ ಖ್ಯಾತ ಕವಿ ಬಿ ಎ ಸನದಿ ಅವರ ಸಹೋದರನ ಮಗ. ಹಾಗೆ ನೋಡಿದರೆ ಇಡೀ ಸನದಿ ಕುಟುಂಬವೇ ಕನ್ನಡ ಸಾಹಿತ್ಯ ಸಂಸ್ಕೃತಿಯ ಭಾಗವಾಗಿದ್ದಾರೆ. ಉರ್ದು ಮನೆಮಾತಿನ ನದೀಮ ಚಾರಿತ್ರಿಕವಾಗಿ ಎರಡು ಕರ್ತವ್ಯಗಳನ್ನು ನಿರ್ವಹಿಸುವ ತಮ್ಮ ಕುಟುಂಬದ ನಡೆಯನ್ನು ಇನ್ನೊಂದು ಪೀಳಿಗೆಗೆ ಮುಂದುವರಿಸಿದ್ದಾರೆ. ಎರಡು ಕರ್ತವ್ಯಗಳು ಎಂದರೆ ಒಂದು ಭಾಷಿಕ ಅನುಸಂಧಾನ ಇನ್ನೊಂದು ಧಾರ್ಮಿಕತೆಯು ರೂಪಿಸುವ ಮಾನವ ಸಮಾಜ, ಸಂಸ್ಕೃತಿಯ ಅನುಸಂಧಾನ.

ತಮ್ಮ ಕಾವ್ಯವನ್ನು ಕುರಿತು ಸನದಿ ಹೇಳುವ ಮಾತು:ಕ್ರಾಂತಿಯ ಹಕ್ಕಿಗೆ ಶಾಂತಿಯ ರೆಕ್ಕೆ ಕಟ್ಟುವ ಯತ್ನಎಂಬುದು. ಇದು ಅವರ ಇಲ್ಲಿನ ಕವಿತೆಗಳ ಮ್ಯಾನಿಫೆಸ್ಟೋ ಎಂದರೂ ಸರಿಯೇ. ಮೊದಲಿಗೆ ಬ್ರೆಕ್ಟ್ ಅವರ ಕವಿತೆಯೊಂದರ ಮೂರು ಸಾಲುಗಳನ್ನು ನದೀಮ ನಮ್ಮ ಮುಂದಿಡುತ್ತಾರೆ ಅದು,
“ದುರಿತ ಕಾಲದಲ್ಲಿ ಹಾಡುತ್ತಿರಬೇಕು
ಹೌದು ಹಾಡುತ್ತಿರಬೇಕು
ದುರಿತಕಾಲದ ಹಾಡನ್ನು…”

(ನದೀಮ ಸನದಿ)

ಬ್ರೆಕ್ಟನ ಈ ಮೂರು ಸಾಲುಗಳು ಮನಸ್ಸಾಕ್ಷಿಯ ಲೇಖಕನೊಬ್ಬನ ಕರ್ತವ್ಯವನ್ನು ಸದಾ ನೆನಪಿಸಲು ಶಕ್ತವಾದದ್ದು. ಇವತ್ತಿನ ಭಾರತದ ಸಾಮಾಜಿಕ ಸಂರಚನೆ ಎಲ್ಲ ಕವಿಗಳಿಗೂ ಅದರಲ್ಲೂ ಮುಸ್ಲಿಂ ಕವಿಗಳಿಗೆ ಒಂದಕ್ಕಿಂತ ಹೆಚ್ಚು ಬಗೆಗಳಲ್ಲಿ ಸೂಕ್ಷ್ಮವಾದ ಸಂಕಟಗಳನ್ನು ತಂದೊಡ್ಡುತ್ತದೆ. ಅದು ಭಿನ್ನ ಸಂಸ್ಕೃತಿಗಳ ಒಪ್ಪಿತ ಗೃಹೀತಗಳನ್ನು ದಾಟಿ ಹೊಸ ಜಗತ್ತಿನ ಕಡೆಗೆ ಸಮಾಜವನ್ನು ನಡೆಸುವ ಸಂಕಟ. ಈ ಸಂಕಟದ ನಿರ್ವಹಣೆಯನ್ನು ನದೀಮ ಜವಾಬ್ದಾರಿ ಮತ್ತು ಜರೂರತ್ತು ಎಂದು ಬಗೆಯುತ್ತಾರೆ.

ಅವರು ತಮ್ಮ ಕೃತಿಗಳಿಗೆ ಬರೆದಿರುವ ಮುನ್ನುಡಿ ರೂಪದ ಬರಹ ಜಾತಿಯ, ಧರ್ಮದ, ಅಂತಸ್ತುಗಳ ಸಂಕೋಲೆಗಳನ್ನು ಮುರಿಯಬಯಸುವ ಆಧುನಿಕ ತರುಣನೊಬ್ಬ ತನ್ನ ಸಮಕಾಲೀನ ಸ್ಥಿತಿಯ ಸಂಕಟಗಳನ್ನು ಪರಿಭಾವಿಸುವ ಬಗೆಗೆ ಬೆಳಕು ಚೆಲ್ಲುತ್ತದೆ. ತಾನು ನಂಬಿರುವ ಜೀವನದ ತಾತ್ವಿಕತೆ, ಸಾಮಾಜಿಕ ಸಮತೋಲನ, ಆಧುನಿಕ ಮನೋಧರ್ಮ ಇವುಗಳು ಎಲ್ಲೆಡೆ ಸಾರ್ವತ್ರಿಕವಾಗಿ ಹಬ್ಬುತ್ತಿರುವ ಮೂಲಭೂತವಾದಿ ಮನೋಧರ್ಮದ ಎದುರು ಹೇಗೆ ನಿಲ್ಲುವುದು ಎಂಬ ವಿಚಾರವನ್ನು ಇವರ ಕಾವ್ಯ ಕಣ್ಣ ಮುಂದೆ ಇರಿಸಿಕೊಂಡಿವೆ.

ಜೊತೆಗೆ ನದೀಮ ಅವರ ಕಾವ್ಯದ ಕೇಂದ್ರದಲ್ಲಿರುವುದು ಜನಾಂಗ ದ್ವೇಷ ಹಾಗೂ ಪ್ರತೀಕಾರಗಳ ಮೂಲಕ ಬಿತ್ತಲಾಗುತ್ತಿರುವ ಮನೋದೈಹಿಕ ಹಿಂಸೆಗಳು ಹಾಗೂ ಅವು ಉಂಟುಮಾಡುವ ಅನೇಕ ಬಗೆಯ ಕ್ಷೋಭೆ ಹಾಗೂ ಅದರ ವಿರುದ್ಧ ಮಾನಸಿಕ ಶಕ್ತಿಯೊಂದನ್ನು ಸಂಘಟಿಸಿಕೊಳ್ಳುವ ಪ್ರಯತ್ನ. ಈ ಪ್ರಶ್ನೆಗಳೇ ಅವರನ್ನು ಉಳಿದ ಎಲ್ಲಕ್ಕಿಂತ ಹೆಚ್ಚು ಕಾಡಿದೆ ಎನಿಸುತ್ತದೆ. ಹಾಗಾಗಿ ಅವರ ಸಂಕಲನದ ಮೊದಲನೆಯ ಕವಿತೆಯ ಶೀರ್ಷಿಕೆ ‘ಪ್ರಶ್ನೆ’. ಹಾಯ್ಕು ಮಾದರಿಯ ಈ ಕವಿತೆ ಎರಡೇ ಸಾಲಿನ ಕವಿತೆ. ಆ ಎರಡು ಸಾಲು ‘ಉತ್ತರದ/ ಹುಡುಕಾಟದಲ್ಲಿದ್ದೇನೆ/ ಎನ್ನುವುದು. ಇದೊಂದು ಬಗೆಯಲ್ಲಿ ಎಲ್ಲ ಕಾಲಕ್ಕೂ ಉಳಿದುಬಿಡುವ ತಲ್ಲಣದ ಹಾಗೆ ಗೋಚರಿಸಿದರೆ ಅದು ಕವಿಯ ತಪ್ಪಲ್ಲ. ಸದಾಕಾಲ ಮನಸ್ಸಿನಲ್ಲಿ ಹಿಂಸೆಯ ಅನೀತಿಯನ್ನು, ಹಿಂಸೆ ತಂದೊಡ್ಡುವ ಸಾಮಾಜಿಕ ಕ್ಷೋಭೆಯನ್ನು ಎದುರುಗೊಳ್ಳುವ ಕವಿ ಎಲ್ಲೆಡೆಯಲ್ಲೂ ಕಾಡ್ಗಿಚ್ಚನ್ನು ಕಾಣುತ್ತಾನೆ. ಈ ಕಾಡ್ಗಿಚ್ಚು ಸುಡುವುದು ಕಾಡನ್ನು ಅಷ್ಟೇ ಅಲ್ಲ. ಹಬ್ಬುತ್ತ ಹಬ್ಬುತ್ತ ಜೀವಗಳ ಸುಡುತ್ತಾ ಕೊನೆಗೆ ಊರು ತಲುಪಿದೆ ಈ ಕಾಡ್ಗಿಚ್ಚು. ಈ ಕಾಡ್ಗಿಚ್ಚಿಗಿಂತಲೂ ಭಯಾನಕವಾಗಿರುವುದು ಮನುಷ್ಯನ ಮನಸ್ಸಿನಲ್ಲಿ ಹುಟ್ಟಿ ಮನುಷ್ಯ-ಮನುಷ್ಯರ ಮನೆಗಳಲ್ಲಿ ಹೊತ್ತಿ ಉರಿಯುತ್ತಿರುವ ಕ್ರೋಧಾಗ್ನಿ. ಈ ಕ್ರೋಧಾಗ್ನಿಯ ಮುಂದೆ ಕಾಡ್ಗಿಚ್ಚು ಕೂಡಾ ತಣ್ಣಗಾಗಿಬಿಡುವ ಚಿತ್ರವನ್ನು ನಮ್ಮ ಮುಂದಿಡುವ ನದೀಮರು ಮಾನವ ಸೃಷ್ಟಿಯ ಹಿಂಸೆಯು ಉಳಿದ ಎಲ್ಲಾ ವಿನಾಶಕಾರಿ ಘಟಕಗಳಿಗಿಂತ ಮಾರಕ ಎಂದು ಬಣ್ಣಿಸುತ್ತಾರೆ.

ಈ ಕವಿತೆಯ ಸಾಂಕೇತಿಕ ಮುಂದುವರಿಕೆ ಎಂಬಂತೆ ನಮ್ಮನ್ನು ಎದುರುಗೊಳ್ಳುವುದು ಒಂದು ಗಾಳಿಗೋಡೆ. ಅದೇ ಗಾಳಿಯಲ್ಲಿ ತೇಲುತ್ತಾ/ ನಿನ್ನತ್ತ ಧಾವಿಸುತ್ತಿರುವುದು/ ಬಿರುಕುಗಳನ್ನು ಹುಡುಕಿ/ ಹುಡುಕುವ ಇಲಿಯಂತೆ. ಇದು ಮನೆಯೊಳಗೆ ಮನದೊಳಗೆ ತೂರಿಕೊಂಡರೆ ನಮ್ಮ ಸಂಸ್ಕಾರವೆಂಬ ಗೋಡೆಯನ್ನೇ ಕೊರೆದು ಬಿಡುತ್ತದೆ. ಹಾಗಾಗಿ ಕಾಡ್ಗಿಚ್ಚುಗಳು ಬಿರುಬಿರುಸಾಗಿ ಹಬ್ಬುತ್ತಿರುವಾಗಲು ನಂಬಿಕೆಯ ಗೋಡೆ ದೃಢವಾಗಿ ನಿಂತಿರಲಿ ಎಂದು ಕವಿ ಆರೋಗ್ಯಪೂರ್ಣವಾಗಿ ಬಯಸುತ್ತಾರೆ.

ಗಾಳಿ ಮಾತೊಂದು
ಅದೇ ಗಾಳಿಯಲಿ ತೇಲುತ್ತ
ನಿನ್ನತ್ತ ಧಾವಿಸುತ್ತಿದೆ
ನಂಬಿಕೆಯ ಗೋಡೆ
ದೃಢವಾಗಿ ನಿಂತಿರಲಿ

ಈ ಹಿಂದೆ ನದೀಮರ ಕಾವ್ಯದ ಕೇಂದ್ರ ಬಗೆಬಗೆಯ ಹಿಂಸೆ ಎಂದು ಗುರುತಿಸಲಾಗಿದೆ. ಅವರ ಇನ್ನೊಂದು ಕವಿತೆ ಗಲಭೆ. ಗಲಭೆಯಲ್ಲಿ ಹೊತ್ತಿ ಉರಿಯುತ್ತಿರುವ ಮನೆಗಳ ಚಿತ್ರವೊಂದು ನಿರ್ಮಾಣವಾಗಿದೆ. ಅದರಲ್ಲಿ ಒಬ್ಬ ಪೇದೆಯ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ಅದೇ ಪೇದೆ ಉರಿಯುತ್ತಿರುವ ಇನ್ನೊಂದು ಮನೆಯ ಬೆಂಕಿಯನ್ನು ಆರಿಸುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಗಲಭೆಗೆ ಪ್ರತಿಯಾಗಿ ಗಲಭೆ ಉತ್ತರವಾಗಲಾರದು ಎನ್ನುವ ಕವಿಯ ನಿಲುವು. ಬುದ್ಧನ, ಯೇಸುವಿನ, ಗಾಂಧೀಜಿಯ, ಬಸವಣ್ಣನ ಪಾಠಗಳು ಅವು. ಯಾವುದೇ ಸ್ವಸ್ಥ ಮನಸ್ಸಿನ ವ್ಯಕ್ತಿ ಪ್ರತೀಕಾರಕ್ಕೆ ಸಿದ್ಧನಾಗುವುದಿಲ್ಲ. ಬದಲಿಗೆ ಗಲಭೆಕೋರರ ಮನದ ಬೆಂಕಿಯನ್ನು ಆರಿಸುತ್ತ ಶ್ರಮಿಸುತ್ತಾನೆ ಎನ್ನುವ ನಂಬಿಕೆಯನ್ನು ಕಾಣಬಹುದಾಗಿದೆ. ಇದು ಕಾವ್ಯಕರ್ಮದ ಉದ್ದೇಶವೂ ಹೌದು.

ಇಷ್ಟೆಲ್ಲ ವಿಷಮ ಪರಿಸ್ಥಿತಿಯಲ್ಲಿ ತಾನು ಇದ್ದಾಗ್ಯೂ ಸ್ವಸ್ಥ ಮನಸ್ಸಿನ ಕವಿಯೊಬ್ಬ ಕಾಣಬಯಸುವುದು ಒಂದು ಬೀಜವನ್ನಾಗಿ. ಒಳಿತನ್ನು ಒಡಲೊಳಗೆ ಇರಿಸಿಕೊಂಡ, ಬಿತ್ತಿದರೆ ಒಳಿತನ್ನೇ ಬೆಳೆವ ನಿಜವಾದ ಬೀಜವದು. ಈ ಸಾಲುಗಳನ್ನು ನೋಡಿ.

ನಾನು…..
ಒಂದು ಬೀಜವಾಗಲು
ಬಯಸುತ್ತೇನೆ
ಕೆಳಕ್ಕೆ ಬಿದ್ದರೂ
ಕಳೆದು ಹೋಗುವುದಿಲ್ಲ
ಒಡೆದು ಚಿಗುರುತ್ತೇನೆ
ನೆಲದಿಂದೆದ್ದು ಮೇಲೆ ಬರುತ್ತೇನೆ
ಹತ್ತಾರು ಬೀಜಗಳಿಗೆ
ಜನ್ಮ ನೀಡುತ್ತೇನೆ

ಇದು ರಕ್ತಬೀಜಾಸುರನ ರಕ್ತದ ತೊಟ್ಟುಗಳ ಹಾಗೆ ರಕ್ಕಸರಿಗೆ ರಕ್ತಪಿಪಾಸು ಜನ್ಮ ನೀಡುವುದಿಲ್ಲ. ಆಗ ಬಯಸುವುದು ಮಾನವೀಯ ನೆಲೆಯಲ್ಲಿಯೇ ಬದುಕುವ, ಈ ತರದ ಬದುಕು ಕಟ್ಟುವ ಬೀಜದಂತೆ.

ಕವಿ ಬಿ ಆರ್ ಲಕ್ಷ್ಮಣರಾವ್ ತಮ್ಮ ‘ಕ್ವಿಕ್ಸೋಟ್’ ಕವಿತೆಯಲ್ಲಿ ಬರೆಯುತ್ತಾರೆ; ‘ಕ್ಷಮಿಸು ಇತಿಹಾಸವೇ, ನಿನ್ನ ಪಾಠಗಳಿಂದ ಕಲಿಯಲಾರದೆ ಹೋದ ಹೆಡ್ಡ ನಾನು’ಎಂದೇನೋ ಈ ಸಾಲುಗಳಿವೆ. ಮನುಕುಲದ ಕಾರ್ಪಣ್ಯಗಳಿಗೆ ಚರಿತ್ರೆಯ ವಿಸ್ಮೃತಿಯೇ ಕಾರಣವಾಗಿದೆ. ಆದರೆ ಈಗ ಇದರ ಜೊತೆಗೆ ಇರುವ ಇತಿಹಾಸ ಪುನಾರಚನೆಯ ಹುಮ್ಮಸ್ಸು ಸಾಮಾಜಿಕ ನೆಮ್ಮದಿಗೆ ಆತಂಕಕಾರಿಯಾಗಿದೆ. ‘ಚರಿತ್ರೆಯ ಮಹಾ ಮುಟ್ಠಾಳರು ನಾವು’ ಎಂಬ ಕವಿತೆಯಲ್ಲಿ ಸನದಿ ಹೊಸ ಇತಿಹಾಸ ಹಾಸುವ ಭರದಲ್ಲಿನ, ಇತಿಹಾಸ ಕ್ರಮಿಸಿದ ಹಾದಿಯ ಅರಿವಿಲ್ಲದೆ ಅದರ ಜಾಡನ್ನು ಬದಲಿಸಿಬಿಡುವ, ಅದನ್ನು ಅಳಿಸಿ ಬೇರೆ ಬರೆಯುವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮನಸ್ಸುಗಳನ್ನು ಚಿತ್ರಿಸುತ್ತಾರೆ. ಇವರಲ್ಲಿ ಇರುವ ತಿಳಿವಳಿಕೆ ಸುಮ್ಮನೆ ವಿದ್ಯಮಾನಗಳನ್ನು ಚರಿತ್ರೆಯು ಗಮನಿಸುತ್ತಾ ಇರುತ್ತದೆ ಎಂಬುದು.

ಕೆಲವು ಸಾಲುಗಳನ್ನು
ಕೆಲವು ನಾಮಗಳನ್ನು
ಕೆಲವು ಮಾತುಗಳನ್ನು
ಕೆಲವು ಅರ್ಥಗಳನ್ನು
ಕೆಲವು ಯೋಚನೆಗಳನ್ನು
ಕೆಲವು ಯೋಜನೆಗಳನ್ನು
ಅಳಿಸಿ ಹಾಕುವ ಹುನ್ನಾರ

ಆದರೆ‘ಇಷ್ಟೆಲ್ಲ ಹೊಲಿಗೆ/ ಸುಲಿಗೆ ನಡೆಯುತಿರುವಾಗ/ ಎಲ್ಲವನೂ ಸುಮ್ಮನೇ ಗಮನಿಸುತ್ತಿದೆ/ ಚರಿತ್ರೆ ಮಂದಹಾಸ ಬೀರುತಿದೆ/’
ಎಂದಿನಂತೆ ಮನುಷ್ಯ ಸದಾಕಾಲ ತನ್ನ ಭೂತವನ್ನು ಹೊತ್ತುಕೊಂಡೇ ಇರುತ್ತಾನೆ. ಬೆನ್ನುಹತ್ತಿದ ಭೂತ ಎಂಬ ಕವಿತೆಯಲ್ಲಿ ಈ ಭೂತವನ್ನು ಕಳಚುವ ನಿಟ್ಟಿನಲ್ಲಿ ಸೋಲುವ ಮನುಷ್ಯ ಕುಲವನ್ನು ಇನ್ನೆಸ್ಕೇಪಬಲ್ ಎಂಬ ವರ್ತಮಾನದ ಪರಿಸ್ಥಿತಿಯಲ್ಲಿ ನದೀಮ ಸ್ಥಾಪಿಸುತ್ತಾರೆ.

ಮನುಷ್ಯಜೀವ ತಾನು ಬೆಳೆಯುತ್ತ ಬೆಳೆಯುತ್ತ ಹೋದಂತೆ ಬದುಕಿನ ಆನಂದಗಳನ್ನು ಕಟ್ಟಿಕೊಳ್ಳುತ್ತಾ, ನೆನಪುಗಳನ್ನು ಸುಂದರಗೊಳಿಸಿಕೊಳ್ಳುತ್ತಾ ಇರಬೇಕಾಗುತ್ತದೆ. ಆದರೆ ನಿನ್ನೆ ಇಂದು ಕವಿತೆಯಲ್ಲಿ ಕವಿ ಬೆಳೆದು ನಿಂತಿರುವುದು ಭವಿಷ್ಯದ ಚಿಂತೆಯಲ್ಲಿ ದಿನವೂ ಕೊರಗುತ್ತಾ ನಿಲ್ಲುವುದಕ್ಕೆ. ನದೀಮ ಅವರ ಮೂಲ ಆಶಯವೇ ಅಸಮಾನತೆಯ ನಾಶ, ಜಾತಿ-ಮತ ಪಂಥ – ಧರ್ಮಗಳ ಸಂಕೋಲೆಯಿಂದ ಮನಸ್ಸುಗಳ ವಿಮೋಚನೆ. ಅಮಾಯಕರಲ್ಲಿ ದ್ವೇಷದ ಬೀಜ ಬಿತ್ತುವವರು, ಲಂಚಕೋರರು, ಸತ್ಯ ಮಾರ್ಗ ತೋರುವವರನ್ನು ಕೊಲ್ಲುವ ಮನಸ್ಥಿತಿಗಳ ಕಂಡು ಅಲ್ಲೇನಾದರೂ ಒಳ್ಳೆಯದು ಒಂದನ್ನು ನೀಡಲು ಸಾಧ್ಯವೇ ಎಂದು ಹಂಬಲಿಸಿ, ಪ್ರಯತ್ನಿಸಿ, ಹೆಣಗಾಡಿ ಸೋತವರ ಕಂಡು ಕಣ್ಣೀರು ಸುರಿಸುವುದಕ್ಕೆ. ಅವರು ಮೊದಲನೆಯ ಕವಿತೆಯಲ್ಲಿ ಬರೆದುಕೊಂಡಂತೆ ಇಲ್ಲಿಯೂ ತಮ್ಮ ಅಸಹಾಯಕತೆಗೆ ಉತ್ತರ ಹುಡುಕುತ್ತಿದ್ದಾರೆ.

ಬೆಳೆದು ನಿಂತಿದ್ದೇನೆ/ಭವಿಷ್ಯದ ಚಿಂತೆಯಲಿ/ದಿನವೂ ಕೊರಗುತ್ತಿದ್ದೇನೆ
ಬಡ/ಶೋಷಿತರ ರಕ್ತ ಹೀರುವವರ
ಬಣ್ಣ-ಬಣ್ಣಗಳ ಬಾವುಟಗಳಡಿ ಹಂಚಿ ಹೋದವರ
ಜಾತಿ-ಮತ-ಪಂಥ-ಧರ್ಮಗಳ ಹುಸಿ ಮರ್ಯಾದೆ ಸಾರುವವರ
ಅಮಾಯಕರಲ್ಲಿ ದ್ವೇಷದ ಬೀಜ ಬಿತ್ತುವವರ
ಮೇಜಿನ ಕೆಳಗೆ ವ್ಯವಹರಿಸುವ ಭ್ರಷ್ಟರ ಲಂಚಕೋರರ
ಜಗಕೆ ಸತ್ಯಮಾರ್ಗ ತೋರುವವರ ಗುಂಡಿಕ್ಕಿ ಕೊಂದವರ
ಸಮಾಜದ ಲೋಪಗಳ ತಿದ್ದಲು ಹಂಬಲಿಸಿ ಹೆಣಗಾಡಿ ಸೋತವರ
ಕಂಡು ಕಣ್ಣೀರು ಸುರಿಸುತ್ತಿದ್ದೇನೆ
ಆತಂಕಗಳ ಸುಳಿಯಲಿ ಸಿಲುಕಿರುವನನ್ನ ಅಸಹಾಯಕತೆಗೆ ಉತ್ತರ ಹುಡುಕುತ್ತಿದ್ದೇನೆ

ಬದುಕು ದೇವರು ಬರೆದ ಮಹಾಕಾವ್ಯ. ಅಲ್ಲಿಂದಾಚೆ ಮನುಷ್ಯ ಸಾಯುವ ತನಕ ಬದುಕುವ ನೇತ್ಯಾತ್ಮಕ ಬದುಕು ಅಚ್ಚಿನ ತಪ್ಪುಗಳು ಎಂದು ಕವಿ ಭಾವಿಸುತ್ತಾರೆ. ಅವರಿಗೆ ಪ್ರೇಮ ಎನ್ನುವುದು ಕಾವ್ಯದ ಅರಿಕೆ.

ಕವಿ ಬಿ ಆರ್ ಲಕ್ಷ್ಮಣರಾವ್ ತಮ್ಮ ‘ಕ್ವಿಕ್ಸೋಟ್’ ಕವಿತೆಯಲ್ಲಿ ಬರೆಯುತ್ತಾರೆ; ‘ಕ್ಷಮಿಸು ಇತಿಹಾಸವೇ, ನಿನ್ನ ಪಾಠಗಳಿಂದ ಕಲಿಯಲಾರದೆ ಹೋದ ಹೆಡ್ಡ ನಾನು’ಎಂದೇನೋ ಈ ಸಾಲುಗಳಿವೆ. ಮನುಕುಲದ ಕಾರ್ಪಣ್ಯಗಳಿಗೆ ಚರಿತ್ರೆಯ ವಿಸ್ಮೃತಿಯೇ ಕಾರಣವಾಗಿದೆ. ಆದರೆ ಈಗ ಇದರ ಜೊತೆಗೆ ಇರುವ ಇತಿಹಾಸ ಪುನಾರಚನೆಯ ಹುಮ್ಮಸ್ಸು ಸಾಮಾಜಿಕ ನೆಮ್ಮದಿಗೆ ಆತಂಕಕಾರಿಯಾಗಿದೆ.

ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ. ಗಾಂಧಿಯನ್ನು ಮರೆತ ನವಭಾರತದ ಮನುಷ್ಯ. ದಾರಿಯಂಚಿನಲ್ಲಿ ಸಿಕ್ಕ ಗೋಡ್ಸೆಯ ಹೆಗಲಿಗೆ ಕೈ ಹಾಕಿ ನಡೆಯುತ್ತಾ ಏನೇನೋ ಹರಟುತ್ತ ಎತ್ತಲೋ ಮಾಯವಾಗುವುದು ಗಾಂಧಿಯ ಚಿತ್ರ.

ನಗುಮೊಗದ
ಗಾಂಧಿ ಅವನಾಗಿರಲಿಲ್ಲ
ಕೈಯಲ್ಲಿ ಕೋಲು
ಕಣ್ಣಿಗೆ ಕನ್ನಡಕ
ಯಾವುದೂ ಇರಲಿಲ್ಲ
ಸೂಟು-ಬೂಟು
ತಲೆಗೊಂದು ಹ್ಯಾಟು
ಕೈಯಲ್ಲಿ ವಿದೇಶಿ ಸಿಗರೇಟು
ಹಿಡಿದಿದ್ದ ಗಾಂಧಿ
ಬಾರ್ ಎಂಡ್ ರೆಸ್ಟೋರೆಂಟ್ ಹೊಕ್ಕು
ಚಿಕನ್ ಕಬಾಬ್ ಸವಿಯುತ್ತಿದ್ದ
ಹೊರಬಂದು
ಕಂಪೌಂಡಿನ ಗೋಡೆಗೆ ನಿಂತು
ಉಚ್ಚೆ ಹೊಯ್ಯುತ್ತಿದ್ದ
ವೃತ್ತಗಳಲ್ಲಿನ
ತನ್ನ ಮೂರ್ತಿಗಳಿಗೆಲ್ಲ
ಚಪ್ಪಲಿಯ ಹಾರ ಹಾಕಿ
ವಿರೂಪಗೊಳಿಸುತ್ತಿದ್ದ

ಈ ಬಗೆಯಲ್ಲಿ ಚಿತ್ರಗಳನ್ನ ಕಟ್ಟಿಕೊಟ್ಟು ಆಲೋಚನೆಗೆ ತೊಡಗಿಸುವ ಹಲವು ಪ್ರಯತ್ನವನ್ನು ನಾವು ಸಂಕಲನದಲ್ಲಿ ಕಾಣಬಹುದಾಗಿದೆ. ನೆರೆಮನೆಯ ಮುದುಕಿ ಕವಿತೆಯನ್ನು ಇಂತಹುದೇ ನೆಲೆಗಟ್ಟಿನ ಮೇಲೆ ಚಿಂತಿಸಬಹುದಾಗಿದೆ. ವಯಸ್ಸಾದ ಮುದುಕಿ ತೀರಿಹೋಗಿದ್ದಾರೆ. ಆಕೆ ಎಲ್ಲದರಿಂದ ವಂಚಿತಳಾಗಿ ಬದುಕು ಸವೆಸಿದ ಮುದುಕಿ. ನಮ್ಮ ಸಮಾಜ ಸೃಷ್ಟಿಸಿದ ಒಂದು ಸಂಕೇತ ಆಕೆ. ಸಾವಿನಲ್ಲೂ ಮುಚ್ಚಿದ ಕಂಗಳಿಂದ ದಿಟ್ಟಿಸಿ ನನ್ನನ್ನೇ ನೋಡುತ್ತಾ ಒಳಗೊಳಗೆ ನಗುತ್ತಿದ್ದಾಳೆ ಅವಳು. ಇವಳು ನಮ್ಮ ಭಾರತ ಮಾತೆಯೇ? ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಸಹಜವಾಗಿಯೇ ಮೂಡುತ್ತದೆ.

ಇವುಗಳಿಂದಲೇ ಹುಟ್ಟಿಬರುವ ಆಶಾವಾದವನ್ನು ಸಹ ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಉದಾಹರಣೆಗೆ ‘ನನ್ನ ದಿನ’ ಎಂಬ ಕವಿತೆಯನ್ನು ಗಮನಿಸಬಹುದು.

ನಾನು ಮಾತ್ರ
ನಿಂತಲ್ಲೇ ನಿಂತಿದ್ದೇನೆ
ಒಂಟಿಗಾಲ ಬಕದಂತೆ

ಸಾವಿಗೂ ಸೆಡ್ಡು ಹೊಡೆದು
ಇಂದಲ್ಲ ನಾಳೆ
ನಾಳೆಯಲ್ಲ ನಾಡಿದ್ದು
ಎಂದರೊಂದು ದಿನ
ನನ್ನ ದಿನ
ಬಂದೇ ಬರುವುದೆಂದು

ಒಟ್ಟಿನಲ್ಲಿ ಭ್ರಮನಿರಸನದಲ್ಲಿಯೇ ನೆಟ್ಟ ದೃಷ್ಟಿ, ಜೊತೆಗೆ ಬದುಕಿನ ಅಸಾಂಗತ್ಯಗಳ ಚಿತ್ರಣವೇ ಕಾವ್ಯದ ಉದ್ದೇಶವಿರಬೇಕು ಎಂಬ ಕಲ್ಪನೆಯು ಬಹಳ ಜನ ಯುವ ಕವಿಗಳ ರಚನೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಅಧಿಕಾರ ರಾಜಕಾರಣ, ದೀನ ದುರ್ಬಲರ, ದರಿದ್ರರ ಬವಣೆ, ಫ್ಯೂಡಲಿಸಂ ಎಬ್ಬಿಸುವ ಕಾರ್ಮುಗಿಲಿನಂತಹ ದುರ್ಭರ ಸಾಮಾಜಿಕ ವಾತಾವರಣ ಮುಂತಾದ ಬಂಡಾಯ ಕಾವ್ಯದ ಪಳೆಯುಳಿಕೆಗಳು ಕೂಡ ಮತ್ತೆ ಮತ್ತೆ ಚಿಗುರಲು ಪ್ರಯತ್ನಿಸುತ್ತಿರುವುದನ್ನು ಗಮನಿಸಬಹುದು. ದುರದೃಷ್ಟವಶಾತ್ ಇಲ್ಲಿ ಬೇಂದ್ರೆ ಬಯಸುವ, ನುಡಿಸುವ ಕಲ್ಪನಾವಿಲಾಸವನ್ನು ಮೆರೆಯಲು ಕವಿಗೆ ಏನೂ ಉಳಿಯುವುದಿಲ್ಲ. ‘ವಿಧಾನಸೌಧ: ಅಲುಗಾಡುತ್ತಿರುವ ಐದು ಕಂಬಗಳು’ ಕವಿತೆಯನ್ನು ಈ ಬಗೆಯ ಕಾವ್ಯರಚನೆಯ ಪ್ರತಿನಿಧಿಯಂತೆ ನೋಡಬಹುದು.

“ಡಿ.ಆರ್.ನಾಗರಾಜ್ ರೂಪಿಸಿದ ‘ಖಡ್ಗವಾಗಲಿ ಕಾವ್ಯ ; ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ – ಎಂಬ ಮಾತು ಹಾಗೂ ರಂಜಾನ್ ದರ್ಗಾ ರೂಪಿಸಿದ ‘ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ’ ಎಂಬ ಮಾತು, ಇವೆರಡೂ ಮಾತುಗಳು ಬಂಡಾಯ ಚಳವಳಿಯ ಕಾವ್ಯಧೋರಣೆಯ ಪ್ರಧಾನ ಘೋಷಣೆಗಳು. ಖಡ್ಗವೆಂಬುದು ಹಿಂಸೆಯ ಸಂಕೇತ. ಖಡ್ಗದಿಂದ ಕಾವ್ಯವನ್ನು ಮೂಡಿಸಲಾಗುವುದಿಲ್ಲ; ಜೀವಿಯನ್ನು ಕತ್ತರಿಸಿ ಪ್ರಾಣ ಹಾರಿಸಿ, ನೆತ್ತರನ್ನು ಬಸಿಯಬಹುದು. ಕಾವ್ಯವೆಂಬುದು ಜೀವಪ್ರೀತಿಯ ಸಂಕೇತ. ಕಾವ್ಯವೆಂಬುದು ಕವಿಯೊಬ್ಬನು ಲೇಖನಿಯಿಂದ ಇಂಕು ಬಸಿದು ಅಕ್ಷರಗಳನ್ನು ಮೂಡಿಸಿ, ಕಾವ್ಯದ ಶಬ್ದಶರೀರದಲ್ಲಿ ಜೀವಭಾವಗಳನ್ನು ಮಿಡಿಸುವ ಮಹಾಧ್ಯಾನದ ಸೃಜನಶೀಲ ಸಾತತ್ಯ. ‘ಖಡ್ಗವಾಗಲಿ ಕಾವ್ಯ’ ಎಂದು ಡಿಆರ್ ಹೇಳಿರುವ ಮಾತಿನಲ್ಲಿ ಖಡ್ಗ ಎಂಬ ಶಬ್ದವು ಲೇಖನಿ ಎಂಬ ಅರ್ಥವನ್ನು ವ್ಯಂಜಿಸುತ್ತದೆ. ಹಿಂಸೆಯ ಸಂಕೇತವಾದ ಖಡ್ಗವು ಕಾವ್ಯವನ್ನು ಕೈಹಿಡಿದು, ಕಾವ್ಯವೇ ಖಡ್ಗವಾಗಿ ಜನರ ನೋವಿಗೆ ಪ್ರಾಣಮಿತ್ರನಾಗಿ ಮಿಡಿಯಬೇಕು. ಅಹಿಂಸಾತತ್ವ ಪ್ರಧಾನವಾದ ಮೈತ್ರಿಯನ್ನು ಕಾವ್ಯವು ಅಂತರ್ಗತಗೊಳಿಸಿಕೊಂಡಾಗ ಮಾತ್ರ, ‘ಖಡ್ಗವಾಗಲಿ ಕಾವ್ಯ ; ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಕಾವ್ಯಘೋಷಣೆಯು ‘ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ’ ಎಂಬ ಉದಾತ್ತತೆಯನ್ನು ಸಾಕಾರಗೊಳಿಸುವ ದಾರಿಯಲ್ಲಿ ಜನಮುಖಿಯಾಗುತ್ತದೆ. ಕಾವ್ಯವು ಹೀಗೆ ಉದಾತ್ತ ಜೀವಪ್ರೀತಿಯಿಂದ ಜನಮುಖಿಯಾದಾಗ ಮಾತ್ರ ‘ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ನಾಗಿ ಒದಗುತ್ತದೆ. ಡಾ. ವಡ್ಡಗೆರೆ ನಾಗರಾಜಯ್ಯ.”

ಮೇಲಿನ ಮಾತುಗಳನ್ನು ಗಮನಿಸಿ ನದೀಮ ಅವರ ಕಾವ್ಯವನ್ನು ಮನನ ಮಾಡುವುದು ಉಚಿತ. ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುವ ಕಲ್ಪನೆ ಕನ್ನಡ ಕಾವ್ಯಕ್ಕೆ ಬಹಳ ಹಳೆಯ ರೂಪಕ. ರೋಮ್ಯಾಂಟಿಕ್ ಆದಂತಹದೂ ಹೌದು. ಬಿಜಾಪುರದ ಕೆನಾನ್ ಗಳ ಚಿತ್ರಣದಲ್ಲಿ ಒಂದು ಕಾಲದಲ್ಲಿ ಭಯ ಹುಟ್ಟಿಸುತ್ತಿದ್ದ ತೋಪಿನ ಸುತ್ತ ಎಷ್ಟೊಂದು ಆನಂದವನ್ನು ಕವಿ ಕಾಣುತ್ತಾರೆ. ಆ ಆನಂದದಲ್ಲಿ ಸ್ಥಾಯಿಯಾಗಿ ನಿಂತುಬಿಡುವ ಆಸೆ ಕಳೆದ ಕ್ರೂರ ಸಮಯದತ್ತ ಹೋಗಬಾರದು ಎಂಬ ಅಭೀಪ್ಸೆ ಈ ಸಾಲುಗಳಲ್ಲಿ ಹರಳುಗಟ್ಟುತ್ತದೆ.

ಅಲ್ಲಿ ಯುವ ಪ್ರೇಮಿಗಳು ಸಂಧಿಸುತ್ತಾರೆ

ರಾತ್ರಿಯಾದರೆ
ಮದ್ದನು ತುಂಬಿಕೊಂಡಿರುತ್ತಿದ್ದ
ತೋಪಿನ ನಳಿಕೆಯಲಿ
ಗುಬ್ಬಿಗಳು ಠಿಕಾಣಿ ಹೂಡುತ್ತವೆ

ಒಂದು ಕಾಲದಲ್ಲಿ ಭಯ
ಹುಟ್ಟಿಸುತ್ತಿದ್ದ ತೋಪಿನಸುತ್ತ
ಈಗ ಎಷ್ಟೊಂದು ಆನಂದ

ಕಳೆದ ಕ್ರೂರ ಸಮಯದತ್ತ
ಹೋಗದಾರದೂ ಚಿತ್ತ

ಹೀಗೆ ವಾಸ್ತವದ ಕ್ರೌರ್ಯಕ್ಕೆ ರೋಮ್ಯಾಂಟಿಕ್ ಮದ್ದನ್ನು ಹಚ್ಚುವ ಕೆಲಸದಲ್ಲಿ ನದೀಮ್ ಅವರಿಗೆ ಉತ್ಸಾಹವಿದೆ.

ಇದೇ ಪೀಳಿಗೆ ಒಂದು ಬಗೆಯ ಸಾರುವಿಕೆಯನ್ನು ಕಾವ್ಯ ವಸ್ತುವನ್ನಾಗಿ ಇಟ್ಟುಕೊಳ್ಳುತ್ತದೆ. ರಾಮ ರಹೀಮ ಕೃಷ್ಣ ಕಬೀರ ಎಂಬ ನುಡಿಗಟ್ಟುಗಳು ಜಾತಿಮತದ ಗುಹೆಗಳಿಂದ ಹೊರ ಬನ್ನಿರಿ ಬಯಲಿಗೆ ಎಂಬ ಮತ್ತು ವಿಶ್ವಮಾನವ ಮತ್ತು ಮನುಜ ಮತಗಳ ಕಲ್ಪನೆಯ ಪ್ರವರ್ತಕ ಕವಿ ಮಹಾಶಯರ ಆಶಯಗಳು ಕನ್ನಡಕಾವ್ಯ ಸಂದರ್ಭದಲ್ಲಿ ಪದೇ ಪದೇ ಅನುರಣನಗೊಳ್ಳುತ್ತಾ ಇದ್ದುಬಿಟ್ಟಿವೆ. ಹೇಳಿದ್ದನ್ನೇ ಹೇಳುತ್ತಾ ಇರಬೇಕಾದ ಕರ್ಮಕಾಂಡವನ್ನು ಕವಿಗಳ ಮುಂದಿರಿಸಿ ಸಮಾಜ ತಾನು ನಿಂತಲ್ಲೇ ನಿಂತುಬಿಟ್ಟಿದೆ. ನದೀಮ ಅವರು ಕೂಡ ‘ನನ್ನ ನಿನ್ನ ಜಗತ್ತಿನಲ್ಲಿ’ ಎಂಬ ಕವಿತೆಯಲ್ಲಿ ಇಂಥದೇ ಘೋಷಣೆಗಳನ್ನು ಉದ್ಘರಿಸಲು ಹೋಗುತ್ತಾರೆ. ಬದುಕಿಗೆ ಹೊಸದೊಂದು ಭಾಷ್ಯವ ಬರೆಯೋಣ ಎಂಬ ಹಲವು ಬಾರಿ ಉಚ್ಚರಿಸಲ್ಪಡುವ ಅದೇ ಘೋಷಣೆಯನ್ನು ಪುನರುಚ್ಚರಿಸುತ್ತಾರೆ. ಈ ಕಾರಣಕ್ಕಾಗಿಯೇ ಪ್ರಾಯಶಃ ದುರಿತ ಕಾಲದಲ್ಲೂ ಹಾಡುತ್ತಿರಬೇಕು ಹೌದು ಹಾಡುತ್ತಿರಬೇಕು ದುರಿತಕಾಲದ ಹಾಡನ್ನು ಎಂಬ ಬ್ರೆಕ್ಟನ ಕವಿತೆಯ ಸಾಲುಗಳನ್ನು ಅವರು ಸಮರ್ಥನೆಗಾಗಿ ಎಂಬಂತೆ ಕೋಟ್ ಮಾಡುತ್ತಾರೆ.

ಈ ದುರಿತ ಕಾಲದಲ್ಲಿ ಕವಿತೆಗೆ ಅಂದರೆ ಸಮಾಜದ ನಾಲಗೆಗೆ ಬಹಳ ದೊಡ್ಡ ಸಂಕಟ ಬಂದೊದಗಿದೆ. ನಾಲಿಗೆ ಸೀಳುವ ಕೈ, ಕಡಿಯುವ ಕಾಲು, ಮುರಿಯುವ, ಕೊಲ್ಲಲು ಏನೇನೆಲ್ಲ ಮಾಡುವ ಜನರ ನಡುವೆ ಈ ಕಾವ್ಯವೆಂಬ ಜುಬಾನ್ ಉಸಿರಾಡುತ್ತಲೇ ಇದೆ. ಆದರೆ ಇಲ್ಲಿನ ಜನಗಳಿಗೆ ಏನಾಗಿದೆ? ಏಕೆ ಅವರು ಯಾರು ಮನುಷ್ಯರಾಗಿ ಬದುಕಿಲ್ಲ? ಈ ಪ್ರಶ್ನೆಯನ್ನು ಸಹ ನದೀಮ ಕೇಳಿಕೊಂಡಿದ್ದಾರೆ. ಇದ್ದಾರೆ ಇದ್ದಾರೆ/ ಇಲ್ಲಿ ಎಲ್ಲರೂ ಇದ್ದಾರೆ/ ಮನುಷ್ಯರ ಹೊರತು/ ಇಲ್ಲಿ ಎಲ್ಲರೂ ಇದ್ದಾರೆ.

ಮನುಷ್ಯ ಸಂಘಜೀವಿ. ಅದರಲ್ಲೂ ಪ್ರೀತಿಯನ್ನು ಒಡಲುಗೊಂಡ ಕವಿಯೊಬ್ಬ ಒಂಟಿಯಾಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಒಂಟಿಯಾಗಿ ಇರಲಾರೆ ಎಂದು ಕವಿ ಅಲವತ್ತುಕೊಳ್ಳುತ್ತಾರೆ. ನಾವು ಬದುಕುವ ಜಗತ್ತು ಹೇಗಿರಬೇಕು ಎಂಬುದನ್ನು ಗಲಭೆಯಲ್ಲಿ ಸತ್ತವನೊಬ್ಬನ ಅಫಿಡೆವಿಟ್ಟು ಕವಿತೆ ಹೇಳುತ್ತದೆ. ಇಲ್ಲಿನ ಹಲವು ಕವಿತೆಗಳಲ್ಲಿ ಇರುವ ಸಮಸ್ಯೆಯಂತೆ ಇಲ್ಲಿಯೂ ಸಹ ಕಾವ್ಯ ಉದ್ಘೋಷ ಒಂದರಂತೆ ಕಿವಿಗೆ ಕೇಳುತ್ತದೆ.

ನದೀಮ ಅವರ ಕಾವ್ಯವನ್ನು ಕುರಿತು ಮೆಹಬೂಬ ಮುಲ್ತಾನಿ, ಮತ್ತು ಸರಜೂ ಕಾಟ್ಕರ್ ಮಾತನಾಡಿದ್ದಾರೆ. ಅವುಗಳಲ್ಲಿ ನನಗೆ ಕೋಟ್ ಮಾಡಬೇಕೆನ್ನಿಸಿದ ಮಾತುಗಳು ಇಲ್ಲಿವೆ:

‘ಒಬ್ಬ ಕವಿ ಇನ್ನೊಬ್ಬ ಕವಿಯಿಂದ ಪ್ರಭಾವಿತನಾಗುವುದು ಕಾವ್ಯ ಪ್ರಪಂಚದಲ್ಲಿ ಸಹಜವಾದ ಕ್ರಿಯೆ. ಆದರೆ ಆ ಮಿತಿಯನ್ನು ಮೀರಿ ಬೆಳೆಯುವುದು ಕವಿಯ ಪ್ರತಿಭೆಯನ್ನು ಅವಲಂಬಿಸಿದೆ. ಇಲ್ಲಿಯ ಎಲ್ಲ ಕವಿತೆಗಳಲ್ಲೂ ನದೀಮ ಅವರ ಪ್ರತಿಭೆಯನ್ನು ಗುರುತಿಸಬಹುದಾಗಿದೆ.

ನದೀಮ ಸನದಿ ಸಾಹಿತ್ಯದ ವಿದ್ಯಾರ್ಥಿಯಲ್ಲ….. ಆದರೆ ಅವರ ತಂದೆ, ಕಕ್ಕಂದಿರಿಗೆ ಒಲಿದ ಕಾವ್ಯ ಇವರನ್ನು ಗಾಢವಾಗಿ ಒಲಿದಿದೆ. ಹೊಸ ಹೊಸ ಪ್ರತಿಮೆಗಳನ್ನು ರೂಪಕಗಳನ್ನು ನದೀಮ ತಮ್ಮ ಕವಿತೆಗಳಲ್ಲಿ ಸಹಜವಾಗಿ ಸೃಷ್ಟಿಸುತ್ತಾರೆ ಮತ್ತು ಬಳಸುತ್ತಾರೆ.

(ಸರಜೂ ಕಾಟ್ಕರ್)

ಪ್ರತಿಭೆ, ಆಸಕ್ತಿ, ಅಕ್ಷರಗಳ ಬಗ್ಗೆ ಮೋಹ, ಜೀವನ ಪ್ರೀತಿ, ಮನುಷ್ಯತ್ವದ ಬಗ್ಗೆ ಮಮಕಾರಗಳು ಇರುವ ನದೀಮ ಸನದಿ ನಮ್ಮ ಮುಂದಿನ ಕಾವ್ಯದ ಬಲಶಾಲಿ ಕೊಂಡಿಯಂತೆ ಕಾಣಿಸುತ್ತಾರೆ. ಅವರ ಕಾವ್ಯದ ಕೇಂದ್ರ ಬಿಂದುವೇ `ಹುಡುಕಾಟ’. ಅದು ಸುಂದರ ಸಮಾಜದ ರಚನೆಯ ಕನಸಾಗಿರಬಹುದು; ಭ್ರಾತೃತ್ವ ಪಸರಿಸುವ ಸಂಗತಿಯಾಗಿರಬಹುದು; ಪ್ರೀತಿ ಪ್ರೇಮದ ಪುಳಕವಾಗಿರಬಹುದು – ಇವುಗಳೆಲ್ಲದರ ಹಿಂದೆ ಕವಿಯ ಮನುಷ್ಯತ್ವದ ಹುಡುಕಾಟ ಗೋಚರಿಸುತ್ತದೆ. ಕವಿ ಬರೀ ಶಬ್ದದ ಗುಲಾಮನಲ್ಲ; ಆತ ಸುಂದರ ಸಮಾಜದ ಸೃಷ್ಟಿಕರ್ತನೂ ಆಗಿದ್ದಾನೆಂದು ನದೀಮ ಸನದಿಯವರ ಕವಿತೆಗಳು ಹೇಳುತ್ತವೆ. ಅವರ ದೊಡ್ಡಪ್ಪ ಬಿ. ಎ. ಸನದಿಯವರ ಕವಿತೆಗಳು ಮಾನವ್ಯತೆಗಾಗಿ ತುಡಿದಿದ್ದರೆ, ನದೀಮ ಸನದಿಯವರ ಕವಿತೆಗಳು ಮನುಷ್ಯನ ಬಗ್ಗೆ ಹಾಡುತ್ತವೆ.- ಡಾ. ಸರಜೂ ಕಾಟ್ಕರ್

ಇತಿಹಾಸ ಮತ್ತು ಚರಿತ್ರೆಯನ್ನು ಕವಿತೆಯೊಂದಿಗೆ ಅನುಸಂಧಾನಗೊಳಿಸುವ ಕಲೆ ಇವರಿಗೆ ಸಿದ್ಧಿಸಿದೆ… ರಾಜಕೀಯ ದೊಂಬರಾಟ, ವಂಚನೆ, ತಳ ಸಮುದಾಯದ ತಲ್ಲಣಗಳು, ಒಡೆದು ಆಳುವ ಹುನ್ನಾರ, ಬಣ್ಣ ಲೇಪಿತ ಮಾತು, ಮಾತೇ ಬಂಡವಾಳವಾಗಿರುವ ಈ ದುರಿತ ಕಾಲ ಹೀಗೆ ಹತ್ತು ಹಲವು ವಿಷಯಗಳು ಕಾಡಿದ ಫಲವೇ ಕಾವ್ಯೋತ್ಪತ್ತಿ… ಈ ಸಂಕಲನದ ಕವಿತೆಗಳು ಈ ಮೆಟ್ಟಿಲನ್ನು ದಾಟಿ ಸಾಮಾಜಿಕ ಸಂಘರ್ಷದ ಮೂಲಕ ಬದುಕನ್ನು ಕಟ್ಟುವ ಹೆಚ್ಚುಗಾರಿಕೆಗೆ ತೆರೆದುಕೊಂಡಿವೆ. ಭಾಷೆ ಮತ್ತು ರಚನೆಯ ವಿಷಯದಲ್ಲಿ ವಿನಾಯತಿ ಬಯಸಿದರೂ ಕವಿಗೆ ಕವಿತೆಗೆ ಇರಬೇಕಾದ ಲಯ ಸಿಕ್ಕಿದೆ. ಚಿಕ್ಕ ಚಿಕ್ಕ ಸಂಗತಿ, ರೂಪಕ, ಪ್ರತಿಮೆಗಳು, ಪದ ಬಳಕೆಗಳ ಮುಖಾಂತರ ಕವಿತೆಯ ರಚನಾ ಪಾಠಕ್ಕೆ ಒಗ್ಗಿಸಿಕೊಂಡಿದ್ದಾರೆ. ಕಾವ್ಯ ತತ್ವಗಳ ಖಚಿತ ನಿಲುವು ತುಳಿಯಬೇಕಾದ ಹಾದಿ ಇನ್ನೂ ಬಹಳಷ್ಟಿದೆ.- ಮೆಹಬೂಬ ಮುಲ್ತಾನಿ

ಮೇಲಿನ ಎರಡೂ ಅಭಿಪ್ರಾಯಗಳು ಮೊದಲ ಸಂಕಲನದ ಕವಿಯನ್ನು ಸ್ವಾಗತಿಸುವ ಮಾತುಗಳೆಂದು ಭಾವಿಸಲು ಅಡ್ಡಿಯಿಲ್ಲ. ಅವು ನಿಜಕ್ಕೂ ಕವಿಗೆ ಸಂತೋಷ ಕೊಡುವಂತಹವು. ಆದರೆ ಸೂಕ್ಷ್ಮ ಮನಸ್ಸಿನ ಕವಿ ಅವುಗಳಿಂದ ಭಾರವಾಗುತ್ತಾನೆ. ಆದ್ದರಿಂದ ಇಲ್ಲಿನ ಒಳ್ಳೆಯ ಮಾತುಗಳು ಸನದಿಯವರನ್ನು ಹೊಸ ಜವಾಬ್ದಾರಿಗೆ ಸಜ್ಜುಗೊಳಿಸಬೇಕು.. ಒಂದು ಬಗೆಯ ಸ್ವ-ಅವಲೋಕನ, ಪೂರ್ವಸೂರಿಗಳ ಓದು, ಪ್ರಾತಿನಿಧಿಕ ಕವಿಗಳ ಅಧ್ಯಯನ ಸನದಿಯವರ ಕಾವ್ಯಧ್ವನಿಯನ್ನು ಇನ್ನೂ ವೈವಿಧ್ಯಮಯವಾಗುವ ಹಾದಿಯನ್ನು ತೆರೆಯಬಲ್ಲದು.

ಕೊನೆಯ ಮಾತು:ಇಂದಿನ ತಲೆಮಾರಿನವರ ಕವಿತೆಗಳನ್ನು ಮುಕ್ತವಾಗಿ, ಗಂಭೀರವಾಗಿ ಕನ್ನಡ ಕಾವ್ಯಲೋಕ ಗಮನಿಸಬೇಕಿದೆ. ಜೊತೆಗೆ ವಿಭಿನ್ನ ಬಗೆಯ ಕವಿತೆಗಳು ಕಣ್ಣಿಗೆ ಬೀಳುತ್ತಿವೆ; ಹೊಸ ಅನುಭವಗಳನ್ನು ಸಹ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಬೇರೊಂದು ಬಗೆಯ ಕಾವ್ಯರಚನೆಯತ್ತ ಓಲುತ್ತಿದೆಯೇ ಎಂಬುದನ್ನು ಸಹ ಗಮನಿಸಿ ಹೊಸ ಧ್ವನಿಗಳನ್ನು ಗುರುತಿಸಬೇಕಿದೆ.