”ಗಂಡಸರು ಹೀಗೆ ಹೋಗುವುದು ಯಾರಿಗೂ ಅಸಹಜ ಎನ್ನಿಸುವುದೂ ಇಲ್ಲ; ಜವಾಬ್ದಾರಿಗಳಿಂದ ಕಳಚಿಕೊಂಡಂತೆ ಎಂದೂ ಅನ್ನಿಸುವುದಿಲ್ಲ. ದುಡಿಯುವ ಗಂಡಸಿಗೆ ವಿರಾಮ-ವಿಶ್ರಾಂತಿ ಬೇಕು ಎನ್ನುವ ಅನುಕಂಪ. ಅದೇ ಮಗುವನ್ನೂ ನೋಡಿಕೊಂಡು ಮನೆಕೆಲಸಗಳನ್ನು ನಿಭಾಯಿಸುವ, ಅಮ್ಮನಾದ ನಂತರ ವೈಯಕ್ತಿಕ ಜೀವನವೇ ಮರೀಚಿಕೆಯಾಗಿ, ಹವ್ಯಾಸ, ಸಿನೆಮಾ, ನಾಟಕ, ತಿರುಗಾಟ, ಎಲ್ಲವೂ ಬಂದ್ ಆಗಿ ಮಗು ಒಂದು ಹಂತಕ್ಕೆ ಬರುವವರಗೆ ಅಜ್ಞಾತವಾಸದಲ್ಲೇ ಕಳೆಯುವ ಹೆಂಗಸಿನ ಬಗ್ಗೆ ಈ ಸಮಾಜಕ್ಕೆ ಅಂಥಾ ಸಹಾನೂಭೂತಿಯೇನೂ ಇಲ್ಲ”
ಶ್ವೇತಾ ಹೊಸಬಾಳೆ ಬರಹ

 

ಇದು ಈ ಕೊರೋನಾ ಗಿರೋನಾ ಶುರುವಾಗುವ ಮುಂಚಿನ ಕಥೆ. ಒಂದು ಭಾನುವಾರ ನನ್ನ ಪಾಲಿಗೆ ಎಷ್ಟೆಲ್ಲಾ ಅಮೂಲ್ಯವಾಗಿತ್ತು, ಹೇಗೆಲ್ಲಾ ವಿಭಿನ್ನವಾಗಿತ್ತು ಎನ್ನುವ ಕಥೆ. ಅಂದು ಬೆಳಿಗ್ಗೆ ಐದಕ್ಕೆಲ್ಲಾ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಒಂದು ಲೋಟ ಬಿಸಿನೀರು ಕುಡಿದು ಮನೆಯಿಂದ ಹೊರಟು ಐದಾರು ಕಿ.ಮೀ ದೂರ ಇರುವ ಬೈಯ್ಯಪ್ಪನಹಳ್ಳಿ ಮೆಟ್ರೋಸ್ಟೇಶನ್ನಿಗೆ ನಡೆದೇ ತಲುಪಿದ್ದೆ. ಕೆಲವು ದಿನಗಳಿಂದ ಮನಸ್ಸಲ್ಲಿ ಅಂದುಕೊಂಡಿದ್ದನ್ನು ಕಾರ್ಯಗತಗೊಳಿಸುತ್ತಿರುವ ಹುಮ್ಮಸ್ಸು. ಏಳು ಗಂಟೆಗೆಲ್ಲಾ ಮೆಟ್ರೋ ಹತ್ತಿ ಏಳೂವರೆಗೆಲ್ಲ ಕಬ್ಬನ್ ಪಾರ್ಕ್‍ನಲ್ಲಿದ್ದೆ. ಅಲ್ಲಿ ಆಗಲೇ ಎಳೆಬಿಸಿಲಿನಿಂದ ನೆರಳು ಬೆಳಕಿನ ಸ್ವರ್ಗವೇ ಸೃಷ್ಟಿಯಾಗಿತ್ತು. ಬೆಳಗಿನ ಬಿಸಿಲು ದೇಹಕ್ಕೂ ಮನಸ್ಸಿಗೂ ಚೇತೋಹಾರಿ. ಮನಸೋಇಚ್ಛೆ ಅಲೆದೆ. ಹೊಳೆಯುವ ಹುಲ್ಲು, ಗಿಳಿಹಸುರಿನಿಂದ ಕಂಗೊಳಿಸುವ ಎಲೆಗಳು, ಅವುಗಳ ಮಧ್ಯೆ ಇಣುಕುವ ಬಿಸಿಲಿನ ಕೋಲು, ಆಕಾಶಕ್ಕೇ ಚಪ್ಪರ ಹಾಕಿದ್ದ ಮರಗಳ ಚಿತ್ರಗಳನ್ನು ಸೆರೆಹಿಡಿದೆ. ಮನಸ್ಸು ವಿಚಿತ್ರ ಸಂತೋಷದಿಂದ ಕುಣಿಯುತ್ತಿತ್ತು; ಅದೇನೋ ನಿರಾಳತೆ, ಹಗುರಗೊಂಡ ಭಾವ. ಗಟ್ಟಿಮನಸ್ಸು ಮಾಡಿ ಹೊರಟು ಬರದಿದ್ದರೆ ಎಂಥಾ ಆನಂದಾನುಭೂತಿಯಿಂದ ವಂಚಿತಳಾಗುತ್ತಿದ್ದೆ!

ಮನೆಯಲ್ಲಿ ಮೂರೂವರೆ ವರ್ಷದ ಮಗುವನ್ನು ಬಿಟ್ಟು, ಒಂದು ದಿನದ ಮಟ್ಟಿಗೆ ಗಂಡನ ಸುಪರ್ದಿಗೊಪ್ಪಿಸಿ ಸಾಂಸಾರಿಕ ಕೆಲಸಗಳಿಂದ ಬಿಡುಗಡೆಗೊಂಡು ಗಂಡನ ಅವಲಂಬನೆ, ಮನೆಯೆಂಬ ಕಂಫರ್ಟ್ ಝೋನ್‍ನ್ನಿಂದ ದೂರವಾಗಿ ಒಂದಿಡೀ ದಿನ ಪಾರ್ಕಿನಲ್ಲಿ ಹಸುರಿನ ಮಧ್ಯೆ ಹಾಯಾಗಿ ಕುಳಿತು ಬೇಕಾದ ಪುಸ್ತಕ, ಲೇಖನಗಳನ್ನು ಓದುತ್ತಾ ಕಾಲಕಳೆಯುವುದು, ಉದ್ದೇಶರಹಿತವಾಗಿ ತಿರುಗಾಡುವುದು, ನಿರಾಳವಾಗುವುದು, ಕೇಳುಗರಿಗೆ ನೋಡುಗರಿಗೆ ಇದೆಂಥಾ ಹುಚ್ಚುಕಲ್ಪನೆ ಅನ್ನಿಸದೇ ಇರದು! ಹೀಗೆ ಹೊರಟು ಬರುವ ಮುನ್ನ ನನಗೇ ನನ್ನ ಯೋಚನೆ ಒಂಥರಾ ವಿಚಿತ್ರ ಅನ್ನಿಸಿತ್ತು. ಮಗನನ್ನು ಬಿಟ್ಟು ಹೋಗುತ್ತಿದ್ದೀನಲ್ಲಾ, ಇಲ್ಲಿಯವರೆಗೆ ಒಂದು ದಿನವೂ ಬಿಟ್ಟಿರದ ಆತ, ಪ್ರತಿಯೊಂದಕ್ಕೂ ಅಮ್ಮಾ ಅಮ್ಮಾ ಎನ್ನುತ್ತಾ ಅಮ್ಮನನ್ನೇ ಆಶ್ರಯಿಸಿರುವವನು ಬೆಳಗ್ಗೆ ಏಳುವಾಗ ಇದ್ದಕ್ಕಿದ್ದಂತೆ ಅಮ್ಮ ಕಾಣೆಯಾಗಿದ್ದರೆ? ಗಲಿಬಿಲಿಗೊಂಡು ಅತ್ತೂಕರೆದು ರಂಪ ಮಾಡಿದರೆ ಎನ್ನುವ ಅಪರಾಧೀಪ್ರಜ್ಞೆ ಕಾಡುತ್ತಿತ್ತು. ಅದಕ್ಕೆ ಸರಿಯಾಗಿ ಗಂಡನೂ ನನ್ನ ಯೋಜನೆಗೆ ಮನಸಾರೆ ಒಪ್ಪಿದ್ದಂತೆ ಏನೂ ಅನಿಸಲಿಲ್ಲ.

ಒಂದಿಡೀ ದಿನ ಹಠ ಮಾಡುವ ಮಗನನ್ನು ಸಂಭಾಳಿಸುವ, ಊಟ-ತಿಂಡಿ ಮಾಡಿಸುವ ಜವಾಬ್ದಾರಿಯನ್ನು ನೆನೆದು ಕೊಂಚ ಕಳವಳಗೊಂಡಂತೆ ಇತ್ತು. ನಾನು ಮಾಡುತ್ತಿರುವುದು ಸರಿಯಾ? ಬೇಕಾ ಇದೆಲ್ಲಾ? ಗಂಡ-ಮನೆ-ಮುದ್ದುಮಗು-ಸಂಸಾರದೊಟ್ಟಿಗಿನ ಬೆಚ್ಚನೆ ಭಾನುವಾರಕ್ಕಿಂತ ಪಾರ್ಕಿನಲ್ಲಿ ಒಂಟಿಯಾಗಿ ಕಳೆಯುವ ವಿಭಿನ್ನ ಆಲೋಚನೆ ಮಿಗಿಲಾ? ಎನ್ನುವ ಗೊಂದಲ ಕಾಡುತ್ತಿತ್ತು.

ಈಗೊಂದು ತಿಂಗಳ ಹಿಂದೆ ನನ್ನ ಗಂಡ, ಒಂದಲ್ಲಾ ಎರಡಲ್ಲಾ ಒಟ್ಟಿಗೇ ಮೂರು ದಿನಗಳ ಕಾಲ ನನ್ನನ್ನೂ ಮಗುವನ್ನೂ ಇಬ್ಬರನ್ನೇ ಮನೆಯಲ್ಲಿ ಬಿಟ್ಟು ಟ್ರೆಕ್ಕಿಂಗ್ ಹೋಗಿದ್ದ. ಇಡೀ ದಿನ ಬೆಳಗಿನಿಂದ ರಾತ್ರಿಯವರೆಗೆ ನಾವಿಬ್ಬರೇ ಕಳೆಯುವುದು ಅಸಾಧ್ಯವಲ್ಲದಿದ್ದರೂ ನನಗೆ ಅಷ್ಟೇನೂ ಒಗ್ಗುತ್ತಿರಲಿಲ್ಲ. ಮಗನಿಗೂ ಅಪ್ಪನನ್ನು ಕಾಣದೆ, ಬರೀ ನನ್ನೊಬ್ಬಳ ಒಡನಾಟದಿಂದ ಬೋರ್ ಆಗುತ್ತದೆ, ಬೇಸರಿಸಿಕೊಂಡು ಹಠ ರಗಳೆಯೂ ಹೆಚ್ಚುತ್ತದೆ. ವಾರದ ದಿನಗಳಲ್ಲಿ ಬೆಳಿಗ್ಗೆ ಆತ ಏಳುವ ಮುಂಚೆ ಆಫೀಸಿಗೆ ಹೋಗಿ ಮಲಗುವ ಸಮಯದಲ್ಲಿ ಹಿಂತಿರುಗುವ ಅಪ್ಪ ವಾರಾಂತ್ಯದಲ್ಲೂ ಇಲ್ಲದಿದ್ದರೆ ಹೇಗೆ? ಎನ್ನುವ ಕಸಿವಿಸಿ ಮನಸ್ಸಿಗೆ. ಆದರೂ ಗಂಡಸರು ಹೆಂಗಸರಂತೆ ಭಾವನಾಜೀವಿಗಳಲ್ಲ! ಗಂಡ ಮಕ್ಕಳೊಟ್ಟಿಗೆ ಸಮಯ ಕಳೆಯುವುದಕ್ಕಿಂತ ಬೇರೆ ಯಾವ ಕಾರ್ಯಕ್ರಮಗಳೂ ಹೆಂಗಸರಿಗೆ ಅಂಥಾ ವರ್ತ್ ಅನ್ನಿಸುವುದಿಲ್ಲ. ಅದೇ ಗಂಡಸರು ರಿಲ್ಯಾಕ್ಸೇಶನ್, ಸ್ವಾತಂತ್ರ್ಯ, ಸ್ಪೇಸ್, ಹವ್ಯಾಸಗಳ ಮುಂದುವರಿಕೆ ಅಂಥ ಅದೂ ಇದೂ ಸಮಜಾಯಿಷಿ ಕೊಟ್ಟು ತಮಗೆ ಬೇಕಾದಾಗ ಯಾವ ಬಂಧವೂ ಜಗ್ಗದಂತೆ ಹೊರಟುಬಿಡುತ್ತಾರೆ!

ಗಂಡಸರು ಹೀಗೆ ಹೋಗುವುದು ಯಾರಿಗೂ ಅಸಹಜ ಎನ್ನಿಸುವುದೂ ಇಲ್ಲ; ಜವಾಬ್ದಾರಿಗಳಿಂದ ಕಳಚಿಕೊಂಡಂತೆ ಎಂದೂ ಅನ್ನಿಸುವುದಿಲ್ಲ. ದುಡಿಯುವ ಗಂಡಸಿಗೆ ವಿರಾಮ-ವಿಶ್ರಾಂತಿ ಬೇಕು ಎನ್ನುವ ಅನುಕಂಪ. ಅದೇ ಮಗುವನ್ನೂ ನೋಡಿಕೊಂಡು ಮನೆಕೆಲಸಗಳನ್ನು ನಿಭಾಯಿಸುವ, ಅಮ್ಮನಾದ ನಂತರ ವೈಯಕ್ತಿಕ ಜೀವನವೇ ಮರೀಚಿಕೆಯಾಗಿ, ಹವ್ಯಾಸ, ಸಿನೆಮಾ, ನಾಟಕ, ತಿರುಗಾಟ, ಎಲ್ಲವೂ ಬಂದ್ ಆಗಿ ಮಗು ಒಂದು ಹಂತಕ್ಕೆ ಬರುವವರಗೆ ಅಜ್ಞಾತವಾಸದಲ್ಲೇ ಕಳೆಯುವ ಹೆಂಗಸಿನ ಬಗ್ಗೆ ಈ ಸಮಾಜಕ್ಕೆ ಅಂಥಾ ಸಹಾನೂಭೂತಿಯೇನೂ ಇಲ್ಲ! ಈ ತೆರೆನಾದ ಯೋಚನೆಗಳೆಲ್ಲಾ ನುಗ್ಗಿ ಬಂದು ಮನಸ್ಸು ಘರ್ಷಣೆಗೊಳಗಾಗಿ ಹೋದರೂ ಕಷ್ಟ, ಹೋಗದಿದ್ದರೂ ನಷ್ಟ ಎನ್ನುವಂತಾಗಿ ಆದದ್ದಾಗಲೀ ಹೋಗುವುದು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಹೋಗುವುದೇ ಆದರೆ ಸಾಧ್ಯವಿದ್ದಷ್ಟು ದೂರ ನಡಿಗೆಯಲ್ಲೇ ಸಾಗಿ ನನ್ನ ಪಯಣಕ್ಕೊಂದು ವಿಶಿಷ್ಟ ಆರಂಭವನ್ನು ಕೊಡಬೇಕು ಎಂದು ಈ ಹಿಂದೆಯೇ ನಿರ್ಧರಿಸಿದ್ದೆ.

ಅದರಂತೆ ಸೂರ್ಯ ಹುಟ್ಟುವುದಕ್ಕೂ ಮೊದಲೇ ಹೊರಟು ಐದಾರು ಕಿ.ಮೀ ನಡೆದೇ ಕ್ರಮಿಸಿದೆ. ವಿಪರೀತ ಗುದ್ದುಗುಂಡಿ ರಸ್ತೆಗಳು, ಧೂಳೆಬ್ಬಿಸುತ್ತಾ ಸಾಗುವ ವಾಹನಗಳು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಸುರಿದ ಕಸದ ರಾಶಿ ಇದ್ಯಾವುದೂ ನನ್ನನ್ನು ಭಾದಿಸಲಿಲ್ಲ. ಸೂರ್ಯೋದಯಕ್ಕೂ ಮೊದಲು ತೀರಾ ಬೆಳಕು ಹರಿಯುವ ಮುನ್ನ ಆಕಾಶ-ವಾತಾವರಣ ತಿಳಿಗುಲಾಬಿ ಬಣ್ಣದಿಂದ ಕೂಡಿರತ್ತೆ; ಆ ಪ್ರಶಾಂತತೆಯನ್ನು ಮನಸ್ಸೊಳಗೂ ಬರಮಾಡಿಕೊಳ್ಳುತ್ತಾ ಕಸದ ರಾಶಿಯ ಬಲಬದಿಯಲ್ಲೇ ಮುಗಿಲೆತ್ತರಕ್ಕೆ ಬೆಳೆದು ಹಸುರು ಚೆಲ್ಲುತ್ತಿರುವ ಮರಗಳನ್ನು ನೋಡುತ್ತಾ ಸಾಗಿದೆ.

ಬೆಳಗಿನ ಜಾವದ ನಡಿಗೆ ದಿನದ ಆರಂಭಕ್ಕೆ ಹುರುಪು ತುಂಬಿ ದಿನವಿಡೀ ಉಲ್ಲಾಸದಿಂದಿರಲು ಸಹಾಯಕ. ಮೆಟ್ರೋದಲ್ಲಿ ಕುಳಿತಿದ್ದಾಗ ಈ ಹಿಂದೆ ಆಫೀಸ್ ಕೆಲಸಕ್ಕೆಂದು ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದುದು ನೆನಪಿಗೆ ಬಂತು. ಕಾಲ ಮುಂದಕ್ಕೋಡಿದೆ; ಬದುಕೂ ಬದಲಾಗಿದೆ. ಎಲ್ಲಿಗೇ ಆಗಲಿ ಯಾರೊಟ್ಟಿಗಾದರೂ ಹೋದರೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಆರಾಮಾಗಿರುತ್ತೇವೆ. ಅದೇ ಒಬ್ಬರೇ ಹೋಗಬೇಕಾಗಿ ಬಂದಾಗ ಏನೋ ಅಧೀರತೆ. ಇದು ಮದುವೆಯಾದ ಹೆಂಗಸರಲ್ಲಿ ಜಾಸ್ತಿ! ಇಂಥಾ ಅಳುಕು ಹಿಂಜರಿಕೆಯ ಭಾವವನ್ನು ನನಗೆ ನಾನೇ ತೊಡೆದುಕೊಳ್ಳುತ್ತಾ ಇಡೀ ದಿನದ ಹೊಸತನವನ್ನು ಕಲ್ಪಿಸಿಕೊಂಡು ಮೆಟ್ರೋ ಇಳಿದು ಒಮ್ಮೆ ಕಬ್ಬನ್ ಪಾರ್ಕ್ ಪ್ರವೇಶಿಸಿದೆನೋ ಅಲ್ಲಿಯ ಹಸಿರು ಗಿಡ ಮರಗಳ ಸಮೃದ್ಧಿ ಬಂದಿದ್ದು ಸಾರ್ಥಕ ಎಂದು ಸಾರಿಸಾರಿಗೂ ಹೇಳಿತು. ‘ಕಬ್ಬನ್ ಪಾರ್ಕಿನಲ್ಲಿ ಭಾನುವಾರಗಳು ವಿನೋದ ಮತ್ತು ಉಲ್ಲಾಸದಿಂದ ಕೂಡಿರುತ್ತವೆ’ ಎನ್ನುವ ಬೋರ್ಡ್ ಇತ್ತು. ಅದು ನಿಜವೆನ್ನುವಂತೆ ಎಷ್ಟೊಂದು ಜನರು ಎಷ್ಟೆಲ್ಲಾ ಚಟುವಟಿಕೆಯಿಂದಿದ್ದಾರೆ! ಒಂದೆಡೆ ಭರತನಾಟ್ಯ-ನೃತ್ಯಗಳ ಕಾರ್ಯಕ್ರಮ; ಬೇಕಾದರೆ ನೋಡಬಹುದು, ಇಲ್ಲದಿದ್ದರೆ ಎಳೆಬಿಸಿಲಿನಲ್ಲಿ ನಡೆಯುತ್ತಾ ಓಡುತ್ತಾ ನಿಸರ್ಗಸಹಜ ಹಕ್ಕಿಗಳ ಇಂಚರ ಆಲಿಸಬಹುದು. ಬೆಳಗು ಬಿಸಿಲನ್ನು ಬೆರಗಿನಿಂದ ನೋಡುತ್ತಾ ನಿರಾಳವಾಗಿ ಸುತ್ತಿದೆ.

ಮಗುವಾದ ನಂತರ ಎಲ್ಲಿಗೇ ಹೋದಾಗಲೂ ಓಡುವ ಕುಣಿಯುವ ಅವನ ಮೇಲೊಂದು ಸದಾ ಎಚ್ಚರದ ನಿಗಾ ಇಡಬೇಕಾಗುತ್ತಿತ್ತು. ತಿನ್ನುವುದು, ನಡೆಯುವುದು, ನೋಡುವುದು ಕೇಳುವುದು ಯಾವುದನ್ನೂ ಸಂಪೂರ್ಣವಾಗಿ ತೊಡಗಿಕೊಂಡು ಮಾಡಲಾಗುತ್ತಿರಲಿಲ್ಲ. ಒಂದು ಕಣ್ಣು ಕಾಳಜಿ ಅವನ ಮೇಲೆಯೇ ಇಡಬೇಕಾದ ಅನಿವಾರ್ಯತೆ. ಈ ರೀತಿ ಸದಾ ಜಾಗೃತವಾಗಿರಬೇಕಾದ ಒತ್ತಡ ದೇಹಕ್ಕೂ ಮನಸ್ಸಿಗೂ ದಣಿವನ್ನುಂಟುಮಾಡುತ್ತಿತ್ತು. ಹಾಗಾಗಿ ಎಲ್ಲಿಗೇ ಹೊರಗೆ ತಿರುಗಾಡುವುದಕ್ಕೆ ಹೋಗಿದ್ದರೂ ವಾಪಸ್ಸು ಬರುವ ಹೊತ್ತಿಗೆ ತಲೆನೋವು ಶತಃಸಿದ್ಧ. ಆದರೆ ಇವತ್ತು ಈ ಒಂದು ದಿನ ಸಂಪೂರ್ಣ ಭಿನ್ನ; ಪೂರ್ತಿ ನಿರಾಳತೆ. ಇಲ್ಲಿ ಈಗ ಈ ಒಂದು ದಿನ ನಾನು ಅಮ್ಮನಾಗಿರಬೇಕಾಗಿಲ್ಲ! ನಾನು ನಾನೇ ಆಗಿರಬಹುದು. ಕೇವಲ ನಾನು! ತಲೆ ಮೇಲಿದ್ದ ಭಾರ ಏಕಾಏಕಿ ಕೆಳಗಿಳಿಸಿದಾಗ ಎಷ್ಟು ಹಗುರ ಎನ್ನಿಸುತ್ತದೆಯೋ ಹಾಗೆ. ಈ ಭಾವವೇ ಸಾಕು, ಅಕ್ಷರಶಃ ಕುಣಿದು ಕುಪ್ಪಳಿಸಲು. ಎಲ್ಲಿಗೋ ಹೋದೆ, ಪುನಃ ಬಂದೆ, ಅಲ್ಲಿಂದಿಲ್ಲಿಗೆ ಅಲೆದರೂ ನಡೆದ ದಣಿವೇ ಇಲ್ಲ. ಗಂಟೆ ಹತ್ತಾದರೂ ಹೊಟ್ಟೆ ಚುರುಗುಟ್ಟಲೂ ಇಲ್ಲ. ಹಾಗೇ ಸುತ್ತಾಡುತ್ತಿದ್ದಾಗ ಒಬ್ಬಾತ ಅಲ್ಲೇ ಫ್ರೆಶ್ ಆಗಿ ವಡಾಪಾವ್ ಮಾಡಿ ಮಾರುತ್ತಿದ್ದುದು ಕಾಣಿಸಿತು. ನನಗೀ ವಡಾಪಾವ್, ಸ್ಯಾಂಡ್‍ವಿಚ್ ಇಂಥಾದ್ದೆಲ್ಲಾ ಆಗಿಬರುವುದಿಲ್ಲ; ಸಾಂಪ್ರದಾಯಿಕ ತಿಂಡಿಗಳೇ ಇಷ್ಟ. ಆದರೆ ಇಂದು ತಿಂದ ವಡಾಪಾವ್ ವಿಪರೀತ ರುಚಿಯಾಗಿತ್ತು. ಬಹುಷಃ ಅದಕ್ಕೆ ಕಾರಣ ಮತ್ತದೇ ನಿರಾಳತೆ. ಎಲ್ಲೇ ಹೋದಾಗಲೂ ನಾನು ತಿಂದು ಮಗುವಿಗೆ ತಿನ್ನಿಸಬೇಕು ಎನ್ನುವ ಅವಸರ, ಅಥವಾ ಅವನ ಹಿಂದೆ ಮುಂದೆ ಓಡಿ ಸರ್ಕಸ್ ಮಾಡಿ ಅವನಿಗೆ ತಿನ್ನಿಸಿ ನಾನು ತಿನ್ನಬೇಕೆಂಬ ಒತ್ತಡದಿಂದಾಗಿ ತಿಂಡಿ-ಊಟಗಳನ್ನು ಆರಾಮಾಗಿ ಆಸ್ವಾದಿಸಲು ಸಾಧ್ಯವಾಗುತ್ತಿರಲಿಲ್ಲ. ಇವತ್ತೊಂದು ದಿನ ಅದ್ಯಾವುದೇ ಜವಾಬ್ದಾರಿಗಳಿಲ್ಲ. ಕಟ್ಟಳೆಗಳಿಂದ ಸ್ವತಂತ್ರಳು!

ಗಂಡ-ಮನೆ-ಮುದ್ದುಮಗು-ಸಂಸಾರದೊಟ್ಟಿಗಿನ ಬೆಚ್ಚನೆ ಭಾನುವಾರಕ್ಕಿಂತ ಪಾರ್ಕಿನಲ್ಲಿ ಒಂಟಿಯಾಗಿ ಕಳೆಯುವ ವಿಭಿನ್ನ ಆಲೋಚನೆ ಮಿಗಿಲಾ? ಎನ್ನುವ ಗೊಂದಲ ಕಾಡುತ್ತಿತ್ತು.

ನಿಧಾನವಾಗಿ ಆತಂಕ, ಗಡಿಬಿಡಿಗಳಿಲ್ಲದೇ ವಡಾಪಾವ್, ಬ್ರೆಡ್ ಬಟರ್ ಜಾಮ್ ತಿಂದೆ. ಅಲ್ಲೇ ಕಲ್ಲುಬೆಂಚಿನ ಮೇಲೆ ಕುಳಿತು ಬಿಸಿಬಿಸಿ ರಾಗಿ ಮತ್ತಿತ್ತರ ಧಾನ್ಯಮಿಶ್ರಿತ ಮಾಲ್ಟ್ ಕುಡಿದೆ. ಹೊಟ್ಟೆ ಧನ್ಯವಾಯಿತು. ಒಂದು ಮರದ ಕೆಳಗೆ ಕುಳಿತು ಧೀರ್ಘವಾಗಿ ಉಸಿರೆಳೆದುಕೊಂಡು ಮುಂದಿನ ಕೆಲಸಕ್ಕೆ ಸಜ್ಜಾದೆ. ಯಾವುದೋ ಕಾಲದಿಂದ ಓದಬೇಕೆಂದು ಗಂಟು ಕಟ್ಟಿಟ್ಟುಕೊಂಡಿದ್ದ ಹಳೆಯ ಪತ್ರಿಕೆಗಳ ಪುರವಣಿಗಳನ್ನು ತೆಗೆದೆ. ಅದರಲ್ಲಿ ಮೂರು ವರ್ಷಗಳಷ್ಟು ಹಳೆಯದಾದ ಪತ್ರಿಕೆಗಳೂ ಇದ್ದವು! ಆಸ್ಟ್ರೇಲಿಯಾದ ದಟ್ಟಕಾಡಿನ ಮರಗಳ ಬಗ್ಗೆ, ಅಡಿಗರ ಬಗ್ಗೆ, ಹೆಸರಾಂತ ಲೇಖಕರು ತಮ್ಮ ಮೊದಲ ಬರವಣಿಗೆಗಳ ಬಗ್ಗೆ ಹೇಳಿಕೊಂಡಿದ್ದು, ಮಲೆನಾಡಿನ ಹುಡುಗಿಯೊಬ್ಬಳ ಫೋಟೋಗ್ರಫಿ-ಚಾರಣದ ಆಸಕ್ತಿಯ ಬಗ್ಗೆ, ಭಾರತೀಯ ಜನತಾಪಕ್ಷ ಈ ಮಟ್ಟಕ್ಕೆ ಬೆಳೆದು ಬಂದಿದ್ದರ ಹಿಂದಿನ ಚರಿತ್ರೆ, ರುದ್ರಗಡದ ಕೋಟೆಯ ಬಗ್ಗೆ ಹೀಗೆ ಆಸಕ್ತಿಹುಟ್ಟಿಸಿದ ಲೇಖನಗಳನ್ನು ನಿಧಾನವಾಗಿ ಓದಿ ಮುಗಿಸಿದೆ. ಪಾಪು ಏಳುವುದರೊಳಗಾಗಿ ಓದಬೇಕೆನ್ನುವ ಅವಸರವಿಲ್ಲ. ಮತ್ತದೇ ನಿರಾಳತೆ!

ಮಧ್ಯೆ ನನ್ನಿಷ್ಟದ ಬಿಸಿಬಿಸಿ ಟೀ ಕುಡಿದೆ. ಕತ್ತೆತ್ತಿ ನೋಡಿದರೆ ಹಸಿರು ಎಲೆಗಳ ಚಪ್ಪರ, ಆಗಾಗ ಬೀಸುವ ಗಾಳಿಗೆ ಒಣಗಿದ ಎಲೆಗಳು ಗುಂಪು ಗುಂಪಾಗಿ ಬೀಳುವ ದೃಶ್ಯ, ಹಕ್ಕಿಗಳ ಕೂಗು ಮನಸ್ಸಿಗೆ ಹಿತ ಎನಿಸಿತು. ಹೈಸ್ಕೂಲು ಕಾಲೇಜು ದಿನಗಳಲ್ಲಿ ನಮ್ಮನೆ ಹತ್ತಿರವೇ ಇದ್ದ ಚಿಕ್ಕ ಕಾಡಿನಲ್ಲಿ ಕೂಗಳತೆಯ ದೂರದಲ್ಲಿ ಮರವೊಂದರ ಕೆಳಗೆ ಕುಳಿತು ಹೀಗೇ ಓದಿಕೊಳ್ಳುತ್ತಿದ್ದೆ. ಈಗ ಎಷ್ಟೋ ವರ್ಷಗಳ ನಂತರ ಮತ್ತದೇ ಭಾಗ್ಯ! ಮನಸ್ಸು ಕುಣಿಯಿತು. ಊಟಕ್ಕೆ ಏಳಲು ಇಷ್ಟವೇ ಇಲ್ಲ. ಆದರೂ ಚುರುಗುಡಲು ಶುರುಮಾಡಿದ್ದ ಹೊಟ್ಟೆಗೆ ಸ್ವಲ್ಪ ತುಂಬಿಸುವ ಎಂದು ಎಲ್ಲಾದರೂ ತಳ್ಳುಗಾಡಿಗಳ ಊಟವಾದರೂ ಸಿಗಬಹುದು ಎಂದು ಅಲೆದೆ. ಹತ್ತಿರದಲ್ಲೆಲ್ಲೂ ಒಳ್ಳೆ ಹೋಟೆಲ್ ಇರುವ ಬಗ್ಗೆಯೂ ಮಾಹಿತಿಯಿರಲಿಲ.್ಲ ಬೇಯಿಸಿದ ಜೋಳ, ಹಣ್ಣಿನ ಹೋಳುಗಳನ್ನು ತಿಂದು ಕಬ್ಬಿನ ಹಾಲು ಕುಡಿದು ಮತ್ತದೇ ಜಾಗದಲ್ಲಿ ಕುಳಿತು ಓದಲಾರಂಭಿಸಿದೆ. ಎಷ್ಟೋ ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಳೆಯ ಪೇಪರ್ ಗಂಟನ್ನು ಓದಿ ಮುಗಿಸಿ ಋಣಮುಕ್ತಳೂ ಒತ್ತಡ ರಹಿತಳೂ ಆದೆ. ಮತ್ತದೇ ನಿರಾಳತೆಯಲ್ಲಿ ‘ನೆನಪೇ ಸಂಗೀತ’ ಪುಸ್ತಕವನ್ನೋದಲು ಕೈಗೆತ್ತಿಕೊಂಡೆ.

ಹಿರಿಯರೊಬ್ಬರು ವರ್ಷಕ್ಕೆ ಎಪ್ಪತ್ತು ಪುಸ್ತಕಗಳನ್ನೋದಿದ್ದೇನೆಂದು ಹೇಳಿದ್ದನ್ನು ನೆನನಪಿಸಿಕೊಂಡು ದಂಗಾಗಿ ಇನ್ನಾದರೂ ಹೇಗಾದರೂ ಓದುವ ವೇಗ ಹೆಚ್ಚಿಸಿಕೊಳ್ಳುವುದರ ಜೊತೆಗೆ ಓದುವ ಕ್ರಿಯೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಬೇಕೆಂದು ನನಗೆ ನಾನೇ ಷರತ್ತು ವಿಧಿಸಿಕೊಂಡೆ. ಸುತ್ತಲೂ ಕಣ್ಣಾಡಿಸಿದಾಗ ಗಂಡ, ಚಿಕ್ಕ ಮಕ್ಕಳು, ಕುಟುಂಬದ ಗೆಳೆಯರ ಜೊತೆ ಊಟ ಕಟ್ಟಿಕೊಂಡು ಬಂದಿರುವವರು, ಗೆಳೆಯರ ಗುಂಪು, ಪ್ರೇಮಿಗಳು, ಹೊಸದಾಗಿ ಮದುವೆಯಾಗಿರುವವರು, ವಿದ್ಯಾರ್ಥಿಗಳು, ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಫೋಟೋಶೂಟ್ ಮಾಡಿಸುತ್ತಿರುವ ಭಾವೀ ಅಪ್ಪ-ಅಮ್ಮಂದಿರು, ಒಬ್ಬಂಟಿಯಾಗಿರುವವರು, ವಯಸ್ಸಾದವರು ಹೀಗೇ ಥರಹೇವಾರಿ ಜನರು ಕಾಣಿಸಿ ಅವರೆಲ್ಲರ ಮನಸ್ಸಲ್ಲಿದ್ದಿರಬಹುದಾದ ಭಾವಗಳ ಬಗ್ಗೆ ಯೋಚಿಸಿದರೆ ಎಷ್ಟೊಂದು ಕಥೆಗಳಿರಬಹುದಲ್ಲ ಎನಿಸಿತು. ಜೊತೆಗೆ ಎಲ್ಲರ ಬದುಕಿನಲ್ಲೂ ಉರುಳುವ ಕಾಲಚಕ್ರದ ನೆನಪಾಯಿತು.

ಬಾಲ್ಯ-ಯವ್ವನ-ಮದುವೆ-ದಾಂಪತ್ಯ-ಮಕ್ಕಳು-ಮಧ್ಯವಯಸ್ಸು-ಮುಪ್ಪು ಹೀಗೇ ಎಷ್ಟೊಂದು ಅವಸ್ಥೆಗಳನ್ನು ದಾಟುತ್ತಾ ಸ್ಥಿತ್ಯಂತರಗಳನ್ನು ಅನುಭವಿಸುತ್ತಾ ಬರುತ್ತೇವಲ್ಲಾ ಎಂದುಕೊಳ್ಳುತ್ತಾ ನಾನೀಗ ಬದುಕಿನ ಯಾವ ಘಟ್ಟದಲ್ಲಿದ್ದೇನೆ ಎಂದು ಯೋಚಿಸುವಂತಾಯಿತು. ನನ್ನ ಬದುಕಿನ ಪ್ರಮುಖ ಹಂತಗಳು ಹಾಗೇ ಚಕಚಕನೇ ಹೊಳೆದುಹೋದವು. ಸಂತೋಷ-ದುಃಖ, ಅತೃಪ್ತಿ, ಕೀಳರಿಮೆ, ಖುಷಿ, ಉತ್ಸಾಹ, ಹುಮ್ಮಸ್ಸು, ವಿಚಿತ್ರ ಘಟನೆಗಳು, ಅಸಹನೆ, ಅಸ್ಥಿರತೆ, ಆನಂದ ಹೀಗೇ ಎಷ್ಟೊಂದು ಏರಿಳಿತಗಳು! ಸಂಪರ್ಕಕ್ಕೆ ಬಂದ ವ್ಯಕ್ತಿಗಳು, ಕಲಿತ ಪಾಠಗಳು, ಒದೊಂದು ಹಂತದಲ್ಲೂ ಆದ ಪ್ರತಿದಿನ ಆಗುತ್ತಿರುವ ಜ್ಞಾನೋದಯಗಳು ಹೀಗೆ ಬದುಕಿನ ವ್ಯಾಪ್ತಿಗೆ ವಿಶಾಲತೆಗೆ ಬೆರಗಾದೆ. ಅನಿರೀಕ್ಷಿತವಾಗಿ ಒದಗಿ ಬಂದ ಇಂಥಾ ಒಂದು ದಿನ, ಆಗುವುದನ್ನು ಸ್ವೀಕರಿಸು; ವೃಥಾ ಮನಸ್ಸಿಗೆ ವ್ಯಥೆ ಕೊಟ್ಟುಕೊಳ್ಳಬೇಡ ಎಂದು ಸಮಾಧಾನ ಹೇಳಿತು. ನನ್ನ ಗಂಡ ನನ್ನನ್ನೂ ಮಗುವನ್ನೂ ತೀರಾ ಅನಿವಾರ್ಯವಲ್ಲದಿದ್ದರೂ ಆತನ ಖುಷಿ ಸಂತೋಷವನ್ನೇ ಮುಖ್ಯವಾಗಿಟ್ಟುಕೊಂಡು ಮೂರು ದಿನ ಬಿಟ್ಟು ಹೋಗಿದ್ದರಿಂದಾಗಿ ನನಗೂ ಒಂದು ದಿನವನ್ನು ವಿಭಿನ್ನವಾಗಿ ನಿರಾಳವಾಗಿ ಕಳೆಯುವ ಯೋಚನೆ ಹುಟ್ಟಿತು. ಇಲ್ಲದಿದ್ದರೆ ಖಂಡಿತಾ ಹೀಗೆ ಬಂದು ಪಾರ್ಕಿನಲ್ಲಿ ಒಂದಿಡೀ ದಿನ ಮನಬಂದಂತೆ ಕಳೆಯುವ ಮನಸ್ಸೇ ಮಾಡುತ್ತಿರಲಿಲ್ಲ!

ಎಲ್ಲರಿಗೂ ಅವರಿಷ್ಟದಂತೆ ಬದುಕುವ ಹಕ್ಕಿದೆ, ಒಪ್ಪಿಕೊಳ್ಳುತ್ತೇನೆ; ಆದರೂ ಬದುಕನ್ನು ಬದುಕುವುದರಲ್ಲಿ ಗಂಡಸಿಗಿರುವ ಅವಕಾಶಗಳು, ಹೆಂಗಸಿಗಿರುವ ಮಿತಿಗಳು ಅಡ್ಡಿ ಆತಂಕಗಳು ನನ್ನನ್ನು ಸದಾ ಕಾಡುವ ವಿಷಯ. ಅದರಲ್ಲೂ ಹೆಣ್ಣು ಅಮ್ಮನಾದ ನಂತರವಂತೂ ನಿರಾಳತೆ ಎನ್ನುವುದು ಎಷ್ಟು ಕಷ್ಟ ಮತ್ತು ಎಷ್ಟು ದುಬಾರಿ! ಹೀಗೆ ಹೊರಟುಬರುವ ಹಿಂದಿನ ರಾತ್ರಿ ಹಿಂಜರಿದಿದ್ದು ನೆನಪಾಗಿ ಒಂದೊಮ್ಮೆ ಬರದೇ ಇದ್ದಿದ್ದರೆ ಕೊಡವಿಕೊಳ್ಳುವದರಿಂದ ಸಿಗಬಹುದಾದ ಎಷ್ಟೆಲ್ಲಾ ನಿರಾಳತೆ, ತೆರೆದುಕೊಳ್ಳುವುದರಿಂದ ಸಿಗುವ ವಿಶಿಷ್ಟ ಅನುಭವಗಳಿಂದ ವಂಚಿತಳಾಗುತ್ತಿದ್ದೆ ಎನಿಸಿತು. ಯಾವುದರ ಬಗ್ಗೆಯೂ ಅತಿಯಾಗಿ ಯೋಚಿಸಬಾರದು, ಕಡಿಮೆ ಯೋಚಿಸಿ ಹೆಚ್ಚು ಜೀವಿಸಿ ಎನ್ನುವ ಪಾಠವನ್ನೂ ಕಲಿಸಿತು. ನನ್ನ ಜೋಳಿಗೆಯಲ್ಲಿರುವ ಇನ್ನೂ ಎರಡು ಇಂಥದ್ದೇ ದಿನಗಳನ್ನು ಕಲ್ಪಿಸಿಕೊಂಡು ಹಿರಿಹಿರಿಹಿಗ್ಗಿದೆ.

ಓದಬೇಕಾದ ಪುಸ್ತಕಗಳು, ಮನಸ್ಸಿಗೆ ಅನ್ನಿಸಿದ್ದನ್ನು ಕೊನೇಪಕ್ಷ ಬರೆಯಲು ಪ್ರಯತ್ನಿಸುವುದು, ಇನ್ನೂ ಏನೇನೋ ಅಂದುಕೊಂಡಿದ್ದನ್ನು ಮಾಡಿಮುಗಿಸುವುದಕ್ಕೆ ಒದಗಿಬರುವ ಅವಕಾಶವನ್ನು ನೆನದು ಪುಳಕಗೊಂಡು ಮನೆಗೆ ಹಿಂತಿರುಗುವುದಕ್ಕೆ ಸಜ್ಜಾದೆ. ಬೆಳಗಿನಿಂದ ಸಂಜೆಯವರೆಗೆ ನನಗೆ ಸಿಕ್ಕಿದ ಸಮಯವನ್ನು ವಿಭಿನ್ನವಾಗಿ ಕಳೆದಿದ್ದರ ಬಗ್ಗೆ ಖುಷಿಯಿತ್ತು. ನಾನು ಕೇವಲ ನಾನೇ ಆಗಿ ಕಳೆದ ಈ ಒಂದು ದಿನದ ಹೊಸತನ ಕೊಟ್ಟ ಆಹ್ಲಾದ ಮುಂದಿನ ನನ್ನಿಡೀ ಬದುಕಿಗೆ ಉತ್ಸಾಹ ಹುಮ್ಮಸ್ಸು ತುಂಬುವಷ್ಟು ಶಕ್ತಿಯುತವಾದುದು.