ಈ ರೋಸಿ ಸಿಸ್ಟರ್ ಮತ್ತು ಸುಶೀಲಾ ಟೀಚರ್ ಬಾಡಿಗೆಗಿದ್ದ ಕೋಣೆಗಳ ನಡುವಲ್ಲಿ ಈರಪ್ಪ ಟೈಲರ ಅಂಗಡಿಯಿತ್ತು. ಈರಪ್ಪ ಟೈಲರು ತಮ್ಮ ಸಂಸಾರ ಸಮೇತವಾಗಿ ಒಳಕೋಣೆಯಲ್ಲಿ ವಾಸಿಸುತ್ತಿದ್ದು ಹೊರಗಿನ ಕೋಣೆಯನ್ನು ಟೈಲರ್ ಅಂಗಡಿಯನ್ನಾಗಿ ಮಾಡಿಕೊಂಡಿದ್ದರು. ಈ ಈರಪ್ಪ ಟೈಲರ್ ಮಾತು ತುಂಬ ಕಡಿಮೆ ಆಡುತ್ತಿದ್ದರು. ಏಕೆಂದರೆ ಅವರು ಯೌವನದಲ್ಲಿರುವಾಗ ಹಂದಿ ಬೇಟೆಯ ಸಮಯದಲ್ಲಿ ಕಾಡತೂಸೊಂದು ಆಕಸ್ಮಿಕವಾಗಿ ಅವರ ಬಾಯನ್ನು ಒರಸಿಕೊಂಡು ಹೋಗಿ ಅವರ ತುಟಿಯ ತುದಿಯಲ್ಲಿ ಸಣ್ಣದೊಂದು ತೂತವುಂಟಾಗಿ ಅವರಿಗೆ ಮಾತನಾಡಲು ತೊಂದರೆಯಾಗಿತ್ತು.
‘ನಾನು ಮೆಚ್ಚಿದ ನನ್ನ ಕಥೆʼಯ ಸರಣಿಯಲ್ಲಿ ಅಬ್ದುಲ್‌ ರಶೀದ್‌ ಬರೆದ ಕಥೆ ‘ಈ ಮಳೆಯ ನಂತರʼ

 

ಹಾಗೆ ನೋಡಿದರೆ ದೊಡ್ಡ ಹೇಳಿಕೊಳ್ಳುವಂತಹ ಚಂದದ ಊರೇನೂ ಅಲ್ಲ ಇದು. ಬಯಲು ಸೀಮೆ ಕಳೆದು, ತಿರುವಿನ ರಸ್ತೆ ಶುರುವಾಗಿ, ಕುರುಚಲು ಕಾಡು ಕಂಡುಬಂದು, ಇದ್ದಕ್ಕಿದ್ದಂತೆ ತೇಗದ ದೊಡ್ಡದೊಂದು ನೆಡುತೋಪು ಆರಂಭವಾಗಿ ಮುಗಿಯುವಷ್ಟರಲ್ಲಿ ಈ ಊರು ಬಂದುಬಿಡುತ್ತದೆ. ನೋಡುವವರು ತಮ್ಮ ಕಣ್ಣುಗಳನ್ನು ಈ ಊರಿನ ಬಣ್ಣಗಳಿಗೆ ಹೊಂದಿಸಿಕೊಳ್ಳುವಷ್ಟರಲ್ಲಿ ಅದು ಕಳೆದೇ ಹೋಗಿ ರಸ್ತೆಯ ಎರಡೂ ಕಡೆಗಳಲ್ಲಿ ಕಾಫಿ ತೋಟಗಳು ಶುರುವಾಗಿ ಬಿಡುತ್ತವೆ. ಆಮೇಲೆ ಬರಿಯ ಬೇಲಿಗಳು ಮತ್ತು ಅದರೊಳಗಡೆ ಕಾಫಿ, ಕಿತ್ತಳೆ, ಕರಿಮೆಣಸು, ಹಾಲವಾನ, ಹಲಸು, ಬೀಟೆ ಮತ್ತು ಸಿಲ್ವರ್ ಮರಗಳು. ಮುಂದೆ ಹೋದಂತೆ ಮಂಜೋ, ಮಳೆಯೋ, ಎಳೆಬಿಸಿಲೋ ಏನೋ ಒಂದು ಕಾಲಕಾಲಕ್ಕೆ ತಮ್ಮ ಭಂಗಿಯನ್ನು ಬದಲು ಮಾಡಿಕೊಂಡು ಇನ್ನು ಇದು ಮುಗಿಯುವುದೇ ಇಲ್ಲವೇನೋ ಎಂದುಕೊಳ್ಳುವಷ್ಟರಲ್ಲಿ ಇಂತಹದೇ ಇನ್ನೊಂದು ಊರು ಬಂದು ಬಿಡುತ್ತದೆ. ಆನಂತರ ಇಂತಹದೇ ಇನ್ನೂ ಹಲವು ಊರುಗಳು ಮುಗಿದು ಕೊನೆಯಲ್ಲಿ ಈ ಊರಿನ ನೆನಪು ಮನಸಿನಿಂದ ಮರೆತೇ ಹೋಯಿತು ಎನ್ನುವಷ್ಟರಲ್ಲಿ ಅದು ಯಾಕೋ ಏನೋ ಬಣ್ಣಬಣ್ಣದ ಹಲವು ಮಾಸಲು ಚಿತ್ರಗಳು ಹಾಗೇ ಉಳಿದುಕೊಂಡುಬಿಡುತ್ತವೆ.

ಹಾಗೆ ಉಳಿಯಲು ಕಾರಣ ಬಹುಶಃ ಈ ಊರಿನ ಮನೆಗಳಿಗೆ ಬಳಿದಿರುವ ಬಣ್ಣ ಮತ್ತು ಈ ಮನೆಗಳ ಮುಂದೆ ಬೆಳೆದಿರುವ ಬಣ್ಣಬಣ್ಣದ ಹೂಗಳಿರಬೇಕು. ಕಿರಿದಾದ ತಗ್ಗು ರಸ್ತೆಯ ಎರಡೂ ಬದಿಗಳಲ್ಲಿ ಉದ್ದಕ್ಕೆ ಸಾಲುಸಾಲಾಗಿ ನಿಂತಿರುವ ಈ ಮನೆಗಳ ದಪ್ಪದಪ್ಪದ ಗೋಡೆ, ಕಿಟಕಿ ಬಾಗಿಲುಗಳಿಗೆ ಬಳಿದಿರುವ ಏಕತಾನ ಅನಿಸಬಹುದಾದ ಬಣ್ಣ ಮತ್ತು ಹೂಕುಂಡಗಳಲ್ಲಿ ಶಿಸ್ತಾಗಿ ಬೆಳೆದಿರುವ ಬೇರೆಲ್ಲೂ ಕಾಣಲು ಸಿಗದ ಒಂದೇ ರೀತಿಯ ಹೂಗಳು ಈ ಊರಿಗೆ ಯಾವುದೋ ಒಂದು ರೀತಿಯ ಅಸಹಜ ಕಲಾವಂತಿಕೆಯನ್ನು ನೀಡಿದಂತಿದೆ.

ಬಯಲು ಸೀಮೆಯ ಯಾವತ್ತೂ ಮಂಕು ಕವಿದಂತಿರುವ ಆಕಾಶ ಕಳೆದು, ರಸ್ತೆಗಳು ತಿರುವು ತಿರುವಾಗಲು ತೊಡಗಿ, ಕುರುಚಲು ಕಾಡಿನ ನಡುವೆ ಕುಸಿದು ಹೋದಂತಿರುವ ಬ್ರಿಟಿಷರ ಕಾಲದ ಅರಣ್ಯ ಇಲಾಖೆಯ ಹಳೆಯ ವಸತಿಗೃಹಗಳು, ಅವುಗಳ ಮುಂದೆ ಬಿದ್ದುಕೊಂಡಂತಿರುವ ಹಾಡಿಗಳಲ್ಲಿ ವಾಸಿಸುತ್ತಿರುವ ಜೇನು ಕುರುಬ ಮಾವುತರ ಮುಖಗಳು, ಅವರು ಸಾಕಿದ ಮಕ್ಕಳಂತಿರುವ ಸೊರಗಿದ ಸಾಕಾನೆಗಳು, ಗೊಣ್ಣೆ ಸುರಿಸುತ್ತಾ ರಸ್ತೆ ನೋಡುತ್ತಾ ನಿಂತಿರುವ ಅವರ ಮಕ್ಕಳು ಇದೆಲ್ಲ ಕಳೆದಂತೆ ಎದುರಾಗುವ ತೇಗದ ನೆಡುತೋಪು ಎಂದೂ ಸುಂದರವಾಗಿ ಕಾಣಿಸುವುದೇ ಇಲ್ಲ. ಮಳೆಯಲ್ಲಾದರೆ ಲಂಟಾನಾ ಪೊದೆಗಳನ್ನು ನೋಡುವ ಬೇಸರ, ಬಿಸಿಲುಗಾಲದಲ್ಲಿ ಕಾಡುಬೆಂಕಿಗೆ ಬಲಿಯಾಗಿ ಸುಟ್ಟು ಹೋಗಿರುವ ಅದೇ ಪೊದೆಗಳು. ಅನ್ಯಮನಸ್ಕನಾಗದೇ ಹೋದರೆ ತೀರಾ ಕಿರಿಕಿರಿಯಾಗಬಲ್ಲ ಈ ಸುಡುಸುಡು ಏಕತಾನತೆಯಿಂದ ನಿಮ್ಮನ್ನು ರಕ್ಷಿಸಲೋ ಎಂಬಂತೆ ಈ ಊರು ಬಂದು ಬಿಡುತ್ತದೆ.

ಊರು ಎದುರಾಗುತ್ತಿದ್ದಂತೆ ಎದುರಾಗುವ ಒಂದು ಹಳೆಯ ಕಾಲದ ಚರ್ಚು, ಅದರ ಎದುರಲ್ಲೇ ಇರುವ ಅಯ್ಯಪ್ಪ ದೇವರ ಗುಡಿ, ಮುಂದೆ ಉದ್ದದ ಮಿನಾರೊಂದನ್ನು ದೂರದಿಂದಲೇ ತೋರಿಸುತ್ತಾ ಎದ್ದು ನಿಂತಿರುವ ಮುಸಲ್ಮಾನರ ಮಸೀದಿ, ಅದರ ಎದುರುಗಡೆ ಒಂದು ಅಂಚೆಯ ಕಚೇರಿ, ಆಟದ ಮೈದಾನದ ಮೂಲೆಯಲ್ಲಿರುವ ಸರಕಾರೀ ಶಾಲೆ, ಅದರ ಬದಿಯಲ್ಲಿ ದನದ ಆಸ್ಪತ್ರೆ, ಇನ್ನೂ ಕೆಳಗೆ ಒಂದು ಗ್ರಂಥಾಲಯ-ಎಲ್ಲವೂ ಯಾರೋ ಪುಣ್ಯಾತ್ಮರು ತುಂಬಾ ಯೋಚಿಸಿ ಕಟ್ಟಿರುವಂತೆ ಈ ಕಾಡ ನಡುವೆ ಕೊಂಚ ಅಸಹಜವಾಗಿಯೇ ಕಾಣಿಸುತ್ತದೆ.

ರಸ್ತೆಯ ಬದಿಯಲ್ಲಿ ಶಾಲೆಗೆ ಹೋಗುತ್ತಲೋ ಮದರಸಾದಿಂದ ಬರುತ್ತಲೋ ಇರುವ ಮಕ್ಕಳು, ರಸ್ತೆಯ ನಡುವಲ್ಲಿ ಒಂದೆರೆಡು ದನಕರುಗಳು. ಮರದ ದಿಮ್ಮಿಗಳನ್ನೋ, ಕಾಫಿ ತುಂಬಿದ ಚೀಲಗಳನ್ನೋ ಪೇರಿಸಿಕೊಂಡು ಬರುತ್ತಿರುವ ಲಾರಿಗಳು, ಸೊಗಸಾಗಿ ಠಾಕುಠೀಕಾಗಿ ಸೂಟು ಧರಿಸಿಕೊಂಡು ಹಳೆಯ ಶೈಲಿಯ ಬ್ರಿಟಿಷ್ ಹ್ಯಾಟ್‍ ಗಳನ್ನು ತಲೆಗೆ ಏರಿಸಿಕೊಂಡು ಜೀಪು ಓಡಿಸುತ್ತಿರುವ ಕಾಫೀ ತೋಟದ ಮಾಲೀಕರುಗಳು. -ಎಲ್ಲವೂ ಈ ದಾರಿಯಲ್ಲಿ ಹಾದು ಹೋಗುವವರಿಗೆ ಒಂದು ಹೊಸಲೋಕವನ್ನು ದುತ್ತೆಂದು ತೋರಿಸಿ ಹಾಗೇ ದುತ್ತೆಂದು ಮರೆಯಾಗಿ ಬಿಡುತ್ತದೆ. ಒಮ್ಮೊಮ್ಮೆ ಒಬ್ಬರಲ್ಲಾದರೂ ಈ ಊರಲ್ಲಿ ಯಾರಾದರೂ ಗೊತ್ತಿರುವ ಸ್ನೇಹಿತನೊಬ್ಬನಿದ್ದಿದ್ದರೆ ಎಂಬ ಸಣ್ಣ ಆಸೆಯನ್ನೂ ನಿಮ್ಮಲ್ಲಿ ಹುಟ್ಟಿಸಿಬಿಡುತ್ತದೆ.

ಮನೆಗಳ ಗೋಡೆಗಳಿಗೆ ಬಳಿದ ಬಣ್ಣ. ದೊಡ್ಡದೊಡ್ಡ ಕಿಟಕಿ ಬಾಗಿಲುಗಳು ಮತ್ತು ದೂಳು ತಿನ್ನುತ್ತಾ ತಲೆದೂಗುತ್ತಿರುವ ಹೂಕುಂಡಗಳ ಹೂಗಳು. ಇದ್ದಕ್ಕಿದ್ದಂತೆ ಮನೆಗಳ ಬಾಗಿಲು ತೆರೆದು ಹೊರಬಂದು ಮುಖತೋರಿಸಿ ಮರೆಯಾಗುವ ಸುಂದರ ಮುಖಗಳು. ಕೊಡಗನ್ನು ನೋಡಲು ಈ ದಾರಿಯಲ್ಲಿ ಹಾದು ಹೋಗುವ ಪ್ರವಾಸಿಗರಲ್ಲಿ ಕೆಲವರು ಒಂದೆರೆಡು ದಿನಗಳು ಈ ಊರಲ್ಲಿ ಇರಬೇಕು ಎಂದು ಬಯಸಿ ಬಂದರೂ ಇರಲು ಜಾಗವಿಲ್ಲದೆ ಹಾಗೇ ಅಡ್ಡಾಡಿ ಮುಂದೆ ಹೋಗುತ್ತಾರೆ. ಏನೋ ಒಂದು ರೀತಿಯ ಅಸಹನೆ ಮತ್ತು ಅಸಹಾಯಕತೆಯಿಂದ ವಾಪಸಾಗುತ್ತಿರುವ ಇವರ ಮುಖಗಳನ್ನು ಕಂಡು ಕೆಲವೊಮ್ಮೆ ನಮಗೆಲ್ಲಾ ನಗುವೂ ಬರುತ್ತದೆ.

ಏಕೆಂದರೆ ನಮ್ಮ ಈ ಊರಿನ ಚಂದ ಮತ್ತು ತಮಾಷೆ, ಇಲ್ಲಿನ ಗೋಡೆಗಳು ಮತ್ತು ಹೂವುಗಳು, ಇಲ್ಲಿನ ಸೌಂದರ್ಯ ಮತ್ತು ಮನುಷ್ಯರು ಎಲ್ಲವೂ ಒಂದು ರೀತಿಯ ವಿವರಿಸಲಾಗದ ಲಗುಬಗೆಯಿಂದ ತುಂಬಿದೆ. ಕಾಡಿನ ನಡುವೆ ಇರುವ ಊರಲ್ಲಿ ಎತ್ತಲಿಂದಲೋ ತಂದು ಹಾಕಿರುವಂತಿರುವ ನಮ್ಮ ಮುಖಗಳು. ಹಾಗೆ ನೋಡಿದರೆ ನಿಮಗೂ ಈ ಊರಿಗೂ ಏನು ಅಂತಹಾ ಸಂಬಂಧ ಅಂತ ಯಾರಾದರೂ ಕೇಳಿದರೆ ಹೇಳಿಕೊಳ್ಳುವಂತಹ ಅಂತಹ ಸಂಬಂಧಗಳೇನೂ ನಮಗಿಲ್ಲ. ಒಂದು ವೇಳೆ ಈ ರಸ್ತೆಯನ್ನು ಅಗಲ ಮಾಡಬೇಕು ಅಂತ ಸರಕಾರವೇನಾದರೂ ಹೊರಟರೆ ಈ ಊರೇ ಇಲ್ಲಿ ಇರುವುದಿಲ್ಲ. ತಗ್ಗಾದ ದಾರಿಯಲ್ಲಿ ಅಗಲವಾಗಿ ಇಳಿದು ಹೋಗುವ ಕರಿಯ ಹೆದ್ದಾರಿಯೊಂದು ಮಾತ್ರ ಉಳಿದಿರುತ್ತದೆ. ಉಳಿದ ಎಲ್ಲವೂ ಉರುಳಿ ಹೋಗಿರುತ್ತದೆ. ಬಹುಶಃ ನೆನಪುಗಳೂ ಕೂಡಾ ಬಹುಕಾಲ ಉಳಿಯಲಾರದೇನೋ. ಎಲ್ಲವೂ ಒಂದು ತಮಾಷೆಯಂತೆ ಕಳೆದು ಹೋಗುತ್ತದೇನೋ. ಇದನ್ನೆಲ್ಲಾ ಯೋಚಿಸುವಾಗ ಕಣ್ಣು ತುಂಬಿಕೊಳ್ಳುತ್ತದೆ.

ನಮ್ಮ ಒಂದು ಕಾಲದ ಹುಡುಗಾಟದ ದಿನಗಳು, ರಣರಂಪವಾಗಬಹುದಾಗಿದ್ದ ಆದರೆ ಏನೂ ಆಗದೇ ಹೋದ ಸಣ್ಣ ಸಣ್ಣ ಸಂಗತಿಗಳು, ಈಗಲೂ ಹಾಗೆಯೇ ಇದ್ದರೂ ಸುಳ್ಳು ಗಾಂಭೀರ್ಯದಿಂದ ತಲೆತಗ್ಗಿಸಿ ನಡೆಯುತ್ತಿರುವ ನಮ್ಮ ಸಣ್ಣಸಣ್ಣ ಆಸೆಗಳು, ಇವುಗಳಲ್ಲಿ ಸ್ವಲ್ಪವನ್ನಾದರೂ ಯಾರಲ್ಲಿ ಹೇಳಿಕೊಳ್ಳುವುದು -ಈ ಎಲ್ಲವೂ ಒಮ್ಮೊಮ್ಮೆ ಸಿಕ್ಕಾಪಟ್ಟೆ ವ್ಯಗ್ರತೆಯನ್ನೂ ಹುಟ್ಟುಹಾಕುತ್ತವೆ.

*****

ಎರಡನೇ ವಿಶ್ವ ಮಹಾಯುದ್ದದಲ್ಲಿ ಬ್ರಿಟಿಷ್ ಸೇನೆಯ ಜೊತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶತ್ರುಪಡೆಯೊಡನೆ ಭಾರತದ ಕಾಲಾಳು ದಳಗಳೂ ಹೋರಾಡಿದವೆಂಬುದು ಈಗಿನ ತಲೆಮಾರಿನ ಬಹಳ ಮಂದಿಗೆ ಅರಿವಿರಲಿಕ್ಕಿಲ್ಲ. ಈ ಕಾಲಾಳು ದಳವು ಬರ್ಮಾ, ಸಿಂಗಾಪೂರ್, ಇರಾಕ್, ಸಿರಿಯಾ, ಇಥಿಯೋಪಿಯಾ, ಟ್ಯುನಿಸಿಯಾ, ಗ್ರೀಸ್, ಇಟಲಿ ಇನ್ನೂ ಎಲ್ಲಿಗೆಲ್ಲಾ ಹೋಗಿ ಕಾದಾಡಿ ಬಂದಿತ್ತು, ಸಾವಿರಾರು ಮಂದಿ ಸತ್ತು ವಾಪಾಸು ಬರದೆಯೂ ಹೋಗಿದ್ದರು. ನೂರಾರು ಜನರು ಕೈಕಾಲುಗಳನ್ನು ಕಳೆದುಕೊಂಡೂ ಬಂದಿದ್ದರು. ಹೀಗೆ ಬಂದವರಲ್ಲಿ ನಮ್ಮ ಊರಿನ ಹಿರಿಯರಾದ ಕೇಶವನ್ ನಾಯರ್ ಅವರೂ ಒಬ್ಬರು. ಅವರು ನಡೆಯುವಾಗ ಸಣ್ಣಗೆ ಕುಂಟುತ್ತಿದ್ದರು ಮತ್ತು ತಗ್ಗು ರಸ್ತೆ ಏರಿ ಬರುವಾಗ ಸ್ವಲ್ಪಹೊತ್ತು ಸೊಂಟಕ್ಕೆ ಕೈಯಿಟ್ಟು ನಿಂತು ಸುಸ್ತು ನಿವಾರಿಸಿಕೊಳ್ಳುತ್ತಿದ್ದರು.

ಜಪಾನಿನ ಪಡೆ ಹಾರಿಸಿದ ಗುಂಡೊಂದು ಅವರ ತೊಡೆಯಲ್ಲಿ ಸಿಕ್ಕಿಹಾಕಿಕೊಂಡು ತೆಗೆಯಲೂ ಆಗದೆ ನಡೆಯಲೂ ಆಗದೆ ಅವರು ಮಾತು ಮಾತಿಗೆ ಫ್ಯಾಸಿಸ್ಟ್ ಪಡೆಗಳಿಗೆ ಧಿಕ್ಕಾರ ಗೊಣಗಿಕೊಂಡು ನಡೆಯುತ್ತಿದ್ದರು. ಹುಡುಗರಾಗಿದ್ದ ನಮಗೆ ಬುದ್ದಿ ಬೆಳೆದಿದ್ದರೂ ಅವರು ಗೊಣಗಿಕೊಂಡು ತಿರುಗುವುದನ್ನು ಅರ್ಥ ಮಾಡಿಕೊಳ್ಳುವಷ್ಟು ಜಾಗತಿಕ ವಿದ್ಯಮಾನಗಳನ್ನು ಆಗ ಅರಿತಿರಲಿಲ್ಲ. ನಮಗೇನಿದ್ದರೂ ಭಾರತ ಪಾಕಿಸ್ತಾನಗಳ ನಡುವೆ ನಡೆಯುತ್ತಿದ್ದ ಸಣ್ಣಸಣ್ಣ ಗುಂಡು ಹಾರಿಸುವ ಪ್ರಕರಣಗಳು ಮತ್ತು ದೊಡ್ಡದಾಗಿ ನಡೆದ ಬಾಂಗ್ಲಾ ಯುದ್ಧ ನೆನಪಿತ್ತು. ಆ ಯುದ್ಧದಲ್ಲಿ ಬಾಂಗ್ಲಾ ದೇಶಕ್ಕೆ ನೆರವಾಗಲು ನಾವೆಲ್ಲಾ ಒಂದೆರೆಡು ದಿನ ಶಾಲೆಗೆ ಹೋಗದೆ ಕಾಫಿ ತೋಟಗಳಲ್ಲಿ ಕಾಫಿ ಕೊಯ್ದು ನಿಧಿ ಸಂಗ್ರಹಿಸಿ ಕಳುಹಿಸಿದ್ದೆವು. ಆಗ ಈ ಕೇಶವನ್ ನಾಯರ್ ಹುಡುಗರಾದ ನಿಮಗೆಲ್ಲಾ ಬುದ್ಧಿಯಿಲ್ಲ. ಈ ಯುದ್ಧಗಳನ್ನು ಮಾಡಿಸುತ್ತಿರುವವರು ಅಮೇರಿಕಾದವರು. ನಿಮಗೆ ಇದೆಲ್ಲಾ ಗೊತ್ತಾಗುವುದಿಲ್ಲ ಎಂದು ಗೊಣಗುತ್ತಾ ಬೈದಿದ್ದರು.

ನಮಗೆ ಬುದ್ಧಿಯಿತ್ತೋ ಗೊತ್ತಿಲ್ಲ. ಆದರೆ ಕೇಶವನ್ ನಾಯರ್ ಬೈದಿದ್ದು ನಮಗೆ ಯಾಕೆ ಎಂದು ಆಗ ಗೊತ್ತಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ನಾವು ಕೇಳುತ್ತಿದ್ದುದು ನಮ್ಮ ಸುಶೀಲ ಟೀಚರ ಮಾತುಗಳನ್ನು ಮಾತ್ರ. ಯಾಕೆಂದರೆ ಸುಶೀಲ ಟೀಚರು ಬಹಳ ಚಂದವಿದ್ದರು ಮತ್ತು ಯಾವಾಗಲೂ ಬೆಳ್ಳನೆಯ ಸೀರೆಯನ್ನು ಮೈಯೆಲ್ಲಾ ಮುಚ್ಚಿಕೊಂಡು ಬರುತ್ತಿದ್ದರು. ತಲೆಗೆ ಎಣ್ಣೆ ಬಳಿದು ತಮ್ಮ ಉದ್ದವಾದ ಮುಡಿಯನ್ನು ಬಿಗಿಯಾಗಿ ಕಟ್ಟಿ ಸಣ್ಣಗೆ ಉದ್ದಕ್ಕೆ ಜಡೆ ಮಾಡಿಕೊಂಡು ಅದೂ ಅಲ್ಲಾಡದಂತೆ ಒಂದು ಚಿತ್ರದಂತೆ ನಡೆದು ಬರುತ್ತಿದ್ದ ಅವರು ಯಾವಾಗಲೂ ನೆಲ ನೋಡಿ ಪಾಠ ಮಾಡುತ್ತಿದ್ದರು. ಆದರೆ ಪ್ರಶ್ನೆಗಳನ್ನು ಕೇಳುವಾಗ ಮಾತ್ರ ನಮ್ಮ ಕಣ್ಣುಗಳನ್ನು ನೋಡುತ್ತಿದ್ದರು.

ಈ ಸುಶೀಲ ಟೀಚರ ಗಂಡನೂ ಮಿಲಿಟರಿಯಲ್ಲಿರುವಾಗ ಕಾಶ್ಮೀರದಲ್ಲಿ ಹಿಮಪಾತಕ್ಕೋ, ಶತ್ರುಗಳ ದಾಳಿಗೋ ಸಿಲುಕಿ ಬಹಳ ಹಿಂದೆಯೇ ಕಣ್ಮರೆಯಾಗಿದ್ದರು ಎಂದು ಹೇಳುತ್ತಿದ್ದರು. ಆದರೆ ಅವರು ತೀರಿಹೋಗಿಲ್ಲ. ಪಾಕಿಸ್ತಾನದ ಜೈಲಿನಲ್ಲಿರುವರು ಎಂದೂ ಕೆಲವರು ಹೇಳುತ್ತಿದ್ದರು. ಇನ್ನೂ ಕೆಲವರು ಅವರು ಜೈಲಿನಲ್ಲೂ ಇಲ್ಲ, ತೀರಿಯೂ ಹೋಗಿಲ್ಲ. ಉತ್ತರ ಇಂಡಿಯಾದಲ್ಲಿ ಕಾಡು ಜಾತಿಯವಳೊಬ್ಬಳನ್ನು ಕಟ್ಟಿಕೊಂಡು ಚೆನ್ನಾಗಿದ್ದಾರೆ. ಪಾಪ ಈ ಸುಶೀಲ ಟೀಚರು ಮಾತ್ರ ಗಂಡನಿಲ್ಲದೆ ವಿಧವೆಯ ಬಾಳನ್ನು ಬಾಳುತ್ತಿದ್ದಾರೆ ಎಂದು ಮರುಗುತ್ತಿದ್ದರು.

ಆದರೆ ಈ ಸುಶೀಲ ಟೀಚರು ಮಾತ್ರ ಯಾರ ಮಾತನ್ನೂ ಕೇಳದೆ ತಮ್ಮ ಪಾಡಿಗೆ ತಾವು ಬೆಳ್ಳಗೆ ಉಟ್ಟುಕೊಂಡು ಶಾಲೆಗೆ ಬಂದು ಪಾಠ ಮಾಡುತ್ತಿದ್ದರು. ಪಾಠವನ್ನು ಚೆನ್ನಾಗಿಯೇ ಮಾಡುತ್ತಿದ್ದರು ಮತ್ತು ಕಥೆಗಳನ್ನೂ ಹೇಳುತ್ತಿದ್ದರು. ಭಾರತ ಪಾಕಿಸ್ತಾನ ಯುದ್ಧ ಬಾಂಗ್ಲಾದಲ್ಲಿ ನಡೆಯುತ್ತಿದ್ದಾಗ ಬಂಗಾಲದ ರೈತರ ಕಷ್ಟಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಹೇಳಿ ಕಣ್ಣೀರು ಬರಿಸುತ್ತಿದ್ದರು. ಅವರೇ ನಮ್ಮನ್ನೆಲ್ಲ ಎರಡು ದಿನ ಶಾಲೆಗೆ ರಜೆ ಹಾಕಲು ಹೇಳಿ ಕಾಫಿ ತೋಟಕ್ಕೆ ಕಾಫಿ ಕೊಯ್ಯಲು ಕಳಿಸಿ ತಾವೂ ಬಂದು ನಮ್ಮ ಜೊತೆ ಸೇರಿ ಕಾಫಿ ಕೊಯ್ದಿದ್ದರು. ಆಗ ಅವರು ತಮ್ಮ ಬಿಳಿ ಉಡುಪಿನ ಮೇಲೆ ಹಳೆಯ ಗೋಣೀ ತಾಟೊಂದನ್ನು ಕಟ್ಟಿಕೊಂಡು ನಮ್ಮೆಲ್ಲರಿಗಿಂತ ಹೆಚ್ಚು ಕಾಫಿ ಕೊಯ್ದಿದ್ದರು.

ನಮ್ಮ ಊರಿನಲ್ಲಿ ಮೊತ್ತ ಮೊದಲು ಮನೆ ಕಟ್ಟಿಕೊಂಡು ನೆಲೆಸಿದವರು ಈ ಕೇಶವನ್ ನಾಯರ್ ಎಂದು ಎಲ್ಲರೂ ಹೇಳುತ್ತಾರೆ. ಅವರು ಎರಡನೇ ವಿಶ್ವ ಯುದ್ದದಲ್ಲಿ ಹೋರಾಡಿದ ಸೈನಿಕನಾದುದರಿಂದ ಸರಕಾರವು ಕಾಡಿನ ಕೊನೆಯಲ್ಲಿದ್ದ ಐದೆಕೆರೆ ಪೈಸಾರಿ ಜಾಗವನ್ನು ಕೇಶವನ್ ನಾಯರ್‍ರಿಗೆ ಮಂಜೂರು ಮಾಡಿತೆಂದೂ ಆ ಮಂಜೂರು ಮಾಡಿದ ಜಾಗದಲ್ಲಿ ಮನೆಯೊಂದನ್ನು ಕಟ್ಟಿಕೊಂಡು ಉಳಿದುದನ್ನು ಕೇಶವನ್ ಕೇಳಿದವರಿಗೆ ಹಣಕ್ಕೋ, ಉಚಿತವಾಗಿಯೋ ಹಂಚಿದರೆಂದೂ ಆ ಉಳಿದ ಜಾಗದಲ್ಲಿ ಕಾಫಿ ತೋಟಗಳಿಂದ ಜಗಳವಾಡಿ ಹೊರಬಂದ ರೈಟರುಗಳೂ, ಕೆಲಸದವರೂ, ಸಣ್ಣಪುಟ್ಟ ವ್ಯಾಪಾರಿಗಳೂ, ಪೋಲೀಸು, ಅರಣ್ಯ ಇಲಾಖೆಯ ನೌಕರರೂ ಮನೆಗಳನ್ನು ಕಟ್ಟಿಕೊಂಡರು ಎಂದು ಹಳಬರು ನೆನಪಿಸಿಕೊಳ್ಳುತ್ತಾರೆ.

ಆದರೆ ಅವರೆಲ್ಲರೂ ಮನೆಗಳನ್ನು ಕಟ್ಟಿಕೊಳ್ಳುವ ಮೊದಲು ಕೇಶವನ್ ನಾಯರ್ ಖುದ್ದಾಗಿ ನಿಂತು ಅವರೆಲ್ಲರ ಮನೆಗಳೂ, ಅವುಗಳ ಕಿಟಕಿ ಬಾಗಿಲುಗಳೂ ಹೇಗಿರಬೇಕೆಂದೂ ಎಲ್ಲ ಮನೆಗಳೂ ರಸ್ತೆಯ ಕಡೆ ಹೇಗೆ ಮುಖ ಮಾಡಿರಬೇಕೆಂದೂ ಹೇಳಿಕೊಟ್ಟಿದ್ದರಂತೆ. ಇದು ಶಾಲೆಯ ಜಾಗ, ಇದು ರಸ್ತೆಯ ಜಾಗ, ಇದು ಪೋಲೀಸು ಠಾಣೆಗೆ ಎಂದು ಒಂದಿಷ್ಟು ಖಾಲಿ ಜಾಗವನ್ನೂ ಬಿಟ್ಟಿದ್ದರಂತೆ. ಎಲ್ಲ ಮನೆಗಳ ಮುಂದೆಯೂ ಹೂಗಿಡಗಳನ್ನಿಡಲು ಕಿರಿದಾದ ಹಜಾರವೂ ಮಾಡಿನಿಂದಿಳಿದ ನೀರು ಹಂಚಿನ ಪಾತಿಯಿಂದ ಇಳಿದು ಹೋಗಲು ಚರಂಡಿಯೂ ಎಲ್ಲವೂ ಈ ಕೇಶವನ್ ನಾಯರ್‍ರವರ ಯೋಜನೆಯೇ ಆಗಿತ್ತಂತೆ.

ಕೇಶವನ್ ನಾಯರ್ ತಾನು ಯುದ್ಧ ಮಾಡಲು ಹೋಗಿದ್ದ ಇಟಲಿಯ ಯಾವುದೋ ಒಂದು ಪಟ್ಟಣದಲ್ಲಿ ಇಂತಹದೊಂದು ಊರನ್ನು ನೋಡಿದ್ದನಂತೆ. ಆ ಊರನ್ನು ಮನಸಿನಲ್ಲಿಟ್ಟುಕೊಂಡಿದ್ದವರು ತನಗೇ ಒಂದು ಊರು ಕಟ್ಟುವ ಅವಕಾಶ ಬಂದಾಗ ನೆನಪಲ್ಲಿದುದನ್ನು ಮನಸ್ಸಲ್ಲಿ ಕಲ್ಪಿಸಿಕೊಂಡು ಹಾಗೆ ಕಟ್ಟಲು ಹೇಳಿಕೊಡುತ್ತಿದ್ದರಂತೆ.

ಆದರೆ ಮರ ಮುಟ್ಟುಗಳು ಸಾಲದೆಯೋ, ಇಟ್ಟಿಗೆ ಸಿಮೆಂಟು ತರಲು ಕಾಸಿಲ್ಲದೆಯೋ ಮನೆಕಟ್ಟುವವರು ರೋಸಿಹೋಗಿ ತಮಗೆ ಕಂಡಹಾಗೆ ಕಟ್ಟಲು ತೊಡಗಿದಾಗ ಕೇಶವನ್ ನಾಯರ್ ತನಗೆ ಇನ್ನು ಕಂಡವರ ಮನೆಕಟ್ಟುವ ಉಸಾಬರಿಯೇ ಬೇಡ ಎಂದು ಸುಮ್ಮನಾಗಿ ತಾವು ಕಟ್ಟಿಕೊಂಡಿದ್ದ ಮನೆಯನ್ನೇ ನಾಲ್ಕೂ ದಿಕ್ಕಿಗೆ ವಿಸ್ತರಿಸಿ ಮನೆಯೊಳಗೊಂದು ಮನೆ ಅದರೊಳಗೊಂದು ಮನೆ ಹೀಗೆ ಕಟ್ಟುತ್ತಾ ಹೋಗಿ ಕೊನೆಗೆ ಅದರೊಳಗೆ ಒಂಟಿಯಾಗಿರಲಾಗದೆ ಮನೆಯಮೇಲೊಂದು ಒಂಟಿಕೋಣೆಯ ಅಟ್ಟದ ಮನೆಕಟ್ಟಿ ಅದರೊಳಗೆ ಇರಲು ತೊಡಗಿದರಂತೆ. ಕೆಳಗಿನ ಮನೆಯ ಗೋಡೆಗಳನ್ನು ಒಡೆಸಿ ಸಣ್ಣ ಸಣ್ಣ ಬಾಡಿಗೆ ಮನೆಗಳನ್ನಾಗಿ ಮಾಡಿ ಅವುಗಳನ್ನು ಕೇಳಿದವರಿಗೆ ಬಾಡಿಗೆಗೆ ಕೊಟ್ಟು ತಾವು ಕೊಂಚ ಕುಡುಕರಾಗಿ ಒಬ್ಬರೇ ಕುಂಟುತ್ತಾ ಗೊಣಗುತ್ತಾ ಈ ಊರಲ್ಲಿ ಒಂದು ದೆವ್ವದಂತೆ ಓಡಾಡಲು ತೊಡಗಿದರಂತೆ.

ಇದೆಲ್ಲಾ ಹುಡುಗರಾಗಿದ್ದಾಗ ನಾವು ಕೇಳಿದ್ದ ಕಥೆಗಳು. ನಮಗೆ ಬುದ್ದಿ ಬರಲು ತೊಡಗಿದಾಗ ಕೇಶವನ್ ನಾಯರ್ ಒಬ್ಬರೇ ಮಹಡಿಯ ಮೇಲಿನ ತಮ್ಮ ಒಂಟಿಕೋಣೆಯಿಂದ ಇಳಿಬಿಟ್ಟ ಹಗ್ಗವೊಂದನ್ನು ಹಿಡಿದುಕೊಂಡು ಮರದ ಏಣಿ ಹತ್ತಿ ಕೆಳಗಿಳಿಯುವುದು ಮತ್ತು ಗೊಣಗುತ್ತಾ ಹಗ್ಗ ಹಿಡಿದು ಮೇಲೆ ಹತ್ತಿ ಹೋಗುತ್ತಿರುವುದನ್ನು ನೋಡುತ್ತಿದ್ದೆವು. ಅವರು ಕೆಳಗೆ ಬಾಡಿಗೆಗೆ ಕೊಟ್ಟ ಹತ್ತಾರು ಮನೆಗಳಲ್ಲಿ ಯಾವಾಗಲೂ ಸಂಸಾರಗಳು ತುಂಬಿ ತುಳುಕಾಡುತ್ತಿದ್ದವು. ಅಲ್ಲಿ ಸಂಸಾರವಿಲ್ಲದೇ ಒಂಟಿಯಾಗಿ ಬಾಡಿಗೆಗೆ ಇದ್ದವರೆಂದರೆ ನಮ್ಮ ಸುಶೀಲ ಟೀಚರ್ ಮತ್ತು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ರೋಸಿ ಸಿಸ್ಟರ್. ಈ ರೋಸಿ ಸಿಸ್ಟರ್ ಮೊದಲಿಗೆ ಕನ್ಯಾಸ್ತ್ರೀಯಾಗಿದ್ದವರಂತೆ. ಆದರೆ ನಮಗೆ ಅರಿವಾಗುವ ಹೊತ್ತಿಗೆ ಅವರು ತಮ್ಮ ಕನ್ಯಾಸ್ತ್ರೀಯ ದಿರಿಸನ್ನು ತ್ಯಜಿಸಿ ಸಾಧಾರಣ ಸ್ತ್ರೀಯಂತೆ ಒಂಟಿಯಾಗಿದ್ದರು. ನೋಡಲು ಕೆಂಪಗೆ ದಪ್ಪವಾಗಿದ್ದ ರೋಸಿ ಟೀಚರ್ ನಾವು ನೋಡುವ ಹೊತ್ತಿಗೆ ಸಾಕಷ್ಟು ವಯಸ್ಸಾಗಿ ಮನೆತುಂಬಾ ನಾಯಿಗಳನ್ನೂ ಬೆಕ್ಕುಗಳನ್ನೂ ಸಾಕಿಕೊಂಡು ಬದುಕುತ್ತಿದ್ದರು. ಬೆಳಗ್ಗೆ ಮೀನು ಮಾರಿಕೊಂಡು ಬರುತ್ತಿದ್ದ ಆಲಿಕುಟ್ಟಿಯ ಸೈಕಲ್ ಬೆಲ್ಲಿನ ಸದ್ದು ಕೇಳುತ್ತಿದ್ದಂತೆ ನಿದ್ದೆಯಿಂದ ಎದ್ದವರಂತೆ ಚಳಿಯಾದರೂ ಮಳೆಯಾದರೂ ತೆಳ್ಳಗಿನ ಉಡುಪು ಹಾಕಿಕೊಂಡು ಕೈಯಲ್ಲೊಂದು ಮೀನು ಹಾಕಿಸಿಕೊಳ್ಳುವ ಪಾತ್ರೆ ಹಿಡಿದುಕೊಂಡು ಅವರು ಹೊರಬರುತ್ತಿದ್ದರು. ಅವರೊಂದಿಗೆ ಅವರ ನಾಯಿಗಳೂ ಬೆಕ್ಕುಗಳೂ ಹೊರಬಂದು ಆಲಿಕುಟ್ಟಿಯ ಸೈಕಲ್ಲಿನ ಸುತ್ತ ಒಂದು ದೊಂಬಿಯೇ ಉಂಟಾಗುತ್ತಿತ್ತು.

ನಾವು ಶಾಲೆಗೆ ಹೋಗುವ ಮೊದಲು ಅರಬೀ ಮದರಸಕ್ಕೆ ಹೋಗುವುದನ್ನೂ ಮರೆತವರಂತೆ ತುಂಬ ಹೊತ್ತು ರೋಸಿ ಸಿಸ್ಟರನ್ನೂ ಅವರ ನಾಯಿ ಬೆಕ್ಕುಗಳನ್ನೂ ನೋಡುತ್ತಾ ನಿಲ್ಲುತ್ತಿದ್ದೆವು. ಅವರು ನಮ್ಮನ್ನು ಬೈದು ಓಡಿಸುತ್ತಿದ್ದರು.

ಏನೋ ಒಂದು ರೀತಿಯ ಅಸಹನೆ ಮತ್ತು ಅಸಹಾಯಕತೆಯಿಂದ ವಾಪಸಾಗುತ್ತಿರುವ ಇವರ ಮುಖಗಳನ್ನು ಕಂಡು ಕೆಲವೊಮ್ಮೆ ನಮಗೆಲ್ಲಾ ನಗುವೂ ಬರುತ್ತದೆ.

ಈ ರೋಸಿ ಸಿಸ್ಟರ್ ಮತ್ತು ಸುಶೀಲಾ ಟೀಚರ್ ಬಾಡಿಗೆಗಿದ್ದ ಕೋಣೆಗಳ ನಡುವಲ್ಲಿ ಈರಪ್ಪ ಟೈಲರ ಅಂಗಡಿಯಿತ್ತು. ಈರಪ್ಪ ಟೈಲರು ತಮ್ಮ ಸಂಸಾರ ಸಮೇತವಾಗಿ ಒಳಕೋಣೆಯಲ್ಲಿ ವಾಸಿಸುತ್ತಿದ್ದು ಹೊರಗಿನ ಕೋಣೆಯನ್ನು ಟೈಲರ್ ಅಂಗಡಿಯನ್ನಾಗಿ ಮಾಡಿಕೊಂಡಿದ್ದರು. ಈ ಈರಪ್ಪ ಟೈಲರ್ ಮಾತು ತುಂಬ ಕಡಿಮೆ ಆಡುತ್ತಿದ್ದರು. ಏಕೆಂದರೆ ಅವರು ಯೌವನದಲ್ಲಿರುವಾಗ ಹಂದಿ ಬೇಟೆಯ ಸಮಯದಲ್ಲಿ ಕಾಡತೂಸೊಂದು ಆಕಸ್ಮಿಕವಾಗಿ ಅವರ ಬಾಯನ್ನು ಒರಸಿಕೊಂಡು ಹೋಗಿ ಅವರ ತುಟಿಯ ತುದಿಯಲ್ಲಿ ಸಣ್ಣದೊಂದು ತೂತವುಂಟಾಗಿ ಅವರಿಗೆ ಮಾತನಾಡಲು ತೊಂದರೆಯಾಗಿತ್ತು. ಹಾಗಾಗಿ ಬರುವ ಕೆಲವೇ ಗಿರಾಕಿಗಳೊಡನೆ ಮಾತನ್ನೆಲ್ಲಾ ಅವರ ಮಡದಿಯೇ ಆಡುತ್ತಿದ್ದರು. ಮತ್ತು ಬಿಡುವು ಇದ್ದಾಗಲೆಲ್ಲಾ ಗಂಡನ ಹೊಲಿಗೆ ಯಂತ್ರದ ಬದಿಯಲ್ಲಿ ಕುಳಿತು ಅಂಗಿಯ ಬಟನು ಹೊಲಿಯುವುದೋ, ಮೆಷಿನಿಗೆ ನೂಲು ಸುತ್ತುವುದೋ ಮಾಡುತ್ತಿದ್ದರು.

ದಿನದ ಬಹುತೇಕ ಹೊತ್ತು ಅವರೂ ಮೌನವಾಗಿಯೇ ಇರುತ್ತಿದ್ದರು. ಏಕೆಂದರೆ ಈರಪ್ಪ ಟೈಲರ ಬಾಯಲ್ಲಿದ್ದ ತೂತದಿಂದಾಗಿ ಹೆಚ್ಚು ಜನ ಗಿರಾಕಿಗಳಾರೂ ಅವರಲ್ಲಿಗೆ ಬರುತ್ತಿರಲಿಲ್ಲ. ಎಷ್ಟು ತಡೆದುಕೊಂಡರೂ ಆ ಬಾಯಿಯ ತೂತದಿಂದ ಜೊಲ್ಲು ಹರಿದು ಹೊಲಿಯುವ ಹೊಸ ಬಟ್ಟೆಗಳ ಮೇಲೆ ಬಿದ್ದು ಇದನ್ನು ಕಂಡವರಾರೂ ಹೆಚ್ಚಾಗಿ ಅಲ್ಲಿ ಬಟ್ಟೆ ಹೊಲಿಯಲು ಕೊಡುತ್ತಿರಲಿಲ್ಲ. ಈರಪ್ಪ ಟೈಲರ ಹೆಂಡತಿ ಕೈಯಲ್ಲಿ ಯಾವತ್ತೂ ಕರವಸ್ತ್ರವೊಂದನ್ನು ಹಿಡಿದುಕೊಂಡು ಮಗುವಿನ ಜೊಲ್ಲನ್ನು ಒರೆಸುವಂತೆ ಗಂಡನ ತುಟಿಗಳನ್ನು ಒರೆಸಿಕೊಡುತ್ತಿದ್ದರು. ಆದರೂ ಆಗಾಗ ಏನಾದರೂ ಹೆಚ್ಚುಕಡಿಮೆಯಾಗಿ ಜೊಲ್ಲು ಹೊಸಬಟ್ಟೆಯ ಮೇಲೆ ಬಿದ್ದು ಬಿಡುತ್ತಿತ್ತು.

ಕೇಶವನ್ ನಾಯರ್ ದಿನದ ಬಹುತೇಕ ಹೊತ್ತನ್ನು ಈ ಈರಪ್ಪ ಟೈಲರ ಅಂಗಡಿಯ ಇನ್ನೊಂದು ಖಾಲಿ ಕುರ್ಚಿಯಲ್ಲಿ ಕುಳಿತುಕೊಂಡು ಕಳೆಯುತ್ತಿದ್ದರು. ಹಳೆಯ ಪತ್ರಿಕೆಗಳನ್ನು ಓದುತ್ತಾ ರಸ್ತೆಯಲ್ಲಿ ಹೋಗಿ ಬರುವ ವಾಹನಗಳನ್ನೂ ಮನುಷ್ಯರನ್ನೂ ನೋಡುತ್ತಾ ಕುಳಿತಿರುತ್ತಿದ್ದರು. ಈರಪ್ಪ ಟೈಲರಿಗೆ ಕೇಶವನ್ ನಾಯರನ್ನು ಕಂಡರೆ ಅಂತಹ ಪ್ರೀತಿಯೇನೂ ಇರಲಿಲ್ಲ. ಏಕೆಂದರೆ ಕೇಶವನ್ ನಾಯರ್ ಅಲ್ಲಿ ಬಂದು ಕುಳಿತುಕೊಳ್ಳುವುದು ತನ್ನ ಮೇಲಿನ ಪ್ರೀತಿಯಿಂದೇನೂ ಅಲ್ಲ ಎಂಬುದು ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಕೇಶವನ್ ನಾಯರ ಕಣ್ಣುಗಳು ಅಯಾಚಿತವಾಗಿ ಸುಶೀಲ ಟೀಚರ ಮುಚ್ಚಿದ ಬಾಗಿಲುಗಳ ಕಡೆ ತಿರುಗಿ ಸುಮ್ಮನಾಗುತ್ತಿರುವುದನ್ನು ಅವರು ಬಹಳ ದಿನಗಳಿಂದಲೂ ಗಮನಿಸಿದ್ದರು. ಆದರೆ ಆ ಬಾಗಿಲುಗಳು ಯಾವಾಗಲೂ ಮುಚ್ಚಿರುತ್ತಿದ್ದುದರಿಂದ ಟೀಚರ ಬಾಳಲ್ಲಿ ಅಂತಹ ಅನಾಹುತಗಳೇನೂ ಆಗಲಿಕ್ಕಿಲ್ಲ ಎಂಬ ಧೈರ್ಯದಿಂದ ಏನೂ ಹೇಳದೆ ಸುಮ್ಮಗಿದ್ದರು. ಆದರೆ ಸುಶೀಲ ಟೀಚರು ಹಡಗು ಇಳಿದು ಅಪರೂಪಕ್ಕೆ ಬಂದ ಸೋದರ ಮಾವನ ಜೊತೆ ಬಾಗಿಲು ಹಾಕಿಕೊಂಡಿರುವಾಗ ಈ ಕೇಶವನ್ ನಾಯರ್ ಅಲ್ಲಿಯೇ ಕುಳಿತು ಬಾಗಿಲ ಒಳಗಿಂದ ತೂರಿ ಬರುವ ಸದ್ದುಗಳನ್ನು ಆಲಿಸುತ್ತಾ ಕುಳಿತುಕೊಳ್ಳುವುದು ಈರಪ್ಪ ಟೈಲರಿಗೆ ಅಸಹ್ಯಕರವಾಗಿ ಕಾಣಿಸುತ್ತಿತ್ತು.

ಅಂತಹ ಹೊತ್ತಲ್ಲಿ ಈರಪ್ಪ ಟೈಲರು ತಮ್ಮ ಹಳೆಯ ಕಾಲದ ಹೊಲಿಗೆ ಮೆಷಿನನ್ನು ಇನ್ನಷ್ಟು ಸದ್ದು ಮಾಡುತ್ತಾ ಓಡಿಸುತ್ತಿದ್ದರು. ಆ ಸದ್ದು ಅಸಹನೀಯವಾದಾಗ ಕೇಶವನ್ ನಾಯರ್ ಅಲ್ಲಿಂದೆದ್ದು ಮರದ ಏಣಿ ಹತ್ತಿ ತಮ್ಮ ಒಂಟಿ ಕೋಣೆಯನ್ನು ಸೇರಿಕೊಳ್ಳುತ್ತಿದ್ದರು. ಕೇಶವನ್ ನಾಯರ್ ಅಲ್ಲಿರುವಷ್ಟು ಹೊತ್ತೂ ಅಸಹನೆಯಿಂದ ಕುದಿಯುತ್ತಿದ್ದ ಈರಪ್ಪ ಟೈಲರ ಹೆಂಡತಿ ಅವರು ಏಣಿ ಹತ್ತಿ ಮೇಲಕ್ಕೆ ಹೋದಾಗ `ಥೂ, ಮುದುಕನ ಹುಲಿ ಹಿಡಿಯಾ’ ಎಂದು ಶಾಪ ಹಾಕಿ ಮತ್ತೆ ಬಂದು ಬಟನ್ ಹೊಲಿಯಲು ಕೂರುತ್ತಿದ್ದರು. ಅವರ ಅಸಹನೆಗೆ ಇನ್ನೊಂದು ಕಾರಣವೂ ಇತ್ತು. ಅದೇನೆಂದರೆ ಕೇಶವನ್ ನಾಯರ್ ಮಧ್ಯಾಹ್ನದ ಹೊತ್ತು ಗಂಟೆಗಟ್ಟಲೆ ತಮ್ಮ ಎರಡನೇ ಮಹಾಯುದ್ಧದ ಅನುಭವಗಳನ್ನು ಮಾತನಾಡುತ್ತಿದ್ದುದು. ಮತ್ತು ತಮ್ಮ ಕಾಲುಗಳನ್ನು ತೊಡೆಯವರೆಗೆ ಎತ್ತಿ ಅಲ್ಲಿ ಉಳಿದಿರುವ ಗುಂಡನ್ನು ಚರ್ಮದ ಮೇಲಿಂದಲೇ ಒತ್ತಿ ತೋರಿಸುತ್ತಿದ್ದುದು. ಈ ಕೇಶವನ್ ನಾಯರ್ ತಮ್ಮ ತೊಡೆಯಲ್ಲಿ ಉಳಿದಿರುವ ಗುಂಡನ್ನು ಬೇಕುಬೇಕೆಂತಲೇ ಒತ್ತಿ ತೋರಿಸುತ್ತಿರುವರೆಂದು ಅವರಿಗೆ ಗೊತ್ತಾಗಿತ್ತು. ತನ್ನದು ಮಾತ್ರ ಯುದ್ಧದಲ್ಲಿ ಹೊಕ್ಕ ಗುಂಡು, ನಿನ್ನ ಗಂಡನದು ಹಂದಿಬೇಟೆಯಲ್ಲಿ ತಾಗಿದ ಗುಂಡು ಎಂಬುದನ್ನು ಆ ಮೂಲಕ ಅವರು ಮತ್ತೆಮತ್ತೆ ಹೇಳುತ್ತಿರುವುದು ಈರಪ್ಪ ಟೈಲರ ಹೆಂಡತಿಗೆ ಸಂಕಟ ಉಂಟು ಮಾಡುತ್ತಿತ್ತು. ಅದೂ ಅಲ್ಲದೆ ಪಕ್ಕದಲ್ಲಿದ್ದ ರೋಸಿ ಸಿಸ್ಟರ್ ಕೂಡಾ ತನ್ನ ಬಾಳು ಮೂರಾಬಟ್ಟೆಯಾಗಲು ಈ ಕೇಶವನ್ ನಾಯರೇ ಕಾರಣ ಎಂದು ಒಂದೆರೆಡು ಸಲ ಆಕಸ್ಮಿಕವಾಗಿ ಅಂದು ಆಮೇಲೆ ಹೆಚ್ಚೇನೂ ಹೇಳದೆ ಮೌನವಾಗಿ ಉಳಿದಿದ್ದರು. ಇವರಿಬ್ಬರ ನಡುವೆ ಏನೋ ಆಗಿರುವುದು ಆ ಮೌನದಲ್ಲಿ ಈರಪ್ಪ ಟೈಲರ ಹೆಂಡತಿಗೆ ಗೊತ್ತಾಗಿತ್ತು. ಹಾಗಾಗಿ ಹೆಚ್ಚು ಬೇರೇನೂ ಕೇಳದೆ ಸುಮ್ಮನಾಗಿದ್ದಳು.

ಸುಶೀಲ ಟೀಚರು ಯಾವಾಗಲೂ ಬಾಗಿಲು ಹಾಕಿಕೊಂಡಿರಲು ಕಾರಣವೂ ಇತ್ತು. ಮುಖ್ಯ ಕಾರಣವೆಂದರೆ ಈ ಕೇಶವನ್ ನಾಯರ್ ಬೆಳಬೆಳಗೆಯೇ ಬಾಗಿಲ ಮುಂದಿಂದ ದಾಟಿ ಹೋಗುವಾಗಲೆಲ್ಲ ಕಳ್ಳನಂತೆ ಹುಸಿ ಕೆಮ್ಮೊಂದನ್ನು ಕೆಮ್ಮಿ ತಮ್ಮ ಉದ್ದನೆಯ ಅಂಗಿಯ ಜೇಬಿನೊಳಗಿಂದ ಬರೆದಿಟ್ಟಿದ್ದ ಪ್ರೇಮಪತ್ರವೊಂದನ್ನು ತೆರೆದ ಬಾಗಿಲಿಂದ ಒಳಕ್ಕೆಸೆಯಲು ನೋಡುತ್ತಿದ್ದುದು. ಸುಶೀಲ ಟೀಚರು ಬೆಳಗೆಯೇ ಎದ್ದು ರಂಗೋಲಿ ಹಾಕಲೆಂದು ಬಾಗಿಲು ತೆರೆಯಲು ಹೋದರೆ ಕೈಯಲ್ಲಿ ಪ್ರೇಮಪತ್ರವನ್ನು ಹಿಡಿದುಕೊಂಡ ಕೇಶವನ್ ನಾಯರ್ ದೀನವಾಗಿ ಮುಖಮಾಡಿಕೊಂಡು ನಿಂತಿರುತ್ತಿದ್ದರು. ಪ್ರೇಮಪತ್ರವನ್ನು ಟೀಚರ ಕೈಯಲ್ಲಿ ಕೊಡಲು ಧೈರ್ಯ ಸಾಲದೇ ಬಾಗಿಲ ಒಳಕ್ಕೆ ಎಸೆದು ಹೋಗುತ್ತಿದ್ದರು. ಬಾಗಿಲ ಸಂದಿಯಿಂದ ಒಳಕ್ಕೆ ಬೀಳುತ್ತಿದ್ದ ಇಂತಹ ನೂರಾರು ಪತ್ರಗಳಲ್ಲಿ ಒಂದನ್ನೂ ಸುಶೀಲ ಟೀಚರು ಓದಲು ಹೋಗುತ್ತಿರಲಿಲ್ಲ. ಅವುಗಳನ್ನೆಲ್ಲ ಒಟ್ಟು ಮಾಡಿ ಗಂಟು ಕಟ್ಟಿ ಇಡುತ್ತಿದ್ದರು.

ಸುಶೀಲ ಟೀಚರ ದೂರದ ಸೋದರ ಮಾವ ಹಡಗು ಕಂಪನಿಯೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದವರು ಹಡಗು ಮಂಗಳೂರಲ್ಲಿ ಲಂಗರು ಹಾಕಿದಾಗಲೆಲ್ಲ ಸೊಸೆಯ ಬಳಿಗೆ ಬಂದು ಇದ್ದು ಹೋಗುತ್ತಿದ್ದರು. ಅವರು ಬಂದಾಗಲೆಲ್ಲ ಸುಶೀಲ ಟೀಚರು ಈ ಪ್ರೇಮಪತ್ರಗಳ ಕಟ್ಟನ್ನು ಓದಲು ಕೊಟ್ಟು ಶಾಲೆಗೆ ಹೋಗುತ್ತಿದ್ದರು. ಸುಶೀಲ ಟೀಚರು ಶಾಲೆಯಿಂದ ಬರುವಾಗ ಮನೆಯೆಲ್ಲ ಅಡುಗೆಯ ಪರಿಮಳದಿಂದ ಘಮಘಮಿಸುತ್ತಿತ್ತು. ಹಡಗಿನ ಅಡುಗೆ ಕೋಣೆಯ ದಿರಿಸಿನಲ್ಲಿರುತ್ತಿದ್ದ ಸೋದರ ಮಾವ ಅಡುಗೆಯನ್ನೆಲ್ಲ ಮಾಡಿ ಮುಗಿಸಿ, ಕೇಶವನ್ ನಾಯರ ಪ್ರೇಮ ಪತ್ರಗಳನ್ನೂ ಓದಿ ಮುಗಿಸಿ ಹಡಗಿನಿಂದ ಸಾಗಿಸಿ ತಂದಿದ್ದ ಒಂದೆರೆಡು ಸಣ್ಣ ಮದ್ಯದ ಬಾಟಲುಗಳನ್ನೂ ಕುಡಿದು ಮುಗಿಸಿ ಒಂದು ರೀತಿಯ ಅಮಲಿನಲ್ಲಿ ಸೊಸೆಯನ್ನು ಕಾಯುತ್ತಾ ಸಿಗರೇಟು ಹಚ್ಚಿಕೊಂಡು ಕೂತಿರುತ್ತಿದ್ದರು. ಅವರು ಕುಳಿತಿರುವ ಭಂಗಿಯಿಂದಲೇ ಅವರಿಗೇನಾಗಿದೆಯೆಂದು ಊಹಿಸಿರುತ್ತಿದ್ದ ಸುಶೀಲ ಟೀಚರು ಯಾವ ಪ್ರತಿ ಮಾತನ್ನೂ ಆಡುತ್ತಿರಲಿಲ್ಲ. ಏಕೆಂದರೆ ಅಪ್ಪ ಅಮ್ಮ ಯಾರೂ ಇಲ್ಲದ ಸುಶೀಲಳನ್ನು ಈ ಸೋದರಮಾವನೇ ಸಾಕಿ ಬೆಳೆಸಿ ಓದಿಸಿದ್ದರು. ಮಿಲಿಟರಿಯಲ್ಲಿರುವ ಗಂಡಸೊಬ್ಬನನ್ನು ಹುಡುಕಿ ಹಿಡಿದು ಮದುವೆ ಮಾಡಿಸಿದ್ದರು. ತನ್ನ ಎಲ್ಲ ಕಷ್ಟಗಳಿಗೆ ಒದಗಿ ಬರುವ ಈ ಸೋದರ ಮಾವನಲ್ಲಿ ಮಾತ್ರ ಸುಶೀಲ ಪ್ರೀತಿಯನ್ನು ಕಂಡಿದ್ದರು. ಹಾಗಾಗಿ ಅವರು ಏನು ಕೇಳಿದರೂ ಒಪ್ಪಿಸಿಕೊಂಡು ಬಿಡುತ್ತಿದ್ದಳು.

ಮಿಲಿಟರಿಯಲ್ಲಿರುವ ಗಂಡ ತೀರಿ ಹೋಗಿರುವನೆಂದು ಅನ್ನಿಸಿದಾಗಲೂ ಸುಶೀಲ ಟೀಚರಿಗೆ ಅಂತಹದೇನೂ ಅನ್ನಿಸಿರಲಿಲ್ಲ. ಬಹುಶಃ ಆತ ತಿರುಗಿ ಬರಬಹುದು ಅಂತ ಅನ್ನಿಸಿದಾಗಲೂ ದೊಡ್ಡ ಖುಷಿಯೇನೂ ಆಗಿರಲಿಲ್ಲ. ಆದರೆ ಈ ಸೋದರ ಮಾವ ಹಡಗು ಇಳಿದು ಬರಲು ಒಂದು ದಿನ ತಡವಾದರೂ ಎದೆಯಲ್ಲಿ ಕಳವಳ ಶುರುವಾಗುತ್ತಿತ್ತು. ಸೋದರ ಮಾವ ಬಂದು ಬಾಗಿಲು ತಟ್ಟಿದಾಗ ಎದೆ ತುಂಬಿ ಬರುತ್ತಿತ್ತು. ಸುಶೀಲ ಟೀಚರ ಸೋದರ ಮಾವ ಹಡಗಿನಿಂದ ಬಂದಿರುವುದು ಕ್ಲಾಸಿನಲ್ಲಿ ಕುಳಿತಿದ್ದ ನಮಗೆ ಟೀಚರ ಮುಖದಿಂದಲೇ ತಿಳಿಯುತ್ತಿತ್ತು. ಒಂದು ರೀತಿಯಲ್ಲಿ ನಾವೂ ಸುಶೀಲ ಟೀಚರ ಸೋದರ ಮಾವ ಬೇಗ ಬರಲಿ ಎಂದು ಮನಸಿನಲ್ಲೇ ಬೇಡಿಕೊಳ್ಳುತ್ತಿದ್ದೆವು. ಏಕೆಂದರೆ ಅವರು ಬಂದಾಗ ಟೀಚರು ಖುಷಿಯಲ್ಲಿರುತ್ತಿದ್ದರು.

ಬಹುಶಃ ಸುಶೀಲ ಟೀಚರ ಸೋದರ ಮಾವ ಕೇಶವನ್ ನಾಯರ್ ತಮ್ಮ ಸೊಸೆಗೆ ಬರೆದ ಪತ್ರಗಳನ್ನು ಓದಿಯೂ ಸಿಟ್ಟುಗೊಳ್ಳುತ್ತಿರಲಿಲ್ಲವೆಂದು ಕಾಣುತ್ತದೆ. ಏಕೆಂದರೆ ನನಗೆ ಈಗ ಅನಿಸುವ ಹಾಗೆ ಈ ಪತ್ರಗಳು ಕೇವಲ ಉಪಮೆಗಳಿಂದ ತುಂಬಿರುತ್ತಿತ್ತು. ಏಕೆಂದರೆ ಸೋದರ ಮಾವ ಹಡಗು ಹತ್ತಿ ಹೋಗುವ ಮೊದಲು ತಾನು ಕುಡಿದು ಮುಗಿಸಿದ ಬಾಟಲುಗಳನ್ನೂ, ಮುಗಿದ ಸಿಗರೇಟು ಪ್ಯಾಕುಗಳನ್ನೂ, ಮಸಾಲೆ ಪುಡಿ, ಉಪ್ಪಿನಕಾಯಿ ಡಬ್ಬಗಳನ್ನೂ ಹಾಗೂ ಇಂತಹದೇ ಇನ್ನೂ ಹಲವು ಅಪರೂಪದ ತ್ಯಾಜ್ಯಗಳನ್ನು ಮನೆಯ ಎದುರಿನ ಗುಂಡಿಯಲ್ಲಿ ಬಿಸುಟು ಹೋಗುತ್ತಿದ್ದರು. ಈ ಬಿಸುಟ ವಸ್ತುಗಳ ಜೊತೆ ಕೇಶವನ್ ನಾಯರ್ ಬರೆದ ಪ್ರೇಮ ಪತ್ರಗಳೂ ಇರುತ್ತಿದ್ದವು. ಆಗ ಆ ಪತ್ರಗಳಲ್ಲಿ ಅಂತಹದೇನೂ ಕಾಣದೆ ನಾವು ಅವಸರದಲ್ಲಿ ಅವುಗಳನ್ನು ನೋಡಿ ನಮಗೆ ಬೇಕಾದ ಅಪರೂಪದ ವಸ್ತುಗಳನ್ನು ಮಾತ್ರ ಹೆಕ್ಕಿಕೊಂಡು ಹೋಗುತ್ತಿದ್ದೆವು. ಆದರೆ ಈಗ ಯೋಚಿಸಿದರೆ ಆ ಪತ್ರಗಳಲ್ಲಿದ್ದ ಸಾಲುಗಳು ಮಸುಕುಮಸುಕಾಗಿ ನೆನಪಾಗಿ ಕೇಶವನ್ ನಾಯರ್ ಎಷ್ಟು ಒಳ್ಳೆಯ ಕವಿಯಾಗಿದ್ದರು ಎಂದೂ ಒಮ್ಮೊಮ್ಮೆ ಅನಿಸುತ್ತದೆ.

ಕೇಶವನ್ ನಾಯರ್ ಇಂತಹದೇ ಪತ್ರಗಳನ್ನು ರೋಸಿ ಸಿಸ್ಟರಿಗೂ ಬರೆದು ಕೊಡುತ್ತಿದ್ದರು ಎಂದು ಆಮೇಲೆ ಯಾರೋ ಹೇಳುತ್ತಿದ್ದರು. ಅದರಿಂದಾಗಿಯೇ ರೋಸಿ ಸಿಸ್ಟರು ತಮ್ಮ ಸನ್ಯಾಸಿನಿಯ ದಿರಿಸನ್ನು ತ್ಯಜಿಸಿ ಕೇಶವ ನಾಯರನ್ನು ಅರಸುತ್ತಾ ಅವರ ಬಳಿಯೇ ಬಾಡಿಗೆಗೆ ಬಂದರೆಂದೂ ಆದರೆ ಬರೆಯ ಪ್ರೇಮ ಪತ್ರಗಳನ್ನು ಬರೆಯಲು ಮಾತ್ರ ಗೊತ್ತಿದ್ದ ಕೇಶವನ್ ನಾಯರ್ ಬೇರೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿ ರೋಸಿ ಸಿಸ್ಟರನ್ನು ಎಲ್ಲೂ ಸಲ್ಲದ ಹಾಗೆ ಮಾಡಿದರೆಂದೂ ಹೇಳುತ್ತಿದ್ದರು. ಇದೆಲ್ಲಾ ಗೊತ್ತಿದ್ದಿದ್ದರಿಂದಲೇ ಸುಶೀಲ ಟೀಚರ ಸೋದರ ಮಾವನು ಬೇರೇನೂ ಮಾಡದೆ ಆ ಪತ್ರಗಳನ್ನು ಒಂದು ರೀತಿಯ ಅಮಲಿನಿಂದ ಓದಿ ಅದರಲ್ಲಿರುವ ಉಪಮೆಗಳಿಂದ ಉದ್ರೇಕಿತರಾಗಿ ಸೊಸೆಯನ್ನು ಇನ್ನಷ್ಟು ಪ್ರೀತಿಸುತ್ತಿದ್ದರು ಅನಿಸುತ್ತದೆ.

ಸುಶೀಲ ಟೀಚರಿಗೂ ಇದರ ಅರಿವಾಗಿತ್ತು. ಆದರೆ ಗಂಡಸನ್ನು ಉದ್ರೇಕಿಸುವ ಅದೆಂತಹ ಸಾಲುಗಳನ್ನು ಕೇಶವನ್ ನಾಯರ್ ಬರೆದಿರುವರು ಎಂಬುದು ಅವಳ ಅಂದಾಜಿಗೆ ಸಿಲುಕಿರಲಿಲ್ಲ. ಕುತೂಹಲ ತಾಳದೆ ಒಂದೆರೆಡು ಬಾರಿ ಓದಿ ನೋಡಿದರೂ ಕೇಶವನ್ ನಾಯರ್ ಬರೆದ ಮೋಡಿ ಅಕ್ಷರಗಳಲ್ಲಿ ಅಂತಹದ್ದೇನೂ ಆಕೆಗೆ ಗೋಚರಿಸಿರಲಿಲ್ಲ. ಈ ಗಂಡಸರ ಹಣೆಬರಹವೇ ಇಷ್ಟು ಎಂದು ಸುಮ್ಮನಾಗಿದ್ದಳು. ಸೋದರಮಾವ ಹಡಗು ಹತ್ತಿ ಹೋದಮೇಲೆ ಅವರು ತಿರುಗಿ ಬರುವವರೆಗೂ ಸುಶೀಲ ಟೀಚರಲ್ಲಿ ಅಂತಹ ಕುತೂಹಲವೂ ಉಳಿದಿರುತ್ತಿರಲಿಲ್ಲ. ಬೆಳಗೆ ಎದ್ದು ಎಷ್ಟು ಚಳಿಯಾದರೂ ತಣ್ಣೀರು ಸುರಿದುಕೊಂಡು ಹಣೆಗೆ ಚಂದನ ಬಳಿದುಕೊಂಡು ಬಾಗಿಲು ಸಣ್ಣಗೆ ತೆರೆದು ಕೇಶವನ್ ನಾಯರ್ ಅಲ್ಲಿಲ್ಲವೆಂದು ಖಾತರಿ ಪಡಿಸಿಕೊಂಡು ಮಿಂಚಿನ ವೇಗದಲ್ಲಿ ಒಂದು ಸಣ್ಣ ರಂಗೋಲಿ ಬಿಡಿಸಿ ಎದ್ದು ಒಳಸೇರುವುದು, ಆಮೇಲೆ ಒಳಗೆಯೇ ಸಣ್ಣಗೆ ಹಾಡಿಕೊಳ್ಳುತ್ತಾ ಇಡೀ ದಿನದ ಅಡುಗೆಯನ್ನು ಮಾಡಿ ಮುಗಿಸಿ ಶಾಲೆಗೆ ಹೋಗುವ ಹೊತ್ತಲ್ಲಿ ಬಾಗಿಲು ತೆರೆದು ಹೊರಬರುವುದು. ಶಾಲೆ ಮುಗಿಸಿ ಬಾಗಿಲು ತೆರೆದು ಒಳಸೇರಿದರೆ ಅವರು ಮತ್ತೆ ಬಾಗಿಲು ತೆರೆಯುವುದು ಮಾರನೇ ಬೆಳಗೆಯೇ. ಅದೂ ಕೇಶವನ್ ನಾಯರ್ ಅಲ್ಲಿ ಪ್ರೇಮಪತ್ರ ಹಿಡಿದುಕೊಂಡು ನಿಂತಿಲ್ಲವೆಂದು ಖಾತರಿಯಾದ ಮೇಲೆ.

ಆದರೆ ಸುಶೀಲ ಟೀಚರಿಗೆ ನಿಜಕ್ಕೂ ಕಷ್ಟವಾಗುತ್ತಿದ್ದುದು ಭಾನುವಾರಗಳಂದು. ಆ ದಿನ ಬೇಕೆಂತಲೇ ತಡವಾಗಿ ಎದ್ದು ಆಲಸಿಯಾಗಿ ಓಡಾಡಿ ಸೂರ್ಯನ ಬಿಸಿಲು ಹಿತ್ತಲಿನಲ್ಲಿ ಸರಿಯಾಗಿ ಬೀಳುತ್ತಿದೆ ಎಂದು ಖಾತರಿ ಪಡಿಸಿಕೊಂಡು ಬಚ್ಚಲಿನಲ್ಲಿ ಕುದ್ದು ಮರಳುತ್ತಿರುವ ನೀರನ್ನು ಸಮಗೊಳಿಸಿ ಮೈಗೆಲ್ಲಾ ಎರೆದು ಎಣ್ಣೆ ಮೆತ್ತಿದ ತಲೆಗೂ ಸುರಿದು ಮೈಯೆಲ್ಲಾ ಒರೆಸಿ ಅವರು ಬಹಳ ಹೊತ್ತು ತಮ್ಮ ಉದ್ದದ ಮುಡಿಯನ್ನು ಒಣಗಿಸುತ್ತಾ ಬಿಸಿಲಿನಲ್ಲಿ ಹಬೆಯಾಡುತ್ತಾ ಕೂತಿರುತ್ತಿದ್ದರು. ಸುಶೀಲ ಟೀಚರ್ ಬಿಸಿಲಿನಲ್ಲಿ ಕೂತಿರುತ್ತಿದ್ದ ಅಷ್ಟೂ ಹೊತ್ತು ಮಹಡಿಯ ಮೇಲಿನ ತಮ್ಮ ಒಂಟಿಕೋಣೆಯ ಪುಟ್ಟ ಕಿಟಕಿಯಿಂದ ಕೇಶವನ್ ನಾಯರ್ ಆಕೆಯನ್ನು ದೇವತೆಯಂತೆ ನೋಡುವಂತೆ ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದರು. ಆ ಸಣ್ಣ ನಿಟ್ಟುಸಿರು ಸುಶೀಲ ಟೀಚರ ಹೃದಯವನ್ನು ಬಾಣದಂತೆ ಹೊಕ್ಕುಬಿಡುತ್ತಿತ್ತು ಅನಿಸುತ್ತದೆ. ಆಗ ಆಕೆಗೆ ತಾನು ಹೆಣ್ಣಿನ ದೇಹವನ್ನು ಹೊತ್ತುಕೊಂಡು ಬದುಕಿರುವುದೇ ತಪ್ಪೇನೋ ಎಂದು ತೋರುತ್ತಿದ್ದಿರಬಹುದು. ಹಾಗಾಗಿ ಸುಶೀಲ ಟೀಚರ್ ಭಾನುವಾರವನ್ನು ದ್ವೇಷಿಸುತ್ತಿದ್ದರು. ಶಾಲೆ ಯಾವಾಗ ತೊಡಗುವುದೋ ಎಂದು ಕಾಯುತ್ತಿದ್ದರು.

ನಾವೂ ಶಾಲೆಯಲ್ಲಿ ಸುಶೀಲ ಟೀಚರನ್ನು ಕಾಯುತ್ತಿದ್ದೆವು. ತರಗತಿಯೊಳಗೆ ನಮ್ಮ ನಡುವೆ ಸದ್ದಿಲ್ಲದೆ ಚಲಿಸುತ್ತಿರುವ ಏನೋ ಒಂದು ಪರಿಮಳದಂತೆ ಟೀಚರು ಓಡಾಡುತ್ತಿದ್ದರೆ ನಾವು ನಮ್ಮ ಎಲ್ಲ ಸಣ್ಣಪುಟ್ಟ ರಗಳೆಗಳನ್ನು ಮರೆತು ತಲೆದೂಗುತ್ತ ಕುಳಿತಿರುವ ಮಣ್ಣಿನ ಬೊಂಬೆಗಳಂತೆ ಆಕೆಯನ್ನು ನೋಡುತ್ತಿದ್ದೆವು. ನಮ್ಮ ಬಾಲ್ಯದ ಆ ಕಾಲವೇ ಹಾಗಿತ್ತು. ಒಂದೋ ಭೂಮಿ ಆಕಾಶಗಳನ್ನು ಒಂದು ಮಾಡುವಂತೆ ಸುರಿಯುತ್ತಿದ್ದ ಮಳೆ, ಇಲ್ಲಾ ಬಂಗಾರದ ಬಣ್ಣದ ಸೂರ್ಯ ಕಿರಣಗಳ ಬಿಸಿಲುಗಾಲ. ಒಂದೋ ಯಾರು ಯಾರೆಂದು ಕಾಣಿಸದ ಹಾಗೆ ಮುಸುಕಿಕೊಂಡಿರುವ ಮಂಜು, ಇಲ್ಲಾ ಎಲ್ಲವನ್ನೂ ಹಾರಿಸಿಕೊಂಡು ಹೋಗುವಂತೆ ಬೀಸುತ್ತಿರುವ ತಣ್ಣಗಿನ ಗಾಳಿ. ಈ ಲೋಕದಲ್ಲಿ ಇರುವುದು ನಾವು ಮಾತ್ರವೇನೋ, ಈ ಉದ್ದದ ರಸ್ತೆ ಹಾದು ಹೋಗುವುದು ನಮ್ಮ ಊರಿಂದಾಗಿ ಮಾತ್ರವೇನೋ ಎಂಬಂತಹ ಪುಟ್ಟ ಜಗತ್ತಿನಲ್ಲಿ ಇರುತ್ತಿದ್ದ ನಮಗೆ ಸ್ತ್ರೀ ಸೌಂದರ್ಯ ಎಂಬುದು ಸುಶೀಲ ಟೀಚರ ಪಾಠಗಳಲ್ಲಿ ಹಾಗೂ ದೂರದಿಂದಲೇ ಹಾದು ಬರುವ ಅವರ ಮೈಯ್ಯ ಪರಿಮಳದಲ್ಲಿ ಗೋಚರವಾಗುತ್ತಿತ್ತು. ಅದಕೂ ಮಿಗಿಲಾದದ್ದು ನಮಗೆ ಬೇರೆ ಏನೂ ಅರಿವಾಗುತ್ತಲೂ ಇರಲಿಲ್ಲ.

ಈ ನಡುವೆ ಒಂದು ಸಂಜೆ ನಾವು ಶಾಲೆಯಿಂದ ಮರಳುತ್ತಿರುವಾಗ ಕೇಶವನ್ ನಾಯರ್ ತೀರಿ ಹೋಗಿದ್ದರು. ಅವರು ಮಹಡಿಯ ಮೇಲಿನ ಒಂಟಿ ಕೋಣೆಯ ಮಂಚದಲ್ಲಿ ಕೆಲವು ದಿನಗಳ ಹಿಂದೆ ತೀರಿ ಹೋಗಿ ಅವರ ದೇಹ ಮಲಗಿದಲ್ಲೇ ಉಬ್ಬಿಕೊಂಡು ಅದನ್ನು ಮರದ ಏಣಿಯ ಮೂಲಕ ಕೆಳಗೆ ಇಳಿಸಲು ಜನರು ಹರಸಾಹಸ ಪಡುತ್ತಿದ್ದರು. ಒಬ್ಬನು ಹತ್ತುವಷ್ಟು ಮಾತ್ರ ಅಗಲವಿದ್ದ ಆ ಏಣಿಯಿಂದ ಕೇಶವನ್ ನಾಯರ ಅಷ್ಟು ದೊಡ್ಡ ದೇಹವನ್ನು ಹೇಗೆ ಕೆಳಗಿಳಿಸುವುದು ಎಂದು ಎಲ್ಲರೂ ಚಿಂತಿಸುತ್ತಿದ್ದರು. ಈರಪ್ಪ ಟೈಲರೂ, ಅವರ ಹೆಂಡತಿಯೂ, ರೋಸಿ ಸಿಸ್ಟರೂ ಎಲ್ಲರೂ ಕೆಳಗೆ ಮೌನದಲ್ಲಿ ಸುಮ್ಮನೇ ಕುಳಿತಿದ್ದರು. ಸುಶೀಲ ಟೀಚರ ಬಾಗಿಲು ಮುಚ್ಚಿಕೊಂಡೇ ಇತ್ತು. ಒಂದು ತರಹದ ಕೆಟ್ಟವಾಸನೆ ಬೇಡಬೇಡವೆಂದರೂ ಅಲ್ಲಿ ಸುಳಿದಾಡುತ್ತಾ ರೋಸಿ ಟೀಚರ ನಾಯಿಯೊಂದು ಆಕಾಶಕ್ಕೆ ತಲೆಯೆತ್ತಿ ದೊಡ್ಡದಾಗಿ ಹುಯ್ಯಲಿಡುತ್ತಿತ್ತು. ಅದುವರೆಗೂ ಮರಣವೆಂಬುದನ್ನು ಕಣ್ಣಾರೆ ಕಂಡಿರದ ನಾವು ಅದನ್ನು ನೋಡುವುದು ಬೇಡವೆಂದು ಕೇಶವನ್ ನಾಯರ ದೇಹವನ್ನು ಕೆಳಗಿಳಿಸುವ ಮೊದಲೇ ಅಲ್ಲಿಂದ ಹೋಗಿ ಬಿಟ್ಟಿದ್ದೆವು. ಮಾರನೆಯ ಬೆಳಗೆ ಶಾಲೆಗೆ ಬರುವಾಗ ರೋಸಿ ಟೀಚರು ನಾಯಿ ಬೆಕ್ಕುಗಳಿಗೆಂದು ಮೀನುಮಾರುವ ಆಲಿಕುಟ್ಟಿಯ ಜೊತೆ ಚರ್ಚೆ ಮಾಡುತ್ತಿದ್ದರು. ಈರಪ್ಪ ಟೈಲರು ಜೊಲ್ಲು ತುಂಬಿಕೊಂಡು ಬಟ್ಟೆ ಹೊಲಿಯುವ ಯಂತ್ರವನ್ನು ತುಳಿಯುತ್ತಿದ್ದರು. ಸುಶೀಲ ಟೀಚರ ಬಾಗಿಲು ಮುಚ್ಚಿಕೊಂಡೇ ಇತ್ತು. ರಸ್ತೆಯ ಬದಿಯಲ್ಲಿ ಕಸ ಬಿಸಾಕುವ ಜಾಗದಲ್ಲಿ ಕೇಶವನ್ ನಾಯರ ಹಳೆಯ ಹಾಸಿಗೆಗಳನ್ನೂ, ಉಡುಪುಗಳನ್ನೂ ಅವರ ಕವಿತೆಗಳನ್ನೂ ಬೆಂಕಿಯಲ್ಲಿ ಉರಿಸಲು ಒಟ್ಟು ಮಾಡಿ ಇಟ್ಟಿದ್ದರು.

*****

ಈಗ ಈ ಎಲ್ಲವನ್ನೂ ಯೋಚಿಸಿದರೆ ಒಂದು ರೀತಿಯ ನೀಳವಾದ ಉಸಿರುಗಟ್ಟಿಸುವಂತಹ ಸುಯಿಲೊಂದು ಎದೆಯ ಒಳಗೆ ಹಾದು ಹೋಗುತ್ತದೆ. ಬೇರ ಬೇರೆ ಥರಹದ ಜನರು, ವಾಹನಗಳು, ರಸ್ತೆ ದೊಡ್ಡದು ಮಾಡುವ ದೊಡ್ಡ ದೊಡ್ಡ ಯಂತ್ರಗಳು, ಅದರ ಜೊತೆ ಬಂದಿರುವ ನಮ್ಮ ಹಾಗೇ ಇರುವ ಆದರೆ ಬೇರೆ ಭಾಷೆಯ ಮಾತನಾಡುವ ಜನರು. ಇವರ ದಾವಂತ ಉತ್ಸಾಹ ಎಲ್ಲವನ್ನೂ ನೋಡಿದರೆ ಇನ್ನೇನು ಈ ಮಳೆಗಾಲ ಮುಗಿಯುವುದರೊಳಗೆ ಈ ರಸ್ತೆಯ ಬದಿಯಲ್ಲಿ ಉದ್ದಕ್ಕೆ ಐದೆಕೆರೆ ಜಾಗದಲ್ಲಿ ಇರುವ ಈ ಊರು ಮಾಯವೇ ಆಗುತ್ತದೇನೋ ಅನಿಸುತ್ತದೆ. ಹೇಗೂ ಹೋಗುತ್ತದಲ್ಲ ಎಂಬ ನಿರುತ್ಸಾಹದಲ್ಲಿ ಏನೂ ಮಾಡದೆ ಇರುವ ಈ ಊರು, ಈ ಕಥೆ ಹೇಳುತ್ತಿರುವ ನನ್ನ ಪುಟ್ಟ ಬಟ್ಟೆಯ ಅಂಗಡಿಯೂ ಈ ಭೂಪಟದಿಂದ ಮಾಯವಾಗುತ್ತದೆ.

ಹಳೆಯ ಗಿರಾಕಿಗಳು ಹೆಚ್ಚಿನವರು ಯಾರೂ ಈಗ ನನಗೆ ಉಳಿದಿಲ್ಲ. ಬಹುತೇಕ ಜನರೂ ಹೊರಟು ಹೋಗಿದ್ದಾರೆ. ಆದರೂ ಕೆಲವರು ಹಳೆಯ ನೆನಪುಗಳನ್ನು ಇಟ್ಟುಕೊಂಡು ಬಂದು ಮಾತನಾಡಿಸಿ ಹೋಗುತ್ತಾರೆ. ಅಂತಹವರಲ್ಲಿ ನಮ್ಮ ಸುಶೀಲ ಟೀಚರೂ ಒಬ್ಬರು. ಹಳೆಯ ಶಿಷ್ಯನೆಂಬ ಅಕ್ಕರೆಯಲ್ಲಿ ಬಂದು ಹೋಗುತ್ತಾರೆ. ಅವರ ಜೊತೆ ಅವರ ನಡು ವಯಸ್ಸಿನ ಮಗಳೂ ಇರುತ್ತಾಳೆ. ನೋಡಲು ತುಂಬ ಚಂದವಿದ್ದಾರೆ. ಅವರ ಗಂಡನೂ ಮಿಲಿಟರಿಯಿಂದ ಆಗಾಗ ಬಂದು ಹೋಗುತ್ತಾರೆ. ಒಮ್ಮೊಮ್ಮೆ ಸುಶೀಲ ಟೀಚರ ಗಂಡನೂ ಜೊತೆಗಿರುತ್ತಾರೆ. ನಾವೆಲ್ಲಾ ತೀರಿಯೇ ಹೋಗಿದ್ದಾರೆಂದು ತಿಳಿದಿದ್ದ ಗಂಡ. ನೋಡಲು ಇನ್ನೂ ತರುಣನಂತಿದ್ದಾರೆ. ಯಾವಾಗಲೂ ಮುಗುಳ್ನಗುತ್ತಿರುತ್ತಾರೆ. ಅವರ ಮುಂದೆ ಸುಶೀಲ ಟೀಚರು ತುಂಬ ಪೇಲವವಾಗಿ ಕಾಣಿಸುತ್ತಾರೆ.

ನಗು ಬರುತ್ತದೆ. ಒಂದು ಕಾಲದಲ್ಲಿ ನಾವೆಲ್ಲ ತೀರಿಯೇ ಹೋಗಿದ್ದಾರೆಂದು ತಿಳಿದಿದ್ದ ಮನುಷ್ಯ ನಮ್ಮ ಜೊತೆ ತುಂಬಾ ಚೆನ್ನಾಗಿ ರಮ್ಮಿ ಆಡುತ್ತಾರೆ. ದೇಶಾನುದೇಶ ಸುತ್ತಿದ ಕಥೆಗಳನ್ನೆಲ್ಲಾ ಹೇಳುತ್ತಾರೆ. ತ್ರಿಪುರಾದ ಗಡಿಯ ಹಳ್ಳಿಯೊಂದರಲ್ಲಿ ಮಲೇರಿಯಾ ಹಿಡಿದು ಕಾಡೊಳಗೆ ಸಾಯಲು ಸಿದ್ದರಾಗಿ ನಡುಗುತ್ತಾ ಮಲಗಿಕೊಂಡಿದ್ದರಂತೆ. ಆ ಊರಿನ ಹೆಣ್ಣು ಮಕ್ಕಳು ಹೆಚ್ಚು ಬಟ್ಟೆಯೇ ಹಾಕಿಕೊಳ್ಳುವುದಿಲ್ಲವಂತೆ. ಅಂತಹವಳು ಒಬ್ಬಳು ಹೊಟ್ಟೆಗೆ ವಿಷ ಹಾಕಿ ಮರಳು ಮಾಡಿ ಸಾಕಿಕೊಂಡಿದ್ದಳಂತೆ. ಆಮೇಲೆ ಆಕೆಯೇ ಮಲೇರಿಯಾದಲ್ಲಿ ತೀರಿ ಹೋದಳಂತೆ. ತುಂಬ ಚಂದವಿದ್ದಳಂತೆ. ಒಳ್ಳೆಯವಳೂ ಆಗಿದ್ದಳಂತೆ.

ಯಾರಾದರೂ ಕಥೆ ಹೇಳುವವರಿದ್ದರೆ ಗಂಟೆಗಟ್ಟಲೆ ಬಾಯಿಬಿಟ್ಟುಕೊಂಡು ಕೇಳುವ ನನಗೆ ಸುಶೀಲ ಟೀಚರ ಮಿಲಿಟರಿ ಗಂಡ ಗೆಳೆಯನಾಗಿದ್ದಾರೆ. ನಾವಿಬ್ಬರೂ ದೂರ ಎಲ್ಲಾದರೂ ಗುಡ್ದವೊಂದರ ತುದಿಯಲ್ಲಿ ಕುಳಿತುಕೊಂಡು ಬಹಳ ಸಂಗತಿಗಳನ್ನು ಹೇಳುತ್ತಿರುತ್ತೇವೆ.

ನನ್ನಲ್ಲಿ ಈಗಲೂ ಇರುವ ಮದ್ಯದ ಖಾಲಿ ಸಣ್ಣ ಬಾಟಲಿಗಳ ಸಂಗ್ರಹವನ್ನು ಅವರು ನೋಡುತ್ತಿರುತ್ತಾರೆ. `ಹಡಗಿನ ಮಾವನದೋ’ ಎಂದು ಕೇಳುತ್ತಾರೆ. ನಾನು `ಹೌದು’ ಎನ್ನುತ್ತೇನೆ. ಆ ಬಾಟಲಿಗಳಲ್ಲಿ ನೀರು ತುಂಬಿ ನನ್ನ ಮಡದಿ ಸಣ್ಣ ಸಣ್ಣ ಹೂಗಳನ್ನು ಇಟ್ಟಿರುತ್ತಾಳೆ. ಅವಳು ಹೂವಿನ ಹುಚ್ಚಿ. ನಾನು ಬಾಯಿ ತೆರೆದು ನಿದ್ದೆ ಮಾಡಿದರೆ ನನ್ನ ಬಾಯೊಳಗೂ ಒಂದು ಹೂ ಇಟ್ಟು ಬಿಡುತ್ತಾಳೆ.

ಇರಲಿ ಬಿಡಿ. ಹೇಳುತ್ತಾ ಹೋದರೆ ಕಥೆಗಳಿಗೆ ಕೊನೆಯೇ ಇರುವುದಿಲ್ಲ. ಈಗ ಇಲ್ಲಿ ನಿಲ್ಲಿಸುತ್ತೇನೆ. ಇನ್ನು ಈ ಮಳೆಗಾಲ ಕಳೆದ ಮೇಲೆ ನೀವು ಈ ದಾರಿಯಿಂದಾಗಿ ಬಂದರೆ ಈ ಊರೂ ಇರುವುದಿಲ್ಲ. ನನ್ನ ಅಂಗಡಿಯೂ ಇರುವುದಿಲ್ಲ. ಬಹಳ ಚಂದದೊಂದು ರಸ್ತೆ ಕಾಳಿಂಗ ಸರ್ಪದಂತೆ ಸುತ್ತಿ ಸುರುಳಿ ಮೈಯನ್ನು ಅಲುಗಿಸುತ್ತಾ ಕಾಫಿ ತೋಟಗಳ ನಡುವೆ ಇಳಿದು ಹೋಗುತ್ತಿರುತ್ತದೆ. ನಮಸ್ಕಾರ.