ಹಬ್ದಾಗೆ ಒಬ್ಬಟ್ಟು ಮಾಡ್ದಾಗೆಲ್ಲಾ ಒಬ್ಬಟ್ಟಿನ್ ಸಾರೂ ಮಾಡ್ತಿದ್ರು. ಒಬ್ಬಟ್ ಎಂಗೆ ಪಿರೂತೀನೋ ಆ ಸಾರೂ ಆಟೇಯಾ. ಒಬ್ಬಟ್ಟು ಸೀಗಿರ್ತಿತ್ತಲ್ಲ, ಅದುಕ್ಕೆ ನಮ್ಮನ್ಯಾಗೆ ಎಲ್ರೂವೇ ಸಾರು ಹಾಕ್ಕಂಡು ತಿನ್ನಾರು. ನಂಗೇ ಮಾತ್ರ ಅದು ಹಿಡುಸ್ತಿರ್ಲಿಲ್ಲ. ನಾನು ಹಾಲೂ ತುಪ್ಪ ಹಾಕ್ಕಂಡೇ ತಿಂಬ್ತಿದ್ದೆ. ನಮ್ಮಮ್ಮ, ಸ್ವಾದ್ರ ಮಾವಂದ್ರು, ಎಲ್ರೂ ಒಬ್ಬಟ್ಟುಗೇ ಅಂಗೇ ಚಿತ್ರಾನ್ನುಕ್ಕೂ ಸಾರು ಹಾಕ್ಕಂತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಆಗಿನ ಕಾಲದ ತಿಂಡಿಗಳ ಕುರಿತ ಬರಹ ನಿಮ್ಮ ಓದಿಗೆ
ಜೇನ್ ತುಪ್ಪ
ಜೇನ್ ತುಪ್ಪ ಅಂಬೋದು ಬೋ ಉಪ್ಯೋಗುಕ್ಕೆ ಬರಾ ಪದಾರ್ಥವಾಗಿತ್ತು. ಹೊಲ್ದಾಗೆ ಕಟ್ಟೋ ಜೇನುಗೂಡ್ನ ದಾಳಪ್ನೋ ಇನ್ಯಾರ್ದಾರಾ ಹೊಲ್ದಾಗೆ ಕಟ್ಟಿರಾ ಜೇನ್ ಗೂಡ್ನ ಯಾರಾರಾ ಮನೇಗೆ ತಕಾ ಬರ್ತಿದ್ರು. ಅದ್ಕೆ ರೊಟ್ಟಿ ಅಂಬ್ತಿದ್ವಿ. ಗೂಡು ಗೂಡ್ನಾಗೆಲ್ಲಾ ರಸಾ ಸೋರ್ತಿತ್ತು. ತಕಾ ಬಂದಿರೋರು ಈ ರೊಟ್ಯಾ ಅಂಗೇ ಹಿಂಡಿ ಜೇನು ತುಪ್ವ ಒಂದು ಪಾತ್ರ್ಯಾಗೆ ತೊಟ್ಟಿಕ್ಸೋರು. ರಸ್ವೆಲ್ಲಾ ಹಿಂಡಿದ್ ಏಟ್ಗೆ ಆ ರೊಟ್ಟಿ ಪಿಪ್ಪೆ ಆದಂಗಾಗ್ತಿತ್ತು. ಒಳ್ಳೆ ಮ್ಯಾಣದ ತರಾ ಆಗ್ತಿತ್ತಾ. ಅದುನ್ನ ಬಿಂದಿಗೆ ಪಂದಿಗೆ ಇಲ್ಲಾ ಪಾತ್ರೇ ಏನಾರಾ ಸೋರ್ತಿದ್ರೆ ಮ್ಯಾಣದ ತರ ಅಂಟಿಸ್ತಿದ್ರು.
ಹೊಸಾ ತುಪ್ಪ ಬಂದ್ ಮ್ಯಾಗೆ ಹಳೇದ್ನ ಯಾರ್ಗಾನಾ ಕೊಟ್ ಬಿಡಾದು. ಹೊಸ್ದ ರೊಟ್ಟಿ, ಚಪಾತಿ, ದೋಸೆ ಎಲ್ಲಾದ್ಕೂವೇ ನಂಚ್ಕೊಂಡು ತಿನ್ನೋದ್ರಾಗೆ ಮಜಾ ಇರ್ತಿತ್ತು. ಬಾಳೇಹಣ್ಣಿನ ರಸಾಯ್ನ, ಹಲಸಿನ ಹಣ್ಣಿನ ರಸಾಯ್ನ ಎಲ್ಲಾದ್ಕೂ ಜೇನು ಇರ್ಲೇ ಬೇಕು. ಹಲಸಿನ ತೊಳೇನಾ ಕೈಯಲ್ಲಿ ಸಿಗುದು ಸಣ್ಣ ತುಂಡು ಮಾಡಿ ಅದ್ಕೆ ವಸೀನೇ ಬೆಲ್ಲ ಅಂಗೇ ಸ್ಯಾನೆ ಜೇನು ತುಪ್ಪ ಹಾಕಿ, ಹಸಿ ಕೊಬ್ರಿ ಸೇರ್ಸಿ ಕಲ್ಸಿದ್ರೆ ಅಬ್ಬೋ ನಾಲ್ಗೇ ನಮ್ಮ ಮಾತೇ ಕ್ಯೋಳಾಕಿಲ್ಲ ಅಂತೀವ್ನಿ. ಇನ್ನಾ ವಸಿ ಅಂಬ್ತ ಹೊಟ್ತುಂಬಾ ತಿನ್ನಾದೇಯಾ. ಅದ್ಕೇಯಾ ಕರಡಿಗ್ಳು ಹಲಸಿನ ತೊಳೇಗೆ ಜೇನುತುಪ್ಪ ಕಲಸಿ ತಿಂತವೆ ಅಂತ ನಮ್ಮಜ್ಜಿ ಯೋಳ್ತಿತ್ತು.
ಹುಳಿ ಮಜ್ಜಿಗೆ ಉಳುದ್ರೆ….
ಎಲ್ಡು ಮೂರು ದಿನುದ್ ಮಜ್ಜಿಗೆ ಉಳಿದ್ರೆ ಆ ಕಾಲ್ದಾಗೆ ತಂಗ್ಳು ಪೆಟ್ಟಿಗೆ ಇರ್ನಿಲ್ಲವಲ್ಲ, ಹುಳಿ ಬಂದೋಗ್ತಿತ್ತು. ಅದ್ನ ಹಾಕಿ ಅಕ್ಕಿ ಹಿಟ್ಟು, ಕೊತ್ತುಂಬ್ರಿ, ಹಸೀಕಾರ ಸೇರ್ಸಿ ಕುದ್ಸಿದ್ರೆ ಒಳ್ಳೆ ಹಪ್ಪಳದ ಹಿಟ್ಟು ಆಗ್ತಿತ್ತು. ಅದ್ನ ಹಪ್ಳ ಒತ್ತಾಕೇ ಬಿಡ್ತಿರ್ಲಿಲ್ಲ. ಬೇಯಿಸ್ದ ಹಿಟ್ನ ಅಂಗೇ ಕಿತ್ತು ತಕಂಡು ತಿಂದೂ ಖಾಲಿ ಮಾಡ್ತಿದ್ವು.
ಹುರಿಟ್ಟು
ಯಾವಾಗ್ಲೂ ಹುರಿಟ್ಟು ಮನ್ಯಾಗೆ ಖಾಯಂ ಗಿರಾಕಿ ಆಗಿತ್ತು. ಅಕ್ಕಿ ಹುರ್ದು ಮಾಡಿದ್ರೆ ಅಕ್ಕೀದು, ರಾಗೀಲಿ ಮಾಡಿದ್ರೆ ರಾಗಿ ಹುರಿಟ್ಟು. ಸಂಜೀ ಕಡೀಲಿ ಹೊಟ್ಟೀ ಹಸುದ್ರೆ ಇವೇ ನಮ್ಮುನ್ನ ಕಾಯ್ತಿದ್ವು. ಅಮ್ಮಾ ಹಸ್ವು ಅಂದ್ರೆ ಸಾಕು, ವಸಿ ಹುರಿಟ್ಟು ತಕಂಡು ಉಪ್ಪಿಟ್ಟು ಮಾಡ್ತಿದ್ರು. ಬಾಂಡ್ಲಿ ಇಕ್ಕಿ ಎಣ್ಣೆ ಹಾಕಿ, ಸಾಸಿವೆ, ಉದ್ದಿನ್ ಕಾಳು ಕಡಲೆ ಬೇಳೆ ಚಿಟುಗುಟ್ಟಿಸಿ, ಕರಿಬೇವು, ಈರುಳ್ಳಿ ಮೊಗ್ಗುಸಿ(ತಾಳಿಸಿ), ಹುರಿಟ್ನ ನೀರ್ ಬೆರ್ಸಿ ಕಲ್ಸಿ ಒಗ್ಗರಣೇಗೆ ಹಾಕಿ ಬಾಡ್ಸಿದ್ರೆ ಉಪ್ಪಿಟ್ಟು. ಬೇಕಿದ್ರೆ ಮಜ್ಜಿಗೆ ಹಾಕ್ಕಂಡು ತಿನ್ನಾದು.
ಅನ್ನ ಕಮ್ಮಿ ಇದ್ರೆ, ಸಾಲ್ದೇ ಹೋದ್ರೆ ನಮ್ಮಮ್ಮಂದ್ರು, ಅಜ್ಜೀದೀರ್ಗೆ ಇದೇ ಆಪದ್ಭಾಂಧವ ಅಂತೆ. ಸಾರ್ಗೋ, ಮಜ್ಜಿಗೇಗೋ ಹುರಿಟ್ಟು ಸೇರ್ಸಿ ತಿಂದ್ರೆ ಹೊಟ್ಟೆ ತಣ್ಣಗಾಗ್ತಿತ್ತು ಅಂತಿದ್ರು. ಒಂದು ಪಿಡಚೆ ಅನ್ನ ಮಿಕ್ಕಿದ್ರೆ ಅದುಕ್ಕೇಯ ಒಂದಿಡಿ ಹುರಿಟ್ಟು ಸೇರ್ಸಿ ನೀರಾಗಿ ಕಲುಸ್ಕಂಡು ತಿಂದು ಮನಿಕ್ಕಂತಿದ್ರು.
ಬೆಣ್ಣೆ ಕಾಸಿದ್ರೆ
ಬೆಣ್ಣೆ ಕಾಸಿದ್ರೆ ಅದ್ರಾಗೆ ವಿಳೇದೆಲೆ ಹಾಕಿದ್ರೆ, ಕುರುಕುರೂಂತ ತಿನ್ನಾಕೆ ಮಜ್ವಾಗಿರ್ತಿತ್ತು. ತಳ್ದಾಗೆ ಗಸಿ ಇರ್ತಿತ್ತಲ್ಲ ಅದ್ಕೇ ರಾಗಿ ಹುರಿಟ್ಟು ಹಾಕಿ, ಯಾಲಕ್ಕಿ, ಒಣಕೊಬ್ರಿ, ಬೆಲ್ಲ, ಹಾಲು ಹಾಕಿ ಕಲ್ಸಿ ಪಿಡಚೆ(ಉದ್ದನೆ ಉಂಡೆ) ಕಟ್ಟಿ ಕೊಡೋರು. ಇನ್ನೊಸಿ ಹುರಿಟ್ಗೆ ಬೆಳ್ಳುಳ್ಳಿ ಖಾರ ಕೊತ್ತಂಬ್ರಿ ಕಿವುಚಿ ಮಜ್ಜಿಗೆ ಹಾಕಿ ಕೊನೇಲಿ ಈರುಳ್ಳಿ ಸೇರ್ಸಿ ಇಡೀಪುಡಿಯಾಗಿ (ತೀರಾ ಅಳ್ಳಕವಾಗಿ ಅಲ್ಲ, ಸೊಲ್ಪ ಒಣ ಪುಡಿ ಪುಡಿಯಾಗಿ) ಕಲ್ಸಿ ಪಿಡಚೆ ಕಟ್ಟಿ ಕೊಡ್ತಾರೆ ಅಂಬ್ತಾಲೇ ಬೆಣ್ಣೆ ಕಾಸಾಕಿಕ್ಕತಿದ್ದಂಗೇಯಾ ಅದ್ರ ಘಮಕ್ಕೆ ಅಲ್ಲೇ ತಿರುಗ್ತಾ, ಹುರಿಟ್ಟಿನ್ ಡಬ್ಬ ತಂದು ಅಮ್ಮನ ಕೈಯಾಗೆ ತುರುಕ್ತಿದ್ವಿ. ವಿಳೇದೆಲೆ ತಂದು ಕೊಡ್ತಿದ್ವಿ.
ಮಜ್ಜಿಗೆ – ಮೊಸ್ರು
ಮಜ್ಜಿಗೆ ಇಲ್ದೇ ನಮ್ ದಿನ್ವೇ ಇಲ್ಲ. ಯಾವುದ್ಕಾನಾ ಆಗ್ಲಿ ಮಜ್ಜಿಗೆ ಹೊಂದ್ಕಂತಿತ್ತು. ಏನೂ ಸಿಗ್ದೇ ಹೋದ್ರೆ ಒಂದಿಡಿ ಕಳ್ಳೆಪುರಿ (ಕಡಲೆಪುರಿ), ಕಡಲೆ ಪಪ್ಪಿನ ಹಿಟ್ಟು ಮಜ್ಜಿಗೆ ಹಾಕ್ಕಂಡು ತಿಂದ್ರೂ ಹಸಿವೇ ನೀಗ್ತಿತ್ತು.
ಕಳ್ಳೆಪುರಿಗೆ ಬೆಳ್ಳುಳ್ಳೀ, ಕೊತ್ತಿಮಿರಿ, ಖಾರಾ ಹಾಕಿ ಕಿವುಚಿದ್ರೆ, ಮ್ಯಾಗೊಂದಿಷ್ಟು ಕಳ್ಳೆಪಪ್ಪು ಹಾಕ್ಕಂಡು ಮುಕ್ಕ್ತಿದ್ವಿ.
ಚಪಾತಿಗೂ ಮೊಸ್ರು, ರೊಟ್ಟೀಗೂ ಮೊಸ್ರು, ದೋಸೇಗೂ ಮೊಸ್ರು, ಚಟ್ನೀಗೂ ಸೈ, ಚಟ್ನಿ ಪುಡೀಗೂ ಜೈ. ಒಟ್ನಾಗೆ ಮೊಸ್ರು ಇದ್ರೇನೆ ತುತ್ತು ಒಳೀಕ್ಕೆ ಇಳೀತಿತ್ತು.
ಇಚಿತ್ರ ಜೋಡಿಗ್ಳು
ಸುಮಾರಷ್ಟು ಇಚಿತ್ರಗ್ಳು ನಮ್ ಊಟ್ದಾಗಿತ್ತು. ಸೊಪ್ಪಿನ್ ಸಾರೂಂದ್ರೆ ಪಿರೂತಿ. ಅದೇನೋ ಸೊಪ್ಪಿನ ಸಾರಿಗೆ ಮೊಸ್ರು ಹಾಕ್ಕಂಡು ಉಣ್ಣಾದು ರೂಡಿ ಆಗಿತ್ತು.
ಕನಸ್ನಾಗೂ ಸೊಪ್ಪಿನ್ ಸಾರು
ಒಂದು ಕಿತ ಅಮ್ಮ ಸೊಪ್ಪಿನ್ಸಾರು ಮಾಡಿತ್ತು. ಗೆಣಕಾರರ ಜೊತೇಗೆ ಆಟಕ್ಕೋಗಿದ್ದೆ. ಆಡಿ ಸುಸ್ತಾಗಿ ಮನೇಗೆ ಬರೋತ್ಲೇ ಅಂಗೇ ಮನುಗ್ ಬಿಟ್ಟಿದ್ದೆ. ಆಗಿನ್ ಕಾಲ್ದಾಗೆ ಉಣ್ಣದೇ ಅಂಗೇ ಮನುಗುದ್ರೆ, ಮನಿಕ್ಕಂಡವ್ಳೇ ಬುಡು ಅಂತ ಸುಮ್ಕಾಗ್ತಿದ್ರು. ಎಬ್ಬುಸಿ ಕೊಡ್ತಿರ್ಲಿಲ್ಲ. ಸರೊತ್ನಾಗೆ ನಂಗೆ ಕನ್ಸು. ಕನ್ಸಾಗೆ ಸೊಪ್ಪುನ್ ಸಾರು ಬಂದೈತೆ. ಬಿಸ್ ಬಿಸಿ ಅನ್ನುಕ್ಕೆ ಸೊಪ್ಪುನ್ ಸಾರು ಬಿಟ್ಟು, ಮ್ಯಾಲೊಸಿ ಕೆನೀ ಮಸ್ರು ಹಾಕ್ಕಂಡು ಕಲ್ಸಿ ಕೊಟ್ಟವ್ರೆ. ನಾನೂ ಚಪ್ಪರ್ಸಿಕೊಂಡು ತಿಂತಿವ್ನಿ. ಎಚ್ಚರಾಗ್ ಬಿಡ್ತು. ತಕ್ಸನ ಕಣ್ಣು ಬುಟ್ರೆ, ಎಲ್ರೂ ಮನಗೌರೆ. ಸೊಪ್ಪಿನ್ ಸಾರು ಉಣ್ಣದೆ ಮನಗಿದ್ದು ಗ್ಯಪ್ತಿ ಬಂದ್ ಬುಡ್ತು. ನಿದ್ಗಣ್ಣಾಗೇ ಅಮ್ಮುನ್ನ ಎಬ್ಸಿ ಅಮ್ಮೋ ಹಸ್ವು ಅಂದೆ. ಪುಣ್ಯುಕ್ಕೆ ಅನ್ನಾ ಸಾರು ಮಿಕ್ಕಿತ್ತು. ಸಾಮಾನ್ಯುಕ್ಕೆ ಅನ್ನಾ ಸಾರು ಇನ್ನೇನಾರ ಮಿಕ್ಕಿದ್ರೆ ಯಾರ್ಗಾನಾ ಕರ್ದು ಕೊಟ್ ಬುಡ್ತಿದ್ರು. ಯಂಗೋ ಅವತ್ತು ಅಂಗೇ ಮಡಗಿದ್ರು. ಕಲ್ಸಿ ಕೊಟ್ಟಿದ್ನ ಗಬಗಬನೆ ತಿಂದು ಮನುಗ್ದೆ.
ಒಬ್ಬಟ್ಟಿಗೆ ನಂಚಿಕೆ ಒಬ್ಬಟ್ಟಿನ ಸಾರು
ಹಬ್ದಾಗೆ ಒಬ್ಬಟ್ಟು ಮಾಡ್ದಾಗೆಲ್ಲಾ ಒಬ್ಬಟ್ಟಿನ್ ಸಾರೂ ಮಾಡ್ತಿದ್ರು. ಒಬ್ಬಟ್ ಎಂಗೆ ಪಿರೂತೀನೋ ಆ ಸಾರೂ ಆಟೇಯಾ. ಒಬ್ಬಟ್ಟು ಸೀಗಿರ್ತಿತ್ತಲ್ಲ, ಅದುಕ್ಕೆ ನಮ್ಮನ್ಯಾಗೆ ಎಲ್ರೂವೇ ಸಾರು ಹಾಕ್ಕಂಡು ತಿನ್ನಾರು. ನಂಗೇ ಮಾತ್ರ ಅದು ಹಿಡುಸ್ತಿರ್ಲಿಲ್ಲ. ನಾನು ಹಾಲೂ ತುಪ್ಪ ಹಾಕ್ಕಂಡೇ ತಿಂಬ್ತಿದ್ದೆ. ನಮ್ಮಮ್ಮ, ಸ್ವಾದ್ರ ಮಾವಂದ್ರು, ಎಲ್ರೂ ಒಬ್ಬಟ್ಟುಗೇ ಅಂಗೇ ಚಿತ್ರಾನ್ನುಕ್ಕೂ ಸಾರು ಹಾಕ್ಕಂತಿದ್ರು. ನಮ್ ಇನ್ನೊಬ್ರು ಸ್ವಾದ್ರತ್ತೆ ಗುಬ್ಬೀನೋರು(ಊರು). ಸುಧಾ ಅಂತ. ಅವ್ರ ಮನ್ಯಾಗೆ ಒಬ್ಬಟ್ಟಿಗೆ ಉಪ್ಪಿಂಕಾಯಿ ನಂಚ್ಕಂತಿದ್ರಂತೆ. ಅವ್ರೂ ನಂಚ್ಕಣಾರು. ಅದ್ನ ನೋಡೀ ನಂಗೂ ತಲೆಕೆರ್ಕಣಂಗೆ ಆಗಾದು. ನಮ್ಮನ್ಯಾಗೆ ಮೊದ್ಲೇ ಸಾರು ಹಾಕ್ಕಂತಾರೆ. ಅದ್ರ ಜೊತ್ಯಾಗೆ ಇದ್ ಬ್ಯಾರೆ ಉಪ್ಪುಂಕಾಯಿ ಅಂತಾವ.
ಹಾಲು – ಬುರುಗು
ಬೆಳಿಗ್ಗೆ ಎದ್ದೇಟ್ಗೇ ನಾವು ಹಾಲು ಕುಡೀತಿದ್ವಿ. ಬರೇ ಹಾಲು ಕುಡೀತಿರ್ಲಿಲ್ಲ ನಂಚಿಕಣಾಕೆ ಬೇಕಿತ್ತು. ಹಾಲೂ ಬನ್ನು ಅದ್ದಿಕೊಂಡು ತಿಂತಿದ್ವಿ. ಅಪ್ಪ ಮಧುಗಿರೀಗೆ ಹೋದಾಗೆಲ್ಲಾ ಬ್ರೆಡ್ಡು ತರಾರು. ನಂಜುಂಡೇಶ್ವರ ಬ್ರೆಡ್ಡು ಇಲ್ದಿದ್ರೆ ಮಾಕಂ ಬ್ರೆಡ್ಡು. ಒನ್ನೊಂದು ಕಿತ ಹಣ್ಣಿನ ಬ್ರೆಡ್ಡು ತರ್ತಿದ್ರು. ಅದು ಸ್ಯಾನೆ ಅಪರೂಪ. ಗಾತ್ರದಾಗೆ ಸಣ್ಣದಿರ್ತಿತ್ತು. ಆದ್ರೂ ಬೋ ರುಚಿ. ಟೂಟಿ ಫ಼್ರೂಟಿ ಅಂತ ಗೊತ್ತಿರ್ಲಿಲ್ಲ. ಹಣ್ಣಿನ ಬ್ರೆಡ್ಡು ಆಟೇಯಾ. ಮದ್ಲು ಬ್ರೆಡ್ಡೆಲ್ಲಾ ಹಿಸುಕಿ, ಹಣ್ಣೆಲ್ಲಾ ಗೋರ್ಕಂಡು ತಿಂದ್ ಬಿಡ್ತಿದ್ವು. ಆಮ್ಯಾಕೆ ಹಾಲ್ನಾಗೆ ಅದ್ದಿಕೊಂಡು ತಿನ್ನಾದು. ಇನ್ನಾ ಅಪರೂಪುಕ್ಕೆ ರಸ್ಕು ತರಾರು. ಯಾತರದೂ ಇಲ್ದಿದ್ರೆ ಬುರುಗಂತೂ (ಕಳ್ಳೆಪುರಿ) ಮನ್ಯಾಗೆ ಕಾಯಂ ಇರ್ತಿತ್ತು. ಹಾಲಿಗೆ ಬುರುಗು ಹಾಕ್ಕಂಡು ನೆನಿಸಿಕಂಡು ತಿಂತಿದ್ವಿ. ಅದ್ರ ರುಚೀ ಯೇಳಾಕೇ ಬರವಲ್ದು. ಒಂದ್ ಕಿತ ತಿಂದ್ರೇನೇಯಾ ಅದ್ರ ಮಜಾ ತಿಳ್ಯಾದು.
ಚಿಲಮೆಳ್ಳು ಪಾಯ್ಸ
ಆಗಿನ್ ಕಾಲ್ದಾಗೆ ಇಸೇಸ ತಿಂಡಿ ಇದು. ಮದ್ವೆ, ಮುಂಜಿ, ಮಡ್ಲು ತುಂಬಾಕೆಲ್ಲಾ ಬೋ ಮುಖ್ಯವಾಗಿತ್ತು. ಮೈದಾ ಹಿಟ್ನ ಮೆತ್ತುಗೆ ಕಲ್ಸಿ ಬಿಳೇ ಬಟ್ಯಾಗೆ ಸುತ್ತಿ ಮಡುಗ್ತಿದ್ರು. ಅದು ಮೆತ್ತಗಾದ ಮ್ಯಾಗೆ ತೆಳ್ಳುಕೆ ದಾರದ ತರ ಸಣ್ಣ ಅಕ್ಕಿ ಕಾಳಿನ ಗಾತ್ರಕ್ಕೆ ಉದ್ದುದ್ದ ಮಾಡಿ ರಾಶಿ ಹಾಕ್ತಿದ್ರು. ಬಿಸುಲ್ನಾಗೆ ಒಣುಗ್ಸಿ ಎತ್ತಿಕ್ತಿದ್ರು. ಬೇಕಾದಾಗ ಅದುನ್ನ ಹಾಲ್ನಾಗೆ ಬೇಯ್ಸಿದ್ರೆ ಪಾಯಸ ಆಗ್ತಿತ್ತು. ಶ್ಯಾವಿಗೆ ಪಾಯ್ಸಕ್ಕಿಂತ್ಲೂವೆ ಘನವಾಗಿರ್ತಿತ್ತು. ಮದ್ವೆ ಗೊತ್ತಾದ್ ತಕ್ಸುಣ ಮನ್ಯಾಗೆ ಚಿಲುಮೆಳ್ಳು, ಹಪ್ಪಳ, ಕುಂಬಳ ಬೀಜ, ಕೆಕ್ಕರಣ್ಣು ಬೀಜ ಸುಲ್ದು ಮಡಿಕ್ಕಣಾಕೆ ಸುರು ಆಗ್ತಿತ್ತು.
ಗಿಣ್ಣಾಲು
ಸ್ಯಾನೆ ಸುಲೂಭುಕ್ಕೆ ನಮ್ಗೆ ಇಸೇಸ ತಿಂಡಿ ಅಂಬ್ತ ಸಿಕ್ತಿದ್ದಿದ್ದು ಇದೊಂದೇಯಾ. ಹಸಾ ಎಮ್ಮೆ ದಂಡಿಯಾಗಿ ಊರು ತುಂಬಾ ಇದ್ವಾ. ಯಾರ್ದೋ ಮನ್ಯಾಗೆ ಕರ ಈಯಾದು ಮಾಮೂಲಿ. ಗಿಣ್ಣಾಲು ಕಾಸೋದು. ಎರುಡ್ನೇ ದಿನ್ವಾದ್ರೆ ಅದ್ರಾಗೆ ಇಡ್ಲಿ ಮಾಡ್ತಿದ್ರು. ಹೋಗ್ತಾ ಬರ್ತಾ ಬಟ್ಲಾಗೆ ಕೈಯಾಕಿ ಮುರ್ಕೊಂಡು ತಿಂತಿದ್ವಿ.
ಜೀಬ್ಲು ಕಳ್ಳೆಬೀಜ
ಬಾಯಾಡ್ಸಾಕೆ ಯೋನೂ ಸಿಗಾಕಿಲ್ಲ ಅಂದ್ರೂವೆ ಇದು ಸಿಗ್ತಿತ್ತು. ಕಳ್ಳೆಕಾಯಿ ಸುಲ್ಯಾವಾಗ ಚೆಂದಾಕಿರಾ ಬೀಜ್ವೆಲ್ಲಾ ಒಂದು ಡಬ್ಯಾಗೆ ಎತ್ತಿಕ್ಕುದ್ರೆ, ಜೀಬ್ಲು ಬೀಜ(ಸಣಕಲು ಕಡ್ಡೀ ತರ ಇರ್ತವಲ್ಲಾ ಅವು) ಬ್ಯಾರೆ ಮಡಗಿರ್ತಿದ್ರು. ತಿನ್ನಾಕೇನಾರಾ ಕ್ಯೋಳ್ದಾಗ ನಮ್ಮಮ್ಮ ಅವುನ್ನ ಕೊಡ್ತಿತ್ತು. ಅವೋ ಸೀಗಿರ್ತಿದ್ವು. ಆದ್ರೂವೆ ಅದುಕ್ಕೆ ಬೆಲ್ಲಾ ನಂಚಿಕಂಡು ತಿಂಬ್ತಿದ್ವಿ. ಗಸಗಸೇಗೆ ಒಣಕೊಬ್ರಿ ಸಕ್ರೆ ಸೇರ್ಸಿ ಬಾಯಾಡಾದು.
ಅಡಿಕೆಲೆ
ಬ್ಯಾರೇ ಏನೂ ಬಾಯಾಡಾಕೆ ಆಗ್ದಿದ್ರೆ, ನಮ್ಮಜ್ಜೀ ತಾವ್ಲೋ, ದೊಡ್ಡತ್ತೆ ತಾವ್ಲೋ ಗಿಂಜಕಣಾದು(ಬೇಡಿಕೊಳ್ಳೋದು) ಅಡಿಕೆಲೆ ಕುಟ್ಟಿ ಕೊಡೂ ಅಂತಾವ. ಕುಟ್ಟಾಣಿ ತಂದು ಕೊಡಾದು. ಎಲೆ, ಅಡಿಕೆ, ಸುಣ್ಣಾ ತಂದು ಮುಂದ್ಕೆ ಇಕ್ಕೀರೆ ಕುಟ್ಟಿ ಕೊಡಾರು. ಅದ್ಕೆ ಸಕ್ರೆ ಸೇರ್ಸಿ ಚಪ್ಪರಿಸ್ಕಂಡು ಗಂಟೆಗಟ್ಲೆ ಬಾಯಾಗೆ ವತ್ತರಿಸ್ಕಂಡು ಅಡ್ಡಾಡ್ತಿದ್ದೆ. ನಮ್ಮಕ್ಕ ಬಾಯಾಗೆ ಹಾಕ್ಕಂಡ ತಕ್ಸುಣ ಕರಗೋಯ್ತಿತ್ತು. ನಂಗೆ ಗಂಟೆಗಟ್ಲೆ ಚಪ್ಪರಿಸೀರೂ ಮುಗೀತ್ಲೇ ಇರ್ನಿಲ್ಲ. ಕೊನೇಗೆ ಬ್ಯಾಸ್ರ ಬಂದು ಇಪ್ಪೇ ಅಂಗಾದ್ ಮ್ಯಾಗೆ (ರಸವೆಲ್ಲಾ ಮುಗ್ದು ಬರೀ ಸಿಪ್ಪೆ)ಉಗೀತಿದ್ದೆ.
ಬೂದುಗುಂಬ್ಳ ಸಿಪ್ಪೇನಾಗೆ ಬಾಳಕ
ಬೂದುಗುಂಬ್ಳ ಸಿಪ್ಪೆ ಸೈತ ಬಿಸಾಕ್ತಿರ್ನಿಲ್ಲ. ಅದ್ನ ಹುಳೀ ಮಜ್ಜಿಗೇನಾಗೆ ನೆನೆಸಿಕ್ಕಿ, ಬಿಸಿಲ್ನಾಗೆ ಒಣುಗ್ಸಿ ಬಾಳಕ ಮಾಡಾರು. ಅದ್ನ ಎಣ್ಣೆಯಾಗೆ ತೇಲಿಸಿ (ಕರಿದು), ಬಿಸೀ ಅನ್ನುಕ್ಕೆ ಉಪ್ಪು ಹಾಕಿ, ಬಾಳಕದ ಮೆಣಸು ಪುಡಿ ಮಾಡಿ ಕಲಸ್ಕೊಂಡು ತಿಂದ್ರೆ ಆಕಾಸ್ವೇ ನೆಲುದ್ ಮ್ಯಾಗೆ ಇಳೀತಿತ್ತು. ಅದ್ರ ಜೊತ್ಯಾಗೆ ಅರಳು ಸಂಡಿಗೀ ನಂಚಿಕಣಾಕೆ ಸಿಕ್ರಂತೂ ಸೈಯೇ ಸಯ್ಯ.
ಸುಲುಬುಕ್ಕೆ ನಮ್ಗೆ ಬಾಯಾಡಾಕೆ ಸಿಗ್ತಿದ್ದ ತಿಂಡಿಗ್ಳು ಇವು. ಸಣ್ಣ ಸಣ್ಣ ಕುಶಿಗ್ಳೂ ನಮ್ಗೆ ದೊಡ್ಡ ಸಂತೋಸ್ವೇ ಕೊಡ್ತಿತ್ತು. ನಮ್ ಆಸೆಗ್ಳೂ ಇದ್ನ ದಾಟಿ ಹೋಗ್ತಿರ್ಲಿಲ್ಲ. ಇದ್ನ ಬಿಟ್ಟು ಬ್ಯಾರೆ ಏನೂ ಗೊತ್ತಿರ್ಲೂ ಇಲ್ಲ್ವಲ್ಲ. ನಮ್ ಲೋಕ್ವೇ ಇದಾಗಿತ್ತು.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
ತುಂಬಾ ಚೆನ್ನಾಗಿದೆ ಎಲ್ಲಾ ಮರೆತಂತ ಅನ್ಕೊಂಡೆ ಆದರೆ ನಿಮ್ಮ ಬರಹದಿಂದ ಎಲ್ಲಾಕಣ್ ಮುಂದೆ ಬಂದ ಹಾಗೆ ಆಯಿತು 🏆👌👌😊😊