ಇನ್ನು ಈ ವರ್ತಮಾನ ಕಾಲದಲ್ಲಿ, “ಹೋಂ ಲೆಸ್” ವರ್ಗದಲ್ಲಿಯೇ ಅತ್ಯಂತ ದೌರ್ಭಾಗ್ಯರು ಎಂದು ಕರೆಯಲ್ಪಡುವ “ರಫ್ ಸ್ಲೀಪರ್ಸ್” ಗಳಲ್ಲಿ ಹೆಚ್ಚಿನವರು ಕಳೆದೆರಡು ತಿಂಗಳುಗಳಿಂದ ಗಟ್ಟಿ ಸೂರಿನಡಿಯ ಮೆತ್ತನೆಯ ಪಲ್ಲಂಗದಲ್ಲಿ ಮಲಗುವ ಸೌಭಾಗ್ಯ ಪಡೆದಿರುವುದು ಸುತ್ತಮುತ್ತಲಿನ ನೂರಾರು ನಿರಾಶಾದಾಯಕ ಸಂಗತಿಗಳ ನಡುವಿನ ಒಂದು ಆಶಾದಾಯಕ ವೃತ್ತಾಂತ. ದಶಕಗಳಿಂದ ವಸತಿರಹಿತರ ಬೀದಿವಾಸಿಗಳ ಹಿತಾಸಕ್ತಿಯಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಇವರಿಗೊಂದು ವಾಸ್ತವ್ಯ ದೊರಕಿಸುವ ಸುದೀರ್ಘ ಹೋರಾಟಕ್ಕೆ ಸತತ ಪ್ರಯತ್ನಕ್ಕೆ ಕೊರೊನ ನಿರ್ಬಂಧದ ನೆಪದಲ್ಲಿಯಾದರೂ ತಾವು ಬಯಸಿದ ಫಲಿತಾಂಶ ಸಿಕ್ಕಿದ್ದು ಉತ್ಸಾಹ ನೀಡಿದೆ. 
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಇವರ ಬಗ್ಗೆ ಹೇಳುವ ಮೊದಲು ಇವರಿರುವ ಇಲ್ಲಿನ ಕುರಿತು ಸ್ವಲ್ಪ ಹೇಳಿಬಿಡುತ್ತೇನೆ. ಭೂಪ್ರದೇಶದ ಸೀಮೆಯ ಆಧಾರದ ಮೇಲೆ ಈ ಜಲಾವೃತ ಭೂಮಿಯ ಹೋಳುಗಳನ್ನು ಇಂಗ್ಲೆಂಡ್, ಬ್ರಿಟನ್, ಯು.ಕೆ ಹೀಗೆಲ್ಲ ಕರೆಯುತ್ತಾರೆ. ಇವ್ಯಾವುವೂ ಸಮಾನಾರ್ಥಕ ಪದಗಳಲ್ಲ ಆದರೆ ಸಂಬಂಧದಿಂದ ಒಂದಕ್ಕೊಂದು ತೀರಾ ಹತ್ತಿರದವು. ಸಾಗರದಲ್ಲಿ ತೇಲುವ ತುಂಡು ಭೂಮಿಯ ಮೇಲೆ ಕೆಲವು ಗೆರೆಗಳನ್ನು ಎಳೆದರೆ ಮೈಗೆ ಮೈ ತಾಗಿಸಿಕೊಂಡಿರುವ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಎನ್ನುವ ಮೂರು ಪ್ರಾಂತ್ಯಗಳು ಮತ್ತೆ ಈಗಷ್ಟೇ ಗೀಚಿದ ಗೆರೆಗಳನ್ನು ಅಳಿಸಿ ಹಾಕಿ ಅದೇ ಭೂಮಿಯನ್ನು ಒಟ್ಟಾಗಿ ನೋಡಿದರೆ ಅದು ಬ್ರಿಟನ್; ಮತ್ತೆ ಈ ಬ್ರಿಟನ್ನಿಗೆ ಅಲ್ಲೇ ಪಕ್ಕದಲ್ಲಿ ತೇಲುವ ಐರ್ಲೆಂಡಿನ ಉತ್ತರ ಭಾಗವನ್ನೂ ಕೂಡಿಸಿದರೆ ಅದು ಸಂಯುಕ್ತ ಸಂಸ್ಥಾನ (ಯುನೈಟೆಡ್ ಕಿಂಗ್ಡಮ್). ನಿಮಗೆ ಯಾವಾಗ ಯಾವುದನ್ನು ಯಾವ ಕಾರಣಕ್ಕೆ ಉಲ್ಲೇಖಿಸಬೇಕೋ ಆಯಾ ಪ್ರಾಂತ್ಯಗಳನ್ನು ಕೂಡಿ ಕಳೆದು ಅಥವಾ ಜೋಡಿಸಿ ಮುರಿದು ಆಗ ಹುಟ್ಟುವ ಹೆಸರಿನಿಂದ ಇವನ್ನು ಕರೆದುಕೊಳ್ಳಬಹುದು.

ನೆರೆಹೊರೆಯ ಈ ಎಲ್ಲ ತುಂಡು ಪ್ರಾಂತ್ಯಗಳು ಒಂದಾನೊಂದು ಕಾಲದಲ್ಲಿ ಸ್ವತಂತ್ರ ದೇಶವಾಗಿದ್ದವೋ ಪ್ರದೇಶವಾಗಿದ್ದವೋ ಅಥವಾ ಅವರ ನಡುವಿನ ಸ್ನೇಹ, ವೈರ, ಕರಾಮತ್ತು, ಮಸಲತ್ತು ಇತ್ಯಾದಿಗಳನ್ನು ಆಂಗ್ಲರ ಇತಿಹಾಸದಲ್ಲಿ ಮುಳುಗೆದ್ದು ನೀವು ಓದಿಕೊಳ್ಳಬಹುದು ಅಥವಾ ಹಣ್ಣುಹಣ್ಣು ಇಂಗ್ಲೀಷ್ ಮುದುಕನೊಬ್ಬ ನೀವು ಕುಳಿತ ಪಬ್ಬಿನ ಟೇಬಲಿನಲ್ಲೇ ಸಿಕ್ಕರೆ ಅಲ್ಲೇ ಕತೆ ಹೇಳಿಸಿಕೊಳ್ಳಬಹುದು.

ಬೇರೆ ಬೇರೆ ಸಂದರ್ಭಗಳಿಗೆ ಹೊಂದುವಂತೆ ಇಂಗ್ಲೆಂಡ್… ಬ್ರಿಟನ್… ಯು.ಕೆ… ಶಬ್ದಗಳ ಬಳಕೆ ಆಗುತ್ತದಾದರೂ ಲಂಡನ್ನಿನ ಥೇಮ್ಸ್ ತಟದ ಸಂಸತ್ತು, ಯು.ಕೆ. ಎನ್ನುವ ಸಂಯುಕ್ತ ದೇಶದ್ದು. ಇನ್ನು ಸ್ಕಾಟ್ಲೆಂಡ್ ಐರ್ಲೆಂಡ್ ಪ್ರಾಂತ್ಯಗಳಲ್ಲಿ ಅಲ್ಲಿನ ಆಡಳಿತಕ್ಕೆ ಅನುಕೂಲವಾಗುವಂತೆ ಒಂದು ಸಂಸತ್ತು ಕೂಡ ಇದೆ. ಮತ್ತೆ ವೇಲ್ಸ್ ಪ್ರಾಂತ್ಯದಲ್ಲೊಂದು ವಿಧಾನಸಭೆಯೂ ಇದೆ. ಇಂಗ್ಲೆಂಡಿನ ನೆರೆಯ ಸ್ಕಾಟ್ಲೆಂಡ್ ವೇಲ್ಸ್ ಉತ್ತರ ಐರ್ಲೆಂಡ್ ಗಳಲ್ಲಿ ಇಂಗ್ಲೀಷ್ ಬಹುಪರಿಚಿತ ಚಲಾವಣೆಯ ಮಾಧ್ಯಮವಾದರೂ ಅಲ್ಲಲ್ಲಿ ಅವರದೇ ಭಾಷೆಗಳೂ ಇವೆ. ಯು.ಕೆ ಯೊಳಗಿನ ಪ್ರಾಂತ್ಯಾಡಳಿತ ಸ್ಥಳೀಯಾಡಳಿತಗಳಲ್ಲಿ ಹಲವು ವ್ಯತ್ಯಾಸಗಳಿದ್ದರೂ ಸಂಯುಕ್ತ ಸಂಸ್ಥಾನ ಎನ್ನುವ ಪ್ರಭುತ್ವದ ಅಡಿಯಲ್ಲಿ ಇರುವವರೆಲ್ಲರಿಗೂ ಒಂದೇ ಆಡಳಿತ ಕಾನೂನಿನ ಪರಿಧಿಯೂ ಇದೆ. ಇವರ ಸಂಕೀರ್ಣ ರಚನೆ ಹೊಂದಾಣಿಕೆ ವ್ಯತ್ಯಾಸ ಎಷ್ಟೇ ಹೇಗೇ ಇದ್ದರೂ ಇಲ್ಲಿಂದ ದೂರ ನಿಂತು ನೋಡುವಾಗ ಈ ಭೂಭಾಗವನ್ನು ಈಗಾಗಲೇ ಹೇಳಿದ ಯಾವ ಹೆಸರಿನಿಂದ ಕರೆದರೂ ಗುರುತು ಹತ್ತುತ್ತದೆ . ಅಥವಾ ಸೀಮೆ ಗಡಿ ಪ್ರದೇಶಗಳ ಹಂಗಿಲ್ಲದೇ, ಈ ದೇಶದ ಯಾವ ಮೂಲೆಯಲ್ಲಿ ವಾಸಿಸುವವರನ್ನೂ “ಲಂಡನ್” ನಲ್ಲಿ ಇರುವವರು ಎಂದು ಭಾರತದಲ್ಲಿರುವ ಸಂಬಂಧಿಗಳು ಸ್ನೇಹಿತರು ಹೇಳುವಂತೆ ಉಲ್ಲೇಖಿಸಿದರೂ ನಡೆಯುತ್ತದೆ.

ಲಂಡನ್, ಇಲ್ಲಿನ ಒಂದು ನಗರ. ಅದು ಈ ದೇಶದ ರಾಜಧಾನಿ ಆದರೂ ದೂರದೇಶದಲ್ಲಿ ವಿಮಾನ ಹತ್ತುವಾಗ ಬೀಳ್ಕೊಡುವಾಗ “ಇವರು ಲಂಡನ್ ಗೆ” ಹೋಗುವವರು ಎಂದೇ ಕೈ ಆಡಿಸಿ ಟಾಟಾ ಮಾಡುವುದಿದೆ, ಅಥವಾ ಇನ್ಯಾರಿಗೋ ಪರಿಚಯಿಸುವುದಿದೆ. ಇಂತಹ ಸುಪರಿಚಿತ ಲಂಡನ್ ನಗರದ ಮತ್ತೆ ಅದು ರಾಜಧಾನಿಯಾದ ದೇಶದ ಮತ್ತೆ ಆ ದೇಶವನ್ನು ಕಟ್ಟುವ ಪ್ರಾಂತ್ಯಗಳ ಸಿದ್ಧಿ ಪ್ರಸಿದ್ಧಿ ಪರಂಪರೆ ಸಂಪ್ರದಾಯಗಳ ಬಗೆಗೆ ಇಲ್ಲಿನ ಕೆಂಪು ಕಲ್ಲಿನ ಮುದಿಕಟ್ಟಡಗಳು ನದಿತೊರೆಗಳ ಡೊಂಕು ಬಳುಕುಗಳು ಹಾದಿ ಬೀದಿಗಳ ಉದ್ದಗಲಗಳು ಕಿವಿಗಳನ್ನು ಸೋಲಿಸುವಷ್ಟು ಕಣ್ಣುಗಳನ್ನು ಬಾಡಿಸುವಷ್ಟು ಕತೆ ಹೇಳಿಯಾವು. ಮತ್ತೆ ಆ ಕತೆಗಳಲ್ಲೆಲ್ಲ ಇವರ ಪ್ರಾಂತ್ಯ ಸರಹದ್ದುಗಳ ನಡುವಿನ ತಿಕ್ಕಾಟ ತಿಣುಕಾಟಗಳ ಸುದ್ದಿ ಬರಬಹುದು.

ಇಂತಹ ಹಲವು ಕತೆ ಪುರಾಣಗಳಲ್ಲಿ ಇದೀಗ “ಹಿಂದೆಂದೂ ಕಾಣದ…” ಎಂದೇ ಆರಂಭವಾಗುವ ಕೊರೊನ ಕಾಲದ ಹಲವು ಸಂಗತಿಗಳೂ ಸೇರಿಕೊಳ್ಳುತ್ತಿವೆ. ಮತ್ತೆ ಆ ಕತೆಗಳಲ್ಲಿ ಕೋವಿಡ್ ಕಾಲದ ದಾರುಣ ಸಾವುಗಳ ಜೊತೆಗೆ ಬದುಕು ಭವಿಷ್ಯಗಳ ಅನಿಶ್ಚಿತತೆ ಅತಂತ್ರತೆಗಳ ವಿಚಾರಗಳೂ ಜಾಗ ಪಡೆದಿವೆ. ಇಲ್ಲಿನ ಸರಕಾರದಿಂದ ಹಿಡಿದು ಜನಸಾಮಾನ್ಯರವರೆಗೆ ಆರೋಗ್ಯದಿಂದ ಆರ್ಥಿಕತೆಯವರೆಗೆ ಏಕಾಂತದಿಂದ ಲೋಕಾಂತದ ತನಕ ಈ ಕೊರೊನ, ಅಗಲಿಕೆ ಬೇಗುದಿ ಆತಂಕ ಸೋಲುಗಳನ್ನೇ ತುಂಬಿಸುತ್ತಿದೆ. ಈ ಸಂಧಿಗ್ಧ ಕಾಲದಲ್ಲಿ ಈ ದೇಶದ ಸರಿ ಹೆಜ್ಜೆಗಳು ತಪ್ಪು ನಡೆಗಳು ನಿತ್ಯವೂ ಪತ್ರಿಕೆಗಳ ಮುಖಪುಟದಿಂದ ಹಿಡಿದು ಸಂಸತ್ತಿನ ಪ್ರಶ್ನೋತ್ತರ ಅವಧಿಯವರೆಗೂ ಪ್ರತಿಧ್ವನಿಸುತ್ತವೆ.

ಕೊರೊನವನ್ನು ಎದುರಿಸಲು ಎಂದು ಏನು ಆಗಬೇಕಿತ್ತು ಹೇಗೆ ಎಷ್ಟು ಮಾಡಬೇಕಿತ್ತು ಎನ್ನುವುದು ಈ ದೇಶದ ಒಳಗೂ ಹೊರಗೂ ಚರ್ಚೆ ಆಗುತ್ತಲೇ ಇದೆ. ಈ ದೇಶದ ಉದ್ದಗಲಕ್ಕೆ ಶೋಧಿಸುತ್ತಾ ಹೊರಟರೆ ಕೊರೊನ ದಾಳಿಯಿಂದ ಜೀವ ಕಸಿದ, ಕೆಲಸ ಕಳೆದ, ಜೀವನಾಧಾರ ಕುಸಿದ ಕತೆಗಳೇ “ಇನ್ನು ಸಾಕು ಸಾಕು” ಎಂದರೂ ಮತ್ತಷ್ಟು ಸಿಗುತ್ತವೆ.

ಇಷ್ಟೆಲ್ಲಾ ಆಗುವುದಕ್ಕೆ ಚೀನಾದಿಂದ ಹೊರಟು ದಿಕ್ಕು ದೆಸೆ ತಲುಪಿದ ಬಲಿಷ್ಠ ಕ್ರಿಮಿಯನ್ನೋ ಸರಿಯಾದ ಸಮಯಕ್ಕೆ ಎಚ್ಚರದಿಂದ ಸೂಕ್ತ ಹೆಜ್ಜೆಗಳನ್ನು ಅನುಸರಿಸದ ಸರಕಾರವನ್ನೋ, ಅಪರಿಚಿತ ಕಾಯಿಲೆಯ ಸ್ವಭಾವವನ್ನೋ ಲಾಕ್ ಡೌನ್ ಗಂಭೀರತೆಯ ಬಗ್ಗೆ ಅಸಡ್ಡೆ ತಳೆದು ಹೊರಗೆ ತಿರುಗಾಡುತ್ತಲೇ ಇರುವವರನ್ನೋ ಇವೆಲ್ಲವೂ ಮುಗಿಯುವ ತನಕವೂ ದೂರುತ್ತಲೇ ಇರಬಹುದು. ಅಥವಾ ಎಷ್ಟು ಚರ್ಚಿಸಿ ಚಿಂತಿಸಿದರೂ ಇನ್ನು ಬದಲಾಗದ ಪರಿಣಾಮಗಳನ್ನು ಬದುಕಿನ ಭಾಗವಾಗಿ ಸ್ವೀಕರಿಸಿ ಸುಮ್ಮನಿರಲೂಬಹುದು. ನಮ್ಮಲ್ಲಿ ಹೀಗೇಕಾಯಿತು… ಎಂದು ಒಳಗಿನವರು ಯೋಚಿಸುವ, ‘ನಿಮ್ಮೂರಲ್ಲಿ ಇಷ್ಟೆಲ್ಲಾ ಹೇಗಾಯಿತು…?’ ಎಂದು ದೂರದೂರದವರು ಅಚ್ಚರಿ ಪಡುವ ಇಲ್ಲಿನ ಈ ಕಾಲಕ್ಕೆ ಇವೆಲ್ಲ ಚಿಂತೆ ಯೋಚನೆಗಳ ಮರೆಯಲ್ಲಿ ಇನ್ನೊಂದು ಸಂಗತಿಯೂ ಸದ್ದಿಲ್ಲದೇ ಇಲ್ಲಿನ ಇವರ ಬದುಕಿನಲ್ಲಿ ನಡೆಯುತ್ತಿದೆ.

ಕೋವಿಡ್ ಕಾಲದ ಎಷ್ಟೋ ತಪ್ಪುಗಳನ್ನು ಅದಕ್ಕಿಂತ ಹೆಚ್ಚಿನ ಸೋಲುಗಳನ್ನು ಬ್ರಿಟನ್ ಒಳಗೋ ಹೊರಗೋ ಕೂತವರು ಪಟ್ಟಿ ಮಾಡಿದರೂ ಅವೆಲ್ಲದರೊಳಗೆ ಮೂಲೆಯಲ್ಲಿ ತಣ್ಣಗೆ ಕುಳಿತು ಮಂದಹಾಸ ಬೀರುವ ಒಂದು ಸಣ್ಣ ಸೂಕ್ಷ್ಮ ಗೆಲುವಿನ ಕತೆಯೂ ಹುದುಗಿದೆ. ಇಲ್ಲಿನ ಕುರಿತು ಇಷ್ಟು ಹೇಳಿದ ಮೇಲೆ ಇವರ ಬಗೆಗೆ ಈಗ ಹೇಳಲು ಅಡ್ಡಿ ಇಲ್ಲ. ಹೆಸರು ಅನುಕೂಲ ಅಸ್ತಿತ್ವಗಳೇ ಇಲ್ಲದವರನ್ನು… ಇವರು… ಅಂತ ಪರಿಚಯಿಸಿದರೆ ಇವರು ಬೇಸರಿಸಲಿಕ್ಕೂ ಇಲ್ಲ.

ನಾವು ಇವರು ಎಲ್ಲರೂ ಒಂದೇ, ಆಕಾಶದ ಕೆಳಗೇ ಹುಟ್ಟಿದವರು, ಇಲ್ಲೇ ಬದುಕುವವರು ಎಂದೆನಿಸಿಕೊಂಡವರಾದರೂ ಇವರು ಮಲಗುವುದು ಕೂಡ ನೇರವಾಗಿ ಆಕಾಶದ ಸೂರಿನಡಿಯಲ್ಲಿ ಎನ್ನುವುದೇ ಇವರಿಗೂ ನಮಗೂ ಇರುವ ಒಂದು ಆಘಾತಕಾರಿ ವ್ಯತ್ಯಾಸ, ಆತಂಕಕಾರಿ ತಾರತಮ್ಯ.

ಒಂದು ರಸ್ತೆಯ ಇಕ್ಕೆಲದಲ್ಲಿರುವ ಕಾಲುಹಾದಿಯಲ್ಲಿ ಹೆಜ್ಜೆ ಹಾಕುವಾಗ ಕೆಲಸಕ್ಕೆ ತಡ ಆಯಿತು, ಶಾಲೆಗೆ ಹೊತ್ತಾಯಿತು, ಊಟಕ್ಕೆ ಬೇಗ ಹೋಗಬೇಕು, ಹೋಟೆಲಿನಲ್ಲಿ ಗೆಳೆಯರು ಬಂದಾಯಿತೇನೋ, ಸಿನೆಮಾ ಟಿಕೇಟು ಸಿಗುತ್ತದೋ ಇಲ್ಲವೋ… ಎಂಬೆಲ್ಲ ಯೋಚನೆಗಳು ಸುಳಿಯುವಾಗ ಇವತ್ತು ರಾತ್ರಿ ರಸ್ತೆಯ ಈ ಬದಿಯಲ್ಲಿ ಹಾಸಿಗೆ ಬಿಚ್ಚಲೊ ಆ ಕಡೆಯಲ್ಲಿ ಪವಡಿಸಲೋ ಎನ್ನುವ ಯೋಚನೆ ಖಂಡಿತ ನಮ್ಮೊಳಗೇ ಸುಳಿಯಲಿಕ್ಕಿಲ್ಲ ಎನ್ನುವುದೂ ನಮಗೂ ಇವರಿಗೂ ಇರುವ ಇನ್ನೊಂದು ಅಸಾಧಾರಣ ಅಂತರ.

ಈ ದೇಶದ ಪರಿಭಾಷೆಯಲ್ಲಿ ಇವರನ್ನು “ರಫ್ ಸ್ಲೀಪರ್ಸ್” ಎಂದು ಕರೆಯುತ್ತಾರೆ. ನಿತ್ಯವೂ ನಮ್ಮ ಆಸುಪಾಸಿನಲ್ಲಿ ಹಾದುಹೋಗುವ ಅಪರಿಚಿತರು ಹೇಗೆ ಕಾಣುತ್ತಾರೆ? ಎಂತಹ ಮಾತಾಡುತ್ತಾರೆ? ಎನ್ನುವುದರ ಮೇಲೆ ಅವರ ವ್ಯಕ್ತಿತ್ವವನ್ನೂ ಚಾರಿತ್ಯ್ರವನ್ನೂ ತೂಗಿ ಅಳೆಯುವ ಪ್ರತಿಭಾವಂತರಾದ ನಮಗೆ ಇವರು ಎಲ್ಲಿ ಮಲಗುತ್ತಾರೆ ಎನ್ನುವುದರ ಆಧಾರದಲ್ಲಿ ಇವರ ಬಗ್ಗೆ ಕಲ್ಪನೆ ಬೆಳೆಸಿಕೊಳ್ಳಲು ಕಷ್ಟ ಆಗಲಿಕ್ಕಿಲ್ಲ. ವಿಶೇಷಣಗಳಿಲ್ಲದ ತೀರಾ ಸರಳ ಸಾಮಾನ್ಯ ಶಬ್ದಗಳಲ್ಲಿ ಇವರನ್ನು ಪರಿಚಯಿಸುವುದಾದರೆ, ಇವರು ಮನೆಯಿಲ್ಲದವರು. ಬೀದಿಬದಿಯ ಕಾಲುಹಾದಿಯಲ್ಲಿ ಅಥವಾ “ಫುಟ್ ಪಾತ್” ಅಲ್ಲಿಯೇ ಇವರ ವಾಸ. ಹಾಸಿಗೆಯಾಗಿಯೂ ಹೊದಿಕೆಯಾಗಿಯೂ ಕೆಲಸ ಮಾಡಬಲ್ಲ ನಿದ್ರಾಚೀಲ, ಚಪ್ಪಲಿ, ನೀರ ಬಾಟಲಿ, ಮದ್ಯಪಾನ ಪ್ರಿಯರಾದರೆ ಅದರದೊಂದು ಕ್ಯಾನ್ ಇತ್ಯಾದಿಗಳು ಇವರ ಖಾಯಂ ಸ್ಥಿರಾಸ್ತಿಗಳು. ಕೆಲವೊಮ್ಮೆ ಇವರ ಕೈಯಲ್ಲಿ ಇವರ ಬಗೆಗಿನ ಸಣ್ಣ ವಿವರದ ಫಲಕ ಮತ್ತೆ ಒಂದು ಭಿಕ್ಷಾ ತಟ್ಟೆ ಇರುತ್ತದೆ. ಇನ್ನು ಕೆಲವರ ಬಳಿ ಒಂದು ಸಾಕು ನಾಯಿಯೂ ಜೊತೆಗಿರುವುದಿದೆ, ಯಾರಿಗೆ ಯಾರು ಆಧಾರ, ಯಾರು ಯಾರಿಗೆ ಯಜಮಾನರು ಎಂದು ಇವರೇ ತೀರ್ಮಾನಿಸಿ ಹೇಳಬೇಕು.

ಇವರ ಸಂಕೀರ್ಣ ರಚನೆ ಹೊಂದಾಣಿಕೆ ವ್ಯತ್ಯಾಸ ಎಷ್ಟೇ ಹೇಗೇ ಇದ್ದರೂ ಇಲ್ಲಿಂದ ದೂರ ನಿಂತು ನೋಡುವಾಗ ಈ ಭೂಭಾಗವನ್ನು ಈಗಾಗಲೇ ಹೇಳಿದ ಯಾವ ಹೆಸರಿನಿಂದ ಕರೆದರೂ ಗುರುತು ಹತ್ತುತ್ತದೆ . ಅಥವಾ ಸೀಮೆ ಗಡಿ ಪ್ರದೇಶಗಳ ಹಂಗಿಲ್ಲದೇ, ಈ ದೇಶದ ಯಾವ ಮೂಲೆಯಲ್ಲಿ ವಾಸಿಸುವವರನ್ನೂ “ಲಂಡನ್” ನಲ್ಲಿ ಇರುವವರು ಎಂದು ಭಾರತದಲ್ಲಿರುವ ಸಂಬಂಧಿಗಳು ಸ್ನೇಹಿತರು ಹೇಳುವಂತೆ ಉಲ್ಲೇಖಿಸಿದರೂ ನಡೆಯುತ್ತದೆ.

ಇವರಲ್ಲಿ ಕೆಲವರು ಬಯಲಿನಲ್ಲೋ ಅಥವಾ ರಸ್ತೆಯ ಅಂಡರ್ ಪಾಸ್ ಗಳ ಅಡಿಯಲ್ಲೋ ಮುಸುಕು ಹೊದ್ದು ರಾತ್ರಿ ಕಳೆಯುವರು. ಇವರು ಬ್ರಿಟನ್ನಿನ ಪ್ರಮುಖ ಪಟ್ಟಣಗಳ ಪ್ರಮುಖ ಬೀದಿಗಳಲ್ಲಿ ಬೇಡಿಯೋ ಕಾಡಿಯೋ ಅಥವಾ ತಮಗೆ ತಿಳಿದ ಸಂಗೀತ ವಾದ್ಯ ಕಲೆ ಪ್ರದರ್ಶಿಸಿಯೂ ದಿನದ ಖರ್ಚನ್ನು ಸಂಪಾದಿಸುವವರಿರಬಹುದು. ಮತ್ತೆ ಕೆಲವರು ಮಾದಕ ದ್ರವ್ಯದ ತೀವ್ರ ವ್ಯಸನದಿದಲೂ ಬಳಲುತ್ತಿರಬಹುದು.

ಮಾರ್ಚ್ ಕೊನೆಯ ವಾರದಲ್ಲಿ ಕೊರೊನ ಇಲ್ಲೆಲ್ಲಾ ಹಬ್ಬಿ ಜೀವ ಜೀವನಗಳನ್ನು ಬದಲಿಸುವ ಕಾಲದಲ್ಲಿ ನಾವು ಹೇಗೆ ಬದುಕಬೇಕು ಎನ್ನುವುದರ ಮೇಲೆ ಬಂಧ ನಿರ್ಬಂಧ ಹೇರಲ್ಪಟ್ಟ ಸಂದರ್ಭದಲ್ಲಿ ಇಲ್ಲಿನ ಸರಕಾರ ಇವರ ಬಗೆಗೆಗೂ ಒಂದು ನಿರ್ಣಯವನ್ನು ತೆಗೆದುಕೊಂಡಿತು. ಅಷ್ಟೇನೂ ಪ್ರಚಾರ ಪಡೆಯದ ಅಂತಾರಾಷ್ಟ್ರೀಯ ಸುದ್ದಿವಲಯಗಳಲ್ಲಿ ವಿಶೇಷ ಗಮನಿಸುವಿಕೆ ಇರದ ಆದರೆ ಇಲ್ಲಿನ ಈ ಇವರ ಬದುಕಿಗೆ ಮಾತ್ರ ಅತ್ಯಂತ ಮಹತ್ವದ್ದೆನಿಸುವ ನಿರ್ಧಾರ ಅದಾಗಿತ್ತು. ಮಾರ್ಚ್ 27ರಂದು ಯು.ಕೆ ಸರ್ಕಾರ ಈ ದೇಶ ಬೀದಿಗಳಲ್ಲಿ ಮಲಗುವವರನ್ನು ಒಂದು ವಾರದೊಳಗೆ ತುರ್ತಾಗಿ ಸುರಕ್ಷಿತ ವಾಸ್ತವ್ಯಕ್ಕೆ ವರ್ಗಾಯಿಸಬೇಕು ಎಂದು ಎಲ್ಲ ನಗರಸಭೆಗಳಿಗೂ (ಕೌನ್ಸಿಲ್) ಆದೇಶಿಸಿತು. ಇತರರಿಗಿಂತ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವ ಮತ್ತು ಒಂದು ವೇಳೆ ಸೋಂಕಿತರಾದಲ್ಲಿ ಏಕಾಂತದಲ್ಲಿ ವಾಸಿಸುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಯಾವ ಸಾಧ್ಯತೆ ಅನುಕೂಲಗಳೂ ಇರದ ಬಹುತೇಕ ಬೀದಿವಾಸಿಗಳನ್ನು ಒಂದು ವಾರದೊಳಗೆ ಸುರಕ್ಷಿತ ವಸತಿಗೆ ಕೊಂಡೊಯ್ಯುವ ಪ್ರಯತ್ನ ನಡೆಯಿತು. ದಶಕಗಳಿಂದ ಈ ದೇಶದಲ್ಲಿರುವ ವಸತಿಹೀನರ ಸಮಸ್ಯೆಗೆಂತಲೇ ಹುಟ್ಟಿಕೊಂಡ ಸರಕಾರೇತರ ಪರೋಪಕಾರಿ ಸಂಸ್ಥೆಗಳ ಮುತುವರ್ಜಿಯಲ್ಲಿ ಬೀದಿಬೀದಿಗಳನ್ನು ಸುತ್ತಿ ಅಲ್ಲೇ ವಾಸ್ತವ್ಯ ಹೂಡಿರುವ ಹೆಚ್ಚಿನವರನ್ನು ಕರೆದುಕೊಂಡು ಬಂದು ಲಾಕ್ ಡೌನ್ ಸಮಯದಲ್ಲಿ ಗ್ರಾಹಕರು ಇರದ “ಹಾಲಿಡೇ ಇನ್” ನಂತಹ ಐಷಾರಾಮಿ ಹೊಟೇಲುಗಳಲ್ಲಿ, ಖಾಲಿ ಇರುವ ಸರಕಾರೀ ಅಧೀನ ಅಪಾರ್ಟ್ಮೆಂಟ್ ಗಳಲ್ಲಿ ಆಶ್ರಯ ಒದಗಿಸಲಾಯಿತು.

ಹೋಟೆಲೊಂದರಲ್ಲಿ ವಾಸ್ತವ್ಯ ಪಡೆದ ಬೀದಿವಾಸಿಯೊಬ್ಬಾಕೆಯನ್ನು ಸುದ್ದಿ ವಾಹಿನಿಯೊಂದು ಮೊನ್ನೆ ಭೇಟಿ ಮಾಡಿ ತಮ್ಮ ಹಳೆಯ ಬದುಕಿಗೂ ಹೊಸವಾಸ್ತವ್ಯಕ್ಕೂ ಏನು ಬದಲಾವಣೆ ಆಗಿದೆ ಎಂದು ಕೇಳಿದಾಗ, “ಈಗ ಮಲಗಲು ಮೆತ್ತನೆಯ ಹಾಸಿಗೆ ಇದೆ” ಎಂದು ನಕ್ಕಿದ್ದಳು. ಹಾಸಿಗೆಯ ಮೇಲೆ ಮಲಗುವುದೇ, ನಿದ್ದೆಯೊಡೆದು ಕಣ್ಬಿಟ್ಟಾಗ ಕಣ್ಮುಂದೆ ಆಕಾಶ ಕಾಣಿಸದಿರುವುದೇ ಒಂದು ಸರಳ ಸಾಮಾನ್ಯ ಕನಸಾಗಿರುವವರೊಬ್ಬರ ನಗು ಅದಾಗಿತ್ತು.

ಆರೂವರೆ ಕೋಟಿ ಜನರು ವಾಸಿಸುವ, ಪೂರ್ಣಕಾಲಿಕ ದುಡಿಮೆಗಾರರ ವಾರ್ಷಿಕ ಸರಾಸರಿ ಆದಾಯ ಇಪ್ಪತ್ತೈದು ಮೂವತ್ತು ಲಕ್ಷ ರೂಪಾಯಿ ಇರುವ, ಜಗತ್ತಿನ ಹತ್ತು ಅತಿದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾದ ಈ ದೇಶದಲ್ಲಿ, ಸುಮಾರು ಐದು ಸಾವಿರ ಜನರು ವಸತಿಹೀನರಾಗಿ ಬೀದಿಬದಿಯ, ಪಾರ್ಕುಗಳ ತೆರೆದ ಆಕಾಶದಡಿಯಲ್ಲಿ ಮಲಗುತ್ತಾರೆ ಎಂದು ಇತ್ತೀಚಿನ ಸರಕಾರಿ ವರದಿಗಳು ಹೇಳುತ್ತವೆ. ಯು.ಕೆ. ಯಂತಹ ದೇಶಕ್ಕೆ ಇವರ ಈ ಸಂಖ್ಯೆ ಬಹಳವೋ ಕಡಿಮೆಯೋ ಅನಿವಾರ್ಯವೋ ಸಹಜವೋ ಅಥವಾ ಇನ್ನೇನೋ ಎಂದು ಸಾಮಾಜಿಕ ರಾಜಕೀಯ ಶಾಸ್ತ್ರಗಳನ್ನು ತಿಳಿದ ಇಲ್ಲಿನ ಪಂಡಿತರು ತರ್ಕಿಸಿಯಾರು, ಹಿನ್ನೆಲೆಯ ಕಾರಣಗಳನ್ನು ಊಹಿಸಿಯಾರು. “ವಸತಿಹೀನ” ಎನ್ನುವ ಈ ದೇಶದ ಮಟ್ಟಿಗಿನ ಬಹುಚರ್ಚಿತ ವ್ಯಾಖ್ಯಾನವಾದಲ್ಲಿ, ವಸತಿಹೀನರೆಲ್ಲ ಬೀದಿವಾಸಿಗಳಲ್ಲ, ಆದರೆ ಬೀದಿವಾಸಿಗಳೆಲ್ಲ ವಸತಿಹೀನರು ಹೌದು.

ವರ್ಷಾನುಗಟ್ಟಲೆಯಿಂದ ಈ ದೇಶದ ಎಲ್ಲ ರಾಜಕೀಯ ಪಕ್ಷಗಳು ಎಲ್ಲ ಸರಕಾರಗಳು ಚರ್ಚಿಸುತ್ತಲೇ ವಾದಿಸುತ್ತಲೇ ಬಂದ ಮುಖ್ಯ ಸವಾಲು ಇದು. ಕಡು ಬಡವರು, ಸರಿಯಾದ ಕೆಲಸ ಸಿಗದವರು, ದುಡಿಮೆ ನಿಂತುಹೋದವರು, ಕೌಟುಂಬಿಕ ವ್ಯಾಜ್ಯದಲ್ಲಿಯೋ ಹಿಂಸೆಯಿಂದಲೋ ಇದ್ದ ಮನೆಯಿಂದ ಹೊರಬಿದ್ದವರು ಅಥವಾ ಯಾವುದೊ ಮಾನಸಿಕ ಕಾಯಿಲೆ ವ್ಯಸನದ ಪರಿಣಾಮ ಮನೆ ಇಲ್ಲವಾದವರು ಹೀಗೆ ಇಲ್ಲಿನ ವಸತಿಹೀನತೆಯ ಹಿಂದಿನ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗಬಹುದು.

ಈ ವಸತಿಹೀನರು ಅಥವಾ ವಸತಿರಹಿತರಾರೂ ಮನೆಯೊಂದನ್ನು ಖರೀದಿಗೋ ಅಥವಾ ಬಾಡಿಗೆಗೋ ಪಡೆಯುವ ಸ್ವಸಾಮರ್ಥ್ಯ ಇಲ್ಲದವರು. ಇವರನ್ನು ಈ ದೇಶ “ಹೋಂ ಲೆಸ್” ಎಂದು ಕರೆಯುತ್ತದೆ. ಮತ್ತೆ ಇಲ್ಲಿನ ನಗರಸಭೆಗಳ ಕಚೇರಿಗಳಲ್ಲಿ ಇಂತಹ ವಸತಿಹೀನರ ಮತ್ತು ಆ ಸಮುದಾಯದೊಳಗಿನ ಚಿಕ್ಕ ಸಮೂಹವಾದ ಬೀದಿವಾಸಿಗಳ ದಾಖಲಾತಿಯ ಮಹಾಕಡತಗಳೇ ಇವೆ. ಒಂದು ಅಂದಾಜಿನಂತೆ ಇಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ವಸತಿರಹಿತರಿದ್ದಾರೆ. ಅಂದರೆ ಈ ದೇಶದ ಇನ್ನೂರು ಜನರಲ್ಲಿ ಒಬ್ಬರು ವಸತಿರಹಿತರು. ವಸತಿರಹಿತರು ಎನ್ನುವುದು ವಿಶಾಲ ಅರ್ಥದಲ್ಲಿ ಬಳಕೆಯಾಗುವ ಪದ ಹಾಗು ಅದರ ಅರ್ಥಪರಿಧಿಯಲ್ಲಿ ಬರುವವರು ಸರಕಾರ ಒದಗಿಸಿದ ಯಾವುದೊ ಬಗೆಯ ಅಲ್ಪಕಾಲಿಕ ವಾಸ್ತವ್ಯದಲ್ಲಿ ಇರುವವರೂ ಆಗಿರಬಹುದು. ಆದರೆ “ರಫ್ ಸ್ಲೀಪರ್ಸ್” ಅಥವಾ ಬೀದಿವಾಸಿಗಳು ಎಂದರೆ ಅವರು ಖಡಾಖಂಡಿತವಾಗಿ ನಾವು ನೀವು ತಿಳಿದ ಯಾವ ಮಾದರಿಯ ಮನೆಗಳಲ್ಲಿಯೂ ವಾಸಿಸದವರು.

ವಸತಿಹೀನ ಅಥವಾ “ಹೋಂ ಲೆಸ್” ಆದವರಿಗೆ ನಗರ ಸಭೆಗಳ ಮೂಲಕ ಭತ್ಯೆ ಮತ್ತು ತಾತ್ಕಾಲಿಕ ಮನೆ ನೀಡುವ ವ್ಯವಸ್ಥೆ ಇದ್ದರೂ ಅದು ಎಲ್ಲ ವಸತಿಹೀನರನ್ನು ಒಳಗೊಳ್ಳಲು ತಲುಪಲು ಸಾಧ್ಯ ಇಲ್ಲ, ಎಲ್ಲ ವಸತಿರಹಿತರಿಗೂ ಸರಕಾರೀ ಸೌಲಭ್ಯಗಳು ದಕ್ಕುವುದೂ ಇಲ್ಲ. ಇನ್ನು ಸರಕಾರಿ ಬೆಂಬಲ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳುವವರು, ಅಪಾತ್ರರಾದವರೂ ಅಂತಹ ಯೋಜನೆಯ ಲಾಭ ಪಡೆದುಕೊಳ್ಳುವ ಕೆಲವರು ಎಲ್ಲ ಕಡೆಗಳಂತೆ ಇಲ್ಲೂ ಇದ್ದಾರೆ. ಹಾಗಾಗಿಯೇ ಸರಕಾರದ ಯೋಜನೆಗಳ ಫಲಾನುಭವಿ ಹಗರಣಗಳನ್ನು ಪತ್ತೆ ಹಚ್ಚುವ ಪಡೆಗಳೂ ಇಲ್ಲಿವೆ.

ಮತ್ತೆ ವಸತಿರಹಿತರ ಒಳಿತು ಉಳಿವಿಗಾಗಿ ದುಡಿಯುವ ಕೆಲವು ಸರಕಾರೇತರ ಸಂಸ್ಥೆಗಳೂ ಇವೆ. ಈ ದೇಶದ ಪ್ರಾಂತ್ಯಗಳಲ್ಲಿ ತೀರ ಪರಿಚಯಸ್ಥ “ಹೋಂ ಲೆಸ್” ಹಾಗು “ರಫ್ ಸ್ಲೀಪರ್ಸ್” ಪದಗಳ ಮತ್ತೆ ಪದಗಳ ಹಿಂದಿರುವ ಸಮುದಾಯಗಳ ಬಗೆಗಿನ ಗತಚರಿತ್ರೆಯ ಕುರಿತು ಇಷ್ಟು ಸಾಕೇನೋ.

ಇನ್ನು ಈ ವರ್ತಮಾನ ಕಾಲದಲ್ಲಿ, “ಹೋಂ ಲೆಸ್” ವರ್ಗದಲ್ಲಿಯೇ ಅತ್ಯಂತ ದೌರ್ಭಾಗ್ಯರು ಎಂದು ಕರೆಯಲ್ಪಡುವ “ರಫ್ ಸ್ಲೀಪರ್ಸ್” ಗಳಲ್ಲಿ ಹೆಚ್ಚಿನವರು ಕಳೆದೆರಡು ತಿಂಗಳುಗಳಿಂದ ಗಟ್ಟಿ ಸೂರಿನಡಿಯ ಮೆತ್ತನೆಯ ಪಲ್ಲಂಗದಲ್ಲಿ ಮಲಗುವ ಸೌಭಾಗ್ಯ ಪಡೆದಿರುವುದು ಸುತ್ತಮುತ್ತಲಿನ ನೂರಾರು ನಿರಾಶಾದಾಯಕ ಸಂಗತಿಗಳ ನಡುವಿನ ಒಂದು ಆಶಾದಾಯಕ ವೃತ್ತಾಂತ. ದಶಕಗಳಿಂದ ವಸತಿರಹಿತರ ಬೀದಿವಾಸಿಗಳ ಹಿತಾಸಕ್ತಿಯಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಇವರಿಗೊಂದು ವಾಸ್ತವ್ಯ ದೊರಕಿಸುವ ಸುದೀರ್ಘ ಹೋರಾಟಕ್ಕೆ ಸತತ ಪ್ರಯತ್ನಕ್ಕೆ ಕೊರೊನ ನಿರ್ಬಂಧದ ನೆಪದಲ್ಲಿಯಾದರೂ ತಾವು ಬಯಸಿದ ಫಲಿತಾಂಶ ಸಿಕ್ಕಿದ್ದು ಉತ್ಸಾಹ ನೀಡಿದೆ. ಜೊತೆಗೆ ಬೀದಿವಾಸಿಗಳಿಗೆ ವಸತಿ ಕಲ್ಪಿಸುವಲ್ಲಿ ಸರಕಾರ ಒದಗಿಸಿದ ಹಣ ಈಗ ಮುಗಿಯುವ ಹಂತಕ್ಕೆ ಬಂದಿರುವಾಗ ಈ ಯೋಜನೆಗೆ ಇನ್ನೂ ಹಣ ದೊರಕಿಸುವ ಆಶ್ವಾಸನೆ ಸರಕಾರದಿಂದ ಸಿಕ್ಕಿದ್ದರೂ ಮುಂದೆ ಕೋವಿಡ್ ಪರದೆ ಸಂಪೂರ್ಣ ಸರಿದು ಎಲ್ಲವೂ ಮಾಮೂಲಿನಂತೆ ಆಗುವಾಗ “ರಫ್ ಸ್ಲೀಪರ್ಸ್” ಗಳು ಎಂದಿನಂತೆ ಆಡಳಿತದ ಅಸಡ್ಡೆ ಮತ್ತೆ ಇಂತಹ ಪರಿಸ್ಥಿಯನ್ನು ಹುಟ್ಟಿಸಲು ಕಾರಣವಾಗುವ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ಮರುಸ್ಥಾಪನೆಯಾಗಿ ಇವರೆಲ್ಲ ಮತ್ತೆ ಬೀದಿ ಬದಿಗೆ ಮರಳಬೇಕಾಗಬಹುದೇ ಎನ್ನುವ ಕಳವಳವನ್ನೂ ಹುಟ್ಟಿಸಿದೆ. ಹೊಟೇಲುಗಳಲ್ಲಿ ಖಾಯಂ ಆಗಿ ತಂಗುವ ಅಗತ್ಯ ಬೇಡಿಕೆ ಇಲ್ಲದಿದ್ದರೂ ಮನುಷ್ಯರು ವಾಸಿಸಲು ಯೋಗ್ಯವಾದ ಸಾಧಾರಣ ವ್ಯವಸ್ಥೆಯಾದರೂ ಶಾಶ್ವತವಾಗಿ ಎಲ್ಲ ಬೀದಿವಾಸಿಗಳಿಗೆ ಲಭ್ಯ ಆಗಲಿ ಎಂದು ಈ ಸಂಕಟದ ನಿರಾಸೆಯ ವಾತಾವರಣದಲ್ಲಿ ಬಯಸಿದರೆ ಅದು ಅತಿಯಾದ ಆಸೆ ಮಿತಿಮೀರಿದ ಕೋರಿಕೆ ಎನಿಸಲಿಕ್ಕಿಲ್ಲ.

ಕೊರೊನ ಕಾಲದಲ್ಲಿ ಇತರ ದೇಶಗಳ ಎದುರು ಮುಜುಗರ ಪಡುವಂತಹ ತನ್ನದೇ ದೇಶದ ಜನರಿಗೆ ಉತ್ತರಿಸಲು ಹೆಣಗಾಡುವಂತಹ ಮುಂಬರುವ ವರುಷಗಳಲ್ಲೂ ಕಾಡುತ್ತಲೇ ಇರುವಂತಹ ಹಲವು ವಿಷಯಗಳು ಜಟಿಲ ಪ್ರಶ್ನೆಗಳು ಯು.ಕೆಯ ಎದುರಿಗೆ ಇದ್ದರೂ, ಆತ್ಮವಿಶ್ವಾಸದಲ್ಲಿ ಧ್ವನಿ ಏರಿಸಿ ಹೇಳಬಹುದಾದ ಒಂದು ನಿರ್ವಹಣೆ ನಿಭಾಯಿಸುವಿಕೆ ಸದ್ಯಕ್ಕೆ ಬೀದಿವಾಸಿಗಳ ಬಗೆಗಿನದು. ಸದ್ಯದ ಪರಿಸ್ಥಿತಿಯಲ್ಲಿ ನಿತ್ಯವೂ ಬದುಕುಗಳನ್ನು ನಾಶ ಮಾಡುತ್ತಿರುವ ಅಸಂಖ್ಯ ಕತೆಗಳು ನಮ್ಮ ಆಸುಪಾಸಲ್ಲೆ ಸುಳಿದಾಡುತ್ತಿದ್ದರೂ ಇಲ್ಲಿನ ಬೀದಿವಾಸಿಗಳ ಮಟ್ಟಿಗೆ ಈ ಕಾಲ ತುಸು ಸಾಂತ್ವನ ಕಿರು ಸಮಾಧಾನ ತಂದಿರಬಹುದು.

ಕೋವಿಡ್ ಬಿಗಿಹಿಡಿತದ ಕಾಲ ಎಂದು ಮುಗಿಯುವುದೋ ಎಂದು ನಾವು ಕಾಯುವಾಗ ಇಲ್ಲಿನ ಇವರು ಮೆತ್ತನೆಯ ಹಾಸಿಗೆಯಲ್ಲಿ ಸುಖನಿದ್ದೆಗೆ ಜಾರುವ ಈ ಇರುಳುಗಳು ಎಲ್ಲಿ ಕಳೆದುಹೋಗುತ್ತವೋ ಎನ್ನುವ ಆತಂಕದಲ್ಲಿರಬಹುದು.