ಇಳೀ ಬಿದ್ದ ಕಿವಿಗಳ
ಇವಳು ನನ್ನೆಲ್ಲ ಕನ್ನೆಯರ
ಮುದ್ದು…ಇವಳ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಹೀಗೊಂದು ಪದ್ಯ ಬರೆದಿದ್ದೆ. ಎಲ್ಲೂ ಅಚ್ಚಾಗಲಿಲ್ಲ. ಬಹುಶಃ ಎಲ್ಲಿಗೂ ಕಳಿಸಲೂ ಇಲ್ಲವೇನೋ… ಓದಿದವರೆಲ್ಲ ಇವಳ ‘ವಸ್ತು’ವನ್ನು ಬಿಟ್ಟು ಇನ್ನೆಲ್ಲವನ್ನೂ ಕೆದಕಿದ್ದರು. ಯಾರದೇ ಕುತೂಹಲಕ್ಕೆ ನೋಡಿ- ವಿಪರೀತ ಬಾಯಿ. ಸರೀ… ಪದ್ಯ ಹೇಗಿದೆ? -ಅಂತ ಕೇಳಿದರೆ ದೇಶಾವರಿಗೆ ಚೆನ್ನಾಗಿದೆ ಅಂದು ಸುತ್ತದೆ, ಬಳಸದೆ ನೇರ- ನಿನ್ನೆಲ್ಲ ಕನ್ನೆಯರು ಅಂದರೆ…? ಯಾರು? ಎಷ್ಟು? -ಅಂತ ಪ್ರಶ್ನಾಂತರಕ್ಕೂ, ವಿಷಯಾಂತರಕ್ಕೂ ತೊಡಗುತ್ತಿದ್ದರು. ನನ್ನನ್ನು ಓದಿರುವ ಒಳವಲಯದ ಮಂದಿ ನನ್ನ ಕತೆಗಳಲ್ಲೂ ಹೀಗೆ ಸಲ್ಲದ್ದು ಹೆಕ್ಕುವುದೇ ಹೆಚ್ಚು. ಆ ಮಾತು ಬೇರೆ… ಸದರಿ ವಿಷಯ ಈ ಪದ್ಯದಲ್ಲಿರುವ ಇವಳನ್ನು ಕುರಿತದ್ದು. ಕರೀ ಬಣ್ಣದ ಇಳೀ ಬಿದ್ದ ಕಿವಿಗಳ ಇವಳನ್ನಷ್ಟೇ ಕುರಿತದ್ದು.ಇವಳು ಮಹಾರಾಣಿ. ಹಾಗಂತಲೇ ಇವಳ ಹೆಸರು. ನಾನೇ ಇಟ್ಟಿದ್ದು. ಇವಳ ಜತೆಗೊಬ್ಬನಿದ್ದಾನೆ. ಕೆಂಪು ನಾರಾಯಣ. ಇಬ್ಬರೂ ಮನೆಯಲ್ಲಿ ನನ್ನ ಹಿಂದುಮುಂದೇ ಸುತ್ತಿಕೊಂಡಿರುತ್ತಾರೆ. ಸಂಜೆ ಎಂಟೋ, ಒಂಭತ್ತೋ, ಹತ್ತೋ… ಮನೆಯ ತಿರುವಿಗೆ ನನ್ನ ಕಾರು ಹೊಕ್ಕು ಸದ್ದಾಗಿದ್ದೇ ಕಿವಿ ನಿಮಿರಿ ಇಬ್ಬರೂ ನನಗಾಗಿ ಆತುರಿಸುತ್ತಾರೆ. ಹಾತೊರೆಯುತ್ತಾರೆ. ಬರಗೊಳ್ಳಲು ಚಡಪಡಿಸಿ ದನಿಯುತ್ತಾರೆ. ಗೇಟು ದಾಟುತ್ತಲೇ ಮೈ ಮೇಲಕ್ಕೆಗರಿ ಪೈಪೋಟಿಯಲ್ಲಿ ಮುದ್ದಿಗೆ ತೊಡಗುತ್ತಾರೆ. ಇವಳ ತಲೆದಡವಿದರೆ ಇವನು, ಇವನನ್ನು ನೇವರಿಸಿದೆನೆಂದು ಇವಳು… ಒಂದೇ ಸಮ ಜಿಗಿಜಿಗಿದು ಮುಂದಾಗುತ್ತಾರೆ. ಮಗ್ಗುಲಿಗೆ, ಮಡಿಲಿಗೆ ಆತುಕೊಳ್ಳುತ್ತಾರೆ. ಜೋತು ಬೀಳುತ್ತಾರೆ… ರಾಣೀ, ಸುಮ್ಮನೆ ಇರೂ… ಕೆಂಪು ನಿಂಗೇಟು ಬೀಳುತ್ತೆ. ಇರುಮ್ಮಾ ಒಂದು ನಿಮಿಷಾ… -ಇಂತಹ ಮಾತುಗಳಿಂದಲೇ ನನ್ನ ಮನೆಯ ಪ್ರವೇಶವಾಗುತ್ತದೆ. ಲ್ಯಾಪ್‍ಟಾಪನ್ನು ವೆರಾಂಡದ ಮೇಜಿನ ಬದಿಗಾನಿಸಿದ್ದೇ ಇಬ್ಬರೂ ಅದರ ಕಪ್ಪು ಚೀಲದ ನುಣುಪಿಗೆ ಮೈಯುಜ್ಜುವ ಹಾಗೆ ನಾ ತಾ ಮುಂದೆಂದು ಮುಗಿಬೀಳುತ್ತಾರೆ. ಹೊರಳಾಡುತ್ತಾರೆ. ‘ಅಬ್ಬಬಬಬಾ.. ಅದೇನು ಸಂಭ್ರಮಾನೋ ಏನೋ… ಒಂದು ದಿನಾನಾರ ನಮ್ಮನ್ನು ಹೀಗೆ ಮಾತಾಡುಸೋದಲ್ಲವಾ?’ ಅಂತ ಕನಲಿಸಿಕೊಳ್ಳದೆ ನನಗೆ ರಾತ್ರಿಯ ಊಟ ಒಗ್ಗುವುದಿಲ್ಲ. ‘ಇಷ್ಟಕ್ಕೆ ಯಾಕೆ ಮುನಿಸಿಕೊಳ್ಳೋದೂ…? ಇವೆರಡರ ಮೇಲೆ ಛೋಡೀ ಮಾಡುತೀಯಾ?’ -ಅಂತ ‘ಇವಳನ್ನು’ ಆಗಾಗ ರಮಿಸಬೇಕಾಗುತ್ತದೆ.

ರಾಣಿಯನ್ನು ಮನೆಗೆ ಕರೆತಂದಾಗ ಅವಳಿಗೆ ಮೂರು ವಾರದ ವಯಸ್ಸು. ಆಗಷ್ಟೇ ಅವಳಮ್ಮ ಜೇನ್ ಹಾಲು ಬಿಡಿಸಿಕೊಂಡಿದ್ದಳಂತೆ. ಮಿಸ್ಟರ್ ಕುಲಕರ್ಣಿ ಹಿಂದಿನ ದಿನ ಸಂಜೆಯಷ್ಟೇ ಫೋನು ಮಾಡಿ ಪಪ್ಪಿಯ ಬಗ್ಗೆ ಹೇಳಿದ್ದರು. ಅವತ್ತು ಶುಕ್ರವಾರ. ಸಂಜೆಯ ಮೀಟಿಂಗು ರದ್ದು ಮಾಡಿ ತಿಪ್ಪಸಂದ್ರದಲ್ಲಿರುವ ಅವರ ಮನೆಗೆ ಹೋಗಿದ್ದೆ. ಬಾಗಿಲು ರಿಂಗಿಸಿದ್ದೇ ಎದುರಾಗಿದ್ದು ಜೇನ್. ಮತ್ತು ಅವಳ ಬಗುಲು ಜೋತುಕೊಂಡಿರುವ ಚಿಳ್ಳೆಪಿಳ್ಳೆಗಳು. ಕುಲಕರ್ಣಿ- ‘ನೀವೇ ಮೊದಲನೆಯವರು. ಇನ್ನೂ ಯಾರಿಗೂ ಹೇಳಿಲ್ಲ…’ ಎನ್ನುತ್ತ ನಕ್ಕರು. ಜೇನ್‍ಳನ್ನು ಅನಾಮತ್ತು ರೂಮಿಗೆ ಕರೆದೊಯ್ದು ಕೂಡಿಟ್ಟು, ‘ಇಷ್ಟರಲ್ಲಿ ಯಾವುದು ನಿಮ್ಮ ಹತ್ತಿರ ಬರುತ್ತೋ ಅದು ನಿಮ್ಮದು’ ಅಂದರು. ಒಂದರ ಹಿಂದೆ ಇನ್ನೊಂದರ ಹಾಗೆ ಮನೆ ಭರ್ತಿ ಹರಿಯುತ್ತಿದ್ದ ಜೇನ್‍ಳ ಮಕ್ಕಳಲ್ಲಿ ಮೆಲ್ಲಗೆ ತೆವಳುತ್ತ ತಪ್ಪು ಹೆಜ್ಜೆಗಳಲ್ಲಿ ಮೊದಲು ನನ್ನ ಪ್ಯಾಂಟು ಕಚ್ಚಿಕೊಂಡಿದ್ದು ಇದು. ಬಗ್ಗಿ ಕೈಗೆತ್ತುಕೊಂಡೆ. ಬೊಗಸೆ ತುಂಬುವಷ್ಟೇ ಇದ್ದು ನನ್ನತ್ತ ಪಿಳಿಪಿಳಿ ಕಣ್ಣುಬಿಟ್ಟಿತ್ತು. ಮೆಲ್ಲಗೆ ಕೆನ್ನೆಯ ಬಳಿ ತಂದುಕೊಂಡು ಸ್ಪರ್ಶಿಸಿದೆ. ರೇಶಿಮೆಯಂತೆ ಮೈ ನುಣುಪು. ‘ಈಕಿ ಭಾರೀ ಚೂಟೀ ಇದಾಳರೀ ಸರ’ ಅಂತ ಕೇಳುವ ಮೊದಲೇ ಕುಲಕರ್ಣಿ ಹೇಳಿದ್ದರು. ರಾತ್ರಿ ಮನೆಗೆ ತಂದಾಗ ಅಮ್ಮ ಒಂದೇ ಸಮ ಎಗರಾಡಿದ್ದಳು. ಆಂಟಿ- ಅಮ್ಮನ ತಂಗಿ ನನ್ನ ಪಾಲಿಗಿದ್ದರು. ‘ನೀನು ಸುಮ್ಮನಿರೇ… ಒಳ್ಳೇ ಮಹಾಲಕ್ಷ್ಮಿ ಥರಾ ಮನೆಗೆ ಬಂದಿದೆ. ಅದೂ ಶುಕ್ರವಾರ…’ ಅಂತ ಅವರು ಮಡಿಲು ತುಂಬಿಕೊಂಡಿದ್ದರು.

ಇವಳು ಮನೆ ತುಂಬ ಪುಟುಪುಟನೆ ಓಡಾಡುವುದನ್ನು, ನಾನು ನಡೆದಲ್ಲೆಲ್ಲ ಹಿಂಬಾಲಿಸಿಕೊಂಡು ಬರುವುದನ್ನು ನೋಡಿ ಅಮ್ಮ ಖುಷಿಸಿ ಕ್ರಮೇಣ ಹೊಂದಿಕೊಂಡುಬಿಟ್ಟಳು. ರೇಬಿಸ್‍ಗೆಂದು, ವ್ಯಾಕ್ಸಿನ್‍ಗೆಂದು ವೆಟ್ ಬಳಿ ಒಯ್ದಾಗ ಇವಳ ಹೆಸರು ಬರೆಸಬೇಕಿತ್ತು. ಆ ಹೊತ್ತಿಗೆ ಹೊಳೆದಿದ್ದು ಈ ಹೆಸರು. ವೆಟ್ ‘ಮಹಾರಾಣಿ’ ಅಂತ ನಾನು ಬರೆದಿದ್ದು ನೋಡಿ ನಕ್ಕಿದ್ದರು. ಇದಾದ ಒಂದು ವಾರಕ್ಕೆ ಗೆಳೆಯ ನಿಧಿ ಇವಳನ್ನು ನೋಡಿ ತನಗೂ ಇವಳಂಥದೇ ಗಂಡು ಬೇಕೆಂದು ಕೇಳಿದಾಗ ಕುಲಕರ್ಣಿಗೆ ಹೇಳಿ ಕೊಡಿಸಿದೆ. ವಾರಕ್ಕೆಲ್ಲ ಅವನದನ್ನು ವಾಪಸು ತಂದು ತನ್ನಿಂದಾಗುವುದಿಲ್ಲವೆಂದು ನನ್ನ ಕೈಗಿತ್ತ. ಇವುಗಳ ಜತೆ ಮನೆಯ ಮಕ್ಕಳನ್ನು ನೋಡಿಕೊಂಡಷ್ಟೇ ಮುದ್ದು, ಮುತುವರ್ಜಿ ವಹಿಸಬೇಕು. ಅದರಲ್ಲೂ ಈ ಕಾಕರ್ ಸ್ಪೇನಿಯಲ್ ತಳಿಗಳು ಇದ್ದಿದ್ದೂ ಹೆಚ್ಚು ಮುದ್ದು ಬಯಸುತ್ತವೆ. ಮರಿಯಿದ್ದಾಗಲಂತೂ ಬದಿಗೆ ಆತುಕೊಂಡೇ ಮಲಗುತ್ತವೆ. ಕೊಂಚ ಮಿಸುಕಿದರೂ ಕೊಂಯ್ಞಂತ ಮುಲುಗುಟ್ಟಿ ಹತ್ತಿರಾಗುತ್ತವೆ. ಉಸಾಬರಿಯಿಲ್ಲದೆ ಇವುಗಳನ್ನು ದತ್ತು ಕೊಳ್ಳುವುದು ತಪ್ಪೇ ಸರಿ. ಚಂದಕ್ಕೆ ತಂದಿಟ್ಟುಕೊಂಡರೆ ಲಾಲನೆಪಾಲನೆ ಚಂದವಿರುವುದಿಲ್ಲ. ಈ ನಿಧಿ ಮಾಡಿದ್ದೂ ಇದನ್ನೇ… ಅವನು ತಂದು ಬಿಟ್ಟ ಗಂಡೂ ಈಗ ನನ್ನ ಜತೆಗಿದೆ. ಅವನೇ ಕೆಂಪು ನಾರಾಯಣ. ಇಬ್ಬರಿಗೂ ಮೊನ್ನೆ ಮಾರ್ಚಿಗೆ ನಾಲ್ಕು ತುಂಬಿವೆ.

ಎರಡಕ್ಕೂ ಜೋತು ಬೀಳುವ ಉದ್ದನೆ ಕಿವಿ. ಮೊಂಡು ಬಾಲ. ದೂರದಿಂದ ನೋಡಿದರೆ ಮೇಕೆ ಮರಿ ಅನಿಸೀತು. ಇಳೀ ಬಿದ್ದ ಕಿವಿಗಳಿಂದಲೇ ಇವಕ್ಕೆ ಶೋಭೆ. ತೇಜಸ್ವಿಯವರ ಕರ್ವಾಲೋದಲ್ಲಿ ಬರುವ ‘ಕಿವಿ’ಯೂ ಈ ಇಬ್ಬರ ದಾಯಾದಿಯೇ ಇದ್ದಿರಬೇಕು. ರಾಣಿಗೆ ನೆತ್ತಿಯ ಮೇಲೆ ಕುಚ್ಚಿನಂತಹ ನವಿರಿನ ಜೊಂಪೆಯಿದೆ. ಅದು ಉದ್ದವಾದಾಗ ಕಣ್ಣು ಕವಿಯುತ್ತದೆಂದು ಮೂರು ತಿಂಗಳಿಗೊಮ್ಮೆ ಕತ್ತರಿ ಹಾಕುತ್ತೇನೆ. ಮೂರನೇ ಮನೆಯ ಪುಟಾಣಿ ಚಿತ್ರಾ- ಅಂಕಲ್, ರಾಣಿಗೆ ನನ್ನ ಥರಾನೇ ಬಾಬ್‍ಕಟ್ ಮಾಡುತೀರಿ ಯಾಕೆ? -ಅಂತ ಬೆರಗು ಅರಳಿಸಿದ್ದಿದೆ. ಒಮ್ಮೊಮ್ಮೆ ಈ ಚಿಲ್ಟಾರಿ ತನ್ನ ಮುಡಿಯ ಹೂವನ್ನು ಇವಳಿಗೆ ಸಿಕ್ಕಿಸಿ, ಬೊಟ್ಟಿಟ್ಟು ಅಲಂಕಾರ ಮಾಡುವುದಿದೆ!

ರಾಣಿ ಮತ್ತು ಕೆಂಪು ನಮ್ಮ ರೋಡಿನಲ್ಲೆಲ್ಲ ಬಲು ಫೇಮಸ್ಸು. ನನಗೇ ಐಡೆಂಟಿಟಿಯಾಗಿರುವ ಅಪರ್ಣೆಗೇ ಇವೆರಡೂ ಒಮ್ಮೊಮ್ಮೆ ಐಡೆಂಟಿಟಿಯಾಗುತ್ತವೆ. ಮೂಲೆಯ ಸ್ಕೂಲಿನ ಪಿಳ್ಳೆಗಳೊಮ್ಮೆ ಅವಳನ್ನು ನೋಡಿ- ದಿಸ್ ಕೆಂಪು ರಾಣೀ ಆಂಟೀ ಯೂ ನೋ- ಐ ಸಾ ಹೆರ್ ಆನ್ ಈ-ಟೀವೀ ಯೆಸ್ಟರ್‍ಡೇ… ಅಂತ ಮಾತಾಡಿಕೊಳ್ಳುತ್ತಿದ್ದರಂತೆ. ಇವೆರಡೂ ನನ್ನ ಜತೆ ವಾಕಿಂಗ್ ಬಂದರೆ ಒಂದಷ್ಟು ಮಂದಿ ಕಣ್ಣರಳಸಿ ನೋಡುತ್ತಾರೆ. ಕೆಲವರು- ವಿಚ್ ಬ್ರೀಡ್ ಅಂತ ಇವುಗಳ ಜಾತಿ ವಿಚಾರಿಸಿಕೊಳ್ಳುತ್ತಾರೆ. ಇವಳು ಮಹಾರಾಣಿ ಮತ್ತೆ ಇವನು ಕೆಂಪು ನಾರಾಯಣ.. -ಎಂದು ಪ್ರವರವೊಪ್ಪಿಸಿದರೆ ಗಿಲಗಿಲ ‘ಗಿಗಲು’ತ್ತಾರೆ. ಕೆಂಪು ಅಂತೀರಿ? ಕಪ್ಪಗಿದೇ! -ಅಂತ ಹೇಳುವಾಗ ಅದು ವಿಸ್ಮಯವೋ ತಿದ್ದುಪಡಿಯೋ ಗೊತ್ತಾಗದೆ ನಗುತ್ತೇನೆ.

ರಾಣಿಗೆ ಒಂದೂವರೆ ವಯಸ್ಸು ತುಂಬಿದಾಗ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಮನೆಯಲ್ಲಿ ನಮ್ಮಿಬ್ಬರ ಪೇಚಾಟಕ್ಕೆ ಎಣೆಯೇ ಇಲ್ಲವಾಗಿತ್ತು. ಕಂಪ್ಲೇಂಟ್ ಕೊಟ್ಟಿದ್ದಾಯಿತು. ಟೈಮ್ಸ್‌ನಲ್ಲಿ ಸಚಿತ್ರ ಜಾಹಿರಾತು ಹಾಕಿದ್ದಾಯಿತು. ಬನಶಂಕರಿ, ಜಯನಗರದ ವೆಟ್‍ಗಳಲ್ಲಿ ವಿಚಾರಿಸಿದ್ದಾಯಿತು. ಕಾಂಪ್ಲೆಕ್ಸ್‌ನಲ್ಲಿ, ಫುಡ್‍ವರ್ಲ್ಡ್, ಹಾಪ್‍ಕಾಮ್ಸ್ ಬಳಿ ಪೋಸ್ಟರು ಮೆತ್ತಿದ್ದಾಯಿತು. ಎರಡು ವಾರ ಪೇಪರಿನ ಜತೆ ಪ್ಯಾಂಪ್ಲೆಟ್ ತುರುಕಿದ್ದಾಯಿತು. ಹೆಣ್ಣಾದ್ದರಿಂದ ಕದ್ದವರು ಬ್ರೀಡಿಂಗಿಗೆ ಹಾಕಿ ಬಿಡುತ್ತಾರೆಂದು ಒಂದು ವಾರ ದಿನಾ ರಸಲ್ ಮಾರ್ಕೆಟ್‍ನಲ್ಲಿ ಗಸ್ತು ಸುತ್ತಿದ್ದಾಯಿತು. ಸುಳಿವೇ ಸಿಗಲಿಲ್ಲ. ದಿನಗಳಾದವು. ವಾರಗಳಾದವು. ಹತ್ತಿರ ಹತ್ತಿರ ಎರಡು ತಿಂಗಳೇ ಕಳೆದವು. ಈ ನಡುವೆ ಕೆಲವು ಶ್ವಾನಪ್ರಿಯರು ಆಗಾಗ್ಗೆ ಫೋನಿನಲ್ಲಿ ಸಿಕ್ಕಿತಾ ಅಂತ ಕಾಳಜಿಯಿಂದ ವಿಚಾರಿಸಿಕೊಳ್ಳುವುದಿತ್ತು. ಇಲ್ಲವೆಂದಾಗ ಲೊಚ್ಚನೆ ಕನಿಕರಿಸಿದ್ದೂ ಇತ್ತು. ನಾವಂತೂ ಕಡೆಗೆ ಕೈ ಚೆಲ್ಲಿ ಆಸೆಯನ್ನೇ ಬಿಟ್ಟಿದ್ದೆವು. ಆ ಸಂಜೆ ನನಗೆ ಇದ್ದಕ್ಕಿದ್ದಂತೆ ಮೊಬೈಲಿಗೊಂದು ಕರೆ. ‘ನಿಮ್ಮ ಕಾಕರ್ ಸ್ಪೇನಿಯಲ್ ನನ್ನ ಹತ್ತಿರ ಇದೆ… ಹೇಗೆ ಸಿಕ್ಕಿತು ಅನ್ನೋದೆಲ್ಲ ನಿಮಗೆ ಯಾಕೆ ಸಾರ್? ನಾನೇ ಇಟ್ಟುಕೊಂಡು ಮಾರಿದರೆ ಒಂದಿಪ್ಪತ್ತೋ ಮೂವತ್ತೋ ಗಳಿಸಬಹುದು… ಎಷ್ಟು ಕೊಡುತೀರಿ ಹೇಳಿ?’ ಕರೆದವನನ್ನು ಒಪ್ಪಿಸಿ ಒಂದು ನಿಗದಿತ ಜಾಗಕ್ಕೆ ಬರಲು ಹೇಳಿ, ಕೆಲವು ಯೂನಿಫಾರ್ಮ್ ತೊಡದ ಪೊಲೀಸರನ್ನು ಅಲ್ಲಲ್ಲಿ ನಿಲ್ಲಿಸಿ ಒಂದೂವರೆ ಗಂಟೆ ಕಾದೆವು. ಸಂಜೆಗತ್ತಲು ಕವಿಯತೊಡಗಿ ಆಶಾಭಂಗವಾಯಿತು. ಇನ್ನು ಬರುವುದಿಲ್ಲವೆಂದು ಹತಾಶೆಯಲ್ಲಿರುವಾಗಲೇ ಮತ್ತೊಂದು ಫೋನು. ‘ಒಬ್ಬರೇ ಬಂದಿದ್ದೀರಿ ತಾನೆ?’ ಏಕ್‍ಧಮ್ ಧಮಕಿಯ ಮಾತು. ‘ಸರಿ. ಜಯನಗರ ಕಾಂಪ್ಲೆಕ್ಸ್ ಹತ್ತಿರ ಬನ್ನಿ.’

ಪೊಲೀಸರನ್ನು ಡ್ರೈವರ್ ಜತೆ ಝೆನ್‍ನಲ್ಲಿ ತುರುಕಿಕೊಂಡು ನಾನು ಬೈಕಿನಲ್ಲಿ ಹೋದೆ. ಭೂಪ ನನ್ನ ಬದಿಯೇ ಆಟೋವೊಂದರಲ್ಲಿ ಇವಳನ್ನು ಕೂರಿಸಿಕೊಂಡು ಮುಂದೆ ಹೋದ. ಇವಳು ನನ್ನನ್ನು ನೋಡಿದ್ದೇ ಬೊಗಳಲು ಸುರು ಹಚ್ಚಿದಳು. ಅವನ ಟೈಮಿಂಗ್ ಕೈ ಕೊಟ್ಟಿತ್ತು. ಪೊಲೀಸರು ಆಟೋ ಮುತ್ತಿ ಬಿಡಿಸಿಕೊಟ್ಟರು. ಎಲ್ಲ ಸಿನೆಮಾ ಕತೆಯ ಹಾಗೆ ಜರುಗಿಬಿಟ್ಟಿತ್ತು. ‘ಎಲ್ಲೇ ಹೋಗಿದ್ದೆ? ನಾಚಿಕೆಯಾಗೋಲ್ಲ ನಿಂಗೆ?’ ಅಂತ ಮುದ್ದಿಗೆ ತಲೆ ಮಟ್ಟಿದಾಗ ನನ್ನ ಗದ್ದ ನೆಕ್ಕಿ ಮುದ್ದಿಗೆ ತೊಡಗಿದ್ದಳು ಮಹಾರಾಣಿ.