ಮಳೆಯ ವಾಸನೆ..
ಮಾಯಾವಿ ಮಳೆ
ಎಡೆಬಿಡದ ಗುಡುಗು
ಮಿಂಚು
ಹೀರಿಕೊಳ್ಳುವ ಮಣ್ಣಿಗೆ
ವಾಸನೆ
ಅಂಗಳ ಎದುರಿನ ತೋಡು
ಕೆರೆ ನದಿ
ಎಲ್ಲೆಂದರಲ್ಲಿ
ನಡು ಮನೆಗೂ ನೀರು
ಜೋರು ಆರ್ಭಟ
ಕೀಲಿ ಕಳಚಿದಂತೆ
ಕೊಳೆ ಕೊಚ್ಚೆ ಹರಿದು
ಹೋಗುವ ಹೊತ್ತು
ಸಾಗುವ ಮಾಯೆ
ಗಾಜಿನ ಕಿಟಕಿಗೆ
ಕಣ್ಣು ಜೋಡಿಸಿದರೆ
ಹಗಲನೇ ಮಬ್ಬಾಗಿಸಿದ
ಜಿಟಿಜಿಟಿ ಮಳೆ
ಅಬ್ಬರ… ಕೂಗು
ಸಟಸಟ ಮಿಂಚು
ನಡುಕ
ಇಲ್ಲಿ ಪಾಳುಗುಡಿ ಕುಸಿದು..
ಪಕ್ಕದ ತೋಡಿನಲ್ಲಿ
ಕೆಂಪು ನೀರು
ಈ ಭೀತಿಗೆ ಕೆಳಹೊಟ್ಟೆ
ಕಟ್ಟಿದಂತಾಗಿ
ಬಚ್ಚಲು ಮನೆಗೆ ಓಡಿ
ಹಳೆಯ ಕದವದು
ಮುಚ್ಚಿದರೆ
ಕಣ್ಣೆದುರು ಕಂಡದ್ದೆಲ್ಲಾ ಕೆಂಪು
ಹೊಯ್ಯುವುದು ಆಗಿದೆ
ತಣಿದಾಗಿದೆ
ಇದೀಗ ಜ್ವಲಿಸುವುದು
ಅಪಘಾತ ನೋವು
ಪಾತ
ಕಂಪನ..
ನಿಲ್ಲಬಾರದೇ ಮಳೆ..
ಪಥ
ಒಂದು ಬೇಗುದಿ ಕುಕ್ಕರು ಸೀಟಿ
ತಲ್ಲಣ ದುಸ್ತರ ಚಣ ಡಕ್ಕಣ
ಸುಖದ ಪಲಕುಗಳ
ಬಸಿದು ಉಣ ಬಡಿಸುವೆ
ಬಾಳೆಲೆಯೊಳಗೆ ಬೇಯಿಸಿ
ಪದಕಡುಬಹಿಟ್ಟು
ಯಾವುದು ಕ್ಷಣಿಕದಣು
ಯಾವುದು ಚಿರ ಚೇತನ
ಪದ್ಯ ಭಾವಕಕ್ಕೊಂದು
ಪೊರೆ ಸಹಚರ
ಗುಟ್ಟು ಮುಟ್ಟಾಟ
ಮುಟ್ಟಿ ಹಾಡಿದೆ
ಈ ಸೃಷ್ಟಿ ಮಂತ್ರಮುಗ್ಧ ಕಂದ
ಗಮ್ಯವದಚ್ಚರಿಯ ಗಮನ
ಒಂದು ಧಾನ್ಯ
ಮೌನ
ಏಕಾಂತ ಮೊಳಕೆ
ಗೊಂಡು
ನಿನ್ನೆಡೆಗೆ ಬೊಚ್ಚು ಬಾಯ್ದೆರೆದು
ನಸುಕಂದು ತಿರಿ
ತಿಳಿಮಳೆಯ
ಪೊರೆವ ಆಗಸದ
ಚೂರೇ
ಎನ್ನ ತೊರೆಯದಿರು
ಹನಿಹನಿ ನೀರಾದರೂ
ಸರಿ ಹರೀ
ಬೆಳಕಾದರೂ
ಕೊಳೆ ತೊಳೆಯಲಿ
ಒಳ ಮೂಕತನ
ಛೇಧಿಸಲಿ
ಕತ್ತಲಲ್ಲಿ ಎಡವಿದರೂ
ಹಾಡಿನ ಚರಣದೆಡೆ
ಸಾಗಿಸು ದಾರಿಗನೇ
ಕೇದಗೆ ಬನದ ಘಮಲು
ಆವರಿಸಲಿ

ಕವಯತ್ರಿ ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿಯವರು. ರಂಗ ಮತ್ತು ಧಾರಾವಾಹಿಯ ಕಲಾವಿದೆಯೂ ಆಗಿರುವ ಪೂರ್ಣಿಮಾ ಅವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ.
