Advertisement
ಪೆನ್ನಿನ ಕ್ಯಾಪು ತಿಳಿಸಿದ ಜೀವನ ಪಾಠ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಪೆನ್ನಿನ ಕ್ಯಾಪು ತಿಳಿಸಿದ ಜೀವನ ಪಾಠ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಪ್ರಬಂಧ ಸ್ಪರ್ಧೆಗೆ ಸರಿಸುಮಾರು 50 ಶಿಕ್ಷಕರು ಬಂದಿದ್ದರು. ಅಂದು ಕೊಟ್ಟ ಪ್ರಬಂಧದ ವಿಷಯ “ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ”. ತಯಾರಾಗಿ ಬಂದಿಲ್ಲದಿದ್ದರೂ ನಾನು ನನ್ನ ಅನುಭವದ ಮೂಸೆಯಲ್ಲಿ ಆ ಒಂದು ಪ್ರಬಂಧವನ್ನು ಬರೆಯುತ್ತಾ ಸಾಗಿದೆ. ಯಾವುದೇ ರೀತಿಯ ಒತ್ತಡವಿಲ್ಲದೆ ಪ್ರಬಂಧವನ್ನು ಮುಗಿಸಿ ಮನೆಗೆ ಬಂದೆ. ಇದಾಗಿ ಒಂದೆರಡು ದಿನಗಳ ಕಳೆದ ನಂತರ ಪ್ರಬಂಧ ಸ್ಪರ್ಧೆ ಪ್ರಕಟವಾಯಿತು. ಆ ಸ್ಪರ್ಧೆಯ ಫಲಿತಾಂಶ ಪ್ರಕಟವಾದಾಗ ನನಗೆ ತುಂಬಾ ಆಶ್ಚರ್ಯವಾಯಿತು, ಏಕೆಂದರೆ ಆ ಪ್ರಬಂಧದ ಸ್ಪರ್ಧೆಯಲ್ಲಿ ನನಗೆ ಪ್ರಥಮ ಸ್ಥಾನ ಲಭಿಸಿತ್ತು!!
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

ಒಮ್ಮೆ ನಾನು ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ನಾನು ಕುಳಿತಿದ್ದ ಸೀಟಿನ ಮುಂಬದಿಯ ಸೀಟಿನಲ್ಲಿ ಮೂವರು  ಯುವತಿಯರು ಕುಳಿತುಕೊಂಡಿದ್ದರು. ಅವರು ಸುಮ್ಮನೆ ಕುಳಿತುಕೊಳ್ಳದೆ ಹಾಸ್ಯ ಮಾಡುತ್ತಾ ಜೋರಾಗಿ ತಮ್ಮ ತಮ್ಮಲ್ಲೇ ಹರಟುತ್ತಿದ್ದುದು ನನಗೆ‌ ಕೇಳಿಸುತ್ತಿತ್ತು. ಮಾತನಾಡುತ್ತಿದ್ದ ಅವರ ಶೈಲಿ ನನಗೆ ಇಷ್ಟವಾಗಿತ್ತು. ಅವರು ಜೀವನದಲ್ಲಿ ಧುತ್ತನೆ ಎದುರಾಗುವ ಘಟನೆಗಳನ್ನು ಹೇಗೆ ಎದುರಿಸಬೇಕು? ಎಂಬುದರ ಕುರಿತು ತಮ್ಮ ತಮ್ಮಲ್ಲೇ ಚರ್ಚಿಸಿಕೊಳ್ಳುತ್ತಿದ್ದರು. ಹೀಗೆ ಅವರು ಚರ್ಚಿಸಿಕೊಳ್ಳುತ್ತಿರುವಾಗ ಅವರ ಕೈಯಲ್ಲಿದ್ದ ಪೆನ್ನಿನಿಂದ  ಕ್ಯಾಪ್  ಅವರು ಕುಳಿತಿದ್ದ ಸೀಟಿನಿಂದ ಚೂರು ಹಿಂಭಾಗದ ಕೆಳಭಾಗದಲ್ಲಿ ಬಿತ್ತು. ಆಗ ಅವರಲ್ಲೊಬ್ಬಳು ಆ ಪೆನ್ನಿನ ಕ್ಯಾಪಿಗಾಗಿ ತಾನು ಕುಳಿತ ಕಾಲ ಭಾಗದಲ್ಲಿ ತೀವ್ರವಾಗಿ ಹುಡುಕುತ್ತಿದ್ದಳು. ಆಗ ಅದರಲ್ಲಿ ಒಬ್ಬಳು “ಅಯ್ಯೋ, ಬಿಡೆ ಆಫ್ಟ್ರಾಲ್ ಒಂದು ಪೆನ್ ಕ್ಯಾಪ್ ತಾನೆ? ಕಳೆದು ಹೋದರೆ ಹೋಯಿತು.  ಪೆನ್ ಇದೆಯಲ್ಲ ಸಾಕು” ಎಂದಳು. ಆಗ ಹುಡುಕುತ್ತಿದ್ದ ಮತ್ತೊಬ್ಬಳು “ಛೇ ಛೇ ಹಾಗೆಲ್ಲಾ ಹೇಳಬಾರದು. ನಾವು ಪೆನ್ ಅನ್ನು ಕಳೆದುಕೊಂಡರೆ ಹೊಸ ಪೆನ್ ಅನ್ನು ಕೊಂಡುಕೊಳ್ಳಬಹುದು. ಆದರೆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊಂಡರೆ ಹೊಸ ಕ್ಯಾಪ್ ಅನ್ನು ಕೊಂಡುಕೊಳ್ಳಲಾಗುವುದಿಲ್ಲ! ಆದ್ದರಿಂದ ನಾವು ಚಿಕ್ಕ ಚಿಕ್ಕ ವಸ್ತುಗಳ ಬಗ್ಗೆ ಗಮನಹರಿಸಬೇಕು” ಎನ್ನುತ್ತ  ಕ್ಯಾಪ್  ಹುಡುಕುವುದನ್ನು ಮುಂದುವರಿಸಿದಳು. ಆಗ ನಾನೂ ಸಹ ಅದರ ಒಂದು ಕಾರ್ಯದಲ್ಲಿ ಭಾಗಿಯಾಗಿ ಕೆಳಗೆ ಬಿದ್ದ ಕ್ಯಾಪ್ ಅನ್ನು ಹುಡುಕಿ ಅವರ ಕೈಗೆ ಕೊಟ್ಟೆ. ಆ ಒಂದು ಚಿಕ್ಕ ಸಹಾಯಕ್ಕೆ ಅವರು  ‘ಥ್ಯಾಂಕ್ಯೂ’ ಎಂದು ತಿಳಿಸಿದರಷ್ಟೇ ಅಲ್ಲದೆ ನನ್ನ ಪರಿಚಯವನ್ನೂ ಸಹ ಮಾಡಿಕೊಂಡರು. ಆ ಹುಡುಗಿಯರು ದಾವಣಗೆರೆ ಹಾಗೂ ಚಿತ್ರದುರ್ಗದ ಸುತ್ತಮುತ್ತಲಿನವರಾಗಿದ್ದು, ಅವರು ಪರೀಕ್ಷೆಯನ್ನು ಬರೆಯಲು ಬೆಂಗಳೂರಿಗೆ ಹೋಗುತ್ತಿದ್ದರು. ಅದರಲ್ಲಿ ಮೂವರು ಸಹ ನನ್ನ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡರು. ನಾನೂ ಸಹ ಅವರ ನಂಬರ್ ತೆಗೆದುಕೊಂಡು ಮತ್ತೆ  ನಮ್ಮ ನಮ್ಮ ಗಮ್ಯಸ್ಥಳಕ್ಕೆ ತೆರಳಿದೆವು. ನಾನು ತೆಗೆದುಕೊಂಡ ಆ ಒಂದು ಮೊಬೈಲ್ ನಂಬರ್‌ನ ಹುಡುಗಿಯೊಬ್ಬಳು ಮತ್ತೆ ಸಿಕ್ಕು ನನಗೆ ಸಹಾಯ ಮಾಡಿದಳು. ಅದನ್ನು‌ ಮುಂದೆ ತಿಳಿಸುತ್ತೇನೆ.

ಮನೆಗೆ ಬಂದರೂ ಸಹ ಅವರು ಹೇಳಿದ ಆ ಒಂದು ವಾಕ್ಯ ನನ್ನನ್ನು ಚಿಂತನೆಗೆ ಹಚ್ಚಿತು. ನಿಜ. ನಾವು ನಮ್ಮ ಜೀವನದಲ್ಲಿ ಸಣ್ಣಪುಟ್ಟ ವಸ್ತುಗಳಿಗೆ ಅಷ್ಟಾಗಿ ಗಮನ ಕೊಡುವುದಿಲ್ಲ. ಆದರೆ ಬರೀ ದೊಡ್ಡ ಹಾಗೂ ಹೆಚ್ಚು ಬೆಲೆಯ ವಸ್ತುಗಳಿಗೆ ಮಾತ್ರ ನಾವು ಆದ್ಯತೆ ಕೊಡುತ್ತೇವೆ. ಇದು ಕೇವಲ ವಸ್ತುವಿನ ವಿಷಯದಲ್ಲಿ ಮುಂದುವರೆಯದೇ ನಮ್ಮ ಸಂಬಂಧ ಬಾಂಧವ್ಯಗಳ ವಿಷಯದಲ್ಲಿಯೂ ಸಹ ಮುಂದುವರೆಯುತ್ತಿರುವುದು ವಿಷಾದನೀಯ ಸಂಗತಿ. “ಹಣವಿದ್ದರೆ ಊರೆಲ್ಲಾ ನೆಂಟರು‌” ಎಂಬಂತೆ ನಾವು ದೊಡ್ಡವರಿಗೆ ಅಂದರೆ ಸ್ಥಿತಿವಂತರಿಗೆ ಮತ್ತು ಉನ್ನತ ಸ್ಥಾನದಲ್ಲಿರುವವರಿಗೆ ಮಾತ್ರ ಹೆಚ್ಚು ಬೆಲೆ ಕೊಡುತ್ತೇವೆ. ಆದರೆ ಸಣ್ಣಪುಟ್ಟ ನೌಕರಿ ಮಾಡುತ್ತಿರುವವರು ಹಾಗೂ ಬಡವರಿಗೆ ಅಷ್ಟು ಆದ್ಯತೆ ಕೊಡುವುದಿಲ್ಲ. ಮತ್ತು ನಾವು ಜಾಣರಿಗೆ ಕೊಡುವಷ್ಟು ಬೆಲೆಯನ್ನ  ಓದಿನಲ್ಲಿ ಸ್ವಲ್ಪ ಹಿಂದುಳಿದವರಿಗೆ ಕೊಡುವುದಿಲ್ಲ. ಕುವೆಂಪುರವರ ಮಾತಿನಂತೆ “ಇಲ್ಲಿ ಯಾರೂ ಮುಖ್ಯರಲ್ಲ ಹಾಗೂ ಅಮುಖ್ಯರಲ್ಲ” ಎಂಬಂತೆ ಜಗತ್ತಿನಲ್ಲಿ ಎಲ್ಲರೂ ಸಹ ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ವ್ಯಕ್ತಿಗಳಾಗಿರುತ್ತಾರೆ. ಅಷ್ಟೇ ಅಲ್ಲದೆ “ಕಷ್ಟಕಾಲದಲ್ಲಿ ಒಂದು ಹುಲ್ಲು ಕಡ್ಡಿಯೂ ಸಹ ನೆರವಾಗಬಲ್ಲದು” ಎಂಬ ಮಾತಿನಂತೆ ನಾವು ಯಾರನ್ನು ಸಹ  ಅಲ್ಲಗಳೆಯಬಾರದು.

ನಮ್ಮ ದೈನಂದಿನ ಜೀವನದಲ್ಲೂ ನಾವು ದೊಡ್ಡ ವಿಷಯಗಳು ಅಥವಾ ದೊಡ್ಡ ವಸ್ತುಗಳಿಗೆ ಕೊಡುವ ಬೆಲೆಯನ್ನು ಸಣ್ಣ ಪುಟ್ಟ ಸಂಗತಿಗಳಿಗೆ ಕೊಡುವುದಿಲ್ಲ. ಆದರೆ ಕೆಲವೊಮ್ಮೆ ಇಡೀ ವಸ್ತುವಿನ ರಕ್ಷಣೆ ನಿಂತಿರುವುದೇ ಆ ಸಣ್ಣ ಭಾಗದ ಮೇಲೆ!! ಕ್ಯಾಪ್ ಇಲ್ಲದಿದ್ದರೆ ಪೆನ್ನಿನ ಇಂಕ್ ಒಣಗಿ ಇಡೀ ಪೆನ್ನೇ ನಿರುಪಯುಕ್ತವಾಗಬಹುದು. ಸಂಬಂಧಗಳಲ್ಲೂ ಅಷ್ಟೇ, ಸಣ್ಣ ಸಣ್ಣ ಕಾಳಜಿ, ಮಾತು, ಗೌರವಗಳನ್ನು ಕಡೆಗಣಿಸಿದರೆ ಕಾಲಕ್ರಮೇಣ ದೊಡ್ಡ ನಷ್ಟವೇ ಆಗಿಬಿಡುತ್ತದೆ!! ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

“ಅರಮನೆ ಇದ್ದರೂ ನೆರಮನೆ ಇರಬೇಕು” ಎಂಬಂತೆ ಎಲ್ಲರೊಂದಿಗೂ ಹೊಂದಾಣಿಕೆಯಿಂದ ಬಾಳಬೇಕು. “ಎಷ್ಟು ಕಷ್ಟವೋ ಹೊಂದಿಕೆಯೆಂಬುದು‌ ನಾಲ್ಕು‌ ದಿನದ ಈ ಬದುಕಿನಲಿ” ಎಂಬ ಜಿ.ಎಸ್.ಎಸ್ ರವರ ನುಡಿಯಂತೆ, ಹೊಂದಾಣಿಕೆ, ಸಹಕಾರ ಇಲ್ಲದಿರೆ ನಮ್ಮ ಬಾಳು ಬಾಳಲು ಬಿಡದೆ ಬಳಲುವಂತೆ ಮಾಡುತ್ತದೆ. ಆಗ ನೆರೆಯವರು ಹೊರೆಯಾಗಬಹುದು. “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಕಷ್ಟ ನೋಡ” ಎಂಬಂತೆ  ದುಃಖದ ಸಾಗರದಲ್ಲಿ ಬಿದ್ದು ಜೀವನದ ಖುಷಿಯ ಸಾರವನ್ನು ಖುಷಿಯಿಂದ ಅನುಭವಿಸಲು ಸಾಧ್ಯವಾಗುವುದಿಲ್ಲ. ಒಂದು ಚಿಕ್ಕ ಕ್ಯಾಪ್ ಘಟನೆ ಎಲ್ಲೆಲ್ಲಿಗೋ ಕರೆದೊಯ್ದಿತು.

ಇದಾಗಿ ಕೆಲವು ದಿನಗಳ ಕಳೆದ ನಂತರ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯನ್ನು ಏರ್ಪಡಿಸಿದರು. ನಾನೂ ಸಹ ಆ ಸಹಪಠ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕೆಂದು ಅಲ್ಲಿ ಇದ್ದಂತಹ ಭಾವಗೀತೆ ಹಾಡುವ ಸ್ಪರ್ಧೆಗಾಗಿ ತಯಾರಾಗುತ್ತಿದ್ದೆ. ಪ್ರೇಮ ಕವಿ ನರಸಿಂಹಸ್ವಾಮಿ ಯವರ “ರಾಯರು ಬಂದರು ಮಾವನ ಮನೆಗೆ” ಎಂಬ ಹಾಡಿಗೆ ನಾನು ತುಂಬಾ ತಯಾರಾಗಿದ್ದೆ. ಆ ಸ್ಪರ್ಧೆಗೆಂದೇ ನಾನು ಹೋದದ್ದು. ಆದರೆ ಸ್ಪರ್ಧೆಗೆ ಹೋದಾಗ ಅಲ್ಲಿಗೆ ಬಂದಿದ್ದ ಶಿಕ್ಷಕರೊಬ್ಬರು ಪ್ರಬಂಧ ಸ್ಪರ್ಧೆಯು ನಡೆಯುವ ಜಾಗದಲ್ಲಿ ನಿಂತು ಒಬ್ಬ ಶಿಕ್ಷಕ ಬಂದಾಗ ಅವನ ಕಡೆ ತೋರಿಸುತ್ತಾ “ಆ ವ್ಯಕ್ತಿಯು ಬಂದರೆ ಎಲ್ಲರೂ ಪ್ರಥಮ ಸ್ಥಾನವನ್ನು ಮರೆತುಕೊಳ್ಳುವುದು ಒಳಿತು. ಏಕೆಂದರೆ ಆ ವ್ಯಕ್ತಿಗೆ  ಪ್ರಥಮ ಸ್ಥಾನ ಮೀಸಲು. ಬಂದಿರುವ ಇತರರು ಕೇವಲ ದ್ವಿತೀಯ, ತೃತೀಯ ಸ್ಥಾನಕ್ಕಾಗಿ ಮಾತ್ರ ಸ್ಪರ್ಧೆ ಮಾಡಬೇಕು” ಎಂದರು. ಆಗ ನನಗೆ ವಿಚಿತ್ರ ಎನಿಸಿತು. “ಅಯ್ಯೋ!  ಇನ್ನು ಸ್ಪರ್ಧೆಯೇ ನಡೆದಿಲ್ಲ ಆಗಲೇ ಇವರು ಫಲಿತಾಂಶವನ್ನು ಹೇಳುತ್ತಿದ್ದಾರಲ್ಲ; ನಾನೂ ಒಂದು ಕೈ ನೋಡಿಯೇ ಬಿಡೋಣ” ಎಂದು ಭಾವಗೀತೆಯ ಸ್ಪರ್ಧೆಗೆ ಬಂದಿದ್ದ ನಾನು ಪ್ರಬಂಧ ಬರೆಯಲು ಹೋದೆ! ಪ್ರಬಂಧ ಸ್ಪರ್ಧೆಗೆ ಸರಿಸುಮಾರು 50 ಶಿಕ್ಷಕರು ಬಂದಿದ್ದರು. ಅಂದು ಕೊಟ್ಟ ಪ್ರಬಂಧದ ವಿಷಯ “ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ”. ತಯಾರಾಗಿ ಬಂದಿಲ್ಲದಿದ್ದರೂ ನಾನು ನನ್ನ ಅನುಭವದ ಮೂಸೆಯಲ್ಲಿ ಆ ಒಂದು ಪ್ರಬಂಧವನ್ನು ಬರೆಯುತ್ತಾ ಸಾಗಿದೆ. ಯಾವುದೇ ರೀತಿಯ ಒತ್ತಡವಿಲ್ಲದೆ ಪ್ರಬಂಧವನ್ನು ಮುಗಿಸಿ ಮನೆಗೆ ಬಂದೆ. ಇದಾಗಿ ಒಂದೆರಡು ದಿನಗಳ ಕಳೆದ ನಂತರ ಪ್ರಬಂಧ ಸ್ಪರ್ಧೆ ಪ್ರಕಟವಾಯಿತು. ಆ ಸ್ಪರ್ಧೆಯ ಫಲಿತಾಂಶ ಪ್ರಕಟವಾದಾಗ ನನಗೆ ತುಂಬಾ ಆಶ್ಚರ್ಯವಾಯಿತು, ಏಕೆಂದರೆ ಆ ಪ್ರಬಂಧದ ಸ್ಪರ್ಧೆಯಲ್ಲಿ ನನಗೆ ಪ್ರಥಮ ಸ್ಥಾನ ಲಭಿಸಿತ್ತು!!

ಪ್ರಬಂಧದ ಫಲಿತಾಂಶವು ನನ್ನ ಸಂತಸವನ್ನು ಇಮ್ಮಡಿಗೊಳಿಸಿತ್ತು. ಈ ಪ್ರಬಂಧ ಬರೆಯುವ ಕಲೆ ನನಗೆ ಪ್ರೌಢಶಾಲೆಯಿಂದಲೂ ಒಲಿದು ಬಂದಿತ್ತು. ನಮಗೆ ಪ್ರೌಢಶಾಲೆಯಲ್ಲಿ ಕನ್ನಡ ಬೋಧಿಸುತ್ತಿದ್ದ ಎಚ್. ಎಸ್. ಪ್ರಭಾಕರ್ ಹಾಗೂ ಸಂಸ್ಕೃತ ಬೋಧಿಸುತ್ತಿದ್ದ ಜಿ. ಎಂ. ಗುರುಮೂರ್ತಿ ಎಂಬ ಶಿಕ್ಷಕರ ಪ್ರಭಾವವು ನನ್ನ ಮೇಲೆ ಬೀರಿತ್ತು. ಅಲ್ಲದೆ ಬಿದರಹಳ್ಳಿ ಕೃಷ್ಣಮೂರ್ತಿ ಎಂಬ ಉಪನ್ಯಾಸಕರು ಸಹ ಪ್ರಬಂಧ ಬರೆಯುವ ಶೈಲಿ ಹಾಗೂ ಅಲ್ಲಿ ಬಳಸಬೇಕಾದ ಉಕ್ತಿಗಳು ಹಾಗೂ ಯಾವ ಸಮಯದಲ್ಲಿ ಹೇಗೆ ನಾವು ವಿಷಯವನ್ನು ಪ್ರಸ್ತುತಪಡಿಸಬೇಕೆಂಬ ಬಗ್ಗೆ ತಿಳಿಸಿದ್ದರಿಂದ ನನಗೆ ಪ್ರಬಂಧ ಬರೆಯುವ ಕಲೆ ಸಿದ್ಧಿಸಿತ್ತು. ಆದರೆ ನಾನು ಅದನ್ನು ಒಂದು ಹವ್ಯಾಸವಾಗಿ ಮಾಡಿಕೊಂಡಿರಲಿಲ್ಲ. ಆದರೆ ಈ ಫಲಿತಾಂಶವೇ ನಾನು ಸಹ ಬರೆಯಬಹುದಲ್ಲವಾ ಎಂಬ ಮನೋಭಾವನೆಯನ್ನು ನನ್ನಲ್ಲಿ ಮೂಡಿಸಿತ್ತು!!

ಈ ಒಂದು ಗೆಲುವು ನನಗೆ ಮುಂದೆ ಯಾವುದೇ ಸ್ಪರ್ಧೆ ನಡೆದರೂ ‘ಪ್ರಬಂಧ ಸ್ಪರ್ಧೆ’ ಗೆ ಹೋಗುವಂತೆ ಮಾಡಿತು. ಮತ್ತೊಮ್ಮೆ ಶಿಕ್ಷಕರ ಸ್ಪರ್ಧೆಯು ನಡೆದಾಗ ನಾನು ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದೆನು. ಆಗ ರಾಜ್ಯ ಮಟ್ಟದ ಸ್ಪರ್ಧೆಯು ಬೀದರ್ ನಲ್ಲಿ ನಡೆಯುತ್ತದೆ ಎಂಬ ಮಾಹಿತಿ ಸಿಕ್ಕಿತು. ನಾನು ಹಾಗೂ ಪ್ರೌಢಶಾಲಾ ವಿಭಾಗದಿಂದ ಗೆದ್ದಿದ್ದ ಶಿಕ್ಷಕರೊಬ್ಬರು ಬೀದರ್‌ಗೆ ಹೋಗಲು ಅಣಿಯಾದೆವು. ಆ ಪ್ರೌಢಶಾಲಾ ಶಿಕ್ಷಕರು ಪ್ರತಿಷ್ಟಿತ ಖಾಸಗಿ ಅನುದಾನಿತ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ವಿದ್ಯಾರ್ಥಿಗಳು ರಾಜ್ಯಾದ್ಯಂತ ಇದ್ದರಂತೆ. ಇದೇ ರೀತಿಯಾಗಿ  ಬೀದರ್‌ನಲ್ಲಿ ಅವರ ವಿದ್ಯಾರ್ಥಿಯೊಬ್ಬ ಇದ್ದನಂತೆ. ಈ ವಿಷಯವನ್ನು ಆ ವಿದ್ಯಾರ್ಥಿಯು ಅವನ ಪೋಷಕರ ಬಳಿ ತಿಳಿಸಿ, ಅವರ ಪೋಷಕರು ನಮಗೆ ತಂಗಲು ವ್ಯವಸ್ಥೆ ಮಾಡಿದ್ದರು. ‘ಹೂವಿನೊಡನೆ ನಾರು ಸ್ವರ್ಗಕ್ಕೆ ಹೋದಂತೆ’ ನಾನೂ ಸಹ ಆ ಪೋಷಕರ ಗೌರವಕ್ಕೆ ಪಾತ್ರನಾದೆ.

ನಮಗೆ ಉಳಿಯಲು ಸರ್ಕಾರದವರು ವ್ಯವಸ್ಥೆ ಮಾಡಿದ್ದರು. ಆದರೆ ನನ್ನ ಜೊತೆಗಿದ್ದ ಶಿಕ್ಷಕರ, ವಿದ್ಯಾರ್ಥಿಯ ಪೋಷಕರ ಒಂದು ಕೋರಿಕೆಯಂತೆ ನಾವು ಅವರು ಮಾಡಿದ್ದ ಖಾಸಗಿಯ ಲಾಡ್ಜ್‌ಗೆ ತೆರಳಿದೆವು. ಆ ಲಾಡ್ಜ್ ತುಂಬಾ ದುಬಾರಿಯಾದ ಲಾಡ್ಜ್ ಆಗಿತ್ತೆಂಬುದು ಅದರ ವ್ಯವಸ್ಥೆಯಲ್ಲೇ ತಿಳಿಯುತ್ತಿತ್ತು.  ಅದರ ಖರ್ಚು ವೆಚ್ಚವನ್ನ ಆ ವಿದ್ಯಾರ್ಥಿಯ ಪೋಷಕರೇ ಭರಿಸಿದ್ದರು. ಅಷ್ಟೇ ಅಲ್ಲದೆ ಅವರು ಲಾಡ್ಜ್‌ಗೆ ಬಂದು ನಮ್ಮನ್ನು ಊಟಕ್ಕೆಂದು ಅವರ ಮನೆಗೆ ಕರೆದುಕೊಂಡು ಹೋದರು. ಅವರ ಮನೆಯಲ್ಲೂ ನಮ್ಮನ್ನು ತುಂಬಾ ಚೆನ್ನಾಗಿ ಆತಿಥ್ಯ ಮಾಡಿದರು. ನಾವು ಅವರ ಮನೆಯಲ್ಲಿ ಕುಳಿತಿದ್ದಾಗ ಅವರು ನಮ್ಮ ಜೊತೆ ಕುಳಿತುಕೊಳ್ಳದೇ ನಿಂತುಕೊಂಡೇ ಇದ್ದರು. ಆಗ ನಾನು “ಸರ್, ನೀವು ಕುಳಿತುಕೊಳ್ಳಿ” ಅಂದಾಗ ಅವರು “ಎಲ್ಲಾದರೂ ಉಂಟೆ ಸರ, ಮಾಸ್ತರು ಕುಳಿತಿದ್ದಾಗ ನಾವು ಅವರ ಪಕ್ಕದಲ್ಲಿ ಕೂರುವುದು ಸರಿಯಲ್ಲ” ಎಂದು ಹೇಳಿದರು. ಆಗ ನನಗೆ ಶಿಕ್ಷಕರ ಬಗ್ಗೆ ಅವರು ತೋರಿದ ಅಭಿಮಾನ, ಗೌರವಕ್ಕೆ ಮೂಕವಿಸ್ಮಿತನಾಗಿದ್ದೆ.

ಅವರ ಆತಿಥ್ಯ ಸ್ವೀಕರಿಸಿ ನಾವು‌ ಮಾರನೇ ದಿನ ಪ್ರಬಂಧ ಸ್ಪರ್ಧೆಗೆ ಹೋದೆವು. ಮೊದಲೇ ಕೊಟ್ಟ ಮೂರು ವಿಷಯಗಳಲ್ಲಿ ಒಂದು‌ ವಿಷಯವನ್ನು‌ ಕೊಟ್ಟರು. ಅದನ್ನು ಬರೆದೆ. ಸಂಜೆಯೇ ಫಲಿತಾಂಶ ವ್ಯಕ್ತವಾಯಿತು. ಆದರೆ ನನಗೆ ಯಾವುದೇ ಸ್ಥಾನ ಲಭಿಸಲಿಲ್ಲ. ನನ್ನ ಜೊತೆಗೆ ಬಂದವರೂ ಗೆದ್ದಿರಲಿಲ್ಲ. ಸಂಜೆ ಈ ವಿಷಯ ತಿಳಿದ ಆ ವಿದ್ಯಾರ್ಥಿಯ ಪೋಷಕರು ನಮಗಿಂತಲೂ ಹೆಚ್ಚು ಬೇಸರವಾದರು. ಅವರ ಋಣಭಾರವನ್ನು ಹೊತ್ತು ನಾವು ಮತ್ತೆ ವಾಪಸ್ ತೆರಳಿದೆವು.

ಗೆಲ್ಲಲೇಬೇಕು ಎಂದು ಬಂದಿದ್ದ ಸ್ಪರ್ಧೆಯಲ್ಲಿ ಸೋತಾಗ ತುಂಬಾ ಬೇಸರವೆನಿಸಿತು. ಸೋಲೇ ಅಂತಿಮವಲ್ಲ ಮುಂದಿನ ಬಾರಿಯಾದರೂ ಗೆಲ್ಲಬೇಕು ಎಂಬುದು ಮನದಲ್ಲಿ ಬರುತ್ತಿತ್ತು. ಬೀದರ್‌ಗೆ ಬರುವ ಮುನ್ನ ನಾನು ಎಣಿಸಿದ್ದ ಎಲ್ಲಾ ನನ್ನ ಪೂರ್ವಗ್ರಹಪೀಡಿತ ಭಾವನೆಗಳು ದೂರವಾಗಿ ಒಂದು ಸುಂದರ ಅನುಭವವು ನನ್ನ ಸ್ಮೃತಿ ಪಟಲದಲ್ಲಿ ಉಳಿಯಿತು.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ