ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಈ ಕೃತಿಯು ಪ್ರಯತ್ನಿಸುತ್ತದೆ. ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷರಿಂದ ಶಿಕ್ಷೆಗೊಳಗಾಗಿ, ಆರು ತಿಂಗಳುಗಳನ್ನು ಹಿಂಡಲಗ ಸೆರೆಮನೆಯಲ್ಲಿ ಕಳೆದು, ಅಲ್ಲಿಂದ ತಿರುಗಿ ರೈಲಿನಲ್ಲಿ ತಮ್ಮೂರಿಗೆ ಬರುವ ಹಾದಿಯನ್ನೇ ಲೇಖಕರು ‘ಕಾರವಾನ್’ ಕಥನದ ಅನಾವರಣಕ್ಕೆ ಬಳಸಿಕೊಂಡಿದ್ದಾರೆ.
ಬಸವರಾಜ ಕಟ್ಟೀಮನಿಯವರ ಕಾರವಾನ್ ಕತೆಯ ಕುರಿತು ಸುಮಾವೀಣಾ ಅವರ ಬರಹ ಇಲ್ಲಿದೆ.

ಬಸವರಾಜ ಕಟ್ಟೀಮನಿಯವರು ಸಾಮಾಜಿಕ ಸಮಸ್ಯೆಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟಿದ್ದಾರೆ ಅನ್ನುವುದಕ್ಕಿಂತ ಅಕ್ಷರಗಳಲ್ಲಿ ಸಮಸ್ಯೆಗಳ ಚಿತ್ರಗಳನ್ನೇ ನಿರ್ಮಿಸಿದ್ದಾರೆ ಎನ್ನಬಹುದು. ಸಾಮಾಜಿಕ ಸಮಸ್ಯೆಗಳ ಗತಿಬಿಂಬ ‘ಕಾರವಾನ್’. ಈ ಕತೆ ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ,ಆಶ್ರಯ ಇತ್ಯಾದಿಗಳ ಸುತ್ತ ವಿಭ್ರಮಿಸುತ್ತದೆ.

‘ಕೊಳೆ ಇರುವ ಕಡೆ ಬೆಂಕಿಯನ್ನು ಉಗುಳುವಂಥ ಕನ್ನಡದ ಜೀವಂತ ಜ್ವಾಲಾಮುಖಿ’ ಎಂದರೆ ಬಸವರಾಜ ಕಟ್ಟೀಮನಿಯವರು ಎನ್ನಬಹುದು. ದ್ವಿತೀಯ ಮಹಾಯುದ್ಧ ಪ್ರಗತಿಶೀಲ ಆಂದೋಲನದ ಪ್ರೇರಕ ಶಕ್ತಿಯಾಗಿರುತ್ತದೆ. ಭಾರತದ ಜೀವನವನ್ನು ಯಥಾವತ್ತಾಗಿ ಚಿತ್ರಿಸಬೇಕೆಂಬ ತುಡಿತ ಇವರಲ್ಲಿ ಅದಮ್ಯವಾಗಿತ್ತು. ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷರಿಂದ ಶಿಕ್ಷೆಗೊಳಗಾಗಿ, ಆರು ತಿಂಗಳುಗಳನ್ನು ಹಿಂಡಲಗಿ ಸೆರೆಮನೆಯಲ್ಲಿ ಕಳೆದು, ಅಲ್ಲಿಂದ ತಿರುಗಿ ರೈಲಿನಲ್ಲಿ ತಮ್ಮೂರಿಗೆ ಬರುವ ಹಾದಿಯನ್ನೇ ‘ಕಾರವಾನ್’ ಕಥನದ ಅನಾವರಣಕ್ಕೆ ಬಳಸಿಕೊಂಡಿದ್ದಾರೆ. 1942 ರ ಭಾರತ ಸ್ವಾತಂತ್ರ್ಯ ಚಳವಳಿ ಮತ್ತು ಅದರೊಡನೆ ಇದ್ದ ಕ್ಷಾಮ ಪರಿಸ್ಥಿತಿಯ ದಾರುಣತೆಯನ್ನು ‘ಕಾರಾವಾನ್’ ಕತೆ ನಿರೂಪಿಸುತ್ತದೆ.

(ಬಸವರಾಜ ಕಟ್ಟೀಮನಿ)

‘ಕಾರವಾನ್’ ಎಂದರೆ ಗುಂಪಿನಲ್ಲಿ ಹೋಗುವ ಪ್ರಯಾಣಿಕರು, ಒಂದೇ ಸಾಲಿನಲ್ಲಿ ಹೋಗುವ ವಾಹನಗಳ ಗುಂಪು. 1943 ರಲ್ಲಿ ಬಿಜಾಪುರ ಜಿಲ್ಲೆಯಲ್ಲಿದ್ದ ಭೀಕರ ಬರಗಾಲದಿಂದ ಗುಳೆ ಹೋದ ಕತೆಯನ್ನು ಅವರು ಮರು ನಿರೂಪಿಸಿದಂತಿದೆ.

‘ಮಂಗಳ ಪ್ರಭಾತ’ ಎಂಬ ಉದ್ಗಾರದಲ್ಲಿ ಕಥೆ ಅನಾವರಣಗೊಳ್ಳುತ್ತದೆ. ಆದರೆ ಮಂಗಳಕರವಾದ ದೃಶ್ಯವನ್ನು ನಿರೂಪಕರು ನೋಡುವುದಿಲ್ಲ! ನೋಡುವುದು ಅಮಂಗಳಕರವಾದ ದೃಶ್ಯವನ್ನೇ. ಪ್ರಸ್ತುತ ಕತೆಯಲ್ಲಿ ‘ಹಿಂದೂಸ್ಥಾನ, ಹಿಂದೂಸ್ಥಾನ’ ಎಂಬ ಧ್ವನಿ ಆಗಿನ ಭಾರತದಲ್ಲಿನ ಬಡತನವನ್ನು ಧ್ವನಿಸುತ್ತದೆ. ಆ ಧ್ವನಿಯಲ್ಲಿ ವಿಷಾದವಿದೆ, ಏನಾದರೂ ಮಾಡಬೇಕು ಅನ್ನುವ ತುಡಿತವನ್ನು ಅದು ವ್ಯಕ್ತಪಡಿಸುತ್ತದೆ. ಕಥೆಯ ನಿರೂಪಕನ ತಾಯಿ, ವೈದ್ಯರ ಪಾತ್ರದ ಮೂಲಕ ಕಿಂಚಿತ್ ಸುಧಾರಣೆ ಮಾಡಿಸುವ ಪ್ರಯತ್ನವನ್ನು ಕಟ್ಟೀಮನಿಯವರು ಮಾಡಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಕಟ್ಟೀ ಮನಿಯವರು ಪ್ರಯತ್ನಿಸಿದ್ದಾರೆ. ಎಂಜಿನ್ನಿನ ಹತ್ತಿರ ತೆಳ್ಳನೆಯ ಮನುಷ್ಯನೊಬ್ಬ ತಲೆ ತಗ್ಗಿಸಿ ನಿಂತಿದ್ದರೆ ಡ್ರೈವರು ಹಿಂದೂಸ್ಥಾನಿಯಲ್ಲಿ ಬೈಗುಳದ ಮಳೆ ಸುರಿಸುತ್ತಿದ್ದ , ಗಾರ್ಡು ಬೂಟುಗಾಲಿನಿಂದ ಒದ್ದುಬಿಟ್ಟ -ಅನ್ನುವ ಮಾತುಗಳು ಅಂದಿನ ಅಧಿಕಾರ ಶಾಹಿಯಲ್ಲಿದ್ದ ದರ್ಪದ ಪರಮಾವಧಿಯನ್ನು ಸೂಚಿಸುತ್ತವೆ.

ಗಿಡದ ಎಲೆಗಳೊಳಗಿನಿಂದ ಹಾಯ್ದು ವಕ್ರ ವಕ್ರವಾಗಿ ಮೇಲಕ್ಕೆರುತ್ತಿದ್ದ ಹೊಗೆ, ನೆಲದ ಮೇಲೆ ಒರಗಿಕೊಂಡು ನಿದ್ರಿಸುತ್ತಿದ್ದ ಕೂಸುಗಳು, ಮುನ್ನಾದಿನ ರೈಲಿಗೆ ಸಿಕ್ಕಿ ಬಿದ್ದಿದ್ದ ದುರ್ದೈವಿ, ಸ್ವಾಗತ ಹೇಳಿದ ಅವನ ಕೆಮ್ಮು ,ಆ ಮನುಷ್ಯ! ಏನು ಶರೀರ ಅದು.. ಮೂಳೆ ಮೂಳೆ! ಮುಂತಾದ ಮಾತುಗಳು ಬಡತನದ ಗಂಭೀರ ಚಿತ್ರಣವನ್ನು ಮೂಡಿಸುತ್ತವೆ.

‘ಕಿವಿಗಳನ್ನು ಭೇದಿಸಿಕೊಂಡು ನುಗ್ಗಿ ಕರುಳು ಇರಿಯುವ ಕೆಮ್ಮು’ ಎಂಬ ಮಾತಂತೂ ಬದುಕಿನ ದಾರುಣತೆಗೆ ಹಿಡಿದ ಕನ್ನಡಿಯಂತಿದೆ. ‘ಏನಾದರೂ ಕೊಡಿಯಪ್ಪಾ ,ಸೇದಿ ಬಿಸಾಕಿದ ತುಂಡಾದರೂ ಅಡ್ಡಿಯಿಲ್ಲ’ ಎನ್ನುತ್ತಾ ನಿರೂಪಕರು ಕೊಟ್ಟ ಸಿಗರೇಟನ್ನು ತೆಗೆದುಕೊಂಡ ಮೇಲೆ ಅವನ ಕಳಾಹೀನ ಕಣ್ಣುಗಳಲ್ಲಿ ಪಕ್ಕನೆ ಆನಂದದ ಮಿಂಚು ಹೊಳೆದಂತಾಯಿತು- ಎನ್ನುವಲ್ಲಿ ಆತನ ಹೃದಯ ಬದಲಾವಣೆಯೊಂದಕ್ಕಾಗಿ ಎಷ್ಟೊಂದು ಮಿಡಿಯುತ್ತಿತ್ತು ಎಂಬುದನ್ನು ಸೂಚಿಸುತ್ತದೆ.

ಗುಳೆ ಹೊರಟು ಬಂದಿರುವ ಅವನ ಊರಿನ ಬಗ್ಗೆ ಕೇಳಿದಾಗ, ‘ತನ್ನೂರು ಬಾದಾಮಿ ಹತ್ತಿರ’ ಎನ್ನುತ್ತಾನೆ. ಕಾರಣ ಕೇಳಿದರೆ “ಯಪ್ಪಾ ಸಂಸಾರದ ಹೊಟ್ಟೆ ನಡೀಬೇಕಲ್ಲ” ಎನ್ನುವುದು ಬರಗಾಲ ಹಸಿವಿನ ಭೀಕರತೆಯನ್ನೇ ಶ್ರುತಪಡಿಸುತ್ತದೆ. ‘ಬೆಳಗಾಗೊದೇ ತಡ, ಸುರುವಾಯಿತೇ ನಿನ್ನ ಕಾಟ. ತಿನ್ನೋಕೆ ರೊಟ್ಟೀನೇ ಇಲ್ಲದಿದ್ದರೆ ಮೊಲೆಯಲ್ಲಿ ಹಾಲಾದರೂ ಎಲ್ಲಿ ಬಂದೀತು? ನಿಮ್ಮನ್ನ ಮಣ್ಣಲ್ಲಿ ಹಾಕಲಿ! ನಿಮ್ಮ ರುಂಡಾ ಚಿವುಟಲಿ. ಸತ್ತಾದರೂ ಸಾಯಬಾರದೆ! ಪೀಡೆ ಹೋದೀತು’ ಎಂದು ಹಸಿವಿನ ಭರದಲ್ಲಿ ತಾಯಿ ಆಡುವ ಮಾತುಗಳು. ಪ್ರತಿ ನಿತ್ಯ ಹಸಿವಿನಿಂದ ಸಾಯುವುದರ ಬದಲು ಒಮ್ಮೆಗೇ ಮುಕ್ತಿ ಸಿಗಲಿ ಎನ್ನುವ ನೋವಿನ ನುಡಿಗಳವು.

‘ಅವಳುಟ್ಟ ಸೀರೆಯನ್ನೊಮ್ಮೆ ನೋಡಿದರೆ ಅದು ಸೀರೆಯಲ್ಲ, ಅದನ್ನು ಸೀರೆಯೆಂದು ಕರೆಯಲು ಸಾಹಸ ಬೇಕು. ಅದು ನಾಲ್ಕಾರು ಮೊಳದ ತುಂಡು’ ಎನ್ನುತ್ತಾರೆ. ಸ್ವಾತಂತ್ರ್ಯ ಬಂದ ನಂತರವೂ ಈ ಪರಿಸ್ಥಿತಿ ಬದಲಾಗಿಲ್ಲ.

ಆ ಧ್ವನಿಯಲ್ಲಿ ವಿಷಾದವಿದೆ, ಏನಾದರೂ ಮಾಡಬೇಕು ಅನ್ನುವ ತುಡಿತವನ್ನು ಅದು ವ್ಯಕ್ತಪಡಿಸುತ್ತದೆ. ಕಥೆಯ ನಿರೂಪಕನ ತಾಯಿ, ವೈದ್ಯರ ಪಾತ್ರದ ಮೂಲಕ ಕಿಂಚಿತ್ ಸುಧಾರಣೆ ಮಾಡಿಸುವ ಪ್ರಯತ್ನವನ್ನು ಕಟ್ಟೀಮನಿಯವರು ಮಾಡಿದ್ದಾರೆ.

ಸುಧಾ ಮೂರ್ತಿಯವರ ‘ಮನದ ಮಾತು’ ಎನ್ನುವ ಕೃತಿಯ ‘ತುಂಡು ಬಟ್ಟೆ’ ಅನ್ನುವ ಅಧ್ಯಾಯದಲ್ಲಿ ಇದೇ ಅಳಲನ್ನು ಕಾಣಬಹುದು. ಮನಃ ಕಲಕುವ ಸನ್ನಿವೇಶ ಕುಷ್ಟ ರೋಗಿಗಳ ಕಾಲೊನಿಯಲ್ಲಿ ಎದುರಾಗುತ್ತದೆ. ಸುಧಾ ಮೂರ್ತಿಯವರು ವೀರಮ್ಮ ಎನ್ನುವ ಹೆಸರಿನ ಮಹಿಳೆಯ ಗುಡಿಸಲಿನ ಬಳಿ ಹೋಗಿ ಆಕೆಯನ್ನು ಕರೆಯುತ್ತಾರೆ. ಆಕೆ ಬರುವುದಿಲ್ಲ. ಒಂದೆರಡು ಬಾರಿ ಕರೆದರೂ ಬಾರದೆ ಇದ್ದಾಗ ಸುಧಾಮೂರ್ತಿಯವರು ನೇರ ಗುಡಿಸಿಲೊಳಗೆ ಹೋಗಿ ಕರೆಯುತ್ತಾರೆ. ಬತ್ತಿದ ದನಿಯಿಂದಲೆ “ವೀರಮ್ಮ ಅವ್ವಾರೆ ನೀವ್ ಕಾನ್ಸಿಲಿಕ್ಕತೀರಿ ನೀವ್ ಹೆಂಗಸ್ ಆಗಿರಬಹುದು. ನನಗಿಂತ ಚಿಕ್ಕವರೆ ಇರಬಹುದು. ಆದರೆ ನಾನು… ಹೆಂಗಸು ಒಂದು ತುಂಡು ಬಟ್ಟೆಯಾದರು ಬೇಕಲ್ಲೇನ್ರಿ” ಎನ್ನುತ್ತಿದ್ದಂತೆ ಆ ನೋವಿನ ದೃಶ್ಯ ಕಾಣಿಸುತ್ತದೆ. ಆಕೆಯನ್ನು ಮೂಲೆಯಲ್ಲಿ ನೋಡಿದರೆ ಕಾಲುಗಳು ಮುದುಡಿಕೊಂಡಿರುತ್ತವೆ. ಎದೆಯನ್ನು ಕೈಗಳಿಂದ ಮುಚ್ಚಿಕೊಂಡಿರುವ ವೀರಮ್ಮ ಇದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದ ನಿಯಮದ ಪ್ರಕಾರ ವಸ್ತು ರೂಪದಲ್ಲಿ ದಾನವಿಲ್ಲವಾದರೂ ಸಿರೆಗಳನ್ನು ತರಿಸಿ ಕೊಡುತ್ತಾರೆ.

‘ಬೆಳಗೂ ಬೈಗು ಛಿಟಿಛಿಳಿ ಬೆಂಕಿ, ಅನ್ನ ಬ್ರಹ್ಮದ ದೇಗುಲದಲ್ಲಿ ಬಾಯಂಗಳದಲಿ ಹುಟ್ಟಿದ ಮಾತು ಮುಗಿಲಿನ ಕಿವಿಯನ್ನು ಮುಟ್ಟ ಇಲ್ಲ’ ಎನ್ನುವ ಬೇಂದ್ರೆಯವರ ಮಾತು ಇಂದಿಗೂ ಸತ್ಯ ಅನ್ನಿಸುತ್ತದೆ.

‘ಅದು ಸೀರೆಯಲ್ಲ ನಾಲ್ಕಾರು ಮೊಳದ ತುಂಡು,ಅದೂ ನೂರು ಕಡೆ ಹರಿದಿದೆ. ಎಲ್ಲ ಕಡೆಗಳಲ್ಲು ಬಟ್ಟೆಯಿಂದ ಮುಚ್ಚಿತು ಹೇಗೆ ಮರ್ಯಾದೆ” . ಎನ್ನುವ ಸಾಲುಗಳು ರೂಪಕದಂತಿದೆ. ಇದು ಸೀರೆಯ ವಿಷಯವಲ್ಲ, ಬಟ್ಟೆಯ ವಿಷಯ , ಅದೂ ಎಂಥ ಬಟ್ಟೆ..ಬಾಳ ಬಟ್ಟೆಯ ವಿಷಯ. ಬರಗಾಲ ಬಂದು ಇದ್ದ ಹಣ ಖರ್ಚಾಗಿ ಉದ್ಯೋಗಕ್ಕೆ ಮಾರ್ಗವಾಗಿದ್ದ ಜಮೀನು ಸಾಹುಕಾರರ ಪಾಲಾಗಿದೆ. ದುಡಿಯುವ ಜೀವ ಕ್ಷಯ ರೋಗಕ್ಕೆ ತುತ್ತಾಗಿದೆ.

ತಿಂಗಳು ಗಟ್ಟಲೆ ಎಣ್ಣೆ ಕಾಣದೆ ಮುದುರಿ ಗಂಟಿಕ್ಕಿಕೊಂಡ ಕೂದಲು, ಮೂವತ್ತೈದು ದಾಟಿರದ ಹೆಂಗಸಾದರೂ ನಿತ್ಯ ವೇದನೆಯ ವಿಷ ಕುಡಿದು ಕುಡಿದು ಅಕಾಲ ವೃದ್ಧಾಪ್ಯ ಬಂದಿದೆ ಎನ್ನುವುದು ಆ ಹೆಣ್ಣಿನ ಒಳತೋಟಿಯನ್ನು ದರ್ಶಿಸುವಂತಿದೆ.

ಯಾರೋ ಕೂಗಿದಂತೆ ಆಗುತ್ತದೆ , ಇದ್ಯಾರು ಅಂತ ತಿಳಿದಿದ್ದೀಯ ‘ತಾಯಿ ಭರತ ಮಾತೆ’ ಎನ್ನುವ ಉಲ್ಲೇಖ ಬರುತ್ತದೆ. ಅಂದರೆ ಇಂದಿನ ಸ್ಥಿತಿ ಗತಿ ಅರ್ಥವಾಗುತ್ತದೆ. ‘ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ’ ಎನ್ನುವ ದಾಸರ ನುಡಿಗಳು ನೆನಪಾಗಿ, ಕಾರಾವಾನ್ ನಿಜಕ್ಕೂ ದುಃಖಮುಖಿ ಅನ್ನಿಸುತ್ತದೆ.
ಹಾಗಂತ ಮಕ್ಕಳು ಇಲ್ಲಿ ಸುಮ್ಮನೆ ಕೂರುವುದಿಲ್ಲ. ದಿನಾ ರೊಟ್ಟಿಗಳನ್ನು ಭಿಕ್ಷೆ ಬೇಡಿ ತರುತ್ತಿದ್ದರು. ಇದನ್ನೇನು ನಾವು ಅವಕಾಶಗಳ ಭಿಕ್ಷೆ ಎನ್ನಬೇಕೆ ಅನ್ನುವ ಆಲೋಚನೆ ಬಾರದೆ ಇರದು. ಹಾಗೆ ಬೇಡಿ ಬರುವಾಗ ಮಧ್ಯಾಹ್ನ ಕೈಲಾಗದ ಮುದುಕನಿಗೆ ಬೈಗುಳಗಳ ಜೊತೆಗೆ ರೊಟ್ಟಿಯ ಚೂರುಗಳನ್ನು ಎಸೆಯುವುದು. ಅದನ್ನು ತಿನ್ನುವುದೇ ಮನೆಯ ಯಜಮಾನನಿಗೆ ಆಭ್ಯಾಸವಾಗಿತ್ತು.

ಮಗುವೊಂದು ಕಿಟಾರನೆ ಕಿರುಚಿಕೊಂಡ ಹಾಗನ್ನಿಸುತ್ತದೆ. ಯಾರಿರಬಹುದು ಎಂದು ನಿರೂಪಕರು ನೋಡಿದರೆ ಗುಳೆ ಸಂಸಾರದ ವ್ಯಕ್ತಿ, ‘ಹುಡುಗಾ ಸಾಯ್ತಾ ಅದೆ ಬನ್ನಿ ಬೇಗ’ ಎಂದು ಕರೆದರು. ನಿರೂಪಕರು ಗಮನಿಸಿದರೆ ತಾಯಿ ಮಗುವನ್ನು ಬಡಿಗೆ ತೆಗೆದುಕೊಂಡು ಹೊಡೆಯುತ್ತಿದ್ದಳು.

‘ಸಾಯಿ!ಸಾಯಿ! ಎಷ್ಟು ಹೊಡೆದರೂ ಸಾಯೋದಿಲ್ಲ ನೀನು. ಒಬ್ಬೊಬ್ಬರಾಗಿ ಸತ್ತು ಹೋಗಬಾರದೆ ನೀವೆಲ್ಲಾ …ನನ್ನ ಗೋಳಾಟ ತಪ್ಪೀತು’
ನಿರೂಪಕರ ತಾಯಿ ಆಕೆಯನ್ನು ತಡೆಯಲು ಹೋದಾಗ, ನೀವು ತಡೆಬಹುದು ಆದರೆ ಆ ಕೂಸಿನ ಹೊಟ್ಟೆಗೆ ಹಾಕುವುದು ಯಾರು ? ಎನ್ನುವ ಆಕೆಯ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ.

*****

‘ಅದಕ್ಕೆಂತಲೆ ಮೊನ್ನೆ ಗಾಡಿಯ ಕೆಳಕ್ಕಾದರು ಬಿದ್ದು ಸಾಯಲಿ ಅಂತ ಕಳಿಸಿದ್ದೆ ರಾತ್ರಿ ಹಗಲು ಹಾಲಿಗಾಗಿ ಜೀವ ಹಿಂಡುತ್ತದೆ. ಇನ್ನೂ ನಾಲ್ಕು ಕುನ್ನಿ ಇವೆ’ ಎನ್ನುವ ಆಕೆಯ ಮಾತುಗಳು ಎಕ್ ಸ್ಟ್ರೀಮ್ ಅನ್ನಿಸಿದರೂ ವಿಕಟ ನಗು ನೋವನ್ನು ಧ್ವನಿಸುತ್ತದೆ. ‘ಗಂಡ ಮಕ್ಕಳನ್ನು ಕೊಂದು ಯಾವ ನರಕಕ್ಕೆ ಹೋಗುತ್ತಿ’ ಎಂದಾಗ , ‘ನರಕಕ್ಕಾದರೂ ಹೋಗಬಹುದು ಈ ಕೆಟ್ಟ ಜಗತ್ತಿನಲ್ಲಿ ಇರಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾಳೆ. ಕಡೆಗೆ ಆಕ್ರೋಶದ ಭರದಲ್ಲಿ ಮಗುವನ್ನು ಎಸೆದು ಕೊಂದೇ ಬಿಡುತ್ತಾಳೆ. ಪೋಲಿಸರು ಬಂದು ಬಂಧಿಸಿದಾಗ ಸ್ತ್ರೀಯ ಕಣ್ಣುಗಳಲ್ಲಿ ಎಂಥ ಕಳೆ ಬಂದಿತ್ತು. ಜೀವದ ಛಾಯೆ ಎಷ್ಟು ಮಾತ್ರಕ್ಕೂ ಕಾಣಿಸುತ್ತಿರಲಿಲ್ಲ ಶವದ ಹಾಗೆ.

ಈ ಸಂದರ್ಭದಲ್ಲಿ ಜನಪದ ಕಾವ್ಯದಲ್ಲಿ ಬರುವ ‘ಮುಕ್ಕಣ್ಣ ಮಳೆ ಕರುಣಿಸೋ’ ಎಂಬ ಸಾಲುಗಳು ನೆನಪಾಗುತ್ತವೆ. ‘ಕಾರವಾನ್’ ಕತೆಯಲ್ಲಿ ಬಡತನದಿಂದ ದಗ್ದ ಹೆಂಗಸೂ ಕೂಡ ನರಕಕ್ಕೆ ಹೋದೇವು , ಅದರೆ ಅದಕ್ಕಿಂತ ರೌರವವಾದದ್ದು ಈ ಭೂಮಿಯ ಮೇಲಿನ ಬದುಕು ಎನ್ನುವುದೂ ಇದೇ ಸಿಟ್ಟನ್ನು ಹೊಂದಿದೆ. ಹೊಟ್ಟೆಗೆ ಅನ್ನವಿಲ್ಲದೆ ನಾರಿಯರು ಉಟ್ಟ ಸೀರೆ ಸೊಂಟದಲ್ಲಿ ನಿಲ್ಲುತ್ತಿಲ್ಲ,ಹಡೆದ ಬಾಣಂತಿಗೆ ತಿನ್ನಲು ಹಿಡಿ ಅನ್ನವಿಲ್ಲದೆ ಏರುತಾವೆ ಮೊಳ ಕೈಗೆ ಬಳೆ, ಮಕ್ಕಳನು ಮಾರುಂಡು ದುಃಖವನ್ನು ಪಡುತಾರೆ, ಮುಕ್ಕಣ್ಣ ಮಳೆ ಕರುಣಿಸೋ ಅನ್ನುವ ನಿರೀಕ್ಷೆಯ ಕೂಗು ಇಲ್ಲಿ ಬಲವಾಗಿದೆ.

‘ಮಕ್ಕಳಾ ಮಾರ್ಯಾರೆ ಮಳಿರಾಜ’ ಗೀತೆಯಲ್ಲಿ ಬರುವ ಸಾಲುಗಳನ್ನೂ ಇಲ್ಲಿ ಸೋದಾಹರಣವಾಗಿ ತೆಗೆದುಕೊಳ್ಳಬಹುದು.
ರೊಟ್ಟಿ ಗುಗ್ಗುರಿ ಬೇಡಿ ಶಿವಶಿವ
ಬೆಟ್ಟೊಂದು ಕಚ್ಚುತಾವೆ
ಮಕ್ಕಳ ಗೋಳನ್ನು ನೋಡಲಾರೆನೊ ಶಿವನೆ..

ನಿರೂಪಕರು ಪುನಃ ರೈಲಿನಲ್ಲಿ ಸಂಚರಿಸುವಾಗ ಮತ್ತದೇ ಮುಖಗಳು ಎದುರಾದ ಹಾಗೆ ಅನ್ನಿಸಿದವು. ದಾರಿದ್ರ್ಯ ದುರ್ಗತಿ ಒಂದೇ ನಾಣ್ಯದ ಎರಡು ಮುಖಗಳು ಅಲ್ಲವೆ!
“ಇದೋ! ಇಲ್ಲಿ ನಡೆದಿದೆ
ಬಾಳಿನ ಕಾರವಾನ್!
ಇಂದು ಇಲ್ಲಿ: ನಾಳೆ ಅಲ್ಲಿ!
ಸಾಗಿದೆ ಕಾರವಾನ್”
ಎಂಬ ಮಾತಿನೊಂದಿಗೆ ಕತೆಯನ್ನು ಮುಗಿಸುವ ಕಟ್ಟೀಮನಿಯವರು ದುಃಖದ ಕಾರವಾನ್ ಅನ್ನು ಕಟ್ಟಿದ್ದಾರೆ.