ಮೊದಲ ತಲೆಮಾರಿನ ಲೇಖಕಿಯರು ವಿಧವಾವಿವಾಹ, ಶೋಷಣೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ವಿಷಯಗಳನ್ನು ಕುರಿತು ಬಹಳ ದಿಟ್ಟವಾಗಿ ಬರೆದಿದ್ದರೂ ಸ್ತ್ರೀ ವ್ಯಕ್ತಿತ್ವವನ್ನು ಕೇವಲ ಶೋಷಣೆ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹೆಣ್ಣಿನ ಮಾದರಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಾದರೆ ಅವಳನ್ನು ಹೊಸದಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾಗುತ್ತದೆ ಎಂಬುದು  ಕೊಡಗಿನ ಗೌರಮ್ಮ ಅವರ ನಿಲುವಾಗಿತ್ತು. ಈ ಕಾರಣಕ್ಕಾಗಿ ಹೆಣ್ಣೊಬ್ಬಳು ಬದುಕಿದ, ಭಾವಿಸಿದ ಅನುಭವಗಳನ್ನು ಕುರಿತು ಬರೆದು ಅವರು, ತಮ್ಮ ವಾರಿಗೆಯ ಇತರ ಬರಹಗಾರರಿಗಿಂತ ಭಿನ್ನವಾಗಿ ಕಾಣಿಸುತ್ತಾರೆ.
ಸಿರಾಜ್ ಅಹ್ಮದ್ ಅಂಕಣದಲ್ಲಿ ಕೊಡಗಿನ ಗೌರಮ್ಮ ಸಾಹಿತ್ಯದ ಕುರಿತ ಬರಹ

 

ಸುಮಾರು ಎಂಟು ಒಂಬತ್ತು ದಶಕಗಳ ಇತಿಹಾಸವಿರುವ ಮಹಿಳಾ ಕಥಾಪರಂಪರೆಯಲ್ಲಿ ಕೊಡಗಿನ ಗೌರಮ್ಮ ಅವರದು ಬಹಳ ವಿಶಿಷ್ಟವಾದ ಹೆಸರು. ಕನ್ನಡದ ಮೊದಲ ಕಥಾಸಂಗ್ರಹ ‘ರಂಗವಲ್ಲಿ’ ೧೯೩೭ರಲ್ಲಿ ಪ್ರಕಟವಾಯಿತು. ಅದರಲ್ಲಿ ಪ್ರಕಟವಾದ ಮೊದಲ ಕತೆ ಕೊಡಗಿನ ಗೌರಮ್ಮ ಅವರದು. ಮೊದಲ ತಲೆಮಾರಿನ ಲೇಖಕಿಯರಾದ ತಿರುಮಲಾಂಬಾ, ಆರ್. ಕಲ್ಯಾಣಮ್ಮ, ಶ್ಯಾಮಲಾ ಬೆಳಗಾಂವಕರ್, ಸರಸ್ವತಿ ಬಾಯಿ ರಾಜವಾಡೆ ಮುಂತಾದ ಲೇಖಕಿಯರ ನಡುವೆ ಗೌರಮ್ಮ ಅವರು ಬಹಳ ಭಿನ್ನವಾಗಿ ಕಾಣುತ್ತಾರೆ. ಮೊದಲ ತಲೆಮಾರಿನ ಲೇಖಕಿಯರಲ್ಲಿ ವಿಧವಾವಿವಾಹ, ಸ್ತ್ರೀ ಸ್ವಾತಂತ್ರ್ಯ, ಶೋಷಣೆ ಮೊದಲಾದ ಸಾಮಾಜಿಕ ಸಮಸ್ಯೆಗಳ ಮೂಲಕ ಹೆಣ್ಣಿನ ಅಸ್ತಿತ್ವವನ್ನು ಶೋಧಿಸುವ ಪ್ರಯತ್ನವಿದ್ದರೆ ಗೌರಮ್ಮನವರು ಹೆಣ್ಣೊಬ್ಬಳು ಬದುಕಿದ, ಭಾವಿಸಿದ, ಸಂವೇದಿಸಿದ ಅನುಭವಗಳನ್ನೆಲ್ಲ ಮಿಳಿತಗೊಳಿಸಿ ಬರೆಯುವ ಕಾರಣಕ್ಕೆ ಬಹಳ ಭಿನ್ನವಾಗಿ ಕಾಣುತ್ತಾರೆ. ಮೊದಲ ತಲೆಮಾರಿನ ಲೇಖಕಿಯರು ವಿಧವಾವಿವಾಹ, ಶೋಷಣೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ವಿಷಯಗಳನ್ನು ಕುರಿತು ಬಹಳ ದಿಟ್ಟವಾಗಿ ಬರೆದಿದ್ದಾರೆ. ಹಾಗಿದ್ದರೂ ಸ್ತ್ರೀ ವ್ಯಕ್ತಿತ್ವವನ್ನು ಕೇವಲ ಶೋಷಣೆ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹೆಣ್ಣಿನ ಮಾದರಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಾಗುವುದಾದರೆ ಅವಳನ್ನು ಹೊಸದಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾಗುತ್ತದೆ. ಹೆಣ್ಣೊಬ್ಬಳು ಬದುಕಿದ ಭಾವಿಸಿದ ಅನುಭವಗಳನ್ನು ಕುರಿತು ಬರೆದ ಕಾರಣಕ್ಕಾಗಿ ತಮ್ಮ ವಾರಿಗೆಯ ಇತರ ಬರಹಗಾರರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಕೊಡಗಿನ ಗೌರಮ್ಮ(೧೯೧೨-೧೯೩೯) ಬರೆಯುವ ಕಾಲಕ್ಕೆ ಭಾರತೀಯ ಸಮಾಜದ ಮೇಲೆ ಆಧುನಿಕತೆಯ ನೆರಳುಗಳು ನಿಧಾನಕ್ಕೆ ಚಾಚಿಕೊಳ್ಳುತ್ತಿದ್ದವು. ಸ್ವತಃ ಗೌರಮ್ಮನವರು ಟೆನಿಸ್ ಆಡುತ್ತ, ಸ್ವಿಮ್ಮಿಂಗ್ ಮಾಡುತ್ತ ಆ ಕಾಲದ ಹಲವು ಲೇಖಕರೊಂದಿಗೆ ಪತ್ರ ವ್ಯವಹಾರ ಮಾಡುತ್ತ, ಜನಪದ ಹಾಡುಗಳನ್ನು ಸಂಗ್ರಹಿಸುತ್ತ, ಕುಮಾರವ್ಯಾಸ, ಉಮರ್ ಖಯ್ಯಾಮನನ್ನು ಓದುತ್ತ ಹಲವು ಬಗೆಗಳಲ್ಲಿ ಹೊಸತನಗಳಿಗೆ ತೆರೆದುಕೊಂಡಿದ್ದರು. ಗಾಂಧಿ ಹಾಗೂ ಗೌರಮ್ಮನವರ ಒಡನಾಟ ಈಗಾಗಲೇ ಇತಿಹಾಸ ಪ್ರಸಿದ್ಧವಾಗಿದೆ. ಅಂಥ ಗೌರಮ್ಮನವರು ತಾನು ಒಟ್ಟು ಬರೆದ ೨೧ ಕತೆಗಳಲ್ಲಿ “ಪುನರ್ ವಿವಾಹ”, “ಅಪರಾಧಿ ಯಾರು”, “ಹೋಗಿಯೇ ಬಿಟ್ಟಿದ್ದ” ಎಂಬ ಕತೆಗಳಲ್ಲಿ ಚಿತ್ರಿಸುವ ಹೆಣ್ಣಿನ ಚಿತ್ರಕ್ಕೂ “ವಾಣಿಯ ಸಮಸ್ಯೆ” ಎಂಬ ಕತೆಯಲ್ಲಿ ಕಾಣಿಸುವ ಹೆಣ್ಣಿನ ಚಿತ್ರಣಕ್ಕೂ ದೊಡ್ಡ ವ್ಯತ್ಯಾಸವಿದೆ. ಜಿ ಎಸ್ ಆಮೂರರು ೧೯೯೯ ರಲ್ಲಿ ಸ್ತ್ರೀ ಕಥಾ ಸಾಹಿತ್ಯದ ಪರಂಪರೆಯನ್ನು ಸೃಷ್ಟಿಸುವ ಕಾರಣಕ್ಕಾಗಿ ಶ್ಯಾಮಲಾ ದೇವಿ ಬೆಳಗಾಂವಕರ್ ಅವರಿಂದ ಆರಂಭಿಸಿ ನೇಮಿಚಂದ್ರ, ನಾಗವೇಣಿಯವರವರೆಗೆ ಒಟ್ಟು ನಾಲ್ಕು ತಲೆಮಾರಿನ ಲೇಖಕಿಯರ ಕಥೆಗಳನ್ನು ಒಗ್ಗೂಡಿಸಿ “ಅವಳ ಕತೆಗಳು” ಎಂಬ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ಗೌರಮ್ಮನವರ “ವಾಣಿಯ ಸಮಸ್ಯೆ” ಕತೆಯನ್ನು ಅವರ ಪ್ರಾತಿನಿಧಿಕ ಕತೆಯಾಗಿ ಆರಿಸಿಕೊಳ್ಳಲಾಗಿದೆ.

ಗೌರಮ್ಮನವರ “ಪುನರ್ ವಿವಾಹ” ಕತೆಯಲ್ಲಿ ವಿಧವಾ ವಿವಾಹವನ್ನು ಕ್ರಾಂತಿಕಾರಕವಾಗಿ ಪ್ರತಿಪಾದಿಸುವ, ಅದಕ್ಕೆ ವಿರುದ್ಧವಾಗಿರುವ ಗಂಡಸರನ್ನು ಉಗ್ರವಾಗಿ ಟೀಕಿಸುವ ಚಿತ್ರಣವಿದೆ. “ಅಪರಾಧಿ ಯಾರು” ಎಂಬ ಕತೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮುಸ್ಲಿಮಳಾಗುವ ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಪ್ರಯತ್ನವಿದೆ. “ಹೋಗಿಯೇ ಬಿಟ್ಟಿದ್ದ” ಕತೆಯಲ್ಲಿ ಹಿಂದೂ ಮುಸ್ಲಿಮ್ ಧರ್ಮಗಳಿಗೆ ಸೇರಿದ ಹೆಣ್ಣು ಗಂಡಿನ ಪ್ರೀತಿಯ ಸಂಕಟಗಳನ್ನು ಹೇಳುವ ವಿವರಗಳಿವೆ. ಈ ಎಲ್ಲ ಕತೆಗಳು ಹಲವು ಸಾಮಾಜಿಕ ಕಾರಣಗಳಿಗಾಗಿ, ಭಿನ್ನ ಸಾಮಾಜಿಕ ಸಂದರ್ಭಗಳಲ್ಲಿ ಹೆಣ್ಣಿನ ಅಸ್ತಿತ್ವವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಮುಖ್ಯವಾಗಿವೆ. ಆದರೆ “ವಾಣಿಯ ಸಮಸ್ಯೆ” ಕತೆಯಲ್ಲಿ ಮೂರು ಪಾತ್ರಗಳ ನಡುವೆ ನಡೆಯುವ ಸಾಂಸಾರಿಕ-ನೈತಿಕ ಹೊಯ್ದಾಟಗಳ ಬಿಕ್ಕಟ್ಟುಗಳ ನಡುವೆ ಸ್ಫುಟಗೊಳ್ಳುವ ಹೆಣ್ಣಿನ ವ್ಯಕ್ತಿತ್ವ ಹಾಗೂ ಆಕೆಯ ಸ್ವತಂತ್ರ ಚಿಂತನೆಯನ್ನು ತೋರಿಸುವ ಕಾರಣಕ್ಕಾಗಿ ಗಮನ ಸೆಳೆಯುತ್ತದೆ.

ವಾಣಿ, ರತ್ನ ಹಾಗೂ ಇಂದು ಎಂಬ ಮೂರು ಪಾತ್ರಗಳ ಸುತ್ತ ಹೆಣೆದಿರುವ ಈ ಕತೆಯಲ್ಲಿ ಇಂದು ಬಾಲವಿಧವೆಯಾಗಿದ್ದಾಳೆ. ಇಂದುವಿನ ನೆರೆಮನೆಗೆ ವಾಸಕ್ಕೆ ಬಂದ ವಾಣಿ ಹಾಗೂ ಅವಳ ಗಂಡ ಡಾ. ರತ್ನ ಬಹಳ ಬೇಗ ಒಳ್ಳೆಯ ಗೆಳೆಯರಾಗುತ್ತಾರೆ. ಆದರೆ ವಾಣಿಯ ಬೇಜವಾಬ್ದಾರಿತನ, ಆಲಸಿ ಮನೋಭಾವದ ಕಾರಣದಿಂದ ನಿಧಾನಕ್ಕೆ ಇಂದು ಹಾಗೂ ವಾಣಿಯ ಗಂಡ ಡಾ.ರತ್ನ ಆಕರ್ಷಣೆಗೆ ಒಳಗಾಗುತ್ತಾರೆ. ಕತೆಯ ಮಹತ್ವ ಇರುವುದು ಇಂದುವಿನ ಪಾತ್ರ ಇಂಥ ಸಂದರ್ಭದಲ್ಲಿ ತನ್ನೆಲ್ಲ ಒಂಟಿತನ, ಹತಾಶೆ, ಆಕರ್ಷಣೆ, ಸ್ವಾತಂತ್ರ್ಯ ಮತ್ತು ನೈತಿಕತೆಯ ಸವಾಲುಗಳನ್ನು ಎಷ್ಟು ಸಂಕೀರ್ಣವಾಗಿ ನಿಭಾಯಿಸುತ್ತದೆ ಎಂಬ ಕಾರಣಕ್ಕಾಗಿ.

ಸ್ವತಃ ಗೌರಮ್ಮನವರು ಟೆನಿಸ್ ಆಡುತ್ತ, ಸ್ವಿಮ್ಮಿಂಗ್ ಮಾಡುತ್ತ ಆ ಕಾಲದ ಹಲವು ಲೇಖಕರೊಂದಿಗೆ ಪತ್ರ ವ್ಯವಹಾರ ಮಾಡುತ್ತ, ಜನಪದ ಹಾಡುಗಳನ್ನು ಸಂಗ್ರಹಿಸುತ್ತ, ಕುಮಾರವ್ಯಾಸ, ಉಮರ್ ಖಯ್ಯಾಮನನ್ನು ಓದುತ್ತ ಹಲವು ಬಗೆಗಳಲ್ಲಿ ಹೊಸತನಗಳಿಗೆ ತೆರೆದುಕೊಂಡಿದ್ದರು.

ಹಾಗೆ ನೋಡಿದರೆ ಇಂದು ಎಷ್ಟು ಒಂಟಿಯಾಗಿ, ಹತಾಶಳಾಗಿದ್ದಾರೆ ಎಂದರೆ “ವಾಣಿ ಬರುವವರೆಗೆ ತೃಪ್ತವಾಗಿ ಸಂತೋಷವಾಗಿದ್ದ ಅವಳ ಬದುಕು ಪಕ್ಕದ ಮನೆಗೆ ಬಂದ ಗಂಡಹೆಂಡಿರನ್ನು ಕಂಡು” ಅವಳೊಳಗಿನ ಖಾಲಿತನ ಹೆಚ್ಚಾಗುತ್ತದೆ. ಅಲ್ಲಿಯವರೆಗೆ ಇಂದು ಗಂಡನಿಲ್ಲದಿದ್ದರೂ ಸ್ವತಂತ್ರವಾಗಿ ತನ್ನಷ್ಟಕ್ಕೆ ತಾನು ಬದುಕುತ್ತ, ತನ್ನ ಮನೆಗೂ ನೆರೆಮನೆಗೂ ಬೇಲಿಯನ್ನು ಕಟ್ಟಿಸಿಕೊಳ್ಳಬೇಕು ಎಂಬ ಯೋಚನೆಯನ್ನೂ ಮಾಡದೆ, ಇನ್ನೊಬ್ಬರ ಸಹಾಯವನ್ನೂ ಸ್ನೇಹವನ್ನೂ ಕೋರುವುದಕ್ಕೂ ಸಂಕೋಚಪಡುತ್ತ ತನ್ನ ಪಾಡಿಗೆ ತಾನು ಬದುಕಿದ್ದಳು. ಅಂಥವಳಿಗೆ ನೆರೆಮನೆಗೆ ವಾಸಕ್ಕೆ ಬಂದ ವಾಣಿ ಹಾಗೂ ರತ್ನಳ ನಡುವಿನ ಸಂಸಾರದ ನಡುವಿನ ಬಿರುಕು, ಗಂಡ ಹೆಂಡಿರ ನಡುವಿನ ಸಣ್ಣ ಅಸಂತೃಪ್ತಿಯನ್ನು ನೋಡಿ ಮೊದಮೊದಲು ಸಂತೋಷವಾದರೂ ನಂತರ ತನ್ನೊಳಗೆ ಮೊಳೆಯುತ್ತಿರುವ ನೀಚತನವನ್ನು ಕಂಡು ನಾಚಿಕೆಯಾಗಿದೆ. ತನ್ನೊಳಗೆ ತೀವ್ರವಾಗುತ್ತಿರುವ ಕಾಮನೆಗಳ ಉತ್ಕಟತೆ ಹಾಗೂ ನಿಗೂಢ ಪ್ರವಾಹ ಇಂದುವಿನ ಸ್ವಸಂಪೂರ್ಣ ಜಗತ್ತನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಇನ್ನೊಂದು ತುದಿಯಲ್ಲಿ ಡಾ.ರತ್ನನಿಗೆ ವಾಣಿಯಂಥ ಬೇಜವಾಬ್ದಾರಿ ಹೆಂಡತಿಯನ್ನು ಮರೆತು ಇಂದುವನ್ನು ಕಂಡು ಹಲುಬುವುದು ಅಸಹಜವಾಗಿ ಕಾಣುವುದಿಲ್ಲ. ವಿಶೇಷವೆಂದರೆ ವಾಣಿ ಬೇಜವಾಬ್ದಾರಿ ಹೆಣ್ಣಾದರೂ ಅಷ್ಟೇ ಮುಗ್ಧಳೂ ನಿಸ್ಪೃಹಳೂ ಆಗಿದ್ದಾಳೆ. ಅವಳಿಗೆ ಇಂದು ಮತ್ತು ತನ್ನ ಗಂಡ ರತ್ನನ ನಡುವೆ ಸದ್ದಿಲ್ಲದೆ ಮೊಳೆಯುತ್ತಿರುವ ಆಕರ್ಷಣೆಯ ತೀವ್ರತೆಯ ಪರಿವೆಯೇ ಇಲ್ಲ. ಇದನ್ನೆಲ್ಲ ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯಿಲ್ಲದ ಅವಳು ತಾನು ಊರಲ್ಲಿಲ್ಲದ ಹೊತ್ತಿನಲ್ಲಿ ನಮ್ಮ ಮನೆಯನ್ನು ನೋಡಿಕೋ ಎಂದು ಹೇಳಿ ಡಾ.ರತ್ನ ಹಾಗೂ ಇಂದು ಇನ್ನಷ್ಟು ಹತ್ತಿರವಾಗುವ ಸುಸಂದರ್ಭವನ್ನು ಕಲ್ಪಿಸುತ್ತಾಳೆ. ಗೌರಮ್ಮನವರ ಶಕ್ತಿ ಇರುವುದು ಇಂಥ ಸೂಕ್ಷ್ಮವಾದ ನೈತಿಕ ಬಿಕ್ಕಟ್ಟಿನ ಗಳಿಗೆಯಲ್ಲಿ, ಹೊಸ ಅಯ್ಕೆಗಳ ಸಂದಿಗ್ಧದ ನಡುವಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಇಂದುವಿನ ಪಾತ್ರವನ್ನು ಎಷ್ಟು ಉಜ್ವಲವಾಗಿ ಮತ್ತು ಎಷ್ಟು ಆಳವಾದ ನೈತಿಕ ಎಚ್ಚರದಿಂದ ರೂಪಿಸುತ್ತಾರೆ ಎನ್ನುವಲ್ಲಿ.

ವಾಣಿ ಇಲ್ಲದ ಸಂದರ್ಭದಲ್ಲಿ ರತ್ನ ಇಂದುವನ್ನು “ಹೇಗಿದ್ದೀಯಾ ಇಂದಿರಾ?” ಎಂದು ಕೇಳಿದಾಗ ಮೊದಲ ಬಾರಿಗೆ ತನ್ನ ಹೆಸರನ್ನು ಅವನ ಬಾಯಲ್ಲಿ ಪೂರ್ತಿಯಾಗಿ ಕೇಳಿ ರೋಮಾಂಚನಕ್ಕೆ ಒಳಗಾಗುತ್ತಾಳೆ. ಬಾವಿಯಲ್ಲಿ ನೀರು ಸೇದುತ್ತಿರುವ ಇಂದುಗೆ ಅದು ಅವಳ ಕಾಮನೆ ಹಂಬಲ ಆಕಾಂಕ್ಷೆಗಳು ಪರಾಕಾಷ್ಟೆ ತಲುಪಿದ ಕ್ಷಣ. ಅಂಥ ತೀವ್ರ ಆಕರ್ಷಣೆಯ ಕ್ಷಣದಲ್ಲೂ ನೈತಿಕ ಎಚ್ಚರವನ್ನು ಮೀರದ ಪಾತ್ರವನ್ನಾಗಿ ಗೌರಮ್ಮನವರು ಇಂದುವನ್ನು ಚಿತ್ರಿಸಿರುವುದು ಅವರ ಪ್ರಬುದ್ಧ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. “ಹೇಗಿದ್ದೀಯಾ ಇಂದಿರಾ?” ಎಂಬ ಪ್ರಶ್ನೆಯಿಂದ ರೋಮಾಂಚಿತಳಾಗುವ ಇಂದು ಮರುಕ್ಷಣವೇ ಬಾವಿಯಿಂದ ಸೇದಿದ್ದ ತುಂಬಿದ ನೀರಿನ ಕೊಡವನ್ನು ಹಾಗೇ ಬಿಟ್ಟು ಒಳಗೆ ಓಡುತ್ತಾಳೆ, ಮರುದಿನ ಅವನು ಕಳಿಸಿದ ಪ್ರೇಮಪತ್ರವನ್ನು ಒಲೆಗೆ ಹಾಕಿ ತಾನು ಇದುವರೆಗೆ ಕಟ್ಟಿಕೊಂಡಿದ್ದ ಸ್ವತಂತ್ರ ಸ್ವಯಂಪೂರ್ಣ ಲೋಕದಿಂದ ದೂರಾಗಿ ಯಾರಿಗೂ ಹೇಳದೆ ಕೇಳದೆ ಊರು ಬಿಟ್ಟು ಕಣ್ಮರೆಯಾಗಿಬಿಡುತ್ತಾಳೆ. ಕೆಲವು ದಿನಗಳ ನಂತರ ಊರಿಗೆ ವಾಪಸಾಗುವ ವಾಣಿಗೆ ಇಂದುವಿನ ಮನೆಗೆ ಬೀಗ ಹಾಕಿದ್ದು ನೋಡಿ ಆಶ್ಚರ್ಯವಾಗುತ್ತದೆ. ತನ್ನವರು ಎಂಬುವವರು ಅವಳಿಗೆ ಯಾರೂ ಇರಲಿಲ್ಲ. ಇದ್ದರೂ ಆಕೆ ಯಾವತ್ತೂ ಅವರ ಬಳಿ ಹೋಗಬೇಕು ಎನ್ನುತ್ತಿರಲಿಲ್ಲ. ಇಂಥ ಇಂದು ಯಾರಿಗೂ ಏನೂ ಹೇಳದೇ ಕಣ್ಮರೆಯಾಗಿದ್ದು ವಾಣಿಗೆ ಸಮಸ್ಯೆಯಾಗಿಯೇ ಉಳಿಯುತ್ತದೆ.

ಗೌರಮ್ಮನವರ ವಿಶಿಷ್ಟತೆ ಇರುವುದು ಇಂದುವಿನ ಪಾತ್ರವನ್ನು ಹೊಸ ಆಕರ್ಷಣೆ ಹೊಸ ಆಯ್ಕೆಗಳ ಹೊಸ ಸಖ್ಯಗಳ ನಡುವಲ್ಲಿ ಆಳವಾದ ನೈತಿಕ ಎಚ್ಚರ ಹಾಗೂ ಸ್ವತಂತ್ರ ಚಿಂತನೆಯ ವ್ಯಕ್ತಿತ್ವವನ್ನಾಗಿ ಚಿತ್ರಿಸುವಲ್ಲಿ. ಅದರಲ್ಲೂ ಗೌರಮ್ಮನವರು ಇಂದುವಿನ ಭಾವಲೋಕದಲ್ಲಿ ಉಂಟಾಗುತ್ತಿರುವ ಉತ್ಪಾತಗಳನ್ನು ನಿರ್ಲಿಪ್ತವಾಗಿ ದಾಖಲಿಸುವುದು ಅವರ ಗ್ರಹಿಕೆಯ ಸೂಕ್ಷ್ಮತೆಗೆ ಉದಾಹರಣೆಯಾಗಿದೆ. ಮೊದಲಬಾರಿಗೆ ರತ್ನ ಅವಳನ್ನು ಇಂದಿರಾ ಎಂದು ಬಾಯ್ತುಂಬ ಕರೆಯುವುದು ಅವಳನ್ನು ಒಂದು ಕ್ಷಣ ವಿಚಲಿತಗೊಳಿಸಿಬಿಡುತ್ತದೆ. ಅವಳು ಕಾಮನೆಗಳ ಪ್ರವಾಹಕ್ಕೆ ಸಿಕ್ಕಿಯೂ ತನ್ನ ನೈತಿಕ ಎಚ್ಚರವನ್ನು ಕಾಯ್ದುಕೊಳ್ಳುವ ಕ್ಷಣವೂ ಬಹಳ ಸೂಕ್ಷ್ಮವಾಗಿ ನಿರೂಪಿತವಾಗಿದೆ. ಅವಳು ತನ್ನ ಕಾಮನೆಗಳಿಂದ ತುಂಬಿದ ಕೊಡವನ್ನು ಹಾಗೆಯೇ ಬಿಟ್ಟು ಹೋಗುವುದು ಬಹಳ ಸೂಚ್ಯವಾಗಿ ದಾಖಲಾಗಿದೆ. “ರತ್ನನ ಬಾಯಿಂದ ಹೊರಟ ಮಾತ್ರಕ್ಕೆ ತನ್ನ ಹೆಸರಿನಲ್ಲಾದ ಬದಲಾವಣೆ ಅವಳ ಮುಖವನ್ನರಳಿಸಿತು. ಕಣ್ಣುಗಳು ಹೃದಯದ ಗುಟ್ಟುಗಳನ್ನೆಲ್ಲಾ ಹೊರಗೆಡವಿ ಅವನ ಮುಖವನ್ನು ನೋಡಿದವು. ರತ್ನನ ಕಣ್ಣುಗಳೂ ಮನದ ಭಾವನೆಗಳನ್ನು ಮುಚ್ಚಿಟ್ಟುಕೊಂಡಿರಲಿಲ್ಲ. ಅವನ ಆ ನೋಟವೇ ಭೂಮಿಯಿಂದ ಮೇಲಕ್ಕೆ ಹೋಗಿದ್ದ ಇಂದುವನ್ನು ಧರೆಗಿಳಿಸಿ ಮರೆತಿದ್ದ ಕರ್ತವ್ಯವನ್ನು ಜಾಗೃತಿಗೊಳಿಸಿದ್ದು. ಮರುಕ್ಷಣ ಸೇದಿದ್ದ ನೀರನ್ನು ಸಹ ತೆಗೆದುಕೊಳ್ಳದೆ ಒಳಗೆ ಹೋಗಿಬಿಟ್ಟಳು. ರತ್ನ ಬಹಳ ಹೊತ್ತು ಅಲ್ಲೇ ನಿಂತಿದ್ದರೂ ಪುನಃ ಅವಳು ಹೊರಗೆ ಬರಲಿಲ್ಲ”.

ಬೇಂದ್ರೆಯವರು ಗೌರಮ್ಮನವರ ಕಥಾಸಂಗ್ರಹಕ್ಕೆ ಮುನ್ನುಡಿಯನ್ನು ಬರೆಯುತ್ತಾ ಗೌರಮ್ಮನವರನ್ನು “ಕಟುಮಧುರ ಕತೆಗಾರ್ತಿ” ಎಂದು ಕರೆದಿದ್ದಾರೆ. ಅದಕ್ಕಿಂತ ಮುಖ್ಯವಾಗಿ “ವಾಣಿಯ ಸಮಸ್ಯೆ”ಯಂಥ ಕತೆಗಳನ್ನು ಗಮನಿಸಿ ಗೌರಮ್ಮನವರಲ್ಲಿ ಇರುವ ಸಹಭಾವ ಬಹಳ ಪರಿಣಾಮಕಾರಿಯಾದದ್ದು ಎನುತ್ತಾರೆ. ಈ ಸಹಭಾವ, ಸಹಚಿಂತನೆಯ ಕಾರಣದಿಂದಲೇ ಇಂದು ವಾಣಿಯ ಸಂಸಾರದಲ್ಲಿ ಆಗಬಹುದಾದ ದುರಂತವನ್ನು ತಪ್ಪಿಸುತ್ತಾಳೆ.