ಅವಳ…
ಇಪ್ಪತ್ತೆಂಟು ಮೊಳದ ಸೀರೆಯಂಚಿನ
ಸೊಂಟದ ಕೆಳಭಾಗಕ್ಕೆ
ಈಗಲೂ ಮೂರೇ ಸೆರಗು
ಮಡಿಚಿಡದಂತೆ ತೊಡುತ್ತಾಳೆ
ಎರಡು ತೋಳಿಗೆ
ಹದಿನೆಂಟು ಬಣ್ಣದ ರವಿಕೆ
ಸಡಿಲವಾಗದಂತೆ
ಹಾಕಲಾಗಿದೆ
ಹೊಳೆವ ಬೆನ್ನಿನ ಹಿಂಭಾಗಕ್ಕೆ
ಎಂಟಿಂಚಿನ ಹೊಲಿಗೆ..!
ಆದರೇನು ಬಂತು ಸುಖ?
ಈಗವಳು ಹಣ್ಣುಮುದುಕಿ
ಇದ್ದ ಹದಿನಾರರ ಹರೆಯವನ್ನೆಲ್ಲಾ
ಮನೆಯೊಳಗಿನ
ಖದೀಮರೇ ಮೆದ್ದು
ಅವರಿವರ
ಮೂತಿಗೆ ಒರೆಸಲು
ಜೊತೆಯಾದರು
ಅತಿಥಿ ಮಹಾಶಯರು
ಸೂರೆಗೂಂಡರು
ತಣಿಯದೆ ಇದ್ದಾಗ
ಖಡ್ಗವಿಡಿದು ಬಂದ
ಸಾಲು ಮಿಂಡರು
ತಟ್ಟಿದರು ಕದವ
ಸರದಿಯಂತೆ ಒಬ್ಬರಾದ ಮೇಲೆ
ಮತ್ತೊಬ್ಬರು
ಮುಕ್ಕಿದರು…ತೇಗಿದರು…
ಅಂಗಾಂಗಳ ಮೇಲೆ ಹೊರಳಿ
ನಿತಂಬ ತೊಡೆಗಳ ನಡುವೆ ಸ್ಖಲಿಸಿ
ವಿಜಯಧ್ವಜ ನೆಟ್ಟು ಬೀಗಿದರು..!
ಪಾಪದ ಮಕ್ಕಳು
ಅವ್ವನ ನಿರಂತರ ಅತ್ಯಾಚಾರಕ್ಕೆ
ಮರುಗಿದರು
ಸಿಡಿಲಮರಿಗಳಂತಾದರು
ಸೆಡ್ಡು ಹೊಡೆದರು
ವೀರಾವೇಶದಲ್ಲಿ
ಬಲಿಗಲ್ಲ ಮೇಲೆ ನಿಂತು
ತಮ್ಮನ್ನೇ ತಾವು ಅರ್ಪಿಸಿಕೊಂಡ
ನೆತ್ತರಿನ ಹೋರಾಟದ ಚರಿತ್ರೆಗೆ
ಕಳಚಿ ಬಿದ್ದವು
ತಾಯಿಯ ಸಂಕೋಲೆ..!
ನಿರಾಳವಾದಳು
ಅರೆ ಘಳಿಗೆ..
ತನ್ನ ಬಲಿಷ್ಠಮಕ್ಕಳ ಮಡಿಲಿನಲ್ಲಿ ಎನ್ನುವಾಗಲೇ
ಇಂಚಿಂಚಾಗಿ ಚಿವುಟಲೊರಟ
ತಾಯ್ಗಂಡ ಮಕ್ಕಳು
ಬತ್ತಿದ ಮೊಲೆಗಳಿಗೆ
ಎಡತಾಕುತ್ತಾ
ಹೊಕ್ಕುಳ ಕೆಳಗೆ
ಬೆರಳು ತೂರಿಸುತ್ತಾ
ಜಗತ್ತಿಗೆ
ಮಾತೃಪ್ರೇಮದ ಪಾಠ
ಹೇಳುತ್ತಿದ್ದಾರೆ..!
ನಾವೋ…
ಮಹಾತಾಯ ಗರ್ಭದಲ್ಲಿ
ಎಂದೋ ಉದುರಿ ಬಿದ್ದು
ಅವಳ ನಿರ್ಲಕ್ಷ್ಯಕ್ಕೆ ಒಳಪಟ್ಟ
ಅಸ್ಪೃಶ್ಯ ಮಕ್ಕಳು
ಮುಟ್ಟಲಾರೆವು
ಅವಳ ಮೊಲೆ ಹಾಲನ್ನು
ಎಲ್ಲರಂತೆ ಆಡಲಾಗದ
ಎಲ್ಲರಂತೆ ಕುಣಿಯಲಾಗದ
ಧರೆಯ ಹೆಳವರು
ಭೂತ ವರ್ತಮಾನದ ಹಾದಿ
ಅನಾದಿಗಳನ್ನು ಕಾಣದೆ
ಭವಿಷ್ಯದ ಹೆಜ್ಜೆ ಗುರುತುಗಳನ್ನು
ಮೂಡಿಸಲು
ಅಜ್ಜ ಬಿಟ್ಟು ಹೋದ
ಊರುಗೋಲನ್ನೇ ನಂಬಿ
ಕುಂತಲ್ಲೇ ಕೂತಿದ್ದೇವೆ…!
ಹಣ್ಣುಮುದುಕಿ
ಇಪ್ಪತ್ತೆಂಟು ಮೊಳದ ಸೀರೆಯ ಭಾರಕ್ಕೆ
ಚೀರುತ್ತಾಳೆ..!
ನಿತ್ರಾಣಗೊಂಡಂತೆ ಕನವರಿಸುತ್ತಾಳೆ
ಮುದ್ದು ಮಕ್ಕಳು
ಸುಲಭಕ್ಕೆ ಬಿಡಲಾರರು
ಅಸ್ಥಿಪಂಜರದ ಗೂಡನ್ನಿಡಿದು
ತೊಡಿಸುತ್ತಾರೆ
ಐಕ್ಯತೆಯ ತೂಗುಯ್ಯಾಲೆಯಲ್ಲಿ
ಕೀಲಿ ಗೊಂಬೆಗಳಿಂದ
ಏಕತೆಯ ಹಾಡು ಹಾಡಿಸುತ್ತಾ
ನಡುಗುವ
ಅವಳ ಎರಡು ತೋಳಿಗೆ
ಹದಿನೆಂಟು ಬಣ್ಣದ ರವಿಕೆಯನ್ನು
ಕೊಂಚ ಕೂಡ ಜಾರದಂತೆ
ಹಾಕುತ್ತಾರೆ
ದೇಶಭಕ್ತಿಯ ಜಾಣ ಮುದ್ರೆಯೊಂದಿಗೆ
ಮತ್ತೆ… ಮತ್ತೆ..
ಅದೇ ಎಂಟಿಂಚಿನ ಹೊಲಿಗೆ…!