ಬಂದೂಕಿನ ನಳಿಕೆಯಲ್ಲಿ ಹೂವು ಅರಳುವುದಿಲ್ಲ

ಬಂದೂಕಿನ ನಳಿಕೆಯಲ್ಲಿ ಹೂವು ಅರಳುವುದಿಲ್ಲ
ಗುರಿಯಿಟ್ಟ ಗುಂಡು ಎದೆಗೂಡನ್ನು ಸೀಳಿ
ಛಿದ್ರಗೊಂಡ ಹೃದಯದ ಕನಸುಗಳ
ಮೆರವಣಿಗೆಯಲ್ಲಿ ಧರ್ಮಾಂಧನ ಕೇಕೆ.

ಬೇಲಿಯ ಹೂವಾದ, ಬುರ್ಖಾದೊಳಗೆ
ಅಡಗಿಸಿಟ್ಟ ಒಡಲ ಕುಡಿಯ ಮುಗ್ಧತೆ!
ಮದ್ದುಗುಂಡುಗಳ ಮೊರೆತದ ನಡುವೆ
ಛೇದಿಸಿದ ಸುಕೋಮಲ ದೇಹದ ನೋವಿನ
ಆರ್ತನಾದ!
ಬಾಗಿದ ಬೆನ್ನುಗಳ ಮೇಲೆ ಬೀಸಿದ ಚಾಟಿಯ
ಏಟಿಗೆ ಮೂಡಿದ ಹೆಪ್ಪುಗಟ್ಟಿದ ಮೂರಾಬಟ್ಟೆಯಾದ ಬದುಕು.

ತಂಪೆರೆಯುವ ಮಳೆಯ ಹನಿ ನಿಮ್ಮ
ಮನಸ್ಸನ್ನು ಹದಗೊಳಿಸಿಲ್ಲವೇಕೆ?
ಹೋಗಲಿ ಬೋರ್ಗರೆಯುತ್ತಿರುವ ಪ್ರವಾಹದ
ರಭಸಕ್ಕಾಗದರೂ ಮೈಮನಸ್ಸಿನ ಕ್ರೌರ್ಯ
ಕೊಚ್ಚಿ ಹೋಗುವುದಿಲ್ಲವೇಕೆ?
ಬಂದೂಕಿನ ಪಂಜರದಲ್ಲಿ ಗುಬ್ಬಚ್ಚಿ ಗೂಡು ಕಟ್ಟುವುದಿಲ್ಲ, ಒಲುಮೆಯ ಕಿಡಿ ಬೆಳಗುವುದಿಲ್ಲ.

ಪ್ರೀತಿಯ ಗರಿಮೆಯಾಗಬೇಕು
ಬೇಲಿಯ ಹೂಗಳು ಮುಕ್ತವಾಗಬೇಕು
ಸದ್ದಿಲ್ಲದೆ ಕರಗಿದ ದೇಹದ ಆರ್ತನಾದ
ಹೆಪ್ಪುಗಟ್ಟಿದ ಬೆನ್ನಿನಲ್ಲಿ ಚಿಗುರಬೇಕು
ನೆಮ್ಮದಿಯ ಬದುಕು

ನೆಲಕ್ಕೆ ಬಿದ್ದ ಬಿಸಿರಕ್ತದ ಮಣ್ಣಲ್ಲಿ
ಶಾಂತಿಯ ಮಂತ್ರ ಮೊಳಗಬೇಕು!
ಎಲ್ಲಿರುವೆಯೋ ಶಾಂತದೂತ?
ಕಂಗೆಟ್ಟು ಚಾಚಿ ನಿಂತಿವೆ ಕೈಗಳು
ನಿನ್ನ ಬಿಸಿಅಪ್ಪುಗೆಯ ಕನವರಿಕೆಯಲ್ಲಿ!

ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರದವರಾದ ಸುಷ್ಮಾ ರಾಘವೇಂದ್ರ ಪ್ರಸ್ತುತ ಮೈಸೂರು ನಿವಾಸಿ
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಪ್ರಥಮ ದರ್ಜೆ ಸಹಾಯಕಳಾಗಿ ಸರ್ಕಾರಿ ಸೇವೆಯಲ್ಲಿದ್ದಾರೆ
ಬರವಣಿಗೆ ಇವರ ಹವ್ಯಾಸ.