ಭಾಷಣ ಸ್ಪರ್ಧೆಯ ದಿನ ಬಂದಿತು. ಹೈಸ್ಕೂಲು ಕಟ್ಟಡದ ಹಿಂದಿನ ಗೋಡೆಯ ಮೇಲೆ ಹೋಗಿ ಕುಳಿತೆ. ಗೋಡೆ ಜಿಗಿದು ಸಭಾಭವನಕ್ಕೆ ಹೋಗಬೇಕೆಂದರೆ ಧೈರ್ಯ ಸಾಲದು. ಹಾಫ್ ಪ್ಯಾಂಟ್ ಹರಿದಿತ್ತು. ಷರ್ಟ್ ಗಲೀಜಾಗಿತ್ತು. ಕ್ಷೌರಿಕರಿಗೆ ಕೊಡಲಿಕ್ಕೆ ಹಣವಿಲ್ಲದ್ದಕ್ಕಾಗಿ ಕೂದಲು ಬೆಳೆದಿತ್ತು. ಕೊಬ್ಬರಿ ಎಣ್ಣೆ ಇಲ್ಲದ್ದಕ್ಕಾಗಿ ಕೂದಲು ಒಣಗಿದ್ದರಿಂದ ಕಾಡು ಮನುಷ್ಯನ ಹಾಗೆ ಕಾಣುತ್ತಿದ್ದೆ. ಭಾಷಣ ಮಾಡುವ ಸ್ಫೂರ್ತಿಗೆ ಪೂರಕವಾಗಿರುವಂಥ ಯಾವುದೂ ಇರಲಿಲ್ಲ. ಇಡೀ ವಾತಾವರಣವೇ ಹಾಗಿತ್ತು. ಮಾರ್ಗದರ್ಶಿಗಳೂ ಇಲ್ಲದೆ ಅನಾಥಪ್ರಜ್ಞೆ ಕಾಡುತ್ತಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 63ನೇ ಕಂತು ನಿಮ್ಮ ಓದಿಗೆ

ಎಸ್.ಎಸ್. ಹೈಸ್ಕೂಲಿನಲ್ಲಿ ಗಣೇಶ ಚತುರ್ಥಿ ವೇಳೆ ಗಣಪತಿ ಕೂಡಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸುತ್ತಿದ್ದರು. ನಾನು ಎಂಟನೆಯ ಇಯತ್ತೆಗೆ ಹೈಸ್ಕೂಲ್ ಸೇರಿದ ವರ್ಷವೇ ಭಾಷಣ ಸ್ಪರ್ಧೆಗೆ ಹೆಸರು ಕೊಟ್ಟೆ. ಅದಾವುದೋ ವಿಷಯ ಕೊಟ್ಟಿದ್ದರು. ನಿರಕ್ಷರಿ ತಂದೆ ತಾಯಿಗಳಿಗೆ ಕೇಳುವ ಹಾಗಿಲ್ಲ. ಓಣಿಯಲ್ಲಿ ಗೊತ್ತಿದ್ದವರೆಲ್ಲ ‘ಢ’ ಕಂಪನಿ. ಗಣಪತಿ ಮಾಮಾ (ಪ್ರೊ. ಜಿ.ಬಿ. ಸಜ್ಜನ) ಅವರಿಗೆ ಕೇಳುವ ಧೈರ್ಯವಿಲ್ಲ. ಹಾಗೂ ಹೀಗೂ ವಿಷಯ ಸಂಗ್ರಹಿಸಿದೆ. ಬಾಯಿಪಾಠ ಮಾಡಿದೆ. ಆದರೆ ಸ್ಟೇಜ್ ಹತ್ತಿ ಮೈಕ್ ಮುಂದೆ ನಿಂತು ಮಾತನಾಡುವ ಕಲ್ಪನೆ ಮಾಡುತ್ತಿದ್ದಂತೆ ಬೆವರುತ್ತಿದ್ದೆ.

ಭಾಷಣ ಸ್ಪರ್ಧೆಯ ದಿನ ಬಂದಿತು. ಹೈಸ್ಕೂಲು ಕಟ್ಟಡದ ಹಿಂದಿನ ಗೋಡೆಯ ಮೇಲೆ ಹೋಗಿ ಕುಳಿತೆ. ಗೋಡೆ ಜಿಗಿದು ಸಭಾಭವನಕ್ಕೆ ಹೋಗಬೇಕೆಂದರೆ ಧೈರ್ಯ ಸಾಲದು. ಹಾಫ್ ಪ್ಯಾಂಟ್ ಹರಿದಿತ್ತು. ಷರ್ಟ್ ಗಲೀಜಾಗಿತ್ತು. ಕ್ಷೌರಿಕರಿಗೆ ಕೊಡಲಿಕ್ಕೆ ಹಣವಿಲ್ಲದ್ದಕ್ಕಾಗಿ ಕೂದಲು ಬೆಳೆದಿತ್ತು. ಕೊಬ್ಬರಿ ಎಣ್ಣೆ ಇಲ್ಲದ್ದಕ್ಕಾಗಿ ಕೂದಲು ಒಣಗಿದ್ದರಿಂದ ಕಾಡು ಮನುಷ್ಯನ ಹಾಗೆ ಕಾಣುತ್ತಿದ್ದೆ. ಭಾಷಣ ಮಾಡುವ ಸ್ಫೂರ್ತಿಗೆ ಪೂರಕವಾಗಿರುವಂಥ ಯಾವುದೂ ಇರಲಿಲ್ಲ. ಇಡೀ ವಾತಾವರಣವೇ ಹಾಗಿತ್ತು. ಮಾರ್ಗದರ್ಶಿಗಳೂ ಇಲ್ಲದೆ ಅನಾಥಪ್ರಜ್ಞೆ ಕಾಡುತ್ತಿತ್ತು. ಅಂಥದರಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ಅಧ್ಯಾಪಕರೊಬ್ಬರು ನನ್ನ ಹೆಸರನ್ನು ಪದೆ ಪದೆ ಕೂಗುತ್ತಿದ್ದರು. ನಾನೊಬ್ಬನೇ ಹೋಗದೆ ಇದ್ದವ ಎಂಬುದು ಖಾತ್ರಿಯಾಯಿತು. ಕೊನೆಯ ಅವಕಾಶವೆಂದು ಕಾರ್ಯಕ್ರಮ ನಿರ್ವಾಹಕರು ಮತ್ತೆ ನನ್ನ ಹೆಸರು ಕೂಗಿದರು. ನಾನು ಬೇಸರ, ನಿರಾಶೆ, ಒಂದು ರೀತಿಯ ಅವಮಾನ ಮತ್ತು ಅಸಹಾಯಕತೆಯಿಂದ ಗೋಡೆಯಿಂದ ಹೊರಗಡೆ ಜಿಗಿದು ಮನೆ ಸೇರಿದೆ.

ಏಳನೆಯ ಇಯತ್ತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಭಾಗವಹಿಸುತ್ತಿದ್ದ ನನಗೆ ಹೀಗೇಕಾಯಿತು ಎಂಬ ಚಿಂತೆ ಕಾಡತೊಡಗಿತು. ನಾನು ಬಡವ, ನನಗೆ ಹೇಳಿಕೊಡುವವರು ಯಾರೂ ಇಲ್ಲ, ನನ್ನ ಬಟ್ಟೆಬರೆಗಳು ಅಪಮಾನಕರವಾದುವು ಮುಂತಾದ ಪ್ರಜ್ಞೆಯೆ ನನಗೆ ಹೀಗೆ ಅಸಹಾಯಕನನ್ನಾಗಿಸಿರಬಹುದೆ ಎಂದು ಮುಂತಾಗಿ ಯೋಚಿಸಿದೆ. ಏಕೆಂದರೆ ಇಂಥ ವಾತಾವರಣ ಪ್ರಾಥಮಿಕ ಶಾಲೆಯಲ್ಲಿ ಇರಲಿಲ್ಲ. ‘ನಾವು ಹೇಗೆ ಇದ್ದೇವೆ’ ಎಂಬ ಪರಿವೆಯೆ ಇರಲಿಲ್ಲ. ಬಡತನ ಮತ್ತು ಶ್ರೀಮಂತಿಕೆ ಯಾವ ಲೆಕ್ಕದಲ್ಲೂ ಇರಲಿಲ್ಲ. ವಿದ್ಯಾರ್ಥಿಗಳ ಮಧ್ಯೆ ಇವೆಲ್ಲ ಲೆಕ್ಕಕ್ಕೆ ಬಾರದವುಗಳಾಗಿದ್ದವು.

ಹೈಸ್ಕೂಲಿನ ವಾತಾವರಣ ಬೇರೆಯಾಗಿತ್ತು. ಅದಕ್ಕೆ ಅದರದೇ ಆದ ಶಿಸ್ತು ಮತ್ತು ವಿವಿಧ ಪ್ರಾಥಮಿಕ ಶಾಲೆಗಳಿಂದ ಬಂದ ವಿದ್ಯಾರ್ಥಿ ಸಮೂಹದ ಮಧ್ಯೆ ಪರಕೀಯತೆಯ ಭಾವ ಮೂಡಿರಲು ಸಾಕು. ಅದೇನೇ ಇದ್ದರೂ ‘ನನ್ನ ಬದುಕಿನಲ್ಲಿ ಯಾವುದೂ ಸರಿ ಇಲ್ಲʼ ಎಂಬ ಹತಾಶ ಭಾವ ಮೂಡಿತು. ಚೆನ್ನಾಗಿ ಕಲಿಯುವುದೊಂದೇ ನನ್ನ ಮುಂದಿದ್ದ ಸವಾಲಾಗಿತ್ತು. ಇಂಥ ಸಂದರ್ಭದಲ್ಲಿ ನನ್ನ ಗಣಿತ ಪ್ರತಿಭೆ ನನ್ನಲ್ಲಿ ಹೊಸ ಚೈತನ್ಯ ಮೂಡಿಸಿತು. ಸ್ವಲ್ಪ ದಿನ ಕಳೆದ ಮೇಲೆ ನನ್ನ ಸಹಪಾಠಿಗಳು ನನ್ನೆಡೆಗೆ ಸುಳಿಯತೊಡಗಿದರು. ‘ವಿದ್ಯೆಯನ್ನು ಪಡೆಯುವುದು ಮತ್ತು ಕೊಡುವುದೇ’ ನಿಜವಾದ ಶ್ರೀಮಂತಿಕೆ ಎಂಬ ಭಾವ ಮೂಡಿತು.

ಇದಾದ ನಂತರ ನಾನು ಭಾಷಣದ ಗೋಜಿಗೆ ಹೋಗಲಿಲ್ಲ. ಮುಂದೆ ಎಸ್.ಬಿ. ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಎರಡನೇ ವರ್ಷದಲ್ಲಿ ಇದ್ದಾಗ ಬಾಂಗ್ಲಾ ಯುದ್ಧ ತಾರಕ್ಕೇರಿತ್ತು. ಪೂರ್ವ ಪಾಕಿಸ್ತಾನದಲ್ಲಿ ಪಶ್ಚಿಮ ಪಾಕಿಸ್ತಾನದ ದಬ್ಬಾಳಿಕೆ ಹೆಚ್ಚಾಗಿತ್ತು. ಭಾರತದ ಆಚೆ ಈಚೆ ಈ ದೇಶ ಇಬ್ಭಾಗವಾಗಿ ಜಗತ್ತಿನಲ್ಲೇ ವಿಶಿಷ್ಟ ದೇಶವಾಗಿತ್ತು. ಎರಡೂ ಪ್ರದೇಶಗಳಲ್ಲಿ ಮುಸ್ಲಿಮರೇ ಜಾಸ್ತಿ ಇದ್ದರೂ ಸಾಂಸ್ಕೃತಿಕವಾಗಿ ವಿಭಿನ್ನವಾಗಿದ್ದರು. ಪೂರ್ವ ಪಾಕಿಸ್ತಾನದ ಪ್ರಜೆಗಳು ಬಂಗಾಲಿ ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿದವರು. ರವೀಂದ್ರನಾಥ ಟಾಗೋರ್, ಖಾಜಿ ನಜ್ರುಲ್ ಇಸ್ಲಾಮರಂಥ ಪ್ರಜಾಪ್ರಭುತ್ವವಾಗಿ ಮತ್ತು ಕ್ರಾಂತಿಕಾರಿ ಕವಿಗಳ ಪ್ರಭಾವದಲ್ಲಿ ಬೆಳೆದವರು. ಪಶ್ಚಿಮ ಪಾಕಿಸ್ತಾನದ ಉರ್ದು ಭಾಷೆ ಮತ್ತು ಜೀವನವಿಧಾನದ ಹೇರುವಿಕೆಯನ್ನು ಪೂರ್ವ ಪಾಕಿಸ್ತಾನದ ಬಂಗಾಲಿ ಮುಸ್ಲಿಮರು ಇಷ್ಟಪಡಲಿಲ್ಲ. ಸ್ವತಂತ್ರ ದೇಶದ ಕನಸು ಕಂಡರು. ಶೇಖ್ ಮುಜಿಬುರ್ ರಹಮಾನ್ ಅವರಂಥ ಪ್ರಜಾಪ್ರಭುತ್ವವಾದಿ ನಾಯಕರ ವ್ಯಕ್ತಿತ್ವ ಅವರ ಮೇಲೆ ಭಾರಿ ಪ್ರಭಾವ ಬೀರಿತು. ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. ಇದೆಲ್ಲ ಬಿಟಿಷರಿಂದ ಸ್ವಾತಂತ್ರ್ಯ ಪಡೆದ ಎರಡು ದಶಕ ದಾಟುವುದರೊಳಗಾಗಿ ಪ್ರಾರಂಭವಾಯಿತು. ಪಶ್ಚಿಮ ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಪ್ರಜೆಗಳ ಮೇಲೆ ಹಿಂಸೆ, ಕೊಲೆ ಮತ್ತು ಅತ್ಯಾಚಾರ ಮಾಡಿದರು. ಪೂರ್ವ ಪಾಕಿಸ್ತಾನ ಹೋಗಿ “ಆಮಾರ್ ಸೋನಾರ್ ಬಾಂಗ್ಲಾ” ಘೋಷಣೆ ಮೊಳಗಿತು. ಪೂರ್ವ ಪಾಕಿಸ್ತಾನಕ್ಕೆ “ಬಾಂಗ್ಲಾ ದೇಶ” ಎಂದು ಕರೆಯಲಾಯಿತು. 1971ರ ಮಾರ್ಚ್ 7 ರಂದು ಶೇಖ್ ಮುಜಿಬುರ್ ರಹಮಾನ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಿದರು. ಬಾಂಗ್ಲಾ ನಾಗರಿಕರು ಭಾರಿ ಪ್ರಮಾಣದಲ್ಲಿ ಸ್ಪಂದಿಸಿದರು. ‘ಮುಕಿಬಾಹಿನಿ’ ಹೆಸರಿನಲ್ಲಿ ಜನತಾ ಸೈನ್ಯ ಸಿದ್ಧವಾಯಿತು.

1971ನೇ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಾಜಿ ಸೈನ್ಯಾಧಿಕಾರಿ ಹಾಗೂ ಮುಜಿಬುರ್ ರಹಮಾನರ ನಂಬಿಗಸ್ತ ಮುಹಮ್ಮದ್ ಅತಾವುಲ್ ಗೋನಿ ಒಸ್ಮಾನಿ ಮುಕ್ತಿಬಾಹಿನಿಯ ನಾಯಕತ್ವ ವಹಿಸಿದರು. ಅವರ ಅಪ್ರತಿಮ ನಾಯಕತ್ವದಲ್ಲಿ ಪಾಕಿಸ್ತಾನ ಸೈನಿಕರ ವಿರುದ್ಧ ಬಾಂಗ್ಲಾ ಪ್ರಜೆಗಳ ಗೆರಿಲ್ಲಾ ಯುದ್ಧ ಪ್ರಾರಂಭವಾಯಿತು. ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮುಕ್ತಿಬಾಹಿನಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸೈನ್ಯದ ಸಹಾಯ ಒದಗಿಸಿದರು. ಏತನ್ಮಧ್ಯೆ ಡಿಸೆಂಬರ್ 1971ರಲ್ಲಿ ಭಾರತ ಪಾಕಿಸ್ತಾನ ಮಧ್ಯೆ ಮೂರನೇ ಯುದ್ಧ ಪ್ರಾರಂಭವಾಯಿತು. ಕೊನೆಗೂ ಬಾಂಗ್ಲಾದೇಶ 1971ನೇ ಡಿಸೆಂಬರ್ 16ರಂದು ವಿಜಯ ಸಾಧಿಸಿತು. ಅಂದೇ ಪಾಕಿಸ್ತಾನ ಸೈನಿಕರ ಶರಣಾಗತಿ ಪ್ರಾರಂಭವಾಯಿತು.

ಈ ಮುಕ್ತಿಬಾಹಿನಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಬೆಂಬಲ ವ್ಯಕ್ತಪಡಿಸಿದ್ದರ ಪರ ಮತ್ತು ವಿರುದ್ಧ ಚರ್ಚಾಕೂಟವನ್ನು ರಾಜಕೀಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಕಲ್ಯಾಣಪ್ಪಗೋಳ ಅವರು ಏರ್ಪಡಿಸಿದ್ದರು. ನಾನು ಬೆಂಬಲದ ಪರ ಮಾತನಾಡಲು ಹೆಸರು ಬರೆಸಿದ್ದೆ. ಸ್ವತಃ ಕಲ್ಯಾಣಪ್ಪಗೋಳ ಈ ಬೆಂಬಲಕ್ಕೆ ವಿರುದ್ಧವಾಗಿದ್ದರು. ಅವರು ರಾಜಕೀಯಶಾಸ್ತ್ರದ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಮಧ್ಯೆ ಜನಪ್ರಿಯರಾಗಿದ್ದರು. ಪ್ರೊ. ಎ.ಎಸ್. ಹಿಪ್ಪರಗಿ ಅವರಿಂದಾಗಿ ಕನ್ನಡ ವಿಭಾಗದಲ್ಲಿ ಬಿ.ಎ. ಎರಡನೇ ವರ್ಷದಲ್ಲಿ 120 ವಿದ್ಯಾರ್ಥಿಗಳು ನನ್ನ ಸಹಪಾಠಿಗಳಾಗಿದ್ದರು. ಅದೇ ವರ್ಷದ ರಾಜಕೀಯಶಾಸ್ತ್ರ ವಿಭಾಗದಲ್ಲಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಎರಡನೆಯ ಸ್ಥಾನದಲ್ಲಿತ್ತು. ಹೀಗೆ ಆ ಕಲ್ಯಾಣಪ್ಪಗೋಳ ಸರ್ ಇಂದಾಗಿ ರಾಜಕೀಯಶಾಸ್ತ್ರ ವಿಭಾಗ ಕೂಡ ಪ್ರಸಿದ್ಧವಾಗಿತ್ತು.

ಅಂತೂ ಚರ್ಚಾಸ್ಪರ್ಧೆಯ ದಿನ ಬಂದಿತು. ಬಲಪಂಥೀಯ ಚಿಂತನೆಯ ಕಲ್ಯಾಣಪ್ಪಗೋಳ ಸರ್, ಎಡಪಂಥೀಯ ಚಿಂತಕನಾದ ನನ್ನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಶಕ್ಯವಾಗಿರಲಿಲ್ಲ. ಅಷ್ಟೊತ್ತಿಗಾಗಲೇ ನಾನು ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದ ಉತ್ಸಾಹದಲ್ಲಿದ್ದೆ. ಬಹಳಷ್ಟು ಸಭೆಗಳಲ್ಲಿ ಭಾಗವಹಿಸಿದ್ದೆ. ಪಕ್ಷದ ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೆ. ಆ ದಿನಗಳು ನನ್ನ ರಾಜಕೀಯ ಪ್ರಜ್ಞೆಯ ಅವಿಸ್ಮರಣೀಯ ದಿನಗಳಾಗಿದ್ದವು. ದೇಶಮಟ್ಟದ ಪಕ್ಷದ ನಾಯಕರ ಭಾಷಣ ಕೇಳಿದ ಅನುಭವ ನನ್ನನ್ನು ಬಹಳ ಗಟ್ಟಿಗೊಳಿಸಿತ್ತು. ಬಡತನದ ಎಲ್ಲ ನೋವು ಮತ್ತು ಅಪಮಾನಗಳನ್ನು ಅದುಮಿ ನಿಲ್ಲುವಂಥ ಶಕ್ತಿಯನ್ನು ನಾನು ಕಮ್ಯುನಿಸ್ಟ್ ಪಾರ್ಟಿ ಮತ್ತು ಅದರ ತತ್ತ್ವಜ್ಞಾನದಿಂದ ಪಡೆದಿದ್ದೆ.

(ಶೇಖ್ ಮುಜಿಬುರ್ ರಹಮಾನ್)

ಚರ್ಚಾಸ್ಪರ್ಧೆಯಲ್ಲಿ ಮೊದಲಿಗೆ ಪ್ರೊ. ಕಲ್ಯಾಣಪ್ಪಗೋಳ ಅವರು ಮುಕ್ತಿಬಾಹಿನಿಗೆ ಭಾರತ ಸರ್ಕಾರ ನೀಡಿದ ಬೆಂಬಲವನ್ನು ವಿರೋಧಿಸಿ ಮಾತನಾಡಿದರು. ಕಿಕ್ಕಿರಿದು ತುಂಬಿದ ಆ ಸಭೆಯಲ್ಲಿ ಅವರ ಬಿ.ಎ. ಎರಡು ಮತ್ತು ಮೂರನೇ ವಿಭಾಗದ ವಿದ್ಯಾರ್ಥಿಗಳು ಹೆಚ್ಚಾಗಿದ್ದರು. ಅವರ ಮಾತಿಗೆ ಆ ವಿದ್ಯಾರ್ಥಿಗಳೆಲ್ಲ ರೋಮಾಂಚನಗೊಂಡಿದ್ದರು.

ಶೇಖ್ ಮುಜಿಬುರ್ ರಹಮಾನರ ಮಹಾನ್ ವ್ಯಕ್ತಿತ್ವ ನನ್ನ ಮೇಲೆ ಬಹಳ ಪ್ರಭಾವ ಬೀರಿತ್ತು. ಪಾಕಿಸ್ತಾನದ ಸೈನಿಕರು ಬಾಂಗ್ಲಾದೇಶದ ಸಹಸ್ರಾರು ಯುವತಿಯರ ಮೇಲೆ ಮಾಡಿದ ಅತ್ಯಾಚಾರ ಹಾಗೂ ಅವರಲ್ಲಿನ ಬಹಪಾಲು ಯುವತಿಯರು ಗರ್ಭಿಣಿಯಾದ ಸುದ್ದಿ ನನ್ನನ್ನು ಧೃತಿಗೆಡಿಸಿತ್ತು. ‘ಸೈನ್ಯಕ್ಕೆ ಧರ್ಮವಿಲ್ಲʼ ಎಂಬುದು ಮನವರಿಕೆಯಾಯಿತು. ಧರ್ಮವೊಂದು ಎಷ್ಟೇ ಮುಖ್ಯವಾಗಿದ್ದರೂ ಭಾಷೆ ಮತ್ತು ಸಂಸ್ಕೃತಿಯ ವ್ಯಾತ್ಯಾಸಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ತನ್ನ ಅನುಯಾಯಿಗಳನ್ನು ಒಂದಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಅರಿವಾಯಿತು. ನಾನು ಬಹಳ ಸ್ಫೂರ್ತಿಯಿಂದ ಕಲ್ಯಾಣಪ್ಪಗೋಳ ಸರ್ ಅವರ ಮಾತನ್ನು ಖಂಡಿಸಿ ಮಾತು ಪ್ರಾರಂಭಿಸುವುದರೊಳಗೆ ಅವರ ಶಿಷ್ಯವೃಂದ ಬಹಳ ಜೋರಾಗಿ ಚೀರಾಡುತ್ತ ಮಾತನಾಡಲು ಬಿಡಲಿಲ್ಲ.

ವರ್ಗಪ್ರಜ್ಞೆ, ಅನ್ಯಾಯದ ವಿರುದ್ಧ ಹೋರಾಟ, ಶೋಷಣೆಯ ಕ್ರೌರ್ಯ ಮುಂತಾದವುಗಳ ಪ್ರಜ್ಞೆ ಇಲ್ಲದ ಯುವಕರಿಗೆ ತಿಳಿಹೇಳುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ವೇದಿಕೆಯಿಂದ ಕೆಳಗಿಳಿಯಬೇಕಾಯಿತು. ಆದರೆ ಅಂದೇ ಸಂಜೆ ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷ, ಇಂದಿರಾ ಗಾಂಧಿ ಅವರು ಮುಕ್ತಿಬಾಹಿನಿಗೆ ಬೆಂಬಲ ನೀಡಿದ್ದ ಕ್ರಮವನ್ನು ಬೆಂಬಲಿಸಿ ವಿಜಾಪುರದ ಗಾಂಧಿ ಚೌಕ್ ಬಳಿ ಇರುವ ರೇಡಿಯೋ ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದೆ. ಅದು ನನ್ನ ಮೊದಲ ಸಾರ್ವಜನಿಕ ಭಾಷಣವಾಗಿತ್ತು. ಜನ ಅಷ್ಟೇನೂ ಸೇರದೆ ಇದ್ದರೂ ನನ್ನ ಪಾಲಿನ ಯಶಸ್ವಿ ಸಭೆ ಅದಾಗಿತ್ತು.

ತದನಂತರ ನಾನು 1974ರಲ್ಲಿ ಎಂ.ಎ. ಓದಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಾಗ ಇತರ ಸಂಗಾತಿಗಳ ಜೊತೆ ಸೇರಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎ.ಐ.ಎಸ್.ಎಫ್) ಪ್ರಾರಂಭಿಸಿದೆ. ಆಗ ಅನೇಕ ವಿದ್ಯಾರ್ಥಿಗಳು ಈ ವಿಚಾರಧಾರೆಗೆ ಸ್ಪಂದಿಸಿದರು. ಅದಾಗಲೇ ಸಿ.ಪಿ.ಎಂ ಕಾಮ್ರೇಡ್ ವಿ.ಎನ್. ಹಳಕಟ್ಟಿ ಮುಂತಾದವರು ಎಸ್.ಎಫ್.ಐ. ವಿದ್ಯಾರ್ಥಿ ಸಂಘಟನೆಯನ್ನು ಸುವ್ಯವಸ್ಥಿತವಾಗಿ ಪ್ರಾರಂಭಿಸಿದ್ದರು. ನಾವೆಲ್ಲ ಕೂಡಿಯೆ ಸಭೆ ಸೇರುತ್ತಿದ್ದೆವು ಮತ್ತು ಚಳವಳಿ ಮಾಡುತ್ತಿದ್ದೆವು.

ಈ ಸಂದರ್ಭದಲ್ಲಿ ದಾವಣಗೆರೆಯ ಸಿ.ಪಿ.ಐ. ನಾಯಕ ಕಾಮ್ರೇಡ್ ಪಂಪಾಪತಿ ಅವರ ಸಂಪರ್ಕ ಬಂದಿತು. ದಾವಣಗೆರೆ ಮತ್ತು ಹರಿಹರಗಳಲ್ಲಿ ಮೇ ದಿನಾಚರಣೆ ಸಂದರ್ಭದಲ್ಲಿ ಕ್ರಾಂತಿಕಾರಿ ಕವನ ಓದುವ ಮತ್ತು ಹತ್ತಾರು ಸಹಸ್ರ ಕಾರ್ಮಿಕರನ್ನು ಉದ್ದೇಶಿಸಿ ಶೋಷಣೆಯ ವಿರುದ್ಧ ಮಾತನಾಡುವ ಸಂದರ್ಭ ಅವಿಸ್ಮರಣೀಯವಾಯಿತು. ಕಾಮ್ರೇಡ್ ಪಂಪಾಪತಿಯವರು ಶಕ್ತಿಶಾಲಿ ನಾಯಕರಾಗಿದ್ದಂತೆ ದೊಡ್ಡ ಮನುಷ್ಯರೂ ಆಗಿದ್ದರು. ನಮ್ಮಂಥ ಯುವಕರ ಮಾತುಗಳನ್ನು ಲಕ್ಷ್ಯಗೊಟ್ಟು ಕೇಳುತ್ತಿದ್ದರು. ಅವರಲ್ಲಿ ನ್ಯಾಷನಲ್ ಪ್ಯಾನಾಸೋನಿಕ್ ಕಂಪನಿಯ ರೇಡಿಯೋ ಕಂ ಟೇಪ್ ರೆಕಾರ್ಡರ್ (ಟು ಇನ್ ಒನ್) ಇತ್ತು. ಅವರು ನನ್ನ ಮೇ ದಿನಾಚರಣೆಯ ಭಾಷಣವನ್ನು ಟೇಪ್ ಮಾಡಿಕೊಂಡಿದ್ದರು.

ಶಾಸಕರ ಭವನದಲ್ಲಿನ ಅವರ ಕೋಣೆಗೆ ಹೋದಾಗ, ಅವರು ಟೇಪ್ ಹಚ್ಚಿ ನನ್ನ ಭಾಷಣ ಕೇಳುತ್ತಿದ್ದರು. ‘ಒಬ್ಬ ಮಹಾನ್ ನಾಯಕನ ದೊಡ್ಡ ಗುಣ ಅದು’ ಎಂದು ಅಂದುಕೊಂಡು ಹೃದಯ ತುಂಬಿ ಬಂತು. ಆಗ ಅವರಿಗೆ ಅಲೆಂಡೆಯವರ ಕೊನೆಯ ಭಾಷಣದ ಕುರಿತು ಹೇಳಿದೆ.

1973ನೇ ಸೆಪ್ಟೆಂಬರ್ 11ರಂದು ಚಿಲಿ ದೇಶದ ಮಹಾದಂಡನಾಯಕ ಅಗೊಸ್ತೊ ಫಿನೊಷೆ ಅಮೆರಿಕದ ನೆರವಿನೊಂದಿಗೆ ರಾಜಧಾನಿ ಸ್ಯಾಂಟಿಯಾಗೊದಲ್ಲಿನ ರಾಷ್ಟ್ರಪತಿ ಭವನ ‘ಲಾ ಮೊನೆದಾ’ ಮೇಲೆ ಬಾಂಬ್ ದಾಳಿ ಮಾಡಿ, ಚಿಲಿಯ ಮೊದಲ ಚುನಾಯಿತ ಸಮಾಜವಾದಿ ಸರ್ಕಾರದ ರಾಷ್ಟ್ರಪತಿ ಸಾಲ್ವಡೊರ್ ಅಲೆಂಡೆ ಅವರನ್ನು ಕೊಲೆ ಮಾಡಿದ. ಅವರ ಪಾಪ್ಯುಲರ್ ಯೂನಿಟಿ ಸರ್ಕಾರವನ್ನು ಉರುಳಿಸಿ 17 ವರ್ಷಗಳ ವರಗೆ ಸರ್ವಾಧಿಕಾರಿಯಾದ.

(ಸಾಲ್ವಡೊರ್ ಅಲೆಂಡೆ)

ಹೈಸ್ಕೂಲಿನ ವಾತಾವರಣ ಬೇರೆಯಾಗಿತ್ತು. ಅದಕ್ಕೆ ಅದರದೇ ಆದ ಶಿಸ್ತು ಮತ್ತು ವಿವಿಧ ಪ್ರಾಥಮಿಕ ಶಾಲೆಗಳಿಂದ ಬಂದ ವಿದ್ಯಾರ್ಥಿ ಸಮೂಹದ ಮಧ್ಯೆ ಪರಕೀಯತೆಯ ಭಾವ ಮೂಡಿರಲು ಸಾಕು. ಅದೇನೇ ಇದ್ದರೂ ‘ನನ್ನ ಬದುಕಿನಲ್ಲಿ ಯಾವುದೂ ಸರಿ ಇಲ್ಲʼ ಎಂಬ ಹತಾಶ ಭಾವ ಮೂಡಿತು. ಚೆನ್ನಾಗಿ ಕಲಿಯುವುದೊಂದೇ ನನ್ನ ಮುಂದಿದ್ದ ಸವಾಲಾಗಿತ್ತು.

ಅಮೆರಿಕದ ಬಹುರಾಷ್ಟ್ರೀಯ ಬಂಡವಾಳಗಾರರ ಹಿಡಿತದಲ್ಲಿದ್ದ ಚಿಲಿಯ ತಾಮ್ರದ ಗಣಿಗಳನ್ನು ಅಲೆಂಡೆ ಅವರು ಯಾವುದೇ ಪರಿಹಾರ ನೀಡದೆ ರಾಷ್ಟ್ರೀಕರಣಗೊಳಿಸಿದ್ದು ಐತಿಹಾಸಿಕವಾಗಿತ್ತು. ಜನತೆಯ ಹೋರಾಟಗಳ ಮಧ್ಯೆ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಅಲೆಂಡೆ ಅವರಿಗೆ ಜನತೆಯ ಆಶೋತ್ತರಗಳಿಗೆ ಬಾಯಿಯಾಗುವುದು ಸಹಜವಾಗಿತ್ತು.

ಜನರನ್ನು ಪ್ರೀತಿಸುವುದು ಎಂದರೆ ಸುಲಿಗೆಯನ್ನು ವಿರೋಧಿಸುವುದು ಎಂದೇ ಅರ್ಥ. ತಮ್ಮ ಜನರನ್ನು ನಿಜವಾಗಿ ಪ್ರೀತಿಸುವ ಬಡ ರಾಷ್ಟ್ರಗಳ ಕವಿಗಳನ್ನು ಮತ್ತು ನಾಯಕರನ್ನು ಸಾಮ್ರಾಜ್ಯಶಾಹಿಗಳು ಎಂದೂ ಸಹಿಸುವುದಿಲ್ಲ. ಈ ಅಪರಾಧಕ್ಕಾಗಿಯೆ ಪಾಬ್ಲೊ ನೆರೂದಾ ಮತ್ತು ಅವರ ಮಿತ್ರ ಅಲೆಂಡೆ ಅವರು ಬಲಿಯಾಗಬೇಕಾಯಿತು. ಅಲೆಂಡೆ ಅವರ ಕೊಲೆಯಾದ 12 ದಿನಗಳ ನಂತರ ಅಂದರೆ 1971ನೇ ಸೆಪ್ಟೆಂಬರ್ 23ರಂದು ನೆರೂದಾ ಅವರು ನಿಗೂಢವಾಗಿ ನಿಧನರಾದರು.

ಅಲೆಂಡೆ ಅವರು ಬಾಂಬ್ ದಾಳಿಗೆ ಈಡಾಗುವ ಮೊದಲು, ಅಮೆರಿಕದ ಸಾಮ್ರಾಜ್ಯಶಾಹಿಯ ನೆರವಿನಿಂದ ಮಿಲಿಟರಿ ದುಷ್ಟಕೂಟದ ಫ್ಯಾಸಿಸ್ಟರು ಚಿಲಿಯ ಗಲ್ಲಿಗಳಲ್ಲೆಲ್ಲ ನೆತ್ತರು ಹರಿಸಿದ್ದರು. ಮಿಲಿಟರಿ ಪಿತೂರಿ ಮತ್ತು ಬರ್ಬರ ಪ್ರತಿಕ್ರಾಂತಿಯಿಂದ ಕಂಡಕಂಡಲ್ಲೆಲ್ಲ ಕೊಲೆಗಳಾದವು. ಹೆಂಗಳೆಯರ ಅವಿರತ ಮಾನಭಂಗ ನಡೆಯಿತು. ಕೊಲೆಗಡುಕರು ಅನೇಕ ಕಡೆ ಹೆಣಗಳನ್ನೆಲ್ಲ ಬೀದಿಯ ಮೇಲೆ ಬಿಟ್ಟು, ‘ಇದು ಪಾಠ’ ಎಂದು ಹೇಳುತ್ತಿದ್ದರು. ಇದು ಫ್ಯಾಸಿಸ್ಟರ ಶಿಕ್ಷಣ ವೈಖರಿ!

ಇಂಥ ಪರಿಸ್ಥಿತಿಯಲ್ಲೂ ಶಾಂತಿಯ ಪ್ರತಿಪಾದಕರಾದ ಚಿಲಿಯ ರಾಷ್ಟ್ರಪತಿ ಸಾಲ್ವಡೊರ್ ಅಲೆಂಡೆ ಎದೆಗುಂದಲಿಲ್ಲ. ಹೇಡಿಯಂತೆ
‘ಮೊನೆದಾ’ ಬಿಟ್ಟು ಓಡಿಹೋಗಲಿಲ್ಲ. ಜನರಲ್ಲಿ ಏಕತೆ ಮತ್ತು ಪ್ರತಿಭಟನಾ ಶಕ್ತಿ ತುಂಬಲು ಪ್ರಯತ್ನಿಸಿದರು. ಬಾಂಬ್ ದಾಳಿಗೀಡಾದ ರಾಷ್ಟ್ರಪತಿ ಭವನದಲ್ಲೇ ಉಳಿದರು. ಆದರೆ ಯುದ್ಧನಿಪುಣರಲ್ಲದ ಸಂಗಾತಿಗಳನ್ನೆಲ್ಲ ಹೊರಗೆ ಕಳುಹಿಸಿದರು. ನಂತರ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಮಗಳು ಇಸಾಬೆಲ್ ಧ್ವನಿಮುದ್ರಣ ಮಾಡಿಕೊಂಡು ಮೊನೆದಾದಿಂದ ಹೊರಬಂದರು. ಕೊನೆಗೆ ರಾಷ್ಟ್ರಪತಿ ಭವನ ‘ಲಾ ಮೊನೆದಾ’ ಮೇಲೆ ಮುಂದುವರಿದ ಬಾಂಬ್ ದಾಳಿಯಲ್ಲಿ ಅಲೆಂಡೆ ಹುತಾತ್ಮರಾದರು.

ಸೇನಾಧಿಕಾರಕ್ಕೆ ತುತ್ತಾದಾಗ ಚಿಲಿಯ ಜನಸಂಖ್ಯೆ ಒಂದು ಕೋಟಿಯಷ್ಟಿತ್ತು. ಸರ್ವಾಧಿಕಾರ ಸ್ಥಾಪಿತವಾದ ಮೊದಲ ಆರು ತಿಂಗಳಲ್ಲೇ ಮೂವತ್ತು ಸಾವಿರ ಪ್ರಜಾಪ್ರಭುತ್ವವಾದಿಗಳ ಕೊಲೆ ಮಾಡಲಾಯಿತು. ಒಂದೂವರೆ ಲಕ್ಷ ಮಂದಿಯನ್ನು ಜೈಲಿಗೆ ತಳ್ಳಲಾಯಿತು. ರಾಜಕೀಯ ಮತ್ತು ಆರ್ಥಿಕ ಒತ್ತಡಗಳಿಂದಾಗಿ ಚಿಲಿಯ ಐದು ಲಕ್ಷ ಜನರು ದೇಶ ಬಿಟ್ಟು ಹೋಗುವಂಥ ಪರಿಸ್ಥಿತಿ ಉಂಟಾಯಿತು.

ಬಾಂಬ ದಾಳಿಗೀಡಾಗಿ ಹುತಾತ್ಮರಾಗುವುದಕ್ಕೆ ಸ್ವಲ್ಪ ಮುಂಚೆ ಸಾಲ್ವಡೊರ್ ಅಲೆಂಡೆ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದನ್ನು ಧ್ವನಿಮುದ್ರಣ ಮಾಡಿಕೊಂಡ ಮಗಳು ಇಲಾಬೆಲ್, ಆ ಧ್ವನಿ ಜಗತ್ತಿಗೆ ಕೇಳಿಸುವಂತೆ ಮಾಡಿದರು.

(ಕಾಮ್ರೇಡ್ ಪಂಪಾಪತಿ)

ಅಲೆಂಡೆ ಅವರ ಆ ಏಕಾಂತದ ಭಾಷಣ ಕೋಟಿ ಕೋಟಿ ಜನರಲ್ಲಿ ಮಾನವ ಘನತೆಯ ಚೈತನ್ಯ ತುಂಬುವ ಅಮರ ಕಾವ್ಯವಾಗಿದೆ. ಅವರ ಇಡೀ ಭಾಷಣವನ್ನು ವಿಶ್ವಶಾಂತಿ ಸಮಿತಿಯವರು ಸ್ಪ್ಯಾನಿಷ್‌ನಿಂದ ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಿದ್ದರು. ಅದನ್ನು ಇದ್ದಹಾಗೆಯೆ ಕನ್ನಡದಲ್ಲಿ ಅನುವಾದಿಸಿದ್ದೇನೆ.

‘ಕವನವಾಗಿಸಿದ ಅಲೆಂಡೆ ಅವರ ಕೊನೆಯ ಭಾಷಣವನ್ನು ಓದಲೇ? ಭಾಷಣ ಅಂದರೆ ಅದು’ ಎಂದು ಕಾಮ್ರೇಡ್ ಪಂಪಾಪತಿ ಅವರಿಗೆ ತಿಳಿಸಿದೆ. ಅವರು ಜೋರಾದ ಧ್ವನಿಯಿಂದ ನಕ್ಕು ಖುಷಿಯಿಂದ ಆಲಿಸಲು ಸಿದ್ಧವಾದರು.

ಓ ನನ್ನ ಜನರೇ, ಇದು ನನ್ನ ಕೊನೆಯ ಮಾತು!

ಓ ನನ್ನ ಜನರೇ ಇದು ನನ್ನ ಕೊನೆಯ ಮಾತು.
ದಾಳಿಯಿಟ್ಟಿವೆ ವಿಮಾನಗಳು ಆಕಾಶವಾಣಿಯ ಮೇಲೆ.
ನನ್ನ ಮಾತಿನಲ್ಲಿ ಕಹಿಯಿಲ್ಲ, ಬರಿ ಆಶಾಭಂಗವಿದೆ.
ನೈತಿಕ ಶಿಕ್ಷೆಯಿದೆ ವಚನ ಕೊಟ್ಟು ವಂಚಿಸಿದವರಿಗೆ.

ಚಿಲಿಯ ಸಮುದಾಯವೇ ಕೇಳಿ ನಿನ್ನೆಯವರೆಗೂ
ತೋರಿಸುತ್ತಿದ್ದ ವಿಧೇಯತೆ ಮೆಂಡೋಜ್ ಮಹಾಶಯ.
ಈಗ ನೋಡಿ ಮಾರ್ಗದರ್ಶಿಯಾದ ಕೊಲೆಗಡುಕರ
ಗಾಯಗೊಳಿಸಿದ್ದಾರೆ ಚಿಲಿಯನ್ನು; ಕೊಲ್ಲಲು ಸಾಧ್ಯವಿಲ್ಲ.

ಕಾರ್ಮಿಕರೇ ರೈತರೇ ನಾಡಿನ ಸಮಸ್ತ ಜನರೇ
ಬರ್ಬರರು ಮಾಡಿದ ಈ ಸ್ಥಿತಿಯ ಮುಂದೆ ನಿಂತು
ಹಿಂಜರಿಯದೆ ಹೇಳುತ್ತಿದ್ದೇನೆ ನಾ ಬಿಡಲಾರೆ
ಸಮಸ್ತ ಜನತೆಯ ಸೊತ್ತನ್ನು ನನ್ನ ಚಿಲಿಯನ್ನು.

ಇದು ಐತಿಹಾಸಿಕ ನಿರ್ಣಯ; ನನ್ನನ್ನೇ ಬಲಿ ಕೊಡುವೆ;
ನನ್ನ ಜನರಿಗೆ ತೋರಿಸುವ ವಿಧೇಯತೆ ಇದು.
ಹೌದು ನಾ ಸಾಯಬಹುದು ನಾನೊಬ್ಬ ಮನುಷ್ಯ.
ನಾ ಸತ್ತರೇನು ಮತ್ತೆ ಹುಟ್ಟುತ್ತಾರೆ ಚಿಲಿಯ ಮಣ್ಣಲ್ಲಿ.

ಮತ್ತೆ ಮತ್ತೆ ಒತ್ತಿ ಹೇಳುವೆ ಭರವಸೆ ಕೊಡುವೆ
ಯಾವ ಸಂಶಯವೂ ಇಲ್ಲ ಚಿಲಿಯ ಬದುಕಲ್ಲಿ.
ಬೆಳೆಯುತ್ತ ಹೋಗುವುದು ಬಿತ್ತಿದ ಆತ್ಮಸಾಕ್ಷಿಯ ಬೀಜ.
ಘನೋದ್ದೇಶಗಳು ಈಡೇರುತ್ತಲೇ ಹೋಗುವವು.

ನೀವೇ ಹೌದು ನೀವೇ ಇತಿಹಾಸ ಸೃಷ್ಟಿಸುವವರು.
ಇತಿಹಾಸ ನಮ್ಮದಿದೆ, ಇತಿಹಾಸ ಸೃಷ್ಟಿಸುವವರದು.
ವೈರಿಗಳಿಂದು ಬಲಿಷ್ಠರು, ಎಳೆಯಬಹುದು ಗುಲಾಮಗಿರಿಗೆ
ಅಪರಾಧದಿಂದ ಒತ್ತಾಯದಿಂದ ಆಳಲಾಗದು ಜನರನ್ನು.

ನಾನೊಬ್ಬ ಮನುಷ್ಯ; ನ್ಯಾಯದ ಬಯಕೆಗಳಿಗೆ ಬಾಯಿಯಾದವ
ಸಂವಿಧಾನಕ್ಕೆ ಬೆಲೆ ಇತ್ತವ, ವಚನಕ್ಕೆ ಬದ್ಧನಾದವ
ಸದಾ ನಂಬಿಕೆಯಿಟ್ಟು ಒಗ್ಗಟ್ಟನ್ನು ಎತ್ತಿತೋರಿಸಿದಿರಿ ನೀವು.
ನನಗಾವ ಭಯವಿಲ್ಲ, ಕೇವಲ ನಿಮಗಾಗಿ ಚಿಂತಿಸುತ್ತಿರುವೆ.

ಈ ಕ್ರೂರ ಘಳಿಗೆ ನಾ ಮಾತನಾಡಬಲ್ಲ ಕೊನೆಯ ಘಳಿಗೆ
ಈ ಘಟನೆಯಿಂದ ಏನು ಕಲಿಯಬಹುದೆಂದು
ಬಿಡಿಸಿ ತಿಳಿಸಬಲ್ಲೆ ನಾ ನಿಮಗೆ ಒಂದೊಂದಾಗಿ
ಯಾರ ಕೈವಾಡವಿದು, ಏಕೆ ಎಂಬುದನ್ನು ಹೇಳಬಲ್ಲೆ.

ಪರದೇಶದ ಬಂಡವಾಳ, ಸಾಮ್ರಾಜ್ಯವಾದ ಕೈಗೂಡಿಸಿದವು.
ಪ್ರತಿಗಾಮಿಗಳೊಡನೆ ಹೂಡಿದವು ಹೂಟ ದಂಗೆ ಏಳುವಂತೆ.
ಸೈನ್ಯ ಮುರಿಯಿತು ಸಂಪ್ರದಾಯ, ಬಲಿಯಾಯಿತು ವ್ಯವಸ್ಥೆಗೆ
ಗಾಯವಾಯಿತು ಚಿಲಿಗೆ, ಚಿಲಿ ಸತ್ತಿಲ್ಲ ಸಾಯುವುದಿಲ್ಲ.

ಬಾಂಬುದಾಳಿಗೀಡಾಗಿ ಬಾನುಲಿ ಬರಿದಾಗಿದೆ ಮೌನವಾಗಿದೆ.
ಕೇಳಿಸದಂತಾಗಿದೆ ನನ್ನ ಸ್ಪಷ್ಟ ಶಬ್ದಗಳು ನಿಮಗೆಲ್ಲ.
ಕಾರ್ಮಿಕರ ನಿಷ್ಠೆಗೆ ನಿಷ್ಠೆ ತೋರಿದ ಯೋಗ್ಯ ಮನುಷ್ಯನ
ನೆನಪು ಉಳಿಯುವುದು ನಿಮ್ಮಲ್ಲಿ; ಸದಾ ನಿಮ್ಮೊಡನೆ ಇರುವೆ.

ನನ್ನ ನೆಲದ ವಿನಮ್ರ ಸ್ತ್ರೀಯರೆ ವೀರರ ತಾಯಂದಿರೆ
ಕಾರ್ಖಾನೆಯಲ್ಲಿ, ಹೊಲದಲ್ಲಿ ದುಡಿಯುವ ಹೆಣ್ಣುಮಕ್ಕಳೆ,
ನೀವು ಹೆಚ್ಚು ಹೆಚ್ಚು ದುಡಿದು ದೇಶದ ಹಸಿವು ಹಿಂಗಿಸಿದಿರಿ.
ಮಾತನಾಡುವೆ ನಾ ನಿಮ್ಮೆಲ್ಲರಿಗಾಗಿ ಹೃದಯ ತುಂಬಿ.

ದೇಶಾಭಿಮಾನಿಗಳೇ ವಿವಿಧ ಕಾಯಕಜೀವಿಗಳೇ
ಕೆಲದಿನಗಳ ಹಿಂದೆ ಬರ್ಬರ ಪ್ರತಿಕ್ರಾಂತಿಯ ವೇಳೆ
ಜನರ ರಕ್ತ ಹೀರುವ ಸುಲಿಗೆ ಸಾಮ್ರಾಜ್ಯದ ಸಂಸ್ಥೆಗಳ
ಬಾಡಿಗೆಯ ಬಂಟರೊಡನೆ ಹೋರಾಡಿದಿರಿ ಹಂಗುದೊರೆದು.

ನಾಡಿನ ಯುವಜನರೇ ಮಾತನಾಡುವೆ ನಿಮ್ಮನ್ನುದ್ದೇಶಿಸಿ.
ಈ ದೇಶದ ವೀರಗೀತೆಗಳನ್ನೆಲ್ಲ ಹಾಡುತ್ತ ನೀವೆಲ್ಲ
ನಮ್ಮ ಹೋರಾಟದ ಹುರುಪಿನಲ್ಲಿ ಸಂತೋಷ ಕೊಟ್ಟಿರಿ.
ನನ್ನ ಚಿತ್ತಭಿತ್ತಿಯ ಮೇಲೆ ಕಿಕ್ಕಿರಿದು ತುಂಬಿದಿರಿ.

ಹಿಂಸೆಗೊಳಪಟ್ಟು ನರಳುತ್ತಿರುವ ನನ್ನ ಜನರೇ
ಚಿಲಿಯ ಹೃದಯಗಳೇ ಕಾರ್ಮಿಕರೇ ರೈತರೇ
ಕರಾಳ ಫ್ಯಾಸಿಸ್ಟರ ಆಕ್ರಮಣದಿಂದ ಹಾಳಾಗಿವೆ
ಸೇತುವೆಗಳು, ರೈಲ್ವೆಗಳು, ಎಣ್ಣೆಗೊಳವೆಗಳು.

ಸ್ತಬ್ಧತೆಯನ್ನು ಗಮನಿಸಿ: ಇತಿಹಾಸ ನ್ಯಾಯಸ್ಥಾನದಲ್ಲಿದೆ.
ಅವರು ಏನಾಗಬೇಕಿತ್ತೋ ನಾಳೆ ಅದೇ ಆಗುವರು.
ಭವಿಷ್ಯ ನಮ್ಮದಿದೆ; ತಿಳಿಯಿರಿ ಭವಿಷ್ಯ ದುಡಿಯುವವರದು.
ಚಿಲಿ ಸತ್ತಿಲ್ಲ, ಸಾಯುವುದಿಲ್ಲ, ಅದು ಬರಿ ಗಾಯಗೊಂಡಿದೆ.

ಓ ನನ್ನ ಜನರೇ ನಿಮ್ಮನ್ನು ರಕ್ಷಿಸಿಕೊಳ್ಳಿ
ಬಲಿದಾನ ಮಾಡಬೇಡಿ, ಹಿಂಸೆಗೊಳಪಡಬೇಡಿ.
ನಂಬಿಕೆಯಿದೆ ನನಗೆ ಚಿಲಿಯ ಭವಿಷ್ಯದಲ್ಲಿ
ನವಸಮಾಜದ ಹೊಣೆಹೊತ್ತ ನೀವು ಆಳುವಿರಿ.

ಬಹುದಿನ ಬದುಕಲಿ ಚಿಲಿ – ಚಿಲಿ ಬದುಕಲಿ ಬಹುದಿನ
ಜನ ಕಾರ್ಮಿಕರು ಬದುಕಲಿ ತುಂಬುದಿನ
ನನ್ನ ತ್ಯಾಗ ಹಾಳಾಗುವಂಥದ್ದಲ್ಲ; ಇದು ಪಾಠ
ಹೇಡಿತನ್ನಕೆ ವಿಶ್ವಾಸಘಾತಕ್ಕೆ ನೈತಿಕ ಶಿಕ್ಷೆ.

ನಾನು ಗಟ್ಟಿಯಾಗಿ ಓದಿದ ಈ ಕವನವನ್ನು, ಅಲ್ಲಲ್ಲ ಅಲೆಂಡೆ ಅವರ ಕೊನೆಯ ಭಾಷಣವನ್ನು ಕೇಳಿ ರೋಮಾಂಚನಗೊಂಡ ಕಾಮ್ರೇಡ್ ಪಂಪಾಪತಿಯವರು ಎದ್ದು ನಿಂತರು. ‘ಕಾಮ್ರೇಡ್ ನನ್ನ ಜೀವನದಲ್ಲಿ ಇಂಥ ಭಾಷಣ ಮಾಡುವ ಕ್ಷಣ ಬರಲಿ. ನಾನಿದನ್ನು ಜೀವಮಾನವಿಡಿ ಮರೆಯಲಾರೆ. ಮಾಡಿದರೆ ಇಂಥ ಭಾಷಣ ಮಾಡಬೇಕು’ ಎಂದು ಮುಂತಾಗಿ ಹೇಳುತ್ತ ಆ ಗುಂಗಿನಲ್ಲೇ ಮೈ ಮರೆತರು.

(ಮುಂದುವರೆಯುವುದು…)