Advertisement
ಬೀಫ್, ಬಿಯರ್ ಹಾಗೂ ಪಂದಿ ಕರ‍್ರಿ: ಎಸ್. ಗಂಗಾಧರಯ್ಯ ಅನುಭವ ಕಥನ

ಬೀಫ್, ಬಿಯರ್ ಹಾಗೂ ಪಂದಿ ಕರ‍್ರಿ: ಎಸ್. ಗಂಗಾಧರಯ್ಯ ಅನುಭವ ಕಥನ

ಕೊಟ್ಟ ಮಾತಿನಂತೆ ಬಿ.ಚಂ. ನಮ್ಮನ್ನೆಲ್ಲಾ ಅದೊಂದು ಹೋಟೆಲಿಗೆ ಕರಕಂಡು ಹೋದರು. ತುಂಬಾ ಹುರುಪಿನಿಂದ ಹೋಟೆಲಿನವನಿಗೆ `ನೋಡ್ರಪ್ಪಾ ಇವ್ರೆಲ್ಲಾ ನನ್ನ ಖಾಸಾ ಸ್ನೇಹಿತ್ರು. ಚೆನಾಗಿರಾದ್ನ ಕೊಡ್ಬೇಕು ತಿಳೀತಾ?’ ಅನ್ನೋ ಮಾತಾಕಿದರು. ಬಿ.ಚಂ. ಮಾತಿಗೆ ಓಗೊಟ್ಟು ಆಗಲಿ ಎಂಬಂತೆ ತಲೆಯಾಡಿಸಿದ ಅವರು ಒಂದೊಂದು ಪ್ಲೇಟು ಪಂದಿ ಕರ‍್ರಿ ಜತೆಗೆ ರೊಟ್ಟಿಗಳನ್ನು ತಂದಿಟ್ಟರು. ರೊಟ್ಟಿ ಕರ‍್ರಿಗಳು ತುಂಬಾ ರುಚಿಯಾಗಿದ್ದವು. ಎದ್ದು ಕೈ ತೊಳೆಯಲು ಹೋದಾಗ ಗೊತ್ತಾಯ್ತು ಆ ಪಂದಿ ಕರ‍್ರಿಯ ಅಸಲಿಯತ್ತು. ಎಷ್ಟು ತೊಳೆದರೂ ಎಷ್ಟು ಸಾರ್ತಿ ಸೋಪ್ ಹಾಕಿಕಂಡು ಉಜ್ಜಿದರೂ ನಮ್ಮ ಬಲಗೈ ಬೆರಳುಗಳಿಗಾಗಿದ್ದ ಹಚ್ಚಂಥ ಹಳದಿ ಬಣ್ಣ ಜಪ್ಪಯ್ಯ ಅಂದರೂ ಒಂಚೂರೂ ಬಿಡುತ್ತಿಲ್ಲ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತಾರನೆಯ ಕಂತು

ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿ ಕೆಲವು ತಿಂಗಳುಗಳು ಕಳೆದಿದ್ದವು. ಅಷ್ಟೊತ್ತಿಗೆ ನನ್ನ ಕ್ಲಾಸ್‌ಮೇಟ್ ಆಗಿದ್ದ ರಶೀದ ಗೆಳೆಯನಾಗಿದ್ದ. ಆಗ ಸರಸ್ವತಿಪುರಂನ ಫಸ್ಟ್ ಮೇನ್‌ನಲ್ಲಿದ್ದ ಕೆಂಚಪ್ಪ ಲಾಡ್ಜ್ನಲ್ಲಿ ನಾನು ಮತ್ತು ನನ್ನೂರಿನ ಪಕ್ಕದ ಶಾಂತಪ್ಪ ರೂಮ್ ಮಾಡಿಕಂಡಿದ್ದೆವು. ಶಾಂತಪ್ಪನೂ ಮಹಾರಾಜ ಕಾಲೇಜಿನಲ್ಲೇ ಓದುತ್ತಿದ್ದ. ಅಲ್ಲಿಂದ ಕಾಲೇಜಿಗೆ ನಡಕಂಡು ಹೋಗಬಹುದಿತ್ತು. ಹಂಗೆ ಹೋಗುವಾಗ ಸರಸ್ವತಿಪುರಂನ ಫೈಯರ್ ಬ್ರಿಗೇಡ್ ಎದುರಿಗಿದ್ದ ಮುಸ್ಲಿಂ ಹಾಸ್ಟೆಲಿನ ಕಾಂಪೌಂಡ್ ಪಕ್ಕದಾಗಾಸೇ ಹೋಗಬೇಕಿತ್ತು. ಆಗ ಕೆಲವೊಮ್ಮೆ ರಶೀದನೂ ಜತೆ ಬರುತ್ತಿದ್ದ. ರಶೀದನ ಗೆಳೆತನ ಕಾಲೇಜಿಗೆ ಹೋದ ಮೊದಲ ದಿನದಿಂದಲೇ ಶುರುವಾಗಿತ್ತು. ಅವತ್ತು ಮೊದಲ ಕ್ಲಾಸನ್ನು ಸೈಯದ್ ಇಕ್ಬಾಲ್ ಖಾದ್ರಿಯವರು ತಗಂಡಿದ್ದರು. ಅದು ಪತ್ರಿಕೋದ್ಯಮ ತರಗತಿಯಾಗಿತ್ತು. ಆ ದಿನ ಆ ಕ್ಲಾಸಿನಲ್ಲಿ ನಾನು ಮತ್ತು ರಶೀದ ಅಕಸ್ಮಾತ್ತಾಗಿ ಅಕ್ಕಪಕ್ಕ ಕುಳಿತಿದ್ದೆವು. ಯಾರು ಮೊದಲು ಮಾತಾಡಿಸಿದ್ದು, ಏನು ಮಾತಾಡಿದ್ದು ಅನ್ನೋದು ನೆನಪಿಲ್ಲ. ಆದರವು ನಮ್ಮ ಗೆಳೆತನದ ಮೊದಲ ಚಣಗಳಾಗಿದ್ದವು. ಡಿಗ್ರಿಯಲ್ಲಿ ಇಬ್ಬರೂ ಇಂಗ್ಲಿಷ್, ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಆಡಳಿತವನ್ನು ಐಚ್ಛಿಕ ವಿಷಯಗಳನ್ನಾಗಿ ತಗಂಡಿದ್ದೆವು. ಹಂಗಾಗಿ ಹೆಚ್ಚೂ ಕಡಿಮೆ ಜನರಲ್ ಇಂಗ್ಲಿಷ್ ಮತ್ತು ಕನ್ನಡದ ಕ್ಲಾಸುಗಳನ್ನು ಬಿಟ್ಟರೆ ಮಿಕ್ಕಂತೆ ಪ್ರತಿ ಕ್ಲಾಸಿನಲ್ಲೂ ಒಟ್ಟಿಗೇ ಕೂರುತ್ತಿದ್ದೆವು. ಆಗ ಜನರಲ್ ಇಂಗ್ಲಿಷ್ ಮತ್ತು ಕನ್ನಡದ ತರಗತಿಗಳು ಜೂನಿಯರ್ ಬಿ.ಎ. ಹಾಲ್ ಮತ್ತು ಸೀನಿಯರ್ ಬಿ.ಎ.ಹಾಲ್‌ನಲ್ಲಿ ನಡೆಯುತ್ತಿದ್ದವು. ಆ ಕ್ಲಾಸುಗಳಿಗೆ ಇತರೆ ಕಾಂಬಿನೇಷನ್‌ಗಳವರೂ ಸೇರಿಕೊಳ್ಳುತ್ತಿದ್ದರು. ಆ ಹೊತ್ತಲ್ಲಿ ಆ ಎರಡೂ ದೊಡ್ಡ ಹಾಲುಗಳೂ ತುಂಬಿರುತ್ತಿದ್ದವು.

ಒಂದೇ ಕ್ಲಾಸಿನವರಾಗಿದ್ದದ್ದು ನಾನು ಮತ್ತು ರಶೀದ ಹತ್ತಿರದ ಗೆಳೆಯರಾಗಲು ಒಂದು ಕಾರಣವಾಗಿತ್ತು. ಜತೆಗೆ ಮತ್ತೊಂದು ಕಾರಣವಿತ್ತು. ಅಂದರೆ ಅವನ ಓದುವ ಹುಚ್ಚು. ಅವನ ಕೈಯ್ಯಲ್ಲಿ ಸದಾ ಯಾವುದಾದರೊಂದು ಪಠ್ಯವಲ್ಲದ ಪುಸ್ತಕ ಇದ್ದೇ ಇರುತ್ತಿತ್ತು. ಅವು ನಾನು ಆವರೆವಿಗೂ ಕೇಳಿರದಿದ್ದ ಲೇಖಕರುಗಳ ಪುಸ್ತಕಗಳಾಗಿರುತ್ತಿದ್ದವು. ನಾನು ಮೊದಲ ಬಾರಿಗೆ ಮಾರ್ಕ್ವೆಜ್‌ನ ಹೆಸರು ಕೇಳಿದ್ದು ಹಾಗೂ ಅವನು ಬರೆದಿದ್ದ `ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಪುಸ್ತಕವನ್ನು ನೋಡಿದ್ದು ಅವನ ಕೈಯ್ಯಲ್ಲೇ. ಅದು ಗಂಗಾರಾಂ ಕಟ್ಟಡ ದುರಂತ ನಡೆದ ವರ್ಷ. ಆ ಸಮಯದಲ್ಲಿ ಸಿಕ್ಕಿದ್ದ ಸಾವಿರಾರು ಪುಸ್ತಕಗಳನ್ನು ರಸ್ತೆ ಬದಿಯಲ್ಲಿ ಮಾರುವಾಗ ಕೊಂಡದ್ದು ಅಂತಲೋ ಅಥವಾ ಯಾರೋ ಕೊಡಿಸಿದ್ದು ಅಂತಾನೋ ಅವನು ಹೇಳಿದ್ದ ನೆನಪು. ನಾನು ಒಂದೆರಡು ಸಾರ್ತಿ ಆ ಪುಸ್ತಕವನ್ನು ಇಸುಕಂಡು ಓದಲು ಯತ್ನಿಸಿದ್ದೆ. ಆದರೆ ಮಾರ್ಕ್ವೆಜ್ ಸುತರಾಂ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಅದಕ್ಕಾಗಿ ನಾನು ಮತ್ತೊಂದಷ್ಟು ದಿನ ಕಾಯಬೇಕಾಗಿತ್ತು. ಈ ವಿಚಾರದಲ್ಲಿ ಒಂಚೂರು ಕರುಣೆ ತೋರಿದವನು ಅಂದರೆ ಹೆಮಿಂಗ್ವೆ. ಈ ಕಾರಣಕ್ಕೇ ನಾನು ಮೊಟ್ಟ ಮೊದಲು ಓದಿದ ಇಂಗ್ಲಿಷ್ ಕಾದಂಬರಿ ಅಂದರೆ ಅದು ಹೆಮಿಂಗ್ವೆಯ `ಫಾರ್ ಹೂಂ ದ ಬೆಲ್ ಟೋಲ್ಸ್’. ಇದರ ಜತೆಗೆ ಕೊಡಗಿನ ಸುಂಟಿಕೊಪ್ಪದಿಂದ ಬಂದಿದ್ದ ರಶೀದ ಆ ವೇಳೆಗಾಗಲೇ ಕನ್ನಡದ ಬಹುಮುಖ್ಯ ಕೃತಿಗಳನ್ನು ಹೈಸ್ಕೂಲ್ ಮತ್ತು ಪಿ.ಯೂ.ಕಾಲೇಜಿನಲ್ಲಿ ಇರುವಾಗಲೇ ಓದಿಕೊಂಡಿದ್ದ. ಆಗಲೇ ಒಂದಷ್ಟು ಪದ್ಯಗಳನ್ನೂ ಬರೆದಿದ್ದ.

ಹಂಗೆ ನೋಡಿದರೆ ಆಗ ನಾನಿನ್ನೂ ಕನ್ನಡದ ಮುಖ್ಯ ಕೃತಿಗಳ ಹೆಸರನ್ನು ಕೇಳಿದ್ದು ಬಿಟ್ಟರೆ ಓದಿರಲಿಲ್ಲ. ಅಂಥ ವಾತಾವರಣವೂ ನನಗೆ ಇರಲಿಲ್ಲ. ಯಾಕೆಂದರೆ ಹೈಸ್ಕೂಲು ಮತ್ತು ಪಿ.ಯೂ. ಕಾಲೇಜಿನಲ್ಲಿ ಲೈಬ್ರರಿ ಅಂತ ಇದ್ದದ್ದು ಕಡಿಮೆ. ಇದ್ದರೂ ಅಲ್ಲಿಂದ ಓದಲು ಪುಸ್ತಕಗಳನ್ನು ಕೊಟ್ಟು ಓದಿಸಿದ್ದು ಇಲ್ಲವೇ ಇಲ್ಲ. ಮನೆಯಲ್ಲಿ ಅಯ್ಯನಿಗೆ ಓದುವ ಗೀಳಿದ್ದರೂ ಕೊಳ್ಳಲು ಪುಸ್ತಕಗಳು ಸಿಗುತ್ತಿದ್ದದ್ದು ಕಡಿಮೆ. ಹಂಗಾಗಿ ರಾಮಾಯಣ, ಮಹಾಭಾರತ, ಜೈಮಿನಿ ಭಾರತ ಮುಂತಾದ ಕೆಲವೇ ಕೆಲವು ಕೃತಿಗಳನ್ನು ತಿರುಗಾ ಮುರುಗಾ ಓದಿದವುಗಳನ್ನೇ ಓದುತ್ತಿತ್ತು. ಇಲ್ಲವೇ ರಾಗವಾಗಿ ಹಾಡಿಕೊಳ್ಳುತ್ತಿತ್ತು. ಆದರೂ ಅದೆಂಗೋ ಗೊತ್ತಿಲ್ಲ ಎನ್. ನರಸಿಂಹಯ್ಯ ಅವರ ಒಂದೆರಡು ಪತ್ತೆದಾರಿ ಕಾದಂಬರಿಗಳು ನಮ್ಮ ಮನೆಯಲ್ಲಿದ್ದವು. ನಾನೂ ಅವುಗಳನ್ನು ಮತ್ಮತ್ತೆ ಓದುತ್ತಿದ್ದೆ. ಆ ಕಾರಣಕ್ಕೆ ಮಹಾರಾಜ ಕಾಲೇಜಿನ ಲೈಬ್ರರಿ ನನ್ನನ್ನು ಆ ಪತ್ತೆದಾರಿ ಲೋಕದಿಂದ ಕನ್ನಡದ ಬಹು ಮುಖ್ಯ ಕೃತಿಗಳನ್ನು ಓದಲು ಅನುವು ಮಾಡಿಕೊಟ್ಟಿತ್ತು.

ಮೊದಲನೆಯ ವರ್ಷದ ಡಿಗ್ರಿ ಮುಗಿಯುವ ಹೊತ್ತಿಗೆ ಮಹಾರಾಜ ಕಾಲೇಜಿನ ಲೈಬ್ರರಿ ನನಗೆ ಪ್ರಿಯವಾದ ತಾಣವಾಗಿತ್ತು. ಅವತ್ತಿಗದು ಕರ್ನಾಟಕದ ಅತ್ಯಂತ ಒಳ್ಳೆಯ ಲೈಬ್ರರಿಯಲ್ಲಿ ಒಂದಾಗಿತ್ತು. ಅಲ್ಲಿ ಹತ್ತಿಸಿಕಂಡ ಓದಿನ ಗೀಳು ಮತ್ತು ಪ್ರೀತಿ ಇಂದಿಗೂ ನನ್ನ ಪೊರೆಯುತ್ತಿದೆ. ಅಲ್ಲಿ ಓದಿದ ಹಲವು ಬಗೆಯ ಪುಸ್ತಕಗಳು ನನ್ನನ್ನು ಪಠ್ಯದಿಂದ ಒಂಚೂರು ವಿಮುಖನಾಗುವಂತೆಯೂ ಮಾಡಿತ್ತು. ಎಷ್ಟೋ ಸಾರ್ತಿ ಕ್ಲಾಸುಗಳಿಗೆ ಚಕ್ಕರ್ ಹಾಕಿ ಅಲ್ಲಿಗೆ ಹೋಗುತ್ತಿದ್ದೆ. ಬೇಕಾದ ಪುಸ್ತಕಗಳಿಗಾಗಿ ಹುಡುಕುತ್ತಿದ್ದೆ ಅನ್ನುವುದಕ್ಕಿಂತಲೂ ಆ ಪುಸ್ತಕಗಳ ರಾಶಿಯನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಅಂಥ ಒಂದು ಹುಡುಕಾಟದಲ್ಲಿ ಲಂಕೇಶ್ ಅವರು ಎಂ.ಎ. ತರಗತಿಗಾಗಿ ಮಾಡಿದ್ದ ಡಿಸರ್ಟೇಷನ್ ಸಿಕ್ಕಿತ್ತು. ಅದರಲ್ಲಿ ಅವರ ಹೆಸರು ಲಂಕೇಶಪ್ಪ ಅಂತ ಇತ್ತು. ಅದು ಬಹುಶಃ ರುದ್ಯಾರ್ಡ್ ಕಿಪ್ಲಿಂಗ್ ಮತ್ತು ಜಾರ್ಜ್ ಆರ್ವೆಲ್ ಬರಹಗಳನ್ನು ಕುರಿತು ಅಂತ ಅಂದುಕೊಂಡಿದ್ದೇನೆ.

ಕಾಲೇಜಿಗೆ ಬರುವಾಗ ಮತ್ತು ಹೋಗುವಾಗ ಕೆಲವೊಮ್ಮೆ ನಾನು ಮತ್ತು ರಶೀದ ಜತೆಯಲ್ಲಿ ನಡಕಂಡು ಬರುತ್ತಿದ್ದೆವು. ಹಿಂಗೆ ಇವನನ್ನು ಬಿಟ್ಟರೆ ಕೆಲವು ಸಾರ್ತಿ ನಮಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದ ಮೇಷ್ಟ್ರು ಎಸ್. ಅನಂತನಾರಾಯಣ ಅವರು ಸಿಗುತ್ತಿದ್ದರು. ಅವರೂ ದಿನವೂ ನಡೆದೇ ಬರುತ್ತಿದ್ದರು. ಅವರ ಮನೆಯೂ ಸರಸ್ವತಿಪುರಂನಲ್ಲಿಯೇ ಇತ್ತು. ಆ ಹೊತ್ತಿಗಾಗಲೇ ಅವರು ಅಮೇರಿಕಾದ ಲಾರಾ ಏಂಗಲ್ಸ್ ಅವರ ಆತ್ಮಕಥೆಗಳ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಆಗಾಗ ಲೈಬ್ರರಿಯಲ್ಲಿ ನನ್ನನ್ನು ನೋಡಿದ್ದ ಅವರು ಒಂದು ದಿನ ನನ್ನನ್ನು ಮನೆಗೆ ಕರಕಂಡು ಹೋಗಿ ಅವರು ಅನುವಾದಿಸಿದ್ದ ಲಾರಾ ಏಂಗಲ್ಸ್ ಪುಸ್ತಕಗಳನ್ನು ಕೊಟ್ಟಿದ್ದರು. ತುಂಬಾ ಸೊಗಸಾಗಿ ಅನುವಾದಗೊಂಡಿದ್ದ ಇವುಗಳನ್ನು ಬಲು ಮುದ್ದಾಗಿ ಪ್ರಿಂಟ್ ಹಾಕಲಾಗಿತ್ತು. ಈ ಲಾರಾ ಏಂಗಲ್ಸ್ ಮತ್ತವಳ ಕಾಡಿನ ಬದುಕಿನ ಲೋಕ ನನ್ನನ್ನು ತುಂಬಾ ಆಕರ್ಷಿಸಿಬಿಟ್ಟಿತ್ತು. ಹಂಗಾಗಿ ಸುಮಾರು ವರ್ಷ ಅವರು ಕೊಟ್ಟ ಪುಸ್ತಕಗಳನ್ನು ತುಂಬಾ ಪ್ರೀತಿಯಿಂದ ಕಾಪಾಡಿಕಂಡಿದ್ದೆ. ಆ ನಂತರ ಅವು ಒಂದೊಂದಾಗಿ ಕಳೆದು ಹೋದವು. ಮತ್ತೆ ಅವುಗಳ ಪುನರ್ ಮುದ್ರಣವಾಯ್ತು. ಆಗವು ಮತ್ತೊಮ್ಮೆ ನನ್ನನ್ನು ಸೇರಿದವು. ಇವತ್ತಿಗೂ ನಾನು ಮತ್ಮತ್ತೆ ಓದುವ ಪುಸ್ತಕಗಳಲ್ಲಿ ಅಂತೆಯೇ ಇತರರಿಗೆ ಓದಲು ಹೇಳಲು ಬಯಸುವ ಪಟ್ಟಿಯಲ್ಲಿ ಇವು ಇದ್ದೇ ಇರುತ್ತವೆ.

(ನಾನು ಮತ್ತು ಅಬ್ದುಲ್‌ ರಶೀದ್)

ಎರಡನೆಯ ವರ್ಷದ ಡಿಗ್ರಿಗೆ ಹೋಗುವಾಗ ಕೆಂಚಪ್ಪ ಲಾಡ್ಜ್ ಬಿಟ್ಟು ಅದೇ ಶಾಂತಪ್ಪನ ಜತೆಗೆ ತೊಣಚಿಕೊಪ್ಪಲಿನ ಪುಟ್ಟಯ್ಯನ ಹುಂಡಿಯಲ್ಲಿ ರೂಮು ಮಾಡಿಕಂಡಿದ್ದೆ. ಆ ಹೊತ್ತಲ್ಲಿ ಆಗಾಗ ರಶೀದನ ಮುಸ್ಲಿಂ ಹಾಸ್ಟೆಲ್‌ಗೆ ಹೋಗುವುದು ರೂಢಿಯಾಗಿತ್ತು. ಆ ಹೊತ್ತಿಗೆ ರಶೀದನ ಮುಸ್ಲಿಂ ಹಾಸ್ಟೆಲ್ ರೂಮಿಗೆ ಕೆ.ಎಸ್. ಕೇಶವಪ್ರಸಾದ್, ಸಾಕೇತ್ ರಾಜನ್ ಹಾಗೂ ಹಾಡುಪಾಡುವಿನ ರಾಮು ಬರುತ್ತಿದ್ದರು. ನನಗವರ ಪರಿಚಯವಾಗಿದ್ದು ಅಲ್ಲಿಯೇ. ಹಂಗೆ ಹೋದಾಗ ಕೆಲವೊಮ್ಮೆ ರಶೀದ ಊಟದ ಹಾಲಿಗೆ ಹೋಗಿ ಊಟ ಮಾಡಿಕಂಡು ಬರುವಾಗ ಪ್ರಸಾದನಿಗಾಗಿ ಕೈಯ್ಯಲ್ಲೊಂದು ಪೊಟ್ಟಣ ತರುತ್ತಿದ್ದ. ಹಂಗೆ ಒಮ್ಮೆ ಹೋದಾಗ ಪ್ರಸಾದನಿಗೆ ತಂದು ಕೊಟ್ಟ ಪೊಟ್ಟಣದಿಂದ ಬರುತ್ತಿದ್ದ ಘಮಲಿನಿಂದ `ಲೋ ಇದೇನೋ ಈನಾಡಿ ಗಮ್ಲು ಬತ್ತಾ ಐತಲ್ಲ’ ಅಂತ ಪ್ರಸಾದನನ್ನು ಕೇಳಿದ್ದೆ. `ಲೋ ಕುಬ್ಲಾಖಾನ್ ಅದೇನೋ ಕೇಳ್ತಾನೆ ನೋಡೋ ಚೀಕ್ಲುಪುಟ್ಟ’ ಅಂತ ಅವನತ್ತ ಕಣ್ಣು ಮಿಟುಕಿಸಿ ನಕ್ಕ. ಪ್ರಸಾದ ರಶೀದನನ್ನು ಕುಬ್ಲಾಖಾನ್ ಅಂತಲೂ ನನ್ನನ್ನು ಚೀಕ್ಲುಪುಟ್ಟ ಅಂತಲೂ ಯಾವಾಗಲೂ ತಮಾಷೆ ಮಾಡುತ್ತಿದ್ದ. ನಾನು ಹಂಗಂದಿದ್ದೇ ತಡ ನನಗೂ ಒಂದೆರಡು ಬೋಂಡದಂಥ ತುಂಡುಗಳನ್ನು ಕೊಟ್ಟು`ತಿಂದು ನೋಡು’ಅಂದ. ಚೆನ್ನಾಗಿ ಎಣ್ಣೆಯಲ್ಲಿ ಕರೆದಿದ್ದ ಆ ತುಂಡುಗಳು ತುಂಬಾ ರುಚಿಯಾಗಿದ್ದವು. ಆವರೆವಿಗೂ ಪಕ್ಕಾ ಸಸ್ಯಾಹಾರಿಯಾಗಿದ್ದ ನಾನು ನನ್ನ ಜೀವನದಲ್ಲಿ ಮೊಟ್ಟ ಮೊದಲಿಗೆ ಬಾರಿಗೆ ಮಾಂಸ ತಿಂದದ್ದು. ಅದು ಮಾಂಸ ಅಂತ ಗೊತ್ತಿತ್ತು. ಆದರೆ ಯಾವುದರದ್ದು ಅಂತ ಗೊತ್ತಿರಲಿಲ್ಲ. `ಲೋ ಇದು ಯಾವ ಮಾಂಸಾನೋ’ ಅಂತ ಕೇಳಿದ್ದೆ. `ಬೀಫ್’ ಅಂದಿದ್ದ ಪ್ರಸಾದ. ಅಂದಿನಿಂದ ನಾನು ಮತ್ತಿತರ ಗೆಳೆಯರು ಅದಕ್ಕೆ ಚೆನ್ನಾಗಿ ರೂಢಿಯಾದೆವು. `ನನ್ ಮಕ್ಳ ನೀವು ತಿಂದೂ ತಿಂದು ಬರಾ ದುಡ್ನೆಲ್ಲಾ ಮೆಸ್‌ಗೆ ಕಟ್ಟಂಗೆ ಮಾಡ್ತೀರ’ ಅಂತ ರಶೀದ ಗೊನಗಿಕೊಂಡೇ ತಂದು ಕೊಡುತ್ತಿದ್ದ.

ನನಗೆ ಕೆಲಸ ಸಿಕ್ಕಿ ತಿಪಟೂರಿಗೆ ಬಂದ ಸ್ವಲ್ಪ ವರ್ಷದಲ್ಲಿ ಕವಿ ಮಿತ್ರ ಎನ್.ಕೆ. ಹನುಮಂತಯ್ಯನಿಗೆ ಕಲ್ಪತರು ಕಾಲೇಜಿನಲ್ಲಿ ಕೆಲಸ ಸಿಕ್ಕಿತ್ತು. ಅವನು ಹೆಂಡತಿ ಮತ್ತು ಮಗಳೊಂದಿಗೆ ನನ್ನ ಮನೆಯ ಹಿಂಭಾಗದ ರಸ್ತೆಯಲ್ಲಿ ಮನೆ ಮಾಡಿಕಂಡಿದ್ದ. ಆ ಹೊತ್ತಿಗಾಗಲೇ ತುಂಬಾ ಒಳ್ಳೆಯ ಪದ್ಯಗಳನ್ನು ಬರೆದಿದ್ದ ತುಂಬಾ ಗಂಭೀರ ಓದುಗನೂ ಆಗಿದ್ದ ಎನ್ಕೆ ಮತ್ತು ನಾನು ದಿನವೂ ಬೆಳಗಿನ ಐದು ಐದೂವರೆಗೆಲ್ಲಾ ತಿಪಟೂರಿನ ಕಲ್ಪತರು ಸ್ಟೇಡಿಯಂಗೆ ವಾಕ್ ಹೋಗುತ್ತಿದ್ದೆವು. ಬೆಳಗ್ಗೆ ಚುಮುಚುಮು ಅನ್ನುವ ಹೊತ್ತಿಗಾಗಲೇ ವಾಕ್ ಮುಗಿಸಿ ಸ್ಟೇಡಿಯಂನ ಕಟ್ಟೆಯಲ್ಲಿ ಒಂದಷ್ಟೊತ್ತು ಕೂರುತ್ತಿದ್ದೆವು. ಹಂಗೆ ಕೂತಂಥ ಹೊತ್ತಲ್ಲಿ ಎನ್ಕೆ ಆಗಾಗ `ಗುರುಗಳೇ ಬೆಳಬೆಳಗ್ಗೇನೇ ಅಲ್ಲೊಂದು ಕಡೆ ಮಟನ್ ಬಿರಿಯಾನಿ ಮಾಡ್ತಾರೆ ಹೆಂಗಿರುತ್ತೆ ಅಂತೀರಾ. ಅದೂ ಸಸ್ತಾ ಅಂದರೆ ಸಸ್ತಕ್ಕೆ, ಬರೇ ಹದಿನೈದು ರೂಪಾಯ್ಗೆ’ ಅಂತ ಬೆಳಬೆಳಗ್ಗೆಯೇ ಬಿರಿಯಾನಿಯ ಆಸೆ ಹುಟ್ಟಿಸುತ್ತಿದ್ದ. ತಮಾಷೆಗಾಗಿ ಇಂಥ ಹಲವು ಮಾಯ್ಕಾರ ಆಟಗಳನ್ನು ಆಗಾಗ ಹಾಕುತ್ತಿದ್ದ ಎನ್ಕೆ ಆಗಲಿ ಒಂದು ದಿನ ಹೋದರಾಯ್ತು ಬಿಡು ಅಂತ ಸುಮ್ಮನಾಗಿಸುತ್ತಿದ್ದೆ. ಒಂದಿನ, ಎನ್ಕೆ ಕೈಯ್ಯಲ್ಲೊಂದು ಮುದುರಿದ ಹಾಳೆಯನ್ನು ಹಿಡುಕಂಡು ನನ್ನೆದುರಿಗೆ ಆ ಹಾಳೆಯನ್ನು ಬಿಡಿಸುತ್ತಾ `ಗುರುಗಳೇ ಮನಿಂದ ಬರ್ಬೇಕಾದ್ರೆ ದಾರೀಲಿ ಬಿದ್ದಿತ್ತು. ತಗ್ದು ನೋಡಿದ್ರೆ ಏನೋ ಗೀಚಿರಂಗಿತ್ತು. ಓದಿದ್ರೆ ಒಂಥರಾ ಪದ್ಯ ಇದ್ದಂಗೆ ಐತಲ್ಲಾ’ ಅಂತ ಅಂದ. `ಲೇ ಎನ್ಕೆ ಇವೆಲ್ಲಾ ಯಪ್ಪೆ ಆಟ ಸಾಕು ಅದು ನಿಂದೇಯ ಪದ್ಯ ಸುಮ್ಕೆ ಓದು’ ಅಂದೆ. `ತೋತ್ತರಿಕಾ ಹೆಂಗೆ ಹೇಳಾದಪ್ಪ ನಿಮ್ಗೆ’ಅನ್ನುತ್ತಾ `ಬಣ್ಣದ ಕಣ್ಣು’ಅನ್ನುವ ಪುಟ್ಟ ಕವಿತೆಯೊಂದನ್ನು ಓದಿದ.

`ಕಣ್ಣಿನ ಕೊಳವೆಗಳಲ್ಲಿ
ಹರಿಯುತ್ತಿತ್ತು
ಸಂಜೆ ಮುಂಜಾವದಲೆಯ ಹೊಳೆ

ಅಲ್ಲಿ ಹೂವು ಜಿಂಕೆ
ಗಿಳಿ ಆಕಾಶ ನಕ್ಷತ್ರ ಚಲುವೆಯರು ಕರಗಿ
ನನ್ನೊಳಗೆ ಅರಳುತ್ತಿದ್ದರು

ಈಗ ಹೆಣದಂತೆ ಒಣ ಮರದಂತೆ
ಅಡ್ಡಲಾಗಿವೆ ಕೊಳವೆಗೆ
ಯಾರೋ ತೇಲಿಬಿಟ್ಟ ಬಣ್ಣಗಳು

ಸುತ್ತ ಕವಿದ ಮೋಡಗಳೋಳಗೆ
ಬಣ್ಣ ಕೊಚ್ಚುವ ಹೊಳೆ ಮಲಗಿರಬಹುದೇ.’

ಓದಿ ಆದ ಮೇಲೆ `ಹೆಂಗೆ ಪರವಾಗಿಲ್ವ ಗುರುಗಳೇ? ಯಾರೋ ಪಾಪ ಏನೋ ಗೀಚವ್ರೆ ಇಷ್ಟ ಆಗಿಲ್ಲ ಅನ್ಸುತ್ತೆ ಅವ್ರಿಗೆ ಹಂಗೇ ಉಂಡ್ಗಟ್ಟಿ ಎಸ್ದು ಹೋಗವ್ರೆ, ನಿಮ್ಗೆ ಹೇಳಿದ್ರೆ ಕೇಳಲ್ಲ’ ಅಂತ ಮತ್ತೊಮ್ಮೆ ಮಾಯ್ಕಾರ ಆಟ ಹಾಕಿದ ಮುಗುಳ್ನಗುತ್ತಾ. ಅದು ಅವನದೇ ಪದ್ಯ ಅಂತ ನಂಗೆ ಚೆನ್ನಾಗಿ ಗೊತ್ತಿತ್ತು. ಮುಂದೆ ಈ ಕವಿತೆ `ಬಣ್ಣದ ಕಣ್ಣು’ ಅನ್ನುವ ಶೀರ್ಷಿಕೆಯೊಂದಿಗೆ ಅವನ `ಚಿತ್ರದ ಬೆನ್ನು’ ಅನ್ನುವ ಸಂಕಲನದಲ್ಲಿ ಪ್ರಕಟವಾಯ್ತು. `ಎನ್ಕೆ ಚೆನಾಗಿದೆ ಕಣೋ. ಆದ್ರೆ ಇವನ್ಯಾರೋ ಅನಾಮಧೇಯ ಕವಿ. ಅವ್ನಿಗೆ ಹೆಸರು ಹಾಕ್ಕಣಾದು ಇಷ್ಟವಿಲ್ಲ. ಹಂಗೇ ಶೀರ್ಷಿಕೆ ಕೊಡಾದೂ ಇಷ್ಟ ಇಲ್ಲ. ಯಾರಾದ್ರೂ ಸಿಕ್ದೋರು ಅದನ್ನ ಮಾಡ್ಕಳ್ಲಿ ಅಂತ ಎಸ್ದು ಹೋಗಿರ್ಬೇಕು. ನೀನ್ ತಾನೆ ಯಾಕೆ ಇಟ್ಕಂತೀಯ ಹಂಗೆ ಬಿಸಾಕಿ ಬಿಡು’ ಅಂದೆ ತಮಾಷೆಗೆ. ಪಕಾರಿಸಿಕಂಡು ನಕ್ಕ ಎನ್ಕೆ `ನಡೀರಿ ಮತ್ತೆ ಈ ಖುಷೀಲಿ ಬರ‍್ಯಾನಿ ತಿನ್ನಾಕೆ ಹೋಗಾನ’ ಅಂದ.

(ಎನ್.ಕೆ. ಹನುಮಂತಯ್ಯನೊಟ್ಟಿಗೆ)

ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ಮಸೀದಿಯ ಪಕ್ಕದಲ್ಲಿದ್ದ ಹೋಟೆಲ್‌ಗೆ ಕರಕಂಡು ಹೋದ. ಅದು ಚಿರಪರಿಚಿತ ರಸ್ತೆಯಾಗಿದ್ದರೂ ಆ ಹೋಟೆಲನ್ನು ಗಮನಿಸಿರಲಿಲ್ಲ. ಬೆಳಬೆಳಗ್ಗೆ ಹಬೆಯಾಡುತ್ತಿದ್ದ ಬಿರಿಯಾನಿ ಕೊಟ್ಟರು. ಇಬ್ಬರೂ ತಿಂದೆವು. `ನೋಡ್ರಿ ಮತ್ತೆ ಎರಡು ಬಿರ್ಯಾನಿಗೆ ಬರೇ ಮುವ್ವತ್ತುರೂಪಾಯಿ ಅಷ್ಟೇಯಾ?’ ಅನ್ನುತ್ತಾ ಮುಂದೋಗಿ ಅವನೇ ಬಿಲ್ ಕೊಟ್ಟ. `ಹೆಂಗೈತೆ?’ ಅಂತ ಕೇಳಿದವನು ನಾನು ಮಾತಾಡುವುದಕ್ಕೂ ಮುನ್ನವೇ `ಸಖತ್ತಾಗೈತೆ ಅಲ್ವುರಾ?’ ಅಂದ. `ಹೂ ಕಣೋ ಎನ್ಕೆ ಚೆನಾಗೇನೋ ಐತೆ, ಇನ್ನೊಂಚೂರು ಎಳ್ಕಾಗಿದ್ರೆ ಇನ್ನೂ ಚೆನಾಗಿರಾದು, ಸ್ವಲ್ಪ ಬಲಿತೈತೆ’ ಅಂದೆ ನಾನು. ಅವನು ಅಚ್ಚರಿಯಿಂದ ನನ್ನನ್ನೇ ನೋಡಿದ. `ಏನು?’ ಅಂದ ಅಚ್ಚರಿಯಲ್ಲಿ. `ಬೀಫ್’ ಅಂದೆ ನಾನು. `ತೋತ್ತರಿಕ ಗೊತ್ತಾಗ್ಬಿಡ್ತ ನಿಮ್ಗೆ?’ ಅಂತ ಕಿಲಕಿಲ ನಗುತ್ತ ಎರಡೂ ಕೈಗಳಿಂದ ತಲೆ ತುರಿಸಿಕಂಡ.

ಹಿಂಗೇ ನಮ್ಮ ವಾಕಿಂಗ್‌ಗೆ ಸ್ವಲ್ಪ ದಿನಗಳಾದ ಮೇಲೆ ತಿಪಟೂರಿನ ಮತ್ತೊಬ್ಬ ಗೆಳೆಯ ಜತೆಯಾದ. ನಮ್ಮ ಜತೆಗೆ ಗುರುತಿಸಿಕಂಡಿದ್ದರೂ ಒಂಚೂರು ಧರ್ಮ ದೇವರು ಮುಂತಾದವುಗಳ ಬಗ್ಗೆ ಹೆಚ್ಚು ಒಲವುಳ್ಳವನು. ಹಂಗಾಗಿ ಧರ್ಮರಕ್ಷಕರೊಂದಿಗೂ ಒಡನಾಟ. ಅವನೂ ಎನ್ಕೆ ನನಗೆ ಗಂಟು ಬಿದ್ದಂತೆ ಅವನು ನಮ್ಮಿಬ್ಬರಿಗೂ ಗಂಟು ಬಿದ್ದು `ಅಲ್ಲೊಂದ್ಕಡೇಲಿ ಮಟನ್ ಬಿರ್ಯಾನಿ ಮಾಡ್ತಾರೆ, ಒಂದ್ಸಲ ರುಚಿ ನೋಡಿದ್ರಿ ಅಂದ್ರೆ….’ ಅಂತ ಆಸೆ ಹುಟ್ಟಿಸಿದ್ದ. ಹಂಗಾಗಿ ಅದೊಂದು ದಿನ ಮಡಕೆ ಆಸರದಲ್ಲಿದ್ದ ಆ ಹೊಟೇಲಿಗೆ ನಮ್ಮಿಬ್ಬರನ್ನು ವಾಕ್ ಮುಗಿಯುತ್ತಲೇ ಕರಕಂಡು ಹೋಗಿದ್ದ. ತಿಂಡಿ ಬದಲಿಗೆ ಬಿರ್ಯಾನಿ ತಿಂದದ್ದಾಯ್ತು. ತಿನ್ನುವಾಗ ಎನ್ಕೆ ಒತ್ತಿಕಂಡು ಬರುತ್ತಿದ್ದ ನಗುವನ್ನು ಹತ್ತಿಕ್ಕಿಕಂಡು `ಮಟನ್ ಬಿರ್ಯಾನಿ ಸೂಪರ್ ಆಗೈತೆ’ ಅಂತ ಉದ್ಗಾರ ಎಳೆಯುತ್ತಾ ನನ್ನತ್ತ ನೋಡುತ್ತಿದ್ದ. ಅಂತೂ ಒಂದೊಳ್ಳೆ ಊಟ ಕೊಡಿಸಿದೆ ಅನ್ನುವ ಅಭಿಮಾನ ಆ ಗೆಳೆಯನ ಮುಖದಲ್ಲಾಡುತ್ತಿತ್ತು. `ಅಲ್ಲಾ ಕಣೋ ತಂದೆ ತಿನ್ನಾದು ನೋಡಿದ್ರೆ ಹಿಂಗೆ, ಮಾಡಾದು ನೋಡಿದ್ರೆ ಹಂಗೆ’ ಅಂದೆ ನಾನು ಪುಸುಕ್ಕನೆ. `ಯಾಕೆ ಗುರು ಅಣ್ಣ ಹಂಗಂತಾವ್ರಲ್ಲ?’ ಅಂದ ಅವನು ಪ್ರೀತಿಯಿಂದ ಎನ್ಕೆಯತ್ತ ತಿರುಗಿ. `ಅದೇ ನೀವು ಮೊನ್ನೇ ದಿಸ ದನ್ಗುಳ್ನ ತುಂಬ್ಕೆಂಡು ಹೋಗ್ತಾವ್ರೆ ಅಂತ ಟೆಂಪೋ ಹಿಡ್ಕಂಡು ಗಲಾಟೆ ಮಾಡ್ತುದ್ರಲ್ಲ ಅದ್ಕೆ ಇರಬಹ್ದು’ ಅಂದ ಎನ್ಕೆ. `ಅಯ್ಯೋ ಅದ್ಕೂ ಇದ್ಕೂ ಏನ್ ಸಂಬಂಧ’ ಅಂದ ಆ ಗೆಳೆಯ. `ಅದೇ ಮತ್ತೆ ಇದು’ ಅಂದ ಎನ್ಕೆ. ಆ ಗೆಳೆಯ ಒಮ್ಮೆಗೇ ಹೌಹಾರಿ ಹೋದ. ಆ ಗೆಳೆಯ ವರ್ಷಗಟ್ಟಲೆ ಅಲ್ಲಿ ಬಿರ್ಯಾನಿ ತಿಂದಿದ್ದ. ಅದರದು ಬೀಫ್ ಅಂತ ಗೊತ್ತಾಗದಿದ್ದದ್ದು ಸೋಜಿಗ. ಈಗಲೂ ಸಿಕ್ಕಾಗೆಲ್ಲಾ `ಏನಪ್ಪಾ ಸಮಾಚಾರ?’ ಅಂತ ಕೇಳಿದ್ರೆ ಸಾಕು ಅವನಿಗೆ ಗೊತ್ತಾಗಿ ಬಿಡುತ್ತೆ. `ನಿಮ್ ದಮ್ಮಯ್ಯ ಅಂತೀನಿ ಸುಮ್ಕಿರಿ ಮತ್ತೆ’ ಅಂತ ಆದೇ ಪ್ರೀತಿಯಲ್ಲಿ ನಗಾಡುತ್ತಾನೆ.

ಬಿ.ಚಂ. ಕೊಡಿಸಿದ್ದ ಪಂದಿ ಕರ‍್ರಿ

ಅದು 1999ನೆಯ ಇಸವಿ. ಆಗ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಎಂ.ಪಿ. ಪ್ರಕಾಶ್ ಉಪ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಅವರು `ರಾಜಸೂಯ ಯೋಗ’ ಅನ್ನುವ ಪೌರಾಣಿಕ ನಾಟಕವೊಂದರಲ್ಲಿ ಪಾತ್ರವೊಂದನ್ನು ಮಾಡಿದ್ದರು. ಅದು ಶಿವರಾತ್ರಿ ಹಬ್ಬದಂದು ಶಿವಮೊಗ್ಗದ ಗೋಪಾಳದಲ್ಲಿತ್ತು. ಈ ನಾಟಕವನ್ನು ನೋಡಲು ಗೆಳೆಯರಾದ ಬಿ. ಚಂದ್ರೇಗೌಡರು ನಾನೂ ಸೇರಿದಂತೆ ನಾಡಿನ ಲೇಖಕ ಮಿತ್ರರನ್ನು ಕರಸಿಕಂಡಿದ್ದರು. ಚಳಿಯಲ್ಲಿ ಕೂತು ರಾತ್ರಿ ಪೂರಾ ನಿದ್ದೆಗೆಟ್ಟು ನಾಟಕವನ್ನು ನೋಡಿದೆವು. ಎಂ.ಪಿ. ಪ್ರಕಾಶ್‌ವರ ಅಭಿನಯ ಸೇರಿದಂತೆ ಒಟ್ಟು ನಾಟಕ ಚೆನ್ನಾಗಿತ್ತು. ಬೆಳಕರಿಯುತ್ತಿದ್ದಂತೆ ಚಂದ್ರೇಗೌಡರು `ನೀವು ಜೀವಮಾನದಲ್ಲಿ ಎಂದೂ ತಿಂದಿರಬಾರದು ಅಂಥ ಪಂದಿ ಕರ‍್ರಿ ಕೊಡುಸ್ತೀನಿ’ ಅಂಥ ಅವರೇ ಬಾಯಿ ಚಪ್ಪರಿಸಿಕಂಡರು. ಎಂಥದೋ ಒಂಚೂರು ತಿಂದುಕಂಡು ಒಂದಷ್ಟೊತ್ತು ರೆಸ್ಟ್ ಮಾಡಿ ಊರಿಗೆ ಹೊರಡಲು ಮನಸ್ಸು ಮಾಡಿದ್ದ ನಮಗೆ ಬಿ.ಚಂ. ತೋರಿಸಿದ್ದ ಪಂದಿ ರ‍್ರಿಯ ಆಸೆ ನಿದ್ದೆಗೆಟ್ಟು ದದ್ದುಗಟ್ಟಿದ್ದ ನಮ್ಮ ಮುಖದಲ್ಲಿ ಒಂಚೂರು ಗೆಲುವು ತಂದಿತ್ತು.

ಕೊಟ್ಟ ಮಾತಿನಂತೆ ಬಿ.ಚಂ. ನಮ್ಮನ್ನೆಲ್ಲಾ ಅದೊಂದು ಹೋಟೆಲಿಗೆ ಕರಕಂಡು ಹೋದರು. ತುಂಬಾ ಹುರುಪಿನಿಂದ ಹೋಟೆಲಿನವನಿಗೆ `ನೋಡ್ರಪ್ಪಾ ಇವ್ರೆಲ್ಲಾ ನನ್ನ ಖಾಸಾ ಸ್ನೇಹಿತ್ರು. ಚೆನಾಗಿರಾದ್ನ ಕೊಡ್ಬೇಕು ತಿಳೀತಾ?’ ಅನ್ನೋ ಮಾತಾಕಿದರು. ಬಿ.ಚಂ. ಮಾತಿಗೆ ಓಗೊಟ್ಟು ಆಗಲಿ ಎಂಬಂತೆ ತಲೆಯಾಡಿಸಿದ ಅವರು ಒಂದೊಂದು ಪ್ಲೇಟು ಪಂದಿ ಕರ‍್ರಿ ಜತೆಗೆ ರೊಟ್ಟಿಗಳನ್ನು ತಂದಿಟ್ಟರು. ರೊಟ್ಟಿ ಕರ‍್ರಿಗಳು ತುಂಬಾ ರುಚಿಯಾಗಿದ್ದವು. ಎದ್ದು ಕೈ ತೊಳೆಯಲು ಹೋದಾಗ ಗೊತ್ತಾಯ್ತು ಆ ಪಂದಿ ಕರ‍್ರಿಯ ಅಸಲಿಯತ್ತು. ಎಷ್ಟು ತೊಳೆದರೂ ಎಷ್ಟು ಸಾರ್ತಿ ಸೋಪ್ ಹಾಕಿಕಂಡು ಉಜ್ಜಿದರೂ ನಮ್ಮ ಬಲಗೈ ಬೆರಳುಗಳಿಗಾಗಿದ್ದ ಹಚ್ಚಂಥ ಹಳದಿ ಬಣ್ಣ ಜಪ್ಪಯ್ಯ ಅಂದರೂ ಒಂಚೂರೂ ಬಿಡುತ್ತಿಲ್ಲ. `ಬಿ.ಚಂ ಇಲ್ನೋಡು’ ಅಂತ ತೋರಿಸದರೆ `ಯಾನಾಡಿ ಸ್ಟ್ರಾಂಗ್ ಆಗೈತೆ ಬಡ್ಡಿ ಮಗಂದು? ಅವ್ಳೇನ್ ಮಾಡ್ತಾಳೆ ತೊಳಿತಾ ತೊಳಿತಾ ಹೋಗ್ತಾಳೆ ತಗಾ’ ಅಂದರು ನಗಾಡುತ್ತಾ. ನಮ್ಮ ಕೈಗಳ ಬೆರಳುಗಳಿಗಂಟಿದ್ದ ಆ ಹಳದಿ ಬಣ್ಣ ಮರೆಯಾಗಲು ತಿಂಗಳುಗಟ್ಟಲೆ ಹಿಡಿಯಿತು.

(ಶೆಟ್ಟೀಕೆರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ)

ನಾನು 2015ರಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಾಹಿತ್ಯದ ಸಮ್ಮೇಳನದ ಅಧ್ಯಕ್ಷನಾಗಿದ್ದಾಗ ಬಿ.ಚಂ. ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಮಾತುಗಳನ್ನಾಡುತ್ತಾ ಆ ತುಂಬಿದ ಸಭೆಯಲ್ಲಿ `ಈ ಗಂಗಾಧರನ್ಗೆ ಯಾವತ್ತೂ ಬರ್ಯಾಕೇ ಆಗ್ಬಾರ್ದು ಅಂಥ ಹಂದಿ ಮಾಂಸ ಕೊಡಿಸಿದ್ದೆ’ ಅಂತ ತಾವು ಕೊಡಿಸಿದ್ದ ಅಳಿಸಲಾಗದ ಬಣ್ಣದ ಪಂದಿ ಕರ‍್ರಿಯನ್ನು ಸಾರ್ವಜನಿಕವಾಗಿ ನೆನಪಿಸಿಕಂಡು ಗುಟ್ಟಾಗಿಟ್ಟಿದ್ದನ್ನೆಲ್ಲಾ ರಟ್ಟು ಮಾಡಿಬಿಟ್ಟಿದ್ದರು. ಹಿಂಗೆ ಬಿ.ಚಂ ಕೊಡಿಸಿದ್ದ ಪಂದಿ ಕರ‍್ರಿ ನೆನಪು ಹಂಗೇ ಶಾಶ್ವತವಾಗಿ ನನ್ನೊಳಗುಳಿದುಬಿಟ್ಟಿದೆ.

ಮುಸ್ಲಿಂ ಹಾಸ್ಟೆಲ್‌ನಲ್ಲಿ ಬಿಯರ್ ಕುಡಿದದ್ದು

ನಾನಾಗ ಎರಡನೆಯ ವರ್ಷದ ಡಿಗ್ರಿಯಲ್ಲಿದ್ದೆ. ಒಂದಿನ ಮೈಸೂರಿನ ಹಿರಿಯ ಸಾಹಿತಿಯೊಬ್ಬರು ಯಾವ ಕಾರಣಕ್ಕೆ ಅನ್ನೋದು ಸರಿಯಾಗಿ ನೆನಪಿಲ್ಲ ನನಗೆ ಮತ್ತು ರಶೀದನಿಗೆ ಬಿಯರ್ ಕೊಡಿಸಿದ್ದರು. ಬಹುಶಃ ಆಗಷ್ಟೇ ತುಷಾರ ಪತ್ರಿಕೆಯಲ್ಲಿ ರಶೀದನ ಮೊದಲ ಕಥೆ ಮತ್ತು ಕನ್ನಡದ ಮುಖ್ಯ ಕಥೆಗಳಲ್ಲಿ ಒಂದಾದ `ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತು’ ಪ್ರಕಟವಾಗಿದ್ದ ಖುಷಿಗೆ ಅಂದುಕೊಂಡಿದ್ದೇನೆ. ಆದರೆ ಬಿಯರ್‌ನ ಬ್ರ್ಯಾಂಡ್ ಯಾವುದು ಅಂತ ಗೊತ್ತಿಲ್ಲ. ಅದು ನಾನು ಕುಡಿದ ಮೊಟ್ಟ ಮೊದಲ ಬಿಯರ್ ಆಗಿತ್ತು. ಇಬ್ಬರೂ ಸೇರಿ ಮುಖ ಕಿವುಚಿಕಂಡು ಒಂದು ಬಿಯರ್ ಮುಗಿಸಿದ್ದೆವು. ಈ ಮುಂಚೆ ನಾನು ಯಾವತ್ತೂ ಈ ಬಿಯರ್ ಕುಡಿದಿರಲಿಲ್ಲ. ಹಂಗಂತ ಬೇರೇದನ್ನ ಕುಡಿತಿದ್ದೆ ಅಂತ ಅಲ್ಲ. ಹೈಸ್ಕೂಲಿನಲ್ಲಿದ್ದಾಗ ಗೆಳೆಯನೊಬ್ಬನ ಒತ್ತಾಯಕ್ಕೆ ಗಂಟುಬಿದ್ದು ಬಳಸಾಕಟ್ಟೆ ನೀರಿನಲ್ಲಿ ತೆಂಗಿನ ಚೊಟ್ಟೆಯಲ್ಲಿ ಒಂಚೂರೂ ರಮ್ ಕುಡಿದದ್ದು ಬಿಟ್ಟರೆ ಮತ್ತೆಂದೂ ಅತ್ತ ತಿರುಗಿ ನೋಡಿದವನಲ್ಲ. ಅವತ್ತು ಬಿಯರ್ ಕುಡಿಯುವಾಗ ಅದರ ಆ ಹುಳಿ, ಆ ಒಗರು ಮತ್ತಿನ್ನೆಂದೂ ಇದರ ಸಾವಾಸವೇ ಬೇಡ ಅಂತ ತೀರ್ಮಾನಿಸಿದ್ದೆವು.

ಆದರೆ ನಮ್ಮ ಈ ತೀರ್ಮಾನಕ್ಕೆ ನಾವು ಬಲು ದಿನ ಬದ್ಧರಾಗಿರಲಿಲ್ಲ. ಹಂಗಾಗಿ ಅದೊಂದು ದಿನ ಇಬ್ಬರಿಗೂ ಮತ್ತೆ ಬಿಯರ್ ಕುಡಿಯಬೇಕು ಅನಿಸಿತ್ತು. ಆದರೆ ಎಲ್ಲಿ ಕುಡಿಯೋದು? ಬಾರ್‌ಗೆ ಹೋಗಿ ಕುಡಿಯುವ ಧೈರ್ಯವಿರಲಿಲ್ಲ. ಹಂಗಾಗಿ ಕಡೆಗೆ ರಶೀದನ ಮುಸ್ಲಿಂ ಹಾಸ್ಟೆಲ್ ರೂಮು ನಮ್ಮ ಈ ಘನ ಕಾರ್ಯಕ್ಕೆ ತಕ್ಕದ್ದೆಂಬ ತೀರ್ಮಾನಕ್ಕೆ ಬಂದೆವು. ಅಂತೂ ಒಂದು ಬಿಯರನ್ನು ಕದ್ದು ಬ್ಯಾಗಿನೊಳಗೆ ಅಡಗಿಸಿಟ್ಟುಕಂಡು ಮಟಮಮಟ ಮಧ್ಯಾಹ್ನದ ಹೊತ್ತಿಗೆ ರೂಮು ಸೇರಿಕಂಡೆವು. ಆ ಹೊತ್ತಿಗೆ ಎಲ್.ಎಲ್.ಎಂ ಮಾಡುತ್ತಿದ್ದ ರಶೀದನ ರೂಮ್‌ಮೇಟ್ ಅದೇ ತಾನೇ ಊಟ ಮುಗಿಸಿಕಂಡು ಹೋಗಿದ್ದರು.

ಹೋದವರೆ ಕಿಟಕಿ ಬಾಗಿಲುಗಳನ್ನು ಮುಚ್ಚಿ ಲೈಟ್ ಹಾಕಿಕಂಡು ಬ್ಯಾಗಿನೊಳಗಿದ್ದ ಬಾಟಲಿಯನ್ನು ಆಚೆ ತಗೆದಿಟ್ಟುಕಂಡೆವು. ಆಗ ಒಂದು ಸಮಸ್ಯೆ ಎದುರಾಯ್ತು. ಅದು ಬಾಟಲಿನ ಬಿಲ್ಟೆಯನ್ನು ಓಪನ್ ಮಾಡುವುದು. ಅದನ್ನು ಓಪನ್ ಮಾಡಲು ಓಪನರ್ ಅಂತ ಒಂದಿರುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಒಂದು ಸ್ವಲ್ಪ ಹೊತ್ತು ಯೋಚಿಸಿದೆವು. ಆಗ ರಶೀದನಿಗೆ ಇದ್ದಕ್ಕಿದ್ದಂತೆ ಒಂದು ಉಪಾಯ ಹೊಳೆಯಿತು. ಅವನು ಟೇಬಲ್ಲಿನ ಮೇಲಿದ್ದ ಬಾಟಲಿಯನ್ನು ಎತ್ತಿಕಂಡು ಬಾಗಿಲಿನ ಚಿಲಕದ ಹಿಂಬದಿಯ ಗುಮ್ಮಟಕ್ಕೆ ಬಿಲ್ಟೆ ಸಿಕ್ಕುವಂತೆ ಹಿಡುಕಂಡು ಕೆಳಮಕವಾಗಿ ಸುಮಾರು ಸಲ ಬಾಟಲಿಯನ್ನು ಗುಂಗಿಸಿ ಗುಂಗಿಸಿ ಎಳೆದ. ಆ ಬಿಲ್ಟೆಯೂ ಸುಮಾರು ಸತಾಯಿಸಿತು. ಈ ಓಪನ್ ಮಾಡುವ ಕೆಲಸವೇ ಒಂದತ್ತು ನಿಮಿಷ ಹಿಡಿಯಿತು. ನಮಗಿದ್ದ ಗಾಬರಿ ಅಂದರೆ ಆ ರೂಮ್‌ಮೇಟ್ ಏನಾದರೂ ಅಕಸ್ಮಾತ್ತಾಗಿ ತಿರುಗಿ ಬಂದುಬಿಟ್ಟರೆ ಅನ್ನುವುದು. ಮಹಾ ಸಂಪ್ರದಾಯವಾದಿಯಾಗಿದ್ದ ಅವರ ಕೈಗೆ ಸಿಕ್ಕಿಕೊಂಡರೆ ಏನಪ್ಪಾ ಗತಿ ಅಂತ ಅನಿಸತೊಡಗಿತ್ತು.

ಅಷ್ಟರಲ್ಲಿ ಅಂತೂ ಬಿಯರ್ ಬಾಟಲಿನ ಬಿಲ್ಟೆಯೇನೋ ಓಪನ್ ಆಯ್ತು. ಆದರೆ ಅದು ಓಪನ್ ಆಗುತ್ತಿದ್ದಂತೆ ಅದರೊಳಗಿದ್ದ ಬಿಯರ್ ಚಿಲುಮೆಯಂತೆ ಒಂದೇ ಸಲ ಬರ‍್ರನೆ ಉಕ್ಕಿ ಬಾಟಲಿನೊಳಗಿದ್ದ ಮುಕ್ಕಾಲು ಭಾಗ ರೂಮಿನಗಲಕೂ ಚೆಲ್ಲಿ ತಳದಲ್ಲಿ ಒಂಚೂರೇ ಚೂರು ಉಳುಕಣ್ತು. ಪುಣ್ಯಕ್ಕೆ ಆ ರೂಮ್‌ಮೇಟಿನ ಹಾಸಿಗೆಗೆ ತಾಕಿರಲಿಲ್ಲ. ಆ ಬಿಯರಿನ ವಾಸನೆ ರೂಮಂಥ ರೂಮನ್ನೆಲ್ಲಾ ಆವರಿಸಿಕಂಡಿತು. ಇಷ್ಟರ ನಡುವೆಯೂ ಆ ಬಾಟಲಿನ ತಳದಲ್ಲಿದ್ದ ಬಿಯರನ್ನು ಗುಟುಕರಿಸಿದೆವು. ಅದು ಇಬ್ಬರಿಗೂ ಎರಡೆರಡು ಗುಕ್ಕು ಬಂತು ಅಷ್ಟೇ. ಬಿಯರ್ ಚೆಲ್ಲಿದ್ದಕ್ಕೆ ನಮಗೆ ಗಾಬರಿಯಾಗಲಿಲ್ಲ. ಬದಲಿಗೆ ಆ ರೂಮನ್ನು ಕ್ಲೀನ್ ಮಾಡೋದು ಮತ್ತು ಬಿಯರಿನ ವಾಸನೆಯನ್ನು ರೂಮಿನಲ್ಲಿ ಇಲ್ಲವಾಗಿಸೋದು ದೊಡ್ಡ ಸಮಸ್ಯೆಯಾಗಿತ್ತು. ರೂಮಿನ ಕಿಟಕಿಗಳನ್ನು ಹಾರೊಡೆದೆವು. ಮೆಲ್ಲಗೆ ಬಾಗಿಲನ್ನು ವಾರೆ ಮಾಡಿ ನೋಡಿ ಯಾರೂ ಇಲ್ಲದ್ದನ್ನು ನೋಡಿಕಂಡು ಆಚೆ ಹೋಗಿ ಬಕೆಟ್ಟಿನಲ್ಲಿ ನೀರು ಹಿಡುಕಂಡು ಬಂದ. ಬಿಯರಿನ ವಾಸನೆಯನ್ನು ಕಡಿಮೆ ಮಾಡಲು ಎರಡು ಬಕೆಟ್ ನೀರು ಬೇಕಾಯ್ತು. ಅಷ್ಟೊತ್ತಿಗೆ ಸಾಯಂಕಾಲವಾಗಿತ್ತು. ಸಧ್ಯಕ್ಕೆ ಈ ಬಿಯರಿನ ಸಾವಾಸ ಬೇಡವೇ ಬೇಡ ಅನಿಸಿತ್ತು.

ಕುಬ್ಲಾಖಾನ್: `ಕುಬ್ಲಾಖಾನ್ ಅಥವಾ ಎ ವಿಷನ್ ಇನ್ ಎ ಡ್ರೀಮ್’ ಸ್ಯಾಮ್ಯುಯೆಲ್ ಟೇಲರ್ ಕೋಲರಿಜ್ ಕವಿಯ ಪ್ರಖ್ಯಾತ ಕವಿತೆ.
(ಹಿಂದಿನ ಕಂತು: ಆಚೆ ಬಾರೆಯ ಗೋಡ್ಗಲ್ಲು, ಕೆರೆ ಸಿದ್ದಪ್ಪ ಮತ್ತು ಗಂಧದ ಮುಲ್ಟು)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ