Advertisement
ಪಾಟ್ಲಾದ ದಾರಿಯಲ್ಲಿ ಮಂಕನಹಳ್ಳಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಪಾಟ್ಲಾದ ದಾರಿಯಲ್ಲಿ ಮಂಕನಹಳ್ಳಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಉಗಮದಲ್ಲೇ ಕುಮಾರ ಧಾರೆಯ ಈ ಸೊಗಸು ಬಲು ಅಪರೂಪ.  ಬಾಗತೀ ಬೆಟ್ಟಗಳ ಮೊಲೆಯುಂಡು ಬೆಳೆದ ಕುಮಾರ ದೂರದಿಂದಲೇ ತನ್ನ ವನಪು ವಯ್ಯಾರವನು ಕೋರುತಲಿತ್ತು. ಪುಷ್ಪಗಿರಿಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ. ಕುಮಾರ ಪರ್ವತದ ಆಸುಪಾಸಿನಲ್ಲಿ ಈ ಬಾಗತೀ ಬೆಟ್ಟವಿದೆ.  ಪಾಟ್ಲಾ ಬೆಟ್ಟವನ್ನು ಏರಿದರೆ ಕುಮಾರಧಾರ ಹರಿವ ಹುಟ್ಟುವ ಬೆಟ್ಟದ ಸರಣಿಯನ್ನು ಸುಮಾರಿಗೆ ಕಣ್ತುಂಬಿಕೊಳ್ಳಬಹುದು. ಪಾಟ್ಲ ಏರುವುದೇ ಒಂದು ವಿಶಿಷ್ಟ  ಅನುಭೂತಿ.  ಬೆಟ್ಟಗಳ ನಡುವೆ ಹುಟ್ಟುವ ನದಿಗಳ ಉಗಮ ಒಂದು ಸೋಜಿಗ.
ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ

 ವಿಚಿತ್ರ ಊರಿನ ಸನ್ನಿಧಿಯಲ್ಲಿ…

ಬಿಸಿಲು ಕಾಣದ ಬಿಸಿಲೆಯನ್ನು ದಾಟಿ ಮುಂದುವರಿದರೆ ನಿಮಗೊಂದು ವಿಚಿತ್ರವಾದ  ಊರು ಸಿಗುತ್ತದೆ; ಈ ಊರೇ ಮಂಕನಹಳ್ಳಿ. ಅದ್ಯಾಕೆ ಇಲ್ಲಿಗೆ ಈ ಹೆಸರು ಬಿತ್ತೊ ಗೊತ್ತಿಲ್ಲ. ನಮ್ಮ ಡ್ರೈವರ್ ನಲ್ಲಿ ವಿಚಾರಿಸಿದರೆ ಹುಳುಕು ಹಲ್ಲುಗಳನ್ನು ತೋರಿಸುತ್ತಾ ದೇಶಾವರಿ ನಗೆ ನಕ್ಕ. ಮಂಕನಹಳ್ಳಿಯ ಮಬ್ಬಿನಲ್ಲಿ ಮಳೆಕಾಸುತ್ತಾ ನಿಂತ ಯಜಮಾನರಿಗೂ ಊರ ಹೆಸರಿನ ಗುಟ್ಟು ಗೊತ್ತಿಲ್ಲ. ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಮುಗುಂ ಆಗಿ ನಿಂತಿದ್ದರು. ನನಗೋ ಊರ ಹೆಸರಿನ ಗುಂಗು. ಯಾರೀತ ಮಂಕ ಎಂಬ ಹುಚ್ಚು ಕುತೂಹಲ. “ಹೆಸರಿನ ಹಿಂದೆ ಅಂತಹದ್ದೇನಿರುತ್ತದೆ.” ಎಂಬುದು ಅವರ ಮರು ಪ್ರಶ್ನೆ? ಕರೆಯಲೊಂದು ಹೆಸರು ಅಷ್ಟೇ, ಮಂಕನಹಳ್ಳಿ.

ಬಿಸಿಲೆಯ ವ್ಯೂ ಪಾಯಿಂಟ್ ಅನ್ನು ದಾಟಿ ಸ್ವಲ್ಪ ಮುಂದಕ್ಕೆ ಚಲಿಸಿದರೆ ಎಡಕ್ಕೆ ಕಾಣಿಸುವ ಈ ಜಾಗವನ್ನು Ridge ಎನ್ನುವರು ಅದ್ಯಾವ ಪುಣ್ಯಾತ್ಮ ಮಾಡಿದ ಸಂಶೋಧನೆಯೋ ಏನೋ? ಅದೇ ಜಿಲ್ಲೆಯ ಹತ್ತಾರು ಟ್ಯಾಕ್ಸಿ ಡ್ರೈವರ್‌ನಲ್ಲಿ ಕೇಳಿದರೂ ಸಹ ಈ ಜಾಗದ ಬಗ್ಗೆ ಅವರಿಗೆ ಅರಿವಿಲ್ಲ. “ಇಂತಹದೊಂದು ಜಾಗವಿದೆಯೇ?” ಎಂಬುದು ಅವರ ಮರು ಪ್ರಶ್ನೆ.  ಇಲ್ಲಿ ಒಂದು ಕಲ್ಲನ್ನು ನೆಡಲಾಗಿದೆ. ಕಲ್ಲಿನ ಮೇಲೆ Ridge ಎಂದು ಕೆತ್ತಲಾಗಿದೆ ಈ ridge ನ ಎದುರಿಗೆ ನೀವು ನಿಂತರೆ ಎಡ ದಿಕ್ಕಿಗೆ ಬಿದ್ದ ನೀರು ಹರಿದು ಅರಬ್ಬಿ ಸಮುದ್ರಕ್ಕೂ ಹಾಗೂ Ridge ನ ಬಲ ಕಣಿವೆಗೆ ಬಿದ್ದ ನೀರು ಹರಿದು ಬಂಗಾಳಕೊಲ್ಲಿಗೂ ಸೇರುತ್ತದೆ ಎನ್ನುವುದು ಇಲ್ಲಿನ ವಿಶೇಷ. ಪೂರ್ವದ ಕಡೆ ಬಿದ್ದ ನೀರು ಹೇಮಾಮತಿಯ ಒಡಲನ್ನು ಸೇರಿ ಕಾವೇರಿಯೊಂದಿಗೆ ಮಿಳಿತವಾಗಿ ಬಂಗಾಳಕೊಲ್ಲಿ ಸೇರಿ ತನ್ನ ಪ್ರಯಾಣವನ್ನು ಮುಗಿಸುವುದು.  ಯಾವುದೋ ಪುಣ್ಯಾತ್ಮನ ವಿಶಿಷ್ಟ ಸಂಶೋಧನೆ! ಬ್ರಿಟಿಷ್ ಕಾಲದಲ್ಲಿ ನೆಟ್ಟ ಕಲ್ಲಿನ ಸಂಶೋಧನಾ ಕತೆ.   ಹಾಗಂತ ನಾನು ನಂಬುವುದಿಲ್ಲವೆಂದು ನೀವು ತಿಳಿಯಬೇಡಿ. ಕುಮಾರಧಾರ ಒಡಲು ಸಹ Ridge ನ ಬಲ ದಿಕ್ಕಿಗೆ ಬರುತ್ತದೆ. ಆದರೂ ಅದು ಸೇರುವುದು ಅರಬ್ಬಿ ಕಡಲನ್ನೇ! ಜಿಜ್ಞಾಸೆ!! ಎಲ್ಲೋ ಬಿದ್ದ ಹನಿಗೆ ಯಾವುದೋ ಕಡಲಿನ ಭಾಗ್ಯ. ಈ ಹನಿಗಳ ಅಪೂರ್ವ ಪಯಣವನ್ನು ದಾಖಲಿಸಿದ ಮಹಾ ಪುಣ್ಯಾತ್ಮನಿಗೆ ಶರಣು. ಬಲ ದಿಕ್ಕಿಗೆ ಬಿದ್ದ ಹನಿಗಳು ಬಲುದೂರ ಪಯಣಿಸಿ ಬಂಗಾಳಕೊಲ್ಲಿಯ ಒಡಲಿಗೆ ಸೇರುತ್ತವೆ. ಪರೀಕ್ಷಿಸಿ ನೋಡದೆ ಯಾವುದನ್ನು ನಂಬಬೇಡಿ ಎಂಬುದು ವಿಜ್ಞಾನ ಕಲಿಸಿಕೊಟ್ಟ ಪಾಠ.  ಮಡಿಕೇರಿ ಜಿಲ್ಲೆಗೆ ಸೇರಿದ ಈ ಜಾಗ ಬಿಸಿಲೆ ಘಾಟಿಗೆ ಅಂಟಿಕೊಂಡಿದೆ. ಕಾಲದ ಅನಂತ ಅನುಭವದ ಮೂಸೆಯಿಂದ ಮೂಡಿರಬಹುದಾದ ಜ್ಞಾನ ಮೂಲ. ಇಂತಹುದೇ ಇನ್ನೊಂದು ಕಲ್ಲು ಕಳಸದ ಸಮೀಪವಿದೆ ಎನ್ನುತ್ತಾರೆ.  ನನಗಿನ್ನೂ ಅಲ್ಲಿಗೆ ಹೋಗುವ ಸೌಭಾಗ್ಯ ದೊರೆತಿಲ್ಲ. ವಿವರಣೆಗೆ ನಿಲುಕದ ಸದಾ ಮಳೆ ಸುರಿಸುವ ನಾಡು.

 ಮಂಕನಹಳ್ಳಿಯಿಂದ ಮೂಕನ ಮನೆಗೆ

ಮೂರು ದಾರಿಯಿಂದ ಹರಿದ ರಸ್ತೆ ಒಂದು ಆರು ಕಿಲೋಮೀಟರ್ ಚಲಿಸಿ ಮೂಕನ ಮನೆ ಎನ್ನುವಲ್ಲಿ ತಟಸ್ಥವಾಗುತ್ತದೆ. ಇಲ್ಲಿಂದ ಕಾಲ್ ನಡಿಗೆಯಲ್ಲಿ ಸ್ವಲ್ಪ ದೂರ  ಚಲಿಸಿದರೆ ಕಾಡಿನ ನಡುವೆ ಒಂದು ಸುಂದರ ಜಲಪಾತ ತನ್ನ ಸೆರಗುಹಾಸಿ ಹರಿಯುತ್ತದೆ. ನೀರು ಹರಿವಿನ ಪ್ರತಿ ಎಳೆಯೂ ಸುಂದರ ಗಮಕವನ್ನು  ಕೇಳಿಸಿದಂತೆ ಕಾಡ ನಡುವೆ ಪಲ್ಲವಿಸುತ್ತದೆ. ಹಚ್ಚ ಹಸುರಿನ ನಡುವೆ ಪವಡಿಸಿದ ನೂರಾರು ರೆಸಾರ್ಟುಗಳು ನಿಮ್ಮ ತಂಗುವಿಕೆಯ ಆನಂದವನ್ನು ಜೇಬಿನ ಅಳತೆಗೆ ಅನುಸಾರವಾಗಿ ವಿಸ್ತರಿಸುತ್ತದೆ ಇಲ್ಲ ಕಿರಿದುಗೊಳಿಸುತ್ತದೆ. ಸದಾ ಅಜ್ಞಾತವಾಗಿ ಉಳಿದ ಮೂಕನ ಮನೆಯೊಂದು ಪರಿಸರ ಪ್ರೇಮಿಗಳ ಕೇಂದ್ರಬಿಂದು. ಮತ್ತದೇ ಹೆಸರಿನ ತಲೆ ಹರಟೆ. ಸೊಪ್ಪು ಕೊಯ್ಯಲು ಬಂದ ಅಜ್ಜನಲ್ಲಿ   ಯಾಕೆ ಹೆಸರು ಎಂಬ ಪ್ರಶ್ನೆಯೊಂದನ್ನು ಮುಂದಿಟ್ಟೆ. ಮತ್ತದೇ ಉದಾಸಿನ್ಯ ಎದುರಾಯಿತು. ಅಜ್ಜ ನನಗೇನು ತಿಳಿದಿಲ್ಲ ಎಂದು ನಮ್ಮನ್ನು ಸಾಗ ಹಾಕಿದ. ಬದುಕಿಕೊಂಡ ಪುಣ್ಯಾತ್ಮ.

ಮಂಕನಹಳ್ಳಿಯಿಂದ ಪಟ್ಲಾದಡೆಗೆ

ಮಂಕನಹಳ್ಳಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ವಿರಮಿಸಿದ ಪಟ್ಲಬೆಟ್ಟವು ಇಲ್ಲಿಂದ ದೃಷ್ಟಿ ಗಮ್ಯವಾಗಿದೆ. ಮಂಕನಹಳ್ಳಿಯ ಮೂರು ದಾರಿಯಿಂದ ಪಾಟ್ಲಾದ ಪುಟಾಣಿ ಬೆಟ್ಟ ಗೋಚರಿಸುತ್ತದೆ. ಮೂಕನ ಮನೆಯ ಜಲಪಾತದ ಸವಿಯನ್ನು ಉಂಡು ತಂಗಿ ಮಂಜನ್ನು ತಬ್ಬಿ ಹಿಡಿದು ಮತ್ತೆ ನಿಧಾನಕ್ಕೆ ತೆವಳುತ್ತಾ  ಪಾಟ್ಲಾದ ಮಂಜನ್ನು ಸವರಲು ಜಾಗ ಖಾಲಿ ಮಾಡಿದೆವು. ಪುನಹ ಮಂಕನಹಳ್ಳಿಗೆ ಬಂದಾಗ ನಡು ಮಧ್ಯಾನ ಮಂಕನಹಳ್ಳಿಯ ವೃತ್ತದ ಬಳಿ ಇರುವ ಕೋಳಿ ಒಂದು ಈಗಷ್ಟೇ ಬೆಳಗಾಯಿತೆಂಬಂತೆ ಬೆಳಕಿಗೆ  ಕಣ್ತೆರೆದು ಕ್ಕೂ  ಕ್ಕೋ ಕೋ  ಎಂದು ಕೂಗಿ ಹೋಗಿ ಬರುವ ಪ್ರಯಾಣಿಕರನ್ನು ತಬ್ಬಿಬ್ಬು ಮಾಡುತ್ತಲಿತ್ತು. Ridge ನ ಎಡ ದಿಕ್ಕಿಗೆ ಯಜಮಾನರಿಬ್ಬರು ನಾಳಿನ ನಾಟಿ ತಯಾರಿಯಲ್ಲಿದ್ದರು. ನಾಟಿಗಾಗಿ ತಯಾರಿಸಿದ ಎಳೆ ಭತ್ತದ ಸಸಿಗಳನ್ನು ಗದ್ದೆ ತುಂಬಾ ಹರವುತ್ತಲಿದ್ದರು. ಪ್ಲಾಸ್ಟಿಕ್‌ನ ಕಂಬಳಿ ಕೊಪ್ಪೆ ಅವರನ್ನು ಮಳೆಗೆ ತೊಪ್ಪೆಯಾಗದಂತೆ ಕಾಪಾಡುತಲಿತ್ತು. ದೂರದ ಪಾಟ್ಲಾ ಬೆಟ್ಟ ಬೀಡಿ ಎಳೆದಂತೆ ಬಿಳಿ ಹೊಗೆಯನ್ನು ಬಿಡುತಲಿರುವುದು ಮಂಕನಹಳ್ಳಿಯಿಂದ ದೃಷ್ಟಿ ಗೋಚರವಾಗುತ್ತದೆ. ಪಾಟ್ಲಾ ಬೆಟ್ಟವನ್ನು ಪೂರ್ಣ ಏರಲಾಗದೆ ಕೆಲವರು ಹಿಂದಿನ ಪುಟಾಣಿ ಬೆಟ್ಟವೇರಿ ಚಂದ ನೋಡುತ್ತಾ ಸೆಲ್ಫಿಯಲ್ಲಿ ಮುಳುಗೇಳುತ್ತಲಿದ್ದರು.  ಮಂಜು ಅವರನ್ನು ಸದಾ ತನ್ನ ತೆಕ್ಕೆಯಲ್ಲಿ ಸೆರೆ ಹಿಡಿಯಲು ಕಾಯುತಲಿತ್ತು . ಮಂಜು ಮತ್ತು ಮುಸಿಯ ಇಲ್ಲಿನ ಮುಖ್ಯ ಅತಿಥಿಗಳು. ಪಾಟ್ಲಾದ ಕಣಿವೆ ಕಾಡುಗಳಲ್ಲಿ ಬೆಳೆಯುವ ಹಣ್ಣು ಹಂಪಲುಗಳ ಪ್ರಮುಖ ಗಿರಾಕಿ ಮುಸಿಯಾಗಳು. ಇಲ್ಲಿ ಸಿಗೋ ಕುಂಟನೇರಳೆ ಮುಸಿಯಾಗಳಿಗೆ ಬಲು ಪ್ರೀತಿ.  ಸದಾ ಹೇಳದೇ ಕೇಳದೆ ಪಾಟ್ಲಾ ಬೆಟ್ಟವನ್ನು ಮಂಜಿನಿಂದ ಸುತ್ತಿಟ್ಟವರು. ಮಂಕನಹಳ್ಳಿಯಿಂದ ಹೊರಟ ಮೂರನೇ ಕವಲಿಗೆ ಅಂಟಿಕೊಂಡು ಸ್ವಲ್ಪವೇ ಸ್ವಲ್ಪ ದೂರ ಚಲಿಸಿ ಕದ್ರಾ ಹಳ್ಳಿಯ ಮೊದಲು ಪಾಟ್ಲಾದ ದಾರಿ ಗೋಚರವಾಗುತ್ತದೆ.  ಚಾರಣಗಳ ಹಾದಿಯ ಹತ್ತಾರು ಚಾರಣಳಲ್ಲಿ ಇದು ಅತಿವಿಶಿಷ್ಟ.  ಹತ್ತಾರು ಕಾರುಗಳು ಅಲ್ಲಲ್ಲಿ ನಿಂತು ಕರೆದು ತಂದ ಯಜಮಾನರಿಗಾಗಿ  ದಾರಿ ಕಾಯುತ್ತಿದ್ದವು.   ನಮ್ಮನ್ನು ಇಳಿಸಿದ ಕಾರು ಮಾಲಿಕ ಹತ್ತಿಬನ್ನಿ ಎಂದು ಬಾಯ್ ಬಾಯ್ ಹೇಳಿದ. ನಾವು ಬರುತ್ತಲೇ ಒಂದು ಮುಸಿಯಾಗಳ ತಂಡ ನಮ್ಮ ದಾರಿಗಡ್ಡವಾಗಿ ನಿಂತಿದ್ದವು. ಬೆಟ್ಟದ ಬುಡದಿಂದ ಅನಂತವಾದ  ಗುರ್ಗಿ ಸಸ್ಯಗಳು ನೇರಳೆ ಹೂ ಬಿಟ್ಟು ನಲಿಯುತ್ತಿದ್ದವು. ಅಲ್ಲಲ್ಲಿ ಮರಗಳು ಹಸಿರು ಪಾಚಿಯನು ತೊಗಲಿನಂತೆ ತೊಟ್ಟಿದ್ದು. ಸಲುಪ ಹೆಚ್ಚಾಗಿ ಬೆಳೆದ ಪಾಚಿಗಳು ಮುದುಕರ ತೊಗಲಿನಂತೆ ನೇತಾಡುತಿದ್ದವು. ಅಪೂರ್ವವಾದ ಪಾಟ್ಲಾ ಬೆಟ್ಟಕ್ಕೆ ದಾರಿಯೊಂದು ಕಲ್ಲು ಮುಳ್ಳು ಕಂಟಿಗಳ ನಡುವೆ ಹಾದು ಹೋಗಿತ್ತು. ಜೊತೆಯಲ್ಲಿ ಸಾಗಿ ಬಂದ ಜೀಪಿನ ರಸ್ತೆ ತನ್ನ ಮೇಲಿನ ಡಾಂಬರು ಕಳಚಿಕೊಂಡು ಬೆತ್ತಲೆಯಾಗಿ ನಗುತ್ತಲಿತ್ತು. ಹತ್ತಾರು ಮರಗಳಿಂದ ಕೂಡಿದ ಕಾಡು ರಸ್ತೆ ಸ್ವಲ್ಪ ದೂರಕ್ಕೆ ಹುಲ್ಲುಗಾವಲಿನ ಎರಡು ಸುಂದರ ಬೆಟ್ಟಗಳನ್ನು ನಿಮ್ಮ ಮುಂದೆ ಅನಾವರಣ ಮಾಡುತ್ತಲಿದ್ದವು. ಮಲ್ಲಿಗೆಯಂತಹ ಮೃದು ಮಂಜು  ಮೈ ಕೈಗಳಿಗೆ ಮುತ್ತಿಕ್ಕಿ ಮುಂದಡಿ ಇಡುತ್ತಿದ್ದವು .  ಮಂಜು ಆಗಸ ನೆಲ ಹುಲ್ಲು ಎಲ್ಲವೂ ಏಕತ್ರವಾಗುವ  ಪ್ರಕೃತಿಯ ಈ ಪರಿಗೆ ಬೆರಗು ಗೊಂಡೆ. ಮುಂದುವರೆದರೆ ಮತ್ತಿಷ್ಟು ಮಂಜಷ್ಟೇ ನೋಡಬೇಕೆಂದು ಪಾಟ್ಲಾದ ತಂಗಿಯನ್ನೇರಿ ಕೆಲವರು ಸಂಭ್ರಮಿಸುತ್ತಿರುವುದು ಕಂಡಿತು. ಪಾಟ್ಲಾದ ನೆತ್ತಿಯಿಂದ ಮಲಹಳ್ಳಿ ಪಾಟ್ಲಾದ ನೆತ್ತಿಯಲ್ಲಿ ದೂರ ದೂರದಿಂದ ಕಾಣಸಿಗುವ ಹುಲ್ಲ ಬೆಟ್ಟಗಳ ನಡುವೆ ತುಸು ನಾಚಿಕೆಯಿಂದ ಬಳಕುತ್ತಾ  ಹರಿವ ಮಲಹಳ್ಳಿಯ ಸೊಬಗನ್ನು ಮಂಜಿನೊಂದಿಗೆ ಹೀರಬಹುದು. ಉಗಮದಲ್ಲೇ ಕುಮಾರ ಧಾರೆಯ ಈ ಸೊಗಸು ಬಲು ಅಪರೂಪ.  ಬಾಗತೀ ಬೆಟ್ಟಗಳ ಮೊಲೆಯುಂಡು ಬೆಳೆದ ಕುಮಾರ ದೂರದಿಂದಲೇ ತನ್ನ ವನಪು ವಯ್ಯಾರವನು ಕೋರುತಲಿತ್ತು. ಪುಷ್ಪಗಿರಿಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ. ಕುಮಾರ ಪರ್ವತದ ಆಸುಪಾಸಿನಲ್ಲಿ ಈ ಬಾಗತೀ ಬೆಟ್ಟವಿದೆ.  ಪಾಟ್ಲಾ ಬೆಟ್ಟವನ್ನು ಏರಿದರೆ ಕುಮಾರಧಾರ ಹರಿವ ಹುಟ್ಟುವ ಬೆಟ್ಟದ ಸರಣಿಯನ್ನು ಸುಮಾರಿಗೆ ಕಣ್ತುಂಬಿಕೊಳ್ಳಬಹುದು. ಪಾಟ್ಲ ಏರುವುದೇ ಒಂದು ವಿಶಿಷ್ಟ  ಅನುಭೂತಿ.  ಬೆಟ್ಟಗಳ ನಡುವೆ ಹುಟ್ಟುವ ನದಿಗಳ ಉಗಮ ಒಂದು ಸೋಜಿಗ. ಮಂಜಿನ ಹನಿಯಂತೆ ಭಾಗಮಂಡಲದಲ್ಲಿ ತೊಟ್ಟಿಕ್ಕುವ ಕಾವೇರಿ ಸದಾ ನಮಗೊಂದು ಯಕ್ಷ ಪ್ರಶ್ನೆ. ನಮಗಾಗಿ ನೂರಾರು ಬೆಟ್ಟಗಳಿಂದ ಹನಿಗಳನ್ನು ಬೇಡಿ ತರುವ ಕುಮಾರಧಾರೆಗೆ ಪಾಟ್ಲಾದ ನೆತ್ತಿಯಿಂದ ನಮಿಸಿದೆ. ಏನೋ ಪುಳಕ ಏನೋ ರೋಮಾಂಚನ. ಪಾಟ್ಲಾ ಸಿಗುವ ತನಕ ಕಂಡ ಕಂಡ ಹಳ್ಳ ತೋಡುಗಳನ್ನು ಸುಮ್ಮನೆ ಮಾತಿಗೆಳೆದೆ. ಈ ನೀರೆಲ್ಲ ಎಲ್ಲಿಗೆ ಸೇರುತ್ತದೆ ಎನ್ನುವ ಕೆಟ್ಟ ಕುತೂಹಲ.  ದಾರಿ ಉದ್ದಕ್ಕೂ ಡ್ರೈವರ್‌ನ ತಲೆ ತಿಂದೆ. ಇನ್ನೂ ಸಹ ಕುತೂಹಲ ತಣಿದಿಲ್ಲ. ಪುಣ್ಯಾತ್ಮ ಡ್ರೈವರ್ ಸಾಹೇಬ ನನ್ನ ಜೊತೆಗೆ ಬರದೆ ಕಾರಿನಲ್ಲಿ ನಿದ್ದೆ ಹೋದ, ಇಲ್ಲದೇ ಇರುತ್ತಿದ್ದರೆ ನೂರಾರು ಪ್ರಶ್ನೆಗಳಿಂದ ಆತನ ತಲೆಯನ್ನು ತುಂಬಿಸಿಡುತ್ತಿದ್ದೆ. ಯಾರೋ ಮೊದಲೇ ಅವನಿಗೆ ಸುಳಿವು ಕೊಟ್ಟಿದ್ದರೊ ಏನೋ.

ದಾರಿಗುಂಟ ಸಿಗುವ ಪುಟಾಣಿ ಹಳ್ಳಿಗಳನ್ನು ಮಾತಾಡಿಸಿಸುತ್ತಾ ಪಾಟ್ಲಾದ ನೆತ್ತಿಯಿಂದ ಮಲ್ಲಹಳ್ಳಿಯ ಮಂಜು ಹೀರಲು ಹೊರಟು ನಿಂತೆ. ಮಲ ಹಳ್ಳಿಯ ಮಡಿಲಲ್ಲಿ ಜಿನುಗಿದ ನೀರು ನಾವು ಸುಬ್ರಹ್ಮಣ್ಯವನ್ನು ಕಾರಲ್ಲಿ ತಲುಪುವುದರೊಳಗೆ ತಲುಪಿರುತ್ತದೆಯೋ ಇಲ್ಲವೋ ಎಂಬ ಮತ್ತೊಂದು ಜಿಜ್ಞಾಸೆಯನ್ನು ಚಾಲಕನಲ್ಲಿ ಹೇಳಿದೆ. ಕನ್ನಡ ಬಂದರು ಆತನಿಗೇನೂ  ಅರ್ಥವಾಗಲಿಲ್ಲ. ಏನೇನೋ ಹಲುಬಿದ. ಮತ್ತೇನು ಪ್ರಶ್ನಿಸದೆ ಸುಮ್ಮನೆ  ಅಲ್ಲಿಂದ ಹೊರಟು ನಿಂತೆ.

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ