ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಸೇರಿ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ.. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಒಳ್ಳೆಯ ಜನ ಅವರು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

 

ನನ್ನ ಅಪ್ಪ ಅಮ್ಮ ಇಬ್ಬರು ಅಧ್ಯಾಪಕರು. ಆಗೆಲ್ಲಾ ಅವರು ಹಳ್ಳೀ ಮೇಷ್ಟ್ರು. ನಾನು ಬೆಳೆದದ್ದು ಸಣ್ಣ ಹಳ್ಳಿಗಳಲ್ಲಿ. ಅಧ್ಯಾಪಕರು ಒಂದು ಕಡೆಯಿಂದ ಒಂದು ಕಡೆಗೆ ವರ್ಗವಾಗಿ ಹೋಗುತ್ತಿದ್ದುದರಿಂದ, ಕೊಡಗಿನ ವಿವಿಧೆಡೆ , ಹಲವು ಊರುಗಳಲ್ಲಿ ಬೆಳೆದಿದ್ದೇನೆ. ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ದಾಟಿ, ಮಡಿಕೇರಿಯ ಹೈಸ್ಕೂಲ್ ಗೆ ಬಂದಾಗ ನನಗೆ ಕೇಳದೆಯೇ ಒಂದು ಗೌರವ ಸಿಕ್ಕಿ ಬಿಟ್ಟಿತ್ತು. ಆಗಿನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಎಂಟನೇ ಕ್ಲಾಸಿನಲ್ಲಿ, ಅಂದರೆ ಅಂದಿನ ಥರ್ಡ್ ಫಾರ್ಮ್ ನಲ್ಲಿ ನಾನು ಕೊಡಗಿಗೆ ಎರಡನೇ ಸ್ಥಾನ ಬಂದು ಕೊಡಗಿಗೆ ಇದ್ದ ಏಕೈಕ ಪೇಪರ್ “ಶಕ್ತಿ”ಯಲ್ಲಿ ನನ್ನ ಹೆಸರು ದೊಡ್ಡದಾಗಿ ಅಚ್ಚಾಗಿತ್ತು. ಅದನ್ನ ಮಡಿಕೇರಿಯ ಹೈಸ್ಕೂಲಿನ ಅಧ್ಯಾಪಕರು ನೋಡಿ ನನ್ನನ್ನು ಸ್ವಲ್ಪ ಜಾಸ್ತಿ ಗೌರವದಿಂದ ಕಾಣುತ್ತಿದ್ದರು. ಅಲ್ಲಿಯವರೆಗೆ ಕೊಡಗಿನಲ್ಲಿ ಪ್ರೌಢಶಾಲೆಯಲ್ಲಿ ಇದ್ದದ್ದು ಕನ್ನಡ ಮಾಧ್ಯಮ ಮಾತ್ರ. ಮೊತ್ತ ಮೊದಲಿಗೆ ಇಂಗ್ಲೀಷ್ ಮಾಧ್ಯಮ ಶುರು ಮಾಡಿದ ಕೀರ್ತಿ ಮಡಿಕೇರಿಯ ಸರ್ಕಾರಿ ಪ್ರೌಢಶಾಲೆಗೆ. ಹಾಗೆಯೇ ಒಳ್ಳೇ ಅಂಕ ಗಳಿಸಿದ್ದ ನಮ್ಮಲ್ಲಿ ಕೆಲವರನ್ನು, ನಮ್ಮನ್ನು ಕೇಳದೇ ಇಂಗ್ಲೀಷ್ ಮಾಧ್ಯಮ ತರಗತಿಗೆ ಸೇರಿಸಿ ಬಿಟ್ಟಿದ್ದರು.

ಪ್ರೌಢಶಾಲೆಯಲ್ಲಿ ಓದಿ, ಮಡಿಕೇರಿಯ ಹಿರಿಯ ಕಾಲೇಜಿನಲ್ಲಿ ಪಿ. ಯು. ಸಿ ಮುಗಿಸಿದ ನನಗೆ ಸ್ವಲ್ಪ ಮಟ್ಟಿನ ಉತ್ತಮ ಅಂಕ ಬಂದಿತ್ತು. ಹಾಗೆಯೇ ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಸೀಟಿಗಾಗಿ ಒಂದು ಸಂದರ್ಶನ ಅಥವಾ ಇಂಟರ್ವ್ಯೂ ನಡೆದು, ಕೆಲವು ದಿನಗಳ ಬಳಿಕ ಅಲ್ಲಿಂದ ಬಂದ ಪತ್ರದಲ್ಲಿ ನನಗೆ ಕಾಲೇಜಿನಲ್ಲಿ ಒಂದು ಸೀಟ್ ಕೂಡಾ ಸಿಕ್ಕಿತು. ಇದ್ದದ್ದೂ ಹಳ್ಳಿಯಲ್ಲಿ. ಪತ್ರ ಮನೆಗೆ ಬರಲು ಅದೇನೋ ತೊಂದರೆ ಆಗಿ, ಕೆಲವು ದಿನ ತಡವಾಗಿ ಬಿಟ್ಟಿತ್ತು.

ಕ್ಲಾಸಿಗೆ ಕೂಡಲೇ ಹೋಗಿ ಸೇರಿಕೊಳ್ಳಬೇಕು ಎಂಬ ಪತ್ರ ನೋಡಿ ಗಡಿಬಿಡಿಯಲ್ಲಿ ಹೊರಟೆ. ಅಣ್ಣ ಮೈಸೂರಿನ ಹತ್ತಿರದ ಊರಿನಲ್ಲಿ ವಿದ್ಯುತ್ ನಿಗಮದಲ್ಲಿ ಇಂಜಿನಿಯರ್. ನಾನು ಮನೆಯಿಂದ ಮೈಸೂರಿಗೆ ಹೋಗಿ, ಅವರು ಚೆನ್ನಪಟ್ಟಣದಿಂದ ಅಲ್ಲಿಗೆ ಬರುವುದು ಎಂಬ ವ್ಯವಸ್ಥೆ ಮೊದಲೇ ಮಾಡಿಕೊಂಡಿದ್ದೆವು. ಇಲ್ಲಿಯವರೆಗೂ ಎಲ್ಲಾ ಸುಗಮವಾಗಿತ್ತು.

ಅಂದು, ನನ್ನ ಅಪ್ಪನ ತಲೆಗೆ ಅದೇನು ಭೂತ ಹೊಕ್ಕಿತೋ ತಿಳಿದಿಲ್ಲ. ಪ್ರಗತಿಪರರಾಗಿದ್ದ ಅವರು, ಅಂದು ಮಾತ್ರ ಒಂದು ವಿಚಿತ್ರ ಆಜ್ಞೆ ಮಾಡಿದರು. ನಾಳೆ ನಾಡಿದ್ದು ಭರಣಿ ಮತ್ತು ಕೃತಿಕಾ ನಕ್ಷತ್ರ. ಆದುದರಿಂದ ಕಾಲೇಜಿಗೆ ಸೇರುವಂತಹ ಒಳ್ಳೆ ಕಾರ್ಯಕ್ಕೆ ಆ ಎರಡು ದಿನಗಳಲ್ಲಿ ಮಗ ಹೊರಡಬಾರದು ಎಂದುಬಿಟ್ಟರು.

ಅಲ್ಲಿಯ ತನಕ ಈ ನಕ್ಷತ್ರ, ರಾಹುಕಾಲ, ಗುಳಿಗ ಕಾಲ, ಎಲ್ಲಾ ನಮ್ಮ ಮನೆಯಲ್ಲಿ ಕೇಳುತ್ತಿದ್ದದ್ದೆ ಅಪರೂಪ. ಈಗ ಇದು ಅವರ ಒಂದು ಹೊಸ ವರಸೆ. ಅತ್ತೂ ಕರೆದು, ಜಗಳ ಮಾಡಿದರೂ ಯಾವುದಕ್ಕೂ ಜಗ್ಗದ ನನ್ನ ಅಪ್ಪನ ಮಾತಿಗೆ ಕಟ್ಟುಬಿದ್ದು ನಾನು ಮೂರನೇ ದಿನ ಮೈಸೂರಿಗೆ ಪ್ರಯಾಣ ಬೆಳೆಸಿದೆ.

ಊರಿನಿಂದ ಮೈಸೂರಿಗೆ ಹೋಗಿ ಕಾಲೇಜಿನಲ್ಲಿ ಅಲ್ಲಿನ ದಾಖಲಾತಿಯ ಎಲ್ಲಾ ಕೆಲಸಗಳು ಮುಗಿಯುವಷ್ಟರಲ್ಲಿ ಮಧ್ಯಾಹ್ನ ಆಗಿಹೋಗಿತ್ತು. ಅಲ್ಲಿಂದ ಹಾಸ್ಟೆಲ್ ಸೀಟಿಗಾಗಿ ಹಾಸ್ಟೆಲ್ ಕಡೆ ಪ್ರಯಾಣ ಬೆಳೆಸಿದೆವು. ಅಲ್ಲಿ ಶುರುವಾಗಿತ್ತು ನನ್ನ ದುರದೃಷ್ಟದ ದಿನಗಳು..

ಹಾಸ್ಟೆಲ್ ನಲ್ಲಿ ಖಾಲಿ ಇದ್ದ ಕೊನೆಯ ರೂಮನ್ನು, ನಾವು ಹೋಗುವ ಸ್ಪಲ್ಪ ಸಮಯದ ಹಿಂದೆ, ಕೊಟ್ಟು ಆಗಿ ಬಿಟ್ಟಿತ್ತು. ಹಾಗಾಗಿ ಹಾಸ್ಟೆಲಿನಲ್ಲಿ “ನೋ ವೇಕೆನ್ಸಿ”. ಮೈಸೂರು ನನಗೆ ಕಾಣದ ಊರು. ಮೈಸೂರಿನಲ್ಲಿ ನನ್ನ ಪರಿಚಯಸ್ಥರು ಯಾರೂ ಇರಲಿಲ್ಲ. ಕಾಲೇಜಿಗೆ ಸೇರಿಯಾಗಿದೆ, ಮರುದಿನ ತರಗತಿಗಳು ಶುರುವಾಗುತ್ತದೆ. ಹೋಟೆಲಿನಲ್ಲಿ ಉಳಿದುಕೊಳ್ಳುವಷ್ಟು ಒಳ್ಳೆಯ ಸ್ಥಿತಿವಂತ ಮನೆಯಿಂದ ಬಂದವನು ನಾನು ಅಲ್ಲಾ. ಇನ್ನೇನು ಮಾಡುವುದು ಎಂದು ಯೋಚಿಸುವಾಗ ಅಣ್ಣನಿಗೆ ಬಂದ ಯೋಚನೆ ಇದು.

ಅಣ್ಣ ಮೈಸೂರಿನ ಹತ್ತಿರದ ಊರಿನಲ್ಲಿ ವಿದ್ಯುತ್ ನಿಗಮದಲ್ಲಿ ಇಂಜಿನಿಯರ್. ನಾನು ಮನೆಯಿಂದ ಮೈಸೂರಿಗೆ ಹೋಗಿ, ಅವರು ಚೆನ್ನಪಟ್ಟಣದಿಂದ ಅಲ್ಲಿಗೆ ಬರುವುದು ಎಂಬ ವ್ಯವಸ್ಥೆ ಮೊದಲೇ ಮಾಡಿಕೊಂಡಿದ್ದೆವು. ಇಲ್ಲಿಯವರೆಗೂ ಎಲ್ಲಾ ಸುಗಮವಾಗಿತ್ತು.

ಅಣ್ಣ ಕೆಲಸ ಮಾಡುತ್ತಿದ್ದ ಊರಿನ ದೊಡ್ಡಗೌಡ್ರು ಮೈಸೂರಿನಲ್ಲಿ ಯಾವುದೋ ಒಂದು ಬೀದಿಯಲ್ಲಿ ಮನೆ ಮಾಡಿಕೊಂಡಿದ್ದರು. ಅದು ನೆನಪಿಗೆ ಬಂದು, ಸೀದಾ ಬಟ್ಟೆ ಬ್ಯಾಗುಗಳನ್ನು ಎತ್ತಿಕೊಂಡು ಅವರ ಮನೆ ಕಡೆ ಪ್ರಯಾಣ ಬೆಳೆಸಿದೆವು. ಅಲ್ಲಿ ಅವರ ಮನೆಗೆ ಹೋಗಿ ನೋಡಿದರೆ ಅವರ ಮನೆಯ ಸಾಮಾನುಗಳನ್ನು ಎಲ್ಲಾ ಪ್ಯಾಕ್ ಮಾಡಿ ಆಗಿತ್ತು. ಅವರಿಗೆ ಬೇರೆ ಊರಿಗೆ ವರ್ಗ ಆಗಿರುವುದರಿಂದ, ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಅಂದು ಅವರು ಆ ಮನೆಯಲ್ಲಿ ಇರುವ ಕೊನೆಯ ದಿನ. ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂಬಂತೆ ಸದ್ಯಕ್ಕೆ ಅಂದಿನ ದಿನ ಅವರ ಮನೆಯಲ್ಲಿ ಕಳೆಯುವುದು ಎಂದು ನಿಶ್ಚಯಿಸಿದೆ. ಅಣ್ಣ ಅವರ ಕೆಲಸದ ಊರಿಗೆ ಹೋದರು.

ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಆಗುವಾಗ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಪಾಪದ ಜನ ಅವರು. ನನ್ನ ಕಷ್ಟ ನೋಡಲಾರದೆ ಮನೆಯಲ್ಲಿ ಯಾವುದೋ ಒಂದು ಮೆಣಸಿನ ಸಾರು ಮಾಡಿ ನನಗೆ ಕುಡಿಸಿದರು. ಸ್ಪಲ್ಪ ಹೊತ್ತಿನಲ್ಲಿ ತಲೆನೋವು ಕಡಿಮೆ ಆಗಿ ನಿದ್ರೆ ಚೆನ್ನಾಗಿ ಬಂತು.

ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗುವ ಸಮಯ. ಅವರೇನೋ ತಿನ್ನಲು ಕೊಟ್ಟದನ್ನು ತಿಂದು ಕಾಲೇಜಿಗೆ ಓಡಿದೆ. ಮಧ್ಯಾಹ್ನ ನಾನು ಬರುವಾಗ ಅವರು ಮನೆಗೆ ಬೀಗ ಹಾಕಿ, ನನ್ನನ್ನು ಕಾಯುತ್ತಿದ್ದಾರೆ. ಇಲ್ಲೂ ಮತ್ತೊಂದು ಏಟು. ಅಣ್ಣನ ಪರಿಚಯವಿದ್ದ ಏಕೈಕ ವ್ಯಕ್ತಿ ಊರು ಬಿಡುತ್ತಿದ್ದಾರೆ. ಆದರೂ ಅವರು ನನ್ನ ಕೈ ಬಿಡಲಿಲ್ಲ. ಅವರ ಮನೆಯಿಂದ ನಾಲ್ಕನೇ ಮನೆಯಲ್ಲಿ ಅವರ ಮಿತ್ರರೊಬ್ಬರ ಮನೆ ಇತ್ತು. ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿ ‘ಇಂದು ರಾತ್ರಿ ಏನಾದರೂ ಮಾಡಿ ಈ ಹುಡುಗನನ್ನು ಇಲ್ಲಿ ಇರಿಸಿಕೊಳ್ಳಿ’ ಎಂದು ಅವರನ್ನು ಕೇಳಿಕೊಂಡರು. ನನಗೆ ಏನೂ ಪರಿಚಯವಿಲ್ಲದ ಒಂದು ಮನೆಯಲ್ಲಿ ರಾತ್ರಿ ಕಳೆಯ ಬೇಕಾಯ್ತು.

ರಾತ್ರಿಯೆಲ್ಲಾ ಏನೇನೋ ಕನಸು. ನಾನು ಯಾವುದೋ ರೈಲಿನಲ್ಲಿ ಎಲ್ಲಿಯೋ ಹೋಗುವ ಹಾಗೆ. ಹೋಗುವ ರೈಲು ಒಂದು ನದಿಯ ಒಳಗಡೆಯಿಂದ ಹೋಗಿ, ಬೋಗಿಯೆಲ್ಲ ನೀರು ತುಂಬಿ ನನ್ನ ಉಸಿರು ಕಟ್ಟಿದಂತೆ.. ಹಾಗೆ ಇನ್ನೆನೆನೋ ಕೆಟ್ಟ ಕನಸುಗಳು ಬಿದ್ದು ರಾತ್ರಿ ಇಡೀ ನಿದ್ರೆಯಿಲ್ಲದೇ ಕಳೆದೆ.

ಬೆಳಿಗ್ಗೆ ಎದ್ದವನೇ ಆ ಮನೆಯವರಿಗೆ ಧನ್ಯವಾದಗಳನ್ನು ಹೇಳಿ ನನ್ನ ಬ್ಯಾಗನ್ನು ತೆಗೆದುಕೊಂಡು ಕಾಲೇಜಿಗೆ ಹೋದೆ. ಕಾಲೇಜಿನಲ್ಲಿ ಯಾವುದೋ ಒಂದು ಮೂಲೆಯಲ್ಲಿ ಬ್ಯಾಗನ್ನು ಇಟ್ಟು ಮಧ್ಯಾಹ್ನದವರೆಗೆ ಕ್ಲಾಸಿನಲ್ಲಿ ಕುಳಿತು ಪಾಠ ಕೇಳಿದೆ. ಆಗ ಕ್ಲಾಸಿನಲ್ಲಿ ಪರಿಚಯವಾದದ್ದು ಅನಂತಕೃಷ್ಣ. ಒಂದೇ ಬೆಂಚಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ. ಪರಿಚಯವಾದ ನಂತರ ಅದೂ ಇದೂ ಮಾತಿನಲ್ಲಿ ಅವನ ವಿವರ ಸ್ವಲ್ಪ ಗೊತ್ತಾಯ್ತು. ಅವನೂ ಹಾಸ್ಟೆಲಿನಲ್ಲಿ ಜಾಗ ಸಿಕ್ಕದೇ ಮೊಡರ್ನ್ ಹಿಂದೂ ಹೋಟೆಲಿನಲ್ಲಿ ಒಂದು ರೂಮು ಮಾಡಿಕೊಂಡ ವಿಷಯ ಹೇಳಿದ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬಂತೆ ಇಲ್ಲಿ ನನಗೆ ಏನೋ ಒಂದು ಆಶಾಕಿರಣ ಕಂಡುಬಂತು. ಲಜ್ಜೆ ಬಿಟ್ಟು ಅವನನ್ನ ಕೇಳಿದೆ, ಒಂದು ಎರಡು ದಿನಕ್ಕಾದರೂ ನಿನ್ನ ಜೊತೆ ಇರಲು ನನಗೆ ಸಹಾಯ ಮಾಡುವಿಯಾ ಎಂದು. ಅದಕ್ಕೆ ಒಪ್ಪಿದ ಅವನು ಎರಡು ದಿನ ಅವನ ರೂಮಿನಲ್ಲಿ ನನ್ನನ್ನು ಇರಲು ಸಹಾಯ ಮಾಡಿದ.

ಈ ಮಧ್ಯೆ ದಿನವೂ ಬೆಳಿಗ್ಗೆ, ಸಂಜೆ ಹಾಸ್ಟೆಲಿಗೆ ನನ್ನ ಸವಾರಿ ಹೋಗಿ ಅಲ್ಲಿದ್ದ ಮ್ಯಾನೇಜರ್ ಬಳಿ ನನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದೇನೆ. ಒಂದು ದಿನ ಹೋದಾಗ ‘ನಿನ್ನ ಕಷ್ಟ ನೋಡಲಾಗುತ್ತಿಲ್ಲ, ಒಂದು ರೂಮಿನಲ್ಲಿ ಬೆಡ್ ಖಾಲಿಯಾಗಿದೆ. ಅದನ್ನು ನಿನಗೆ ಕೊಡುತ್ತೇನೆ. ಆದರೆ ಆ ರೂಮ್ ಮುಖ್ಯ ದ್ವಾರದ ಪಕ್ಕದಲ್ಲಿ ಇದ್ದು, ಎಲ್ಲಾ ವಿದ್ಯಾರ್ಥಿಗಳು ಅಲ್ಲಿಯೇ ಓಡಾಡುತ್ತಿರುತ್ತಾರೆ. ತುಂಬಾ ಶಬ್ದ’ ಎಂದರು. ನೀರಿನಲ್ಲಿ ಮುಳುಗಿದವನಿಗೆ ಚಳಿ ಏನು, ಬಿಸಿ ಏನೂ.. ಎಂದು ಅದಕ್ಕೆ ಕೂಡಲೇ ಒಪ್ಪಿ, ಹೋಗಿ ಬ್ಯಾಗ್ ಹಿಡಿದು ಬಂದೇಬಿಟ್ಟೆ. ರೂಂಮೇಟ್ ಕಾಮತ್ ತುಂಬಾ ಸಾಧು ವ್ಯಕ್ತಿ. ನನಗೆ ಬೇಕಾದ ಎಲ್ಲಾ ಸಹಾಯ ಮಾಡಿದರು.

ಎಲ್ಲಾ ಸರಿಯಾದಮೇಲೆ ಶನಿವಾರ ಒಮ್ಮೆ ಊರಿಗೆ ಹೋಗಿ ಬರುವ ಎಂಬ ಮನಸಾಯ್ತು. ಮನೆಯವರಿಗೆ ನಾನು ಬರುವುದು ಗೊತ್ತಿಲ್ಲ, ನನ್ನ ಕಷ್ಟದ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲ. ಮನೆಯ ಮುಂದಿನ ವರಾಂಡದಲ್ಲಿ ಕುಳಿತಿದ್ದ ನನ್ನ ಅಪ್ಪ, ನನ್ನನ್ನು ನೋಡಿ, ಅಚ್ಚರಿಯಿಂದ ‘ಏನೋ ಯಾವಾಗ ಬಂದೆ, ಹೇಗಿದ್ದೀಯಾ’ ಎಂದರು.

ವಾರದಿಂದ ತಡೆ ಹಿಡಿದಿದ್ದ ಎಲ್ಲಾ ಸಿಟ್ಟು ಒಮ್ಮೆಲೇ ಹೊರ ಬಂತು. ಮನೆಯಲ್ಲಿ ಇದ್ದವರು ಎಲ್ಲರೂ ಓಡಿ ಬರುವಷ್ಟು ಜೋರಾಗಿ ಕಿರುಚಿದೆ.


ನೀವು- ನಿಮ್ಮ ಭರಣಿಯನ್ನು ನಂಬಿ, ನಾನು, ಒಣಗಿ ಆಗಿ ಹೋಗಿದ್ದೇನೆ ಬೆರಣಿ.!  -ಎನ್ನುತ್ತಾ ಅಳುತ್ತಿದ್ದೆ.

ಅಲ್ಲಿಗೆ ನನ್ನ ಕಾಲೇಜ್ ಸೇರುವಿಕೆಯ ಮೊದಲ ಅಧ್ಯಾಯ ಮುಗಿಯಿತು!