ಕಾಶ್ಮೀರಿ ಶೈವಪಂಥದ ಮೊದಲ ಕವಯಿತ್ರಿ ಲಲ್ಲಾದೇವಿಯ ವಾಕ್‍ ಗಳು ಕೂಡ ಕನ್ನಡದಲ್ಲಿ ಒಂದು ವಿಶಿಷ್ಟ ಬಗೆಯ ಭಾಷಾಂತರ ಪ್ರಯೋಗ. ಲಲ್ಲಾದೇವಿ ಕನ್ನಡಕ್ಕೆ ತುಂಬಾ ತಡವಾಗಿ ಪರಿಚಯವಾಗುತ್ತಿದ್ದಾಳೆ. ಲಲ್ಲಾದೇವಿಯ ವಾಕ್ ಗಳಿಗೂ ಕನ್ನಡದಲ್ಲಿ ರಚನೆಯಾಗಿರುವ ಶರಣರ ವಚನಗಳಿಗೂ ಅನೇಕ ವಿಧದಲ್ಲಿ ಸಾಮ್ಯತೆಗಳಿವೆ. ‘ಸಾಕಿ’ ಮತ್ತು ‘ಮದಿರೆ’ಯ ಮಧುರ ಸಾಂಗತ್ಯ ಸಂಕಿರ್ಣವಾದುದು. ಇದೇ ಸೂಫಿಕಾವ್ಯದ ಅಂತಃಶಕ್ತಿ. ಇವುಗಳಲ್ಲಿ ಯಾವುದಾದರೂ ಒಂದು ಗೈರಾದರೂ ಸೂಫಿಕಾವ್ಯಕ್ಕೆ ಪೂರ್ಣತೆ ಪ್ರಾಪ್ತಿಯಾಗುವುದಿಲ್ಲ. ಈ ಉನ್ಮತ್ತ ಸ್ಥಿತಿ ಓದುಗರಲ್ಲಿ ಮೈದೋರಿದರೆ ಕಾವ್ಯನುಸಂಧಾನದ ರೀತಿಯೇ ಬೇರೆ. ಅಂದರೆ ಇದರ ಅರ್ಥ ಓದುಗ ಕಾವ್ಯಪ್ರೀತಿಯಲ್ಲಿ ಅನುರಕ್ತನಾಗುವುದು.
ನರಸಿಂಹಮೂರ್ತಿ ಹಳೇಹಟ್ಟಿ ಲೇಖನ

 

 

ಲೋಕ ಚಿಂತೆಗಳು ವಿಷ; ಮಧುವದಕೆ ಪರಿಹಾರ
– ಉಮರ್ ಖಯ್ಯಾಮ್

ಆಧುನಿಕ ಮತ್ತು ಆಧುನಿಕೋತ್ತರ ಜಗತ್ತಿನ ಸಾಹಿತ್ಯ ಕೃಷಿಯಲ್ಲಿ ಭಾಷಾಂತರದ ಕೊಡುಗೆ ಅಪಾರವಾದದು. ಇಂದು ಭಾಷಾಂತರ ಪ್ರಕ್ರಿಯೆ ನಮ್ಮ ಎಲ್ಲ ಬಗೆಯ ಜ್ಞಾನಶಿಸ್ತುಗಳ ಶೋಧ ಹಾಗೂ ತಿಳುವಳಿಕೆಗೆ ಅಗತ್ಯ ಮಾತ್ರವಲ್ಲ; ತುಂಬಾ ಅನಿವಾರ್ಯ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಸೃಜನಶೀಲ ಸಾಹಿತ್ಯ ಪ್ರಕಾರಗಳ ಭಾಷಾಂತರದ ಸಂದರ್ಭದಲ್ಲಿ ಅನುವಾದಕ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಗದ್ಯರೂಪಗಳಿಗಿಂತ ಪದ್ಯರೂಪಗಳ ಅನುವಾದದ ಸಮಸ್ಯೆಗಳು ತೀರಾ ಭಿನ್ನವಾಗಿವೆ. ಅಷ್ಟೇ ಅಲ್ಲ, ಸಂಕೀರ್ಣವಾಗಿವೆ. ಈ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿಯೇ ವಿಜಯರಾಘವನ್ ಅವರ ಅನುವಾದಿತ ಕಾವ್ಯವನ್ನು ಕೂಡ ಪ್ರವೇಶ ಮಾಡುವುದು ಉಚಿತವೆನಿಸುತ್ತದೆ.

ಒಳ್ಳೆಯ ಭಾಷಾಂತರ ಎಂದರೆ ಯಾವುದು? ಮೂಲ ಕೃತಿಗೆ ಸರಿಯಾದ ನ್ಯಾಯವನ್ನು ‘ರೂಪಾಂತರ’ ಒದಗಿಸುತ್ತದೆಯೋ? ಅಥವಾ ಅನುವಾದ ಒದಗಿಸುತ್ತದೆಯೋ? – ಎಂಬ ಇತ್ಯಾದಿ ಚರ್ಚೆಗಳೆಲ್ಲ ಇವೆ. ಆದರೆ, ಭಾಷಾಂತರಕಾರನಿಗೆ ಪ್ರಮುಖವಾಗಿ ಎರಡು ರೀತಿಯ ಸವಾಲುಗಳು ಎದುರಾಗುತ್ತವೆ ಎಂಬುದನ್ನು ಇಲ್ಲಿಯವರೆಗಿನ ಭಾಷಾಂತರ ಕುರಿತ ಸಿದ್ಧಾಂತ ಮತ್ತು ಚರ್ಚೆಗಳನ್ನು ಓದಿದರೆ ನಮಗೆ ಅರಿವಾಗುತ್ತದೆ.

ಮೊದಲನೆಯ ಸವಾಲೆಂದರೆ, ಯಾವುದೇ ಅನುವಾದವು ಮೂಲಭಾಷೆಗೆ ಕುಂದನ್ನು ಉಂಟುಮಾಡದೆ; ಅದರ ಎಲ್ಲಾ ಶಕ್ತಿ ಸಂಚಯಗಳನ್ನು ಅನುವಾದಿತ ಭಾಷೆಯಲ್ಲಿ ಸೃಜಿಸುವುದು. ಎರಡನೆಯದು, ಅನುವಾದಗೊಂಡ ಭಾಷೆಯ ಜಾಯಮಾನಕ್ಕೆ ತಕ್ಕಂತೆ ಹೊಸ ಸೊಗಡನ್ನು ತುಂಬಿಕೊಡುವುದು. ಇದನ್ನು ಬಿ.ಎಂ.ಶ್ರೀ. ಅವರು ‘ಅವಳ ತೊಡುಗೆ ಇವಳಿಗಿಟ್ಟು/ ಹಾಡಬಯಸಿದೆ/ ಇವಳ ಉಡುಗೆ ಅವಳಿಗಿಟ್ಟು/ ನೋಡ ಬಯಸಿದೆ’ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಬಿ.ಎಂ.ಶ್ರೀ. ಅವರ ಈ ಕವಿತೆಯ ಸಾಲುಗಳ ಆಂತರ್ಯದಲ್ಲಿ ಎರಡು ಭಾಷೆಗಳ ಸಂರಚನೆಯ ವಿವಿಧ ಆಯಾಮಗಳಷ್ಟೇ ಅಲ್ಲದೇ, ಆಯಾ ಭಾಷೆಗಳ ಸಂಸ್ಕೃತಿಯ ಒಟ್ಟಾರೆ ದರ್ಶನ ಅಡಗಿರುವುದನ್ನೂ ನಾವು ಕಾಣಬಹುದು.

ಕಾವ್ಯದ ಅನುವಾದ: ಸಾಧ್ಯತೆ ಹಾಗೂ ಸವಾಲುಗಳು

ಇತ್ತೀಚೆಗೆ ಕನ್ನಡವನ್ನೂ ಒಳಗೊಂಡಂತೆ ಭಾರತೀಯ ದೇಶಿ ಭಾಷೆಗಳಲ್ಲಿ ಭಾಷಾಂತರ ಪ್ರಕ್ರಿಯೆಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಅನುವಾದ ಕೃತಿಗಳು ಸಹ ಹೆಚ್ಚು ಪ್ರಕಟವಾಗುತ್ತಿವೆ. ಆದರೆ ಹೀಗೆ ಅನುವಾದಗೊಂಡು ಪ್ರಕಟವಾದ ಕೃತಿಗಳನ್ನು ಕುರಿತಾದ ಚರ್ಚೆ ಹೆಚ್ಚಾಗಿ ನಡೆಯುತ್ತಿಲ್ಲ. ಇದು ಭಾಷಾಂತರ ಎಂದರೆ ‘ಎರಡನೇ ದರ್ಜೆಯ ಕಾರ್ಯ’ ಎಂಬ ಪೂರ್ವಕಲ್ಪಿತ ಮತ್ತು ಸಿದ್ಧ ಮನೋಭಾವ ಓದುಗರಲ್ಲಿ ಆಳವಾಗಿ ಬೇರೂರಿದೆ ಎನ್ನುವುದನ್ನು ಸೂಚಿಸುತ್ತದೆ. ಇಂಥ ಭಾಷಾಂತರ ಮತ್ತು ಓದಿನ ರಾಜಕಾರಣದ ನಡುವೆಯೂ ಯು.ಆರ್.ಅನಂತಮೂರ್ತಿ, ಎಚ್.ಎಸ್.ಶಿವಪ್ರಕಾಶ, ಓ.ಎಲ್. ನಾಗಭೂಷಣ ಸ್ವಾಮಿ, ಎಚ್.ಎಸ್.ರಾಘವೇಂದ್ರರಾವ್, ಆರ್.ವಿಜಯರಾಘವನ್, ಸ. ರಘುನಾಥ, ಎಂ.ಆರ್.ಕಮಲ, ತೇರಳಿ ಎನ್. ಶೇಖರ್, ಜ.ನಾ. ತೇಜಶ್ರೀ, ಎಚ್.ಎಸ್.ಅನುಪಮ ಇನ್ನೂ ಮುಂತಾದವರು ಇತ್ತೀಚಿಗೆ ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿರುವ ಕವಿತೆಗಳು ಹೆಚ್ಚು ಗಮನ ಸೆಳೆಯುತ್ತಿವೆ ಹಾಗೂ ನಮ್ಮನ್ನು ಮತ್ತೆ ಮತ್ತೆ ಓದಲು ಪ್ರೇರೆಪಿಸುತ್ತಿವೆ.

ಕಾವ್ಯದ ಅನುವಾದವನ್ನು ಕುರಿತು ಇಬ್ಬರು ಚಿಂತಕರ ನಿಲುವುಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ಕಾವ್ಯದ ಅನುವಾದದ ಬಗ್ಗೆ ಬ್ರೆಕ್ಟ್ ತನ್ನದೇ ಆದ ನಿಲುವನ್ನು ಹೊಂದಿದ್ದ. ಅವನ ಪ್ರಕಾರ ‘ಭಾಷಾಂತರಕಾರರು ತದ್ವತ್ ಭಾಷಾಂತರ ಮಾಡಲು ಹೊರಟರೆ ಅನೇಕ ಬಾರಿ ಮೂಲದ ಪದ್ಯ ಕಳೆದು ಹೋಗಿಬಿಡುತ್ತದೆ. ಆದ್ದರಿಂದ ಪದ್ಯದ ನಿಜವಾದ ವಿಚಾರ ಏನು ಎನ್ನುವುದನ್ನು ಗ್ರಹಿಸಿ ನಿಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಿ’ ಎನ್ನುವುದು ಅತನ ನಿಲುವು. ಅದರ ಜೊತೆಗೆ ಬ್ರೆಕ್ಟ್ ಮತ್ತೊಂದು ಮಾತನ್ನು ಹೇಳುತ್ತಾನೆ. ಭಾಷಾಂತರಕಾರರು(ತೀರಾ ಸ್ವತಂತ್ರ ತೆಗೆದುಕೊಂಡಾರು ಎನ್ನುವ ಕಾರಣದಿಂದಲೋ ಏನೋ) ‘ಮೂಲ ಪದ್ಯದ ಲಯದಲ್ಲಿ ಕೂಡ ಅರ್ಥ ಸಾಕ್ಷಾತ್ಕಾರಗೊಳ್ಳುವ ಕೆಲವು ಗುಣಗಳಿವೆ ಎಂದು ಕಂಡರೆ, ಆ ಬಗೆಯ (ಅರ್ಥ ಬಗೆಯುವ) ಲಯವನ್ನು ನೀವು ನಿಮ್ಮ ಭಾಷೆಯಲ್ಲಿ ತರಲು ನೋಡಬೇಕು ಎನ್ನುತ್ತಾನೆ”.(ಅನಂತಮೂರ್ತಿ ಯು.ಆರ್, ಮೊದಲ ಮಾತು, ಮತ್ತೆ ಮತ್ತೆ ಬ್ರೆಕ್ಟ್)

ಕಾವ್ಯವನ್ನು ಅನುವಾದ ಮಾಡುವಾಗ ಎದುರಾಗುವ ಕಷ್ಟಗಳಲ್ಲಿ ಇದೂ ಒಂದು. ಅಂದರೆ ಆಯಾ ಭಾಷೆಗೆ ಅದರದ್ದೇ ಆದ ಸೆಳೆತವಿರುತ್ತದೆ. ಅನುವಾದಕ ಭಾಷೆಯ ಆಂತರ್ಯವನ್ನು ಅರಿಯದೇ ಹೋದಾಗ ಶಬ್ದ ಮತ್ತು ಅರ್ಥಗಳು ಕವಿತೆಯಲ್ಲಿ ಗೈರಾಗುತ್ತವೆ. ಅದಕ್ಕೆ ಮೂಲ ಭಾಷೆಯ ಜಾಯಮಾನ ಅನುವಾದಿತ ಭಾಷೆಗೆ ಅವಶ್ಯವಷ್ಟೇ ಅಲ್ಲ; ಅತ್ಯಗತ್ಯ.

“ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಗುಣವಿರುತ್ತದೆ. ಅದನ್ನು ಅನುವಾದಿಸಿದಾಗ ‘ಒಳ್ಳೆಯ ಬೆಳಗಾಗಿತ್ತು’ ಎಂದಾದರೆ ಅದು ಅಲ್ಲವೇ ಅಲ್ಲ. ಅದನ್ನೇ ಬೇಂದ್ರೆ ‘ಇದು ಬರಿ ಬೆಳಗಲ್ಲೋ ಅಣ್ಣ’ ಎಂದು ಬರೆಯುವಾಗ ಶಬ್ದಕ್ಕೆ ಅದೆಷ್ಟು ಅರ್ಥ ಸಿಗುತ್ತದೆ! ಆ ಬೆಳಗಿನ ಅದ್ಭುತ ಅನುಭವ ಕಿವಿಯ ಮೂಲಕ ಸಿಗುತ್ತದೆ. ಗ್ರಂಥಸ್ಥ ಕವಿತೆ ಒಂದೇ ಬಗೆಯದು; ಆದರೆ ಓದುವ ಕವಿತೆಯದು ಭಿನ್ನ ಭಿನ್ನ ಅನುಭವ. ಒಂದು ಕವಿತೆಯನ್ನು ನಾನು ಓದಿದರೆ ಒಂದು ಅನುಭವ, ಬೇರೆಯವರು ಓದಿದರೆ ಮತ್ತೊಂದು ಅನುಭವ. ಅದಿರಲಿ, ನಾನೇ ಮತ್ತೆ ಮತ್ತೆ ಓದಿದಾಗಲೂ ಅದರ ಅನುಭವ ಬೇರೆ ಬೇರೆಯೇ. ಹೀಗೆ ಬೇರೆ ಬೇರೆ ಓದಿನ ಮೂಲಕ ಅನಂತ ಸಾಧ್ಯತೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ.”(ಅನಂತಮೂರ್ತಿ ಯು.ಆರ್., ಕಾಲಮಾನ, ಪುಟ 77) ಅನುವಾದ ಕಾವ್ಯವೂ ಕೂಡ ಇಂಥ ಅನಂತ ಸಾಧ್ಯತೆಗಳನ್ನು ಓದುಗರಲ್ಲಿ ಉಂಟು ಮಾಡುವಂತಿರಬೇಕು. ಇಲ್ಲದಿದ್ದರೆ ಯಾವುದೇ ಕಾವ್ಯ ಯಶಸ್ಸನ್ನು ಪಡೆಯಲಾರದು. ಜೊತೆಗೆ ಓದುಗರ ಅಥವಾ ಕೇಳುಗರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯಲಾರದು.

2
ವಿಜಯರಾಘವನ್ ಅವರ ಅನುವಾದಿತ ಕವಿತೆಗಳು ಪೀನೀ ಹೂ, ಲಲ್ಲಾದೇವಿ, ಹಫೀಜ್, ಬುಂಡೆ ಹಿಡಿದು, ಗುನ್ನಾರ್ ಏಕಲೋನ ಆಯ್ದ ಕವಿತೆಗಳು ಇನ್ನೂ ಮುಂತಾದ ಪುಸ್ತಕಗಳಲ್ಲಿ ಸಂಕಲಿತಗೊಂಡಿವೆ. ಈ ಕೃತಿಗಳಲ್ಲಿ ರೂಮಿಯ ಸೂಫಿ ಕವಿತೆಗಳು, ಕಾಶ್ಮೀರದ ಶೈವ ಪಂಥದ ಮೊದಲ ಕವಯಿತ್ರಿ ಲಲ್ಲಾಳ ವಾಕ್‍ ಗಳು, ತಾವೋನ ಹಾಯ್ಕುಗಳು, ದಾವ್ ದೆ ಜಿಂಗ್, ವಾಸ್ಕೋ ಪೋಪ, ಗಾರ್ಸಿಯಾ ಲೋರ್ಕ, ನಜೀಂ ಹಿಕ್ಮತ್ ಇನ್ನೂ ಮುಂತಾದವರು ರಚಿಸಿರುವ ಬೇರೆ ಬೇರೆ ಪ್ರಕಾರಗಳಿಗೆ ಸೇರಿದ ಕವಿತೆಗಳಿವೆ.

‘ಸಾಕಿ’ಯ ಸಖ್ಯ-ಪ್ರೀತಿಯ ಮಾರ್ದನಿ: ವಿಜಯರಾಘವನ್ ಅವರು ಬೇರೆ ಬೇರೆ ಭಾಷೆಗಳ ಕವಿತೆಗಳನ್ನು ಇಂಗ್ಲಿಷ್‍ ನಿಂದ ಕನ್ನಡಕ್ಕೆ ತಂದಿದ್ದಾರೆ. ಪ್ರಸ್ತುತ ಲೇಖನದಲ್ಲಿ ಇಂಗ್ಲಿಷ್‍ ನಿಂದ ಕನ್ನಡಕ್ಕೆ ಅನುವಾದಗೊಂಡ ಕಾವ್ಯವನ್ನಷ್ಟೇ ವಿವೇಚಿಸುವ ಪ್ರಯತ್ನ ಮಾಡಲಾಗಿದೆ. ಮೂಲ ಕವಿತೆಗಳೊಂದಿಗೆ ಇವುಗಳನ್ನು ನಾನು ಹೋಲಿಸಿಲ್ಲ. ಮೊದಲು ವಿಜಯರಾಘವನ್ ಅವರ ಕಾವ್ಯಾನುವಾದದ ಸೊಬಗನ್ನು ತಿಳಿಯಬೇಕಾದರೆ ‘ಪೀನೀ ಹೂ’ ಪುಸ್ತಕದ ‘ರೂಮಿಯ ನಾಲ್ಕು ದಿವಾನ್’ಗಳನ್ನು ಓದಬೇಕು. ನನಗೆ ಪ್ರಿಯವಾದ ಅತ್ಯುತ್ತಮ ಅನುವಾದ ಕವಿತೆಗಳಲ್ಲಿ ಇದೂ ಒಂದು. ಇದು ಕಾವ್ಯ ಮತ್ತು ಲೋಕಾನುಭವದ ಅನನ್ಯ ಅನುಭವವನ್ನು ನಮಗೆ ಉಂಟು ಮಾಡುತ್ತದೆ.

ಓ ಮದಿರೆಯ ಬಟ್ಟಲನ್ನು ತುಂಬುತ್ತಿರುವವನೇ
ಮೊದಲು ನೀ ಮದಿರೆಯನ್ನಿತ್ತ ಪಾತ್ರೆಯಿಂದ
ಇನ್ನೆರಡು ಬಟ್ಟಲು ತುಂಬಿಕೊಡು
ಅನಂತವಾಗಲಿ ನನ್ನ ಆನಂದ
ಗುಟ್ಟಾಗಿರಲಿ ಅದರ ಸವಿ.

ಇನ್ನೊಮ್ಮೆ ನೀನೇನಾದರೂ
ಅದರ ಮುಚ್ಚಳವ ತೆರೆದೆಯಾದರೆ
ಕುಡಿಕುಡಿದು ಹಾಳಾಗುವಂತೆ ಮಾಡು ನನ್ನ
(ವಿಜಯರಾಘವನ್, ಪೀನೀ ಹೂ, ಪುಟ 80)

ಹೀಗೆ ಅನುವಾದಗೊಂಡು ಪ್ರಕಟವಾದ ಕೃತಿಗಳನ್ನು ಕುರಿತಾದ ಚರ್ಚೆ ಹೆಚ್ಚಾಗಿ ನಡೆಯುತ್ತಿಲ್ಲ. ಇದು ಭಾಷಾಂತರ ಎಂದರೆ ‘ಎರಡನೇ ದರ್ಜೆಯ ಕಾರ್ಯ’ ಎಂಬ ಪೂರ್ವಕಲ್ಪಿತ ಮತ್ತು ಸಿದ್ಧ ಮನೋಭಾವ ಓದುಗರಲ್ಲಿ ಆಳವಾಗಿ ಬೇರೂರಿದೆ ಎನ್ನುವುದನ್ನು ಸೂಚಿಸುತ್ತದೆ.

ಮದಿರೆ ಮತ್ತು ಸಾಕಿಯ ಅಪೂರ್ವ ಸಾಂಗತ್ಯ ಇಲ್ಲಿ ಹೊಸ ಅರ್ಥವನ್ನು ಪಡೆದಿದೆ. ಈ ಎರಡರ ಉನ್ಮತ್ತ ಸ್ಥಿತಿಯನ್ನು ರೂಮಿ ತನ್ನ ಕಾವ್ಯದ ಮೂಲ ಸ್ಥಾಯಿಯಾಗಿಸಿದ್ದಾನೆ. ಹಾಗೆಯೇ ಕಾವ್ಯಪ್ರೇಮಿಗಳಿಗೆ ಈ ಎರಡರ ನಡುವಣ ಅಂತರ್‍ ಸಂಬಂಧವನ್ನು ಶಾಶ್ವತಗೊಳಿಸಿದ್ದಾನೆ. ಈಗಲೂ ಅಸಂಖ್ಯಾತ ಕಾವ್ಯಪ್ರೇಮಿಗಳು ರೂಮಿಯ ಕಾವ್ಯದ ಮೋಡಿಗೆ ಆಕರ್ಷಿತರಾಗುತ್ತಿದ್ದಾರೆ. ಇಂತಹುದೆ ಇನ್ನೊಂದು ಕವಿತೆ ಹೀಗಿದೆ:

ಪ್ರಿಯನೇ
ಕರೆದುಕೋ ನನ್ನನ್ನು
ನನ್ನಾತ್ಮವನ್ನು ಮುಕ್ತಗೊಳಿಸು
ನಿನ್ನ ಪ್ರೀತಿಯಿಂದೆನ್ನ ಆವರಿಸು
ನನ್ನನೀ ಎರಡು ಲೋಕಗಳಿಂದ
ಬಿಡುಗಡೆ ಮಾಡು
ನೀನಲ್ಲದೆ ಅನ್ಯಕ್ಕೆನ್ನ ಮನವೆಳಸಿದರೆ
ನನ್ನೊಳಗಿನ ಕಿಚ್ಚು ಸುಡಲಿ ನನ್ನ ಆದ್ಯಂತ್ಯವನು
(ವಿಜಯರಾಘವನ್, ಪೀನೀ ಹೂ, ಪುಟ 82)

ಹಾಗೆಯೇ ಕಾಶ್ಮೀರಿ ಶೈವಪಂಥದ ಮೊದಲ ಕವಯಿತ್ರಿ ಲಲ್ಲಾದೇವಿಯ ವಾಕ್‍ ಗಳು ಕೂಡ ಕನ್ನಡದಲ್ಲಿ ಒಂದು ವಿಶಿಷ್ಟ ಬಗೆಯ ಭಾಷಾಂತರ ಪ್ರಯೋಗ. ಲಲ್ಲಾದೇವಿ ಕನ್ನಡಕ್ಕೆ ತುಂಬಾ ತಡವಾಗಿ ಪರಿಚಯವಾಗುತ್ತಿದ್ದಾಳೆ. ಲಲ್ಲಾದೇವಿಯ ವಾಕ್ ಗಳಿಗೂ ಕನ್ನಡದಲ್ಲಿ ರಚನೆಯಾಗಿರುವ ಶರಣರ ವಚನಗಳಿಗೂ ಅನೇಕ ವಿಧದಲ್ಲಿ ಸಾಮ್ಯತೆಗಳಿವೆ. ‘ಸಾಕಿ’ ಮತ್ತು ‘ಮದಿರೆ’ಯ ಮಧುರ ಸಾಂಗತ್ಯ ಸಂಕಿರ್ಣವಾದುದು. ಇದೇ ಸೂಫಿಕಾವ್ಯದ ಅಂತಃಶಕ್ತಿ. ಇವುಗಳಲ್ಲಿ ಯಾವುದಾದರೂ ಒಂದು ಗೈರಾದರೂ ಸೂಫಿಕಾವ್ಯಕ್ಕೆ ಪೂರ್ಣತೆ ಪ್ರಾಪ್ತಿಯಾಗುವುದಿಲ್ಲ. ಈ ಉನ್ಮತ್ತ ಸ್ಥಿತಿ ಓದುಗರಲ್ಲಿ ಮೈದೋರಿದರೆ ಕಾವ್ಯನುಸಂಧಾನದ ರೀತಿಯೇ ಬೇರೆ. ಅಂದರೆ ಇದರ ಅರ್ಥ ಓದುಗ ಕಾವ್ಯಪ್ರೀತಿಯಲ್ಲಿ ಅನುರಕ್ತನಾಗುವುದು. ಈ ಅನುರಕ್ತಿ ಉಂಟಾಗಲು ಅವನು ಕಾವ್ಯದ ಅಂತ್ಯವನ್ನು ಶೋಧಿಸಬೇಕು, ಹುಡುಕಬೇಕು. ಹೆಚ್ಚು ಕಡಿಮೆ ಒಂದೇ ಕಾಲಘಟ್ಟದಲ್ಲಿ ರಚನೆಯಾಗಿವೆ. ಹಾಗೆಯೇ ಎರಡರ ಆಶಯ, ಧೋರಣೆ ಹಾಗೂ ನಿರೂಪಣೆಗಳಲ್ಲಿ ಒಂದೇ ಬಗೆಯ ಹೋಲಿಕೆಗಳಿವೆ. ಕನ್ನಡದ ವಚನಗಳ ಸ್ವರೂಪವನ್ನು ಹೋಲುವ ಒಂದು ವಾಕ್ ಹೀಗಿದೆ:

ಯಾವನು ಆ ಅನಾಹತ ನಾದವನ್ನು
ಹತ ಮಾಡುವನೋ
ಯಾವನು ಆಕಾಶವೇ ನನ್ನದೇಹ
ಶೂನ್ಯವೇ ನನ್ನ ಮನೆಯೆನ್ನುವನೋ
ಯಾವನು ನಾಮ, ರೂಪ, ವರ್ಣ
ಸಂಸಾರ, ಆಕೃತಿಗಳಿಲ್ಲದವನೋ
ಯಾವನು ತನ್ನ ಮೇಲೆಯೇ ತಾನು
ಧ್ಯಾನ ಮಾಡುತ್ತ ಮೂಲವು, ನಾದವೂ
ಆಗಿರುವನೋ ಅವನು ದೇವನು
ಆ ಕುದುರೆಯನ್ನೇರಿ ಸವಾರಿ ಮಾಡುವವನು
(ವಿಜಯರಾಘವನ್, ಲಲ್ಲಾದೇವಿ, ಪುಟ 79)

ಇದು ಬಸವಣ್ಣನವರ ‘ಎನ್ನ ಕಾಲೇ ಕಂಬ ದೇಹವೇ ದೇಗುಲ / ಶಿರವೇ ಹೊನ್ನ ಕಳಸವಯ್ಯ’ – ಎಂಬ ವಚನವನ್ನು ಹೋಲುತ್ತದೆ. ಬಸವಣ್ಣ ‘ದೇಹವೇ ದೇಗುಲ’ ಎಂದರೆ, ಲಲ್ಲಾದೇವಿ ‘ಆಕಾಶವೇ ನನ್ನ ದೇಹ’ ಎಂದು ಹೇಳುತ್ತಾಳೆ. ಹಾಗೆಯೇ ಕನ್ನಡದ ಅಕ್ಕಮಹಾದೇವಿಗೂ ಮತ್ತು ಲಲ್ಲಾದೇವಿಯ ವಚನಗಳಿಗೂ ಅನೇಕ ಸಾಮ್ಯತೆಗಳಿವೆ. ಈ ಸಾಮ್ಯತೆಗಳ ಹೊರತಾಗಿಯೂ ಲಲ್ಲಾದೇವಿಯ ಹಲವು ವಾಕ್‍ ಗಳು ಅನನ್ಯತೆಯಿಂದ ಕೂಡಿವೆ.

ವಿಜಯರಾಘವನ್ ಅವರು ಅನುವಾದ ಮಾಡಿರುವ ಕವಿಗಳಲ್ಲೆಲ್ಲಾ ನನ್ನನ್ನು ಅತಿಹೆಚ್ಚು ಕಾಡುತ್ತಿರುವ ಕವಿ ಹಫೀಜ್. ಇವನೊಬ್ಬ ಸೂಫೀ ಕವಿ. ಹಫೀಜ್ ಕ್ರಿ.ಶ. 14ನೇ ಶತಮಾನದಲ್ಲಿ ಬದುಕಿದ್ದವನು. ಪ್ರಾಯಶಃ ಇವನ ಬಗ್ಗೆ ಡಿ.ವಿ.ಜಿ. ಅವರ ‘ಉಮರನ ಒಸಗೆ’ ಹಾಗೂ ಇತರೆಡೆಗಳಲ್ಲಿ ಒಂದೆರಡು ಕಡೆ ಪ್ರಸ್ತಾಪ ಆಗಿರುವುದು ಬಿಟ್ಟರೆ, ಇವನು ಕನ್ನಡ ಸಹೃದಯರಿಂದ ತುಂಬಾ ದೂರ ಉಳಿದಿದ್ದ. ಇಷ್ಟು ದಿನ ಹಫೀಜ್‍ ನ ಬದುಕು ಮತ್ತು ಕಾವ್ಯ ಕನ್ನಡಿಗರಿಗೆ ಪರಿಚಯ ಆಗದೇ ಉಳಿದದ್ದು ಕನ್ನಡಿಗರ ಬಹುದೊಡ್ಡ ನಷ್ಟವೇ ಸರಿ. ಈ ಹಿನ್ನಲೆಯಲ್ಲಿ ಯೋಚಿಸಿದರೆ ವಿಜಯರಾಘವನ್ ಹಫೀಜ್‍ ನ ಜೀವನ ಮತ್ತು ಕಾವ್ಯವನ್ನು ಕನ್ನಡಕ್ಕೆ ತಂದುಕೊಟ್ಟಿದ್ದು ತುಂಬಾ ಔಚಿತ್ಯಪೂರ್ಣವೂ ಅರ್ಥಪೂರ್ಣವೂ ಆಗಿದೆ. ಹಾಗೆಯೇ ಹಫೀಜ್‍ ನ ಕಾವ್ಯದ ಹಲವು ಮಜಲುಗಳು ನಮಗೆ ಇಲ್ಲಿ ಗೋಚರವಾಗಿವೆ.

ನಾನು ಆಷಾಢಭೂತಿತನದ ಪ್ರೇಮಿಯಲ್ಲ
ಈ ನೆಲ ಬೀಗಬಹುದಾದ ಎಲ್ಲ ಸಂಪತ್ತುಗಳ ಪೈಕಿ
ನಾನು ಅವಧರಿಸುವುದು ತುಂಬಿದ ಬಟ್ಟಲನು ಮಾತ್ರ
ಅದಷ್ಟು ಸಾಕು ನನಗೆ
(ವಿಜಯರಾಘವನ್, ಹಫೀಜ್, ಪುಟ 150)

ಇದು ಅಪ್ಪಟ ಪ್ರೇಮಿಯೊಬ್ಬನ ನಿವೇದನೆ. ಇಲ್ಲಿನ ಪ್ರೇಮಿ ನಿಸ್ವಾರ್ಥಿ; ಎಲ್ಲಕ್ಕಿಂತ ಮಿಗಿಲಾಗಿ ಅವನು ಅಂತಿಂಥ ಪ್ರೇಮಿಯಲ್ಲ, ಜೀವನಪ್ರೇಮಿ. ಈ ಬದುಕು ತಂದೊಡ್ಡಬಹುದಾದ ಸಂಘರ್ಷಮಯ ಘಟನೆಗಳಾಚೆಗೆ ಅವನಿಗೆ ‘ವಿಶ್ವ ವ್ಯರ್ಥ ಸುರಿಸಿದ ಕಣ್ಣೀರ ನೋಡು’ವ ಚಿಂತೆ. ಅವನಿಗೆ ನಲ್ಲೆಯ ಸಖ್ಯ, ಮಧು ತುಂಬಿದ ಬಟ್ಟಲಿಗಿಂತ ‘ನೀರಂತೆ ತಿಳಿಗೊಂಡ ಮನಸ್ಸು ಕಿವಿಯ ಮೇಲೆ ಅರಳುವ ಮುದುಡುವ ಹಾಡು’ ಕೇಳುವ ತವಕ. ಆ ಕ್ಷಣಕ್ಕಾಗಿ ಹಾಗೂ ಅಂಥ ಮಾನವೀಯ ಪ್ರೀತಿಗಾಗಿ ಅವನು ತವಕಿಸುತ್ತಿದ್ದಾನೆ.

ಸಾಕಿ, ತಾ ಮಧುವನ್ನು, ನಿನಗೊಂದು ಅದ್ಭುತ ರಹಸ್ಯವನ್ನು
ಹೇಳುತ್ತೇನೆ: ಕಾಲಾನುಕಾಲದಿಂದ ಅಲೆಯುತ್ತಿರುವ ತಾರೆಗಳು,
ನವ ಚಂದ್ರಮನ ರಹಸ್ಯವನ್ನು
(ವಿಜಯರಾಘವನ್, ಹಫೀಜ್, ಪುಟ 140)

ನನ್ನ ಓದಿನ ಹಿನ್ನಲೆಯಲ್ಲಿ ಗಮನಿಸಿದಹಾಗೆ ಒಟ್ಟಾರೆ ವಿಜಯರಾಘವನ್ ಅವರ ಅನುವಾದಿತ ಕವಿತೆಗಳ ಬಹುಮುಖ್ಯವಾದ ವಿಶೇಷವೆಂದರೆ ಇವು ಕನ್ನಡದ ಕವನಗಳು ಎನ್ನುವ ಹಾಗೆ ಓದಿಸಿಕೊಂಡು ಹೋಗುತ್ತವೆ. ಎಲ್ಲೂ ಕೂಡಾ ಇವು ಕನ್ನಡೇತರ ಕವನಗಳು ಎಂದು ನಮಗೆ ಅನ್ನಿಸುವುದಿಲ್ಲ. ಹೀಗೆ ವಿಜಯರಾಘವನ್ ಅವರು ಜಗತ್ತಿನ ಬೇರೆ ಬೇರೆ ಭಾಷೆಗಳ ಕಾವ್ಯಸತ್ವವನ್ನು ತುಂಬಾ ಸಶಕ್ತವಾಗಿ ಕನ್ನಡಕ್ಕೆ ತಂದಿದ್ದಾರೆ. ಆದ್ದರಿಂದಲೇ ಇವರ ಅನುವಾದ ಕವಿತೆಗಳು ಸುದೀರ್ಘವಾದ ನಿಲುಗಡೆಯನ್ನು ಬಯಸಿ, ಚಿಂತನೆಗೆ ಒಳಗುಮಾಡುತ್ತವೆ.