ಸೆಪ್ಟಂಬರ್ ೨೪ ಸಮೀಪಿಸುತ್ತಿದ್ದಂತೆಯೇ ಕಳೆದ ಒಂದು ವಾರದಿಂದ ನನ್ನೊಳಗೇ ಏನೋ ಒಂಥರಾ ಕಳವಳ ಶುರುವಾಗಿದೆ. ಮನಸ್ಸಿನಲ್ಲಿ ಅಸಮಾಧಾನ ಮೂಡಿದ್ದು ನೆಮ್ಮದಿಗೆ ಭಂಗವಾಗಿದೆ. ಕಾರಣ ವಿವಿಧತೆಯಲ್ಲಿ ಐಕ್ಯತೆಯನ್ನು ಸಾಧಿಸಿ ಸ್ವಾತಂತ್ರ್ಯ ಪಡೆದು ಶಾಂತಿಗೆ ಹೆಸರಾದ ನನ್ನ ಭರತ ಭೂಮಿಯಲ್ಲಿ ಮತ್ತೆಲ್ಲಿ ಶಾಂತಿ ಕದಡುತ್ತದೋ ಎಂಬ ಭೀತಿ ನನ್ನನ್ನು ಕಾಡುತ್ತಿದೆ. ಕೆಲ ಪಕ್ಷಗಳು, ರಾಜಕಾರಣಿಗಳು ಇದೇ ಸ೦ದರ್ಭವನ್ನ ರಾಜಕೀಯ ದಾಳವಾಗಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಹೀಗಾಗಿ, ಪಟ್ಟಭದ್ರರ ಪ್ರಭಾವದಿಂದಾಗಿ ಕೋಮುದಳ್ಳುರಿ ಹೊತ್ತಿ ಉರಿಯುವ ಲಕ್ಷಣಗಳಿವೆ. ಅದನ್ನ ಶಮನಗೊಳಿಸಲು ನಾನೇನು ಮಾಡಲಿ. ನನ್ನಿಂದ ಅದು ಸಾಧ್ಯವೇ ಎಂದು ಚಿಂತಿಸುತ್ತಲೇ ಮೊನ್ನೆ ರಾತ್ರಿ ಇಡೀ ಒದ್ದಾಡಿದೆ.

ಬೆಳಗಾಗುತ್ತಿದ್ದಂತೆಯೇ ಬೈಕ್ ಹತ್ತಿ ನೇರವಾಗಿ ಮುರುಘಾಮಠಕ್ಕೆ ಹೋದೆ. ಜಾತಿಧರ್ಮಗಳನ್ನ ಮೀರಿ ಪ್ರಗತಿಪರ ಪ್ರಯೋಗಗಳ ಮೂಲಕ ಕಾವಿಯೊಳಗಿನ ಕ್ರಾಂತಿ ಎಂದೇ ಕರೆಸಿಕೊಳ್ಳುವ ಆಧುನಿಕ ಬಸವಣ್ಣ ಮುರುಘಾಮಠದ ಶಿವಮೂರ್ತಿ ಶರಣರನ್ನು ಕಂಡೆ. ಶರಣರು ಆಗಷ್ಟೇ ಸುಂದರ ಪರಿಸರದ ಮುರುಘಾವನದಲ್ಲಿ ವಾಯು ವಿಹಾರ ಹೊರಟಿದ್ದರು. ಜೊತೆಗೆ ಪ್ರಾಣಿಪಕ್ಷಿಗಳಿಗೆ ದವಸ
ದಾನ್ಯಗಳನ್ನ ನೀಡುತ್ತ ಖುಷಿ ಪಡುತ್ತಿದ್ದರು. ಆಗ ನನಗೆ ಚಿತ್ರದುರ್ಗದ ಲೇಖಕಿ ಶರೀಫಾಬಿ ಅವರ ಕವನದ ಸಾಲೊಂದು ನೆನಪಿಗೆ ಬಂತು.

ಹಾರಾಡುವ ಹಕ್ಕಿಗಳೇ
ಕುಣಿದಾಡುವ ನವಿಲುಗಳೇ
ನಿಮ್ಮ ಸೊಗಸು ನಿಮಗಿರಲಿ
ನಿಮ್ಮ ಮನಸ್ಸು ನಮಗಿರಲಿ..

ಅಬ್ಬಾ ಎಂಥಾ ಸಾಲುಗಳಿವು. ಕವಿಯ ಕಲ್ಪನೆಯೇ ಇಲ್ಲಿ ನಿಜವಾಗಿದೆಯಲ್ಲ. ಶರಣರು ಪಕ್ಷಿಗಳ ಮನಸ್ಸನ್ನೇ ತಮ್ಮದಾಗಿಸಿಕೊಂಡು ಜಗತ್ತಿನ ಜಂಜಾಟಗಳನ್ನೆಲ್ಲಾ ಮರೆತು ಎಷ್ಟು ಖುಷಿಯಿಂದಿದ್ದಾರಲ್ಲ ಹಕ್ಕಿಗಳಂತೆ ಎಂದೆನಿಸಿತು. ಅದೇ ವೇಳೆಗೆ ಮುಂಜಾವಿನಲ್ಲೇ ಮಠದಲ್ಲಿ ಪ್ರತ್ಯಕ್ಷನಾದ ನನ್ನನ್ನ ಕಂಡು ‘ಏನ್ರಪ್ಪೋ, ಇಷ್ಟು ಬೆಳಿಗ್ಗೆ ಬಂದಿದ್ದೀರಿ’ ಅಂದ್ರು ಶರಣರು. ನಾನು ಸುಮ್ಮನೇ ನಕ್ಕೆ. ಶರಣರು ಎಂದಿನಂತೆ ಪ್ರಸಾದ ಮಾಡಿ ಹೋಗ್ರಿ ಅಂದ್ರು.

‘ಬೇಡ ಸ್ವಾಮೀಜಿ, ಅದೇ ಕೋರ್ಟ್ ತೀರ್ಪಿನ ಬಗ್ಗೆ ಸ್ವಲ್ಪ ಹೊತ್ತು ಮಾತಾಡ್ಬೇಕಿತ್ತು’ ಅಂಥೇಳಿ ಶರಣರೊಂದಿಗೆ ಮಾತಿಗಿಳಿದೆ. ಇದೇ ಸೆಪ್ಟಂಬರ್ ೨೪ ಕ್ಕೆ ಅಯೋಧ್ಯೆಯ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದದ ಬಗ್ಗೆ ಅಲಹಾಬಾದ್ ಕೋರ್ಟು ತೀರ್ಪು ಪ್ರಕಟಿಸಲಿದೆ. ಆ ತೀರ್ಪನ್ನ ದೇಶವಾಸಿಗಳು ಹೇಗೆ ಸ್ವೀಕರಿಸಬೇಕು ಅಂತ ಚರ್ಚೆ ಶುರುಮಾಡಿದೆ. ಆಗ ಶರಣರು ಶಾಂತಿ ಶಾಂತಿ ಶಾಂತಿ ಎಂದು ಉದ್ಗರಿಸುತ್ತ ತಮ್ಮ ಮಾತು ಶುರು ಮಾಡಿದರು.

‘ಜಗತ್ತಿನಲ್ಲಿ ಹಲವಾರು ಧರ್ಮಗಳಿವೆ. ಎಲ್ಲಾ ಧರ್ಮಗಳಿಗಿಂತ ಶ್ರೇಷ್ಠವಾದ ಧರ್ಮ ರಾಷ್ಟ್ರ ಧರ್ಮ. ಆಯಾ ರಾಷ್ಟ್ರದ ಜನರು ಅವರವರ ರಾಷ್ಟ್ರಧರ್ಮವನ್ನ ಪ್ರೀತಿಸಬೇಕು, ಗೌರವಿಸಬೇಕು. ನಮ್ಮ ದೇಶದಲ್ಲಿ ಉಂಟಾದ ಅಯೋಧ್ಯೆ ವಿವಾದದ ತೀರ್ಪು ಸೆಪ್ಟಂಬರ್ ೨೪ಕ್ಕೆ ಹೊರಬೀಳುತ್ತಿರುವುದರಿಂದ ದೇಶದ ಗಮನ ಸೆಳೆದಿದೆ. ನ್ಯಾಯಾಧೀಶರು ಸಾಕಷ್ಟು ಅಧ್ಯಯನ ಮಾಡಿ ಹತ್ತು ಹಲವು ವಿಚಾರಗಳನ್ನಾಧರಿಸಿ ನಿರ್ಣಯಕ್ಕೆ ಬಂದಿರ್ತಾರೆ. ಅವರೂ ಸಹ ದೇಶದಲ್ಲಿ ಯಾವುದೇ ರೀತಿಯ ಘರ್ಷಣೆಗಳಾಗ ಕೂಡದೆಂಬ ವಿಚಾರಗಳೊಂದಿಗೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಆದರೂ ಅಲಹಾಬಾದ್ ಹೈಕೋರ್ಟಿನ ತೀರ್ಪು ಯಾವ ರೀತಿ ಹೊರ ಬೀಳುತ್ತದೊ ಗೊತ್ತಿಲ್ಲ. ಆದರೆ ಕೋರ್ಟ್ ತೀರ್ಪನ್ನು ಮಾತ್ರ ಎಲ್ಲರೂ ಗೌರವಿಸಬೇಕು. ಆ ಸಂದರ್ಭವನ್ನ ಕೆಲವರು ದುರುಪಯೋಗ ಮಾಡಿಕೊಳ್ಳುವ ಮೂಲಕ ಶಾಂತಿ ಕದಡಲು ಯತ್ನಿಸುವ ಸಾಧ್ಯತೆಗಳಿವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಇಂಥ ಸಂದರ್ಭಗಳನ್ನು ದುರುಪಯೋಗ ಮಾಡಿಕೊಳ್ಳಲು ಬಿಡದೆ ಶಾಂತಿ-ಸಾಮರಸ್ಯ ಕಾಪಾಡಿಕೊಳ್ಳಬೇಕಿದೆ. ಯಾರೂ ಸಹ ಮತ್ತೆ ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಬಾರದು. ಎಚ್ಚರಿಕೆಯ ವರ್ತನೆ ಮೂಲಕ ಕೋಮುಗಲಭೆ, ಗುಂಪುಘರ್ಷಣೆ, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಅಂದು ಮಾತು ಮುಗಿಸಿದರು. ಮತ್ತೇನು ಎಂಬಂತೆ ಕಣ್ಣಿಗೆ ಕಣ್ಣು ಬೆರೆಸಿದರು. ಕೊಂಚ ಮಟ್ಟಿಗೆ ಸಮಾಧಾನಗೊಂಡ ನಾನು ಮರು ಮಾತನಾಡದೆ ಥ್ಯಾಂಕ್ಸ್ ಸ್ವಾಮೀಜಿ ಅಂದವನೇ ಶಾಂತಿ ಶಾಂತಿ ಶಾಂತಿ ಎಂಬ ಗುಂಗಿನಲ್ಲಿ ಮುರುಘಾಮಠದಿಂದ ರೂಮಿಗೆ ಬಂದು ಕುಳಿತೆ.

ತಕ್ಷಣವೇ ನನ್ನ ಲ್ಯಾಪ್ ಟಾಪ್ ಆನ್ ಮಾಡಿದವನೇ ವೇ ಟೂ ಎಸ್.ಎಮ್.ಎಸ್ ಗೆ ಹೋದೆ. ‘ಮುರುಘಾ ಶರಣರ ಸಂದೇಶ: ರಾಷ್ಟ್ರ ಧರ್ಮವನ್ನ ಪ್ರೀತಿಸೋಣ. ಕೋರ್ಟ್ ತೀರ್ಪನ್ನ ಗೌರವಿಸೋಣ. ಸಂಘರ್ಷ ಬಿಡೋಣ. ಶಾಂತಿ-ಸಾಮರಸ್ಯ ಕಾಪಾಡೋಣ’ ಅಂತ ಟೈಪ್ ಮಾಡಿದವನೇ ಕ್ಷಣಾರ್ಧದಲ್ಲೇ ಸುಮಾರು ೫೦೦ ಜನರಿಗೆ ಮೆಸೇಜ್ ಕಳುಹಿಸಿದೆ. ಬಹುತೇಕ ಮಂದಿಯಿಂದ ಉತ್ತಮ ಪ್ರತಿಕ್ರಿಯೆಗಳು ಬಂದಾಗ ನಿಟ್ಟುಸಿರುಬಿಟ್ಟೆ. ಬಳಿಕ ಆ ಮೇಸೇಜು ಪಾಸಾಗಿ ಒಂದು ತಾಸಿನೊಳಗೇ ಅಪರಿಚಿತ ವ್ಯಕ್ತಿಯಿಂದ ಮರಳಿ ನನಗೇ ಆ ಮೆಸೇಜು ಬಂತು. ಕೆಳಗಡೆ ‘ಸೆಂಡ್ ದಿಸ್ ಮೆಸೇಜ್ ಆಲ್ ಇಂಡಿಯನ್ಸ್’ ಅಂತ ಸೇರಿಸಲಾಗಿತ್ತು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ, ಅಷ್ಟೊಂದು ಖುಷಿ ಪಟ್ಟೆ. ಶರಣರ ಶಾಂತಿ ಸಂದೇಶ ದೇಶದ ೧೦೦ಕೋಟಿ ಮಂದಿಗೆ ತಲುಪಲಿ ಎಂದು ಕನಸು ಕಟ್ಟಿಕೊಳ್ಳುತ್ತ ಕುಳಿತೆ.

ಆದರೂ ಚಿಂತೆ ಮಾತ್ರ ಕಡಿಮೆ ಆಗಲಿಲ್ಲ. ಸ್ವಾತಂತ್ರ್ಯ ಗಳಿಸುವಾಗ ಒಂದಾಗಿ ಹೋರಾಡಿದ ಧರ್ಮಗಳು ಇಂದು ಯಾಕೆ ರಾಷ್ಟ್ರಧರ್ಮವನ್ನು ಮರೆಯುತ್ತಿವೆ. ರಾಜಕಾರಣಿಗಳು, ಸರ್ಕಾರಗಳು ನಾಡ ಅಭಿವೃದ್ಧಿ ಮರೆತು ಶಾಂತಿ ಕದಡುವ ಮೂಲಕ ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಕಾರ್ಯವನ್ನೇಕೆ ಮಾಡುತ್ತಿದ್ದಾರೆ. ಅದೇಕೆ ಮುಗ್ಧ ಜನರ ಭಾವನೆಗಳನ್ನ ಕೆರಳಿಸಿ ಶಾಂತಿ ಭಂಗಗೊಳಿಸಲು ಪ್ರಚೋದಿಸುತ್ತಾರೆ. ಅಂಥ ನಾಯಕರ ಮಾತುಗಳನ್ನ ಸಾರ್ವಜನಿಕರೇಕೆ ಪಾಲಿಸುತ್ತಾರೆ. ಹೀಗೆ ಉತ್ತರವಿಲ್ಲದ ಪ್ರಶ್ನೆಗಳು ಕಾಡತೊಡಗಿದವು.

ಮತ್ತೊಂದು ಕಡೆ ಮಂದಿರ-ಮಸೀದಿಗಳಿಗೆ ವ್ಯಾಪಕ ಭದ್ರತೆ ಒದಗಿಸಿದ್ದು ಶಾಂತಿ ಸಭೆಗಳು ನಡೆಯುತ್ತಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೊಬೈಲ್ ಮೆಸೇಜ್ ಗಳನ್ನೂ ಪ್ರತಿಬಂಧಿಸಲಾಗ್ತಿದೆ. ಇದೆಲ್ಲಾ ನೋಡಿದ್ರೆ ದುಷ್ಟ ರಾಜಕಾರಣಿಗಳ ಕೈಗೆ ಸಿಕ್ಕು ನಮ್ಮ ದೇಶದ ಗತಿ ಎಲ್ಲಿಗೆ ಬಂತು ಅನ್ನುವ ಅನುಮಾನಗಳು ಕಾಡತೊಡಗಿವೆ.

ಐಕ್ಯತೆ ಮೂಲಕ ಜಗತ್ತಿಗೆ ಮಾದರಿಯಾದ ಭಾರತ ದೇಶ ಮತ್ತೊಮ್ಮೆ ತನ್ನತನ ತೋರುವ ಕಾಲ ಬಂದಿದೆ. ಈಗ ಪ್ರತಿ ಪ್ರಜೆಯೂ ಎಚ್ಚೆತ್ತುಕೊಳ್ಳಬೇಕಿದೆ. ಪರ-ವಿರೋಧ ಎಂಬ ಮಾತುಗಳನ್ನ ಬಿಟ್ಟು ಕೋರ್ಟ್ ನೀಡುವ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸಬೇಕಿದೆ. ಎಂದೆಂದಿಗೂ ಹಿಂದೂ-ಮುಸ್ಲಿಂ ಭಾಯಿ-ಭಾಯಿ ಎಂಬುದನ್ನ ಸಾಬೀತುಪಡಿಸಬೇಕಿದೆ. ಧರ್ಮನಿರಪೇಕ್ಷ ರಾಷ್ಟ್ರವಾದ ಭಾರತದಲ್ಲಿ ನಮ್ಮ ನಮ್ಮ ಧರ್ಮ ಯಾವುದೇ ಇರಲಿ ರಾಷ್ಟ್ರ ಧರ್ಮಕ್ಕೆ ಚ್ಯುತಿ ಉಂಟಾಗದಂತೆ ನಡೆದುಕೊಳ್ಳುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕಿದೆ. ತೀರ್ಪು ರಾಮ ಮಂದಿರದ ಪರವಾಗಿ ಬಂದರೆ ಅದನ್ನ ‘ರಾಮಮಸೀದಿ’ ಅನ್ನೋಣ, ಬಾಬ್ರಿ ಮಸೀದಿಯ ಪರವಾಗಿ ಬಂದರೆ ಅದನ್ನ ‘ಬಾಬ್ರಿಮಂದಿರ’ ಅನ್ನೋಣ ಅನ್ನುವ ಒಮ್ಮತದ ಭಾವೈಕ್ಯತೆಯ ತೀರ್ಮಾನವನ್ನ ನಾವೆಲ್ಲಾ ಕೈಗೊಳ್ಳಬೇಕಿದೆ. ರಾಮ-ರಹೀಮ ಎಲ್ಲಾ ಒಂದೇ ಅನ್ನುವ ಸದ್ಭಾವನೆ ಬೆಳೆಸಿಕೊಳ್ಳಬೇಕಿದೆ.

ಹೀಗನ್ನಿಸಿದ್ದನ್ನ ಕೆಂಡಸಂಪಿಗೆಗೆ ಬರೆಯುವ ಬಗ್ಗೆ ಹಿರಿಯರೂ ನನ್ನ ನೆಚ್ಚಿನ ಲೇಖಕರೂ ಆದ ರಶೀದ್ ಸರ್ ಅವರಿಗೆ ತಿಳಿಸಿದೆ. ಮೊದಲಿಗೆ ಆ ವಿವಾದಕ್ಕೆ ಪ್ರಚಾರವೇ ಬೇಡ ನೀವು ಮಾಧ್ಯಮದವ್ರೂ… ಅಂತ ಸಿಟ್ಟಾದರಾದರೂ ಬಳಿಕ ಬರೆದು ಕಳುಹಿಸಿ ನೋಡೋಣ ಅಂದರು. ಆದರೆ ಲೇಖನ ಬರೆದು ಮುಗಿಸುವ ವೇಳೆಗೆ ಇಂಟಲಿಜೆನ್ಸ್ ಪೊಲೀಸ್ ದಿವಾಕರನ ಫೋನ್ ರಿಂಗಣಿಸಿತು. ಏನ್ರೀ ಸಾಹೇಬ್ರೆ ಅಂತಂದ್ರೆ ಸರ್ ಅಯೋಧ್ಯೆ ವಿವಾದದ ತೀರ್ಪು ಮುಂದೂಡಿತಂತೆ ಹೌದಾ ಅಂತ ಪ್ರಶ್ನಿಸಿದ್ರು. ನನ್ನ ಮುಂಭಾಗದಲ್ಲೇ ಇದ್ದ ಟಿವಿಯಲ್ಲಿ ಟಿವಿ೯ ಹಾಕಿದ್ರೆ ತ್ರಿಪಾಠಿ ಎಂಬುವವರು ಕಾಮನ್ ವೆಲ್ತ್ ಕ್ರೀಡಾಕೂಟ ನಡೆಯುತ್ತಿದ್ದು ತೀರ್ಪನ್ನು ಮುಂದೂಡಬೇಕೆಂದು ಅರ್ಜಿ ಸಲ್ಲಿಸಿದ್ದು ತೀರ್ಪಿಗೆ ತಡೆಯಾಜ್ಞೆ ಸಿಕ್ಕ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಸುದ್ದಿ ನೋಡುತ್ತಿದ್ದಂತೆಯೇ ಕೊಂಚ ರಿಲೀಫ್ ಆದೆನಾದರೂ ಇಂದಲ್ಲ ನಾಳೆ ತೀರ್ಪು ಹೊರಬೀಳಲೇಬೇಕಲ್ಲ. ಅದನ್ನ ನಮ್ಮ ನಾಡಿನ ಜನ ಶಾಂತಿಯಿಂದ ಸ್ವೀಕರಿಸಿ ಸಾಮರಸ್ಯ ಕಾಪಾಡುವಂತಾಗಲಿ ಎಂದು ಆಶಿಸುತ್ತಿದ್ದೇನೆ…