‘ಕಾಂಚನಸೀತೆ’ ಎನ್ನುವ ಹೆಸರೇ ನಿಗೂಢವಾಗಿದೆ. ರಾಮಾಯಣವನ್ನು ನಿಕಟವಾಗಿ ಬಲ್ಲವರಿಗೂ ಇದರ ಪರಿಚಯ ಇರುವುದಿಲ್ಲ. ಸೀತಾಪರಿತ್ಯಾಗದ, ನಂತರ ರಾಮನು ಅಶ್ವಮೇಧ ಮತ್ತು ಇತರ ಯಾಗಗಳನ್ನು ಮಾಡಬೇಕಾಗಿ ಬಂದಾಗ, ಪತ್ನಿಯಾದ ಸೀತೆಯ ಜಾಗದಲ್ಲಿ ಅವಳ ಚಿನ್ನದ ವಿಗ್ರಹವನ್ನು ಮಾಡಿಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಅಂಥ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡನೆಂದು ವಾಲ್ಮೀಕಿ ರಾಮಾಯಣದ ‘ಉತ್ತರಕಾಂಡ’ವೂ ಹೇಳುತ್ತದೆ. ಭವಭೂತಿಯ ‘ಉತ್ತರರಾಮಚರಿತೆ’ ನಾಟಕವು ಈ ಕಥೆಯನ್ನು ಇನ್ನಷ್ಟು ವಿಸ್ತರಿಸುತ್ತದೆ. ಅದರ ಪ್ರಕಾರ ಸೀತೆಯು ರಾಮನ ಪಶ್ಚಾತ್ತಾಪ ಮತ್ತು ದುಃಖಗಳನ್ನು ಅದೃಶ್ಯಳಾಗಿ ನೋಡುತ್ತಾಳೆ.
ಪ್ರೊ. ಕೃಷ್ಣಮೂರ್ತಿ ಚಂದರ್ ಬರೆದ ಕಾದಂಬರಿ ‘ಕಾಂಚನಸೀತ’ಗೆ ಎಚ್. ಎಸ್. ರಾಘವೇಂದ್ರ ರಾವ್ ಬರೆದ ಮುನ್ನುಡಿ

 

ಕಳೆದ ಹಲವು ವರ್ಷಗಳಲ್ಲಿ ಹುಚ್ಚುಹೊಳೆಯಂತೆ ಹರಿಯುತ್ತಿರುವ ಸಾಹಿತ್ಯ, ಅರೆಸಾಹಿತ್ಯ ಮತ್ತು ಹುಸಿಸಾಹಿತ್ಯಗಳ ಮಹಾಪೂರದಲ್ಲಿ, ಅನೇಕ ಗಂಭೀರ ಪ್ರಯತ್ನಗಳು ನಮ್ಮ ಗಮನಕ್ಕೆ ಬರದೆ ಕಾಣೆಯಾಗುತ್ತಿವೆ. ನನ್ನ ಬರವಣಿಗೆಯು ಅದನ್ನು ಸರಿಪಡಿಸುವುದೆಂಬ ಯಾವ ಭ್ರಮೆಯೂ ನನಗಿಲ್ಲ. ಆದರೆ, ಏನಿಲ್ಲವೆಂದರೂ ನಾಲ್ಕು ದಶಕಗಳಿಂದ ಹವ್ಯಾಸೀ ಕಥೆಗಾರರಾಗಿ ಬರೆಯುತ್ತ ಬಂದಿರುವ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದ ಪ್ರೊ. ಕೃಷ್ಣಮೂರ್ತಿ ಚಂದರ್ ಅವರ ಈ ಕಿರುಕಾದಂಬರಿಯನ್ನು, ಸಾಹಿತ್ಯಾಸಕ್ತನಾಗಿ ಓದುವ ಹಂಬಲದಿಂದ ಈ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಇಂಗ್ಲಿಷ್ ಮೇಷ್ಟ್ರಾದ ಚಂದರ್ ಅವರು ಸಾಹಿತ್ಯದ ಆಶಯ ಮತ್ತು ಆಕೃತಿಗಳ ಅವಿನಾಭಾವವನ್ನು ಬಲ್ಲವರು. ಹೇಳುವ ಬಗೆಯಲ್ಲಿಯೇ ಬಳಸುವ ಪರಿಕರಗಳಲ್ಲಿಯೇ ‘ಕಥೆ’ಗೆ ಹೊಸ ಆಯಾಮಗಳು ದಕ್ಕುವ ಪರಿ ಅವರಿಗೆ ಗೊತ್ತು. ಆದ್ದರಿಂದಲೇ ಅವರ ಬರಹ ಮೇಲುನೋಟಕ್ಕೆ ಸರಳವಾಗಿ ಕಂಡರೂ ಮಹತ್ವದ ಹುಡುಕಾಟದಲ್ಲಿ ತೊಡಗಿರುತ್ತದೆ. ಅವರ ಕಥೆಗಳನ್ನು ಕೂಡ ವಿವರವಾಗಿ ನೋಡುವ ಅಸಕ್ತಿ ನನಗಿದ್ದರೂ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ. ನನ್ನನ್ನು ‘ಕಾಂಚನಸೀತೆ’ ಕಾದಂಬರಿಗೆ ಸೀಮಿತಗೊಳ್ಳಬೇಕಾಗಿದೆ. ಈ ಕಿರು ಕಾದಂಬರಿಯು ಅವರ ಕಥೆಗಳಿಗಿಂತ ಕೆಲವು ನೆಲೆಗಳಲ್ಲಿ ಭಿನ್ನವಾಗಿದೆಯೆಂದು ಮಾತ್ರ ಹೇಳಬಲ್ಲೆ.

(ಪ್ರೊ. ಕೃಷ್ಣಮೂರ್ತಿ ಚಂದರ್)

ಸ್ವಂತ ಅನುಭವಗಳ ಲೋಕವು ಲೇಖಕನ ಶಕ್ತಿಯೂ ಹೌದು, ಅವನನ್ನು ಸೀಮಿತಗೊಳಿಸುವ ಗಡಿಗೆರೆಯೂ ಹೌದು. ಅವುಗಳಾಚೆಗೆ ಚಲಿಸುವ ಪ್ರಯತ್ನವು ಅಧಿಕೃತತೆಗೆ ಎರವಾಗುವುದು ಮತ್ತು ಅದರಿಂದಲೇ ಹುಸಿಯಾಗುವುದು ಕೇವಲ ಸಹಜ. ಜೀವನಶೈಲಿಗಳ ಮತ್ತು ಭಾಷಿಕ ನೆಲೆಗಳ ಬಹುತ್ವವೇ ಸಹಜಗುಣವಾಗಿರುವ ಕರ್ನಾಟಕದಂತಹ ಜಾಗದಲ್ಲಿ, ಮೊದಲ ಬಾರಿಗೆ ಅನಾವರಣವಾಗುತ್ತಿರುವ ಅನುಭವ ಲೋಕ ಮತ್ತು ಮನೋಲೋಕಗಳಿಗೆ ‘ಹೊಸತನದ’ ಆಕರ್ಷಣೆ ಇರುತ್ತದೆ. ಹಂಚಿಕೊಳ್ಳಬೇಕಾದ ಸಂಗತಿಗಳೂ ಇರುತ್ತವೆ. ಹಾಗಲ್ಲದೆ ಮೊದಲಿನಿಂದಲೂ ಸಾಹಿತ್ಯದ ಮುನ್ನೆಲೆಯಲ್ಲಿಯೇ ಇರುವ ಬದುಕನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿರುವ ‘ಹಿನ್ನೆಲೆಗಳ’ ಲೇಖಕರ ಬರವಣಿಗೆಗೆ ಏಕತಾನತೆಯ ‘ಲೇಬಲ್’ ಅಂಟಿಸುವುದು ಸುಲಭ. ಆದರೆ, ಲೇಖಕನ ಬರವಣಿಗೆಗೆ ತಾಳಿಕೆಯ ಗುಣ ಬರುವುದು, ಇಂತಹ ‘ಹೊಸತನ’ದಿಂದ ಮಾತ್ರವಲ್ಲ. ಬದಲಾಗಿ ಅವನು ಅವುಗಳನ್ನು ಬಳಸಿಕೊಂಡು ನಡೆಸುವ ತಾತ್ವಿಕ ಹುಡುಕಾಟ ಯಾವ ಬಗೆಯದು ಮತ್ತು ಕಂಡುಕೊಳ್ಳುವ ಸತ್ಯಗಳು ಯಾವುದು ಎನ್ನುವುದರಲ್ಲಿ. ಇದು ಸಾಧ್ಯವಾಗುವುದು ಲೇಖಕನ ಬೌದ್ಧಿಕ ತೊಡಗುವಿಕೆ ಮತ್ತು ಆಕೃತಿಯನ್ನು ಕುರಿತಾದ ‘ಪ್ರಜ್ಞೆಯಿಂದ. ಈ ಮಾತು ‘ಕುಸುಮಬಾಲೆ, (ದೇವನೂರು) ‘ಮರಣಮಂಡಲ ಮಧ್ಯದೊಳಗೆ’ (ಮುಳ್ಳೂರು ನಾಗರಾಜ’ ಮತ್ತು ‘ಮಾಗಿ’ (ಮನಜ) ಮುಂತಾದ ಕಾದಂಬರಿಗಳನ್ನು ಹೋಲಿಸಿ ನೋಡಿದಾಗ ಗೊತ್ತಾಗುತ್ತದೆ. ಹಾಗೆಯೇ ಕುವೆಂಪು ಅವರ ಎರಡು ಮಹಾನ್ ಕಾದಂಬರಿಗಳಲ್ಲಿ ನಡೆದಿರುವ ಇಂಥ ಮಹತ್ವದ ಹುಡುಕಾಟದ ಪರಸ್ಪರ ಭಿನ್ನವಾದ ಆಶಯಗಳು ಅವರ ದರ್ಶನಕ್ರಮದಲ್ಲಿ ನಡೆದಿರುವ ವಿಕಾಸದ ಪರಿಣಾಮ. ಇಂಥ ಹುಡುಕಾಟ ನಡೆದಿದೆಯೋ ಇಲ್ಲವೋ ಮತ್ತು ಅದು ಹೇಗೆ ‘ಅನನ್ಯ’ವಾಗಿದೆ ಎನ್ನುವುದು ಸಾಹಿತ್ಯವನ್ನು ಓದುವ, ಬೆಲೆಕಟ್ಟುವ ಬಗೆಯನ್ನೂ ತೀರ್ಮಾನಿಸುತ್ತದೆ. ಕೊನೆಗೂ ಕಾದಂಬರಿಗೆ ‘ಕಥೆ’ ಎನ್ನುವುದು ಒಂದು ನೆಪ.

‘ಕಾಂಚನಸೀತೆ’ ಎನ್ನುವ ಹೆಸರೇ ನಿಗೂಢವಾಗಿದೆ. ರಾಮಾಯಣವನ್ನು ನಿಕಟವಾಗಿ ಬಲ್ಲವರಿಗೂ ಇದರ ಪರಿಚಯ ಇರುವುದಿಲ್ಲ. ಸೀತಾಪರಿತ್ಯಾಗದ, ನಂತರ ರಾಮನು ಅಶ್ವಮೇಧ ಮತ್ತು ಇತರ ಯಾಗಗಳನ್ನು ಮಾಡಬೇಕಾಗಿ ಬಂದಾಗ, ಪತ್ನಿಯಾದ ಸೀತೆಯ ಜಾಗದಲ್ಲಿ ಅವಳ ಚಿನ್ನದ ವಿಗ್ರಹವನ್ನು ಮಾಡಿಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಅಂಥ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡನೆಂದು ವಾಲ್ಮೀಕಿ ರಾಮಾಯಣದ ‘ಉತ್ತರಕಾಂಡ’ವೂ ಹೇಳುತ್ತದೆ. ಭವಭೂತಿಯ ‘ಉತ್ತರರಾಮಚರಿತೆ’ ನಾಟಕವು ಈ ಕಥೆಯನ್ನು ಇನ್ನಷ್ಟು ವಿಸ್ತರಿಸುತ್ತದೆ. ಅದರ ಪ್ರಕಾರ ಸೀತೆಯು ರಾಮನ ಪಶ್ಚಾತ್ತಾಪ ಮತ್ತು ದುಃಖಗಳನ್ನು ಅದೃಶ್ಯಳಾಗಿ ನೋಡುತ್ತಾಳೆ. ಆದರೂ ಆ ನಾಟಕವು ಸೀತೆಗಾದ ಅನ್ಯಾಯವನ್ನು ಇನ್ನಷ್ಟು ವಿವರವಾಗಿ ಹೇಳುತ್ತದೆ. ಮಲಯಾಳಂ ಭಾಷೆಯ ಹೆಸರಾಂತ ಲೇಖಕರಾದ ಶ್ರೀಕಂಠನ್ ನಾಯರ್ ಅವರ ‘ಕಾಂಚನಸೀತಾ’ ನಾಟಕ ಮತ್ತು ಅದನ್ನು ಆಧರಿಸಿ ಪ್ರಸಿದ್ಧ ನಿರ್ದೇಶಕರಾದ ಜಿ. ಅರವಿಂದನ್ ಅವರು ನಿರ್ದೇಶಿಸಿದ ‘ಕಾಂಚನಸೀತಾ’ ಎಂಬ ಚಲನಚಿತ್ರಗಳು ಈ ಕಥೆಯನ್ನು ಸ್ತ್ರೀವಾದದ ಹಿನ್ನೆಲೆಯಲ್ಲಿ ಸೀತೆಯ ಸಮರ್ಥನೆಗಾಗಿ ಬಳಸಿಕೊಳ್ಳುತ್ತವೆ. ಕನ್ನಡದ ಅ.ನ.ಕೃ. ಅವರು ‘ಸ್ವರ್ಣಮೂರ್ತಿ’ ನಾಟಕದಲ್ಲಿ ಈ ಕಥೆಯನ್ನು ಇಂತಹುದೇ ಬಗೆಯಲ್ಲಿ ಮಂಡಿಸಿದ್ದಾರೆ.

ಜೀವನಶೈಲಿಗಳ ಮತ್ತು ಭಾಷಿಕ ನೆಲೆಗಳ ಬಹುತ್ವವೇ ಸಹಜಗುಣವಾಗಿರುವ ಕರ್ನಾಟಕದಂತಹ ಜಾಗದಲ್ಲಿ, ಮೊದಲ ಬಾರಿಗೆ ಅನಾವರಣವಾಗುತ್ತಿರುವ ಅನುಭವ ಲೋಕ ಮತ್ತು ಮನೋಲೋಕಗಳಿಗೆ ‘ಹೊಸತನದ’ ಆಕರ್ಷಣೆ ಇರುತ್ತದೆ. ಹಂಚಿಕೊಳ್ಳಬೇಕಾದ ಸಂಗತಿಗಳೂ ಇರುತ್ತವೆ.

ಚಂದರ್ ಅವರ ‘ಕಾಂಚನಸೀತ’ ಈ ಕಥೆಯ ಹೊಸ ಅವತಾರವನ್ನು ಸೃಷ್ಟಿಸಿ, ಆ ಮೂಲಕ ನಮ್ಮ ಕಾಲದ ಮನುಷ್ಯ ಸಂಬಂಧಗಳು ಮತ್ತು ಆದ್ಯತೆಗಳ ಸ್ವರೂಪವನ್ನು ಶೋಧಿಸುವ ಪ್ರಯತ್ನ ಮಾಡಿದೆ. ಈ ಪುಸ್ತಕದ ನಾಯಕಿ ಕಾಂಚನ, ಸೀತೆಯಂತಹುದೇ ಅಗ್ನಿಪಥದಲ್ಲಿ ನಡೆದು ಸಾರ್ಥಕವಾದ ಬಿಡುಗಡೆಯ ಹಾದಿಯನ್ನು ಕಂಡುಕೊಂಡವಳು. ನಾಯಕ ವೆಂಕಟಸುಬ್ಬರಾವ್ ‘ಕಾಂಚನ’ಳನ್ನು ಬಿಟ್ಟು ‘ಕಾಂಚಾಣ’ದ ಬೆನ್ನುಹತ್ತಿ ಅಮೆರಿಕಾಗೆ ಹೋಗಿ‌, ಅಲ್ಲಿ ಯಶಸ್ವಿಯಾದರೂ (?) ತನ್ನ ಬಾಲ್ಯದ ಒಡನಾಡಿಯ ನೆನಪನ್ನು ಆರ್ದ್ರವಾಗಿ ಕಾಪಾಡಿಕೊಂಡವನು. ಸುಬ್ಬ ಮತ್ತು ಅವನ ‘ಬಾಲ್ಯಕಾಲಸಖಿ’ಯ ನಡುವಿನ ಸಂಬಂಧವು ಬಾಲ್ಯಕ್ಕೇ ಸೀಮಿತವಾಗಿದೆ. ವಾಲ್ಮೀಕಿ, ಭವಭೂತಿಯರ ರಾಮನ ಮನಸ್ಸಿನಲ್ಲಿಯೂ ತಾನು ತ್ಯಜಿಸಿದ ನಲ್ಲೆಯ ನೆನಪು ಹಾಗೆಯೇ ಉಳಿದಿದೆಯೆನ್ನುವ ಸೂಚನೆಗಳಿವೆ. ಹತ್ತಿರವಿದ್ದೂ ದೂರನಿಲ್ಲುವ, ದೂರವಿದ್ದೂ ಗುಪ್ತಗಾಮಿನಿಯಾಗಿ ಹರಿಯುವ ಈ ಆಶಯವು ನಮ್ಮ ಕಾಲದಲ್ಲಿಯೂ ಸಂಬಂಧಗಳನ್ನು ಸ್ವರೂಪವನ್ನು ಆಳುತ್ತಿದೆಯೆನ್ನುವುದಕ್ಕೆ ಸಾಕ್ಷಿಯೇ ಬೇಕಾಗಿಲ್ಲ. ಒಟ್ಟಿಗೆ ಇರುವ ದಂಪತಿಗಳ ನಡುವೆಯೂ ಖಂಡಾಂತರಗಳ ದೂರ ನಿರ್ಮಿತವಾಗಿರುವ ಕಾಲ ನಮ್ಮದು. ಇದಕ್ಕೆ ಪರಸ್ಪರ ಭಿನ್ನವಾದ ಕನಸುಗಳು ಮತ್ತು ಅನುಕಂಪದ ಕೊರತೆಯೂ ಕಾರಣ. ಹಿರಿಯ ಕವಿ ಪು.ತಿ.ನ. ಅವರು ಬಹಳ ಹಿಂದೆಯೇ ‘ಅಹಲ್ಯೆ’ ನಾಟಕದಲ್ಲಿ ಹೇಳಿದಂತೆ,

“ಬಾಳ್ ಬಾಳಿಗು ಏನಂತರ, ಇದ್ದೆವು ಸನಿಹದೊಳೇ ಒಬ್ಬರ ಹಂಬಲವೊಬ್ಬರು ತುಸವೂ ತಿಳಿಯದಲೇ”

ಹಾಗೆ ನೋಡಿದರೆ, ಕೃಷ್ಣನು ರಾಧೆಯನ್ನು ಬಿಟ್ಟು ಮಥುರೆಗೆ ತೆರಳಿದ್ದು ಕೂಡ ‘ಮಟೀರಿಯಲಿಸ್ಟ್’ ಆದುದರ ಕಡೆಗಿನ ಪಯಣವೇ ತಾನೇ. (ಇದನ್ನು ಕೆ.ವಿ. ಸುಬ್ಬಣ್ಣನವರು ಮೊದಲು ಗುರುತಿಸಿದರು) ಸೀತೆಯು ರಾಮನಿಂದ ದೂರವಾಗಿ ಭೂಮಿಪ್ರವೇಶ ಮಾಡಿದಂತೆಯೇ, ಕೊನೆಯವರೆಗೂ ಅಗೋಚರವಾಗಿಯೇ ಉಳಿಯುವ ಈ ಕಥೆಯ ನಾಯಕಿ ಕಾಂಚನ ಕೂಡ ದೇವಾಲಯದಡಿಯ ಗುಹೆ-ಗುಹಾಂತರಗಳಲ್ಲಿ ನೆಲೆಸಿ, ಅಂತಿಮವಾಗಿ ಕಾಡಿನ ನಡುವಿನ ಗಿರಿಜನರ ಗುಡಿಸಿಲಿನಲ್ಲಿ, ಬಾಲಕ-ಬಾಲಕಿಯರ, ಸೇವೆಯಲ್ಲಿ ಮರೆಯಾಗುತ್ತಾಳೆ. ಸುಬ್ಬ ಕೂಡ ಅವಳೊಂದಿಗೆ ಮಾತನಾಡಿ, ಅವಳ ಏಕಾಂತಶಾಂತಿಗೆ ಭಂಗ ತರಬಾರದು ಎನ್ನುವ ಘನವಾದ ತೀರ್ಮಾನಕ್ಕೆ ಬಂದು ಹಿಂದಿರುಗುತ್ತಾನೆ. ಆದರೆ, ಅವನು ತನ್ನ ಕಳೆದ ಬಾಳಿಗೆ ಮರಳಿ ಹೋಗಲಾರನೆಂಬ ಸೂಚನೆಯು ಕಾದಂಬರಿಯೊಳಗಡೆ ಅಸ್ಪಷ್ಟವಾಗಿಯಾದರೂ ಸಿಗುತ್ತದೆ. ಕಾಂಚನಳ ದರ್ಶನ ಅವನಲ್ಲಿ ನಿಧಾನವಾಗಿ ಕೆನೆಗಟ್ಟುತ್ತಿದ್ದ ‘ನಿರಸನ’ ಹಾಗೂ ‘ತ್ಯಾಗ’ಗಳಿಗೆ ಅಂತಿಮ ರೂಪ ಕೊಡುತ್ತದೆ. ಈ ಎರಡೂ ಪಾತ್ರಗಳು, ನಮ್ಮ ಕಾಲದ ಸಾಮಾಜಿಕ ಕಟ್ಟುಪಾಡುಗಳಿಗೆ ಅನುಗುಣವಾಗಿ ಬೇರೆ ಯಾರನ್ನೋ ಮದುವೆಯಾಗಿ ಮಕ್ಕಳನ್ನು ಪಡೆದರೂ ಅವರ ಒಳಗುದಿ ಆರಿರಲಿಲ್ಲವೆನ್ನುವುದಕ್ಕೆ ಸುಬ್ಬನಲ್ಲಿ ಪ್ರತ್ಯಕ್ಷವಾದ, ಕಾಂಚನಳಲ್ಲಿ ಪರೋಕ್ಷವಾದ ಸೂಚನೆಗಳು ಸಿಗುತ್ತವೆ. ಆದರೆ, ಅವರ ಪಯಣದ ದಿಕ್ಕುದೆಸೆಗಳು ಮಾತ್ರ ಬೇರೆಯಾಗಿವೆ.

ಈ ಬರವಣಿಗೆಯ ಒಳವಿವರಗಳು, ಇದುವರೆಗೆ ನಾನು ಪ್ರಸ್ತಾಪಿಸಿದ ಆಶಯವನ್ನು ಪೋಷಿಸುವುದರಿಂದ ಕೇವಲ ಅನಗತ್ಯವಾದ ಪ್ಯಾಡಿಂಗ್ ಆಗುವುದಿಲ್ಲ. ‘ಹಿಮ್ಮುಖ ಪಯಣ’ದ ಕೇಂದ್ರಪ್ರತಿಮೆಯ ಮೂಲಕ ಬೆಳೆಯುವ ಕಥೆ-ಕಾದಂಬರಿಗಳು ಕನ್ನಡದಲ್ಲಿ ಈಗಾಗಲೇ ಬೇರೆ ಬೇರೆ ಉದ್ದೇಶಗಳಿಂದ ಮೂಡಿಬಂದಿವೆ. ಅನೇಕ ಕಡೆ ಅವು ಬಾಹ್ಯಜಗತ್ತಿನಲ್ಲಿ ನಡೆಯುವ ಓಡಾಟ ಮಾತ್ರವಾಗದೆ, ಪ್ರೊಟಾಗನಿಸ್ಟ್ ಅಂತರಂಗದಲ್ಲಿ ನಡೆಯುವ ‘ಒಳಪಯಣ’ವೂ ಆಗಿರುತ್ತದೆ. ಶಾಂತಿನಾಥ ದೇಸಾಯಿಯವರ ‘ಬೀಜ’, ಮತ್ತು ‘ಅಂತರಾಳ’ ತಕ್ಷಣ ನೆನಪಿಗೆ ಬರುತ್ತಿವೆ. ಈ ಕಾದಂಬರಿಯ ಸುಬ್ಬನು, ಅಮೆರಿಕಾದಿಂದ ಬೆಂಗಳೂರಿಗೆ ಬಂದಾಗಿನಿಂದ ಕೊನೆಕೊನೆಯ ತನಕ ಅವನ ಜೊತೆಯಲ್ಲಿಯೇ ಇರುವ, ಸಂಸ್ಕಾರದ ‘ಮಾಲೇರ ಪುಟ್ಟ’ನ ದೂರದ ಕಸಿನ್ ಹಾಗೆ ಕಾಣಿಸುವ ‘ಸತ್ಯ’ ಮತ್ತು ಅವನ ಮೂಲಕವೇ ಪರಿಚಯವಾಗುವ, ‘ಮನುಷ್ಯಸಹಜ ಗುಣ’ಗಳನ್ನು ತುಂಬಿಕೊಂಡಿರುವ ‘ಲೋಕಬಳಗ’ ಬಹಳ ಮುಖ್ಯವಾದುದು. ಸತ್ಯ ಎನ್ನುವ ಹೆಸರಿನ ಧ್ವನಿಶಕ್ತಿಯನ್ನು ಗಮನಿಸಿ. ನ್ಯೂ-ಜೆರ್ಸಿಯಿಂದ ಮೊದಲಾಗಿ ನಂಜನಗೂಡು, ಚಾಮರಾಜನಗರ, ಬಿಳಿಗಿರಿರಂಗನಬೆಟ್ಟಗಳ ಸುತ್ತಮುತ್ತ ನಡೆಯುವ ದೇಶಸಂಚಾರ ಒಂದು ಬಗೆಯದಾದರೆ, ಬಾಲ್ಯದಿಂದ ವೃದ್ಧಾಪ್ಯಕ್ಕೆ, ಅಲ್ಲಿಂದ ಮತ್ತೆ ಬಾಲ್ಯಕ್ಕೆ ಜಿಗಿಯುವ ಸುಬ್ಬನ ‘ಕಾಲಸಂಚಾರ’ ಇನ್ನೊಂದು ಬಗೆಯದು. ಈ ಕಾದಂಬರಿಯಲ್ಲಿ ಅವನ ಯೌವನ ಮತ್ತು ಮಧ್ಯವಯಸ್ಸುಗಳ ಪ್ರಸ್ತಾಪ ಇಲ್ಲವೇ ಎನ್ನುವಷ್ಟು ಕಡಿಮೆ.

ಬಾಲ್ಯದಲ್ಲಿಯೂ ಸುಬ್ಬ ಮತ್ತು ಕಾಂಚನ ಒಬ್ಬರನ್ನೊಬ್ಬರು ಪೋಷಿಸಿದ್ದಾರೆ, ಸಂತೈಸಿದ್ದಾರೆ. ಕಾಂಚನಳಂತೂ ನದಿಯಲ್ಲಿ ತೇಲಿಹೋಗಲಿದ್ದ ಸುಬ್ಬನ ಜೀವ ಉಳಿಸಿದವಳು. ಅವರ ವರ್ತನೆಯಲ್ಲಿರುವ ಸಹಜತೆ, ತೀವ್ರತೆಗಳ ಗಾಢಬಂಧವನ್ನು ಸಾರಾಸಗಟಾಗಿ ಮರೆತಂತೆ ಹೊರಟುಹೋದ ಸುಬ್ಬನ ವರ್ತನೆಯು ‘ಸೀತಾಪರಿತ್ಯಾಗ’ದಷ್ಟೇ ಕ್ರೂರವಾದುದು. ಹಾಗೆ ಮಾಡುವಾಗ ಅವನು ಅದರ ಬಗ್ಗೆ ಯೋಚಿಸಿದಂತೆಯೂ ಕಾಣುವುದಿಲ್ಲ. ಅವನು ಮರಳಿ ಬಂದಿರುವ ಈ ಲೋಕದಲ್ಲಿ ಭೌತಿಕ-ಆಧ್ಯಾತ್ಮಿಕಗಳು ಸಂದುಗಡಿಯದಂತೆ ಹೆಣೆದುಕೊಂಡಿವೆ. ದೋಸೆಯೊಂದಿಗೆ ಪ್ರೀತಿ ಬೆರೆಸುವ ನಾಗರತ್ನ, ಸುಬ್ಬನ ತಾಯಿಯ ಗೆಳತಿಯರು, ಅವನ ಕಷ್ಟ-ಸುಖಗಳಿಗೆ ನೆರವಾಗುವ ಸತ್ಯ ಇವರೆಲ್ಲರದೂ ಒಂದು ಬಗೆಯಾದರೆ, ಧರ್ಮ-ದಾನ ಹಾಗೂ ಮುಗ್ಧರ ಸೇವೆಯಲ್ಲಿ ಲೀನವಾಗಿರುವ ಕಾಂಚನಳದು ‘ಸಾವ ಕೆಡುವ ಗಂಡರನ್ನು’ ‘ಒಲೆಯೊಳಗಿಕ್ಕಿ’ ಕದಳಿಯ ವನದಲ್ಲಿ ಕರಗಿಹೋದ ಮಹಾದೇವಿಯಕ್ಕನನ್ನು ನೆನಪಿಗೆ ತರುವಂಥದ್ದು. ಇವರೆಲ್ಲರ ಬದುಕಿನ ನೋಟವು ಸುಬ್ಬನಲ್ಲಿ ಮೂಡಿಸುವ ತಿಳಿವಳಿಕೆಯ ಪರ್ಯವಸಾನದಂತೆ ಅವನ ಕೊನೆಯ ನಿರ್ಧಾರ ಇದೆ.

ಈ ಕಾದಂಬರಿಯ ನಿರೂಪಣೆಯು ಪ್ರಥಮ ಪುರುಷದ ಮಾರುವೇಷದಲ್ಲಿರುವ ಉತ್ತಮ ಪುರುಷ ನಿರೂಪಣೆ. ಯಾಕೆಂದರೆ ಇಲ್ಲಿ ವೆಂಕಟಸುಬ್ಬರಾವ್ ಮಾಡಿದ ಮರುಪಯಣದ ವಿವರಗಳನ್ನು ಯಾರೋ ‘ಸರ್ವಸಾಕ್ಷಿ ನಿರೂಪಕ’ ಹೇಳುತ್ತಿರುವಂತೆ ಕಂಡರೂ ಕೆಲವು ಕಡೆ ಅದು ನಿಜವಾದರೂ ವಾಸ್ತವದಲ್ಲಿ ಈ ಕಥೆಯನ್ನು ಕಾಣುತ್ತಿರುವ ಪ್ರಜ್ಞೆಯು ಸುಬ್ಬನದೇ ಆಗಿದೆ. ಅಂತೆಯೇ ಇಲ್ಲಿ ಸದ್ಯದ ಘಟನೆಗಳು ಮತ್ತು ಬಾಲ್ಯದ ನೆನಪುಗಳ ನಿರಂತರವಾದ ಯಾತಾಯಾತ ನಡೆಯುತ್ತದೆ. ಆ ನೆನಪುಗಳಲ್ಲಿ ಕೆಲವು ಅವನ ಜಾಗೃತಪ್ರಜ್ಞೆಗೆ ಸೇರಿದವಾದರೆ, ಬೇರೆ ಕೆಲವು ಸ್ವಪ್ನಗಳಲ್ಲಿ ಪರಿಷ್ಕೃತವಾದ ರೂಪ ಪಡೆಯುತ್ತವೆ. ಅವೆರಡೂ ‘ಆಯ್ದು ತೆಗೆದ’ ಅನುಭವಗಳೇ. ಆ ಆಯ್ಕೆಯ ಹಿಂದಿನ ತರ್ಕವೇ ಕಾದಂಬರಿಯ ತಾತ್ವಿಕ ಬೆಳವಣಿಗೆಯನ್ನು ತೀರ್ಮಾನಿಸುತ್ತದೆ. ಉದಾಹರಣೆಗೆ, ವೆಂಕಟಸುಬ್ಬನಿಗೆ ಸಿನಿಮಾ ‘ಪೋಸ್ಟರುಗಳ ಬಗ್ಗೆ ಇರುವ ‘ತೆವಲ’ನ್ನು ನೋಡಿ. ಬಾಲ್ಯದಲ್ಲಿ ಮೊದಲಾದ ಈ ಗೀಳು ಅವನು ಮುದುಕನಾದ ಮೇಲೆಯೂ ಮುಂದುವರಿದಿದೆ.

(ಎಚ್‌.ಎಸ್.‌ ರಾಘವೇಂದ್ರರಾವ್)

ಅಮೆರಿಕಾದಲ್ಲಿಯೂ ಉಳಿದಿದೆ. ಹಾಗೆಯೇ ಮತ್ತೆ ಮತ್ತೆ ಬರುವ ಆನೆಗಳ ಪ್ರಸ್ತಾಪ, ಪಾತಾಳಲಿಂಗೇಶ್ವರ ದೇವಾಲಯದ ನೆಲದಡಿಯ ದೇವಾಲಯ, ನಂಟಸ್ತಿಕೆ ಹಾಗೂ ಗೆಳೆತನಗಳ ಅಂತರ್ಜಾಲ, ಬಿಳಿಗಿರಿರಂಗನ ಕಥೆ, ಕೊನೆಯಲ್ಲಿ ಬರುವ ಸೋಲಿಗರ ಹುಡುಗ ಪುಟ್ಟ, ಈ ಎಲ್ಲ ಸಂಸ್ಕೃತಿಯ ಜೀವಕೇಂದ್ರದಂತೆ ಇರುವ ಸಂಪಿಗೆ ಮರ ಇವೆಲ್ಲವೂ ಸುಮ್ಮನೆ ಜೋಡಿಸಿದ ವಿವರಗಳಲ್ಲ. ಇವೆಲ್ಲಕ್ಕೆ ಯಾವುದೇ ವಿವರಣೆಯನ್ನು ಕೊಡುವುದು ನನ್ನ ಉದ್ದೇಶವಲ್ಲ. ಬದಲಾಗಿ ಈ ಬರವಣಿಗೆಯ ಸೂಕ್ಷ್ಮಗಳ ಕಡೆ ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಭಾಷೆಯೂ ಹಾಗೆಯೇ. ಉದಾಹರಣೆಗೆ ಕಾದಂಬರಿಯ ಕೊನೆಯಲ್ಲಿ ‘ಮನ ನಿಶ್ಶಬ್ದ’ ಎಂಬ ಮಾತು ಬರುತ್ತದೆ. ಇದು ಯಾರ ಮನಸ್ಸು? ಅಷ್ಟು ದೂರದಿಂದ ಮಾತುಗಳನ್ನು ತುಂಬಿಕೊಂಡು ಬಂದ, ಕೆಲವೇ ನಿಮಿಷಗಳ ಹಿಂದೆ ಮಾತನಾಡಲು ತವಕಿಸುತ್ತಿದ್ದ ಸುಬ್ಬನ ಮನಸ್ಸೋ ಅಥವಾ ಹಲವು ಕಾಲದಿಂದ ಮನಶ್ಶಾಂತಿಯನ್ನು ಸಾಧಿಸಿದ್ದ ಕಾಂಚನಳ ಮನಸ್ಸೋ? ಈ ನಿಶ್ಶಬ್ದವು ಸುಬ್ಬನ ಮನಸ್ಸನ್ನು ಬರಿದು ಮಾಡಿತೇ? ತನ್ನ ಮಾತು ಕೂಡ ಅವಳ ಶಾಂತಿಯಲ್ಲಿ ‘ಮಧ್ಯಪ್ರವೇಶ’ವೆಂಬ ತಿಳಿವಳಿಕೆ ಅವನಿಗೆ ಬಂದಿತೇ? ಅವನು ‘ಸರ ಸರ’ ಅಂತ ಹಿಂದಿರುಗಿದ್ದು ಅವನ ತೀರ್ಮಾನದ ಗಟ್ಟಿತನದ ದ್ಯೋತಕವೋ ಅಥವಾ ತಾನು ಮನಸ್ಸು ಬದಲಿಸಬಹುದು ಎಂಬ ಆತಂಕದ ದ್ಯೋತಕವೋ ಇಂತಹ ಪ್ರಶ್ನೆಗಳನ್ನು ಕೇಳುವ ಅವಕಾಶ ಇರುವುದೇ ಸಂಕೀರ್ಣವಾದ ಶೈಲಿಯ ಲಕ್ಷಣ.

ಸುಮ್ಮನೆ ಜೋಡಿಸಿದಂತೆ ಕಾಣುವ ಈ ವಿವರಗಳ ಹಿಂದೆ ಯಾವುದೋ ಒಂದು ಉದ್ದೇಶ ಇದೆ. ಇಂಥ ಕಡೆ ಲೇಖಕರು ಸುಬ್ಬನ ಹುಡುಕಾಟಕ್ಕಿಂತ ಭಿನ್ನವಾದ ಆದರೂ ಅಷ್ಟೇ ಮುಖ್ಯವೆಂದು ತೋರುವ ಎರಡು ಸಂಸ್ಕೃತಿಗಳ ನಡುವಿನ ಹೋಲಿಕೆಯನ್ನೂ ನಡೆಸುತ್ತಿರುವಂತೆ ತೋರುತ್ತದೆ. ‘ಭಾರತೀಯ’ವೆನ್ನಲಾದ ಜೀವನ ಕ್ರಮವು, ತನ್ನೆಲ್ಲ ಗೊಂದಲ-ಗಡಿಬಿಡಿಗಳ ನಡುವೆಯೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ವಾತ್ಸಲ್ಯಮಯಿಯಾದ ಸಂಸ್ಕೃತಿಯೆಂಬ ನಂಬಿಕೆ ಇಲ್ಲಿ ಕೆಲಸ ಮಾಡುತ್ತದೆ. ಆದರೆ, ಕೃಷ್ಣಮೂರ್ತಿಯವರು ಕಳೆದ ಕಾಲದ ಜೀವನವು ಶ್ರೇಷ್ಠವೆಂದೂ ನಮ್ಮ ಕಾಲವು ಪಾಶ್ಚಾತ್ಯಸಂಸ್ಕೃತಿಯ ಪರಿಣಾಮವಾಗಿ ಹಾಳಾಗಿದೆಯೆಂದೂ ಹೇಳುತ್ತಿಲ್ಲ. ಯಾಕೆಂದರೆ ಅವರಿಗೆ ನಾಗರತ್ನ ಸೀತಾಲಕ್ಷ್ಮಮ್ಮನವರ ಮುಂದುವರಿಕೆಯಂತೆ ಕಾಣುತ್ತಾಳೆ. ಸತ್ಯ, ಪುಟ್ಟ, ಚಂದಕವಾಡಿಯ ಪೂಜಾರರು ಮತ್ತು ಕಾಂಚನ ಎಲ್ಲರೂ ಈ ಕಾಲದವರೇ. ಅವರೆಲ್ಲರೂ ಆಧುನಿಕದಿಂದ ಬದಲಾಗಿರುವಂತೆ ಕಂಡರೂ ವಾಸ್ತವದಲ್ಲಿ ಪ್ರೀತಿ-ವಾತ್ಸಲ್ಯಗಳ ಜೀವಸೆಲೆಯನ್ನು ಕಾಪಾಡಿಕೊಂಡಿದ್ದಾರೆ. ಆದರೆ, ಪ್ರಶ್ನೆ ಹುಟ್ಟುವುದು ಅಮೆರಿಕಾಗೆ ಹೋಗಿ ನೆಲೆಸಿರುವ ಭಾರತೀಯರ ವರ್ತನೆಯನ್ನು ನೋಡಿ ಒಂದು ಭೂಖಂಡದ ಜನರ ಬೆಲೆಕಟ್ಟುವುದು ಸಾಧ್ಯವೇ ಎಂದು ಕೇಳಿಕೊಂಡಾಗ. ಅಮೆರಿಕನ್ನರೂ ಸಾಮಾಜಿಕವಾದ ಎಲ್ಲ ಒತ್ತಡಗಳ ನಡುವೆಯೂ ನಮ್ಮ ಹಾಗೆಯೇ ದೇಹ, ಭಾವ, ಅನುಭವ, ವಿಚಾರ, ತವಕ, ತಲ್ಲಣಗಳಿರುವ ಮನುಷ್ಯರೇ ಎಂಬ ಸತ್ಯ ಮನದಟ್ಟಾಗುತ್ತದೆ. ಮೆಲ್ವಿಲ್, ಫಾಕ್ನರ್, ಹೆಮಿಂಗ್ವೇ ಮುಂತಾದ ಹಿರಿಯರಿಂದ ಮೊದಲಾಗಿ ಮಾಯಾ ಏಂಜೆಲೋ, ಟೋನಿ ಮಾರಿಸನ್ ಮುಂತಾದ ಸಮಕಾಲೀನರವರೆಗೆ ಹಲವರು ಈ ಸತ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಪ್ರೊ. ಚಂದರ್ ಅವರಿಗೆ ಈ ವಿಷಯ ತಿಳಿದಿಲ್ಲವೆಂದಾಗಲೀ ಅಥವಾ ಈ ಕಾದಂಬರಿಯ ಚೌಕಟ್ಟಿನಲ್ಲಿ ಅದೆಲ್ಲವನ್ನೂ ಹೇಳಬೇಕಿತ್ತು ಎನ್ನುವುದಾಗಲೀ ನನ್ನ ಅಭಿಪ್ರಾಯವಲ್ಲ. ಕಾದಂಬರಿಯ ಹಿನ್ನೆಲೆಯಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅಷ್ಟೆ.

ಈಗಾಗಲೇ ಸಾಕಷ್ಟು ದೀರ್ಘವಾಗಿರುವ ಈ ಬರವಣಿಗೆಯನ್ನು ಇನ್ನಷ್ಟು ಬೆಳೆಸುವುದು ಸರಿಯಲ್ಲ. ತನ್ನ ಪುಸ್ತಕಕ್ಕೆ ನನ್ನ ಕೆಲವು ಅನಿಸಿಕೆಗಳನ್ನು ಜೋಡಿಸುವ ಅವಕಾಶ ಕೊಟ್ಟ ಪ್ರೊ. ಕೃಷ್ಣಮೂರ್ತಿ ಚಂದರ್ ಅವರಿಗೆ ಮತ್ತು ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಗೆಳೆಯರಾದ ಡಾ. ಗಣೇಶ ಅಮೀನಗಡ ನನ್ನ ಕೃತಜ್ಞತೆಗಳನ್ನು ಹೇಳುತ್ತಾ ಹಾಗೂ ಅವರಿಗೆ ಒಳಿತಾಗಲೆಂದು ಹಾರೈಸುತ್ತಾ ಈ ಬರವಣಿಗೆಯನ್ನು ಮುಗಿಸುತ್ತಿದ್ದೇನೆ.

(ಕೃತಿ: ಕಾಂಚನಸೀತ (ಕಾದಂಬರಿ), ಲೇಖಕರು: ಪ್ರೊ. ಕೃಷ್ಣಮೂರ್ತಿ ಚಂದರ್, ಪ್ರಕಾಶಕರು: ಕವಿತಾ ಪ್ರಕಾಶನ, ಬೆಲೆ: 100/-)