ಬೀಜವನ್ನು ರಕ್ಷಿಸುವ ಇಂತಹ ಅಮೂಲ್ಯವಾದ ಸಂಪತ್ತನ್ನು ಮುಂದಿನ ಕಾಲ ಘಟ್ಟದವರೆಗೆ ಕೊಂಡೊಯ್ಯುವ ಸಮರ್ಥ ವ್ಯಕ್ತಿಯನ್ನುತಾತ, ನಮ್ಮ ತಂದೆಯಲ್ಲಿ ಕಾಣಲಿಲ್ಲ ಸರ್. ತಂದೆಯವರು ಸ್ವಲ್ಪ ಅಶಿಸ್ತು ಮತ್ತು ಕುಡಿತವನ್ನು ಅವಲಂಬಿಸಿರುವ ವ್ಯಕ್ತಿ. ನಾನು ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕ್ ತೆಗೆದುಕೊಂಡರೂ, ಎಂಬಿಬಿಎಸ್ ಸೀಟು ದೊರಕಿದರೂ, ನನ್ನ ತಾತ ನನಗೆ ಕೃಷಿ ಓದಿಸಿದರು ಸಾರ್. ಮುಂದೆ ನಾನು ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನಿಯಾಗಿ ಸ್ವಲ್ಪ ದಿನಗಳ ಕಾಲ ಆ ಬೀಜದ ಬ್ಯಾಂಕಿನ ಜವಾಬ್ದಾರಿಯನ್ನು ನೋಡಿಕೊಂಡೆ. ಅಷ್ಟರಲ್ಲಿ ತಾತ ತೀರಿಕೊಂಡರು.
ಮಹಾಂತೇಶ ನವಲಕಲ್ ಬರೆದ ಕತೆ ‘ಭವ ಬೀಜದ ಹಿಂದೆ’ ನಿಮ್ಮ ಈ ಭಾನುವಾರದ ಓದಿಗೆ

 

ಇದು ಅವನಿಗೆ ದಿನಾಲು ಬೀಳುವ ಕನಸಾಗಿದೆ.

ದೊಡ್ಡದಾದ ಹುಲ್ಲುಗಾವಲು, ಇವನು ಕಾಲಿಟ್ಟ ತಕ್ಷಣ ಮರುಭೂಮಿಯಾಗಿ ಹಳ್ಳ-ಕೊಳ್ಳ, ಅನತಿ ದೂರದಲ್ಲಿರುವ ಹರಿದ್ವರ್ಣಗಳು ಬತ್ತಿ ಹೋಗುತ್ತಿವೆ.

ಈ ಕನಸು ಇತ್ತೀಚೆಗಂತೂ ಪದೇ ಪದೇ ಬೀಳುತ್ತಲಿದೆ. ಒಂದೊಂದು ಸಲ ಪ್ರತಿ ರಾತ್ರಿಯೂ ಮೂರು-ಮೂರು ಸಲ ಬೀಳುವ ಕನಸು, ಇವನನ್ನು ಹಿಂಡಿ ಹಿಪ್ಪೆ ಮಾಡಿದೆ. ಕನಸು ಬಿದ್ದಾಗೊಮ್ಮೆ ಎಚ್ಚರಗೊಂಡು, ನೀರು ಕುಡಿದು ಮಲಗಿದರೆ, ಮತ್ತೆ ಅದೇ ಕನಸು. ಅವನಿಗೆ ಶಯನ ಗೃಹವೇ ಪಾದರಸದ ತಟ್ಟೆಯಂತೆ ಭಾಸವಾಗುತ್ತಿದೆ. ಇದರಿಂದ ಹೆಂಡತಿ ಶಮಾಳಿಗೂ ಹಾಗೂ ಮಗಳು ನಿಹಾರಿಕಾಳಿಗೂ ಬಹುತೊಂದರೆಯಾಗಿದೆ ಎಂದು ಅನ್ನಿಸಿದರೂ, ಬೀಳುವ ಕನಸುಗಳನ್ನು ತಡೆಯುವರಾರು ಅಥವಾ ತಡೆಯುವ ಶಕ್ತಿ ಯಾರಿಗಿದೆ?
ಇಂದು ಕನಸುಗಳ ಭಯಕ್ಕೆ ಯಾಕೋ ಇವನು ಮಲಗಲಿಲ್ಲ. ಆದರೆ ಈ ಪ್ಲೋರಿಡಾದ ಚಳಿ ಇಂದು ಧೃತರಾಷ್ಟ್ರ ಆಲಿಂಗನದಂತೆ, ಇವನನ್ನು ಬಿಗಿದು, ಬಗಿದು ಕೊಲ್ಲುತ್ತಿದೆ ಎನ್ನಿಸುತ್ತಿತ್ತು. ಭಯಂಕರ ಹಿಮಮಿಶ್ರಿತ ಗಾಳಿ ಮತ್ತು ಚಳಿ ಇದು. ಈ ಚಳಿ ಮನಸ್ಸು ಮತ್ತು ದೇಹದ ಎಲ್ಲಾ ಅಂಗಗಳ ಮೇಲೆ ದಾಳಿ ಮಾಡುತ್ತಿದೆ ಅನ್ನಿಸಿತು. ಹಿತ್ತಲ ಬಾಗಿಲು ತೆಗೆದು, ಅದಕ್ಕೆ ಅಂಟಿಕೊಂಡಿರುವ ವಾರ್ಮ್ ರೂಮಿನ ಬೆಂಕಿಗೆ ಮೈ ಒಡ್ಡಿದ. ತುಸುಕಾಲ ಶಮಾ ಮತ್ತು ನಿಹಾರಿಕಾ ಇದೇ ಬೆಂಕಿಯ ಮುಂದೆ ಕುಳಿತು ಹೋಗಿದ್ದರು.
ಇವನು ಮತ್ತೆ ಯೋಚಿಸಿದ.

ರಾತ್ರಿ ಬೀಳುವ ಕನಸುಗಳ ಭಾರಕ್ಕೆ, ಕುಗ್ಗುವ ಮನಕ್ಕೆ, ಹಿಂಡೆ ಹಿಪ್ಪೆ ಮಾಡುವ ಚಳಿ ಸಾಥ್ ಕೊಡುತ್ತಿತ್ತು .ಕೆಲವೊಂದು ಸಲ. ತನ್ನ ನಿರ್ಧಾರಗಳನ್ನು, ತನ್ನ ಕೆಲಸವನ್ನು ಹಂಗಿಸುವಂತೆ ಬರುವ ಕನಸಿಗಿಂತಲೂ ಹಿಮ ಮತ್ತು ಬೆಂಕಿಯ ಸುತ್ತ ಹೋಗುವದೇ ವಾಸಿ ಅನ್ನಿಸುತ್ತಿತ್ತು. ಕನಸು ಕನ್ನಡಿಯಾಗಿ, ಪದೇ ಪದೇ ತಾನು ಮಾಡಬಹುದಾದ ಗಾಯಗಳ ಬಗ್ಗೆ ಎಚ್ಚರಿಸುತ್ತಿದೆ ಅನ್ನಿಸುತ್ತಿತ್ತು.
ಹೆಂಡತಿ ಶಮಾ ಇವನು ಇನ್ನೂ ಮಲಗದ್ದನ್ನು ಗಮನಿಸಿ, ಎದ್ದು ಬಂದು ಹಾಲ್, ಔಟ್ ಹೌಸ್, ರೀಡಿಂಗ್ ರೂಮಲ್ಲಿ ಹುಡುಕಿ ಕೊನೆಗೆ ವಾರ್ಮ್ ರೂಮಿಗೆ ಬಂದು,

`ಹಲೋ ಯಾಕೆ ಇನ್ನೂ ಮಲಗಿಲ್ಲ. ಈಗ ಸಮಯ ಸುಮಾರು 12 ಆಗ್ತಾ ಇದೆ. ಮತ್ತೆ 6 ಗಂಟೆಗೆ ರಿಸರ್ಚ್ ಸ್ಟೇಶನ್ ಹೋಗಬೇಕು. ಬನ್ನಿ ಮಲಗಿ, ಇಲ್ಲದಿದ್ದರೆ ಆರೋಗ್ಯಕ್ಕೆ ಬಹಳ ತೊಂದರೆ ಆಗುತ್ತೆ, ಆಲ್ ರೆಡಿ, ನಿಮ್ಮ ಆರೋಗ್ಯ ಕೆಟ್ಟು ಮೈಲ್ಡ್ ಆಗಿ ಶುಗರ್ ಹಾಗೂ ಬಿ.ಪಿ. ಬಂದಿದೆ. ಹೀಗೆ ನೀವು ಕುಳಿತುಕೊಳ್ಳುವುದು, ಯೋಚಿಸುವುದು, ನನಗಂತೂ ಸುತಾರಾಂ ಇಷ್ಟವಿಲ್ಲ. ಬನ್ನಿ ಮಲಗಿ’ ಎಂದಳು.
`ಪ್ಲೀಸ್, ನೀನು ಹೋಗು. ನಾನು ಅರ್ಧ ತಾಸು ಆದ ಮೇಲೆ ಬರುವೆ’ ಎಂದಾಗ ಹೆಂಡತಿ ಶಮಾ ಸಿಟ್ಟಿನಿಂದಲೇ ಹೇಳಿದಳು.

`ಇದೊಂದು ಕೆಟ್ಟ ಅಭ್ಯಾಸ ನೋಡಿ. ನಿಮ್ಮ ಆರೋಗ್ಯದ ಬಗ್ಗೆಯೇ ನನಗೆ ಚಿಂತೆ’ ಎಂದು. `ಓಕೆ ಏನು ಯೋಚನೆ? ಆಫೀಸಿನಲ್ಲಿ ಏನಾದರೂ ಆಯಿತೆ ಅಥವಾ ಯಾರಾದರೂ ನಿಮ್ಮನ್ನು ಥ್ರೆಟ್ ಮಾಡುತ್ತಾರೆಯೇ’ ಎಂದು ಕೇಳಿದಳು.

`ನೋ ನೋ ಹಾಗೇನು ಇಲ್ಲ, ಕನಸು ನನಗೆ ಸಾಕು ಮಾಡಿದೆ. ಅದು ನನ್ನ ಪಾಪದ ಕನ್ನಡಿಯೂ ಆಗಿರಬಹುದು’ ಎಂದು ಮತ್ತೆ ಬೆಂಕಿಗೆ ಕೈಯೊಡ್ಡಿದ.

ವಾರ್ಮ್ ರೂಮಿನ ಟ್ರಾನ್ಸ್‍ಪ್ಲಾಂಟ್ ಗಾಜಿನ ಕಿಟಕಿಗಳಿಂದ ಆಕಾಶ ದಿಟ್ಟಸಿದ. ಕೋಟ್ಯಾನುಕೋಟಿ ನಕ್ಷತ್ರಗಳೆಲ್ಲ ಹೊಳೆಯುತ್ತಿದ್ದವು. ಅವುಗಳು ಇವನನ್ನು ನೋಡಿ ನಕ್ಕಂತೆ ಭಾಸವಾದವೋ, ಬಯ್ದಂತೆ ಕಂಡವೋ.. ಶಿವನೇ ಬಲ್ಲ.

ತಟ್ಟನೆ ಕಂಗಳನ್ನು ಶಮಾಳ ಕಡೆ ತಿರುಗಿಸಿದ. ಶಮಾ ಹಾವೇರಿ ಕಡೆಯ ಹುಡುಗಿ, ಹಳ್ಳಿಯ ಮನೆಯಿಂದ ಬಂದರೂ ಅದನ್ನೇ ಈಗ ಉಳಿಸಿಕೊಂಡವಳು. ಅವಳು ಸಹ ಸಾಫ್ಟ್‌ವೇರ್ ಎಂಜಿನಿಯರಿಂಗನ್ನು ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜಿನಲ್ಲಿ ಮುಗಿಸಿದವಳು. ಆಕೆಗೆ ತನ್ನ ಅಭಿರುಚಿ ಚೆನ್ನಾಗಿ ಗೊತ್ತು. ಅವಳು ಥಟ್ಟನೆ ಹೇಳಿದಳು. `ನೀವು ನಿಮ್ಮ ಕಷ್ಟ ಕಾಲದಲ್ಲಿ ಮನಸ್ಸು ಮಲೀನಗೊಂಡರೆ, ವಚನಗಳನ್ನು ಓದುತ್ತೀರಲ್ಲ. ಅಲ್ಲಮ, ಲಕ್ಕಮ್ಮ ಚೌಡಯ್ಯ ಇವರ ವಚನಗಳ ಓದಿ ಮಲಗಿಕೊಳ್ಳಬಾರದೆ’ ಎಂದು ಹೇಳಿ ರೀಡಿಂಗ್ ರೂಮಿಗೆ ಹೋಗಿ ಕೈಯಲ್ಲಿ ಅಲ್ಲಮನ ವಚನದ ಪುಸ್ತಕ ಹಿಡಿದು ತಂದಳು.

`ಅಯ್ಯೋ ಶಿವನೆ, ಶರಣರು ಪಾಪಿಗಳ ಪರವಾಗಿ ನಿಲ್ಲುವರೆ?’

ಅಲ್ಲಮನ ವಚನವೊಂದು ಹೀಗೆ ಹೇಳುತ್ತೆ…
`ಏಕದಳ ದ್ವಿದಳಗಳನ್ನು ಹಾಗೆಯೇ
ತರಿ ತರಿದು ತಿನ್ನುವ ಹಾಗಿಲ್ಲ
ಅದಲು ಮೊದಲು ಪ್ರಸಾದವಾಗಬೇಕು
ಶಿವನಿಗೆ ಅರ್ಪಣೆಯಾಗಬೇಕು’
ಒಂದು ವೇಳೆ ಈ ನಿಯಮ ತಪ್ಪಿದರೆ ರೌರವ ನರಕ. ಅವನು ಹಾಗೆಯೇ ಕುಸಿದು ಕುಳಿತ.

`ಪಾಪ ಮಾಡುವವನಿಗೆ ಫಿಲಾಸಫಿ ಗೊತ್ತಿರಬಾರದು. ನನಗೆ ನಮ್ಮ ಪೂರ್ವಜರು, ವಚನಕಾರರು ಬೆಂಬಿಡದೆ ಕಾಡುತ್ತಿದ್ದಾರೆ. ನನಗೆ ಇಲ್ಲಿ ಈ ಕೆಲಸ ಮಾಡಲು ಆಗುವದಿಲ್ಲ. ನಾನು ಕೊಲೆಗಡುಕನಾಗಿದ್ದೇನೆ’ ಎಂದು ಕಣ್ಣುಮುಚ್ಚಿದ.

`ಏನು ಕೊಲೆ ಮಾಡಿದ್ದೀರಿ, ಯಾರನ್ನು ಕೊಲೆ ಮಾಡಿದ್ದೀರಿ, ನಮಗೂ ತಿಳಿಸಿ’ ಎಂದು ನಕ್ಕಳು. `ಮೊದಲು ಒಂದು ಕಲ್ಲಂಗಡಿ ಸರಿಯಾಗಿ ಕತ್ತರಿಸಲು ಕಲಿಯಿರಿ, ಆಮೇಲೆ ಕೊಲ್ಲುವದು ಎಂದು ಮನೆಯ ಒಳಗೆ ಹೋಗಿ ಬ್ರೆಡ್ ಕತ್ತರಿಸಿ, ಅದಕ್ಕೆ ಜಾಮ್ ಸೇರಿಸಿ, ಇವನ ಮುಂದೆ ಇಟ್ಟಳು. ಬ್ರೆಡ್ ಜಾಮ್ ಮೆಲ್ಲುತ್ತಾ, `ನೀನು ಮಲಗಲು ಹೋಗು. ಸಾಕು, ನಾನು ಹೀಗೆಯೇ ಕಾಲಕಳೆಯುತ್ತೇನೆ’ ಎಂದು ಅವಳಿಗೆ ವಿನಂತಿಸಿದ.

`ಇರಲಿ ನಮ್ಮ ಪೂರ್ವಜರ ಕಾಟ ಆರಂಭವಾಗಿದೆ. ಈ ಸಲ ಇಂಡಿಯಾಕ್ಕೆ ಹೋದ ನಂತರ ದೇವರಭೂಪರಕ್ಕೆ ಹೋಗಿ ಆದಯ್ಯಗೂ, ಲಕ್ಕಮ್ಮಳಿಗೂ ಅಮರೇಶ್ವರ ಲಿಂಗಕ್ಕೂ ಕಾಯಿ ಕೊಟ್ಟು ಬರೋಣ’ ಎಂದು ಹೇಳಿ ಮಲಗಲು ಬೆಡ್ ರೂಮಿಗೆ ಹೋದಳು.

ನಿದ್ರೆಯ ಮಂಪರು ಬಂದು ಹೋಯಿತು. ನಿದ್ರೆಗೆ ಹೋದರೆ ಕನಸಿನ ಚಿಂತೆ. ಇದೇನು ನೋಡಲು ಭಯಾನಕ ಕನಸು ಅಲ್ಲದಿದ್ದರೂ, ಅದು ಕೊಡುವ ಔಟ್‍ಪುಟ್ ಭಯಾನಕವಾಗಿತ್ತು ತನ್ನ ಮನಸ್ಸಿನ ಬೀಜಕ್ಕೆ ನೇರವಾಗಿ ಹೊಡೆಯುವ ಈ ಕನಸು, ಇವನನ್ನು ಹೈರಾಣ ಮಾಡುತ್ತಿತ್ತು. ಮಲಗಲು ಹೋದ ಅರ್ಧಾಂಗಿ ಶಮಾ ತಕ್ಷಣ ಮತ್ತೆ ಬಂದಳು, `ಒಂದು ವಿಷಯ ಇದೆ. ಆದಿತ್ಯವಾರ ಮನೋವೈದ್ಯರಾದ ಡಾ|| ಕುಲಕರ್ಣಿ ವಿಜಯ್ ಅವರ ಹತ್ತಿರ ಅಪಾರ್ಟಮೆಂಟ್ ತೆಗೆದುಕೊಂಡಿದ್ದೇವೆ, ಹೋಗೋಣ’ ಎಂದು ಹೇಳಿ ಮತ್ತೆ ಬೆಡ್‌ರೂಂಗೆ ಹಿಂದಿರುಗಿದಳು. ಈಗ ಒಂದು ಗಂಟೆಯಾಗಿರಬಹುದು. ಚಳಿಯು ಘನವಾಗುತ್ತ ಘನವಾಗುತ್ತ ಹೋಗುತ್ತಿತ್ತು. ಸುತ್ತಲೂ ಸಣ್ಣದಾಗಿ ಹಿಮ ಬೀಳುತ್ತಿತ್ತು. ಶಮಾ ಹಿಂದಿರುಗಿದ ನಂತರ ಈತ ಮನೆಯ ಮಧ್ಯದ ಹಾಲಿಗೆ ಹಿಂದಿರಿಗಿ ಎ.ಸಿ. ಯನ್ನು ಟೆಂಪರೇಚರ್ ಮೋಡ್‌ಗೆ ತೆಗೆದುಕೊಂಡು ಹೋಗಿ ಮನೆಯ ವಾತಾವರಣವನ್ನು ವಾತಾನುಕುಲಕ್ಕೆ ಬದಲಾಯಿಸಿಕೊಂಡ.

ನಿನ್ನೆ ಡಾ|| ಮಾರ್ಕ್ ಹೇಳಿದ ಮಾತು, ಆರಂಭದಲ್ಲಿ ಏನು ಅನ್ನಿಸಲಿಲ್ಲ. ಆದರೆ ಬರುಬರುತ್ತಾ ತುಂಬಾ ಕಾಡಹತ್ತಿತ್ತು. ನಾವು ಬೀಜ ಉತ್ಪಾದನೆಯಲ್ಲಿ ಮನೋಪಲಿಯತ್ತ ಕಾಲಿಡುತ್ತಿದ್ದೇವೆ ಎನ್ನುವ ಮಾರ್ಕ್ ಮಾತು. ಅದರಲ್ಲಿ ಮನೋಪಲಿಯ ಮಾತು ಇವನನ್ನು ಸಂಕಷ್ಟಕ್ಕೆ ದೂಡಿತು. ಇದನ್ನು ಕೇಳಿದ ವಿವೇಕ ಎನ್ನುವ ಕೇರಳದ ಹುಡುಗ ವ್ಯಂಗ್ಯವಾಗಿ ನಕ್ಕಿದ್ದ. ಇವನೆ ತಡೆಯದೆ ಮನೋಪಲಿಯನು ಹೇಗೆ ಡಿಫೈನ್ ಮಾಡುತ್ತೀರಿ ಎಂದು ಮಾರ್ಕ್‍ನನ್ನು ಕೇಳಿದರೆ, ಯಾವ ವಸ್ತುವು ಮೊದಲು ನೋಡಿದಾಕ್ಷಣ, ಮುಟ್ಟಿದಾಕ್ಷಣ ಅಥವಾ ಅನ್ವೇಷಿಸಿದ ನಂತರ ಅದು ಅವನದಾಗುತ್ತದೆ. ಇದಕ್ಕೆ ಮನೋಪಲಿ ಅನ್ನಲು ಅಡ್ಡಿಯಿಲ್ಲ ಎಂದು ವಿವರಿಸಿದ್ದ. ತೋಟದಲ್ಲಿ ಚಿಕ್ಕವರಿದ್ದಾಗ ಊರ ಮುಂದಿನ ಮಾವಿನಕಾಯಿ ಕಳ್ಳತನ ಮಾಡಿಕೊಂಡು ಬರಲು ಹೋದಾಗ, ಮಾವಿನಕಾಯಿಯ ಗೊಂಚಲುಗಳನ್ನು ಹಿಡಿದು ರಿಜಿಸ್ಟರ್ ಮಾಡುತ್ತಿರುವದು, ಇವನಿಗೆ ನೆನಪಿಗೆ ಬಂತು. ಅದನ್ನು ಹಿಡಿದು ಇದು ನನ್ನದು ಎನ್ನುವ ಹಕ್ಕನ್ನು ಗೊಂಚಲದ ಮೇಲೆ ಸಾಧಿಸುತ್ತಿರುವಾಗ, ಅದನ್ನು ಯಾರು ಮುಟ್ಟುತ್ತಿರಲಿಲ್ಲ. ಅದಕ್ಕೆ ಮನೋಪಲಿ ಎನ್ನಬಹುದು. ಈ ಕತೆಗೂ ಆತನ ವ್ಯಾಖ್ಯಾನಕ್ಕೂ ತಾಳೆಯಾಗಬಹುದು ಎಂದುಕೊಂಡ.

ಈ ಚಳಿಯಲ್ಲಿ ಸಿಗರೇಟು ಸೇದಬೇಕೆನಿಸಿತು. ಸಿಗರೇಟಿಗಾಗಿ ಬೆಡ್‌ರೂಂ ತಡಕಾಡಿದಾಗ ಶಮಾ ಮತ್ತೆ ಎಚ್ಚರವಾದಳು. ಈ ಸಲ ಅವಳಿಗೆ ಅರಮಂಡಲದ ಕೋಪ ಬಂದಿತ್ತು. ಈಗಾಗಲೆ 2 ಗಂಟೆ ಇನ್ನೂ ಮಲಗಿಲ್ಲವೆ ಎಂದು ದೊಡ್ಡದಾದ ದಪ್ಪವಾದ ಕಂಬಳಿಯಂತಹ ರಜಾಯಿಯನ್ನು ಹೊದ್ದು ಮಲಗಿದಳು. ಇವನು ಹೇಗೋ ಸಿಗರೇಟು ಹುಡಕಿಕೊಂಡು ಸಿಕ್ಕ ತಕ್ಷಣವೇ ಮನೆಯ ಹೊರಾಂಡದ ಪಕ್ಕದಲ್ಲಿರುವ ಸ್ಮೋಕಿಂಗ್ ಜೋನ್‌ಗೆ ಬಂದು ಸಿಗರೇಟು ಎಳೆಯುತ್ತ ಎಲ್ಲವನ್ನು ನೆನಪಿಸಿಕೊಂಡ. ತನ್ನ ದೇಶ, ತನ್ನ ಜನಗಳ ಭವಿಷ್ಯವನ್ನು ಮಣ್ಣುಪಾಲು ಮಾಡಲು ತಾನೇ ಸಲುಕೆ ಹಿಡಿದುಕೊಂಡೆದ್ದೇನೆ ಎನ್ನಿಸಿತು ಅವನಿಗೆ

*2*

ಪ್ಲೋರಿಡಾದ ಅಮೇರಿಕನ್ ಅಗ್ರಿ ರಿಸರ್ಚ್‌ ಸೆಂಟರ್ ರಾಯಚೂರಿನ ಅಮರೇಶ ಸೇರಿ ಐದು ವರ್ಷವಾಗಿತ್ತು. ಒಟ್ಟು ಏಳು ವರುಷದ ಒಪ್ಪಂದದಂತೆ ಅವನು ಇಲ್ಲಿ ಸೀನಿಯರ್ ಕೃಷಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತಲಿದ್ದ. ಐದು ವರ್ಷ ಮುಗಿದ ನಂತರ ಈ ಎರಡು ವರ್ಷದ ಈ ಘನಘೋರ ಪ್ರಾಜೆಕ್ಟಿಗೆ ಈತನನ್ನು ಹೆಡ್ ಮಾಡಿದ್ದರಿಂದ ಆತನಿಗೆ ಸಮಸ್ಯೆಯಾಗಿತ್ತು. ಐದು ವರ್ಷದವರೆಗೆ ರಿಸರ್ಚ್‌ನಲ್ಲಿ ಈತನ ಇನ್ವಾಲ್‍ಮೆಂಟ್ ಚೆನ್ನಾಗಿದ್ದರಿಂದ ಮತ್ತು ಈ ಪ್ರಾಜೆಕ್ಟ ಹ್ಯಾಂಡಲ್ ಮಾಡುವ ಕೆಪ್ಯಾಸಿಟಿ ಈತನಿಗೆ ಇರುವದರಿಂದ ಇವನಿಗೆ ಹೆಗಲಿಗೆ ಪ್ರಾಜೆಕ್ಟ್‌ ಕೊಡಮಾಡಲಾಗಿತ್ತು. ಈ ಪ್ರಾಜೆಕ್ಟ್‌ ಪರಿಚಯಾತ್ಮಕ ಸಭೆಯಲ್ಲಿ ಮಾರ್ಕ್‌ ಹೇಳಿದ ಮಾತು, ಇವನ ತಲೆಯಲ್ಲಿ ಇನ್ನೂ ಗುನುಗುಟ್ಟುತ್ತದೆ.

ಜಗತ್ತಿಗೆ ಬಹಳ ಅವಶ್ಯವಾಗಿ ಬೇಕಾಗಿರುವದು ಆಹಾರ. ಆಹಾರವಿಲ್ಲದಿದ್ದರೆ ಮನುಷ್ಯ ಬದುಕಲಾರ. ನಮ್ಮ ದೇಶದಲ್ಲಿ ಎಲ್ಲಾ ಇದೆ. ಕಾಳಗ ಮಾಡಲು ಸೈನ್ಯವಿದೆ, ಖರ್ಚು ಮಾಡಲು ಸಾಕಷ್ಟು ಹಣವಿದೆ. ಮೋಜು ಮಸ್ತಿಗಾಗಿ ರೆಸಾರ್ಟ್ ಪಬ್‍ಗಳಿವೆ. ಆದರೆ ಆಹಾರದ ಏಕಸ್ವಾಮಿತ್ವವನ್ನು ನಾವು ಸಾಧಿಸಿದರೆ ಮುಗಿಯಿತು. ಈ ಜಗತ್ತು ನಮ್ಮ ಅಡಿಯಲ್ಲಿಯೇ ಈ ಪ್ರಾಜೆಕ್ಟ ಮುಖ್ಯ ಉದ್ದೇಶ. ಬೀಜದಲ್ಲಿರುವ ಅಂಡಾಶಯವನ್ನು ಎರಡನೇ ಬೆಳೆಗೆ ಬಾರದಂತೆ ನಾಶ ಮಾಡುವದು.

ಅಂದರೆ ಈ ಬೀಜ ಎರಡನೆ ಬೆಳೆಗೆ ಬಿತ್ತಲು ಬಾರದೆ, ಬಿತ್ತಿದರೂ ಬೆಳೆ ಬಾರದ ಹಾಗೆ ತಂತ್ರಜ್ಞಾನ ಅಳವಡಿಸಿ ಮಾರುಕಟ್ಟೆಗೆ ಬಿಡುಗಡೆ ಮಡುವದು.

ಆದ್ದರಿಂದ ರೈತನಿಗೆ ನಾವು ತಯ್ಯಾರಿಸಿದ ಬೀಜ ಒಂದೆ ಸಲ ಉಪಯೋಗಕ್ಕೆ ಬರುವದು ಮತ್ತೆ ಮರು ಬಿತ್ತಿ ಬೆಳೆಯಲು ಅವಕಾಶವಿಲ್ಲ. ಆದ್ದರಿಂದ ಹೊಸದಾಗಿ ಆತ ಉತ್ತಿ ಬಿತ್ತಿ ಬೆಳೆಯಬೇಕಾದರೆ ಮತ್ತೆ ನಾವು ತಯ್ಯಾರಿಸಿದ ಹೊಸ ಬೀಜವನ್ನೆ ಆಶ್ರಯಿಸಬೇಕು. ಅದು ಅಲ್ಲದೆ ಈ ಬೀಜ ತಾನು ಹಿಂದೆ ಬೆಳೆಯುತ್ತಿದ್ದ ಬೀಜಕ್ಕಿಂತಲೂ ಐದು ಪಟ್ಟು ಇಳುವರಿ ಕೊಡುವುದರಿಂದ ರೈತರು ತಮ್ಮ ಸಾಂಪ್ರದಾಯಿಕ ಬೀಜಗಳನ್ನು ಬಿಟ್ಟು ಇವುಗಳ ಮೇಲೆ ಅವಲಂಬಿಸುತ್ತಾರೆ. ಸಾಂಪ್ರದಾಯಿಕ ಬೀಜಗಳು ಉಪಯೋಗವಿಲ್ಲದೆ ಕ್ರಮೇಣ ನಾಶವಾಗುತ್ತವೆ. ಮುಂದೆ ಅಮೇರಿಕಾ ದೇಶ ಬೀಜಗಳ ಮೇಲೆ ಮನೋಪಲಿ ತನ್ನಿಂದ ತಾನೇ ಹೊಂದುತ್ತದೆ. ನಮ್ಮ ಬೀಜಗಳಿಗೆ ಆತ್ಮಾಹುತಿ ಬೀಜಗಳೆಂದು ಹೆಸರಿಟ್ಟಿದ್ದೇವೆ. Do you agree ಎಂದು ಮಾರ್ಕ್ ಎಲ್ಲರಿಂದಲೂ ಒಪ್ಪಿಗೆ ತೆಗೆದುಕೊಂಡರು. ಮಾರ್ಕ್‌ನ ಮಾತುಗಳನ್ನು ಭಾಗಶಃ ಎಲ್ಲರು ಒಪ್ಪಿದರು. ಅಮರೇಶ ಮತ್ತು ವಿವೇಕ ದಂಗಾಗುವಂತೆ ನಿಂತಿದ್ದರು. ಇನ್ನೊಂದು ವಿಷಯ, ಈ ಪ್ರಾಜೆಕ್ಟ್‌ ಅಮರೇಶ ಲೀಡ್ ಮಾಡ್ತಾರೆ ಎಂದು ಹೇಳಿದ್ದರು ಮಾರ್ಕ್.

ಒಂದು ನನ್ನ ಅನಲೈಸಿಸ್ ಪ್ರಕಾರ ಮುಂದಿನ ದಿನಮಾನಗಳಲ್ಲಿ ಸುಮಾರು ಎರಡೂವರೆ ಲಕ್ಷ ದೇಸಿ ತಳಿಗಳು ನಮ್ಮ ಈ ಪ್ರಭೇದಗಳಿಂದ ನಾಶವಾಗುತ್ತವೆ. ಏಶಿಯಾ ಮತ್ತು ಆಫ್ರಿಕಾ ಖಂಡಗಳಲಿ ಅನೇಕ ವೈವಿಧ್ಯಮಯ ಪ್ರಭೇದಗಳು ಬೆಳೆಯುತ್ತವೆ. ಅವೆಲ್ಲವೂ ನಾಶವಾಗಿ ನಾವು ತಯ್ಯಾರಿಸುವ ಬೀಜಗಳಿಗಾಗಿ ಅರಬ್ ದೇಶಗಳು ತಯ್ಯಾರಿಸುವ ಪೆಟ್ರೋಲ್‌ಗಾಗಿ ಅನೇಕ ದೇಶಗಳು ಕೈಕಟ್ಟಿ ಕಾಯುವಂತೆ ಕಾಯುತ್ತ ನಿಂತುಕೊಳ್ಳಬೇಕಾಗುತ್ತದೆ. ನೀವು ಹಿಂದೆ ಮನೋಪಲಿ ಎಂದರೆ ಏನು ಎಂದು ಪ್ರಶ್ನೆ ಕೇಳಿದ್ದೀರಿ, ಅದಕ್ಕೆ ಉತ್ತರ ಇದು ಆಗಿರಬಹುದು.

ಮುಂದೆ ನೋಡಿ, ಮುಂಗಾರು ಆರಂಭವಾದೊಡನೆಯೇ ಎಲ್ಲಾ ರಾಷ್ಟ್ರಗಳು ಅದರಲ್ಲಿ ಮೂರನೆ ಬಡ ದೇಶಗಳು ನಮ್ಮ ಮುಂದೆ ಕೈಚಾಚಿ ನಿಲ್ಲುತ್ತವೆ ಎಂದು ಹೇಳಿದರು ಮಾರ್ಕ್.

*3*

ಇಂದು ಅಮರೇಶ ಬರುವಿಕೆಗಾಗಿ ಕಾಯುತ್ತ ಕುಳಿತಂತೆ ಕುಳಿತಿದ್ದ ಮಾರ್ಕ್. ಅಮರೇಶ ಬರುವದನು ನೋಡಿ ಕೆಂಡಮಂಡಲನಾಗಿ ಫ್ಲಾಸ್ಕಿನಲ್ಲಿದ್ದ ಚಹಾವನ್ನು ಬಗ್ಗಿ ಒಂದು ದೊಡ್ಡದಾದ ಗ್ಲಾಸಿನಲ್ಲಿ ಹಾಕಿಕೊಂಡ. ಬೆಲ್ ಹೊಡೆದು ಅಮರೇಶನನ್ನು ಕರೆದ. ಇಂದು ಗಟ್ಟಿಯಾದ ಮೋಡವಾಗಿದ್ದರಿಂದ ಚಳಿ ಇನ್ನೂ ಹೆಪ್ಪುಗಟ್ಟಿತ್ತು.

ಮಾರ್ಕ್ ಇಂದು ಸ್ಟೋಟಿಸಲೇಬೇಕೆಂದುಕೊಂಡಿದ್ದ. `ನಿನ್ನನ್ನು ನೀನು ಏನು ತಿಳಿದುಕೊಂಡಿದ್ದೀಯಾ’ ಎಂದು ಜೋರಾಗಿ ಕೂಗಿದ.
ಒಂದು ಕ್ಷಣ ರಿಸರ್ಚ ಸ್ಟೇಶನ್ ಅಲ್ಲಾಡಿದಂತೆ ಆಯಿತು. ಸ್ಟೇಶನ್ನಿನಲ್ಲಿ ಗೂಡು ಕಟ್ಟಿದ್ದ ಪಕ್ಷಿಗಳೆಲ್ಲ ಪಕ, ಪಕ, ಪಕ ಎಂದು ಜಾಗ ಖಾಲಿ ಮಾಡಿ ದೂರ ಎತ್ತಲೋ ಹಾರಿಹೋದವು.

`ಅಲ್ರಿ ಅಮರೇಶ, ನಿಮಗೆ ಬುದ್ದಿ ಇದೆಯೇನ್ರಿ. ನೀವು ಇದರಲ್ಲಿ ಪರಿಣಿತರು ಎಂದು ನಿಮ್ಮನ್ನು ಟೀಮ್ ಲೀಡರ್ ಅಂತ ಆಯ್ಕೆ ಮಾಡಿದ್ದೇವೆ. ನೀವು ಮಾತ್ರ ಸೀರಿಯಸ್ ಇಲ್ಲ. ಇನ್ನೂ ಕೆಲವು ದಿನದಲ್ಲಿ ನಮ್ಮ ಪ್ರಾಜೆಕ್ಟ್‌ ಮುಗಿಯಲೇಬೇಕು.

ಆದರೆ ನೀವು ಇದನ್ನು ಕ್ಯಾರಿ ಮಾಡ್ತಾ ಇಲ್ಲ ಇದ್ದರಿಂದ ನೀವು ದೊಡ್ಡ ಶಿಕ್ಷೆಗೂ ಗುರಿ ಆಗಬೇಕಾಗ್ತದ ನೋಡಿ ಎಂದ.

ಇಲ್ಲ ಸರ್ ನಾ ಮುಗಿಸಿ ಕೊಡುವೆ ನನಗೆ ಯಾಕೋ ಆರಾಮ ಇರ್ತಾ ಇಲ್ಲ. ಅದಕ್ಕೆ ಡಿಲೇ ಆಗ್ತಾ ಇದೆ.

ಜರ್ಮನ್ ಮತ್ತು ಫ್ರಾನ್ಸ್ ದೇಶಗಳು ಈಗಾಗಲೇ ಈ ತಂತ್ರಜ್ಞಾನದ ಬೀಜ ತಯಾರಿಕೆಯಲ್ಲಿ ತೊಡಗಿವೆ. ಒಂದು ವೇಳೆ ಅವರು ಇದರಲ್ಲಿ ಸಕ್ಸಸ್ ಆದರೆ, ನಮಗೆ ನಮ್ಮ ಗೌರ್ನಮೆಂಟಿನಿಂದ ಮಹಾಮಂಗಳಾರತಿ ಆಗಬಹುದು. ಇದರಲ್ಲಿ ನಾವು ಸೋತಿದ್ದೆ ಆದರೆ, ನಮ್ಮ ಸಾರ್ವಭೌಮತೆಗೆ ದೊಡ್ಡ ಪೆಟ್ಟು. ನಾವು ಸೆನೆಟ್‌ಗೆ ಹೇಗೆ ಮುಖ ತೋರಿಸುವುದು ಮತ್ತು ಮುಖ್ಯವಾಗಿ ಪ್ರೆಸಿಡೆಂಟ್ ಇದರ ಬಗ್ಗೆ ಬಹಳ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರಿಗೆ ಹೇಗೆ ಮುಖ ತೋರಿಸುವುದು? ನನಗೆ ದುಃಖವಾಗ್ತಾ ಇದೆ. `ಅಮರೇಶ ನೀವು ಮೊದಲಿದ್ದ ಹಾಗೆ ಇಲ್ಲ’ ಎಂದು ಒಂದು ಪತ್ರವನ್ನು ಅಮರೇಶನಿಗೆ ಹಸ್ತಾಂತರಿಸಿದರು. ಅದು ಅಮರೇಶನಿಗೆ ಕೊಟ್ಟ ನಾಲ್ಕನೇ ಮೆಮೋ ಎಂದು ಅಮರೇಶನಿಗೆ ತಿಳಿಯಿತು. ಒಂದು ವೇಳೆ ಹತ್ತು ಮೆಮೊಗಳು ಇಶ್ಯೂ ಆದರೆ ಮುಗಿಯಿತು. ತಾನು ಲೀಗಲ್ ಆಗಿ ಹೋರಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದುಕೊಂಡ. ಮೋಡ ಇನ್ನೂ ಘನವಾಗುತ್ತ ಮಳೆಯು ಸುರಿಯುವ ಲಕ್ಷಣಗಳು ದಟ್ಟವಾಗುತ್ತ ಹೋಗಹತ್ತಿತ್ತು.

`ಸರ್, ನಾಳೆಯಿಂದ ನಾ ಸೀರಿಯಸ್ ಆಗಿ ಕಾರ್ಯನಿರ್ವಹಿಸುವೆ. ನೀವು ಒತ್ತಡಕ್ಕೆ ಒಳಗಾಗಬೇಡಿ’ ಎಂದು `ಈ ದಿನ ಡಾಕ್ಟರ್ ಹತ್ತಿರ ಸ್ವಲ್ಪ ಅಪಾಯಿಂಟ್‍ಮೆಂಟ್ ಇದೆ. ನಾನು ಹೋಗಿ ನಾಳೆಯಿಂದ ಹಗಲುರಾತ್ರಿ ವರ್ಕ್ ಮಾಡುವೆ’ ನನ್ನನ್ನು ನಂಬಿ ಅಂದ ಅಮರೇಶ್
ಓ.ಕೆ. ಹೋಗಿ, ನೋ ಪ್ರಾಬ್ಲಂ. ಬಟ್ ನಾಳೆಯಿಂದ ಈ ಪ್ರಾಜೆಕ್ಟ್ ಬಗ್ಗೆ ಬಹಳ ಸೀರಿಯಸ್ ಇರಬೇಕು ಎಂದು ಎಚ್ಚರಿಕೆ ಕೊಟ್ಟು, ಅಮರೇಶನನ್ನು ಬೀಳ್ಕೊಟ್ಟರು. ಮಾರ್ಕ್ ಈ ಪ್ರಾಜೆಕ್ಟ್ ಡಿಲೇ ಆಗುವುದರ ಬಗ್ಗೆ ಡಿ. ಆಯ್ ಕೃಷಿ ಅವರಿಗೆ ಋಣಾತ್ಮಕ ರಿಪೋರ್ಟ ಕೊಟ್ಟು ಅಮರೇಶನಿಗೆ ಛೀಮಾರಿ ಹಾಕಿಸಿದ್ದ.. ಅಮರೇಶ ಡಿಪಾರ್ಟ್‌ಮೆಂಟಿನಿಂದ ಹೊರಬರುವದನನ್ನ ಗಮನಿಸುತ್ತಲೇ ಇದ್ದ ವಿವೇಕ, ಅಮರೇಶನ ಹಿಂದೆ ಓಡುತ್ತಾ ಬಂದು, ಇನ್ನೆನು ಕಾರಿನೊಳಗೆ ಇವನು ಕುಳಿತುಕೊಳ್ಳುತ್ತಾನೋ ಅನ್ನುವದರೊಳಗೆ ಕಾರಿನ ಪಕ್ಕದಲ್ಲಿ ಬಂದು ನಿಂತುಕೊಂಡ. ಈಗಾಗಲೇ ಜಿನುಗು ಮಳೆ ಆರಂಭವಾಗಿತ್ತು. ಅಮರೇಶ ವಿವೇಕನನ್ನು ಗಮನಿಸಿ ಹಿಂದಿನ ಬಾಗಿಲನ್ನು ತೆರೆದು, ಹಿಂದೆ ಕುಳ್ಳಿರಿಸಿಕೊಂಡ. ಜಿನುಗು ಮಳೆ ಇನ್ನೂ ಹೆಚ್ಚಾಗುತ್ತ ಹೆಚ್ಚಾಗುತ್ತ ಹೋಗುತ್ತಿತ್ತು.

ವಿವೇಕ್ ಹೇಳಿದ `ಸಾರಿ ಡಿಸ್ಟರ್ಬ್ ಮಾಡಿದೆ ಎಂದೆನಿಸುತ್ತೆʼ ನಾವು ಇಲ್ಲಿಗೆ ಬಂದಿದ್ದು ದೊಡ್ಡ ತಪ್ಪಾಗಿದೆ. ಇಂತಹ ಸಂಸ್ಥೆಗಳು ಬಡ ರಾಷ್ಟ್ರಗಳನ್ನು ಹಾಳುಮಾಡಲೇ ಇರುವಂತಹವು. ಅಮರೇಶ ಸರ್ ನಾವು ಇಲ್ಲಿ ಅನಿವಾರ್ಯವಾಗಿ ಒಪ್ಪಂದದಂತೆ ಕೆಲಸ ಮಾಡಲೇಬೇಕು ಇಲ್ಲದಿದ್ದರೆ ಬಹಳ ತೊಂದರೆಗೆ ಸಿಲುಕಿಕೊಳ್ಳುತ್ತೇವೆ ಒಂದು ವಿಷಯ ನೀವು ತಿಳಕೊಳ್ಳಿ ಮಾರ್ಕ್ ನಿಮ್ಮ ಬಗ್ಗೆ ಅಸಹನೆ ಹೊಂದಿದ್ದಾನೆ. ನೀವು ಗಮನಿಸಿರಬಹುದು. ಇಲ್ಲಿಯ ಆಂಗ್ಲೋ ಇಂಡಿಯನ್ ಮೂಲನಿವಾಸಿಗಳ ಹಬ್ಬವಾದ ಚರೋಕೆ ಹಬ್ಬಕ್ಕೆ ನಿಮ್ಮನ್ನು ಆಹ್ವಾನಿಸಿದಿಲ್ಲ ಎಂದು. ಆತನಿಗೆ ನಿಮ್ಮ ಪ್ರತಿಭೆ ಬಗ್ಗೆಯೂ ಅಸಹನೆ ಮತ್ತು ನಮ್ಮ ಪ್ರಾಜೆಕ್ಟನಿಂದ ಮೊದಲು ಹೊಡೆತ ಬೀಳುವದು ಭಾರತದ ರೈತರಿಗೆ ಎನ್ನುವದು ಆತನಿಗೆ ಗೊತ್ತಿದೆ ಅದಕ್ಕಾಗಿ ನೀವು ಕಾಳಜಿ ತೋರಸ್ತಾ ಇಲ್ಲ ಅಂತ ಆತನ ಅನಿಸಿಕೆ.
ನೀವು ಹೋಗಿ ಬನ್ನಿ ಸರ್. ಮಳೆ ಜೋರಾಗಿದೆ ಡೆಸ್ಟಿನಿ ದೂರ ಇದೆ ಎಂದು ಬೀಳ್ಕೊಟ್ಟ.

ಕಾರು ಓಡುತ್ತಿತ್ತು..

ನೀವು ನಿಮ್ಮ ಕಷ್ಟ ಕಾಲದಲ್ಲಿ ಮನಸ್ಸು ಮಲೀನಗೊಂಡರೆ, ವಚನಗಳನ್ನು ಓದುತ್ತೀರಲ್ಲ. ಅಲ್ಲಮ, ಲಕ್ಕಮ್ಮ ಚೌಡಯ್ಯ ಇವರ ವಚನಗಳ ಓದಿ ಮಲಗಿಕೊಳ್ಳಬಾರದೆ’ ಎಂದು ಹೇಳಿ ರೀಡಿಂಗ್ ರೂಮಿಗೆ ಹೋಗಿ ಕೈಯಲ್ಲಿ ಅಲ್ಲಮನ ವಚನದ ಪುಸ್ತಕ ಹಿಡಿದು ತಂದಳು.

ಮಾರ್ಕ್ ಕುಡುಕ ಮತ್ತು ಸ್ತ್ರೀ ಲಂಪಟನಾಗಿದ್ದುದರಿಂದ ಈಗಿನ ಹೆಂಡತಿ ಲೂಸಿಯಾ ಡೈವರ್ಸ್ ಕೊಡುತ್ತಿದ್ದಾಳೆ ಎಂದು ಸುದ್ದಿಯೂ ಹಬ್ಬಿತ್ತು. ಇದಕ್ಕೆ ಪೂರಕವಾದ ಒಂದು ಕತೆಯೂ ಇತ್ತು. ಪಕ್ಕದ ಮನೆಯ ಮಹಿಳೆಯೊಂದಿಗೆ ಮೋಜು ಮಾಡಿ ತನ್ನ ಕಾರಿನ ಕೀಲಿಯನ್ನು ಬೆಡ್‌ರೂಮಿನಲ್ಲಿ ಬಿಟ್ಟು ಬಂದಿದ್ದರಿಂದ ಆಕೆಯ ಗಂಡ ಮತ್ತು ತನ್ನ ಹೆಂಡತಿಯೊಂದಿಗೆ ಚಚ್ಚಿಸಿಕೊಂಡಿದ್ದನೆಂಬ ಕತೆ ಅದೇ ಅಪಾರ್ಟ್‌ಮೆಂಟಿನಲ್ಲಿರುವ ವಿವೇಕ ಹೇಳಿದ್ದ. ಈ ಕಾಲಘಟ್ಟದಲ್ಲಿ ಇದು ಏಕೆ ನೆನಪಾಯಿತೋ ದೇವರೆ ಬಲ್ಲ, ಒಬ್ಬ ಮನುಷ್ಯನ ಬಗ್ಗೆ ನಾವು ಹೀಗೆ ಎಂದು ಕೆಟ್ಟದಾಗಿ ತೀರ್ಮಾನಿಸಿದಾಗ, ಆತನ ಬಗ್ಗೆ ಇಂಥಹ ಋಣಾತ್ಮಕ ಕಥೆಗಳನ್ನು ಸಂಗ್ರಹಿಸಲು ಅಥವಾ ಕಟ್ಟಲು ಪ್ರಯತ್ನಿಸುತ್ತದೆ ಎನ್ನುವ ಸೈಕಾಲಾಜಿಸ್ಟಗಳ ಮಾತು ನೆನಪಾಯಿತು.

ಮಾರ್ಕ್ ನಿಮಗೆ ಕೆಟ್ಟವನಿರಬಹುದು, ಆದರೆ ಈ ದೇಶದ ಜನರಿಗೆ ಆತ ಅಪ್ರತಿಮ ದೇಶಭಕ್ತ. ಹಗಲಿರಳು ದುಡಿಯುವ ಕೃಷಿಗಾಗಿ ಸಮರ್ಪಿಸಿಕೊಂಡ ಮನುಷ್ಯ ಆತ ಎಂದು ಹೆಂಡತಿ ಶಮಾ ಹೇಳಿದ್ದು ನೆನಪಾಯಿತು.

ಕಾರು ಶರವೇಗದಲ್ಲಿ ಓಡುತ್ತಿತ್ತು. ಮಳೆಯೂ ಧೋ ಎಂದು ಸುರಿಯುತ್ತಿತ್ತು. ಅಮೇರಿಕನ್ ಮೆಟಲರ್ಜಿ ಸಂಸ್ಥೆ ಪದೇ ಪದೇ ಎಚ್ಚರಿಕೆಯ ವರದಿಗಳನ್ನು ಬಿತ್ತುತ್ತಿತ್ತು. ಹಿಮ ಬೀಳುವ ಅಪಾಯದ ಬಗ್ಗೆ ರೋಡ್ ಬ್ಲಾಕ್ ಆಗುವ ಅಪಾಯದ ಬಗ್ಗೆ ಹಾಗು ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಂಭವಿಸಬಹುದಾದ ಅಪಾಯ ಮುನ್ಸೂಚನೆಗಳನ್ನು ಅದು ಬಿತ್ತುತ್ತಿತ್ತು. ಅಮರೇಶ ಫಾಸ್ಟಾಗಿ ಕಾರನ್ನು ಓಡಿಸುತ್ತ ಮನೆ ತಲುಪಿದ್ದ.

*4*

ಶಮಾ ಬಲವಂತವಾಗಿ ಭಾರತೀಯ ಮೂಲದ ಮನಶಾಸ್ತ್ರಜ್ಞರಾದ ಕುಲಕರ್ಣಿಯವರ ಬಳಿ ಅಮರೇಶನನ್ನು ಕರೆದುಕೊಂಡು ಹೋಗಿದ್ದಳು. ಆಗಲೇ ಸಂಜೆಯಾಗಿ ಮಳೆ ತಹಬಂದಿಗೆ ಬಂದಿತ್ತು. ಶಮಾ ವೈದ್ಯರಿಗೆ ಎಲ್ಲವನ್ನೂ ವಿವರಿಸಿದಳು. ರಾತ್ರಿ ನಿದ್ರೆ ಬಾರದೇ ಇದ್ದದ್ದು ಮತ್ತು ಕನಸುಗಳು ಪದೇ ಪದೇ ಬೀಳುವದು, ಅದು ಒಂದೇ ತೆರನಾದ ಕನಸು ಬೀಳುವದು, ಎಲ್ಲವನ್ನು ಗಂಭೀರವಾಗಿ ಆಲಿಸಿದ ವಿಜಯ್ ಕುಲಕರ್ಣಿ, ಓಕೆ ಶಮಾ ಎಂದು ಹೇಳಿ ಶಮಾಳನ್ನು ಹೊರಗೆ ಕಳುಹಿಸಿ ಅಮರೇಶನೊಂದಿಗೆ ಮುಖಾಮುಖಿಗೆ ಕುಳಿತರು.

ಕುಲಕರ್ಣಿ ಹೇಳಿದರು ಅಮರೇಶ ರಾತ್ರಿ ಬೀಳುವ ಕನಸುಗಳು ಹಗಲಿನ ಹೊರ ಜಗತ್ತಿನಲ್ಲಿ ಘಟಿಸುವ ಅಂಶಗಳಿಗೆ ಪ್ರಕೃತಿಯಾತ್ಮಕವಾಗಿರುತ್ತವೆ. ಪ್ರಸ್ತುತ ನಿಮ್ಮ ಜೀವನದಲ್ಲಿ ನಡೆದಿರುವ ನಡೆಯುತ್ತಿರುವ ಘಟನೆ ನಿಮಗೆ ತಿರಸ್ಕಾರಯುತವಾಗಿಯೂ ಇರಬಹುದು. ನನಗೆ ಕೊಂಚ ನಿಮ್ಮ ಕುಟುಂಬ ಮತ್ತು ಈಗಿನ ನಿಮ್ಮ ಜೀವನ ವಿವರಿಸಬಹುದೇ ಎಂದು ಕೇಳಿದರು. ಆಗಲಿ ಸರ್ ಹೇಳುವೆ ಎಂದ.

ತನ್ನ ಕಥೆ ಹೇಳಲು ಆರಂಭ ಮಾಡಿದ.

ಸರ್, ನನ್ನ ಮೂಲ ಊರು ದೇವರ ಭೂಪೂರು. ರಾಯಚೂರ ಜಿಲ್ಲೆ ಲಿಂಗಸಗೂರ ತಾಲ್ಲೂಕು. ನಮ್ಮ ಉದ್ಯೋಗ ಮನೆಯಲಿ ಬೀಜವನ್ನು ಸಂಗ್ರಹಿಸುವದು. ರೈತರಿಗೆ ಮುಂಗಾರು ಹಿಂಗಾರಿನಲ್ಲಿ ಬಿತ್ತಲಿಕೆ ಕೊಡುವದು, ಅದಕ್ಕೆ ನಮಗೆ ಬೀಜದವರು ಎಂದು ಹೆಸರು. ಇನ್ನೊಂದು ವಿಷಯ ಹೇಳುವದನ್ನು ಮರೆತೆ ನಮ್ಮದು, ನೀವು ಕಲ್ಯಾಣ ಶರಣರಲ್ಲಿ ಆಯ್ದಕ್ಕಿ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ ಕೇಳಿರಬಹುದು, ಆ ವಂಶದವರು ನಾವು.

ನಮ್ಮ ತಂದೆಯ ತಂದೆ ನಮ್ಮ ತಾತ ರುದ್ರಪ್ಪ ಎಂದು ಅವರ ಕಾಯಕ ರೈತರಿಗೆ ಬೇಕಾದ ಬೀಜಗಳಾದ ಬತ್ತ ಹೆಸರು ಅಲಸಂಧಿ ಜೋಳ ಧಾನ್ಯ, ಹತ್ತಿ, ಗೊನೆ ಜೋಳ ಕಡಲೆ ತೊಗರಿ ಹೀಗೆ 315 ನಮೂನೆಯ ಬೀಜಗಳನ್ನು ಸಂಗ್ರಹಿಸುತ್ತಿದ್ದರು. ಬತ್ತದಲ್ಲೆ ಒಂದು ನೂರಾ ಇಪ್ಪತ್ತು ತಳಿಗಳ ಸಂಗ್ರಹವಿತ್ತು. ಸಾರ್ ನಿಮಗೆ ಹೇಳುವೆ ಕೃಷಿ ಕಾಲೇಜುಗಳು ನಮ್ಮವರಿಂದ ಬೀಜಗಳನ್ನು ತೆಗೆದುಕೊಂಡು ಹೋಗಿ ಬೀಜಗಳನ್ನು ಅಭಿವೃದ್ಧಿಪಡಿಸುತ್ತಿದ್ದರು ಅಂತಹ ಅಜ್ಜ ರುದ್ರಪ್ಪ ಮುಂಗಾರಿನಲಿ ಹಿಂಗಾರಿನಲ್ಲಿ ರೈತರಿಗೆ ಬೀಜಗಳನ್ನು ಕೊಟ್ಟು ಮಾರ್ಚನಲಿ ಮತ್ತೆ ರೈತರಿಂದ ಮರು ಬೀಜಗಳನ್ನು ಸಂಗ್ರಹಿಸುತ್ತಿದ್ದರು.

ವೆರಿಗುಡ್, ನವ್‌ ಎ ಡೇಸ್ ಟ್ರಾಡಿರ್ಶನ್ ಸೀಡ್ಸ್ ಹಾಳಾಗ್ತಾ ಇವೆ. ನಿಮ್ಮ ತಾತ ದೇವರು ಇದ್ದ ಹಾಗೆ ಎಂದು ಡಾ||ವಿಜಯ ಕುಲಕರ್ಣಿ ಹೇಳಿದರು.

ನಿಸ್ಸಂಶಯವಾಗಿ ನಮ್ಮ ತಾತ ದೇವರು ಸರ್ ಮೂರು ನೂರಾ ಎಪ್ಪತೈದು ಧಾನ್ಯಗಳು, ಒಂದು ಸಾವಿರ ದೇಸಿ ತಳಿಗಳು ಅವರ ಸಂಗ್ರಹದಲ್ಲಿ ಇದ್ದವು. ಬೀಜ ಸಂಗ್ರಹಕ್ಕಾಗಿ ಅವರಲ್ಲಿ ಎರಡು ಗೋಡವನ್ನುಗಳು ಕಟ್ಟಿದ್ದರು ಸರ್ ಎಂದು. ಅಮರೇಶ ಉಸಿರು ಬಿಗಿ ಹಿಡಿದು ಹೇಳಿದ.

ವೆರಿ ಫೆಂಟಾಸ್ಟಿಕ್ ವರ್ಕ್. ಫೆಂಟಾಸ್ಟಿಕ್ ವರ್ಕ್. ಹೀ ಇಜ್ ದೇರ್ ? ನೋ ಸರ್ ಹೀ ಈಜ್ ನೋಮೋರ್. ಸಾರಿ ಸಾರಿ ಎಂದು ಡಾಕ್ಟರ್ ಮೂಗನ್ನು ನೀವಿಕೊಂಡರು.

ಬೀಜವೆಂದರೆ ಅವರಿಗೆ ಪ್ರಾಣ.

ನಾವು ಚಿಕ್ಕವರಿದ್ದಾಗ ಯಾವುದೆ ಬೀಜವನ್ನು ತುಳಿದರೆ ಅವರಿಗೆ ಬ್ರಹ್ಮಾಂಡ ಸಿಟ್ಟು ಬರುತ್ತಿತ್ತು ಸರ್. ಬೀಜದ ಮೂಗು ನಮ್ಮಿಂದ ಮುಕ್ಕಾದರೆ ಅದು ಗರ್ಭಸ್ಥ ಪಿಂಡದ ನಾಶಕ್ಕೆ ಸಮನಾದ ಪಾಪ ಎನ್ನುತ್ತಿದ್ದರು ಸರ್.

ಹೌದು ಬೀಜ ಸೃಷ್ಠಿಯ ಸಂಕೇತ ಅವರು ಹೇಳಿದರಲ್ಲಿ ತಪ್ಪಿಲ್ಲ ಎಂದು ಕೊಂಡಿದ್ದೀನಿ, ಓ.ಕೆ. ಮುಂದೆ,

ನಮ್ಮ ತಾತನಿಗೆ ಬೀಜವನ್ನು ರಕ್ಷಿಸುವ ಇಂತಹ ಅಮೂಲ್ಯವಾದ ಸಂಪತ್ತನ್ನು ಮುಂದಿನ ಕಾಲ ಘಟ್ಟದವರೆಗೆ ಕೊಂಡೊಯ್ಯುವ ಸಮರ್ಥ ವ್ಯಕ್ತಿಯನ್ನು ನಮ್ಮ ತಂದೆಯಲ್ಲಿ ಕಾಣಲಿಲ್ಲ ಸರ್. ತಂದೆಯವರು ಸ್ವಲ್ಪ ಅಶಿಸ್ತು ಮತ್ತು ಕುಡಿತವನ್ನು ಅವಲಂಬಿಸಿರುವ ವ್ಯಕ್ತಿ ಎಂದು ನಾನು ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕ್ ತೆಗೆದುಕೊಂಡರೂ, ಎಂಬಿಬಿಎಸ್ ಸೀಟು ದೊರಕಿದರೂ, ನನ್ನ ತಾತ ನನಗೆ ಕೃಷಿ ಓದಿಸಿದರು ಸಾರ್ ಮುಂದೆ ನಾನು ವಿಶ್ವವಿದ್ಯಾಲಯದಲಿ ಕೃಷಿ ವಿಜ್ಞಾನಿಯಾಗಿ ಸ್ವಲ್ಪ ದಿನಗಳ ಕಾಲ ಆ ಬೀಜದ ಬ್ಯಾಂಕಿನ ಜವಾಬ್ದಾರಿಯನ್ನು ನೋಡಿಕೊಂಡೆ. ಅಷ್ಟರಲ್ಲಿ ಅಜ್ಜ ತೀರಿಕೊಂಡರು.

ಅದನ್ನು ನಿಭಾಯಿಸಲು ನನ್ನಿಂದ ಆಗದೆ, ಒಂದು ಎನ್‌ಜಿಓಗೆ ಹ್ಯಾಂಡ್ ಓವರ್ ಮಾಡಿದೆ . ಆ ಮೇಲೆ ಕೃಷಿ ವಿ.ವಿ. ನೌಕರಿಯನ್ನು ತ್ಯಜಿಸಿ, ಅಮೇರಿಕಾಕ್ಕೆ ಬಂದೆ ಸರ್, ಇದು ನನ್ನ ರೂಟ್ ಮ್ಯಾಪ್ ಎಂದು ಮುಂದೆ ಇಟ್ಟ ಚಹಾವನ್ನು ಕುಡಿಯಲು ಆರಂಭ ಮಾಡಿದ. ಫೈನ್ ನಿಮ್ಮ ಇತಿಹಾಸ ಬಹಳ ಸಂಕೀರ್ಣ ಮತ್ತು ಬಹಳ ಆಪ್ತದಾಯಕವಾಗಿದೆ. ಇರಲಿ ಫೈನ್. ಟೀ ಕುಡಿದು ಆದ ಮೇಲೆ ಹೇಳಿ, ಈಗ ಪ್ರಸ್ತುತವಾಗಿ ನಿಮಗೆ ಕಾಡುವ ಆ ಪಾಪ ಯಾವುದು ಎಂದು ನೇರವಾಗಿ ಪ್ರಶ್ನಿಸಿದರು ಕುಲಕರ್ಣಿ. ಹೌದು ಸರ್, ನಮ್ಮ ತಾತ ಬೀಜದ ಮೂಗನ್ನು ತುಳಿದರೆ ನಮಗೆ ದಂಡಿಸುತ್ತಿದ್ದ. ಆದರೆ ನಾನು ಈಗ ಬೀಜದ ಬ್ರೂಣ ತೆಗೆಯುವ ಕೆಲಸದ ದಂಡನಾಯಕನಾಗಿದ್ದೇನೆ. ನಮ್ಮ ತಾತ ದೇಸಿ ತಳಿಗಳನ್ನು ರಕ್ಷಿಸುತ್ತಿದ್ದ ನಾನು ಈಗ ಅವುಗಳನ್ನು ಧ್ವಂಸ ಮಾಡುವ ಲೀಡರ್ ಆಗಿದ್ದೇನೆ. ನಮ್ಮ ತಾತ ರೋಗವನ್ನು ಕಳೆಯುವ ಬೀಜಗಳ ಸಂಗ್ರಹಕಾರನಾಗಿದ್ದ. ನಾನು ರೋಗಗಳನ್ನು ಹರಡುವ ಬೀಜಗಳ ತಯಾರಿಕಾ ಕಾರ್ಯಕ್ರಮದಲ್ಲಿದ್ದೇನೆ.

ಡೋಂಟ್ ಬಿ ಯಮೋಶನಲ್

ಇಲ್ಲ ಸರ್, ಇದು ಸತ್ಯ ಎಂದು ಅಮರೇಶ ಅಳಹತ್ತಿದ. ಅಳುವಿನ ಒಳಧ್ವನಿ ಹೊರಗೂ ತಲುಪಿತ್ತು ಆಗ ಶಮಾ ಓಡಿ ಬಂದ ಏನಾದರೂ ಆಯಿತೆ ಎಂದು ಕೇಳಿದಳು.
ಇಲ್ಲ, ಪೇಶೆಂಟ್ ಪ್ರೊಸೆಸ್‍ನಲ್ಲಿದ್ದಾರೆ. ನೀವು ಹೊರಗಡೆ ಇರಿ ಎಂದು ಡಾಕ್ಟರ್ ಹೇಳಿ ಅವರನ್ನು ವಾಪಸ್ ಕಳುಹಿಸಿದರು.
ಹೊರಗಡೆ ಮತ್ತೆ ಮಳೆ ಆರಂಭವಾಗಿತ್ತು. `ಸರ್, ನನಗೆ ಈ ಭಯಾನಕ ಸ್ಥಿತಿಯಿಂದ ಪಾರು ಮಾಡಿ’ ಎಂದು ಅಮರೇಶ ಡಾ|| ಕುಲಕರ್ಣಿಯವರ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ.
`ಇಲ್ಲ, ನಿಮಗೆ ಬೀಳುವ ಈ ಕನಸುಗಳು ಮುಂದುವರೆದರೆ ಮುಂದೆ ಪಾರ್ಕಿನ್‌ಸನ್ ಅಥವಾ ಅಲ್ಜಿಮೆರಾ ರೋಗಕ್ಕೂ ಕಾರಣವಾಗಬಹುದುʼ.

`ಸರ್, ಇದರಿಂದ ಹೊರಗೆ ಬರುವದು ಹೇಗೆ?

`ಬರಬಹುದು, ನಿಮ್ಮ ಮನಸ್ಸಿಗೆ ಹಿತವಾದ.. ನ್ಯಾಯಯುತವಾದ.. ಕೆಲಸ ಮಾಡಿ, ನಿಮ್ಮ ತಾತ ಮಾಡುತ್ತಿದ್ದ ಹಳೆಯ ಬೀಜದ ತಳಿಗಳ ಸಂಗ್ರಹ. ವಿತರಣೆ ಬಹಳ ಯೋಗ್ಯವಾದ ಕೆಲಸ ಅದನ್ನೆ ಮಾಡಿ, ಮತ್ತೆ ಮುಂದಿನ ವಾರ ಇಲ್ಲಿಗೆ ಬನ್ನಿ. ದಿನಾಲು ರಾತ್ರಿ ನಿದ್ರೆ ಮಾತ್ರೆಗಳನ್ನು ಕೊಟ್ಟಿದ್ದೇನೆ. ಅವುಗಳನ್ನು ದಿನಾಲು ತೆಗೆದುಕೊಳ್ಳಿ ಎಂದು ಕುಲಕರ್ಣಿಯವರು ಶಮಾ ಮತ್ತು ಅಮರೇಶ ಅವರನ್ನು ಬೀಳ್ಕೊಟ್ಟರು.

ಅಂದು ರಾತ್ರಿ ಮಲಗಿದ. ನಿದ್ರೆಯೆಂಬುದು ಮರೀಚಿಕೆಯೇ ಆಗಿತ್ತು. ಮತ್ತೆ ಕುಲಕರ್ಣಿಯವರು ಕೊಟ್ಟ ಮಾತ್ರೆಗಳನ್ನು ನುಂಗಿದ. ಸ್ವಲ್ಪ ಹೊತ್ತು ಮಲಗಿಕೊಂಡಂತೆ ಆಗಿ, ಮತ್ತೆ ಕನಸುಗಳು. `ಅಯ್ಯೋ ಶಿವನೆ’ ಎಂದು ಎದ್ದು ಕುಳಿತ. ಇದು ಬಗೆಹರಿಯದ ಸಮಸ್ಯೆ ಅನ್ನಿಸಿತು ಅವನಿಗೆ. ಇದು ಯಾವ ಔಷಧಿಗೂ ಮಣಿಯದ ರೋಗವೆಂದು ತಕ್ಷಣ ಅನ್ನಿಸಿ, ಮನೆಯ ಒಳಗೋಗಿ ನೀರು ಕುಡಿದ. ಫ್ರಿಜ್ ತೆಗೆದು ಕಲ್ಲಂಗಡಿಯ ಬಾಯಿಗೆ ಹಾಕಿಕೊಂಡ. ಮತ್ತೆ ಹೊರಾಂಡಕ್ಕೆ ಬಂದು ಕುಳಿತ, ಹೆಂಡತಿ ಶಮಾ ಎದ್ದು ಬಂದಳು.. `ಏನಾಯ್ತು ಯಾಕೆ ನಿದ್ರೆ ಮಾತ್ರೆ ತೆಗೆದುಕೊಂಡರೂ ನಿದ್ರೆ ಬರಲಿಲ್ಲವಾ?’ ಎಂದಳು.

Yes this is non curable ಡಿಸೀಸ್ ಎಂದ. ಇದಕ್ಕೆ ಪರಿಹಾರ ಒಂದೇ, ನಾನು ಈ ಕೆಲಸಕ್ಕೆ ರಾಜಿನಾಮೆ ಕೊಡುವುದು.. ಎಂದ ಕೂಡಲೇ ಶಮಾ ಗಾಬರಿಯಾದಳು.

`ಏನು ಮಾತಾಡ್ತಾ ಇದ್ದೀರಿ.’

`ಹೌದು, ನಾಳೆಯೇ ನಾನು ರಿಸರ್ಚ್ ಸ್ಟೇಷನ್ನಿಗೆ ಹೋಗಿ ರಾಜೀನಾಮೆ ಬಿಸಾಡಿ ಬರುವೆ’ ಎಂದ.

ಶಮಾಳು ನಾಲ್ಕು ವರ್ಷದ ಹಿಂದೆ ಸಂಸ್ಥೆ ಸೇರುವ ಮುಂಚೆ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ತೆಗೆದುಕೊಂಡು ಬಂದಳು. ಅದು ಹೀಗೆ ಇತ್ತು, ಏಳು ಮತ್ತು ಎಂಟನೇ ಕಾಲಮಿನಲ್ಲಿ ದಾಖಲಾಗಿದ್ದ ಅಂಶವನ್ನು ಅವನ ಎದುರಿಗೆ ಓದಿದಳು. ಪ್ರಾಜೆಕ್ಟ್‌ನ ಅಂಶಗಳು ಏನಾದರೂ ಲೀಕ್ ಆದರೆ ಏಳು ವರ್ಷ ಜೈಲುವಾಸ ಹಾಗೂ ಹತ್ತು ಲಕ್ಷ ಡಾಲರ್ ಎಂದು ನಮೂದಿಸಲಾಗಿತ್ತು. ಇದರಿಂದ ಸ್ವಲ್ಪ ಬಚಾವಾದರೂ ಆಗಬಹುದು. ಆದರೆ ಎಂಟ ನೇ ಕಾಲಮಿನಿಂದ ಬಚಾವಾಗಲು ಸಾಧ್ಯವೇ ಇಲ್ಲ. ಎಂಟನೇ ಕಾಲಮಿನಲ್ಲಿ ಒಂದು ವೇಳೆ ಕಾರಣಾಂತರಗಳಿಂದ ಪ್ರಾಜೆಕ್ಟ್‌ ಬಿಡುವ ಸಂದರ್ಭ ಬಂದರೆ, ಪ್ರಾಜೆಕ್ಟಿನ ಒಟ್ಟಾರೆ ಖರ್ಚಿನ ಮೂರು ಪಟ್ಟು ಹಣ ಕಟ್ಟಿಬಿಡಬಹುದು. ಒಂದು ವೇಳೆ ಕಟ್ಟದಾಗದಿದ್ದರೆ ಐದು ವರ್ಷ ಜೈಲು. ಯಾಕೆ ಏನಂತದೆ ಜೀವನ ಎಂದು ಶಮಾ ಗಾಬರಿಯಿಂದ ಕೇಳಿದಳು. ಪ್ಲೀಸ್ ನೀನು ಹೋಗು ನಾನು ಇಲ್ಲಿಯೇ ಕೊಡ್ರುವೆ ಎಂದು ಹೇಳಿದ, ಈ ರೂಮಿನಲ್ಲಿ ಅವನಿಗೆ ಚಳಿ ಭಯಾನಕವಾಗಿ ತಾಕುತ್ತಿತ್ತು. ವಾರ್ಮ್ ರೂಮಿಗೆ ಹೋಗಲು ಸನ್ನದ್ಧನಾದ. ಅಲ್ಲಿಯೂ ಬೆಂಕಿ ಭಯಾನಕವಾಗಿ ಉಗುಳುತ್ತಿತ್ತು. ಎಲ್ಲಿ ಹೋಗಬೇಕು ಎನ್ನುವ ಸಂಶಯದಲ್ಲೆ ಶತಪಥ ಹಾಕಲು ಆರಂಭ ಮಾಡಿದ.