ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ.
ಡಾ. ಕೆ. ರಘುನಾಥ್ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್ ಬರಹ
ಮುಂಬಯಿ ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರದಲ್ಲಿ ವಸ್ತುನಿಷ್ಠ, ಕೃತಿನಿಷ್ಠ ವಿಮರ್ಶಕರಲ್ಲಿ ಡಾ. ಕೆ. ರಘುನಾಥ್ ಅವರು ಹೆಸರು ಮುಂಚೂಣಿಯಲ್ಲಿದೆ. ಅದರಲ್ಲೂ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಸಂಶೋಧಕ, ವಿಮರ್ಶಕ ಡಾ. ಕೆ. ರಘುನಾಥ್ ಅವರ ಇತ್ತೀಚೆಗೆ ಬೆಳಕು ಕಂಡ ಕೃತಿ, “ಮುಂಬಯಿ ಕನ್ನಡ ಲೋಕ”. ಈ ಕೃತಿಯು ‘ಮುಂಬಯಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ’ ಮತ್ತು ‘ಮುಂಬಯಿ ಕನ್ನಡ ದರ್ಶನ’ ಎಂಬ ಎರಡು ಭಾಗಗಳನ್ನೊಳಗೊಂಡಿದೆ.
ಕೈಗಾರಿಕೆ, ಬೃಹತ್ ಉದ್ಯಮಗಳು ಸೃಷ್ಟಿಗೊಂಡು ಒಂದು ಊರು ಪೇಟೆಯಾಗಿ, ಪಟ್ಟಣವಾಗಿ, ನಗರವಾಗಿ ರೂಪಾಂತರಗೊಂಡು; ಅವಕಾಶಗಳನ್ನು ಹುಡುಕುತ್ತಾ ವಲಸೆ ಬಂದ ಜನರನ್ನು ಸೇರಿಸಿಕೊಂಡು ನಗರ-ಮಹಾನಗರವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಸೃಷ್ಟಿಗೊಂಡ ಮಹಾನಗರದಲ್ಲಿ ಉಂಟಾಗುವ ಧನಾತ್ಮಕ – ಋಣಾತ್ಮಕ ಅಂಶಗಳು, ಸಾಂಸ್ಕೃತಿಕ ಪಲ್ಲಟಗಳು, ಅಸ್ತಿತ್ವದ ಪ್ರಶ್ನೆ ಮೊದಲಾಗಿ ಕಾಡುವಾಗ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಕಾಣಿಸಿಕೊಳ್ಳಲು ಪ್ರಾರಂಭವಾಯಿತು.
ಪ್ರಸ್ತುತ ‘ಮುಂಬಯಿ ಕನ್ನಡ ಲೋಕ’ದಲ್ಲಿ ರಘುನಾಥ್ ಅವರು, ಪ್ರಥಮ ಭಾಗ ‘ಮುಂಬಯಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ’ಯಲ್ಲಿ ವಿಶೇಷವಾಗಿ ಮುಂಬಯಿ ಕನ್ನಡ ಕಾವ್ಯಕ್ಕೆ ಒತ್ತು ನೀಡಿ ಚರ್ಚಿಸಿದ್ದಾರೆ. ಕೃತಿಯ ಪ್ರಾರಂಭದಲ್ಲಿ, ‘ಮಹಾನಗರವೊಂದು ರೂಪುತಳೆದಾಗ ಅವಕಾಶಗಳನ್ನು ಹುಡುಕುತ್ತಾ ಬಂದ ಜನರು ಭಿನ್ನ ವಾತಾವರಣದಲ್ಲಿ ಎದುರಿಸಬೇಕಾದ ಸವಾಲುಗಳು; ಆ ಮೂಲಕ ಹುಟ್ಟಿಕೊಂಡ ಭೌತಿಕ ಮಾತ್ರವಲ್ಲದೆ ಮಾನಸಿಕವೂ ಆದ ಸಂಘರ್ಷ ನಗರ ಪ್ರಜ್ಞೆಯ ಉಗಮ ಮತ್ತು ವಿಕಾಸಕ್ಕೆ ಕಾರಣವಾಯಿತು. ಈ ಬೆಳವಣಿಗೆಗೆ ತೀವ್ರವಾಗಿ ಸ್ಪಂದಿಸಿದ ಬರಹಗಾರರು ತಮಗಾದ ಆಘಾತ ಭ್ರಮನಿರಸನದ ತಲ್ಲಣಗಳನ್ನು ತಮ್ಮ ಸೃಜನಶೀಲ ಕೃತಿಗಳ ಮೂಲಕ ವ್ಯಕ್ತಪಡಿಸಿದ್ದೇ ನಗರ ಪ್ರಜ್ಞೆಯ ಮೂಲವಾಗಿದೆ’ ಎಂದು ನಗರ ಪ್ರಜ್ಞೆ ಹುಟ್ಟುಪಡೆದ ಬಗ್ಗೆ ಡಾ. ಕೆ. ರಘುನಾಥ್ ನಿಖರವಾಗಿ ತಮ್ಮ ನಿಲುವನ್ನು ನಮ್ಮ ಮುಂದಿಡುತ್ತಾರೆ. ಅಮಿತಾವ್ ಘೋಷ್ ಅವರು ಕೃತಿ ಬಿಡುಗಡೆ ಸಂದರ್ಭ ಕೊಟ್ಟ ಮುನ್ನೆಚ್ಚರಿಕೆಯ ಮಾತುಗಳು ರಘುನಾಥ್ ಅವರಲ್ಲಿ ನಗರ ಪ್ರಜ್ಞೆಯ ಬಗ್ಗೆ ಹೊಸ ಅರಿವನ್ನು, ಚಿಂತನೆಯನ್ನು ಮೂಡಿಸಿತು. ಅದರ ಫಲಶ್ರುತಿಯಾಗಿ ಇಲ್ಲಿ ನಗರ ಪ್ರಜ್ಞೆಯ ಹೊಸ ಒಲವುಗಳು ಮೂಡಿ ಬಂದಿರುವುದನ್ನು ಗಮನಿಸಬಹುದು.
ಅಧ್ಯಾಯ ಒಂದರಲ್ಲಿ, ‘ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವವರು ನಗರಗಳಲ್ಲಿನ ಮೌಲ್ಯಗಳ ಜೊತೆಗೆ ಸಂಘರ್ಷವನ್ನು ಎದುರಿಸುತ್ತಾರೆ’ ಎಂದು ಮೊದಲ್ಗೊಂಡು ನಗರ ಪ್ರಜ್ಞೆಯ ವ್ಯಾಖ್ಯಾನ ನೀಡಲಾಗಿದೆ. ನಗರೀಕರಣದ ಪರಿಣಾಮ, ನಗರೀಕರಣಕ್ಕೆ ಕಾರಣಗಳು ಇತ್ಯಾದಿಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಪೂರ್ಣವಾಗಿ ಇಲ್ಲಿ ಕಟ್ಟಿಕೊಡಲಾಗಿದೆ.
ನಗರ ಪ್ರಜ್ಞೆಯ ಬಗ್ಗೆ; ಅದೂ ಮುಂಬಯಿ ಕನ್ನಡಿಗರ ಬಗ್ಗೆ ಮಾತನ್ನಾಡುವಾಗ ಇಲ್ಲಿನ ಇತಿಹಾಸದ ಬಗ್ಗೆ ಅರಿವು ಅವಶ್ಯಕ. ಸಪ್ತ ದ್ವೀಪಗಳ ಸಮೂಹವಾಗಿದ್ದ ಮುಂಬಾಪುರಿಯ ಬಗ್ಗೆ ರಘುನಾಥ್ ಅಧ್ಯಯನ ಪೂರ್ಣವಾದ ಇತಿಹಾಸವನ್ನು ಇಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಗೆ ಮಹತ್ವವನ್ನು ತಂದುಕೊಟ್ಟಿದೆ.
‘ಬೇಂದ್ರೆಯವರು ಕೇಶವ ಸುತರ ಮೂಲಕ (ಮರಾಠಿ) ಮಾಡಿದ ಹೊಸ ಪ್ರಯೋಗಗಳು ಹೊಸ ಕಾವ್ಯಕ್ಕೆ ನಾಂದಿ ಹಾಡಿದವು’ ಎನ್ನುವ ಮೂಲಕ ಹೊಸ ಕಾವ್ಯ ಪಡಿಮೂಡಿದ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ ಲೇಖಕರು. ಮುಂದೆ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಹೀಗೆ ಕನ್ನಡ ಸಾಹಿತ್ಯದಲ್ಲಿ ವಿವಿಧ ಘಟ್ಟಗಳನ್ನು ಸ್ಥೂಲವಾಗಿ ಪರಿಚಯಿಸುತ್ತಾ ಅವುಗಳ ಮೂಲ ಸೆಲೆಗಳನ್ನು ಬಿಚ್ಚಿಡುತ್ತಾರೆ.
‘ನವ್ಯ ಕಾವ್ಯದ ಅತ್ಯುತ್ತಮ ಪ್ರತಿನಿಧಿಯಾದ ಅಡಿಗರ ನವ್ಯವು ಒಂದು ಬಗೆಯ ನವೋದಯವಾಗಿದೆ’, ‘ಗೋಕಾಕರ ನವ್ಯತೆ ಕಾವ್ಯ ತಂತ್ರದ ಅನ್ವೇಷಣೆಯೇ ಹೊರತು ಬೇರೇನಲ್ಲ’, ‘ನವ್ಯ ಕಾವ್ಯದ ಚಳವಳಿಯು ಅತ್ಯುತ್ತಮ ಕಾವ್ಯದ ನಿರ್ಮಾಣಕ್ಕೆ ಕಾರಣವಾಯಿತು’, ‘ನವೋದಯದ ಮಾನವತಾವಾದದ ಉಪ ಉತ್ಪನ್ನವೇ ಪ್ರಗತಿಶೀಲ’ – ಹೀಗೆ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳನ್ನು, ಅವು ಸಾಗಿಬರುವ ನಡೆಯನ್ನು ಪ್ರಾತಿನಿಧಿಕ ಕವಿಗಳ ಕವಿತೆಗಳನ್ನು ಉಲ್ಲೇಖಿಸುತ್ತಾ ಕಟ್ಟಿಕೊಡುವ ರೀತಿ ಹೊಸ ತಲೆಮಾರಿನ ಸಂಶೋಧಕರಿಗೆ ಮಾದರಿಯಾಗಿದೆ.
ಆಧುನಿಕ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆಯು ವಿವಿಧ ಎಂಟು ಆಯಾಮಗಳಲ್ಲಿ ಪ್ರಕಟಗೊಂಡಿರುವುದನ್ನು ಉಲ್ಲೇಖಿಸಿರುವ ಲೇಖಕರು ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಬಗ್ಗೆ ಹೊಸ ಬೆಳಕನ್ನು ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮುಂದಿನ ಅಧ್ಯಯನಕಾರರಿಗೆ ಉಪಯುಕ್ತವಾಗಲಿದೆ. ಕೆ.ಎಸ್.ನ., ಜಿ.ಎಸ್.ಎಸ್., ತೇಜಸ್ವಿ, ಕಣವಿ, ಗೋಪಾಲಕೃಷ್ಣ ಅಡಿಗ, ಕೆ.ವಿ.ತಿರುಮಲೇಶ್, ನಿಸಾರ್, ಕುವೆಂಪು, ಎ.ಕೆ.ರಮಾನುಜನ್, ಗಂಗಾಧರ ಚಿತ್ತಾಲ ಮೊದಲಾದವರ ಕವಿತೆಗಳಲ್ಲಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ ಪಡಿಮೂಡಿರುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ.
‘ಮಹಾನಗರವೊಂದು ರೂಪುತಳೆದಾಗ ಅವಕಾಶಗಳನ್ನು ಹುಡುಕುತ್ತಾ ಬಂದ ಜನರು ಭಿನ್ನ ವಾತಾವರಣದಲ್ಲಿ ಎದುರಿಸಬೇಕಾದ ಸವಾಲುಗಳು; ಆ ಮೂಲಕ ಹುಟ್ಟಿಕೊಂಡ ಭೌತಿಕ ಮಾತ್ರವಲ್ಲದೆ ಮಾನಸಿಕವೂ ಆದ ಸಂಘರ್ಷ ನಗರ ಪ್ರಜ್ಞೆಯ ಉಗಮ ಮತ್ತು ವಿಕಾಸಕ್ಕೆ ಕಾರಣವಾಯಿತು. ಈ ಬೆಳವಣಿಗೆಗೆ ತೀವ್ರವಾಗಿ ಸ್ಪಂದಿಸಿದ ಬರಹಗಾರರು ತಮಗಾದ ಆಘಾತ ಭ್ರಮನಿರಸನದ ತಲ್ಲಣಗಳನ್ನು ತಮ್ಮ ಸೃಜನಶೀಲ ಕೃತಿಗಳ ಮೂಲಕ ವ್ಯಕ್ತಪಡಿಸಿದ್ದೇ ನಗರ ಪ್ರಜ್ಞೆಯ ಮೂಲವಾಗಿದೆ’
‘ಮುಂಬಯಿ ಕನ್ನಡ ಕಾವ್ಯ’ ಶೀರ್ಷಿಕೆಯು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಪ್ರಾರಂಭದಲ್ಲಿ ಮುಂಬಯಿ ಕನ್ನಡ ಕಾವ್ಯದ ಸ್ಥೂಲ ಸಮೀಕ್ಷೆಯನ್ನು ಲೇಖಕರು ಮಾಡಿದ್ದಾರೆ. ಹಟ್ಟಿಯಂಗಡಿ ನಾರಾಯಣರಾಯರ ‘ಆಂಗ್ಲ ಕವಿತಾವಳಿ’ಯ ಮೂಲಕ ಮುಂಬಯಿ ಕನ್ನಡ ಕಾವ್ಯದ ಉಗಮವನ್ನು ಗುರುತಿಸಿರುವ ಲೇಖಕರು ಅದರ ವೈಶಿಷ್ಟ್ಯ ಹಾಗೂ ಮಿತಿಗಳನ್ನು ವಿವರಿಸಿದ್ದಾರೆ. ಮುಂದೆ ಚುಟುಕು ಬ್ರಹ್ಮ ದಿನಕರ ದೇಸಾಯಿ, ವಿಡಂಬನಾ ಕವಿ ವಿ.ಜಿ. ಭಟ್, ಗಂಗಾಧರ ಚಿತ್ತಾಲ, ಬಿ.ಎ. ಸನದಿ, ಬಿ.ಎಸ್. ಕುರ್ಕಾಲ್, ಸುನೀತಾ ಶೆಟ್ಟಿ, ಜಿ.ವಿ. ಕುಲಕರ್ಣಿ, ಅರುಷಾ ಶೆಟ್ಟಿ, ಅಮಿತಾ ಭಾಗವತ್ ಮೊದಲಾದವರ ಕಾವ್ಯಗಳಲ್ಲಿ ರಾಜಕೀಯ ಪ್ರಜ್ಞೆ, ಮಣ್ಣಿನ ಸೆಳೆತ, ನಾಡು-ನುಡಿ, ವ್ಯಕ್ತಿತ್ವದ ಅನಾವರಣ, ಸಮ್ಮಿಶ್ರ ಭಾಷಾ ಸಂಸ್ಕೃತಿ, ಊರಿನಲ್ಲಿ ಆಗುತ್ತಿರುವ ಪಲ್ಲಟಗಳು ಪಡಿಮೂಡಿ ಬಂದಿರುವುದನ್ನು ಗುರುತಿಸಿದ್ದಾರೆ.
ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ. ಮುಂಬಯಿ ಮತ್ತು ಊರಿನ ಸಂಸ್ಕೃತಿಯನ್ನು ಲೇಖಕರು, ‘ಇದೊಂದು ತೆರೆದ ಸಂಸ್ಕೃತಿಯಾದರೆ ಅದೊಂದು ಮುಚ್ಚಿದ ಸಂಸ್ಕೃತಿ’ ಎಂದಿರುವುದು ಔಚಿತ್ಯಪೂರ್ಣವಾಗಿದೆ.
‘ಕನ್ನಡ ಕಾವ್ಯದಲ್ಲಿ ಮೊದಲ ಬಾರಿಗೆ ಪರಕೀಯತೆಯನ್ನು ಅನುಭವಿಸಿ ಅದನ್ನು ಕಾವ್ಯದ ಮೂಲಕ ವ್ಯಕ್ತಪಡಿಸಿದ ಕವಿಯೆಂದರೆ ಕುವೆಂಪು’ ಎಂದು ವಿಶ್ಲೇಷಿಸಿರುವ ಡಾ. ರಘುನಾಥ್ ಮುಂಬಯಿ ಕನ್ನಡ ಕಾವ್ಯದಲ್ಲಿ ಪರಕೀಯತೆಯ ಹಲವು ಮುಖಗಳನ್ನು ಕಂಡುಕೊಂಡಿದ್ದಾರೆ. ಅರವಿಂದ ನಾಡಕರ್ಣಿ ಅವರ ‘ಜರಾಸಂಧ’ದಲ್ಲಿ ಬರುವ ಕೌಟುಂಬಿಕ ಪರಕೀಯತೆಯಿಂದ ಮೊದಲ್ಗೊಂಡು ಪರಿಸರದ ಪರಕೀಯತೆ, ಸಾಂಸ್ಕೃತಿಕ ಪರಕೀಯತೆ, ನಿರುದ್ಯೋಗದ ಪರಕೀಯತೆ, ಸಮುದಾಯ ಪರಕೀಯತೆಗಳು ಮುಂಬಯಿ ಕನ್ನಡ ಕಾವ್ಯದಲ್ಲಿ ಪಡಿಮೂಡಿರುವ ಬಗ್ಗೆ ಸವಿವರವಾಗಿ ಗುರುತಿಸಿದ್ದಾರೆ.
ಮುಂಬಯಿ ಕನ್ನಡ ಕಾವ್ಯದಲ್ಲಿ ಸಂಘರ್ಷದ ಸ್ವರೂಪವನ್ನು ಮುಂದಿನ ಅಧ್ಯಾಯದಲ್ಲಿ ಕಾಣಬಹುದು. ಇಲ್ಲಿ ಲೇಖಕರು ಸ್ವದೊಡನೆ ಸಂಘರ್ಷ, ಮನುಷ್ಯ ಮತ್ತು ಸಮಾಜದೊಡನೆ ಸಂಘರ್ಷ, ಮನುಷ್ಯ ಮತ್ತು ವಿಧಿ, ಮನುಷ್ಯ ಮತ್ತು ನಿಸರ್ಗ, ಮನುಷ್ಯ ಮತ್ತು ತಂತ್ರಜ್ಞಾನ – ಎಂದು ಸಂಘರ್ಷದ ವಿಭಿನ್ನ ನೆಲೆಗಳನ್ನು ಗುರುತಿಸಿರುವುದು ಸಾಹಿತ್ಯದಲ್ಲಿ ನಗರ ಪ್ರಜ್ಞೆಗೆ ಹೊಸ ಆಯಾಮ ಕೊಡಲು ಸಹಕಾರಿಯಾಗಬಲ್ಲುದು. ಈ ಅಧ್ಯಾಯದಲ್ಲಿ ಭೌತಿಕ ಅಸ್ತಿತ್ವಕ್ಕಾಗಿ ನಡೆಸುವ ಸಂಘರ್ಷ, ಅಸ್ಮಿತೆಯ ಸಲುವಾಗಿನ ಸಂಘರ್ಷ ಹಾಗೂ ಮೌಲ್ಯಗಳ ಸಂಘರ್ಷಗಳ ಬಗ್ಗೆ ಕವಿತೆಗಳ ಆಧಾರದಿಂದ ಕಟ್ಟಿಕೊಡಲಾಗಿದೆ.
ಪರಕೀಯತೆ ಮತ್ತು ಸಂಘರ್ಷಗಳ ಪರಿಣಾಮಗಳನ್ನು ಮುಂದಿನ ಭಾಗದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ‘ಶಿವಸೇನೆ’ ಎಂಬ ರಾಜಕೀಯ ಪಕ್ಷದ ಉದಯ, ಕೋಮುವಾದ, ವಸತಿ ಸಮಸ್ಯೆ: ಅದರ ಪರಿಣಾಮ, ಜೋಪಡಾ ಪಟ್ಟಿಗಳು – ಇವೆಲ್ಲಕ್ಕೂ ಮುಂಬಯಿ ಕವಿಗಳು, ಅದರ ಪರಿಣಾಮವನ್ನು ತಮ್ಮ ಕವಿತೆಗಳಲ್ಲಿ ವಿವಿಧ ಬಗೆಯಲ್ಲಿ ಚಿತ್ರಿಸಿರುವುದನ್ನು ಸೋದಾಹರಣವಾಗಿ ಕಟ್ಟಿಕೊಡಲಾಗಿದೆ.
ನಗರೀಕರಣದಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಆಧುನಿಕ ಕನ್ನಡ ಕಾವ್ಯ ಮತ್ತು ಮುಂಬಯಿ ಕನ್ನಡ ಕಾವ್ಯಗಳು ಯಾವ ಪರ್ಯಾಯಗಳನ್ನು ಸೂಚಿಸಿವೆ ಎಂಬುವುದನ್ನು ಈ ಭಾಗದ ಏಳನೇ ಅಧ್ಯಾಯದಲ್ಲಿ ಕಾಣಬಹುದು. ‘ಹೋಗುವೆನು ನಾ ಮಲೆನಾಡಿಗೆ’ ಎಂದು ಹೇಳಿರುವ ಕವಿ ಕುವೆಂಪು, ‘ಕಾಡಿನ ಕವಿಯು ನಾನು’ ಎಂದು ಈ ಮೂಲಕ ನಾಗರಿಕ ಜಗತ್ತಿಗೆ ಪರ್ಯಾಯವಾಗಿ ನಿಸರ್ಗ ಸೃಷ್ಟಿಯನ್ನು ನಮ್ಮ ಮುಂದಿಟ್ಟಿರುವುದನ್ನು ಉಲ್ಲೇಖಿಸಿರುವ ಲೇಖಕರು ಸನದಿ, ನಾಡಕರ್ಣಿ, ಎ.ಕೆ. ರಾಮಾನುಜನ್, ಜಯಂತ ಕಾಯ್ಕಿಣಿ, ಕೆ.ಎಸ್.ನ., ಚಿತ್ತಾಲ ಮೊದಲಾದವರು: ‘ಹಸಿರು ಗ್ರಾಮಾಳಿ ಕರೆಯುತಿದೆ’, ‘ಹನೇ ಹಳ್ಳಿಗೆ ರೈಲೇ ಇಲ್ಲ’, ‘ಊರು ನಾನು ಮತ್ತು ಸಾವು’, ‘ಸಂಪರ್ಕ’, ‘ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು’ – ಮೊದಲಾಗಿ ಕೆಲವೊಂದು ಪರ್ಯಾಯಗಳ ಬಾಗಿಲು ಬಡಿದಿರುವುದನ್ನು ಸೋದಾಹರಣವಾಗಿ ಕಟ್ಟಿಕೊಟ್ಟಿದ್ದಾರೆ.
ಕೃತಿಯ ಭಾಗ – ೨ರಲ್ಲಿ ‘ಮುಂಬಯಿ ಕನ್ನಡ ದರ್ಶನ’ವನ್ನು ನಾವು ಕಾಣಬಹುದು. ಇಲ್ಲಿ ಚಿತ್ತಾಲರ ಸಾಹಿತ್ಯದಲ್ಲಿ ನಗರ ಪ್ರಜ್ಞೆ, ವ್ಯಾಸರಾಯ ಬಲ್ಲಾಳರ ಒಡನಾಟದ ಕ್ಷಣಗಳಿವೆ. ಮಣಿಮಾಲಿನಿ ಅವರ ದೃಷ್ಟಿ ಮತ್ತು ಸೃಷ್ಟಿ, ಗಿರಿಜಾ ಶಾಸ್ತ್ರಿ ಅವರ ಕಥಾಮಾನಸಿ, ಸುನೀತಾ ಶೆಟ್ಟಿ ಅವರ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ರೀ ಪಾತ್ರಗಳು ಮೊದಲಾದ ಕೃತಿಗಳ ಸಮೀಕ್ಷೆ, ಪರಿಚಯಗಳಿವೆ. ಕೆಲವೊಂದು ಕೃತಿಗಳ ಇತಿ ಮಿತಿಗಳನ್ನೂ ಈ ಭಾಗದಲ್ಲಿ ಲೇಖಕರು ಗುರುತಿಸಿದ್ದಾರೆ. ‘ಅಧ್ಯಯನ ವಸ್ತುನಿಷ್ಠ ದೃಷ್ಟಿಕೋನದಿಂದ ಮಾತ್ರ ಸಾಧ್ಯ’ ಎಂದಿರುವ ಲೇಖಕರ ಈ ನಿಲುವು ಕೃತಿಯುದ್ದಕ್ಕೂ ನಮಗೆ ಕಂಡುಬರುತ್ತದೆ.
ರಘುನಾಥರ ಗಂಭೀರವಾದ ಓದು, ಅಧ್ಯಯನಶೀಲತೆ, ಸಂಶೋಧನಾ ಪ್ರವೃತ್ತಿ, ಅಚ್ಚುಕಟ್ಟುತನ ಈ ಕೃತಿಯಲ್ಲಿ ಕಂಡುಬರುತ್ತದೆ. ಮುಂದೆ ಕನ್ನಡ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಬಗ್ಗೆ ಅಧ್ಯಯನ ಮಾಡುವವರಿಗೆ ಇದೊಂದು ಮಾದರಿ ಕೈಪಿಡಿ ಹಾಗೂ ಆಕರ ಗ್ರಂಥವಾಗಲಿದೆ.
(ಕೃತಿ: ಮುಂಬಯಿ ಕನ್ನಡ ಲೋಕ, ಲೇಖಕರು: ಕೆ. ರಘುನಾಥ್, ಪ್ರಕಾಶಕರು: ಜ್ಯೋತಿ ಪ್ರಕಾಶನ, ಪುಟಗಳು: 188, ಬೆಲೆ: 200/-)
ಮುಂಬೈ ನಿವಾಸಿಯಾಗಿರುವ ದಯಾನಂದ ಸಾಲ್ಯಾನ್ ಅವರು ಕವಿಯಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ‘ಜಾತ್ರೆಯ ಮರುದಿನ’ ಕವನ ಸಂಕಲನ, ಪೊಸ ಬೊಲ್ಪು ತುಳು ಕವಿತೆಗಳು, ‘ ಒಸರ್’ ತುಳು ನಾಟಕ, ಪಾಟಕ್ ಮತ್ತು ಇತರ ಕತೆಗಳು, ಇವರ ಪ್ರಕಟಿತ ಕೃತಿಗಳು. ‘ಸುರಭಿ’ ಸುರೇಶ್ ಭಂಡಾರಿಯವರ ಅಭಿನಂದನ ಗ್ರಂಥ ಸಂಪಾದನೆ ಮಾಡಿದ್ದು ಇವರ ಕವಿತೆಗಳಿಗೆ ಸಂಕ್ರಮಣ ಬಹುಮಾನ ಪಡೆದಿದ್ದಾರೆ.