ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ. ಎಂಟತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ.
ನಟ ಮುಖ್ಯಮಂತ್ರಿ ಚಂದ್ರು ಬರೆದ “ರಂಗವನದ ಚಂದ್ರತಾರೆ” ಆತ್ಮಕಥನದ ಕೆಲವು ಪುಟಗಳು ನಿಮ್ಮ ಓದಿಗೆ

ಆಕಸ್ಮಿಕವಾಗಿ ಕೈ ಹಿಡಿದ `ಮುಖ್ಯಮಂತ್ರಿ’ ನಾಟಕ

1980ರ ಡಿಸೆಂಬರ್ 4ರಿಂದ 10ರ ವರೆಗೆ `ಮುಖ್ಯಮಂತ್ರಿ’ ನಾಟಕದ ಸತತ ಪ್ರದರ್ಶನಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ಬಯಲು ರಂಗಮಂದಿರದಲ್ಲಿ ನಿಗದಿಯಾಗಿದ್ದವು.

1971ರಲ್ಲಿ ಆರಂಭವಾದ ಕಲಾಗಂಗೋತ್ರಿ ತಂಡದ ಪ್ರಮುಖ ನಾಟಕಗಳಲ್ಲಿ ಮುಖ್ಯಮಂತ್ರಿಯೂ ಒಂದು. ಇದರ ರೂವಾರಿ ಡಾ. ಬಿ.ವಿ. ರಾಜಾರಾಂ. ಈ ನಾಟಕವನ್ನು ಹುಡುಕಿ ತೆಗೆದುಕೊಂಡಿದ್ದಲ್ಲ. ಅದಾಗಲೇ ತಂಡ ಮೂರು ನಾಟಕಗಳನ್ನು ಮಾಡಿತ್ತು. ಗೆಳೆಯರೂ ಲೇಖಕರೂ ಆದ ಟಿ.ಎಸ್.ಲೋಹಿತಾಶ್ವ ಅವರು ಸಮುದಾಯ ತಂಡದಿಂದ ಜನಪ್ರಿಯ ನಟರಾಗಿದ್ದರು. ಆಗಾಗ ಸಮುದಾಯ ರಂಗತಂಡದಲ್ಲಿ ನಾನೂ ಪಾತ್ರ ಮಾಡುತ್ತಿದ್ದುದರಿಂದ ಲೋಹಿತಾಶ್ವ ಅವರೊಂದಿಗೆ ಗೆಳೆತನ ಬೆಳೆಯಿತು.

ಲೋಹಿತಾಶ್ವ ಅವರಿಗೆ ಖ್ಯಾತ ನಾಟಕಕಾರ ರಣಜಿತ್ ಕಪೂರ್ ವಿರಚಿತ ಹಿಂದಿಯ ಮುಖ್ಯಮಂತ್ರಿ ನಾಟಕದ ಮಾಹಿತಿ ಸಿಕ್ಕಿತು. ಇದರ ಪ್ರತಿಯನ್ನು ತರಿಸಿಕೊಂಡು ಓದಿ, ಆಸಕ್ತಿ ಹೆಚ್ಚಿಸಿಕೊಂಡು ಕನ್ನಡಕ್ಕೆ ಅನುವಾದಿಸಿ ಕನ್ನಡದಲ್ಲಿ ಕಲಾಗಂಗೋತ್ರಿ ತಂಡಕ್ಕೆ ಮಾಡಿಸುವ ಆಸೆ ವ್ಯಕ್ತಪಡಿಸಿದರು. ರಾಜಾರಾಂ ಅವರಿಗೆ ವರ್ಷಕ್ಕೆ 3-4 ನಾಟಕ ಪ್ರದರ್ಶಿಸುವ ಹುಚ್ಚಿತ್ತು. ಇದಕ್ಕಾಗಿ ಲೋಹಿತಾಶ್ವ ಅವರನ್ನು ನಾಟಕ ಓದಲು ಆಹ್ವಾನಿಸಿದರು.

ನಾನು, ರಾಜಾರಾಂ, ಶ್ರೀನಿವಾಸ ಮೇಷ್ಟ್ರು ಎದುರು ಲೋಹಿತಾಶ್ವ ಅವರು ನಾಟಕ ಓದಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ; ಲೋಹಿತಾಶ್ವ ಅವರು ಓದಿದ್ದು ಇಷ್ಟವಾಯಿತು. ಆದರೆ ನನಗೆ ನಾಟಕ ಅರ್ಥವಾಗಲಿಲ್ಲ. ಮೌನವಾಗಿದ್ದೆ. ರಾಜಾರಾಂ ಹಾಗೂ ಶ್ರೀನಿವಾಸ ಮೇಷ್ಟ್ರಿಗೆ ನಾಟಕ ಆಡುವ ಉಮೇದು ಬಂತು. ಅವರಿಬ್ಬರ ಸಹಮತಕ್ಕೆ ಒಪ್ಪಿದೆ. ಈ ನಾಟಕ ಹಿಂದಿಯಲ್ಲಿ ಅದಾಗಲೇ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪ್ರದರ್ಶನಗೊಂಡಿತ್ತು.

ಲೋಹಿತಾಶ್ವ ಅವರು ಪ್ರೀತಿಯಿಂದ ಕರಾರು ಹಾಕಿದರು. ನಿಮ್ಮ ತಂಡದಿಂದಲೇ ನಾಟಕ ಪ್ರದರ್ಶನಗೊಳ್ಳಲಿ. ಆದರೆ ನಾನು ಮುಖ್ಯಮಂತ್ರಿ ಪಾತ್ರ ಮಾಡುವೆ ಎಂದರು. ಲೋಹಿತಾಶ್ವ ಅವರು ಮುಖ್ಯಮಂತ್ರಿ ಪಾತ್ರ ಹಾಗೂ ರಾಜಾರಾಂ ಅವರು ಪಕ್ಷದ ಅಧ್ಯಕ್ಷ ಪಾತ್ರ ಮಾಡಿದರೆ ಸೂಕ್ತ. ನಾನು ನಿರ್ದೇಶನ ಮಾಡುವೆ ಎಂದೆ. ಇದೆಲ್ಲ ನಡೆದುದು 1980ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಡಿಡಿಎಂ ವಿಭಾಗದ ಬಸ್ ಗ್ಯಾರೇಜಿನಲ್ಲಿ 45 ದಿನಗಳವರೆಗೆ ತಾಲೀಮು ನಡೆಯಿತು. ನಾಟಕದ ಪ್ರದರ್ಶನ ಇನ್ನು ಹತ್ತು ದಿನಗಳಿರುವಾಗ ನನಗೆ ಹಾಗೂ ಲೋಹಿತಾಶ್ವ ಅವರಿಗೆ ಜ್ವರ ಬಂತು. ಆಗ ಲೋಹಿತಾಶ್ವ ಅವರು ತುಮಕೂರಿನಿಂದ ನಿತ್ಯ ಬಂದು ಹೋಗುತ್ತಿದ್ದರು. ಜ್ವರ ಬಂದಾಗ ರಜೆ ಹಾಕಿ ಬೆಂಗಳೂರಿನ ಲಾಡ್ಜ್‍ನಲ್ಲಿ ಉಳಿದರು. ಅವರೊಂದಿಗೆ ನಾಟಕದ ಕುರಿತು ಚರ್ಚಿಸಲು ಅವರ ರೂಮಲ್ಲೇ ಉಳಿಯುತ್ತಿದ್ದೆ. 3-4 ದಿನಗಳಾದ ನಂತರ ನಾನು ವಾಸಿಯಾದೆ. ಆದರೆ ಲೋಹಿತಾಶ್ವ ಅವರಿಗೆ ಟೈಫಯ್ಡ್ ಆಗಿತ್ತು. ಈ ಸ್ಥಿತಿಯಲ್ಲಿ ಅವರು ಪಾತ್ರ ಮಾಡುವ ಹಾಗಿರಲಿಲ್ಲ. ರಾಜಾರಾಂ ಅವರೊಂದಿಗೆ ಚರ್ಚಿಸಿದ ನಂತರ ನಾಟಕದ ಪ್ರದರ್ಶನವನ್ನು ಮುಂದೂಡೋಣವೆಂದು ಲೋಹಿತಾಶ್ವ ಅವರಿಗೆ ಹೇಳಿದೆವು. ಅವರು ಒಪ್ಪದೆ, ಯಾರ ಕೈಲಾದರೂ ನನ್ನ ಪಾತ್ರ ಮಾಡಿಸಿ, ನಾಟಕ ನಿಲ್ಲುವುದು ಬೇಡ ಎಂದು ಹಟ ಹಿಡಿದರು. ಅಲ್ಲದೆ ಮುಂದೆ `ನಾನೇ ಮಾಡುವೆ’ ಎಂದರು.

ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ. ಎಂಟತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ. ಅದು ಲೋಹಿತಾಶ್ವ ಅವರ ಹಾಗೆ ನನಗೆ ಪಾತ್ರ ಮಾಡಲಾಗದು. ನನ್ನದೇ ಛಾಪು ಮೂಡಿಸುವೆ. ಸಂಭಾಷಣೆ ಮರೆತರೂ ಮತ್ತೇನೋ ಸೇರಿಸಿಕೊಂಡು ನಾಟಕ ಮುಗಿಸುವೆ. ಚೆನ್ನಾಗಿ ಬಂದರೆ ನನ್ನ ಅದೃಷ್ಟ, ಚೆನ್ನಾಗಿ ಬರದಿದ್ದರೆ ನಿಮ್ಮ ದುರದೃಷ್ಟ ಎಂದೆ. ಒಪ್ಪಿದರು. ಇದೆಲ್ಲವೂ ಲೋಹಿತಾಶ್ವ ಅವರ ಒಪ್ಪಿಗೆ ಮೇರೆಗೆ ನಡೆಯಿತು.

ಹೇಗೋ ನಾಟಕ ಮುಗಿಸಬೇಕೆಂಬ ಆತುರದಲ್ಲಿದ್ದೆವು. ಪೋಸ್ಟರ್ ಹಂಚಲಾಗಿತ್ತು, ಪ್ರಚಾರ ಬಿರುಸಾಗಿತ್ತು. ರಂಗತಂಡಗಳಲ್ಲಿ ಕುತೂಹಲ ಹೆಚ್ಚಿತ್ತು. ಆದರೆ ಅನಿರೀಕ್ಷಿತವಾಗಿ ಆಗ ನಾಟಕ ನಿಲ್ಲಿಸುವಂಥ ಪರಿಸ್ಥಿತಿ ಬಂತು. ಹೇಗೆಂದರೆ ಪ್ರೇಮಾ ಕಾರಂತರು ಹೇಳಿಕೆಯೊಂದು ನೀಡಿದ್ದರು – ಈ ನಾಟಕವನ್ನು ನಾನು ಮಾಡಿಸುತ್ತಿರುವೆ. ಎನ್‍ಎಸ್‍ಡಿ ಸ್ಕ್ರಿಪ್ಟ್, ಎಲ್ಲವೂ ತೀರ್ಮಾನವಾಗಿದೆ ಎಂದು. ಜೊತೆಗೆ ನಾಟಕ ನಿಲ್ಲಿಸಲು ಕಾನೂನಿನ ಪ್ರಕಾರ ಯತ್ನಿಸುತ್ತಾರೆನ್ನುವ ಸುದ್ದಿ ಹರಡಿತು. ಆದರೆ ನಾಟಕ ಪ್ರದರ್ಶನಕ್ಕೆ ಎರಡು ದಿನಗಳು ಬಾಕಿ ಇತ್ತು. ಅತ್ತ ಲೋಹಿತಾಶ್ವ ಅವರಿಗೆ ಅನಾರೋಗ್ಯ. ಇತ್ತ ಪ್ರೇಮಾ ಕಾರಂತರ ಹೇಳಿಕೆ. ಅವರು ನಾಟಕಕ್ಕೆ ತಡೆಯಾಜ್ಞೆ ತರುತ್ತಾರೆಂಬ ಆತಂಕ. ಇದರೊಂದಿಗೆ ಡಿಸೆಂಬರ್ ಚಳಿ, ಮಳೆ ಬರಬಹುದೆಂಬ ಸೂಚನೆ ಇತ್ತು. ಜೊತೆಗೆ ನಾಟಕಕ್ಕೆ ನಾನು ಪೂರ್ತಿ ತಯಾರಾಗಿರಲಿಲ್ಲ. ಹೀಗಿದ್ದಾಗ ಯಾವುದೇ ರೀತಿಯಲ್ಲಿ ನಾಟಕ ಪ್ರದರ್ಶನ ನಿಂತರೆ ಒಳ್ಳೆಯದೆ, ನಾವೇ ನಿಲ್ಲಿಸಿದೆವೆಂಬ ಅಪವಾದದಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಅನುಕಂಪವೂ ಸಿಗಬಹುದು ಎಂದುಕೊಂಡು ಕೊನೆಯ ಪ್ರಯತ್ನವೆಂದು ರಾಜಾರಾಂ ಅವರೊಂದಿಗೆ ಬಿ.ವಿ.ಕಾರಂತರ ಮನೆಗೆ ಹೋದೆವು. ಅಲ್ಲಿ ಪ್ರೇಮಾ ಕಾರಂತರ ಭೇಟಿಯೂ ಆಯಿತು. ಆರಂಭದಲ್ಲಿ ಸೌಜನ್ಯದ ಮಾತಿನ ನಂತರ ಪ್ರೇಮಾ ಅವರು `ನಿಮಗೆ ಯಾರು ಪರವಾನಗಿ ಕೊಟ್ಟಿದ್ದು? ನಾನು ಎನ್‍ಎಸ್‍ಡಿಯವಳು. ಇದು ಎನ್‍ಎಸ್‍ಡಿ ನಾಟಕ. ನಿಮಗೆ ಯಾರು ಸ್ಕ್ರಿಪ್ಟ್ ಕೊಟ್ಟಿದ್ದು? ಇದರ ಪರಿಣಾಮ ಏನಾಗುತ್ತೆ ಗೊತ್ತಾ ನಿಮಗೆ?’ ಎಂದು ಗುಡುಗಿದರು. ನಾವು ಸೌಜನ್ಯದಿಂದ `ಸಿಟ್ಟು ಮಾಡಿಕೊಳ್ಳಬೇಡಿ ಮೇಡಮ್. ನೀವು ನಾಟಕ ಆಡಿಸುವ ಮಾಹಿತಿ ನಮಗೆ ಇರಲಿಲ್ಲ. ಸ್ವಲ್ಪ ಮುಂಚೆ ತಿಳಿಸಿದ್ದರೆ ನಿಲ್ಲಿಸುತ್ತಿದ್ದೆವು. ಎರಡೇ ದಿನದಲ್ಲಿ ಪ್ರದರ್ಶನವಿದೆ. ಈಗ ಹೇಗೆ ನಿಲ್ಲಿಸೋದು? ಈ ಪ್ರದರ್ಶನದ ನಂತರ ನೀವೂ ಮಾಡಿಸಿ’ ಎಂದೆವು. ಅವರು ಜಗ್ಗಲಿಲ್ಲ, ಬಗ್ಗಲಿಲ್ಲ. ರಾಜಾರಾಂ ಮನಸ್ಸಿನಲ್ಲಿ ಏನಾದರಾಗಲಿ ನಾಟಕ ಮಾಡೋಣವೆಂದು. ನನ್ನ ಮನದೊಳಗೆ ಏನೇ ಆಗಲಿ, ನಾಟಕ ನಿಲ್ಲಲಿ ಎನ್ನುವುದು. ಇಷ್ಟರಲ್ಲಿ ಬಿ.ವಿ.ಕಾರಂತರಿಗೆ ಗೊತ್ತಾಗಿ ಅವರೂ ಮಾತುಕತೆಯಲ್ಲಿ ಭಾಗಿಯಾದರು. `ನಾಟಕ ಆಡುವ ಕುರಿತು ತಿಳಿಸಬೇಕಿತ್ತು. ಥಿಯೇಟರ್ ಕುರಿತು ಎಥಿಕ್ಸ್ ಇರಬೇಕಿತ್ತು. ಪ್ರೇಮಾ ನಿನಗೂ ಬುದ್ಧಿಯಿಲ್ಲ. ಅವರು ನಾಟಕ ಆಡಲಿ. ನೀನೂ ನಾಟಕ ಮಾಡಿಸು. ಸದ್ಯ ಅವರು ನಾಟಕ ಪ್ರದರ್ಶಿಸಲಿ. ಇಬ್ಬರೂ ಕುಳಿತು ನಾಟಕ ನೋಡೋಣ’ ಎಂದು ಹಾರೈಸಿದರು. ಆಗ ದುಃಖವಾಗಿದ್ದು ನಂಗೆ. ನಾಟಕ ಆಡಬೇಕಾದ ಅನಿವಾರ್ಯತೆಗೆ. ನಂತರ ಹಗಲುರಾತ್ರಿ ಶ್ರೀನಿವಾಸ ಮೇಷ್ಟ್ರು, ರಾಜಾರಾಂ ಅವರು ವಿಶ್ವಾಸ ತುಂಬಿ, ನಾಟಕದ ಸಂಭಾಷಣೆ ಹೇಳಿಕೊಟ್ಟರು.

ಆಶ್ಚರ್ಯವೆಂದರೆ ನಾಟಕ ಪ್ರದರ್ಶನದ ಏಳೂ ದಿನಗಳ ಟಿಕೆಟುಗಳು ಮಾರಾಟವಾಗಿದ್ದವು. ನಾಟಕದ ಶೀರ್ಷಿಕೆಯೇ ಆಕರ್ಷಕವಾಗಿತ್ತು. ಆದರೆ ನನಗಿನ್ನೂ ಆಸೆಯಿತ್ತು. ಮೋಡಕವಿದ ವಾತಾವರಣವಿದ್ದು, ನಾಟಕದ ದಿನ ಮಳೆ ಬರುತ್ತದೆನ್ನುವ ನಂಬಿಕೆ. ಆದರೆ ಎಲ್ಲವೂ ಸುಳ್ಳಾಯಿತು. ರಂಗಕ್ಕೆ ಹೋಗುವುದು ದಿಟವಾಯಿತು. ಆರಂಭದ ದೃಶ್ಯದಿಂದ ಹಿಡಿದು ಕೊನೆಯವರೆಗೂ ಬಹುತೇಕ ನಾಟಕದ ಮಾತುಗಳನ್ನು ಮರೆತು ಸಂದರ್ಭೋಚಿತವಾಗಿ ನನ್ನ ಮಾತುಗಳನ್ನು ಸೇರಿಸಿ, ಹಾಸ್ಯಲೇಪನ ಮಾಡಿ ನಾಟಕ ಮುಗಿಸಿದೆ. ಅಂತೂ ಕ್ಲಿಕ್ ಆಯಿತು. ಗಂಭೀರವಾದ, ರಾಜಕೀಯ ಕುರಿತ ನಾಟಕವು ನನ್ನ ತಪ್ಪಿನಿಂದ ಹಾಸ್ಯಭರಿತ ನಾಟಕವಾಗಿ ಪ್ರದರ್ಶನ ಕಂಡಿತು. ಇದರಿಂದ ನಾಟಕದ ನಡುವೆ ನಗುವಿನ ಅಲೆ. ಮುಗಿದ ಮೇಲೆ ಚಪ್ಪಾಳೆಗಳ ಸುರಿಮಳೆ. ಇದು ಒಂದು ಪ್ರಯೋಗಕ್ಕಲ್ಲ, ಎಲ್ಲ ಪ್ರದರ್ಶನಗಳಿಗೂ ಸಿಕ್ಕಿತು.

ನಾಟಕದ ಕುರಿತು ಎಲ್ಲ ಪತ್ರಿಕೆಗಳಲ್ಲಿ ಒಳ್ಳೆಯ ಸದ್ದಾಯಿತು. ಪ್ರಶಂಸೆಯ ಸುರಿಮಳೆ. ಮೊದಲ ಪ್ರದರ್ಶನಕ್ಕೆ ಬಂದಿದ್ದ ಲೋಹಿತಾಶ್ವ ಅವರು ಬೆನ್ನು ತಟ್ಟಿದರು. ನಂತರ ಅವರು `ಒಂದು ಮಾತು’ ಎಂದರು. ಏನು ಎಂದು ಅವರತ್ತ ನೋಡಿದೆವು. `ಇದು ನಾನು ಬರೆದ ನಾಟಕವಲ್ಲ. ನಿಮ್ಮಿಷ್ಟದ ನಾಟಕ. ತುಂಬಾ ಗಂಭೀರವಾದ ನಾಟಕವನ್ನು ಕೊಂದಿದ್ದೀರಿ. ಆದರೆ ಪಂಚ್ ಡೈಲಾಗ್ ಮೂಲಕ ಚಪ್ಪಾಳೆ ಹೊಡೆಸಿಕೊಂಡಿದ್ದೀರಿ. ಜನ ಮೆಚ್ಚಿದ್ದು, ಮುಂದುವರಿಸಿಕೊಂಡು ಹೋಗಿ’ ಎಂದು ಹೇಳಿದರು.

`ಮುಂದೆ ನೀವೇ ಮಾಡಬೇಕಲ್ಲ?’ ಎಂದೆ. `ಈ ರೀತಿ ಮಾಡಲು ನನ್ನಿಂದ ಸಾಧ್ಯವಿಲ್ಲ. ಮಾಡುವುದೂ ಇಲ್ಲ. ನೀವೆ ಮುಂದುವರಿಸಿ, ಒಳ್ಳೆಯದಾಗಲಿ’ ಎಂದು ಹಾರೈಸಿದರು.

ನಾಟಕದ ಪ್ರದರ್ಶನ ಇನ್ನು ಹತ್ತು ದಿನಗಳಿರುವಾಗ ನನಗೆ ಹಾಗೂ ಲೋಹಿತಾಶ್ವ ಅವರಿಗೆ ಜ್ವರ ಬಂತು. ಆಗ ಲೋಹಿತಾಶ್ವ ಅವರು ತುಮಕೂರಿನಿಂದ ನಿತ್ಯ ಬಂದು ಹೋಗುತ್ತಿದ್ದರು. ಜ್ವರ ಬಂದಾಗ ರಜೆ ಹಾಕಿ ಬೆಂಗಳೂರಿನ ಲಾಡ್ಜ್‍ನಲ್ಲಿ ಉಳಿದರು. ಅವರೊಂದಿಗೆ ನಾಟಕದ ಕುರಿತು ಚರ್ಚಿಸಲು ಅವರ ರೂಮಲ್ಲೇ ಉಳಿಯುತ್ತಿದ್ದೆ. 3-4 ದಿನಗಳಾದ ನಂತರ ನಾನು ವಾಸಿಯಾದೆ. ಆದರೆ ಲೋಹಿತಾಶ್ವ ಅವರಿಗೆ ಟೈಫಯ್ಡ್ ಆಗಿತ್ತು.

ಬಿ.ವಿ.ಕಾರಂತರು, ಪ್ರೇಮಾ ಕಾರಂತರು ನಾಟಕವನ್ನು ಪೂರ್ಣ ನೋಡಿ ರಂಗದ ಮೇಲೆ ಬಂದು ಮೆಚ್ಚುಗೆಯಾಡಿ ನಿಲ್ಲಿಸಬೇಡಿ, ಮುಂದುವರಿಸಿ ಎಂದರು. ಅಲ್ಲದೆ ಬಿ.ವಿ.ಕಾರಂತರು ಪ್ರೇಮಾ ಅವರಿಗೆ `ನಿಂದೇನಾದರೂ ತಕರಾರು ಇದೆಯಾ?’ ಎಂದು ಕೇಳಿದರು. ನಗುತ್ತ ಅವರು `ಚೆನ್ನಾಗಿದೆ. ಜನ ಮೆಚ್ಚಿದ್ದಾರೆ. ನೀವೇ ಮಾಡಿ’ ಎಂದು ಬೆನ್ನು ತಟ್ಟಿದರು. ಹವ್ಯಾಸಿ ತಂಡಗಳ ಕಲಾವಿದರು ವೀಕ್ಷಿಸಿ ಅನಿವಾರ್ಯವಾಗಿ ಸಂತೋಷಪಡುವಂತಾಯಿತು.

1981ರ ಏಪ್ರಿಲ್ 1 ಹಾಗೂ 2ರಂದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯವರು ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ನಾಟಕೋತ್ಸವ ಏರ್ಪಡಿಸಿದ್ದರು. ಮುಖ್ಯವಾಗಿ ಹಿಂದಿಯ ಅದರಲ್ಲೂ ಎನ್‍ಎಸ್‍ಡಿಯ ಮುಖ್ಯಮಂತ್ರಿ ನಾಟಕ ನಮ್ಮ ನಾಟಕಕ್ಕಿಂತ ಚೆನ್ನಾಗಿತ್ತು. ನಮ್ಮದು ಎರಡು ಗಂಟೆಯ ಅವಧಿಯದ್ದಾದರೆ ಅವರದು ಮೂರು ಗಂಟೆಯದು. ರಾಜಕೀಯ ತಲ್ಲಣವನ್ನು ಗಂಭೀರವಾಗಿ ಕೊಂಡೊಯ್ದು ಮುಗಿಸಿದ್ದರು. ನಗುವುದಕ್ಕೆ ಎಲ್ಲೂ ಆಸ್ಪದವಿರಲಿಲ್ಲ. ನಮ್ಮ ಇಡೀ ತಂಡ ನಾಟಕ ನೋಡಿತು. ಅವರದು ರಿಯಲಿಸ್ಟಿಕ್ ರಂಗ ಪರಿಕರವಾದರೆ ನಮ್ಮದು ನಾಟಕೀಯ ರಂಗ ಪರಿಕರವಿತ್ತು. ಬಿ.ವಿ.ಕಾರಂತರು ದೆಹಲಿ ತಂಡಕ್ಕೆ ನಮ್ಮ ನಾಟಕ ತೋರಿಸಲು ಹೇಳಿದರು. ಹೇಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವನ್ನು ನಾಟಕವಾಡಲು ಕಾದಿರಿಸಿದ್ದೆವು. ಇದರಲ್ಲೇ ಅವರಿಗೆ ಬಿಟ್ಟುಕೊಟ್ಟೆವು. ಮಾರನೆಯ ಬೆಳಿಗ್ಗೆ ನಮ್ಮ ನಾಟಕ ಪ್ರದರ್ಶಿಸಿದೆವು. ನಾಟಕ ನೋಡಿದ ಆ ಇಡೀ ತಂಡ ಬೆರಗಾಯಿತು. ಅವರೊಂದಿಗೆ ನಮ್ಮ ಕನ್ನಡದ ಪ್ರೇಕ್ಷಕರು ನಾಟಕ ನೋಡಲು ಅವಕಾಶ ನೀಡಿದ್ದೆವು. ಯಾಕೆ ಇಷ್ಟೊಂದು ನಗುತ್ತಾರೆಂದು ಅವರಿಗೆ ಅಚ್ಚರಿ. ನಾಟಕದ ನಂತರ ನಮ್ಮದು ಗಂಭೀರ. ನಿಮ್ಮದು ಮನರಂಜನೀಯ ಎಂದು ನಕ್ಕರು. ರಂಗಕರ್ಮಿ ಜಿ.ವಿ.ಶಿವಾನಂದ್ ಅವರ ಪುತ್ರಿ ಪದ್ಮಶ್ರೀ, ಅವರ ಪತಿ ಜೋಸೆಲ್ಕರ್ ಅವರು ಕೈ ಮುಗಿದು, `ಮಾತು ಅರ್ಥವಾಗಲಿಲ್ಲ. ಆದರೆ ನಿಮ್ಮ ಅಭಿನಯ ಅಮೋಘ, ಅದ್ಭುತ’ ಎಂದರು. ಹಿಂದಿಯಲ್ಲಿ ಅವರು ಮುಖ್ಯಮಂತ್ರಿ ಪಾತ್ರ ಮಾಡಿದ್ದರು.

ಈ ನಾಟಕದ ಮೂಲ ರಚನೆಕಾರ ರಣಜಿತ್ ಕಪೂರ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಬಿ.ವಿ.ರಾಜಾರಾಂ, ನಾನು ಹಾಗೂ ಇತರರು ಭೇಟಿಯಾಗಿ ಪರವಾನಗಿ ಪಡೆಯದೆ ನಾಟಕ ಮಾಡಿದ್ದಕ್ಕೆ ಕ್ಷಮೆ ಕೇಳಿದೆವು. ನಂತರ ಗೌರವಧನ ನೀಡಿ ಮುಂದೆ ಪ್ರದರ್ಶಿಸಲು ಅವಕಾಶ ಕೇಳಿದೆವು.

ಮುಖ್ಯಮಂತ್ರಿ ಪಾತ್ರವನ್ನು ನಾನೇ ಮಾಡಬೇಕೆಂದು ತೀರ್ಮಾನವಾದಾಗ ಉಳಿದ ಮುಂದಿನ ದಿನಗಳಲ್ಲಿ ಗೌರವ ಉಳಿಸಿಕೊಳ್ಳಲು ಗಂಭೀರವಾಗಿ ತೆಗೆದುಕೊಂಡೆ. ಪಾತ್ರಕ್ಕೆ ಒಂದು ರೂಪ ಕೊಡಲು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಪೈಕಿ ದೇವರಾಜ ಅರಸು ಅವರು ಈ ಪಾತ್ರಕ್ಕೆ ಹೆಚ್ಚು ಹೋಲಿಕೆಯಾಗುತ್ತಾರೆಂದು ಭಾವಿಸಿ ಅವರ ನಡೆ, ನುಡಿ ಅಳವಡಿಸಿಕೊಂಡೆ. ಕಚ್ಚೆ ಪಂಚೆ, ಉದ್ದನೆಯ ಜುಬ್ಬ, ಮೇಲೊಂದು ಶಾಲು, ಧೀಮಂತವಾಗಿ ನಿಲ್ಲುವ ಎದೆಗಾರಿಕೆ, ನಿಷ್ಠುರವಾದಿ, ಸಾಹಿತ್ಯಾಭಿಮಾನಿ – ಈ ಎಲ್ಲ ಗುಣಗಳು ಮುಖ್ಯಮಂತ್ರಿ ಪಾತ್ರಕ್ಕಿದ್ದವು.

ಈ ಪಾತ್ರ ಗೆದ್ದ ನಂತರ ಅದುವರೆಗೆ ಬೆಂಗಳೂರಿನ ರಂಗತಂಡಗಳಲ್ಲಿ ಐದಾರು ಚಂದ್ರುಗಳಿದ್ದರು. ಗುರುತಿಸಲು ಮುಖ್ಯಮಂತ್ರಿ ಪಾತ್ರದ ಚಂದ್ರು ಎಂದು ಬರೆಯುತ್ತಿದ್ದ ಪತ್ರಿಕೆಗಳವರು ಮುಖ್ಯಮಂತ್ರಿ ಚಂದ್ರು ಎಂದು ಪ್ರಕಟಿಸಿದರು. ಅದೇ ಹೆಸರು ಉಳಿಯಿತು. ಈ ನಾಟಕದ ಬಲದಿಂದಲೇ ಶಾಸಕನಾಗಿದ್ದು ಇತಿಹಾಸ.

ಶಾಲಾ ಕಟ್ಟಡಗಳಿಗೆ ನೆರವಾದ ನಾಟಕ

ತುಂಬಾ ಸಂತೋಷ ಕೊಡುವ ವಿಷಯವೆಂದರೆ, ಮುಖ್ಯಮಂತ್ರಿ ನಾಟಕದಿಂದ ವಿವಿಧ ರೀತಿಯಲ್ಲಿ ಸಹಾಯ ಮಾಡಿದೆ. ಶಾಸಕನಾಗಿದ್ದಾಗ ಗೌರಿಬಿದನೂರು ತಾಲ್ಲೂಕಿನಲ್ಲಿ 26 ಸ್ಥಳಗಳಲ್ಲಿ ಕಟ್ಟಡರಹಿತ ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದವು. ಮರದಡಿ, ದೇವಸ್ಥಾನ, ಸಮುದಾಯ ಭವನಗಳಲ್ಲಿ ಶಾಲೆಗಳು ನಡೆಯುತ್ತಿದ್ದವು. ಇಂಥ ಕಡೆ ಕಟ್ಟಡಕ್ಕೆ ಒಂದೇ ಬಾರಿ ಮಂಜೂರಾತಿ ಕಷ್ಟವಿತ್ತು. ಇದನ್ನು ಮನಗಂಡ ನಾನಾಗ ಯುವಕ, ಉತ್ಸಾಹಿ. ರಾಜಕೀಯ ಪಟ್ಟುಗಳು ಗೊತ್ತಿಲ್ಲದಿದ್ದರೂ ನಟನೆಯ ಜನಪ್ರಿಯತೆಯನ್ನು ಬಳಸಿಕೊಂಡೆ. ಇದಕ್ಕಾಗಿ ಗೌರಿಬಿದನೂರಲ್ಲಿ ವಿಷ್ಣುವರ್ಧನ್, ಅಂಬರೀಷ್, ಶಿವರಾಜಕುಮಾರ್, ರವಿಚಂದ್ರನ್, ಅರವಿಂದ್ ರಮೇಶ್, ಶ್ರೀನಾಥ್, ತಾರಾ, ಪ್ರೇಮಾ, ಶ್ರುತಿ ಸೇರಿದಂತೆ ಮೂವತ್ತಕ್ಕೂ ಅಧಿಕ ಸಿನಿಮಾ ಕಲಾವಿದರನ್ನು ಕರೆದೊಯ್ದು ವಿವಿಧ ಮನರಂಜನೆಯ ಸ್ಟಾರ್ ನೈಟ್ ಎಂಬ ಟಿಕೆಟ್‍ಸಹಿತ ಕಾರ್ಯಕ್ರಮ ಏರ್ಪಡಿಸಿದೆವು.

ಇನ್ನೊಂದು; ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‍ನಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶಿಸಿ ಟಿಕೆಟ್‍ವೊಂದಕ್ಕೆ 500, ಒಂದು ಸಾವಿರ ರೂಪಾಯಿ ಮಾರಾಟ ಮಾಡಿ ಪ್ರದರ್ಶಿಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಅಧ್ಯಕ್ಷತೆಯಲ್ಲಿ, ಆಗ ಲೋಕೋಪಯೋಗಿ ಸಚಿವರಾಗಿದ್ದ ದೇವೇಗೌಡರು ಸೇರಿದಂತೆ ಅನೇಕ ಸಚಿವರು ಭಾಗವಹಿಸಿದ್ದರು. ಡಾ.ರಾಜಕುಮಾರ್ ದಂಪತಿಯೂ ಪಾಲ್ಗೊಂಡಿದ್ದರು.

ಈ ಎರಡೂ ಕಾರ್ಯಕ್ರಮಗಳಿಂದ ಅಂದಿನ ಕಾಲಕ್ಕೆ ಸುಮಾರು ಏಳು ಲಕ್ಷ ರೂಪಾಯಿ ಸಂಗ್ರಹವಾಯಿತು. ಗಮನಾರ್ಹವಾದುದು; ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು 25 ಸಾವಿರ ರೂಪಾಯಿಗಳ ಟಿಕೆಟುಗಳನ್ನು, ನಟ ಅಂಬರೀಷ್ ಅವರೂ 25 ಸಾವಿರ ರೂಪಾಯಿಯ ಟಿಕೆಟುಗಳನ್ನು ಕೊಂಡರು. ಅಲ್ಲದೆ ಅಂಬರೀಷ್ ಅವರು ಸ್ಟಾರ್ ನೈಟ್‍ಗೆ ಮೂವತ್ತು ಕಲಾವಿದರನ್ನು ತಮ್ಮ ವೆಚ್ಚದಲ್ಲೇ ಕರೆತಂದಿದ್ದರು. ಹೀಗೆ ಸಂಗ್ರಹವಾದ ಏಳು ಲಕ್ಷ ರೂಪಾಯಿ ದುಡ್ಡಿನಿಂದ ಗೌರಿಬಿದನೂರು ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸಮಿತಿ ರಚಿಸಿ ನಿಗದಿತ ಅವಧಿಯಲ್ಲಿ 26 ಶಾಲೆಗಳ ಕಟ್ಟಡಗಳನ್ನು ಪೂರ್ಣಗೊಳಿಸಿದ ತೃಪ್ತಿಯಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ನಮ್ಮ ಸಾದರ ಸಮಾಜದ ಸಂಘದ ಕಟ್ಟಡದ ಸಹಾಯಾರ್ಥ ಮುಖ್ಯಮಂತ್ರಿ ನಾಟಕವನ್ನು ಪ್ರದರ್ಶಿಸಿ ನೆರವಾದೆವು. ಆಮೇಲೆ ಬಡವರ ಮದುವೆಗಳಿಗೆ, ಕಲಾವಿದರ ಕಷ್ಟಕ್ಕೆ, ವೈದ್ಯಕೀಯ ಸೇವೆಗೆ, ರಂಗಭೂಮಿಯ ತಾಂತ್ರಿಕ ವರ್ಗದವರ ನೆರವಿಗೆ, ಶಿಕ್ಷಣ ಸಂಸ್ಥೆಗಳಿಗೆ, ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕೆ ಮುಖ್ಯಮಂತ್ರಿ ನಾಟಕ ಪ್ರದರ್ಶನ ನೀಡಿ, ಟಿಕೆಟ್ ಮೂಲಕ ದುಡ್ಡು ಸಂಗ್ರಹಿಸಿಕೊಟ್ಟಿದ್ದೇವೆ. ನಲವತ್ತಕ್ಕೂ ಹೆಚ್ಚು ಕಡೆ ಹೀಗೆ ನೆರವಾದ ಖುಷಿಯಿದೆ.

ಒಂದೇ ದಿನ ಎರಡು ಪ್ರದರ್ಶನ

ಬೆಳಗಾವಿಯಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನ ನಿಗದಿಯಾಗಿತ್ತು. ಇಷ್ಟೊತ್ತಿಗೆ ನಾನು ಶಾಸಕನಾಗಿ, ಜನಪ್ರಿಯ ನಟನಾಗಿ, ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತ ಹೀಗೆ ಒತ್ತಡದಲ್ಲಿ ಕೆಲಸ ಮಾಡುವಾಗಲೂ ರಂಗಭೂಮಿ ಮೇಲಿನ ಅಪಾರ ಪ್ರೀತಿಯಿಂದ ನಾಟಕ ಒಪ್ಪಿಕೊಂಡಿದ್ದೆ. ದೂರದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದರೂ ನಾಟಕವಾಡುತ್ತಿದ್ದೆ. ಹೀಗೆ ಬೆಳಗಾವಿಯಲ್ಲಿನ ಪ್ರದರ್ಶನಕ್ಕೆ ಮುನ್ನಾದಿನ ಚಿಕ್ಕಮಗಳೂರಿನಲ್ಲಿ ಸಿನಿಮಾವೊಂದರ ಶೂಟಿಂಗ್‍ದಿಂದ ಬಿಡಿಸಿಕೊಂಡು ರಾತ್ರಿ ಪ್ರಯಾಣಿಸಿ ಬೆಳಗಾವಿ ತಲುಪಿದೆ. ನಾಟಕದ ನಂತರ ರಾತ್ರೋರಾತ್ರಿ ಚಿಕ್ಕಮಗಳೂರು ತಲುಪಬೇಕಿತ್ತು. ನಮ್ಮ ತಂಡ ಬೆಂಗಳೂರಿನಿಂದ ಪ್ರದರ್ಶನದ ಹಿಂದಿನ ದಿನ ಮೆಟಾಡೋರ್ ವಾಹನದಲ್ಲಿ ಹೊರಟು ಬೆಳಗಾವಿ ತಲುಪಿತ್ತು. ಬೆಳಿಗ್ಗೆ ತಂಡ ಸೇರಿಕೊಂಡೆ. ತಂಡದವರಿಗೆ ಮತ್ತು ನನಗೆ ಸರಿಯಾಗಿ ನಿದ್ದೆಯಿರಲಿಲ್ಲ. ಮೈಕೈ ನೋವು, ಸುಸ್ತು ಇತ್ತು. ಆದರೂ ನಿದ್ದೆ ಮಾಡದೆ ತಾಲೀಮು ನಡೆಸಿದೆವು. ಇದರ ಮಧ್ಯೆ ಕಾಯಂ ಆಗಿ ಪಾತ್ರ ಮಾಡುತ್ತಿದ್ದ ಕೆಲ ಕಲಾವಿದರು ಗೈರುಹಾಜರಿಯಿಂದಾಗಿ ಹೊಸ ಕಲಾವಿದರಿದ್ದರು. ಹೀಗಾಗಿ ತಾಲೀಮು ಅನಿವಾರ್ಯವಾಗಿತ್ತು. ಬೆಳಗಾವಿಯ ರಂಗಮಂದಿರದ ಅಷ್ಟೂ ಸೀಟುಗಳ ಟಿಕೆಟುಗಳು ಮಾರಾಟವಾಗಿದ್ದವು. ಸಂಜೆ ಆರೂವರೆಗೆ ಪ್ರದರ್ಶನ ಶುರುವಾಗಬೇಕಿತ್ತು. ಆದರೆ ಗಲಾಟೆಯೊ ಗಲಾಟೆ. ಕಾರಣ; ಇನ್ನೊಂದು ಪ್ರದರ್ಶನಕ್ಕಾಗುವಷ್ಟು ಪ್ರೇಕ್ಷಕರು ನೆರೆದು ಟಿಕೆಟುಗಳಿಗಾಗಿ ಕಾದಿದ್ದರು. ಸಂಘಟಕರಿಗೂ ಅವರಿಗೂ ವಾಗ್ವಾದ ನಡೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ನನ್ನ, ರಾಜಾರಾಂ ಹಾಗೂ ಸಂಘಟಕರೊಂದಿಗೆ ಸಂಧಾನ ನಡೆಸಿದರು. ಇದರ ಪರಿಣಾಮ; ಇನ್ನೊಂದು ಪ್ರದರ್ಶನಕ್ಕೆ ಬೇಡಿಕೆ ಇಟ್ಟರು. ಜನರ ಅಭಿಮಾನಕ್ಕೆ ಸೋತು ಆಯೋಜಕರ ಮತ್ತು ರಾಜಾರಾಂ ಅವರ ಸಮಸ್ಯೆ ಬಗೆಹರಿಸಲು ಅನಿವಾರ್ಯವಾಗಿ ಒಪ್ಪಿಕೊಂಡೆ.

ಸಂಜೆ ಆರೂವರೆಯಿಂದ ರಾತ್ರಿ ಒಂಬತ್ತೂವರೆಗೆ ಒಂದು ಪ್ರದರ್ಶನದ ನಂತರ ಒಂಬತ್ತೂವರೆಗೆ ಮತ್ತೊಂದು ಪ್ರದರ್ಶನವಿತ್ತು. ಅಭಿನಯಿಸಲು ಕಷ್ಟವಲ್ಲ. ಆದರೆ ಪ್ರಯಾಣದ ಆಯಾಸ, ಸರಿಯಾಗಿ ಸಿಗದ ವಿಶ್ರಾಂತಿ ಮರೆತು ಪ್ರೇಕ್ಷಕರ ಪ್ರೀತಿಗೆ ಸೋತೆ. ಮೊದಲ ಪ್ರದರ್ಶನದ ನಂತರ ಊಟ ಮಾಡಿ ಮತ್ತೊಂದು ಪ್ರದರ್ಶನ ನೀಡಿದೆ. ಸಿನಿಮಾದಲ್ಲಿ ದುಡ್ಡು ಸಿಗುತ್ತದೆ. ಆದರೆ ರಂಗಭೂಮಿಯಲ್ಲಿ ಶ್ರಮದೊಂದಿಗೆ ತೃಪ್ತಿ ಸಿಗುತ್ತದೆ. ಮರುದಿನ ಬೆಳಿಗ್ಗೆ ಚಿಕ್ಕಮಗಳೂರು ತಲುಪಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ.

ಹೆಂಡದ ಲಾರಿ ಏರಿ ಚಿಗಟೇರಿಗೆ ಪಯಣ…

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಚಿಗಟೇರಿ ನಂತರ ಬಾಗಲಕೋಟೆ ಜಿಲ್ಲೆಯ ಇಲಕಲ್ಲದಲ್ಲಿ `ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಯಥಾಪ್ರಕಾರ ಸುಸಜ್ಜಿತವಲ್ಲದ ಮೆಟಾಡೋರ್‍ನಲ್ಲಿ ಕಲಾವಿದರೊಂದಿಗೆ ನಾನೂ ಹೊರಟೆ. ಇಲಕಲ್ಲದಲ್ಲಿ ಪ್ರದರ್ಶನ ಯಶಸ್ವಿಯಾಗಿ ಅಲ್ಲಿಂದ ಹಗರಿಬೊಮ್ಮನಹಳ್ಳಿಗೆ ಹೊರಟೆವು. ಅಲ್ಲಿಯೂ ಹೌಸ್‍ಫುಲ್. ಅಲ್ಲಿಯೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚಿಗಟೇರಿಗೆ ಹೊರಟೆವು. ಕಡಿಮೆ ಬಾಡಿಗೆಯ ಮೆಟಾಡೋರ್ ಇಪ್ಪತ್ತು ಕಲಾವಿದರನ್ನು ಹೊತ್ತುಕೊಂಡು ಹೊರಟಿತ್ತು. ಅದರ ಮೇಲೆ ನಾಟಕದ ಪರಿಕರಗಳಿದ್ದವು (ಸೌಂಡ್, ಲೈಟ್, ಹಾಸಿಗೆ, ದಿಂಬು ಇತ್ಯಾದಿ). ಇದು ಪ್ರತಿ ಪ್ರವಾಸದ ಪದ್ಧತಿ. ಸಂಜೆಯ ಹೊತ್ತು ತಿಂಡಿ ಮುಗಿಸಿಕೊಂಡು ಚಿಗಟೇರಿಯತ್ತ ಪ್ರಯಾಣಿಸುವಾಗ ಮೆಟಾಡೋರ್‍ನ ಬೆಲ್ಟ್ ಜಾಯಿಂಟ್ ಮುರಿದು ನಿಯಂತ್ರಣಕ್ಕೆ ಬಾರದೆ ಮೋರಿಗೆ ಗುದ್ದಿತು. ಗುದ್ದಿದ ರಭಸಕ್ಕೆ ಮೆಟಾಡೋರ್‍ನ ಅರ್ಧ ಭಾಗ ಮೋರಿ ಮೇಲೆ ನಿಂತಿತು. ನಮ್ಮ ಭಯ ಹೆಚ್ಚಿತು. ಗಾಡಿಯ ಒಳಗಿದ್ದೇವೆ. ಪರಿಕರಗಳೆಲ್ಲ ಗ್ರಿಲ್ ಸಮೇತ ಹಳ್ಳದಲ್ಲಿ ಬಿದ್ದಿದ್ದವು. ಅಲುಗಾಡಲೂ ಭಯ. ಅನುಭವಿ ಚಾಲಕ `ಹೆಂಗಿದ್ದೀರಿ ಹಾಗೆ ಕೂತೀರಿ. ಗಾಡಿ ಬೀಳದ ಹಾಗೆ ಪ್ರಯತ್ನಿಸುವೆ’ ಎಂದು ಭರವಸೆ ನೀಡಿದ. ಅಲ್ಲಾಡಿದರೆ ಗಾಡಿಯು ಯಾವ ಗಳಿಗೆಯಲ್ಲಾದರೂ ಹಳ್ಳಕ್ಕೆ ಬೀಳುವ ಸಂಭವವಿತ್ತು. ಖ್ಯಾತ ರಂಗನಟಿ ಭಾರ್ಗವಿ ನಾರಾಯಣ ಸೇರಿ ಇತರ ಕಲಾವಿದರು ತುಂಬಾ ಹೆದರಿದ್ದರು. ಮೆಟಾಡೋರ್‍ನ ಹಿಂದೆ ಹೋದ ಚಾಲಕ, ಅದನ್ನು ಹಿಡಿದುಕೊಂಡು `ಮೂವರು ಮಾತ್ರ ನಿಧಾನವಾಗಿ ಇಳಿದು ಬನ್ನಿ’ ಎಂದರು. ಮೂವರು ಇಳಿದು ಚಾಲಕನೊಂದಿಗೆ ಗಾಡಿ ಮುಂದಕ್ಕೆ ಬೀಳದ ಹಾಗೆ ಹಿಡಿದುಕೊಂಡರು. ನಂತರ ನಿಧಾನವಾಗಿ ಒಬ್ಬೊಬ್ಬರೆ ಇಳಿದೆವು. ಇಳಿದು ಕೆಳಗೆ ನೋಡಿದರೆ ಮೈ ಜುಮ್ಮೆಂದಿತು. ಹದಿನೈದು ಅಡಿಗೂ ಅಧಿಕ ಆಳವಾದ ಹಳ್ಳ. ಕಲ್ಲುಮುಳ್ಳುಗಳು ಬೇರೆ. ಬಿದ್ದಿದ್ದರೆ ನಾವು ಉಳಿಯುವುದು ಕಷ್ಟವಿತ್ತು.

ಬಳಿಕ ಎಲ್ಲರೂ ಸುಧಾರಿಸಿಕೊಂಡೆವು. ಮುಂದೇನು ಮಾಡಬೇಕೆಂದು ತೋಚಲಿಲ್ಲ. ಕಲಾವಿದರೆಲ್ಲ ಸೇರಿ ಪರಿಕರಗಳನ್ನು ಹೊತ್ತು ತಂದರು. ಮೆಟಾಡೋರ್ ಬಿಟ್ಟು ಬೇರೆ ಗಾಡಿಯಲ್ಲಿ ಪ್ರಯಾಣಿಸಬೇಕಿತ್ತು. ಆಗ ಮೊಬೈಲು ಫೋನುಗಳೂ ಇರಲಿಲ್ಲ. ಅಷ್ಟೊತ್ತಿಗೆ ರಾತ್ರಿ ಹತ್ತಾಗಿತ್ತು. ಚಿಗಟೇರಿಯಲ್ಲಿ ಹನ್ನೊಂದು ಗಂಟೆಗೆ ನಾಟಕವಿತ್ತು. ಅದು ಜಾನಪದ ತಜ್ಞರಾಗಿದ್ದ ಮುದೇನೂರು ಸಂಗಣ್ಣ ಅವರ ಊರು. ನಮ್ಮ ಬಳಿಯಿದ್ದ ಕುಡಿಯುವ ನೀರೆಲ್ಲ ಖಾಲಿ. ತಿನ್ನಲು ಏನೂ ಇಲ್ಲ. ಯಾವುದಾದರೂ ವಾಹನ ಬರುತ್ತದೆಂದು ಕಾದೆವು. ದೂರದಲ್ಲಿ ವಾಹನವೊಂದರ ಲೈಟುಗಳು ಕಾಣಿಸಿದಾಗ ಸ್ವಲ್ಪ ಜೀವ ಬಂದ ಹಾಗಾಯಿತು. ಕಲಾವಿದೆಯರೊಂದಿಗೆ ನಾನು ಮುಂದೆ ನಿಂತು ಕೈ ಮಾಡಿದೆವು. ನಮ್ಮ ಪುಣ್ಯಕ್ಕೆ ಚಾಲಕ ನಿಲ್ಲಿಸಿದಾಗ ನಮ್ಮ ಕಷ್ಟ ವಿವರಿಸಿದೆವು. ಆತ ಕರೆದುಕೊಂಡು ಹೋಗಲು ಒಪ್ಪಿದ. ಅದು ಹೆಂಡ ಸಾಗಿಸುತ್ತಿದ್ದ ಲಾರಿಯಾಗಿತ್ತು. ಕಲಾವಿದೆಯರೆಲ್ಲ ಕ್ಯಾಬಿನ್ನಿನಲ್ಲಿ ಕೂತರು. ನಾವೆಲ್ಲ ಹಿಂದೆ ಲಾರಿ ಹತ್ತಿ ಹೆಂಡದ ಪಿಪಾಯಿಗಳ ಬಳಿ ನಿಂತೆವು. ಆದರೆ ಆಸರೆಗೆ ಪಿಪಾಯಿ ಬಾಯಿಗೆ ತುರುಕಿದ್ದ ಈಚಲು ಟೊಂಗೆಯನ್ನು ಹಿಡಿದುಕೊಂಡು ನಿಲ್ಲಬೇಕಾಯಿತು. ಲಾರಿ ಹೊರಟಾಗ ನಮ್ಮ ಮೈಮೇಲೆ ಹೆಂಡ ಚಿಮ್ಮುತ್ತಿತ್ತು. ವಾಸನೆ ಬೇರೆ. ಕಷ್ಟವಾದರೂ ಅನಿವಾರ್ಯ. ಹೀಗೆ ಹೊರಟಾಗ ಸಿಕ್ಕ ಹಳ್ಳಿಯೊಂದರಲ್ಲಿ ಚಾಲಕನ ಸಹಾಯದಿಂದ ಮತ್ತೊಂದು ವಾಹನ ಏರ್ಪಾಟು ಮಾಡಿ ಉಳಿದ ಕಲಾವಿದರನ್ನು ಹಾಗೂ ಪರಿಕರ ತರಲು ವ್ಯವಸ್ಥೆಯಾಯಿತು.

ನಿಧಾನವಾಗಿ ಹೊರಟ ಲಾರಿ ಚಿಗಟೇರಿ ತಲುಪಿದಾಗ ರಾತ್ರಿ ಎರಡೂವರೆ. ಹೆಂಡದ ಲಾರಿಯಿಂದ ನಾವು ಇಳಿಯುವುದು ಕಂಡ ಅಲ್ಲಿನವರು ಅನುಮಾನ ಪಡಲಿಲ್ಲ. ಆದ ಘಟನೆಯನ್ನು ಮುದೇನೂರು ಸಂಗಣ್ಣ ಅವರಿಗೆ ವಿವರಿಸಿದೆವು. ಆಮೇಲೆ ಒಂದು ಗಂಟೆಯಾದ ಮೇಲೆ ಇನ್ನೊಂದು ವಾಹನದಲ್ಲಿ ಉಳಿದ ಕಲಾವಿದರು ಬಂದರು. ಆಗ ಮುದೇನೂರು ಸಂಗಣ್ಣ ಅವರು ನೆರೆದಿದ್ದ ಜನರಿಗೆ ನಡೆದ ಘಟನೆ ವಿವರಿಸಿ ಬೆಳಗಿನ ಜಾವ `ಮೂರೂವರೆಗೆ ನಾಟಕ ಶುರುವಾಗುತ್ತದೆ. ಶಾಂತವಾಗಿರಿ’ ಎಂದು ಹೇಳಿದರು. ಬಳಿಕ ಸ್ನಾನ ಮಾಡಿ ಸಿದ್ಧರಾದೆವು. ಮೂರೂಮುಕ್ಕಾಲಿಗೆ ನಾಟಕ ಶುರುವಾಗಿ ನಸುಕಿನ ಐದೂವರೆಗೆ ಮುಗಿಯಿತು. ಪ್ರೇಕ್ಷಕರ ಜೋರಾದ ಚಪ್ಪಾಳೆ, ಶಿಳ್ಳೆ, ಕೇಕೆ ಕೇಳಿ ಕಷ್ಟ ಮರೆತೆವು.

ಆಮೇಲೆ ಬೆಳಗಿನ ಜಾವ ಬಿಸಿ ಬಿಸಿ ಒಬ್ಬಟ್ಟಿನ ಊಟ ಮಾಡಿ, ವಿಶ್ರಾಂತಿ ಪಡೆದು ಬೆಳಿಗ್ಗೆ ತಿಂಡಿ ತಿಂದು ಬೆಂಗಳೂರಿಗೆ ಬೇರೊಂದು ವಾಹನದಲ್ಲಿ ಹೊರಟೆವು. ಆದರೆ ಕೆಟ್ಟ ಮೆಟಾಡೋರ್ ಹಾಗೂ ಚಾಲಕನನ್ನು ಮರೆಯದೆ ಜೊತೆಯಲ್ಲೇ ಕರೆದುಕೊಂಡು ಬಂದೆವು.

ಮೊದಲು ನಮ್ಮ ಕ್ಷಮೆ, ಆಮೇಲೆ ಪ್ರೇಕ್ಷಕರ ಕ್ಷಮೆ

ದಾವಣಗೆರೆಯಲ್ಲಿ ವರ್ಷದ ಕೊನೆಯ ದಿನ ಅಂದರೆ ಡಿಸೆಂಬರ್ 30, 31ರಂದು ಮುಖ್ಯಮಂತ್ರಿ ನಾಟಕ ಪ್ರದರ್ಶನಕ್ಕೆ ಒಪ್ಪಿದ್ದೆವು. ಚಿತ್ರೀಕರಣದಿಂದ ಬಿಡಿಸಿಕೊಂಡು ಬರಬಹುದೆಂಬ ನಂಬಿಕೆಯಿಂದ ನಾಟಕಕ್ಕೆ ಒಪ್ಪಿಕೊಂಡಿದ್ದೆ. ಚಿತ್ರೀಕರಣವು ಗೋವಾದಲ್ಲಿತ್ತು. ಆದರೆ ಚಿತ್ರೀಕರಣದಿಂದ ಬಿಡಿಸಿಕೊಂಡು ಬರಲಾಗಲಿಲ್ಲ. ಅಷ್ಟರಲ್ಲಿ ತಂಡ ದಾವಣಗೆರೆ ತಲುಪಿತ್ತು. ಆದರೆ ನಾನಿಲ್ಲದೆ ಇರುವುದರಿಂದ ನಾಟಕ ಆಗುವುದಿಲ್ಲವೆಂದಾಗ ಪ್ರೇಕ್ಷಕರು ಗಲಾಟೆ ಮಾಡಿ ಹೇಗಾದರೂ ಮಾಡಿ ನಾಟಕ ಮಾಡಿ ಎಂದು ಒತ್ತಾಯಿಸಿದರು. ಕೊನೆಗೆ ರಾಜಕೀಯ ಪ್ರತಿನಿಧಿ, ಪೊಲೀಸರ ಮಧ್ಯ ಪ್ರವೇಶದಿಂದ ತಂಡದವರಿಗೆ ತೊಂದರೆಯಾಗದಂತೆ ನೋಡಿಕೊಂಡರು. ನಂತರ ಜನವರಿ 1 ಹಾಗೂ 2ರಂದು ನಾಟಕ ಮಾಡಿಸುತ್ತೇವೆಂದು ಭರವಸೆ ನೀಡಿತು ನಮ್ಮ ತಂಡ. ಇದಕ್ಕಾಗಿ ನನ್ನ ಮೇಲೆ ರಾಜಕೀಯ ಒತ್ತಡ ತಂದರು ದಾವಣಗೆರೆಯವರು. ಇದರಿಂದ ರಾತ್ರೋರಾತ್ರಿ ದಾವಣಗೆರೆಗೆ ಬರುವ ಹಾಗೆ ಮಾಡಿದರು ಅಲ್ಲಿನ ಸ್ಥಳೀಯರು. ನಾನಲ್ಲಿಗೆ ತಲುಪಿದ ಕೂಡಲೇ ಬಿಗುವಿನ ವಾತಾವರಣ ತಿಳಿಯಾಯಿತು. ತಂಡದಿಂದ ಕ್ಷಮೆ ಕೇಳಿ ನಾಟಕವಾಡಿದೆವು. ನಂತರ ಪ್ರೇಕ್ಷಕರು ನಮ್ಮಲ್ಲಿ ಕ್ಷಮೆ ಕೇಳಿದರು.

ಪ್ರದರ್ಶನಗೊಳ್ಳದ ನಾಟಕ

1989ರಲ್ಲಿ ಬೆನ್‍ಫಿಟ್ ಷೋಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನಕ್ಕೆ ಒಪ್ಪಿದ್ದೆ. ನಂತರ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಆಗ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಹೀಗೆ ಚುನಾವಣೆಯಿಂದಾಗಿ ನಾಟಕ ಪ್ರದರ್ಶನದ ದಿನಾಂಕ ಬದಲು ಮಾಡಲು ಮನವಿ ಮಾಡಿಕೊಂಡೆವು. ಸಂಘಟಕರಾದ ಸುರೇಶ್ ಅವರು ಟಿಕೆಟ್ ಮಾರಾಟ ಮಾಡಿದ್ದರು. ಆದರೂ ನಮ್ಮ ಮಾತಿಗೆ ಒಪ್ಪಿ ಚುನಾವಣೆ ನಂತರ ಎರಡು ಪ್ರದರ್ಶನಗಳಿಗೆ ಸಜ್ಜಾಗಿದ್ದರು. ಇದರಿಂದ ಒಂದೇ ದಿನ ಎರಡು ಪ್ರದರ್ಶನಗಳಿಗೆ ಒಪ್ಪಿಕೊಂಡೆವು. ಆದರೆ ಬಿರುಗಾಳಿ, ಮಳೆಯಿಂದ ಟೂರಿಂಗ್ ಟಾಕೀಸಿನ ತಗಡುಗಳೆಲ್ಲ ಹಾರಿ ಹೋಗಿ ಬಯಲು ರಂಗಭೂಮಿಯಾಯಿತು. ಸುರಿಯುವ ಮಳೆಯಿಂದಾಗಿ ನಾಟಕ ಆಡಲಾಗಲಿಲ್ಲ. ಇದರಿಂದ ಕಂಗಾಲಾದ ಸುರೇಶ್ ಅವರು ಅಳುವುದು ಕಂಡು `ಅಳಬೇಡ, ಮತ್ತೆ ನಾಟಕ ಆಡುತ್ತೇವೆ. ನಷ್ಟವಾಗದ ಹಾಗೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ಕೊಟ್ಟೆವು. ಮತ್ತೊಮ್ಮೆ ಕೊಟ್ಟ ದಿನಾಂಕಗಳು ಬರುವ ಹೊತ್ತಿಗೆ ಸುರೇಶನೇ ತೀರಿಕೊಂಡರು.

ಕೆಲದಿನಗಳ ನಂತರ ಭದ್ರಾವತಿಗೆ ಹೋಗಿ ಸುರೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಅಲ್ಪಸ್ವಲ್ಪ ಹಣಕಾಸಿನ ನೆರವಾದೆವು. ಈ ಘಟನೆ ನಮ್ಮನ್ನು ಅನೇಕ ಬಾರಿ ಕಾಡಿದೆ.

ಮೂತಿ ನೋಡಲು ಮುಗಿಬಿದ್ದರು

`ಮುಖ್ಯಮಂತ್ರಿ’ ನಾಟಕ 300 ಪ್ರೇಕ್ಷಕರಿಂದ ಹಿಡಿದು ಏಕಕಾಲದಲ್ಲಿ 20 ಸಾವಿರ ಪ್ರೇಕ್ಷಕರ ಎದುರು ನಾಟಕ ಆಡಿದ್ದೇವೆ. ಇಪ್ಪತ್ತು ಸಾವಿರ ಹೇಗೆಂದರೆ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಉತ್ಸವಗಳಲ್ಲಿ. ಹೀಗೆ ಮಂಗಳೂರಿನಲ್ಲಿ ತರಂಗಿಣಿ ಎನ್ನುವ ಕಲಾಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಶನಿವಾರ, ಭಾನುವಾರ ಮುಖ್ಯಮಂತ್ರಿ ನಾಟಕ ಪ್ರದರ್ಶಿಸಿದೆವು. ಇದು ಜಯಭೇರಿ ಬಾರಿಸಿತು.

ಇನ್ನೊಮ್ಮೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಯಲಲ್ಲಿ ನಾಟಕ ಏರ್ಪಾಡಾಗಿತ್ತು. ಸುಮಾರು ಎರಡು ಸಾವಿರ ಪ್ರೇಕ್ಷಕರು ಸೇರಿದ್ದರು. ಜೋರು ಮಳೆಯಿಂದ ನಾಟಕದ ಸೆಟ್, ಮೈಕು ಹಾಳಾದವು. ಪ್ರೇಕ್ಷಕರ ಒಕ್ಕೊರಲಿನಿಂದ ಎಷ್ಟೊತ್ತಾದರೂ ಕಾಯುತ್ತೇವೆ, ಕಾಲೇಜಿನ ಕಾರಿಡಾರಿನಲ್ಲೇ ನಾಟಕವಾಡಿ ಎಂದು ಒತ್ತಾಯಿಸಿದರು. ಮತ್ತೊಮ್ಮೆ ನಾಟಕ ಪ್ರದರ್ಶಿಸುತ್ತೇವೆ, ಪರಿಕರ ಹಾಳಾಗಿದೆ, ಮೈಕು ಕೆಟ್ಟಿದೆ ಎಂದರೂ ಕೇಳಲಿಲ್ಲ. ಕೊನೆಗೆ ಪ್ರೇಕ್ಷಕರೇ ಮೈಕು, ಲೈಟು ತಂದರು.

ಕಾರಿಡಾರಿನಲ್ಲಿ ಒಂದೇ ಮೈಕಿನೆದುರು ನಾಟಕ ಆಡಿದೆವು. ಇದೆಲ್ಲ ಮುಖ್ಯಮಂತ್ರಿ ನಾಟಕದ ಮೇಲಿನ ಅಭಿಮಾನ ಜೊತೆಗೆ ಆ ಪಾತ್ರದ ನಾನು ಜನಪ್ರಿಯ ನಟನಾಗಿರುವುದರೊಂದಿಗೆ ಮಾತು ಕೇಳಲು, ಮೂತಿ ನೋಡಲು ಮುಗಿಬಿದ್ದರು. ಅವರಿಗೆ ನಿರಾಸೆ ಮಾಡಲಿಲ್ಲ.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನಕ್ಕೆ ಏರ್ಪಾಡಾಯಿತು. ಆದರೆ ಜಗನ್ಮೋಹನ ಅರಮನೆ ಪ್ರತಿಧ್ವನಿಸುವುದರಿಂದ ನಾಟಕ ಆಡುವುದು ಕಷ್ಟ. ಅನಿವಾರ್ಯಕ್ಕಾಗಿ ಆಡಿದೆವು. ಅಂದು ನಾಟಕ ನೋಡಿದವರಿಗೆ ತೃಪ್ತಿಯಿಲ್ಲ, ನಮಗೆ ಸಮಾಧಾನವಿಲ್ಲ. ಬೇಸರದಿಂದಲೇ ಬೆಂಗಳೂರಿಗೆ ಬಂದೆವು.

ಬಿಚ್ಚಿದ ಕಚ್ಚೆಪಂಚೆ, ಹರಿದ ಜುಬ್ಬ…

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಟೂರಿಂಗ್ ಟಾಕೀಸಿನಲ್ಲಿ `ಮುಖ್ಯಮಂತ್ರಿ’ ನಾಟಕದ ಪ್ರದರ್ಶನ ನಿಗದಿಯಾಗಿತ್ತು. ಆದರೆ ನಿಗದಿತ ಆಸನಕ್ಕಿಂತ ಹೆಚ್ಚು ಟಿಕೆಟುಗಳು ಮಾರಾಟವಾಗಿದ್ದವು. ಸಿನಿಮಾಕ್ಕಾಗಿ ಬೆಂಗಳೂರಿನಲ್ಲಿದ್ದ ನಾನು, ಅರ್ಧ ದಿನದ ಶೂಟಿಂಗ್ ಮುಗಿಸಿಕೊಂಡು ಹೊಸಪೇಟೆಗೆ ಹೊರಟೆ. ಅಲ್ಲಿಗೆ ತಲುಪಿದಾಗ ಪ್ರೇಕ್ಷಕರ ಹರ್ಷೋದ್ಗಾರ, ಉತ್ಸಾಹ ಹೆಚ್ಚಿ ನಾಟಕಕ್ಕೆ ಮುನ್ನ ನಮಗೆಲ್ಲ ಸನ್ಮಾನ ನಡೆಯಲಿತ್ತು. ಆದರೆ ಹೊರಗೆ ಗದ್ದಲ, ಕಿರುಚಾಟ ಹೆಚ್ಚಿತ್ತು. ಆಗಿದ್ದೇನೆಂದರೆ ಇನ್ನೊಂದು ಪ್ರದರ್ಶನಕ್ಕೆ ಆಗುವಷ್ಟು ಪ್ರೇಕ್ಷಕರು ಸೇರಿದ್ದಾರೆ. ಸಂಘಟಕರು ಅಸಹಾಯಕರಾಗಿದ್ದರು. ಸಮಾರಂಭ ನಡೆಯುವಾಗಲೇ ತಗಡಿನ ಟಾಕೀಸಿನ ಮೇಲೆ ಕಲ್ಲುಗಳ ಸುರಿಮಳೆಯಾಯಿತು. ನಂತರ ಸಂಘಟಕರನ್ನು, ಪೊಲೀಸರನ್ನು ಕರೆದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡೆ. ಈ ಪ್ರದರ್ಶನದ ನಂತರ ಸ್ವಲ್ಪ ಹೊತ್ತಿಗೆ ಮತ್ತೊಂದು ಪ್ರದರ್ಶನ ಕೊಡುವೆ ಎಂದೆ. ನೆರೆದಿದ್ದ ಪ್ರೇಕ್ಷಕರು ನಂಬಲಿಲ್ಲ. ನಾನೇ ಅವರ ಬಳಿ ಹೋಗಿ ಪೊಲೀಸರ ವಾಹನದ ಮೈಕಿನಲ್ಲಿ ನಿಮಗಾಗಿ ನಾಟಕ ಮಾಡುತ್ತೇವೆಂದು ಘೋಷಿಸಿದೆ. ಆಗ ಪ್ರೇಕ್ಷಕರು ಕೇಕೆ ಹಾಕಿ, ಸಿಳ್ಳೆ ಹೊಡೆದು ನನ್ನನ್ನು ಎತ್ತಿಕೊಂಡು ಒಬ್ಬರಿಂದ ಒಬ್ಬರಿಗೆ ಪಾಸ್ ಮಾಡಿದರು. ಹೀಗೆ ಏಳೆಂಟು ನಿಮಿಷಗಳಾಗಿರಬೇಕು. ಅಷ್ಟರಲ್ಲಿ ನೀರಿನ ಟ್ಯಾಂಕಿನ ಏಣಿ ಹತ್ತಲು ಪೊಲೀಸರು ಸಲಹೆ ನೀಡಿದರು. ಐದಾರು ಮೆಟ್ಟಿಲು ಹತ್ತಿದ ಮೇಲೆ ಮಾತನಾಡಿ, ಪ್ರೇಕ್ಷಕರನ್ನು ದೂರ ಸರಿಸುತ್ತೇವೆ ಎಂದರು. ಹಾಗೆ ಏಣಿ ಹತ್ತಿ ನಮಸ್ಕರಿಸಲು ಕೈ ಎತ್ತಿದೆ. ಹೋ ಎಂದು ಕಿರುಚಿದರು. ಸಾರ್ ಕಚ್ಚೆ ಎಂದು ಕೂಗಿದರು. ನಾಟಕದ ಜುಬ್ಬ ಹರಿದಿದೆ, ಕಚ್ಚೆ ಉದುರಿದೆ. ಅಂಡರ್‍ವೇರ್ ಮೇಲೆ ನಿಂತಿದ್ದೆ. ನಂತರ ಪೊಲೀಸರು, ಪ್ರೇಕ್ಷಕರನ್ನು ಸರಿಸಿದರು. ಬಳಿಕ ಯಾರದೋ ಪಂಚೆ, ಯಾರದೋ ಜುಬ್ಬ ಹಾಕಿಕೊಂಡು ಎರಡೂ ಪ್ರದರ್ಶನ ನೀಡಿದೆ. ನಾಟಕಕ್ಕೆಂದು ಹಾಕಿಕೊಂಡಿದ್ದ ಉಂಗುರ ಕೂಡಾ ಕಾಣೆಯಾಗಿತ್ತು. ಆದರೆ ಕದ್ದವರಿಗೆ ರೋಲ್ಡ್‍ಗೋಲ್ಡ್ ಎಂದು ಗೊತ್ತಿರಲಿಕ್ಕಿಲ್ಲ.

ಹೀಗೆಯೇ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರು, ಬೆಂಗಳೂರಿನ ಮಲ್ಲೇಶ್ವರಂನ ರಾಮಮಂದಿರದಲ್ಲಿ 25ನೇ ಪ್ರಯೋಗಕ್ಕೆ ಹತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರು, ಬೆಂಗಳೂರಿನ ರಾಜಾಜಿನಗರದ ರಾಮಮಂದಿರದಲ್ಲಿ ಪಿಜಿಆರ್ ಸಿಂಧ್ಯ ಹಾಗೂ ವೈಎಸ್‍ವಿ ದತ್ತ ಅವರ ಸಹಕಾರದೊಂದಿಗೆ ಸಾವಿರಾರು ಪ್ರೇಕ್ಷಕರು ನಾಟಕ ನೋಡಿದರು.

ನಾಟಕ ಬ್ಯಾನ್ ಆಗುವ ಭಯ

ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ. ಅದೇ ಕಾಲದಲ್ಲಿ ನಮ್ಮ ಮುಖ್ಯಮಂತ್ರಿ ನಾಟಕ ಪ್ರದರ್ಶನವಾಗುತ್ತಿತ್ತು. ಪತ್ರಿಕೆಗಳಲ್ಲಿ ಪ್ರಸ್ತುತ ರಾಜಕಾರಣಕ್ಕೆ ಆಪ್ತವಾಗಿದೆ ಎಂಬ ಮೆಚ್ಚುಗೆಯ ನುಡಿ ನೋಡಿದ ಗುಂಡೂರಾವ್ ಅವರಿಗೆ ಯಾರೋ ಕಿವಿ ಹಿಂಡಿ ಬೇರೆಯವರ ಹೆಸರಿರುವ, ನಿಮ್ಮನ್ನು ಉದ್ದೇಶಿಸಿದ ನಾಟಕ ಎಂದಿದ್ದಾರೆ. ತುರ್ತಾಗಿ ನಾಟಕ ನೋಡಬೇಕೆಂದು ಗುಂಡೂರಾವ್ ಹೇಳಿಕಳಿಸಿದರು. ಖರ್ಚನ್ನೆಲ್ಲ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿಗಳು ಹೇಳಿದರು. ನಮಗೆ ಗಾಬರಿ. ನಾಟಕ ಬ್ಯಾನ್ ಆಗಬಹುದು, ನಮ್ಮನ್ನು ಬಂಧಿಸಬಹುದು ಎಂದುಕೊಂಡೆವು. ಬೆಂಗಳೂರಿನ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್‍ನಲ್ಲಿ ನಾಟಕದ ಪ್ರದರ್ಶನ ಆಯೋಜಿಸಲಾಯಿತು. ಮುಖ್ಯಮಂತ್ರಿಗಳು ಪತ್ನಿ ಸಮೇತ ಬಂದಿದ್ದರು. ಸಚಿವರೂ ಸೇರಿದ್ದರು. ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಗೆ ಮುಂದಿನ ಸಾಲುಗಳಲ್ಲಿ ನೂರು ಸೀಟುಗಳನ್ನು ಬಿಟ್ಟುಕೊಟ್ಟೆವು.

ನಾಟಕ ಮುಗಿದ ಮೇಲೆ ಭಯ ಶುರುವಾಯಿತು. ಸೈಡ್‍ವಿಂಗ್ ಕಡೆ ಮುಖ್ಯಮಂತ್ರಿ ಬರುತ್ತಾರೆಂದು ಗೊತ್ತಾಯಿತು. ಡಲ್ ಆಗಿ ನಿಂತಿದ್ದೆವು. ಪರಿಚಯವಾದ ನಂತರ `ಚೆನ್ನಾಗಿ ಮಾಡಿದ್ದೀರಿ. ಯಾಕೆ ಡಲ್ಲಾಗಿದ್ದೀರಿ? ಎಂದು ಕೇಳಿದರು. ಬಳಿಕ `ಯಾವುದೋ ಕೆಲಸದ ಮೇಲೆ ಹೋಗಬೇಕಿತ್ತು. ಆದರೂ ಇಡೀ ನಾಟಕ ನೋಡಿದೆ. ದೇವರಾಜ ಅರಸು ಅವರದೇ ಗೆಟ್ ಅಪ್, ಅವರನ್ನೇ ನೋಡಿದ ಹಾಗಾಯಿತು’ ಎಂದು ಮೆಚ್ಚುಗೆಯಾಡಿದರು. ಆಮೇಲೆ ಅವರು ನಾಟಕದ ಮುಂಚೆ ನನ್ನ ಬಳಿ ಬಂದಿದ್ದರೆ ಹೆಚ್ಚಿನ ಮಾಹಿತಿ ಕೊಡುತ್ತಿದ್ದೆ. ಈಗಿನದು ಸಪ್ಪೆ ಅನ್ನಿಸುತ್ತಿದೆ. ಮುಂದೆ ನಾಟಕ ಮಾಡುವಾಗ ವ್ಯವಸ್ಥೆ ಕುರಿತು ಇನ್ನಷ್ಟು ಲೋಪಗಳನ್ನು ಹೇಳುವೆ. ಅವುಗಳನ್ನು ಸೇರಿಸಿ ಜನರಿಗೆ ಕಿಕ್ ಕೊಡುತ್ತೆ. ಎಲ್ಲಾದರೂ ನಾಟಕವಾಡಿ. ತೊಂದರೆಯಾದರೆ ತಿಳಿಸಿ. ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿ, ಸನ್ಮಾನಿಸಿದರು.
ಆಗ ನಮಗಿದ್ದ ಭಯ ಕಡಿಮೆಯಾಯಿತು.