ಹೊಸದಿನಗಳಲ್ಲಿ ನೀವು ಬರೆಯುವ ದಿನಾಂಕದಲ್ಲಿ ಹಳೆ ಇಸ್ವಿ ಇಣುಕುತ್ತದೆ. ಮತ್ತೆ ಮತ್ತೆ ಹಳೆಯದನ್ನೇ ಬರೆದು ಛೇ ಎಂದು ತಿದ್ದುತ್ತೇವೆ. ಹೊಸದಕ್ಕೆ ಹೊಂದುಕೊಳ್ಳುವುದಕ್ಕೆ ಸಮಯಬೇಕು. ಹಳೆಯದನ್ನು ಬಿಡುವುದಕ್ಕೆ ಸಮಯ ಬೇಕು. ಈ ಹಳೆಯದು ಮತ್ತು ಹೊಸದರ ಸಂಬಂಧ ‘ನ್ಯೂ ಇಯರ್’ ದಿನ ಕೇಕ್ ಕತ್ತರಿಸಿ ತೆಗೆದಂತೆ ಅಲ್ಲ. ಹೊಸದರೊಳಗೆ ಹಳೆಯದು ಸೇರಿಕೊಳ್ಳಬೇಕು. ಹಳೆಯದರ ಒಡಲಿನಲ್ಲಿ ಹೊಸತರ ಗುಟ್ಟಿರಬೇಕು. ನಿನ್ನೆ ನೆಲದಲ್ಲಿ ಇಂದಿನ ಗಿಡನೆಟ್ಟರೆ ನಾಳೆಯ ಮೊಗ್ಗು, ನಾಡಿದ್ದರ ಹೂ ಅರಳಬಹುದು. ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂದು ದೊಡ್ಡವರು ಸುಮ್ಮನೆ ಹೇಳಿದ್ದಲ್ಲ.
ಹೊಸ ವರ್ಷದ ಹೊಸ ಹಾದಿಗಳ ಕುರಿತು ಸದಾಶಿವ ಸೊರಟೂರು ಪ್ರಬಂಧ

ದಿನಕ್ಕೊಂದು ಹೂ ಬಿಡುತ್ತಾ ಕಳೆಕಳೆಯಾಗಿರುತ್ತಿದ್ದ ಕ್ಯಾಲೆಂಡರ್ ಮನೆಯ ಗೋಡೆಯ ಮೊಳೆಯಿಂದ ಕಳಚಿ ಬೀಳುತ್ತದೆ, ಹಣ್ಣಾದ ಎಲೆ ಉದುರುವಂತೆ. ಅಲ್ಲೊಂದು ಮತ್ತೆ ಮುನ್ನೂರಾ ಅರವತ್ತೈದು ದಿನಗಳ ತಃಖ್ತೆ. ಹೊಸ ಗಿಡ, ಮತ್ತೆ ಮತ್ತೆ ಹೂವುಗಳು. ಹೂವು ಉದುರುವಾಗ ಮೊಗ್ಗು ನಗುತ್ತದೆ. ಎಲ್ಲವೂ ಹಾಗೆ ಇದೆ ಕ್ಯಾಲೆಂಡರ್ ಅಷ್ಟೆ ಬದಲಾಗಿದೆ ಅಂತೀವಿ. ನಮಗೆ ಗೊತ್ತಿಲ್ಲದೆ ಏನೆಲ್ಲಾ ಬದಲಾಗಿರುತ್ತೆ. ನಮ್ಮ ರೆಸ್ಯೂಮ್‌ನಲ್ಲಿ ವಯಸ್ಸು ಒಂದು ವರ್ಷ ಹೆಚ್ಚಾಗುತ್ತೆ. ನಮ್ಮ ಮಗು ಒಂದು ತರಗತಿ ಮುಂದೆ ಜಿಗಿದಿರುತ್ತೆ. ಅಪ್ಪನಿಗೆ ಮಂಡಿನೋವು ಹೆಚ್ಚು. ನಿಮಗೊಂದು ಪ್ರಮೋಶನ್ ಸಿಕ್ಕಿದೆ. ಪ್ರೀತಿಸಿದ ಹುಡುಗಿ ನೆನಪು ಈಗ ಅಷ್ಟಾಗಿ ಕಾಡುವುದಿಲ್ಲ. ಕಾಲ ಅಂದರೆ ಹಾಗೆಯೇ ಬರೀ ಕ್ಯಾಲೆಂಡರ್ ಬದಲಾಗುವುದಲ್ಲ ಜೊತೆಗೆ ನಾವು, ನೀವು ಮತ್ತು ಎಲ್ಲವೂ..

ಹೊಸದಿನಗಳಲ್ಲಿ ನೀವು ಬರೆಯುವ ದಿನಾಂಕದಲ್ಲಿ ಹಳೆ ಇಸ್ವಿ ಇಣುಕುತ್ತದೆ. ಮತ್ತೆ ಮತ್ತೆ ಹಳೆಯದನ್ನೇ ಬರೆದು ಛೇ ಎಂದು ತಿದ್ದುತ್ತೇವೆ. ಹೊಸದಕ್ಕೆ ಹೊಂದುಕೊಳ್ಳುವುದಕ್ಕೆ ಸಮಯಬೇಕು. ಹಳೆಯದನ್ನು ಬಿಡುವುದಕ್ಕೆ ಸಮಯ ಬೇಕು. ಈ ಹಳೆಯದು ಮತ್ತು ಹೊಸದರ ಸಂಬಂಧ ‘ನ್ಯೂ ಇಯರ್’ ದಿನ ಕೇಕ್ ಕತ್ತರಿಸಿ ತೆಗೆದಂತೆ ಅಲ್ಲ. ಹೊಸದರೊಳಗೆ ಹಳೆಯದು ಸೇರಿಕೊಳ್ಳಬೇಕು. ಹಳೆಯದರ ಒಡಲಿನಲ್ಲಿ ಹೊಸತರ ಗುಟ್ಟಿರಬೇಕು. ನಿನ್ನೆ ನೆಲದಲ್ಲಿ ಇಂದಿನ ಗಿಡನೆಟ್ಟರೆ ನಾಳೆಯ ಮೊಗ್ಗು, ನಾಡಿದ್ದರ ಹೂ ಅರಳಬಹುದು. ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂದು ದೊಡ್ಡವರು ಸುಮ್ಮನೆ ಹೇಳಿದ್ದಲ್ಲ.

ಸಿಂಹ ಹಾದಿಯಲ್ಲಿ ನಡೆದು ಮುಂದೆ ಹೋಗಿ ನಂತರ ತಾನು ಬಂದ ದಾರಿಯನ್ನು ತಿರುಗಿ ನೋಡುವುದಂತೆ. ಅದು ಸಿಂಹಾವಲೋಕನ. ಹಿಂದಣ ಹೆಜ್ಜೆ ಅರಿತಲ್ಲದೆ ಮುಂದಣ ಹೆಜ್ಜೆ ಅರಿಯಲಾಗದು.. ಅನ್ನುತ್ತಾರೆ. ನಾವು ಇಡುವ ಹೆಜ್ಜೆಗೆ ಹಿಂದಿನ ಹಾದಿಯಲ್ಲಿ ಕಾಲಿಗೆ ಸಿಕ್ಕ ಹೂವು ಮುಳ್ಳಿನ ಅರಿವಿದ್ದರಷ್ಟೇ ಮುಂದಿನ ಹಾದಿ ಸ್ಪಷ್ಟ.

ಕೂತು, ಹಿಂದಿನದರ ಬಗ್ಗೆ ನೆನಪಿಸಿಕೊಳ್ಳಲು ಮತ್ತು ಮುಂದಿನದರ ಬಗ್ಗೆ ಯೋಚಿಸಲು ಒಂದು ದಿನ ಅಂತ ಬೇಕಲ್ಲ, ಎಲ್ಲರೂ ಒಪ್ಪುವಂತಹ ದಿನ ಬೇಕಲ್ಲ ಅದೇ ಈ ಕ್ಯಾಲೆಂಡರ್ ಬದಲಾವಣೆಯ ದಿನ. ಅದನ್ನು ಕೆಲವರು ಹೊಸ ವರ್ಷ ಅಂತಾರೆ, ಕೆಲವರು ಕ್ಯಾಲೆಂಡರ್ ಇಯರ್ ಅಂತಾರೆ. ಏನೇ ಆದರೂ ನಾವು ಗೊತ್ತಿಲ್ಲದೆ ಈ ಒಂದು ದಿನವನ್ನು ಹೊಸದು ಅಂತ ಒಪ್ಪಿ ಬಿಟ್ಟಿದ್ದೇವೆ. ಕೆಲವರು ನನಗೆ ಈ ದಿನ ಬೇಕಿಲ್ಲ ಅಂತಾರೆ.. ನನಗೆ ಬೇರೆಯದೆ ಹೊಸ ದಿನ ಇದೆ ಅಂತಾರೆ. ಕೆಲವರಿಗೆ ಬರ್ತ್ ಡೇ ಯಿಂದ ಬರ್ತ್ ಡೇ, ಕೆಲವರಿಗೆ ಯುಗಾದಿ, ಕೆಲವರಿಗೆ ಮೋಹರಂ ಇವೆಲ್ಲಾ ಅವರವರ ಭಾವಕ್ಕೆ, ಭಕುತಿಗೆ.. ಆದರೆ ಜಗತ್ತಿನ ಬಹುತೇಕರು ಒಪ್ಪಿ ಆಚರಿಸುವ ಈ ಜನವರಿ ಒಂದು ಅನ್ನೋದನ್ನ ಹೊಸ ವರ್ಷದ ಮೊದಲ ದಿನವೆಂದು ಯಾರಾದರೂ ಒಪ್ಪಿಯಾರು!

ರೈತನಿಗೆ ಮುಂಗಾರು ಹೊಸ ದಿನ, ಶಾಲೆಯ ಪೋರರಿಗೆ ಜೂನ್, ತೆರಿಗೆದಾರರಿಗೆ ಮಾರ್ಚ್, ಇದು ನಮ್ದು ಕಲ್ಚರ್ ಅನ್ನೋರಿಗೆ ಯುಗಾದಿ ಹೀಗೆ ನೂರೆಂಟು ತರಹದ ಹೊಸ ದಿನಗಳನ್ನು ಈ ಕ್ಯಾಲೆಂಡರ್ ಇಯರ್ ತನ್ನ ಒಡಲೊಳಗೆ ಹಾಕಿಕೊಂಡಿದೆ.

ಒಮ್ಮೆ ಯಾರೊ ಜೆನ್ ಗುರುವಿಗೆ ಕೇಳಿದರಂತೆ

‘ಗುರುಗಳೇ ಇಲ್ಲಿ ತುಂಬಾ ಕಲೆಯುಳ್ಳದ್ದು ಯಾವುದು?’

‘ಚಂದಿರನ ಬೆಳಕು’ ಗುರುಗಳು ಉತ್ತರ

‘ಗುರುಗಳೇ ಹಾಗಾದರೆ ಆ ಕಲೆಯ ಸ್ವಚ್ಚಗೊಳಿಸುವುದು ಯಾವುದು?’

‘ಚಂದಿರ ಬೆಳಕು’ ಮತ್ತೆ ಗುರುಗಳ ಉತ್ತರ.‌

ಕಲೆ ಮಾಡುವ ಬೆಳಕೇ ಕಲೆಯನ್ನು ತೊಳೆಯುತ್ತದೆ. ಗಾಯಗೊಳಿಸುವ ಬದುಕೇ, ಮುಲಾಮು ಸವರುತ್ತದೆ. ಚುಚ್ಚುವ ಕಾಲವೇ ಗಾಯವನ್ನು ಮಾಯಿಸುತ್ತದೆ. ಹೊಸ ದಿನಗಳಿಗೆ ಸಿದ್ಧರಾಗುವುದು ಎಂದರೆ ಯಾವ ಹೊಸ ಗಾಯಕ್ಕೆ ಸಿದ್ಧರಾಗುವುದೇ ಎಂದೇ ಅರ್ಥ. ಅದು ಅದೆಷ್ಟು ಅಲ್ಲ ಹೊಸ ಮದ್ದಿಗೆ ಸಿದ್ಧವಾಗುವುದು ಅಂತ.

ಹಳೆಯದೆಲ್ಲವನ್ನು ಮುಂದೆ ಹರಡಿಕೊಂಡು ಬದುಕಿನ ಜಾತ್ರೆ ಮಾಡಲಾಗುವುದಿಲ್ಲ. ಎಲ್ಲವನ್ನು ಮರೆತು ಕೂಡ ಬದುಕಲಾಗುವುದಿಲ್ಲ. ಯಾವುದು ಉಳಿಸಬೇಕು? ಯಾವುದನ್ನು ಅಳಿಸಬೇಕು ಅನ್ನುವುದು ‘ಕಾಲ’ ಕ್ಕೆ ಗೊತ್ತಿದೆ. ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಲದ ಲೆಕ್ಕದಲ್ಲಿ ಎಲ್ಲವೂ ಸರಿ ಇದೆ ನಾವು ಅದನ್ನು ಕೆಡಿಸಲು ಹೋದರೆ, ಕೆಡಿಸಿಕೊಂಡರೆ ಅನುಮಾನವೇ ಇಲ್ಲ ಅದು ನಮ್ಮನ್ನು ಕೆಡಿಸುತ್ತದೆ.

ಬಿಡಿ ಅದಿರಲಿ,
ಅಮ್ಮ ಹೇಗೆ ನಾವು ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಬಲಗಡೆಯಿಂದ ಏಳಪ ಅಂತ ಗದರಿಸುತ್ತಿದ್ದರು. ದಿನವಿಡೀ ನಾವೇನಾದ್ರು ಎಡವಟ್ಟು ಮಾಡಿದರೆ ‘ಎಡಗಡೆ ಮಗ್ಲಾಗೆ ಎದ್ದಿಯೇನು..?’ ಅನ್ನುತ್ತಿದ್ದರು. ದಿನವೊಂದು ಒಳ್ಳೆಯದಾಗಿ ಶುರುವಾದರೆ ಇಡೀ ದಿನ ಒಳ್ಳೆಯದಾಗುತ್ತೆ ಅನ್ನುವುದು ಅಮ್ಮನ ನಂಬಿಕೆ. ಹಾಗೆ ಹೊಸ ವರ್ಷದ ಮೊದಲು ದಿನದ ಹಾರೈಕೆಗಳು, ಕಳೆಯುವ ಕ್ಷಣಗಳು ವರ್ಷಪೂರ್ತಿ ನಮ್ಮ ಜೊತೆ ಇರುತ್ತವೆ, ಕೈ ಹಿಡಿಯುತ್ತವೆ ಅನ್ನುವ ಕಾರಣಕ್ಕೆ ಈ ದಿನಕ್ಕೆ ಒಂದು ವಿಶೇಷ ಕಾಳಜಿ, ವಿಶೇಷ ಸಂಭ್ರಮ. ಅಂತಹ ಹಾರೈಕೆಗಳು ನಮ್ಮನ್ನು ಪೊರೆಯಲಿ..

ತಾನು ಸರಿಯಿಲ್ಲ, ತನ್ನಲ್ಲಿ ಏನೊ ಒಂದು ಬೇಡದ ಗುಣ ಇದೆ ಅನ್ನುವ ಭಾವ ಪ್ರತಿಯೊಬ್ಬರಿಗೂ ಇರುತ್ತೆ. ಅದನ್ನು ಬಿಡಲು ನಿರ್ಧರಿಸಿದವರು ಒಂದು ದಿನಕ್ಕೆ ಕಾಯ್ತಾರೆ. ನಾನು ಅಂದಿನಿಂದ ನೋಡು ಹೇಗಿರ್ತೀನಿ’ ಅಂತಾರೆ. ಅಂತಹ ಕಾರ್ಯಕ್ಕೆ ಮರೆಯಲಾಗದ ಒಂದು ದಿನ ಬೇಕಾದರೆ ನೀವು ಈ ಹೊಸ ದಿನವನ್ನು ಆಯ್ದಿಟ್ಟುಕೊಳ್ಳಬಹುದು..

ಹೊಸದಿನ, ಹಳೆ ಬದುಕು. ನಿಮ್ಮ ನಿರ್ಧಾರಗಳು ಹಳೆ ಬದುಕನ್ನು ಹೊಸ ದಿಕ್ಕಿನೆಡೆ ಕರೆದುಕೊಂಡು ಹೋಗಲಿ. ನಾನು ಬೆಳಗ್ಗೆ ಬೇಗ ಏಳ್ತೀನಿ, ಈ ವರ್ಷ ಒಂದು ನೌಕರಿ ಹಿಡಿತೀನಿ. ಕಥೆ ಬರಿತೀನಿ, ಮದುವೆ ಆಗ್ತೀನಿ.. ಅನ್ನುವ ನಿರ್ಧಾರಗಳು ನಿಮಗೆ ಬಿಟ್ಟಿದ್ದು. ಅದು ನಿಮಗೆ ಲಾಭ. ಆದರೆ ನಿಮ್ಮ ಸಣ್ಣ ಸಣ್ಣ ನಿರ್ಧಾರಗಳಿಂದ ಬೇರೆಯವರಿಗೆ ಆಗುವ ದೊಡ್ಡ ಲಾಭಗಳಿವೆ. ಖಂಡಿತ ಅಂತಹ ನಿರ್ಧಾರಗಳು ಆಗಬೇಕು.

ಬಸ್ಸಿನಲ್ಲಿ ಯಾರಾದರೂ ಪಕ್ಕ ಕೂತರೆ ಸರಿದು ಅವರಿಗೆ ಅರಾಮಾಗಿ ಕೂರಲು ಅವಕಾಶ ಕೊಡ್ತೀನಿ, ಖಂಡಿತ ನಾನು ಇನ್ಮೇಲೆ ಹೊರಗೆ ಎಲ್ಲೂ ಸುಮ್ಮನೆ ಉಗಿಯುವುದಿಲ್ಲ. ಯಾರಾದರೂ ನನ್ನ ಜೊತೆ ಮಾತಾಡುವಾಗ ನಾನು ನನ್ನ ಮೊಬೈಲ್‌ನ ಕೈಯಲ್ಲಿಡಿದು ತೀಡುವ ಬದಲು ಜೇಬಿನಲ್ಲಿಟ್ಟುಕೊಳ್ತೀನಿ, ಮನೆಯಲ್ಲಿ ಮಕ್ಕಳೊಂದಿಗೆ ಆಟ ಆಡ್ತೀನಿ, ಯಾರೊ ವಿಳಾಸ ತಪ್ಪಿ ಬಂದರೆ ಅವರನ್ನು ಉಡಾಫೆ ಮಾಡದೆ ವಿಳಾಸಕ್ಕೆ ತಲುಪಿಸುತ್ತೀನಿ, ವಯಸ್ಸಾದ ಅಜ್ಜಿ ಇಳಿಯುವ ಊರು ಗೊತ್ತಿಲ್ಲದ ಆತಂಕದಲ್ಲಿದ್ದರೆ ಅಜ್ಜಿ ಅರಾಮಾಗಿರಿ ನಾನು ಊರು ಬಂದಾಗ ಇಳಿಸುತ್ತೀನಿ ಅಂತ ಹೇಳಿ ಕಂಫರ್ಟ್ ಕೊಡೋದು, ಫೇಸ್ಬುಕ್‌ನಲ್ಲಿ ಕಮೆಂಟು ಮಾಡುವಾಗ ಖಂಡಿತ ಸಭ್ಯ ಭಾಷೆ ಬಳಸುತ್ತೀನಿ, ವಾಟ್ಸಪ್‌ಗಳಲ್ಲಿ ಸಿಕ್ಕಿದೆಲ್ಲಾ ಫಾರ್ವಡ್ ಮಾಡಿ ಬೇರೆಯವರಿಗೆ ಹಿಂಸೆ ಕೊಡದೆ ಇರ್ತೀನಿ, ಪಬ್ಲಿಕ್‌ನಲ್ಲಿ ಜೋರಾಗಿ ಮೊಬೈಲ್ ಕಿರುಚುವುದಿಲ್ಲ, ನಾಲ್ಕು ಜನ ಇದ್ದ ಕಡೆ ಸಿಗರೇಟು ಸೇದುವುದಿಲ್ಲ, ಒಬ್ಬರು ಹೇಳಿದ್ದನ್ನು ಇನ್ನೊಬ್ಬರ ಬಳಿ ಹೇಳುವುದಿಲ್ಲ… ಎಷ್ಟೊಂದಿದೆ!

ಮನುಷ್ಯ ಒಳ್ಳೆಯವನಾಗುವುದು ದೊಡ್ಡ ದೊಡ್ಡ ವಿಚಾರಗಳಿಂದಲ್ಲ. ಸಣ್ಣ ಸಣ್ಣ ನಡವಳಿಕೆಗಳಿಂದ. ನಮ್ಮಿಂದ ಏನಾದರೂ ಕೊಡಬೇಕು ಅಂತಿದ್ರೆ ಸಾಧ್ಯವಾದಷ್ಟು ಅವರಿಗೆ ನಮ್ಮಿಂದ ಕಂಫರ್ಟ್ ಕೊಡುವುದು. ಅಂತಹ ಕಂಫರ್ಟ್ ಈ ಹೊಸ ವರ್ಷದ ದಿನ ನಮ್ಮ ನಿರ್ಧಾರವಾಗಲಿ ಅಲ್ಲವೆ..

ನಾನು ಈ ವರ್ಷ ಪುಸ್ತಕ ಓದ್ತೀನಿ, ಬೆಳಗ್ಗೆ ವಾಕ್ ಹೋಗ್ತೀನಿ, ಸಂಗೀತ ಕೇಳ್ತೀನಿ, ದಾನ ಮಾಡ್ತೀನಿ ಇಂತಹ ನೀವಷ್ಟೇ ಬೆಳೆಯುವ ಕಡಕ್ ನಿರ್ಧಾರಗಳ ಜೊತೆ ಬೇರೆಯವರಿಗೆ ನಾವು ಕೊಡುವ ಒಂದು ಕಂಫರ್ಟ್ ಬಗ್ಗೆ ಯೋಚಿಸೋಣ..

ಹ್ಯಾಪಿ ನ್ಯೂ ಇಯರ್!

(ವಿನ್ಯಾಸ: ರೂಪಶ್ರೀ ವಿಪಿನ್)