ಬೆಳಗಿನ ಸುಮಾರು ಐದೂ ಮೂವತ್ತರ ಹೊತ್ತಿಗೆ ಗಾಳಿ ಕೊಂಚ ವೇಗವಾಗಿ ಬೀಸಲಾರಂಭಿಸುತ್ತದೆ. ಟ್ರಾನ್ಸಿಟ್ ಆಫ್ ವೀನಸ್ ಪ್ರಾರಂಭವಾಗಲು ಇನ್ನು ಹದಿನೈದು ನಿಮಿಷಗಳಷ್ಟೇ ಇವೆ. ಅಷ್ಟರಲ್ಲಿ, ಮೋಡದ ಈ ಪರದೆ ತೆರೆದುಕೊಳ್ಳುತ್ತದೆಯೇ? ಸೂರ್ಯನ ದೂರವನ್ನು ತಿಳಿದುಕೊಂಡು ಮಾಡುವುದಾದರೂ ಏನು?! ಇಂತಹ ನಿರುಪಯುಕ್ತ ವಿಷಯಕ್ಕಾಗಿ ತನ್ನ ಮಡದಿ-ಮನೆ-ಮಠಗಳನ್ನು ತೊರೆದು, ಹತ್ತು ವರ್ಷಗಳ ಕಾಲ, ಏಳೇಳು ಸಮುದ್ರಗಳನ್ನು ದಾಟಿ, ಹತ್ತಾರು ಸಾವಿರ ಮೈಲು ಸಂಚರಿಸಿ, ದೇಶ-ದೇಶಗಳ ರಾಜಕೀಯಗಳ ಚದುರಂಗದಾಟಕ್ಕೆ ಸಿಲುಕಿ, ನಾನಾ ಕಷ್ಟಗಳನ್ನು ಅನುಭವಿಸಿ, ಈಗ ಪಾಂಡಿಚೆರಿಯ ಕಡಲ ತಡಿಯಲ್ಲಿ ಪೂರ್ವಾಭಿಮುಖನಾಗಿ ಏಕಾಂಗಿಯಾಗಿ ನಿಂತಿರುವ ಈ ವಿಜ್ಞಾನಿಗೆ ವಿಧಿ ಕೊನೆಗೂ ಕರುಣೆ ತೋರುವುದೇ?!
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಪಾಂಡಿಚೆರಿಯನ್ನು ತಲುಪುವ ಗುರಿಯಿಂದ ೧೭೬೦ರ ಮಾರ್ಚ್ ೨೬ರಂದು ತನ್ನ ದೇಶದಿಂದ ಪ್ರಯಾಣ ಪ್ರಾರಂಭಿಸಿದ್ದ ಲೆ ಜ಼ೆಂಟಿಗೆ, ಸರಿಯಾಗಿ ಎಂಟು ವರ್ಷಗಳ ನಂತರ, ಮಾರ್ಚ್ ೨೭, ೧೭೬೮ರಂದು, ಬೆಳಗಿನ ಸುಮಾರು ೫:೩೦ರ ಸಮಯಕ್ಕೆ, ಹಡಗಿನ ದುರ್ಬೀನಿನಿಂದ ಕೊನೆಗೂ ಕಾಣಿಸತೊಡಗಿತು. ೧೭೬೯ರ ಟ್ರಾನ್ಸಿಟ್ ಆಫ್ ವೀನಸ್‌ ಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿತ್ತು. ಆ ಕಾಲದಲ್ಲಿ ಪಾಂಡಿಚೆರಿ ಫ್ರೆಂಚ್ ಕಾಲನಿಯಾಗಿದ್ದರಿಂದ, ಅದನ್ನು ಕಂಡಾಗ ಅವನು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿರಬಹುದು. ಅವನು ಅನುಭವಿಸಿದ್ದ ಬವಣೆಗಳು, ನಿರಾಶೆಗಳು ಕೇವಲ ನೆನಪುಗಳಾಗಿದ್ದವು (ನೆನಪುಗಳು “ಕೇವಲ”ವಾಗಬಹುದೇ? ಎಂಬುದು ಬೇರೊಂದು ವಿಚಾರ). ಭಾರತದ ಪೂರ್ವತಡಿಯ ಸೂರ್ಯೋದಯ ಅವನಲ್ಲಿ ಹೊಸದೊಂದು ಉತ್ಸಾಹವನ್ನು ಚಿಗುರೊಡೆಸಿರಬಹುದು.

ಆ ಮಹತ್ವದ ದಿನದ ಕುರಿತು, ಲೆ ಜ಼ೆಂಟಿ ಹೀಗೆ ಬರೆಯುತ್ತಾನೆ: “ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಯ ಸಮಯಕ್ಕೆ ನಾನು ಪಾಂಡಿಚೆರಿಯ ನೆಲದ ಮೇಲೆ ನನ್ನ ಕಾಲನ್ನಿಕ್ಕಿದೆ. ವಿಧಿ ನನಗೆಂದೇ ಅಂಕಿತಮಾಡಿಟ್ಟಿದ್ದ ಗುರಿಯನ್ನು ನಾನು ಕೊನೆಗೂ ತಲುಪಿದೆ. ಫ್ರೆಂಚ್ ಗವರ್ನರ್ ನನ್ನನ್ನು ಆದರದಿಂದ ಬರಮಾಡಿಕೊಂಡು ಅವರ ನಿವಾಸಕ್ಕೆ ಕರೆದುಕೊಂಡು ಹೋದರು. ಒಳ್ಳೆಯ ಭೋಜನ ಮತ್ತು ಸಂಗೀತವಿದ್ದ ಔತಣಕೂಟವನ್ನು ಏರ್ಪಡಿಸಿದರು. ಹಲವಾರು ವರ್ಷಗಳ ನಂತರ ಸಮಾಧಾನ-ಶಾಂತಿಯ ಸವಿಯನ್ನು ನಾನು ಅನುಭವಿಸಿದೆ. ನಾನು ಮಾಡಬೇಕಿದ್ದ ಕಾರ್ಯದ ಕಡೆಗೆ ಪೂರ್ಣ ಗಮನ ನೀಡುವುದು ಕೊನೆಗೂ ಸಾಧ್ಯವಾದದ್ದಕ್ಕೆ ನೆಮ್ಮದಿಯೊಂದು ನನ್ನ ಮನಸ್ಸಿನಲ್ಲಿ ನೆನೆಸಿತು…

… ಮಾರನೆಯ ದಿನ ಬೆಳಗ್ಗೆ, ಮುಂದಿನ ವರ್ಷದ ಟ್ರಾನ್ಸಿಟ್ ಆಫ್ ವೀನಸ್ ಅನ್ನು ವೀಕ್ಷಿಸಲು ಒಂದು ಒಳ್ಳೆಯ ವೀಕ್ಷಣಾಲಯವನ್ನು ನಿರ್ಮಿಸಲು ತಮ್ಮ ಸಂಪೂರ್ಣ ಒಪ್ಪುಗೆ ನೀಡಿದರಷ್ಟೇ ಅಲ್ಲ, ಅದಕ್ಕಾಗಿ ಸೂಕ್ತ ಸ್ಥಳವೊಂದನ್ನು ಹುಡುಕಲು ತಮ್ಮ ಸರ್ಕಾರದ ಮುಖ್ಯ ಎಂಜಿನಿಯರ್ ಅನ್ನು ನನ್ನೊಂದಿಗೆ ಕಳುಹಿಸಿದರು”

ವೀಕ್ಷಣಾಲಯಕ್ಕೆ ಸೂಕ್ತವಾದ ಜಾಗವನ್ನು ಹುಡುಕುತ್ತಾ ಹೊರಟ ಲೆ ಜ಼ೆಂಟಿಯ ಕಣ್ಣಿಗೆ ಹಾಳು ಬಿದ್ದಿದ್ದ ಭವನವೊಂದರ ಕಟ್ಟಡ ಕಾಣಿಸಿತು. ಅದು ಹಾಳು ಬಿದ್ದಿದ್ದರೂ, ಅದರ ಗೋಡೆಗಳು ಇನ್ನೂ ಗಟ್ಟಿಯಾಗಿದ್ದವು. ಅದನ್ನು ಸ್ವಚ್ಛಗೊಳಿಸಿ, ಕಿಟಕಿ ಬಾಗಿಲುಗಳನ್ನಿರಿಸಿ, ಕೆಲವೊಂದು ರಿಪೇರಿಗಳನ್ನು ಮಾಡಿಸಿದರೆ, ಅಲ್ಲಿಂದ ಶುಕ್ರ ಸಂಚಾರದ ವೀಕ್ಷಣೆಯನ್ನು ಮಾಡಬಹುದೆಂದು ಅವನಿಗೆ ಅನ್ನಿಸಿತು. ಇದು ವೀಕ್ಷಣಾಲಯದ ನಿರ್ಮಾಣದ ಸಮಯವನ್ನು ಮಾತ್ರವಲ್ಲದೇ, ನಿರ್ಮಾಣದ ಖರ್ಚನ್ನೂ ಕಡಿಮೆ ಮಾಡುತ್ತಿದ್ದುದು ಅವನ ಈ ನಿರ್ಧಾರವನ್ನು ಗಟ್ಟಿಯಾಗಿಸಿದವು.

ಲೆ ಜ಼ೆಂಟಿಯ ಈ ನಿರ್ಧಾರವನ್ನು ಗವರ್ನರ್ ಸಹ ಪೂರ್ಣವಾಗಿ ಬೆಂಬಲಿಸಿದ. ಲೆ ಜ಼ೆಂಟಿ ಪಾಂಡಿಚೆರಿಗೆ ಕಾಲಿಟ್ಟ ಸುಮಾರು ಎರಡೇ ವಾರಗಳಲ್ಲಿ ವೀಕ್ಷಣಾಲಯದ ನಿರ್ಮಾಣಕಾರ್ಯ ಪ್ರಾರಂಭವಾಯಿತು. ಮಳೆಯ ಕಾರಣದಿಂದ, ಕೆಲಸದ ಗತಿ ಕೊಂಚ ನಿಧಾನವಾದರೂ, ನಾಲ್ಕೇ ತಿಂಗಳುಗಳಲ್ಲಿ, ಹಾಳು ಬಿದ್ದಿದ್ದ ಆ ಹಳೆಯ ಭವನದ ಅವಶೇಷಗಳಿಂದಲೇ ಒಂದು ಉತ್ತಮ ಖಗೋಳ ವೀಕ್ಷಣಾಲಯವೊಂದು ಎದ್ದು ನಿಂತಿತು. ತನ್ನ ದೂರ ದರ್ಶಕಗಳು, ಗಡಿಯಾರಗಳು ಇತ್ಯಾದಿ ಸೂಕ್ಷ್ಮ ಸಲಕರಣೆಗಳಿಗೆ ನೀರು, ಗಾಳಿ, ಧೂಳು ತಾಗದಂತೆ ಲೆ ಜ಼ೆಂಟಿ ಆ ಕಟ್ಟಡವನ್ನು ನಿರ್ಮಿಸಿದ್ದ.

ಆ ವೀಕ್ಷಣಾಲಯ, ಲೆ ಜ಼ೆಂಟಿಗೆ ಕೇವಲ ಕಾರ್ಯಸ್ಥಾನವಾಗಿರಲಿಲ್ಲ. ಅವನು ಅದರಲ್ಲಿಯೇ ವಾಸಿಸಲೂ ತೊಡಗಿದ. ಟ್ರಾನ್ಸಿಟ್ ಆಫ್ ವೀನಸ್‌ ಗೆ ಇನ್ನೂ ಸುಮಾರು ಹನ್ನೊಂದು ತಿಂಗಳಿದ್ದವು. ಅಷ್ಟರಲ್ಲಿ, ಅವನು ಪಾಂಡಿಚೆರಿಯ ಲ್ಯಾಟಿಟ್ಯೂಡ್, ಲಾಂಜಿಟ್ಯೂಡ್ ಮತ್ತು ಸ್ಥಳೀಯ ಸಮಯವನ್ನು ಕರಾರುವಾಕ್ಕಾಗಿ ತಿಳಿದುಕೊಳ್ಳಬೇಕಿತ್ತು. ಅವನು ಅದರಲ್ಲಿ ತನ್ನನ್ನು ತಾನು ಪೂರ್ಣವಾಗಿ ತೊಡಗಿಸಿಕೊಂಡ.

******

ಲೆ ಜ಼ೆಂಟಿ ವೀಕ್ಷಣಾಲಯವಾಗಿ ಪರಿವರ್ತಿಸಿದ್ದ ಆ ಹಾಳು ಬಿದ್ದಿದ್ದ ಭವನದಲ್ಲಿ ಎರಡು ಅಂತಸ್ತುಗಳಿದ್ದವು. ಮೇಲ್ಮಹಡಿಯಲ್ಲಿ ಲೆ ಜ಼ೆಂಟಿಯ ವಾಸಸ್ಥಾನ ಮತ್ತು ವೀಕ್ಷಣಾಲಯ ಇದ್ದರೆ, ಕೆಳ ಮಹಡಿ ಖಾಲಿ ಇತ್ತು; ಗಾಳಿ-ನೀರುಗಳಿಂದ ರಕ್ಷಿಸಿಡಬೇಕಾದ ನಾಜೂಕು ವಸ್ತುಗಳನ್ನು ಸಂಗ್ರಹಿಸಿಡಲು ಹೇಳಿ ಮಾಡಿಸಿದಂತಹ ಜಾಗವಾಗಿತ್ತು.

ಫ್ರೆಂಚ್ ಗವರ್ನರ್‌ ನ ಕಣ್ಣಿಗೆ ಖಾಲಿ ಇದ್ದ ಕೆಳ ಮಹಡಿ ಕಂಡ ನಂತರ, ಅದು ಹೆಚ್ಚು ದಿನ ಖಾಲಿ ಇರಲಿಲ್ಲ. ಅದೊಂದು ಉಗ್ರಾಣವಾಗಿ ಪರಿವರ್ತಿತವಾಯಿತು.

ಆ ಕಾಲದಲ್ಲಿ, ಫ್ರೆಂಚರು ಬ್ರಿಟಿಷರೊಂದಿಗೆ ಜಿದ್ದಾಜಿದ್ದಿ ಕದನದಲ್ಲಿ ತೊಡಗಿದ್ದರು. ಗನ್ ಪೌಡರ್ ಅಂತಹ ಸ್ಫೋಟಕಗಳ ಬಳಕೆ ಸಾಮಾನ್ಯವಾಗಿತ್ತು. ಸಮುದ್ರ ತಡಿಯ ವಾತಾವರಣದಲ್ಲಿ, ತೇವಾಂಶ ಹೆಚ್ಚಿರುವ ಗಾಳಿಯಿಂದ ಠುಸ್ಸಾಗದಂತೆ ಗನ್ ಪೌಡರ್ ಅನ್ನು ಸಂಗ್ರಹಿಸಿಡಲು, ಸರಿಯಾದ ಜಾಗವೊಂದು ಅವರಿಗೆ ಬೇಕಿತ್ತು. ಫ್ರೆಂಚ್ ಗವರ್ನರ್, ಲೆ ಜ಼ೆಂಟಿಯ ವೀಕ್ಷಣಾಲಯದ ಕೆಳಗಡೆಯೇ, ಸುಮಾರು ೩೬೦,೦೦೦ ಕೆ.ಜಿ. ಗನ್ ಪೌಡರ್ ಸಂಗ್ರಹಿಸಿಟ್ಟ!

ತನ್ನ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದ ಲೆ ಜ಼ೆಂಟಿ ಇದನ್ನು ವಿರೋಧಿಸಲಿಲ್ಲ. ಜೊತೆಗೇ, ತನ್ನ ಕಾರ್ಯ ಚಟುವಟಿಕೆಗಳೆಲ್ಲಕ್ಕೂ, ಪೂರ್ಣ ಬೆಂಬಲ ನೀಡುತ್ತಿದ್ದ ಗವರ್ನರ್‌ ನ ಈ ನಿರ್ಧಾರವನ್ನು ವಿರೋಧಿಸುವ ಸ್ಥಾನದಲ್ಲೂ ಲೆ ಜ಼ೆಂಟಿ ಇರಲಿಲ್ಲ.

ವಿಶ್ವದ ಇತಿಹಾಸದಲ್ಲಿ, ಮೇಲ್ಮಹಡಿಯಲ್ಲಿ ಖಗೋಳ ವೀಕ್ಷಣಾಲಯ, ಕೆಳ ಮಹಡಿಯಲ್ಲಿ ಸಾವಿರಾರು ಕೆ.ಜಿ. ಭಾರೀ ಸ್ಫೋಟಕಗಳನ್ನು ಸಂಗ್ರಹಿಸಿಟ್ಟ ಉಗ್ರಾಣದ ಉದಾಹರಣೆಗಳಿಲ್ಲ; ಲೆ ಜ಼ೆಂಟಿಯ ಈ ವೀಕ್ಷಣಾಲಯವೊಂದನ್ನು ಬಿಟ್ಟರೆ. ಒಂದೇ ಒಂದು ಸಣ್ಣ ಕಿಡಿ ಸಾಕಿತ್ತು ಲೆ ಜ಼ೆಂಟಿಯ ಹಲವು ವರ್ಷಗಳ ಪರಿಶ್ರಮವನ್ನು ಕ್ಷಣ ಮಾತ್ರದಲ್ಲೇ “ಢಂ” ಎನ್ನಿಸಲು!

ಲೆ ಜ಼ೆಂಟಿ, ಲ್ಯಾಟಿಟ್ಯೂಡ್, ಲಾಂಜಿಟ್ಯೂಡ್ ಇತ್ಯಾದಿಗಳ ಅಧ್ಯಯನ ಮಾಡುತ್ತಲೇ, ಪಾಂಡಿಚೆರಿಯ ಸ್ಥಳೀಯರ ಸಂಪರ್ಕವನ್ನೂ ಮಾಡಿಕೊಂಡ. ಭಾರತೀಯ ಖಗೋಳ ವಿಜ್ಞಾನ ಅವನಿಗೆ ಆಸಕ್ತಿಯ ವಿಚಾರವಾಗಿತ್ತು. ಈ ವಿಷಯದ ಕುರಿತು ಸ್ಥಳೀಯರೊಂದಿಗಿನ ತನ್ನ ಒಡನಾಟವನ್ನು ಅವನು ವಿಷದವಾಗಿ ಉಲ್ಲೇಖಿಸುತ್ತಾನೆ. ಮರಿಯಪ್ಪ ಎಂಬ ಫ್ರೆಂಚ್ ಕಲಿತಿದ್ದ ತಮಿಳು ವ್ಯಕ್ತಿಯ ಮೂಲಕ ಪಾಂಡಿಚೆರಿಯ ಬ್ರಾಹ್ಮಣರನ್ನು ಸಂಪರ್ಕಿಸುವ ಲೆ ಜ಼ೆಂಟಿ, ಚಂದ್ರ ಮತ್ತು ಸೂರ್ಯ ಗ್ರಹಣಗಳ ದಿನ ಮತ್ತು ಕಾಲವನ್ನು ಕರಾರುವಾಕ್ಕಾಗಿ ಮತ್ತು ಸರಳವಾಗಿ ಲೆಕ್ಕ ಹಾಕುವ ಅವರ ವಿಧಾನಕ್ಕೆ ಮಾರು ಹೋಗುತ್ತಾನೆ. ಸುಮಾರು ಆರು ವಾರಗಳ ಕಾಲ, ಪ್ರತಿ ದಿನ ಅವರೊಂದಿಗೆ ಕುಳಿತು ಆ ವಿಧಾನವನ್ನು ತಾನೂ ಕಲಿಯುತ್ತಾನೆ. ಗ್ರಹಣಗಳನ್ನು ಅಷ್ಟೊಂದು ಕರಾರುವಾಕ್ಕಾಗಿ ತಿಳಿಸುವ ಅವರಿಗೆ, ಧೂಮಕೇತುಗಳ ವಿಷಯ ಅಷ್ಟಾಗಿ ತಿಳಿಯದಿರುವುದು ಅವನಲ್ಲಿ ಅಚ್ಚರಿ ಮೂಡಿಸುತ್ತದೆ.

ಬಾಯಿಪಾಠ ಮಾಡಿದ ಸಂಸ್ಕೃತ ಶ್ಲೋಕಗಳು ಮತ್ತು ಕವಡೆಗಳ ಸಹಾಯದಿಂದ ಗ್ರಹಣಗಳ ದಿನ-ಕಾಲಗಳನ್ನು ಲೆಕ್ಕಹಾಕುವ ಆ ಬ್ರಾಹ್ಮಣರ ವಿಧಾನವನ್ನು, ಪೆನ್-ಪೇಪರ್-ಗಣಿತ ಬಳಸುವ ತನ್ನ ಪಾಶ್ಚಾತ್ಯ ವಿಧಾನದೊಂದಿಗೆ ಅವನು ತಾಳೆ ಹಾಕುತ್ತಾನೆ. ಲೆಕ್ಕಾಚಾರದಲ್ಲಿ ತಪ್ಪಾದರೆ, ಅದನ್ನು ಮತ್ತೊಮ್ಮೆ ಗಮನಿಸಿ, ವಿಶ್ಲೇಷಿ, ತಿದ್ದುವ ಸಾಧ್ಯತೆ ಬರಹದ ಪದ್ಧತಿಯಲ್ಲಿ ಇದೆಯಾದರೂ, ಶ್ಲೋಕ-ಕವಡೆಗಳ ವಿಧಾನದಲ್ಲಿ ಇಲ್ಲದಿರುವುದು ಅವನ ಗಮನಕ್ಕೆ ಬರುತ್ತದೆ. ಹೀಗಿದ್ದರೂ, ಲೆಕ್ಕಾಚಾರದಲ್ಲಿ ತಪ್ಪೇ ಮಾಡದ ಆ ಬ್ರಾಹ್ಮಣರು ಅವನ ಸೋಜಿಗಕ್ಕೆ ಕಾರಣರಾಗುತ್ತಾರೆ. ತನ್ನ ಬರಹದಲ್ಲಿ, ಲೆಕ್ಕಾಚಾರದಲ್ಲಿ ತಪ್ಪೆಸಗದ ಬ್ರಾಹ್ಮಣರ ಹಿಂದೆ, ಅವರ ನಿರ್ಲಿಪ್ತ ಮತ್ತು ಪ್ರಶಾಂತ ಮನಸ್ಥಿತಿ ಕೆಲಸ ಮಾಡುತ್ತಿದೆ ಎನ್ನುತ್ತಾನೆ. ಹಾಗೆಯೇ ಅಂತಹ ಮನಸ್ಥಿತಿ ಯೂರೋಪಿಯನ್ನರಿಗಿಲ್ಲ ಎನ್ನುತ್ತಾನೆ.

ತಾನು ಪರಿಚಯಿಸಿಕೊಂಡ ಭಾರತೀಯ ಖಗೋಳ ಶಾಸ್ತ್ರದ ಪದ್ಧತಿಗಳನ್ನು ಶ್ಲಾಘಿಸುವ ಅವನು, ಈ ಮಾತುಗಳನ್ನೂ ಹೇಳುತ್ತಾನೆ:

“ಯೂರೋಪಿಯನ್ನರಾದ ನಾವು, ಶತಮಾನಗಳ ಹಿಂದೆ ಇನ್ನೂ ಅಜ್ಞಾನ ಮತ್ತು ಅನಾಗರೀಕತೆಯ ಅಂಧಕಾರದಲ್ಲಿ ಮುಳುಗಿದ್ದಾಗಲೇ ಈ ಬ್ರಾಹ್ಮಣರು ಗ್ರಹಣಗಳನ್ನು ಲೆಕ್ಕಾಚಾರ ಹಾಕಬಲ್ಲವರಾಗಿದ್ದರೆನ್ನಿಸುತ್ತದೆ.

ಆದರೆ, ಶಾತವಾಹನನು ಗತನಾಗಿ ಸಾವಿರದ ಏಳುನೂರು ವರ್ಷಗಳಾಗಿವೆ. ಈ ಬ್ರಾಹ್ಮಣರು ಅದೇ ಲೆಕ್ಕಾಚಾರವನ್ನೇ ಇನ್ನೂ ಮಾಡುತ್ತಿದ್ದಾರೆ. ಅದರಲ್ಲಿ ಮುಂದುವರೆದಂತೆ ಕಾಣುತ್ತಿಲ್ಲ.

[ಅವು ಶಾಸ್ತ್ರಗಳಾಗಿಬಿಟ್ಟಿರುವುದರಿಂದ] ಲೆಕ್ಕಾಚಾರಗಳನ್ನು ಪರೀಕ್ಷೆಗೆ ಒಳಪಡಿಸಿ ಅವನ್ನು ಮತ್ತಷ್ಟು ಉತ್ತಮಗೊಳಿಸುವುದನ್ನು ಅವರು ಒಪ್ಪುವುದಿಲ್ಲ. [ಮತ್ತೆ-ಮತ್ತೆ ಪರೀಕ್ಷೆಗೆ ಒಳ ಪಡಿಸಿ ಸದಾ ಬದಲಿಸುವ] ನಮ್ಮ ವಿಧಾನ ಅವರಿಗೆ ಮೌಢ್ಯವೆನ್ನಿಸುತ್ತದೆ”

ಲೆ ಜ಼ೆಂಟಿಯ ಈ ಮಾತುಗಳು ಅಕ್ಷರಶಃ ನಿಜವಲ್ಲವಾದರೂ, – ಉದಾಹರಣೆಗೆ ಯೂರೋಪಿನ ಪುರಾತನ ಗ್ರೀಕ್ ಮತ್ತು ರೋಮನ್ನರೂ ಗ್ರಹಣಗಳನ್ನು ಲೆಕ್ಕಹಾಕಬಲ್ಲವರಾಗಿದ್ದರು – ನನ್ನ ದೃಷ್ಟಿಯಲ್ಲಿ, ಮಹತ್ತರ ಐತಿಹಾಸಿಕ ಸತ್ಯವನ್ನೂ ಸೂಚಿಸುತ್ತದೆ ಎಂದೆನ್ನಿಸುತ್ತದೆ.

ಲೆ ಜ಼ೆಂಟಿಯ ಈ ನಿರ್ಧಾರವನ್ನು ಗವರ್ನರ್ ಸಹ ಪೂರ್ಣವಾಗಿ ಬೆಂಬಲಿಸಿದ. ಲೆ ಜ಼ೆಂಟಿ ಪಾಂಡಿಚೆರಿಗೆ ಕಾಲಿಟ್ಟ ಸುಮಾರು ಎರಡೇ ವಾರಗಳಲ್ಲಿ ವೀಕ್ಷಣಾಲಯದ ನಿರ್ಮಾಣಕಾರ್ಯ ಪ್ರಾರಂಭವಾಯಿತು. ಮಳೆಯ ಕಾರಣದಿಂದ, ಕೆಲಸದ ಗತಿ ಕೊಂಚ ನಿಧಾನವಾದರೂ, ನಾಲ್ಕೇ ತಿಂಗಳುಗಳಲ್ಲಿ, ಹಾಳು ಬಿದ್ದಿದ್ದ ಆ ಹಳೆಯ ಭವನದ ಅವಶೇಷಗಳಿಂದಲೇ ಒಂದು ಉತ್ತಮ ಖಗೋಳ ವೀಕ್ಷಣಾಲಯವೊಂದು ಎದ್ದು ನಿಂತಿತು.

ಜೂನ್ ೪, ೧೭೬೯ರ, ಟ್ರಾನ್ಸಿಟ್ ಆಫ್ ವೀನಸ್‌ ನ ದಿನ ಹತ್ತಿರವಾದಂತೆ, ಲೆ ಜ಼ೆಂಟಿಯ ಹೃದಯದ ಬಡಿತ ಹೆಚ್ಚಾಗುತ್ತಾ ಹೋಗುತ್ತದೆ. ಅವನು ತನ್ನ ಮನೆ ಬಿಟ್ಟು ಒಂಬತ್ತು ವರ್ಷಗಳೇ ಆಗಿವೆ. ಎಷ್ಟೋ ಸಾಗರಗಳನ್ನು ದಾಟಿದ್ದಾನೆ. ಯಾವ-ಯಾವುದೋ ದೇಶಗಳನ್ನು ನೋಡಿದ್ದಾನೆ. ಕಷ್ಟ-ವಿಷಾದಗಳನ್ನು ಅನುಭವಿಸಿದ್ದಾನೆ. ಆದರೂ, ಫ್ರೆಂಚ್ ಗವರ್ನರ್‌ ನ ಆದರದ ಆತಿಥ್ಯ, ಉತ್ತಮ ವೀಕ್ಷಣಾಲಯದ ನಿರ್ಮಾಣದ ಯಶಸ್ಸು, ಖಗೋಳ ವಿಜ್ಞಾನದ ಕುರಿತು ತಮಿಳು ಬ್ರಾಹ್ಮಣರೊಂದಿಗಿನ ಚರ್ಚೆಯ ದೈನಂದಿನ ನೆಮ್ಮದಿಯ ಬದುಕಿನ ಮಧ್ಯೆಯೂ ಒಂದು ರೀತಿಯ ನಿರೀಕ್ಷೆಯ ಕಾತುರ-ಆತಂಕ ಅವನಲ್ಲಿ ಮನೆ ಮಾಡುತ್ತದೆ.

ತನ್ನ ಬಳಿ ಹದಿನೈದು ಅಡಿಯ ಉತ್ತಮ ದೂರದರ್ಶಕವಿದ್ದರೂ, ಮದ್ರಾಸಿನಲ್ಲಿದ್ದ ಬ್ರಿಟಿಷರನ್ನು ಸಂಪರ್ಕಿಸಿ ಅವರಿಂದ ಮತ್ತೊಂದು ಉತ್ತಮ ಗುಣಮಟ್ಟದ ದೂರದರ್ಶಕವನ್ನು ಪಡೆಯುತ್ತಾನೆ.

ಇಷ್ಟರ ಮಧ್ಯೆ, ಸ್ಪೇನ್ ಸರ್ಕಾರ ಎಂದೋ ಕಳುಹಿಸಿದ್ದ – ಮನಿಲಾದಲ್ಲಿ ಯಾವುದೇ ಭಯವಿಲ್ಲದೆ ನೆಲೆಸ ಬಹುದೆಂಬ – ಅನುಮತಿ ಪತ್ರ ಅವನ ಕೈ-ಸೇರುತ್ತದೆ. ಆದರೆ, ಅದರ ಪ್ರಯೋಜನವಾದರೂ ಏನು? ಶುಕ್ರ-ಸಂಚಾರದ ಕ್ಷಣಕ್ಕೆ ಕೇವಲ ಒಂದು ತಿಂಗಳು ಮಾತ್ರವಿದೆ.

ತನ್ನ ಟೆಲೆಸ್ಕೋಪ್ ಮೂಲಕ ಪಾಂಡಿಚೆರಿಯ ಆಕಾಶವನ್ನು ಪ್ರತಿರಾತ್ರಿ ವೀಕ್ಷಿಸುವ ಅವನು, “ಪಾಂಡಿಚೆರಿಯ ರಾತ್ರಿಯ ಆಕಾಶದ ಸೊಬಗನ್ನು ನೋಡಿಯೇ ಆಸ್ವಾದಿಸಬೇಕು. ಎಲ್ಲವೂ ಸ್ಫಟಿಕ-ಸ್ಪಷ್ಟ. ನಕ್ಷತ್ರಗಳು ಕೂಡ ಮಿನುಗುವುದಿಲ್ಲ, ಬೆಳಗುತ್ತವೆ. ಗುರುಗ್ರಹವನ್ನು ಇಷ್ಟೊಂದು ಸ್ಪಷ್ಟವಾಗಿ ನಾನು ಇನ್ನೆಲ್ಲಿಂದಲೂ ಕಂಡಿಲ್ಲ. ಆದರೆ, ಜೂನ್ ತಿಂಗಳಲ್ಲಿ ರಾತ್ರಿಗಳಿಗಿಂತ ಬೆಳಗಿನ ಆಕಾಶವೇ ಸ್ಪಷ್ಟ” ಎನ್ನುತ್ತಾನೆ.

ಸೂರ್ಯನ ಮುಂದೆ ಶುಕ್ರನು ಸಂಚರಿಸುವುದನ್ನು ನೋಡಲು ಅವನಿಗೆ ಬೇಕಿರುವುದೂ ಸ್ಪಷ್ಟ ಬೆಳಗಿನ ಆಕಾಶವೇ.

******

ಜೂನ್ ೩, ೧೭೬೯ ರ ರಾತ್ರಿ. ಲೆ ಜ಼ೆಂಟಿಗೆ ಏನು ಮಾಡಿದರೂ ನಿದ್ದೆ ಬರಲೊಲ್ಲದು. ಮಾರನೆಯ ದಿನ ಬೆಳಗ್ಗೆ ಸುಮಾರು ೫:೪೫ಕ್ಕೆ ಸೂರ್ಯೋದಯವಾಗುತ್ತದೆಂದು ಅವನಿಗೆ ತಿಳಿದಿದೆ. ಆ ಸಮಯದಿಂದ, ಸುಮಾರು ೭ ಗಂಟೆಯ ವರೆಗೆ ಟ್ರಾನ್ಸಿಟ್ ಆಫ್ ವೀನಸ್ ಸಂಭವಿಸಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ, ಅವನು ಎಷ್ಟೋ ವರ್ಷಗಳಿಂದ ನಿರೀಕ್ಷಿಸುತ್ತಿರುವ, ಈ ಬಾರಿ ತಪ್ಪಿದರೆ ಇನ್ನೆಂದೂ ಅವನಿಗೆ ಕಾಣದಿರುವ, ಮಹಾ ಅಪರೂಪದ ದೃಶ್ಯಾವಳಿ ಕಡೆಗೂ ಕಾಣಲಿದೆ.

ಆ ರಾತ್ರಿಯ ನೀರವತೆಯಲ್ಲಿ, ಕಡಲಿನ ಅಲೆಗಳು ಪಾಂಡಿಚೆರಿಯ ತೀರಕ್ಕೆ ಬಡಿಯುವುದು ಅವನಿಗೆ ಕೇಳುತ್ತದೆ. ಲೆ ಜ಼ೆಂಟಿ ಇದೊಂದು ಶುಭ ಸೂಚಕವೆಂದೇ ಭಾವಿಸುತ್ತಾನೆ. ಟೆಲೆಸ್ಕೋಪ್, ಗಡಿಯಾರ ಮತ್ತಿತರ ಸಲಕರಣೆಗಳೆಲ್ಲಾ ಸಿದ್ಧವಾಗಿವೆ. ಲ್ಯಾಟಿಟ್ಯೂಡ್, ಲಾಂಜಿಟ್ಯೂಡ್ ಇತ್ಯಾದಿ ವಿವರಗಳನ್ನೆಲ್ಲಾ ಕಂಡುಕೊಂಡು ದಾಖಲಿಸಿಕೊಂಡೂ ಆಗಿದೆ.

ಕಾತುರ, ಆತಂಕಗಳ ಚಡಪಡಿಕೆಯಿಂದ, ಮಲಗಿರಲಾರದೆ, ಮಧ್ಯ ರಾತ್ರಿಯ ಸುಮಾರು ಎರಡು ಗಂಟೆಗೇ ಅವನು ಹಾಸಿಗೆಯಿಂದ ಏಳುತ್ತಾನೆ. ಆಕಾಶವೆಂಬ ರಂಗಭೂಮಿಯಲ್ಲಿ ಸೂರ್ಯ, ಚಂದ್ರ, ನವ ಗ್ರಹಗಳು, ತಾರಾ ಸಮೂಹ ಸೇರಿದಂತೆ ಖಗೋಳ ಕಾಯಗಳು ಆಡುವ ನಾಟಕ ನಿರಂತರ. ಆದರೆ, ಶುಕ್ರನು ಸೂರ್ಯನ ವಿಶಾಲ ಮುಖಕ್ಕೆ ಮುತ್ತಿಕ್ಕಿ ಹೊರ ನಡೆಯುವ ದೃಶ್ಯಾವಳಿಯನ್ನು ನೋಡಲು ಮಾತ್ರ ಎಷ್ಟೋ ಬೆಲೆ ತೆತ್ತು, ಒಳ್ಳೆಯ ಸೀಟೋಂದನ್ನು ಕಾಯ್ದಿರಿಸಿರಬೇಕು. ಲೆ ಜ಼ೆಂಟಿ ಯಾರೂ ತೆರದಿದ್ದ ಬೆಲೆ ತೆತ್ತಿದ್ದಾನೆ. ಅವನಿಗೆ ಪಾಂಡಿಚೆರಿಯಂಥ ಒಳ್ಳೆಯ ಸೀಟೂ ಸಹ ಸಿಕ್ಕಿದೆ. ರಂಗಮಂಟಪದಲ್ಲಿ ನಟರ ಆಗಮನವಷ್ಟೇ ಆಗಬೇಕಿದೆ. ಅದಕ್ಕೆ ಇನ್ನೂ ಸುಮಾರು ನಾಲ್ಕು ಗಂಟೆ ಇದೆ.

ಪ್ರಪ್ರಥಮ ಬಾರಿಗೆ ನಾಟಕವೊಂದನ್ನು ವೀಕ್ಷಿಸಲು ಹೋಗಿರುವ ಮಗುವೊಂದು, ಖಾಲಿ ಇರುವ ರಂಗಮಂಟಪವನ್ನು ಕ್ಷಣ-ಕ್ಷಣಕ್ಕೂ ಕಾತುರಯತೆಯಿಂದ ವೀಕ್ಷಿಸುವಂತೆ, ಲೆ ಜ಼ೆಂಟಿಯೂ ಸಹ ಆಕಾಶವನ್ನು ನೋಡಲು ಆ ಕಗ್ಗತ್ತಲ ರಾತ್ರಿಯಲ್ಲಿಯೇ ಹೊರನಡೆಯುತ್ತಾನೆ. ತಲೆ ಎತ್ತಿ ನೋಡಿದರೆ, ಎದೆ ಧಸಕ್ಕೆನ್ನುತ್ತದೆ.

ಏನೂ ಕಾಣದು.
ಎಲ್ಲೆಲ್ಲೂ ಕವಿದಿರುವ ಕಾರ್ಮೋಡ.

ನಿರಾಶೆ, ದುಃಖಗಳ ಆ ಕ್ಷಣಗಳಲ್ಲಿ, ತೀರಕ್ಕೆ ಅಪ್ಪಳಿಸುತ್ತಿದ್ದ ಕಡಲಿನ ಅಲೆಗಳ ಭೋರ್ಗೆರೆತಗಳೂ ಕೇಳದಾಯಿತೆಂದು ಅವನು ತನ್ನ ಬರಹದಲ್ಲಿ ಹೇಳಿಕೊಳ್ಳುತ್ತಾನೆ.

ಆದರೂ, ಇನ್ನೂ ಕೆಲವಾರು ಗಂಟೆಗಳ ಸಮಯವಿದ್ದಿದ್ದರಿಂದ, ಹತಾಶೆಯ ಕಾರ್ಮೋಡಗಳಲ್ಲೂ ಬೆಳ್ಳಿಯ ಅಂಚನ್ನು ಹುಡುಕುವವರಂತೆ, ಅವನು ಮತ್ತೆ ಮತ್ತೆ ಹೊರಬಂದು ಪೂರ್ವದ ದಿಗಂತದೆಡೆಗೆ ನೋಡಲಾರಂಭಿಸುತ್ತಾನೆ. ಗಂಟೆಗಳು ಉರುಳಿದರೂ ಮೋಡಗಳು ಮಾತ್ರ ಚಲಿಸವೊಲ್ಲವು.

ಬೆಳಗಿನ ಸುಮಾರು ಐದೂ ಮೂವತ್ತರ ಹೊತ್ತಿಗೆ ಗಾಳಿ ಕೊಂಚ ವೇಗವಾಗಿ ಬೀಸಲಾರಂಭಿಸುತ್ತದೆ. ಟ್ರಾನ್ಸಿಟ್ ಆಫ್ ವೀನಸ್ ಪ್ರಾರಂಭವಾಗಲು ಇನ್ನು ಹದಿನೈದು ನಿಮಿಷಗಳಷ್ಟೇ ಇವೆ. ಅಷ್ಟರಲ್ಲಿ, ಮೋಡದ ಈ ಪರದೆ ತೆರೆದುಕೊಳ್ಳುತ್ತದೆಯೇ? ಸೂರ್ಯನ ದೂರವನ್ನು ತಿಳಿದುಕೊಂಡು ಮಾಡುವುದಾದರೂ ಏನು?! ಇಂತಹ ನಿರುಪಯುಕ್ತ ವಿಷಯಕ್ಕಾಗಿ ತನ್ನ ಮಡದಿ-ಮನೆ-ಮಠಗಳನ್ನು ತೊರೆದು, ಹತ್ತು ವರ್ಷಗಳ ಕಾಲ, ಏಳೇಳು ಸಮುದ್ರಗಳನ್ನು ದಾಟಿ, ಹತ್ತಾರು ಸಾವಿರ ಮೈಲು ಸಂಚರಿಸಿ, ದೇಶ-ದೇಶಗಳ ರಾಜಕೀಯಗಳ ಚದುರಂಗದಾಟಕ್ಕೆ ಸಿಲುಕಿ, ನಾನಾ ಕಷ್ಟಗಳನ್ನು ಅನುಭವಿಸಿ, ಈಗ ಪಾಂಡಿಚೆರಿಯ ಕಡಲ ತಡಿಯಲ್ಲಿ ಪೂರ್ವಾಭಿಮುಖನಾಗಿ ಏಕಾಂಗಿಯಾಗಿ ನಿಂತಿರುವ ಈ ವಿಜ್ಞಾನಿಗೆ ವಿಧಿ ಕೊನೆಗೂ ಕರುಣೆ ತೋರುವುದೇ?!

ಗಾಳಿ ಭರದಿಂದ ಬೀಸುತ್ತದೆ. ಸಮುದ್ರದಲ್ಲಿ ಲಂಗರು ಹಾಕಿದ್ದ ಹಡುಗುಗಳು ಅತ್ತಿಂದಿತ್ತ ಹೊಯ್ದಾಡಹತ್ತುತ್ತವೆ. ಅಲೆಗಳ ಮೊರೆತ ಹೆಚ್ಚಾಗುತ್ತವೆ. ಆದರೆ, ಆಕಾಶದ ರಂಗಮಂಟಪವನ್ನು ಮುಚ್ಚಿದ್ದ ಕರಿ ಮೋಡದ ತೆರೆ ಮಾತ್ರ ಸರಿಯುವುದೇ ಇಲ್ಲ. ಬೆಳಗಿನ ಒಂಬತ್ತು ಗಂಟೆಯ ಆಸುಪಾಸಿಗೆ, ಸೂರ್ಯ ಮೋಡದ ಮರೆಯಿಂದ ಹೊರ ಬರುವ ವೇಳೆಗೆ, ಶುಕ್ರ ಸೂರ್ಯನಿಗೆ ಮುತ್ತಿಕ್ಕಿ ಹೊರನಡೆದು ಎರಡು ಗಂಟೆಯ ಮೇಲಾಗಿರುತ್ತದೆ. ನಂತರ, ಸೂರ್ಯ, ಇಡೀ ದಿನ ಪಾಂಡಿಚೆರಿಯ ಆಕಾಶದಲ್ಲಿ ಲೆ ಜ಼ೆಂಟಿಯನ್ನು ಅಣಕಿಸುವಂತೆ ಮೆರೆಯುತ್ತಾನೆ.

******

ಲೆ ಜ಼ೆಂಟಿ ಅನುಭವಿಸಿದ ಈ ಆಳವಾದ ನಿರಾಶೆ, ಅವನನ್ನು ತೀವ್ರವಾದ ಖಿನ್ನತೆಗೆ ದೂಡಿತು. ಇಷ್ಟರ ಮಧ್ಯೆ, ಮನಿಲಾದ ಆಕಾಶದಲ್ಲಿ ಆ ದಿನ ಒಂದಿಷ್ಟೂ ಮೋಡವಿರಲಿಲ್ಲ ಎಂಬ ಸಂಗತಿಯೂ ಅವನಿಗೆ ತಿಳಿದುಬಂದಾಗ ಅವನ ದುಃಖ ಮತ್ತಷ್ಟು ಹೆಚ್ಚಾಯಿತು.

ಆದರೆ ಅವನ ಕಷ್ಟಗಳ ಸರಣಿಗೆ ಕೊನೆ ಇನ್ನೂ ಇರಲಿಲ್ಲ. ವಾಪಸು ಫ್ರಾನ್ಸಿಗೆ ಹೋಗುವ ಆಲೋಚನೆ ಇದ್ದರೂ, ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಹಲವಾರು ತಿಂಗಳುಗಳ ಕಾಲ ಅವನು ಪಾಂಡಿಚೆರಿಯಲ್ಲಿಯೇ ಉಳಿಯಬೇಕಾಯಿತು.

ಕೊನೆಗೆ, ಪಾಂಡಿಚೆರಿಗೆ ಕಾಲಿಟ್ಟ ಎರಡುವರ್ಷಗಳ ನಂತರ, ಟ್ರಾನ್ಸಿಟ್ ಆಫ್ ವೀನಸ್‌ನ ಒಂಬತ್ತು ತಿಂಗಳ ನಂತರ, ೧೭೭೦ರ ಮಾರ್ಚ್‌ನಲ್ಲಿ ಫ್ರಾನ್ಸಿಗೆ ಹೊರಟಿದ್ದ ಫ್ರೆಂಚ್ ಹಡುಗೊಂದರಲ್ಲಿ ತನ್ನ ಸ್ವದೇಶದೆಡೆಗೆ ಪ್ರಯಾಣ ಬೆಳೆಸಿದ.

ಹಲವು ವಾರಗಳ ಸಮುದ್ರಯಾನದ ನಂತರ ಆ ಹಡುಗು ಮಾರಿಷಸ್ಸಿಗೆ ಬಂದಿತು. ಅಷ್ಟರಲ್ಲಿ, ಲೆ ಜ಼ೆಂಟಿಯ ಆರೋಗ್ಯ ಹದಗೆಟ್ಟಿತ್ತು. ಮತ್ತಷ್ಟು ತಿಂಗಳು ಕಡಲಯಾತ್ರೆ ಮಾಡುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ಹೀಗಾಗಿ ಅವನನ್ನು ಮಾರಿಷಸ್ಸಿನಲ್ಲಿಯೇ ಇಳಿಸಿ, ಹಡುಗು ಮುಂದುವರೆಯಿತು.

ಸುಮಾರು ಏಳು ತಿಂಗಳುಗಳ ಕಾಲ ಮಾರಿಷಸ್ಸಿನಲ್ಲಿಯೇ ತನ್ನ ಆರೋಗ್ಯವನ್ನು ಸುಧಾರಿಸಿಕೊಂಡ ಅವನು, ೧೭೭೦ರ ನವೆಂಬರಿನಲ್ಲಿ, ಫ್ರಾನ್ಸಿಗೆ ಹೊರಟಿದ್ದ ಮತ್ತೊಂದು ನೌಕೆಯನ್ನು ಏರಿದ. ಆದರೆ, ಅಲ್ಲೂ ದುರಾದೃಷ್ಟ ಕಾದಿತ್ತು. ಕೆಲವು ವಾರಗಳ ಪ್ರಯಾಣದ ನಂತರ, ಆ ಹಡುಗು ಚಂಡಮಾರುತವೊಂದಕ್ಕೆ ಸಿಲುಕಿ ನುಜ್ಜುಗುಜ್ಜಾಯಿತು. ಆದರ ಹಾಯಿಗಳನ್ನು ಕಟ್ಟಿದ್ದ ಕಂಬಗಳು ಮುರಿದು ಬಿದ್ದವು. ಹೇಗೋ ಸಾವರಿಸಿಕೊಂಡು, ಜನವರಿ ೧, ೧೭೭೧ರಂದು ಅದು ಪುನಃ ಮಾರಿಷಸ್ಸಿಗೇ ವಾಪಸಾಯಿತು. ಆದರೆ, ಅವನು ತನ್ನ ಯಾತ್ರೆಯಲ್ಲಿ ಸಂಪಾದಿಸಿ ಜತನವಾಗಿ ಇಟ್ಟುಕೊಂಡಿದ್ದ ಎಷ್ಟೋ ವೈಜ್ಞಾನಿಕ ಸಲಕರಣೆಗಳು, ಸಸ್ಯ-ಪ್ರಾಣಿಗಳ ಸ್ಯಾಂಪಲ್ಲುಗಳೂ ನೀರು ಪಾಲಾದವು.

ಮತ್ತೆ ಮೂರು ತಿಂಗಳ ಕಾಲ ಅವನು ಮಾರಿಷಸ್ಸಿನಲ್ಲಿಯೇ ಉಳಿಯ ಬೇಕಾಯಿತು. ಈ ಸಮಯದಲ್ಲಿ, ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ವೈಷಮ್ಯ ಕಡಿಮೆಯಾಗಿತ್ತು. ೧೭೭೧ ರ ಮಾರ್ಚ್‌ನಲ್ಲಿ ಮನಿಲಾದಿಂದ ಸ್ಪೇನಿಗೆ ಪ್ರಯಾಣ ಮಾಡುತ್ತಿದ್ದ ಸ್ಪೇನ್ ಯುದ್ಧ ನೌಕೆಯೊಂದು ಮಾರಿಷಸ್ಸಿಗೆ ಬಂದಿತು. ಲೆ ಜ಼ೆಂಟಿ ಆ ಯುದ್ಧ ನೌಕೆಯಲ್ಲಿ ಯೂರೋಪಿನ ಕಡೆಗೆ ವಾಪಸು ಹೊರಟ. ಆ ಯಾತ್ರೆಯಲ್ಲಿಯೂ ಅವನು ಆತಂಕದ ಕ್ಷಣಗಳನ್ನು ಎದುರಿಸ ಬೇಕಾಯಿತು.

(ಪಾಂಡಿಚೇರಿಯ ಸೂರ್ಯ)

ಹಲವು ವಾರಗಳ ಸಮುದ್ರಯಾನದ ನಂತರ, ಆಫ್ರಿಕಾದ ತುದಿಯನ್ನು ಮುಟ್ಟಿದಾಗ, ಫ್ರಾನ್ಸ್, ಸ್ಪೇನ್ ಮತ್ತು ಬ್ರಿಟನ್ ನಡುವೆ ಮತ್ತೆ ಕದನ ಪ್ರಾರಂಭವಾಗಿದೆಯೆಂಬ ವಿಚಾರ ಕೇಳಿ ಬಂತು. ಲೆ ಜ಼ೆಂಟಿ ಪ್ರಯಾಣ ಮಾಡುತ್ತಿದ್ದದ್ದು ಒಂದು ಯುದ್ಧ ನೌಕೆಯಾದ್ದರಿಂದ, ಅದರ ಮೇಲೆ ಇತರೆ ದೇಶಗಳ ನೌಕೆಗಳು ದಾಳಿ ಮಾಡುವ ಸಂದರ್ಭ ಏರ್ಪಟ್ಟಿತು. ಆದರೆ, ಬ್ರಿಟನ್ನಿನಿಂದ ಬಂದಿದ್ದ ಹಡುಗೊಂದರ ಕ್ಯಾಪ್ಟನ್, ತಾನು ತಂದಿದ್ದ ಲಂಡನ್ ಗೆಜ಼ೆಟ್ ಪತ್ರಿಕೆಯನ್ನು ತೋರಿಸಿದ. ಅದರಲ್ಲಿದ್ದ ವರದಿಯಂತೆ, ಈ ಮೂರೂ ದೇಶಗಳು ತಮ್ಮಲ್ಲಿದ್ದ ವಿವಾದಗಳನ್ನು ಬಗೆಹರಿಸಿಕೊಂಡಿದ್ದರು. ಬ್ರಿಟಿಷ್ ಹಡಗಿನ ಕ್ಯಾಪ್ಟನ್, ಸ್ಪೇನ್ ದೇಶದ ಕ್ಯಾಪ್ಟನ್‌ ಗೆ ಸ್ನೇಹದ ಕಾಣಿಕೆಯಾಗಿ ಒಂದು ಮೂಟೆ ಆಲೂ ಗಡ್ಡೆಯನ್ನು ನೀಡಿದ ವಿಷಯವನ್ನೂ ಲೆ ಜ಼ೆಂಟಿ ತನ್ನ ಬರಹದಲ್ಲಿ ದಾಖಲಿಸುತ್ತಾನೆ.

******

ಮಾರಿಷಸ್ಸಿನಿಂದ ಪ್ರಯಾಣ ಮಾಡಿದ ನಾಲ್ಕು ತಿಂಗಳ ನಂತರ ಅವನು ಸ್ಪೇನಿನ ತೀರವನ್ನು ತಲುಪಿದ. ಅಲ್ಲಿಂದ ಫ್ರಾನ್ಸಿಗೆ ಇನ್ನೊಂದು ನೌಕೆಯಲ್ಲಿ ಪ್ರಯಾಣ ಮಾಡ ಬೇಕಿತ್ತು. ಆದರೆ, ಒಂದು ದಶಕದ ಸಮುದ್ರಯಾನ, ಲೆ ಜ಼ೆಂಟಿಗೆ ಸಾಕೆನ್ನಿಸ್ಸಿತು. ಅವನು, ಇನ್ನುಳಿದ ಪ್ರಯಾಣವನ್ನು ನೆಲದ ಮೇಲೆಯೇ ಮಾಡಿ ಫ್ರಾನ್ಸ್ ಸೇರುವುದೆಂದು ನಿರ್ಧರಿಸಿದ.

ಒಂದು ತಿಂಗಳ ಪ್ರಯಾಣ ಮಾಡಿ, ಅಕ್ಟೋಬರ್ ೮, ೧೭೭೧ರಂದು ತನ್ನ ಸ್ವದೇಶವಾದ ಫ್ರಾನ್ಸ್ ಅನ್ನು ಕೊನೆಗೂ, ತಲುಪಿದ – ಹನ್ನೊಂದು ವರ್ಷ ಆರು ತಿಂಗಳು ಹದಿಮೂರು ದಿನಗಳ ಸುದೀರ್ಘ ಸಾಹಸ ಯಾತ್ರೆಯ ನಂತರ. ಆದರೆ, ಅವನ ಕಷ್ಟಗಳ ಸರಣಿಗೆ ಇನ್ನೂ ಕೊನೆ ಇರಲಿಲ್ಲ.

ಅವನು ಪ್ಯಾರಿಸಿಗೆ ವಾಪಸಾದಾಗ ಅವನಿಗೊಂದು ಆಘಾತ ಕಾದಿತ್ತು. ಫ್ರೆಂಚ್ ಸರ್ಕಾರವೂ ಸೇರಿದಂತೆ ಎಲ್ಲರೂ ಅವನು ಸತ್ತಿದ್ದನೆಂದೇ ಭಾವಿಸಿದ್ದರು. ಫ್ರಾನ್ಸಿನ ರಾಯಲ್ ಸೊಸೈಟಿ ಆಫ್ ಸೈನ್ಸ್ ಅವನ ಸ್ಥಾನವನ್ನು ಇನ್ನೊಬ್ಬನಿಗೆ ನೀಡಿತ್ತು. ಅವನ ವಾರಸುದಾರರು ಅವನ ಆಸ್ತಿಯನ್ನು ಪಾಲು ಮಾಡಿಕೊಂಡಿದ್ದರು. ಅವನ ಮಡದಿ ಇನ್ನೊಬ್ಬನನ್ನು ಮದುವೆಯಾಗಿದ್ದಳು(*). ಹಲವಾರು ತಿಂಗಳುಗಳ ಕಾನೂನಿನ ಹೋರಾಟ ಮತ್ತು ಫ್ರೆಂಚ್ ದೊರೆಯ ನೆರವಿನಿಂದ ಅವನ ಸ್ಥಾನ ಮತ್ತು ಆಸ್ತಿಗಳು ಅವನಿಗೆ ವಾಪಸಾದವು.

ನಂತರದಲ್ಲಿ, ಲೆ ಜ಼ೆಂಟಿ ಮರು ಮದುವೆಯೂ ಆದ. ಮುದ್ದಿನ ಮಗಳೊಬ್ಬಳ ತಂದೆಯೂ ಆದ. ತನ್ನ ಸಾಹಸ ಯಾತ್ರೆಯ ಇಪ್ಪತ್ತೊಂದು ವರ್ಷಗಳ ನಂತರ, ತನ್ನ ಅರವತ್ತೇಳನೆಯ ವಯಸ್ಸಿನಲ್ಲಿ ರುಜಿನವೊಂದಕ್ಕೆ ತುತ್ತಾಗಿ ಇಹದ ಯಾತ್ರೆಯನ್ನು ಮುಗಿಸಿದ.

ಲೆ ಜ಼ೆಂಟಿಯ ಕುರಿತು ಬರೆದಿರುವ, ಖ್ಯಾತ ಫ್ರೆಂಚ್ ವಿಜ್ಞಾನಿ ಕ್ಯಾಸಿನಿಯ ಪ್ರಕಾರ, ಲೆ ಜ಼ೆಂಟಿಯ ಸಾವು ಅವನನ್ನು ಇನ್ನೊಂದು ದುರಾದೃಷ್ಟದಿಂದ ರಕ್ಷಿಸಿತು. ಅವನ ಸಾವಿನ ನಂತರದಲ್ಲಿ, ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ, ಫ್ರೆಂಚ್ ರಾಜತ್ವದ ವಿರೋಧಿಗಳು, ಆಧುನಿಕ ಕೆಮಿಸ್ಟ್ರಿಯ ಪಿತಾಮಹನೆಂದೇ ಕರೆಸಿಕೊಳ್ಳುವ ಲೆವಾಯ್ಸಿಯೇ ನಂತಹ ಹಲವಾರು ವಿಜ್ಞಾನಿಗಳ ಕತ್ತನ್ನು ಗಿಲೋಟಿನ್ನಿನಲ್ಲಿ ಕತ್ತರಿಸಿದರು.

******

ಲೆ ಜ಼ೆಂಟಿಯ ಸಾಹಸಗಾತೆಯಂತೆ, ವಿಜ್ಞಾನದ ಚರಿತ್ರೆಯಲ್ಲಿ ಇನ್ನೆಷ್ಟೋ ಕುತೂಹಲಕಾರಿ ಕತೆಗಳಿವೆ. ಅವುಗಳೆಡೆಗೆ ನಾವು ಗಮನ ಹರಿಸಬೇಕಷ್ಟೇ.

೧೭೬೦ರ ದಶಕದ ಟ್ರಾನ್ಸಿಟ್ ಆಫ್ ವೀನಸ್ ಸಂದರ್ಭದಲ್ಲಿಯೂ ಕೂಡ, ಇನ್ನೆಷ್ಟೋ ವಿಜ್ಞಾನಿಗಳೂ ಸಾಹಸ ಯಾತ್ರೆ ಕೈಗೊಂಡರು. ಅವರಲ್ಲಿ ಹಲವರು ಯಶವನ್ನೂ ಕಂಡರು. ಅವರು ತಾವು ದಾಖಲಿಸಿದ ವಿವರಗಳನ್ನು ಇತರ ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಈ ವಿವರಗಳನ್ನು ಬಳಸಿ, ಎಡ್ಮಂಡ್ ಹ್ಯಾಲಿಯ ವಿಧಾನದ ಮೂಲಕ, ಭೂಮಿ ಮತ್ತು ಸೂರ್ಯನ ದೂರವನ್ನು ಅವರು ೧೭೭೧ರ ಡಿಸೆಂಬರಿನಲ್ಲಿ – ಲೆ ಜ಼ೆಂಟಿ ವಾಪಸಾದ ಎರಡು ತಿಂಗಳ ನಂತರ – ಪ್ರಕಟಿಸಿದರು. ಅವರ ಲೆಕ್ಕಾಚಾರದ ಪ್ರಕಾರ, ಸೂರ್ಯನ ದೂರ ೯೩,೭೨೬,೯೦೦ ಮೈಲುಗಳು. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಈ ದೂರ ೯೨,೯೫೫,೦೦೦ ಮೈಲುಗಳು. ಶೇ. ಒಂದಕ್ಕಿಂತ ಕಡಿಮೆ ವ್ಯತ್ಯಾಸ! (ಸೂರ್ಯನ ಸುತ್ತ ಭೂಮಿ ಸುತ್ತುವ ಕಕ್ಷೆ ನಿಖರವಾದ ವೃತ್ತವಲ್ಲವಾದ್ದರಿಂದ ಈ ದೂರ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಇದು ಕೆಲವೊಮ್ಮೆ ಸುಮಾರು ೯ ಕೋಟಿ ೫೦ ಲಕ್ಷ ಮೈಲುಗಳಿದ್ದರೆ, ಇನ್ನೂ ಕೆಲವೊಮ್ಮೆ ೯ ಕೋಟಿ ೧೦ ಲಕ್ಷ ಮೈಲುಗಳಿರುತ್ತದೆ)

 

(ಮುಂದುವರೆಯುವುದು)