ಈ ದೇಶದೆಲ್ಲೆಡೆಯ ಸಿನೆಮಾ ಸಂಸ್ಕೃತಿಗೆ ಒಂದು ಮಹಾ ಆಯಾಮವನ್ನೂ, ಮಾದರಿಯನ್ನೂ ಕೊಟ್ಟಿರುವ ಬಾಲಿವುಡ್ ಸಂಗೀತ ಈಚೆಗೆ ನನ್ನೀ ನಲವತ್ತರ ನಡುಮನಸ್ಸನ್ನೇಕೋ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದೆ. ಅದರಲ್ಲೂ ಈ ಹೊಸಕಾಲದ ಹಾಡುಗಳ ಧುನ್ ಮತ್ತು ಝಟ್ಕಾಗಳು. ಯಾವುದೇ ಸಂಗೀತವನ್ನು ಅದರ ಸಾಹಿತ್ಯದ ಗೋಜಿಲ್ಲದೆ ಯಾವತ್ತೂ ಅನುಭವಿಸಿದವನು ನಾನಲ್ಲ. ಹಾಗಾಗಿ ಮಾತು ಸ್ಪಷ್ಟವಿಲ್ಲದ ಬರೇ ಅಬ್ಬರದ ಸದ್ದಿರುವ ಈ ಸಂಗೀತ ನನಗೆಂದೂ ಒಪ್ಪವೆನಿಸಿಲ್ಲ. ಅಪ್ಪನಿಗೆ ವರ್ಗವಾಗುತ್ತಿದ್ದ ಹಾಗೆ ಎರಡೆರಡು ವರ್ಷಕ್ಕೆ ಎತ್ತಂಗಡಿಯಾಗುತ್ತ, ಬಿಡದಿ ಬದಲಿಸುತ್ತ ನಾಡಿನ ಒಳಾಂತರಗಳಲ್ಲಿ ಅಲ್ಲಲ್ಲಿನ ನಾಡಿ ಹಿಡಿಯುತ್ತಲೇ ಬೆಳೆದ ನನಗೆ ಈ ಬೃಹನ್ನಗರಿಯಲ್ಲಿ ಹೂಡಿಕೊಂಡು, ಓದು ಹಮ್ಮಿಕೊಳ್ಳುವವರೆಗೆ ಕನ್ನಡವಲ್ಲದೆ ಬೇರೇನೂ ಗೊತ್ತಿದ್ದಿಲ್ಲ. ಇಲ್ಲಿ ನೆಲೆಯಾದವರ ಮೇಲೆ ಊರು ಹಚ್ಚುವ ಮಂಪರೇ ಅಂಥದ್ದಿರಬೇಕೇನೋ. ಇಲ್ಲಿನ ಔದ್ಯೋಗಿಕತೆಗೆ ಅನುವುಗೊಳಿಸುವ ಓದಿನ ಜತೆಗೆ ನನ್ನನ್ನು ಪೂರ್ತಾ ಬೆಸೆದು ಎಲ್ಲ ದೇಸೀ ಬೇರುಗಳನ್ನೂ ಅದು ಕಡಿದುಬಿಟ್ಟಿತು. ಹೇಳೀ ಕೇಳೀ ಈ ಆರ್ಕಿಟೆಕ್ಚರೆಂಬುದು ‘ನಾಗರಿಕ’ ಬೆಡಗನ್ನೇ ಅರೆದೆರೆದು ತೆಗೆದ ಓದು, ಬೋಧೆ ಮತ್ತು ಪ್ರಯೋಗ. ಹೀಗಾಗಿಯೇ ನನ್ನ ಕನ್ನಡವೆಲ್ಲ ಆಲ್‍ಮೋಸ್ಟ್ ಮರೆತೇಹೋಯಿತು. ದೋಸೆಯನ್ನು ದೋಸಾ ಅಂತಲೂ, ವಡೆಯನ್ನು ವಡಾ ಅಂತಲೂ ಪಲುಕುವ ಇಲ್ಲಿನ ಷೋಕೀ ‘ನಾಗರಿಕ’ತೆ ನನ್ನದಾಯಿತು. ಇಲ್ಲಿ ಈಗಿನ ಪಡ್ಡೆಗಳು ಅನ್ನದಂಥ ಅನ್ನವನ್ನೂ ರೈಸ್ ಅನ್ನುತ್ತಾರೆ- ಆ ಮಾತು ಬೇರೆ. ನನಗೆ ಪಿಂಕ್‍ಫ್ಲಾಯ್ಡ್, ಬಾಬ್ ಡಿಲನ್, ಎರಿಕ್ ಕ್ಲ್ಯಾಪ್ಟನ್, ಎಲ್ಟನ್ ಜಾನ್‍ಗಳು ಮಾತಿನ ಸಮೇತ ತಂತಮ್ಮ ಬೀಟುಗಳಲ್ಲಿ ತೊಡಗಿಸಿಕೊಂಡರೂ ಈ ಹಿಂದೀ ಹಾಡುಗಳ ಗುನುಗು ಗುಂಗುಗಳೇಕೋ ನನ್ನವಾಗಲೇ ಇಲ್ಲ. ತಪ್ಪು ನನ್ನದಲ್ಲ. ಸಹವಾಸದ್ದು.

ನಾನು ಓದು ಮುಗಿಸುವ ಸುಮಾರಿಗಷ್ಟೇ ಇಲ್ಲಿ ಕೇಬಲ್ ಟೀವೀ ಸುರುವಾಗಿದ್ದು. ಓರಗೆಯವರಲ್ಲಿ ಶ್ಯಾಂ ಅಂತೊಬ್ಬನಿದ್ದ. ದಿನಾ ಸಂಜೆ ಎಸ್ಸೆಲ್ವಿಯೆದುರು ಸಿಕ್ಕಾಗ, ಬ್ರಿಗೇಡ್ಸ್‍ನಲ್ಲಿ ಆಗಾಗ್ಗೆ ಗಸ್ತು ಹೊಡೆಯುವಾಗ, ನೈನ್‍ಟೀನ್ ಚರ್ಚ್‍ಸ್ಟ್ರೀಟ್‍ನಲ್ಲೋ ನಾಸಾದಲ್ಲೋ ಬಿಯರು ಬುರುಗಿಸಿ ಟೊಳ್ಳಾಗುವಾಗಲೆಲ್ಲ- ಅವನು ತನ್ನ ಲಿವಿಂಗ್‍ರೂಮಿನಲ್ಲಿ ಸದಾ ಬಿತ್ತರಗೊಳ್ಳುತ್ತಿದ್ದ ಎಮ್-ಟೀವೀ ವಿಡಿಯೋಗಳ ಬಗ್ಗೆ ಮಾತು ಹಚ್ಚಿ ಹುಚ್ಚು ಕೆರಳಿಸುತ್ತಿದ್ದ. ಅದು ವೀಕ್ಲೀ ಟಾಪ್‍ಟೆನ್‍ಗಳ ಕಾಲ. ಒಂದೊಂದರಲ್ಲೂ ಎಂಥದೋ ಅಬ್ಬರದ ಎಂಥದೋ ವೇಗದ ಲಯಕ್ಕೆ- ಧಬ ಧಬ ಧಬ ಅಂತ ಮೈ ಕುಲುಕುವ ಹೀರೋ ಹೆರೋಯಿನ್‍ಗಳು ಮತ್ತು ಹಿಂದೆ ಅವರ ಹಾಗೇ ಬಳುಕುವ ಎಷ್ಟೊಂದು ಗಂಡು-ಹೆಣ್ಣು ಜೋಡಿಗಳ ಪಡೆ! ದೂರದಿಂದ ನೋಡಿದರೆ ಅಷ್ಟು ದೊಡ್ಡ ಗುಂಪಿನಲ್ಲಿ ಖಿಚಡಿಯಂತೆ ಬೆರೆತು ಬಿಡುವ ಈ ಮುಂದಾಳುಗಳು ಎದ್ದು ತೋರುವುದೇ ತಮ್ಮ ಉಡುಗೆ ತೊಡುಗೆಗಳಿಂದ. ಹೈಸ್ಕೂಲಿನಲ್ಲಿ ನಾವೆಲ್ಲ ಒಟ್ಟಾಗಿ ಆಟದ ಬಯಲಿನಲ್ಲಿ ಮಾಸ್‍ಡ್ರಿಲ್ ಮಾಡಿದಂತೆ ಅನಿಸುತ್ತಿತ್ತು. ವಿಚಿತ್ರವೇ ಸರಿ! ನಾನು ಆ ದಿನಗಳಲ್ಲಿ ಅರವತ್ತು ಮುಟ್ಟಿದವನ ಹಾಗೆ ದೇಶ ಎಲ್ಲಿಂದೆಲ್ಲಿಗೆ ಹೋಗಿ ಕೆಟ್ಟುಹೋಗುತ್ತಿದೆ ಅಂತ ಕಳವಳಿಸುತ್ತಿದ್ದೆ.

ಓದು ಮುಗಿಸಿ ಸ್ವಂತ ಉದ್ದಿಮೆಯ ಜಾಡು ಹಿಡಿದಾಗ ಅನುದಿನದ ಓಟದ ಭರಾಟೆಯಲ್ಲಿ ಕೆನ್ನಿಜೀಯ ಬ್ರೆಥ್‍ಲೆಸ್, ಗ್ರೀಸ್‍ಟೂವಿನ ರಿಪ್ರೊಡಕ್ಷನ್ ಮತ್ತಿತರೆ ಗುಂಗುಗಳಿಂದ ಅನಾಮತ್ತು ಆಚೆ ಬಂದದ್ದಾಯಿತು. ಕಡಿಮೆಯೆಂದರೂ ಐವತ್ತು ಕಿಲೋಮೀಟರು ಊರಿನೊಳಗೆ ಆಚೀಚೆ ಬೈಕಿನಲ್ಲಿ ಗಸ್ತು ತಿರುಗುವ ಉದ್ಯೋಗ ನನ್ನದು. ಹೀಗಿರುವಾಗ ಇವಕ್ಕೆಲ್ಲ ಎಡೆಯೆಲ್ಲಿ? ಬೇಗ ಕಾರು ಅಂತೊಂದಾದರೆ ಸದಾ ಕೆಸೆಟ್, ಸೀಡಿಗಳಲ್ಲಿ ಹಳೆಯ ಬೀಟು ಕುಟ್ಟಬಹುದೆಂಬ ಹಳಹಳಿಕೆಯೊಟ್ಟಿಗೆ ಏಗುತ್ತ ತೂಗುತ್ತ ಕಾರಿನವರೆಗೆ ಬೆಳೆಯುವ ಹೊತ್ತಿಗೆ ಆ ಹಾಡುಗಳ ವಾಂಛೆಯೇ ಕಮರಿಕೊಂಡಿತ್ತು. ಈಗಿನ ಪಡ್ಡೆಗಳು ಸದಾ ಕಿವಿಯ ಹೊಳ್ಳೆಗೆ ಎಂಪಿಥ್ರೀ ಗಾಳ ತುರುಕಿಕೊಂಡು ಆರ್ಕಿಟೆಕ್ಚರಿನ ಸ್ಕೂಲು, ಸ್ಟುಡಿಯೋಗಳಲ್ಲಿ ಕುಳಿತಲ್ಲೇ ತೊನೆಯುತ್ತ- ಗಂಟೆಗಟ್ಟಲೆ ಖಾಲಿ ಹಾಳೆಯ ಮೇಲೆ ಎಣಿಸುವಷ್ಟೇ ಗೆರೆಗಳಲ್ಲಿ ವಿನ್ಯಾಸ ಧ್ಯಾನಿಸುವುದು ನೋಡಿದರೆ ಅವರ ಆಹ್ಲಾದದ ಅನುಭೂತಿಯ ಬಗ್ಗೆ ಹೊಟ್ಟೆಯುರಿಯುತ್ತದೆ. ಬಿಡಿ.

ಆದರೆ ಈಗ ಇದ್ದಕ್ಕಿದ್ದಂತೆ ನನ್ನ ಮಧ್ಯವಯಸ್ಕ ಹುಮ್ಮಸ್ಸನ್ನು ಬಾಲಿವುಡ್ ಧುನ್‍ಗಳ ಜತೆಗೆ ಅವುಗಳ ಅಂಡು ಬಳುಕುವ ನಲಿವಿನಲ್ಲೂ ತೊಡಗಿಸಿದ್ದು ದೈನಂದಿನದಲ್ಲಿ ಗಟ್ಟಿಯಾಗಿ ಬೆಸೆದುಕೊಂಡಿರುವ ಏರೋಬಿಕ್ಸೇ ಸರಿ. ಓದು ಮುಗಿಸಿದ ದಿನಗಳಲ್ಲಿ ದೇಶದ ಆಂಥಮ್ಮಿನಂತಿದ್ದ ‘ಓಲೆ ಓಲೆ ಓಲೆ’ಯಿಂದ ಮೊದಲುಗೊಂಡು, ಗೋವಿಂದನ ಜತೆ ಪುಟಿಯುತ್ತ ಬಿಳಿಸೀರೆಯನ್ನು ಮಂಡಿಮಟ್ಟಕ್ಕೆತ್ತುವ ಕನ್ನಡಕದ ಲಲನೆಯರ- ‘ತುತ್ತುತ್ತೂ ತುತ್ತುತ್ತಾರ’ವನ್ನೂ ಒಳಗೊಂಡು, ಇವತ್ತಿನ ಓಮ್ ಶಾಂತಿ ಓಮ್…, ಧೂಮ್ ಮಚಾಲೆ, ಕ್ರ್‍ಎಝೀ ಕಿಯಾರೇ-ಗಳವರೆಗೆ ಹಿಂದಿಯ ಸಕಲ ಸಂಪದವನ್ನೂ ಪರಿಚಯಿಸಿರುವ ಏರೋಬಿಕ್ಸ್ ಎಂಬ ತನು ಹನಿಯುವ ಕುಣಿತಕ್ಕೆ ಈ ಟಿಪ್ಪಣಿಯ ಒಟ್ಟೂ ಋಣವಿದೆ.

ಮೂವ್ವತ್ತರ ಗಡಿ ದಾಟುತ್ತಲೇ ಯಾವುದೋ ಹುಕುಮ್ಮಿಗೆ ಮಣಿದ ಹಾಗೆ ಈ ಶರೀರ ಈ ಊರಿನದೇ ಜಂಕಿನ ಪದರಗಳನ್ನು ತನ್ನ ಸುತ್ತ ಜಡಿದುಕೊಳ್ಳುತ್ತದೆ. ಈ ಪರಮಸತ್ಯವನ್ನು ಅನುಭವಿಸದ ಹೊರತು ಯಾರಿಗೆ ತಾನೇ ಹೇಗೆ ಗೊತ್ತಾದೀತು? ಚುರುಕು ತಾಕಿದ ಮೇಲೆ ತಾನೇ ಬೆಂಕಿಯ ಗುಣಧರ್ಮದ ಅರಿವಾಗುವುದು? ನನಗಾಗಿದ್ದು ಸಹ ಅದೇ. ಮೆಲ್ಲ ಮೆಲ್ಲಗೆ ಅನ್ನುತ್ತ ಸುಮ್ಮನೆ ಸುರುಗೊಂಡ ಬೊಜ್ಜು ಕ್ವಿಂಟಲ್ಲಿನವವರೆಗೆ ದಷ್ಟಪುಷ್ಟವಾಗಿ ಬೆಳೆದು ಏದುಸಿರು ತಂದಿದ್ದೇ ನಾನು ಮೈಯ ತುಲನೆ ಮತ್ತು ಸಂತುಲನೆಗೆಂದು ಈ ಕಸರತ್ತುಗಳಿಗೆ ಶರಣೆಂದಿದ್ದು. ಕಳೆದ ಐದಾರು ವರ್ಷಗಳಿಂದ ಜಿಮ್ಮೆನ್ನುವುದು ನನ್ನ ಐಹಿಕಗಳಲ್ಲಿ ಅವಿಭಾಜ್ಯವಾಗಿಬಿಟ್ಟಿದೆ.

ವರ್ಷದ ಹಿಂದಿನ ತನಕ ಕಾರ್‍ಡಿಯೋ ನೆವದಲ್ಲಿ ಬರೇ ಟ್ರೆಡ್‍ಮಿಲ್ ಓಡುತ್ತಿದ್ದ ನಾನು ಸುಮ್ಮನೆ ಬದಲಾವಣೆಗೆಂದು ಏರೋಬಿಕ್ಸ್‍ನಲ್ಲಿ ದಾಖಲಾಗಿದ್ದು. ಶುರುವಿನಲ್ಲಿ ನನಗೆ ಈ ಕಸರತ್ತು ತೀರಾ ವಿಚಿತ್ರದ್ದು ಮತ್ತು ಅತಿರೇಕದ್ದು ಅನಿಸಿ ಬಿಟ್ಟುಬಿಡುವ ಇರಾದೆಯಾಗಿದ್ದೂ ಹೌದು. ನಾನು ಯಾವತ್ತೂ ಮುಜುಗರಿಸುವ ಬಾಲಿವುಡ್ ಧನ್‍ಧನಾಧನ್-ಗಳಿಗೆ ಅರ್ಥ, ಸಾರ್ಥಕಗಳಿಲ್ಲದೆ ಗುಂಪಿನಲ್ಲಿ ಮೈ ಕುಲುಕುವುದೆಂದರೆ ಯಾರಿಗೆ ತಾನೇ ರುಚಿಸೀತು? ಸಾಲದಕ್ಕೆ ಮುಂದೆ ನಿಂತು ಎಲ್ಲರನ್ನೂ ನಿರ್ದೇಶಿಸುವ ಇನ್ಸ್‍ಟ್ರಕ್ಟರು ತಪ್ಪು ಹೆಜ್ಜೆಯಿಟ್ಟರೆ ಇದ್ದಲ್ಲಿಂದಲೇ ‘ಏಯ್ ಯೋಯ್..!’ ಅಂತ ಮುಸುಡಿ ಹಿಂಡಿ ಒರಲುವುದು ನನ್ನ ಘನತೆಗೆ ಗೌರವಕ್ಕೆ ಚ್ಯುತಿಯಂತಲೂ ಅನಿಸಿತ್ತು. ಏರೋಬಿಕ್ಸ್ ಹಾಲಿನ ಕನ್ನಡಿಗಳಲ್ಲಿ ಯಾರೇ ಗುಂಪಿನ ಶಿಸ್ತು ಮೀರಿದರೂ ವಿಚಿತ್ರವಾಗಿ ಪ್ರತಿಫಲಿಸಿ ಚಿಕ್ಕ ತಪ್ಪು ಎದ್ದು ತೋರುವುದು ನನ್ನ ಬಗ್ಗೆ ನನಗೇ ರೇಜಿಗೆ ತರುತ್ತಿತ್ತು. ಮೂರನೆಯ ದಿನ ಇನ್‍ಸ್ಟ್ರಕ್ಟರ್ ಶಿವ ನನ್ನನ್ನು ಎಲ್ಲರೆದುರು ಕೂಗಿ ತಿದ್ದಿದಾಗ ಇನ್ನಿಲ್ಲದ ಅವಮಾನವಾಗಿತ್ತು. ಅವನು ತರಗತಿಯ ಬಳಿಕ ನನ್ನನ್ನು ಕರೆದು- ದಿಸ್ ಈಸ್ ನಾಟ್ ಎ ಬಿಗ್ ಥಿಂಗ್ ಡೂಡ್… ಕಾನ್ಸಂಟ್ರ್‍ಏಟ್ ಅಂತ ಗದರಿದ್ದ. ಅಬ್ಬಾ! ಎಷ್ಟು ನಾಚಿಕೆಯಾಗಿತ್ತು!!

ಮನಸ್ಸು ತೊಡಗಿಸಿದರೆ ಏನೇನೂ ಸಾಧ್ಯ ಅಂದುಕೊಳ್ಳುವ ಮತ್ತು ನಂಬಿರುವ ನನಗೆ- ನನ್ನೀ ಹಾಳು ಕಾಲುಗಳು ಎಷ್ಟೆಲ್ಲ ತೂಗು, ಬಾಗುಗಳ ಸಾಧ್ಯತೆಗಳಿಗೆ ಈವರೆಗೆ ಅನುವುಗೊಂಡಿಲ್ಲವೆನ್ನುವುದು ಇನ್ನಿಲ್ಲದ ಖೇದ ಹುಟ್ಟಿಸಿತು. ಹೇಗಾದರೂ ಮಾಡಿ ಈ ಮೈಯನ್ನು ಅಬ್ಬರದ ಬೀಟುಗಳ ಸದ್ದಿಗೆ ಒಗ್ಗುವ ಮತ್ತು ಅದೇ ಸದ್ದನ್ನು ಈ ಮೈಯ ಚಾಚು ನಿಲುಕುಗಳಿಗೆ ಒಗ್ಗಿಸಿಕೊಳ್ಳುವ ಪಟ್ಟು ಹಿಡಿದು ಮುಂದುವರೆದೆ. ಬೇಸಿಕ್, ಸ್ಟೆಪ್‍ಟಚ್, ಪೋನೀ, ಮ್ಯಾಂಬೋ, ಮೆಕರಿನಾ, ಫಿಗರಿನ್ ಎಂಬ ಗತ್ತಿನ ಹೆಸರಿರುವ ಸಾಮಾನ್ಯ ಚಲನೆಗಳು ಕರಗತ, ಪದಗತವಾಗಿದ್ದೇ ಕೊಂಚ ಖುಷಿಯಾಯಿತು. ಇವತ್ತಿನ ಹಿಂದೀ ಮೂವೀಗಳ ಜೀವಾಳವೇ ಆಗಿರುವ ಹಾಡು-ಕುಣಿತಗಳು ಈ ಕೆಲವೇ ಕೆಲವು ಪಟ್ಟುಗಳು ಬೆರೆಸಿದ ವರಸೆ ಅಂತ ಗೊತ್ತಾಗಿದ್ದೇ ಏನೋ ಸಾಕ್ಷಾತ್ಕರವಾದಂತೆ ಇವತ್ತಿಗೂ ನನ್ನ ಹಮ್ಮು ಬೀಗುತ್ತದೆ.

ಇವತ್ತಿನ ಬಾಲಿವುಡ್ ಫಿಲ್ಮೀ ನಂಬರುಗಳಲ್ಲಿ ರಾಗಕ್ಕಿಂತ ತಾಳಕ್ಕೆ, ಧಾಟಿಗಿಂತ ಲಯಕ್ಕೆ, ಮಾತಿಗಿಂತ ಅದು ಹೊಮ್ಮುವ ಸದ್ದಿಗೆ ಪ್ರಾಶಸ್ತ್ಯವಿದೆಯೇನೋ. ಬಹುಶಃ ದೇಶದ ಎಲ್ಲ ಸಿನೆಮಾಗಳಲ್ಲೂ ಇದು ಹೀಗೇ ಇರಬೇಕು. ಅವುಗಳ ತಪ್ಪು ಒಪ್ಪುಗಳನ್ನು ಬದಿಗಿಟ್ಟು ಅಥವಾ ಅವನ್ನು ಹಿಂದಿನ ಹಾಡುಗಳ ಜತೆ ಹೋಲಿಕೆಯಿಟ್ಟು ಕೇಳದೆಯೆ- ಅವನ್ನು ಅವನ್ನಾಗಿಯೇ ಪರಿಗಣಿಸಿದರೆ ಅಲ್ಲಿ ಮತ್ತೊಂದು ಸತ್ಯ ಗೋಚರಿಸೀತು. ಈ ಹಾಡುಗಳು ಈ ಹೊಸ ಕಾಲ ಇನ್ನಿಲ್ಲದಂತೆ ನಂಬುವ ಸ್ಪೀಡೆಂಬ ತತ್ತ್ವವನ್ನು ಆಧರಿಸಿ ಆದವುಗಳಿರಬೇಕು. ತ್ವರೆಯೇ ಹೊಸ ಕಾಲದ ಧ್ಯೇಯಘೋಷ. ನಮಗೆ ನಮ್ಮ ಯೋಚನೆಯ ವೇಗದಲ್ಲಿ ಎಲ್ಲವೂ ಆಗಿಬಿಡಬೇಕು. ತಾನು ಜಿಂಕೆಯೆಂದು ಧೇನಿಸುತ್ತಲೇ ಮಾರೀಚ ಜಿಂಕೆಯಾಗಿಹೋದ ಹಾಗೆ! ನಾವು ಬದುಕುತ್ತಿರುವ ಇವತ್ತಿನ ಧಾವಂತಗಳಿಗೆ ವ್ಯವಧಾನವೆಲ್ಲಿ? ಸಾವಕಾಶವೆಲ್ಲಿ? ಹತ್ತು ಸೆಕೆಂಡುಗಳಲ್ಲಿ ಕಾರು ಎಷ್ಟು ವೇಗವನ್ನು ಗ್ರಹಿಸೀತು ಎನ್ನುವುದರಿಂದ ನಮ್ಮ ಸಂಚಲನದ ಗುಣಮಟ್ಟವನ್ನು ಅಳೆಯುವ ನಮಗೆ ಎಲ್ಲಕ್ಕೂ ಶೀಘ್ರಮೇವ ಪ್ರಾಪ್ತಿಯೆನ್ನುವುದೇ ಹಾರೈಕೆ. ದಿಢೀರ್ ಸಿರಿವಂತಿಕೆ, ಫಾಸ್ಟ್‍ಫುಡ್, ರೆಡಿಮಿಕ್ಸ್ ಕಾಂಕ್ರೀಟ್, ರೆಡಿ ಟು ಈಟ್ ದಿನಸಿ, ರೆಡಿ ಟು ತೊಡು ದಿರಿಸು, ಪ್ರೀಫ್ಯಾಬ್ ಮನೆ…. ಹೀಗೆ ಪಟ್ಟಿಯನ್ನು ಬೆಳೆಸಬಹುದು. ನಾವು ಕಾವ್ಯವನ್ನು ಚುಟುಕಿಗೆ, ಕತೆಯನ್ನು ಪ್ರಸಂಗಕ್ಕೆ ಇಳಿಸಿರುವುದೂ ಇದೇ ಫಟಾಫಟ್ ಮಂತ್ರಕ್ಕೆ ಅನುಗುಣವಾಗಿಯೇ. ಹೀಗಿರುವಾಗ ಹಾಡೊಂದು, ಅದರೊಳಗಿನ ಸಂಚಾರವೊಂದು, ಅದರ ಚಿತ್ರಣದಲ್ಲಿನ ಚಲನೆಯೊಂದು ನಿಧಾನವಾಗಿ ಕ್ರಮಿಸಬೇಕೆಂದರೆ ಅದು ಹುಂಬತನವೇ ಸರಿ. ಅಂತಲೇ ನಮ್ಮ ಇವತ್ತಿನ ಹಾಡುಗಳು ಲಘುವಾಗಿವೆ. ತ್ವರೆಯಾಗಿವೆ. ಚುರುಕಾಗಿವೆ. ಇಷ್ಟಕ್ಕೂ ಹಾಡಿನ ಅರ್ಥ ಅರೆಯೆನಿಸಿದರೆ ಹೊಣೆ ಹಾಡಿನದಷ್ಟೇ ಅಲ್ಲವಲ್ಲ?

ಜಗತ್ತಿಗೊಂದು ಲಯವಿದೆ. ಅದು ಸಮುದ್ರದ ಭರತಗಳಲ್ಲಿ, ಭೂಮಿಯ ತಿರುವುಗಳಲ್ಲಿ, ಅಣು ಕಣಗಳ ಕಂಪನಗಳಲ್ಲಿ, ಇನ್ನಾವುದೋ ಸ್ಪಂದನದಲ್ಲಿ ಇದೆ ಅಂತ ಅವರಿವರು ಹೇಳಿದ್ದನ್ನು ನಾನು ನೇರ ಅರಿತಿದ್ದೇ ಏರೋಬಿಕ್ಸ್ ಶುರು ಮಾಡಿದ ಮೇಲೆ. ನಮ್ಮ ಒಟ್ಟೂ ಚಲನೆಯನ್ನು ಫ್ರ್‍ಏಮುಗಳಲ್ಲಿ ಒಡೆದು, ಕಾಲವನ್ನು ಸೆಕೆಂಡುಗಳಲ್ಲಿ ಹಿಡಿದು, ಬೆಳಕನ್ನು ಘಟಕಗಳಲ್ಲಿ ಇಳಿಸಿ ಎಲ್ಲವನ್ನೂ ವಿಶ್ಲೇಷಿಸುತ್ತ, ಸಂಶ್ಲೇಷಿಸುತ್ತ ನಾವು ಕಲಿಯುತ್ತೇವಷ್ಟೆ. ಈ ಕಾಲದ ಹಾಡುಗಳನ್ನೂ ನಾವು ಹೀಗೇ ಅರ್ಥಯಿಸಬೇಕೇನೋ. ನನಗಂತೂ ಪ್ರತಿ ಮುಂಜಾನೆ ಒಂದು ತಾಸು ಎಂಥದೋ ಅರ್ಥವಾಗದ ನಂಬರುಗಳಿಗೆ ಧನ ಧನ ಧನ ಅಂತ ಕುಣಿದು ಕುಪ್ಪಳಿಸುವಾಗ ಇಡೀ ವಿಶ್ವದ ಲಯಬದ್ಧತೆಯ ಗೋಚರವಾಗುತ್ತದೆ. ಈ ಗೋಚರವೇ ಅರ್ಥವೆನಿಸುತ್ತದೆ. ಈ ಅರ್ಥಕ್ಕೆ ಭಾಷೆಯ, ಮಾತಿನ ಹಂಗು ಕಡಿಮೆಯೆನಿಸಿದೆ. ಅದು ‘ಭಲ್ಲೆ ಭಲ್ಲೆ’ಯೇ ಇರಬಹುದು. ‘ಚಯ್ಯ ಚಯ್ಯ ಚಯ್ಯಾಚಯ್ಯ’ವೇ ಇರಬಹುದು. ಇಲ್ಲ ‘ಹರೇ ರಾಮ್ ಹರೇ ರಾಮ್ ಹರೇ ಕೃಷ್ಣ ಹರೇ ರಾಮ್’ ಇರಬಹುದು. ಕಡೆಗೆ ವಾರಕ್ಕೊಮ್ಮೆ ಕುಣಿಯುವ ಕಾಯ್ಕಿಣಿಯ ‘ಕುಣಿದು ಕುಣಿದು ಬಾರ್‍ಏ…’ ಆಗಿರಬಹುದು. ಇಲ್ಲಿ ಉಲುಹಿಗಿಂತ ಸಲುವೇ ಮುಖ್ಯ. ಈ ಮುಂಜಾವುಗಳಿಗೆ ಹನಿದು ಲಘುವಾಗುದಷ್ಟೇ ಗುರಿ. ಲಯವೊಂದೇ ಅದರ ಅರ್ಥ ಮತ್ತು ಸ್ವಾರ್ಥ.