Advertisement
ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು.
ವಾಸುಕಿ ಸಿ.ಜಿ.  ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ” ನಿಮ್ಮ ಓದಿಗೆ

ಹನ್ನೆರಡು ವರ್ಷ ತುಂಬುವ ಹೊತ್ತಿಗೆ, ಅಗಾಧ ಮಹಾಸಾಗರದ ಕಡೆಯಿಂದೆದ್ದು ಬರುವ ಪ್ರತಿಯೊಂದು ಚಂಡಮಾರುತದ ಮೋಡಗಳ ಆಕಾರವೂ ಅರ್ವನ್‌ನ ತಲೆಗೆ ಹೊಕ್ಕಿಬಿಟ್ಟಿತ್ತು. ಯಾರೂ ಅವನಿಗೆ ಇದನ್ನು ಪಾಠ ಮಾಡಿ ಕಲಿಸಿದ್ದಲ್ಲ. ನವತೀರವೆಂಬ ಆ ಕುಗ್ರಾಮದಲ್ಲಿ ಹವಾಮಾನ ತಜ್ಞರಿರಲಿಲ್ಲ, ಉಪಕರಣಗಳಿರಲಿಲ್ಲ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯಂತೂ ಮೊದಲೇ ಇರಲಿಲ್ಲ. ಆದರೆ ಮುಂಬರುವ ಗಂಡಾಂತರವನ್ನು ಮೊದಲೇ ಗ್ರಹಿಸುವುದು ಮಾತ್ರ ಆ ಊರಿನ ಪಾಲಿಗೆ ಉಳಿಮೆಯ ಏಕೈಕ ದಾರಿಯಾಗಿತ್ತು. ಅವನು ತನ್ನ ಅಪ್ಪ ನಿರೇಯನ ಜೊತೆ ಕಡಲಂಚಿನ ದಿಬ್ಬದ ಮೇಲೆ ನಿಂತು, ಏನನ್ನೋ ಕಸಿದುಕೊಳ್ಳಲು ಬರುವವನಂತೆ ಕಾಣುವ ದಿಗಂತದತ್ತ ದಿಟ್ಟಿಸುತ್ತಿದ್ದ. ಆಗ ಅಪ್ಪ, “ಮೋಡದ ತಳ ಹಸಿರಿಗೆ ತಿರುಗಿದರೆ, ಮೆಲ್ಲಗೆ ಮನೆ ಸೇರಿಕೋ” ಎನ್ನುತ್ತಿದ್ದ. ನವತೀರದ ಮಟ್ಟಿಗೆ ಹವಾಮಾನ ವಿಜ್ಞಾನದ ಒಟ್ಟು ಪಠ್ಯಕ್ರಮವೇ ಅಷ್ಟಾಗಿತ್ತು.

ಜಗತ್ತಿನ ಮೂಲೆಗುಂಪಾದ ಪ್ರದೇಶಗಳು ಸದಾ ನಿರ್ಲಕ್ಷ್ಯಕ್ಕೊಳಗಾಗುವುದು ಯಾವ ಕಾಲಕ್ಕೂ ಹೊಸದೇನಲ್ಲ. ಅಗಾಧ ಕಡಲ ತೀರದ ಸ್ವಭಾವವೇ ವಿಚಿತ್ರ; ಅದು ಸದಾ ತಣ್ಣಗೆ, ಅನಿರೀಕ್ಷಿತವಾಗಿ, ಮೀನುಗಳ ವಿಚಾರದಲ್ಲಿ ಅದೆಷ್ಟೋ ಜಿಪುಣವಾಗಿರುತ್ತಿತ್ತು. ಆ ಮಣ್ಣು ಅಲ್ಲಿನ ಜನರಿಗೆ ಬದುಕಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಕೊಡುತ್ತಿತ್ತೇ ವಿನಃ, ಒಂದು ಕಾಳನ್ನೂ ಹೆಚ್ಚಿಗೆ ನೀಡುತ್ತಿರಲಿಲ್ಲ. ಕಾಡಿನಿಂದ ಹೊತ್ತುತಂದ ಮರಮುಟ್ಟುಗಳಿಂದಲೇ ಊರವರು ಗುಡಿಸಲು ಕಟ್ಟಿಕೊಂಡಿದ್ದರು. ಕಡಲು ಕರುಣಿಸಿದ್ದನ್ನೇ ಉಂಡು ಬದುಕುತ್ತಿದ್ದರು. ಆದರೆ ಐವತ್ತು ವರ್ಷಗಳಿಗೊಮ್ಮೆ ಮಾತ್ರ ಭೀಕರ ಚಂಡಮಾರುತಗಳು ಅಪ್ಪಳಿಸುತ್ತಿದ್ದವು. ಅವು ಹಳೆಯ ಸಾಲ ವಸೂಲಿಗೆ ಬಂದವರಂತೆ ಎರಗುತ್ತಿದ್ದವು. ಬಂದರೆ ತಿಂಗಳುಗಟ್ಟಲೆ, ಒಮ್ಮೊಮ್ಮೆ ಅದಕ್ಕೂ ಹೆಚ್ಚು ಕಾಲ ಅಲ್ಲೇ ಬಿಡಾರ ಹೂಡುತ್ತಿದ್ದವು. ಮರಗಳ ತೊಗಟೆಯನ್ನೇ ಸುಲಿದುಹಾಕುವಂತಹ ಬಿರುಗಾಳಿ, ತಗ್ಗಿನಲ್ಲಿದ್ದ ಗುಡಿಸಲುಗಳನ್ನು ಇಡಿಯಾಗಿ ನುಂಗಿಹಾಕಲು ದಿಬ್ಬವನ್ನೇರಿ ಬರುವ ದೈತ್ಯ ಅಲೆಗಳು. ಆ ಪ್ರಳಯದ ದಿನಗಳಲ್ಲಿ ಅವರಿಗೆ ಯಾವ ಮೂಲೆಯಿಂದಲೂ ಸಹಾಯ ಬರುತ್ತಿರಲಿಲ್ಲ. ರಾಜಧಾನಿಯಿಂದ ಸಹಾಯಧನವಾಗಲಿ ಅಥವಾ ಸಹಾಯಹಸ್ತವಾಗಲಿ, ಯಾವತ್ತೂ ಬಂದಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ರಾಜಧಾನಿಯಿಂದ ಪರಿಹಾರದ ಮಾತಂತಿರಲಿ, ಕನಿಷ್ಠ ಸೌಜನ್ಯದ ವಿಚಾರಣೆಯೂ ಇರುತ್ತಿರಲಿಲ್ಲ. ಚಂಡಮಾರುತ ತನ್ನ ಆಟ ಮುಗಿಸಿ ಸುಸ್ತಾದ ಮೇಲೆ, ನವತೀರದ ಜನ ಬದುಕುಳಿದವರ ಲೆಕ್ಕ ಹಾಕಿ, ಮತ್ತೆ ಸೊನ್ನೆಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದರು. ತನ್ನ ಬಾಲವನ್ನೇ ತಾನು ನುಂಗುವ ಹಾವಿನಂತೆ ಅವರ ಬದುಕು ಮತ್ತೆ ಮೊದಲಿನಿಂದ ಶುರುವಾಗುತ್ತಿತ್ತು.

ಅರ್ವನ್ ಹುಟ್ಟಿ ಬೆಳೆದದ್ದು ಈ ತರಹದ ಜಗತ್ತಿನಲ್ಲಿ. ಉಳಿದ ಮಕ್ಕಳು ಅಕ್ಷರಗಳನ್ನು ಕಲಿಯುವಷ್ಟೇ ಸಹಜವಾಗಿ, ಅವನು ಪ್ರಕೃತಿಯನ್ನು ಓದುವುದನ್ನು ಕಲಿತಿದ್ದ.

ಅವನಿಗೆ ಇಪ್ಪತ್ತೊಂದು ವರ್ಷ ತುಂಬಿದಾಗ ಊರು ಬಿಟ್ಟ. ನವತೀರದಲ್ಲಿ ಮಾಡಲು ಸರಿಯಾದ ಕೆಲಸವಿಲ್ಲ, ತನ್ನ ತಲೆಗೆ ಗುಡಿಸಲು ಮತ್ತು ಮೀನಿನ ಬಲೆಗಳನ್ನು ಮೀರಿದ ದೊಡ್ಡ ಸವಾಲುಗಳು ಬೇಕು ಎಂದು ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡ. ತಾಯಿ ಅನ್ವಿಕಳಿಗೆ ತಿಂಗಳಿಗೊಮ್ಮೆ ಹಣ ಕಳಿಸುವುದಾಗಿ ಹೇಳಿದ. ಅವನ ತಂಗಿ ಮೀರಾಳಿಗೆ ಆಗಿನ್ನೂ ಹದಿನಾರು ವರ್ಷ. ತುಂಬುಗಣ್ಣಿನಿಂದ, ಬಹುಕಾಲ ಕಾಣೆಯಾಗಲಿರುವ ಮುಖವೊಂದನ್ನು ಮನಸ್ಸಿನಲ್ಲೇ ಅಚ್ಚೊತ್ತಿಕೊಳ್ಳುವವಳಂತೆ ಅವನು ಮೂಟೆ ಕಟ್ಟುವುದನ್ನೇ ನೋಡುತ್ತಿದ್ದವಳಿಗೆ, ಮುಂದಿನ ಚಂಡಮಾರುತ ಬರುವ ಹೊತ್ತಿಗೆ, ಸಾಧ್ಯವಾದರೆ ಅದಕ್ಕೂ ಮುಂಚೆಯೇ ಬರುವುದಾಗಿ ಭರವಸೆ ನೀಡಿದ್ದ. ಆದರೆ ತಾನು ಆಡಿದ ಈ ಯಾವ ಮಾತುಗಳ ಮೇಲೂ ಅವನಿಗೇ ನಂಬಿಕೆಯಿರಲಿಲ್ಲ.

ವಜ್ರಕೋಟೆ ಎಂಬ ಆ ಪಟ್ಟಣ, ರಸ್ತೆ ಮಾರ್ಗವಾಗಿ ಹನ್ನೆರಡು ಗಂಟೆಗಳ ದೂರದಲ್ಲಿದ್ದರೂ, ಅರ್ವನ್‌ನ ಪಾಲಿಗೆ ಅದು ಅವನು ಕಂಡಿದ್ದ ಜಗತ್ತಿಗಿಂತ ಐವತ್ತು ವರ್ಷಗಳಷ್ಟು ಮುಂದಿತ್ತು. ಕ್ಷಪಣ ಎಂಬ ಕಟ್ಟುನಿಟ್ಟಿನ ಕಟ್ಟಡ ನಿರ್ಮಾಣ ಎಂಜಿನಿಯರ್ ಬಳಿ ಅವನಿಗೆ ಸಹಾಯಕನ ಕೆಲಸ ಸಿಕ್ಕಿತು. ಆತ ಬಲು ನಿಷ್ಠುರ; ನಗುವುದನ್ನೇ ಮರೆತವನಂತಿದ್ದ ಆ ಮನುಷ್ಯ, ತಾನು ವಹಿಸುತ್ತಿದ್ದ ಕಠಿಣ ಕೆಲಸಗಳ ಮೂಲಕವೇ, ಉದ್ದೇಶಪೂರ್ವಕವಲ್ಲದಿದ್ದರೂ ಅರ್ವನ್‌ಗೆ ಬಹಳಷ್ಟನ್ನು ಕಲಿಸಿಬಿಟ್ಟಿದ್ದ. ಅರ್ವನ್ ನಕ್ಷೆಗಳನ್ನು ಓದುವುದನ್ನು ಕಲಿತ. ಕಲ್ಲು ಮತ್ತು ಕಾಂಕ್ರೀಟಿನ ಭಾರ ಹೊರುವ ಗಣಿತವನ್ನು ಅರ್ಥಮಾಡಿಕೊಂಡ. ಕಟ್ಟಡವೊಂದು ತಾನು ನಿಂತ ನೆಲದೊಡನೆ ಹೇಗೆ ಮಲ್ಲಯುದ್ಧ ಮಾಡುತ್ತದೆ ಮತ್ತು ಆ ಯುದ್ಧದಲ್ಲಿ ಗೆಲ್ಲಲು ಅದಕ್ಕೇನು ಬೇಕು ಎಂಬುದನ್ನು ಅರಿತ. ಹಿಂದೊಮ್ಮೆ ಮೋಡಗಳ ಆಕಾರವನ್ನು ಓದಲು ಕಲಿತಷ್ಟೇ ಶ್ರದ್ಧೆಯಿಂದ ಈಗ ಕಟ್ಟಡಗಳನ್ನೂ ಓದಲು ಕಲಿತಿದ್ದ; ಸೂಕ್ಷ್ಮವಾಗಿ ಗಮನಿಸುತ್ತಾ, ಹತ್ತಿರ ನಿಂತು ನೋಡುತ್ತಾ, ತಿಳುವಳಿಕೆಯೇ ಬದುಕುವ ಏಕೈಕ ದಾರಿ ಎಂದು ನಿರ್ಧರಿಸಿ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ.

ವಜ್ರಕೋಟೆಯ ಹೊರವಲಯದ ಕಿರಿದಾದ ಬೀದಿಯಲ್ಲಿದ್ದ ಲಾಂಡ್ರಿಯೊಂದರ ಮೇಲಂತಸ್ತಿನಲ್ಲಿ ಸಣ್ಣ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದ. ಗಡಿಬಿಡಿಯಲ್ಲಿ ಉಂಡು, ಹಗಲಿರುಳು ದುಡಿದು ಮಲಗುತ್ತಿದ್ದ. ಆಗೊಮ್ಮೆ ಈಗೊಮ್ಮೆ ಬಾರ್‌ಗೆ ಹೋಗಿ ಗುಂಪಿನಂಚಿನಲ್ಲಿ ಕೂರುತ್ತಿದ್ದ. ತಾನು ಎಲ್ಲಿಂದ ಬಂದೆ ಎಂದು ಇತರರಿಗೆ ಮುಜುಗರವಾಗದಂತೆ ವಿವರಿಸಲಾಗದ ಹಳ್ಳಿಗನೊಬ್ಬನ ವಿಶಿಷ್ಟವಾದ ಒಂಟಿತನ ಅವನನ್ನು ಅಲ್ಲಿ ಕಾಡುತ್ತಿತ್ತು. ಅಂಥ ರಾತ್ರಿಗಳಲ್ಲಿ ಅವನಿಗೆ ಅಪ್ಪ ನಿರೇಯನ ನಡುಗುವ ಕೈಗಳು ನೆನಪಾಗುತ್ತಿದ್ದವು; ಆ ಸಣ್ಣ ನಡುಕದ ಬಗ್ಗೆ ಅಪ್ಪ ತಮಾಷೆ ಮಾಡುತ್ತಿದ್ದದ್ದೇ ಕಣ್ಮುಂದೆ ಬರುತಿತ್ತು. ಅಪರೂಪಕ್ಕೆಂಬಂತೆ ಪಟ್ಟಣದ ಸಾರ್ವಜನಿಕ ಟೆಲಿಫೋನ್ ಬೂತಿಗೆ ತಾಯಿ ಅನ್ವಿಕಾ ಕರೆ ಮಾಡಿದಾಗ, ಅಷ್ಟು ದೂರವನ್ನು ತನ್ನ ಒರಟು ದನಿಯ ಮೂಲಕವೇ ದಾಟುವವಳಂತೆ ಜೋರಾಗಿ ಕೂಗಿ ಮಾತನಾಡುತ್ತಿದ್ದ ಪರಿ ನೆನಪಾಗುತ್ತಿತ್ತು. ತನ್ನ ಕಣ್ಣೆದುರಿಲ್ಲದೆ ದಿನೇದಿನೇ ಬೆಳೆಯುತ್ತಿರುವ ತಂಗಿ ಮೀರಾಳ ನೆನಪು ಕಾಡುತ್ತಿತ್ತು. ಈ ಎಲ್ಲವನ್ನೂ ನೆನಪಿಸಿಕೊಂಡು ಇನ್ನೊಂದು ಪೆಗ್ ಕುಡಿಯುತ್ತಿದ್ದ. ನವತೀರದಲ್ಲಿ ತನಗೇನೂ ಉಳಿದಿಲ್ಲ, ಇಲ್ಲಿ ನಾನು ಏನನ್ನಾದರೂ ಸಾಧಿಸಲೇಬೇಕು; ತನ್ನ ಊರು ಹಿಡಿಯಲಾರದಷ್ಟು ದೊಡ್ಡ ಕನಸುಗಳನ್ನು ಕಂಡದ್ದಕ್ಕೆ ಈ ಅಪರಾಧಿ ಪ್ರಜ್ಞೆ ನಾನು ತೆರಲೇಬೇಕಾದ ಬೆಲೆ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದ. ಅಲ್ಲದೆ, ನವತೀರದ ಆಕಾಶದಲ್ಲಿ ಬೆಳಗುವ ಅದೇ ಎರಡು ಚಂದ್ರರು ತಾನೇ ಈ ವಜ್ರಕೋಟೆಯ ಮೇಲೂ ಕಾಣುವುದು? ದೂರವೆಂಬುದು ಕೇವಲ ಮನಸ್ಸಿನ ಭ್ರಮೆ ಎಂದೆಲ್ಲಾ ತರ್ಕಿಸುತ್ತಿದ್ದ.

ಹೀಗೆ ತನಗೆ ತಾನೇ ಸುಳ್ಳು ಭರವಸೆಗಳನ್ನು ಕೊಟ್ಟುಕೊಳ್ಳುವುದರಲ್ಲಿ ವರ್ಷಗಳೇ ಉರುಳಿದಂತೆ ಅವನು ಪಳಗಿಹೋಗಿದ್ದ.

ಆ ಸಂದೇಶ ಬಂದದ್ದು ವಸಂತಕಾಲದ ಆರಂಭದ ಒಂದು ಮಂಗಳವಾರದಂದು. ಜನರ ಪಾಲಿಗೆ ಆ ದಿನಮಾನದ ಸಾಮಾನ್ಯತೆ ಕಳೆದುಹೋಗಿ, ಬೇರೊಂದು ಆತಂಕದ ರೂಪದಲ್ಲಿ ಮರಳಿಬಂದಿತ್ತು. ಭೂಮಿಯ ಮೇಲಿದ್ದ ಪ್ರತಿಯೊಂದು ರಿಸೀವರ್ ಮತ್ತು ಟ್ರಾನ್ಸ್‌ಮಿಟರ್‌ಗಳೂ ಏಕಕಾಲಕ್ಕೆ ಆ ಸಂದೇಶವನ್ನು ಗ್ರಹಿಸಿದ್ದವು. ತಾಂತ್ರಿಕವಾಗಿ ಹೇಳುವುದಾದರೆ ಅದೊಂದು ಭಾಷೆಯಾಗಿರಲಿಲ್ಲ. ಅದೊಂದು ವಿನ್ಯಾಸ – ಗಣಿತದ ಸೂತ್ರಗಳಂತೆ, ಪುನರಾವರ್ತನೆಯಾಗುತ್ತಿದ್ದ, ಆದರೆ ಖಂಡಿತ ಆಕಸ್ಮಿಕವಲ್ಲದ ವಿನ್ಯಾಸ. ಹಾಡೊಂದು ತನ್ನ ರಾಗವನ್ನು ತಾನೇ ಹುಡುಕಿಕೊಳ್ಳುವಂತೆ, ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಪ್ರತಿ ಹನ್ನೊಂದು ಗಂಟೆಗೊಮ್ಮೆ ಅದು ಮರುಕಳಿಸುತ್ತಿತ್ತು. ಎಲ್ಲೆಡೆ “ಮನುಷ್ಯರು” ಮತ್ತು “ಭೂಮಿಯಂತಹ” ಎಂಬ ಪದಗಳು ಸಡಿಲವಾಗಿ, ಯಾವುದೇ ಸ್ಪಷ್ಟತೆಯಿಲ್ಲದೆ ಬಳಕೆಯಾಗತೊಡಗಿದವು. ಅವುಗಳ ಅಸಲಿ ಅರ್ಥವೇನು ಎಂದು ಯಾರಿಗೂ ಗೊತ್ತಿರಲಿಲ್ಲ. ಆ “ಮನುಷ್ಯ” ಎಂಬ ಪದ ಅನ್ಯಗ್ರಹದ ಜೀವಿಗಳನ್ನೇ ಸೂಚಿಸುತ್ತಿತ್ತೇ? “ಭೂಮಿ” ಎಂಬುದು ಅವರ ಗ್ರಹದ ಹೆಸರಾಗಿತ್ತೇ?

ಯಾವಾಗಲೂ ಆಗುವಂತೆ, ತಿಳುವಳಿಕೆಗಿಂತ ಮುಂಚೆಯೇ ಭೀತಿ ಜನರನ್ನು ಆವರಿಸಿಕೊಂಡಿತ್ತು.

ಸರ್ಕಾರ ಹೇಳಿಕೆಗಳನ್ನು ನೀಡಿತು. ವಿಜ್ಞಾನಿಗಳು ಅದನ್ನು ಅಲ್ಲಗಳೆದರು. ಪುರೋಹಿತರು ವಿಜ್ಞಾನಿಗಳನ್ನೇ ವಿರೋಧಿಸಿದರು. ಸರಿಯಾದ ಮಾಹಿತಿಯಿಲ್ಲದೆ ಕಂಗಾಲಾದ ಸಾಮಾನ್ಯ ಜನ, ತಮ್ಮಂತೆಯೇ ಯಾರಿಗೂ ಏನೂ ಗೊತ್ತಿಲ್ಲವೆಂಬುದನ್ನು ಅರಿತು ಒಂದೆಡೆ ಭಯಬೀಳುತ್ತಲೇ, ಇನ್ನೊಂದೆಡೆ ವಿಚಿತ್ರವಾದ ಸಮಾನತೆಯ ಭಾವವನ್ನೂ ಅನುಭವಿಸಿದರು. ಅರ್ವನ್ ಲಾಂಡ್ರಿ ಬಾರ್‌ನಲ್ಲಿ ಕೂತು ನ್ಯೂಸ್ ಚಾನೆಲ್‌ಗಳನ್ನು ನೋಡುತ್ತಾ, ಇಡೀ ಪಟ್ಟಣವನ್ನು ಆವರಿಸಿದ್ದ ಭಯವನ್ನು ಹವಾಮಾನದ ಏರುಪೇರಿನಂತೆ ಅನುಭವಿಸುತ್ತಿದ್ದ. ಆ ವಾತಾವರಣವು, ಹಸಿರು ತಳದ ಮೋಡ ಕವಿಯುವ ಮುನ್ನ ಆವರಿಸುವ ನಿಶ್ಯಬ್ದದಂತೆಯೇ ಇತ್ತು. ವಜ್ರಕೋಟೆಯಲ್ಲಿ ಜನ ರೇಷನ್ ಕೂಡಿಡತೊಡಗಿದರು; ಅನ್ಯಗ್ರಹ ಜೀವಿಗಳ ಉದ್ದೇಶದ ಬಗ್ಗೆ ದಿನವಿಡೀ ಚರ್ಚಿಸುತ್ತಿದ್ದರು. ಮುಖ್ಯರಸ್ತೆಗಳಲ್ಲಿ ಸೇನಾ ವಾಹನಗಳು ಓಡಾಡತೊಡಗಿದವು. ಹಿಂದೆಲ್ಲಾ ಮಾಡಿದಂತೆಯೇ ಸರ್ಕಾರ, ಹಣ, ಗಮನ ಮತ್ತು ಸಿಬ್ಬಂದಿಯನ್ನು ರಾಜಧಾನಿ ಮತ್ತು ಅದರ ಭದ್ರತೆಯತ್ತ ಹರಿಸಿತು; ಗಡಿಭಾಗಗಳನ್ನು ಮತ್ತೆ ನಿರ್ಲಕ್ಷಿಸಿತು.

ಕ್ಷಪಣ ಬಂದು, ತಮ್ಮ ಹಲವು ಪ್ರಾಜೆಕ್ಟ್‌ಗಳು ನಿಂತುಹೋಗಿವೆ ಎಂದ. ಸಂಪನ್ಮೂಲಗಳನ್ನೆಲ್ಲಾ ಬೇರೆಡೆಗೆ ಹರಿಸಲಾಗುತ್ತಿದೆ ಎಂದು ಆತ ಯಾವುದೇ ಆತಂಕವಿಲ್ಲದೆ ನಿರ್ಲಿಪ್ತವಾಗಿ ಹೇಳಿದ. ಆತ ಆ ಜಾತಿಗೆ ಸೇರಿದ ಮನುಷ್ಯ.

ಆದರೆ ಅರ್ವನ್‌ಗೆ ಗಡಿಭಾಗಗಳ ನೆನಪಾಯಿತು. ಕೇಂದ್ರದತ್ತ ಎಲ್ಲರ ಗಮನ ಹರಿದಾಗ ಗಡಿಗಳು ಹೇಗೆ ಅನಾಥವಾಗುತ್ತವೆ ಎಂಬುದು ಅವನಿಗೆ ಗೊತ್ತಿತ್ತು. ಚಂಡಮಾರುತ ಬರುವಾಗಲೂ ಹೀಗೆಯೇ ಆಗುತ್ತಿತ್ತು: ಕಡಲಿನ ಶಕ್ತಿಯೆಲ್ಲಾ ಒಂದೆಡೆ ಕೇಂದ್ರೀಕೃತವಾದಾಗ, ಉಳಿದೆಡೆ ಆವರಿಸುವ ಶೂನ್ಯ, ಬೇರೆಲ್ಲಕ್ಕಿಂತ ಮೊದಲು ಮೈಗೆ ತಾಕುತ್ತಿತ್ತು.

ಅವನು ಸಾರ್ವಜನಿಕ ಟೆಲಿಫೋನ್‌ನಿಂದ ಮೀರಾಳಿಗೆ ಕರೆ ಮಾಡಿದ. ಅಪ್ಪನ ಕೈ ನಡುಕ ಹೆಚ್ಚಾಗಿದೆ ಎಂದಳು. ಅನ್ಯಗ್ರಹದ ಸಂದೇಶದ ಭಯವೋ ಏನೋ, ಈಗ ಯಾರೂ ನಡುನೀರಿಗೆ ಹೋಗಲು ಸಿದ್ಧರಿಲ್ಲ, ದೋಣಿಗಳೆಲ್ಲಾ ದಡದಲ್ಲೇ ಇವೆ ಎಂದಳು. ಹದಿನಾರರ ಹರೆಯದಲ್ಲಿ ಅವನು ಮೂಟೆ ಕಟ್ಟುವುದನ್ನು ನೋಡುತ್ತಾ ನಿಂತಿದ್ದಾಗ ಕೇಳಿದ್ದ ಅದೇ ದನಿಯಲ್ಲಿ “ಯಾವಾಗ ಬರ್ತೀಯಾ ಮರಳಿ?” ಎಂದು ಕೇಳಿದಳು.

ಅಂದು ಕೊಟ್ಟಿದ್ದ ಅದೇ ಉತ್ತರವನ್ನು ಇಂದೂ ಕೊಟ್ಟ – ಆದಷ್ಟು ಬೇಗ ಎಂದ. ಆದರೆ ಈ ಬಾರಿ ಆ ಮಾತಿನಲ್ಲಿ ಹುಸಿಯಿರಲಿಲ್ಲ.

ಆದರೆ ನಿಜಕ್ಕೂ ಅಲ್ಲಿಂದ ಹೊರಡಲು ಅವನಿಗೆ ಇನ್ನೂ ಮೂರು ವಾರಗಳು ಬೇಕಾದವು. ಸಾಲಸೋಲ ಚುಕ್ತಾ ಮಾಡಿ, ತನ್ನಲ್ಲಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಕಟ್ಟಿಕೊಂಡು ಬೇಸಿಗೆಯ ಆರಂಭದ ಬೆಳಗೊಂದರಲ್ಲಿ ಒಳನಾಡಿನ ಬಸ್ಸು ಹತ್ತಿದ. ಕಿಟಕಿಯ ಮೂಲಕ ವಜ್ರಕೋಟೆ ಕಣ್ಣಿಂದ ಮರೆಯಾಗುತ್ತಿರುವುದನ್ನು ನೋಡುತ್ತಿದ್ದಾಗ, ನಿರಾಳತೆ ಎನ್ನುವುದಕ್ಕಿಂತ, ತನ್ನೊಳಗೆ ಇಷ್ಟು ದಿನ ತಪ್ಪು ಜಾಗದಲ್ಲಿ ಕೂತಿದ್ದ ವಸ್ತುಗಳೆಲ್ಲಾ ಮತ್ತೆ ಸರಿಯಾದ ಜಾಗಕ್ಕೆ ಮರಳುತ್ತಿರುವಂಥ ವಿಚಿತ್ರ ಸಮಾಧಾನ ಅವನಿಗೆ ದಕ್ಕಿತ್ತು.

ನವತೀರ ಅವನು ನೆನಪಿನಲ್ಲಿಟ್ಟುಕೊಂಡಿದ್ದಕ್ಕಿಂತ ಚಿಕ್ಕದಾಗಿ ಕಂಡರೂ, ಅದರ ಅಳತೆಯೇನೂ ಬದಲಾಗಿರಲಿಲ್ಲ. ಇವೆರಡೂ ಸತ್ಯವೇ ಆಗಿದ್ದವು.

ಊರ ರಸ್ತೆಯ ತಿರುವಿನಲ್ಲಿ ಅಪ್ಪ ನಿರೇಯ ಎದುರಾದ. ಅವನ ಸಣ್ಣಗಾಗಿದ್ದ ಭುಜಗಳು, ಜೋತುಬಿದ್ದಿದ್ದ ದವಡೆಯ ಚರ್ಮ, ಕೇವಲ ಸಣ್ಣದಾಗಿರದೆ ಈಗ ಕಾಯಂ ಸಂಗಾತಿಯಾಗಿಬಿಟ್ಟಿದ್ದ ಅವನ ಕೈಗಳ ನಡುಕ – ಇವೆಲ್ಲವನ್ನೂ ನೋಡಿದ ಅರ್ವನ್‌ಗೆ, ಎಲ್ಲಿಂದಲೋ ಬಂದ ಅಲೆಯೊಂದು ಎದೆಗಪ್ಪಳಿಸಿದಂತಾಯಿತು. ಇಬ್ಬರೂ ಅಪ್ಪಿಕೊಂಡರು; ಅರ್ವನ್ ಬಿಡಿಸಿಕೊಳ್ಳದೆ ಬಹಳ ಹೊತ್ತು ಹಾಗೇ ನಿಂತ. ಅಪ್ಪ ಅವನ ಬೆನ್ನು ತಟ್ಟಿದ. ಯಾರಿಗ್ಯಾರ ಸಾಂತ್ವನ ಬೇಕು ಎಂದು ತಿಳಿಯದಿದ್ದಾಗ ಅಪ್ಪಂದಿರು ಮಾಡುವ ಕೆಲಸವೇ ಅದು.

ಅನ್ವಿಕಾ, ಅವನು ಸಾಕು ಎನ್ನುವವರೆಗೂ ಊಟ ಬಡಿಸಿದಳು. ಮೀರಾ ಮಾತ್ರ ಟೇಬಲ್‌ನ ಆಚೆ ಬದಿ ಕೂತು ತನ್ನ ಚೂಪಾದ ಕಣ್ಣುಗಳಿಂದ ಅವನನ್ನೇ ದಿಟ್ಟಿಸುತ್ತಾ ಸುಮ್ಮನಿದ್ದಳು. ಅವಳಿನ್ನೂ ತನ್ನ ಮೇಲೆ ಕೋಪಗೊಂಡಿದ್ದಾಳೆ ಎಂಬುದು ಅವನಿಗೆ ಅರ್ಥವಾಗಿತ್ತು. ಅವಳ ಕೋಪ ನ್ಯಾಯವೇ ಆಗಿತ್ತಲ್ಲವೇ?

ಮೊದಲ ಕೆಲವು ದಿನ ಊರಲ್ಲೆಲ್ಲಾ ಸುಮ್ಮನೆ ಅಲೆಯುವುದರಲ್ಲಿ, ಸಂಜೆ ಅಪ್ಪನೊಡನೆ ಕೂತು ಮಾತನಾಡುವುದರಲ್ಲಿ, ಬಲೆಗಳನ್ನು ಹೆಣೆಯಲು ನೆರವಾಗುವುದರಲ್ಲಿ ಕಳೆದ. ಊರಲ್ಲಿ ಏನೇನು ಬದಲಾಗಿದೆ, ಏನೇನು ಹಾಗೇ ಉಳಿದಿದೆ ಎಂದು ಗಮನಿಸಿದ. ಕಡಲಿನ್ನೂ ತಣ್ಣಗೇ ಇತ್ತು, ಮಣ್ಣು ಮೊದಲಿನಂತೆಯೇ ಬದುಕಲು ಬೇಕಾದಷ್ಟನ್ನು ಮಾತ್ರ ನೀಡುತ್ತಿತ್ತು. ಕೆಳಗಿನ ಕೇರಿಯಲ್ಲಿ ಮೂವತ್ತು ವರ್ಷಗಳ ಹಿಂದಿನ ಚಂಡಮಾರುತದ ಗಾಯದ ಕಲೆಗಳು ಇನ್ನೂ ಉಳಿದಿದ್ದವು: ಮೂಲ ಗೋಡೆಗೆ ಹೊಂದಿಕೆಯಾಗದ ಹೊಸ ತೇಪೆಗಳು, ಬೇರೆಯೇ ಕೋನದಲ್ಲಿ ಹಾಕಲಾಗಿದ್ದ ಹೊಸ ಛಾವಣಿಗಳು.

ಒಂದು ಸಂಜೆ, ಕತ್ತಲಾವರಿಸುವ ಮುನ್ನವೇ ದಡ ಸೇರುತ್ತಿದ್ದ ಮೀನುಗಾರರ ದೋಣಿಗಳನ್ನು ದಿಬ್ಬದ ಮೇಲಿಂದ ನೋಡುತ್ತಿದ್ದಾಗ, ಅಪ್ಪ ನಿರೇಯ ನಿಟ್ಟುಸಿರು ಬಿಡುತ್ತಾ ಹೇಳಿದ: “ಅವರೊಂದು ದೀಪಸ್ತಂಭವನ್ನೂ ಕಟ್ಟಿಕೊಡಲಿಲ್ಲ ನಮಗೆ. ಹಾಗಾಗಿ ಕತ್ತಲಾಗುವ ಮುನ್ನವೇ ದಡ ಸೇರಬೇಕು. ಅಪಾಯ ಮೈಮೇಲೆ ಎಳೆದುಕೊಳ್ಳುವ ಹಾಗಿಲ್ಲ. ಇಲ್ಲಿ ಆಸ್ಪತ್ರೆಗಳು…” ಎನ್ನುತ್ತಲೇ ಮಾತು ನಿಲ್ಲಿಸಿ ತಲೆ ಅಲ್ಲಾಡಿಸಿದ. ಅವನ ಕೈಗಳು ಮೊಣಕಾಲ ಮೇಲೆ ನಡುಗುತ್ತಿದ್ದವು. “ಹೋದ ವರ್ಷ ರಾಜಧಾನಿಯಿಂದ ನಮಗೇನು ಕಳಿಸಿದ್ದರು ಗೊತ್ತಾ? ಮೂಲಸೌಕರ್ಯದ ಮೌಲ್ಯಮಾಪನ ಮಾಡಬೇಕಂತೆ, ಅದಕ್ಕೊಂದು ಅರ್ಜಿ ನಮೂನೆ ಕಳಿಸಿದ್ದರು. ಬರೀ ಒಂದು ಅರ್ಜಿ.”

ಅರ್ವನ್ ದಡ ಸೇರುತ್ತಿದ್ದ ದೋಣಿಗಳನ್ನೇ ನೋಡಿದ. ವರ್ಷಾನುಗಟ್ಟಲೆ, ಜೀವಮಾನವಿಡೀ ಹೀಗೆ ಕತ್ತಲಾಗುವ ಮುನ್ನವೇ ದಡ ಸೇರುವುದರಿಂದ ಏನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚಿಸಿದ. ಕಡಲನ್ನು ಮುಟ್ಟದ ಆ ಅದೆಷ್ಟೋ ಗಂಟೆಗಳ ಲೆಕ್ಕ ಹಾಕಿದ.

ತನಗೇನು ಗೊತ್ತು ಎಂಬುದರ ಕಡೆ ಅವನ ಗಮನ ಹರಿಯಿತು. ಕ್ಷಪಣನ ನೀಲನಕ್ಷೆಗಳು, ಭಾರ ಹೊರುವ ಗಣಿತದ ಸೂತ್ರಗಳು, ಕಟ್ಟಡವೊಂದು ನೆಲದೊಡನೆ ಮಾಡುವ ಗುದ್ದಾಟ – ಎಲ್ಲವೂ ನೆನಪಾದವು. ಒಂದು ಲೈಟ್‌ಹೌಸ್ ಅಥವಾ ದೀಪದ ಗೋಪುರ ಕಟ್ಟುವುದು ಅಷ್ಟೇನೂ ಸಂಕೀರ್ಣವಾದ ಕೆಲಸವಲ್ಲ. ಎತ್ತರದ ಜಾಗದಲ್ಲಿ ಒಂದು ದೀಪ. ಅದೊಂದು ಮಾರ್ಗದರ್ಶಕ, ಜೊತೆಗೆ ಮುನ್ನೆಚ್ಚರಿಕೆ. ಅಡಿಪಾಯ ಭದ್ರಪಡಿಸುವುದು ಅವನಿಗೆ ಗೊತ್ತಿತ್ತು. ಇದಕ್ಕಿಂತ ಕೆಟ್ಟ ಜಾಗಗಳಲ್ಲಿ ಕ್ಷಪಣ ಕಟ್ಟಡ ನಿಲ್ಲಿಸುವುದನ್ನು ಅವನು ಕಣ್ಣಾರೆ ಕಂಡಿದ್ದ.

ವರ್ಷಗಳಿಂದ ಅವನೊಳಗಿದ್ದ ಅಪರಾಧಿ ಪ್ರಜ್ಞೆ ಈಗ ನಿಧಾನಕ್ಕೆ ಒಂದು ಸ್ಪಷ್ಟ ಉದ್ದೇಶವಾಗಿ ಬದಲಾಗತೊಡಗಿತು.

“ನಾನು ಕಟ್ಟಬಲ್ಲೆ” ಎಂದ ಅರ್ವನ್.

ನಿರೇಯ ಅವನತ್ತ ನೋಡಿದ. ಅವನ ಕೈಗಳ ನಡುಕ ಇನ್ನಷ್ಟು ಹೆಚ್ಚಾದಂತಾಯಿತು.

“ನಾನೊಂದು ಲೈಟ್‌ಹೌಸ್ ಕಟ್ಟಬಲ್ಲೆ. ಶಾಶ್ವತವಾದದ್ದಲ್ಲ, ರಾಜಧಾನಿಯಲ್ಲಿರುವಂಥದ್ದೂ ಅಲ್ಲ. ಆದರೆ ನಮ್ಮ ಕೆಲಸಕ್ಕಾಗುವಂಥದ್ದು” ಎಂದ.

ಅಪ್ಪ ಸ್ವಲ್ಪ ಹೊತ್ತು ಸುಮ್ಮನಿದ್ದು, “ಅದಕ್ಕೆ ಸಾಮಾನುಗಳು ಬೇಕಲ್ಲ” ಎಂದ.

“ಗೊತ್ತು.”

“ಕನಿಷ್ಠ ತರಣಿ ಪಟ್ಟಣದಿಂದ ತರಬೇಕು. ರಸ್ತೆ ಬೇರೆ ಕೆಟ್ಟಿದೆ.”

“ಗೊತ್ತು.”

ನಿರೇಯ ಕಡಲತ್ತ ನೋಡುತ್ತಲೇ ನಿಧಾನವಾಗಿ ತಲೆಯಾಡಿಸಿದ. ಅವನ ಮುಖದಲ್ಲಿ ಅರ್ವನ್ ಈ ಹಿಂದೆಯೂ ಒಮ್ಮೆ ನೋಡಿದ್ದ ಭಾವವೊಂದು ಮೂಡಿತ್ತು – ತನಗೆ ಅತೀವವಾಗಿ ಬೇಕಾದದ್ದೊಂದನ್ನು ನಂಬಲು ಮನಸ್ಸು ಹಾತೊರೆಯುತ್ತಿದ್ದರೂ, ಅದು ಸುಳ್ಳಾದರೆ ಆಗುವ ನಿರಾಸೆಗೆ ಹೆದರಿ ತನ್ನನ್ನು ತಾನೇ ತಡೆದುಕೊಳ್ಳುವ ತಳಮಳವದು. “ಎಷ್ಟು ಸಮಯ ಬೇಕಾಗಬಹುದು?” ಎಂದು ಕೇಳಿದ.

“ಚಂಡಮಾರುತ ಬರುವ ಮುಂಚೆಯೇ ಮುಗಿಸಬಹುದು. ಈ ಗದ್ದಲದ ಮಧ್ಯೆ ಚಂಡಮಾರುತದ ಲೆಕ್ಕಾಚಾರವೇ ಮರೆತುಹೋಗಿದೆ” ಎನ್ನುತ್ತಾ ಅರ್ವನ್ ಆಕಾಶ ನೋಡಿದ. ದೋಣಿಗಳತ್ತ ನೋಡಿದ. ತಲೆಯಲ್ಲಿ ಲೆಕ್ಕ ಹಾಕಿದ. “ಊರವರ ಸಹಾಯ ಸಿಕ್ರೆ, ರಸ್ತೆ ಕೈಕೊಡದಿದ್ರೆ – ಕೆಲವು ತಿಂಗಳು ಸಾಕು. ಅದಕ್ಕೂ ಮೊದಲೇ ಆದರೂ ಅಚ್ಚರಿಯಿಲ್ಲ.”

ಮತ್ತೆ ದೀರ್ಘ ಮೌನ. ಕೊನೆಯ ದೋಣಿಯೂ ದಡ ಸೇರಿತು.

“ಸರಿ” ಎಂದ ನಿರೇಯ. ಆಮೇಲೆ, ತನ್ನ ಎಂದಿನ ಸ್ವಭಾವದಂತೆ, “ಕೆಲಸದವರಿಗೆ ನಿನ್ನವ್ವ ಊಟ ಹಾಕುತ್ತಾಳೆ ಬಿಡು” ಎಂದ.

ಅರ್ವನ್ ಊರವರ ಮುಂದೆ ಕಟ್ಟಡದ ತಾಂತ್ರಿಕ ವಿವರಗಳನ್ನು ಬಿಚ್ಚಿಡಲು ಹೋಗಲಿಲ್ಲ. ಭಾರ, ಅಡಿಪಾಯದ ಲೆಕ್ಕಾಚಾರಗಳನ್ನು ನೀಲನಕ್ಷೆಯನ್ನೇ ನೋಡಿರದ ಆ ಜನರಿಗೆ ವಿವರಿಸುವುದು ವ್ಯರ್ಥವೆಂದು ಅವನಿಗೆ ಗೊತ್ತಿತ್ತು. ಕೇವಲ ಇಷ್ಟನ್ನೇ ಹೇಳಿದ: ನಮಗೆ ಏನೇನು ಬೇಕು, ಎಲ್ಲಿ ಕಟ್ಟಬೇಕು, ಮತ್ತು ಅದು ಹೇಗೆ ಕೆಲಸ ಮಾಡುತ್ತದೆ. ಊರವರ ಸ್ಪಂದನೆ ಅವನ ಊಹೆಗೂ ಮೀರಿತ್ತು. ಅವರು ಸಹಾಯ ಮಾಡುತ್ತಾರೆಂಬ ನಂಬಿಕೆ ಅವನಿಗಿತ್ತು; ನವತೀರದಲ್ಲಿ ಕಷ್ಟಕಾಲಕ್ಕೆ ಪರಸ್ಪರ ಹೆಗಲು ಕೊಡುವುದು ಅವರ ರಕ್ತದಲ್ಲೇ ಬಂದಿತ್ತು. ಆದರೆ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆಂದು ಅವನು ಅಂದುಕೊಂಡಿರಲಿಲ್ಲ. ಊರಿನ ಚೌಕದಲ್ಲಿ ನಡೆದ ಮೊದಲ ಸಭೆಗೆ ಊರಿನ ಬಹುತೇಕ ಗಟ್ಟಿಮುಟ್ಟಾದ ಜನರೆಲ್ಲಾ ಸೇರಿದ್ದರು. ಕೈಯಾರೆ ಊರಿನ ಅರ್ಧದಷ್ಟು ಗುಡಿಸಲುಗಳನ್ನು ಕಟ್ಟಿದ್ದ ಅನುಭವಿ ಹಿರಿಯರು ಬಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಪ್ರಶ್ನೆಗಳನ್ನು ಕೇಳಿದರು. ಅರ್ವನ್ ತನಗೆ ತಿಳಿದದ್ದನ್ನು ಹೇಳಿದ, ತಿಳಿಯದ್ದನ್ನು ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ. ಅವನ ಈ ಪ್ರಾಮಾಣಿಕತೆಯೇ ಅವರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಮಾಡಿತ್ತು.

ತರಣಿಯಿಂದ ಕಟ್ಟಡ ಸಾಮಗ್ರಿಗಳನ್ನು ತರುವುದೇ ಮೊದಲ ಸವಾಲಾಗಿತ್ತು. ರಸ್ತೆ ತೀರ ಹಾಳಾಗಿತ್ತು – ಪೂರ್ತಿಯಾಗಿ ಕಿತ್ತುಹೋಗಿರದಿದ್ದರೂ, ನಿರ್ಲಕ್ಷ್ಯದಿಂದಾಗಿ ಗುಂಡಿಬಿದ್ದು ವಾಹನಗಳ ಓಡಾಟಕ್ಕೆ ಲಾಯಕ್ಕಿರಲಿಲ್ಲ. ಊರಿನಲ್ಲಿದ್ದ ಎರಡು ಹಳೆಯ ಲಾರಿಗಳು, ಆಗಾಗ ಕೈಕೊಡುತ್ತಿದ್ದ, ಹರಕೆ ಹೊತ್ತರೆ ಮಾತ್ರ ಸ್ಟಾರ್ಟ್ ಆಗುತ್ತಿದ್ದ ಗುಜರಿ ಗಾಡಿಯೊಂದರಲ್ಲಿ ಸಾಗಾಟ ಶುರುವಾಯಿತು. ಜನರು ಸರದಿಯಲ್ಲಿ ತಳ್ಳುವ ಕೈಗಾಡಿಗಳನ್ನೂ ಬಳಸಿದರು. ನಾಲ್ಕು ಬಾರಿ ಹೋಗಿಬರಬೇಕಾಯಿತು. ದಿನಗಳೇ ಉರುಳಿದವು. ಎರಡನೇ ಬಾರಿ ಬರುವಾಗ, ಆ ಗುಜರಿ ಗಾಡಿಯ ಮುಂಭಾಗದ ಆಕ್ಸಲ್ ಮುರಿದುಬಿತ್ತು. ಮೆಕ್ಯಾನಿಕ್ ಅಲ್ಲದಿದ್ದರೂ, ಜಾಣ್ಮೆಯಿಂದ ಏನನ್ನಾದರೂ ರಿಪೇರಿ ಮಾಡಬಲ್ಲ ದತ್ತ ಎಂಬಾತ, ರಸ್ತೆಯಲ್ಲೇ ಆರು ಗಂಟೆಗಳ ಕಾಲ ಒದ್ದಾಡಿ ಅದನ್ನು ಸರಿಪಡಿಸಿದ. ಆತನ ಈ ಗುದ್ದಾಟದ ವೇಳೆ, ಉಳಿದವರು ಮರದ ನೆರಳಲ್ಲಿ ಕೂತು ತಂದಿದ್ದನ್ನು ತಿನ್ನುತ್ತಾ, ಆ ಆಕ್ಸಲ್‌ನ ಬಗ್ಗೆ, ಜೊತೆಗೆ ತಾವೆಲ್ಲರೂ ಅನುಭವಿಸಿದ್ದ ಕಷ್ಟಗಳ ಬಗ್ಗೆ ತಮಾಷೆ ಮಾಡುತ್ತಾ ನಗುತ್ತಿದ್ದರು.

ಸಾಮಗ್ರಿಗಳು ಬಂದಮೇಲೆ ಕಟ್ಟಡದ ಕೆಲಸ ಶುರುವಾಯಿತು. ಉತ್ತರದ ದಿಬ್ಬದ ಮೇಲಿನ ಎತ್ತರದ ಜಾಗವನ್ನು ಆರಿಸಿಕೊಳ್ಳಲಾಗಿತ್ತು – ಗಟ್ಟಿಯಾದ ಬಂಡೆಯ ತಳಪಾಯ, ಸಮುದ್ರಕ್ಕೆ ಎರಡು ಕಿಲೋಮೀಟರ್ ದೂರದವರೆಗೂ ಕಾಣುವಂಥ ಜಾಗ. ಇಲ್ಲಿ ಹಳೆಯ ಕಟ್ಟಾಳುಗಳ ಅನುಭವ, ಅರ್ವನ್‌ನ ಎಂಜಿನಿಯರಿಂಗ್ ಜ್ಞಾನಕ್ಕಿಂತ ಹೆಚ್ಚು ಕೆಲಸಕ್ಕೆ ಬಂತು. ಆ ದಿಬ್ಬದ ಸ್ವಭಾವ, ಮಳೆಗಾಲದಲ್ಲಿ ಮಣ್ಣು ಎಲ್ಲಿ ಸಡಿಲವಾಗುತ್ತದೆ, ಗಾಳಿ ಯಾವ ಕಡೆಯಿಂದ ಬಲವಾಗಿ ಬೀಸುತ್ತದೆ, ಕಾಲಾನಂತರದಲ್ಲಿ ಅಡಿಪಾಯದ ಮೇಲೆ ಮಂಜಿನ ಪ್ರಭಾವವೇನು ಎಂಬುದೆಲ್ಲಾ ಅವರಿಗೆ ಕರತಲಾಮಲಕವಾಗಿತ್ತು. ಅರ್ವನ್‌ಗೆ ಕಟ್ಟಡದ ಭಾರ ಮತ್ತು ರಚನೆಯ ಬಗ್ಗೆ ಮಾತ್ರ ಗೊತ್ತಿತ್ತು. ಆದರೆ ಆ ಹಿರಿಯರಿಗೆ ತಾವು ನಿಂತ ಮಣ್ಣಿನ ಕಣಕಣದ ಪರಿಚಯವಿತ್ತು. ಇಬ್ಬರ ಜ್ಞಾನವೂ ಬೆರೆತು, ಕಟ್ಟಡ ನಿರೀಕ್ಷೆಗಿಂತ ಭದ್ರವಾಗಿ ಮೇಲೇಳತೊಡಗಿತು.

ಕೆಲಸಗಾರರಿಗೆ ಊರವರೇ ಊಟದ ವ್ಯವಸ್ಥೆ ಮಾಡಿದರು. ಇದು ಅನ್ವಿಕಾಳ ಜವಾಬ್ದಾರಿಯಾಗಿತ್ತು. ತಾನು ಬೆಳೆಯುವಾಗ ಯಾವತ್ತೂ ಗಮನಿಸದಿದ್ದ ಅವಳ ಆ ಮೌನ ಕಾರ್ಯಕ್ಷಮತೆ ಈಗ ಅರ್ವನ್‌ಗೆ ಅರ್ಥವಾಗುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆ, ಊರಿನ ಹೆಂಗಸರು ಕೆಲಸದ ಜಾಗಕ್ಕೆ ಊಟ ತರುತ್ತಿದ್ದರು. ನವತೀರದಲ್ಲಿ ಯಾವತ್ತೂ ಅತಿಯಾಗಿ ಊಟವಿರುತ್ತಿರಲಿಲ್ಲ, ಆದರೆ ಎಲ್ಲರಿಗೂ ಹೊಟ್ಟೆತುಂಬುವಷ್ಟಂತೂ ಖಂಡಿತ ಇರುತ್ತಿತ್ತು. ಜೊತೆಗೆ ನಗರದಲ್ಲಿ ಎಲ್ಲೂ ಸಿಗದ ಪ್ರೀತಿ, ಆಪ್ತತೆಯಿತ್ತು. ಅನ್ವಿಕಾಳೇ ಖುದ್ದಾಗಿ, ತಾನು ಹೊರಲಾರದಷ್ಟು ಭಾರದ ಪಾತ್ರೆಗಳನ್ನು ಹೊತ್ತು ತರುತ್ತಿದ್ದಳು. ಒಂದು ಮಧ್ಯಾಹ್ನ ಅರ್ವನ್‌ನ ಕೈಗೆ ಮೀನು, ಅನ್ನದ ಪಾತ್ರೆ ಕೊಟ್ಟು, “ಒಂದು ಅಗಳು ಬಿಡದೆ ತಿನ್ನು” ಎಂದು ಕಟ್ಟುನಿಟ್ಟಾಗಿ ಹೇಳಿ ಹೊರಟುಹೋದಳು. ಅವನು ಒಂದಗಳನ್ನೂ ಬಿಡದೆ ತಿಂದ.

ಎಲ್ಲರೂ ಅವನಿಗೆ ಕೃತಜ್ಞತೆ ಸಲ್ಲಿಸಿದರು. ಇದಕ್ಕೆ ಅರ್ವನ್ ಸಿದ್ಧನಿರಲಿಲ್ಲ. ಊರವರ ಪ್ರೀತಿಯೇನೋ ಸರಿ, ಆದರೆ ಹೊರಗಿನ ಜಗತ್ತಿನಿಂದ ಯಾವತ್ತೂ ಪ್ರೀತಿ-ಗೌರವಗಳನ್ನು ಕಾಣದಿದ್ದ ಈ ಜನ, ತಮ್ಮ ಬಳಿ ಇದ್ದ ಅತ್ಯಮೂಲ್ಯ ವಸ್ತುವನ್ನು ನೀಡುವಂತೆ ಅವನಿಗೆ ಕೃತಜ್ಞತೆ ಹೇಳುವಾಗ ಅವನ ಕಣ್ಣು ಒದ್ದೆಯಾಗುತ್ತಿತ್ತು. ಇಪ್ಪತ್ತು ವರ್ಷಗಳ ಹಿಂದೆ ಕತ್ತಲಲ್ಲಿ ದಾರಿಕಾಣದೆ ಕಡಲಲ್ಲಿ ಗಂಡನನ್ನು ಕಳೆದುಕೊಂಡಿದ್ದ ವೃದ್ಧೆ ಮಾರ್ವಿ, ಒಂದು ಸಂಜೆ ಅರ್ವನ್‌ನ ಕೈಗಳನ್ನು ಹಿಡಿದು ಬಹಳ ಹೊತ್ತು ಸುಮ್ಮನೆ ನಿಂತಳು. ಆಮೇಲೆ, “ನೀನು ವಾಪಸ್ ಬಂದದ್ದು ಒಳ್ಳೇದಾಯ್ತು ಕಣಪ್ಪ” ಎಂದಳು. ಅರ್ವನ್‌ನ ನಾಲಿಗೆಯೇ ಹೊರಳಲಿಲ್ಲ, ಕೇವಲ ತಲೆಯಾಡಿಸಿದ.

ಬೆಳಿಗ್ಗೆ ಕೆಲಸ, ಸಂಜೆ ಕೆಲಸ, ಮಧ್ಯದ ಬಿಡುವಿನಲ್ಲೂ ಲೈಟ್‌ಹೌಸ್ ಬಗ್ಗೆಯೇ ಕನಸು. ಇದು ಅಷ್ಟೇನೂ ಆರೋಗ್ಯಕರವಲ್ಲ ಎಂದು ಅವನಿಗೇ ಅನ್ನಿಸಿತ್ತು. ತನ್ನೊಳಗಿನ ಅಪರಾಧಿ ಪ್ರಜ್ಞೆಯೇ ಈ ಹಠಕ್ಕೆ ಇಂಧನವಾಗಿರಬಹುದು, ಬಿಡುವು ಮಾಡಿಕೊಂಡು ಇದರ ಬಗ್ಗೆ ಯೋಚಿಸಬೇಕು ಎಂದುಕೊಳ್ಳುತ್ತಿದ್ದ. ಆದರೆ ಅದಕ್ಕೆ ಸಮಯವೇ ಸಿಗುತ್ತಿರಲಿಲ್ಲ.

ನೆಮ್ಮದಿ ಕೆಡಿಸುವ ಸುದ್ದಿಯೊಂದು ಎರಡು ಅಲೆಗಳಾಗಿ ಅವರನ್ನು ತಲುಪಿತು.

ಮೊದಲ ಅಲೆ ಬರಿಯ ವದಂತಿಯಾಗಿತ್ತು – ರಾಜಧಾನಿಯಲ್ಲಿ ಅನ್ಯಗ್ರಹ ಜೀವಿಗಳ ಸಂದೇಶದ ಬಗ್ಗೆ ಏನೋ ಗದ್ದಲ ನಡೆಯುತ್ತಿದೆ, ಯಾರನ್ನೋ ಬಂಧಿಸುತ್ತಿದ್ದಾರೆ, ದೇಶದ್ರೋಹಿಗಳ ಜೊತೆ ಕೈಜೋಡಿಸಿದ ಆರೋಪಗಳೇನೋ ಕೇಳಿಬರುತ್ತಿವೆ ಎನ್ನುವ ಗಾಳಿಸುದ್ದಿ. ಎರಡನೆಯ ಅಲೆ ಸ್ಪಷ್ಟವೂ, ಜೊತೆಗೆ ಹಾಸ್ಯಾಸ್ಪದವೂ ಆಗಿತ್ತು: ಪ್ರಾದೇಶಿಕ ಸೇನಾ ತುಕಡಿಯೊಂದು ಲೈಟ್‌ಹೌಸ್ ಕಟ್ಟಡದ ಬಗ್ಗೆ ತಲೆಹಾಕಿತ್ತು. ಯಾರೋ ವರದಿ ನೀಡಿದ್ದರು. ಆ ವರದಿಯಲ್ಲಿ, ಸಮುದ್ರತೀರದ ಕುಗ್ರಾಮವೊಂದರಲ್ಲಿ ಬೃಹತ್ ಸಿಗ್ನಲ್ ಟವರ್ ನಿರ್ಮಾಣವಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆ ವರದಿಯನ್ನು ಅನ್ಯಗ್ರಹ ಜೀವಿಗಳ ನಿಗೂಢ ಸಂದೇಶದೊಂದಿಗೆ ತಳಕುಹಾಕಿ, ಸೇನೆ ಒಂದು ಹಾಸ್ಯಾಸ್ಪದ ತೀರ್ಮಾನಕ್ಕೆ ಬಂದಿತ್ತು. ಬೇರೆ ಸಮಯವಾಗಿದ್ದರೆ ಅದೊಂದು ಕೆಟ್ಟ ತಮಾಷೆಯೆನಿಸುತ್ತಿತ್ತು.

ಒಂದು ಶುಭ್ರ ಬೆಳಗಿನಲ್ಲಿ ಮೂರು ಸೇನಾ ವಾಹನಗಳು ವಾರಂಟ್ ಸಮೇತ ಊರಿಗೆ ಬಂದವು. ಅರ್ವನ್ ಮತ್ತು ಕಟ್ಟಡದ ಕೆಲಸದಲ್ಲಿ ಮುಂಚೂಣಿಯಲ್ಲಿದ್ದ ಆರು ಮಂದಿಯನ್ನು ಬಂಧಿಸಲಾಯಿತು. ಸೈನಿಕರು ಅವರೊಂದಿಗೆ ಕ್ರೂರವಾಗಿ ನಡೆದುಕೊಳ್ಳಲಿಲ್ಲ, ಆದರೆ ಅವರ ನಿಷ್ಠುರತೆ ಮತ್ತು ಅನುಮಾನವೇ ಒಂದು ಬಗೆಯ ಕ್ರೌರ್ಯವಾಗಿತ್ತು. ಅರ್ವನ್‌ನನ್ನು ತರಣಿಯ ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು, ಯಂತ್ರಗಳಂಥ ಕಟ್ಟುನಿಟ್ಟಿನ ಕೊಠಡಿಯೊಂದರಲ್ಲಿ ಕೂರಿಸಿದರು. ಅವರು ಕೇಳಿದ ಪ್ರತಿಯೊಂದು ಪ್ರಶ್ನೆಯ ಹಿಂದೆಯೂ ಭದ್ರತೆಯ ಸೋಗಿನಲ್ಲಿ ಅಡಗಿದ್ದ ಅಜ್ಞಾತದ ಬಗ್ಗೆ ಭಯ ಎದ್ದುಕಾಣುತ್ತಿತ್ತು.

ಅವರು ಕೇಳಿದ್ದಕ್ಕೆಲ್ಲಾ ಅವನು ಉತ್ತರಿಸಿದ. ಅವನಲ್ಲಿ ಮುಚ್ಚಿಡಲು ಏನೂ ಇರಲಿಲ್ಲ. ಆದರೆ ಆ ವ್ಯವಸ್ಥೆಗೆ ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ.

ಮೂರು ದಿನ ಆ ಕೊಠಡಿಯಲ್ಲೇ ಕೂತಿದ್ದ. ದಿಬ್ಬದ ಮೇಲೆ ಅರ್ಧಕ್ಕೇ ನಿಂತಿದ್ದ ಲೈಟ್‌ಹೌಸ್ ಬಗ್ಗೆಯೇ ಅವನ ಯೋಚನೆ. ಕೆಲಸ ಮುಗಿಯುವ ಹಂತದಲ್ಲಿತ್ತಲ್ಲಾ ಎಂದು ಮರುಗಿದ. ಮುಂಬರುವ ಚಂಡಮಾರುತದ ಲೆಕ್ಕಾಚಾರಗಳು, ತಾನು ಹಾಕಿದ ಅಡಿಪಾಯದ ಬಗ್ಗೆ ತಲೆಕೆಡಿಸಿಕೊಂಡ.

ರಾಜಧಾನಿಯಲ್ಲೂ ಸುದ್ದಿ ವಿಚಿತ್ರ ದಾರಿಗಳಲ್ಲಿ ಹರಿಯುತ್ತಿತ್ತು.

ರಾಜ ವರುಣ – ಇಪ್ಪತ್ತೆರಡು ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಹಳ್ಳಿಗಳ ಬಗ್ಗೆ ಯೋಚಿಸುವ ಅಗತ್ಯವೇ ಬಾರದಿದ್ದ ಆ ಮನುಷ್ಯ – ಅನ್ಯಗ್ರಹ ಜೀವಿಗಳ ಸಂದೇಶದ ಕುರಿತಾದ ಪ್ರಾದೇಶಿಕ ಭದ್ರತೆಯ ಫೈಲ್‌ಗಳನ್ನು ನೋಡುವಾಗ, ನವತೀರದ ಬಂಧನಗಳ ಬಗ್ಗೆ ಓದಿದ. ಅದನ್ನು ಎರಡು ಬಾರಿ ಓದಿದ. ಆಮೇಲೆ ಫೈಲ್ ಪಕ್ಕಕ್ಕಿಟ್ಟು ಸುಮ್ಮನೆ ಕೂತ. ಜಗತ್ತು ಹೇಗಿದೆ ಮತ್ತು ತಾನು ಅದನ್ನು ಹೇಗೆ ಭಾವಿಸಿಕೊಂಡಿದ್ದೇನೆ ಎಂಬುದರ ನಡುವಿನ ಕಂದಕವನ್ನು ಅರಿತವನ ಮೌನ ಅದಾಗಿತ್ತು.

ಅವನೇನೂ ಕೆಟ್ಟ ಮನುಷ್ಯನಾಗಿರಲಿಲ್ಲ. ಆದರೆ ಕೇಂದ್ರದಲ್ಲಿ ಕೂತು ಆಡಳಿತ ನಡೆಸುತ್ತಾ ಗಡಿಗಳನ್ನು ಮರೆತಿದ್ದ. ಗಡಿಗಳೆಂಬುದು ಅವನ ಪಾಲಿಗೆ ನಕ್ಷೆಯಲ್ಲಿರುವ ರೇಖೆಗಳಷ್ಟೇ ಆಗಿದ್ದವು; ಅವುಗಳ ಅಸ್ತಿತ್ವ ಗೊತ್ತಿತ್ತೇ ವಿನಃ ಅದರ ಬಿಸಿ ಯಾವತ್ತೂ ಅವನಿಗೆ ತಟ್ಟಿರಲಿಲ್ಲ. ಊರಿಗೆ ಮರಳಿ, ಹಳೇ ಸಾಮಗ್ರಿಗಳನ್ನು ಬಳಸಿ, ಊರವರ ಸಹಾಯದಿಂದ ತನ್ನವರಿಗೊಂದು ಲೈಟ್‌ಹೌಸ್ ಕಟ್ಟಲು ಹೊರಟ ಮನುಷ್ಯನನ್ನು ಜೈಲಿಗೆ ಹಾಕಿರುವ ಬಗ್ಗೆ ಓದಿದಾಗ, ವರುಣನಿಗೆ ಆ ಗಡಿಭಾಗಗಳು ಏಕಾಏಕಿ ನೈಜವಾಗಿ, ಅಸ್ವಸ್ಥಗೊಳಿಸುವಂತೆ ಕಣ್ಣೆದುರು ನಿಂತವು.

ಇದರ ಹಿಂದಿರುವ ತರ್ಕದ ಹುಳುಕು ಅವನಿಗೆ ಬೇರೆಯದೇ ರೀತಿಯಲ್ಲಿ ಕಾಡತೊಡಗಿತ್ತು. ಇನ್ನು ಶತ್ರುಗಳೇ ಯಾರೆಂದು ಗೊತ್ತಿಲ್ಲ. ಯಾರೊಬ್ಬರೂ ಸರಿಯಾಗಿ ಅರ್ಥೈಸಿಕೊಳ್ಳದ, ಬಿಡಿಸಲಾಗದ ರಹಸ್ಯ ಸಂದೇಶವೊಂದನ್ನು ಇಟ್ಟುಕೊಂಡು, ಭದ್ರತಾ ಪಡೆಗಳು ಇಲ್ಲದ ಶತ್ರುವೊಬ್ಬನನ್ನು ಸೃಷ್ಟಿಸಿಕೊಂಡು, ಆ ಹೋರಾಟದ ನೆಪದಲ್ಲಿ ಸ್ವಂತ ಪ್ರಜೆಗಳನ್ನೇ ಶತ್ರುಗಳನ್ನಾಗಿ ಮಾಡುತ್ತಿರುವ ವಿಪರ್ಯಾಸ ಅವನಿಗೆ ಅರ್ಥವಾಯಿತು. ಈ ಹಿಂದೆಯೂ ಇಂಥದ್ದನ್ನು ನೋಡಿದ್ದ. ಇದರ ಪರಿಣಾಮವೇನಾಗಬಹುದು ಎಂಬ ಅಂದಾಜು ಅವನಿಗಿತ್ತು.

ಒಂದು ನಿರ್ಧಾರಕ್ಕೆ ಬಂದ. ತನ್ನ ಸಲಹೆಗಾರರೊಡನೆ ಸುದೀರ್ಘ ಚರ್ಚೆಗೇನೂ ಇಳಿಯಲಿಲ್ಲ. ಸಂಬಂಧಪಟ್ಟ ಅಧಿಕಾರಿಯನ್ನು ಕರೆದು, “ಅವರನ್ನು ಬಿಡುಗಡೆ ಮಾಡಿ. ಎಲ್ಲರನ್ನೂ. ಇಂದೇ ಬಿಡುಗಡೆ ಮಾಡಿ” ಎಂದ.

ಆಮೇಲೆ – ಅವನೊಬ್ಬ ರಾಜನಷ್ಟೇ ಆಗಿರದೆ, ಅದಕ್ಕೂ ಮೀರಿದ ಪ್ರಬುದ್ಧತೆಯಿದ್ದವನಾದ್ದರಿಂದ – ಒಂದು ಪತ್ರಿಕಾ ಹೇಳಿಕೆ ಸಿದ್ಧಪಡಿಸಿದ. ಅದರಲ್ಲಿ ಹೀಗಿತ್ತು: “ಇನ್ನೂ ಶತ್ರುಗಳು ಒಂದು ಗುಂಡನ್ನೂ ಹಾರಿಸುವ ಮುನ್ನವೇ, ಕೇವಲ ದೀಪದ ಗೋಪುರ ಕಟ್ಟಿದ್ದಕ್ಕಾಗಿ ಸ್ವಂತ ಪ್ರಜೆಗಳನ್ನೇ ಜೈಲಿಗೆ ಹಾಕುವ ಸರ್ಕಾರ, ತನ್ನಷ್ಟಕ್ಕೆ ತಾನೇ ಶತ್ರುವಾಗುತ್ತದೆಯೇ ಹೊರತು ಮತ್ತೇನೂ ಅಲ್ಲ.” ಅದನ್ನು ಯಾರಾದರೂ ಓದುತ್ತಾರೋ ಇಲ್ಲವೋ ಎಂಬ ಅನುಮಾನವಿದ್ದರೂ, ಅದನ್ನು ಪ್ರಕಟಿಸಲು ಕಳುಹಿಸಿದ.

ಮೋಡ ಕವಿದ ಮಧ್ಯಾಹ್ನವೊಂದರಲ್ಲಿ ಅರ್ವನ್ ಊರಿಗೆ ಮರಳಿದಾಗ, ಅಲ್ಲಿನ ಯಾವ ವಸ್ತುಗಳೂ ಸ್ಥಳಾಂತರಗೊಂಡಿರಲಿಲ್ಲ. ಮೀರಾ, ದಿಬ್ಬದ ತುದಿಯಲ್ಲಿ ಅವನಿಗಾಗಿಯೇ ಕಾಯುತ್ತಿದ್ದಳು. ಅವಳ ಮುಖದಲ್ಲಿ ಕೋಪ, ಭಯ, ನಿರಾಳತೆ ಎಲ್ಲವೂ ಬೆರೆತ, ಆದರೆ ಸಂಪೂರ್ಣವಾಗಿ ಮರೆಯಾಗದ ಭಾವವೊಂದಿತ್ತು. ಅವಳ ಪಕ್ಕ ನಿಂತು, ಅರ್ಧಕ್ಕೇ ನಿಂತಿದ್ದ ಆ ದೀಪದ ಗೋಪುರವನ್ನು ನೋಡಿದಾಗ, ಅಪೂರ್ಣವಾದದ್ದರ ಬಗ್ಗೆ ಇರಬಹುದಾದ ವಿಚಿತ್ರವಾದ ಸಂಕಟವೊಂದು ಅವನಿಗೆ ಕಾಡಿತು.

“ನೀನು ಇಲ್ಲದಾಗ ಪೂರ್ವದ ತಳಪಾಯ ಸ್ವಲ್ಪ ಜರುಗಿದೆ ಅಂತ ದತ್ತ ಹೇಳುತ್ತಿದ್ದ. ಅವನು ಅದನ್ನೇ ಗಮನಿಸುತ್ತಿದ್ದಾನೆ” ಎಂದಳು ಮೀರಾ.

“ಎಷ್ಟು?”

“ಕೆಲವೇ ಸೆಂಟಿಮೀಟರ್‌ಗಳು. ಕಣ್ಣಿಟ್ಟಿದ್ದಾನೆ.”

ಅರ್ವನ್ ತಲೆಯಾಡಿಸಿದ. ಅದನ್ನು ನೋಡಲೇಬೇಕು. ತನ್ನ ಅರಿವಿಲ್ಲದೆಯೇ ತಲೆಯಲ್ಲಿ ಲೆಕ್ಕಾಚಾರ ಶುರುವಾಯಿತು. ಮೀರಾ ಅವನ ತೋಳಿನ ಮೇಲೆ ಕೈಯಿಟ್ಟಾಗಲೇ ಎಚ್ಚರವಾಗಿ, ನಿಟ್ಟುಸಿರು ಬಿಟ್ಟದ್ದು.

“ನಾವು ಅದನ್ನು ಪೂರ್ತಿ ಮಾಡ್ತೀವಿ” ಎಂದಳು. ಅದೊಂದು ಪ್ರಶ್ನೆಯಾಗಿರಲಿಲ್ಲ, ನಿರ್ಧಾರವಾಗಿತ್ತು.

“ಹೌದು, ಪೂರ್ತಿ ಮಾಡೋಣ” ಎಂದು ಅವನು ಒಪ್ಪಿದ.

ಆದರೆ ಅವರಿಗೆ ಅದನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗಲಿಲ್ಲ. ಅವನ ಲೆಕ್ಕಾಚಾರ ತಪ್ಪಿದ್ದೇ ಅಲ್ಲಿ. ಅಥವಾ – ವಾತಾವರಣ ಬದಲಾಗಿತ್ತೋ, ಮೊದಲೇ ಅವನ ದತ್ತಾಂಶಗಳು ತಪ್ಪಿದ್ದವೋ, ಅಥವಾ ರಾಜಧಾನಿಯ ಲೆಕ್ಕಕ್ಕೇ ಸಿಗದಂತೆ ಹವಾಮಾನದ ಏರುಪೇರಿನಿಂದಾಗಿ ಚಂಡಮಾರುತವು ನಿರೀಕ್ಷೆಗಿಂತ ಮುಂಚೆಯೇ ಬಂದಿತ್ತೋ – ಸ್ಪಷ್ಟವಾಗಿ ಹೇಳುವುದು ಕಷ್ಟವಿತ್ತು. ಆದರೆ ಸಮುದ್ರದ ಬಣ್ಣ ಬದಲಾಗತೊಡಗಿದಾಗ ಚಂಡಮಾರುತ ಬರುತ್ತಿದೆ ಎಂಬುದು ಅವನಿಗೆ ಗೊತ್ತಾಗಿತ್ತು. ಹನ್ನೆರಡರ ಹರೆಯದಿಂದಲೇ ಅದನ್ನವನು ಬಲ್ಲ. ಬೇಸಿಗೆಯ ಕೊನೆಯಲ್ಲಿ ಸಮುದ್ರದ ಬಣ್ಣ ಬದಲಾದಾಗ, ದಿಬ್ಬದ ಮೇಲೆ ನಿಂತು ಬಹಳ ಹೊತ್ತು ಅದನ್ನು ದಿಟ್ಟಿಸುತ್ತಿದ್ದ.

ಗೋಪುರ ಸಿದ್ಧವಾಗಿತ್ತು. ದೀಪದ ವ್ಯವಸ್ಥೆಯೂ ಇತ್ತು. ಆದರೆ ಹೊರಗಿನಿಂದ ಕೊಡಬೇಕಿದ್ದ ಭದ್ರತೆ ಮಾತ್ರ ಬಾಕಿಯಿತ್ತು. ಅದೇ ಒಂದು ಕಟ್ಟಡವು ಸಾಮಾನ್ಯ ಮಳೆಗೆ ನಿಲ್ಲುವುದಕ್ಕೂ, ಭೀಕರ ಚಂಡಮಾರುತವನ್ನು ಎದುರಿಸಿ ನಿಲ್ಲುವುದಕ್ಕೂ ಇರುವ ವ್ಯತ್ಯಾಸವಾಗಿತ್ತು.

ಇದ್ಯಾವುದನ್ನೂ ಅವನು ಮೀನುಗಾರರಿಗೆ ಸ್ಪಷ್ಟವಾಗಿ ಹೇಳಲಿಲ್ಲ. “ದೀಪ ಉರಿಯುತ್ತಿದೆ, ಬಳಸಿಕೊಳ್ಳಿ” ಎಂದಷ್ಟೇ ಹೇಳಿದ. “ಈಗ ನಿಮಗೆ ಮೊದಲಿಗಿಂತ ಹೆಚ್ಚು ಸಮಯ ಸಿಗುತ್ತದೆ, ಕತ್ತಲಾದ ಮೇಲೂ ಮೀನು ಹಿಡಿಯಬಹುದು, ಬಳಸಿಕೊಳ್ಳಿ” ಎಂದ. ಏನೂ ಇಲ್ಲದಿರುವುದಕ್ಕಿಂತ ಅಲ್ಪಸ್ವಲ್ಪವಾದರೂ ಇರುವುದು ಲೇಸು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. ಆದರೆ ಅದು ಸಂಪೂರ್ಣ ಸತ್ಯವಾಗಿರಲಿಲ್ಲ. ಹಾಗೆ ಹೇಳುವಾಗ ಅವನ ದನಿ ನಡುಗಿತ್ತು. ಆದರೆ ಅವನಂತೆಯೇ ಹತಾಶರಾಗಿದ್ದ ಮೀನುಗಾರರಿಗೆ ಆ ದನಿಯಲ್ಲಿದ್ದ ನಡುಕ ಅರ್ಥವಾಗಲಿಲ್ಲ.

ಚಂಡಮಾರುತದ ಮೊದಲ ಅಬ್ಬರ, ನಿರೀಕ್ಷೆಗಿಂತ ಮೊದಲೇ – ಎರಡನೇ ವಾರದಲ್ಲೇ ಶುರುವಾಯಿತು. ಅವನು ಲೈಟ್‌ಹೌಸ್‌ನಲ್ಲಿದ್ದಾಗಲೇ ಆ ಮುನ್ಸೂಚನೆಯ ಶಬ್ದ ಕೇಳಿಸಿತು; ಬಾಲ್ಯದಿಂದಲೂ ಅವನಿಗೆ ಪರಿಚಿತವಿದ್ದ ಅದೇ ಗುಡುಗು. ಮೀನುಗಾರರು ಕಡಲಿನಲ್ಲಿದ್ದರು. ದೀಪ ಅವರಿಗೆ ದಾರಿ ತೋರುತ್ತದೆ ಎಂದು ಭರವಸೆ ನೀಡಿದ್ದ. ಹಾಗಾಗಿ ದೀಪವನ್ನು ಕಾಯಲು ಅವನು ಅಲ್ಲೇ ಉಳಿದ.

ಒಂದು ಗಂಟೆಯೊಳಗೆ ಚಂಡಮಾರುತ ತನ್ನ ಪೂರ್ಣ ಶಕ್ತಿಯೊಡನೆ ದಿಬ್ಬಕ್ಕಪ್ಪಳಿಸಿತು. ಕೆಳಗಿನ ಕೋಣೆಯಲ್ಲಿ ನಿಂತು ಗೋಡೆಗಳು ಗಾಳಿಯೊಡನೆ ನಡೆಸುತ್ತಿದ್ದ ಮಲ್ಲಯುದ್ಧವನ್ನು ಗಮನಿಸುತ್ತಿದ್ದ. ತಲೆಯಲ್ಲಿ ಮತ್ತೆ ಅದೇ ಲೆಕ್ಕಾಚಾರಗಳು – ಭಾರ, ಅಡಿಪಾಯದ ಆಳ, ದತ್ತ ಹೇಳಿದ್ದ ಪೂರ್ವದ ತಳಪಾಯದ ಜಾರುವಿಕೆ. ಹೀಗೆ ಅವನು ಲೆಕ್ಕ ಹಾಕುತ್ತಿರುವಾಗಲೇ ಆ ಕಟ್ಟಡ ತನ್ನ ಸೋಲನ್ನು ಒಪ್ಪಿಕೊಂಡಿತು. ಅದೊಂದು ದೊಡ್ಡ ಸ್ಫೋಟದಂತಿರಲಿಲ್ಲ, ಮುಕ್ತಾಯವಾಗುತ್ತಿರುವ ವಾಕ್ಯದಂತೆಯೂ ಇರಲಿಲ್ಲ. ಕಲ್ಲುಗಳು ಅಚ್ಚುಕಟ್ಟಾಗಿ ತಮ್ಮ ಜಾಗ ಬಿಟ್ಟು ಸರಿದವು. ಮುಂದಾದ ಕುಸಿತ ಸಂಪೂರ್ಣವಾಗಿತ್ತು.

ಬೆಳಗುತ್ತಿದ್ದ, ಆಮೇಲೆ ಕಣ್ಮರೆಯಾದ ಆ ದೀಪದ ಬೆಳಕಿನ ಮಾರ್ಗದರ್ಶನದಲ್ಲೇ ದೋಣಿಗಳು ಚಂಡಮಾರುತವನ್ನು ಸೀಳಿಕೊಂಡು ದಡ ಸೇರಿದ್ದವು. ದೀಪ ಆರಿತ್ತು, ಆದರೆ ಅವರು ಅದನ್ನು ನೋಡಿದ್ದರು. ಹಾಗಾಗಿ ಬಹುತೇಕ ಎಲ್ಲರೂ ವಾಪಸ್ ಬಂದರು. ಆರು ವಾರಗಳ ಕಾಲ ಅಸ್ತಿತ್ವದಲ್ಲಿದ್ದ ಆ ಗೋಪುರವೇ ಅವರ ಜೀವ ಉಳಿಸಿತ್ತು. ಆದರೆ ಆ ಗೋಪುರ ಈಗ ಅಲ್ಲಿರಲಿಲ್ಲ, ಮುಂದೆ ಅದನ್ನು ಕಟ್ಟುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೂ ಆ ಕ್ಷಣದಲ್ಲಿ ಉತ್ತರವಿರಲಿಲ್ಲ.

ಅರ್ವನ್ ಕಟ್ಟಿದ್ದ ಕಟ್ಟಡದ ಅವಶೇಷಗಳ ಮಧ್ಯೆ ಊರವರು ಅವನನ್ನು ಹುಡುಕಿದರು. ಆದರೆ ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು. ಅವರಿಗಾಗಿ ಆತ ಮಾಡಿದ ತ್ಯಾಗಕ್ಕೆ ಪ್ರತಿಯಾಗಿ, ಅವರು ಮಾಡಿದ ಯಾವ ಪ್ರಯತ್ನವೂ ಫಲಿಸಲಿಲ್ಲ. ಈ ವಿಚಾರದಲ್ಲಿ ಅವರು ಅವನಂತೆಯೇ ಆಗಿದ್ದರು: ಕೈಲಾದದ್ದನ್ನು ಮಾಡಿದ್ದರಷ್ಟೇ.

ರಾಜಧಾನಿಯಲ್ಲಿ, ಆ ಅನ್ಯಗ್ರಹದ ಸಂದೇಶಗಳು ತಮ್ಮ ಹನ್ನೊಂದು ಗಂಟೆಗಳ ಪುನರಾವರ್ತನೆಯನ್ನು ಸಣ್ಣ ಬದಲಾವಣೆಗಳೊಂದಿಗೆ ಮುಂದುವರಿಸಿದ್ದವು. ತಜ್ಞರು ಆ ವಿನ್ಯಾಸದ ಅರ್ಥ ಹುಡುಕುತ್ತಿದ್ದರು. “ಏನೋ ಪ್ರಗತಿಯಾಗುತ್ತಿದೆ” ಎನ್ನುತ್ತಿದ್ದರು. ಅಥವಾ ನಿಜಕ್ಕೂ ಪ್ರಗತಿಯಾಗುತ್ತಿತ್ತೋ ಏನೋ. ತಿಳಿಯುವುದು ಕಷ್ಟವಿತ್ತು. ಆ ಸಂದೇಶವು ತನ್ನನ್ನು ತಾನು ಪುನರಾವರ್ತಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಮಾಡಿರಲಿಲ್ಲ. ಅದು ಬಹಳ ತಾಳ್ಮೆಯ ಸಂಕೇತವಾಗಿತ್ತೋ, ಮುಗ್ಧತೆಯದೋ, ಅಥವಾ ಅವರ ಗ್ರಹವು ತನ್ನ ತಿಳುವಳಿಕೆಗೂ ಮೀರಿದ ವಿಚಾರವೊಂದನ್ನು ಎದುರುಗೊಳ್ಳುತ್ತಿರುವ ಸೂಚನೆಯಾಗಿತ್ತೋ ಯಾರಿಗೂ ತಿಳಿದಿರಲಿಲ್ಲ.

ನವತೀರದಲ್ಲಿ, ಸಂಜೆಯ ಹೊತ್ತು ದಿಬ್ಬದ ಮೇಲೆ ಕೂರುತ್ತಿದ್ದ ನಿರೇಯನ ಕೈಗಳ ನಡುಕ ಇನ್ನಷ್ಟು ಹೆಚ್ಚಾಗಿತ್ತು. ತನ್ನ ಅಣ್ಣ ಮಾಡುತ್ತಿದ್ದ, ತನಗೆ ತಿಳಿದ-ತಿಳಿಯದ ಅನೇಕ ಕೆಲಸಗಳನ್ನು ಮೀರಾ ತನ್ನ ಹೆಗಲಿಗೆ ಹಾಕಿಕೊಂಡಳು. ಮುಂದಿನ ತಿಂಗಳುಗಳಲ್ಲಿ, ಅವಳ ಊಹೆಗೂ ಮೀರಿದ ಜವಾಬ್ದಾರಿಗಳು ಅವನ ಮೇಲಿದ್ದವು ಎಂಬುದು ಅವಳಿಗೆ ಅರಿವಾಯಿತು. ಅನ್ವಿಕಾ ಸಾಧ್ಯವಾದಾಗ ಊರವರ ಹಸಿವು ನೀಗಿಸಿದಳು, ಸಾಧ್ಯವಾಗದಿದ್ದಾಗ ಊರವರು ಅವಳಿಗೆ ಅನ್ನವಿಕ್ಕಿದರು. ನವತೀರದ ಇಡೀ ಆರ್ಥಿಕತೆಯ ಸಣ್ಣ ರೂಪವೇ ಅದಾಗಿತ್ತು, ಮೊದಲಿನಿಂದಲೂ ಅದು ಹಾಗೆಯೇ ನಡೆದುಕೊಂಡು ಬಂದಿತ್ತು.

ಲೈಟ್‌ಹೌಸ್ ಈಗಿರಲಿಲ್ಲ. ಪೂರ್ವದ ತಳಪಾಯದ ಕುಸಿತವೇ ಆ ಅನಾಹುತಕ್ಕೆ ನಿಜವಾದ ಕಾರಣವಾಗಿತ್ತು. ಚಂಡಮಾರುತ ಕೇವಲ ನೆಪವಾಗಿತ್ತು; ಅರ್ವನ್‌ನ ಲೆಕ್ಕಾಚಾರದ ತಪ್ಪೂ ಮುಖ್ಯ ಕಾರಣವಾಗಿರಲಿಲ್ಲ. ಬಗೆಹರಿಯದೆ ಉಳಿದಿದ್ದ ಆ ಅಡಿಪಾಯದ ಸರಿಪಡಿಸುವಿಕೆಯೇ ದುರಂತಕ್ಕೆ ಕಾರಣವಾಗಿತ್ತು. ಅದಕ್ಕೆ ನಿರಂತರ ನಿಗಾ ಬೇಕಿತ್ತೇ ವಿನಃ ಒಂದೇ ಬಾರಿಯ ರಿಪೇರಿ ಸಾಕಾಗುತ್ತಿರಲಿಲ್ಲ.

ಮತ್ತೆ ದೋಣಿಗಳು ಕತ್ತಲಾಗುವ ಮುನ್ನವೇ ದಡ ಸೇರುತ್ತಿದ್ದವು. ದಾರಿ ತೋರಿಸಲು ಬೆಳಕಿರಲಿಲ್ಲ. ಆದರೂ ಈಗ ಪರಿಸ್ಥಿತಿ ಮೊದಲಿನಂತಿರಲಿಲ್ಲ.

ಹಳೆಯ ಕಟ್ಟಾಳುಗಳು ಮತ್ತೆ ದಿಬ್ಬದ ಮೇಲೆ ಸೇರಿ, ಅಡಿಪಾಯದ ಬಗ್ಗೆ, ಏನು ತಪ್ಪು ನಡೆಯಿತು, ಮುಂದೇನು ಮಾಡಬಹುದು ಎಂದು ಚರ್ಚಿಸುತ್ತಿದ್ದರು. ಮೊದಲ ನಕ್ಷೆಯಲ್ಲಿ ಬಿಟ್ಟುಹೋಗಿದ್ದ ದಿಬ್ಬದ ಅನೇಕ ಗುಟ್ಟುಗಳು ಅವರಿಗೆ ಗೊತ್ತಿದ್ದವು. ದತ್ತನಿಗೆ ಪೂರ್ವದ ತಳಪಾಯದ ಬಗ್ಗೆ ತನ್ನದೇ ಆದ ಅಭಿಪ್ರಾಯಗಳಿದ್ದವು. ಕೆಳಗೆ ಕಡಲು ತನ್ನ ಅಲೆಗಳ ಮೂಲಕ ವಾದ ಮಂಡಿಸುತ್ತಿರುವಾಗ, ದಿಬ್ಬದ ಮೇಲೆ ಸಂಜೆಯ ಹೊತ್ತು ಈ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗ ಆ ಚರ್ಚೆಯಲ್ಲಿ ಭಾಗವಹಿಸಲು ಅರ್ವನ್ ಮಾತ್ರ ಇರಲಿಲ್ಲ.

ಮುಂದಿನ ವರ್ಷದ ವಸಂತಕಾಲದ ಆರಂಭದಲ್ಲಿ, ರಾಜಧಾನಿಯ ವಿಜ್ಞಾನಿಗಳು ಆ ಅನ್ಯಗ್ರಹದ ಸಂದೇಶದ ಮೊದಲ ಸಾಲನ್ನು ಡಿಕೋಡ್ ಮಾಡಿದರು. ಅನುವಾದಿಸಿದಾಗ ಅದೊಂದು “ಪ್ರಶ್ನೆ”ಯಾಗಿತ್ತು. ಆ ಪ್ರಶ್ನೆಯ ಅರ್ಥವೇನು ಎಂಬುದರ ಬಗ್ಗೆ ಯಾರಿಗೂ ಸಹಮತವಿರಲಿಲ್ಲ. ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವಾಗ, ಅವರ ಗ್ರಹ ಮಾತ್ರ ತನ್ನಷ್ಟಕ್ಕೆ ತಾನು ತಿರುಗುತ್ತಿತ್ತು. ಅದರ ಎರಡು ಚಂದ್ರರೂ ಕೂಡ ತಮ್ಮ ತಮ್ಮ ಪಥದಲ್ಲಿ ಸಂಚಾರ ಮುಂದುವರಿಸಿದ್ದರು.

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು. ಆ ಪೂರ್ವದ ತಳಪಾಯದ ಬಗ್ಗೆ ಅವನೇನಾಗಿದ್ದರೆ ಏನು ಹೇಳುತ್ತಿದ್ದ ಎಂದು ಯೋಚಿಸಿದಳು. ಬಹುಶಃ ಅವಳಿಗೆ ಅದರ ಉತ್ತರ ಗೊತ್ತಿತ್ತು, ಏಕೆಂದರೆ ಇಷ್ಟು ವರ್ಷ ಅವನ ಆಲೋಚನಾ ಲಹರಿಯನ್ನು ಅವಳು ಅಷ್ಟು ಹತ್ತಿರದಿಂದ ಕಂಡಿದ್ದಳು.

ಕತ್ತಲಾಗಿ ಕಡಲು ಕಣ್ಣಿಗೆ ಕಾಣದಾಗುವವರೆಗೂ ಅವಳು ಆ ದಿಬ್ಬದ ಮೇಲೆಯೇ ನಿಂತಿದ್ದಳು. ಆಮೇಲೆ ಒಳಗೆ ಹೋಗಿ, ತಾಯಿ ಬಡಿಸಿದ ಊಟ ಮುಗಿಸಿ, ಅಡಿಪಾಯದ ಬಗ್ಗೆ ಯೋಚಿಸತೊಡಗಿದಳು.

ಇನ್ನೊಂದು ಚಂಡಮಾರುತಕ್ಕೆ ಇನ್ನೂ ನಲವತ್ತು-ಐವತ್ತು ವರ್ಷಗಳ ಕಾಲಾವಕಾಶವಿತ್ತು. ತಪ್ಪು ತಿದ್ದಿಕೊಳ್ಳಲು, ಎಲ್ಲವನ್ನೂ ಸರಿಯಾಗಿ ಕಟ್ಟಲು ಬಹುಶಃ ಸಾಕಷ್ಟು ಸಮಯವಿತ್ತು.

About The Author

ವಾಸುಕಿ ಸಿ.ಜಿ.

 ವಾಸುಕಿ ಸಿ.ಜಿ. ಮೂಲತಃ ಶಿರಸಿಯವರು. ಸದ್ಯ ಬೆಂಗಳೂರಿನಲ್ಲಿ ಬಯೋಟೆಕ್ ಕಂಪೆನಿಯಲ್ಲಿ ಕೆಲಸಮಾಡುತಿದ್ದಾರೆ.  ಸ್ಪೆಕ್ಯುಲೇಟಿವ್/ ಊಹಾತ್ಮಕ (ಕಾಲ್ಪನಿಕ, ವೈಜ್ಞಾನಿಕ) ಕತೆಗಳನ್ನು ಬರೆಯುವುದು, ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳ ಓದು ಇವರ ಹವ್ಯಾಸ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ