ಇವೆಲ್ಲ ಸಾಲುಗಳು ಇನ್ನಷ್ಟು ಕವಿತೆಗಳ ತುಣುಕುಗಳನ್ನು ನೆನಪಿಗೆ ಹೊತ್ತು ತಂದವು. ಬಹುಶಃ ಸಾಯುವ ಮುನ್ನವೇ ಸಾವಿನೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ, ಸಂಧಾನ ಸಫಲವಾಗದೆ, ಇಷ್ಟೆಲ್ಲ ಸಾಲುಗಳ ದಾಖಲೆಯನಿಲ್ಲಿಟ್ಟು “ಮುಂದೆ ಓದುವವರೇ ಇದೋ ಇದು ನನ್ನ ಷರಾ… ಸಾವಿಗೆ ಎದುರಾದವಳ, ಸಾವನ್ನು ಎದುರಿಸಿ ನಿಂತವಳ ಷರಾ” ಎನ್ನುತ್ತಿರಬಹುದು ವಿಭಾ… ದುಃಖ ನೋವು ಕಣ್ಣೀರು ಎನ್ನುವ ಆಶಾಢಬೂತಿ ಪೋಷಾಕುಗಳ ಸಹಕಾರವಿಲ್ಲದೆ ಬರಿದೆ ತಳ ಕಾಣುವ ಮಡಿಕೆಯಂತಾದ ಮನಸಿನ ತುಂಬ ತುಂಬಿಕೊಳ್ಳುತ್ತಾ ಮುಂದೆ ಓದುವವರಿಗೆ ಕೇಳಿಸುವ ದನಿಯಂತೆ ಮತ್ತೆ ಮತ್ತೆ ಆ ಸಾಲುಗಳನ್ನು ಓದಿದೆ…
ಆಶಾಜಗದೀಶ್ ಅಂಕಣ

 

ದೂರ ತೀರವ ಹುಡುಕಿ ಹೊರಟ ಜೀವ, ದೇಹವಾ… ಆತ್ಮವಾ.. ಸುಮ್ಮನೇ ಮುಮ್ಮಲ ಮರುಗುತ್ತದೆ ಮನಸ್ಸು… ಯಾಂತ್ರಿಕ ದೇಹದ ಚಾಲಕ ಶಕ್ತಿ ಎನ್ನಿಸುವ ಜೀವಕ್ಕೂ, ದೇಹದೊಂದಿಗೆ ಬೆರೆತ ಬುದ್ಧಿ ಭಾವಗಳ ಒಟ್ಟಾರೆ ಸಮಗ್ರ ಚೈತನ್ಯವೆನ್ನಿಸುವ ಆತ್ಮಕ್ಕೂ ಎಷ್ಟೊಂದು ವ್ಯತ್ಯಾಸ. ಇಹದ ನಂಟು ಪರದ ಗಂಟು.. ಏನೆಲ್ಲ ನಿರೀಕ್ಷೆ ಇದೆ ನಮ್ಮ ಮುಂದೆ… ನಶ್ವರ ಎಂದು ತಿಳಿದೂ ಶಾಶ್ವತತೆಗಾಗಿ ಹಂಬಲಿಸುವ ಆಸೆಗೆ ಎಣೆ ಇಲ್ಲ. ವೈರಾಗ್ಯದ ಹಾದಿಯಲ್ಲಿ ಪಾರಮಾರ್ಥಿಕ ಸುಖಕ್ಕೆ ಎಣೆಸುವುದು, ಸಂಸಾರದಲ್ಲಿಯೇ ಅಲೌಕಿಕತೆಯನ್ನು ಕಾಣುವುದು ಅಸಾಮಾನ್ಯರ ದಾರಿಯಾದರೆ ಮಾಡುವ ಕೆಲಸ, ನುಡಿವ ಮಾತು, ಸಣ್ಣಪಣ್ಣದೂ ವರ್ತನೆಯಲ್ಲಿಯೇ ಭಗವಂತನನ್ನು ಕಾಣುತ್ತಾ, ಪುಟ್ಟ ಪುಟ್ಟ ಸೌಂದರ್ಯದಲ್ಲು ಸಂತೋಷ, ಸಾರ್ಥಕತೆ ಎಂಬ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದು ಸಾಮಾನ್ಯರ ಹಾದಿ.

ಸಾಮಾನ್ಯತೆ ಭಗವಂತನಾ ರೀತಿ
ಸಾಮಾನ್ಯತೆ ದಿಟ ಭಗವದ್ ಪ್ರೀತಿ
ಸಾಮಾನ್ಯರೊ ನಾವು ಓ ಬನ್ನೀ ಬನ್ನೀ
ಸಾಮಾನ್ಯದ ಪೂಜೆಯ ಕೊಳ್ಳಿರೀ ನೀವು
(ಕುವೆಂಪು)

(ಕೀಟ್ಸ್)

ಎಂದು ಹೇಳುತ್ತಾರೆ ಕುವೆಂಪು. Thing of beauty is joy forever ಎನ್ನುತ್ತಾರೆ Keats. ಮತ್ತೆ ನಶ್ವರದ ಬದುಕಲ್ಲಿ ಶಾಶ್ವತ ಎಂದೆನಿಸಿಕೊಳ್ಳುವುದು ಒಳ್ಳೆಯದು ಮಾತ್ರವೇ.. ಲಿಲ್ಲಿ ಮತ್ತು ಓಕ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಯಾವುದು ಶಾಶ್ವತ ಹಾಗಾದರೆ…

ಲಿಲ್ಲಿಗಳಂತೆ ಬದುಕಿ ದೈಹಿಕವಾಗಿ ಇಲ್ಲವಾಗಿಯೂ ನಮ್ಮೊಂದಿಗೆ ಇನ್ನೂ ಇವತ್ತಿಗೂ ಉಸಿರಾಡಿಕೊಂಡಿರುವ ಹಲವು ಚೇತನಗಳು ಆ ದಾರಿಯಲ್ಲಿ ಸಾಗಲಿಚ್ಛಿಸುವವರಿಗೆ ದಾರಿ ದೀಪಗಳು. ಕೆಲವರನ್ನು ನೋಡುವಾಗ ಯಾಕಾದರೂ ಇವರು ಬದುಕಿದ್ದಾರೆಯೋ ಎನಿಸುವಂತೇ ಕೆಲವರನ್ನು ನೋಡುವಾಗ ಇವರನ್ನು ಭಗವಂತ ಚಿರಂತನವಾಗಿಟ್ಟುಬಿಟ್ಟಿದ್ದರೆ ಎಷ್ಟು ಚಂದಿರುತ್ತಿತ್ತು ಅಂತಲೂ ಅನಿಸುತ್ತಿರುತ್ತದೆ. ಅಂಥವರ ಬಗ್ಗೆ ಎಂಥದೋ ನಿರ್ವ್ಯಾಜ್ಯ ಪೂಜ್ಯಭಾವ, ಅಸಖ್ಖಲಿತ ಪ್ರೇಮ ನಮ್ಮವರಲ್ಲದೆಯೂ ನಮ್ಮವರೆನ್ನುವ ಸಂಬಂಧಿಸಿಕೊಂಡ ಅತಿ ಹತ್ತಿರದ ಭಾವ. ಇದೆಲ್ಲ ಯಾಕಾಗುತ್ತದೆ… ನಿಜದಲ್ಲಿ ನಾವೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರು. ನಮ್ಮೆಲ್ಲರ ಬುದ್ಧಿಯ ನಾಡಿ ಒಂದೇ, ಹೃದಯದ ಮಿಡಿತ ಒಂದೇ, ರಕ್ತದ ವಾಸನೆ ಒಂದೇ… ಒಟ್ಟಾರೆ ಮೂಲದಲ್ಲಿ ನಮ್ಮೆಲ್ಲರನ್ನೂ ಹಿಡಿದಿಡುವ ದೈತ್ಯ ಶಕ್ತಿಯೊಂದಿದೆ. ಅದೇ ನಮ್ಮೆಲ್ಲರನ್ನೂ ಬಂಧಿಸಿಟ್ಟಿದೆ. ಚುಂಬಕ ಶಕ್ತಿಯಿಂದ ಸೆಳೆದು ದೂರೀಕರಿಸುವ ವಿದ್ಯಮಾನಗಳನ್ನು ಮೀರಿ ತಬ್ಬುವಂತೆ ಮಾಡುತ್ತಿದೆ… ಹಾಗಾಗಿಯೇ ನಾವೆಲ್ಲರೂ ಇಂದಿಗೂ ಮನುಷ್ಯರು.

ಸಾವಿನ ಕಪಿಮುಷ್ಟಿಗೆ ಸಿಕ್ಕೂ ಸಾವನ್ನು ಸೋಲಿಸಿ ದಿಗ್ವಿಜಯಿಗಳಾದವರ ಕತೆ ಲೋಕಕ್ಕೆ ಯಾವತ್ತಿಗೂ ಪ್ರಿಯವೇ… ಕೆಲವರು ಅಳಿದ ಮೇಲೂ ಉಳಿದು ಕಾಡುತ್ತಾರೆ… ಸುಮ್ಮನೇ ಶ್ರುತಿ ಹಿಡಿದು ಬಿಟ್ಟ ತಂಬೂರಿಯ ಅನಾಹತ ನಾದದಂತೆ ನಮ್ಮೊಳಗೆ ತುಂಬಿಕೊಳ್ಳುತ್ತಾರೆ….

ನಾನಾಗ ಪದವಿ ಓದುತ್ತಿದ್ದೆ. ಇಂಗ್ಲೀಷ್ ಸಾಹಿತ್ಯವನ್ನು ಬೆರಗಿನಿಂದ ನೋಡುತ್ತಿದ್ದ ದಿನಗಳವು. ಕೀಟ್ಸ್, ಶೆಲ್ಲಿ ಎಂಬೆಲ್ಲ ದೈತ್ಯರೂ ಎದುರು ಬಂದು ಕೈಕುಲುಕಿ ಹಾಯ್ ಹೇಳಿದ್ದೂ ಆವಾಗಲೇ… ಆಗ ಕೀಟ್ಸನ ಬಗ್ಗೆ ಅದೆಷ್ಟು ಪಾಪ ಅನಿಸಿಬಿಟ್ಟಿತ್ತು ನನಗೆ. ಅಷ್ಟೇ ಅಲ್ಲದೆ ಈ ಹುಡುಗ ಇನ್ನೊಂದ್ಹತ್ತು ವರ್ಷ ಹೆಚ್ಚು ಬದುಕಿದ್ದಿದ್ದರೆ ಇನ್ನೂ ಏನೇನನ್ನೆಲ್ಲ ಬರ್ದು ಹೋಗ್ತಿದ್ದನೋ ಮಾರಾಯಾ… ಅಂತನ್ನಿಸಿ ವಿಪರೀತ ಬೆರಗಾಗುತ್ತಿತ್ತು. ಆಗೆಲ್ಲಾ ಹೈಸ್ಕೂಲ್ ಇಂಗ್ಲೀಷ್ ಪಠ್ಯದಲ್ಲಿ ಓದಿದ್ದ Ben Johnson ರವರ The Nobel nature ಬಹಳ ನೆನಪಾಗುತ್ತಿತ್ತು…..

It is not growing like a tree in bulk
Doth make man better be
Or standing long an oak three hundred year
To fall a log at last dry bald and sere
A lily of a day is fairer far in may
Although it fall and die that night
it was the plant and flower of light
In small proportions we just beauties see
And in short measures life may perfect be

ಆ ಕೊನೆಯ ಎರೆಡು ಸಾಲುಗಳು… ವಾಹ್… ಅದೆಷ್ಟು ಸತ್ಯ!

(ರಮೇಶ್ ಹೆಗಡೆಯವರ ಪುಸ್ತಕ ಬಿಡುಗಡೆಯ ಸಂದರ್ಭ…)

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ನಡುವೆ ಗುಂಪಿನ ಉಸಿರಂತೆ ಇದ್ದ ರಮೇಶ್ ಹೆಗಡೆಯವರು ಇದ್ದಕ್ಕಿದ್ದಂತೆ ಎದ್ದು ಹೋಗಿದ್ದಾರೆ. ಬದುಕ್ಕಿದ್ದಷ್ಟು ದಿನವೂ ಚೈತನ್ಯದ ಬುಗ್ಗೆಯಂತೆ ಇದ್ದು ಎದ್ದು ಹೋದಾದಮೇಲೂ ಮನಸ್ಸನ್ನು ಕವಿದು ಹನಿಸುತ್ತಿರುವುದೇ ಅವರ ವ್ಯಕ್ತಿತ್ವದ ಶಕ್ತಿ.

ಸಣ್ಣ ವಯಸ್ಸಿನಲ್ಲೇ (13-14) ಅಪರೂಪದ ಘೋರ ಕಾಯಿಲೆ(ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ, ಬಿರುಸು ಎಲಬುಗಳ ರೋಗ-brittle bone disease)ಗೆ ಗುರಿಯಾಗಿ, ಸಾಯುವ ಕ್ಷಣದವರೆಗೂ ಹಾಸಿಗೆಯ ಮೇಲೇ ಜೀವಿಸಿದರು. ಸಾವು ಕಾಣುವಷ್ಟು ದೂರದಲ್ಲಿದೆ ಎಂದು ಗೊತ್ತಿದ್ದೂ ಸಾವನ್ನು ಎದುರು ಹಾಕಿಕೊಂಡು ಬದುಕಿದರು. ಐದಾರನೇ ತರಗತಿಗೆ ನಿಲ್ಲಿಸಿದ್ದ ಓದನ್ನು ಹಾಸಿಗೆಯಲ್ಲಿದ್ದೇ ಮುಂದುವರಿಸಿದರು, ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಿರಂತರ ಅಧ್ಯಯನದಿಂದ ಅಪಾರ ಜ್ಞಾನ ಗಳಿಸಿದರು. ತಮ್ಮ ಜೀವಂತ ಗಜ಼ಲ್ ಗಳ ಮೂಲಕ, ಆರ್ದ್ರ ಕವಿತೆಗಳ ಮೂಲಕ ಸದಾ ಎಲ್ಲರನ್ನೂ ತಡವುತ್ತಾ ತಮ್ಮಂತೆ ಕಷ್ಟ ಪಡುವ ಎಲ್ಲರಿಗೂ ಮಾದರಿಯಾದರು. ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಬರಹಗಳು, ಅವರ ಅನುಮಾನಗಳ, ಅವರ ಪ್ರಶ್ನೆಗಳು ನಮ್ಮ ಮುಂದಿವೆ… ಅವರ ಪ್ರೀತಿ ನಮ್ಮನ್ನು ಬೆಚ್ಚಗಿಟ್ಟಿದೆ.

ಲಿಲ್ಲಿಗಳಂತೆ ಬದುಕಿ ದೈಹಿಕವಾಗಿ ಇಲ್ಲವಾಗಿಯೂ ನಮ್ಮೊಂದಿಗೆ ಇನ್ನೂ ಇವತ್ತಿಗೂ ಉಸಿರಾಡಿಕೊಂಡಿರುವ ಹಲವು ಚೇತನಗಳು ಆ ದಾರಿಯಲ್ಲಿ ಸಾಗಲಿಚ್ಛಿಸುವವರಿಗೆ ದಾರಿ ದೀಪಗಳು. ಕೆಲವರನ್ನು ನೋಡುವಾಗ ಯಾಕಾದರೂ ಇವರು ಬದುಕಿದ್ದಾರೆಯೋ ಎನಿಸುವಂತೇ ಕೆಲವರನ್ನು ನೋಡುವಾಗ ಇವರನ್ನು ಭಗವಂತ ಚಿರಂತನವಾಗಿಟ್ಟುಬಿಟ್ಟಿದ್ದರೆ ಎಷ್ಟು ಚಂದಿರುತ್ತಿತ್ತು ಅಂತಲೂ ಅನಿಸುತ್ತಿರುತ್ತದೆ.

ಇತ್ತೀಚೆಗೆ ಅವರ ಗೆಳೆಯರು, ಅಭಿಮಾನಿಗಳೆಲ್ಲ ಸೇರಿ ಅವರ ಅಚ್ಚನಲ್ಲಿದ್ದ ಕವಿತೆಗಳ ಸಂಕಲನವನ್ನು ಹೊರತಂದಿದ್ದಾರೆ. ಅದನ್ನು ಒಂದು ಸುಂದರ ಕಾರ್ಯಕ್ರಮದಲ್ಲಿ ನುಡಿನಮನಗಳ ರತ್ನಗಂಬಳಿಯ ಮೇಲೆ ಕೈಹಿಡಿದು ನಡೆಸಿದ್ದಾರೆ. ಒಬ್ಬ ಕವಿಗೆ ಇದಕ್ಕಿಂತಲೂ ಸಾರ್ಥಕತೆ ಏನಿದೆ?! ಸತ್ತು ಬದುಕುವುದೆಂದರೆ ಬಹಶಃ ಇದೇ…

ಎದುರಿನಲ್ಲಿಯೇ ಕತ್ತಲೆ ಬದುಕು ಬಿಚ್ಚಿದ ಬೆತ್ತಲೆ
ಮತ್ತೆ ಸರಸವು ಏತಕೆ ನಾನು ನೋವಲಿ ಜಾರಲು
ನಿನ್ನೆ ಮೊನ್ನೆಯ ಸಂತೆಯ ನೆರಳನಿರಿಸುತ ನನ್ನೀ
ಆಸೆ ಮೂಡಿಸುವುದೇಕೆ ನೀ ಖುಷಿಯೂ ಆರಲು
(ಬೇಡಿಕೆ)

ಎಂದು ಬರೆಯುವ ರಮೇಶರ ಗಜ಼ಲ್ ಗಳಲ್ಲಿ ವಯಸ್ಸಿಗೆ ಮೀರಿದ ಪ್ರಭುದ್ಧತೆಯೊಂದು ಇಣುಕುತ್ತದೆ. ಆದರೆ ಯಾವೊಂದು ಕವಿತೆಯಲ್ಲೂ ನಿರಾಸೆ ಕಾಣಿಸುವುದೇ ಇಲ್ಲ. ಅವರ ಜೀವನ ಪ್ರೀತಿ, ಬದುಕುವ ಆಸೆ ನೋಡುವಾಗ “ರಮೇಶ್ ನೀವು ನಿಮ್ಮ ಕವಿತೆಗಳಲ್ಲಿದ್ದೀರಿ… ಓದುವ ನಮ್ಮ ಹೃದಯಗಳಲ್ಲಿದ್ದೀರಿ…” ಎಂದು ಉಸುರುತ್ತೇನೆ.

(ವಿಭಾ ತಿರುಕಪಡಿ)

ತೀರಾ ಇತ್ತೀಚೆಗೆ ವಿಭಾ ತಿರುಕಪಡಿಯವರ ಅಕ್ಕ ವೀಣಾ ಅವರು “ನಿಮ್ಮ ಬರಹವನ್ನು ಓದುವಾಗ ನನಗೆ ನನ್ನ ತಂಗಿ ನೆನಪಾಗುತ್ತಾಳೆ” ಅಂದರು. ಒಂದಷ್ಟು ಹೊತ್ತು ಇಬ್ಬರೂ ಭಾವುಕರಾದೆವು. ಕೊನೆಗೆ ನಾನವರನ್ನು “ಅಕ್ಕಾ…” ಎಂದೆ. ಸ್ವಲ್ಪ ಸಮಾಧಾನವಾಯಿತು. ಆದರೆ ವಿಭಾ ಅವರನ್ನು ಒಮ್ಮೆ ನೋಡಬೇಕೆನ್ನಿಸತೊಡಗಿತು… ಎಲ್ಲಿ ಹೋಗಲಿ… ಹೇಗೆ ಹುಡುಕಲಿ… ಅವರ “ಜೀವ ಮಿಡಿತದ ಸದ್ದ”ನ್ನು ಹಿಡಿದು ಕೂತೆ. ಅವರ ಒಂದೊಂದೇ ಕವಿತೆಗಳು ಕಣ್ಣಿಂದ ಹರಿಯತೊಡಗಿದವು. ವಿಭಾ ಅವರನ್ನು ಚಿತ್ರಿಸಿರುವ, ಹಿಡಿದಿಡಲು ಪ್ರಯತ್ನಿಸಿರುವ ಕವಿತೆಗಳೆಲ್ಲ “ಇವಳು ನಮ್ಮ ವಿಭಾ” ಎಂದು ಎದೆ ಸೆಟೆದು ತಲೆ ಎತ್ತಿ ನಿಂತವು. ನನ್ನೆದೆ ಕುಸಿದೇ ಹೋಯಿತು. ನಾನಂದು ಕರಗಿಯೇ ಹೋದೆ. ಕೀಟ್ಸ್ ,ಶೆಲ್ಲಿ, ತೋರು ದತ್, ಶ್ರೀಕೃಷ್ಣ ಆಲನಹಳ್ಳಿ….. ಯಾರೆಲ್ಲ ನೆನಪಾದರೋ ಆ ಸರಹೊತ್ತಿನಲ್ಲಿ… ಅಷ್ಟು ತೀವ್ರವಾಗಿ ಬದುಕುವ ಅವಸರವೇನಿತ್ತು… ಎನ್ನುವ ಪ್ರಶ್ನೆಗಳಿಗೆ ಉತ್ತರ ದಕ್ಕಿದ ಜ್ಞಾನೋದಯದ ರಾತ್ರಿ ಅದು….

ಮಗು ನೀನು ನನ್ನೊಡಲಲ್ಲಿ ಮೊಳಕೆಯೊಡೆದ ದಿನ
ಜಗತ್ತಿನ ಯಾವ ಮಗುವೂ ಅನಾಥವಾಗದಿರಲಿ
ನೀನು ಬದುಕಿದ್ದರೆ ಸತ್ತವರು ನೆನಪಾಗುತ್ತಾರೆ
ಸಮಾಧಿಗಳು ಕಣ್ಣೀರು ತರಿಸುತ್ತವೆ
ಲೂಟಿಯಾದ ಖಾಲಿಮನೆ ರೋಧಿಸುತ್ತಿದೆ
ಬೀದಿಗೆ ಬಿದ್ದ ನಾಮಫಲಕದಲ್ಲಿ ನನ್ನ ಹೆಸರಿದೆ…
(ಏಳು ದ್ವೀಪ)

ಬರೆಯಲು ಕೂತ ಈ ಗಳಿಗೆ
ನನ್ನೊಳಗಿನ ಜೀವ ಕೇಳುತ್ತಿದೆ
ಯಾಕೆ ತಲ್ಲಣಿಸಲಿಲ್ಲ ನೀನು
ಆ ನಿಶ್ಚಲ ದೇಹದೆದುರು?
ಯಾರದೋ ಕನಸು, ಯಾರದೋ ನೆರಳು
ಯಾರದೋ ನಿಶಾನೆ
ಮತ್ತಾರದೋ ಭವಿಷ್ಯ
ಕ್ಷಣ ಮಾತ್ರದಲ್ಲಿ ನಿಶ್ಚಲವಾದ
ಸ್ಥಿತಿಗಿಂತ ಹೆಚ್ಚಿನದೇ
ನಿನ್ನ ಮನದ ಸಮಾಧಾನ?
ಕನಿಕರವಿದೆ ನನಗೆ,
ನಿನ್ನೊಳಗುಂಟಾದ ಆ ಕ್ಷಣದ ನಿರಾಳತೆಗೆ!
(ಆ ಗಳಿಗೆಯ ಸತ್ಯ)

ಇವೆಲ್ಲ ಸಾಲುಗಳು ಇನ್ನಷ್ಟು ಕವಿತೆಗಳ ತುಣುಕುಗಳನ್ನು ನೆನಪಿಗೆ ಹೊತ್ತು ತಂದವು. ಬಹುಶಃ ಸಾಯುವ ಮುನ್ನವೇ ಸಾವಿನೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ, ಸಂಧಾನ ಸಫಲವಾಗದೆ, ಇಷ್ಟೆಲ್ಲ ಸಾಲುಗಳ ದಾಖಲೆಯನಿಲ್ಲಿಟ್ಟು “ಮುಂದೆ ಓದುವವರೇ ಇದೋ ಇದು ನನ್ನ ಷರಾ… ಸಾವಿಗೆ ಎದುರಾದವಳ, ಸಾವನ್ನು ಎದುರಿಸಿ ನಿಂತವಳ ಷರಾ” ಎನ್ನುತ್ತಿರಬಹುದು ವಿಭಾ… ದುಃಖ ನೋವು ಕಣ್ಣೀರು ಎನ್ನುವ ಆಶಾಢಬೂತಿ ಪೋಷಾಕುಗಳ ಸಹಕಾರವಿಲ್ಲದೆ ಬರಿದೆ ತಳ ಕಾಣುವ ಮಡಿಕೆಯಂತಾದ ಮನಸಿನ ತುಂಬ ತುಂಬಿಕೊಳ್ಳುತ್ತಾ ಮುಂದೆ ಓದುವವರಿಗೆ ಕೇಳಿಸುವ ದನಿಯಂತೆ ಮತ್ತೆ ಮತ್ತೆ ಆ ಸಾಲುಗಳನ್ನು ಓದಿದೆ…

(ನಾಗಶ್ರೀ ಶ್ರೀರಕ್ಷ)

ಕೆಲ ತಿಂಗಳುಗಳ ಹಿಂದೆಯೂ ಇಂಥದ್ದೇ ಒಂದು ಪರಿಸ್ಥಿತಿಗೆ ನಾ ತಲುಪಿದ್ದೆ. ಅಂದು ರಾತ್ರಿ ನನಗೊಂದು ಕನಸು ಬಿದ್ದಿತ್ತು. ಕನಸಿನಲ್ಲಿ ನಾನು ಸತ್ತು ಆತ್ಮವಾಗಿ ಮಗನೊಂದಿಗೆ ಬೀದಿಬೀದಿ ಸುತ್ತುತ್ತಿದ್ದೆ. ಮಗ ಪಾಪ ಮುಗ್ಧ. ಆದರೆ ಗಂಡ ನನ್ನನ್ನು ನೋಡಿ ಬಹಳಾ ಹೆದರಿದ್ದ… ಇನ್ನೂ ಏನೇನೋ… ಅದರ ಮರುದಿನ ಅವಳ ಸಾವಿನ ಸುದ್ದಿ ಬಂದದ್ದು. ಇದು ಯಾಕೆ ಕಾಕತಾಳೀಯ…?! ನನಗವಳ ಪರಿಚಯವೇ ಇರಲಿಲ್ಲ. ಅವಳ ಬರಹ ಓದಿದ್ದೆನೆಂಬುದೊಂದೇ ನಂಟು. ಮತ್ತೆ ನನಗದಷ್ಟೇ ಸಾಕಿತ್ತು ಅನಿಸಿತು. ಅವಳು ನಾಗಶ್ರೀ ಶ್ರೀರಕ್ಷಾ ಎನ್ನುವ ಮುದ್ದಾದ ಹುಡುಗಿ. ಅರ್ಬುದದೊಂದಿಗೆ ನಿರಂತರ ಸೆಣೆಸಿ ಕೊನೆಗೂ ಕೊಂದ ಅರ್ಬುದದ ಕ್ರೂರತೆಗಿಂತಲೂ ಸೆಣೆಸಿದ ಅವಳ ಧೈರ್ಯವೇ ಹೆಚ್ಚು ಎನ್ನುವಷ್ಟು ಮಟ್ಟಿಗೆ ಬದುಕಿದವಳು ಮತ್ತು ಬದುಕುತ್ತಿರುವವಳು.. ಅವಳು ಇಲ್ಲವಾದ ದಿನ ಅವಳ ಸ್ನೇಹಿತರ ನೆನಪುಗಳ ಮೆಲುಕು ಎದೆ ತೋಯಿಸಿಬಿಟ್ಟವು. ಅವಳಿಗೆ ಗೊತ್ತಿತ್ತು ಸಾವು ನನ್ನೆದುರು ನಿಂತಿದೆ ಎಂದು, ಸಾವನ್ನು ಎದುರಿಸದೆ ಬೇರೆ ಮಾರ್ಗವೇ ಇಲ್ಲವೆಂದು… ಅವಳ ಬರಹವೋ ಓಹ್… ಅವಳ ಪುಟ್ಟ ಲಿಲ್ಲಿ ಜೀವನ ಸಹಸ್ರ ವರ್ಷಗಳಿಗೆ ಅರಳಿಕೊಂಡಿತು ಅನಿಸುವಷ್ಟು ಆರ್ದ್ರ… ಸಾವಿನ ಮುಂದೆ ನಿಂತು ತನ್ನ ಪುಟ್ಟ ಪ್ರಾಣಕ್ಕೆ….

“ಹೇ ಕೋಲ್ಮಿಂಚೇ
ನಿನ್ನ ತೇಜವ ತಡೆಯಲಾರದೆ
ನನ್ನ ಕಣ್ಣುಗಳು ತುಂಬಿಕೊಳ್ಳುತಿದೆ
ನನ್ನ ನಿಷ್ಕಾರುಣ ಹೆಜ್ಜೆಗಳು ತೊದಲುತಿದೆ ಯಾಕೋ
ನನ್ನ ಆತ್ಮ ನಿನ್ನ ಬೆಳಕನ್ನು ಕುಡಿದಿದೆ
ಹೊಳೆವ ನದಿಯಂತಹ ಮುಗಿಯದ
ಸುಳ್ಳು ದಿವ್ಯ ಘಳಿಗೆಗಳು ಘಟಿಸುತಿವೆ, ಕೇಳು
ಓ ನನ್ನ ಹುಂಬ ಪ್ರಾಣವೇ
ನಾನಿನ್ನೂ ನಿನ್ನನ್ನು ಚಕಿತಗೊಳಿಸುವಿದಿದೆ”

ಎನ್ನುತ್ತಾಳೆ… ಅದೆಂತಹ ಅದ್ಭುತ ಸಾಲುಗಳು… ಅದಿನ್ನೆಂತಹ ಆಶಾಭಾವ… ಸಾವು ಸೋಕುವ ಕೊನೆ ಸೆಕೆಂಡಿನವರೆಗೂ ಸಣ್ಣದೊಂದು ಅವಕಾಶ ಸಿಕ್ಕರೂ ತಾನದನ್ನು ಮೆಟ್ಟಿ ನಿಂತುಬಿಡುವೆ ಎನ್ನುವಂತಹ ಅವಳ ಬದುಕಿನೆಡೆಗಿನ ತುಡಿತದೆದುರು ಯಾರಾದರೂ ಸೋಲಲೇ ಬೇಕು.

ಈಗಲೂ ನನ್ನಂತಹ ಅಪರಿಚಿತಳೆದೆಯನ್ನೂ ತನ್ನ ಕಾವ್ಯ ಮಾತ್ರದಿಂದಲೇ ಆವರಿಸಿ ಭಾರವಾಗಿಸುತ್ತಾಳೆನ್ನುವುದು ಬರಿದೆ ಪದಗಳ ಮಾಯೆಯಲ್ಲ… ಅದು ಅವಳು. ಆದರೆ ತನ್ನ ಮುದ್ದು ಕಂದನ ಪಕ್ಕ ಕೂತಲ್ಲಿಂದ ಇದ್ದಕ್ಕಿಂದ್ದಂತೆ ಒಂದಿನ ತನ್ನ ಯಕ್ಷ ಲೋಕಕ್ಕೆ ಮರಳಿದ ಯಕ್ಷಿಣಿಯಂತೆ ಹಾರಿ ಹೋಗಿಯೇಬಿಟ್ಟಳೆಂದರೆ… ಯಾರ ಹೃದಯ ಒಡೆಯದೆ ಇದ್ದೀತು ಹೇಳಿ…!

ತನ್ನ ಪುಸ್ತಕದ ಪ್ರಾರಂಭದಲ್ಲಿ “ಕೇಳು ಓ ನನ್ನ ಹುಂಬ ಪ್ರಾಣವೇ” ಎಂದು ಶುರುಮಾಡುವ ನಾಗಶ್ರೀ, “ಆಕಾಶವೆಂಬ ಹಗಲು ವೇಶಗಾರನ ಹೊಟ್ಟೆಯೊಳಗೆ ಮಿಸುಗಾಡುತ್ತಿರುವ ಬಾನಹಕ್ಕಿ, ಅದರ ಒಡಲೊಳಗೆ ತಳಮಳಿಸುತ್ತಿರುವ ನಾನು. ಮನುಷ್ಯರೂ ಅಲ್ಲದ ದೇವರೂ ಅಲ್ಲದ, ಕಾಲವು ಅಲ್ಲದ ಪ್ರೇಮವೂ ಅಲ್ಲದ, ಆಕಾಶವೂ ಅಲ್ಲದ ಭೂಮಿಯೂ ಅಲ್ಲದ, ಆರಂಭವೂ ಇಲ್ಲದ ಅಂತ್ಯವೂ ಇಲ್ಲದ, ಹಾದಿಯಿಲ್ಲದ ಹಾದಿಯಲ್ಲಿ ಏನೂ ಗೊತ್ತಿಲ್ಲದೆ ಬರೆಯುತ್ತಾ ಬಿಳಿಯ ಮುಗಿಲಿನ ಒಳಗೆ ಹಾದು ಹೋಗುತ್ತಿದ್ದೇನೆ. ನಿಮಗೆಲ್ಲರಿಗೂ ನಮಸ್ಕಾರ..” ಎಂದು ಮುಗಿಸಿದಾಗ ಮಂದೇನು ಮಾಡುವುದು? ಮಾತಾಡುವುದು? ಎಂದು ತಿಳಿಯದ ನಿರ್ವಾತವೊಂದು ಏರ್ಪಟ್ಟು ಬಿಗಿದುಬಿಡುತ್ತದೆ… ಒಂದಷ್ಟು ಹೊತ್ತು ನಾವು ಬರಿಯ ಕಲ್ಲು…!

ಗೊತ್ತಿಲ್ಲ … ಇವರನ್ನೆಲ್ಲ
ಯಾವ ಮೋಹನ ಮುರಳಿ ಕರೆಯಿತೋ…