ಕವಿತೆ ಸುಳಿದಾಗ..
ಅಚಾನಕ್ಕಾಗಿ ಕವಿತೆಯ
ಸಾಲೊಂದು ಸುಳಿಯಿತು ಹೀಗೆ-
ಇರುವೆಯೊಂದು
ಸರಕ್ಕನೆ ಕೈಕಚ್ಚಿ ಹೋದಂತೆ
ಕೈಗೆ ಸಿಕ್ಕೂ ಸಿಗದೆ
ಬುಳಕ್ಕನೆ ಮುಳುಗಿದ ಮೀನಿನಂತೆ
ಇಲ್ಲಿತ್ತು ಎನ್ನುವಾಗಲೇ ಅಲ್ಲೆಲ್ಲೋ
ಸಳಕ್ಕನೆ ಸರಿದು ಹೋದ ಹಾವಿನಂತೆ
ಕಣ್ಣಿಗೆ ಕಂಡೂ ಕಾಣದೆ
ಮರೆಯಾಗುವ ಪುನುಗು ಬೆಕ್ಕಿನಂತೆ..
ಕವಿತೆ;
ಪುಳಕ ಹುಟ್ಟಿಸಿ ಪುಳಕ್ಕನೆ
ಮಾಯವಾಗುವ ಮುಂಗುಸಿಯಂತೆ
ಸಂತೆಯಲ್ಲಿ ಸಿಕ್ಕ ನಗು
ಸಂತೆಯಲ್ಲೇ ಬಿಟ್ಟು ಬಂದಂತೆ
ಅಷ್ಟು ಸುಲಭಕ್ಕೆ ಸಿಗುವುದಿಲ್ಲ ಕವಿತೆ,
ಕಾಯಬೇಕು-
ಮೋಡ ಕಟ್ಟಿ ಮಳೆ ಸುರಿದಂತೆ
ಬೀಜ ಮೊಳಕೆಯೊಡೆದಂತೆ
ಮೊಗ್ಗರಳಿ ಹೂವಾದಂತೆ
ಪದಕಟ್ಟೆ ಕವಿತೆ ಒತ್ತರಿಸಬೇಕು
ಮಳೆ ನಿಂತರೂ ಮರದ ಹನಿ ನಿಲ್ಲದಂತೆ!
ವೈ. ಬಿ. ಹಾಲಬಾವಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ.
ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ.
ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ್ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


