ಸೈಕಲ್‌ನ ಯಾವ ಭಾಗವೂ ಹೊಳಪು ಕಾಣದ… ಬಿಸಿಲು ಮಳೆಗೆ ನೆಂದು ಕಪ್ಪಾದ ಕೃಷ್ಣಸುಂದರಿ ನನ್ನ ಸೈಕಲ್… ವಿಧಿಯಿಲ್ಲದೆ ಅದನ್ನೇ ಚೆನ್ನಾಗಿ ತೊಳೆದು ಸಿಂಗಾರ ಮಾಡಿದ್ದಾಯಿತು. ನನಗೋ ಅದನ್ನು ತುಳಿಯುವ ಕಾತರ. ಪೂಜೆ ಮಾಡಿ ಊರೆಲ್ಲಾ ಸುತ್ತಿಕೊಂಡು ಬರೋಣ ಎಂದು ಸವಾರಿ ಹೊರಟೇ ಬಿಟ್ಟೆ. ಊರ ಮಂದಿಯೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ. ಶರಣಪ್ಪ ಮೇಷ್ಟ್ರು ಸೈಕಲ್ ಇವ ಹೇಗೆ ತುಳಿದಾನು ಎಂಬ ಕುತೂಹಲ ಅವರದು. ನನಗೊ ಒಳಗೊಳಗೆ ಖುಷಿ ನಮ್ಮ ಮನೆಗೂ ಗೌರವ ಜಾಸ್ತಿಯಾಯಿತಲ್ಲ ಎಂದುಕೊಂಡು ಊರೆಲ್ಲಾ ಸುತ್ತಿಸಿದ್ದಾಯಿತು.
ಮಾರುತಿ ಗೋಪಿಕುಂಟೆ ಬರೆದ ಲಲಿತ ಪ್ರಬಂಧ ನಿಮ್ಮ ಈ ದಿನದ ಓದಿಗೆ

ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ. ಇಂದಿಗೆ ಮೂವತ್ತು ವರ್ಷಗಳ ಹಿಂದಿನ ನೆನಪು. ಮೂವತ್ತು ವರ್ಷಗಳಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಯಾವ ಮುನ್ಸೂಚನೆಯು ಯಾರಿಗೂ ಇರಲಿಲ್ಲ. ಇಷ್ಟೆಲ್ಲ ಪೀಠಿಕೆಯ ಹಿನ್ನೆಲೆಯೆ ಸೈಕಲ್. ಹೌದು ಹೆಚ್ಚೆಂದರೆ ನಾಲ್ಕರಿಂದ ಐದು ಸೈಕಲ್ ಊರಲ್ಲಿದ್ದವು. ಸೈಕಲ್‌ನ ಒಡೆಯನಾದವನಿಗಂತೂ ವಿಶೇಷ ಗೌರವ ಸಲ್ಲುತ್ತಿತ್ತು. ಅದರಲ್ಲೂ ಅಟ್ಲಾಸ್, ಸ್ವಲ್ಪ ತಡವಾಗಿ ಮಾರುಕಟ್ಟೆಗೆ ಬಂದ ಹೀರೊ ಹರ್ಕ್ಯುಲಸ್ ಬ್ರಾಂಡ್‌ನ ಸೈಕಲ್ಲುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅದ್ಯಾವ ಗುಣಮಟ್ಟದಿಂದ ಅಳೆಯುತ್ತಿದ್ದರೋ ನನಗಂತೂ ಗೊತ್ತಿಲ್ಲ. ಆದರೆ ಅಟ್ಲಾಸ್ ಬ್ರಾಂಡ್‌ನ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚು. ನೆಂಟ್ರು ಊರಿಗೆ ಹೋಗ್ಬೇಕು. ಹೆಣ್ಣು ನೋಡೊಕೆ ಹೋಗ್ತಿವಿ, ಮಗನನ್ನು ಬಸ್ಸಿಗೆ ಬಿಡ್ಬೇಕು, ಹೊಸದಾಗಿ ಮದುವೆ ಆದವರು ನಾನು ನಮ್ಮನೆಯವರು ಸಿನಿಮಾಕ್ಕೆ ಹೋಗ್ತೀವಿ, ನನ್ನ ತಂದೆಗೆ ಹುಷಾರಿಲ್ಲ, ಆಸ್ಪತ್ರೆಗೆ ಹೋಗ್ಬೇಕು, ನನ್ನ ಮಗನಿಗೆ ಹುಷಾರಿಲ್ಲ, ಪಕ್ಕದ ಊರಿನಲ್ಲಿ ದೇವರಿಗೆ ಹೋಗ್ಬೇಕು. ಹೀಗೆ ಒಂದೆ ಎರಡೆ ನಾನಾ ವಿಧದ ಕೆಲಸ ಕಾರ್ಯಗಳಿಗೆ ಸೈಕಲ್ ಕೇಳ್ತಾಇದ್ರು. ಅಂದಿನ ಕಾಲಕ್ಕೆ ಅದೆ ಬೆಂಝ಼್ ಕ್ವಾಲೀಸ್ ಸ್ವಿಫ್ಟ್‌ ಮಾರುತಿ ಎಲ್ಲವೂ ಆಗಿತ್ತು. ಕೇಳಿದವರಿಗೆ ಇಲ್ಲ ಅನ್ನದೆ ಕೊಡುತ್ತಿದ್ದ ಅಂದಿನ ಜನರ ಪರೋಪಕಾರಿ ಮನಸ್ಸನ್ನು ಈ ಸೈಕಲ್ ಪ್ರತಿನಿಧಿಸುತ್ತದೆ. ಕೊಟ್ಟವನು ಅಪಾರವಾದ ಗೌರವಾದರಗಳಿಗೆ ಪ್ರಾಪ್ತನಾಗುತ್ತಿದ್ದ. ಇಂತಹದೊಂದು ಘನತೆ ಗೌರವಕ್ಕೆ ಪ್ರಾಪ್ತವಾಗುತ್ತಿದ್ದದ್ದು ಸೈಕಲ್‌ನ ವಿಶೇಷವು ಆಗಿತ್ತು.

ಇಂತಿಪ್ಪ ಸೈಕಲ್ ಎಂದರೆ ಯಾರಿಗೆ ತಾನೆ ಇಷ್ಟವಾಗುತ್ತಿರಲಿಲ್ಲ. ಸೈಕಲ್ ತೆಗೆದುಕೊಳ್ಳಬೇಕೆಂದರೆ ಒಂದೆರಡು ವರ್ಷದ ಉಳಿತಾಯದ ಪ್ರತಿಫಲವಾಗಿರುತಿತ್ತು. ಕೂಲಿ ಮಾಡುವವರಿಗಂತೂ ಸೈಕಲ್ ಒಂದು ಕನಸಾಗಿತ್ತು. ಅದೊಂದು ಗಗನಕುಸುಮ ಎಂದರೆ ಸರಿಯಾದೀತು. ನಮ್ಮ ತಂದೆ ಒಂದು ಚಿಕ್ಕ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸೈಕಲ್ ತೆಗೆದುಕೊಳ್ಳಬೇಕು ಎಂದು ಪ್ರಯತ್ನ ಪಟ್ಟು ಹಣ ಉಳಿಸಿದಾಗಲೆಲ್ಲಾ ಯಾವುದಾದರೂ ಕಷ್ಟ ಅಮರಿಕೊಳ್ಳುತ್ತಿತ್ತು. ಕಷ್ಟ ತೀರಿ ದಡ ಮುಟ್ಟುವಷ್ಟರಲ್ಲಿ ಕೂಡಿಟ್ಟ ಹಣವೂ ಕರಗಿ ಹೋಗುತ್ತಿತ್ತು. ನನ್ನದು ಒಂದೆ ಹಠ… ನನಗೂ ಸೈಕಲ್ ಬೇಕು, ನಾನೂ ಸೈಕಲ್ ತುಳಿಯಬೇಕು ಎಂದು ಮನೆಯಲ್ಲಿ ಆಗಾಗ ರಂಪಾಠ ಮಾಡುತ್ತಿದ್ದೆ ಅಪ್ಪನ ದೊಣ್ಣೆಯ ಪೆಟ್ಟಿನಿಂದ ಅದು ಕೊನೆಗೊಳ್ಳುತ್ತಿತ್ತು. ಒಮ್ಮೆ ಅಂತೂ ಆ ಗಳಿಗೆಯೂ ಕೂಡಿ ಬಂತು.

ನನಗೆ ಚೆನ್ನಾಗಿ ನೆನಪಿದೆ… 1991 ನೇ ವರ್ಷವಿರಬೇಕು. ಈ ವರ್ಷದ ವಿಜಯ ದಶಮಿಗೆ ಸೈಕಲ್ ಬರುತ್ತದೆ ಎಂದು ನನ್ನ ತಂದೆಯವರು ನಮಗೆಲ್ಲ ಹೇಳಿದರು. ಹೊಸದೊ ಹಳೆಯದೊ ಎಂದು ಹೇಳಲಿಲ್ಲ. ಯಾವುದಾದರೇನು ಸೈಕಲ್ ಬರುತ್ತಲ್ಲ ಸಾಕು ಎಂದು ನನಗೆ ಎಲ್ಲಿಲ್ಲದ ಖುಷಿ. ಅದೇ ಖುಷಿಯಲ್ಲಿ ರಾತ್ರಿಯೆಲ್ಲಾ ಕನಸು ಕಂಡಿದ್ದೇ ಕಂಡಿದ್ದು. ಊರಲ್ಲಿದ್ದ ಒಂದೆರಡು ಸೈಕಲ್ ನೋಡಿದ್ದೆ ಹ್ಯಾಂಡಲ್‌ನ ಹಿಡಿ, ಹ್ಯಾಂಡಲ್‌ನ ಮಧ್ಯಕ್ಕೊಂದು ಪ್ಲಾಸ್ಟಿಕ್‌ ಹೂ ಮುಡಿಸಿದರೆ ಥೇಟ್ ಸುಂದರಿಯೆ.. ಲೆದರ್ ಸೀಟು ಮುಂದಿನ ಕಂಬಿಗೆ ತೊಡಿಸುತಿದ್ದ ಕಲರ್ ಕವರ್. ಮುಂದಿನ ಚಕ್ರದ ಪೋಸ್ಕಡ್ಡಿಯ ನಡುವೆ ಸುತ್ತುವ ಹೂಗುಚ್ಛ, ಹ್ಯಾಂಡಲ್‌ನ ಎಡಭಾಗದ ಕೊನೆಯಲ್ಲಿ ಹಾಕುತ್ತಿದ್ದ ಬೆಲ್.. ತ್ರಿಭುಜಾಕೃತಿಯಲ್ಲಿ ಕಾಣುತ್ತಿದ್ದ ತ್ರಿವಳಿ ಕಂಬಿಗಳಲ್ಲಿ ಸೀಟ್ ಕವರ್ ಜೋಡಿಸುವ ಕಂಬಿಗೆ ಅಟ್ಲಾಸ್ ಬ್ರಾಂಡ್‌ನ ನೇಮು ತಳತಳಿಸುವ ರಿಮ್ ಹಿಂದಿನ ಚಕ್ರದ ಮೇಲೆ ಜೋಡಿಸಿದ ಕ್ಯಾರಿಯರ್… ಒಟ್ಟಾರೆ ಅದೊಂದು ರಾಜರಥ. ಎಲ್ಲವೂ ಕಣ್ಣೆದುರು ಬಂದಂತಾಗಿ ನಿದ್ರೆಯೆ ಬರಲಿಲ್ಲ… ನಾಳೆಯೇ ಸೈಕಲ್ ಬರುತ್ತದೆ ಎಂಬ ಮಾತು ನನ್ನನ್ನು ನಿದ್ದೆಯಿಂದ ದೂರ ಮಾಡಿತ್ತು. ಸೈಕಲ್‌ನ ಕನವರಿಕೆಯಲ್ಲೆ ನಿದ್ದೆಗೆ ಜಾರಿದ ನಾನು ಪಕ್ಕದಲ್ಲಿ ಮಲಗಿದ್ದ ತಮ್ಮನು ಕಿಟಾರನೆ ಕಿರುಚಿದ ಧ್ವನಿಯನ್ನು ಕೇಳಿ ಎಚ್ಚರವಾಗಿತ್ತು. ಎಲ್ಲರೂ ಗಾಬರಿಯಾಗಿದ್ದರು. ಎದ್ದು ನೋಡಿದರೆ ನನ್ನಿಂದ ಅಷ್ಟು ದೂರ ಹೋಗಿದ್ದ ಎಲ್ಲರೂ, ಇವನು ಇಷ್ಟು ದೂರ ಹೇಗೆ ಬಂದ ಎಂದು ಯೋಚಿಸುತ್ತಿರಬೇಕಾದರೆ ಅಣ್ಣ ನನ್ನನ್ನು ಜಾಡಿಸಿ ಒದ್ದ ಎಂದು ಅಳುತ್ತಲೆ ಹೇಳಿದ್ದ… ಕನಸಿನಲ್ಲಿ ಪೆಡಲ್ ತುಳಿಯುವ ಭರದಲ್ಲಿ ನನ್ನ ತಮ್ಮನನ್ನು ಒದ್ದು ದೂರ ತಳ್ಳಿದ್ದೆ. ನೆಟ್ಟಗೆ ಮಲಗಿಕೊಳ್ಳೋಕೆ ಬರಲ್ಲ ಎಂಬ ಬೈಗುಳದೊಂದಿಗೆ ಆ ಪ್ರಸಂಗ ಕೊನೆಯಾಯಿತು. ಅವರಿಗ್ಹೇಗೆ ಗೊತ್ತಾಗಬೇಕು ನನ್ನ ಸೈಕಲ್ ಸವಾರಿಯ ಕನಸು!

ಅಂದಿನ ಕಾಲಕ್ಕೆ ಅದೆ ಬೆಂಝ಼್ ಕ್ವಾಲೀಸ್ ಸ್ವಿಫ್ಟ್‌ ಮಾರುತಿ ಎಲ್ಲವೂ ಆಗಿತ್ತು. ಕೇಳಿದವರಿಗೆ ಇಲ್ಲ ಅನ್ನದೆ ಕೊಡುತ್ತಿದ್ದ ಅಂದಿನ ಜನರ ಪರೋಪಕಾರಿ ಮನಸ್ಸನ್ನು ಈ ಸೈಕಲ್ ಪ್ರತಿನಿಧಿಸುತ್ತದೆ. ಕೊಟ್ಟವನು ಅಪಾರವಾದ ಗೌರವಾದರಗಳಿಗೆ ಪ್ರಾಪ್ತನಾಗುತ್ತಿದ್ದ. ಇಂತಹದೊಂದು ಘನತೆ ಗೌರವಕ್ಕೆ ಪ್ರಾಪ್ತವಾಗುತ್ತಿದ್ದದ್ದು ಸೈಕಲ್‌ನ ವಿಶೇಷವು ಆಗಿತ್ತು.

ಅಂತೂ ಸೈಕಲ್ ಬರುವ ದಿನ ಬಂದೇಬಿಟ್ಟಿತು. ಮುಂಜಾನೆಯಿಂದ ಎಲ್ಲಿಲ್ಲದ ಉತ್ಸಾಹ ಆವೇಗದಿಂದ ಕಾತರಿಸಿ ಕಾಯುತ್ತಿದ್ದ ಸೈಕಲ್ ಬಂದೆ ಬಿಟ್ಟಿತು. ನನ್ನ ಕನಸಿನ ಸೈಕಲ್‌ಗೂ ಇದಕ್ಕೂ ಅಜಗಜಾಂತರ ವ್ಯತ್ಯಾಸ. ನೋಡಿದವನೆ ದಿಗ್ಭ್ರಮೆಗೊಂಡೆ. ಯಾಕೆಂದರೆ ಪಕ್ಕದ ಊರಿನ ಮೇಷ್ಟ್ರಾಗಿದ್ದ ಶರಣಪ್ಪ ಮೇಷ್ಟ್ರ ಸೈಕಲ್ ಅದಾಗಿತ್ತು. ಶರಣಪ್ಪ ಮೇಷ್ಟ್ರು ಸೈಕಲ್ ಎಂದರೆ ಸುತ್ತಮುತ್ತಲ ಗ್ರಾಮಕ್ಕೆಲ್ಲ ಫೇಮಸ್. ಸೈಕಲ್‌ಗೆ ಇರಬೇಕಾದ ಯಾವ ಆಡಂಬರವೂ ಇಲ್ಲದ ಚಲಿಸಲಷ್ಟೆ ಯೋಗ್ಯವಾದ ಸೈಕಲ್. ನನ್ನ ಉತ್ಸಾಹ ಆವೇಗ ಆನಂದವೆಲ್ಲಾ ಗಾಳಿಹೋದ ಬಲೂನಿನಂತಾಗಿದ್ದು ಸುಳ್ಳಲ್ಲ. ನಮ್ಮೂರಿನ ದಾರಿಯಲ್ಲೆ ಓಡಾಡುತಿದ್ದ ಮೇಷ್ಟ್ರು ಸೈಕಲ್ ನೋಡಿ ಗೇಲಿ ಮಾಡಿದ್ದು ಇದೆ… ಮೇಷ್ಟ್ರು ಜಟಕಾ ಬಂಡಿಯಲ್ಲಿ ಹೋಗ್ತಾವರೆ ನೋಡ್ರಪ ಎಂದು ಊರಿನ ಮಂದಿ ಮಾತಾಡಿಕೊಳ್ಳುತಿದ್ದದ್ದು ನನ್ನ ಕಿವಿಗೂ ಬಿದ್ದಿತ್ತು. “ಛೆ.. ನಮ್ಮಪ್ಪ ಎಂಥ ಸೈಕಲ್ ತಗೊಂಡಿದ್ದಾನೆ” ಇಂತಹ ಸೈಕಲ್ ಯಾರಿಗೆ ಬೇಕು ಅಂತನ್ನಿಸಿದರೂ ತಂದೆಯ ಮುಂದೆ ಯಾವುದು ನಡೆಯುವುದಿಲ್ಲ ಎಂದು ತಿಳಿದು ಸುಮ್ಮನಾಗಿದ್ದೆ.

ಸೈಕಲ್‌ನ ಯಾವ ಭಾಗವೂ ಹೊಳಪು ಕಾಣದ… ಬಿಸಿಲು ಮಳೆಗೆ ನೆಂದು ಕಪ್ಪಾದ ಕೃಷ್ಣಸುಂದರಿ ನನ್ನ ಸೈಕಲ್… ವಿಧಿಯಿಲ್ಲದೆ ಅದನ್ನೇ ಚೆನ್ನಾಗಿ ತೊಳೆದು ಸಿಂಗಾರ ಮಾಡಿದ್ದಾಯಿತು. ನನಗೋ ಅದನ್ನು ತುಳಿಯುವ ಕಾತರ. ಪೂಜೆ ಮಾಡಿ ಊರೆಲ್ಲಾ ಸುತ್ತಿಕೊಂಡು ಬರೋಣ ಎಂದು ಸವಾರಿ ಹೊರಟೇ ಬಿಟ್ಟೆ. ಊರ ಮಂದಿಯೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ. ಶರಣಪ್ಪ ಮೇಷ್ಟ್ರು ಸೈಕಲ್ ಇವ ಹೇಗೆ ತುಳಿದಾನು ಎಂಬ ಕುತೂಹಲ ಅವರದು. ನನಗೊ ಒಳಗೊಳಗೆ ಖುಷಿ ನಮ್ಮ ಮನೆಗೂ ಗೌರವ ಜಾಸ್ತಿಯಾಯಿತಲ್ಲ ಎಂದುಕೊಂಡು ಊರೆಲ್ಲಾ ಸುತ್ತಿಸಿದ್ದಾಯಿತು. ಎಲ್ಲಿ ಹೋದರೂ ಎಲ್ಲ ಜನ ನನ್ನನ್ನೆ ನೋಡುತ್ತಿದ್ದರು. ನಾನು ಇನ್ನಷ್ಟು ಉತ್ಸಾಹದಿಂದ ತುಳಿದಿದ್ದೆ ತುಳಿದದ್ದು.. ಊರಿನ ಒಂದೊಂದೆ ಬೀದಿಯನ್ನು ಹಾದು ನಮ್ಮೂರಿನ ಸಾಹುಕಾರರ ಮನೆಯ ಮುಂದೆ ಹೋಗಬೇಕಾದರೆ ಅವರು ಸಾಕಿರುವ ಚಿರತೆಯಂಥ ನಾಯಿ ನನ್ನನ್ನೆ ನೋಡಿ ಅಟ್ಟಿಸಿಕೊಂಡು ಬರಬೇಕೆ! ನನ್ನ ವೇಗ ಇನ್ನಷ್ಟು ಹೆಚ್ಚಾಯಿತು… ನಾಯಿ ಬೊಗಳಲು ಶುರು ಮಾಡಿದ್ದೆ ತಡ ಅಕ್ಕ ಪಕ್ಕದ ಬೀದಿನಾಯಿಗಳು ಅದಕ್ಕೆ ಜೊತೆಯಾಗಿ ಎಲ್ಲವನ್ನ ಒಂದೇ ಸಮನೆ ಬೌವ್ ಬೌವ್…. ಬೌವ್ ಎಂದು ಘೀಳಿಡುತ್ತಾ ನನ್ನನ್ನು ಸುತ್ತುವರಿದು ಬರುತ್ತಲೆ ಇದ್ದವು. ನಾನು ಸೈಕಲ್ ನಿಲ್ಲಿಸುವಂತಿಲ್ಲ. ನಿಲ್ಲಿಸಿದರೆ ಅವೆಲ್ಲ ಸೇರಿ ನನ್ನನ್ನು ಕೊಚ್ಚಿ ಬಿಡುವುದು ಗ್ಯಾರಂಟಿ ಇತ್ತು. ಹಾಗಾಗಿ ಇನ್ನಷ್ಟು ವೇಗವಾಗಿ ಪೆಡಲ್ ತುಳಿಯುತ್ತ ಏದುಸಿರು ಬಿಡುತ್ತ ಸಾಹುಕಾರರ ಮನೆಯನ್ನು ದಾಟುವಷ್ಟರಲ್ಲಿ ಸಾಕುಸಾಕಾಗಿಹೋಗಿತ್ತು.

ದನಗಳನ್ನು ಕಟ್ಟಿಹಾಕಲೆಂದು ಮನೆಯ ಮುಂಭಾಗದ ರಸ್ತೆಯ ಕಡೆಗೆ ಕಲ್ಲಿನ ಗೂಟಗಳನ್ನು ಹಾಕಿದ್ದರು. ಹಾಗೆ ಅವಸರದಲ್ಲಿ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಒಂದು ಕಲ್ಲನ್ನು ಹತ್ತಿಸಿಬಿಟ್ಟಿದ್ದೆ ಆಯತಪ್ಪಿ ಬೀಳುವಷ್ಟರಲ್ಲಿ ಸಾವರಿಸಿಕೊಂಡು ಹೇಗೋ ಮುಂದೆ ಸಾಗಿದ್ದೆ. ಮನೆಗೆ ಬಂದು ಜಳ ಜಳನೆ ಬೆವತಿದ್ದೆ. ಏದುಸಿರು ಬಿಡುತ್ತ ನೀರು ಕುಡಿದು ಸುಧಾರಿಸಿಕೊಳ್ಳುವ ಹೊತ್ತಿಗೆ, “ನಿನ್ನ ಮಗ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡು ಬಂದ, ಇಲ್ಲದಿದ್ದರೆ ಸಾಹುಕಾರರ ನಾಯಿ ಎಲ್ಲೆಲ್ಲಿ ಕಚ್ಚಿಬಿಡುತಿತ್ತೋ ಸದ್ಯ ಬಚಾವಾದ” ಎಂದು ನನ್ನ ತಂದೆಗೆ ನನ್ನ ಪಜೀತಿಯನ್ನು ಕಂಡ ಊರಿನವರೊಬ್ಬರು ಹೇಳುತ್ತಿದ್ದರು, ಎಂದದ್ದು ಕೇಳಿಸಿತು. ಮತ್ತೆಂದೂ ನಾನು ಆ ಸೈಕಲ್ಲನ್ನು ಮುಟ್ಟುವ ಧೈರ್ಯ ಮಾಡಲಿಲ್ಲ…

ನಂತರ ತಿಳಿದದ್ದೇನೆಂದರೆ ಶರಣಪ್ಪ ಮೇಷ್ಟ್ರು ಸ್ವಲ್ಪ ಎಣ್ಣೆ ಪಾರ್ಟಿ. ಪಕ್ಕದ ಊರಿಗೆ ಪ್ರತಿದಿನ ಸಾಹುಕಾರರ ಮನೆಯ ಮುಂದಿನ ರಸ್ತೆಯಲ್ಲಿಯೇ ಹೋಗಬೇಕಾಗಿತ್ತು. ಕುಡಿದ ಮತ್ತಿನಲ್ಲಿ ಸಾಹುಕಾರರ ಮನೆಯ ನಾಯಿಯ ಮೇಲೆ ಸೈಕಲ್ ಹತ್ತಿಸಿದ್ದರಂತೆ. ಹೇಗೋ ಆ ದಿನ ನಾಯಿಯಿಂದ ಬಚಾವ್ ಆಗಿದ್ದರು. ಇನ್ನೊಂದು ದಿನ ರಸ್ತೆಯಲ್ಲಿ ಹೋಗುವಾಗ ಅದು ಇವರ ಮೇಲೆರಗಿ ಬಂದಿತ್ತು. ಊರಿನ ಜನರು ಅಲ್ಲಿದ್ದರಿಂದ ಹೇಗೋ ಪಾರು ಮಾಡಿದ್ದರು. ಮೇಷ್ಟ್ರಿಗೆ ಅರ್ಥವಾಗಿತ್ತು ನನ್ನ ಸೈಕಲ್ ಗುರುತಿಟ್ಟುಕೊಂಡಿದೆ ನಾನು ಅಲ್ಲಿ ಹೋಗುವುದೆ ಬೇಡವೆಂದು ನಿರ್ಧರಿಸಿ ಶಾಲೆಗೆ ಹೋಗಲು ಬೇರೆ ರಸ್ತೆಯನ್ನು ಆಶ್ರಯಿಸಿದ್ದರು. ಅದೂ ಸಫಲವಾಗದ ಕಾರಣ, ಕೊನೆಗೆ ಸೈಕಲ್ ಮಾರುವುದೆಂದು ತೀರ್ಮಾನಿಸಿ ನಮಗೆ ಮಾರಿದ್ದರು. ಇದನ್ನು ತಿಳಿಯದ ನಾನು ಆ ರಸ್ತೆಯಲ್ಲಿ ಸವಾರಿ ಹೋಗಿದ್ದು ತಪ್ಪಾಗಿತ್ತು. ಶರಣಪ್ಪ ಮೇಷ್ಟ್ರು ಸೈಕಲ್ ಸವಾರಿ ಮಾಡುತ್ತಿದ್ದ ನನ್ನನ್ನು ಶರಣಪ್ಪ ಮೇಷ್ಟ್ರು ಇರಬಹುದೆಂದು ತಿಳಿದ ಆ ನಾಯಿ ನನ್ನನ್ನು ಅಟ್ಟಿಸಿಕೊಂಡು ಬಂದಿತ್ತು.

ನಾನು ಸದ್ಯ ಪಾರದೆನಲ್ಲ ಎಂದುಕೊಂಡು ಆ ಸೈಕಲ್ ತುಳಿಯುವ ಆಸೆಯನ್ನೆ ಬಿಟ್ಟುಬಿಟ್ಟೆ. ಇದು ತಿಳಿದು ನಮ್ಮಪ್ಪ ಮೂರ್ನಾಲ್ಕು ತಿಂಗಳಿಗೇ ಆ ಸೈಕಲ್ಲನ್ನು ಮಾರಿದ್ದರು. ಶರಣಪ್ಪ ಮೇಷ್ಟ್ರೇ ಅದನ್ನು ವಾಪಸ್ ತೆಗೆದುಕೊಂಡಿದ್ದರು. ಅವರಿಗೆ ಅದರ ಮೇಲೆ ಇದ್ದ ಪ್ರೀತಿಯೂ ಅದಕ್ಕೆ ಕಾರಣವಿದ್ದಿರಬಹುದು. ಇಂದು ಯಾವುದೇ ಸೈಕಲ್ ನೋಡಿದರೂ ನನ್ನ ಮೊದಲ ಸೈಕಲ್, ಶರಣಪ್ಪ ಮೇಷ್ಟ್ರು, ಸಾಹುಕಾರರ ನಾಯಿ, ಎಲ್ಲರೂ ಒಟ್ಟೊಟ್ಟಿಗೆ ನೆನಪಾಗುತ್ತಾರೆ.