ಅಸಂಗ್ರಹಕ್ಕೆ ಪರ್ಯಾಯ ಪದ ನನ್ನ ಪ್ರೀತಿಯ ಶಿವ. ವಿಷಯ ಲೋಲುಪತೆಗೆ ಲಾಲಸೆಗೆ ವಸ್ತು ಸಂಸ್ಕೃತಿಗೆ ವಿರುದ್ಧ ಪದ ಶಿವ. ಜಂಗಮವೆ ಶಿವ. ಶೃಂಗಾರವಿಲ್ಲದೆ ಸೋಗಿಲ್ಲದೆ ವಸ್ತ್ರಾಭರಣ ಕಿರೀಟಗಳ ಹಂಗೇ ಇಲ್ಲದೆ, ಸತಿಯ ಲೋಕೋತ್ತರ ಪ್ರೀತಿ ಗೆದ್ದವ. ಪ್ರೀತಿ ಬಲ್ಲವ ಇವ, ಅಪ್ಪಟ ಸಂಸಾರಿ, ಅನುರಾಗಿಯಾಗಿಯೂ ವಿರಾಗಿ. ಸ್ಮಶಾನದ ಬೂದಿಯೊಂದಿಗೇ ಮಂಗಲಕ್ಕೆ ಸಂಕೇತವಾದವ. ಕಪಟ-ನಟನೆಯರಿಯದ, ನಾಟ್ಯ ಬಲ್ಲ ಒಬ್ಬನೇ ಕಲಾವಿದ ದೇವ ಶಿವ. ಕ್ರುದ್ಧ, ಮುಗ್ಧ. ಬೋದಾಳ ಶಂಕರ. ಸಂಗಾತಿಗೆ ಅವಮಾನವಾಯಿತೆಂದರೆ ಭೂಮಿ ಆಕಾಶ ನಡುಗುವಂತೆ ಕೆರಳುವ ರೌದ್ರರೂಪಿ ನಿತ್ಯಕ್ಕೆ ಪ್ರಶಾಂತ ಮುದ್ರೆಯ ಸಂತ-ವಸಂತ. ಅತಿವಿರಳ ಸರಳ. ನಂಜು ವಿಷವನ್ನು ಧಾರಣೆ ಮಾಡಬಲ್ಲವನೊಬ್ಬನೆ ಶಿವ.

ಲೋಕಕಲ್ಯಾಣಾರ್ಥವಾಗಿ ಪತ್ನಿಯೊಡಗೂಡಿ ಆಕಾಶ ಮಾರ್ಗವಾಗಿ ಕೆಳಗೆ ಭೂಲೋಕ ನೋಡುತ್ತಾ ನಿರಂತರ ಸಂಚರಿಸಿ, ಕಷ್ಟದಲ್ಲಿರುವವರನ್ನು ಕಂಡೊಡನೆ ಧುತ್ತೆಂದು ಎದುರು ಮಾರುವೇಷದಲ್ಲಿ ಪ್ರತ್ಯಕ್ಷವಾಗಿ ಅವರ ಸುಖದುಃಖ ವಿಚಾರಿಸಿ, ಪರೀಕ್ಷೆಯನ್ನೂ ಮಾಡಿ, ತಕ್ಷಣವೇ ಪರಿಹಾರ ಕರುಣಿಸುವ ಕಥಾನಕ ಸರಣಿಗಳ ಏಕೈಕ ಕ್ರಿಯಾಶೀಲ ರಮ್ಯ ಕಥಾನಾಯಕ ಈತ. ಕುರೂಪಿ ವಿರೂಪಿಗಳ ದಂಡನ್ನೇ ತನ್ನವರನ್ನಾಗಿ ಹತ್ತಿರಮಾಡಿಕೊಂಡವ. ತನ್ನ ಮಕ್ಕಳನ್ನೂ ಲೌಕಿಕರ ಕಣ್ಣೊರಸಲು ಬಿಟ್ಟು ಕೊಟ್ಟವ.

ಶಿವನ ಮೀಸುವ ಹಾಡು

ಅಭಿಷೇಕ ಮಾಡಿದಳು ಗೌರಿ
ತ್ರಿಲೋಕ ಸಂಚಾರಿಗೆ
ಕರೆದೊಯ್ದಳು ಶಿವನ
ಶುಭ್ರಸ್ನಾನಕ್ಕೆ

ಮೂಗಾಲು ಮಣೆಯಲ್ಲಿ ಮೂಗಣ್ಣಿನವನ
ಕುಳ್ಳಿರಿಸಿ ಪ್ರೀತಿಯೊತ್ತಿ
ಮೂಜಗದಲೋಡಾಡಿ ಎಂತು ದಣಿದವೋ ಪಾದ
ಎಂಬ ನೆಪತುದಿಯಿಂದ ಧೂಳನೆತ್ತಿ
ಯಾರ ಮನೆ ಬೀದಿಯದು ಪತ್ತೆ ಹಚ್ಚಿ
ನಗುವ ನಟರಾಜನನು ಕರೆವಳೋ ಸ್ನಾನಕ್ಕೆ
ದುಃಖ ಹತ್ತಿಕ್ಕಿ
ಮುಗಿಯಿತೇ ಬೇಟೆ? ಪ್ರಶ್ನೆ ಚುಚ್ಚಿ

ಇದೋ ಈ ತಂಬಿಗೆ ನೀರು ಗಂಗೆಯವತಾರಕ್ಕೆ
ಇದು ಇಗೋ ಆ ಮಣಿಕರ್ಣಿಕೆಗೆ
ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು
ಕಡೆಯದಿಗೋ ನನ್ನ ಅನುದಿನದ ಬಡ ಕನಲು
ಎಂದಾಗ ನೀರೊಳಗೆ ಗೌರಿ ಕಂಬನಿ ಬಿಂದು
ಮಿಸಕ್ಕನೆ ಬೆರೆತು ಬಿಸಿಯಾಗಲು
‘ಆಯ್’ ಎಂದು ಶಿವ ಬೆವರಿ
‘ನನ್ನನೇನೆಂದುಕೊಂಡೆ? ನಿನ್ನ ಬಿಟ್ಟರೆ ಶುದ್ಧ ಬೈರಾಗಿ’
‘ಈ ಮಾತಿಗೆ ಶಿವನೇ ನಾನೆಷ್ಟನೆಯ ನಾರಿ?’
ಎನ್ನುತ್ತ ಮೃದು ಚಿವುಟಿ ಮೀಸುವಳು ನಮ್ಮ ಗೌರಿ.

ಬೈರಾಗಿ ಬೂದಿ ತೊಳೆಯುತ್ತ ಹಚ್ಚಗೆ ನೋಡುವಳು
ಮೆತ್ತಗೆ ಮೈ ಒರೆಸಿ ತಂಬಾಲು ಕುಡಿಸಿ
ತೊಡೆ ಮೆತ್ತೆಯನು ನೀಡಿ ಕೋರುವಳು
ಶಿವ ಶಿವಾ!
ಎಲ್ಲ ನದಿಗಳ ನೆನೆದು ಮಲಗು ದೇವ!

ನುಡಿ ರೇಶಿಮೆಯಡಿ ನಂಜು ನುಂಗಿದ ಕಿರಾತ
ಹೃದಯದಲಿ ಕಚಗುಳಿಯ ಹೂವು ಹರಿಗೋಲು
ಕಚಗುಳಿಯ ಹರಿಗೋಲು ಹರನ ಹತ್ತಿಸಿಕೊಂಡು
ಮತ್ತೆ ಸಾಗಿತು ಗೌರಿಯಿಂದ ದೂರ

ಶಿವನಿದ್ದೂ ಶಿವನಿಲ್ಲದಂಥಚೋದ್ಯಗಳೆಲ್ಲ
ಹೊಸತೇನು ಶಿವಕಾಮಿಗೆ?
ಮಿಸುಕಾಡದೇ ಕುಳಿತು ತಲ್ಲಣವ ತಡೆಯುವ
ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ

ಸಂಚಾರ ಮುಗಿಸಿ ಬರುವ ಈಶ್ವರ ಜೋಗಿ
ಗೌರಿ ಕರೆವಳು ಅವನ ಸ್ನಾನಕಾಗಿ
ಮದ್ದಿನೆಣ್ಣೆಯ ಪೂಸಿ, ಬಿದ್ದ ಕಂಗಳ ಒರೆಸಿ
ಜ್ವರ ಹಿಡಿಸಿಕೊಂಡಿರುವ ಲೋಕ ಸಂಚಾರಿಗೆ
ಕಿರಾತ ಕಡ್ಡಿಯ ಕಷಾಯ ಕುಡಿಸಿ.