ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ. ಈ ಸುಮ್ಮನೆ ನೋಡುತ್ತ, ಗ್ರಹಿಸುತ್ತ, ಪ್ರತಿಯೊಂದನ್ನೂ ಒಂದು ಅನುಭವವಾಗಿ ಸ್ವೀಕರಿಸುತ್ತ ಹೋಗಿದ್ದುದರ ಹಿಂದೆ ಅವರ ಮನಸ್ಸಿನಷ್ಟೇ ಅವರ ಗುರು ಲಂಕೇಶರು ಹೇಳಿಕೊಟ್ಟಂತಹ ಖಾಸಗೀ ಸಲಹೆಯೂ ಇದೆ.
ಇತ್ತೀಚೆಗಷ್ಟೇ ಬಿಡುಗಡೆಯಾಯ ಶೂದ್ರ ಶ್ರೀನಿವಾಸ್ ಅವರ “ಲಂಕೇಶ್ ಮೋಹಕ ರೂಪಕಗಳ ನಡುವೆ” ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

 

ಸಂಬಂಧಗಳಲ್ಲಿ ತೀವ್ರತೆ ಇಲ್ಲದಿದ್ದರೆ ಅದು ಬಹಳ ದಿನ ಗಟ್ಟಿಯಾಗಿ ನಿಲ್ಲಲಾರದು. ಅರ್ಥಪೂರ್ಣವೂ ಆಗಲಾರದು. ಒಳ ಹೊಕ್ಕಷ್ಟು ಹೃದಯ ತೆರೆದುಕೊಳ್ಳುತ್ತದೆ. ಹಾಗೂ ಒಮ್ಮೊಮ್ಮೆ ಸಂಬಂಧವೆನ್ನುವುದು ಬಂಧನವೂ ಆಗಿ ಪರಿಣಮಿಸಿ ಅದರಿಂದ ಬಿಡುಗಡೆಗಾಗಿ ಹಂಬಲಿಸಬೇಕಾಗುತ್ತದೆ. ಸಂಬಂಧದ ತೀವ್ರತೆಯಲ್ಲಿ ಕಂಡುಬರುವ ವೈರುಧ್ಯತೆ ಇದು. ಸಂಬಂಧಗಳಲ್ಲಿ ಮುಲಾಜುಗಳಿದ್ದರೆ ತಮ್ಮ ತನಗಳನ್ನು ಕಳೆದುಕೊಳ್ಳಬೇಕಾಗುತ್ತದೆ; ನಿರ್ದಾಕ್ಷಣ್ಯತೆ ಇದ್ದರೆ ನಿಷ್ಠುರತೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ನಿಷ್ಟುರತೆಯಿಲ್ಲದ ಸಂಬಂಧದಲ್ಲಿ ಆತ್ಮವಂಚನೆ, ಬೋಳೇತನ ಆಕ್ರಮಿಸಿಬಿಡುತ್ತವೆ. ಶೂದ್ರ ಅವರ ಇತ್ತೀಚಿನ ಪುಸ್ತಕ “ಲಂಕೇಶ್:ಮೋಹಕ ರೂಪಕಗಳ ನಡುವೆ” ಓದಿದಾಗ ಇದು ಮನಸ್ಸಿಗೆ ಬಂದಿತು.

ಶೂದ್ರ ಅವರು ತಮ್ಮ ಗುರು, ಗೆಳೆಯ, ಒಡನಾಡಿ ಲಂಕೇಶರ ಸಂಗಡ ಸಾಕಷ್ಟು ಅನುಭವಿಸಿದ್ದಾರೆ, ಪಡೆದಿದ್ದಾರೆ, ಕಳೆದುಕೊಂಡಿದ್ದಾರೆ, ಪಡೆದು ಕಳಕೊಂಡಿದ್ದಾರೆ, ಕಳೆದು ಪಡಕೊಂಡಿದ್ದಾರೆ. ತಮ್ಮ ಆತ್ಮ ಚರಿತ್ರೆಯ ಅರ್ಧಭಾಗವನ್ನು ಲಂಕೇಶರೇ ಆವರಿಸಿಕೊಂಡಿರುವುದು ಸೋಜಿಗ ಮತ್ತು ವಿಸ್ಮಯ. ಹಾಗೂ ಇದು ಅವರಿಗೆ ಒದಗಿಬಂದದ್ದು. ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ. ಈ ಸುಮ್ಮನೆ ನೋಡುತ್ತ, ಗ್ರಹಿಸುತ್ತ, ಪ್ರತಿಯೊಂದನ್ನೂ ಒಂದು ಅನುಭವವಾಗಿ ಸ್ವೀಕರಿಸುತ್ತ ಹೋಗಿದ್ದುದರ ಹಿಂದೆ ಅವರ ಮನಸ್ಸಿನಷ್ಟೇ ಅವರ ಗುರು ಲಂಕೇಶರು ಹೇಳಿಕೊಟ್ಟಂತಹ ಖಾಸಗೀ ಸಲಹೆಯೂ ಇದೆ.

ತಮ್ಮ ನಿರುದ್ವಿಗ್ನವಾದ ನಿರೂಪಣೆಯಲ್ಲಿ ಸಂಬಂಧದಲ್ಲಿ ಬದ್ಧತೆ ಮತ್ತು ತೀವ್ರತೆಯನ್ನು ಇಟ್ಟುಕೊಂಡೇ attachment ಮತ್ತು detachment ಗಳನ್ನು ತುಂಬಾ ಸೂಕ್ಷ್ಮವಾಗಿ, ಎಚ್ಚರದಿಂದ ಕಾಪಾಡಿಕೊಂಡು ಹೋಗಿದ್ದಾರೆ. ಈ ಕೃತಿಗೆ ಜೀವನಚರಿತ್ರೆ ಮತ್ತು ಆತ್ಮಕಥನ ಈ ಎರಡೂ ಪ್ರಕಾರಗಳ ಆಯಾಮಗಳು ಸಿಕ್ಕು ಇದನ್ನೊಂದು ವಿಶಿಷ್ಟ ಕೃತಿಯಾಗಿಸಿವೆ. ಲಂಕೇಶರನ್ನು ಬೇರೆಯವರಿಂದ ಕೇಳಿ, ಓದಿ ತಿಳಿದುಕೊಂಡಿದ್ದವರಿಗೆ ಶೂದ್ರ ಅವರ ಈ memoir ‘ಇನ್ನೂ ಸ್ವಲ್ಪ ಹೇಳಬೇಕಿತ್ತು..’ ಎಂದು ಅನ್ನಿಸುವಂತೆ ಮಾಡಿದರೂ, ನಿರೂಪಣೆಯಲ್ಲಿ ಸ್ಥಾಯಿಭಾವವಾಗಿ ಹರಿದಿರುವ unprejudiced ಧೋರಣೆ ನಮ್ಮನ್ನು ತಿವಿದು ಸುಮ್ಮನಿರಿಸುತ್ತೆ.

ಒಬ್ಬ ಶ್ರೇಷ್ಠ ಬರಹಗಾರನ ಬಗ್ಗೆ ಬರೆಯುತ್ತಿದ್ದೇನೆ ಎನ್ನುವ ಹಮ್ಮು ಬಿಮ್ಮು ಇಲ್ಲ; ಆತ್ಮರತಿಯೂ ಇಲ್ಲ. ಅವರ ಜೊತೆ ಕಳೆದ, ಮತ್ತು ಬೆಳೆದ ಕ್ಷಣಗಳನ್ನು ತುಂಬಾ ಆಪ್ತವಾಗಿ ನಿಷ್ಠುರತೆಯನ್ನು ಬಿಟ್ಟುಕೊಡದೆ ಪರಿಶುದ್ಧ ಪ್ರೀತಿಯಲ್ಲಿ ಮತ್ತೊಮ್ಮೆ ತಮಗೆ ತಾವೆ ಇಣುಕಿ ನೋಡಿದ್ದಾರೆ. ಇಲ್ಲಿ ಸರಿ ಮತ್ತು ತಪ್ಪುಗಳನ್ನು ತಕ್ಕಡಿಯಲ್ಲಿ ಇಟ್ಟು ನೋಡದೆ, ತಾನು ಹೇಗೆ ಸಾಗಿಬಂದೆ, ಅವರು ಹೇಗೆ ಸಾಗಿಬಂದರು, ಮತ್ತು ಲೋಕ ಹೇಗೆ ಗ್ರಹಿಸುತ್ತಿತ್ತು , ನೋಡುತ್ತಿತ್ತು ಎನ್ನುವುದನ್ನು ತಮ್ಮ matured ಆದಂತಹ ನಿರೂಪಣಾ ಶೈಲಿಯಲ್ಲಿ ಹಿಡಿದಿಡಲು ಪ್ರಯತ್ನಪಟ್ಟಿದ್ದಾರೆ. ಇದನ್ನು ಬಹಳ ಎಚ್ಚರದಿಂದ ಗಳಿಸಿಕೊಂಡಿದ್ದಲ್ಲ; ಬದಲಿಗೆ, ಲಂಕೇಶರ ಒಡನಾಟದಲ್ಲಿ ಸಾಗುತ್ತ ಬೆಳೆಸಿಕೊಂಡಿದ್ದು.

It is a saga of a great writer of our time and , at the same time, many lives! ಒಂದು ಕಾಲಘಟ್ಟದ ಮತ್ತು ಸಮಾಜದ ಸಾಕ್ಷಿಪ್ರಜ್ಞೆಯಂತಿದ್ದ ಲಂಕೇಶ್ ತಮ್ಮ ಆಪ್ತ ವಲಯದಲ್ಲಿನ ಕೆಲವರ ಬದುಕಿನಲ್ಲಿಯೂ ಒಂದು ಭಾಗವಾಗಿ ಮಿಳಿತಗೊಂಡಿದ್ದರು ಎಂಬುದು ಈ ಕೃತಿಯ ಉದ್ದಕ್ಕೂ ಸಾಗಿದೆ. ಎಲ್ಲಿಯೂ ಊಹೆಗೆ ಅವಕಾಶಕೊಡದೆ, ‘ಕಂಡದ್ದನ್ನು ಕಂಡಹಾಗೆ’ ಘಟನೆಗಳನ್ನು ಯಾವ ಮುಲಾಜು, ಮರ್ಜಿಗೆ ಹೋಗದೆ ಒಂದು ಕಾಲಘಟ್ಟದ ರಾಜಕೀಯ-ಸಾಂಸ್ಕೃತಿಕ ಬದುಕನ್ನು ಅಥೆಂಟಿಕ್ ಎನ್ನಬಹುದಾದ, ಡಾಕ್ಯುಮೆಂಟ್ ಥರವೂ ಕಾಣುವಂತೆ ದಾಖಲಿಸಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ತುಂಬಾ ಮಹತ್ವವಾದ ಕೃತಿಯಷ್ಟೇ ಅಲ್ಲ, ತುಂಬಾ interesting ಆದ ಬಲು ಚೇತೋಹಾರಿಯಾದಂತಹ ಕೃತಿ.

ಲಂಕೇಶರ ಬರಹಗಳಿಂದ ಪ್ರಭಾವಗೊಂಡ ಅನೇಕ ಪ್ರಜ್ಞಾವಂತ ಮನಸ್ಸುಗಳಿಗೆ ಇದೊಂದು ಸೋಜಿಗದ ಸಂಚಿಯಾಗಿ ಕಾಣುತ್ತದೆ. ಅವರ ಸಂಕೀರ್ಣ ವ್ಯಕ್ತಿತ್ವವನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿ ರಚಿಸಲಾಗಿದೆ ಈ memoir ಅನ್ನು. ತಮ್ಮ ಬರಹಗಳ ಮೂಲಕ ಟೀಕಿಸದೆ, ವ್ಯಂಗ್ಯಮಾಡದೆ, ಚೇಡಿಸದೆ ಯಾರನ್ನೂ ಬಿಡದ ಲಂಕೇಶರ ವಿಕ್ಷಿಪ್ತ ಮನಸ್ಥಿತಿಯನ್ನೂ ಸಹ ಅನಾವರಣಗೊಳಿಸಿದ್ದಾರೆ ಶೂದ್ರ ಅವರು. ಅದು ಹೇಗಿದೆ ಅಂದರೆ ಈ ವಿಕ್ಷಿಪ್ತ ಮನಸ್ಥಿತಿಯೂ ಎಲ್ಲ ಮನುಷ್ಯರಲ್ಲೂ ತುಂಬಾ ಸಹಜವಾಗಿಯೇ ಇರುತ್ತದೆ ಎಂಬಂತೆ ಚಿತ್ರಿಸಿದ್ದಾರೆ.

ಇದನ್ನು ಓದುವಾಗ, ಲಂಕೇಶರ ಬಗ್ಗೆ ಇಲ್ಲ ಸಲ್ಲದನ್ನು ತಿಳಿದುಕೊಂಡವರಿಗೆ ‘sorry ಮೇಷ್ಟ್ರೇ, ನಾವು ಆಥರ ತಿಳಿದುಕೊಳ್ಳಬಾರದಿತ್ತು, ತಮ್ಮ ಅವಸರದ , ದುಡುಕಿನ ತೀರ್ಮಾನಕ್ಕೆ ಕ್ಷಮೆಯಿರಲಿ’ ಎಂದು ಕೇಳುವಂತೆ ಮಾಡುತ್ತದೆ. ಯಾಕೆಂದರೆ, ಅವರೆ ಸ್ವತಃ ಬಹಳ ಸಂದರ್ಭದಲ್ಲಿ , ಮುಖ್ಯವಾಗಿ ಅನಂತಮೂರ್ತಿ ಮತ್ತು ಶೂದ್ರ ಅವರನ್ನು ಟೀಕೆ, ನಿಂದನೆ, ವ್ಯಂಗ್ಯಮಾಡಿ, ನಂತರ ನೊಂದು ಕೊಳ್ಳುತ್ತಿದ್ದ ಪ್ರಸಂಗಗಳನ್ನು ದಾಖಲಿಸಲಾಗಿದೆ. ಅಂತಹ ಪ್ರಸಂಗಗಳನ್ನು ನೋಡಿದರೆ, ಅವರೂ ಸಹ ನಮ್ಮಂತೆ, ಸಹಜ ಹುಲುಮಾನವ , ಅವರ ಆ ತಪ್ಪುಗಳು excusable ಅನ್ನಿಸುತ್ತೆ. ಇವರ ವ್ಯಕ್ತಿತ್ವವನ್ನು ಅರಿಯಲು ಶೂದ್ರ ಅವರು ತುಂಬಾ ಪರಿಣಾಮಕಾರಿಯಾದಂತಹ ಹೋಲಿಕೆಗಳನ್ನು ಕೊಡುತ್ತಾರೆ. ಅದು: ಲಂಕೇಶರಲ್ಲಿ ಗಾಂಧಿ, ಹಿಟ್ಲರ್, ಸ್ಟಾಲಿನ್ ಮೂರು ಮಿಕ್ಸ್ ಆಗಿದ್ದಾವೆ ಎನ್ನುವುದು.

ಶೂದ್ರ ಅವರ ಜೊತೆ ಜಗಳ, ಮುನಿಸು ಆದಮೇಲೆ ಸ್ವಲ್ಪ ದಿನ ಮಾತು ಬಿಟ್ಟು ಮತ್ತೆ ಯಾವುದೋ ಒಂದು ದಿನ ಫೋನ್ ಮಾಡಿ ‘ನಾನು ಹಿಟ್ಲರ್ ಮಾತಾಡ್ತಾ ಇರೋದು, ಇವೋತ್ತು ಸಂಜೆ ಬಾ, ಒಂದು ಗ್ಲಾಸ್ ನಿನಗಾಗಿ ಕಾಯುತ್ತಾ ಇರುತ್ತೆ’ ಎಂದು ಹೇಳುತ್ತಿದ್ದರು ಎನ್ನುವುದನ್ನು ಶೂದ್ರ ಅವರು ತುಂಬಾ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಈ ಕೃತಿಯನ್ನು ಓದುತ್ತಾ ಲಂಕೇಶರನ್ನು ರೂಪಿಸಿದ, ಪ್ರಭಾವಿಸಿದ ಅನೇಕ ಸಿನಿಮಾ, ಪುಸ್ತಕಗಳ ಪರಿಚಯವಾಗುತ್ತದೆ. ಜೊತೆಗೆ ಕಾಲೆಳೆಯವ ಜೋಕು, ಮುನಿಸು, ಜಗಳ, ಟೀಕೆ, ಕಾಮೆಂಟ್ಸ್ ಗಳು… ವಾವ್ ತುಂಬಾ ಸೊಗಸಾಗಿದೆ.

ಒಬ್ಬ ಶ್ರೇಷ್ಠ ಬರಹಗಾರನ ಬಗ್ಗೆ ಬರೆಯುತ್ತಿದ್ದೇನೆ ಎನ್ನುವ ಹಮ್ಮು ಬಿಮ್ಮು ಇಲ್ಲ; ಆತ್ಮರತಿಯೂ ಇಲ್ಲ. ಅವರ ಜೊತೆ ಕಳೆದ, ಮತ್ತು ಬೆಳೆದ ಕ್ಷಣಗಳನ್ನು ತುಂಬಾ ಆಪ್ತವಾಗಿ ನಿಷ್ಠುರತೆಯನ್ನು ಬಿಟ್ಟುಕೊಡದೆ ಪರಿಶುದ್ಧ ಪ್ರೀತಿಯಲ್ಲಿ ಮತ್ತೊಮ್ಮೆ ತಮಗೆ ತಾವೆ ಇಣುಕಿ ನೋಡಿದ್ದಾರೆ.

ಕೃತಿಯನ್ನು ತಮ್ಮ ನಂಬಿಕೆ, ಸಿದ್ಧಾಂತ, ಆದರ್ಶ, ಚಿಂತನೆ, ಗ್ರಹಿಕೆಗಳನ್ನು ಅದೊಂದು ರೀತಿಯ ‘ಜೀವನ್ಮರಣದ ವಿಷಯ’ವಾಗಿ ಮನಸ್ಸಿಗೆ ತೆಗೆದುಕೊಂಡು, ಕಟ್ಟುತ್ತಿದ್ದರು. ಮನುಷ್ಯನ ಮೂಲಭೂತ ಪ್ರವೃತ್ತಿ ಹಾಗೂ ಮನುಷ್ಯ ಸಂಬಂಧಗಳನ್ನು ಕನ್ನಡದ ಸಂದರ್ಭದಲ್ಲಿ ವಾಸ್ತವತೆಗೆ ಹತ್ತಿರವಾಗಿ ಇವರಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿರುವವರು ಕಡಿಮೆ ಎಂದೇ ಹೇಳಬಹುದು (ಈ ಗ್ರಹಿಕೆ ನನ್ನ ವೈಯಕ್ತಿಕ ಮಟ್ಟದ್ದು). ಇದು ಅವರ ಒಟ್ಟು ಬರಹದ ಮುಖ್ಯ ಧಾರೆ. ‘ಸಂಕ್ರಾಂತಿ’ ನಾಟಕ ಮೊದಲು ಪ್ರದರ್ಶನಗೊಂಡ ಸಂದರ್ಭದಲ್ಲಿ ನಟಿ ವೈಶಾಲಿಯವರು ಬಸವಣ್ಣನವರನ್ನು ‘ಯಾಕೆ ಆ ಥರ ಚಿತ್ರಿಸಿದ್ದೀರಾ?’ ಎಂದು ಕೇಳಿದ್ದುದಕ್ಕೆ ಲಂಕೇಶರು ಕೊಡುವ ಉತ್ತರವನ್ನು ಒಂದು ಚಳವಳಿಯ ನಾಯಕನ ಅಂತರಂಗದ ತುಮುಲಗಳು ಹೇಗೆ ಇರುತ್ತವೆ, ಹಾಗೂ ಅವನ ಒಳ ಸಂಘರ್ಷಗಳು ಹೀಗೆ ಡಿಕ್ಕಿ ಹೊಡೆದುಕೊಳ್ಳುತ್ತಿವೆ ಎಂಬುದನ್ನು ಶೂದ್ರ ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಪರಿ ಇದೆಯಲ್ಲ ಅದು ನಮ್ಮನ್ನು ವಿಸ್ಮಿತರನ್ನಾಗಿಸುತ್ತದೆ.

ಒಮ್ಮೊಮ್ಮೆ ಶೂದ್ರ ಅವರು ಲಂಕೇಶರ ಬಗೆಗಿನ ಈ ಥರ ದಟ್ಟವಾದ, ವ್ಯಾಪಕವಾದ ವಿವರಗಳನ್ನು ಮತ್ತು ಘಟನೆಗಳನ್ನು ಕೊಡುವುದಕ್ಕಾಗಿಯೇ ‘ಈ ಥರ ಅವರ ಜೊತೆ ಸಾಗಿದರಾ, ಬದುಕಿದರಾ?’ ಎನ್ನುವಂತೆ ಮಾಡಿಬಿಡುತ್ತದೆ. ಲಂಕೇಶರ ಮಾತುಗಳಲ್ಲಿ ಒಡಮೂಡುವ ಸತ್ಯ ಮುಖಕ್ಕೆ ರಪ್ಪಂಥ ರಾಚುತ್ತದೆ. ಅವರ ಆ ಮಾತುಗಳು ಅವರ commitment ಅನ್ನು ತೋರಿಸುವುದರ ಜೊತೆಗೆ, ಅವರ ಯೋಚನೆ, ಚಿಂತನೆಗಳು ಎಷ್ಟು original ಆಗಿದ್ದವು ಎಂಬುದನ್ನು ತೋರಿಸುತ್ತದೆ. ಈ ಕಾರಣಕ್ಕಾಗಿಯೇ ಅನ್ನಿಸುತ್ತೆ ಖ್ಯಾತ ಚಿಂತಕ ಜಿ.ರಾಜಶೇಖರ ಅವರು ಹೇಳುವುದು ‘ಲಂಕೇಶ್ ಈಸ್ ದ ಬೆಸ್ಟ್ ಪ್ರೋಸ್ ರೈಟರ್’ ಎಂದು.

ಅವರ ಗದ್ಯ ಬರಹಗಳಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳು ಒಂದಕ್ಕೊಂದು ಬೆಸೆದುಕೊಂಡಿರುವುದಷ್ಟೇ ಅಲ್ಲದೆ, ಅವುಗಳನ್ನು ತಮ್ಮ ಹರಿತವಾದ ಟೀಕೆಗೆ ಒಳಪಡಿಸುವ ಕ್ರಮ ಸ್ಥಾಯಿಭಾವವಾಗಿ ಇರುವುದ ಕಾಣಬಹುದು. ವೈಶಾಲಿ ಅವರಿಗೆ ಕೊಟ್ಟ ಉತ್ತರವನ್ನು ಶೂದ್ರ ಅವರು ನೆನಪಿಟ್ಟುಕೊಂಡು ಈ ರೀತಿ ದಾಖಲಿಸುತ್ತಾರೆ: ಯಾಕೆಂದರೆ, ಒಬ್ಬ ಅನೈತಿಕ ವ್ಯಕ್ತಿಗೆ ಯಾವುದೂ ಸಂಘರ್ಷವಲ್ಲ; ಸುಮ್ಮನೆ ಬದುಕಿನ ಘಟನೆಗಳನ್ನು ತೆಗೆದುಕೊಳ್ಳುತ್ತಲೋ, ಅದನ್ನು ಪಕ್ಕಕ್ಕೆ ತಳ್ಳುತ್ತಲೋ ಹೋಗುತ್ತಿರುತ್ತಾನೆ. ಆದರೆ ಬಸವಣ್ಣನ ರೀತಿಯ ನೈತಿಕತೆಯ ದಟ್ಟತೆಯಿಂದ ಕೂಡಿರುವಂಥವನಿಗೆ, ಯಾವುದೂ ಸರಳವಲ್ಲ. ಎಲ್ಲವೂ ದುರಂತವಾಗಿ ಪರಿಣಮಿಸುತ್ತಿರುತ್ತದೆ. ಈ ಅಬ್ಸರ್ವೇಷನ್ ಅನ್ನು ಗಮನಿಸಿದಾಗ ಶೂದ್ರರಿಗಾದ ತಲ್ಲಣ, ಮಿಂಚುಸಂಚರಿಸಿದಂತ ಅನುಭವ ನಮಗೂ ಆಗುತ್ತದೆ.

ಬರಹಗಾರನೊಬ್ಬ ಹೇಗೆ ಕೆಲಸ ಮಾಡುವನು, ಚಿಂತಿಸುವನು, ಎಂಬುದರ ಬಗೆಗಿನ ಕುತೂಹಲ ಅವನನ್ನು ಓದಿಕೊಂಡು ಬಂದಿರುವ , ಇಷ್ಟಪಡುವ ಅನೇಕರಿಗೆ ಇರುತ್ತದೆ. ಇದು ಮಾಕ್ರ್ವೇಜ್, ಶೇಕ್ಸ್‍ಪಿಯರ್, ಬೇಂದ್ರೆಯವರ ಬಗೆಗೆ ಹರಡಿಕೊಂಡಿರುವ ದಂತ ಕತೆಗಳನ್ನು ನೆನಪಿಸುತ್ತದೆ. ಲೇಖಕರ ಬಗೆಗಿನ ಕತೆಗಳು, ಅಭಿಪ್ರಾಯಗಳು, ಗ್ರಹಿಕೆಗಳು ಕಾಲ ಸರಿದಂತೆ ದಂತಕತೆಗಳಾಗುವುವು. ಈ ಥರದ ಬೆರಗಿನ ಕಣ್ಣು ಲಂಕೇಶ್ ಮತ್ತು ದೇವನೂರರ ಮೇಲೂ ಇದೆ. ಶೂದ್ರ ಅವರು ಸಂಗ್ರಹಿಸಿ ಕೊಟ್ಟಿರುವ ಲಂಕೇಶರ ಬಗೆಗಿನ ಪ್ರಸಂಗಗಳು ಮುಂದೊಂದು ದಿನ ನಂಬಲಸಾಧ್ಯದಂತೆ ದಂತಕತೆಗಳಾದರೆ ಆಶ್ಚರ್ಯವೇನಿಲ್ಲ!

ಒಬ್ಬ ಬರಹಗಾರ great writer ಆಗುವುದು ಈ ಥರಹದ ದಂತಕತೆಗಳಿಂದಲೇ ಅನ್ನಿಸುತ್ತೆ. ಯಾಕೆಂದರೆ ಅವರ ಬರಹ, ಬದುಕು, ಚಿಂತನೆಗಳಿಗೆ ಕಾಲದೇಶವನ್ನು ಮೀರುವ ಶಕ್ತಿ ದಕ್ಕಿಬಿಡುತ್ತದೆ. ಲಂಕೇಶರು ಹೇಗೆ ಸ್ನೇಹಿತರ ವಲಯವನ್ನು ಇಷ್ಟಪಡುತ್ತಿದ್ದರೋ ಅಷ್ಟೇ ಖಾಸಗೀತನ ಮತ್ತು ಒಂಟಿತನವನ್ನು ಇಷ್ಟಪಡುತ್ತಿದ್ದರು. ಶೂದ್ರ ಅವರು ಹೇಳುವ ಹಾಗೆ ಅವರು ಒಮ್ಮೊಮ್ಮೆ ತಮ್ಮೆಲ್ಲ ಒಂಟಿತನವನ್ನು ಪಕ್ಕಕ್ಕೆ ಸರಿಸಿ; ತುಂಟತನದಲ್ಲಿ ಭಾಗಿಯಾಗಿ ಬಿಡುತ್ತಿದ್ದರು. ಅದು ಕೇವಲ ಒಂದಷ್ಟು ಕಾಲ ಮಾತ್ರ. ಮತ್ತೆ, ಅವರನ್ನು ಆಪ್ತವಾಗಿ ಬಂಧಿಸಿಡುತ್ತಿದ್ದುದು, ಓದು, ವರ್ಲ್ಡ್ ಮೂವಿಸ್ ನೋಡುವುದು, ಸಿಗರೇಟು, ಮತ್ತು ಸ್ಟೆಫಿಗ್ರಾಫ್‍ ಳ ಟನಿಸ್ ಆಟ. ಸ್ಟೆಫಿಗ್ರಾಫ್ ಟೆನಿಸ್ ಕೋರ್ಟ್‍ ನಲ್ಲಿ ಇದ್ದಾಳೆ ಎಂದರೆ, ಟಿ.ವಿ ಫ್ರೇಮ್ ಮೇಲೆ ಅವರ ದೃಷ್ಟಿ ಬಂಧಿಯಾಗಿ ಬಿಡುತ್ತಿತ್ತು. ಆಗ ಯಾರೂ ಮಾತಾಡುವಂತಿರಲಿಲ್ಲ. ಕುದುರ ರೇಸಿನಷ್ಟೇ ಅವಳ ಆಟದ ಬಗ್ಗೆ ತಾದಾತ್ಮ್ಯತೆ ಇತ್ತು. ಅವರು ಎಷ್ಟೊಂದೆಲ್ಲ, ಸಿನಿಮಾ, ಸಂಗೀತ, ರಾಜಕೀಯ, ಕ್ರೀಡೆ, ತರಲೆ, ಪೋಲಿ ಜೋಕುಗಳು, ತಮಾಷೆ, ಕೀಟಲೆ, ಟೀಕೆ-ವ್ಯಂಗ್ಯಗಳು, ಜಾಗತೀಕ ಸಾಹಿತ್ಯ ಅಂತೆಲ್ಲ ಮಾತಾಡಿದರೂ, ಅವರು ಎಂದಿಗೂ ತಮ್ಮ ಸೃಜನಶೀಲ ಬರಹದ ವಸ್ತುವನ್ನು ಕುರಿತು ಹೆಚ್ಚಾಗಿ ಚರ್ಚಿಸುತ್ತಿರಲಿಲ್ಲವಂತೆ. ಇದನ್ನು ಕುರಿತು ಶೂದ್ರ ಅವರು ಕೇಳಿದ್ದಕ್ಕೆ ಅವರು ಕೊಡುತ್ತಿದ್ದ ಉತ್ತರ ಸೃಷ್ಟಿಕ್ರಿಯೆ ಹಾಗೆ ಬರೆಯುವುದಕ್ಕೂ ಮುನ್ನ ಚರ್ಚಿಸಿದರೆ, ಅದು ತನ್ನ ವ್ಯಾಪಕತೆಯನ್ನು ಕಳೆದುಕೊಳ್ಳುತ್ತದೆ ಎಂಬುದು.

ಅವರ ವ್ಯಕ್ತಿತ್ವವನ್ನು ಬುದ್ಧ, ಬಸವಣ್ಣ, ಗಾಂಧಿ ಹಾಗೂ ವ್ಯಾಸ ವ್ಯಾಪಕವಾಗಿ ಆವರಿಸಿಕೊಂಡಿದ್ದರು ಎಂದು ಬರೆಯುವ ಶೂದ್ರ ಅವರು ಅವರ ಕೆಲವು ಸಂದರ್ಭಗಳಲ್ಲಿನ ವರ್ತನೆಗಳನ್ನು ಕುರಿತು ಹೇಳುವಾಗ ಅವರಲ್ಲಿ ಸ್ಟಾಲಿನ್, ಹಿಟ್ಲರ್ ಮತ್ತು ಗಾಂಧಿ ಮಿಶ್ರಣಗೊಂಡಿದ್ದರು ಎಂದು ಬರೆಯುತ್ತಾರೆ. ಬಹುಷಃ ಇದು ಅವರ ವ್ಯಕ್ತಿತ್ವದ ವೈರುಧ್ಯತೆ ಇರಬಹುದು. ಹಾಗೂ, ಇದಕ್ಕೆ ಲಂಕೇಶರದೇ ಸಾಲುಗಳನ್ನು ನೆನೆಸಿಕೊಂಡರೆ, ವ್ಯಕ್ತಿತ್ವದ ವೈರುಧ್ಯತೆ ಮತ್ತು ವಿಲಕ್ಷಣತೆಗೆ ಅವರದೇ ಸಾಲುಗಳು ಉತ್ತರದಂತಿವೆ- ಜನಸಾಮಾನ್ಯರಲ್ಲಿ ಎಂದೂ ಖ್ಯಾತರಾಗಲು ಇಷ್ಟಪಡದೆ ತಮ್ಮ ಮನೆ, ಕೆಲಸ, ಕರ್ತವ್ಯ ನೋಡಿಕೊಂಡು ಹೋಗುವ ಜನರಲ್ಲಿ ಆಳವಾಗಿ ಬೇರುಬಿಟ್ಟ ಒಳ್ಳೆಯತನದ ಬಗ್ಗೆ ನಂಬಿಕೆ ಇದ್ದವರು, ಗಾಂಧೀಜಿಯಂಥ, ಥೋರೋನಂತ, ಕ್ರಿಸ್ತನಂಥ ಜನ. ಮನುಷ್ಯ ಚಳಿಗಾಲಕ್ಕೆ ಬದಲು ಬೇಸಿಗೆ ಸೃಷ್ಟಿಸಬಹುದು, ಹಿಮಾಲಯಕ್ಕೆ ಕಂಬಳಿ ಹೊದಿಸಬಹುದು, ಆದರೆ ಪ್ರಕೃತಿಯ ವಸ್ತುನಿಷ್ಠ ಕ್ರೌರ್ಯ ಅಥವಾ ನಿರ್ಲಿಪ್ತತೆಯನ್ನು ಬದಲಿಸಲಾರ. ಹಾಗೆಯೇ, ಮನುಷ್ಯ ಎಷ್ಟೇ ಕ್ರೂರವಾಗಿ ಕಂಡರೂ ಆತ ತನ್ನ ಮೂಲಭೂತ ಮನುಷ್ಯತ್ವ ಮತ್ತು ಪ್ರೇಮದಿಂದ ಹೊರಬರಲಾರ.

ಶೂದ್ರ ಅವರು ಲಂಕೇಶ್ ಅವರ ಜೊತೆಗೆ ಕಳೆದ ಕೆಲವು ಕ್ಷಣಗಳನ್ನು ಹೇಗೆ ದಾಖಲಿಸಿದ್ದಾರೆ ಎಂದರೆ ಯಾವುದಾದರು ಒಂದು ಗ್ರೇಟ್ ಮೂವಿಯಲ್ಲಿ ಕ್ಲೋಸ್-ಅಪ್ ಶಾಟ್ ನಲ್ಲಿ ಸುಂದರ ದೃಶ್ಯವನ್ನು ಸೆರೆಹಿಡಿದಿರುವ ಹಾಗೆ. ಡಿ.ಆರ್ ತಮ್ಮ ಬೌದ್ಧಿಕ ಉಚ್ಛ್ರಾಯ ಸ್ಥಿತಿಯಲ್ಲಿದ್ದಂತಹ ಸಂದರ್ಭದಲ್ಲಿ, ಉಡುಪಿಯಲ್ಲಿ ಭಾಷಣವೊಂದನ್ನು ಕೊಡಬೇಕಾಗಿರುತ್ತದೆ. ಡಿ. ಆರ್ ಅವರ ಭಾಷಣವನ್ನು ಕೇಳುವ ಸಲುವಾಗಿಯೇ ಶೂದ್ರ ಅವರು ಉಡುಪಿಗೆ ಹೋಗಿರುತ್ತಾರೆ. ಭಾಷಣದ ನಂತರ ಹತ್ತಿರದ ಮಣಿಪಾಲ್ ನಲ್ಲಿ ವೈದೇಹಿಯವನ್ನು ಅವರ ಮನೆಯಲ್ಲಿ ಭೇಟಿ ಮಾಡಿದ ನಂತರ ವಾಪಸ್ಸು ಬರುವಾಗಿನ ದೃಶ್ಯ ಆ ಥರ ಮೂಡಿಬಂದಿದೆ. ಶೂದ್ರ ಅವರು ಹೇಳುತ್ತಾರೆ-“ನಾವು ವೈದೇಹಿಯವರ ಮನೆಯಿಂದ ಹೊರಬಂದಾಗ, ಆ ಕುಟುಂಬದ ನಾಲ್ಕು ಮಂದಿಯೂ ಹಸನ್ಮುಖಿಗಳಾಗಿ ಹೊರಗೆ ನಿಂತಿದ್ದರು; ನಗುತ್ತಿರುವ ವೈದೇಹಿಯವರ ಪತಿ, ಮಂದಸ್ಮಿತರಾಗಿ ನಿಂತಿದ್ದ ವೈದೇಹಿ, ತಾಯಿಯ ಹೆಗಲ ಮೇಲೆ ನಯನ ಮತ್ತು ಪಲ್ಲವಿಯವರು ಗಲ್ಲವಿಟ್ಟು ನಿಂತಿದ್ದ ಚಿತ್ರ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ.”

ಲಂಕೇಶ್ ಸತ್ತ ನಂತರ ಅವರ ಸಮಾಧಿಯ ಅವಸ್ಥೆಯನ್ನು ನೋಡಿದರೆ gone with the wind ಎನ್ನಿಸುತ್ತೆ. ಅವರೇ ಒಂದು ಪ್ರಸಂಗದಲ್ಲಿ ಹೇಳಿದಂತೆ, ಕಾಲದ ಕನ್ನಡಿಯ ಮೇಲೆ ಬಿದ್ದಿರುವ ಧೂಳನ್ನು ಒರೆಸಿಕೊಂಡು, ನಮ್ಮನ್ನು ನಾವು ನೋಡಿಕೊಂಡು ಮುಂದೆ ಸಾಗಲೇ ಬೇಕು. ಅದು ಬದುಕಿನ ನಿಯಮ. ಇಲ್ಲಿ ಯಾವುದು ಶಾಶ್ವತವಲ್ಲ.