ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ.
ಚನ್ನಬಸಪ್ಪ ಆಸ್ಪರಿಯವರ “ಸಂತೆಯೊಳಗಣ ಮೌನ” ಕವನ ಸಂಕಲನದ ಕುರಿತು ನಾದ ಮಣಿನಾಲ್ಕೂರು ಬರಹ

ನನ್ನನ್ನು ಇತ್ತೀಚಿಗೆ ತುಂಬಾ ಕಾಡಿ ಓದಿಸಿಕೊಂಡ ಕವಿತೆಗಳ ಸಂಕಲನವಿದು. ತುಂಬ ಸಮಯದ ನಂತರ ಒಂದು ಇಡೀ ಕವಿತಾ ಸಂಕಲನ ಈ ಪರಿ ನನ್ನನ್ನು ಕಾಡಿ ಓದಿಸಿಕೊಂಡಿದ್ದು. ನನಗಂತೂ ತುಂಬಾ ಸಲ ಸಂಕಲನಗಳಲ್ಲಿನ 20 ಕವಿತೆಗಳಲ್ಲಿ 5 /6 ಇಷ್ಟವಾಗುವುದಿದೆ. ಆದರೆ ಇಲ್ಲಿನ ಒಂದೊಂದೂ ಕವಿತೆಗಳು ಒಂದಕ್ಕಿಂತ ಇನ್ನೊಂದು ಭಿನ್ನ. ಕೆಲವು ಒಂದೇ ಸಂಗತಿಯನ್ನು ಭಿನ್ನ ನೋಟದಿಂದ ಮತ್ತೆ ಮಾತಾಡಿರುತ್ತವೆ. ಮೌನ, ಒಳನೋಟ, ಧ್ಯಾನ, ಒಲವು, ಕಾಳಜಿ, ದುಃಖ, ಸಂಬಂಧ… ಹೀಗೆ ಇಲ್ಲಿನ ಕವಿತೆಗಳು ನಮ್ಮನ್ನು ವಿಹರಿಸುತ್ತಲೇ ಒಳಗಿನ ಗೀರುಗಳಿಂದ ಹೊಸ ನೋಟ ಕಾಣಿಸುತ್ತವೆ.

(ಚನ್ನಬಸಪ್ಪ ಆಸ್ಪರಿ)

ತೇಪೆ ಕವಿತೆ ನನ್ನ ಟೈಲರ್ ಆಗಿದ್ದ ಕಾಲದ ನೆನಪುಗಳನ್ನು ಮರುಕಳಿಸಿದರೆ, ಇಲ್ಲಿ ಅನೇಕ ಕವಿತೆಗಳು ಮತ್ತು ನಾನು ಕತ್ತಲ ಹಾಡಿನ ಮಧ್ಯೆ ಸಂಭಾಷಿಸುವ ಮಾತು ನೋಟಗಳು ಬಹುತೇಕ ಒಂದೇ ಎಂಬಷ್ಟು ಹತ್ತಿರವಿದೆ. ಈ ಮೂಲಕ ಒಂದೇ ತರದ ಜೀವ ಸಂವೇದನೆಯು ವಿವಿಧ ರೂಪಗಳ ಮೂಲಕ ಪ್ರಕಟಗೊಳ್ಳುತ್ತವೆ ಎಂಬುದನ್ನು ಗಮನಿಸಬಹುದು.

ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ – ಕವಿತೆ ಮೂಲಕ ಹೇಳುವ ಆಸ್ಪರಿಯವರ ವಿಶಾಲ ಓದು ಮತ್ತು ಆಳದ ನೋಟಗಳು, ಓದುಗರನ್ನು ಭಾವ, ರಸದೊಂದಿಗೆ ಎಜುಕೇಟ್ ಕೂಡ ಮಾಡುತ್ತವೆ ಎಂದು ನಾನು ನಂಬುತ್ತೇನೆ.

ಅವ್ವ ಎಂಬ ರೇಖಾ ಚಿತ್ರದ –
‘ನೀರ ಮೇಲೆ ತೇಲಿ ಬಿಟ್ಟ
ಬಾಗಿನಕ್ಕೆ ಮಾಡಿದ ಸಿಂಗಾರ’
… ಮತ್ತು
‘… ತೃಪ್ತಿಯಾಗದ್ದಕ್ಕೆ
ಹಾಗೆಯೇ ಮುದ್ದೆ ಮಾಡಿ
ಡಸ್ಟ್ ಬಿನ್ನಿಗೆ ಎಸೆದ
ರೇಖಾಚಿತ್ರ ‘
… ಸಾಲುಗಳು ಮನದಂಚನ್ನು ತೇವಗೊಳಿಸುತ್ತಲೇ ನಾವಿನ್ನೂ ಬರಡಾಗಿಲ್ಲ ಎಂಬುದನ್ನು ನೆನಪಿಸುತ್ತವೆ.

ಬದುಕು ಶರಬು ಬಾಟಲಿ ಕವಿತೆಯಲ್ಲಿ, ತಕ್ಷಣದ ಸುಖದ ಹಪಹಪಿಗಳನ್ನು ಒಂದೆಡೆ
ಸುರ್ ಎಂದು ಕಡ್ಡಿ ಗೀರಿದಂತೆ ಎನ್ನುತ್ತಾ ಇನ್ನೊಂದೆಡೆ ಶೀಘ್ರ ಸ್ಖಲನದ ಕ್ಷಣಿಕ ಸುಖಕ್ಕೆ
ಸುಖಾ ಸುಮ್ಮನೆ ಒದ್ದೆಯಾಗುವ ಒಳಉಡುಪು ಎನ್ನುತ್ತಾರೆ.

ಯಾರೋ ಹೇಳಿದರು, ನಕ್ಷತ್ರದ ಬಾಯಾರಿಕೆ, ನಾನು ಮನುಷ್ಯನಾಗುತ್ತಿರಲಿಲ್ಲ, ಬೇರೇನು ಬೇಕು ಬದುಕಿಗೆ ಮುಂತಾದ ಕವಿತೆಗಳಲ್ಲಿ ಮನುಷ್ಯ ಜೀವಿ ಸಿಕ್ಕಿಕೊಂಡ ಸಿಕ್ಕುಗಳ ಬಿಡಿಸುವ ತವಕವೂ ಇದೆ, ಸಿಕ್ಕು ಬಿಡಿಸಿಕೊಂಡು ದಾಟಿದ ಬಿಕ್ಕುವಿನ ದಕ್ಕುವಿಕೆಯೂ ಇದೆ ಅನಿಸುತ್ತದೆ. ಹೀಗೆ ಸಂಕಲನದ 42 ಕವಿತೆಗಳಲ್ಲಿ ಹಲವು ತೀವ್ರವಾಗಿ ಕಾಡಿದರೆ ಇನ್ನೂ ಕೆಲವು ಒಂದಲ್ಲ ಒಂದು ಸಂಗತಿಗಾಗಿ ನೆನಪಿಗೆ ಸಲ್ಲುತ್ತವೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ Indian literature in English ವಿಷಯದಲ್ಲಿ ಪಿ ಎಚ್ ಡಿ ಮಾಡುತ್ತಿರುವ ಚನ್ನಬಸವ ಆಸ್ಪರಿ ಅವರು ಪ್ರಸ್ತುತ ಗಂಗಾವತಿಯ ಶ್ರೀರಾಮನಗರದ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷೆ ಉಪನ್ಯಾಸಕರಾಗಿದ್ದಾರೆ. ಸಂತೆಯೊಳಗಣ ಮೌನ ಇವರ ಮೊದಲ ಕೃತಿ. ಸಂಕಲನದ ಒಂದು ಕವಿತೆ ಇಲ್ಲಿದೆ.

ನಾನು ಮನುಷ್ಯನಾಗುತ್ತಿರಲಿಲ್ಲ

ಮುಡಿಗೇರಿದ ಗುಲಾಬಿಗಷ್ಟೇ ಅಲ್ಲ
ರಕ್ತ ಬಸಿದ ಮುಳ್ಳು ಮೊನೆಗಳಿಗೂ
ಮನಬಯಲು ಹಾಸಿದ್ದೇನೆ
ಹಾಗಾಗದಿದ್ದರೆ
ಪ್ರೀತಿ ಟಿಸಿಲೊಡೆಯುತ್ತಿರಲಿಲ್ಲ

ಬೊಗಸಿಯಲ್ಲಿ ದಕ್ಕಿದ್ದಕಷ್ಟ ಅಲ್ಲ
ಬೆರಳ ಸಂದಿಯಲ್ಲಿ ಸೋರಿಹೋದದಕ್ಕೂ
ಎದೆ ಮಡಕೆಯಲ್ಲಿ ಜಾಗವಿದೆ
ಹಾಗಿಲ್ಲದಿದ್ದರೆ
ಭಾವ ತೊಟ್ಟಿಕ್ಕುತ್ತಿರಲಿಲ್ಲ

ಗೂಡು ಕಟ್ಟುವ ವಸಂತದ ಹಾಡುಗಳಿಗಷ್ಟೇ ಅಲ್ಲ
ಶಿಶಿರದ ಬೋಳು ಕಾಡುಗಳಿಗೂ
ಒಳಕುಡಿಕೆಯಲ್ಲಿ ಹಸಿರಿದೆ
ಅದಿರದಿದ್ದರೆ
ಯುಗಳ ಗೀತೆ ಉಸಿರಾಡುತ್ತಿರಲಿಲ್ಲ

ಬೆಳಕ ಬೆರಗ ಬರೆಯುವ ದೀಪಕ್ಕಷ್ಟೇ ಅಲ್ಲ
ಸುಟ್ಟು ಕರಕಲಾಗಿಸುವ ಬೆಂಕಿಗೂ
ಆತ್ಮದ ಪಣತಿಯಲ್ಲಿ ತೈಲವಿದೆ
ಅದು ಬಸಿದು ಹೋಗಿದ್ದರೆ
ಕಣ್ಣ ಹೊಳಪು ಕುಣಿದಾಡುತ್ತಿರಲಿಲ್ಲ

ಭಿಕ್ಷೆಯಿತ್ತ ನಿಮ್ಮ ಪ್ರೀತಿಗಷ್ಟೇ ಅಲ್ಲ
ಕರುಣೆಯಿಂದ ಕಕ್ಕಿದ ದ್ವೇಷಕ್ಕೂ
ನಾನು ಋಣಿ
ನೀವು ಹಾಗೆ ಮಾಡದಿದ್ದರೆ
ಬಹುಶಃ
ನಾನು ಮನುಷ್ಯನಾಗುತ್ತಿರಲಿಲ್ಲ