ಒಂದು ಕಪ್ಪು ಚರ್ಮದ ಚೀಲ
ವಿಶೇಷವೇನಿಲ್ಲ, ಅಗಲಕ್ಕಿಂತ ಎತ್ತರ,
ಹೆಗಲ ಪಟ್ಟಿ, ಕಟ್ಟಿ ನಿಲ್ಲಿಸುವ ಕಣ್ಣಿನಂತಹ
ಅಂಟು ಗುಂಡಿ, ನೋಡುತ್ತಿದ್ದರೆ
ಥೇಟ್ ಎದೆಯೊಳಗೇ ಇಳಿದಂತೆ.
ಈ ಚೀಲಗಳು ಹೀಗೆ
ಮಾರೀಚ ಮಾರುವೇಷ ಧರಿಸಿ ಬಂದಂತೆ
ಕರೆಯುತ್ತಲೇ ಇರುತ್ತವೆ ರೇಖೆಯಾಚೆಗೆ ನಿಂತು
ಚೀಲದಲ್ಲಿ ಹಾಕಿದ ದುಡ್ಡಿಗಿಂತ
ಚೀಲಗಳ ಮೇಲೆ ಹಾಕಿದ್ದೇ ಹೆಚ್ಚು!
ಗಪ್ಪಗೆ ಮುಚ್ಚಿದ ಬಾಯಲ್ಲಿನ ಮಿಠಾಯಿ
ರಸ ಒಂದಿಷ್ಟೇ ತುಟಿಯಂಚಿನಲ್ಲಿ ಒಸರಿ
ಚೀಲದೊಳಗೂ ಒಂದಿಷ್ಟು ನೆನಪು
ಒಮ್ಮೊಮ್ಮೆ ಚೀಲ ನೋಡಲಷ್ಟೇ ಮುದ್ದು
ಒಳಗೆ ನಾಲ್ಕು ಹಾಡುಗಳನ್ನೂ ತುಂಬಲಾಗದು
ತಮ್ಮದೇ ಹೊರೆ ಚೀಲದ ತುಂಬ
ಇನ್ನೂ ಕೆಲವೊಮ್ಮೆ ಅಳ್ಳಕ,
ಒಳಗೆಲ್ಲಾ ಖಾಲಿ ಖಾಲಿ
ತುಂಬಿದ್ದೆಲ್ಲಾ ಸದ್ದು ಮಾಡುತ್ತವೆ
ಜಗಕ್ಕೆಲ್ಲಾ ಗುಟ್ಟು ಹೇಳುತ್ತಾ
ಕೆಲವೊಮ್ಮೆ ಚೀಲ ಚಂದ, ಹಿಡಿ ಜೀರ್ಣ
ಹಿಡಿತಕ್ಕೆ ಸಿಗುವುದೇ ಇಲ್ಲ
ಇಟ್ಟರೆ ಪ್ರಯೋಜನವಿಲ್ಲ
ಎಸೆಯಲು ಮನಸ್ಸಾಗುವುದಿಲ್ಲ,
ನಿನ್ನೆಗಳ ಉಳಿಕೆ ತುಂಬಿಡಬಹುದಷ್ಟೇ
ಕೆಲವೊಮ್ಮೆ ತೋರಿಕೆಗೆ ಬಳಸಬಹುದು
ಕೆಲವೊಮ್ಮೆ ತೋರಿಸಲಾಗದಿದ್ದರೂ
ಬಿಡಲಾಗದು
ಒಮ್ಮೊಮ್ಮೆ ವಿಪರೀತ ಕಿರಿಕಿರಿ
ಬಾಯಿ ತೆಗೆಯಲೂ ಮತ್ತು ಬಾಯಿ ಮುಚ್ಚಲೂ…
ಇಷ್ಟು ಚಿಲ್ಲರೆ, ಪೆನ್ನು
ಎಂದೋ ಬರೆದಿಟ್ಟ ದಿನಸಿ ಪಟ್ಟಿ
ಅರ್ಧ ದೂರ ಬಂದು, ದಾರಿ ಮರೆತು
ಬಿಕ್ಕುತ್ತಲೇ ಇರುವ ಕವಿತೆ,
ಹುಟ್ಟುಹಬ್ಬವಾಗಿಸಿದ
ಹತ್ತು ಸಾಲಿನಲ್ಲಿ ಐದು ತಪ್ಪುಗಳಿರುವ
ಪುಟ್ಟನ ಪತ್ರ, ಕೀಲಿಯೊಂದಿಗೆ ಮಾತು ಬಿಟ್ಟ
ರೆಕ್ಕೆ ಸವೆದ ಕೀಲಿಕೈ, ಮಾತ್ರೆ ಚೀಟಿ, ಏಲಕ್ಕಿ,
ಜೀರ್ಣವಾದ ಪುಟ್ಟ ಫೋನ್ ನಂಬರ್ ಪುಸ್ತಕ,
ಕಾಡಿಗೆ ಕಲೆ ಉಳಿಸಿಕೊಂಡ ಕರವಸ್ತ್ರ…
ಒಂದೊಂದು ಚೀಲದೊಳಗೂ
ಎಷ್ಟೊಂದು ಒಜ್ಜೆ,
ಇಳಿವಯಸ್ಸು ನೆನಪನ್ನು ತಕ್ಕಡಿಗೆ ಹಾಕಿದಂತೆ.
ಈ ಕಪ್ಪು ಚೀಲ ನನ್ನದಲ್ಲ,
ಎದುರಿಗೇ ಕುಳಿತು, ಆಡುತ್ತಿದೆ
ಮುಸುಕಿದೆ, ಜೊತೆಗೆ ಹೊಲಿಗೆ ಹಾಕಿದ ಬಾಯಿ,
ಮಾತಾಡುತ್ತಿಲ್ಲ
ಆಡದ ಮಾತುಗಳು ಎಂದೂ ಹುಸಿಯಾಗುವುದಿಲ್ಲ.
ಆಗಾಗ ಚೀಲವನ್ನು ತಾಕುವ ಬೆರಳುಗಳ ಸ್ಪರ್ಶಕ್ಕೆ
ಎದೆಯಲ್ಲಿ ಚಿಟ್ಟೆ ರೆಕ್ಕೆ ಬಡಿಯುತ್ತದೆ
ನೆನಪು ರೆಕ್ಕೆ ಬಿಚ್ಚುತ್ತದೆ
ಕವಡೆಗಳೆಲ್ಲಾ ಒಮ್ಮೆಗೇ ನೆಲಕ್ಕೆ ಬಿದ್ದಂತೆ.
ಈ ಚೀಲದಿಂದಲೂ ನೆನಪು ಉಕ್ಕುತ್ತವೆ,
ಒಂದೊಂದಾಗಿ ನನ್ನ ಕೈಗಡಿಯಾರ
ಕೊರಳ ಸರ, ಹಳೆಯ ಕೊಂಡಿ ಕಳಚಿಕೊಂಡ ಒಂಟಿ ಗೆಜ್ಜೆ,
ಒದ್ದೆ ಒದ್ದೆ ಟವಲ್ಲು ಜಾರಿದ್ದವು
ಹೀಗೆ ಒಮ್ಮೆ ಇದರಿಂದಲೇ
ಎದುರಿಗೆ ಕೂತಿದೆ ಈಗ
ಸುಭಗನಂತೆ ನೆಟ್ಟಗೆ ದಿಟ್ಟಿ ನೆಟ್ಟು
ಅಮ್ಮ ಕೊಟ್ಟ ಬೇಡದ ತಿಂಡಿಯನ್ನು
ಹೂಕುಂಡದಲ್ಲಿ ತುರುಕಿ, ನೀರು ಕುಡಿದು
ತೇಗುವ ಪೋರನಂತೆ.
ಮುಟ್ಟುವಷ್ಟು ಸಮೀಪದಲಿ
ಮುಟ್ಟಲಾಗದಷ್ಟು ದೂರದಲಿ
ನೋಡುತ್ತೇನೆ, ತಡೆಯುತ್ತೇನೆ
ತಡೆತಡೆದು ಕೇಳುತ್ತೇನೆ,
ಹಿಡಿದು ಕಟ್ಟಬೇಕಿಲ್ಲ ನಿನ್ಮನ್ನು ನಾನು ಜಂಗಮನೆ,
ನನಗೆ ನನ್ನ ಕಟ್ಟುಗಳನ್ನು ಕಳಚಿಕೊಳ್ಳಬೇಕಿದೆ
ಎದುರಲ್ಲಿ ಚೀಲ, ಕದಲದ ನಾನು
ಕುಳಿತೇ ಇದ್ದೇವೆ ಇಬ್ಬರೂ
ಒಬ್ಬರು ಇನ್ನೊಬ್ಬರ ಕಣ್ಣಲ್ಲಿರುವಂತೆ
ಇಬ್ಬನಿ ಎದುರಲ್ಲಿ ತಡೆದು ನಿಂತ ಕೈ ಬೆರಳುಗಳಂತೆ

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)