ಉದ್ಯೋಗಸ್ಥ ಮಹಿಳೆಯ ಅಪರಾಧಿ ಪ್ರಜ್ಞೆಯು ಸಹ ಗಂಡಾಳಿಕೆಯ ಸಮಾಜವು ನಿರ್ಮಿಸಿದ್ದೇ ಆಗಿರುತ್ತೆ. ಸ್ತ್ರೀವಾದದ ಮಾತೃಚಿಂತಕಿಯರಲ್ಲೊಬ್ಬರಾದ ವರ್ಜೀನಿಯಾ ವೂಲ್ಫ್ ಹೇಳುವ ಗೃಹದೇವತೆಯ ಬಿಂಬ ನೆನಪಾಗುತ್ತೆ. `ಮನೆಕೆಲಸ, ಮನೆವಾಳ್ತೆ ಎಂದರೆ ಅದು ಹೆಣ್ಣಿನ ಜವಾಬ್ದಾರಿ ಮಾತ್ರ’ ಎಂದು ತಿಳಿದಿದ್ದ ಪರಿಸರದಲ್ಲಿ ಬೆಳೆದ ಹೆಂಗಸರಲ್ಲಿ, `ಮನೆಕೆಲಸವನ್ನು ಸರಿಯಾಗಿ ಮಾಡದಿರುವ ಬಗ್ಗೆ’ ಒಂದು ಅಪರಾಧಿ ಪ್ರಜ್ಞೆ ಇರುತ್ತದೆ. ಅವರ ಸುಪ್ತ ಮನಸ್ಸಿನಲ್ಲಿ ಅದು ಸೇರಿ ಹೋಗಿರುತ್ತದೇನೋ! ನನ್ನ ಪೀಳಿಗೆಯ ಕೆಲವು ಮಹಿಳೆಯರಲ್ಲಿ ಅದು ಇರುವುದನ್ನು ನಾನು ಗಮನಿಸಿದ್ದೇನೆ, ಅದನ್ನು ಕಳಕೊಂಡವರನ್ನೂ ನೋಡಿದ್ದೇನೆ.
ಉದ್ಯೋಗಸ್ಥ ಮಹಿಳೆಯರು ಮನೆ-ಉದ್ಯೋಗ ಸಂಭಾಳಿಸುವುದರ ಕುರಿತು ಡಾ. ಎಲ್. ಜಿ. ಮೀರಾ ಬರಹ
“ಅಮ್ಮಾ ಹಾಗೇ ಬರ್ತಾ ಮೆಂತ್ಯಸೊಪ್ಪು ತನ್ನಿ, ಪರೋಟ ಮಾಡಕ್ಕೆ ಬೇಕು” ….. ಹೊಂಡಾ ಆಕ್ಟಿವಾ ಚಾಲೂ ಮಾಡುತ್ತಿದ್ದ ನನಗೆ ಕೂಗಿ ಹೇಳ್ತಾರೆ ಯಲ್ಲಮ್ಮ. ನಮ್ಮ ಮನೆಯಲ್ಲಿ ಮೂವತ್ತು ವರ್ಷದಿಂದ ಮನೆವಾಳ್ತೆ ನಿರ್ವಹಣೆಗೆ ಸಹಾಯ ಮಾಡುವ ಇವರು ನನ್ನ ಜೀವನದ ಬಹು ಮುಖ್ಯ ಭಾಗ. ಅಂದ ಹಾಗೆ ನಾನು, ಒಬ್ಬ ಐವತ್ತೆರಡು ವರ್ಷ ವಯಸ್ಸಿನ, ಬೆಂಗಳೂರು ನಿವಾಸಿಯಾದ ಕಾಲೇಜು ಅಧ್ಯಾಪಕಿ. ಬರವಣಿಗೆ-ಸಂಗೀತ-ಭರತನಾಟ್ಯಗಳನ್ನು ಪ್ರವೃತ್ತಿಯಾಗಿರಿಸಿಕೊಂಡ ವ್ಯಕ್ತಿ. ಚಿಕ್ಕದಾಗಿ ಹೇಳಬೇಕೆಂದರೆ ಒಬ್ಬ ಉದ್ಯೋಗಸ್ಥ ಮಹಿಳೆ. ಗೃಹಿಣಿಗೆ ವೈದೃಶ್ಯವಾಗಿ ಉದ್ಯೋಗಿನಿ, ಉದ್ಯೋಗಸ್ಥ ಮಹಿಳೆ ಎಂಬ ಪದವನ್ನು ಬಳಸಿದರೂ ಸಾಮಾನ್ಯವಾಗಿ ಎಲ್ಲ ಉದ್ಯೋಗಿನಿಯರೂ ಅರೆಕಾಲಿಕ ಗೃಹಿಣಿಯರೇ ಅಲ್ಲವೇ.
ಬೆಳಿಗ್ಗೆ ಅಥವಾ ಸಂಜೆ, ರಜಾ ದಿನಗಳಲ್ಲಿ ಮಧ್ಯಾಹ್ನವೂ …. ಹೀಗೆ ನಾನು ಸಾಮಾನು ತರುವ ಚೀಲವನ್ನು ನನ್ನ ಸ್ಕೂಟರಮ್ಮನ (ಮೀರಮ್ಮನಾದ ನಾನು ಓಡಿಸುವುದರಿಂದ ಈ ದ್ವಿಚಕ್ರಿಯನ್ನು ಸ್ಕೂಟರಮ್ಮ ಅಂದೆ!) ಕೊರಳ ಕುಣಿಕೆಗೆ ಸಿಕ್ಕಿಸಿ ಹಾಲು, ತರಕಾರಿ, ದಿನಸಿ ಸಾಮಾನು ತರುವುದು, `ಅದು ತನ್ನಿ ಅಮ್ಮ, ಇದು ಬೇಕು ಅಮ್ಮ’ ಎಂದು ಯಲ್ಲಮ್ಮ ಹೇಳುವುದು ನನ್ನ ದಿನಚರಿಯ ಭಾಗ.
ಗಾಡಿ ಓಡಿಸುತ್ತಾ ನನ್ನ ಅಮ್ಮ, ಅಜ್ಜಿಯರ ಕಾಲಕ್ಕೂ ಈ ಕಾಲಕ್ಕೂ ಹೆಂಗಸರ ಅದೂ ಉದ್ಯೋಗಸ್ಥ ಮಹಿಳೆಯರ ಜೀವನಶೈಲಿಯಲ್ಲಿ ಎಷ್ಟು ವ್ಯತ್ಯಾಸ ಆಯ್ತಲ್ಲ ಎಂದು ನಾನು ಯೋಚಿಸುತ್ತೇನೆ. ನಮ್ಮ ಅಜ್ಜಿ, ತಾಯಂದಿರ ಕಾಲದಲ್ಲಿ ಮನೆ ಸಾಮಾನು ತರುವುದು, `ತಂದು ಹಾಕೋದು’, ಬ್ಯಾಂಕು-ಪೋಸ್ಟಾಫೀಸು ಕೆಲಸ ಎಂಬಂಥವು ಗಂಡಸರ ಕೆಲಸಗಳು ಎಂಬ ವಿಭಾಗದಡಿಯಲ್ಲಿ ಬರುತ್ತಿದ್ದವು. ಅಂದರೆ ಈಗ ನಾನು ಸಾಂಪ್ರದಾಯಿಕವಾಗಿ ಗಂಡಸರು ಮಾಡುವ ಕೆಲಸವನ್ನು ಮನೆಗಾಗಿ ಮಾಡುತ್ತಿದ್ದೇನೆ, ಮತ್ತು ಸಾಂಪ್ರದಾಯಿಕವಾಗಿ ಹೆಂಡತಿಯರು ಮಾಡುತ್ತಿದ್ದ ಕೆಲಸಗಳನ್ನ ಇವತ್ತು ಗೃಹಸಹಾಯಕಿಯರು ಮಾಡುತ್ತಿದ್ದಾರೆ. “ನಂಗೂ ಒಂದು ಹೆಂಡ್ತಿ ಇರಬೇಕಿತ್ತು” ಎಂದು ಅರ್ಧ ಗಂಭೀರವಾಗಿ ಮತ್ತು ಅರ್ಧ ತಮಾಷೆಯಾಗಿ ಹೇಳುತ್ತಿದ್ದ ಒಬ್ಬ ಹಿರಿಯ ಮಹಿಳಾ ಸಹೋದ್ಯೋಗಿ ನೆನಪಾಗುತ್ತಾರೆ ನನಗೆ. ನಾನು ಹೊಸದಾಗಿ ವೃತ್ತಿಗೆ ಸೇರಿದ್ದ ಕಾಲದ ಅಂದರೆ ಸುಮಾರು ಇಪ್ಪತ್ತೇಳು ವರ್ಷಗಳ ಹಿಂದಿನ ಮಾತು ಅದು. ಈಗಿನಂತೆ ಸ್ವಿಗ್ಗಿ, ಝೊಮ್ಯಾಟೊಗಳು, ಮತ್ತು ನಮ್ಮ ಅಂಗೈ ಅರಗಿಣಿಯಾಗಿಬಿಟ್ಟಿರುವ ಮೊಬೈಲುಗಳು ಆಗ ಇರಲಿಲ್ಲ.
ಹಾಂ, ಅಂದ ಹಾಗೆ ಯಲ್ಲಮ್ಮ ಇಲ್ಲದಿದ್ದ ದಿನ ಮನೆಕೆಲಸ ಮುಗಿಸಿ ನಾನು ಸರಿಯಾದ ಹೊತ್ತಿಗೆ ಕಾಲೇಜಿಗೆ ಹೊರಡಲು ಪಡುವ ಪಾಡು ದೇವರಿಗೇ ಪ್ರೀತಿ. ಬಾಗಿಲಿಗೆ ನೀರು ಹಾಕಿ, ಮನೆ ಗುಡಿಸಿ, ಪಾತ್ರೆ ತೊಳೆದಿಟ್ಟು, ಹಾಲು ತಂದು, ಬೆಳಗಿನ ಕಾಫಿ-ತಿಂಡಿ ವ್ಯವಸ್ಥೆ ಮಾಡಿ, ಮಧ್ಯಾಹ್ನದ ಅಡಿಗೆ, ಜೊತೆಗೆ ನನ್ನ ಬುತ್ತಿ, ಸ್ನಾನ, ದೇವರ ದೀಪ ….. ಇವೆಲ್ಲ ಮುಗಿಸಿ ತಿಂಡಿ ತಿಂದ ಶಾಸ್ತ್ರ ಮಾಡಿಯೋ ಅಥವಾ ಅದನ್ನೂ ಡಬ್ಬಿಗೆ ಹಾಕಿಕೊಂಡೋ ಹೊರಡುವಷ್ಟರಲ್ಲಿ ಹೃದಯ ಬಾಯಿಗೆ ಬಂದಂತಾಗಿರುತ್ತೆ. ಸಾಮಾನ್ಯವಾಗಿ ಬೆಳಿಗ್ಗೆ ಮೂರೂಮುಕ್ಕಾಲು ಗಂಟೆಗೆ ಎದ್ದು ಆರೂಕಾಲವರೆಗೆ ಒಂದಿಷ್ಟು ಓದು-ಬರವಣಿಗೆ ಮಾಡುವುದು ನನ್ನ ಅಭ್ಯಾಸ. ಯಲ್ಲಮ್ಮ ಬರದಿದ್ದ ದಿನಗಳಲ್ಲಿ ಬೆಳಿಗ್ಗೆ ಇದೇ ಹೊತ್ತಿಗೆ ಎದ್ದರೂ ಓದು ಬರವಣಿಗೆ ತೀರಾ ಕಡಿಮೆ ಆಗುತ್ತೆ.
ಒಂದೆರಡು ದಿನ ಯಲ್ಲಮ್ಮ ಇಲ್ಲದಿದ್ದರೆ ಅಂತಹ ಹಿಂಸೆ ಆಗುವುದಿಲ್ಲ. ಸಂಜೆ ನಾಟ್ಯ ತರಗತಿ ಇದ್ದು ಅಡಿಗೆ ಮಾಡಲಾಗದಿದ್ದರೆ ಜೋಳದ ರೊಟ್ಟಿಯೋ, ಕೇರಳದ ಪರೋಟವೋ ಏನೋ ಒಂದು ತಂದು ರಾತ್ರಿ ಊಟಕ್ಕೆ ಒಂದು ಪಲ್ಯವೋ, ಗೊಜ್ಜೋ ಮಾಡಿ ಜೈ ಅನ್ನಿಸಿಬಿಡುತ್ತೇನೆ (ನಗರ ಜೀವನದಲ್ಲಿ ಇದೆಲ್ಲ ಸಿಗುತ್ತಲ್ಲ ಅಂತ ಖಂಡಿತ ಸಮಾಧಾನ ಪಡಬೇಕು ನಮ್ಮಂತಹ ಉದ್ಯೋಗಿನಿಯರು). ಆದರೆ ನನ್ನ ಗೃಹಸಹಾಯಕಿಯೇನಾದರೂ ಐದು-ಆರು-ಏಳು ದಿನ ರಜೆ ತೆಗೆದುಕೊಂಡುಬಿಟ್ಟರೆ `ಕಾಲೇಜು-ಮನೆ-ನಾಟ್ಯ ತರಗತಿ-ಬರವಣಿಗೆ- ಸಮಾರಂಭಗಳು-ಕಾರ್ಯಕ್ರಮಗಳು’ ಎಂಬ ಚಕ್ರದಲ್ಲಿ ಸಿಕ್ಕಿಹಾಕಿಕೊಂಡು ಒರಳಿನಲ್ಲಿನ ದೋಸೆಹಿಟ್ಟಿನಂತೆ ನುಗ್ಗುನುರಿಯಾಗಿರುತ್ತೇನೆ. ಒತ್ತಡ ತೆಗೆದುಕೊಂಡು ತೆಗೆದುಕೊಂಡು ದೇಹ ಮನಸ್ಸುಗಳು ದಣಿದು ಒಂದಕ್ಕೊಂದು ಸಹಕರಿಸಲು ಒಪ್ಪುವುದಿಲ್ಲ. ಸಂಜೆಯಾದರೆ ಸೊಪ್ಪಾಗಿಬಿಡುವ ಜೀವ ಬಳಲಿ ಬೆಂಡಾಗಿರುತ್ತದೆ. `ನೀನು ಸರ್ವಶಕ್ತೆ ಅಲ್ಲಮ್ಮ’ ಎಂದು ಗಾಳಿ ಹೇಳುತ್ತಿರುವಂತೆ ಭಾಸವಾಗುತ್ತೆ.
“ನಮ್ಮನೆಯಲ್ಲಿ ಎಲ್ಲ ಕೆಲಸ ನಾನೇ ಮಾಡೋದಪ್ಪ, ಕೆಲಸದವರು ಮಾಡೋದು ನನಗೆ ಇಷ್ಟ ಆಗಲ್ಲ, ಮತ್ತೆ ಅವರ ಸಮಯ ನಮ್ಮ ಸಮಯ ಹೊಂದಾಣಿಕೆ ಆಗಲ್ಲ” ಎಂದು ಹೇಳುವ ಗೃಹಿಣಿಯರನ್ನು ಮತ್ತು ಉದ್ಯೋಗಸ್ಥ ಮಹಿಳೆಯರನ್ನು ನಾನು ನೋಡಿದ್ದೇನೆ. ಹಾಗೆ ಹೇಳುವಾಗ ಅವರ ದನಿಯಲ್ಲಿ ಹೆಮ್ಮೆಯ ಪಸೆ ಕೂಡ ಕಾಣುತ್ತದೆ. `ಅಯ್ಯೋ, ಮನೇಲಿರೋ ಹೆಂಗಸರ ಹಾಗೆ ನಮಗೆ ಮನೇನ, ಮಕ್ಳನ್ನ ಎಲ್ಲಿ ನೋಡಿಕೊಳ್ಳಕ್ಕಾಗುತ್ತೆ ಹೇಳಿ!’ ಎಂದು ಬೇಸರಿಸುವ ಉದ್ಯೋಗಸ್ಥ ಮಹಿಳೆಯರನ್ನೂ ನೋಡುತ್ತೇನೆ ನಾನು. ಉದ್ಯೋಗಸ್ಥ ಮಹಿಳೆಯ ಅಪರಾಧಿ ಪ್ರಜ್ಞೆಯು ಸಹ ಗಂಡಾಳಿಕೆಯ ಸಮಾಜವು ನಿರ್ಮಿಸಿದ್ದೇ ಆಗಿರುತ್ತೆ. ಸ್ತ್ರೀವಾದದ ಮಾತೃಚಿಂತಕಿಯರಲ್ಲೊಬ್ಬರಾದ ವರ್ಜೀನಿಯಾ ವೂಲ್ಫ್ ಹೇಳುವ ಗೃಹದೇವತೆಯ ಬಿಂಬ ನೆನಪಾಗುತ್ತೆ. `ಮನೆಕೆಲಸ, ಮನೆವಾಳ್ತೆ ಎಂದರೆ ಅದು ಹೆಣ್ಣಿನ ಜವಾಬ್ದಾರಿ ಮಾತ್ರ’ ಎಂದು ತಿಳಿದಿದ್ದ ಪರಿಸರದಲ್ಲಿ ಬೆಳೆದ ಹೆಂಗಸರಲ್ಲಿ, `ಮನೆಕೆಲಸವನ್ನು ಸರಿಯಾಗಿ ಮಾಡದಿರುವ ಬಗ್ಗೆ’ ಒಂದು ಅಪರಾಧಿ ಪ್ರಜ್ಞೆ ಇರುತ್ತದೆ. ಅವರ ಸುಪ್ತ ಮನಸ್ಸಿನಲ್ಲಿ ಅದು ಸೇರಿ ಹೋಗಿರುತ್ತದೇನೋ! ನನ್ನ ಪೀಳಿಗೆಯ ಕೆಲವು ಮಹಿಳೆಯರಲ್ಲಿ ಅದು ಇರುವುದನ್ನು ನಾನು ಗಮನಿಸಿದ್ದೇನೆ, ಅದನ್ನು ಕಳಕೊಂಡವರನ್ನೂ ನೋಡಿದ್ದೇನೆ. ಅಡಿಗೆಯವರನ್ನು, ಕೆಲಸದವರನ್ನು ಇಟ್ಟುಕೊಂಡು ಮನೆ ನಿರ್ವಹಿಸುವ ಕೆಲವು ಶ್ರೀಮಂತ ಮಹಿಳಾ ಸಹೋದ್ಯೋಗಿಗಳು ಈ `ಅಪರಾಧಿ ಪ್ರಜ್ಞೆ’ಯ ಸೋಂಕಿಲ್ಲದೆ ಆರಾಮವಾಗಿರುವುದನ್ನು ಕೂಡ ಗಮನಿಸಿದ್ದೇನೆ.
ಈಗ ನಾನು ಸಾಂಪ್ರದಾಯಿಕವಾಗಿ ಗಂಡಸರು ಮಾಡುವ ಕೆಲಸವನ್ನು ಮನೆಗಾಗಿ ಮಾಡುತ್ತಿದ್ದೇನೆ, ಮತ್ತು ಸಾಂಪ್ರದಾಯಿಕವಾಗಿ ಹೆಂಡತಿಯರು ಮಾಡುತ್ತಿದ್ದ ಕೆಲಸಗಳನ್ನ ಇವತ್ತು ಗೃಹಸಹಾಯಕಿಯರು ಮಾಡುತ್ತಿದ್ದಾರೆ. “ನಂಗೂ ಒಂದು ಹೆಂಡ್ತಿ ಇರಬೇಕಿತ್ತು” ಎಂದು ಅರ್ಧ ಗಂಭೀರವಾಗಿ ಮತ್ತು ಅರ್ಧ ತಮಾಷೆಯಾಗಿ ಹೇಳುತ್ತಿದ್ದ ಒಬ್ಬ ಹಿರಿಯ ಮಹಿಳಾ ಸಹೋದ್ಯೋಗಿ ನೆನಪಾಗುತ್ತಾರೆ ನನಗೆ.
ಮನೆಕೆಲಸಕ್ಕೆ ಹೆಣ್ಣಿನ ಅಥವಾ ಅದನ್ನು ಮಾಡುವ ಯಾವುದೇ ವ್ಯಕ್ತಿಯ ಇಡೀ ದಿನವನ್ನು ವ್ಯಾಪಿಸುವ ಗುಣ ಇರುತ್ತದೆ. ಜೊತೆಗೆ ಇಂದು ಮಾಡಿದ ಕೆಲಸ ನಾಳೆಗೆ ಸೇರ್ಪಡೆಯಾಗಿ ಬೆಳೆದು ದೊಡ್ಡದಾಗುವುದಿಲ್ಲ, ದೊಡ್ಡ ಫಲಿತಾಂಶವನ್ನು ಕೊಡುವುದಿಲ್ಲ. ಇಂದಿನದು ಇಂದಿಗೆ ಲಯವಾಗುತ್ತದೆ. ಇವತ್ತು ನೀವು ಎಷ್ಟು ಪಾತ್ರೆ ತೊಳೆದರೂ, ಮನೆ ಗುಡಿಸಿದರೂ, ಬಟ್ಟೆ ಒಗೆದರೂ ನಾಳೆಗೆ ತೊಳೆಯಬೇಕಾದ ಪಾತ್ರೆ, ಗುಡಿಸಬೇಕಾದ ನೆಲ, ಒಗೆಯಬೇಕಾದ ಬಟ್ಟೆ ನಿಮಗಾಗಿ ಕಾದೇ ಇರುತ್ತವೆ. `ಇಟ್ ಈಸ್ ನಾಟ್ ಕ್ಯುಮುಲೇಟಿವ್ ಯು ಸೀʼ ಅನ್ನುತ್ತಾರೆ ನನ್ನ ಇಂಗ್ಲಿಷ್ ಸಹೋದ್ಯೋಗಿಯೊಬ್ಬರು. `ಗೃಹಿಣಿಯ ದುಡಿಮೆಯ ಅದೃಶ್ಯತೆ’ಯ ಬಗ್ಗೆ ಸ್ತ್ರೀವಾದಿ ಅರ್ಥಶಾಸ್ತ್ರಜ್ಞರು ಅನೇಕ ಅಧ್ಯಯನಗಳನ್ನು ಮಾಡಿದ್ದಾರೆ. ಮನೆಕೆಲಸ ಮಾಡುವ ಗೃಹಿಣಿಗೆ ಕೊಡಬೇಕಾದ `ಸಂಬಳ’ದ ಬಗ್ಗೆ ಅನೇಕ ಚರ್ಚೆಗಳಾಗಿವೆ.
ಅಡಿಗೆ ಮನೆಯ ಸಹವಾಸವೇ ಬೇಡ ಅನ್ನುವ ಹುಡುಗಿಯರನ್ನು ನಾವು ಇಂದು ನೋಡುತ್ತೇವೆ. `ಅಯ್ಯೋ, ಯಾಕೆ ಒದ್ದಾಡಬೇಕು, ಆರ್ಡರ್ ಮಾಡಿದರಾಯಿತಲ್ಲ ಆಂಟಿʼ ಎಂದು ತಮ್ಮ ಕತ್ತರಿಸಿದ ಕೂದಲನ್ನು ಹಿಂದೆ ತಳ್ಳುತ್ತಾ ಮುಗುಳ್ನಗುವ ಹುಡುಗಿಯರನ್ನು ನೋಡುವಾಗ `ಓಹ್ ಇವರಲ್ಲಿ `ಗೃಹದೇವತೆಯ ಬಿಂಬ’ದ ಅಪರಾಧಿ ಪ್ರಜ್ಞೆಯ ಕಾಟ ಇಲ್ಲವಲ್ಲ’ ಅಂದುಕೊಳ್ಳುತ್ತೇನೆ ನಾನು. ಇಂತಹ ಹುಡುಗಿಯರು, `ಹುಡುಗ ಹುಡುಗಿ ಅಂತ ಭೇದ ಯಾಕೆ ಮಾಡಬೇಕು? ಇಬ್ಬರೂ ಒಂದೇ ತಾನೇ’ ಎಂಬ ದೃಷ್ಟಿಕೋನ ಹೊಂದಿದ ನನ್ನಂತಹ, ಅಂದರೆ ನನ್ನ ಪೀಳಿಗೆಯ ಅಮ್ಮಂದಿರು ಬೆಳೆಸಿದ ಹೆಣ್ಣುಮಕ್ಕಳಲ್ಲವೇ. ಇನ್ನೇನು ಹೇಳಿಯಾರು ಅವರು?
ಸದಾ ಕಾಲಲ್ಲಿ ಚಕ್ರ ಕಟ್ಟಿಕೊಂಡು ಓಡುವ ನನ್ನಂಥವರಿಗೆ ಮನೆಕೆಲಸದ ಜವಾಬ್ದಾರಿ ವಹಿಸಿಕೊಂಡು ನೆಮ್ಮದಿಯಿಂದ ಉಸಿರಾಡುವ ಅವಕಾಶವನ್ನು ಯಲ್ಲಮ್ಮನಂಥವರು ಕೊಟ್ಟರೆ, ಅವರ ಆರ್ಥಿಕ ಸಂಕಷ್ಟಗಳಿಗೆ ಒಂದಿಷ್ಟು ಆಸರೆಯಾಗುವ ಅವಕಾಶವನ್ನು ಸಾರ್ವಜನಿಕ ವಲಯದಲ್ಲಿ ದುಡಿದು ಸಂಬಳ ಪಡೆಯುವ ಉದ್ಯೋಗಿನಿಯರಿಗೆ ಅಂದರೆ ನನ್ನಂಥವರಿಗೆ ಈ ಬದುಕು ಕೊಟ್ಟಿದೆ. ಹೆಣ್ಣು ಹೆಣ್ಣು ಬಂಧಗಳಿವು. ಉದ್ಯೋಗಿನಿಯರ ಪರಸ್ಪರ ಸಹಕಾರ – ಇದು ಇನ್ನೊಂದು ರೀತಿಯ ಸ್ತ್ರೀ ಶಕ್ತಿಯಲ್ಲವೇ! ಸಮಾಜವನ್ನು ಸ್ವಸ್ಥವಾಗಿರುವಂತೆ ಕಾಪಾಡುತ್ತಿರುವ ಬಂಧಗಳಿವು. ಒಟ್ಟುಕುಟುಂಬದ ಕಲ್ಪನೆ ಇಲ್ಲವಾಗುತ್ತಿರುವ/ಇಲ್ಲವಾಗಿರುವ ಈ ಕಾಲದಲ್ಲಿ ಚಿಕ್ಕಮಕ್ಕಳನ್ನು ನೋಡಿಕೊಳ್ಳುವ `ಡೇಕೇರ್(ದಿನ ಕಾಳಜಿ ಅನ್ನಬಹುದೇ) ಕೇಂದ್ರಗಳ ಹೆಂಗಸರು ಮತ್ತು ಸಾರ್ವಜನಿಕ ವಲಯದ ಉದ್ಯೋಗಿನಿಯರ ಪರಸ್ಪರ ಸಹಕಾರ, ಬಂಧ ಇಂಥದ್ದೇ ಅಲ್ಲವೇ?
ಹೌದು, ಈಗ ಅನ್ನಿಸುತ್ತಿದೆ, ನಾನು ಸರ್ವಶಕ್ತ ಮಹಿಳೆ (ಸೂಪರ್ ವುಮನ್) ಅಲ್ಲ, ನಿಜ ಮಹಿಳೆ (ರಿಯಲ್ ವುಮನ್). ಬಹುಶಃ ನಾನು ಸೂಪರ್ ವುಮನ್ ಆಗಬೇಕಾಗಿಯೂ ಇಲ್ಲ. ಸರ್ವಶಕ್ತ ಮಹಿಳೆ ಅನ್ನಿಸಿಕೊಂಡು ಎರಡೂ ಕಡೆಯಿಂದ ಸುಟ್ಟುಕೊಳ್ಳುವ ಮೇಣದ ಬತ್ತಿ ಆಗಬೇಕೇ ನಾನು, ನನ್ನಂತಹ ಮಹಿಳೆಯರು? ತನ್ನನ್ನು ತಾನು ಸೂಪರ್ ತಾಯಿ ಎಂದು ಭಾವಿಸಿ ಮನೆ ಮತ್ತು ಉದ್ಯೋಗಸ್ಥಳದ ಕೆಲಸವನ್ನು ಯಾರದೇ ಸಹಾಯ ತೆಗೆದುಕೊಳ್ಳದೆ ಮಾಡಿ, ಪ್ರತಿಯೊಂದು ತಲೆನೋವು, ಜ್ವರಕ್ಕೂ ದಿನಾ ಮಾತ್ರೆ ನುಂಗಿ ನುಂಗಿ, ತಾನು ಅಕಾಲದಲ್ಲಿ ಮರಣಿಸಿದಾಗ ಇಡೀ ದೇಹ ಆಸ್ಪಿರಿನ್ ಮಾತ್ರೆಯಿಂದ ಮಾಡಿದ ವಿಗ್ರಹವಾಗಿಬಿಟ್ಟಿದ್ದ ಮಹಿಳೆಯೊಬ್ಬಳ ಕಥೆಯೊಂದನ್ನು `ಮಯೂರʼ ಮಾಸಪತ್ರಿಕೆಯಲ್ಲಿ ಓದಿದ್ದೆ. ತೆಲುಗಿನಿಂದ ಕನ್ನಡಕ್ಕೆ ಅನುವಾದವಾಗಿದ್ದ ಕಥೆ ಅದು. ಆ ಕಥೆಯನ್ನು ನೆನೆದರೆ ಈಗಲೂ ಮೈ ನಡುಗುತ್ತದೆ.
“ಅಮ್ಮಾ ……. ಜೊತೆಗೆ….. ಸೌತೇಕಾಯಿ ತರ್ಬೇಕು..” ಎಂದು ಕೂಗಿ ಹೇಳಿದ ಯಲ್ಲಮ್ಮನಿಗೆ ಸ್ಕೂಟರ್ ಏರಿ ಹೊರಟುಬಿಟ್ಟಿರುವ ನಾನು “ಹಾಂ.. ಸರಿ… ತರ್ತೀನಿ ಯಲ್ಲಮ್ಮ…..” ಎಂದು ಕೂಗಿ ಹೇಳುತ್ತಿದ್ದೇನೆ. ನಿಜಮಹಿಳೆಯ ಬದುಕಿನ ಬಂಡಿ ಸಾಗುವ ರೀತಿಯಿದು ನೋಡಿ. ಇದರಲ್ಲಿ ಒಬ್ಬ ದುಡಿವ ಮಹಿಳೆಯನ್ನು ಬೆಂಬಲಿಸಲು ಅನೇಕ ದುಡಿವ ಮಹಿಳೆಯರ ಕೈಗಳಿವೆ. ನಾನು ಗಾಡಿ ಓಡಿಸುತ್ತಿದ್ದರೆ ದು.ಸರಸ್ವತಿಯವರ `ಬಚ್ಚೀಸು’ ಕಥೆಯಲ್ಲಿ ಬರುವ ಆಂಜಿನಮ್ಮನಂತಹ ಒಬ್ಬ ಮಹಿಳೆ ರಸ್ತೆಯನ್ನು ಕಸವಿಲ್ಲದಂತೆ ಬೆನ್ನುಬಗ್ಗಿಸಿ ಗುಡಿಸುತ್ತಿದ್ದಾಳೆ. ಇವಳು, ಯಲ್ಲಮ್ಮ, ನಾನು, ಸೌತೆಕಾಯಿ ಮಾರುವವಳು, ನಾನುಟ್ಟ ಉಡುಪನ್ನು ಹೊಲಿದ ಮಹಿಳಾದರ್ಜಿ ಸೇರಿಯೇ ನಮ್ಮ ಅಂದರೆ ನಿಜಮಹಿಳೆಯರ ಲೋಕ ನಿರ್ಮಿತವಾಗಿದೆ. ಮನಸ್ಸು ಮೌನವಾಗಿ ನನ್ನ ಸಹ ಉದ್ಯೋಗಿನಿಯರಿಗೆ ಒಮ್ಮೆ ನಮಿಸುತ್ತದೆ.
ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
Very intriguing write-up Meera Ma’am. Sharing it with everyone I know. The solidarity you talk about has raised a generation of free-thinking women. Like a chain reaction, empathy has always led the way. Thanks for writing this.
ಬಹಳ ಚಂದದ ಬರಹ..
ನಾನು ಸಹ 60ರ ದಶಕದವಳು … ಉದ್ಯೋಗಸ್ಥ ಜೀವನದಲ್ಲಿ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದ ಕೆಲವು ಭಾವನೆಗಳನ್ನುಅಂದರೆ… ಮನೆ ಕೆಲಸ ಸರಿಯಾಗಿ ಮಾಡಿಲ್ಲವೇನೋ.. ಎಂಬ ಸುಪ್ತ ಪ್ರಜ್ಞೆಯಲ್ಲಿರುವ ಅಪರಾಧಿಭಾವನೆ ನನ್ನ ವೃತ್ತಿ ಜೀವನದ ಉದ್ದಕ್ಕೂ ಇತ್ತು ಅದನ್ನು ನೀವು ಹೇಳಿರುವುದು ಬಹಳ ಆಪ್ತವೆನಿಸಿತು
ಸೂಪರ್ ವಿಮೆನ್ ಆಗಬೇಕಿಲ್ಲ ಎಂಬ ಮಾತು ಮತ್ತು ಬಟ್ಟೆ ಪಾತ್ರೆ ಕೆಲಸಗಳು ಮಾಡಿದರೂ ಅದು ಆ ದಿನದ್ದು ಮಾತ್ರ… ಎಂಬ ಭಾವನೆಗಳು ಎಲ್ಲವೂ ನನ್ನ ಭಾವನೆಯನ್ನೇ ನಿಮ್ಮ ಮಾತುಗಳಲ್ಲಿ ತೆರೆದಿಟ್ಟಂತೆ…… ತುಂಬಾ ಖುಷಿಯಾಯಿತು ನಮ್ಮಂತೆ ಆಲೋಚಿಸುವವರನ್ನು ನೋಡಿದಂತಾಯಿತು….. ಧನ್ಯವಾದಗಳು
ಬರಹ ಮುಂದುವರೆಯಲಿ .
ನಮಸ್ಕಾರ