Advertisement
ಸಾಟಿಯಿಲ್ಲದ ಬ್ಯೂಟಿ ನಿನ್ನದು, ಭೂತಾನ್!: ಸುಕನ್ಯಾ ಕನಾರಳ್ಳಿ ಅಂಕಣ

ಸಾಟಿಯಿಲ್ಲದ ಬ್ಯೂಟಿ ನಿನ್ನದು, ಭೂತಾನ್!: ಸುಕನ್ಯಾ ಕನಾರಳ್ಳಿ ಅಂಕಣ

ಭೂತಾನಿಯ ಮಂದಿಯನ್ನು ನಮ್ಮ ಗೈಡ್ ತಂಡದ ಮೂಲಕ ಸಾರಂಶೀಕರಿಸಬಹುದು ಅಂತನ್ನಿಸುತ್ತದೆ. ನಿರಾಳ ಮುಖ; ಮೆದುಮಾತು; ಸ್ತೂಪ ಕಂಡಾಗೆಲ್ಲ ಮಣಮಣ ಎಂದು ಹೇಳಿಕೊಳ್ಳುವ ಪ್ರಾರ್ಥನೆ; ಅಪಾರವಾದ ರಾಜಪ್ರೇಮ; ನಮ್ಮ ಬ್ಯಾಗುಗಳನ್ನೆಲ್ಲ ಹೊತ್ತು ಸೂಕ್ಷ್ಮವಾಗಿ ಗಮನಿಸುತ್ತಲೇ ಹಿಂದೆಯಿಂದ ಬರುವ ಆದರೆ ಸ್ವಲ್ಪ ದಣಿವಾದರೂ ದುತ್ತನೆ ಎದುರಿಗೆ ಅವತರಿಸಿ, ‘ನೀರು ಬೇಕಾ? ತಿನ್ನಲು ಏನಾದರೂ ಬೇಕಾ?’ ಎಂದು ಕೇಳುವ ಕರುಣೆ ತುಂಬಿದ ಕಣ್ಣುಗಳು… ಇತ್ಯಾದಿ ವೃತ್ತಿಪರತೆಯನ್ನೂ ಮೀರಿದ ಜನಪ್ರೀತಿ ಅಂತನ್ನಿಸಿತ್ತು. ಹೇಳಿಕೇಳಿದ್ದೆಲ್ಲದಕ್ಕೂ, ‘ಓಕೆ ಲಾ…’ ಎಂದು ಹೇಳುವ ಲಲಲಾ ರೀತಿ ಭೂತಾನ್ ಬಿಟ್ಟರೂ ನಮ್ಮನ್ನು ಹಿಂಬಾಲಿಸಿತ್ತು.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎಂಟನೆಯ ಬರಹ

Bhutan: Yours Beautifully!

ಇದು ಪ್ರವಾಸಕಥನಗಳ ಕಾಲವಲ್ಲ….

ಕಾರಣಗಳು ಹಲವಾರಿರಬಹುದು. ಓದುವ ಪ್ರವೃತ್ತಿಯೇ ಕಮ್ಮಿಯಾಗುತ್ತಿರುವಾಗ, ಹೋಗಲಾರದ ಊರಿಗೆ ಇನ್ನೊಬ್ಬರ ಅನುಭವದ ಮೂಲಕವಾದರೂ ಹೋಗುವ ಇರಾದೆ ಮಂದಿಗೆ ಇಲ್ಲ. ಜೊತೆಗೆ ಗ್ಲೋಬೀಕರಣದ ದೆಸೆಯಿಂದ ಪ್ರಯಾಣವೆಂಬುದು ಕೈಗೆಟುಕುವಂತಾಗಿ, ‘ಹೋಗಲಾರದ ಊರು’ ಅಂತೇನೂ ಈಗ ಇಲ್ಲ. ಅಷ್ಟೂ ಬೇಕೆಂದರೆ ವರ್ಚುಯಲ್ ಟೂರುಗಳಿವೆಯಲ್ಲ? ಊರಿನ ಹೆಸರನ್ನು ಪಂಚಿಸಿ ಯೂಟ್ಯೂಬ್ ತಿರುಗಿಸಿ ಆರಾಮಕುರ್ಚಿಯಲ್ಲಿ ಒರಗಿಕೊಂಡರೆ ಆಯಿತು!

The real journey is only inwards!

ಹಾಗಿದ್ದರೆ ಭೂತಾನಿಗೆ ಹೋದದ್ದು ಯಾಕೆ? ಕಾರಣಗಳಿದಾವೆ. ಒಂದು, ಕಾಡುತಾವೆ ಬೆಟ್ಟಗಳು! ಇನ್ನೊಂದು, ಭೂತಾನ್ ಬೌದ್ಧೀಯ ಸತ್ವದಲ್ಲಿ ಮಿಂದೆದ್ದ ಸ್ಥಳದಂತೆ ನನಗೆ ಯಾವಾಗಲೂ ತೋರಿತ್ತು. ಅಲ್ಲದೆ, ಗೆಳತಿಯೊಬ್ಬಳು ಅದು ಎಷ್ಟು ಕ್ಲೀನಾಗಿದೆ! ಅಲ್ಲಿಯ ಮಂದಿ ಒಳಗಿನಿಂದ ಎಷ್ಟು ಖುಷಿಯಾಗಿ ಇರುವಂತೆ ಅನ್ನಿಸುತ್ತದೆ! ಅಲ್ಲಿಯ ರಾಜ ಎಷ್ಟು ಒಳ್ಳೆಯವನು! …ಇತ್ಯಾದಿ ಹೇಳಿದಾಗ ಹೋಗಿ ನೋಡುವ ಆಸೆ ಚಿಗುರಿತ್ತು.

ಅಲ್ಲಿಯ ರಾಜದಂಪತಿಗಳನ್ನು ತಂತಿಮೇಲೆ (online) ನೋಡಿದಾಗ ಮರುಳಾಗಿ ಹೋಗಿದ್ದೆ! ದಿನನಿತ್ಯ ಮಾಧ್ಯಮಗಳಲ್ಲಿ ನೋಡಬೇಕಾದ ಮುಖಗಳು ಕರುಣೆಯಿಂದ ಕೂಡಿದ ಸೌಂದರ್ಯವನ್ನು ಹೊಂದಿರಬೇಕು ಎಂದು ಯಾವತ್ತೂ ನಂಬಿದವಳು. ಕೋವಿಡ್ ಕಾಲದಲ್ಲಿ ನಾನಿದ್ದ ಕಿವಿನಾಡಿನ ಪ್ರಧಾನಿ ಜೆಸಿಂದಾ ಆರ್ಡನ್ ಪ್ರತಿದಿನ ಸಂಜೆ ಆಪ್ ಡೇಟ್ ಕೊಡುತ್ತಿದ್ದಾಗ ಹೀಗೇ ಮೈಮರೆಯುತ್ತಿದ್ದೆ. ಅದೆಂತಾ ಸುಟಿಯಾದ ಮಾತು! ಅದೆಂತಾ ದಕ್ಷತೆ!

ಇರಲಿ, ಬೆಟ್ಟಗುಡ್ಡಗಳು ಅತ್ತ ಚೈನಾ, ಇತ್ತ ಇಂಡಿಯಾ ಎಂಬ ಇಬ್ಬರು ದಢಿಯರಿಂದ ಭೂತಾನ್ ಎಂಬ ಬೌದ್ಧೀಯ ಆತ್ಮವನ್ನು ರಕ್ಷಿಸಿವೆ. ಆಕ್ರಮಣ ಸುಲಭವಲ್ಲ. ಅದೇ ಕಾರಣಕ್ಕೆ ಅದರೊಳಗಿನ ಬದುಕೂ ಸಹ ಸುಲಭವಲ್ಲ.

ನೆಲಬಂದಿ ಭೂತಾನಿಗೆ ಸಮುದ್ರಮಾರ್ಗವೇ ಇಲ್ಲದ ಕಾರಣ ವ್ಯಾಪಾರ ವಹಿವಾಟುಗಳು ದುಬಾರಿಯಾಗಿ ತಮ್ಮದೇ ಬದುಕುವ ಶೈಲಿಯನ್ನು ರೂಪಿಸಿಕೊಳ್ಳುವ ಅನಿವಾರ್ಯದಲ್ಲಿ ವಿಶಿಷ್ಟ ನಾಗರಿಕತೆಯೊಂದು ರೂಪು ತಳೆಯುವಂತಾಗಿದ್ದು ಒಂದು ಪ್ಲಸ್ ಪಾಯಿಂಟ್.

ಯಾವುದೇ ‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ’ ತನ್ನದೇ ಆದ ವಿಶಿಷ್ಟ ರೀತಿಯ ಕಲ್ಲುಮುಳ್ಳುಗಳಲ್ಲಿ ಸಿಕ್ಕಿಬೀಳುವುದು ಸಹಜವೇ. ಭೂತಾನ್ ಸಹ ಅದಕ್ಕೆ ಹೊರತಲ್ಲ. ಆದರೆ ಭೂತಾನಿಗೆ ಹೆಚ್ಚಿನ ಕಾಳಜಿ ಇರುವುದು ತನ್ನ ರಾಷ್ಟ್ರೀಯ ಅನನ್ಯತೆಯನ್ನು ಕಾಪಾಡಿಕೊಳ್ಳುವತ್ತ. ಅಭಿವೃದ್ಧಿಯ ನೆಪದಲ್ಲಿ  ತಲೆಕೆಟ್ಟ ಧಾವಂತ ಭೂತಾನೀಯರಿಗೆ ಬೇಡವೆನ್ನಿಸಿದೆ. ಲೌಕಿಕ ಮತ್ತು ಆಧ್ಯಾತ್ಮಿಕವನ್ನು ಬೆರೆಸಿದ ಶಾಂತಿಯುತ ಬದುಕು ಅವರ ಆಯ್ಕೆ.

1961 ರಲ್ಲಿ ನಮ್ಮ ಪ್ರಧಾನಿ ಜವಾಹರಲಾಲ್ ನೆಹರೂ ಭೂತಾನನ್ನು ತನ್ನ ಸ್ವಂತ ಹಿತಾಸಕ್ತಿಗೋಸ್ಕರವೇ ಚಿಪ್ಪಿನಿಂದ ಹೊರಬರಬೇಕೆಂದು ಮನವಿ ಮಾಡಿಕೊಂಡಿದ್ದರು. ಅಂದಿನಿಂದ ಭೂತಾನ್  ಅಂತಾರಾಷ್ಟ್ರೀಯ ಸಮುದಾಯವನ್ನು ಸೇರಿಕೊಳ್ಳುವ ಪ್ರಯತ್ನವನ್ನು ಮಾಡಿದೆ. ಜೊತೆಗೆ  ತನ್ನ ಆಧ್ಯಾತ್ಮಿಕ ಅನನ್ಯತೆಯನ್ನು ಕಾಪಾಡಿಕೊಳ್ಳುವ ಕಾಳಜಿಯನ್ನೂ ಉಳಿಸಿಕೊಂಡಿದೆ.

ಸಾಮಗ್ರಿಗಳ ಕೊಡು-ಕೊಳ್ಳುವ ಪದ್ಧತಿಯಿಂದ ಹಣಾಧಾರಿತ ಆಧುನಿಕ ಮಾರುಕಟ್ಟೆಗೆ ಪಲ್ಲಟಿಸಿದಾಗ ಬರುವ ಪೀಡೆಗಳು ಭೂತಾನನ್ನು ಸಹ ಕಾಡಿವೆ. ಕೆಲವೇ ಕಡೆ ದಟ್ಟವಾಗುತ್ತಿರುವ ಜನಸಂಖ್ಯೆ, ಮಠದ ಮಿತವಾದ ಬದುಕಿನ ಶೈಲಿಯಿಂದ ಆಧುನಿಕದ ದುರಾಸೆಗೆ ಹೊರಳಿಕೊಳ್ಳುತ್ತಿರುವ ಪೀಳಿಗೆ, ಹಳೆಯದರ ಬಗೆಗಿನ ಅತೃಪ್ತಿ, ಹೊಸದರ ಬಗೆಗಿನ ವ್ಯಾಮೋಹ, ಇತ್ಯಾದಿ ಅನಿಷ್ಟಗಳೆಲ್ಲವೂ ಅಲ್ಲಿ ಇವೆ.

ಆದರೆ ರಾಜಪ್ರೇಮ ಮಾತ್ರ ಭೂತಾನೀಯರನ್ನು  ಬಂಧಿಸಿರುವ ಸಾಮಾನ್ಯ ಎಳೆಯಂತೆ ತೋರುತ್ತದೆ. ಅದು ಕೇವಲ ಕುರುಡುಭಕ್ತಿ ಅಲ್ಲ. ಸಾಮಾನ್ಯ ಬದುಕನ್ನು ಆರಿಸಿಕೊಂಡಿರುವ ರಾಜಮನೆತನ, ಪಾರ್ಲಿಮೆಂಟಿಗೆ ಹತ್ತಿರವಿದ್ದು ಪ್ರತಿಯೊಂದನ್ನೂ ವಿವೇಚಿಸುತ್ತದೆ ಎಂಬ ಧೈರ್ಯ ಮತ್ತು ಆತ್ಮವಿಶ್ವಾಸ ಅವರ ಮಾತಿನಲ್ಲಿ ಹಲವು ಬಾರಿ ಸುಳಿದಿತ್ತು.

ಬೌದ್ಧಧರ್ಮ ಭೂತಾನನ್ನು  ಭಾರತದಿಂದ ಟಿಬೆಟ್ ಮೂಲಕ ಕ್ರಿಶ ಏಳನೆಯ ಶತಮಾನದಲ್ಲಿ ತಲುಪಿತ್ತು. ಬೋಧಿಸತ್ವನ ಮಹಾಯಾನ ಅಲ್ಲಿಯ ಪ್ರಭುತ್ವದ ಧರ್ಮವಾಗಿದೆ. ಅದಕ್ಕೆ ಮುಂಚೆ ಮಾಟ-ಮಂತ್ರಗಳದ್ದೇ  (ponism ಅಥವಾ ಧರ್ಮಹೀನತೆ) ರಾಜ್ಯ! ಅವೆರಡೂ ಶಕ್ತಿಗಳ ಮುಖಾಮುಖಿಯಲ್ಲಿ ಹಳೆಯದರ ಕೆಲವು ಅಂಶಗಳು ಉಳಿದುಕೊಂಡಿರುವುದು ಕಾಣಿಸುತ್ತದೆ. ಹಾಗೆಯೇ ಲಾಮಾಗಳ ಆರಾಧನೆಯೂ ಇದೆ.

ಧರ್ಮೀಯ, ಕೋಮುವಾದೀಯವಲ್ಲ!

ಟಿಬೆಟ್ಟಿನ ರಾಜ ಬೌದ್ಧಧರ್ಮಕ್ಕೆ ಬಹಿಷ್ಕಾರ ಹಾಕಿದಾಗ ಲಾಮಾಗಳ ಆರಾಧನೆಗೆ ತೀವ್ರ ಹೊಡೆತ ಬಿತ್ತು. ನೆಲೆ ತಪ್ಪಿದ ಬೌದ್ಧ ಭಿಕ್ಕುಗಳು ಆಶ್ರಯವನ್ನು ಅರಸುತ್ತಾ ಹೊರಟರು. ಪದ್ಮಸಂಭವ (ಗುರು ರಿಂಪೋಚೆ) ಎಂಬ ಹೆಸರಿನ ಭಿಕ್ಕು ಭೂತಾನ್ ತಲುಪಿ ಅಲ್ಲಿ ಪ್ರಚಲಿತವಿದ್ದ ಶಕ್ತಿಗಳೊಂದಿಗೆ ಹೋರಾಡಿ ನಡೆಸಿದ ಸಂಧಾನದಲ್ಲಿ ಹೊಮ್ಮಿದ್ದು ಭೂತಾನೀಯ ಬೌದ್ಧಧರ್ಮ. ಪದ್ಮಸಂಭವನನ್ನು ಎರಡನೆಯ ಬುದ್ಧನೆಂದು ಆರಾಧಿಸಲಾಗುತ್ತದೆ. ನಂತರದ ಲಾಮಾರು ಸಹ ಪೂಜ್ಯರೆಂಬ ಗೌರವಕ್ಕೆ ಪಾತ್ರರಾದವರು.

ಸಾಂಪ್ರದಾಯಿಕ ಬೌದ್ಧಧರ್ಮದಲ್ಲಿ ಆರ್ಥಿಕ ಸಮತಾವಾದ ಒಂದು ಮಹತ್ತರವಾದ ಅಂಶ. ಭಿಕ್ಕು ಮತ್ತು ಭಿಕ್ಕುಣಿಯರಿಗೆ ತಮ್ಮದೆಂದು ಹೇಳಿಕೊಳ್ಳಬಹುದಾದದ್ದು ಕೇವಲ ಅವರ ಭಿಕ್ಷಾಪಾತ್ರೆಯೇ. ಉಳಿದುದೆಲ್ಲವೂ ಸಂಘಕ್ಕೆ ಸೇರಿದ್ದು.

ಭಿಕ್ಕು(ಣಿ) ಆಗಲು ಇರಬೇಕಾದ ಅರ್ಹತೆ ಏನು? ಭೂತಾನ್ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆ ಇಲ್ಲ. ಜಮೀನ್ದಾರಿ ಶ್ರೀಮಂತರೂ ಇಲ್ಲ. ಹಾಗಾಗಿ ಯಾರು ಬೇಕಾದರೂ ಭಿಕ್ಕುಗಳಾಗಬಹುದು. ಆದರೆ ಬೌದ್ಧವಿಹಾರಗಳಲ್ಲಿ ಇರುವ ಕಟ್ಟುನಿಟ್ಟಾದ ಧಾರ್ಮಿಕ ತರಬೇತಿ, ನಿಯಮಪಾಲನೆಗಳಿಂದ ಯಾರಿಗೂ ವಿನಾಯಿತಿ ಇಲ್ಲ.

ಭೂತಾನಿನ ರಾಜ 1984 ರಲ್ಲಿ ಈ ವಿಹಾರಗಳನ್ನು ಅಧಿಕೃತವಾಗಿ ಗುರುತಿಸಿ ಅಲ್ಲಿಯ ಭಿಕ್ಕು(ಣಿ)ಗಳು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಂತೆ ನೋಡಿಕೊಳ್ಳಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದು, ರಾಜನೇ ಅದರ ಮುಖ್ಯಸ್ಥನೂ ಆಗಿರುವುದರಿಂದ ಅಲ್ಲಿ ರಾಜಕೀಯ ತಲೆ ಹಾಕುವಂತಿಲ್ಲ. ಭೂತಾನಿನ ಈಗಿರುವ ಐದನೆಯ ರಾಜರಾದ ಜಿಗ್ಮೆ ಖೇಸರ್ ನಾಮ್ಗೆಯೆಲ್ ವಾಂಗ್ಚುಕ್ ಆಂತರಿಕ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ನಿರ್ವಹಣೆಗೆ ಬದ್ದರು. ರಾಜ-ಪ್ರಜೆಗಳ ಸಂಬಂಧದಲ್ಲಿ ತಂದೆ-ಮಕ್ಕಳ ಬಾಂಧವ್ಯದ ಎಳೆ ಸ್ಪಷ್ಟವಾಗಿಯೇ ಕಾಣುತ್ತದೆ.

‘ನಮ್ಮ ರಾಜರ ತರಹವೇ!’

ನಮ್ಮ ಸ್ಥಳೀಯ ಗೈಡ್ ರಿಂಚೆನ್ ಮಹಾ ಹರಟೆಮಲ್ಲ. ತನ್ನ ಪ್ರೇಮಪ್ರಕರಣವನ್ನು ನಿರೂಪಿಸುತ್ತಿರುವಾಗ ತನ್ನ ಪ್ರಿಯತಮೆಗೆ ತಲುಪಿಸೆಂದು ಪ್ರೇಮಪತ್ರಗಳನ್ನು ಒಬ್ಬಳ ಹತ್ತಿರ ಕೊಟ್ಟು ಬೇಡಿಕೊಳ್ಳುತ್ತಿದ್ದನಂತೆ. ಅದು ಹೇಗೋ ಕೊನೆಗೆ ಆ ಲವ್-ಮೆಸೆಂಜರನ್ನೇ ಮದುವೆ ಮಾಡಿಕೊಂಡನಂತೆ. ಆತ ಮಹಾ ಜಂಭದಲ್ಲಿ ಕತೆ ಮುಗಿಸಿದ ವಾಕ್ಯ, ‘Just like His Majesty, you know!’

ಲಂಡನ್ನಿನಲ್ಲಿ ಓದುತ್ತಿರುವಾಗ ಈಗಿನ ರಾಜರಿಗೆ ಆದದ್ದೂ ಅಂಥದ್ದೇ ಅನುಭವ. ರಾಯಭಾರಿಣಿಯೇ ಕೊನೆಗೆ ಹೆಂಡತಿಯಾದ ಭಾಗ್ಯ!

ನನ್ನ ಕುತೂಹಲಕ್ಕೆ ಈಗ ರೆಕ್ಕೆಪುಕ್ಕ ಬಂತು. ‘ಹೌದಾ, ನಿಮ್ಮ ರಾಜರು ಮಾಡಿದ್ದನ್ನೆಲ್ಲಾ ನೀವೂ ಮಾಡುತ್ತೀರಾ? ಹಾಗಿದ್ದರೆ ಹಿಂದಿನ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ನಾಲ್ವರು ಅಕ್ಕತಂಗಿಯರನ್ನು ಮದುವೆ ಮಾಡಿಕೊಂಡು ಹನ್ನೆರಡು ಮಕ್ಕಳನ್ನ ಹುಟ್ಟಿಸಿದ್ದರಲ್ಲ? ನಿಮ್ಮಂತ ಸಾಮಾನ್ಯ ಮಂದಿಯೂ ಅದನ್ನೇ ಮಾಡಿದೀರಾ?’ ಎಂದು ರೇಗಿಸಲು ನೋಡಿದೆ. ಅಹಹಾ ಎಂದು ನಕ್ಕ ರಿಂಚೆನ್. ‘ಅಯ್ಯಯ್ಯೋ! ಅಷ್ಟು ದೊಡ್ಡ ಕುಟುಂಬವನ್ನ ಸಾಕುವ ಶಕ್ತಿ ನಮ್ಮಂಥ ಸಾಮಾನ್ಯರಿಗಿಲ್ಲ. ನಮ್ಮ ಒಟ್ಟು ಜನಸಂಖ್ಯೆ ಕೇವಲ ಏಳುಲಕ್ಷಕ್ಕಿಂತ ಸ್ವಲ್ಪ ಹೆಚ್ಚು, ಅಷ್ಟೇ!’

ಭೂತಾನಿನ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ರಾಜದಂಪತಿಗಳು ರಾರಾಜಿಸುತ್ತಿರುವ ಚಿತ್ರವಿರುತ್ತದೆ. ಎಂತಹ ಸುಂದರ ಜೋಡಿ! ಕೆಲವು ಕಡೆ ಆ ಕಟ್ಟುಗಳಿಗೆ ಹಳದಿ ರೇಷಿಮೆ ರಿಬ್ಬನ್ನಿನ ಆವರಣವಿದ್ದು ಇಬ್ಬರೂ ಇನ್ನಷ್ಟು ಚೆಂದ ಕಾಣಿಸುತ್ತಿದ್ದರು. ನಾನಂತೂ ಹೋದ ಕಡೆಯೆಲ್ಲಾ ಅವರ ಗ್ಲಾಮರಿಗೆ ಮರುಳಾಗಿಬಿಡುತ್ತಿದ್ದೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಮಂದಿ! ನಿಜವಾದ ರಾಜಕಳೆಯನ್ನು ಸೂಸುವ ಕರುಣೆ ತುಂಬಿದ ಮುಖಗಳು! ಬೆಳೆಯುತ್ತಿದ್ದ ವರ್ಷಗಳಲ್ಲಿ ಊರಿನ  ಪ್ರತಿಯೊಂದು ಮನೆಯಲ್ಲಿ ಮೈಸೂರು ಮಹಾರಾಜರ ಭಾವಚಿತ್ರವನ್ನು ನೋಡುತ್ತಿದ್ದ ನೆನಪಾಗಿತ್ತು. ರಾಜವಂಶದ ಪ್ರಭುತ್ವದಲ್ಲಿ ಬೆಳೆದ ಮನಸ್ಸಿನ ಒಂದು ಹ್ಯಾಂಗೋವರ್!

ನಮ್ಮ ಗೈಡ್ ತಂಡವಂತೂ ದಿನಕ್ಕೆ ನೂರು ಬಾರಿ ‘our king’ ‘his majesty’ ಎಂಬ ಪದಗಳನ್ನು ಬಳಸುತ್ತಿದ್ದರು. ಒಮ್ಮೆ ಮೂರೂ ಕಾರುಗಳನ್ನು ನಿಲ್ಲಿಸಿದಾಗ ಯಾಕೆ ಎಂದು ಕುತೂಹಲವಾಗಿತ್ತು. ರಿಂಚೆನ್ ದೂರದಲ್ಲೆಲ್ಲೋ ಕಾಣಿಸುತ್ತಿದ್ದ ಕಟ್ಟಡವನ್ನು ತೋರಿಸಿ, ‘ನೋಡಿ, ನಮ್ಮ ರಾಜರ ಮನೆ ಅದೇ!’ ಎಂದಾಗ ಹುಬ್ಬೇರಿಸುವಂತಾಗಿತ್ತು.

‘ಅದೇನು ಮಹಾ? ಅರಮನೆಯೇನೂ ಅಲ್ಲವಲ್ಲ?’ ಅಂತ ಯಾರೋ ಕೇಳಿಯೇ ಬಿಟ್ಟರು.

‘ಅರಮನೆಯಲ್ಲ, ಅದೇ ವಿಶೇಷ! ನಮ್ಮ ದೇಶದಲ್ಲಿ ಹಸಿವಿನಿಂದ ಯಾರೂ ಸಾಯುವುದಿಲ್ಲ. ಕೋವಿಡ್ ಕಾಲದಲ್ಲಿ ಐವತ್ಮೂರು ಸಾವಿರ ಮಂದಿ ಕೆಲಸ ಕಳೆದುಕೊಂಡರು. ನಮ್ಮ ರಾಜರು ಸ್ವಂತ ಜೇಬಿನಿಂದ ತೆತ್ತು ಸಂಕಷ್ಟದಿಂದ ಪಾರಾಗುವ ತನಕ ಅವರೆಲ್ಲರನ್ನೂ ನೋಡಿಕೊಂಡರು!’

ರಿಂಚೆನ್ ಮುಖ ಪ್ರೀತಿ, ಅಭಿಮಾನಗಳಿಂದ ಹೊಳೆಯುತ್ತಿತ್ತು. ನಾನಂತೂ ರೆಪ್ಪೆ ಬಡಿಯದೆ ಅವನ ಮುಖವನ್ನೇ ದಿಟ್ಟಿಸಿದ್ದೆ. ‘ಒಟ್ಟು ದೇಶೀಯ ಉತ್ಪನ್ನ’ ಎಂಬ ಪರಿಕಲ್ಪನೆಯನ್ನು ಆಚೆ ಇಟ್ಟು, ‘ಒಟ್ಟು ದೇಶೀಯ ಸಂತೋಷ’ (Gross National Happiness) ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಹುಟ್ಟು ಹಾಕಿದ್ದು ಸ್ವತಃ ಭೂತಾನ್! ಸಮಷ್ಟಿಯ ಸ್ವಾಸ್ಥ್ಯಕ್ಕೆ ಬೇಕಿರುವುದು ತಲೆಕೆಟ್ಟ ‘ಅಭಿವೃದ್ಧಿ’ ಅಲ್ಲ.

ಅದರ ಸಾಕ್ಷಿಯಾಗಿ ಶ್ರಮಿಕ ರಿಂಚೆನ್  ಕಣ್ಣೆದುರಿಗೇ  ನಿಂತಿದ್ದನಲ್ಲ!

ಭೂತಾನೀಯ ಹೆಂಗಸರು: ಅಂದಚೆಂದದವರು!

ಭೂತಾನ್ ಪ್ರವಾಸದುದ್ದಕ್ಕೂ ಸಂಜೆ ಟಿವಿಯ ಮುಂದೆ ಕೂತು BBS (Bhutan Broadcasting Service) ನೋಡುವ ಹುಚ್ಚಿತ್ತು. ಅವರ ಪಾರ್ಲಿಮೆಂಟಿನಲ್ಲಿ ನಡೆಯುವ ವಾದವಿವಾದಗಳೇನು? ಹೇಗೆ ನಿರ್ವಹಿಸುತ್ತಾರೆ? ಎಷ್ಟು ಮಂದಿ ಹೆಂಗಸರು ಇದ್ದಾರೆ? ಅವರ ಸಾಮಾಜಿಕ ಕಾಳಜಿಗಳೇನು? ಇತ್ಯಾದಿ. ಅಲ್ಲಿ ಒಬ್ಬಿಬ್ಬರು ಹೆಂಗಸರು ಆತ್ಮವಿಶ್ವಾಸದಿಂದ ಪಟಪಟನೆ ಮಾತಾಡುವುದನ್ನು ಗಮನಿಸಿದ್ದೆ.

ಒಮ್ಮೆ ನಮ್ಮ ಡ್ರೈವರ್ ನೀಮಾನನ್ನು, ‘ನಿಮ್ಮ ದೇಶದಲ್ಲಿ ಗಂಡಸು  ಹೆಂಗಸರ ಸಂಖ್ಯೆ ಹೇಗಿದೆ?’ ಎಂದು ಕೇಳಿದೆ. ‘ಹೆಚ್ಚು ಮಂದಿ ಹೆಂಗಸರು,’ ಎಂದು ಪಟ್ಟನೆ ಉತ್ತರ ಬಂತು.

‘ಪಾರ್ಲಿಮೆಂಟಿನಲ್ಲಿ ಎಷ್ಟು ಮಂದಿ ಹೆಂಗಸರು ಇದಾರೆ?’

ನೀಮಾ ತಲೆಯಲ್ಲೇ ಲೆಕ್ಕ ಹಾಕುತ್ತಿದ್ದಂತೆ ಕಂಡಿತು. ತಕ್ಷಣ ಉತ್ತರ ಬರಲಿಲ್ಲ. ಆಮೇಲೆ ಮೆಲ್ಲಗೆ, ‘ಮೂರು-ನಾಲ್ಕು’ ಎಂದು ಉತ್ತರಿಸಿದ.

‘we are bad, no?’ ಎಂದು ಮುಜುಗರದಿಂದ ಕೇಳಿದಾಗ, ‘ಹೌದೋ ಮಾರಾಯಾ, bad ನಿಜ. ಆದರೆ ನಮ್ಮಷ್ಟು bad ಅಲ್ಲ. ನಿಮ್ಮಲ್ಲಿ ಹೆಂಗಸರ ಮೇಲೆ ನಡೆಯುವ ದೌರ್ಜನ್ಯಗಳು ಸಹ ಕಮ್ಮಿ ಇರುತ್ತವೆ. ನಮ್ಮಲ್ಲಿ ಹಾಗಲ್ಲ, ಅತ್ತ ಪಾರ್ಲಿಮೆಂಟಿನಲ್ಲಿ ನಮ್ಮ ಸಂಖ್ಯೆ ಕಮ್ಮಿ, ಆದರೆ ದಿನನಿತ್ಯದ ಬದುಕೂ ಸೇರಿದಂತೆ ನಮ್ಮ ಮೇಲೆ ನಡೆಯುವ ದೌರ್ಜನ್ಯಗಳು ಮಾತ್ರ ಗಗನಕ್ಕೇರುವಷ್ಟು!’ ಎಂದು ವಿಷಾದದಿಂದ ನಕ್ಕೆ.

ಭೂತಾನಿನಲ್ಲಿ ಹೆಂಗಸರ ಸಂಖ್ಯೆ ಹೆಚ್ಚು ಎಂದರೆ ಹೆಣ್ಣು ಭ್ರೂಣ ಹತ್ಯೆ ಇಲ್ಲ ಎಂದಾಯಿತು. ನಮ್ಮಲ್ಲಿ ಹಾಗಲ್ಲವೇ! ಹುಟ್ಟುವ ಮುಂಚೆಯೇ ಹೆಂಗೊರಳು ಹಿಸುಕಲು ಅದೆಷ್ಟು ಕೈಗಳು!

ಪಾಪ ನೀಮಾ, ಒಬ್ಬ ಸರಳ ಮನುಷ್ಯ! ಇನ್ನಷ್ಟು ಅಂಕಿಅಂಶಗಳನ್ನು ಕೊಟ್ಟು ಅವನ ತಲೆ ತಿನ್ನುವುದು ಯಾಕೆ ಎಂದು ಸುಮ್ಮನಾದೆ. ‘ಸರಿ, ಹೆಂಗಸರ ಸಂಖ್ಯೆ ಜಾಸ್ತಿ ಎಂದೆಯಲ್ಲ? ಬಹುಪತ್ನಿತ್ವ ಇದೆಯಾ?’

‘ಹೂಂ, ಕೆಲವೊಮ್ಮೆ ಇರುತ್ತೆ.’

‘ನಿನಗೆಷ್ಟು ಮಂದಿ ಹೆಂಡತಿಯರು ಮಾರಾಯಾ?’ ಎಂದು ನೇರವಾಗಿ ಕೇಳಿದಾಗ ಕಾರಿನಲ್ಲಿ ಇದ್ದ ಸಹಪ್ರವಾಸಿಗ ಮಹಿಳೆಯರ ಕಣ್ಣುಗಳೆಲ್ಲ  ಮುಂದೆ ನೀಮಾನ ಪಕ್ಕ ಕೂತಿದ್ದ ನನ್ನ ಬೆನ್ನು ಕೆರೆದಂತೆ ಅನ್ನಿಸಿತು.

‘ನನಗೇನೋ ಒಬ್ಬಳೇ. ಆದರೆ ನಮ್ಮ ರಿಂಚೆನ್ ಇದಾನಲ್ಲ? ಅವನಿಗೆ ಇಬ್ಬರು ಹೆಂಡತಿಯರು!’

ಹೌದೇ? ಮತ್ತೆ ಸಾಮಾನ್ಯ ಮಂದಿಗೆ ದೊಡ್ಡ ಸಂಸಾರ ಸಾಕುವ ಶಕ್ತಿಯಿಲ್ಲ ಎಂದು ಹೇಳಿದ್ದು ರಿಂಚೆನ್  ತಾನೇ?

ಎಲ್ಲೋ ಇಳಿದಾಗ ಅಲ್ಲಿಗೆ ರಿಂಚೆನ್ ಬಂದು, ನಾನು ಕೇಳಿದ್ದೂ  ಆಯ್ತು. ‘ನೀಮಾ! ಎಲ್ಲಿ ಅವನು? ಇವತ್ತು ಅವನಿಗೆ ಹುಟ್ಟಿದ ದಿನ ಕಾಣಿಸದಿದ್ದರೆ ಯಾಕಾಯ್ತು!’ ಎಂದಾಗ ಅಷ್ಟು ಗಂಭೀರ ಮುಖವನ್ನು ಹೊತ್ತು ನಂಬುವಂತೆ ಸುಳ್ಳು ಹೇಳಿದ ನೀಮಾನ ಅಭಿನಯಕ್ಕೆ ಭೇಷ್ ಅಂತನ್ನಿಸಿತ್ತು.

ಪಾರೋ ತಕ್ತಸಂಗ್ (ಹುಲಿಯ ಗುಹೆ)

ಪಾರೋ ತಕ್ತಸಂಗ್ ಹತ್ತುವುದನ್ನು ಪ್ರವಾಸದ ಕೊನೆಯ ದಿನಕ್ಕೆ ಕಾದಿರಿಸಲಾಗಿತ್ತು. ಕಾರಣಗಳು ಎರಡು, ಭೂತಾನಿನಂತಹ ಭೂಪ್ರದೇಶದ ಹವಾಮಾನಕ್ಕೆ ಒಗ್ಗಿಕೊಳ್ಳಲು ಒಂದು ವಾರವಾದರೂ ಬೇಕು. ಇಲ್ಲದಿದ್ದರೆ ಹತ್ತುವುದು ಕಷ್ಟ. ಎರಡನೆಯ ಕಾರಣ, ಅದರ ನಂತರ ಕೈಕಾಲು ಹೇಗೂ ಪದ ಹೇಳುತ್ತಿರುತ್ತವಲ್ಲ? ತೆಪ್ಪಗೆ ಮನೆಗೆ ಹೋಗಿ ಆರಾಮಿಸಿ.

ಈ ಹುಲಿಯ ಗುಹೆ ಪಾರೋ ಕಣಿವೆಯ ಎತ್ತರದ ಭಾಗದಲ್ಲಿ ಇರುವ ಬೆಟ್ಟದ ಅಂಚಿನಲ್ಲಿ ಕ್ರಿಶ 1692 ರಲ್ಲಿ ನಿರ್ಮಿತವಾಗಿರುವ ವಜ್ರಯಾನ ಪಂಥದ ಯಾತ್ರಾಸ್ಥಳ. ಭೂತಾನಿಗೆ ವಜ್ರಯಾನವನ್ನು ತಂದ ಪದ್ಮಸಂಭವ ಹೆಣ್ಣುಹುಲಿಯ ಬೆನ್ನ ಮೇಲೇರಿ ಇಲ್ಲಿಗೆ ಬಂದಿಳಿದು ತನ್ನ ಶಿಷ್ಯರೊಂದಿಗೆ ಈ ಗವಿಯಲ್ಲಿ ಕೂತು ತಪಸ್ಸು ಮಾಡಿದ ಎಂಬ ಐತಿಹ್ಯವಿದೆ. ಪದ್ಮಸಂಭವ ಅದಕ್ಕೂ ಮುಂಚೆ ಇಲ್ಲಿದ್ದ ಜನಪೀಡಕ ರಾಕ್ಷಸಶಕ್ತಿಗಳನ್ನು ಸೋಲಿಸಿ ಜನರನ್ನು ರಕ್ಷಿಸಿದ್ದಕ್ಕೆ ಅವನನ್ನು ‘ಭೂತಾನ್ ರಕ್ಷಕ-ಋಷಿ’ ಎಂದು ಆರಾಧಿಸಲಾಗುತ್ತದೆ.

ತಕ್ತಸಂಗ್ ಹತ್ತುವ ಹಾದಿಯಲ್ಲಿ ಚಿಕ್ಕಪುಟ್ಟ ಆಶ್ರಮಗಳು, ಪ್ರಾರ್ಥನಾ ಬಾವುಟಗಳು ಮತ್ತು ಪ್ರಾರ್ಥನಾಚಕ್ರಗಳು ಕಾಣಸಿಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನದಲ್ಲಿ ಮೌನವಾಗಿ ನಿಂತಂತೆ ಕಾಣಿಸುವ ಬೆಟ್ಟಸಾಲು ಮೈಮರೆಸುತ್ತಲೇ ‘ಹತ್ತು, ಹತ್ತಬಹುದು’ ಎಂದು ಮುಂದಿನ ಹೆಜ್ಜೆಯತ್ತ ತಳ್ಳುತ್ತಿರುತ್ತದೆ. ಹತ್ತಿ ಇಳಿಯಲು ಐದು ಗಂಟೆಗಳಷ್ಟು ಕಾಲವಾದರೂ ಬೇಕು. ಅಲ್ಲಲ್ಲಿ ದಣಿವಾರಿಸಿಕೊಳ್ಳುತ್ತಲೋ, ಎಲ್ಲಾ ಪಿಸುಗುಡುವ ಬೆಟ್ಟಸಾಲಿಗೆ ಮರುಳಾಗುತ್ತಲೋ ಹತ್ತಿದರೆ ಸುಮಾರು ಏಳು ಗಂಟೆಗಳು ಬೇಕು.

ನೀಮಾ ನನ್ನ ಕೆಂಪು ಬ್ಯಾಗನ್ನು ಯಾವ ಮುಜುಗರವೂ ಇಲ್ಲದೆ ಕತ್ತಿನ ಸುತ್ತ ಹಾಕಿಕೊಂಡು ಸ್ವಲ್ಪ ಹಿಂದೆಯಿಂದ ನನ್ನನ್ನೇ ಗಮನಿಸಿಕೊಂಡು ಹತ್ತಿ ಬರುತ್ತಿದ್ದ. ಸರಿಯಾಗಿ ನಡುವಿನಲ್ಲಿ ಕೆಫೆಟೇರಿಯಾ ಇದೆ ಎಂದು ಗೊತ್ತಿತ್ತು. ದಣಿವಾರಿಸಿಕೊಳ್ಳುತ್ತಾ, ಅದು ಇನ್ನೂ ಎಷ್ಟು ದೂರ ಎಂದು ಕೇಳಿದೆ. ‘ಕೇವಲ ಇಪ್ಪತ್ತು ನಿಮಿಷ!’ ಎಂದ. ಸರಿ, ಮುಂದಿನ ಹೆಜ್ಜೆ ಇಟ್ಟ ತಕ್ಷಣ ಅವನು ಮೆಲ್ಲಗೆ  ಸಂಗಡಿಗರಿಗೆ ‘ಕಾರಿನಲ್ಲಿ ಹೋದರೆ!’ ಎಂದು ಸೇರಿಸಿದ್ದು ಕೇಳಿಸಿತು! ಫಟಿಂಗ! ಉಸಿರೆಳೆಯಲು ಕಷ್ಟಪಡುತ್ತಿದ್ದರೂ ಖೊಳ್ಳನೆ ನಗದೆ ಇರಲಾಗಲಿಲ್ಲ.

ಭೂತಾನಿಯ ಮಂದಿಯನ್ನು ನಮ್ಮ ಗೈಡ್ ತಂಡದ ಮೂಲಕ ಸಾರಂಶೀಕರಿಸಬಹುದು ಅಂತನ್ನಿಸುತ್ತದೆ. ನಿರಾಳ ಮುಖ; ಮೆದುಮಾತು; ಸ್ತೂಪ ಕಂಡಾಗೆಲ್ಲ ಮಣಮಣ ಎಂದು ಹೇಳಿಕೊಳ್ಳುವ ಪ್ರಾರ್ಥನೆ; ಅಪಾರವಾದ ರಾಜಪ್ರೇಮ; ನಮ್ಮ ಬ್ಯಾಗುಗಳನ್ನೆಲ್ಲ ಹೊತ್ತು ಸೂಕ್ಷ್ಮವಾಗಿ ಗಮನಿಸುತ್ತಲೇ ಹಿಂದೆಯಿಂದ ಬರುವ ಆದರೆ ಸ್ವಲ್ಪ ದಣಿವಾದರೂ ದುತ್ತನೆ ಎದುರಿಗೆ ಅವತರಿಸಿ, ‘ನೀರು ಬೇಕಾ? ತಿನ್ನಲು ಏನಾದರೂ ಬೇಕಾ?’ ಎಂದು ಕೇಳುವ ಕರುಣೆ ತುಂಬಿದ ಕಣ್ಣುಗಳು… ಇತ್ಯಾದಿ ವೃತ್ತಿಪರತೆಯನ್ನೂ ಮೀರಿದ ಜನಪ್ರೀತಿ ಅಂತನ್ನಿಸಿತ್ತು. ಹೇಳಿಕೇಳಿದ್ದೆಲ್ಲದಕ್ಕೂ, ‘ಓಕೆ ಲಾ…’ ಎಂದು ಹೇಳುವ ಲಲಲಾ ರೀತಿ ಭೂತಾನ್ ಬಿಟ್ಟರೂ ನಮ್ಮನ್ನು ಹಿಂಬಾಲಿಸಿತ್ತು.

ಭೂತಾನಿನ ಸಹಿಬುದ್ಧ!

ಭೂತಾನಿನ ರಾಜಧಾನಿ ಥಿಂಪೂವಿನಲ್ಲಿ ಬೆಟ್ಟಗಳಿಂದ ಸುತ್ತುವರೆದ ಧ್ಯಾನಕೇಂದ್ರದ ಮೇಲೆ ವಿರಾಜಮಾನನಾಗಿರುವ ಬುದ್ಧನ ಬೃಹತ್ತಾದ ವಿಗ್ರಹವಿದೆ. ನಗರದ ಯಾವ ಭಾಗದಿಂದಲೂ ಕಾಣಿಸುವ ಶಾಕ್ಯಮುನಿ ಬುದ್ಧನ 169 ಅಡಿಯ ವಿಗ್ರಹ ರಾತ್ರಿಯ ವಿದ್ಯುಚ್ಛಕ್ತಿಯ ಬೆಳಕಲ್ಲಿ ಸ್ನಿಗ್ಧವಾಗಿ ಹೊಳೆಯುತ್ತಾ ಎದೆಗೆ ಸಮಾಧಾನವನ್ನು ನೀಡುತ್ತದೆ. ಪ್ರಪಂಚದಲ್ಲಿ ಇರುವ ಮಹಾನ್ ಬುದ್ಧರೂಪಗಳಲ್ಲಿ ಇದೂ ಒಂದು.

ಈ ಬುದ್ಧನನ್ನು ನಿರ್ಮಿಸಲು ತಗುಲಿದ ವೆಚ್ಚ ನೂರು ಮಿಲಿಯನ್ ಅಮೆರಿಕನ್ ಡಾಲರುಗಳಿಗಿಂತಲೂ ಹೆಚ್ಚಂತೆ. ಈ ಮಹಾನ್ ಬುದ್ಧ, ಕಂಚಿನಲ್ಲಿ ಮಾಡಿ ಚಿನ್ನದ ಲೇಪವಿತ್ತ  ಒಂದು ಲಕ್ಷದ ಇಪ್ಪತ್ತೈದು ಸಾವಿರದ ಸಣ್ಣ ಸಣ್ಣ ಬುದ್ಧ ಮೂರ್ತಿಗಳನ್ನು ತನ್ನ ಎದೆಯ ಬೆಳಕಲ್ಲಿ ಹೊತ್ತಿದ್ದಾನೆ. ಇದು. ನಾಲ್ಕನೆಯ ರಾಜ ಜಿಂಗ್ಮೆ ಸಿಂಗ್ಯೆ ವಾಂಗ್ಚುಕ್ ಅವರಿಗೆ  ಅರವತ್ತು ವರ್ಷ ತುಂಬಿದಾಗ  ನಿರ್ಮಿತವಾದ ಸ್ಮಾರಕ.

ಮೇಲೆ ಹೊಳೆಯುವ ನೀಲ ಆಕಾಶ, ಸುತ್ತಲೂ ಬೆಟ್ಟಸಾಲು, ಬೃಹತ್ತಾದ ಬುದ್ಧನ ಭುಜದ ಮೇಲೆ ಫಳ್ಳನೆ ಹೊಳೆಯುತ್ತಿದ್ದ ಮಧ್ಯಾಹ್ನದ ಸೂರ್ಯ… ಅನಂತವೆಂದರೆ ಏನೋ ಎಂದು ಕಲ್ಪಿಸಿಕೊಳ್ಳಲು ಪ್ರಯತ್ನವಂತೂ ಪಟ್ಟೆ.

ಮರುದಿನ ಮುಂಜಾವು ಮೈಸೂರಿಗೆ ಹಿಂತಿರುಗಲು  ಪಾರೋ ಏರ್ಪೋರ್ಟ್ ತಲುಪಿದೆವು. ನೀಮಾ ಕಾರಿನಲ್ಲಿ ಮೈಮರೆಸುವ ಭೂತಾನೀಯ ಸಂಗೀತವನ್ನು ಹಾಕಿದ್ದ. ಭದ್ರತಾ ಸಿಬ್ಬಂದಿಗೆ ತೋರಿಸಲೆಂದು ಬ್ಯಾಗಿನಿಂದ ಪಾಸ್ ಪೋರ್ಟ್ ತೆಗೆದೆ. ಅದರಲ್ಲಿ ಇದ್ದ ಇಂದಿನ ಹಾಂಡ್ಸಮ್ ರಾಜರ ಭಾವಚಿತ್ರ ಆತನಿಗೆ ಕಾಣಿಸಿ, ‘do you love him?’ ಎಂದು ಕೇಳಿದ.

ಮಹಾ ಖುಷಿಯಲ್ಲಿ, ‘yes, I do!’ ಎಂದೆ.                                                              

About The Author

ಸುಕನ್ಯಾ ಕನಾರಳ್ಳಿ

ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು. ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ