ಕೆಲವೊಂದರಲ್ಲಿ ಇಡೀ ಕರ್ನಾಟಕಕ್ಕೆ ನಮ್ಮ ಕಂಪೆನಿಯಲ್ಲಿ ಟಾಪರ್ ಆಗೋವಷ್ಟು ಸೇಲ್ ಮಾಡಿದ್ದೆ. ಆದರೆ ಹಲ್ಲು ನೋವಿಗೆ ಬಳಸುವ ಟೂಥ್ ಪೇಸ್ಟ್ ಒಂದರ ಸೇಲ್ನಲ್ಲಿ ತುಂಬಾ ಕಮ್ಮಿ ಸಾಧನೆ ಮಾಡಿದ್ದೆ. ಇದುವರೆಗೂ ಹೊಗಳಿದವರು ಈ ವಿಷಯ ಬಂದಾಗ ನನ್ನನ್ನು ಹಿಗ್ಗಾ ಮುಗ್ಗಾ ಬಯ್ದರು. ನಾನು ತುಂಬಾ ಸೆನ್ಸಿಟೀವ್ ಆಗಿ ಇದ್ದುದ್ದರಿಂದ ಅಂದು ಅವರು ನೀಡಿದ್ದ ಸುಗ್ರಾಸ ಭೋಜನವನ್ನು ಸೇವಿಸಲು ಮನಸ್ಸಾಗಲಿಲ್ಲ… ಆಗ ಬೇರೆ ಮೆಡಿಕಲ್ ರೆಪ್ಗಳು ಬಂದು ಇಲ್ಲೆಲ್ಲಾ ಬಯ್ಯೋದು, ಬಯ್ಸಿಕೊಳ್ಳೋದು ಕಾಮನ್. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದಾಗ ನನಗೆ ಮನಸ್ಸಿಗೆ ಸಮಾಧಾನ ಎನ್ನಿಸಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ
ಮೆಡಿಕಲ್ ರೆಪ್ ಆಗಿ ಆಯ್ಕೆಗೊಂಡ ಖುಷಿಯನ್ನು ನಾನು ಯಾರ ಬಳಿಯೂ ಹಂಚಿಕೊಳ್ಳಲಿಲ್ಲ. ನನ್ನ ಜೊತೆಗೆ ಕಂಪೆನಿಯ ರೂಮಿನಲ್ಲಿದ್ದ ಪರ ರಾಜ್ಯದವನು ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಲಿಲ್ಲ. ಇದಕ್ಕಾಗಿ ಅವನು ತುಂಬಾ ಬೇಸರ ಮಾಡಿಕೊಂಡು ಅಳ್ತಾ ಇದ್ದ. ಅವನನ್ನು ಸಮಾಧಾನಪಡಿಸಿ ನಾನು ವಾಪಸ್ಸು ಬೆಂಗಳೂರಿಗೆ ಹೋಗಬೇಕೆಂದು ಒಂದು ಆಟೋದಲ್ಲಿ ಚೆನ್ನೈ ಬಸ್ಟ್ಯಾಂಡಿಗೆ ಬಂದೆ. ನನಗೆ ಬರುವಾಗ ಸಹಾಯ ಮಾಡಿದ ವ್ಯಕ್ತಿಗಳಿಗೆ ಕರೆ ಮಾಡಿದೆ. ಅವರು ಅದಾಗಲೇ ಬೆಂಗಳೂರು ತಲುಪಿದ್ದರೆಂಬ ವಿಷಯ ತಿಳಿಸಿದರು. ನಾನು ಬೆಂಗಳೂರಿಗೆ ಹೋಗುವ ಬಸ್ಸೊಂದಕ್ಕೆ ಹತ್ತಲು ಹೋದೆ. ಆದರೆ ಆ ಕಂಡಕ್ಟರ್ ಆಗ ನಾನು ‘ಕನ್ನಡದಲ್ಲಿ ಬೆಂಗಳೂರಿಗೆ ಹೋಗುತ್ತಾ?’ ಅಂತಾ ಕೇಳಿದ್ದೇಕೇನೋ ನನ್ನನ್ನು ಬಸ್ಗೆ ಹತ್ತಿಸಲಿಲ್ಲ. ಅಂದು ಬಸ್ ಕಡಿಮೆ ಇತ್ತೆಂದು ತೋರುತ್ತದೆ. ಬರುವ ಒಂದೆರಡು ಬಸ್ಸಿನವರು ಹೀಗೆ ಮಾಡಿದರು. ನನಗೆ ಈಗ ಪೀಕಲಾಟ ಶುರು ಆಯ್ತು. ಹೀಗೆ ಆದರೆ ‘ಬೆಂಗಳೂರಿಗೆ ಹೇಗಪ್ಪಾ ಹೋಗೋದು ಅಂತಾ’?! ಅದೃಷ್ಟಕ್ಕೆ ಎಂಬಂತೆ ಕೋಲಾರದ ಒಬ್ಬ ಹುಡುಗ ಪರಿಚಯವಾದ. ಅವನಿಗೆ ತಮಿಳು ಚೆನ್ನಾಗಿ ಬರುತ್ತಿತ್ತು. ಅವನ ಜೊತೆ ನಾನೂ ಬೆಂಗಳೂರಿಗೆ ಬಂದೆ.
ಭಾಷೆಯ ವಿಷಯದಲ್ಲಿ ನಾವು ಬಹಳ ಮಡಿವಂತಿಕೆ ಮಾಡಬಾರದು. ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಇದರ ಜೊತೆಯಲ್ಲಿ ಸಾಧ್ಯವಾದಷ್ಟು ಇತರೆ ಭಾಷೆಗಳನ್ನು ಕಲಿತಿದ್ದರೆ ಚೆಂದಿತ್ತು ಎಂಬುದನ್ನು ಗ್ರಹಿಸಿಕೊಂಡೆ. ನನಗೆ ಹೆಚ್ಚೆಚ್ಚು ಭಾಷೆ ಮಾತನಾಡುವವರನ್ನು ಕಂಡರೆ ಅವರ ಬಗ್ಗೆ ಗೌರವ ಜಾಸ್ತಿ. ನನಗೆ ಕಲಿಯೋಕೆ ಅವಕಾಶ ಸಿಗಲಿಲ್ಲವೋ ಅಥವಾ ಅಂತಹ ಪ್ರಯತ್ನ ನಾನೇ ಮಾಡಲಿಲ್ಲವೋ? ಹೆಚ್ಚು ಭಾಷೆ ನನಗೆ ಬಾರದೇ ಇರುವುದಕ್ಕೆ ನನ್ನ ಬಗ್ಗೇ ನನಗೇ ಬೇಸರ ಆಗುತ್ತೆ. ನಾವು ಓದುವಾಗ ಭಾಷೆಯ ಬಗ್ಗೆ ಚರ್ಚಾಸ್ಪರ್ಧೆ ಇಟ್ಟಾಗ ನನ್ನ ಕ್ಲಾಸ್ ಮೇಟ್ ಒಬ್ಬನು “ಕನ್ನಡವನ್ನು ನಮ್ಮ ತಾಯಿಯಂತಲೂ ಇತರೆ ಭಾಷೆಗಳನ್ನು ನಮ್ಮ ಚಿಕ್ಕಮ್ಮರೆಂಬಂತೆ ನೋಡಬೇಕು” ಎಂದದ್ದನ್ನು ಕೇಳಿ ನನಗೆ ‘ಹೌದಲ್ವಾ’ ಎನಿಸಿತ್ತು.
ಬೆಂಗಳೂರಿಗೆ ಬಂದು ಅಲ್ಲಿಂದ ಸೀದಾ ದಾವಣಗೆರೆಗೆ ಬಂದೆ. ನನ್ನ ರೂಮ್ ಮೇಟ್ ವೆಂಕಟೇಶ್ ಹಾಗೂ ನನಗೆ ಸಹಾಯ ಮಾಡಿದ ನಮ್ಮ ಮನೆಯ ಓನರ್ ಅಂಕಲ್, ಆಂಟಿ, ಸಾಲ ಕೊಟ್ಟು ಸಹಾಯ ಮಾಡಿದ್ದ ಸುಮಂಗಲಾ ಮೇಡಂ, ಕೆಲಸ ಕೊಡಿಸಲು ಸಹಾಯ ಮಾಡಿದ ಮುನಿಷ್ ಹಾಗೂ ಇಂಜಿನಿಯರಿಂಗ್ ಹುಡುಗನಿಗೂ ಧನ್ಯವಾದಗಳನ್ನು ಸಲ್ಲಿಸಿದೆ. ಅವರೆಲ್ಲಾ ತುಂಬಾ ಖುಷಿಪಟ್ಟರು. ಶಾಲೆಗೆ ಹೋಗಿ ಪಾಠ ಮಾಡಿದ ಮೇಷ್ಟ್ರು ಒಬ್ಬ ಇದ್ದಕ್ಕಿದ್ದ ಹಾಗೇ ಒಬ್ಬ ಮಾರ್ಕೆಟರ್ ಆಗಬೇಕು ಎಂದಾಗ ಮೊದಮೊದಲು ಕಷ್ಟ ಆಯ್ತು. ನಾನು ಈ ಮೊದಲು ಇನ್ ಶರ್ಟ್ ಮಾಡ್ತಾ ಇರಲಿಲ್ಲ. ಈಗ ಅದು ಕಡ್ಡಾಯ ಆಯ್ತು. ಶೂ ಟೈ ಕಾಮನ್ ಆದವು. ಡಾಕ್ಟರ್ಗಳ ಬಳಿ ಹೋಗಿ ನಾವು ನಮ್ಮ ಕಂಪೆನಿಯ ಮಾತ್ರೆಗಳನ್ನು ಅವರಿಂದ ಬರೆಸುವಂತೆ ಮಾಡಬೇಕಿತ್ತು. ತುಂಬಾ ಚಾಲೆಂಜಿಂಗ್ ಕೆಲಸ ಇದು. ತುಂಬಾ ತಾಳ್ಮೆ ಇರಬೇಕು ಈ ಕೆಲಸ ಮಾಡೋಕೆ. ಕೆಲ ಡಾಕ್ಟರ್ಗಳ ಬಳಿ ಬೆಳಗ್ಗೆ 7 ಗಂಟೆಗೆ ಹೋಗಬೇಕಿತ್ತು. ಕೆಲವು ಡಾಕ್ಟರ್ಗಳನ್ನು ಸಂದರ್ಶಿಸಲು ರಾತ್ರಿ 10 ರ ತನಕ ಕಾಯಬೇಕಿತ್ತು. ದಿನಕ್ಕೆ 10 ಜನ ಡಾಕ್ಟರ್ಗಳನ್ನು ನಾವು ಮೀಟ್ ಮಾಡಲೇಬೇಕು ಎಂಬ ಕಂಪೆನಿಯವರ ನಿಯಮವಿತ್ತು. ನನ್ನ ಬಳಿ ಮೊದಲಿಗೆ ಬೈಕ್ ಇರಲಿಲ್ಲ. ಹಾಗೇ ಹೀಗೆ ಮಾಡಿ ಒಂದು ಸೆಕಂಡ್ ಹ್ಯಾಂಡ್ ಸ್ಕೂಟಿ ತೆಗೆದುಕೊಂಡೆ. ಅದಕ್ಕೋ ಯಾವುದೇ ರೆಕಾರ್ಡ್ ಇರಲಿಲ್ಲ. ನನಗೆ ಅರ್ಜೆಂಟ್ ಆಗಿ ಬೈಕ್ ಬೇಕಿತ್ತು ಅಂತಾ ಹಾಗೆ ಮಾಡಿದೆ. ಅದರ ಬೆಲೆ ಬರೀ ಆಗ 3000 ಅಂತಾ ಹೇಳಿದ್ದಕ್ಕೆ ತಕ್ಷಣ ಖರೀದಿಸಿದ್ದೆ!
ಅದನ್ನು ಇಟ್ಕೋಳ್ಳೋದು ಅಷ್ಟು ಸೇಫ್ಟಿ ಅಲ್ಲ ಅಂತ ಬೇರೆ ಸೆಕೆಂಡ್ ಹ್ಯಾಂಡ್ ಗಾಡಿ ತೆಗೆದುಕೊಂಡೆ. ನಾನು ಸುಮಾರು 15 ದಿನಗಳ ಕಾಲ ದಾವಣಗೆರೆಯಲ್ಲಿ ಮೆಡಿಕಲ್ ರೆಪ್ ಕೆಲಸ ಮಾಡ್ತೀನಂತಾ ಊರಲ್ಲಿ ಯಾರಿಗೂ ಹೇಳಿರಲಿಲ್ಲ. 15 ದಿನ ಕೆಲಸ ಮಾಡಿ ನಂತರ ಊರಿಗೆ ಹೋಗಿ ನನ್ನ ಸೋದರ ಮಾವನ ಮುಂದೆ ಹೇಳಿದ್ದೆ. ಅವರು ಮೊದಮೊದಲು ನಂಬಲಿಲ್ಲ. ಅಪಾಯಿಂಟ್ಮೆಂಟ್ ಆದೇಶ ತೋರಿಸಿದೆ. ಅವರಿಗೆ ತುಂಬಾ ಆಶ್ಚರ್ಯವಾಯ್ತು. ಈ ರೀತಿ ನಾನು ಹಠ ಮಾಡೋಕೂ ಒಂದು ಕಾರಣ ಇತ್ತು. ನಾನು ಒಂದೆರಡು ತಿಂಗಳು ಕೆಲಸವಿಲ್ಲದೇ ಇದ್ದಾಗ ಇದೇ ನನ್ನ ಮಾವ ಹಾಗೂ ಕೆಲವರು ನನ್ನ ಬಗ್ಗೆ “ಇವನ ಕೈಲೀ ಏನೂ ಸಾಧಿಸಲಾಗುವುದಿಲ್ಲ” ಎಂದು ವ್ಯಂಗ್ಯವಾಡಿದ್ದರು. ಆಗ ನಾನು ಏನೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಮನಸ್ಸಲ್ಲಿ ಮಾತ್ರ ಏನಾದ್ರೂ ಸಾಧಿಸಿ ತೋರಿಸಬೇಕು ಎಂಬ ಕಿಚ್ಚಿತ್ತು. ಇದನ್ನು ಸಾಧಿಸಿ ತೋರಿಸಿದ್ದಕ್ಕೆ ಖುಷಿಯ ಜೊತೆ ಹೆಮ್ಮೆಯೂ ನನಗಿತ್ತು.
ನಾವು ಯಾವಾಗ್ಲೂ ಅಷ್ಟೇ. ನಮ್ಮ ಸ್ಥಿತಿ ಕೆಳಕ್ಕೆ ಹೋದಾಗ ನಮ್ಮನ್ನು ನೋಡಿಕೊಂಡು ಕುಹಕವಾಡುವವರು, ನೋಡಿ ನಗುವವರು ಬಹಳ ಮಂದಿ ಇರುತ್ತಾರೆ. ಇದಕ್ಕೆ ನಾವು ಆಗ ಕಿವುಡರಾಗಿರಬೇಕು. ಇದರ ಬಗ್ಗೆ ಒಂದು ಕಥೆ ಹೇಳಬೇಕೆಂದರೆ ಅದು ಹೀಗಿದೆ:
ಒಮ್ಮೆ ಒಂದು ಕತ್ತೆ ಬಾವಿಯಲ್ಲಿ ಬಿದ್ದಿತಂತೆ. ಅದು ಅಳುತ್ತಾ ಕೆಳಗಿರಲು ಬಹಳ ಮಂದಿ ಬಂದು ಅದನ್ನು ನೋಡಿ ನಕ್ಕರಂತೆ. “ಇದು ಮೇಲೆ ಬರಲಂತೂ ಸಾಧ್ಯವಿಲ್ಲ. ಇದನ್ನು ಇಲ್ಲಿಯೇ ಜೀವಂತವಾಗಿ ಮುಚ್ಚಿಬಿಡೋಣ” ಎಂಬ ಹಲವರ ಸಲಹೆಯ ಮೇರೆಗೆ ಒಂದು ಬುಟ್ಟಿ ಮಣ್ಣನ್ನು ತಂದು ಅದರ ಮೇಲೆ ಸುರಿವಿದರಂತೆ. ಅದು ತನ್ನ ಮೇಲೆ ಬಿದ್ದ ಮಣ್ಣನ್ನು ಕೊಡವಿಕೊಂಡು ಮತ್ತೆ ನಿಂತಿತಂತೆ. ಇದೇ ಅವರು ಮಣ್ಣು ತಂದು ಹಾಕುತ್ತಿರಲು ಅದು ಪ್ರತೀ ಬಾರಿಯೂ ಇದೇ ರೀತಿ ಕೊಡವಿಕೊಂಡು ಕೊನೆಗೆ ಬಾವಿಯಿಂದ ಮೇಲೆ ಬಂದಿತಂತೆ. ಎಲ್ಲರಿಗೂ ಆಶ್ಚರ್ಯ. ಇದೇನು? ಇದರ ಕೈಲಿ ಮೇಲಕ್ಕೆ ಬರಲು ಸಾಧ್ಯವಿಲ್ಲ ಎಂದು ಅರಚುತ್ತಾ ಮಣ್ಣು ಹಾಕಿದರೂ ಇದು ಹೇಗೆ ಮೇಲೆ ಬರಲು ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಉತ್ತರ ಕೊನೆಗೆ ‘ಈ ಕತ್ತೆಗೆ ಕಿವಿ ಕೇಳೋದಿಲ್ಲ’ ಎಂದು ತಿಳಿದಾಗ ಅವರಿಗೆ ಶಾಕ್ ಆಗಿತ್ತಂತೆ. ಇಲ್ಲಿ ಅವರು ‘ಆಗೋಲ್ಲ ಆಗೋಲ್ಲ’ ಎಂದು ಕೂಗಿದ್ದು ಕತ್ತೆಗೆ ಕೇಳದೇ ಅವರು ನನಗೆ ಮೇಲೆ ಬರಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿದುಕೊಂಡಿತ್ತಂತೆ. ನಾವೂ ಅಷ್ಟೇ ನಾವು ಕೆಳಕ್ಕೆ ಬಿದ್ದಾಗ ‘ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು’ ಎಂಬಂತೆ ನಮಗೆ ಚುಚ್ಚು ನುಡಿ, ವ್ಯಂಗ್ಯದ ನುಡಿಗಳನ್ನು ನಮ್ಮ ಬಗ್ಗೆ ಹಲವರು ಮಾತಾಡ್ತಾ ಇರ್ತಾರೆ. ಆಗ ನಾವು ಅವರಿಗೆಲ್ಲಾ ಉತ್ತರ ಕೊಡೋಕೆ ಹೋಗಿ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಬದಲಾಗಿ ಸಾಧನೆಯ ಮೂಲಕ ಉತ್ತರ ಕೊಡಬೇಕು.ನಾವು ಅಶಕ್ತರಾದಾಗ ಪರರ ನಿಂದನೆಗಳಿಗೆ ಕಿವುಡರಾಗಿರಬೇಕು…

ಈಗ ನನಗೊಂದು ಬೈಕ್ ಬೇಕಾಯ್ತು. ನನ್ನ ಸೋದರಮಾವನಿಗೆ ಲೋನ್ ವಿಷಯದಲ್ಲಿ ಸಹಾಯ ಮಾಡಿದೆ ಅಂತಾ ಅವರ ಹೆಸರಿನಲ್ಲಿ ನನಗೆ ಒಂದು ಬೈಕ್ ಕೊಡಿಸಿದ್ರು. ತಮಾಷೆ ಅಂದ್ರೆ ನಾನು ಆಗ ಶೋರೂಮ್ನಿಂದ ಬಿಡಿಸಿಕೊಂಡು ಬರಲೂ ಬೈಕ್ ಓಡಿಸೋಕೆ ಬರ್ತಾ ಇರಲಿಲ್ಲ. ಆಗ ನನ್ನ ಗೆಳೆಯನೊಬ್ಬನನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ ಅವನ ಸಹಾಯದಿಂದ ಮನೆಗೆ ತಂದಿದ್ದೆ. ದೇವಸ್ಥಾನಕ್ಕೆ ಬೈಕ್ ಪೂಜೆಗೆ ಒಯ್ಯಬೇಕಾದ್ರೂ ತಳ್ಳಿಕೊಂಡೇ ಹೋಗಿದ್ದೆ. ಆನಂತರದಲ್ಲಿ ನಾನು ಕಲಿತು ಡಿ ಎಲ್ ಮಾಡಿಸಿಕೊಂಡೆ. ನಾನು ಮೆಡಿಕಲ್ ರೆಪ್ ದಾವಣಗೆರೆಯ ಚಾರ್ಜ್ ವಹಿಸಿಕೊಂಡ ನಂತರ ನನಗೆ ಹಲವಾರು ಚಾಲೆಂಜ್ಗಳು ಎದುರಾದವು. ಇದು ಟಾರ್ಗೆಟ್ ಜಾಬ್ ಎಂದು ಕೆಲಸಕ್ಕೆ ಸೇರಿದ ನಂತರ ಗೊತ್ತಾಯ್ತು. ವೈದ್ಯರುಗಳಿಂದ ನಮ್ ಕಂಪೆನಿಯ ಪ್ರೊಡಕ್ಟ್ಗಳನ್ನು ಬರೆಸುವುದು ಎಷ್ಟು ಕಷ್ಟ ಅಂತಾ ತಿಳೀತು. ಅಲ್ಲದೇ ನಾನು ದಾವಣಗೆರೆ ಮಾತ್ರವಲ್ಲದೇ ಶಿವಮೊಗ್ಗ, ಸಾಗರ, ಚಿತ್ರದುರ್ಗ, ರಾಣೆಬೆನ್ನೂರು ಹೀಗೆ ಬೇರೆ ಬೇರೆ ಊರುಗಳಿಗೆ ಪ್ರತೀ ತಿಂಗಳೂ ಹೋಗಬೇಕಿತ್ತು. ಅಲ್ಲದೇ ಹಿಂದಿದ್ದ ಮೆಡಿಕಲ್ ರೆಪ್ ಕೆಲವೊಂದು ಮೆಡಿಕಲ್ ಸ್ಟೋರ್ಗಳಲ್ಲಿ ನಮ್ಮ ಕಂಪೆನಿಯ ಪ್ರೊಡಕ್ಟ್ಗಳನ್ನು ಜಾಸ್ತಿ ಇರಿಸಿ ಹೋದ್ದರಿಂದ ಅವನ್ನು ಖಾಲಿ ಮಾಡಿಕೊಡುವ ಜವಾಬ್ದಾರಿಯೂ ನನ್ನ ಹೆಗಲೇರಿತ್ತು.
ನಾನು ಈ ಕೆಲಸವನ್ನು ತುಂಬಾ ಆಸ್ಥೆವಹಿಸಿ ಮಾಡಿದೆ. ಇದರಲ್ಲೇ ಲೈಫ್ ಕಂಡುಕೊಳ್ಳಬೇಕು ಅಂತಾ ತೀರ್ಮಾನಿಸಿದ್ದೆ. ತುಂಬಾನೆ ಕೆಲಸ ಮಾಡ್ತಿದ್ದೆ. ಅಂದಂದಿನ ರಿಪೋರ್ಟ್ಅನ್ನು ಅಂದಂದೇ ಕಳಿಸುತ್ತಿದ್ದೆ. ನನ್ನ ಹಾರ್ಡ್ ವರ್ಕಿಂಗ್ ನೇಚರ್ ಈ ಕೆಲಸದಲ್ಲಿ ಫಲ ಕೊಡಲು ಪ್ರಾರಂಭಿಸಿತು. ಮೊದಲ ತಿಂಗಳ ಟಾರ್ಗೆಟ್ಟಿನಲ್ಲಿ ಉತ್ತಮ ಸಾಧನೆ ಮಾಡಿದ್ದೆ. ಏರಿಯಾ ಸೇಲ್ಸ್ ಮ್ಯಾನೇಜರ್, ರಿಜಿಯನಲ್ ಸೇಲ್ಸ್ ಮ್ಯಾನೇಜರ್ ನನ್ನೀ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದರು.
ನಮಗೆ ತಿಂಗಳಿಗೊಮ್ಮೆ ಮೀಟಿಂಗ್ ಇರುತ್ತಿತ್ತು. ಅಲ್ಲಿ ತಿಂಗಳ ಸೇಲ್ಸ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ನನಗೆ ಇದ್ದ ಸರಿಸುಮಾರು 60 ಪ್ರೊಡಕ್ಟ್ಗಳಲ್ಲಿ ಬಹುತೇಕವುಗಳನ್ನು ಅವರ ಟಾರ್ಗೆಟ್ ರೀಚ್ ಮಾಡಿಸಲು ಯಶಸ್ವಿಯಾಗಿದ್ದೆ. ಕೆಲವೊಂದರಲ್ಲಿ ಇಡೀ ಕರ್ನಾಟಕಕ್ಕೆ ನಮ್ಮ ಕಂಪೆನಿಯಲ್ಲಿ ಟಾಪರ್ ಆಗೋವಷ್ಟು ಸೇಲ್ ಮಾಡಿದ್ದೆ. ಆದರೆ ಹಲ್ಲು ನೋವಿಗೆ ಬಳಸುವ ಟೂಥ್ ಪೇಸ್ಟ್ ಒಂದರ ಸೇಲ್ನಲ್ಲಿ ತುಂಬಾ ಕಮ್ಮಿ ಸಾಧನೆ ಮಾಡಿದ್ದೆ. ಇದುವರೆಗೂ ಹೊಗಳಿದವರು ಈ ವಿಷಯ ಬಂದಾಗ ನನ್ನನ್ನು ಹಿಗ್ಗಾ ಮುಗ್ಗಾ ಬಯ್ದರು. ನಾನು ತುಂಬಾ ಸೆನ್ಸಿಟೀವ್ ಆಗಿ ಇದ್ದುದ್ದರಿಂದ ಅಂದು ಅವರು ನೀಡಿದ್ದ ಸುಗ್ರಾಸ ಭೋಜನವನ್ನು ಸೇವಿಸಲು ಮನಸ್ಸಾಗಲಿಲ್ಲ… ಆಗ ಬೇರೆ ಮೆಡಿಕಲ್ ರೆಪ್ಗಳು ಬಂದು ಇಲ್ಲೆಲ್ಲಾ ಬಯ್ಯೋದು, ಬಯ್ಸಿಕೊಳ್ಳೋದು ಕಾಮನ್. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದಾಗ ನನಗೆ ಮನಸ್ಸಿಗೆ ಸಮಾಧಾನ ಎನ್ನಿಸಿತ್ತು.
ಬಸವಣ್ಣನವರ ವಚನದ “ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ” ಎಂಬ ಸಾಲನ್ನು ಮತ್ತೊಬ್ಬರ ಟೀಕೆಗಳಿಗೆ ಅನ್ವಯಿಸಿಕೊಳ್ಳಬೇಕು. “ನಮ್ಮ ಗೆಲುವಿನ ಮದ ತಲೆಗೆ ಹತ್ತದಿರಲಿ ಹಾಗೆಯೇ ಸೋಲಿನ ನೋವು ಹೃದಯಕ್ಕೆ ತಟ್ಟದಿರಲಿ” ಎಂಬ ಮಾತನ್ನು ನಾವು ಯಾವಾಗಲೂ ತಿಳಿದು ಅಳವಡಿಸಿಕೊಂಡರೆ ಉತ್ತಮ.

ಮೆಡಿಕಲ್ ರೆಪ್ ಕೆಲಸದಲ್ಲಿಯೂ ನನಗೆ ಹಲವಾರು ಕ್ಲಿಷ್ಟ ಪರಿಸ್ಥಿತಿಗಳು ಎದುರಾದವು. ಅದೇ ರೀತಿ ತಮಾಷೆಯೆ ಪ್ರಸಂಗಗಳೂ ಇವೆ. ಮಾರ್ಕೆಂಟಿಂಗ್ ಮಾಡಲು ಅನುಸರಿಸಿದ ಸೂಪರ್ ಐಡಿಯಾಗಳೂ ಇವೆ. ಅವನ್ನು ನಾವು ಮುಂದೆ ತಿಳಿಯೋಣ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
