ಇಂತಹ ಮಹಾಕುಂಭಮೇಳವನ್ನು ಪ್ರತ್ಯಕ್ಷವಾಗಿ ನೋಡಿ ಸಾಕ್ಷಿಯಾಗಿ ಅನುಭವಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅಪರೂಪದ ಘಳಿಗೆ. ಇಲ್ಲಿ ಸಾಧುಗಳ ಸಂಖ್ಯೆ ಹೆಚ್ಚಿದ್ದರೂ ಸಾಧ್ವಿಗಳಿಗೂ ಕೊರತೆಯಿರಲಿಲ್ಲ. ಅಲ್ಲಿದ್ದ ನೂರಾರು ಸಾಧ್ವಿಯರಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರವಚನಕಾರರು. ಜಪಾನಿನ ಯೋಗಮಾತಾ ಕಿಯೋಕೋ ಅಕೀವಾ ಅನ್ನುವ ಸಾಧ್ವಿಯೊಬ್ಬರು ದೀಕ್ಷೆತೊಟ್ಟು ಹಿಂದುಧರ್ಮದ ಅನುಯಾಯಿಯಾಗಿದ್ದು ಅಲ್ಲಿ ವರ್ಲ್ಡ್ ಪೀಸ್ ಕ್ಯಾಂಪೇನ್ ಕ್ಯಾಂಪ್ ಹಾಕಿದ್ದರು. ಆಕೆ ವಿಮೆನ್ ಪವರ್ ಎನ್ನುವ ಪ್ರವಚನದಲ್ಲಿ ಸಿದ್ಧ ಹಸ್ತೆ. ಹೆಣ್ಣು ಭ್ರೂಣ ಹತ್ಯೆ ನಿಷೇಧದಿಂದ ಹಿಡಿದು ಮಹಿಳೆಯರು ಸಂಘಟಿತರಾಗೋದರ ಅವಶ್ಯಕತೆಯವರೆಗೂ ಆಕೆಯ ಕಿವಿಮಾತು ಬುದ್ಧಿವಾದ ನಿತ್ಯವೂ ಅಲ್ಲಿ ಸಿಗುತ್ತಿತ್ತು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಈಗ ತಿರುಮಕೂಡಲು ನರಸೀಪುರದಲ್ಲಿ ಮೂರು ದಿನಗಳ ಕುಂಭಮೇಳ ನಡೆಯುತ್ತಿದೆ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳಕ್ಕೆ ಹೋಗಿದ್ದ ನೆನಪು ಮರುಕಳಿಸುತ್ತಿದೆ. ಮನುಷ್ಯರ ಹನ್ನೆರಡು ವರ್ಷಗಳು ದೇವತೆಗಳ ಹನ್ನೆರಡು ದಿನಗಳಿಗೆ ಸಮವಂತೆ. ಸಮುದ್ರ ಮಂಥನದಿಂದ ತಂದ ಅಮೃತದ ಕುಂಭ ಹೊತ್ತ ದೇವತೆಗಳು ಹನ್ನೆರಡು ವರ್ಷಗಳಿಗೊಮ್ಮೆ ಸಂಕ್ರಮಣದಿಂದ ಶಿವರಾತ್ರಿಯವರೆಗೂ ನಮ್ಮೊಡನೆಯೇ ವಾಸ ಮಾಡ್ತಿರ್ತಾರಂತೆ. ಗಂಗೆಯಷ್ಟು ವಿಶಾಲ, ಯಮುನೆಯಷ್ಟು ಆಳ, ಸರಸ್ವತಿಯಷ್ಟು ನಿಗೂಢವೆನಿಸೋ ಶ್ರದ್ಧೆ. ಇದೊಂದೇ ಲಕ್ಷಾಂತರ ಸಾಧು ಸಂತರನ್ನು ಕೋಟ್ಯಂತರ ಮನುಷ್ಯರನ್ನು ಒಂದೆಡೆಯಲ್ಲಿ ಹೀಗೆ ಹಿಡಿದಿಟ್ಟಿರೋದು.
ಕಣ್‌ಕರಣಗಳಿಗೆ ಸದಾಕಾಲವೂ ಇಲ್ಲಿ ದಕ್ಕುವುದೊಂದೇ ‘ದೇವರು ದೇವರು ಮತ್ತು ದೇವರು’. ಇಲ್ಲಿ ನಂಬಿಕೆಗಳಿಗೆ ಮಾತ್ರ ಪ್ರವೇಶ. ಶ್ರಾವಣಕ್ಕೆ ಹರೆಯದ ಉಕ್ಕೇರಿಸಿಕೊಳ್ಳುವ ಗಂಗೆ ಮಾಘದಲ್ಲಿ ಹೆಚ್ಚು ಸೌಮ್ಯ. ಹಾಗಾಗಿ ಗಂಗೆ, ಯಮುನೆ, ಗುಪ್ತಗಾಮಿನಿ ಸರಸ್ವತಿಯರ ತ್ರಿವೇಣಿ ಸಂಗಮ (ಪ್ರಯಾಗ)ದ ಸ್ಥಳದಲ್ಲಿ, 5000 ಎಕರೆಗಳಷ್ಟು ನದಿ ಪಾತ್ರದಲ್ಲಿ ಏಳುತ್ತವೆ ಸಾವಿರಾರು ಪೆಂಡಾಲುಗಳು. ದಾನಿಗಳ ಯಥಾಶಕ್ತಿಗೆ ಒದಗಿ ಬರುತ್ತವೆ ವಿದ್ಯುತ್ಚಕ್ತಿ, ನೀರು ಸರಬರಾಜು, ಶೌಚಾಲಯ, ಇಂಟರ್ನೆಟ್, ದೂರವಾಣಿ ಮುಂತಾದ ಸೌಲಭ್ಯಗಳು. ಪ್ರತೀ ಪೆಂಡಾಲುಗಳಲ್ಲೂ ನಿರಂತರವಾಗಿ ನಡೆಯುವ ಊಟ, ವಸತಿ, ಪ್ರವಚನ, ಭಜನೆಗಳು, ಸದ್ವಿಚಾರ ವಿನಿಮಯಗಳು, ಯೋಗ ಮತ್ತು ಅಧ್ಯಾತ್ಮ ಭೋಗಗಳು.
ಕೊನೆಗೊಮ್ಮೆ ಆದಿಶಂಕರಾಚಾರ್ಯ ಪೀಠದ ಅಧಿಪತಿಗಳ ಸಮ್ಮುಖದಲ್ಲಿ ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿಕೊಳ್ಳಲು ಬೇಕಾದ ಮಾರ್ಗ ಸೂಚಿಯ ಘೋಷಣೆಯಾಗುತ್ತದೆ ಇಲ್ಲಿ. ಹಿಂದೂ ಧರ್ಮದ ಪ್ರವರ್ಧಕರ, ಅನುಯಾಯಿಗಳ ಜಾತ್ರೆಯಿದು. ನಂಬಿಕೆ, ಮೂಢನಂಬಿಕೆ, ಸಹ್ಯ, ಅಪಸವ್ಯ, ವರ್ಗೀಕರಣ, ಗಲೀಜು, ಸಾಧುಗಳು, ಢೋಂಗಿಗಳು, ಭಕ್ತರು, ತಿಳಿಯದವರು, ಅಕ್ಕನಾಗಿ ಹರಿಯೋ ಗಂಗೆ, ಪಕ್ಕದಲ್ಲೇ ಕೊಚ್ಚೆ ರಾಡಿ, ಭಂಗಿ ಸೇದೋ ಗುರುಗಳು, ಮೈ ಕಾಯಿಸಿಕೊಳ್ಳೋ ಶಿಷ್ಯರು, ದೇವರು ಹೊಕ್ಕವರು, ಬರಿದಾದ ಭಿಕ್ಷುಕರು, ಗಂಡಸರನ್ನು ನಂಬಿದ ಹೆಂಗಸರು, ಬದುಕಲು ಬಲ್ಲ ಗಂಡಸರು, ಮುಮುಕ್ಷಿಗಳು, ಆಸೆಗಣ್ಣ ಮಕ್ಕಳು, ಶೃತಿ ಅಪಶೃತಿ ಗಾಯನಗಳು, ರಾಮಲೀಲೆ ನಟರು, ಜಟೆ ಕಟ್ಟಿಕೊಂಡ ಬಾಬಾಗಳು, ಶ್ಯಾಂಪು ಹಾಕಿಕೊಂಡ ಥಳಥಳ ಕೂದಲಿನ ಸಾಧುಗಳು, ಮೈಗೆ ಬೂದಿ ಬಳಿದುಕೊಂಡ ನಾಗಾಗಳು, ಹೇರ್ ಸ್ಪಾ ಮಾಡಿಕೊಂಡು ಮಿರಮಿರ ಮಿಂಚುವ ಸಂತರು, ತಲೆ ಮೇಲೆ ಸೆರಗ್ಹೊದ್ದು ದಾರಿಗಾಣದೆ ಎಡವುವ ಹೆಂಗಸರು, ಜೀನ್ಸ್ ಪ್ಯಾಂಟು ಟೈಟ್ ಟೀ ಷರ್ಟ್ ಧಾರಿಣಿಯರು, ಅವಾಚ್ಯ ಪದ ಬಳಸೋ ಮಾಲೀಕರು, ಗುಟ್ಕಾ ತುಂಬಿಕೊಂಡು ಮೌನವಹಿಸೋ ಡ್ರೈವರ್‌ಗಳು, ರಣರಣ ಬಿಸಿಲು, ಅಸ್ಥಿ ಮುರಿಯೋ ಛಳಿ, ಪೂರಿ ಹಲ್ವ ಪಾನೀಪುರಿಗಳು, ಚೌಮಿನ್ ಮಂಚೂರಿಗಳು ರುಚಿಸೋ ಗಾಡಿಗಳು, ಕೋಟ್ಯಾಂತರ ಹೊಟ್ಟೆಗಳಿಗಾಗಿ ಸಾತ್ವಿಕ ಪ್ರಸಾದ ಸಿದ್ಧಪಡಿಸೋ ಅಡುಗೆ ಡೇರಾಗಳು, ಹೆಣ್ಣು ಗಂಡು ಬೇಧವಿಲ್ಲದೆ ದೇಹಬಾಧೆಗೆ ಸಾಕ್ಷಿಯಾಗೋ ರಸ್ತೆ ಅಂಚುಗಳು, ಹೊತ್ತುಗೊತ್ತಿಲ್ಲದೆ ಮಧ್ಯ ರಸ್ತೆಯಲ್ಲೇ ಗಡ್ಡ ಹೆರೆಯೋ ಕ್ಷೌರಿಕರುಗಳು, ಹಸಿವು ಮತ್ತು ನಿದ್ರೆಯಲ್ಲಿ ನಾವೆಲ್ಲರೂ ಸಮಾನರು ಅಂತ ಸಾರಿ ಹೇಳೋ ಹಾದಿ ಬೀದಿಯ ಊಟದ ವ್ಯವಸ್ಥೆ, ಮಣ್ಣಿನ ಹಾಸಿಗೆ ಆಕಾಶದ ಹೊದಿಕೆಗಳು, ಕುತೂಹಲಿ ವಿದೇಶೀ ಬಿಳಿಬಣ್ಣಗಳು, ‘ಅಹಂ ಬ್ರಹ್ಮಾಸ್ಮಿ’ ಎಂದುಕೊಂಡ ನಮ್ಮೂರ ಕಪ್ಪು ತೊಗಲುಗಳು, ಶೈವರು, ವೈಷ್ಣವರು, ವಿಭೂತಿ ಪಟ್ಟೆಗಳಿರುವವರು, ಮೂರು ನಾಮಧಾರಿಗಳು, ಬೇಕಾದ್ದು ಬೇಡವಾದ್ದು ಮಾರೋ ಗೂಡಂಗಡಿಗಳು, ಧೂಳಿಗೆ ಹೆದರಿ ತಮ್ಮೊಡನೆಯೇ ಆಮ್ಲಜನಕ ಹೊತ್ತು ತರೋ ದೊಡ್ಡವರು, ವಿಜ್ಞಾನಕ್ಕೆ ಇನ್ನೂ ಸವಾಲಾಗಿರುವ ವಿವಿಧ ರೀತಿಯ ವಿಕಲಾಂಗರು ಹೀಗೆ ಎಲ್ಲವೂ ಕೈಯಳತೆಯಲ್ಲೇ ಸಿಕ್ಕುವ ಮಹಾ ಮೇಳವಿದು.
ಇಂತಹ ಮಹಾಕುಂಭಮೇಳವನ್ನು ಪ್ರತ್ಯಕ್ಷವಾಗಿ ನೋಡಿ ಸಾಕ್ಷಿಯಾಗಿ ಅನುಭವಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅಪರೂಪದ ಘಳಿಗೆ. ಇಲ್ಲಿ ಸಾಧುಗಳ ಸಂಖ್ಯೆ ಹೆಚ್ಚಿದ್ದರೂ ಸಾಧ್ವಿಗಳಿಗೂ ಕೊರತೆಯಿರಲಿಲ್ಲ. ಅಲ್ಲಿದ್ದ ನೂರಾರು ಸಾಧ್ವಿಯರಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರವಚನಕಾರರು. ಜಪಾನಿನ ಯೋಗಮಾತಾ ಕಿಯೋಕೋ ಅಕೀವಾ ಅನ್ನುವ ಸಾಧ್ವಿಯೊಬ್ಬರು ದೀಕ್ಷೆತೊಟ್ಟು ಹಿಂದುಧರ್ಮದ ಅನುಯಾಯಿಯಾಗಿದ್ದು ಅಲ್ಲಿ ವರ್ಲ್ಡ್ ಪೀಸ್ ಕ್ಯಾಂಪೇನ್ ಕ್ಯಾಂಪ್ ಹಾಕಿದ್ದರು. ಆಕೆ ವಿಮೆನ್ ಪವರ್ ಎನ್ನುವ ಪ್ರವಚನದಲ್ಲಿ ಸಿದ್ಧ ಹಸ್ತೆ. ಹೆಣ್ಣು ಭ್ರೂಣ ಹತ್ಯೆ ನಿಷೇಧದಿಂದ ಹಿಡಿದು ಮಹಿಳೆಯರು ಸಂಘಟಿತರಾಗೋದರ ಅವಶ್ಯಕತೆಯವರೆಗೂ ಆಕೆಯ ಕಿವಿಮಾತು ಬುದ್ಧಿವಾದ ನಿತ್ಯವೂ ಅಲ್ಲಿ ಸಿಗುತ್ತಿತ್ತು. ನಂತರ ಭೇಟಿಯಾಗಿದ್ದು ಕೂಷ್ಮಾ ಬಾಯಿ, ಜಾನಕೀ ಬಾಯಿ, ಮಾಯಾದೇವಿ ಮಾ, ರೀತಾ ಸುಖದೇವಿ, ಗಾಯತ್ರಿದೇವಿ, ಕಾತ್ಯಾಯಿನಿ ಮಾತಾ, ಸಚೀ ದೇವಿ, ಅಭಿರಾಮಿ ಮಾಯಿ, ಹೇಮಕೇಶಿ ಶಿರೋಮಣಿ ಅನುಭೂತಿ ದೇವಿ ಇನ್ನೂ ಮುಂತಾದ ಸಾಧ್ವಿಗಳೊಂದಿಗೆ.
ಸಾಧ್ವಿಯರು ಮತ್ತು ಪ್ರವಚನಕಾರರಲ್ಲಿ ಅವಿವಾಹಿತ ಯುವ ಮಹಿಳೆಯರದ್ದೇ ಬಹುಪಾಲು. ಹಾಗಿದ್ದವರಲ್ಲಿ ಮಾತಿಗೆ ಸಿಕ್ಕವರು ಮಹಾರಾಷ್ಟ್ರದಿಂದ ಬಂದಿದ್ದ ಮೃಣಾಲಿನಿ ಆಯಿಯವರು. ತಮ್ಮ ಕುಟುಂಬದೊಂದಿಗೇ ಇದ್ದುಕೊಂಡು ತಾವು ನಂಬಿದ ಗುರುಗಳ ಆಶ್ರಮದೊಂದಿಗೆ ಗುರುತಿಸಿಕೊಂಡು ಅಲ್ಲಿಯೇ ಸೇವೆಯನ್ನು ಮಾಡುತ್ತಾ ಕಳೆದ ಹದಿನಾಲ್ಕು ವರ್ಷಗಳಿಂದ ಪ್ರವಚನ ನೀಡುತ್ತಿದ್ದರವರು. ಕಾವಿಯನ್ನು ಸ್ವಯಿಚ್ಛೆಯಿಂದ ಸ್ವೀಕರಿಸಿದ್ದರವರು. ಮತ್ತು ಕೆಲವರು ವ್ಯಾಸಪೀಠದಲ್ಲಿರುವವರೆಗಷ್ಟೇ ಕಾವಿಧಾರಿಗಳು. ಉಳಿದಂತೆ ಪಕ್ಕಾ ಸಂಸಾರಸ್ಥರು. ಕೆಲವರಂತೂ ಸಕಲವನ್ನೂ ತೊರೆದು ಆಶ್ರಮಗಳಲ್ಲೇ ನೆಲೆಸಿ ದೊಡ್ಡ ಗುರುಗಳ, ಸ್ವಾಮಿಗಳ ಸೇವೆಗೆ ಸಂಪೂರ್ಣ ಜೀವನ ಮೀಸಲಿಟ್ಟವರು. ಬೆರಳೆಣಿಕೆಯಷ್ಟು ಮಹಿಳೆಯರು ತಮ್ಮದೇ ಆಶ್ರಮಗಳನ್ನು ಕಟ್ಟಿಕೊಂಡು, ವಿದೇಶೀ ಭಕ್ತರನ್ನೂ ಆಕರ್ಷಿಸುವ ಮಟ್ಟಿಗೆ ಬೆಳೆದು ಜನ ಸೇವೆ ಮಾಡುತ್ತಿದ್ದಾರೆ.
ಇನ್ನೂ ಕೆಲವರು ನಿರ್ಗತಿಕರಾಗಿ ಅನಿವಾರ್ಯತೆಯಿಂದ ಸನ್ಯಾಸಿನಿಯರಾಗಿದ್ದಾರೆ. ನಿರ್ಗತಿಕ, ದಿಕ್ಕು ತಪ್ಪಿದ ವಿದೇಶೀ ಮಹಿಳೆಯರೂ ಇಲ್ಲಿ ಬಂದು ದೀಕ್ಷೆ ತೊಟ್ಟು ಸನ್ಯಾಸಿನಿಯರಾಗಿದ್ದರು. ನಾಗಾ ಸಾಧುಗಳಂತೆ ನಾಗಾ ಸಾಧ್ವಿಗಳೂ ಇರುತ್ತಾರೆಂದು ಕೇಳಿ ತಿಳಿದಿತ್ತು. ಆದರೆ ಅಲ್ಲೆಲ್ಲೂ ಅಂಥವರ ದರ್ಶನವಾಗಲಿಲ್ಲ. ಲಕ್ಷಾಂತರ ಸಾಧು ಸಾಧ್ವಿಗಳ ಈ ಮೇಳದಲ್ಲಿ ನಿಜವಾದ ಸಾಧ್ವಿಗಳು ಯಾರು, ಢೋಂಗಿಗಳು ಯಾರು ಅನ್ನುವುದನ್ನು ಗುರುತಿಸುವುದು ಒಂದು ದೊಡ್ಡ ಸವಾಲಂತೂ ಹೌದು.
ಮೃಣಾಲಿನಿ ಆಯಿಯವರೊಡನೆ ಮಾತು ಮುಗಿಸಿ ಹೊರ ಬರುತ್ತಿದ್ದಂತೆ, ಏಕದಂ “ಜೈ ಭೋಲೆನಾಥ್ ಜೈ ಭೋಲೆನಾಥ್” ಎನ್ನುವ ಕೂಗಿನೊಂದಿಗೆ “ಜಾಗ ಬಿಡಿ ಜಾಗ ಬಿಡಿ” ಎನ್ನುವ ಕೂಗೂ ಕೇಳಿಸಿತು. ಆ ದಿಕ್ಕಿಗೆ ತಿರುಗಿದರೆ ಒಂದಿಪ್ಪತೈದು ಮೂವತ್ತು ತಲೆ ಬೋಳಿಸಿಕೊಂಡ, ರವಿಕೆಯಿಲ್ಲದೆ ಬಿಳಿಸೀರೆಯುಟ್ಟ ಐವತ್ತು ದಾಟಿದ ಹೆಂಗಸರು ಕೈಯಲ್ಲಿ ಕೇಸರಿ ತ್ರಿಕೋನ ಬಟ್ಟೆ ಕಟ್ಟಿದ ದಂಡ ಹಿಡಿದು ಸಾಲಾಗಿ ಬರುತ್ತಿದ್ದರು. ಅವರ ಗುಂಪನ್ನು ಕಾಯಲು ಒಂದಷ್ಟು ಕೇಸರಿಧಾರಿ ಪುರುಷರು ಇಬ್ಬರು ಹುಲಿ ಚರ್ಮ ಹೊದ್ದ ಬಾಬಾಗಳು. ಆ ಹೆಂಗಸರ ಮುಖದಲ್ಲಿ ಸನ್ಯಾಸಿಯ ವೈರಾಗ್ಯ, ಸಾಧ್ವಿಯ ಪ್ರಖರತೆ ಯಾವುದೂ ಕಾಣಲಿಲ್ಲ. ಬಲವಂತದ ಮಾಘ ಸ್ನಾನದ ಭಾವವಿತ್ತು. ನನ್ನ ಪಕ್ಕದಲ್ಲಿ ಇದ್ದ ವಯಸ್ಸಾದ ಸಾಧುವೊಬ್ಬರನ್ನು ಕೇಳಿದೆ “ಏನಿದು?” ಆತ ಹೇಳಿದರು “ನಿರ್ಗತಿಕ ಮಹಿಳೆಯರಿಗೆ ದೀಕ್ಷೆ ನೀಡಲಾಗಿದೆ”. ಎರಡು ಹೆಜ್ಜೆ ಮುಂದೆ ಹೋಗಿ ಫೋಟೊ ತೆಗೆದೆ. ಅಷ್ಟರಲ್ಲಿ ಹುಲಿಚರ್ಮಧಾರಿಯೊಬ್ಬ ಬಾಯಿಗೆ ಬಂದಂತೆ ನನ್ನನ್ನು ಬೈದ. ನನಗೆ ಉತ್ತರಿಸಿದ್ದ ಸಾಧುವೂ ಅದೇ ಗುಂಪಿನಲ್ಲಿ ನುಸುಳುತ್ತಿದ್ದ. ನಾ ಆತನನ್ನೇ ಕೇಳಿದೆ “ನಿರ್ಗತಿಕ ಗಂಡಸರಿಗೂ ಹೀಗೇ ದೀಕ್ಷೆ ಕೊಡುತ್ತೀರಾ?” ಅಂತ. ಆತ ನನ್ನ ಕಣ್ಣಲ್ಲಿ ಕಣ್ಣಿಟ್ಟು “ಜೈ ಭೋಲೆನಾಥ್” ಎನ್ನುತ್ತಾ ಹೊರಟುಹೋದ.
ಅಲ್ಲಿ ಓಡಾಡುತ್ತಿದ್ದ ಸ್ವಯಂಸೇವಕರನ್ನು ಸಾಧುಗಳನ್ನು ಬಿಡದೆ ನಾ ಕೇಳುತ್ತಿದ್ದ ಪ್ರಶ್ನೆ ಎಂದರೆ “ಮನೆಗೆ ಹೊರೆ ಅನಿಸಿದ ಹಿರಿ ಜೀವಗಳನ್ನು, ಗಂಡ ತೀರಿಕೊಂಡ ಹೆಣ್ಣುಮಕ್ಕಳನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಾರಂತೆ ನಿಜವೇ?” ಕೆಲವರು ಹೂಂ ಎಂದರು. ಮತ್ತೆ ಕೆಲವರು ಇಲ್ಲ ಅಂದರು. ಸೀದಾ ಪೋಲಿಸ್ ಕಂಟ್ರೋಲ್ ರೂಮಿಗೆ ನುಗ್ಗಿದೆ. ಒಂದು ಎರಡು ಮೂರು ಹೀಗೆ ವಿಧ ವಿಧ ಸ್ಟಾರ್ಸ್‌ಗಳ ಪೊಲೀಸರು ಅಲ್ಲಿದ್ದರು. ಎಲ್ಲರನ್ನೂ ಇದೇ ಪ್ರಶ್ನೆ ಕೇಳಿದೆ. ಕಡೆಗೂ ಒಬ್ಬ ಪೊಲೀಸ್ ಅಧಿಕಾರಿ ಹೇಳಿದ್ದು “ನನ್ನ 33 ವರ್ಷಗಳ ಸರ್ವೀಸ್‌ನಲ್ಲಿ 8 ಕುಂಭಮೇಳಗಳನ್ನು ಕಂಡಿದ್ದೇನೆ. ಮೊದಲು ಇಂಥ ಸಮಸ್ಯೆ ಹೆಚ್ಚಿರುತ್ತಿತ್ತು. ಈಗ ಸಾಕಷ್ಟು ಕಡಿಮೆಯಾಗಿದೆ. ಹಾಗೆ ನಿರ್ಗತಿಕರಾಗುವವರನ್ನು ಇಲ್ಲಿ ಡೇರಾ ಹಾಕಿರುವ ಸ್ವಾಮೀಜಿಗಳು ತಮ್ಮತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಹಾಗಲ್ಲ, ಎಲ್ಲರ ನೋಂದಾವಣೆ ಆಗುತ್ತದೆ. ಸರ್ಕಾರ ಗುರುತಿಸಿರುವ ಆಶ್ರಮಗಳಲ್ಲಿ ಅವರಿಗೆ ಏರ್ಪಾಡು ಮಾಡಲಾಗುತ್ತದೆ. ಮತ್ತೆ ಕೆಲವರು ವಾರಣಾಸಿಯ ಮುಮುಕ್ಷು ಭವನಕ್ಕೇ ತಾವೇ ಹೋಗಿಬಿಡುತ್ತಾರೆ “ಹೂಂ, ತಲ್ಲಣಿಸದಿರು ಕಂಡ್ಯಾ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯ ಬೇಡ” ಎಂದಿದ್ದಾರಲ್ಲವೇ ಕನಕದಾಸರು. ರವಿಶಂಕರ್ ಗುರೂಜಿ, ನಿತ್ಯಾನಂದ ಎಲ್ಲರೂ ಅಲ್ಲಿದ್ದರು. ಮಾನಸ ರಾಮಚಂದ್ರ ಮಠದ ಗುರುವರ್ಯರೂ ಪ್ರವಚನ ನೀಡುತ್ತಿದ್ದರು. ಮುಂದೊಮ್ಮೆ ಇನ್ನೂ ಹೆಚ್ಚಿನ ಅನುಭವವನ್ನು ಹಂಚಿಕೊಳ್ಳುವೆ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.
ಕುಂಭ ಮೇಳದ ಕುತೂಹಲದ ಲೇಖನ. ನಮಗೂ ಒಮ್ಮೆ ನೋಡಬೇಕು, ಭಾಗಿಯಾಗಬೇಕು ಎನಿಸಿದೆ.
ಲೇಖನ ಮೆಚ್ಚಿದ್ದಕ್ಕೆ ಧನ್ಯಾದಗಳು. ಹೋಗಿ ಬನ್ನಿ ಒಮ್ಮೆ. ಒಳಿತಾಗಲಿ.
ಅಂಜಲಿ ರಾಮಣ್ಣ