ಸುಮಿತ್ರಾ ಆತ್ಮಕಥೆ: ಕಲ್ಯಾಣಿ ಆಕಳೂ, ಮುದುಕಿ ದುರ್ಗಿಯೂ

ನನ್ನ ದೊಡ್ಡಪ್ಪ ಕೃಷ್ಣಮೂರ್ತಿ ದೊಡ್ಡಮ್ಮ ಶಾರದಾ. ಅವರಿಗೆ ಮಕ್ಕಳಿರಲಿಲ್ಲ. ದೊಡ್ಡಪ್ಪನಿಗೆ ತಮ್ಮಂದಿರು, ಅವರ ಮಕ್ಕಳು, ತಂಗಿ ತಂಗಿಯ ಮಕ್ಕಳ ಮೇಲೆ ಬಹಳ ಪ್ರೀತಿ ಇತ್ತು. ಕಲ್ಯಾಣಿ ಎನ್ನುವ ನಮ್ಮ ಬಾಡಿಗೆದಾರಳ ಮನೆಯ ಆಕಳು ಯಾವಾಗಲೂ ಹಿತ್ತಲಿಗೆ ನುಗ್ಗಿ ತರಕಾರಿಯನ್ನು ತಿಂದು ಹಾಕುತ್ತಿತ್ತು. ಆ ಕಲ್ಯಾಣಿ ನನ್ನ ಚಿಕ್ಕಪ್ಪನ ತೋಟದ ಹೂ ಕದಿಯುತ್ತಿದ್ದಳು. ಅದರಿಂದ ತಲೆ ಕೆಟ್ಟು ಹೋದ ದೊಡ್ಡಪ್ಪ ‘ಆ ಕಲ್ಯಾಣಿಯ ಕೈ ಕಾಲು ಮುರಿದು ಅವಳ ಆಕಳನ್ನು ಕಡಿದು ತೋರಣ ಕಟ್ತೇನಿ. ನನಗೆ ನಾಳೆ ಈ ವಿಷಯ ನೆನಪು ಮಾಡು’ ಅಂತ ನನಗೆ ಹೇಳಿದ್ದ.

ಆಕಳು ಬಹಳ ಸುಂದರವಾಗಿತ್ತು. ಅದನ್ನು ಕಡಿಯುವದು ದುಃಖದ ಸಂಗತಿಯಾಗಿದ್ದರೂ ಕಲ್ಯಾಣಿಯ ಕೈ ಕಾಲು ಕತ್ತರಿಸುವದು ನನಗೆ ಅತ್ಯಂತ ಖುಷಿಯ ವಿಷಯವಾಗಿತ್ತು. ಕಾರಣ ಯಾವಾಗಲೂ ಕಲ್ಯಾಣಿ ನನಗೆ ವಿನಾಕಾರಣ ಬಯ್ಯುತ್ತಿದ್ದಳು.
‘ಈ ಹುಡ್ಗಿ ಹೆಂಗೆ ಜೋಯ್ಸರ ಮನೇಲಿ ಹುಟ್ತೋ ಏನೋ ದೇವ್ರೆ ಬಲ್ಲ. ಯಾತ್ಯಾತಕ್ಕೂ ಉಪಯೋಗಿಲ್ದ ಹುಡ್ಗಿ ಮರಾಯ್ರೆ. ಇದ್ರ ಮೈ ಬಣ್ಣ ನೋಡ್ರಿ ಕಸಬಳಿವ ಹುಡ್ಗಿ ಹಂಗ ಕಾಣ್ತದೆ. ಗಂಡುಬೀರಿ……’.
‘ಶಂಕ್ರ, ಪುಟ್ಟಾಪಿ, ಸಾವಿ, ಗೋವಿಂದ ಎಲ್ಲಾ ಎಷ್ಟು ಗನಾ ಹುಡ್ರು ಇದ ನೋಡ್ರಿ ಇದ್ರ ಮಾತೋ ಕತೆಯೋ…..’

ಅದಕ್ಕೆ ಕಲ್ಯಾಣಿಯ ಮೇಲೆ ನನಗೆ ಸಿಟ್ಟು ಇತ್ತು. ರಾತ್ರಿಯೆಲ್ಲ ಎದ್ದೆದ್ದು ಗಡಿಯಾರ ನೋಡುತ್ತಿದ್ದೆ. ಬೆಳಗಾಗುವದನ್ನೇ ಕಾಯುತ್ತಿದ್ದ ನಾನು ‘ದೊಡ್ಡಪ್ಪಾ ಏಳು ಆಕಳು ಕಡೀಬೇಕು. ಕಲ್ಯಾಣಿ ಕೈಕಾಲು ಕತ್ರಸ್ಬೇಕು ತೋರಣಾ ಕಟ್ಬೇಕು. ದೊಡ್ಡಪ್ಪಾ ಏಳು ಬೇಗೆ ಏಳು’ ಅಂತಾ ದೊಡ್ಡಪ್ಪನ್ನ ಎಬ್ಬಿಸುತ್ತಿದ್ದಾಗ ಅಲ್ಲಿಗೆ ಬಂದ ನನ್ನಮ್ಮ ‘ಏಳೇ ಅಲ್ಲಿಂದ ಆ ದೊಡ್ಡಪ್ಪ ಹೇಳಾಂವ ಈಕಿ ಕೇಳಾಕಿ’ ಅಂತಾ ಜೋರು ಮಾಡಿ ನಾನು ದೊಡ್ಡಪ್ಪಂಗೆ ರಿಮೈಂಡ್ ಮಾಡಲಿರುವ ವಿಷಯ ಮರೆಸಿದ್ದಳು. ದೊಡ್ಡಪ್ಪ ಉಗ್ರ ನರಸಿಂಹ. ಹೇಳಿದಂತೆ ಮಾಡೇ ಬಿಡುತ್ತಾನೆಂದು ಎಲ್ಲರೂ ಹೆದರಿದ್ದರು. ಈ ಘಟನೆ ನಡೆಯದೇ ಕಲ್ಯಾಣಿಯ ಕೈಕಾಲು ಕತ್ತರಿಸಿ ತೋರಣ ಕಟ್ಟದೇ ಆ ದಿನ ನನಗೆ ನಿರಾಸೆಯಾದದ್ದಂತೂ ದೇವರಾಣೆಗೂ ಸತ್ಯ. ಕೆಟ್ಟ ಮಾತುಗಳನ್ನು ಮುಗ್ಧ ಪುಟ್ಟ ಮನಸು ಅದೆಷ್ಟು ಬೇಗ ಗ್ರಹಿಸಿ ಬಿಡುತ್ತದೆಯಲ್ಲ. ಅದಕ್ಕೆ ಮಕ್ಕಳು ಒಳ್ಳೆಯ ಪರಿಸರದಲ್ಲಿ ಬೆಳೆಯಬೇಕು ಅನ್ನುತ್ತಾರೆ. ಪುಣ್ಯಕ್ಕೆ ದೊಡ್ಡಪ್ಪ ಬೇಗ ಸತ್ತು ಹೋದ. ಇಲ್ಲದಿದ್ದರೆ ಒಂದು ಇರುವೆಯನ್ನು ತುಳೆಯದ ನಾನು ಅದೆಷ್ಟು ಕ್ರೂರಿಯಾಗಿಬಿಡುತ್ತಿದ್ದೆನೋ ಏನೋ.

*******

ಮಂಡಕ್ಕಿ ದುರ್ಗಿ

ಪೊಲೀಸರಿಗೆ ರ‍ಾಷ್ಟ್ರೀಯ ಭಾವೈಕ್ಯದ ಹಾಡುಗಳನ್ನು ಕಲಿಸುತ್ತಿರುವ ಸುಮಿತ್ರಾ.ನಮ್ಮ ವಠಾರದಲ್ಲಿ ದುರ್ಗಿ ಎನ್ನುವ ಒಬ್ಬ ಹಣ್ಣು ಮುದುಕಿಯಿದ್ದಳು. ಯಾರಾದರೂ ಅವಳಿಗೆ ನಿನ್ನ ವಯಸ್ಸೆಷ್ಟು ಎಂದು ಕೇಳಿದರೆ ಬ್ರಹ್ಮಾಂಡ ಸಿಟ್ಟು ಬರುತ್ತಿತ್ತು.
‘ದುರ್ಗಿ ನಿನ್ನ ಹಲ್ಲೆಲ್ಲ ಏನಾದ್ವು?’ ಅಂತ ಕೇಳಿದ್ರೆ
‘ಕಿತ್ತೂರ ಕೀಚಕಾ, ದಸಕಂಟ ರಾವಣಾ ನನ್ನ ಗಂಡ ಗುದ್ದಿ ಗುದ್ದಿ ಉದುರಿಸಿದ’ ಅಂತಿದ್ಲು.
‘ತಲೆ ಕೂದಲು ಬೆಳ್ಳಗೆ ಇದೆಯಲ್ಲಾ’ ಅಂದ್ರೆ
‘ಅಡವಿಲಿ ಜೇನು ತರ‍್ಲಿಕ್ಕೆ ಹೋಗ್ತಿದ್ವಿ ನಾನು ನನ್ನ ತಮ್ಮ ಯಂಕ. ಅಂವ ಮೇಲಿಂದ ಜೇನು ಹುಟ್ಟು ಹಿಂಡ್ತಿದ್ದಾ ಅದು ತಲೆ ಮೇಲೆಲ್ಲಾ ಬಿದ್ದು ಬೆಳ್ಳಗಾತು. ಜೇನ್ತುಪ್ಪಾ ತಾಗಿದ್ರೆ ಕೂದ್ಲು ಬೆಳ್ಳಗಾತ್ತಲ್ದಾ?….’ ಅಂತಿದ್ಲು.

ತಾನು ಇನ್ನೂ ಸುಂದರ ತರುಣಿ ಎಂಬ ಭ್ರಮೆ ಇತ್ತು ಅವಳಿಗೆ. ಬಹಳ ಅಂದ್ರೆ ಬಹಳ ಬಡವಿ. ಮಕ್ಕಳೆಲ್ಲ ಅವಳನ್ನು ಬಿಟ್ಟು ಹೋಗಿದ್ರು. ಅವಳು ಬತ್ತ ನೆನೆ ಹಾಕಿ ಅದನ್ನು ಕುದಿಯುವ ನೀರಲ್ಲಿ ಹಾಕಿ- ಒಣಗಿಸಿ ಹುರಿದು ಮಂಡಕ್ಕಿ ಮಾಡುತ್ತಿದ್ದಳು. ಬೆಲ್ಲದ ಪಾಕ ಮಾಡಿ ಆ ಮಂಡಕ್ಕಿಯಲ್ಲಿ ಅರ್ಧದಷ್ಟು ಹಾಕಿ ಉಂಡೆ ಕಟ್ಟುತ್ತಿದ್ದಳು. ಪ್ರತಿ ಗುರುವಾರ ಮಂಡಕ್ಕೆ ಉಂಡೆ ಬಾಕಿ ದಿನ ಸಾದಾ ಮಂಡಕ್ಕಿ ಬುಟ್ಟಿಯಲ್ಲಿ ಹೊತ್ತು ದೂರ ದೂರದವರೆಗೆ ಮಾರಿಕೊಂಡು ಬರುತ್ತಿದ್ದಳು. ವ್ಯಾಪಾರಕ್ಕೆ ಹೋಗುವ ಮೊದಲು ನನ್ನ ಚಿಕ್ಕಪ್ಪನ ಮಗ ಚಿದಂಬರನಿಗೆ ಉಂಡೆ ಹೊಸಿಲ ಮೇಲಿಟ್ಟು ‘ಪೀತಾಂಬ್ರ ಈಗಾ….. ತಿನ್ನು ಮಗಾ. ಇಲ್ಲಿಡ್ತೆ ಹಾಂ…’ ಅನ್ನುತ್ತ ಹೊರಟು ಹೋಗುತ್ತಿದ್ದಳು.

ಅವಳಿಗೆ ಚಿದಂಬರಾ ಅನ್ನಲು ಕೂಡ ಬರುತ್ತಿರಲಿಲ್ಲ. ನನ್ನಜ್ಜಿ ಪಾರ್ವತಿ ನನ್ನ ಕರೆದು ಆ ಉಂಡೆ ತಗೊಂಡು ದೂರ ಒಗೆದು ಬಾ ಅಂತಿದ್ಲು. ಅಂದ್ರೆ ಆಸ್ತಿ ಪಾಸ್ತಿ ಸಲುವಾಗಿ ಮಕ್ಕಳಿಗೆ ಯಾರಾದ್ರೂ ವಿಷ ತಿನ್ನಿಸಬಹುದು ಎಂದು ಅವಳಿಗೆ ಯಾವಾಗಲೂ ಹೆದರಿಕೆ ಇರುತ್ತಿತ್ತು. ಪಾಪ ಅಂಥಾ ಮುದುಕಿ ಅಷ್ಟು ಕಷ್ಟಪಟ್ಟು ಮಾಡಿ ಅಷ್ಟೊಂದು ಪ್ರೀತಿಯಿಂದ ಕೊಟ್ಟಿದ್ದನ್ನು ಒಗೆಯಲು ನನಗೆ  ಮನಸು ಬರುತ್ತಿರಲಿಲ್ಲ. ನನ್ನ ತಮ್ಮ ಗೋವಿಂದನಿಗೆ ಅರ್ಧ ಕೊಟ್ಟು ನಾನರ್ಧ ತಿನ್ನುತ್ತಿದ್ದೆ. ಆ ದುರ್ಗಿ ಬೀಡಿ ಕಟ್ಟುತ್ತಿದ್ದಳು. ನನಗೆ ತಂಬಾಕಿನ ಘಾಟು ವಾಸನೆಗೆ ವಾಂತಿಯಾಗುತ್ತದೆ. ಆದರೂ ಸಹ ನಾನು ದುರ್ಗಿಗೆ ಬೀಡಿ ಎಲೆ ತೊಳೆದು ಬಟ್ಟೆಯಿಂದ ಒರೆಸಿ ನೆರಳಲ್ಲಿ ಗಾಳಿಗೆ ಒಣ ಹಾಕಲು ಸಹಾಯ ಮಾಡುತ್ತಿದ್ದೆ. ಬೀಡಿ ಎಲೆ ಖಡಕ್ ಇದ್ದರೆ ಸೀಳಿ ತಂಬಾಕು ಹೊರಗೆ ಬರುತ್ತದೆ ಅನ್ನುತ್ತಿದ್ದಳು. ಒಂದು ಚೌಕಾದ ಬಿದಿರಿನ ತಟ್ಟೆ-ಅಕ್ಕಿ ಕೇರುವ ಮರದಂಥದ್ದು ಅದರಲ್ಲಿ ಬೀಡಿ, ಎಲೆ ಒಂದು ಅಗಲ ಬಾಯಿನ ಡಬ್ಬಿಯಲ್ಲಿ ತಂಬಾಕು, ಒಂದು ಸಣ್ಣ ಕತ್ತರಿ ದಾರದ ರೀಲು, ಇಷ್ಟು ಜೋಡಿಸಿಟ್ಟುಕೊಂಡು, ಮಾತಾಡುತ್ತ ಮಾತಾಡುತ್ತ ಅದೆಷ್ಟು ಚಕ-ಚಕ-ಚಕ ಕೈಬೆರಳುಗಳನ್ನಡಿಸಿ ಬೀಡಿ ಕಟ್ಟುತ್ತಿದ್ದಳೆಂದರೆ, – ಎಲೆಗಳನ್ನೆಲ್ಲ ನೀಟಾಗಿ ಕತ್ತರಿಸಿ, ಅದನ್ನ ಕೊಳವೆಯಾಗಿ ಸುತ್ತಿ ತಂಬಾಕು ಹಾಕಿ, ಮಡಚಿ ಕೆಳಗೆ ದಾರದಿಂದ ಗಂಟು ಹಾಕುತ್ತಿದ್ದಳು. ಮಂಗಳೂರು ಬೀಡಿ ಸಣ್ಣೆಲೆ ಬೀಡಿ, ನಂಬರ್ ೩೦ರ ಬೀಡಿ, ಗಣೇಶ ಬೀಡಿ, ಭಿಕುಸಾಛಾಪ್ ಬೀಡಿ, ನರಸಿಂಗ ಸಾ ಬೀಡಿ, ಇವೆಲ್ಲ ಒ೦ದು ದಂ ಎಳೆದ್ರೆ ಸಾಕು ಅಮಲು ಬಹಳ ತರಿಸುವ ಬೀಡಿಗಳು ಎಂದು ವಿವರಿಸುತ್ತಿದ್ದಳು. ಮೈಮುರಿದು ದುಡಿದು ಒಬ್ಬಳೆ ಕೂತಾಗ ಯಾವ ದುಃಖ ಮರೆಯಲೋ ಏನೋ ಬೀಡಿ ಸೇದುತ್ತಿದ್ದಳು.

‘ಜರಾ ಬತ್ತದೆ ಬೀಡಿ ಹೋಗೀಗೆ ಕೆಮ್ಮು ಬತ್ತದೆ. ಅತ್ಲಾಗ ಹೋಗು ಮಗ’ ಅಂತ ನನ್ನ ದೂರ ಕಳಿಸುತ್ತಿದ್ದಳು. ಆಗಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನೋವು ದುಃಖವನ್ನೆಲ್ಲ ಎಷ್ಟು ಹತ್ತಿರದಿಂದ ಕಂಡಿದ್ದೇನೆ ನಾನು. ಆದರೂ ಏನೂ ಸಹಾಯ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ನಾನು ಬೀಡಿ ಹೆಸರು ಮರೆತು ಹೋಗಬಾರದೆಂದು ಬಾಯಿ ಪಾಠ ಮಾಡಿ – ಓದಲ್ಲ-ಬರಹ ಅಲ್ಲ ಆ ದುರ್ಗಿ ಮನೆಯಿಂದ ಬೀಡಿ ಲಿಸ್ಟ್ ತರ‍್ತಿಯೇನೇ…… ಅಂತಾ ಅದಕ್ಕೂ ಬಯ್ಸಿ ಕೊಳ್ಳುತ್ತಿದ್ದೆ. ಮಾತು ಮಾತಿಗೆ ದೊಡ್ಡವರೇಕೆ ಚಿಕ್ಕವರಿಗೆ ಬಯ್ಯುತ್ತಾರೆಂದು ನನಗಾಗ ಅರ್ಥವೇ ಆಗುತ್ತಿರಲಿಲ್ಲ.

ಒಂದಾನೊಂದು ಕಾಲದಲ್ಲಿ ಅವಳು ವೃತ್ತಿನಾಟಕ ಕಂಪನಿಯಲ್ಲಿದ್ದವಳಂತೆ ಕೆಲವು ಡೈಲಾಗ್‌ಗಳನ್ನು ಬಹಳ ಚೆನ್ನಾಗಿ ಹೇಳುತ್ತಿದ್ದಳು. ಅವಳು ಅಷ್ಟು ಬಡವಳಾಗಿದ್ದರೂ ಯಾರ ಮನೆಯಲ್ಲೂ ಏನೂ ಕೇಳುತ್ತಿರಲಿಲ್ಲ. ಸ್ವಾಭಿಮಾನಿಯಾಗಿದ್ದಳು. ‘ಹತ್ತು ಮಕ್ಕಳ ತಾಯಿ ಹಾದಿ ಮೇಲೆ ಬಿದ್ದು ಸಾಯಿ… ಅಂತ ಗಾದೆ ಮಾತು ಹಿರೇರು ಯಾಕೆ ಮಾಡಾರೆ ಗುತ್ತದೆಯಾ ಸುಮಕ್ಕಾ….? ಹೆಣ್ಣಾಗಿ ಹುಟ್ಟಿದ್ರೆ ಅವಳು ದಾರಿ ಹೆಣ ಅಷ್ಟೇಯಾ, ಮತ್ತೇನಿಲ್ಲಾ….. ತಿಳಿಕಾ ಕೈಕಾಲಾಗೆ ಸಗತಿ ತೀರ‍್ತಂದೆ…. ಪಡಚಾ…. ತಿಳಿಕಾ.’ ಅಂತಿದ್ಲು.

ದುರ್ಗಿಗೆ ಜ್ವರ ಬಂದರೆ ನಾನು ಇಡೀ ದಿನ ಅವಳ ಮನೆಯಲ್ಲಿರುತ್ತಿದ್ದೆ. ಸ್ತ್ರೀ ವಿಮೋಚನೆ ಹೆಣ್ಣಿನ ಹಕ್ಕು ಬಾಧ್ಯತೆ, ಸ್ತ್ರೀ ಪರ ಕಾಳಜಿ ಹೋರಾಟ ಎಂದೆಲ್ಲಾ ಹೇಳುವಾಗ ಬೀಡಿ ಕಟ್ಟುವ ಮುಪ್ಪಡರಿದ ನಿಃಶಕ್ತ ಮುದುಕಿ ದುರ್ಗಿ ಕಣ್ಣೆದುರು ಸುಳಿಯುತ್ತಾಳೆ!! ನನ್ನ ಮನಸಿನ ಪಟಲದ ಮೇಲೆ ದುರ್ಗಿ ಹೀಗೆ ಶಾಶ್ವತವಾಗಿ ಉಳಿದು ಬಿಡುಹುದೆಂದು ಆ ನನ್ನ ಬಾಲ್ಯದಲ್ಲಿ ನನಗನಿಸಿರಲೇ ಇಲ್ಲ ….. !!! ಎಂದಿಗೆ ಸ್ತ್ರೀ ವಿಮೋಚನೆ….? ದುರ್ಗಿಯಂಥ ಎಷ್ಟು ಸುಂದರಿಯರ ಬಾಳು ಹಾಸಿ ಉಂಡು ಬೀಸಿ ಒಗೆದ ಬಾಳೆ ಎಲೆಯೋ ಏನೋ……

(ಗೌರಿ ಹಬ್ಬ-ಶ್ರವಣ ಮಾಸವಿಡಿ ಪೂಜೆ-ವೃತ ಪಾಯಿಸ ಕಡುಬು ತಿನ್ನುತ್ತ ಕಳೆಯುವಷ್ಟರಲ್ಲಿ ಗಣೇಶನ ಹಬ್ಬದ ತಯಾರಿ ಶುರುವಾಗುತ್ತಿತ್ತು. ನಮ್ಮ ಮನೆಯಲ್ಲಿ ಸ್ವರ್ಣ ಗೌರಿ ಪೂಜೆಗೆ ಬಹಳ ಜೋರು)ಕೃಷ್ಣ ಜನ್ಮಾಷ್ಟಮಿ- ಶ್ರಾವಣ ಮಾಸದ ಕೃಷ್ಣಾಷ್ಟಮಿ ನಮ್ಮ ಮನೆಯಲ್ಲಿ ದೊಡ್ಡ ಹಬ್ಬ ಕಾರಣ ಅಪ್ಪನ ಮನೆಯವರು ವೈಷ್ಣವರು. ತಾಯಿಯ ಮನೆಯವರು ಸ್ಮಾರತರು. ಶಿರ್ಶಿ-ಸಾಗರದಿಂದ ಪೋಲೀಸ್ ಕಮೀಷನರ್ ಆದಿಯಾಗಿ ಎಲ್ಲ ದೊಡ್ಡ ಅಧಿಕಾರಿಗಳು ನಮ್ಮ ಮನೆಯ ಕೃಷ್ಣಾಷ್ಟಮಿಯಲ್ಲಿ ಪಾಲು ಗೊಳ್ಳುತ್ತಿದ್ದರು. ಒಂದು ದೊಡ್ಡ ಮರದ ಬೊಡ್ಡೆ ಒಂದೆರಡು ಹರಿತ ಕೊಡಲಿಗಳನ್ನಿಡಲಾಗುತ್ತಿತ್ತು. ಅಂಗಳದಲ್ಲಿ ಬರುವ ಪ್ರತಿ ವ್ಯಕ್ತಿ ಆ ಕೈಕೊಡಲಿಗಳಿಂದ ಎರಡು – ಮೂರು ತುಂಡು ಕಟ್ಟಿಗೆ ಒಡೆದು ಕೈ-ಕಾಲು ತೊಳೆದುಕೊಂಡು ಒಳಗೆ ಬರುತ್ತಿದ್ದರು. ಹಾಗೆ ಮಾಡಲು ಅವರಿಗೆ ಯಾರೂ ಹೇಳುತ್ತಿರಲಿಲ್ಲ. ಅಹೋ ರಾತ್ರಿ ನಡೆಯುವ ಚಹ-ತಿಂಡಿಯ ಸಮಾರಾಧನೆಗಾಗಿ ಸಿಕ್ಕಾಪಟ್ಟೆ ಕಟ್ಟಿಗೆ ಬೇಕಾಗುತ್ತಿತ್ತು. ಒಮ್ಮೆ ನನ್ನಮ್ಮ ತುಂಬು ಗರ್ಭಿಣಿ ಕಟ್ಟಿಗೆ ಒಡೆಯುವದನ್ನು ನೋಡಿ ಪೂನಾದಿಂದ ಬಂದ ಜಲ್ಕಿ ಎನ್ನುವ ವೆಟರ‍್ನರಿ ಡಾಕ್ಟರ್ ಒಬ್ಬರು ಅಮ್ಮನನ್ನು ಸರಿಸಿ ತಾವು ಕಟ್ಟಿಗೆ ಒಡೆದರು. ಅವರು ಕಟ್ಟಿಗೆ ಒಡೆದದ್ದು ಕಂಡು ಅವರ ಕಂಪೌಂಡರ ಒಡೆದ, ಹೀಗೆ ಈ ಕಟ್ಟಿಗೆ ಒಡೆಯುವ ಪರಂಪರೆ ಮುಂದುವರಿಯಿತು. ಒಬ್ಬ ಸಜ್ಜನನಿಂದ ಸಹಾಯ ರೂಪದಲ್ಲಿ ಪ್ರಾರಂಭವಾದ ಕ್ರಿಯೆ ಒಂದು ಸತ್ಪರಂಪರೆಯಾಗಿ ಕೃಷ್ಣಭಕ್ತಿಯ ಅಂಗವಾಗಿ ಹಾಗೆ ಮುಂದುವರಿಯಿತು. ಮತ್ತೊಬ್ಬ ಡಾಕ್ಟರ್ ಆಸ್ಟಿನ್, ಅವರ ಮಗಳು ಇಲ್ಲೆ ಧಾರವಾಡದಲ್ಲಿದ್ದಾಳೆಂದು ಕೇಳಿದ್ದೇನೆ. ಆದರೆ ನಾನೆಂದೂ ಭೆಟ್ಟಿಯಾಗಿಲ್ಲ. ನಾನು ಇಂಥವಳು ಅಂಥವಳು ಎಂದು ಪ್ರವರ ಹೇಳಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳೂವದು ನನಗೆ ಆಗದ ಮಾತು. ಅಲ್ಲದೆ ಆಕೆ ನನ್ನ ಗುರುತು ಹಿಡಿಯಲಿಕ್ಕೂ ಇಲ್ಲ. ನಾನಾಗ ಬಹಳ ಚಿಕ್ಕವಳಿದ್ದೆ. ಆಕೆ ಬೊಂಬಾಯಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದಳು.

ಸುಮಿತ್ರಾ ಆತ್ಮಕಥೆ: ಹಾವಿಗೂ ಸಿನೆಮಾಕ್ಕೂ ಹೆದರುತ್ತಿದ್ದ ತಂಗಿ ಸಾವಿತ್ರಿ

ತಂಗಿ ಸಾವಿತ್ರಿ ಹಾವಿಗೆ ಬಹಳ ಹೆದರುತ್ತಿದ್ದಳು. ಹಾವು ಹೋಗಲಿ ಒಂದು ಎರೆ ಹುಳವೆಂದರೂ ನಡುಗಿ ಸಾಯುತ್ತಿದ್ದಳು. ಸಾವಿರ ಕಾಲಿನ ಜರಿ (centipede-ಸೆಂಟೀಪೇಡ್ ಅಂದರೆ ನೂರು ಕಾಲಿನ ಜರಿಗಿಂತ ದೊಡ್ಡದು) ಮುಟ್ಟಿದ ತಕ್ಷಣ ಚಕ್ಕುಲಿಯಂತೆ ಸುತ್ತಿಕೊಳ್ಳುತ್ತದೆ. ಅದನ್ನು ತಂದು ನಾನು ಅವಳಿಗೆ ಹೆದರಿಸುತ್ತಿದ್ದೆ. ನನ್ನ ಕೈಯಲ್ಲಿ ಹುಳವಿದ್ದರೂ ತನ್ನನ್ನು ಕಚ್ಚಿ ಕೊಂದೇ ಹಾಕಿತೇನೋ ಅನ್ನುವಷ್ಟು ಚೀರಾಡುತ್ತಿದ್ದಳು. ಡೊಂಬರಾಟದವರು ಹಾವಾಡಿಗರು ಎಲ್ಲ ರಸ್ತೆಯ ಕೂಟಿಗೆ ಮಾತ್ರ ಬರುತ್ತಿದ್ದರು. ಮನೆಯ ಹತ್ತಿರ ಬರುವ ದುರುಗ ಮುರುಗಿಯವರನ್ನು ಮಾತ್ರ ಬಹಳ ಭಕ್ತಿಯಿಂದ ನೋಡುತ್ತಿದ್ದಳು. ‘ಶರಣು ಬಾರವ್ವಾ ಮಾತಾಯಿಗೆ ತಾನಿ ತಂದಾನ ದೇವಿ ದುರಗಮ್ಮ ಬಂದಳೆ ತಾನಿ ತಂದನ ಭಕ್ತರ ಪೊರೆಯವ್ವಾ ತಾನಿ ತಂದಾನ’ ಅಂತ ದುರಗ ಮುರಗಿ ತನ್ನ ಪೆಟ್ಟಿಗೆ ಇಳಿಸಿ, ಒಂದು ಚಾಪೆ ಹಾಸಿ ದೇವಿ ಮೂರ್ತಿ ಹೊರಗೆ ತೆಗೆದು ಗಂಟೆ, ಚಾಟಿ, ನವಿಲು ಗರಿ, ಅರಿಷಣ-ಕುಂಕುಮ ಎಲ್ಲಾ ಸಾಲಾಗಿ ಇಡುತ್ತಿದ್ದ. ಢೋಲು ಬಾರಿಸುತ್ತ ಅವನ ಹೆಂಡತಿ ಹಾಡುತ್ತಿದ್ದಳು. ಅವನು ಪೂಜೆ ಮಾಡಿ ಗಿರಿ ಗಿರಿ ಗಿರಿ ತಿರುಗುತ್ತ ಚಾಟಿಯಿಂದ ಛಟಲ್ ಛಟಲ್ ಎಂದು ರಟ್ಟಿಗೆ ಹೊಡೆದು ಕೊಳ್ಳುತ್ತಿದ್ದ. ಕೆಲವೊಮ್ಮೆ ರಟ್ಟೆಯಿಂದ ರಕ್ತ ಸೋರುತ್ತಿತ್ತು. ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಉರಾಳ ಸೊಪ್ಪು ಒಂದಿಷ್ಟು ಕೊಟ್ಟು ರಸ ಹಚ್ಚಿಕೊ ರಕ್ತ ನಿಲ್ಲುತ್ತದೆ ಎಂದು ಹೇಳುತ್ತಿದ್ದೆ ನಾನು. ಉರಾಳ ಸೊಪ್ಪು ಧಾರವಾಡದ ಭಾಷೆಯಲ್ಲಿ ಟೀಕಿ ತಪ್ಪಲ ಅನ್ನುತ್ತಾರೆ. ಅದರಲ್ಲಿ ಅಯೋಡಿನ್ ಕಂಟೆಂಟ್ ಇರುತ್ತದೆ ಎಂದು ಇತ್ತೀಚೆಗೆ ಸಂಶೋಧನೆಯಿಂದ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಒಂದು ಮೊರದ ತುಂಬ ಅಕ್ಕಿ ಅವನಿಗೆ ನಮ್ಮ ಮನೆಯಿಂದ ಕೊಡುತ್ತಿದ್ದರು.

ಪೇಟೆಯ ಕೂಟಿನಲ್ಲಿ ನಡೆಯುವ ಹಾವಾಡಿಗರ ಆಟ ನೋಡಲು ರೆಗ್ಯುಲರ್ ಹೋಗುತ್ತಿದ್ದ ನಾನು ಕೆಲವೊಮ್ಮೆ ತಂಗಿ ಸಾವಿಯನ್ನು ಕರೆದು ಹೋಗುತ್ತಿದ್ದೆ. ಬುಟ್ಟಿಯಿಂದ ಹಾವು ತೆಗೆದ ತಕ್ಷಣ ಅವಳು ಅಳಲು ಶುರು ಮಾಡುತ್ತಿದ್ದಳು. ಅದು ಹೆಡೆ ಬಿಚ್ಚಿ ಆಡುವಾಗಂತೂ ಥರಥರ ನಡುಗುತ್ತಿದ್ದಳು. ರಾತ್ರಿ ಮಲಗಿದಾಗ ಹೊದಕೆಯ ದಾರ ತಾಗಿದರೆ ಚಿಟ್ಟೆಂದು ಚೀರುತ್ತಿದ್ದಳು. ಹಾವು ಬಂತು ಹಾವು ಬಂತು ಎಂದು ಮೈಯ್ಯೆಲ್ಲ ಬೆವರಿ ಎದ್ದು ಕೂಡುತ್ತಿದ್ದಳು. ಮರುದಿನ ಬೆಳಿಗ್ಗೆ ನಾವು ಹಿಂದಿನ ದಿನ ಎಲ್ಲೆಲ್ಲಿ ಹೋಗಿದ್ದೆವು ಎಂಬ ತನಿಖೆ ನಡೆದು ತಂಗಿಯನ್ನು ಹೆದರಿಸಿದೆನೆಂದು ಮತ್ತೆ ಅಮ್ಮನಿಂದ ಪೆಟ್ಟು ಬೀಳುತ್ತಿತ್ತು. ನನಗೆ ಅವಳನ್ನು ಹೆದರಿಸುವ ಉದ್ದೇಶ ಎಳ್ಳೆಷ್ಟೂ ಇರುತ್ತಿರಲಿಲ್ಲ. ನಾನು ನೋಡಿ ಎಂಜಾಯ್ ಮಾಡಿದ ಹಾವಿನಾಟ ಅವಳೂ ನೋಡಿ ಖುಷಿ ಪಡಲಿ, ಹಾವಿನ ಬಗ್ಗೆ ಅವಳಿಗಿರುವ ಹೆದರಿಕೆ ಹೋಗಲಿ ಎಂದಿರುತ್ತಿತ್ತು. ಆದರೆ ಅದು ಹಾಗಾಗದೆ ಅವಳು ಎಂಟೆಂಟು ದಿನ ಜ್ವರ ಬಂದು ಮಲಗಿ ಬಿಡುತ್ತಿದ್ದಳು. ಅವಳು ಆಟಾ-ಗೀಟ ಆಡುವ ಸ್ವಭಾವದವಳಲ್ಲ. ಬಹಳ ಗಂಭೀರೆ. ಒಂದು ಮೂಲೆ ಹಿಡಿದು ಕೂತು ಯಾವಾಗಲೂ ಏನಾದರೂ ತಿನ್ನುತ್ತಿರುತ್ತಿದ್ದಳು. ತನ್ನ ಹತ್ತಿರ ಇರುವ ಏನನ್ನು ಯಾವ ಕಾರಣಕ್ಕೂ ಕಳೆದುಕೊಳ್ಳುಲು ಅವಳು ಮನಸ್ಸು ಮಾಡುತ್ತಿರಲಿಲ್ಲ.

*****

ಕೀಲಗುರಂ ಸಿನೆಮಾ

ಚಳಿಗಾಲ ಮತ್ತು ಬೇಸಿಗೆಯಲ್ಲಿ ಅಂದರೆ ನವೆಂಬರ್‌ನಿಂದ ಮೇ ವರೆಗೆ ಸಿದ್ದಾಪುರದಲ್ಲಿ ಒಂದು ಸಿನೆಮಾ ಟೆಂಟು ಹಾಕುತ್ತಿದ್ದರು. ಆಗೆಲ್ಲ ಸಿನೆಮಾ ಟಿಕೆಟ್ ದರ ನಾಲ್ಕಾಣೆ-ನೆಲ, ಎಂಟಾಣೆ ಬೆಂಚ್, ಹನ್ನೆರಡಾಣೆ ಕುರ್ಚಿ-ಎರಡೆ ಬೆಂಚು, ಐದು ಅಥವಾ ಆರು ಕುರ್ಚಿಗಳಿರುತ್ತಿದ್ದವು. ಸುಮ್ಮನೆ ದುಡ್ಡು ದಂಡ ಎಂದು ನೆಲಕ್ಕೆ ಹೋಗುವವರೆ ಬಹಳ ಜನರಿರುತ್ತಿದ್ದರು. ಸಿನೆಮಾಕ್ಕೆ ಹೋಗುವದೆಂದರೆ ನನಗೆ ಬಹಳ ಸಂಭ್ರಮದ ವಿಷಯ. ಒಂದೇ ಸಿನೆಮಾ ತಿಂಗಳು ಗಟ್ಟಲೆ ಇರುತ್ತಿತ್ತು. ಎಂಟು ಗಂಟೆ ರಾತ್ರಿಗೆ ಶುರುವಾಗಿ ಸಮಯ ೧೨ ಗಂಟೆಗೆ ಮುಗಿಯುತ್ತಿತ್ತು. ೩ ೧/೨  ೪ ತಾಸಿನ ಸಿನೆಮಾ ಆಗಿನ ಕಾಲದಲ್ಲಿ ಇನ್ನು ಎರಡು ತಾಸು ಇದ್ದರೂ ಜನ ಬೇಜಾರಿಲ್ಲದೆ ನೋಡುತ್ತಿದ್ದರು. ಹದಿನೈದು ದಿನಗಳ ಮೊದಲೆ ಸಿನೆಮಾಕ್ಕೆ ಹೋಗುವದೆಂದು ನಾನು ಅಕ್ಕಪಕ್ಕದ ಮನೆಯವರೊಡನೆ ನಿಶ್ಚಯಿಸಿರುತ್ತಿದ್ದೆ. ನಮ್ಮ ಮನೆಯ ಜನರು ಸಿನೆಮಾಕ್ಕೆ ಬರುತ್ತಿರಲಿಲ್ಲ. ಎರಡು ಗೋಣೀಚೀಲ ಒಂದು ತಳ್ಳನೆಯ ಪಂಚೆ ನಾಲ್ಕಾಣಿ ಟಿಕೆಟ್ಟಿನ ದುಡ್ಡು ಶೇಂಗಾ ಕೊಬ್ಬರಿ-ಬೆಲ್ಲ ಇಂಥದ್ದು. ಇಂಟರವ್ಯೂನಲ್ಲಿ ತಿನ್ನಲು ಲಂಗದ ಜೇಬಿನಲ್ಲಿ ಹಾಕಿಕೊಂಡು ತಂಗಿ ತಮ್ಮ ಇಬ್ಬರನ್ನು ಕರೆದು ಕೊಂಡು ಹೋಗುತ್ತಿದ್ದೆ. ಬಹಳ ದೂರ ನಡೆದೇ ಹೋಗುತ್ತಿದ್ದೆವು. ಊರ ಹೊರಗೆ ಟೆಂಟು. ಟೆಂಟಿನ ಹತ್ತಿರ ಬಂದಾಕ್ಷಣ ಗೋಣೀಚೀಲ ಪಂಚೆ ಎಲ್ಲ ತಂಗಿಯ ಕೈಗೆ ಕೊಟ್ಟು ಟಿಕೆಟ್ಟು ಕೊಂಡು ಬರುತ್ತಿದ್ದೆ. ತಮ್ಮನನ್ನು ಸೊಂಟದ ಮೇಲೆ ಎತ್ತಿಕೊಂಡು ಪೂರಾ ಬಗ್ಗಿ ಕೂಡ್ರಲು ಹೇಳಿ ಅವನ ಮೇಲೆ ಪಂಚೆ ಹೊದಿಸಿ, ಗೇಟ್‌ನಲ್ಲಿ ಟಿಕೇಟು ಕೊಡುತ್ತಿದ್ದೆ ಇದ್ಯಾರು ಅಂತಿದ್ರು. ‘ನನ್ನ ತಮ್ಮ ಅವನಿಗೆ ೩ ವರ್ಷ ಆಗಿಲ್ಲ ನಿದ್ದೆ ಬಂದಿದೆ ಅವನಿಗೆ’ ಅಂತ ಹೇಳಿ ನನ್ನ ತಂಗಿಯನ್ನು ತೋರಿಸಿ ‘ಪಕ್ಕದ ಮನೆ ಹುಡುಗಿ ಅವಳ ತಾಯಿ ಟಿಕೆಟ್ಟು ತರ‍್ಲಿಕ್ಕೆ ಹೋಗಿದ್ದಾರೆ. ಇವಳನ್ನು ಒಳಗೆ ಕರ‍್ಕೊಂಡು ಹೋಗ್ಲೀ………?’ ಅಂತ ಕೇಳಿ ಅವಳನ್ನು ಕರ‍್ಕೊಂಡು ಹೋಗ್ತಿದ್ದೆ. ಒಳಗೆ ಹೋಗಿ ತಮ್ಮನ್ನ ಇಳಿಸಿ ಗೋಣೀ ಚೀಲ ಹಾಸಿ ಇಬ್ರನ್ನು ಕೂಡಿಸಿ ನಾನು ಕೂಡ್ರತಿದ್ದೆ. ಸಿನೆಮಾ ಪರದೆಗೆ ಬಹಳ ಹತ್ತಿರ ಕೂತಿದ್ದೆವೆಂದು ಭಾರಿ ಖುಷಿ ಇರುತ್ತಿತ್ತು. ಅಷ್ಟರಲ್ಲಿ ನಮ್ಮ ಓಣಿಯ ಜನರೆಲ್ಲ ಹಿಂಡು ಹಿಂಡಾಗಿ ಬರುತ್ತಿದ್ದರು. ಆ ಗದ್ದಲದಲ್ಲಿ ಯಾರೂ ನನ್ನ ತಂಗಿ-ತಮ್ಮನ ಕಡೆ ಲಕ್ಷ್ಯಕೊಡುತ್ತಿರಲೇ ಇಲ್ಲ.

ಮೂರು ಬೆಲ್ ಆಗಿ ಸಿನೆಮಾ ಶುರುವಾಗುತ್ತಿತ್ತು. ಒಂದನೆ ಬೆಲ್ ಆದ ತಕ್ಷಣ ಜನ ಟಿಕೆಟ್ಟು ಹಿಡಿದು ನುಗ್ಗುತ್ತಿದ್ದರು ಎರಡನೆ ಬೆಲ್ ಆದ ತಕ್ಷಣ ಎಲ್ಲ ಕೂಡುತ್ತಿದ್ದರು. ಮೂರನೆ ಬೆಲ್ ಆದ ಕೂಡಲೆ ಸಿನೇಮಾ ಶುರು. ಈಗಿನ ಹಾಗೆ ಅಡ್ವಟೈಸ್‌ಮೆಂಟುಗಳು ಇರುತ್ತಿರಲಿಲ್ಲ. ಒಂದೂವರೆ ಎರಡು ತಾಸುಗಳ ನಂತರ ಇಂಟ್ರವಲ್ ಸಿನೆಮಾದಲ್ಲಿ ಬರುವ ಪ್ರತಿಯೊಂದು ಸಣ್ಣ ಪುಟ್ಟ ಜಾದು-ಮಾಯದ ಸೀನುಗಳಿಗೂ ತಮ್ಮ ತಂಗಿ ಹೆದರುತ್ತಿದ್ದರು. ನಾನು ಅವರಿಬ್ಬರ ಕಣ್ಣು ಮುಚ್ಚುತ್ತಿದ್ದೆ. ನಾನು ಮಾತ್ರ ಲಕ್ಷ ಕೊಟ್ಟು ನೋಡುತ್ತಿದ್ದೆ. ಕೀಲಿ ಕೊಟ್ಟರೆ ಆಕಾಶದಲ್ಲಿ ಹಾರುವ ಮರದ ಕುದುರೆಯ ಟೆಕ್ನಿಕ್‌ನ ಕಥೆ. ರಾಜಕುಮಾರ ಅದನ್ನ ಹತ್ತಿ ಆಕಾಶದಲ್ಲಿ ಹಾರಿ ತಿರುಗಿ ಕೆಳಗೆ ಒರಟು ತಿಳಿಯದೆ ಏನೇನೋ ಅನಾಹುತವಾಗುವ ಕತೆ. ರಾಕ್ಷಿಸಿಯೊಬ್ಬಳು ಪ್ರಾಣಿ ಮನುಷ್ಯರನ್ನೆಲ್ಲ ತಿಂದು ಆ ರಕ್ತವನ್ನು ರಾಣಿಯ ಬಾಯಿಗೆ ಒರೆಸಿ ರಾಜ ರಾಣಿಯನ್ನು ಅಡವಿಗಟ್ಟಿ ಹೀಗೆ. ಇಷ್ಟು ಧೈರ್ಯವಂತಳಾದ ನಾನೂ ಹೆದರಿದಾಗ ತಂಗಿ-ತಮ್ಮ ಅಳಲು ಪ್ರಾರಂಭಿಸಿದ್ದರು.

ಅಕ್ಕಪಕ್ಕದವರು ಎಲ್ಲರೂ ರಾಣಿಯ ಕಷ್ಟಕ್ಕೆ ಬಿಕ್ಕಿ-ಬಿಕ್ಕಿ ಅಳುತ್ತಿದ್ದಾಗ ನಮ್ಮನ್ನು ಸಮಾಧಾನ ಮಾಡುವವರು ಯಾರು? ಅಂತೂ-ಇಂತೂ ಧೈರ್ಯ ತಂದು ಕೊಂಡು ಗೋಣೀಚಿಲ ಪಂಚೆ ತಂಗಿ-ತಮ್ಮಂದಿರ ಜೊತೆ ಮನೆಗೆ ಹೊರಟರೆ ದಾರಿಯಲ್ಲಿರುವ ದೊಡ್ಡ ಬಸರಿ ಮರದ ಭೂತದ ಹೆದರಿಕೆ. ಆ ಮರದಲ್ಲೊಂದು ಭೂತವಿದ್ದು ಅದು ಏಳು ಮಕ್ಕಳ ತಾಯಿ. ಯಾರಾದರೂ ಬೆನ್ನಿಗೆ ಹೊಡೆದರೆ ಮೂರು ದಿನದಲ್ಲಿ ಅವರು ಸಾಯುತ್ತಾರೆ ಎಂದು ಜನ ಮಾತಾಡುತ್ತಿದ್ದರು. ಊರಲ್ಲಿ ಯಾರೆ ಸತ್ತರೂ ಮೂರು ದಿನದ ಕೆಳಗೆ ಸಿನೆಮಾಕ್ಕೆ ಹೋಗಿದ್ರೋ ಹೆಂಗೆ…..? ಅಂತಾನೇ ಕೇಳ್ತಿದ್ರು. ಜನರ ಗುಂಪಿನಲ್ಲಿ ನಡುವೆ ನಡುವೆ ನುಸಿಳಿ ಹೇಗೋ ಮನೆ ಮುಟ್ಟುತ್ತಿದ್ದೆ. ಇದರ ನಂತರ ತಂಗಿ-ತಮ್ಮ ಎಂದೂ ಸಿನೆಮಾಕ್ಕೆ ಬರಲಿಲ್ಲ. ಆದರೆ ನಾನು ಹೋಗುತ್ತಿದ್ದೆ. ರತ್ನಗಿರಿಯ ರಹಸ್ಯ-ಚಿತ್ರಲೇಖಾ ಎಲ್ಲ ೪-೪ ತಾಸುಗಳ ಸಿನೆಮಾ ಅಷ್ಟು ದೀರ್ಘ ಸಮಯ ಕೂತರೂ ಸಿನೆಮಾ ಬೇಗ ಮುಗಿದ ಹಾಗೆ ನನಗೆ ಅನಿಸಿತ್ತಿತ್ತು. ಫೈಟಿಂಗ್ ಸೀನು ಬಂದರೆ ನಾನು ಹೂಂ… ಹೊಡಿ… ಹಾಕು… ಒದಿ…. ಬಡಿ…. ಬೀಳ್ಸು ಅಂತ ಆವೇಶದಿಂದ ಕೂಗುತ್ತಿದ್ದೆ. ವಿಲನ್ನಿಗೆ ಜೋರು ಪೆಟ್ಟು ಬಿದ್ದಾಗ ನಾನೇ ಗೆದ್ದಷ್ಟು ಖುಷಿಯಾಗುತ್ತಿತ್ತು. ಸಿನೆಮಾಗಳಲ್ಲಿಯ ಒಂದೆರಡು ಅರ್ಧಮರ್ಧ ಹಾಡು ಕೆಲವು ಆಕ್ಷನ್ಸ್ ಕಲಿತೇ ಬರುತ್ತಿದ್ದೆ. ಮುಂದಿನ ನಮ್ಮ ನಾಟಕಗಳಿಗೆ ಬೇಕಲ್ಲ…. ಚಂದಿರಾ….. ಚಂದಿರಾ ಅನ್ನುತ್ತ ಓಡಿ ಬಂದು ಕಿಟಿಕಿಯ ಹತ್ತಿರ ನಿಂತು ಕೈ ಎತ್ತಿ ಚಂದ್ರನ್ನ ಮುಟ್ಟೇ ಬಿಡ್ತಾರೇನೋ ಅನ್ನುವ ರೀತಿ ಅಭಿನಯ ಬಾ ಅನ್ನಲು ಕರೆಯಲು ಸನ್ನೆ ಹೋಗು ಎನ್ನಲು ಬೇಡ ಎನ್ನಲು ಸಿಕ್ಕಾಪಟ್ಟೆ ಕತ್ತು ಅಲುಗಾಡಿಸಿ ಕಣ್ಣುಗಳನ್ನು ಅತ್ತಿತ್ತ ಹೊರಳಿಸುವ ಅಭಿನಯ ನನಗಂತೂ ಫೆಂಟಾಸ್ಟಿಕ್ ಅನಿಸುತ್ತಿತ್ತು. ಈಗ ನೆನಸಿಕೊಂಡರೆ ಆಗಿನ ನನ್ನ ಮೂರ್ಖತನಕ್ಕೆ ನಗು ಬರುತ್ತದೆ. ಈಗಿನ ಜನರೇಶನ್ನಿನ ಸಿನೆಮಾ ಸ್ಟಾರ್ ಗಳು ಬುದ್ಧಿವಂತರು ಪ್ರಬುದ್ಧ ಅಭಿನಯ. ನಾವೆಷ್ಟು ಸ್ಟುಪಿಡ್ ಅನಿಸುತ್ತದೆ. ಒಬ್ಬಳೆ ಇದ್ದಾಗ ಕೆಲವೊಮ್ಮೆ ಇಂಟರ್‌ವಲ್‌ನಲ್ಲಿ ಸಾವಕಾಶವಾಗಿ ಹೋಗಿ ಬೆಂಚಿನ ಮೇಲೆ ಕೂತು ಬಿಡುತ್ತಿದ್ದೆ. ನಾಕಾಣೆಯಲ್ಲೇ ಥೇಟರಿನವರಿಗೆ ಟೋಪಿ ಹಾಕಿ ಬೆಂಚಿನ ಮೇಲೆ ಕೂತು ಬಿಟ್ಟಿ ಅವರಿಗೆ ಗೊತ್ತಾಗಲೇ ಇಲ್ಲ ಎಂದು ಸಂತೋಷ ಪಡುತ್ತಿದ್ದೆ. ಅವರಿಗೆಲ್ಲ ಗೊತ್ತಿರುತ್ತಿತ್ತು. ಏನೋ ಸಣ್ಣ ಹುಡುಗಿ ಪಾಪ ಎಂದು ಬಿಡುತ್ತಿದ್ದರು. ಆದರೆ ಅಷ್ಟು ತಿಳುವಳಿಕೆ ನನಗಿರಲಿಲ್ಲವಲ್ಲ.

ಸುಮಿತ್ರಾ ಆತ್ಮಕಥೆ: ನನ್ನ ಗೋವರ್ಧನ ಗಿರಿಯಂಥ ಛತ್ರಿ

ಸಿದ್ಧಾಪುರದಲ್ಲಿ ಮಳೆಗಾಲವೆಂದರೆ ೪ ತಿಂಗಳು ಒಂದು ಕಾಗೆ ಕೂಡ ಅತ್ತಿತ್ತ ಹಾರುತ್ತಿರಲಿಲ್ಲ. ಮಳೆಗಾಲಕ್ಕೆ ಬೇಕಾದ ಸಾಮಾನು -ಸರಂಜಾಮುಗಳನ್ನು ಮೇ ತಿಂಗಳಲ್ಲೇ ಜೋಡಿಸಿಟ್ಟುಕೊಳ್ಳುತ್ತಿದ್ದರು. ಮನೆ ಸೋರದಂತೆ ಹಂಚು ಹೊದಿಸುವದರಿಂದ ಹಿಡಿದು ಎಲ್ಲ ಸಿದ್ಧತೆಯಾಗಬೇಕಾಗಿತ್ತು. ಇಲ್ಲದಿದ್ದರೆ ಮಳೆಗಾಲ ಕಳೆಯುವದೇ ಕಷ್ಟವಾಗುತ್ತಿತ್ತು. ಹಂಚಿನ ಮನೆಗಳನ್ನು ವರ್ಷಕ್ಕೊಮ್ಮೆಯಾದರೂ ಸರಿಯಾಗಿ ಹೊದಿಸಲೇಬೇಕಿತ್ತು. ಇಲ್ಲದಿದ್ದರೆ ಮನೆಯೆಲ್ಲ ಸೋರಿ ಹಳ್ಳವಾಗುತ್ತಿತ್ತು. ಆಳುಗಳು ಸಿಗದಿದ್ದಾಗ ಮನೆಯ ಹುಡುಗರೇ ಮೇಲೆ ಹತ್ತಿ ಹಂಚು ಹೊದಿಸುತ್ತಿದ್ದರು. ಇದು ಎಲ್ಲರ ಮನೆಯಲ್ಲೂ ಇದ್ದ ಸ್ಥಿತಿಯಾಗಿತ್ತು. ಆದರೆ ನಮ್ಮ ಮನೆಯಲ್ಲಿ ಹುಡುಗರು ಯಾರೂ ಮೇಲೆ ಹತ್ತುತ್ತಿರಲಿಲ್ಲ. ನಾನೇ ಹಂಚು ಹೊದಿಸುತ್ತಿದ್ದೆ. ಬೆಳಗಿನ ಜಾವ ಮೇಲೆ ಹತ್ತಿ ೯ ಗಂಟೆಯೊಳಗೇ ಕೆಳಗಿಳಿದು ಬರುತ್ತಿದ್ದೆ. ನನಗೆ ಬಿಸಿಲು ಆಗುವುದಿಲ್ಲ. ಸಣ್ಣ ಹುಲ್ಲಿನ ಕಸಬರಿಗೆ ಹಿಟ್ಟಿಂಡೆ ಹಿಡಿ ಅನ್ನುತ್ತಿದ್ದರು, ಬೀಸುವ ಕಲ್ಲಿಂದ ಹಿಟ್ಟನ್ನು ಸರಿಯಾಗಿ ಗುಡಿಸಿ ತೆಗೆಯಲು ಸಣ್ಣ-ಸಣ್ಣ ಕಸಬರಿಗೆ ಬ್ರಶ್‌ನಂತೆ ಉಪಯೋಗಿಸುತ್ತಿದ್ದರು. ಅಂಥ ನಾಲ್ಕಾರು ಹಿಡಿ ತೆಗೆದುಕೊಂಡು ನಾನು ಮೇಲೆ ಹತ್ತುತ್ತಿದ್ದೆ. ಒಂದೊಂದೇ ಹಂಚಿನಲ್ಲಿ ಬೆಳೆದ ಹುಲ್ಲು-ಮಣ್ಣು-ಕಸ ಎಲ್ಲ ಕೆಡವಿ ಸ್ವಚ್ಛ ಗುಡಿಸಿ ಹಂಚು ಹೊದಿಸಿದರೆ ಎಂಥ ಆರ್ಭಟದ ಮಳೆಗೂ ಒಂದೇ ಒಂದು ಹನಿ ಸೋರುತ್ತಿರಲಿಲ್ಲ. ಅಷ್ಟು ನೀಟಾಗಿ ನಾನು ಹಂಚು ಹೊಡಿಸುತ್ತಿದ್ದೆ. ನಾನೆಂದೂ ಕೆಲಸದಲ್ಲಿ ಮೈಗಳ್ಳತನ ಮಾಡುತ್ತಿರಲಿಲ್ಲ. ಹಾಗಾಗಿ ನನಗೆ ಎಲ್ಲ ಕೆಲಸಗಳೂ ಅತ್ಯಂತ ಸರಿಯಾಗಿ ಬರುತ್ತದೆ.

ಮಳೆಗಾಲದಲ್ಲಿ ಶಾಲೆಗೆ ಹೋಗುವದೊಂದು ದೊಡ್ಡ ತಲೆನೋವಿನ  ಸಂಗತಿಯಾಗಿರುತ್ತಿತ್ತು. ರಸ್ತೆ-ಗಟಾರ ತಗ್ಗು-ದಿಣ್ಣೆ ಯಾವುದೂ ಕಾಣದಂತೆ ನುಗ್ಗಿ-ರಭಸದಿಂದ ಹರಿಯುವ ನೀರು ಧೋ ಧೋ ಮಳೆ. ಕಂಬಳಿ ಕುಪ್ಪೆಯನ್ನು ಹಾಕಿಕೊಂಡು ಕೆಲವರು ಶಾಲೆಗೆ ಬರುತ್ತಿದ್ದರು. ಆದರೆ ನಾನು ತಾಳೆಕೊಡೆ ಹಿಡಿದು ಹೋಗುತ್ತಿದ್ದೆ. ಅದು ಕಂಬಳಿ ಕುಪ್ಪೆ ಗಿಂತ ಸ್ವಲ್ಪ ಸುಪೀರಿಯರ್. ಅರ್ಧ ಗೇಣು ಮಾತ್ರ ಹಿಡಿಕಿಯಿರುವ ದೊಡ್ಡ ಕೊಡೆ ಅಷ್ಟು ಸಣ್ಣ ಹಿಡಿಕೆ ದೊಡ್ಡ ಕೊಡೆ ಹಿಡಿಯಲು ಬಹಳ ಕಷ್ಟವಾಗುತ್ತಿತ್ತು. ತಾಳೆಗರಿಗಳನ್ನು ಜೋಡಿಸಿ ಹೆಣೆಯುತ್ತಿದ್ದರು. ಅದು ಎಷ್ಟು ದೊಡ್ಡದಿರುತ್ತಿತ್ತೆಂದರೆ ಕಡಿಮೆಯಂದರೂ ೭-೮ ಜನ ತೊಯ್ಸಿಕೊಳ್ಳದೆ ಹೋಗಬಹುದಿತ್ತು. ಗೋವರ್ದನ ಗಿರಿ ಎತ್ತಿ ಗೋಕುಲದವರೆಲ್ಲ ಗುಂಪಾಗಿ ಹೊರಟಂತೆ  ಆದರೆ ಗುಂಪಾಗಿ ಹೋಗುವಾಗ ಒಬ್ಬರ ಕಾಲು ಇನ್ನೊಬ್ಬರು ತುಳಿದು ಅವಾಂತರವಾಗುತ್ತಿತ್ತಾದ್ದರಿಂದ ತೀರ ಸಾವಕಾಶವಾಗಿ ನಡೆಯಬೇಕಿತ್ತು. ದೊಡ್ಡದೊಂದು ಗುಂಪು ಧೋ ಧೋ ಮಳೆಯಲ್ಲಿ ಒಬ್ಬರ ಕಾಲು ಒಬ್ಬರು ತುಳಿಯದಂತೆ ಎಚ್ಚರಿಕೆಯಿಂದ ಚಲಿಸುವದು. ಆದರೂ ಅದೊಂದು ಮಜವಾದ ಅನುಭವವೇ ಹೌದು. ಆ ಕೊಡೆಯನ್ನು ಬೆಲ್ಲದ ತುಂಡು ಹೊತ್ತ ಇರುವೆ ಗುಂಪು ಚಲಿಸುತ್ತದಲ್ಲ ಬಹುಶಃ ಹಾಗೆ ಕಾಣುತ್ತಿತ್ತೇನೋ ದೂರದಿಂದ. ಮಡಿಚಲು ಬರುತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ತಾಳೆಕೊಡೆ ಒಯ್ಯುವವಳು ನಾನೊಬ್ಬಳೇ ಆಗಿದ್ದೆ. ಹಾಗಾಗಿ ಅದೊಂದು ಬಗೆಯ ಗರ್ವದ ವಿಷಯವೂ ಆಗಿತ್ತು ಎನ್ನಲಡ್ಡಿಯಿಲ್ಲ. ರಾಜ-ಮಹಾರಾಜರು ಹಿಡಿಸಿಕೊಳ್ಳುವ ಛತ್ರ-ಚಾಮರದಂತಿರುತ್ತಿತ್ತು ಅದು. ತೋಟ ಗದ್ದೆ ಕೆಲಸದವರೂ ಕಂಬಳಿ ಕುಪ್ಪೆಯನ್ನು ಹಾಕುತ್ತಿದ್ದರು. ಏನೂ ಕೆಲಸ ಮಾಡದಿದ್ದರು ನನ್ನ ಅಪ್ಪನ ಹತ್ತಿರ ಗಮ್ ಬೂಟ್ಸ್ ರೇನ್ ಕೋಟ್ ಎಲ್ಲಾ ಇತ್ತು.

ಒಮ್ಮೆ ರಾತ್ರಿ ಎಲ್ಲಿಗೋ ಹೋಗಬೇಕೆಂದು ಅಪ್ಪ ಗಮ್ ಬೂಟ್ಸ್ ಹಾಕಿದಾಗ ಅದರಲ್ಲಿ ಕೂತಿದ್ದ ಹಾವೊಂದು ಅವನ ಕಾಲಿಗೆ ಸುತ್ತಿ ಹಾಕಿಕೊಂಡು ದೊಡ್ಡ ಅವಾಂತರವಾಗಿತ್ತು. ನೀರಿನ ಸೆಳವಿಗೆ ಮಕ್ಕಳು ತೇಲಿ ಹೋಗುತ್ತಿದ್ದರು. ಮಳೆಯ ಆರ್ಭಟ-ಗುಡುಗು-ಮಿಂಚು ಭಯ ಹುಟ್ಟಿಸುವಂತಿದ್ದರೂ ಮಳೆಗಾಲ ನನ್ನ ಅತ್ಯಂತ ಪ್ರೀತಿಯ ಕಾಲ. ಶಾಲೆಗೆ ಹಾಕಿಕೊಂಡು ಹೋಗಲು ಒಂದು ಮನೆಯಲ್ಲಿ ಒಂದು ಎರಡೇ ಲಂಗಗಳಿದ್ದು ಯಾವಾಗಲೂ ತೊಯ್ದು ತೊಪ್ಪೆಯಾಗಿರುತ್ತಿದ್ದರೂ ಬೆಚ್ಚನೆ ಬಟ್ಟೆ ಇರದಿದ್ದರೂ ಸಹ ನನಗೆ ಮಳೆಗಾಲವೆಂದರೆ ಪ್ರೀತಿ. ಎಲ್ಲರ ಮನೆಯಲ್ಲಿ ಮಳೆಗಾಲಕ್ಕಾಗಿ ಉದ್ದಿನ ಹಪ್ಪಳ ಉಪ್ಪಿನಕಾಯಿ ಎಲ್ಲಾ ಮಾಡುತ್ತಿದ್ದರು. ನಾನೂ ನನ್ನ ಗೆಳತಿಯರ ಮನೆಗೆ ಹೋಗಿ ಹಪ್ಪಳ ಲಟ್ಟಿಸುತ್ತಿದ್ದೆ. ನನ್ನ ಅಮಾಯಕತೆಯ ದುರುಪಯೋಗ ಪಡೆದು ನನ್ನ ಹೊಗಳಿ ಉಬ್ಬಿಸಿ ಬಹಳ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಕೆಲವರು. ನನಗದು ತಿಳಿಯುತ್ತಿರಲಿಲ್ಲ. ಹಸಿ ಹಿಟ್ಟಿನ ಒಂದು ಉರುಳಿ ಲಟ್ಟಿಸಿ, ಅದರ ಮೇಲೆ ಒಣ ಉದ್ದಿನ ಹಿಟ್ಟು ಹಾಕಿ ಕೊಬ್ಬರಿ ಎಣ್ಣೆ ಒಂದು ಚಮಚ ಹಾಕಿ, ಇನ್ನೊಂದು ಉರುಳಿ ಲಟ್ಟಸಿ ಅದಕ್ಕೆ ಜೋಡಿಸಿ ಎರಡೂ ಹಪ್ಪಳಗಳ ನಡುವೆ ಸಣ್ಣ ಜಾಗ ಬಿಟ್ಟು ಬಾಯಿಂದ ಗಾಳಿ ಊದಿದರೆ ಬಲೂಲಿನ ಹಾಗೆ ಅದು ಉಬ್ಬುತ್ತಿತ್ತು. ಯಾರ ಹಪ್ಪಳ ಹೆಚ್ಚು ಉಬ್ಬುತ್ತದೆಯೋ ಅವಳ ಗಂಡ ಅವಳ್ನ ಬಹಳ ಪ್ರೀತಿಸುತ್ತಾನೆ ಅನ್ನುತ್ತಿದ್ದರು. ನಾನಂತೂ ಗಾಳಿ ಊದಿ-ಊದಿ ಹಪ್ಪಳ ಉಬ್ಬಿಸುತ್ತಿದ್ದೆ. ನನ್ನ ಗಂಡ ನನ್ನ ಪ್ರೀತಿಸಿದನೋ ಇಲ್ಲವೋ ಗೊತ್ತಿಲ್ಲ ಹಪ್ಪಳ ಮಾತ್ರ ಸಿಕ್ಕಾ ಪಟ್ಟೆ ಉಬ್ಬುತ್ತಿತ್ತು. ‘ಹೇ ಸುಮಿ ಹಪ್ಳ ಎಷ್ಟು ಉಬ್ತು. ಅವಳ ಗಂಡ ಅವಳನ್ನು ಭಾರಿ ಪ್ರೀತಿ ಮಾಡ್ತಾನೆ.’ ಅಂತ ಎಲ್ಲಾರೂ ಕೂಗ್ತಿದ್ರು. ನಾನು ನನ್ನ ಗಂಡ ಅಲ್ಲೇ ಬಂದು ಬಿಟ್ಟನೇನೋ ಭಾರಿ ಪ್ರೀತಿ ಮಾಡಿಯೇ ಬಿಟ್ಟನೇನೋ ಎನ್ನುವ ಹಾಗೆ ಬೀಗುತ್ತಿದ್ದೆ. ಗಂಡ-ಪ್ರೀತಿ-ಜೀವನ ಯಾವುದರ ತಿಳುವಳಿಕೆಯೇ ಇಲ್ಲದ ಆ ಮುಗ್ಧ ದಿನಗಳು ಅದೆಷ್ಟು ಸುಂದರ ದಿನಗಳಾಗಿದ್ದವು……… !!

ನಮ್ಮ ಮನೆಯಲ್ಲಿ ಉದ್ದಿನ ಬೇಳೆ ಇರುತ್ತಿರಲಿಲ್ಲವಾದ್ದರಿಂದ ನಾನು ಅಕ್ಕಿ ಹಪ್ಪಳ ಮಾಡುತ್ತಿದ್ದೆ. ಬ್ರಾಹ್ಮಣರ ಮನೆಯಲ್ಲಿ ಅಕ್ಕಿ ಹಪ್ಪಳ ಮಾಡುವದಿಲ್ಲ. ಅಕ್ಕಿ ಒಮ್ಮೆ ಬೆಂದ ಮೇಲೆ ಅದು ಅವರಿಗೆ ಮುಸುರೆ-ಮೈಲಿಗೆ. ಆದರೆ ನಾನು ಯಾರನ್ನು ಕೇರ್ ಮಾಡುತ್ತಿರಲಿಲ್ಲ. ಮೂರು ದಿನ ಅಕ್ಕಿ ನೆನೆಸಿ-ಪ್ರತಿದಿನ ನೀರು ಬದಲಾಯಿಸಿ, ನುಣ್ಣಗೆ ರುಬ್ಬಿ ದೋಸೆ ಹಿಟ್ಟಿಗಿಂತ ತೀರ ತೆಳ್ಳಗೆ ಹಿಟ್ಟು ಮಾಡಿಕೊಂಡು ಉಪ್ಪು ಇಂಗು ಹಾಕಿ-ಅಗಲ ಬಾಯಿಯ ಪಾತ್ರೆಯಲ್ಲಿ ನೀರು ಹಾಕಿ ಒಂದು ತೆಳ್ಳನೆಯ ಬಟ್ಟೆ ಪಾತ್ರೆಯ ಬಾಯಿಗೆ ಕಟ್ಟಿ ನೀರು ಸಳ-ಮಳ ಕುದ್ದು ಉಗಿ ಬರುವಾಗ ಸಣ್ಣ ಸಣ್ಣ ಪ್ಲೇಟಿನಲ್ಲಿ ಸ್ವಲ್ಪ ಹಿಟ್ಟು ಹಾಕಿ ಪ್ಲೇಟು ತಿರುಗಿಸಿ ಅದನ್ನು ಬಟ್ಟೆಯ ಮೇಲಿಟ್ಟು ಮುಚ್ಚಳ ಮುಚ್ಚುವದು. ಒಂದೇ ನಿಮಿಷದಲ್ಲಿ ಬೇಯುತ್ತದೆ. ಮತ್ತೆ ರೆಡಿಯಿದ್ದ ಬೇರೆ ಪ್ಲೇಟು ಇಟ್ಟು ಚಮಚದಿಂದ ಬೆಂದ ಹಪ್ಪಳ ತೆಗೆದು ಮತ್ತೆ ಬೇರೆ ಪ್ಲೇಟು ಬೇಯಿಸುವದು. ಹೀಗೆ ಹಬೆಯಲ್ಲಿ ಬೆಂದ ಹಪ್ಪಳವನ್ನು ಬಿಸಿಲಲ್ಲಿ ಒಣಗಿಸುವದು. ಒಣಗಿದ ಮೇಲೆ ಅಂಗೈ ಅಗಲದ ಒಂದು ಚಿಕ್ಕ ಹಪ್ಪಳ ಕರಿದರೆ ಒಂದು ಮೊರದಗಲವಾಗುತ್ತದೆ. ತಿನ್ನಲೂ ಕೂಡ ಬಹಳ ರುಚಿ. ನಾಲ್ಕಾರು ಡಬ್ಬಗಳಲ್ಲಿ ತುಂಬಿ ಇಟ್ಟಿರುತ್ತಿದ್ದೆ. ಸದ್ದುಗದ್ದಲವಿಲ್ಲದೆ ಆಗಾಗ ಹಪ್ಪಳ ಸುಟ್ಟು ತಿಂದು ಅನಂತ ಅರ್ಧಕ್ಕರ್ಧ ಖಾಲಿ ಮಾಡಿರುತ್ತಿದ್ದ.

‘ನಾನೆಷ್ಟು ಕಷ್ಟಪಟ್ಟು ಮಾಡಿಟ್ಟಿದ್ದೆ. ಪುಟ್ಟಪ್ಪ ಎಲ್ಲಾ ತಿಂದು ಹಾಕಿದಾ’ ಎಂದು ಅಳುತ್ತಿದ್ದೆ.
‘ತಿನ್ಲಿಕ್ಕೆ ಅಲ್ಲೇನೆ ಮಾಡಿದ್ದು. ಅದಕ್ಕೆ ತಿಂದೆ. ನೀನೂ ತಿನ್ನು.’ಅಂತ ನಗುತ್ತಿದ್ದ.

ನಾನು ಮಳೆ ಬಂದಾಗ ಕರಂ ಕುರಂ ತಿನ್ನಬೇಕೆಂದು ಡಬ್ಬಿಯ ಜಾಗ ಬದಲಾಯಿಸಿ ಅನಂತನ ಕಣ್ಣಿಗೆ ಬೀಳದಂತೆ ಕಾಪಾಡುತ್ತಿದ್ದೆ.

ಹೀಗೆ ಹಪ್ಪಳ ಒಂದೇ ಅಲ್ಲಾ. ನಾನು ನೀರು ಗೊಬ್ಬರ ಹಾಕಿ ಚಪ್ಪರದ ಮೇಲೆ ಹಬ್ಬಿಸಿದ ಸೌತೆ, ತಿಂಗಳವರೆ ಬಳ್ಳಿಗಳಲ್ಲಿ ಎಳೆಯ ಕಾಯಿಗಳನ್ನು ತೋರಿಸಲು ಗೆಳತಿಯರನ್ನು ಕರೆದು ಕೊಂಡು ಬಂದರೆ…. ಚಪ್ಪರದ ನೆರಳಲ್ಲಿ ಸ್ಟೂಲು ಹಾಕಿಕೊಂಡು ಓದುತ್ತ ಕುಳಿತ ಅನಂತ ಎಲ್ಲಾ ಎಳೆಯ ಕಾಯಿ ತಿಂದು ಮುಗಿಸಿರುತ್ತಿದ್ದ. ಅಲ್ಲಿ ಬರಿಯ ಬಳ್ಳಿ ಮಾತ್ರ ಇರುತ್ತಿತ್ತು. ಇದೇ ರೀತಿ ಮಕರಸಂಕ್ರಮಣದ ಹೊತ್ತಿಗೆ ಮಾಡಿಟ್ಟ ಕುಸುರೆಳ್ಳು ಎಷ್ಟು ಚೆಂದ ಕುಸುರು ಬಂದಿದೆಯೆಂದು ತೋರಿಸಲು ಎಲ್ಲರನ್ನು ಕರೆದುಕೊಂಡು ಬರುತ್ತಿದ್ದ. ಆದರೆ ಅಲ್ಲಿ ಎಳ್ಳು ಪಾಕ ಯಾವುದೂ ಇರುತ್ತಿರಲಿಲ್ಲ. ಕುಸುರೆಳ್ಳು ಮಾಡಲು ಬಹಳ ಶ್ರಮ ಮತ್ತು ಸಮಯ ಬೇಕಾಗುತ್ತದೆ. ಅನಂತ ಬೇರೆಯವರ ಶ್ರಮ ಅಥವಾ ತೊಂದರೆಯಾವುದರ ಬಗ್ಗೆಯೂ ಚಿಂತಿಸುತ್ತಲೇ ಇರಲಿಲ್ಲ. ಅಪ್ಪನ ಅತಿ ಶಿಕ್ಷೆ ಅವನೊಬ್ಬ ನಿರ್ದಯ ನಿರ್ವಿಕಾರನನ್ನಾಗಿ ಮಾಡಿತ್ತು. ಆತ ಸಂಬಂಧಗಳಿಗೆ, ಆತ್ಮೀಯತೆಗೆ, ಭಾವನೆಗಳಿಗೆ ಎಳ್ಳಷ್ಟೂ ಬೆಲೆಕೊಡುತ್ತಿರಲಿಲ್ಲ. ಉಳಿದ ಮಕ್ಕಳಿಗಿಂತ ಅವನ ಜಗತ್ತು ತೀರ ತೀರ ಭಿನ್ನವಾಗಿತ್ತು ಅವನಿಗೆ ಯಾರೇ ಎಷ್ಟೇ ಬಯ್ದರೂ ನಕ್ಕು ಬಿಡುತ್ತಿದ್ದ. ಅನಂತ ಸಿಟ್ಟಿಗೆದ್ದದ್ದನ್ನು ನಾನೆಂದೂ ಕಂಡಿಲ್ಲ. ಯಾರೂ ಕಂಡಿಲ್ಲ.

ಸುಮಿತ್ರಾ ಆತ್ಮಕಥೆ: ಒಂದು ಎತ್ತಿನ ಗಾಡಿ ಪ್ರಯಾಣ

ನಾನು ಚಿಕ್ಕವಳಿದ್ದಾಗ ಬಸ್ಸು ಇರಲಿಲ್ಲ. ತಿಂಗಳಿಗೊಮ್ಮೆ ಒಂದು ಬಸ್ಸು ಬರುತ್ತಿತ್ತು. ತಾಳೆಗುಪ್ಪ ಸಾಗರಕ್ಕೆ ಹೋಗಲು. ಅದೂ ಇಡೀ ಬಸ್ಸಿನ ತುಂಬ ಪ್ರಯಾಣಿಕರು ತುಂಬಿ ಸೀಟು ಭರ್ತಿಯಾದರೆ ಮಾತ್ರ ಇಲ್ಲದಿದ್ದರೆ ಅದೂ ಕ್ಯಾನ್ಸಲ್. ಒಂದು ತಿಂಗಳ ಮೊದಲೇ ಏಜಂಟರು ಮನೆ ಮನೆಗೆ ಬಂದು ‘ತಾಳಗುಪ್ಪ ಸಾಗರಕ್ಕೆ ಸೀಟು ಬೇಕಾ?’ ಎಂದು ಕೇಳುತ್ತಿದ್ದರು. ಇದೇ ರೀತಿ ತಾಳಗುಪ್ಪ ಸಾಗರದಲ್ಲೂ. ಇಲ್ಲಿಂದ ಹೋದ ಬಸ್ಸು ಇಲ್ಲಿಯ ಪ್ರಯಾಣಿಕರನ್ನು ಇಳಿಸಿ ಅಲ್ಲಿಯವರನ್ನು ತುಂಬಿಕೊಂಡು ಬಂದು ಬಿಡುತ್ತಿತ್ತು. ಮತ್ತೆ ಒಂದು ತಿಂಗಳ ನಂತರ ಬಸ್ಸು ಹೊರಡುತ್ತಿತ್ತು. ಬಸ್ ಹೊರಡುವ ದಿನ ಊರಲ್ಲಿ ಯಾರಿಗೋ ಸೀರಿಯಸ್ ಕಾಯಿಲೆ ಅಥವಾ ಯಾರ ಮನೆಯಲ್ಲೋ ಮದುವೆ, ಡೆಲಿವರಿ ಹೀಗೆ ಏನೋ ಒಂದು ವಿಶೇಷವಿದ್ದರೆ ಮತ್ತೆ ಪ್ರಯಾಣ ಕ್ಯಾನ್ಸಲ್. ಅಂದರೆ ಯಾರೋ ಒಬ್ಬರ ಮನೆಯ ಸುಖ ದುಃಖವನ್ನು ಊರವರೆಲ್ಲಾ ತಮ್ಮದೇ ಎಂದು ತಿಳಿದು ಸ್ಪಂದಿಸುತ್ತಿದ್ದರು. ಒಮ್ಮೆ ನೆಂಟರು ಬಂದರೆ ಅವರು ಮುಂದಿನ ತಿಂಗಳು ಬಸ್ಸು ಬರುವವರೆಗೆ ತಿಂಗಳುಗಟ್ಟಲೆ ಉಳಿದೇ ಬಿಡುತ್ತಿದ್ದರು. ಹೋಗಲು ಸಾಧ್ಯವಿರುತ್ತಿರಲಿಲ್ಲ. ಅದೇ ರೀತಿ ಇಲ್ಲಿಂದ ಬೇರೆ ಊರಿಗೆ ಹೋದವರ ಸ್ಥಿತಿ. ಹೀಗಾಗಿ ಪ್ರಯಾಣವೊಂದು ಅತಿ ಮಹತ್ವದ ವಿಷಯವಾಗಿ ಬಸ್ಸು ಬಂತಂತೆ ಬಸ್ಸು ಹೋತಂತೆ, ಬಸ್ಸು ಬರಲೇ ಇಲ್ಲವಂತೆ ಅನ್ನುವದೇ ಒಂದು ಬಿ.ಬಿ.ಸಿ ಬಿತ್ತರಸುವ ಸುದ್ದಿಯಷ್ಟು ಮಹತ್ವದ್ದಾಗಿ ಬಿಡುತ್ತಿತ್ತು. ನ್ಯೂಸ್ ಪೇಪರ್ ಕೂಡ ಹೀಗೆ ಎಲ್ಲರೂ ಕೊಳ್ಳುತ್ತಿರಲಿಲ್ಲ. ಹೆರ್ಲೇಕರ್ ಅನ್ನುವ ಬೀಡಾ ಅಂಗಡಿಯವರು ಒಂದೆರಡು ಪೇಪರ್ ತರಿಸುತ್ತಿದ್ದರು. ಅಂಗಡಿಯ ಹತ್ತಿರ ನಿಂತ ಯಾರಾದರೊಬ್ಬರು ಜೋರಾಗಿ ಓದುವದು ಹತ್ತಾರು ಜನ ಕೇಳುವದು. ಕೇಳಿದವರು ತಮ್ಮದೊಂದಿಷ್ಟು ಕಲ್ಪನೆಯನ್ನು ಬೆರೆಸಿ ಸುದ್ದಿ ತೇಲಿ ಬಿಡುತ್ತಿದ್ದರು. ಹೀಗೆ ಬೊಂಬಾಯಿಯಲ್ಲೋ ಕಲ್ಕತ್ತಾದಲೋ ಯಾರೊ ಒಬ್ಬರು ಸತ್ತರೆ…. ಆಕ್ಸಿಡೆಂಟಾದರೆ….. ನಮ್ಮೂರಲ್ಲಿ ತಿಂಗಳುಗಟ್ಟಲೆ ಅದೇ ವಿಷಯವನ್ನು ವೈವಿಧ್ಯಪೂರ್ಣವಾಗಿ ಚರ್ಚಿಸುತ್ತಿದ್ದರು. ಆ ಸತ್ತವರು ಪುನರ್ಜನ್ಮದಲ್ಲಿ ಹುಟ್ಟಿ ಬಂದರೂ ನಮ್ಮೂರಲ್ಲಿ ಅವರ ಬಗ್ಗೆ ನಡೆಯುವ ಚರ್ಚೆ ನಿಲ್ಲುತ್ತಿರಲಿಲ್ಲ-ಕಾರಣ ಜನರಿಗೆ ಬೇರೆ ಕೆಲಸವೇ ಇರುತ್ತಿರಲಿಲ್ಲ.

ಆ ದಿನಗಳಲ್ಲಿ ನಾವು ಎತ್ತಿನ ಗಾಡಿಯಲ್ಲಿ ಪ್ರಯಾಣಕ್ಕೆ ಹೊರಡುತ್ತಿದ್ದೆವು. ಹೆಜ್ಚೆ-ಚಂದ್ರಗತ್ತಿ, ಕಾಂವಚೂರು ಹೀಗೆ, ಗಾಡಿಯಲ್ಲಿ ಹುಲ್ಲು ಹಾಕಿ ಕಂಬಳಿ ಹಾಸಿ ಕಂಬಳಿಯ ಮೇಲೆ ಮತ್ತೆ ಬೆಡ್‌ಶೀಟ್ ಹಾಸಲಾಗುತ್ತಿತ್ತು. ಬಿಸಿಲಿನಲ್ಲಿ ಎತ್ತುಗಳಿಗೆ ಆಯಾಸ ಅಲ್ಲದೇ ನಮಗೂ ಕೂಡ ಎಂದು ಸಂಜೆ ಗಾಡಿ ಕಟ್ಟಲಾಗುತ್ತಿತ್ತು. ಮನೆಯಲ್ಲೆ ಸಂಜೆ ಊಟ ಮುಗಿಸಿ ಸ್ವಲ್ಪ ಏನಾದರೂ ತಿಂಡಿ ಕಟ್ಟಿಕೊಂಡು ತಿರುಪಿನ ಚೊಂಬಿನಲ್ಲಿ (ಚೊಂಬಿನ ಕಂಠಕ್ಕೆ ಮತ್ತೆ ಹಿಡಿಕೆಯುಳ್ಳ ಮುಚ್ಚಳಕ್ಕೆ ಗ್ರೂ ಇರುತ್ತಿತ್ತು. ನೀರು ತುಂಬಿ ಮುಚ್ಚಳ ಹಾಕಿದಾಗ ಗ್ರೂ ನಿಂದಾಗಿ ನೀರು ತುಳುಕಿ ಹೊರಗೆ ಚೆಲ್ಲುತ್ತಿರಲಿಲ್ಲ.) ನೀರು ತುಂಬಿಕೊಂಡು ಹೊರಡುತ್ತಿದ್ದೆವು. ಗಾಡಿ ಹೊಡೆಯುವವ, ನನ್ನಮ್ಮ, ನಮ್ಮ ಪಕ್ಕದ ಮನೆಯ ಹುಡುಗಿ ದುರ್ಗಾ ಅವಳ ತಾಯಿ ರಮಾಬಾಯಿ-ತಂದೆ ನಾರಾಯಣಾರಾವ್ ಮರಬಳ್ಳಿ. ಇಷ್ಟು ಜನ ಕಾಯಂ ಪ್ರಯಾಣಿಕರು. ಅವರು ಸಾರಸ್ವತರು. ರಾತ್ರಿಯಲ್ಲಿ ಪ್ರಯಾಣ. ಹೊತ್ತು ಕಳೆಯಲು ಕಳ್ಳ-ಕಾಕರ-ದರೋಡೆಕೋರರ ಸಾಹಸದ ಕತೆ, ಭೂತ- ಪ್ರೇತಗಳ ಚೇಷ್ಟೆಯ ವಿಷಯ ಯಾರಿಗೋ ದೆವ್ವ ಹಿಡಿದ ಸುದ್ದಿ ಅಮಾವಾಸ್ಯೆ ಹುಣ್ಣಿಮೆ ರಾತ್ರಿಯಲ್ಲಿ ಮೋಹಿನಿ ದಾರಿ ಅಡ್ಡ ಗಟ್ಟಿದ ಪ್ರಸಂಗಗಳನ್ನೆಲ್ಲ ದೊಡ್ಡವರು ಮಾತಾಡುತ್ತಿದ್ದರೆ ನಾನು ದುರ್ಗಾ ಹೆದರುತ್ತಿದ್ದೆವು. ಗಾಡಿಯ ಹೊರಗೆ ನಮ್ಮ ಕಾಲು ಬಾಚಿರುತ್ತಿತ್ತು. ಆಕಾಶ ನೋಡುತ್ತ ಮಲಗಿರುತ್ತಿದ್ದ ನಾವು ಯಾವುದಾದರೂ ದೆವ್ವ ನಮ್ಮ ಕಾಲೆಳೆದು ಬಿಟ್ಟರೆ ಅಥವಾ ಕಾಲಿಂದ ನಮ್ಮ ಮೈಯಲ್ಲಿ ಸೇರಿ ಬಿಟ್ಟರೆ ಎಂದು ಕಣ್ಣೇ ಮುಚ್ಚುತ್ತಿರಲಿಲ್ಲ. ಚಿಕ್ಕ-ಪುಟ್ಟ ಮಕ್ಕಳು ಹೆದರುತ್ತವೆ ಇಂಥ ವಿಷಯ ಮಾತಾಡಬಾರದೆಂದೂ ಈ ದೊಡ್ಡವರಿಗೆ ತಿಳಿಯುತ್ತಿರಲಿಲ್ಲವೇನೋ.

ನಾನು ಕೆಲಸ ಕಲಿತದ್ದು

ಸರಕಾರಿ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿ ನಿವೃತ್ತರಾದ ನಾರಾಣರಾವ್ ಅವರ ಹೆಂಡತಿಯೇ ಶಾಂತಿಅಮ್ಮ. ನಾನು ಸಣ್ಣ ಹುಡುಗಿಯಿದ್ದಾಗ ಅವರ ಹೆಸರು ಗೊತ್ತಿಲ್ಲದ್ದಕ್ಕೆ ಶಾಂತಿ ಅಮ್ಮ ಎಂದೇ ಕರೆಯುತ್ತಿದ್ದೆ. ಶಾಂತಿ ಎನ್ನುವ ಮಗಳಿದ್ದಳು ಅವರಿಗೆ. ಕ್ರಮೇಣ ಎಲ್ಲರೂ ಅವರಿಗೆ ಶಾಂತಿ ಅಮ್ಮನೆಂದೇ ಕರೆಯುತ್ತಿದ್ದರು. ಶಾಂತಿ ಅಮ್ಮನ ಪ್ರಭಾವ ನನ್ನ ಮೇಲಾದಷ್ಟೂ ಬೇರೆ ಯಾವ ವ್ಯಕ್ತಿಯ ಪ್ರಭಾವವೂ ಆಗಿಲ್ಲ. ೩ ಹೆಣ್ಣು ೨ ಗಂಡು ಮಕ್ಕಳ ತಾಯಿ ಶಾಂತಿ ಅಮ್ಮನ ಸಂಸಾರ ನಿಭಾಯಿಸುತ್ತಿದ್ದ ರೀತಿ ನನಗೆ ಬಹಳ ಅದ್ಭುತವೆನಿಸುತ್ತಿತ್ತು. ಗಂಡ ತಂದು ಕೊಡುತ್ತಿದ್ದ ೬೦ ರೂಪಾಯಿ ಸಂಬಳದಲ್ಲಿ ಆ ಗೃಹಿಣಿ, ಮಳೆಗಾಲದ ಹಪ್ಪಳ-ಸಂಡಿಗೆ-ಬಾಳಕದ ಮೆಣಸಿನಕಾಯಿಂದ ಹಿಡಿದು ವರ್ಷದ ಉಪ್ಪಿನಕಾಯಿ ವರ್ಷದ ಹುಣಿಸೆ ಹಣ್ಣು ಮೆಣಸಿನಕಾಯಿಯಷ್ಟೇ ಅಲ್ಲ ಪ್ರತಿಯೊಂದು ಹಬ್ಬ ಹುಣ್ಣಿಮೆ ಬೇರೆಯವರ ಮನೆಯ ಮದುವೆ ಮುಂಜಿಗಳ ಉಡುಗೊರೆಯನ್ನು ನಿಭಾಯಿಸುತ್ತಿದ್ದರು. ನಾನು ಇಡೀ ದಿನ ಅವರ ಮನೆಯಲ್ಲಿರುತ್ತಿದ್ದೆ. ಗೋಪಾಳ ಚಂದ್ರಘಟಗಿಯವ ಬಾಡಿಗೆ ಮನೆಯಲ್ಲಿದ್ದ ಅವರು ಅಷ್ಟೇ ಸಣ್ಣ ಸಂಬಳದಲ್ಲಿ ನಾಲ್ಕು ಮಕ್ಕಳ ಮದುವೆ ಮಾಡಿದ್ದರು.

ನಮ್ಮ ಮನೆಯ ಹಿಂದೆ ಒಂದಿಷ್ಟು ಖಾಲಿ ಜಾಗವಿತ್ತು. ಅಲ್ಲಿ ಶಾಂತಿ ರಸ್ತೆಯಲ್ಲಿ ಬಿದ್ದ ಶಗಣಿ ತಂದು ರಾಶಿ ಹಾಕುತ್ತಿದ್ದಳು. ನಾಲ್ಕು ದಿನಗಳಿಗೊಮ್ಮೆ ಶಾಂತಿ ಅಮ್ಮ ತನ್ನ ಮಗ ಭಾರತ್ ಮಿಲ್ ನಿಂದ ಸೈಕಲ್ ಮೇಲೆ ತರುತ್ತಿದ್ದ ಭತ್ತದ ಹೊಟ್ಟಿನ ಚೀಲವನ್ನು ಶೆಗಣಿ ರಾಶಿಗೆ ಸುರುವಿ ಚೆನ್ನಾಗಿ ಕಲೆಸಿ ಒಂದೇ ರೀತಿಯ ಉಂಡೆ ಮಾಡಿ ರಾಶಿ ಹಾಕುತ್ತಿದ್ದರು. ನಂತರ ಕುರುಳು ತಟ್ಟಿದರೆ, ನೂರಾರು ಕುರುಳುಗಳಲ್ಲಿ ಒಂದೇ ಒಂದು ಕೂಡ ದೊಡ್ಡ-ಸಣ್ಣ ಅಥವಾ ಸೊಟ್ಟ-ಡೊಂಕ, ದಪ್ಪ-ತೆಳ್ಳ ಆಗಿರುತ್ತಿರಲಿಲ್ಲ. ೪ ದಿನಗಳ ನಂತರ ಅದನ್ನು ತಿರುಗಿಸಿ ಹಾಕುತ್ತಿದ್ದರು. ಇನ್ನೊಂದು ಬದಿಯೂ ಒಣಗಲು. ೫ ತಿಂಗಳು ಹೀಗೆ ತಟ್ಟಿದ ಕುರುಳನ್ನು ಒಳಗೆ ಗಳನೆಟ್ಟು ಮಾಡಿದ ಚೌಕಾದ ರೂಮಿನಂತ ಜಾಗದಲ್ಲಿ ಅದೆಷ್ಟು ನೀಟಾಗಿ ಸರಿಯುತ್ತಿದ್ದರೆಂದರೆ ಸ್ವೀಟ್ ಮಾರ್ಟ್‌ಗಳಲ್ಲಿ ಲಡ್ಡು ಜಿಲೇಬಿಯನ್ನ ಅಷ್ಟು ನೀಟಾಗಿ ಇಟ್ಟಿರುವದಿಲ್ಲ. ಅದರ ಪಕ್ಕದಲ್ಲಿದ್ದ ಇನ್ನೊಂದು ಭಾಗದಲ್ಲಿ ಸಣ್ಣ-ಸಣ್ಣ ತುಂಡು ಕಟ್ಟಿಗೆಗಳನ್ನು ಅಷ್ಟೇ ನೀಟಾಗಿ ಜೋಡಿಸುತ್ತಿದ್ದರು. ಕಟ್ಟಿಗೆ ಕುರುಳನ್ನು ಶಾಂತಿ ಅಮ್ಮ ಲೆಕ್ಕಾಚಾರದ ಮೇಲೆ ಸುಡುತ್ತಿದರು.

ಇಡೀ ವರ್ಷ ಬೇಕಾಗುವ ಹುಣಿಸೆಹಣ್ಣು ಸೋಸಿದಾಗ ಬರುವ ನಾರನ್ನು ಎಲ್ಲರೂ ಎಸೆದು ಬಿಡುವ ಹಾಗೆ ಅವರು ಎಸೆಯುತ್ತಿರಲಿಲ್ಲ. ಅದನ್ನೂ ಒಂದು ಡಬ್ಬಿಯಲ್ಲಿಟ್ಟು ಒಂದಿಷ್ಟು ನಾರು ನೆನೆಯಿಟ್ಟು ಅದರ ನೀರನ್ನು ಸಾರಿಗೆ ಉಪಯೋಗಿಸುತ್ತಿದ್ದರು. ಇರುವ ಎರಡು ಮೂರು ಒಳ್ಳೆಯ ಸೀರೆಗಳನ್ನೇ ನೀಟಾಗಿ ಉಟ್ಟು ಸಂಜೆ ತಮ್ಮನ ಮನೆಯತನಕ ವಾಕಿಂಗ್ ಹೋಗಿ ಬರುತ್ತಿದ್ದರು. ಶಾಂತಿಅಮ್ಮನ ಕುರುಳು ಒಯ್ದು ಕೊಡುವ ಅಥವಾ ಕಟ್ಟಿಗೆ ಸರಿಯುವಲ್ಲಿ ನಾನೂ ಸಹಾಯ ಮಾಡುತ್ತಿದ್ದೆ. ನನ್ನಮ್ಮ ಕೂಗಾಡುತ್ತಿದ್ದಳು. ‘ಮನೆಯಲ್ಲಿ ಒಂದು ಕಡ್ಡಿ ಸರಿಸಲೂ ನಾನು ಇವಳಿಗೆ ಹೇಳುವದಿಲ್ಲ ಯಾರ‍್ಯಾರ ಮನೆಗೋ ಹೋಗಿ ಕೂಲಿ ಆಳಿನಂಗೆ ಏನೇನೋ ಕೆಲಸ ಮಾಡಿ ಬರುತ್ತಾಳೆ.’ ಎಂದಾಗ ಅಪ್ಪ ಹೇಳುತ್ತಿದ್ದ –
‘ಹೋಗ್ಲಿ ಬಿಡೇ. ನಿಂಗಂತೂ ನೀಟಾಗಿ ಕೆಲ್ಸ ಮಾಡ್ಲಿಕ್ಕೆ ಬರ‍್ಲಿಲ್ಲ. ಶಾಂತಿಅಮ್ಮನ್ನ ನೋಡಿ ಅವಳು ಕೆಲಸಾ ಕಲೀಲಿ. ಹುಣಸೆಹಣ್ಣಿನ ನಾರನ್ನು ಉಪಯೋಗಿಸಿ ಅವರು ಸಾರು ಮಾಡ್ತಾರೆ. ನಾಳೆ ನಿನ್ನ ಮಗಳಿಗೂ ಒಬ್ಬ ಬಡ ಗಂಡ ಸಿಕ್ರೆ ಅವಳೂ ಗಂಡನ ಸಂಪಾದನೆಯಲ್ಲಿ ಸಂಸಾರ ತೂಗಿಸ್ಗಂಡು ಹೋಗ್ತಾಳೆ.’

ನಮ್ಮಮ್ಮ ಕೈಯಲ್ಲಿ ಒಂದೇ ಒಂದು ಬಿಲ್ಲಿ ಕೂಡ ಇಲ್ಲದೇ ಯಾವ ಆದಾಯವೂ ಇಲ್ಲದೇ ಮಕ್ಕಳಿಗೆಲ್ಲಾ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದ್ದಳು. ಆದರೆ ಅಪ್ಪನಿಗೆ ಅದೇನೂ ಮಹತ್ವದ್ದು ಅನ್ನಿಸಿರಲೇ ಇಲ್ಲ. ಅದ್ಯಾವ ಗಳಿಗೆಯಲ್ಲಿ ಅಪ್ಪ ಹಾಗೆ ಹೇಳಿದ್ದನೋ ಏನೋ ನಾನೂ ಕೂಡ ಶಾಂತಿಅಮ್ಮನ ಹಾಗೆ ಹುಣಿಸೆ ನಾರು ನೆನೆಸಿ ಸಾರು ಮಾಡಿ ಅವರ ಹಾಗೆ ಕುರುಳು ಬಡಿದು ಕಟ್ಟಿಗೆ ಸರಿದು ಸಂಸಾರ ನಿಭಾಯಿಸಿದೆ. ಅಂಥ ಸಂದರ್ಭದಲ್ಲಿ ಶಾಂತಿಅಮ್ಮನಿಗೆ ಮನಸಿನಲ್ಲಿ ಕೃತಜ್ಞತೆ ಕೂಡ ಸಲ್ಲಿಸಿದ್ದೇನೆ. ನನ್ನ ಜೀವನದಲ್ಲಿ ಬಡವರ ಜೀವನಶೈಲಿ ಬಹಳ ಗಾಢ ಪರಿಣಾಮ ಬೀರಿದೆ.

ಸುಮಿತ್ರಾ ಆತ್ಮಕಥೆ: ಹರಿದ ಬದುಕಿನ ಪುಟಗಳು