Advertisement
ಸೇಫರ್ ಜೋನ್ ನಿಂದ ಹೊರಬರುವುದನ್ನು ಕಲೀಬೇಕು…: ಬಸವನಗೌಡ ಹೆಬ್ಬಳಗೆರೆ ಸರಣಿ

ಸೇಫರ್ ಜೋನ್ ನಿಂದ ಹೊರಬರುವುದನ್ನು ಕಲೀಬೇಕು…: ಬಸವನಗೌಡ ಹೆಬ್ಬಳಗೆರೆ ಸರಣಿ

ಎಷ್ಟೋ ಜನಕ್ಕೆ ತಾವು ಈಗಿರುವ ಕೆಲಸ, ಸ್ಥಿತಿ ಸರಿಯಿಲ್ಲವೆಂದೆನಿಸಿರುತ್ತದೆ. ಯಾರನ್ನೇ ಕೇಳಲಿ ಈ ಕೆಲಸ ಸರಿಯಿಲ್ಲ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ದೂಷಣೆ ಮಾಡುತ್ತಿರುತ್ತಾರೆ. ಆದರೆ ತಮಾಷೆ ಅಂದ್ರೆ ಕಡೇವರೆಗೂ ಬೇರೆ ಕೆಲಸಕ್ಕೆ ಪ್ರಯತ್ನಿಸದೇ ಅದೇ ಕೆಲಸದಲ್ಲಿ ಮುಂದುವರೆಯುತ್ತಿರುತ್ತಾರೆ!! ಕೆಲವರಂತೂ ಅದೇ ಕೆಲಸದಲ್ಲಿದ್ದುಕೊಂಡು ಬೇರೆ ಕೆಲಸಕ್ಕೆ ಪ್ರಯತ್ನಿಸಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಹೇಳೋಕೆ ಹೊರಟಿರೋದು ಏನಪ್ಪಾ ಅಂದ್ರೆ ನಾವು ಇದ್ದ ಸ್ಥಿತಿಯಲ್ಲಿ ಖುಷಿಯಾಗಿದ್ದುಕೊಂಡು ಬೇರೆಯದ್ದಕ್ಕೆ ಪ್ರಯತ್ನಿಸುತ್ತಾ ಇರಬೇಕು. ಸಿಕ್ಕರೆ ಒಳ್ಳೆಯದು, ಒಂದೊಮ್ಮೆ ಸಿಗದಿದ್ದರೆ ಈಗಿರುವ ಕೆಲಸವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಬೇರೆಯದ್ದಕ್ಕೂ ಪ್ರಯತ್ನಿಸದೇ ಇರೋ ಕೆಲಸವನ್ನು ಗೊಣಗಿಕೊಂಡು ಮಾಡಿದರೆ ಅದು ನಮ್ಮ ನೆಮ್ಮದಿಗೆ ಲಾಸ್ ಅಷ್ಟೇ.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೈದನೆಯ ಕಂತು ನಿಮ್ಮ ಓದಿಗೆ

ನಾವು ನಮ್ಮ ಜೀವನದಲ್ಲಿ ಏನೇನೋ ಕನಸುಗಳನ್ನು ಕಂಡಿರುತ್ತೇವೆ. ಅವುಗಳನ್ನು ನನಸು ಮಾಡಿಕೊಳ್ಳಲು ಹೋರಾಟ ಮಾಡುತ್ತೇವೆ. ಕೆಲವರ ಹೋರಾಟಕ್ಕೆ ಯಶಸ್ಸು ಸಿಗುತ್ತೆ. ಕೆಲವರದ್ದಕ್ಕೆ ಸಿಗೋದಿಲ್ಲ! ಹಾಗಂತ ಕೆಲವರು ಬಿಡೋ ಜಾಯಮಾನದವರಲ್ಲ. ಪಟ್ಟು ಹಿಡಿದು ಇಟ್ಟುಕೊಂಡ ಗುರಿಯನ್ನು ಸಾಧಿಸಿಬಿಡ್ತಾರೆ. ಕೆಲವರು ಮಾರ್ಗಮಧ್ಯದಲ್ಲಿ ಗುರಿಯನ್ನು ಬಿಡ್ತಾರೆ, ಬೇರೊಂದು ದಾರಿಯಲ್ಲಿ ಸಾಗಿ ಅದರಲ್ಲೇ ಸಮಾಧಾನ ಪಡ್ಕೋತಾರೆ. ಕೆಲವರಂತೂ ಗುರಿ ಈಡೇರದಿದ್ರೆ ಹತಾಶರಾಗಿ ಜೀವನವನ್ನೇ ಕೊನೆಗಾಣಿಸಿಕೊಳ್ತಾರೆ!! ಇದು ದಡ್ಡತನದ ಪರಮಾವಧಿ. ಇಲ್ಲಿ ‘ಈಸಬೇಕು ಇದ್ದು ಜಯಿಸಬೇಕು’ ಕೆಲವು ಸಲ ಯಾವುದೋ ಒಂದು ಶಕ್ತಿ ನಮ್ಮ ಕೆಲಸ ಆಗದಂತೆ ತಡೆಯೊಡ್ತಾ ಇರಬೋದು. ಇದನ್ನೇ ಅದೃಷ್ಟ, ವಿಧಿ, ಲಕ್ ಫ್ಯಾಕ್ಟರ್, ಹಣೆಬರೆಹ ಅಂತಾ ಹೇಳ್ತಾರೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಬೇಡ. ಆದರೆ ನಮ್ಮ ಮನಸ್ಸಿನ ಸಮಾಧಾನಕ್ಕೆ ಇಂತಹ ನಂಬಿಕೆಗಳು ಚೂರಾದ್ರೂ ಸಹಾಯ ಮಾಡುತ್ತವೆಎಂಬುದಂತೂ ಸತ್ಯ!?  ಮನೋವೈಜ್ಞಾನಿಕವಾಗಿ ಇವನ್ನು ನಾವು ‘ರಕ್ಷಣಾ ತಂತ್ರಗಳು’ ಎನ್ನುತ್ತೇವೆ. ಜೀವನದಲ್ಲಿ ಇವು ಕೆಲವು ಸಲ ನಮಗೆ ಬೇಕು ಅನಿಸುತ್ತೆ. ಹಾಗಂತ ಇವನ್ನೇ ಪದೇ ಪದೇ ಪಾಲಿಸುತ್ತಿದ್ದರೆ ನಮ್ಮ ಕಥೆ ಅಷ್ಟೇ!! ಉದಾಹರಣೆಗೆ ಯಾರೋ ಒಬ್ಬ ರೋಗಪೀಡಿತನನ್ನು ಎಷ್ಟೇ ದೊಡ್ಡ ಆಸ್ಪತ್ರೆಗೆ ಸೇರಿಸಿಯೂ, ಒಳ್ಳೆಯ ಚಿಕಿತ್ಸೆ ಕೊಡಿಸಿಯೂ ಬದುಕಲಿಲ್ಲ ಎಂದರೆ ಅವರ ಸಂಬಂಧಿಕರು ‘ಅವನ ಆಯುಸ್ಸೇ ಅಷ್ಟಿತ್ತು’ ‘ಹಣೆಯಲ್ಲಿ ಬರೆದಿದ್ದನ್ನು ಹಣೆಗಣ್ಣನೂ ಅಳಿಸಲಾರ!’ ಎಂದು ನಂಬುವ ಅವರ ನಂಬಿಕೆಯೇ ಅವರನ್ನು ಸಮಾಧಾನಿಯನ್ನಾಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಡಿವಿಜಿಯವರ

ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು|
ಅಧಿಕಾರಿ ನೀನಲ್ಲ, ವಿಧಿ ಬೆಪ್ಪನಲ್ಲ||
ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು|
ಅದಟದಿರು ನೀನವನ ಮಂಕುತಿಮ್ಮ| 

ಎಂಬ ಕಗ್ಗವು ನಾವು ಅದೆಷ್ಟೇ ಪುರುಷಪ್ರಯತ್ನ ಹಾಕಿದರೂ ಕೂಡ ನಮಗೆ ಯಾವುದೋ ಒಂದು ಅಮೂರ್ತ ಶಕ್ತಿಯಿಂದ ನಮ್ಮ ಕಾರ್ಯಸಾಧನೆ ಆಗಿಲ್ಲ ಎಂದು ತಿಳಿದರೆ ನಮ್ಮ ಮನೋವೇದನೆಯನ್ನು ಕಮ್ಮಿ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ “ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು” ಎಂಬ ಮಾತು ನಮ್ಮನ್ನು ಮತ್ತೆ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹಾಗಂತ ಈ ವಿಧಿಯ ಮಾತು ಕೆಲ ಸೋಮಾರಿಗಳಿಗೂ ನೆಪ ಹೇಳಲು ಸಹಾಯವಾಗುತ್ತಿದೆ. ಇದು ತಪ್ಪು. ನಮ್ಮ ಪ್ರಾಮಾಣಿಕ ಯೋಜಿತ ಪ್ರಯತ್ನದಿಂದ ನಮ್ಮ ಗೆಲುವು ಖಂಡಿತಾ ಸಾಧ್ಯವಿದೆ.  ಒಂದು ಕಥೆ, ಒಂದು ಹಾಡು, ಒಂದು ಪುಸ್ತಕ, ವ್ಯಕ್ತಿಯೊಬ್ಬನ ಪ್ರೇರೇಪಣೆಯ ಭಾಷಣ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಿಸುತ್ತವಂತೆ. ಇದರ ಬಗ್ಗೆ ಕಥೆ ಹೀಗಿದೆ:

ಒಬ್ಬ ರಾಜ ಅನೇಕ ಬಾರಿ ಯುದ್ಧದಲ್ಲಿ ಸೋತು ಸೋತು ಸಾಕಾಗಿ ಕೊನೆಗೊಮ್ಮೆ  ಇನ್ನೇನು ಅವನಿಗೆ ಹೆದರಿ ಒಂದು ಗುಹೆಯಲ್ಲಿ ಅಡಗಿ ಕುಳಿತುಕೊಂಡಿರುತ್ತಾನೆ. ಆಗ ಅವನಿಗೆ ಆಹಾರ ಕೊಂಡೊಯ್ಯುತ್ತಿರುವ   ಒಂದು ಇರುವೆಯು ಎಳೆದೊಯ್ಯಲು  ಪದೇ ಪದೇ ಸೋತರೂ ಮತ್ತೆ ಮತ್ತೆ ಅದನ್ನು ಎಳೆದೊಯ್ಯಲು ಪ್ರಯತ್ನ ಮಾಡುತ್ತಿರುವ ದೃಶ್ಯವೊಂದು ಕಾಣುತ್ತದೆಯಂತೆ. ಆಗ ಅವನು ಇದರಿಂದ ಪ್ರೇರಿತನಾಗಿ ತನ್ನ ಮನೋಭಾವ ಬದಲಿಸಿಕೊಂಡು ರಾಜನ ವಿರುದ್ಧ ಹೋರಾಡಿ ವಿಜಯಿಯಾದನಂತೆ!

ಒಬ್ಬ ವ್ಯಕ್ತಿ ನೋವಿನಿಂದ ತೀವ್ರ ಹತಾಶನಾಗಿರುವಾಗ ಕೇಳುವ “ಬಾಳುವಂತ ಹೂವೇ, ಬಾಡುವಾಸೆ ಏಕೆ?” “ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ” ಎಂಬ ಹಾಡುಗಳು ಖಂಡಿತಾ ಮನಸ್ಸಿನ ನೋವಿಗೆ ಮುಲಾಮು ಹಚ್ಚುತ್ತವೆ. ಇಲ್ಲಿ ಯಾವುದೂ ಸುಲಭ ಇಲ್ಲ. ಡಾರ್ವಿನ್ ರವರ ‘ಉಳಿವಿಗಾಗಿ ಹೋರಾಟ’ ಎಂಬ ಸಿದ್ಧಾಂತ ಪಾಲನೆಯಾಗಬೇಕಷ್ಟೇ!

ಕೆಲವರು “ನಾವು ಸೇಫ್ ಝೋನ್‌ನಲ್ಲಿ ಇದ್ದೀವಿ, ಸುಮ್ನೆ ಯಾಕೆ ರಿಸ್ಕ್??”  ಎಂದು  ರಿಸ್ಕ್ ತೆಗೆದುಕೊಳ್ಳಲು ಮುಂದಾಗದಿರುವುದು ನಮ್ಮ ಜೀವನದಲ್ಲಿ ನಾವಂದುಕೊಂಡಂತೆ ಸಾಧಿಸಲು ಆಗುತ್ತಿಲ್ಲ. ಇದರ ಬಗ್ಗೆ ಒಂದು ಪ್ರಸಂಗವು ಈ ರೀತಿ ಇದೆ:

ಒಮ್ಮೆ ಒಂದು ದೊಡ್ಡ ಪಾತ್ರೆಯಲ್ಲಿ ಕಪ್ಪೆಗಳನ್ನು ಹಾಕಲಾಯಿತಂತೆ. ಅವಕ್ಕೆ ಬೇಕಾದ ಆಹಾರದ ವ್ಯವಸ್ಥೆಯನ್ನೂ ಸಹ ಅಲ್ಲಿ ಮಾಡಲಾಯಿತಂತೆ. ಆ ಪಾತ್ರೆಯನ್ನು ಒಲೆಯ ಮೇಲಿಟ್ಟು ನಿಧಾನವಾಗಿ ನೀರನ್ನು ಕಾಯಿಸಲು ಪ್ರಾರಂಭಿಸಲಾಯಿತಂತೆ. ಆಗ ನೀರು ಉಗುರುಬೆಚ್ಚಗಾಗಲು ಕೆಲ ಕಪ್ಪೆಗಳು ಮುಂದಾಲೋಚನೆಯಿಂದ “ನಾವಿಲ್ಲೇ ಇದ್ದರೆ ಮುಂದೆ ನಮ್ಮ ಜೀವಕ್ಕೆ ಅಪಾಯವಾಗಬಹುದು” ಎಂಬ ದೂರಾಲೋಚನೆಯಿಂದ ಪಾತ್ರೆಯಿಂದ ಹಾರಿ ಹೊರಗೆ ಹೋದವಂತೆ. ಕೆಲ ಕಪ್ಪೆಗಳು ಮಾತ್ರ “ಆಹಾರದ ವ್ಯವಸ್ಥೆ, ಬೆಚ್ಚನೆಯ ನೀರು ಎಂಥಾ ಒಳ್ಳೆಯ ವಾತಾವರಣ ಇದೆ; ನಾವಿಲ್ಲೇ ಇದ್ದರೆ ಆರಾಮಾಗಿ ಇರಬಹುದು” ಎಂದುಕೊಂಡು ಅಲ್ಲೇ ಇರಲು ನಿರ್ಧರಿಸಿದವಂತೆ. ಇದಕ್ಕಾಗಿ ಅವು ತಮ್ಮ ದೇಹದ ಉಷ್ಣತೆಯನ್ನು ನೀರಿನ ಉಷ್ಣತೆಗೆ ಹೊಂದಿಸಿಕೊಂಡವಂತೆ. ಬರು ಬರುತ್ತಾ ನೀರು ಬಿಸಿಯಾಗುತ್ತಾ ಹೋದಂತೆ ಕಪ್ಪೆಗಳು ತಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಶಕ್ತಿ ವ್ಯಯಿಸಲು ಶುರು ಮಾಡತೊಡಗಿದವಂತೆ. ನೀರು ಇನ್ನೂ ಹೆಚ್ಚು ಬಿಸಿಯಾದಂತೆ ಹೆಚ್ಚೆಚ್ಚು ಶಕ್ತಿ ವ್ಯಯಿಸಿಕೊಂಡು ತಮ್ಮ ದೇಹದ ಉಷ್ಣತೆಯನ್ನು ಪಾತ್ರೆಯ ಬಿಸಿ ನೀರಿನ ಉಷ್ಣತೆಗೆ ಸರಿದೂಗಿಸಿಕೊಳ್ಳಲು ಹೆಚ್ಚೆಚ್ಚು ಶಕ್ತಿ ಬಳಸಿ ಬಳಸೀ ಅವು ನಿತ್ರಾಣವಾಗುತ್ತಾ ಹೋದವಂತೆ. ಕಪ್ಪೆಗಳಿಗೆ ಈಗ “ಈ ವಾತಾವರಣ ನಮಗೆ ಸೇಫ್ ಅಲ್ಲ, ಪಾತ್ರೆಯಿಂದ ಜಿಗಿದು ಹೊರಗೆ ಹೋದರಷ್ಟೇ ನಾವು ಉಳಿಯಲು ಸಾಧ್ಯ”  ಎಂಬ ಭಾವನೆ ಬರಲು ಪ್ರಾರಂಭವಾಯ್ತಂತೆ. ಆದರೆ ಅವಕ್ಕೆ ಪಾತ್ರೆಯಿಂದ ಹೊರಗೆ ಹಾರಲು ಇದ್ದ ಬದ್ದ ಶಕ್ತಿಯನ್ನೆಲ್ಲಾ ದೇಹದ ಉಷ್ಣತೆ ಹೊಂದಾಣಿಕೆ ಮಾಡಲು ಬಳಸಿದ್ದರಿಂದ ಅವಕ್ಕೆ ಹಾರಲೂ ಸಹ ಶಕ್ತಿಯಿಲ್ಲದಂತಾಗಿ ಬಿಸಿನೀರಿನಲ್ಲೇ ಒದ್ದಾಡಿ ಪ್ರಾಣಬಿಟ್ಟವಂತೆ!!

ಇದು ಕಲ್ಪಿತ ಪ್ರಸಂಗವಾದರೂ ಇದು ನಮ್ಮ ಜೀವನಕ್ಕೆ ಸೂಕ್ತವೆನಿಸುತ್ತದೆ. ಎಷ್ಟೋ ಜನಕ್ಕೆ ತಾವು ಈಗಿರುವ ಕೆಲಸ, ಸ್ಥಿತಿ ಸರಿಯಿಲ್ಲವೆಂದೆನಿಸಿರುತ್ತದೆ. ಯಾರನ್ನೇ ಕೇಳಲಿ ಈ ಕೆಲಸ ಸರಿಯಿಲ್ಲ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ದೂಷಣೆ ಮಾಡುತ್ತಿರುತ್ತಾರೆ. ಆದರೆ ತಮಾಷೆ ಅಂದ್ರೆ ಕಡೇವರೆಗೂ ಬೇರೆ ಕೆಲಸಕ್ಕೆ ಪ್ರಯತ್ನಿಸದೇ ಅದೇ ಕೆಲಸದಲ್ಲಿ ಮುಂದುವರೆಯುತ್ತಿರುತ್ತಾರೆ!! ಕೆಲವರಂತೂ ಅದೇ ಕೆಲಸದಲ್ಲಿದ್ದುಕೊಂಡು ಬೇರೆ ಕೆಲಸಕ್ಕೆ ಪ್ರಯತ್ನಿಸಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಹೇಳೋಕೆ ಹೊರಟಿರೋದು ಏನಪ್ಪಾ ಅಂದ್ರೆ ನಾವು ಇದ್ದ ಸ್ಥಿತಿಯಲ್ಲಿ ಖುಷಿಯಾಗಿದ್ದುಕೊಂಡು ಬೇರೆಯದ್ದಕ್ಕೆ ಪ್ರಯತ್ನಿಸುತ್ತಾ ಇರಬೇಕು. ಸಿಕ್ಕರೆ ಒಳ್ಳೆಯದು, ಒಂದೊಮ್ಮೆ ಸಿಗದಿದ್ದರೆ ಈಗಿರುವ ಕೆಲಸವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಬೇರೆಯದ್ದಕ್ಕೂ ಪ್ರಯತ್ನಿಸದೇ ಇರೋ ಕೆಲಸವನ್ನು ಗೊಣಗಿಕೊಂಡು ಮಾಡಿದರೆ ಅದು ನಮ್ಮ ನೆಮ್ಮದಿಗೆ ಲಾಸ್ ಅಷ್ಟೇ. ಇನ್ನೂ ಕೆಲವರು ಇರೋ ಕೆಲಸವನ್ನು ಬಿಟ್ಟು ತಾವು ಬಯಸಿದ ಕೆಲಸ ಪಡೆಯಲು ಮುಂದಾಗ್ತಾರೆ. ಇದು ಅವರ ಮೇಲಿನ ಅವರ ನಂಬಿಕೆ ತೋರಿಸುತ್ತದೆ. ಒಂದೊಮ್ಮೆ ಆಗ ತಾವು ಬಯಸಿದ್ದು ಸಿಗದೇ ಹೋದರೂ ತಾಳಿಕೊಳ್ಳುವ ಮನೋಸ್ಥಿತಿ ಇವರಿಗಿರಬೇಕಷ್ಟೇ!!

ನನಗೂ ಅಷ್ಟೇ. ನಾನು ಹಿಂದೆ ಹೇಳಿದಂತೆ ಸರ್ಕಾರಿ ಕೆಲಸ ಗಿಟ್ಟಿಸಲು ಇದ್ದ ಕೆಲಸವನ್ನು ಬಿಟ್ಟು ಪ್ರಾಮಾಣಿಕ ಪ್ರಯತ್ನ ಮಾಡಿ ಸಾಲಸೋಲ ಮಾಡಿಕೊಂಡು ನಿಗದಿತ ದಿನದಂದು ಪರೀಕ್ಷೆ ಬರೆಯಲು ಹೋದೆ. ಆದರೆ ವಿಪರ್ಯಾಸ ಎಂದರೆ ಇನ್ನೇನು ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬೇಕೆನ್ನುವಷ್ಟರಲ್ಲಿ ಯಾರೋ ಒಬ್ಬರು ನ್ಯಾಯಾಲಯದಿಂದ ‘ಸ್ಟೇ’ ತಂದು ಪರೀಕ್ಷೆಯನ್ನು ನಿಲ್ಲಿಸಿ ಬಿಟ್ಟರು. ಆಗ ನನಗೆ ತುಂಬಾ ಬೇಸರವಾಯ್ತು. ಆಗ ನನಗೆ ಶುರುವಾಯ್ತು ನೋಡಿ ಪೀಕಲಾಟ. ಯಾವುದೋ ಒಂದು ಶಾಲೆಗೆ ಹೋಗಿ ಹೇಗೋ ವೇತನ ಬರುತ್ತಿತ್ತು. ಅದರಿಂದ ಕಡೇ ಪಕ್ಷ ಕೆಲಸ ಅನ್ನೋದಾದ್ರೂ ಇರೋದು. ಆದರೆ ಈಗ ನಿಜವಾದ ಅರ್ಥದಲ್ಲಿ ನಾನು ನಿರುದ್ಯೋಗಿಯಾಗಿದ್ದೆ.

ಮತ್ತೆ ದಾವಣಗೆರೆಗೆ ಬಂದು ತುಂಬಾ ಕಷ್ಟವನ್ನನುಭವಿಸಿ ಸಾಕಾಗಿ ಕೊನೆಗೊಂದು ದಿನ ನಾನು ಯಾವ ಕೆಲಸವಾದರೂ ಸರಿ ಬೆಂಗಳೂರಿಗೆ ಹೋದರಾಯ್ತು ಎಂದುಕೊಂಡು ನನ್ನ ಪ್ರೈಮರಿಯಿಂದ ಹೈಸ್ಕೂಲ್ ವರೆಗೂ ಕ್ಲಾಸ್ ಮೇಟ್ ಆಗಿದ್ದ ಪ್ರದೀಪನಿಗೆ ಫೋನಾಯಿಸಿ “ನಾನು ಬೆಂಗಳೂರಿಗೆ ಬರುತ್ತೇನೆ, ಯಾವುದಾದರೂ ಕೆಲಸ ಕೊಡಿಸು”  ಎಂದು ಕೇಳಿಕೊಂಡೆ. ಅವನು ಅದಕ್ಕೆ ‘ಆಗಲಿ’ ಎಂದ. ನಾನು ಖುಷಿಯಿಂದ ಸಂಜೆ ಹೋದರಾಯ್ತು ಎಂದು ಬ್ಯಾಗ್ ರೆಡಿ ಮಾಡಿಕೊಂಡು ಸಂಜೆ ಬಸ್ ಸ್ಟ್ಯಾಂಡಿನಲ್ಲಿ ನಿಂತು ಬಸ್‌ಗೆ ಕಾಯುತ್ತಿದ್ದಾಗ ಒಬ್ಬ  ಕಾಲೇಜ್ ಹುಡುಗ ಬಂದು ‘ಸರ್ ಎಲ್ಲಿಗೆ ಹೊರಟಿದ್ದೀರಿ?ʼ ಎಂದು ಕೇಳಿದ. ಅದಕ್ಕೆ ನಾನು ನನ್ನ ಸ್ಥಿತಿ ಹೇಳಿದೆ. ತಕ್ಷಣ ಅವನು “ಸರ್ ನನ್ನ ಪಕ್ಕದ ರೂಮ್ ನವನೊಬ್ಬ  ದಾವಣಗೆರೆಯಲ್ಲೇ ಮೆಡಿಕಲ್ ರೆಪ್ ಕೆಲಸ ಮಾಡ್ತಾ ಇದ್ದ. ಈಗವನು ಕೆಲಸ ಬಿಟ್ಟು ವಾಪಾಸ್ಸು ಹುಬ್ಬಳ್ಳಿ ಹೋಗಿದ್ದಾನೆ. ಅವನ ಕೆಲಸ ಖಾಲಿ ಇರಬಹುದು. ನಿಮಗೆ ಕೊಡಿಸಲು ಫೋನ್ ಮಾಡಿ ಕೇಳುತ್ತೇನೆ ಬನ್ನಿ. ಸುಮ್ನೇ ಯಾಕೆ ಬೆಂಗಳೂರಿಗೆ ಹೋಗ್ತೀರ?” ಎಂದು ಹೇಳಿದ. ನನಗೆ ತಕ್ಷಣ ನೀರಲ್ಲಿ ಮುಳುಗುತ್ತಿದ್ದವನಿಗೆ ಒಂದು ಹುಲ್ಲುಕಡ್ಡಿಯ ಆಸರೆಯೂ ಸಹ ನೆರವಾಗುತ್ತಂತೆ ಎನ್ನುವಂತೆ ನಾನು ತಕ್ಷಣ ಅವನ ಮಾತು ನಂಬಿ ವಾಪಸ್ಸಾದೆ. ಅಲ್ಲೇ ಇದ್ದ ಹೋಟೆಲ್ಲಿನಲ್ಲಿ ಇವನ ಬಗ್ಗೆ ಕೇಳಲಾಗಿ ನಾನು ಪ್ರತಿದಿನ ಸಾಂಬಾರ್ ತರಲು ಹೋಟೆಲ್ಲಿಗೆ ಹೋಗುತ್ತಿದ್ದಾಗ ಇವನು ನನ್ನನ್ನು ನೋಡುತ್ತಿದ್ದನಂತೆ. ಆ ಹೋಟೆಲ್ಲಿಗೆ ಪ್ರತಿದಿನ ಊಟ ಮಾಡಲು ಇವನು ಬರುತ್ತಿದ್ದ. ನಾನು ಅಲ್ಲಿ ನೋಡಿದ್ದೇನಾದರೂ ಇವನನ್ನು ಮಾತಾಡಿಸಿರಲಿಲ್ಲ. ಆದರೆ ಟೀ ಕುಡಿಯುವಾಗ ಇವನೇ ಪರಿಚಯ ಮಾಡಿಕೊಂಡ. ಇವನ ಹೆಸರು ಆನಂದ್ ಅಂತಾ. ಬೆಳಗಾಂನವನಂತೆ. ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಲ್ಲಿ ಓದುತ್ತಿದ್ದಾನೆ ಎಂಬ ಮಾಹಿತಿ ನೀಡಿದ. ನಾನು ಅವನಿಗೆ ಈ ಮೊದಲು ಪರಿಚಿತನಲ್ಲದಿದ್ದರೂ ಇವನಿಗೆ ಅದ್ಹೇಕೋ ನನ್ನ ಬಗ್ಗೆ ಸಹಾನುಭೂತಿ ಮೂಡಿ ನನಗೆ ಸಹಾಯ ಮಾಡಲು ಬಯಸಿದ್ದ. ಅವನಿಂದ ನನಗೆ ಸಹಾಯವಾಯಿತೋ ಅಥವಾ ಇಲ್ಲವೋ? ಯಾವ ರೀತಿಯಾಗಿ ನಾನು ಆ ಸಂದರ್ಶನವನ್ನು ಎದುರಿಸಿದೆ ಎಂಬ ಕಥೆಯು ತುಂಬಾ ಸ್ವಾರಸ್ಯಕರವಾಗಿದೆ. ಮುಂದೆ ಇದರ ಬಗ್ಗೆ ತಿಳಿಯೋಣ.

ಜೀವನದಲ್ಲಿ ನಮಗೆ ಅನಿರೀಕ್ಷಿತ ತಿರುವುಗಳು ಬರಬಹುದು. ಅವು ಒಳ್ಳೆಯವೇ ಆಗಿರಬಹುದು ಅಥವಾ ಕೆಟ್ಟವೇ ಆಗಿರಬಹುದು. ‘ಇದಮ್ಮಿತ್ತಂ’ ಎಂದು ಹೀಗೇ ಎಂದು ಹೇಳಲಾಗುವುದಿಲ್ಲ. ಅವಕ್ಕೆ ನಾವು ಸಮಾಧಾನಿಯಾಗಿ ವರ್ತಿಸುವುದೇ ನಮ್ಮ ಮೊದಲ ಆದ್ಯತೆಯಾಗಬೇಕು.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ