ಬವಣೆಯ ಬೆದರು ಬೊಂಬೆ

ದಾರಿಗಳು ಕವಲು
ನಡೆದ ನಡೆವ ಕಾಲುಗಳು
ಗುರಿಯಿಲ್ಲದ ಸಹಪಯಣ
ಹಮ್ಮುಬಿಮ್ಮಗಳ ಹಂಗಿಲ್ಲದೆ
ಬೆಸುಗೆ ಬೆರಳು ಹೃದಯದ ಮನ

ಗಾಳಿ ಗುದ್ದಿದರೂ
ಮಳೆ ತೋಯಿಸಿದರೂ
ಮಿಂಚು ಬೆಳಕಲ್ಲಿ
ದೂರದ ಆಸೆ
ಪ್ರಯಾಣ ಬೇಗ ಮುಗಿವುದೆಂದು

ಹೂವು ಬೇಲಿಯ ಸಿಂಗರಿಸಿ
ಶಿವನ ನೆತ್ತಿಯ ಮೇಲೂ ಸಾಗಿ
ಚಂದ್ರನ ಚಳಿಯ ಭಯವಿಲ್ಲದೆ
ಕೊರಳ ಸುತ್ತಿ ಕಂಪು ಹರಡಿದೆ
ದಾರಿ ಆಯಾಸ ಮರೆಸಲೆಂದು

ನೆಟ್ಟ ಮರ ಬಳ್ಳಿ
ಹಣ್ಣು ಕಾಯಿಗಳ ಸಿಹಿಯೊಗರು
ಹದವಾಗಿ ಬೆಂದ ಅಗುಳು
ನೈವೇದ್ಯಕ್ಕೆ ನಡೆದು
ಮೋಕ್ಷದ ಸುಖ

ಧಾವಂತದ ಬದುಕು
ದಿಗಿಲುಗಳ ಚೆಂಡಾಟದಲಿ
ತೂರಿ ತೂರಿ ಬೆನ್ನು ಬಡಿದು
ಮತ್ತೆ ಮತ್ತೆ ನೆನಪುಗಳ ಹಾದಿಯಲ್ಲಿ
ತಿರು ತಿರುಗಿ ನೋಡುತ್ತಲೇ ಪುಟಿಯುತ್ತಿದೆ

ಸಣ್ಣಗೆ ಹರಿದಂತೆ ತೊರೆ
ಚಳುಕು ಮೈಯೊಳಗೆ
ಇನ್ನೂ ಮುಗಿಯದ ಯಾನ
ನೂರುಗಳ ದಾಟಿತ್ತು
ನೆರಳನೀಡದ ಬಂಧುತ್ವದ ಕಲ್ಲು ಗೂಟ

ಸ್ವಭಾವ ಕೋಳಗುಂದ ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕಿನ ಕೋಳಗುಂದದವರು.
ಕೃಷಿಕರಾಗಿರುವ ಇವರಿಗೆ ಸಾಹಿತ್ಯದ ಓದಿನಲ್ಲಿ ಆಸಕ್ತಿ
ಪರಿಸರ, ಸಾಮಾಜಿಕ ಕಳಕಳಿಯ ಮನೋಭಾವದ ಜೊತೆಯಲ್ಲಿ ರಂಗ ಚಟುವಟಿಕೆಗಳ ಮೂಲಕವೂ ಕೆಲಸ ಮಾಡುತ್ತಿದ್ದಾರೆ