ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು.
ನೆನ್ನೆಯಷ್ಟೇ ಬಿಡುಗಡೆಯಾದ ಜೋಗಿಯವರ ಕಾದಂಬರಿ “ಹಸ್ತಿನಾವತಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

ಸಂಜಯ್ ಸರ್ಕಾರ್, ಏಲಿಯಾಸ್, ಸಂಸ ರಾಜಿಯಾಗುವವರಲ್ಲ ಅನ್ನುವುದು ಅವರನ್ನು ಬಲ್ಲ ಯಾರು ಬೇಕಾದರೂ ಹೇಳುತ್ತಾರೆ. ಸಹದೇವನೂ ಅದನ್ನು ಕಳೆದ ಹದಿನೆಂಟು ವರ್ಷಗಳಿಂದ ನೋಡುತ್ತಾ ಬಂದಿದ್ದಾನೆ. ತಪ್ಪು ನಿರ್ಧಾರ ತಗೋಬೇಡ, ಒಂದು ಸಲ ನಿರ್ಧಾರ ತಗೊಂಡ ಮೇಲೆ ಬದಲಾಯಿಸಬೇಡ ಅನ್ನುವ ಮಾತನ್ನು ಸಂಸ ಎಲ್ಲರಿಗೂ ಹೇಳುತ್ತಾ ಇರುತ್ತಾರೆ. ಅವರ ಪ್ರಕಾರ ನಿರ್ಧಾರ ಬದಲಾಯಿಸುವುದಕ್ಕಿಂತ ತಪ್ಪು ತೀರ್ಮಾನವೇ ವಾಸಿ. ಒಂದು ಸಲ ಅಂದುಕೊಂಡದ್ದನ್ನು ನಾವು ಮತ್ತೊಬ್ಬರ ಮಾತು ಕೇಳಿ ಬದಲಾಯಿಸುತ್ತಾ ಹೋದರೆ ಜೀವನ ಪೂರ್ತಿ ನಮ್ಮ ಬದುಕನ್ನು ರಿಪೇರಿ ಮಾಡುತ್ತಲೇ ಇರಬೇಕಾಗುತ್ತದೆ.

ಸಂಸ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದ್ದು ಯಾಕೆಂಬುದು ಸಹದೇವನಿಗೆ ಸ್ಪಷ್ಟವಾಗಲಿಲ್ಲ. ಆ ಪ್ರಶ್ನೆಗೆ ಉತ್ತರ ಸಿಕ್ಕರೆ ಕಗ್ಗಂಟು ಸಡಿಲಾಗುತ್ತದೆ. ಒಳಹೊಕ್ಕಲು ಒಂದು ಸಣ್ಣ ಜಾಗ ಸಿಕ್ಕರೂ ಸಾಕು, ಅವರ ಮನಸ್ಸನ್ನು ಪೂರ್ತಿ ಜಾಲಾಡಬಹುದು. ಅಥವಾ ಅವರ ಜತೆ ಮಾತಾಡಲಿಕ್ಕೆ ಒಂದರ್ಧ ಗಂಟೆ ಸಿಕ್ಕರೂ ಸಾಕು. ಆದರೆ ಸಂಸ ಯಾರ ಜತೆಗೂ ಅಷ್ಟೆಲ್ಲ ಮಾತಾಡುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅವರು ಮೌನವಾಗಿಯೇ ಇದ್ದಿದ್ದನ್ನು ಸಹದೇವ ನೋಡಿದ್ದ. ಅಲ್ಲದೇ ಚೀಫ್ ಕೂಡ ಕಂಗಾಲಾಗಿದ್ದಾರೆ ಅಂದರೆ ಸಂಸ ಖಡಾಖಂಡಿತವಾಗಿಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರಬೇಕು.

(ಜೋಗಿ)

ಈ ಸಂಗತಿಯನ್ನು ಯಾರ ಜತೆಗೂ ಚರ್ಚಿಸುವ ಹಾಗೂ ಇಲ್ಲ. ಸಂಸ ಅಧಿಕಾರದಲ್ಲಿ ಇರುವುದಿಲ್ಲ ಅಂತ ಗೊತ್ತಾದ ಮರುಗಳಿಗೆಯೇ ಒಳಜಗಳ ಶುರುವಾಗುತ್ತದೆ. ಪಕ್ಷ ಒಡೆದು ಛಿದ್ರವಾಗುತ್ತದೆ. ಇಷ್ಟು ದಿನಗಳ ಕಾಲ ಅಧಿಕಾರದ ಲಾಲಸೆ ಇದ್ದರೂ ಭಯಭಕ್ತಿಯಿಂದ ಸುಮ್ಮಗಿದ್ದವರು ಶಕ್ತಿ ಪ್ರದರ್ಶನ ಆರಂಭಿಸುತ್ತಾರೆ. ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿಯುತ್ತಾರೆ. ಅಂಥವರು ಗೆಲ್ಲುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಇನ್ನು ಮೂರು ತಿಂಗಳಿಗೆ ಪಕ್ಷ ಒಡೆದು ಹೋಗಿ, ಹನ್ನೆರಡು ವರುಷದ ಶ್ರಮ ಸೋರಿಹೋಗುತ್ತದೆ.

ಹೀಗೆ ಏನೂ ತೋಚದೇ ಹೋದಾಗೆಲ್ಲ ಸಹದೇವ ತನ್ನ ಬಾಲ್ಯದ ಗೆಳೆಯ ನಿರಂಜನನಿಗೆ ಫೋನ್ ಮಾಡುತ್ತಾನೆ. ಅವನ ಬಳಿ ಸಲಹೆ ಕೇಳುತ್ತಾನೆ ಅಂತೇನಲ್ಲ. ಆದರೆ ಅವನ ಜೊತೆ ಮಾತಾಡುತ್ತಾ ಹೋದ ಹಾಗೆ ಅಸ್ಪಷ್ಟವಾಗಿದ್ದದ್ದು ನಿಚ್ಚಳವಾಗುತ್ತಾ ಹೋಗುತ್ತದೆ. ಅಲ್ಲದೇ, ನಿರಾಳವಾಗಿ ಹರಟಲು ಸಹದೇವನಿಗೆ ಇದ್ದದ್ದು ಅವನೊಬ್ಬನೇ.

ಸಹದೇವನ ಫೋನು ಬರುವ ಹೊತ್ತಿಗೆ ನಿರಂಜನ ಸುರತ್ಕಲ್‍ನ ಟೈಲರ್ ದೇವೇಂದ್ರನ ಅಂಗಡಿಯಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ. ಸಹದೇವನ ಫೋನು ಅಂತ ಗೊತ್ತಾಗುತ್ತಿದ್ದಂತೆ ದೇವೇಂದ್ರ ತರಿಸಿದ್ದ ಚಹಾವನ್ನೂ ಗೋಳಿಬಜೆಯನ್ನೂ ಅರ್ಧಕ್ಕೇ ಬಿಟ್ಟು ರಸ್ತೆಗೆ ಜಿಗಿದ. ಒಂದು ಕಿವಿಗೆ ಸಹದೇವನ ಮಾತು ಕೇಳಿಸುತ್ತಿದ್ದರೂ, ದೇವೇಂದ್ರ ಅಂಗಡಿಯಲ್ಲಿದ್ದ ಯಾರಿಗೋ `ಅದ್ಯಾರದ್ದೋ ಫೋನ್ ಬರ್ತದೆ. ಎಲ್ಲಾ ಬಿಟ್ಟು ಓಡಿ ಹೋಗ್ತಾನೆ. ಯಾವುದೋ ಹುಡುಗಿಯದ್ದೇ ಇರಬೇಕು’ ಎಂದು ತಮಾಷೆ ಮಾಡಿದ್ದು ನಿರಂಜನನಿಗೆ ಕೇಳಿಸದೇ ಹೋಗಲಿಲ್ಲ.

`ಎಂಥದಾ, ಸುದ್ದಿಯೇ ಇಲ್ಲ, ಭಯಂಕರ ಬಿಜಿಯಾ? ನಮ್ಮ ಗಣಿತದ ಮಾಸ್ಟ್ರಿಗೆ ಹುಚ್ಚು ಹಿಡಿದದ್ದು ಗೊತ್ತುಂಟಾ ನಿಂಗೆ. ಈಗ ಗೋಡೆಯಲ್ಲಿ, ರಸ್ತೆಯಲ್ಲಿ, ಎಲ್ಲೆಂದರಲ್ಲಿ ಗಣಿತದ ಸೂತ್ರ ಬರೆಯುವುದು, ಸಮಸ್ಯೆ ಬಿಡಿಸುವುದು, ಭಯಂಕರ ಉಪದ್ರ ಮಾರಾಯ’ ಎಂದು ನಿರಂಜನ ಎಂದಿನ ಮಾತಿಗಿಳಿದ. ಸಹದೇವನಿಗೂ ಅದೇ ಬೇಕಿತ್ತು. ಮನಸ್ಸು ಜಡವಾಗಿದೆ ಅಂತ ಅನ್ನಿಸಿದಾಗೆಲ್ಲ ನಿರಂಜನನ ಕತೆ, ತಮಾಷೆ, ಹಾಡು, ಅವನು ಹೇಳುತ್ತಿದ್ದ ಊರಿನ ಪ್ರಸಂಗಗಳು, ಯಕ್ಷಗಾನದ ಹೊಸ ಪಟ್ಟುಗಳು ಸಹದೇವನಿಗೆ ಹೊಸ ಚೈತನ್ಯ ತುಂಬುತ್ತಿದ್ದವು.

ನಿರಂಜನ ಒಂಚೂರೂ ಬದಲಾಗಿರಲಿಲ್ಲ. ಸಹದೇವ ಮತ್ತು ನಿರಂಜನ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹೇಗಿದ್ದನೋ ಈಗಲೂ ಹಾಗೆಯೇ ಇದ್ದ. ಮದುವೆ ಆಗುವುದಿಲ್ಲ ಅಂತ ತೀರ್ಮಾನ ಮಾಡಿದವನು, ಯಾರೆಷ್ಟೇ ಹೇಳಿದರೂ ಮದುವೆ ಮಾಡಿಕೊಳ್ಳಲಿಲ್ಲ. ಕೊನೆಗೆ ನಲವತ್ತೆಂಟು ವರ್ಷಕ್ಕೆ ಮದುವೆ ಆಗುತ್ತೇನೆ ಅಂದ. ಯಶೋದೆಯೇ ಹುಡುಗಿ ಹುಡುಕುವ ಜವಾಬ್ದಾರಿ ಹೊತ್ತಳು. ಒಬ್ಬಳು ವಿಧವೆಯನ್ನು ಹುಡುಕಿ ನಿರಂಜನನನ್ನು ಒಪ್ಪಿಸಿ ಮದುವೆ ಮಾಡಿದಳು. ಇಬ್ಬರು ಮಕ್ಕಳ ತಂದೆಯೂ ಆದ. ಆದರೆ ಆಮೇಲೂ ಅವನು ಕಿಂಚಿತ್ತೂ ಬದಲಾಗಲಿಲ್ಲ. ಅವನ ಹೆಂಡತಿ ನಾಗವೇಣಿಗೆ ಅಂಥ ನಿರೀಕ್ಷೆಗಳೂ ಇರಲಿಲ್ಲವಾಗಿ, ಆಕೆ ನಿರಂಜನನ ಓಡಾಟವನ್ನೆಲ್ಲ ಒಪ್ಪಿಕೊಂಡಿದ್ದಳು. ಸಹದೇವ ಎಷ್ಟೇ ಕರೆದರೂ ನಿರಂಜನ ದೆಹಲಿಯ ಕಡೆ ತಲೆ ಹಾಕಲಿಲ್ಲ. ತನ್ನ ಮನೆ, ಮೂರೂವರೆ ಎಕರೆ ಅಡಕೆ ತೋಟ, ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿರುವ ಅಮ್ಮ, ಆಗಾಗ ಫೋನ್ ಮಾಡುವ ಸಹದೇವನನ್ನು ಬಿಟ್ಟರೆ ಅವನಿಗೆ ಇಷ್ಟವಾದ ಸಂಗತಿಗಳು- ರುಚಿಯಾದ ಊಟ, ಇಸ್ಪೀಟು ಆಟ, ಈಜು ಮತ್ತು ಯಕ್ಷಗಾನ. ಶ್ರೀಮಂತರ ಮನೆಯ ಊಟಕ್ಕೆ ಹೋದ ಅಮ್ಮ ಮಕ್ಕಳಿಗೆಂದು ಸಿಹಿತಿಂಡಿಗಳನ್ನು ಸೆರಗಿನಲ್ಲಿ ಗಂಟು ಕಟ್ಟಿ ತರುವಂತೆ, ಊರಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಸಹದೇವನಿಗೆ ಹೇಳಲಿಕ್ಕೆಂದೇ ಅವನು ನೆನಪಿನ ಸಂಚಿಯಲ್ಲಿ ಇಟ್ಟುಕೊಳ್ಳುತ್ತಿದ್ದ.

`ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೇನೆ ನಿರಂಜನ. ಒಂದು ದೊಡ್ಡ ಸಮಸ್ಯೆ ತಲೆ ಮೇಲೆ ಬಂದು ಕೂತಿದೆ. ಅದನ್ನು ಕೆಳಗಿಳಿಸಲಿಕ್ಕೂ ಆಗುತ್ತಿಲ್ಲ, ಹೊತ್ತುಕೊಂಡು ಓಡಾಡಲಿಕ್ಕೂ ಆಗುತ್ತಿಲ್ಲ. ಸಾವು ಬದುಕಿನ ಪ್ರಶ್ನೆ ಆಗಿಬಿಟ್ಟಿದೆ’ ಅಂತ ಸಹದೇವ ಬಿಟ್ಟುಕೊಡಲಾಗದ ಗುಟ್ಟನ್ನು ಬಚ್ಚಿಟ್ಟುಕೊಂಡು, ಅದು ಉಂಟು ಮಾಡುತ್ತಿರುವ ತಲ್ಲಣಗಳನ್ನು ಮಾತ್ರ ನಿರಂಜನನ ಹತ್ತಿರ ಹೇಳಿಕೊಂಡ.

`ನಿನ್ನ ಸಮಸ್ಯೆಗೆ ಮನುಷ್ಯರು ಕಾರಣ ಆದ್ರೆ ಅವರ ಹತ್ರ ಮಾತಾಡು. ಗ್ರಹಗಳು ಕಾರಣ ಆದರೆ ಶಾಂತಿ ಹೋಮ ಮಾಡಿಸು. ದುಷ್ಟರು ಕಾರಣ ಆದ್ರೆ ಸಂಹಾರ ಮಾಡು. ನೀನೇ ಕಾರಣ ಆಗಿದ್ರೆ ನೇಣು ಹಾಕ್ಕೊಂಡು ಸಾಯಿ’ ಎಂದು ನಿರಂಜನ ಗಹಗಹಿಸಿ ನಕ್ಕ. ಸಹದೇವನಿಗೂ ನಗು ಉಕ್ಕಿ ಬಂದು `ನೇಣು ಹಾಕ್ಕೊಂಡು ಸಾಯೋ ದಾದರೆ ನಿನ್ನನ್ನು ಕೊಂದೇ ಹೋಗೋದು ನಾನು’ ಅಂದ.

ಹೀಗೇ ಇಬ್ಬರೂ ಸುಮಾರು ಹೊತ್ತು ಮಾತಾಡಿದರು. ನಿರಂಜನ ಸುರತ್ಕಲ್ಲನ್ನು ಸೀಳಿಕೊಂಡು ಹೋಗುತ್ತಿರುವ ಹೊಸ ಅಷ್ಟಪಥ ರಸ್ತೆ ಇಡೀ ಊರನ್ನೇ ಎರಡು ಭಾಗ ಮಾಡಿದೆ. ಮೊದಲೇ ನಾವು ಹೊಡೆದಾಟಕ್ಕೆ ಎತ್ತಿದ ಕೈ. ಈಗ ಒಂದು ಭಾಗಕ್ಕೆ ಇಂಡಿಯಾ ಇನ್ನೊಂದು ಭಾಗಕ್ಕೆ ಪಾಕಿಸ್ತಾನ ಅಂತ ಹೆಸರಿಟ್ಟು ಹೊಡೆದಾಡಿಕೊಳ್ಳಬಹುದು. ಕ್ರಿಕೆಟ್ ಕೂಡ ಆಡಬಹುದು. ಈಗಂತೂ ಹೆಣ ಬೀಳೋದಕ್ಕೆ ಕಾರಣಗಳೇ ಬೇಕಿಲ್ಲ. ಸಾವು ತುಂಬ ಅಗ್ಗವಾಗಿದೆ ಮಾರಾಯ. ರುಪಾಯಿಗೆರಡು ಕೇಜಿ ಅಂತೆಲ್ಲ ಹೇಳಿದ. ಆ ಕತೆಗಳೆಲ್ಲ ಸಹದೇವನಿಗೂ ಗೊತ್ತಿದ್ದವು. `ಅದು ಆಧುನಿಕ ರಾಜಕಾರಣದ ಅವಿಭಾಜ್ಯ ಅಂಗ. ಸಾವಿಲ್ಲದೇ ಹೋದರೆ ಸಹಬಾಳ್ವೆಗೆ ಅರ್ಥವೇ ಇಲ್ಲ. ಹೊಡೆದಾಡ್ತಾ ಇರಬೇಕು, ಒಂದಾಗುತ್ತಿರಬೇಕು ಅಂತ ರಾಜಕಾರಣ ನಂಬಿದೆ’ ಎನ್ನುವುದನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಾಗವಾಗಿ ಸಹದೇವ ನಿಧಾನವಾಗಿ ನಿರಂಜನನಿಗೆ ವಿವರಿಸಿದ.

ಮಾತಾಡುತ್ತಾ ಆಡುತ್ತಾ ತನ್ನ ಸಮಸ್ಯೆಗೆ ನಿರಂಜನನ ಹತ್ತಿರ ಪರಿಹಾರ ಸಿಗುತ್ತದೆ ಅಂತ ಸಹದೇವನಿಗೆ ಗಾಢವಾಗಿ ಅನ್ನಿಸಿತು. ಆದರೂ ನೇರವಾಗಿ ಎಲ್ಲವನ್ನೂ ಅವನಿಗೆ ಹೇಳುವಂತಿರಲಿಲ್ಲ. `ಒಂದು ಪ್ರಶ್ನೆ ಕೇಳ್ತೀನಿ. ಸರಿಯಾಗಿ ಆಲೋಚನೆ ಮಾಡಿ ಉತ್ತರ ಕೊಡು. ನಿಮ್ಮೂರಿನ ಒಂದು ಪಾರ್ಟಿಯಲ್ಲಿ ಒಬ್ಬ ನಾಯಕ ಇದ್ದಾನೆ ಅಂತಿಟ್ಕೋ. ಎಲ್ಲರೂ ಅವನ ವರ್ಚಸ್ಸು, ಒಳ್ಳೇತನ ನೋಡಿ ಅವನಿಗೆ ಮತ ಹಾಕಿ ಗೆಲ್ಲಿಸ್ತಿರ್ತಾರೆ. ಅವನಿಲ್ಲದೇ ಹೋದರೆ ಪಕ್ಷ ಸೋತು ಹೋಗೋದರ ಬಗ್ಗೆ ಯಾರಿಗೂ ಅನುಮಾನವೇ ಇರೋದಿಲ್ಲ. ಹೀಗಿದ್ದಾಗ ಒಂದು ದಿನ ಇದ್ದಕ್ಕಿದ್ದಂತೆ ಅವನು ನಾನು ರಾಜಕೀಯ ಸನ್ಯಾಸ ತಗೋಬೇಕು ಅಂತ ತೀರ್ಮಾನ ಮಾಡ್ತಾನೆ. ಅವನ ಮನಸ್ಸು ಬದಲಾಯಿಸೋದು ಹ್ಯಾಗೆ?’

`ದೊಡ್ಡವರು ಒಂದು ಸಲ ತೀರ್ಮಾನ ಮಾಡಿದ ಮೇಲೆ ಅದನ್ನು ಸತ್ತರೂ ಬದಲಾಯಿಸೋದಿಲ್ಲ. ಅವರಿಗೆ ತಾವು ಮಾಡ್ತಿರೋದೇ ಸರಿ ಅನ್ನೋ ಅಹಂಕಾರ.’ ಕೊಂಚ ಒರಟಾಗಿಯೇ ಹೇಳಿದ ನಿರಂಜನ.

`ಹಾಗಿದ್ದರೆ ಇಂಥ ಪರಿಸ್ಥಿತಿಯಿಂದ ಪಾರಾಗೋದು ಹೇಗೆ?’

`ಅಂಥವರನ್ನು ಬಲಿ ಕೊಡಬೇಕು. ಅಂಥವರ ಸಾವಿನ ಅನುಕಂಪದ ಅಲೆಗಳ ಮೇಲೆ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬಹುದು’ ನಿರಂಜನ ಗಂಭೀರವಾಗಿ ಹೇಳಿದ. ಸಹದೇವನ ಕಡೆಯಿಂದ ಏನೂ ಉತ್ತರ ಬರದೇ ಇದ್ದದ್ದು ನೋಡಿ, ತನ್ನ ಮಾತಿನ ಗಾಂಭೀರ್ಯವನ್ನು ತಾನೇ ಮುರಿಯಲಿಕ್ಕೆಂದು `ಚೆನ್ನಾಗಿಲ್ವಾ ಐಡಿಯಾ? ಇದಕ್ಕಿಂತ ಒಳ್ಳೇ ಪ್ಲಾನು ಆ ದೇವರ ಹತ್ರವೂ ಇರಲಿಕ್ಕೆ ಸಾಧ್ಯವಿಲ್ಲ’ ಅಂತ ಜೋರಾಗಿ ನಕ್ಕ.

ಸಹದೇವನೂ ನಕ್ಕು `ಇವತ್ತಿಗಿಷ್ಟು ಜ್ಞಾನ ಸಾಕು’ ಅಂದ. ಮಾತು ಮುಗಿದ ಮೇಲೂ ತುಂಬಾ ಹೊತ್ತು ನಿರಂಜನ ಹೇಳಿದ ಮಾತು ಸಹದೇವನ ಕಿವಿಯಲ್ಲಿ ಅನುರಣಿಸುತ್ತಿತ್ತು. `ಬಲಿ, ಸಾವು, ಅನುಕಂಪ, ಸಾಮ್ರಾಜ್ಯ’ ಈ ನಾಲ್ಕು ಪದಗಳನ್ನು ಸಹದೇವ ಹೆಕ್ಕಿ ಜೇಬಿಗೆ ಹಾಕಿಕೊಂಡ.

*****

‘ಐ ವಾಂಟ್ ಅನದರ್ ಮೀಟಿಂಗ್ ವಿತ್ ಯೂ. ಸೂನರ್ ದಿ ಬೆಟರ್’ ಎಂಬ ಒಂದು ಸಾಲಿನ ಚೀಟಿಯನ್ನು ಬೆಳಗ್ಗೆ ಪೇಪರ್ ತಲುಪುವ ಮುಂಚೆಯೇ ಸೋನು ಚೀಫ್ ಮನೆಗೆ ತಲುಪಿಸಿಯಾಗಿತ್ತು. ಅದನ್ನು ನೋಡುತ್ತಲೇ ಚೀಫ್ ಮುಖದಲ್ಲಿ ಸಣ್ಣ ನಗು ಅರಳಿತು. ಅವರಿಗೆ ಸಹದೇವ್ ಬಗ್ಗೆ ಯಾವ ಅಪನಂಬಿಕೆಯೂ ಇರಲಿಲ್ಲ. ಒಪ್ಪಿಸಿದ ಕೆಲಸವನ್ನು ಆತನಷ್ಟು ನಿಷ್ಠೆಯಿಂದ ಮಾಡುವ ವ್ಯಕ್ತಿ ಅವರಿಗೆ ಯಾವತ್ತೂ ಸಿಕ್ಕಿರಲಿಲ್ಲ. ತಾನು ಯಾರೆಂಬುದನ್ನು ಯಾವತ್ತೂ ಬಿಟ್ಟುಕೊಡದ, ತಾನು ಮಾಡಿದ ಕೆಲಸವನ್ನು ಕೂಡ ತಾನು ಮಾಡಿದೆ ಎಂದು ಕ್ಲೈಮ್ ಮಾಡಿಕೊಳ್ಳದ ಅನಗತ್ಯವಾಗಿ ಯಾರನ್ನೂ ಭೇಟಿಯಾಗದ ಯಾವ ಸವಲತ್ತನ್ನೂ ಬಯಸದ ದೇವ್ ಬಗ್ಗೆ ಅವರಿಗಿದ್ದ ಏಕೈಕ ತಕರಾರೆಂದರೆ ಅವನನ್ನು ಸಂಪರ್ಕಿಸುವ ಕಷ್ಟ. ಅವನು ಯಾವತ್ತೂ ಫೋನಿನಲ್ಲಿ ಮಾತಾಡುತ್ತಿರಲಿಲ್ಲ. ಯಾವ ಆಧುನಿಕ ತಂತ್ರಜ್ಞಾನವೂ ಇಲ್ಲದ ಬೇಸಿಕ್ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದ ದೇವ್, ತನ್ನ ಲ್ಯಾಪ್‍ಟಾಪನ್ನು ಮಾತ್ರ ನಂಬುತ್ತಿದ್ದ. ಒಮ್ಮೆ ಭೇಟಿಯಾದ ಜಾಗದಲ್ಲಿ ಮತ್ತೊಮ್ಮೆ ಭೇಟಿಯಾಗುತ್ತಿರಲಿಲ್ಲ. ಭೇಟಿಯಾಗುವಾಗ ಬೇರೆ ಯಾರೂ ಜತೆಗಿರಬಾರದು ಎಂಬುದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದ. ಫೋನಿನಲ್ಲಿ ಇಪ್ಪತ್ತು ಸೆಕೆಂಡಿನಲ್ಲಿ ಮುಗಿದುಹೋಗುವ ಮಾತುಕತೆಗೂ ಚೀಫ್ ಮೂರು ಗಂಟೆ ಖರ್ಚು ಮಾಡಬೇಕಾಗುತ್ತಿತ್ತು. ಆದರೆ ದೇವ್ ಮಾತ್ರ ಆ ವಿಚಾರದಲ್ಲಿ ರಾಜಿಯಾಗು ತ್ತಿರಲಿಲ್ಲ. ಈಗ ಮೂರು ಗಂಟೆ ಖರ್ಚಾದರೆ ಆಗಲೀ, ನಂತರ ಮೂರು ವರ್ಷ ಖರ್ಚು ಮಾಡಿದರೂ ಆದ ತಪ್ಪನ್ನು ಸರಿಪಡಿಸಲಿಕ್ಕಾಗದು ಎಂದು ವಾದಿಸುತ್ತಿದ್ದ.

ಅದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ದೆಹಲಿಯ ಶಕ್ತಿ ರಾಜಕಾರಣದ ಪ್ರಭಾವಲಯದಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತಿದ್ದರು. ಯಾವುದೇ ಪಕ್ಷ ಯಾರೇ ಹೊಸಬರನ್ನು ನೇಮಿಸಿಕೊಂಡರೂ ಅದು ಎರಡೇ ದಿನಕ್ಕೆ ಎಲ್ಲರಿಗೂ ಗೊತ್ತಾಗುತ್ತಿತ್ತು. ಪಕ್ಷದ ರಹಸ್ಯಗಳನ್ನು ಯಾರು ಹೊರಹಾಕುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ಇಬ್ಬರೇ ಕುಳಿತು ಆಡಿದ ಮಾತುಗಳು ಕೂಡ ಎಷ್ಟೋ ಸಲ ಜಗಜ್ಜಾಹೀರಾಗುತ್ತಿದ್ದವು. ಅದರಿಂದಾಗಿಯೇ ಅನೇಕರು ಪಡಬಾರದ ಪಾಡು ಪಟ್ಟದ್ದನ್ನು ಚೀಫ್ ಕಣ್ಣಾರೆ ಕಂಡಿದ್ದರು.

ಚೀಫ್ ಭೇಟಿಯ ಸಮಯ ಮತ್ತು ಜಾಗವನ್ನು ಒಂದು ಚೀಟಿಯಲ್ಲಿ ಬರೆದು ತಾವೇ ಹೋಗಿ ಮನೆಯಾಚೆ ಕಾಯುತ್ತಿದ್ದ ಸೋನು ಕೈಗೆ ಕೊಟ್ಟು ಬಂದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಅವರು ಹೇಳಿದ ಜಾಗದಲ್ಲಿ ಸಹದೇವ್ ಕಾಯುತ್ತಿದ್ದ. ಎಂದಿನಂತೆ ಚೀಫ್ ಒಬ್ಬರೇ ಬಂದಿದ್ದರು.

ಅದೊಂದು ಹಳೆಯ ಕಟ್ಟಡ. ಒಂದು ಕಾಲದಲ್ಲಿ ಆ ಮನೆಯಲ್ಲಿ ಯಾರೋ ಪಂಜಾಬಿ ವಾಸ ಮಾಡುತ್ತಿದ್ದರೆಂದು ಕಾಣುತ್ತದೆ. ಮನೆಯ ಹೊರಗಿನ ತಿಳಿಹಸಿರು ಬಣ್ಣದ ಕಾಂಪೌಂಡಿನ ಮೇಲೆ, ಗೇಟಿನ ಪಕ್ಕದಲ್ಲಿ ನಾರಂಗ್ ಎಂದು ಬರೆದದ್ದು ಕಾಣುತ್ತಿತ್ತು. ಅದರ ಪಕ್ಕದಲ್ಲಿ ಇದ್ದ ಹೆಸರು ಅಳಿಸಿಹೋಗಿತ್ತು. ಗೇಟಿನ ಒಂದು ತುದಿ ತುಂಡಾಗಿದ್ದರಿಂದ ಅದು ನೆಲಕ್ಕೆ ತಾಕಿ ಜೋತಾಡುತ್ತಿತ್ತು. ಅದನ್ನು ಎತ್ತಿ ಪಕ್ಕಕ್ಕೆ ಸರಿಸುತ್ತಾ ಚೀಫ್ ಒಳಗೆ ಕಾಲಿಟ್ಟರು.

ಮನೆಯೊಳಗೆ ಕುಳಿತುಕೊಳ್ಳಲು ಕುರ್ಚಿಗಳೇ ಇರಲಿಲ್ಲ. ಮನೆಯೊಳಗೇ ಜಗಲಿಯಂತೆ ಮಾಡಿ ಒಂದೂವರೆ ಅಡಿ ಎತ್ತರದ ಕಟ್ಟೆ ಕಟ್ಟಿದ್ದರು. ಇಬ್ಬರೂ ಕಟ್ಟೆಯ ಮೇಲೆ ಕೂತರು.

`ಇಂಥ ಮನೆಗಳನ್ನು ಎಲ್ಲಿಂದ ಹುಡುಕ್ತೀನಿ ಅಂತ ಆಶ್ಚರ್ಯ ಆಗ್ತಿದ್ಯಾ? ಇದು ನಾನು ದೆಹಲಿಗೆ ಕಾಲಿಟ್ಟಾಗ ವಾಸ ಮಾಡ್ತಿದ್ದ ಮನೆ. ಈ ಮನೆಯಲ್ಲಿ ದೇವಕಿ ನಾರಂಗ್ ವಾಸ ಮಾಡ್ತಿದ್ದಳು. ಗಂಡನನ್ನು ಕಳಕೊಂಡು ಇಬ್ಬರು ಮಕ್ಕಳನ್ನು ಸಾಕ್ತಿದ್ದಳು. ನಾನಿಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬಂದೆ. ಅವಳ ಮಗನ ಹಾಗೇ ಇದ್ದು ಓದಿದೆ. ಆ ನೆನಪಿಗೆ ಈ ಮನೇನ ನಾನೇ ಕೊಂಡುಕೊಂಡೆ. ಈಗ ದೇವಕಿ ಬದುಕಿಲ್ಲ. ಅವಳ ಇಬ್ಬರು ಮಕ್ಕಳೂ ಜರ್ಮನಿಯಲ್ಲಿದ್ದಾರೆ. ಈ ಮನೆಯಲ್ಲೇ ನಾನು ಲಾ ಓದಿದ್ದು. ಕಷ್ಟ ಎದುರಾದಾಗೆಲ್ಲ ಇಲ್ಲಿಗೆ ಬರ್ತೀನಿ. ಎಷ್ಟೋ ಪ್ರಶ್ನೆಗಳಿಗೆ ನನಗೆ ಇಲ್ಲಿ ಉತ್ತರ ಸಿಕ್ಕಿವೆ’ ಚೀಫ್ ಎಂದಿಗಿಂತ ಹೆಚ್ಚು ಮಾತಾಡಿದರು. ಅವರು ಹೇಳಿದ ವಿವರಗಳಲ್ಲಿ ಆ ಕ್ಷಣಕ್ಕೆ ಸಹದೇವನಿಗೆ ಯಾವ ಆಸಕ್ತಿಯೂ ಇರಲಿಲ್ಲ.

`ನನಗೆ ಕೆಲವು ಮಾಹಿತಿಗಳು ಬೇಕು. ಅದಿಲ್ಲದೇ ಮುಂದೆ ಹೋಗೋದಕ್ಕೆ ಸಾಧ್ಯವೇ ಇಲ್ಲ. ಆ ಮಾಹಿತಿ ನಿಮ್ಮಲ್ಲಿದೆ ಅಂದುಕೊಂಡು ಬಂದಿದ್ದೀನಿ. ನಿಮ್ಮಲ್ಲಿಲ್ಲದೇ ಹೋದರೆ ನಾನು ಕಲೆಕ್ಟ್ ಮಾಡಿಕೊಳ್ಳಬಲ್ಲೆ. ಆದರೆ ಅದಕ್ಕೆ ಜಾಸ್ತಿ ಸಮಯ ಹಿಡೀಬಹುದು’ ಸಹದೇವ ನೇರವಾಗಿ ವಿಷಯಕ್ಕೆ ಬಂದ.

`ಸಂಜಯ್ ಸರ್ಕಾರ್ ಭೇಟಿಯಾಗೋ ವಿಚಾರ ಏನಾಯಿತು? ಆದಷ್ಟು ಬೇಗ ಅವರ ಹತ್ರ ಮಾತಾಡೋದು ಒಳ್ಳೇದು. ತಡವಾದಷ್ಟು ಸುದ್ದಿ ಹಬ್ಬುವ ಸಾಧ್ಯತೆ ಜಾಸ್ತಿ.’ ಹಿಂದಿನ ಭೇಟಿಯಲ್ಲಿ ಹೇಳಿದ ಮಾತುಗಳನ್ನೇ ಚೀಫ್ ಮತ್ತಷ್ಟು ಆತಂಕದಿಂದ ಆಡಿದರು.

`ನಾವು ನಿನ್ನೆ ಭೇಟಿಯಾದಾಗ ನೀವು `ಮೂರು ತಿಂಗಳ ಹಿಂದೆ ಸರ್ಕಾರ್ ಲವಲವಿಕೆಯಿಂದಲೇ ಇದ್ದರು. ಚುನಾವಣೆ ಗೆಲ್ಲುವ ಉತ್ಸಾಹದ ಮಾತಾಡಿದ್ದರು’ ಅಂತ ಹೇಳಿದ್ರಿ. ನಿಮಗೆ ಅದು ಮೂರು ತಿಂಗಳ ಹಿಂದೆ ಅನ್ನೋದು ಸರಿಯಾಗಿ ನೆನಪಿದೆಯೇ?’

`ನೆನಪು ಮಾಡಿಕೊಂಡು ಹೇಳಬಹುದು. ಅವರು ಈ ಮಾತು ಹೇಳಿದ್ದು ನ್ಯಾಷನಲ್ ಪಾರ್ಟಿ ಸಮಾವೇಶ ನಡೀತಲ್ಲ, ಆವತ್ತು. ಅಂದರೆ ಇವತ್ತು ಆಗಸ್ಟ್ ಹದಿನೆಂಟು. ಅವರ ಸಮಾವೇಶ ನಡೆದದ್ದು ಮೇ ಒಂದು. ಮೂರೂವರೆ ತಿಂಗಳಾಗಿರಬಹುದು. ಅದನ್ನು ತಗೊಂಡು ಏನು ಮಾಡೋದಕ್ಕಿದೆ?’

`ಸರ್ಕಾರ್ ಮನ ಪರಿವರ್ತನೆ ಯಾವಾಗ ಆಯ್ತು ಅಂತ ಗೊತ್ತಾಗಬೇಕು. ಅವರ ಉತ್ಸಾಹ ಕ್ಷೀಣಿಸೋದಕ್ಕೆ ಒಂದೋ ಒಳಗಿನ ಕಾರಣ ಇರಬೇಕು. ಇಲ್ಲವೇ ಬಲವಾದ ಹೊರಗಿನ ಕಾರಣ ಇರಬೇಕು, ಚೀಫ್, ನನಗೆ ಈ ಮೂರೂವರೆ ತಿಂಗಳಲ್ಲಿ ಅವರು ಎಲ್ಲಿಗೆ ಹೋಗಿದ್ದಾರೆ, ಯಾರನ್ನು ಭೇಟಿ ಮಾಡಿದ್ದಾರೆ, ಅವರನ್ನು ಯಾರು ಭೇಟಿ ಮಾಡಿದ್ದಾರೆ, ಯಾರ ಜತೆ ಎಷ್ಟು ಹೊತ್ತು ಕಳೆದಿದ್ದಾರೆ, ಯಾರ ಜತೆಗೆಲ್ಲ ಫೋನಿನಲ್ಲಿ ಮಾತಾಡಿದ್ದಾರೆ- ಈ ಎಲ್ಲಾ ವಿವರಗಳೂ ಬೇಕು. ವಿಡಿಯೋ ಫೂಟೇಜ್ ಸಮೇತ ಸಿಕ್ಕರೆ ತುಂಬಾ ಒಳ್ಳೇದು. ಹಾಗೇ, ಅವರ ಇಬ್ಬರು ಪರ್ಸನಲ್ ಸೆಕ್ರೆಟರಿಗಳನ್ನೂ ನಾನು ಮಾತಾಡಿಸಬೇಕು’.

`ಅದು ಆಧುನಿಕ ರಾಜಕಾರಣದ ಅವಿಭಾಜ್ಯ ಅಂಗ. ಸಾವಿಲ್ಲದೇ ಹೋದರೆ ಸಹಬಾಳ್ವೆಗೆ ಅರ್ಥವೇ ಇಲ್ಲ. ಹೊಡೆದಾಡ್ತಾ ಇರಬೇಕು, ಒಂದಾಗುತ್ತಿರಬೇಕು ಅಂತ ರಾಜಕಾರಣ ನಂಬಿದೆ’ ಎನ್ನುವುದನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಾಗವಾಗಿ ಸಹದೇವ ನಿಧಾನವಾಗಿ ನಿರಂಜನನಿಗೆ ವಿವರಿಸಿದ.

ಚೀಫ್ ವಿಷಾದದಿಂದಲೂ ಅನುಕಂಪದಿಂದಲೂ ಸಹದೇವನನ್ನು ನೋಡುತ್ತಾ ಕೂತರು. ಸ್ವಲ್ಪ ಹೊತ್ತು ಏನೂ ಮಾತಾಡಲಿಲ್ಲ. ಅವರ ಮನಸ್ಸಲ್ಲಿ ಏನು ನಡೆಯುತ್ತಿದೆ ಅನ್ನುವುದು ಸಹದೇವನಿಗೆ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತು. ಅವರೇ ಮಾತಾಡಲಿ ಅಂತ ಸಹದೇವ ಸುಮ್ಮನೆ ಕಾಯುತ್ತಾ ಕೂತ.

`ಇಷ್ಟೆಲ್ಲ ಸರ್ಕಸ್ ಮಾಡೋ ಅಗತ್ಯ ಇದೆಯಾ? ನೇರವಾಗಿ ಹೋಗಿ ಮಾತಾಡಿದರೆ ಆಗೋದಿಲ್ವಾ? ಈ ವಿವರಗಳನ್ನೆಲ್ಲ ಕಲೆ ಹಾಕೋ ಹೊತ್ತಿಗೆ ತುಂಬ ತಡವಾಗುತ್ತೆ. ಅಷ್ಟು ಟೈಮ್ ಇಲ್ಲ ನಮ್ಮ ಹತ್ರ.’
ಸಹದೇವ ತಣ್ಣಗೆ ಹೇಳಿದ.

`ನಾನೇನು ಹುಡುಕ್ತಿದ್ದೇನೋ ಆ ವಿವರ ಸಿಗದೇ ಮಾತಾಡಿ ಪ್ರಯೋಜನ ಇಲ್ಲ. ನಿಮಗೆ ಆಗ ಹೇಳಿದ್ದನ್ನೇ ಈಗಲೂ ಹೇಳುತ್ತಾರೆ. ನಾವು ಒತ್ತಾಯ ಮಾಡಿದಷ್ಟೂ ಅವರ ನಿರ್ಧಾರ ಬಲವಾಗುತ್ತಾ ಹೋಗುತ್ತದೆ. ಮೂರನೇ ಸಲ ಈ ವಿಚಾರ ಮಾತಾಡ್ತೀವಿ ಅಂತ ಗೊತ್ತಾದರೆ ನಮ್ಮನ್ನು ಭೇಟಿಯಾಗಲಿಕ್ಕೂ ಅವರು ನಿರಾಕರಿಸಬಹುದು. ಒಂದಂತೂ ನಿಜ ಚೀಫ್. ಇದು ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ನಾವು ಅವರ ಫೋನ್ ಟ್ಯಾಪ್ ಮಾಡಬೇಕಾದ ಪ್ರಸಂಗ ಬಂದರೂ ಬರಬಹುದು.’

`ವಾಟ್…. ಪ್ರಧಾನಿಯ ಫೋನ್ ಟ್ಯಾಪ್ ಮಾಡೋದಾ? ಇಂಪಾಸಿಬಲ್. ಅವರಿಗೆ ಬರೀ ಫಿಸಿಕಲ್ ಸೆಕ್ಯುರಿಟಿಯಷ್ಟೇ ಇದೆ ಅಂದ್ಕೋಬೇಡ. ಡಿಜಿಟಲೀ ಸೆಕ್ಯೂರ್ಡ್ ಆಫೀಸು ಅವರದ್ದು. ಡಾಟಾ ಸೋರಿಕೆ ಆಗೋದಕ್ಕೆ ಸಾಧ್ಯವೇ ಇಲ್ಲ.’

`ಚೀಫ್, ಅವರು ಯಾವ ದಿನ ಬದಲಾದರು ಅನ್ನೋದು ಮೊದಲು ಗೊತ್ತಾಗ ಬೇಕು. ಯಾಕೆ ಬದಲಾದರು ಅಂತ ತಿಳ್ಕೋಬೇಕು. ಆಮೇಲೆ ಅವರನ್ನು ಭೇಟಿಯಾಗಿ ಒಪ್ಪಿಸೋದು ಸುಲಭ. ಮನುಷ್ಯನಿಗೆ ಯಾಕೆ ವೈರಾಗ್ಯ ಬರುತ್ತೆ ಹೇಳ್ಲಾ? ಆರೋಗ್ಯ ಕೆಟ್ಟರೆ, ಇಂತಿಷ್ಟು ದಿನದಲ್ಲಿ ಸಾಯ್ತೀನಿ ಅಂತ ಗೊತ್ತಾದ್ರೆ, ಹೆಂಡ್ತಿ ತನಗೆ ಮೋಸ ಮಾಡ್ತಿದ್ದಾಳೆ ಅನ್ನೋದು ಸಾಬೀತಾದ್ರೆ, ಮಕ್ಕಳಿಗೆ ತನ್ನ ಮೇಲೆ ಪ್ರೀತಿಯಿಲ್ಲ ಅನ್ನೋದು ಖಾತ್ರಿಯಾದ್ರೆ ಗಂಡಸು ಈ ಜೀವನ ಸಾಕು ಅಂದ್ಕೋತಾನೆ. ಇವುಗಳ ಪೈಕಿ ಕೊನೆಯ ಎರಡು ಸಾಧ್ಯತೆಗಳನ್ನು ಬಿಟ್ಟು ಬಿಡಬಹುದು. ಅವರ ಆರೋಗ್ಯ, ಸಾವಿನ ಭಯ- ಎರಡರ ಬಗ್ಗೆ ರಿಪೋರ್ಟ್ ಬೇಕು. ನೀವು ನನಗೆ ಪರ್ಮಿಷನ್ ಕೊಟ್ಟರೆ ಸಾಕು. ಈ ಎಲ್ಲಾ ವಿವರಗಳನ್ನೂ ನಾನೇ ತರಿಸ್ಕೋತೇನೆ’ ಸಹದೇವ ಆತ್ಮವಿಶ್ವಾಸದಿಂದ ಹೇಳಿದ.

`ಇದೆಲ್ಲ ರಹಸ್ಯವಾಗಿರುತ್ತಾ? ಒಂದು ವೇಳೆ ನಾನೇ ಇದನ್ನು ಮಾಡಿಸಿದೆ ಅಂತ ಯಾರಿಗಾದ್ರೂ ಗೊತ್ತಾದರೆ ನನ್ನ ರಾಜಕೀಯ ಜೀವನ ಮುಗಿದ ಹಾಗೆ. ಯಾರೂ ನನ್ನ ಹತ್ತಿರಕ್ಕೂ ಸೇರಿಸೋದಿಲ್ಲ. ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದರೂ ಆಶ್ಚರ್ಯ ಇಲ್ಲ. ಆ ಶುಭಗಳಿಗೆ ನೋಡೋದಕ್ಕೆ ನಮ್ಮ ಪಾರ್ಟಿಯಲ್ಲೇ ಸುಮಾರು ಜನ ಕಾಯ್ತಿದ್ದಾರೆ.’

ಚೀಫ್ ಮಾತಲ್ಲಿ ಸುಳ್ಳಿರಲಿಲ್ಲ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಒದ್ದಾಡಿದವರನ್ನು, ಹೆಸರು ಕಳಕೊಂಡವರನ್ನು, ಅಧಿಕಾರ ಕಳಕೊಂಡವರನ್ನು ಅವನು ಓದಿ ತಿಳಿದಿದ್ದ.

`ಚೀಫ್, ನಮ್ಮದೇ ಪಕ್ಷದ ಪ್ರಧಾನಿಯ ಫೋನನ್ನು ನಮ್ಮದೇ ಪಕ್ಷದ ಅಧ್ಯಕ್ಷರು ಟ್ಯಾಪ್ ಮಾಡಿದ್ದಾರೆ ಅನ್ನೋದು ಸುದ್ದಿಯೇ ಅಲ್ಲ. ನಾವಿದನ್ನು ಮಾಡ್ತಿರೋದು ಅವರ ಭದ್ರತೆಗೋಸ್ಕರ ಅಂತ ಹೇಳಿಬಿಡಬಹುದು. ನಾವೇನೂ ಅವರ ಖಾಸಗಿ ಫೋನನ್ನು ಟ್ಯಾಪ್ ಮಾಡ್ತಿಲ್ಲ. ಇದು ಅಫಿಷಿಯಲ್ ನಂಬರ್.’

ಚೀಫ್ ಸಂದಿಗ್ಧಕ್ಕೆ ಬಿದ್ದರು. ಒಪ್ಪಿಗೆ ಕೊಡದೇ ಹೋದರೆ ಸರ್ಕಾರ್ ನಿರ್ಧಾರ ಬದಲಾಗಿದ್ದು ಯಾಕೆ ಎನ್ನುವ ಬಗ್ಗೆ ಯಾವುದೇ ಕ್ಲೂ ಸಿಗುವುದಿಲ್ಲ. ಒಪ್ಪಿಗೆ ಕೊಟ್ಟರೆ ಮುಂದೇನಾಗುತ್ತದೋ ಗೊತ್ತಿಲ್ಲ. ಈ ಸಹದೇವನನ್ನು ಎಷ್ಟರ ಮಟ್ಟಿಗೆ ನಂಬಬಹುದು ಎಂಬ ಅನಗತ್ಯ ಅನುಮಾನವೊಂದು ಅವರ ಮುಖದಲ್ಲಿ ಸುಳಿದುಹೋಯಿತು. ಈತ ತನಗಾಗಿ ಕೆಲಸ ಮಾಡುತ್ತಿದ್ದಾನಾ? ಪಕ್ಷಕ್ಕೋಸ್ಕರವೋ? ಸಹದೇವನೇ ಬಾಯಿಬಿಟ್ಟರೆ ಮಾಡುವುದೇನು?

ಚೀಫ್ ತಲೆಯೆತ್ತಿ ಸಹದೇವನ ಮುಖ ನೋಡಿದರು. ಅಲ್ಲಿ ಯಾವ ಭಾವನೆಯೂ ಇರಲಿಲ್ಲ. ಏನಾದರಾಗಲಿ ಸಹದೇವನನ್ನು ಅರ್ಧ ನಂಬಿದ್ದಾಗಿದೆ, ಪೂರ್ತಿಯಾಗಿಯೇ ನಂಬೋಣ ಅನ್ನಿಸಿ `ಗೋ ಅಹೆಡ್’ ಅಂದರು.

ಸಹದೇವ `ನಾಳೆಯಿಂದ ನಮ್ಮ ಟೀಮ್ ಕೆಲಸ ಶುರುಮಾಡುತ್ತೆ. ಸೋನು ನಿಮ್ಮ ಜತೆ ಸಂಪರ್ಕದಲ್ಲಿರ್ತಾಳೆ. ಬೇರೆ ಯಾರ ಜತೆಗೂ ನೀವು ಮಾತಾಡಬೇಡಿ. ನಿಮ್ಮ ಹೆಸರು ಎಲ್ಲೂ ಬರದಂತೆ ನೋಡಿಕೊಳ್ಳೋ ಜವಾಬ್ದಾರಿ ನಂದು. ಮುಂದಿನ ಭೇಟಿಯಲ್ಲಿ ಸರ್ಕಾರ್ ಜತೆ ಯಾವಾಗ ಮಾತಾಡೋದು ಅಂತ ತೀರ್ಮಾನ ಮಾಡೋಣ’ ಎಂದು ಹೇಳಿ, ಆವತ್ತಿನ ಮಾತು ಮುಗಿಯಿತು ಎಂಬಂತೆ ಎದ್ದು ನಿಂತ.

ಚೀಫ್ ಅವನ ಕೈ ಹಿಡಿದು ನಿಲ್ಲಿಸಿ, ಪಿಸುಮಾತಲ್ಲಿ, `ಪ್ರೈವೆಸಿ, ಸೀಕ್ರೆಸಿ ಎರಡೂ ಕಾಪಾಡು. ನಾನಿನ್ನೂ ಪೂರ್ತಿ ಕನ್ವಿನ್ಸ್ ಆಗಿಲ್ಲ’ ಅಂದರು. ಸಹದೇವ ನಂಬುಗೆಯ ಮುಗುಳ್ನಗು ನಕ್ಕ.

*****

ಸಾಲೋಮನ್ ನಂಬಿಕೆಗೆ ಅರ್ಹನೋ ಅಲ್ಲವೋ ಅನ್ನುವ ಅನುಮಾನ ಸಹದೇವನಿಗೆ ಇರಲಿಲ್ಲ. ಆದರೆ ಸೋನು ಅವನನ್ನು ಪೂರ್ತಿ ನಂಬಲು ಸಿದ್ಧಳಿರಲಿಲ್ಲ. ಅವನು ಹ್ಯಾಕರ್, ಬ್ಲಾಕ್‍ಮೇಲ್ ಮಾಡುತ್ತಾನೆ, ಆಮ್ರ್ಸ್ ಡೀಲರ್, ಬ್ಯಾಂಕುಗಳಿಂದ ಸಾಲ ಕೊಡಿಸುತ್ತಾನೆ, ಅನೇಕ ರಾಜಕೀಯ ನಾಯಕರ ಪರಿಚಯ ಇದೆ, ಪೊಲೀಸ್ ಡಿಪಾರ್ಟ್‍ಮೆಂಟಲ್ಲಿ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂಬ ವಿವರಗಳನ್ನು ಕಳಿಸಿಕೊಟ್ಟ ಸೋನು, ಅವನಿಗೆ ಕೆಲಸ ಒಪ್ಪಿಸುವ ಮುಂಚೆ ಮತ್ತೊಮ್ಮೆ ಯೋಚಿಸೋದು ಒಳ್ಳೆಯದು ಎಂದು ಟಿಪ್ಪಣಿ ಬರೆದಿದ್ದಳು.

ಸಹದೇವನಿಗೆ ಸಾಲೋಮನ್ ಇಪ್ಪತ್ತು ವರ್ಷಗಳಿಂದ ಗೊತ್ತು. ಸಾಲೋಮನ್, ಸುಲೇಮಾನ್, ಶಾಲಿವಾಹನ- ಹೀಗೆ ಏನೇನೋ ಹೆಸರಿಟ್ಟುಕೊಂಡು ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ. ಅವನಂಥ ಚಾಣಾಕ್ಷ ಕಳ್ಳನನ್ನು ಸಹದೇವ ನೋಡಿರಲೇ ಇಲ್ಲ. ಅನೇಕರು ಅವನೊಬ್ಬ ಮೋಸಗಾರ, ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಅಂತ ದೂರುತ್ತಿದ್ದರು. ಸಹದೇವನಿಗೆ ಮಾತ್ರ ಅವನು ಪ್ಯಾಷನ್ನಿಗೋಸ್ಕರ ಅದನ್ನೆಲ್ಲ ಮಾಡುತ್ತಾನೆ ಅನ್ನುವುದು ಗೊತ್ತಿತ್ತು. ಯಾರಾದರೂ ಮನೆಗೆ ಬೀಗ ಹಾಕಿ ನಾವು ಸುರಕ್ಷಿತವಾಗಿದ್ದೇವೆ, ನಮ್ಮ ಮನೆಯಲ್ಲಿ ಕಳ್ಳತನ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಬೀಗುತ್ತಿದ್ದರೆ ಸಾಲೋಮನ್ ಅಂಥ ಮನೆಯಿಂದಲೇ ಕದಿಯುತ್ತಿದ್ದ. ನಮ್ಮ ಸೈಟಿನಿಂದ ಮಾಹಿತಿ ಕದಿಯಲಿಕ್ಕೆ ಸಾಧ್ಯವಿಲ್ಲ ಎಂದು ಯಾವುದಾದರೂ ವೆಬ್‍ಸೈಟ್ ಹೇಳಿಕೊಂಡರೆ ಅದನ್ನು ಸಾಲೋಮನ್ ಹ್ಯಾಕ್ ಮಾಡಿ ಮಾಹಿತಿ ತೆಗೆಯುತ್ತಿದ್ದ. ತಾನೇ ತೋಡಿದ ಸುರಂಗವನ್ನು ಅವನಲ್ಲದೇ ಬೇರೆ ಯಾರಿಗೂ ಮುಚ್ಚುವುದಕ್ಕೆ ಆಗುತ್ತಿರಲಿಲ್ಲ. ಸಾಲೋಮನ್ ಕೈತುಂಬ ಫೀಸ್ ತೆಗೆದುಕೊಂಡು ಅದನ್ನೆಲ್ಲ ಸರಿಮಾಡಿ ಕೊಡುತ್ತಿದ್ದ. ಹೀಗಾಗಿಯೇ ಅವನ ಬಗ್ಗೆ ಗೊತ್ತಿದ್ದ ಎಲ್ಲರಿಗೂ ಅವನ ಬಗ್ಗೆ ಅಚ್ಚರಿಯೂ ಭಯವೂ ಗೌರವವೂ ಇತ್ತು.

ಅವನು ಸುಳ್ಳು ಹೇಳದೇ ಇದ್ದ ಏಕೈಕ ವ್ಯಕ್ತಿ ಸಹದೇವ. ಅವರಿಬ್ಬರೂ ತಿಂಗಳಿ ಗೊಮ್ಮೆಯಾದರೂ ಭೇಟಿಯಾಗುತ್ತಿದ್ದರು. ಸಹದೇವನಿಗೆ ಬೇಕಾದ ಮಾಹಿತಿಗಳನ್ನೆಲ್ಲ ಅವನೇ ಎಲ್ಲೆಲ್ಲಿಂದಲೋ ಹೆಕ್ಕಿ ತರುತ್ತಿದ್ದ. ಅವನ ಮಾಹಿತಿ ಒಮ್ಮೆಯೂ ಸುಳ್ಳಾದದ್ದಿಲ್ಲ. ಫೋನ್ ಟ್ಯಾಪ್ ಮಾಡುವುದು, ಸಿಸಿಟೀವಿಯ ಮಾಹಿತಿ ಕದಿಯುವುದು, ನಕಲಿ ಪಾಸ್‍ಪೋರ್ಟ್ ಮಾಡಿಕೊಡುವುದು, ವೆಬ್‍ಸೈಟ್ ಹ್ಯಾಕ್ ಮಾಡಿ ಡಾಟಾ ಕದಿಯುವುದು, ತನಗೆ ಬೇಕಾದಂತೆ ಡಾಟಾ ತಿದ್ದುವುದು, ಜಿಪಿಎಸ್ ಮೂಲಕ ವ್ಯಕ್ತಿಯ ಚಲನವಲನ ಕಂಡುಹಿಡಿಯುವುದು, ಪಾಸ್‍ವರ್ಡ್ ಕಂಡುಹಿಡಿದು ಈಮೇಲ್ ಜಾಲಾಡುವುದು, ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಹೊಂದುವುದು – ಹೀಗೆ ಅವನಿಗೆ ಗೊತ್ತಿಲ್ಲದ ವಿದ್ಯೆಯೇ ಇರಲಿಲ್ಲ. ಸಾಲೋಮನ್ ತನ್ನ ಸಾಹಸದ ಕತೆಗಳನ್ನು ಸಹದೇವನಿಗೆ ಹೇಳುತ್ತಿದ್ದ. ಅವರಿಬ್ಬರು ಭೇಟಿಯಾಗುವ ಸಂಗತಿಯನ್ನು ಸಹದೇವ ಸೋನುವಿಗೂ ಗೊತ್ತಾಗದಂತೆ ರಹಸ್ಯವಾಗಿಟ್ಟಿದ್ದ. ಸಾಲೋಮನ್ ಒಬ್ಬ ಮಾಹಿತಿದಾರ ಎನ್ನುವುದಷ್ಟೇ ಅವಳಿಗೆ ಗೊತ್ತಿದ್ದದ್ದು. ಹೀಗಾಗಿಯೇ ಅವಳು ಪ್ರಧಾನ ಮಂತ್ರಿಗಳ ಫೋನ್ ಹ್ಯಾಕ್ ಮಾಡುವ ಗುರುತರ ಜವಾಬ್ದಾರಿಯನ್ನು ಸಾಲೋಮನ್ ಎಂಬ ಅಡಕಸಬಿಗೆ ಒಪ್ಪಿಸುವುದರ ಬಗ್ಗೆ ಅಪನಂಬಿಕೆ ಇಟ್ಟುಕೊಂಡಿದ್ದಳು.

ಸಹದೇವನ ಲೆಕ್ಕಾಚಾರವೇ ಬೇರೆ ಇತ್ತು. ಈ ಕೆಲಸವನ್ನು ದೊಡ್ಡ ಏಜನ್ಸಿಗೆ ಒಪ್ಪಿಸಿದಷ್ಟೂ ಅಪಾಯ ಜಾಸ್ತಿ. ಡಿಟೆಕ್ಟಿವ್ ಏಜನ್ಸಿಗಳ ಮೇಲೆ ಸರ್ಕಾರ ಒಂದು ಕಣ್ಣಿಟ್ಟಿರುತ್ತದೆ. ಬೇಹುಗಾರಿಕಾ ವಿಭಾಗದವರೂ ನಿಗಾ ಇಟ್ಟಿರುತ್ತಾರೆ. ಡಿಟೆಕ್ಟಿವ್ ಏಜನ್ಸಿಯ ಒಳಗೇ ಒಬ್ಬ ಪೊಲೀಸ್ ಮಾಹಿತಿದಾರ ಇರುತ್ತಾನೆ. ಅಲ್ಲದೇ, ಏಜನ್ಸಿ ಇಂಥ ರಿಸ್ಕೀ ಕಾರ್ಯಾಚರಣೆ ಒಪ್ಪಿಕೊಳ್ಳುವುದಕ್ಕೆ ಹೆದರುತ್ತದೆ. ಒಂದು ವೇಳೆ ಒಪ್ಪಿಕೊಂಡರೂ ಅದಕ್ಕೂ ಮುಂಚೆ ಸಂಸ್ಥೆಯ ಒಳಗಡೆಯೇ ಸಾಕಷ್ಟು ಚರ್ಚೆ ನಡೆದಿರುತ್ತದೆ. ಬೇಕಿದ್ದವರಿಗೂ ಬೇಡದವರಿಗೆಲ್ಲ ವಿಷಯ ಗೊತ್ತಾಗಿರುತ್ತದೆ. ಸಾಲೋಮನ್ ಆದರೆ ಅಂಥ ಯಾವ ಅಪಾಯವೂ ಇಲ್ಲ. ಅವನು ಯೆಸ್ ಅಂದರೆ ಮುಗಿಯಿತು. ಅವನಿಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಅವನ ಮೇಲೆ ಯಾರಿಗೂ ಅನುಮಾನವೂ ಬರುವುದಿಲ್ಲ. ಇದನ್ನೆಲ್ಲ ಅಳೆದೂ ತೂಗಿ ಸಹದೇವ ಈ ಕೆಲಸವನ್ನು ಅವನಿಗೆ ಒಪ್ಪಿಸೋಣ ಎಂದು ಸೋನುಗೆ ಹೇಳಿದ್ದು. ಕೊನೆಗೂ ಸೋನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಳು.

ಸಾಲೋಮನ್ ಮತ್ತು ಸಹದೇವನ ಭೇಟಿಯನ್ನು ಸೋನು ಪಶ್ಚಿಮ್ ವಿಹಾರ್‍ನ ಅಮರ್ ಪಾಲಿಕ್ಲಿನಿಕ್‍ನಲ್ಲಿ ಅರೇಂಜ್ ಮಾಡಿದ್ದಳು. ಬೆಳಗ್ಗೆ ಒಂಬತ್ತು ಗಂಟೆಗೆ ಫುಲ್ ಬಾಡಿ ಚೆಕಪ್‍ಗೆ ಅಲ್ಲಿಗೆ ಸಹದೇವ್ ಹೋಗುತ್ತಾನೆ. ಅವನ ಜತೆಗೆ ಅಸಿಸ್ಟೆಂಟ್ ಆಗಿ ಸಾಲೋಮನ್ ಹೋಗಬೇಕು. ಅಲ್ಲೇ ಮಾತುಕತೆ ನಡೆದು ಇಬ್ಬರೂ ಬೇರಾಗಬೇಕು. ಹೋಗುವ ಹೊತ್ತಿಗೆ ಇಬ್ಬರೂ ಮೊಬೈಲ್ ಫೋನ್ ಒಯ್ಯಬಾರದು. ಸಾಲೋಮನ್ ಚಪ್ಪಲಿ ಹಾಕಿಕೊಂಡಿರಬೇಕು. ಅವನನ್ನು ಪೂರ್ತಿ ಚೆಕ್ ಮಾಡಿ ಯಾವುದೇ ಹಿಡನ್ ಕ್ಯಾಮರಾ ಇಲ್ಲವೆಂದು ಖಚಿತಪಡಿಸಿಯೇ ಒಳಗೆ ಬಿಡಲಾಗುತ್ತೆ ಮುಂತಾದ ಷರತ್ತುಗಳನ್ನೂ ಸೋನು ಹಾಕಿದ್ದಳು.

ಸರಿಯಾದ ಸಮಯಕ್ಕೆ ಟೆಸ್ಟ್ ಶುರುವಾಯಿತು. ಪೆಥಾಲಜಿ ಮುಗಿಸಿ, ಇಸಿಜಿ, ಟಿಎಂಟಿ ಮುಗಿಸಿದ ನಂತರ, ಸ್ಕಾ ್ಯನಿಂಗ್ ನಡುವೆ ಸಿಕ್ಕ ಹನ್ನೆರಡು ನಿಮಿಷಗಳ ಬಿಡುವಿನಲ್ಲಿ ಸಾಲೋಮನ್ ಹತ್ತಿರ ಸಹದೇವ ಮಾತಾಡಿದ.

`ಒಂದು ಫೋನ್ ನಂಬರ್ ಕೊಡ್ತೀನಿ, ಅದು ಯಾರದ್ದು ಅಂತ ಕೇಳಬಾರದು. ಟ್ಯಾಪ್ ಮಾಡಬೇಕು. ಇಡೀ ದಿನದ ಕಾನ್‍ವರ್ಸೇಷನ್ ರೆಕಾರ್ಡ್ ಬೇಕು. ಅದನ್ನು ನೀನು ಮಾಡಿಸ್ತಿದ್ದೀಯ ಅಂತಲೂ ಗೊತ್ತಾಗಬಾರದು. ಕಳೆದ ಮೂರು ತಿಂಗಳಲ್ಲಿ ಅವರಿಗೆ ಯಾರೆಲ್ಲ ಫೋನ್ ಮಾಡಿದ್ದಾರೆ ಅನ್ನುವ ಪಟ್ಟಿಯೂ ಬೇಕು. ಬರೀ ನಂಬರ್ ಕೊಟ್ರೆ ಸಾಲದು, ಹೆಸರು, ಅಡ್ರೆಸ್ ಸಹಿತ ಕೊಡಬೇಕು.’

ಸಾಲೋಮನ್ ಕಣ್ಣುಗಳು ಫಳಫಳ ಹೊಳೆದವು. ಮತ್ತೊಂದು ಇಂಪಾಸಿಬಲ್ ಟಾಸ್ಕ್ ಸಿಕ್ಕಿತು ಅನ್ನುವ ಸಂತೋಷದಲ್ಲಿ ಅವನು ಮುಗುಳ್ನಗುತ್ತಾ ಹೇಳಿದ. `ಸಿಕ್ಕಿಬಿದ್ರೆ ಜೈಲೇನಾ?’. ಸಹದೇವ ಕೂಡ ಅವನ ನಗುವನ್ನು ಮರಳಿಸುತ್ತಾ ಹೇಳಿದ; `ಮರ್ಡರ್ ಆಗ್ತೀಯ. ಯಾರು ಕೊಂದರು ಅನ್ನೋದೂ ಗೊತ್ತಾಗೋದಿಲ್ಲ. ಮೊದಲ ಗುಂಡು ನಂದೇ ಆಗಿರುತ್ತೆ’.

`ಥ್ರಿಲ್ ಅಂದ್ರೆ ಇದು. ರಿಸ್ಕ್ ಜಾಸ್ತಿ ಇದ್ದಷ್ಟೂ ಕೆಲಸ ಮಾಡಕ್ಕೆ ಜಾಸ್ತಿ ಖುಷಿ. ಆ ಹೆಂಗಸಿನ ಹತ್ರ ಹೇಳಿಕಳಿಸಿದ್ರಲ್ಲ. ಏನೋ ಚಿಕ್ಕಪುಟ್ಟ ಕೆಲಸ ಅಂದ್ಕೊಂಡಿದ್ದೆ. ಆ ಲೇಡಿ ಮಾತೇ ಆಡಲ್ಲ. ಫೋನೂ ಇಟ್ಕೊಂಡಿಲ್ಲ. ಬರೀ ಚೀಟೀಲಿ ಬರೆದು ಕೊಡ್ತದೆ. ಅದೂ ಕೂಡ ಥರ್ಟಿ ಸೆಕೆಂಡಲ್ಲಿ ಅಳಿಸಿ ಹೋಗ್ತದೆ. ಫುಟ್ ಪ್ರಿಂಟ್ಸೇ ಬಿಡಲ್ಲ ಅವರು. ಅಂತೋರೇನಾದ್ರೂ ಸಿಕ್ಕಿದ್ರೆ ನಾನು ಸೋತುಬಿಡ್ತೀನಿ. ಅವರ ಡಾಟಾ ಕದಿಯೋದಕ್ಕೆ ಸಾಧ್ಯವೇ ಇಲ್ಲ. ಅವರ ಹೆಸರೇನು?’ ಹುರುಪು ಹೆಚ್ಚಿಸಿಕೊಂಡು ಕೇಳಿದ ಸಾಲೋಮನ್.

`ಕೆಲಸ ಮುಗೀಲಿ. ಹೆಸರೂ ಹೇಳ್ತೀನಿ, ಅವಳೊಪ್ಪಿದ್ರೆ ಮದುವೇನೂ ಮಾಡಿಸ್ತೀನಿ. ಮೂರೇ ದಿನ ಟೈಮ್ ಇರೋದು’ ಎನ್ನುತ್ತಾ ಸಹದೇವ ಎದ್ದು ನಿಂತ. ಸಾಲೋಮನ್ ಅವನನ್ನೇ ನೋಡ್ತಾ `ಈ ಕ್ಲಿನಿಕ್ಕಲ್ಲೂ ಸೀಸಿ ಟೀವಿ ಹಾಕಿದ್ದಾರೆ. ಹಾರ್ಡ್ ಡಿಸ್ಕ್ ಕ್ರಾ ್ಯಶ್ ಮಾಡಿ, ಒಂದು ವಾರದ ರೆಕಾರ್ಡಿಂಗ್ ಮಾಯ ಮಾಡಿ ಹೊರಡ್ತೀನಿ’ ಎಂದು ತುಂಟತನದ ಕಣ್ಣು ಮಿಟುಕಿಸಿದ.

ಸಹದೇವ ರಿಪೋರ್ಟ್ ಕಲೆಕ್ಟ್ ಮಾಡಿಕೊಂಡು ಹೊರಗೆ ಬರುವ ಹೊತ್ತಿಗೆ ಸೋನು ಕಾರು ತಂದು ಕಾಯುತ್ತಿದ್ದಳು. ಸಹದೇವ ಕಾರೊಳಗೆ ಕೂರುತ್ತಿದ್ದಂತೆ ಅವನ ಸೀಟಿನ ಪಕ್ಕದಲ್ಲಿಟ್ಟ ಚೀಟಿ ಕಣ್ಣಿಗೆ ಬಿತ್ತು. ಅವಸರದಿಂದ ತೆರೆದು ಓದಿದ.

`ನಾಡಿದ್ದು ಪಿಎಂ ತವರೂರಿಗೆ ಹೋಗ್ತಿದ್ದಾರೆ. ಅಲ್ಲಿ ಹಳೆಯ ಗೆಳೆಯರನ್ನು ಭೇಟಿ ಆಗ್ತಿದ್ದಾರೆ. ಸಂಗೀತ್ ಉತ್ಸವ್ ಉದ್ಘಾಟಿಸಿ ಅದರಲ್ಲಿ ಭಾಗವಹಿಸ್ತಿದ್ದಾರೆ.’

ಸಂದೇಶ ಇದ್ದದ್ದು ಅಷ್ಟೇ. ಆದರೆ, ಅವರು ತವರೂರಿಗೆ ಹೋಗುವುದನ್ನು ತಡೆಯಬೇಕು ಅಂತ ಚೀಫ್ ಬಯಸಿದ್ದಾರೆ ಅನ್ನುವುದು ಸಹದೇವನಿಗೆ ಅರ್ಥವಾಯಿತು. ಇದು ಸಂಸರ ರಾಜಕೀಯ ನಿವೃತ್ತಿಯ ಮೊದಲ ಹೆಜ್ಜೆ. ಪೂರ್ವಮೇದಿನಿಪುರದ ನಂದಿಗ್ರಾಮಕ್ಕೆ ಹೋದರೆ ಅವರಿಗೆ ಹಳೆಯ ಬದುಕು ನೆನಪಾಗುತ್ತದೆ. ನಂದಿಗ್ರಾಮದ ರೈತರು ಕಣ್ಮುಂದೆ ಬರುತ್ತಾರೆ. ಹಳೆಯ ಗೆಳೆಯರೆಂದರೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಜತೆಗೆ ಓದಿದ ಸಹಪಾಠಿಗಳು. ಸಂಸರ ಜತೆಗೇ ಶೈಲೇಂದ್ರ ಸರ್ಕಾರ್ ವಿದ್ಯಾಲಯದಲ್ಲಿ ಜತೆಗೆ ಓದಿದವರು. ಸಂಸ ಕವಿತೆ ಬರೆಯುತ್ತಿದ್ದ ದಿನಗಳಲ್ಲಿ ಅವರ ಜತೆಗಿದ್ದ ಕವಿಗಳೆಲ್ಲ ಸಿಗುತ್ತಾರೆ. ಅವರ ಜತೆ ಮಾತಾಡುವಾಗ ರಾಜಕೀಯ ನಿವೃತ್ತಿಯ ಮಾತು ಬಂದೇ ಬರುತ್ತದೆ. ಅಲ್ಲಿಗೆ ಕತೆ ಮುಗಿದಂತೆ.

ಸಹದೇವನ ನೆನಪು ತಾನು ಓದಿ, ಕೇಳಿ ತಿಳಿದುಕೊಂಡ ಸಂಸರ ಬದುಕಿನ ಕತೆಯತ್ತ ಹಾಯಿತು. ಸಂಜಯ್ ಸರ್ಕಾರ್ ತಾರುಣ್ಯದಲ್ಲಿ ಮಾವೋವಾದಿ ಎಂದೇ ಹೆಸರಾದವರು. ಪಶ್ಚಿಮ ಬಂಗಾಳದ ಹೆಬ್ಬುಲಿ ಎಂದು ಕರೆಸಿಕೊಂಡವರು. ಅವರು ಹೋರಾಟದ ಮುಂಚೂಣಿಯಲ್ಲಿದ್ದರೆ ಸರ್ಕಾರ ನಡುಗುತ್ತಿತ್ತು. `ಶೈಲೇಂದ್ರ ಸರ್ಕಾರ್ ವಿದ್ಯಾಲಯ’ದಲ್ಲಿದ್ದಾಗಲೇ ವಿದ್ಯಾರ್ಥಿ ಫೆಡರೇಷನ್ನಿನ ನಾಯಕರಾಗಿ ಅನೇಕ ಹೋರಾಟ ಗಳಲ್ಲಿ ತೊಡಗಿಸಿಕೊಂಡವರು. ನಂದಿಗ್ರಾಮದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರ ಮೇಲೆ ಪೊಲೀಸರು ಹಾರಿಸಿದ ಗುಂಡು ಹದಿನೆಂಟು ರೈತರನ್ನು ಬಲಿತೆಗೆದುಕೊಳ್ಳದೇ ಹೋಗಿದ್ದರೆ ರಾಷ್ಟ್ರೀಯ ರಾಜಕಾರಣಕ್ಕೆ ಸಂಜಯ್ ಸರ್ಕಾರ್ ಕಾಲಿಡುತ್ತಲೇ ಇರಲಿಲ್ಲ. ತಮ್ಮ ಭೂಮಿಯನ್ನು ವಿದೇಶಿ ಬಂಡವಾಳಶಾಹಿಗಳಿಗೆ ಮಾರಬೇಡಿ ಎಂದು ಹೇಳಿದ ರೈತರನ್ನು ಕೊಂದದ್ದು ಅವರ ರಕ್ತ ಕುದಿಯುವಂತೆ ಮಾಡಿತ್ತು. ಆವತ್ತು ನಂದಿಗ್ರಾಮದಲ್ಲೇ ಅವರು ಧರಣಿ ಕುಳಿತರು. ಈ ದೇಶದ ಬಡವರನ್ನು, ನೊಂದವರನ್ನು, ದಲಿತರನ್ನು, ರೈತರನ್ನು ಕಾಯುವ ಕೆಲಸಕ್ಕೆ ನನ್ನ ಉಳಿದ ಆಯುಷ್ಯ ಮೀಸಲು ಎಂದು ಘೋಷಿಸಿದರು. ಬರಿಗಾಲಲ್ಲಿ ಇಡೀ ದೇಶ ಸುತ್ತಿದರು. ಪ್ರತಿಯೊಂದು ಊರಿಗೂ ಹೋಗಿ ಜನರನ್ನು ಒಗ್ಗೂಡಿಸಿದರು. ಎರಡು ವರುಷಗಳ ನಿರಂತರ ತಿರುಗಾಟದಲ್ಲಿ ಯಾವತ್ತೂ ಪಂಚತಾರಾ ಹೋಟೆಲಿಗೆ ಕಾಲಿಡಲಿಲ್ಲ. ಶ್ರೀಮಂತರ ಮನೆಗಳನ್ನು ಪ್ರವೇಶಿಸಲಿಲ್ಲ. ಪ್ರತಿ ಊರಿನ ಅತ್ಯಂತ ಬಡವನ ಮನೆಯಲ್ಲಿ ಊಟ ಮಾಡಿದರು. ದಲಿತರ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮಲಗಿದರು. ಅವರು ಕುಡಿಯುತ್ತಿದ್ದ ನೀರನ್ನೇ ಕುಡಿದರು. ಎರಡೇ ಜತೆ ಬಟ್ಟೆ ಇಟ್ಟುಕೊಂಡು, ತಾವೇ ಅದನ್ನು ಒಗೆದು ತೊಟ್ಟುಕೊಳ್ಳುತ್ತಿದ್ದರು.

ಅವರ ಈ ಪರ್ಯಟನೆಯನ್ನು ನಿಲ್ಲಿಸಲು ರಾಜಕೀಯ ಪಕ್ಷಗಳು ತಂತ್ರ ಪ್ರತಿ ತಂತ್ರಗಳನ್ನು ಹೂಡಿದವು. ನ್ಯಾಷನಲ್ ಪಾರ್ಟಿ ಅವರನ್ನು ಬಂಧಿಸಲು ಯತ್ನಿಸಿತು. ಅವರ ಕಾಲ್ನಡಿಗೆಯನ್ನು ತಡೆಯಲು ಹವಣಿಸಿತು. ಅಂಥ ಪ್ರತಿಯೊಂದು ಪ್ರತಿರೋಧವೂ ಅವರನ್ನು ನಾಯಕನನ್ನಾಗಿ ಮಾಡುತ್ತಾ ಹೋಯಿತು. ಅವರಿದನ್ನು ಚುನಾವಣೆ ಗೆಲ್ಲಲು ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಹೇಳಿಕೆ ಕೊಟ್ಟರು. ಆಗ ಪ್ರಧಾನಿಯಾಗಿದ್ದ ನ್ಯಾಷನಲ್ ಪಾರ್ಟಿಯ ನೇತಾರ ಜಗನ್ಮೋಹನ್ `ಸಂಜಯ್ ಸರ್ಕಾರ್ ಒಬ್ಬ ಜೋಕರ್. ಅವರಿಗಿಂತ ಪಿಸಿ ಸರ್ಕಾರ್ ಎಷ್ಟೋ ವಾಸಿ. ಅವರು ಮ್ಯಾಜಿಕ್ ಮಾಡಬಲ್ಲರು. ಇವರದ್ದು ಅಪಸ್ವರದ ಮ್ಯೂಸಿಕ್’ ಎಂದು ಹೇಳಿಕೆ ಕೊಟ್ಟರು.

ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು.

ನ್ಯಾಷನಲ್ ಪಾರ್ಟಿಯ ಸರ್ಕಾರವನ್ನು ಉರುಳಿಸೋಣ ಅಂತ ಚಿದಾನಂದ ಪಾಂಡೆ ಎಷ್ಟೇ ಹೇಳಿದರೂ ಸಂಜಯ್ ಸರ್ಕಾರ್ ಒಪ್ಪಲಿಲ್ಲ. ಸರ್ಕಾರವನ್ನು ಉರುಳಿಸೋದು ಸುಲಭ. ಆದರೆ ಅವಧಿಗೆ ಮುಂಚೆ ಚುನಾವಣೆ ನಡೆದರೆ ಅದರ ಹೊರೆ ಪ್ರಜೆಗಳ ಮೇಲೆ ಬೀಳುತ್ತದೆ. ಅಲ್ಲದೇ, ಸರ್ಕಾರ ಉರುಳಿಸಿದವರು ಎಂಬ ಕೆಟ್ಟ ಹೆಸರು ನಮ್ಮದಾಗುತ್ತದೆ. ನಾವು ಸರಿಯಾದ ಮಾರ್ಗದಲ್ಲಿ ಹೋಗೋಣ. ಸರ್ಕಾರವನ್ನು ಬೀಳಿಸುವುದು ಬೇಡ, ಜನರೇ ತಮಗೆ ಬೇಕಾದ ಸರ್ಕಾರವನ್ನು ಆರಿಸುವಂತೆ ಮಾಡೋಣ ಎಂದು ಸಾರ್ವಜನಿಕವಾಗಿಯೇ ಹೇಳಿದರು.

ಅದಾಗಿ ಮೂರು ವರುಷಕ್ಕೆ ಚುನಾವಣೆ ಬಂತು. ನ್ಯಾಷನಲ್ ಪಾರ್ಟಿ ಹೇಳಹೆಸರಿಲ್ಲದಂತೆ ಸೋತಿತು. ಪ್ರಧಾನಿ ಜಗನ್ಮೋಹನ ಠೇವಣಿ ಕಳಕೊಂಡರು. ಅದುವರೆಗೂ ಒಂದೂ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದವರು, ತರುಣರು, ತರುಣಿಯರೆಲ್ಲ ಆರಿಸಿ ಬಂದರು. ಸಂಜಯ್ ಸರ್ಕಾರ್ ಎಲ್ಲರ ಒತ್ತಾಯದ ಮೇಲೆ ಪ್ರಧಾನಿಯಾದರು. ಅವರ ಜನಪ್ರಿಯತೆ ಅಧಿಕಾರಕ್ಕೆ ಬಂದ ನಂತರವೂ ಕುಗ್ಗಲಿಲ್ಲ. ಎರಡನೆಯ ಅವಧಿಯಲ್ಲೂ ಅವರು ಇನ್ನೂ ಹೆಚ್ಚಿನ ಬಹುಮತದಿಂದ ಗೆದ್ದುಬಂದರು.

ಈಗ ಮೂರನೆಯ ಚುನಾವಣೆಗೆ ಹೋಗುವ ಹೊತ್ತಿನಲ್ಲಿ ಸಂಜಯ್ ಸರ್ಕಾರ್ ನಿವೃತ್ತಿಯ ವೈರಾಗ್ಯದ ವಿದಾಯದ ಮಾತಾಡುತ್ತಿದ್ದಾರೆ. ಅವರೇನಾದರೂ ಪಕ್ಷ ತೊರೆದರೆ, ಮುಂದಿನ ಪ್ರಧಾನ ಮಂತ್ರಿ ಅವರಾಗುವುದಿಲ್ಲ ಎಂದು ಗೊತ್ತಾದರೆ, ಮಾತೃಭೂಮಿ ಪಕ್ಷ ಅಧಿಕಾರಕ್ಕೆ ಬರುವುದು ಅನುಮಾನವೇ.‌

ಸಹದೇವ ಇದನ್ನೆಲ್ಲ ನೆನಪಿಸಿಕೊಳ್ಳುತ್ತಾ ತುಂಬ ಹೊತ್ತು ಒಬ್ಬನೇ ಕೂತಿದ್ದ. ರಾಜಕಾರಣದಲ್ಲಿ ಗೆಲ್ಲಬೇಕಾದರೆ ಒಬ್ಬ ಮಹಾತ್ಮ ಬೇಕು ಅಥವಾ ಒಬ್ಬ ಹುತಾತ್ಮ ಬೇಕು ಅಂತ ಅವನಿಗೆ ತೀವ್ರವಾಗಿ ಅನ್ನಿಸಿತು.

ಸದ್ಯಕ್ಕೆ ಸಂಸರ ತವರೂರಿನ ಪ್ರವಾಸವನ್ನು ಹೇಗೆ ತಡೆಯಬಹುದು ಎನ್ನುವ ಪ್ರಶ್ನೆಗೆ ಮಾತ್ರ ಅವನಿಗೆ ಉತ್ತರ ಸಿಗಲಿಲ್ಲ.

(ಕೃತಿ: ಹಸ್ತಿನಾವತಿ (ಕಾದಂಬರಿ), ಲೇಖಕರು: ಜೋಗಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 450/-)